ವಿಷಯದ ವಿವರಗಳಿಗೆ ದಾಟಿರಿ

ಮೇ 23, 2014

ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಅನಂತಮೂರ್ತಿ - ಸಿದ್ದರಾಮಯ್ಯಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…

ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.

ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.

ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.

ಇತ್ತೀಚಿನ ದಿನಗಳಲ್ಲಿನ ಬಹುತೇಕ ರಾಜಕೀಯ ವಿದ್ಯಾಮಾನಗಳಿಗೆ ಪ್ರತಿಕ್ರಿಯಿಸಿರುವ ಮೂರ್ತಿಗಳು,ಕಳೆದ ವರ್ಷ ನಾಡಿನ ಬೌದ್ಧಿಕ ವಲಯದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದ, “CSLC ತಂಡದವರ – ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಕುರಿತ ಚರ್ಚೆಯಲ್ಲಿ ಕಾಣಿಸಲಿಲ್ಲ ಮತ್ತು ಆ ಚರ್ಚೆಯ ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೂಗಿನಡಿಯಲ್ಲಿ ನಡೆದ ಆಘಾತಕಾರಿ ಫ್ಯಾಸಿಸ್ಟ್ ಬೆಳವಣಿಗೆಗಳಿಗೂ ಸ್ಪಂದಿಸಲಿಲ್ಲ.ಹೀಗೊಂದು ಚರ್ಚೆ ನಡೆಯಿತು ಅನ್ನುವುದು ಮತ್ತು ಆ ಚರ್ಚೆಯ ಅಂತಿಮ ಹಂತದ ಬೆಳವಣಿಗೆಗಳ ಬಗ್ಗೆ ಮೂರ್ತಿಗಳಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ಹಾಗಾಗಿ ನಾನು ಹೇಳಲು ಹೊರಟ ವಿಷಯವನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಆ ನಂತರ ನನ್ನ ಪ್ರಶ್ನೆಗಳಿಗೆ,ಮೂರ್ತಿಗಳಿಂದ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡದಿಂದ ಉತ್ತರ ಬಯಸುತ್ತೇನೆ.ಮೂರ್ತಿಗಳು ಮತ್ತವರ ಸೆಕ್ಯುಲರ್ ಮಿತ್ರರು ಪದೇ ಪದೇ ಮೋದಿಯ ವಿರುದ್ಧ ಬಳಸಿದ ಪದ “ಫ್ಯಾಸಿಸ್ಟ್”.ಈ ಲೇಖನವನ್ನು ಓದಿದ ಮೇಲೆ “ನಿಜವಾದ ಫ್ಯಾಸಿಸ್ಟರು ಯಾರು?” ಎಂದು ಮೂರ್ತಿಗಳು ಉತ್ತರಿಸುತ್ತಾರಾ?

ಏನಿದು CSLC: ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 4-5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ,ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.

ಭಾರತೀಯ ಸಮಾಜ ವಿಜ್ಞಾನದ ತಳಹದಿಯು ವಸಹಾತುಶಾಹಿಯ ಪ್ರಭಾವದಿಂದ ಸೃಷ್ಟಿಯಾಗಿದೆ.ಭಾರತದ ಕುರಿತು ಯುರೋಪಿಯನ್ ಸಮಾಜ ವಿಜ್ಞಾನಿಗಳು ತಳೆದ ಧೋರಣೆಯು ಅವರ ಯುರೋಪಿಯನ್ ಸಮಾಜವನ್ನು ಭಾರತೀಯ ಸಮಾಜಕ್ಕೆ ಸಮೀಕರಿಸಿ ಮಾಡಿದ್ದಾಗಿದೆಯೆಂದೂ ಹೇಳುತ್ತಲೇ,ಭಾರತದ ಸಮಾಜವನ್ನು ಹೊಸತಾದ ಸಮಾಜ ವಿಜ್ನಾದ ದೃಷ್ಟಿಯಿಂದ ಅಧ್ಯಯನ ನಡೆಸಬೇಕೆಂದು ಸಿ.ಎಸ್.ಎಲ್.ಸಿ ತಂಡ ಹೇಳುತ್ತದೆ.ಭಾರತದ ಸಾಮಾಜಿಕ ಸಂರಚನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿಕೊಂಡು ಅದರ ಫಲಿತಾಂಶದ ಮೇಲೆಯೇ ಇಲ್ಲಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಬೇಕಿದೆ ಅನ್ನುವ ವಾದವನ್ನು ಮುಂದಿಡುತ್ತಿದೆ.
ಶಾಲಾ ದಿನಗಳಿಂದಲೇ ಭಾರತದಲ್ಲಿರುವ ಜಾತಿ ಪದ್ಧತಿಯೇ ನಮ್ಮೆಲ್ಲ ಅನಿಷ್ಟಗಳಿಗೆ ಕಾರಣ ಅಂತ ಓದಿಕೊಂಡು ಬಂದವರ ಮುಂದೆ ನಿಂತು “ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ” ಅಂದರೆ ಸಾಮಾನ್ಯರು ನಗುವುದು ಸಹಜವೇ.ಬಹಳಷ್ಟು ಜನ ಈ ಇವರ ವಾದಗಳನ್ನು ವಿರೋಧಿಸಿದರು.ಅವರ ಸಂಶೋಧನೆ ಶುರುವಾಗುವ ಮೊದಲೆ ಶಿವಮೊಗ್ಗದ ಬುದ್ದಿಜೀವಿಯೊಬ್ಬರು ಈ ಸಂಶೋಧನೆಯನ್ನೇ ನಿಲ್ಲಿಸಿ ಅಂದಿದ್ದರು.ಆರಂಭದ ಈ ವಿರೋಧದ ನಡುವೆಯೂ CSLC ಯವರು ಯಾವುದೇ ಫೆಲೋಷಿಪ್ ಕೂಡ ಇಲ್ಲದೇ ಸಮಾಜ ವಿಜ್ಞಾನದ ಸಂಶೋಧನೆಯನ್ನೇ ಒಂದು passion ಆಗಿ ತೆಗೆದುಕೊಂಡು ಪದೇ ಪದೇ ಸ್ಥಾಪಿತ ಥಿಯರಿಗಳ ಮೇಲೆ ತಮ್ಮ ಲಯಬದ್ಧ ಪ್ರಶ್ನೆಗಳನ್ನಿಡುತ್ತಲೇ ಬಂದರು.ಈ ಎಲ್ಲಾ ಪ್ರಶ್ನೆಗಳಿಗೆ ಕರ್ನಾಟಕದ ಬುದ್ದಿಜೀವಿ ವಲಯದ ಬಳಿ ಅಂತ ಉತ್ತರವೇನು ಕಾಣಲೇ ಇಲ್ಲ.

ಏನಿದು “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಕುರಿತ ಚರ್ಚೆ: ಕಳೆದ ವರ್ಷ ರಾಜ್ಯದ ಬುದ್ದಿಜೀವಿ,ಚಿಂತಕರ ವಲಯದಲ್ಲಿ ಒಂದು ಮಟ್ಟಿನ ಕೋಲಾಹಲ ಮೂಡಿಸಿದ್ದು,CSLCಯ ಬಾಲು ಮತ್ತು ಡಂಕಿನ್ ಝಳಕಿಯವರ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ” ಅನ್ನುವ ಪ್ರಬಂಧ.ಈ ಪ್ರಬಂಧದಲ್ಲಿ ಬಾಲು ಮತ್ತು ಡಂಕಿನ್ “ವಚನಗಳು ಜಾತಿ ವಿರೋಧಿ ಚಳುವಳಿಯಾಗಿದ್ದವು” ಅನ್ನುವ ಪ್ರಚಲಿತ ವಾದಕ್ಕೆ ಯಾವುದೇ ತರ್ಕ ಮತ್ತು ನಿಜಾಂಶಗಳ ಆಧಾರವಿಲ್ಲ ಅನ್ನುವುದನ್ನು ತಮ್ಮ ಸಂಶೋಧನೆಯ ಮೂಲಕ ಹೇಳಲು ಹೊರಡುತ್ತಾರೆ.

“ವಚನಗಳು ಜಾತಿಯ ವಿರುದ್ಧದ ಚಳುವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು.ಏಕೆಂದರೆ ಜಾತಿ ವಿರುದ್ಧದ ಚಳುವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಊಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. ಈ ಊಹಾಸಿದ್ಧಾಂತದ ಪ್ರಕಾರ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ.” ಅನ್ನುವ ಊಹಾ ಸಿದ್ಧಾಂತದ ಮೂಲಕ ಶುರು ಮಾಡಿ,

“ಕರ್ನಾಟಕ ಸರ್ಕಾರ ಇದುವರೆಗೆ ಪ್ರಕಟಿಸಿರುವ ಒಟ್ಟು ವಚನಗಳು: 21,788.
ಇವುಗಳಲ್ಲಿ ಬ್ರಾಹ್ಮಣರ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ: 195.
ಜಾತಿ, ಕುಲ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ವಿಚಾರಗಳ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ: 458″
ಅನ್ನುವ ಅಂಶಗಳನ್ನಿಡುತ್ತ ತಮ್ಮ ತರ್ಕ,ವಾದಗಳ ಮೂಲಕ ಪ್ರಚಲಿತ ವಚನಗಳ ಕುರಿತ ನಂಬಿಕೆಯ ಬುಡವನ್ನು ಅಲುಗಾಡಿಸುತ್ತ “ವಚನಗಳನ್ನು ಆಧ್ಯಾತ್ಮಿಕ ಚಳುವಳಿಯ ಹಿನ್ನೆಲೆ”ಯಲ್ಲಿ ಅರ್ಥೈಸಿಕೊಳ್ಳಬೇಕು ಅನ್ನುತ್ತಾರೆ ಬಾಲು ಮತ್ತು ಡಂಕಿನ್.

ಸಹಜವಾಗಿಯೇ ಈ ವಾದವೂ ಟೀಕೆಗೊಳಗಾಯಿತು.ಆದರೆ ಈ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆಯ” ಚರ್ಚೆ ನಡೆದ ರೀತಿಯನ್ನು ಗಮನಿಸಿದಾಗ ನಮ್ಮ ಪ್ರಗತಿಪರರೊಳಗಿನ ಫ್ಯಾಸಿಸ್ಟ್ ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇದ್ದ.ಮಾತು ಮಾತಿಗೆ ” ಅಭಿವ್ಯಕ್ತಿ ಸ್ವಾತಂತ್ರ್ಯ,ಅಸ್ಪೃಷ್ಯತೆ,ಸಾಮಾಜಿಕ ಬಹಿಷ್ಕಾರ”ಅಂತೆಲ್ಲ ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ಈ ಪ್ರಗತಿಪರರು ಮೊದಲಿಗೆ ಸಿ.ಎಸ್.ಎಲ್.ಸಿಯವರ ಸಂಶೋಧನೆಯೆಡೆಗೆ ತೋರಿದ್ದು “ವೈಚಾರಿಕ ಅಸ್ಪೃಷ್ಯತೆ”ಯನ್ನೇ.ಯಾವಾಗ ಚರ್ಚೆ ರಾಜ್ಯಮಟ್ಟದ ಪುರಾತನ ಪತ್ರಿಕೆಯಲ್ಲಿ ಶುರುವಾಯಿತೋ ಆಗಲೇ ವೈಚಾರಿಕತೆಯ ಬಗ್ಗೆ ಮಾತನಾಡುವವರ ಹುಳುಕುಗಳು ರೇಜಿಗೆಯೆನಿಸುವಷ್ಟು ಹೊರಬಂದಿದ್ದು.ಕೇವಲ ಸಿ.ಎಸ್.ಎಲ್.ಸಿ ವಿರೋಧಿ ಲೇಖನಗಳಿಗೆ ಸ್ಥಾನ ಕೊಟ್ಟು ಅದಕ್ಕೆ ಚರ್ಚೆ ಅನ್ನುವ ಹೆಸರುಕೊಟ್ಟು “ವೈಚಾರಿಕ ಬಹಿಷ್ಕಾರ”ವನ್ನು ಹಾಕಿದರು.

ಪಾಪ.ಈ ಪ್ರಗತಿಪರರ ಚಿಂತಾಜನಕ ಚಿಂತನೆಗೆ “ಇದು ಕೋಳಿ ಕೂಗದಿದ್ದರೂ ಅಲಾರಂಗಳು ನಿಯಮಿತವಾಗಿ ಕೂಗುವಂತ ಕಾಲ” ಅನ್ನುವುದು ತಿಳಿಯಲಿಲ್ಲ ನೋಡಿ.ತಾವು ಲಾಬಿ ಮಾಡಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಸಂಶೋಧನೆಯ ವಾದಕ್ಕೆ ಸ್ಥಾನ ಕೊಡದಿದ್ದರೆ ಇವರ ವಿಷಯ ಹೊರಗೆ ಬರುವುದಿಲ್ಲ ಅಂದುಕೊಂಡರು.ಆದರೆ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಮಾಹಿತಿ ವಿನಿಮಯಕ್ಕೆ ಯಾವ ದೊಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಅನ್ನುವುದು ಅವರಿಗೆ ಗೊತ್ತಾಗಿದ್ದು “ನಿಲುಮೆ” ಬಳಗ ವಚನದ ಕುರಿತು ಮುಕ್ತ ವೇದಿಕೆಯೊದಗಿಸಿದಾಗಲೇ.ಅಷ್ಟೊತ್ತಿಗೆ ಫೇಸ್ಬುಕ್ಕಿನಲ್ಲೂ ಪರ-ವಿರೋಧ ಚರ್ಚೆ ಶುರುವಾಗಿತ್ತು.

ಚರ್ಚೆಗಿಳಿದ ಕಲಬುರ್ಗಿಯಂತಹ ನಾಡಿನ ಹಿರಿಯ ಸಂಶೋಧಕರು “ಈ ವಿಕೃತ ಸಂಶೋಧನೆಯನ್ನು ನಿಲ್ಲಿಸಿ” ಅಂತ ಕರೆಕೊಟ್ಟಿದ್ದರು.ಬೌದ್ಧಿಕ ಚರ್ಚೆಯೊಂದಕ್ಕೆ ಉತ್ತರಿಸಲಾಗದ,ವಿವಿಯ ಕಡೆ ತಿಂಗಳುಗಟ್ಟಲೆ ಮುಖಮಾಡದ ಪ್ರಾಧ್ಯಾಪಕರು,ಸರ್ಕಾರಿ ಸಾಹಿತಿಗಳೆಲ್ಲ ಸೇರಿಕೊಂಡು ಸರ್ಕಾರಿ ಮಟ್ಟದಲ್ಲಿ ಒತ್ತಡ ತಂದು ಅವರೇನು ಸಂಶೋಧನೆ ಮಾಡುತಿದ್ದಾರೆ ಅನ್ನುವ ವರದಿ ತರಿಸಿಕೊಳ್ಳಿ ಎಂದು ಸರ್ಕಾರದ ಕಿವಿಯೂದಿ ಅದಕ್ಕಾಗಿಯೇ ಒಂದು ಸಮಿತಿಯನ್ನು ನೇಮಕ ಮಾಡಿಸಿದರಲ್ಲ,ಇಂತವರನ್ನು ಏನೆಂದು ಕರೆಯುತ್ತೀರಿ ಮೂರ್ತಿಗಳೇ? ಆ ಸಮಿತಿ ನೀಡಿರುವ ವರದಿಯಂತೆ,ಸಿ.ಎಸ್.ಎಲ್.ಸಿಯ ಸಂಶೋಧನೆ ಮುಂದುವರೆಯುವ ಅಗತ್ಯವಿಲ್ಲವಾದ್ದರಿಂದ MoU ಅನ್ನು ಮುಂದುವರೆಸಬಾರದಂತೆ! ತಾವು ಬಯಸಿದಂತೆ ಸಂಶೋಧನೆ ನಡೆಸಿ ವರದಿ ನೀಡಬೇಕು ಅನ್ನುವುದು ಯಾವ ಮನಸ್ಥಿತಿ?

ನೋಡಿ ಹೇಗಿದೆ ವರಸೆ,ಬೌದ್ಧಿಕ ಚರ್ಚೆಯನ್ನು ಎದುರಿಸಲಾಗದೇ ವಿದ್ಯಾರ್ಥಿಗಳ ಸಂಶೋಧನೆಗೆ ಕಲ್ಲು ಹಾಕಿಸಿದವರು ಫ್ಯಾಸಿಸ್ಟರಲ್ಲವೇ ಮೂರ್ತಿಗಳೇ? ಇಂತ ಸಾಹಿತಿಗಳ ಮಾತಿಗೆ ಕಿವಿಗೊಟ್ಟು ಮುನ್ನಡೆದ ಈ ಸರ್ಕಾರವನ್ನು ಫ್ಯಾಸಿಸ್ಟ್ ಎಂದು ನೀವು ಕರೆಯಬಲ್ಲಿರಾ ಮೂರ್ತಿಗಳೇ? ಕರೆಯುವುದಿಲ್ಲವಾದರೆ,ನೀವು ಪ್ರತಿಪಾದಿಸುವ ಪ್ರಜಾಪ್ರಭುತ್ವ,ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದೆಲ್ಲ ಬರಿಯ ಲೊಳಲೊಟ್ಟೆಯೇ? ನಮ್ಮ ವಿಶ್ವವಿದ್ಯಾಲಯಗಳ ಮೂಲ ಧ್ಯೇಯವೇ ಶಿಕ್ಷಣ ಹಾಗೂ ಸಂಶೋಧನೆಯನ್ನು ಬೆಳೆಸುವುದು.ಅಂತ ವಿವಿಗಳ ಸಿಂಡಿಕೇಟ್ ಸದಸ್ಯರು ಸಂಶೋಧಕರಿಗೆ ಕಡಿವಾಣ ಹಾಕಬೇಕು ಅನ್ನುತ್ತಾರೆ.ಇದಕ್ಕೆ ನೀವೇನು ಹೇಳುತ್ತಿರಿ ಮೂರ್ತಿಗಳೇ?

ಒಂದು ಕಡೆ ಸಮಾಜ ವಿಜ್ಞಾನ ಸಂಶೋಧನೆಯೆಡೆಗೆ ಸರ್ಕಾರ ಅತೀವ ನಿರ್ಲಕ್ಷ ವಹಿಸುತ್ತಿದೆ.ಆದರೆ,ತನಗೆ ಬೇಕಾದ ಜ್ಞಾನದ ಉತ್ಪಾದನೆ ಮಾಡಿಕೊಡುವ ತನ್ನ ಅಸ್ತಿತ್ವವನ್ನು ಎಂದೂ ಪ್ರಶ್ನಿಸದ ವಿಚಾರಗಳನ್ನೇ “ಚಿಂತನೆ/ ಸಂಶೋಧನ” ಎಂದು ಕರೆದು ಕೋಟಿ ಕೋಟಿ ಹಣ ವ್ಯಯಿಸುತ್ತದೆ.ಇನ್ನೊಂದೆಡೆ ನಮ್ಮ ಪ್ರಗತಿಪರರು ಸಿ.ಎಸ್.ಎಲ್.ಸಿಯವರ ವಾದಕ್ಕೆ ಪ್ರತಿವಾದ ಮಂಡಿಸಲಾಗದೇ ಸಂಶೋಧನೆಯನ್ನೇ ನಿಲ್ಲಿಸುವ,ಬಹಿಷ್ಕರಿಸುವ ಅನೈತಿಕ ಮಾರ್ಗಕ್ಕಿಳಿದಾಗ,ಸರ್ಕಾರ ಅದಕ್ಕೆ ಕೈ ಜೋಡಿಸಿ ಫ್ಯಾಸಿಸ್ಟ್ ನಡವಳಿಕೆಯನ್ನು ತೋರಿಸಿಬಾರದು ಅಲ್ಲವೇ ಮೂರ್ತಿಗಳೇ?

ಯಾವುದೇ ಸ್ಥಾಪಿತ ನಂಬಿಕೆಗಳನ್ನು ಪ್ರಶ್ನೆ ಮಾಡಿದಾಗ ಅದಕ್ಕೆ ವಿರೋಧವೇಳುವುದು ಸಹಜವೇ.ಎಲ್ಲರೂ ಒಪ್ಪುವಂತೆ ಬರೆಯಲು ಸಂಶೋಧನಾ ವರದಿಯೇನು ಯಾವುದೋ ರಾಜಕೀಯ ಪಕ್ಷದ ಪ್ರಣಾಳಿಕೆಯೋ ಅಥವಾ ಸರ್ಕಾರಿ ಪ್ರಭಾವದಿಂದ ಹೊರಬರುವ ಯಾವುದೋ ಸಮಿತಿಯ ವರದಿಯೋ ಅಲ್ಲ.ಸಾಮಾಜಿಕ ಸಂಶೋಧನೆಯ ಕುರಿತ ಈ ವಾದಕ್ಕೆ ವೈಚಾರಿಕ ನೆಲೆಯಲ್ಲಿ ಪ್ರತಿವಾದ ಮಂಡಿಸಬೇಕೆ ಹೊರತು,ವೈಚಾರಿಕ ಬಹಿಷ್ಕಾರ,ಅಸ್ಪೃಷ್ಯತೆ ಅಥವಾ ಸಂಶೋಧನೆಯನ್ನೇ ನಿಲ್ಲಿಸುವ ಫ್ಯಾಸಿಸ್ಟ್ ಧೋರಣೆಯಿಂದಲ್ಲ ಅಲ್ಲವೇ ಮೂರ್ತಿಗಳೇ?

ಒಂದು ವಿಚಾರವನ್ನು ಒಪ್ಪುವುದು ಬಿಡುವುದು ಬೇರೆಯೇ ವಿಚಾರ.ಆದರೆ,ಆ ವಿಚಾರಗಳಿಗೆ ವೇದಿಕೆಯೊದಗಿಸುವುದು ಆರೋಗ್ಯಕರ ಸಮಾಜದ ಲಕ್ಷಣ.ಅಂತ ಸಮಾಜದ ನಿರ್ಮಾಣವೇ ನಮ್ಮ ಪ್ರಗತಿಪರರ ಅನಿಸಿಕೆಯೂ ಹೌದು ಅಂದುಕೊಳ್ಳುತ್ತೇನೆ.ಹೌದು ಅನ್ನುವುದಾದರೆ,ಇನ್ನಾದರೂ ಸಿ.ಎಸ್.ಎಲ್.ಸಿ ವಾದವನ್ನು ನಿಲ್ಲಿಸಲು ಅನೈತಿಕ ಮಾರ್ಗವನ್ನು ಹಿಡಿಯುವುದು ಬಿಟ್ಟು ಸಾಮಾಜಿಕ ಸಂಶೋಧನೆ ಮತ್ತು ವೈಚಾರಿಕ ಭಾಷೆಯಲ್ಲಿ ಮಾತನಾಡುವುದು ಒಳಿತು ಅಲ್ಲವೇ ಮೂರ್ತಿಗಳೇ?

ಈ ಸಂಪೂರ್ಣ ಘಟನಾವಳಿಗಳ ಬಗ್ಗೆ ನಾಡಿನ ಸಾಕ್ಷಿ ಪ್ರಜ್ಞೆಯೆಂದು ಕರೆಸಿಕೊಳ್ಳುವ ನೀವು ಈ ಹಿಂದೆಯಂತೂ ಪ್ರತಿಕ್ರಿಯಿಸಿಲ್ಲ.ಆದರೆ, ಕನಿಷ್ಟ ಈಗಲಾದರೂ ಯಾವ ರೀತಿ ಪ್ರತಿಕ್ರಿಯಿಸುತ್ತೀರಿ? ಈಗಲೂ ನಿಮ್ಮ ಇತರ ಸಾಹಿತಿ/ಪ್ರಗತಿಪರ/ಸೆಕ್ಯುಲರ್ ಮಿತ್ರರೊಡನೆ ಸೇರಿಕೊಂಡು ಪತ್ರಿಕಾಗೋಷ್ಠಿ ಕರೆದು ಸಂಶೋಧನಾ ಕೇಂದ್ರವನ್ನೇ ಮುಚ್ಛಿಸಲು ಹೊರಟ ಸಿ.ಎಂ ಸಿದ್ದರಾಮಯ್ಯನವರ ಸರ್ಕಾರದ ಕಿವಿಹಿಂಡುವ ಕೆಲಸವನ್ನು ನೀವು ಮಾಡಬಲ್ಲಿರಾ ಮೂರ್ತಿಗಳೇ?

ಹಾಂ! ಈಗ ಹೇಳಿ ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments