ವಿಷಯದ ವಿವರಗಳಿಗೆ ದಾಟಿರಿ

ಮೇ 22, 2014

13

ಸಾಹಿತಿಗಳೆಂದರೆ ಸರ್ವಸ್ವವೇ?

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಕನ್ನಡ ಸಾಹಿತ್ಯಕನ್ನಡ ಕಲಿಕಾ ಮಾಧ್ಯಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಆಶಯ ಕುರಿತು ಬರುತ್ತಿರುವ ಅಭಿಪ್ರಾಯಗಳಲ್ಲಿ ಸುಪ್ರೀಂ ತೀರ್ಪಿನ ಪರ ಬಹುತೇಕ ದನಿಗಳಿವೆ. ಸುಪ್ರೀಂ ತೀರ್ಪು ಸರಿ. ನಮ್ಮ ಸರ್ಕಾರದ ನೀತಿಗಳು ಸರಿ ಇಲ್ಲ ಎಂಬುದೂ ಸರಿ, ಆದರೂ… ಎಂದು ಅನುಮಾನದ ರಾಗ ಎಳೆಯುವವರು ಕೆಲವರು ಮಾತ್ರ. ಈ ಸರ್ವೇ ಸ್ಯಾಂಪಲ್ ಸಂಖ್ಯೆ ತುಂಬ ಕಡಿಮೆ ಎನಿಸಿದರೂ ಸುಪ್ರೀಂ ತೀರ್ಪು ಜನಸಾಮಾನ್ಯರ ದೃಷ್ಟಿಗೆ ತಕ್ಕಂತೆಯೇ ಇದೆ ಎಂಬುದರಲ್ಲಿ ಅನುಮಾನವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಸರ್ಕಾರ ಬಹುಸಂಖ್ಯಾತರ ಆಶಯವನ್ನು ಗಮನಕ್ಕೆ ತಂದುಕೊಂಡು ಹೆಜ್ಜೆ ಇಡುತ್ತಿದೆಯೇ? ಇಲ್ಲ.

ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಒಂದಿಷ್ಟು ಸಾಹಿತಿಗಳು, ಚಳವಳಿಗಾರರು ಹಾಗೂ ಸರ್ಕಾರಿ ಅಧಿಕಾರಿಗಳು. ಇವರೇ ಈ ವಿಷಯಕ್ಕೆ ಸಂಬಂಧಿಸಿದ ಸಮಸ್ತ ಸಂಗತಿಗಳನ್ನು ಪ್ರತಿನಿಧಿಸುತ್ತಾರಾ? ಇವರನ್ನೇ ಶಿಕ್ಷಣ ತಜ್ಞರು, ಪಾಲಕ-ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದವರು ಇತ್ಯಾದಿ ಊಹಿಸಿಕೊಳ್ಳಬೇಕಾ? ಅಷ್ಟಕ್ಕೂ ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.

ಅಷ್ಟಕ್ಕೂ ಈ ಸಭೆಗೆ ಆಮಂತ್ರಿತರಾದವರು ಯಾರು? ಇವರಲ್ಲಿ ಮಕ್ಕಳ ಮನಸ್ಸನ್ನು ಅರಿತ ಮನಶ್ಶಾಸ್ತ್ರಜ್ಞರಿಲ್ಲ, ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ ಆಗುವ ಲಾಭ ನಷ್ಟ ಕುರಿತು ಸಂಶೋಧನೆ ಮಾಡಿದ ಭಾಷಾ ಸಂಸ್ಥಾನದ ಕನ್ನಡ ಕಲಿಅಥವಾ ವಾಕ್‍ಶ್ರವಣ ಸಂಸ್ಥೆಯ ತಜ್ಞರಿಲ್ಲ, ವಿದ್ಯಾರ್ಥಿ ಸಂಘಗಳ ಪ್ರತಿನಿಧಿಗಳಿಲ್ಲ, ಮುಖ್ಯವಾಗಿ-ಈ ವಿಷಯಕ್ಕೆ ಪ್ರಧಾನ ಕಾರಣರಾಗಿರುವ ಪೋಷಕರೇ ಇಲ್ಲ! 2011ರ ಜನಗಣತಿಯಂತೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು ಎರಡು ಕೋಟಿ ಮಕ್ಕಳಿದ್ದಾರೆ. ಅವರ ಪಾಲಕರ ಸಂಖ್ಯೆ ತಲಾ ಎರಡು ಎಂದಿಟ್ಟುಕೊಂಡರೂ ನಾಲ್ಕು ಕೋಟಿ! ಇವರನ್ನು ಪ್ರತಿನಿಧಿಸುವ ಒಬ್ಬರೂ ಇಲ್ಲ! ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಲ್ಲ. ನಿಜವಾಗಿ ಸಮಸ್ಯೆ-ಪ್ರಕರಣ ಆರಂಭವಾದುದೇ ಪಾಲಕ-ಪೋಷಕ ಹಾಗೂ ಖಾಸಗಿ ಸಂಸ್ಥೆಗಳವರಿಂದ ಎಂಬುದು ಸರ್ಕಾರಕ್ಕೆ ತಿಳಿಯದೇ? ಇವರ ಪ್ರತಿನಿಧಿಗಳನ್ನು ಬಿಟ್ಟು ಒಂದಿಷ್ಟು ಅಧಿಕಾರಿಗಳು, ಬೆರಳೆಣಿಕೆಯ ಸಾಹಿತಿಗಳು, ಹೋರಾಟಗಾರರು ಕುಳಿತು ಪ್ರತ್ಯೇಕ ಶಾಸನ ತರುತ್ತೇವೆ, ಮಾಧ್ಯಮ ಜಾರಿಗೆ ಸರ್ವರಾಜ್ಯಗಳ ಮಂತ್ರಿಗಳ ಸಮಾವೇಶ ಮಾಡಿ ಅವರಿಂದ ಒತ್ತಡ ಹಾಕಿಸುತ್ತೇವೆ, ಇತ್ಯಾದಿ ತೀರ್ಮಾನಕ್ಕೆ ಬರುವುದು ಎಷ್ಟು ಸರಿ? ಸ್ವಲ್ಪ ಸಮಯ ಹಿಡಿದರೂ ಜನತಂತ್ರ ವ್ಯವಸ್ಥೆಯಲ್ಲಿ ಮುಕ್ತ ಜನಾಭಿಪ್ರಾಯ ಸಂಗ್ರಹಣೆ ಮಾಡಿ ಒಂದು ನಿಲುವಿಗೆ ಬರಬೇಕಲ್ಲದೇ ಆಯ್ದ ಒಂದಿಷ್ಟು ಜನರ ಹಠ, ಪಟ್ಟುಗಳನ್ನು ಆಧಾರವಾಗಿಟ್ಟುಕೊಂಡು ಅವಸರದಲ್ಲಿ ಸರ್ಕಾರ ತೀರ್ಮಾನಕ್ಕೆ ಬರಲಾಗದಲ್ಲವೇ? ನಿಜವಾಗಿ ಈ ವಿಷಯ ಶಿಕ್ಷಣಕ್ಕೆ ಸಂಬಂಧಿಸಿದ್ದು. ಈ ಸಭೆಗೆ ಮುಖ್ಯವಾಗಿ ಬರಬೇಕಿದ್ದವರು ಶಿಕ್ಷಣ ತಜ್ಞರು, ಮನಶ್ಶಾಸ್ತ್ರಜ್ಞರು, ಪಾಲಕ-ಪೋಷಕರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೇ ವಿನಾ ಸಾಹಿತಿಗಳಲ್ಲ. ಇವರೆಲ್ಲರನ್ನು ಹಾಗೂ ಇಂಥ ಹತ್ತಾರು ಸಂಗತಿಗಳೆಲ್ಲವನ್ನೂ ಸಾಹಿತಿಗಳೇ ಪ್ರತಿನಿಧಿಸಿಬಿಡುತ್ತಾರಾ? ಅಷ್ಟಕ್ಕೂ ಸಮಸ್ಯೆ ಆರಂಭವಾದುದು ಸಾಹಿತಿಗಳಿಂದಾಗಲೀ ಚಳವಳಿಗಾರರಿಂದಾಗಲೀ ಅಲ್ಲ.
ನಮ್ಮಲ್ಲೊಂದು ಕಾರ್ಯತಂತ್ರವಿದೆ. ಸಮಸ್ಯೆ ಏನಾದರೂ ಉದ್ಭವಿಸಿದರೆ ಅದು ಮಾಧ್ಯಮಗಳಲ್ಲಿ ಚರ್ಚೆಗೆ ಬರದಂತೆ ರಕ್ಷಣಾತ್ಮಕ ನಡೆ ತೋರಿಸುವುದು. ಸುಪ್ರೀಂ ತೀರ್ಪು ಬಂದ ಮೇಲೆ ಈ ಸಮಸ್ಯೆ ಕೂಡ ಅದೇ ದಾರಿ ಹಿಡಿಯುತ್ತದೆ ಎಂಬ ವಾಸನೆ ಗ್ರಹಿಸಿದ ಸರ್ಕಾರ ಮಾಧ್ಯಮ ಸ್ನೇಹಿ ಸಾಹಿತಿಗಳನ್ನು ಹಾಗೂ ಹೋರಾಟಗಾರರನ್ನು ಕರೆದು ರಕ್ಷಣಾತ್ಮಕ ನಡೆ ತೋರಿಸಿತು. ಇಷ್ಟು ಬಿಟ್ಟರೆ ಆ ಸಭೆಯಿಂದಾದ ಲಾಭವೇನೂ ಇಲ್ಲ.
ಅಷ್ಟಕ್ಕೂ ಎಲ್ಲರ ಕಾಳಜಿ ಏನು? ಕನ್ನಡ ಉಳಿಸಬೇಕು ಎಂಬುದು. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾರ ತಕರಾರೂ ಇರಲು ಸಾಧ್ಯವಿಲ್ಲ. ಕನ್ನಡ ಉಳಿಸುವುದು ಅಂದರೆ ಏನು? ಕಲಿಕಾ ಮಾಧ್ಯಮವಾಗಿ ಅದನ್ನು ಕಡ್ಡಾಯಮಾಡಿಬಿಟ್ಟರೆ ಆಯಿತೇ? ಅಷ್ಟರಿಂದ ಕನ್ನಡ ಉಳಿಯುತ್ತದೆಯೇ? ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಕಡ್ಡಾಯ ಕಲಿಕಾ ಮಾಧ್ಯಮವಾಗಿಯೇ ಇಲ್ಲಿವರೆಗೂ ಉಳಿದುಬಂದಿದೆಯೇ? ಇಲ್ಲ ಅನಿಸುತ್ತದೆ.

ಕನ್ನಡಕ್ಕೆ ಅದರದೇ ಆದ ಸಾಂಸ್ಕೃತಿಕ ಜಗತ್ತಿದೆ. ಈ ಎರಡು ಸಾವಿರ ವರ್ಷ ಕನ್ನಡವನ್ನು ಉಳಿಸಿಕೊಂಡು ಬಂದಿರುವುದು ಅದು. ಈ ಸಾಂಸ್ಕೃತಿಕ ಜಗತ್ತು ಯಾವುದು? ಜನಪದ ಸಾಹಿತ್ಯ, ಸಂಪ್ರದಾಯ, ಆಚರಣೆ, ವಿಧಿ-ನಿಷೇಧಗಳು, ಗಮಕ-ವಾಚನ ವ್ಯಾಖ್ಯಾನ ಪರಂಪರೆ, ಕೀರ್ತನೆ-ದಾಸ ಪರಂಪರೆ, ದೊಡ್ಡಾಟ-ಸಣ್ಣಾಟ, ವೀರಗಾಸೆಯಂಥ ಕಲಾಪ್ರಕಾರಗಳು, ಯಕ್ಷಗಾನ, ಭಜನೆಮೇಳಗಳು, ತಾಳಮದ್ದಳೆ, ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಎಲ್ಲಮ್ಮ ಇತ್ಯಾದಿ ಆರಾಧ್ಯದೈವಗಳನ್ನು ಮನೆಮನೆಗೆ ತಲುಪಿಸುತ್ತಿದ್ದ ಅಸಂಖ್ಯ ಸಂಪ್ರದಾಯಗಳು ಇತ್ಯಾದಿ, ಇತ್ಯಾದಿ.

ಇವು ರಾಜಕೀಯವಾಗಿ ಬಳಕೆಯಾಗಲು ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಉತ್ತೇಜನ ಪಡೆದಿವೆ. ಇವುಗಳನ್ನು ಸಾಂಸ್ಕೃತಿಕವಾಗಿ ಪುನರುಜ್ಜೀವಗೊಳಿಸುವ ಕೆಲಸ ಎಷ್ಟರಮಟ್ಟಿಗೆ ಆಗಿದೆ ಎಂಬುದು ಪ್ರಶ್ನಿಸಿಕೊಳ್ಳಬೇಕಾದ ಸಂಗತಿ. ಇವು ದೂರವಾಗುತ್ತ ಬಂದಂತೆ ಕನ್ನಡ ಪರಿಸರ ದೂರವಾಗುತ್ತಿದೆ. ಇವುಗಳನ್ನು ಅನೇಕ ಕಾರಣಗಳಿಗಾಗಿ ದೂರೀಕರಿಸಲಾಗುತ್ತಿದೆ. ಕೆಲವರಿಗೆ ವೈಜ್ಞಾನಿಕ, ವೈಚಾರಿಕ ಕಾರಣಗಳಿಗೆ ಇವು ಅರ್ಥಹೀನ ಮೌಢ್ಯಗಳಾಗಿ ಕಾಣುತ್ತವೆ. ಇನ್ನು ಕೆಲವರಿಗೆ ಇವುಗಳಿಂದ ಯಾವುದೇ ಲಾಭವಿಲ್ಲದಂತೆ ಕಾಣುತ್ತದೆ. ಮತ್ತೆ ಕೆಲವರಿಗೆ ಇವೆಲ್ಲ ಪುರೋಹಿತಶಾಹಿಯ ಅವಶೇಷಗಳಾಗಿಯೂ ಇವೆಲ್ಲ ದೂರವಾಗದೇ ದೇಶ ಉದ್ಧಾರವಾಗದು ಎಂಬಂತೆಯೂ ಕಾಣುತ್ತದೆ. ಇನ್ನುಳಿದವರಿಗೆ ಇವನ್ನೆಲ್ಲ ಪ್ರೋತ್ಸಾಹಿಸುವುದು ಎಂದರೆ ಕೇಸರೀಕರಣವಾಗಿಯೂ ಪ್ರತಿಗಾಮಿ ಕೆಲಸವಾಗಿಯೂ ಕಾಣುತ್ತದೆ. ಹೀಗಾಗಿ ಸರ್ಕಾರದ ನೀತಿಗಳಲ್ಲಿ ಇವುಗಳ ಉತ್ತೇಜನಕ್ಕೆ ದೊರೆತ ಸ್ಥಾನ ಅಷ್ಟರದ್ದೇ.  ಹೆಚ್ಚೆಂದರೆ ದೊರೆಯುವ ಉತ್ತರ ಇವುಗಳನ್ನು ನೋಡಿಕೊಳ್ಳಲು ಅಕಾಡೆಮಿಗಳಿವೆ ಎಂಬುದಷ್ಟೆ.

ಓದು ಬರಹ ಬಾರದ ನನ್ನಜ್ಜಿ ಕುಮಾರವ್ಯಾಸ ಭಾರತವನ್ನು ಅದು ಹೇಗೆ ಕಂಠಪಾಠ ಮಾಡಿಕೊಂಡಿದ್ದಳು? ಇದೇ ವರ್ಗದ ಸಿರಿಯಜ್ಜಿ ಬಾಯಲ್ಲಿ ಸೋಬಾನೆ ಪದಗಳಾದಿಯಾಗಿ ಅಸಂಖ್ಯ ಪದ್ಯಗಳು ಹೇಗೆ ನೆಲೆಯೂರಿದ್ದವು? ಇಂಥದ್ದೇ ಗುಂಪಿನ ಸುಕ್ರಿ ಬೊಮ್ಮಗೌಡರು ತಾರ್ಲೆ ನೃತ್ಯವನ್ನು, ಅನೇಕಾನೇಕ ಹಾಡುಗಳನ್ನು ಕೇಳಿದವರು ಮೈಮರೆಯುವಂತೆ ಕನ್ನಡ ಕಂಪಿನಲ್ಲಿ ಹಾಡಲು ಕಲಿತದ್ದು ಹೇಗೆ? ದಾಖಲೆ ಮಾಡಿಕೊಳ್ಳುವ ಹತ್ತಾರು ವಿದ್ವಾಂಸರೇ ಸುಸ್ತಾಗುವಷ್ಟು ವಾರ-ತಿಂಗಳುಗಟ್ಟಲೆ ಗೋಪಾಲನಾಯ್ಕರು ಒಂದೇ ಸಮನೆ ಸಿರಿ ಕಾವ್ಯ ಹಾಡುವುದು ಹೇಗೆ? ಅಚ್ಯುತದಾಸ, ಲಕ್ಷ್ಮಣದಾಸರ ಕೀರ್ತನೆಯನ್ನೋ ವಾಗ್ವೈಖರಿಯನ್ನೋ ಗಂಗಮ್ಮ ಕೇಶವಮೂರ್ತಿಯವರ ಗಮಕವನ್ನೋ ಗಂಗಾವತಿ ಪ್ರಾಣೇಶರ ಹಾಸ್ಯವನ್ನೋ ಕೇಳಿ ಕನ್ನಡದ ಸೊಗಸಿಗೆ ಮೈಮರೆಯದಿರುವುದು ಹೇಗೆ? ಇವುಗಳಲ್ಲಿ ಯಾವುದಾದರೂ ಒಂದು ಬಗೆ ಎಳವೆಯಲ್ಲೇ ಕಿವಿಗೆ ಬಿದ್ದವರು ಕನ್ನಡವನ್ನು ಆವರಿಸಿಕೊಳ್ಳದೇ ಬಿಟ್ಟಾರೆಯೇ? ಕನ್ನಡದ ಸಮೃದ್ಧ ಪರಂಪರೆಯ ಉಳಿಕೆ ಇದುವರೆಗೆ ಆಗಿದ್ದು ಹೀಗೆ.

ಆಧುನಿಕ ಶಿಕ್ಷಣ ಕ್ರಮದಲ್ಲಿ ಎಳೆ ಮಕ್ಕಳ ಮನದಲ್ಲಿ ಕನ್ನಡದ ಇಂಥ ಕಂಪು ಬೀಳುವಂತೆ ಮಾಡಲು ಯಾವ ಅಡ್ಡಿಯೂ ಇಲ್ಲ. ಶಿಕ್ಷಣ ಕ್ರಮದಲ್ಲಿ ಇಂಥವನ್ನು ಅಳವಡಿಸಿದರೆ ಕನ್ನಡ ಮಾಧ್ಯಮ ಕಡ್ಡಾಯವಾಗಲಿ ಬಿಡಲಿ, ಕನ್ನಡ ಪರಂಪರೆ, ಪರಿಸರ ತಾನಾಗಿ ಉಳಿಯುತ್ತದೆ. ದೇಶದ ಬಹುತೇಕ ಭಾಷೆಗಳ ವರ್ಣಮಾಲೆಗೆ ಹೊಂದಿಕೊಳ್ಳುತ್ತಿದ್ದ ಅ ಆ ಇ ಈ ಅಕ್ಷರಮಾಲೆಯ ಬದಲು ರಗಸದಅ ಎಂಬ ಗೊಂದಲಕಾರಿ ಅಕ್ಷರ ವಿಧಾನವನ್ನು ಅಳವಡಿಸಿದ ಮೇಲಂತೂ ಕನ್ನಡ ಕಲಿತವರೂ ಇದೆಂಥ ಕನ್ನಡ ಎನ್ನುವಂತಾಗಿದೆ. ಇದನ್ನೂ ಸರಿಪಡಿಸಬೇಕಿದೆ. ಕನ್ನಡ ಉಳಿಸುವ ಕ್ರಮಗಳನ್ನು ಕೈಗೊಳ್ಳಬಾರದೆಂದು ಯಾರೂ ಹೇಳಿಲ್ಲ, ಹೇಳುವುದೂ ಇಲ್ಲ. ಕನ್ನಡದ ಸಾಂಸ್ಕೃತಿಕ ಪರಿಸರ ಉಳಿಸುವ ಈ ಬಗೆಯ ನೀತಿಗಳಿಗೆ ಮುಂದಾಗದೇ ಮಾಧ್ಯಮವಿದ್ದರೆ ಸಾಕು, ಕಾನೂನು ಬದಲಾಗಬೇಕು ಎಂಬ ಒಣ ಪ್ರತಿಷ್ಠೆಯ ಹಠ ಸಾಧಿಸುತ್ತ ಹೋದರೆ ಮುಂದೊಂದು ದಿನ ಕನ್ನಡ ಮಾಧ್ಯಮ ಇರಬಹುದು ಆದರೆ ಕನ್ನಡ ಜಗತ್ತು ಇರುವುದಿಲ್ಲ!

13 ಟಿಪ್ಪಣಿಗಳು Post a comment
 1. Nagshetty Shetkar
  ಮೇ 23 2014

  ಕನ್ನಡ ಮಾಧ್ಯಮ ಶಿಕ್ಷಣವನ್ನು ಕಡ್ಡಾಯ ಮಾಡಲು ಕಾನೂನು ತೊಡಕುಗಳಿದ್ದರೆ ಕನಿಷ್ಠ ವಚನಸಾಹಿತ್ಯವನ್ನಾದರೂ ಮಕ್ಕಳಿಗೆ ಕಡ್ಡಾಯವಾಗಿ ಬೋಧಿಸುವಂತಾಗಬೇಕು. ಕರ್ನಾಟಕದಲ್ಲಿ ಸಹನಶೀಲ, ಸೃಜನಶೀಲ, ಮಾನವೀಯ ಸಮತಾ ಸಮಾಜ ನಿರ್ಮಾಣವಾಗಲು ವಚನ ಸಾಹಿತ್ಯದ ಬೋಧನೆ ಅನಿವಾರ್ಯ. ಇದನ್ನು ಸುಪ್ರೀಂ ಕೋರ್ಟಿಗೆ ಮನದಟ್ಟು ಮಾಡಲು ದರ್ಗಾ ಸರ್ ಅವರ ನೇತೃತ್ವದಲ್ಲಿ ವಚನ ಸಾಹಿತ್ಯ ತಜ್ಞರ ಕಮಿಟಿಯನ್ನು ಕಾಂಗ್ರೆಸ್ ಸರಕಾರ ನೇಮಿಸತಕ್ಕದ್ದು. ಈ ಕಮಿಟಿ ಸಾಲಿಸಿಟರ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅವರ ಜೊತೆಗೂಡಿ ವಚನ ಸಾಹಿತ್ಯದಿಂದಲೇ ಮನುವಾದದ ನಾಶ ಸಾಧ್ಯ ಎಂಬ ವಾದವನ್ನು ಸಿದ್ದಮಾಡತಕ್ಕದ್ದು. ಭಾರತದ ಸಂವಿಧಾನ ಸೆಕ್ಯೂಲರ್ ತತ್ವಕ್ಕೆ ಬದ್ಧವಾಗಿರುವುದರಿಂದ ಸುಪ್ರೀಂ ಕೋರ್ಟು ವಚನಸಾಹಿತ್ಯಶಿಕ್ಷಣದ ವಿಷಯದಲ್ಲಿ ಸರಕಾರದ ಪರವಾಗಿಯೇ ತೀರ್ಪು ಕೊಡುತ್ತದೆ ಎಂದು ವಿಶ್ವಾಸ ಇಡಬಹುದು.

  ಉತ್ತರ
 2. M.A.Sriranga
  ಮೇ 23 2014

  ಶೆಟ್ಕರ್ ಅವರಿಗೆ– ತಮ್ಮ ಸಲಹೆಯೇನೋ ಚೆನ್ನಾಗಿದೆ. ಆದರೆ ಒಂದು ಧಾರ್ಮಿಕ ತೊಡಕು ಕಾಣಿಸುತ್ತಿದೆ. ಮುಸ್ಲಿಂ ಜನಾಂಗ ತಮ್ಮ ಕೊರಾನ್ ಮತ್ತು ಅಲ್ಲಾನನ್ನು ಬಿಟ್ಟು ಅನ್ಯ ಗ್ರಂಥಗಳ ಪಠನ ಮತ್ತು ದೇವರ ಸ್ತುತಿ ಮಾಡುತ್ತಾರೆಯೇ? ಅಲ್ಲಾನ ಬದಲಿಗೆ “ಕೂಡಲಸಂಗಮ”,”ಗುಹೇಶ್ವರ ಲಿಂಗಾ” ಎಂದು ಹೇಳಬಲ್ಲರೆ? ನಮಗೇನೋ ಕೂಡಲಸಂಗಮ/ಗುಹೇಶ್ವರ ಲಿಂಗಾ ಎಂದರೆ ತಕರಾರಿಲ್ಲ. ಆದರೆ ಅವರ ಮನೊಲಿಸುವುದು practical ಆಗಿ ಹೇಗೆ ಸಾಧ್ಯ?

  ಉತ್ತರ
  • Nagshetty Shetkar
   ಮೇ 23 2014

   ಇರುವನೊಬ್ಬನೇ ದೇವ. ಇಸ್ಲಾಂ ಕೂಡ ಇದನ್ನೇ ಹೇಳಿದೆ. ಹೆಸರಿನಲ್ಲೇನಿದೆ? ದರ್ಗಾ ಅಂದರೂ ಒಂದೇ ಚನ್ನಬಸವಣ್ಣ ಅಂದರೂ ಒಂದೇ! ಆದುದರಿಂದ ಕೂಡಲಸಂಗಮದೇವ ಅಂತ ಇರುವ ಕಡೆಯೆಲ್ಲ ದೇವ ಅಂತ ಬದಲಾಯಿಸಿದರೆ ಎಲ್ಲಾ ಧರ್ಮದವರಿಗೂ ಒಪ್ಪಿಗೆ ಆಗುತ್ತದೆ.

   ಉತ್ತರ
   • viji
    ಮೇ 23 2014

    ಮುಸ್ಲಿಂ ಓಲೈಕೆಗಾಗಿ ನಿಮ್ಮ ವಚನಗಳನ್ನೂ ಅವುಗಳ ಅಂಕಿತಗಳನ್ನು ತಿದ್ದಲೂ ಸಹ ನೀವು ತಯಾರು ಎಂದಾಯಿತು. ಶಿವ ಶಿವಾ ಎಲ್ಲಿಗೆ ಬಂತಪ್ಪ ನಿನ್ನ ಭಕ್ತರ ಆಟಾಟೋಪ? ದೇವ ದೇವಾ?????

    ಉತ್ತರ
    • ಗಿರೀಶ್
     ಮೇ 28 2014

     ಅವರು ಹಾಗೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಲ್ಲ, ಗಾಳಿ ಬಂದಾಗ ತೂರಿಕೊಳ್ಳುತ್ತಾರೆ. ಬಿಡಿ

     ಉತ್ತರ
   • ಮೇ 24 2014

    ಸರ್ಕಾರ ದರ್ಗಾಕಮಿಟಿಯಿಂದ ಕುರಾನು ಮತ್ತು ವಚನ ಸಾಹಿತ್ಯದ ಅಭೇದ್ಯತೆಯನ್ನು ಪುಷ್ಟೀಕರಿಸಿ; ಕುರಾನನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಪಠ್ಯ ಮಾಡಿದ್ರೆ ಸುಪ್ರೀಂಕೋರ್ಟು ಒಪ್ಪದೆ ಏನುಮಾಡೀತು ?

    ಉತ್ತರ
    • Nagshetty Shetkar
     ಮೇ 24 2014

     +1

     Qur’an and Vachanakaras have told the same truth in different form and language for different cultures. Truth is fundamentally the same.

     ಉತ್ತರ
  • viji
   ಮೇ 23 2014

   ಶ್ರೀರಂಗರೆ ಉತ್ತಮ ಪ್ರಶ್ನೆ.

   ಉತ್ತರ
  • ಗಿರೀಶ್
   ಮೇ 28 2014

   +೧೦೦೦

   ಉತ್ತರ
 3. M.A.Sriranga
  ಮೇ 25 2014

  ಶ್ರೀಪಾದ ಭಟ್ ಅವರಿಗೆ— ನಾನು facebook ನಲ್ಲಿ ತಮ್ಮ ಲೇಖನಕ್ಕೆ ಮಾಡಿದ comment ಗೆ ಉತ್ತರವಾಗಿ ನಿಮ್ಮ ಕಾಮೆಂಟ್ ನೋಡಿದೆ. ಲೇಖನವನ್ನು ಪೂರ್ತಿ ಓದದೇ ಲೇಖನದ ಶೀರ್ಷಿಕೆ ಮಾತ್ರ ಓದಿ ಪ್ರತಿಕ್ರಿಯಿಸುವುದು ನನ್ನ ಜಾಯಮಾನವಲ್ಲ; ಅಷ್ಟು ಅವಸರವೂ ನನಗಿಲ್ಲ. ಸರ್ಕಾರದ ಸಮಾಲೋಚನೆಗಳಲ್ಲಿ ಸಾಹಿತಿಗಳ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ತಮ್ಮ ಆಕ್ಷೇಪಕ್ಕೆ ಮಾತ್ರ ನನ್ನ ಕಾಮೆಂಟ್ ಸೀಮಿತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಾವು ಈ ಹಿಂದೆ ಬರೆದ ಲೇಖನವನ್ನು ನಾನು ಓದಿದ್ದೇನೆ. ಅದರ ಮುಂದುವರಿಕೆಯಾಗಿ ‘ಸಾಹಿತಿಗಳೆಂದರೆ ಸರ್ವಸ್ವವೇ’ ಲೇಖನ ಬರೆದಿದ್ದೀರಿ. ಹೀಗಾಗಿ ‘ನಿಲುಮೆ’ಯಲ್ಲಿ ತಮ್ಮ ಪ್ರಸ್ತುತ ಲೇಖನಕ್ಕೆ ನಾನು ಯಾವ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡುವುದು ಸರಿಯೋ ಅಥವಾ ನಮ್ಮ ಸಂವಿಧಾನದ ಒಕ್ಕೂಟ ಪರಿಕಲ್ಪನೆಯಡಿಯಲ್ಲಿ ಮುಂದುವರಿಯುವುದು ಸರಿಯೋ ಎಂಬ ಬಗ್ಗೆ ಈಗ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಅವುಗಳನ್ನು ನಾನು ದಿನಾ ಗಮನಿಸುತ್ತಾ ಇದ್ದೇನೆ. ತಾವು ಸರ್ಕಾರದ ಸಮಿತಿಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೂ ಇರಬೇಕೆಂದು ಹೇಳಿದ್ದೀರಿ. ಇದು ಹೇಗಿದೆಯೆಂದರೆ ನ್ಯಾಯಾಧೀಶರು,ಪೋಲಿಸಿನವರು ಅಪರಾಧಿಯನ್ನೇ ನಿನಗೆ ಯಾವ ಶಿಕ್ಷೆ ವಿಧಿಸಬೇಕು ತಿಳಿಸು ಎಂದು ಕೇಳಿದ ಹಾಗಿದೆ. ಕೇವಲ ಕನ್ನಡ ಮಾಧ್ಯಮದಿಂದ ಕನ್ನಡ ಉಳಿಯುತ್ತದೆ ಎಂದು ಭಾವಿಸುವಷ್ಟು ನಾನು ಅಜ್ಞನಲ್ಲ. ಆದರೆ ನಮ್ಮ ಸುತ್ತ ಮುತ್ತ ಕನ್ನಡ ಮಾತನಾಡುವ ವಾತಾವರಣವೇ ಇಲ್ಲವಾದರೆ ಇನ್ನು ಹತ್ತಿಪತ್ತು ವರ್ಷಗಳಲ್ಲಿ ಕನ್ನಡ ನಮ್ಮ ಅಡುಗೆ ಮನೆಯಲ್ಲೂ ಉಳಿಯಲಾರದು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ತಾಲ್ಲೋಕುಗಳಲ್ಲಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ,ಹೊಸಕೋಟೆ ಮತ್ತು ದೇವನಹಳ್ಳಿಯಲ್ಲಿ ಕನ್ನಡಕ್ಕಿಂತ ಜಾಸ್ತಿಯಾಗಿ ನಮಗೆ ಕೇಳಿಸುವುದು ತೆಲುಗು. ದೊಡ್ಡಬಳ್ಳಾಪುರದಲ್ಲಿ ತೆಲುಗು ಮಾಧ್ಯಮದ ಶಾಲೆ ಇದೆ. ದೊಡ್ಡಬಳ್ಳಾಪುರ ವೇನೂ ಆಂಧ್ರದ ಗಡಿಯಂಚಿನಲ್ಲಿ ಇಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಆಂಧ್ರದ ಗಡಿ ಅಂಚಿನಲ್ಲಿದೆ ಹೀಗಾಗಿ ತೆಲುಗು ಭಾಷೆಯ ಪ್ರಭಾವ ಸಹಜ ಎಂದು ತಾವು ಹೇಳಬಹುದು. . ಆದರೆ ಆಂಧ್ರ,ತಮಿಳುನಾಡು ಮತ್ತು ಕೇರಳದ ಗಡಿ ಅಂಚಿನಲ್ಲಿರುವ ಅಲ್ಪ ಸಂಖ್ಯಾತ ಕನ್ನಡಿಗರಿಗೆ ಆ ಸರ್ಕಾರಗಳು ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಅವಕಾಶವನ್ನೇ ನಾಜೂಕಾಗಿ ತಪ್ಪಿಸುತ್ತಾ ಅವರುಗಳು ಅನಿವಾರ್ಯವಾಗಿ ಆಯಾ ರಾಜ್ಯಗಳ ಭಾಷೆಯನ್ನೇ ಅವಲಂಬಿಸುವಂತೆ ಮಾಡಿವೆ. ಅಲ್ಲಿರುವವರ ‘ಸಾಂಸ್ಕೃತಿಕ ಜಗತ್ತಿನಿಂದ’ ಕನ್ನಡ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇನ್ನು ನಮ್ಮ ಹಿರಿಯರು ಓದು ಬರಹ ಬರದಿದ್ದರೂ ಕುಮಾರವ್ಯಾಸಭಾರತ ,ಜಾನಪದ ಸಾಹಿತ್ಯ ಇತ್ಯಾದಿಗಳನ್ನು ಹಾಡುತ್ತಿರಲಿಲ್ಲವೇ , ಇವನ್ನೆಲ್ಲಾ ಉಳಿಸಿಕೊಂಡು ಬಂದಿರಲಿಲ್ಲವೇ?ಎಂದು ತಾವು ಪ್ರಶ್ನಿಸಿದ್ದೀರಿ. ಅದಕ್ಕೆ ಕಾರಣ ಅವರ ಸುತ್ತಾ ಕನ್ನಡ ಮಾತನಾಡುವ, ಕನ್ನಡ ಕಾವ್ಯ,ದೇವರನಾಮ ಜನಪದ ಹಾಡುಗಳನ್ನು ಹೇಳುವ ಒಂದು ‘ಸಾಂಸ್ಕೃತಿಕ’ ಜಗತ್ತು ಇತ್ತು . . ಈಗ ನಮ್ಮ ಮಕ್ಕಳ ಸುತ್ತಾ ಇರುವ ‘ಸಾಂಸ್ಕೃತಿಕ ಜಗತ್ತು’ಯಾವುದು?. computer, tablet ,mobile, pogo, cartoon tv channel , mobile games. ಈ ವಿಜ್ಞಾನ ಮತ್ತು ತಂತ್ರಜ್ಞಾನದ ವಿರೋಧಿ ನಾನಲ್ಲ. ಆದರೆ ಶಾಲೆಯಿಂದ ಹಿಡಿದು ಮನೆಯವರೆಗೂ ಕನ್ನಡೇತರ ಭಾಷೆಯೇ ನಮ್ಮ ಮಕ್ಕಳ ಕಿವಿ ಮೇಲೆ ಬೀಳುತ್ತಿದ್ದರೆ ನಮ್ಮ ಮಕ್ಕಳಿಗೆ,ಮೊಮ್ಮಕ್ಕಳಿಗೆ ಉಳಿಯಬಹುದಾದ ‘ಸಾಂಸ್ಕೃತಿಕ’ ಜಗತ್ತು ಯಾವುದು?. ಕನ್ನಡ ಭಾಷೆ ತರಗತಿಗಳಲ್ಲೂ ಮಕ್ಕಳ ಕಿವಿ ಮೇಲೆ ಪ್ರತಿದಿನ ಬೀಳುವ ಹಾಗೆ ಮಾಡುವುದು ಕರ್ನಾಟಕ ಸರ್ಕಾರದ ಕರ್ತ್ಯವ್ಯ ಅಲ್ಲವೇ? ಇದನ್ನು ಕೇವಲ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದರಿಂದ ಮಾತ್ರ ಸಾಧ್ಯವೇ? (ಶಾಲೆಯ ಆವರಣದಲ್ಲಿ.ತರಗತಿಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವಂತಹ ಶಾಲೆಗಳೂ ನಮ್ಮಲ್ಲಿವೆ). ಇವುಗಳಿಗೆ ಕಡಿವಾಣ ಹಾಕದೆ ‘ನಾವೇನು ಮಾಡೋಣ,ಕಾನೂನು ನಮ್ಮ ಕೈ ಕಟ್ಟಿದೆ’ ಎಂದು ಸುಮ್ಮನೆ ಕೂರುವುದು ಸರಿಯೇ? ಸರ್ಕಾರ ನೇಮಿಸಿದ ಸಮಿತಿಯಲ್ಲಿ ಸಾಹಿತಿಗಳೂ ಇದ್ದರೆ ತಪ್ಪೇನು? ಅವರ ಅಭಿಪ್ರಾಯ ಕೇಳುವುದೂ ತಪ್ಪೇ? ಕಾನೂನಿನ ಕಗ್ಗಂಟನ್ನು ಬಿಡಿಸಲು ಸರ್ಕಾರದ ಬಳಿ ಕಾನೂನು ತಜ್ಞರಿದ್ದಾರೆ; ಸುಪ್ರೀಂ ಕೋರ್ಟಿ ನಲ್ಲಿ ವಾದಿಸಿಬಂದ ವಕೀಲರಿದ್ದಾರೆ. ನಮ್ಮ ‘ಸಾಂಸ್ಕೃತಿಕ ಜಗತ್ತಿಗೆ ‘ ಸಾಹಿತಿಗಳ ಅನಿವಾರ್ಯತೆ ಇಲ್ಲ ಎಂಬುದು ತಮ್ಮ ಅಭಿಪ್ರಾಯವಾದರೆ ನಾನೇನೂ ಹೇಳಲಾರೆ.

  ಉತ್ತರ
  • shripad
   ಮೇ 25 2014

   ಸರಿ. ಸರಕಾರ ಕರೆದ ಸಭೆಯಲ್ಲಿ ಹೊಟೇಲು ಮಾಲೀಕರ ಸಂಘದವರೋ ಲಾರಿ ಮಾಲೀಕರ ಸಂಘದವರೋ ಇರಬೇಕಿತ್ತು ಎಂದು ನಾನು ಹೇಳಿದ್ದರೆ ನಿಮ್ಮ ಮಾತು ಒಪ್ಪುತ್ತಿದ್ದೆ. ಸಮಸ್ಯೆಗೆ ಸಂಬಂಧಿಸಿದವರು ಇಂಥ ಸಭೆಯಲ್ಲಿರಬೇಕಿತ್ತು ಅಲ್ಲವೇ? ಇಂಥ ಸಭೆಗೆ ಸಾಹಿತಿಗಳಂತೆಯೇ ಯಾರು ಬೇಕಾದರೂ ಹೋಗಬಹುದು. ಆದರೆ ಅವರು ಅನಿವಾರ್ಯವಲ್ಲ, ಅಪೇಕ್ಷಣೀಯವಷ್ಟೆ. ಪರಿಸರ, ಗಡಿನಾಡು, ಮಾಧ್ಯಮ, ಕಾವೇರಿ ನೀರು ಇತ್ಯಾದಿ ಏನೇ ಸಮಸ್ಯೆ ಬಂದರೂ ಆಯಾ ಕ್ಷೇತ್ರದ ಪರಿಣತರನ್ನು ಆಹ್ವಾನಿಸುವ ಪರಿಪಾಠ ಹಾಕಿಕೊಳ್ಳುವ ಬದಲು ಆಯ್ದ ಸಾಹಿತಿಗಳನ್ನೇ ಎಲ್ಲದಕ್ಕೂ ಕರೆಯುವುದು ಏಕೆ ಎಂದು ನನಗೆ ಅರ್ಥವಾಗಿಲ್ಲ. ಕನ್ನಡ ಅಂದರೆ ಸಾಹಿತ್ಯ ಅಥವಾ ಸಾಹಿತಿ ಅಷ್ಟೇ ಅಲ್ಲ.

   ಉತ್ತರ
   • Godbole
    ಮೇ 26 2014

    “ಏನೇ ಸಮಸ್ಯೆ ಬಂದರೂ ಆಯಾ ಕ್ಷೇತ್ರದ ಪರಿಣತರನ್ನು ಆಹ್ವಾನಿಸುವ ಪರಿಪಾಠ ಹಾಕಿಕೊಳ್ಳುವ ಬದಲು ಆಯ್ದ ಸಾಹಿತಿಗಳನ್ನೇ ಎಲ್ಲದಕ್ಕೂ ಕರೆಯುವುದು ಏಕೆ ಎಂದು ನನಗೆ ಅರ್ಥವಾಗಿಲ್”

    You are right! This happens only in Karnataka state where writers are experts on everything.

    ಉತ್ತರ
    • shripadt
     ಮೇ 27 2014

     ಶ್ರೀರಂಗರಿಗೆ ಇರುವ ಪ್ರಶ್ನೆಗಳು ಎಲ್ಲ ಕನ್ನಡ ಪ್ರೇಮಿಗಳಿಗೂ ಇದೆ. ಅವರೇ ಪಟ್ಟಿ ಮಾಡಿದ ಕನ್ನಡದ ಇಂದಿನ ಪರಿಸರ (ಕಂಪ್ಯೂಟರು, ಮೊಬೈಲು ಇತ್ಯಾದಿ)ದಲ್ಲಿ ಕನ್ನಡ ಸುಳಿದಾಡಬೇಕು. ಶಾಲಾ ಪರಿಸರದಲ್ಲಿ ಕನ್ನಡತನ ಇರುವಂತೆ ಮಾಡಲು ಮಾಧ್ಯಮವಲ್ಲದೇ ಬೇರೆ ಹತ್ತಾರು ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ. ಶಿಕ್ಷಣ ತಜ್ನರಿಗೆ ಇದನ್ನು ಆಗುಮಾಡಿಸುವ ವಿಧಾನಗಳು ತಿಳಿದಿವೆ. ಸಾಹಿತಿಗಳಿಗೆ ಇವೆಲ್ಲ ತಿಳಿದಿರಬೇಕಿಲ್ಲ. ಹೆಚ್ಚೆಂದರೆ ತಮ್ಮ ತಮ್ಮ ಕೃತಿಗಳನ್ನು ಪಠ್ಯವಾಗಿಸಿದರೆ ಕನ್ನಡ ಉಳಿಯುತ್ತದೆ ಎಂದು ಅವರು ಸಲಹೆ ಕೊಡಬಹುದು, ಒತ್ತಡ ತರಬಹುದು!
     ಕಾಲದ ಜೊತೆ ಭಾಷೆ ಮತ್ತು ಅದರ ಬಳಕೆಯ ಕ್ರಮ ಕೂಡ ಬದಲಾಗಬೇಕು, ಬದಲಾಗುತ್ತದೆ. ಇಲ್ಲವಾದಲ್ಲಿ ಅಂಥ ಭಾಷೆ ಕೂಡ ಅಳಿವಿನ ದಾರಿ ಹಿಡಿಯುತ್ತದೆ. ಶತಮಾನಗಳ ಕನ್ನಡದ ಉಳಿವನ್ನೇ ನೋಡಿ. ಸಂಸ್ಕೃತವೂ ಸೇರಿ ಯಾವುದನ್ನೂ ಅದು ಪ್ರತಿರೋಧಿಸಿಲ್ಲ, ಬದಲಿಗೆ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಬೆಳೆಯಿತು. ಕಾಲದ ಬದಲಾವಣೆಗೆ ಒಗ್ಗದೆ ಪ್ರತಿರೋಧಿಸಿದ ಸಂಸ್ಕೃತ ಏನಾಯಿತು? ಕನ್ನಡ ಹೀಗಾಗಬಾರದು ಎಂದರೆ ಅದನ್ನು ಕಾಲಿಕಗೊಳಿಸಬೇಕು, ಭವಿಷ್ಯದ ನಿರೀಕ್ಷೆಗಳನ್ನು ಈಡೇರಿಸುವಂತೆ ಸಿದ್ಧಗೊಳಿಸಬೇಕು. ಇಂಥ ಕೆಲಸ ನಮ್ಮಲ್ಲಿ ಆಗುತ್ತಿಲ್ಲ. ಸುಮ್ಮನೆ ಕನ್ನಡ ಉಳಿಸಬೇಕು ಅಂದರೆ ಉಳಿಯಬೇಕು ಅಂದರೆ ಉಳಿಯುತ್ತದೆ, ಇಲ್ಲವಾದರೆ ಹೋಗುತ್ತದೆ. ಅದನ್ನು ವ್ಯಕ್ತಿಗತವಾಗಿ ಯಾರೂ ಉಳಿಸಲಾರರು.

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments