ವಿಷಯದ ವಿವರಗಳಿಗೆ ದಾಟಿರಿ

ಮೇ 27, 2014

18

ನಮಗೆಂಥ ಮೀಸಲಾತಿ ಬೇಕು?

by ನಿಲುಮೆ

– ವಲವಿ ಬಿಜಾಪೂರ

Reservation Policy India Reservation Policy India Reservation Policy India Reservation Policy India Reservation Policy India Reservation Policy India Reservation Policy India Reservationಶ್ರೀ ಹೋ.ಬ ರಘೋತ್ತಮ ಅವರ “ಅಸ್ಪೃಶ್ಯತೆ, ಮೀಸಲಾತಿ ಮತ್ತು ತಲೆಮಾರಿನ ಪ್ರಶ್ನೆ” ಎಂಬ ಲೇಖನವನ್ನು ಓದಿ ಪ್ರತಿಕ್ರಿಯಿಸುವದು ನನಗೆ ಅನಿವಾರ್ಯವಾಗಿದ್ದರಿಂದ ಈ ಲೇಖನ ಬರೆಯುತ್ತಿದ್ದೇನೆ.ಅವರು ಲೇಖನ ಬರೆದಲ್ಲೇ ಪ್ರತಿಕ್ರಿಯೆ ಬರೆಯಬಹುದಾಗಿತ್ತು. ಆದರೆ ತಮ್ಮ ವಿಚಾರಗಳಿಗೆ ವಿರುದ್ಧವಾಗಿ ಏನೇ ಬರೆದರೂ ಕೆಲವು ಬ್ಲಾಗಿನಲ್ಲಿ ಪ್ರಕಟವಾಗುವುದಿಲ್ಲ.ವಿರುದ್ಧ ಕಮೆಂಟುಗಳನ್ನೂ ಪ್ರಕಟಿಸುವದಿಲ್ಲ. ಯಾಕೆಂದರೆ ಅವರು ಪ್ರಗತಿಪರರೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಬೆಲೆ ಕೊಡುವವರೂ ಆಗಿದ್ದಾರೆ. !? ಅದಕ್ಕಾಗಿ ನಿಲುಮೆಯಲ್ಲಿ ನನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸುತ್ತಿದ್ದೇನೆ.

ಲೇಖನದ ಮೊದಲಿಗೆ ಹೇಳುತ್ತಿದ್ದೇನೆ. ನಾನು ಮೀಸಲಾತಿ ವಿರೋಧಿಯಲ್ಲ. ಮೀಸಲಾತಿ ಹೇಗಿದ್ದರೆ ಸರ್ವರಿಗೂ ಒಳಿತಾಗುತ್ತದೆ ಎಂಬ ಕುರಿತು ಮಾತ್ರ ಹೇಳುತ್ತಿದ್ದೇನೆ.

ಶ್ರೀ ರಘೋತ್ತಮ ಅವರು ಹೇಳುತ್ತಾರೆ. ” ಕೆದರಿದ ತಲೆಯ, ಗಲೀಜು ಬಟ್ಟೆಯ, ಎಣ್ಣೆ ಕಾಣದ ಹಳ್ಳಿ ಹೆಂಗಸೊಬ್ಬಳು ಅವರಿಗೆ {ಗರಿಗರಿಯಾಗಿ ಇಸ್ತ್ರೀ ಮಾಡಿದ ನೀಟಾದ ಬಟ್ಟೆ ಉಟ್ಟುಕೊಂಡು ನಾಗರೀಕರು ನೌಕರರು ಆಗಿರುವ] ಏಕವಚನದಲ್ಲಿ ಮಾತನಾಡಿಸಿದಳಂತೆ ಕಾರಣ ಆಕೆ ರಘೋತ್ತಮರ ಊರಿನ ಮೇಲ್ಜಾತಿಯವಳಾಗಿದ್ದರಿಂದ ಮತ್ತು ಇವರು ದಲಿತರಾಗಿದ್ದರಿಂದ ಕಡಲೆಕಾಯಿ ಮಾರುವ ಹೆಂಗಸಾದ ಅವಳು ಮೇಲಿರಿಮೆಯ ಸೊಕ್ಕಿನಿಂದ ಹೀಗೆ ಮಾತನಾಡಿದಳೆಂಬ ಧ್ವನಿ ಬರುವಂತೆ ಬರೆದಿದ್ದಾರೆ. ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರನೆ ತಲೆಮಾರಿನ ದಲಿತರಿಗೆ ಮೀಸಲಾತಿ ಕೊಡದಿರುವಂತೆ ಚಿಂತಿಸುತ್ತಿದೆ. ಎಂದು ಆಂಗ್ಲ ಪತ್ರಿಕೆಯೊಂದರ ಸುದ್ದಿಯನ್ನೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳು ದಲಿತರಿಗೆ ಒಳ್ಳೆಯ ದಿನಗಳಲ್ಲ ಎಂಬ ಆತಂಕವನ್ನು ಸಹ ತೋಡಿಕೊಂಡಿದ್ದಾರೆ. ಗೋಧ್ರೋತ್ತರ ಮಾರಣಹೋಮದಂತೆ ಮೋದಿ ಇನ್ನೋಂದು ಮಾರಣಹೋಮಕ್ಕೆ ಸಜ್ಜಾದರೆ ಎಂದೂ ಸೇರಿಸುತ್ತಾರೆ.

ಆದರೆ ನನ್ನ ಅಭಿಪ್ರಾಯವೆಂದರೆ ಶ್ರೀ ರಘೋತ್ತಮರು ದಲಿತರಲ್ಲಿ ವಿನಾಕಾರಣ ಮೋದಿ ವಿರುದ್ಧ ಭಯ ಮೂಡಿಸುತ್ತಿದ್ದಾರೆ.ಎನಿಸುತ್ತದೆ. ಇರಲಿ, ನಾನೂ ಸಹ ನಮ್ಮೂರಿಗೆ ಹೋದಾಗ ನಮ್ಮ ಹಳ್ಳಿಯ ಜನ ನನ್ನನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ನಾನು ಇಡೀ ಭಾರತ ದೇಶವೇ ತಿಳಿದುಕೊಂಡಂತೆ ಮೇಲು ಜಾತಿಯಲ್ಲಿ [??] ಜನಿಸಿದವಳು. ಆದರೂ ನಮ್ಮೂರಿನ ಜನ ನನ್ನನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಅನೇಕರು “ಯಾಕವ್ವಾ ಮಗಳ… ಎಂದ ಬಂದ್ಯವಾ? ಎಲ್ಲಾ ಪಾಡ [ಚನ್ನಾಗಿ] ಅದೀರಾ? ಎಲ್ಲಿ ಯಾವೂರಾಗ ಅದಿಯವಾ ? ಕುರುಸಾಲ್ಯಾ ನನ್ನ ಅಳ್ಯಾ ಬಂದಿಲ್ಲೇನ? [ನಮ್ಮ ಮನೆಯವರಿಗೆ ಹೀಗೆ ಸಂಬೋಧಿಸುತ್ತಾರೆ. ಊರ ಅಳಿಯನಿಗೆ ಹೀಗೆ ಸಂಬೋಧಿಸಬೇಕೆಂಬ ಅಲಿಖಿತ ನಿಯಮ. ] ನಮ್ಮ ಚಾಜಗಾರ ಕುಳ [ನಮ್ಮಿಂದ ಸನ್ಮಾನ ಕಾಣಿಕೆ ಪಡೆಯುವ ಹೆಣ್ಣು ಮಕ್ಕಳ ಮಗ] ಬಂದಿಲ್ಲೇನ??” ಹೀಗೆ ಮಾತನಾಡಿಸುತ್ತಾರೆ. ನಾನೂ ಸಹ ಸರಕಾರಿ ನೌಕರಿಯಲ್ಲಿ ನಮ್ಮ ಮನೆಯವರು ಸಹ ಸರಕಾರಿ ನೌಕರಿಯಲ್ಲಿ ಇದ್ದೇವೆ. ಮೇಲುಜಾತಿಯವರಾಗಿದ್ದೆವೆ. ಉತ್ತಮ ಗರಿಗರಿಯಾದ ಬಟ್ಟೆಗಳನ್ನು ಧರಿಸಿಯೇ ನಮ್ಮೂರಿಗೆ ಹೋಗಿರುತ್ತೇವೆ. ಆ ಹಳ್ಳಿಗರಿಗಿಂತ ಸಾವಿರ ಪಾಲು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಆದರೆ ನಾವೆಂದೂ ಅವರು ನಮ್ಮನ್ನು ಬಹುವಚನದಲ್ಲಿ ಮಾತನಾಡಿಲ್ಲವೆಂದು ಸಿಟ್ಟಿಗೆ ಬಂದಿಲ್ಲ. ನಾನೂ ಕೂಡ ಹೌಂದ ಕಾಕಾ, ದೊಡ್ಡಪ್ಪ, ಮುತ್ಯಾ ಆಯಿ, ಚಿಗವ್ವ, ದೊಡ್ಡವ್ವ, ಅತ್ತಿ, ಮಾಮಾ ಹೀಗೆ ಹೇಳಿ ನಾನು ಕ್ಷೇಮವಾಗಿದ್ದನ್ನು ಹೇಳುತ್ತೇನೆ. ಇಲ್ಲಿ ಅವರ ಪ್ರೀತಿ ತಮ್ಮ ಮನೆಯ ಮಗಳೇ ನಮ್ಮೂರಿಗೆ ಬಂದಳೆಂದು ತಿಳಿಯುವ ಅವರ ಆತ್ಮೀಯತೆ ಗಮನಿಸಬೇಕೆ ಹೊರತು ಅವರ ಭಾಷೆಯಲ್ಲ. ನಾವು ಭಾರತದ ರಾಷ್ಟ್ರಪತಿಯಾಗಿ ನಮ್ಮೂರಿಗೆ ಹೋದರೂ ನಮ್ಮ ಜನಗಳು “ಏನವಾ ತಂಗೀ ಏನೋ ದೊಡ್ಡ ಸಾಬ್ತಿ ಆಗೀಯಂತಲ್ಲವಾ? ಶಿವಾ ಚಲೂ ಮಾಡಿದ ಬಿಡೂ… ನನ್ನ ಆಶೀ [ಆಯುಷ್ಯ] ಎಲ್ಲ ನಿನಗಾಗಲಿ. ಚಂದಾಗಿ ಸಿವಾ ನಿನ್ನ ಇಡಲಿ”. ಎಂದಾರೇ ವಿನಃ ಅವರಿಗೆ ರಾಷ್ಟ್ರಪತಿಗೆ ಗೌರವ ಕೊಡಬೇಕೆಂಬ ಇರಾದೆ ಇರುವದಿಲ್ಲ. ಅವರಿಗೆ ನಾವು ಅವರೂರಿನ ಮಗ , ಮಗಳು ಅಷ್ಟೇ.

ಇರಲಿ, ನಮ್ಮೂರಿನ ಜನರ ಪುರಾಣವಾಯಿತು. ನಾನೀಗ ಹೇಳ ಹೊರಟಿರುವದು ಮೀಸಲಾತಿ ಹೇಗಿರಬೇಕೆಂಬ ಕುರಿತು. ಅದಕ್ಕೂ ಮುನ್ನ ಒಂದು ರೂಪಕದ ಉದಾಹರಣೆ ಹೇಳಿ ಮುಂದುವರಿದರೆ ಓದುಗರಾದ ನಿಮಗೆ ಹೆಚ್ಚು ಅರ್ಥವಾಗುತ್ತದೆಂದು ಅಂದುಕೊಳ್ಳುತ್ತೇನೆ.

ನನ್ನ ಮಗನಿಗೆ ಈಜು ಕಲಿಸುವ ಸಂದರ್ಭದಲ್ಲಿ ಅವನು ನೀರಿನಲ್ಲಿ ಮುಳುಗಬಾರದೆಂದು ಅವನಿಗೆ ಟೂ ವ್ಹೀಲರ್ ಗಾಡಿಗಳ ಗಾಲಿಗಳ ಟ್ಯೂಬನ್ನು ಅವನ ಸೊಂಟಕ್ಕೆ ಸಿಕ್ಕಿಸಿ ಈಜು ಕಲಿಸಲು ಶುರು ಮಾಡಿದೆವು. ಮುಂದೆ ಅವನು ಈಜುತ್ತಿದ್ದಾನೆ ನೀರಿಗೆ ಅಂಜುವದಿಲ್ಲ ಎಂದಾದಾಗ ಟ್ಯೂಬಿನಲ್ಲಿನ ಹವೆಯನ್ನು ಸ್ವಲ್ಪ ಸ್ವಲ್ಪ ಕಡಿಮೆ ಮಾಡುತ್ತಾ ಹೋದೆವು. ಅವನು ಬಹಳ ಚಿಕ್ಕವನಿದ್ದುದರಿಂದ ಈ ವಿಚಾರ ಅವನಿಗೆ ತಿಳಿದಿರಲಿಲ್ಲ. ತಾನು ನೀರಿನಲ್ಲಿ ಮುಳುಗದಂತೆ ಮಾಡುವದು ತನ್ನ ಟ್ಯೂಬೇ ವಿನಃ ಅದರಲ್ಲಿನ ಹವೆ ಎಂದು ಗೊತ್ತಿರಲಿಲ್ಲ. ಮುಂದೆ ಅವನು ಉತ್ತಮ ಈಜುಗಾರನಾದರೂ ಟ್ಯೂಬಿನಿಂದ ಅವನಿಗೆ ಏನೂ ಉಪಯೋಗ ಇಲ್ಲದಿದ್ದರೂ ಅವನು ಟ್ಯೂಬನ್ನು ತೆಗೆದು ಈಜುವದಕ್ಕೆ ಸುತಾರಾಂ ತಯಾರಾಗಲಿಲ್ಲ. ಬಹಳ ಹೆದರಿ ನಾನು ಈಜುವದೇ ಇಲ್ಲವೆಂದು ಹಟ ಮಾಡುತ್ತಿದ್ದ. ಆದರೆ ಸಪಾಟಾದ ಸ್ವಲ್ಪವೂ ಹವೆ ಇರದ ಆ ಟ್ಯೂಬನ್ನು ಸುಮ್ಮನೆ ಸೊಂಟಕ್ಕೆ ಬಿಗಿದುಕೊಂಡೇ ಈಜುವೆನೆನ್ನುತ್ತಾ ಹಟ ಮಾಡುತ್ತಿದ್ದ. ನನ್ನ ಇನ್ನುಳಿದ ಮಕ್ಕಳಿಗೆ ಟ್ಯೂಬಿನ ಅನಿವಾರ್ಯತೆ ಇತ್ತು. ಇರುವದು ಒಂದೇ ಟ್ಯೂಬು. ಉಳಿದವರಿಗೆ ಸ್ವಲ್ಪವೂ ಈಜು ಬರುತ್ತಿರಲಿಲ್ಲ. ಈಗ ನಾನೇನು ಮಾಡಬೇಕು? ಬಲವಂತವಾಗಿ ನನ್ನ ಮಗನಿಂದ ಟ್ಯೂಬ ಕಿತ್ತು ಬೇರೆಯವರಿಗೆ ಕೊಟ್ಟು ಅವನಿಗೆ ಧೈರ್ಯ ಹೇಳಿ ಬಲವಂತದಿಂದ ಈಜಲು ಹಚ್ಚಿದೆವು. ಈಗವನು ಶಾಲೆಯ ಈಜು ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವಷ್ಟು ಚನ್ನಾಗಿ ಈಜುತ್ತಾನೆ. ಇತರ ನನ್ನ ಮಕ್ಕಳೂ ಈಜು ಕಲಿತಿದ್ದಾರೆ. ಕಲಿಯುತ್ತಿದ್ದಾರೆ.

ಈ ರೂಪಕದ ಉದಾಹರಣೆಯನ್ನು ಇಲ್ಲಿ ಏಕೆ ಕೊಡುತ್ತಿದ್ದೇನೆಂದರೆ ದಲಿತರಿಗೆ [ಅವಕಾಶ ಪಡೆದ ದಲಿತರು] ಈಜು ಬಂದರೂ ಅವರಿಗೆ ಈಜುವ ಧೈರ್ಯವಿಲ್ಲ. [ಅಂದರೆ ಮೇಲ್ಜಾತಿ ಸಮನಾಗಿ ಸೆಣಸುವ ಸಾಮರ್ಥ್ಯ ಬಂದಿದ್ದರೂ ಧೈರ್ಯ ತೊರಿಸುತ್ತಿಲ್ಲ.] ಇನ್ನು ನನ್ನ ಮಗನ ಟ್ಯೂಬಿನಂತೆ ಮೀಸಲಾತಿ ಇವತ್ತು ಅವಶ್ಯಕತೆ ಉಪಯುಕ್ತತೆ ಕಳೆದುಕೊಂಡಿದೆ.[ಖಾಸಗೀಕರಣ ಉದಾರೀಕರಣ ನೀತಿಯಿಂದಾಗಿ] ಆದರೂ ದಲಿತರು ಅದನ್ನು ಸುಮ್ಮನೆ ಸೊಂಟಕ್ಕೆ ಕಟ್ಟಿಕೊಳ್ಳುತ್ತೇವೆನ್ನುತ್ತಾರೆ ವಿನಃ ಅದನ್ನು ತೊರೆದು ಈಜುವ ಧೈರ್ಯ ಮಾಡಲೊಲ್ಲರಾಗಿದ್ದಾರೆ. ಈಗಾಗಲೇ ಮೀಸಲಾತಿ ಬಲದಿಂದ ಆಫೀಸರ್ ಇತ್ಯಾದಿ ಉನ್ನತ ಹುದ್ದೆ ಗಳಿಸಿದವರು ಕಾರಿನಲ್ಲಿ ತಮ್ಮ ಮಕ್ಕಳಿಗೆ ಇಂಟರ್‌ವ್ಯೂಗೆ ಕಳಿಸಿ ತಮ್ಮ ದಲಿತನೇ ಚಪ್ಪಲಿ ಕೂಡ ಹಾಕಿಕೊಳ್ಳದೇ ಬಂದಿದ್ದಾನೆ ಅವನಿಗೆ ಈ ಸೀಟು ಬಿಟ್ಟುಕೊಡೋಣ ಎಂದು ಯೋಚಿಸುವದಿಲ್ಲ. ಮೀಸಲಾತಿಯಿಂದ ಶ್ರೀಮಂತರೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ ವಿನಃ ನಿಜವಾಗಿ ಅಸ್ಪೃಶ್ಯತೆಯ ಶೋಷಣೆಯನ್ನು ಅನುಭವಿಸುತ್ತಿರುವ ಹಳ್ಳಿಯ ತಮ್ಮ ಬಾಂಧವರಿಗೆ ಬಿಟ್ಟು ಕೊಡುತ್ತಿಲ್ಲ.

ಈಗಾಗಲೇ ಉನ್ನತ ಹುದ್ದೆಯಲ್ಲಿರುವ ದಲಿತರು ಹ್ಯಾಗೆ ಶೋಷಣೆಗೆ ಒಳಗಾಗುತ್ತಾರೆ? ಅವರಿಗೆ ಅಧಿಕಾರ ದುಡ್ಡು ಎರಡೂ ಇರುವದರಿಂದ ಯಾವ ಮೇಲ್ಜಾತಿಯವನೂ ಅವರಿಗೆ ನೀನು ನನ್ನನ್ನು ಮುಟ್ಟಬೇಡ ದೂರ ಸರಿ ಎಂದು ಹೇಳುವದಿಲ್ಲ. ಬದಲಿಗೆ ಅವರು ಸಾಹೇಬರಾದ್ದರಿಂದ ಅವರ ಸರ್ವ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಅವರಿಂದ ಏಕವಚನದಲ್ಲೇ ಮಾತನಾಡಿಸಿಕೊಳ್ಳುತ್ತಾರೆ. ಅಧಿಕಾರ ದುಡ್ಡು ಇದ್ದವನು ಯಾವತ್ತೂ ಎಲ್ಲಿಯೂ ಶೋಷಣೆಗೆ ಒಳಗಾಗುವದಿಲ್ಲ.  [ಪುರಾಣ ಕಾಲದಿಂದಲೂ ಹೀಗೇ ಇದೆ. ಸಾಮಾನ್ಯ ಸೂತನಾದ ಕರ್ಣನನ್ನು ಅವಹೇಳನ ಮಾಡಿದಷ್ಟು ಅವಹೇಳನವನ್ನು ಕೀಚಕ ಮತ್ಸ್ಯರಾಜರಿಗೆ ಯಾರೂ ಮಾಡಲಿಲ್ಲ.ಗಮನಿಸಿ] ತಮ್ಮ ಮಕ್ಕಳನ್ನು ದುಡ್ಡು ಸುರುವಿ ಉತ್ತಮೋತ್ತಮವಾದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುತ್ತಾರೆ. ಮತ್ತು ದುಡ್ದು ಸುರುವಿ ಉತ್ತಮ ಸೌಲಭ್ಯ, ಹಾಗೂ ಟ್ಯೂಷನ್ ಕೊಡಿಸುತ್ತಾರೆ. ಇಂಥವರ ಮಕ್ಕ್ಕಳು ಕಲಿಕೆಯಲ್ಲಿ ಹೇಗೆ ಹಿಂದೆ ಬೀಳುತ್ತಾರೆ? ಅವರು ಹೇಗೆ ಶೋಷಣೆಗೆ ಒಳಗಾಗುತ್ತಾರೆ?

ಆದರೆ ಹಳ್ಳಿಗಳಲ್ಲಿ ಶ್ರೀಮಂತರ ಮನೆಯಲ್ಲಿ ಕೂಲಿ ಮಾಡುವ, ಕಂಡವರಿಂದ ದಲಿತನೆಂದು ಉಗಿಸಿಕೊಳ್ಳುವ, ಕಿಲೋಮೀಟರ್ ಗಟ್ಟಲೇ ದೂರ ಚಲಿಸಿ ನೀರು ತಂದು ಕುಡಿಯುವ, ಸರಕಾರಿ ಶಾಲೆಗಳಲ್ಲಿ ಅನೇಕ ಅವಾಂತರಗಳ ಮಧ್ಯ ಶಾಲೆ ಕಲಿಯುವ ದಲಿತನಿಗೆ ನಿಜವಾದ ನೌಕರಿಯ ಅವಶ್ಯಕತೆ ಇದೆ. ನಿಜವಾದ ಶೋಷಣೆ ಇಲ್ಲಿದೆ. ಈಗ ನನ್ನ ಮಗನ ಹಾಗೆ ಟ್ಯೂಬ್ ಬಿಡಲು [ಮೀಸಲಾತಿ ಬಿಡಲು] ಹಟ ಮಾಡುವ ಶ್ರೀಮಂತ ದಲಿತರಿಂದ ಮೀಸಲಾತಿಯ ಟ್ಯೂಬನ್ನು ಬಲವಂತವಾಗಿ ಕಿತ್ತುಕೊಂಡು ಹಳ್ಳಿಗಳಲ್ಲಿ ಇನ್ನೂ ನೀರಿನ ಮುಖವನ್ನೇ ಕಾಣದ[ಮೊದಲ ತಲೆಮಾರಿನ ಅಕ್ಷರಸ್ತರು ಅಥವಾ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಮೊದಲ ತಲೆಮಾರು] ಜನಕ್ಕೆ ಮೀಸಲಾತಿ ಟ್ಯೂಬನ್ನು ಕೊಡಲೇ ಬೇಕಾಗಿದೆ.

ಹಾಗಿದ್ದರೆ ನಮ್ಮ ಸರ್ಕಾರಗಳು ಏನು ಮಾಡಬೇಕು???

ಕನಿಷ್ಟ ಕ್ಲಾಸ್ ೧ ಆಫೀಸರ್ ಮಕ್ಕಳಿಗಾದರೂ ಮೀಸಲಾತಿ ಸೌಲಭ್ಯ ಕೊಡಬಾರದು. ವಾರ್ಷಿಕ ಆದಾಯ ೧೦ ಲಕ್ಷವಿರುವವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಕೊಡಬಾರದು. ಕೇವಲ ಬಡವ ದಲಿತರಿಗೆ ಮೊದಲು ಈ ಸೌಲಭ್ಯಗಳ ಆದ್ಯತೆ ಸಿಗಬೇಕು. ಯಾರೂ ಬಡವ ದಲಿತರು ಆ ಪೋಷ್ಟಗಳಿಗೆ ಬರದಿದ್ದರೆ ೬ ತಿಂಗಳ ನಂತರ ಕೆನೆ ಪದರದವರಿಗೆ ಕೊಡಬೇಕು.ಹೀಗಾದರೆ ಮಾತ್ರ ಎಲ್ಲರಿಗೂ ಮೀಸಲಾತಿ ದೊರೆತು ಎಲ್ಲರ ಉದ್ಧಾರವಾಗಬಹುದೇ ವಿನಃ ಈಗಿನಂತೆ ಮುಂದುವರಿದರೆ ಶ್ರೀಮಂತರು ಮಾತ್ರ ಶ್ರೀಮಂತರಾಗಿ ಸಿಗಬೇಕಾದ ಅರ್ಹ ಫಲಾನುಭವಿಗೆ ಸೌಲಭ್ಯ ಸಿಗದೇ ಅವನು ವಂಚಿತನಾಗಬೇಕಾಗುತ್ತದೆ.

ಇದು ಸಾಧ್ಯವಾಗಬೇಕಾದರೆ ರಘೋತ್ತಮರಂಥವರು ಸಹಕರಿಸಬೇಕು. ಅವರು ಇಲ್ಲಸಲ್ಲದ್ದನ್ನು ದಲಿತರ ತಲೆಯಲ್ಲಿ ತುಂಬಿ ಅವರಿಗೆ ಭಯ ತುಂಬಿ ಲಾಭವನ್ನು ಮಾತ್ರ ತಾವು ಅನುಭವಿಸಿ, ಹೋರಾಟ ಮಾತ್ರ ಈ ಕೆಳವರ್ಗದಿಂದ ಮಾಡಿಸಿ [ಅವರೆ ಹೇಳುವಂತೆ] ಮತ್ತೆ ನೀವೇ ನವ ಪುರೋಹಿತರಾಗಿ ವರ್ತಿಸಬೇಡಿ. ದಯವಿಟ್ಟು ನಿಮಗೆ ಚನ್ನಾಗಿ ಈಜಲು ಬರುತ್ತದೆ. ನಿಮ್ಮ ಟ್ಯೂಬನ್ನು ನಿಮ್ಮ ಈಜುಬಾರದ ಸೋದರರಿಗೆ ದೊಡ್ಡ ಮನಸು ಮಾಡಿ ಕೊಡಿ. ಎಲ್ಲರೂ ಈಜು ಕಲಿಯಲಿ.ತನ್ಮೂಲಕ ಭಾರತ ಉದ್ಧಾರವಾಗಲಿ. ಕೇವಲ ಬರವಣಿಗೆ ಭಾಷಣಗಳಿಂದ ಇದು ಸಾಧ್ಯವಾಗದು.ಕೃತಿಯಲ್ಲಿ ತರಲು ಕೆನೆ ಪದರದ ದಲಿತರು ಮನಸ್ಸು ಮಾಡಿ. ಕೇವಲ ಮೇಲ್ಜಾತಿ ಬಯ್ಯುತ್ತ ಪೇಪರಿನ ಪೇಜು ತುಂಬಿಸಿದರೆ ಏನೂ ಸಾಧನೆ ಆಗುವದಿಲ್ಲ.

18 ಟಿಪ್ಪಣಿಗಳು Post a comment
 1. M.A.Sriranga
  ಮೇ 27 2014

  ವಲವಿ ಅವರಿಗೆ– ತಾವು ಉದಾಹರಿಸಿರುವ ಹೊ ಬ ರಘೋತ್ತಮ ಅವರ ಆ ಲೇಖನವನ್ನು ಕನ್ನಡದ ಅತ್ಯಂತ ಪ್ರಖ್ಯಾತವಾದ “ಪ್ರಜಾಪ್ರಭುತ್ವವಾದಿ!?,ಜಾತ್ಯಾತೀತವಾದಿ!!??ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ೧೦೦% ಮನ್ನಣೆ ನೀಡುವ!!!???” ಕಡಾಯಿ ಎಂಬ ಬ್ಲಾಗಿನಲ್ಲಿ ನಾನು ಓದಿದ್ದೇನೆ. ಆ ಲೇಖಕ ಮಹಾಶಯರಿಗೆ ಕಡ್ಲೇಕಾಯಿ ಮಾರಿ ಜೀವನ ಸಾಗಿಸುತ್ತಿರುವ ಮುದುಕಿಯ ಪರಿಸ್ಥಿತಿಗಿಂತ ಆ ಕ್ಷಣದಲ್ಲೂ ಹೆಡೆ ಎತ್ತಿದ್ದು ತಮ್ಮ ಜಾತಿಯ ಪ್ರಶ್ನೆ. ಆದರೆ ಆ ಜಾತಿಯ ಕಾರಣದಿಂದಲ್ಲೇ ತಾನು ಈಗ ಸುಸ್ಥಿತಿಯಲ್ಲಿ ಇರುವುದು ಮತ್ತು ಆ ಮುದುಕಿ ಬೀದಿಯಲ್ಲಿರುವುದು ಎಂಬುದನ್ನು ಅರಿಯುವ ಮನಸ್ಸಿಲ್ಲ . ಏಕವಚನ ಮತ್ತು ಬಹುವಚನಗಳ ಮೀಮಾಂಸೆ ಮತ್ತು ಜಿಜ್ಞಾಸೆಯಲ್ಲಿ busy ಆಗಿದ್ದಾರೆ. ನಿಮ್ಮ ಲೇಖನದ ಆಶಯ ಒಪ್ಪಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

  ಉತ್ತರ
 2. Universal
  ಮೇ 27 2014

  ನಮ್ಮ ದೇಶದಲ್ಲಿ ಬೇಕಾಗಿರುವುದು ಜಾತಿ ಆಧಾರಿತ ಮೀಸಲಾತಿಯಲ್ಲ. ಬದಲಿಗೆ ಆದಾಯ ಆಧಾರಿತ ಮೀಸಲಾತಿ.

  ಉತ್ತರ
  • Nagshetty Shetkar
   ಮೇ 27 2014

   ಆದಾಯ ಆಧಾರಿತ ಮೀಸಲಾತಿಯು ಸಾಮಾಜಿಕ ಸಮಾನತೆಗೆ ಬಾಧಕ. ಸಾಮಾಜಿಕ ಸಮಾನತೆ ಒಂದು ಹಂತದ ವರೆಗೆ ಸಾಗುವ ವರೆಗೆ ಜಾತಿ ಆಧಾರದ ಮೇಲೆ ಮೀಸಲಾತಿ ಸೌಲಭ್ಯ ಕೊಡುವುದು ಅನಿವಾರ್ಯ.

   ಉತ್ತರ
   • shripadt
    ಮೇ 27 2014

    ಸಾಮಾಜಿಕ ಸಮಾನತೆ ಒಂದು ಹಂತದ ವರೆಗೆ ಸಾಗುವ ವರೆಗೆ…ಶೆಟ್ಕರ್ ಅವರೇ ಈ ಒಂದು ಹಂತ ಅಂದರೆ ಯಾವುದು? ಅದು ಹೇಗಿದೆ ಎಲ್ಲಿದೆ ಎಂದು ಸ್ವಲ್ಪ ಹೇಳ್ತೀರಾ?

    ಉತ್ತರ
   • Universal
    ಮೇ 27 2014

    ಸಾಮಾಜಿಕ ಸಮಾನತೆಗೆ ಹಂತವೇ ಇಲ್ಲ. ನಮ್ಮ ದೇಶದಲ್ಲಿ ಜಾತಿ ಇರುವವರೆಗೂ ಸಮಾನತೆ ಸಿಗುವುದೇ ಇಲ್ಲ. ಜಾತಿ ನಿರ್ಮೂಲನೆಯೊಂದೇ ಇದಕ್ಕೆ ಉತ್ತರ.

    ಉತ್ತರ
    • shripadt
     ಮೇ 28 2014

     ಜಾತಿ ಆಧಾರಿತ ಮೀಸಲಾತಿ ಇರಬೇಕು ಅಂತೀರಿ. ಒಂದೆಡೆ ಜಾತಿ ಗಣತಿ ಮಾಡುತ್ತ ಇತ್ತ ಜಾತಿಯೂ ನಾಶ ಆಗಬೇಕು ಅಂತೀರಿ. ಸಾಮಾಜಿಕ ಸಮಸ್ಯೆಗೆ ರಾಜಕೀಯ ಪರಿಹಾರ ಅಥವಾ ಆರ್ಥಿಕ ಪರಿಹಾರ ಹುಡುಕಲು ಆರಂಭಿಸಿದರೆ ಇದು ಇನ್ನೂ ಕಗ್ಗಂಟೇ ಆಗುತ್ತದೆಯೇ ವಿನಾ ಎಂದೂ ಸಮಸ್ಯೆ ಬಗೆಹರಿಯುವುದಿಲ್ಲ. ೨೦೦೧ ಹಾಗೂ ೨೦೧೧ರ ಗಣತಿಯ ಅಂಕಿ ಅಂಶ ನೋಡಿ. ಜಾತಿಗಳು ಸೌಲಭ್ಯದ ಕಾರಣಕ್ಕೆ ಏರುತ್ತಿವೆಯೇ ವಿನಾ ಇದ್ದಷ್ಟೇ ಇರುತ್ತಿಲ್ಲ. ಇಳಿಯುವ ಪ್ರಶ್ನೆ ಇಲ್ಲವೇ ಇಲ್ಲ ಬಿಡಿ.

     ಉತ್ತರ
   • viji
    ಮೇ 27 2014

    ಶೆಟ್ಕರ್ ಅವರೆ ನಾನು ಮೀಸಲಾತಿ ವಿರೋಧಿ ಅಲ್ಲವೆಂದು ಮೊದಲಿಗೆ ತಿಳಿಸಿದ್ದೇನೆ. ಜಾತಿ ಆಧಾರಿತ ಮೀಸಲಾತಿಯಲ್ಲೇ ಆದಾಯವನ್ನು ಪರಿಗಣಿಸಿ ಮೊದಲು ಅಂಥವರಿಗೆ ಆದ್ಯತೆ ಕೊಡಬೇಕು. ಆದಾಯ ಕಡಿಮೆ ಇರುವವರು ಬಂದೇ ಇಲ್ಲವಾದರೆ ಆ ಸೀಟುಗಳನ್ನು 6 ತಿಂಗಳವರೆಗೆ ನೋಡಿ ನಂತರ ಆದಾಯ ಹೆಚ್ಚಿರುವ ದಲಿತರಿಗೆ ಕೊಡಿ. ಎಂಬುದು ನನ್ನ ವಾದ. ಹೀಗಾದರೆ ಎಲ್ಲರಿಗೂ ಪಾಲು ಸಿಗುತ್ತದೆ. ಎಲ್ಲರಿಗೂ ಮಿಸಲಾತಿ ಸೌಲಭ್ಯ ದೊರೆತು ಎಲ್ಲರೂ ಉಳ್ಳವರಾಗಲು ಅನುಕೂಲ. ಈಗಾದರೆ ಶ್ರೀಮಂತ ದಲಿತರೇ ಎಲ್ಲ ಪಾಲು ನುಂಗುತ್ತಿದ್ದಾರೆ. ಇದರ ಕುರಿತು ಗಂಭೀರ ಚಿಂತನೆಗಳಾಗಬೇಕಾದ ತುರ್ತು ಅಗತ್ಯವಿದೆ.

    ಉತ್ತರ
 3. ಮೇ 27 2014

  ಒಳ್ಳೆಯ ಲೇಖನ…

  “ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?” ಎಂಬ M.A.Srirangaರ ಪ್ರಶ್ನೆಗೆ ನನ್ನ ಉತ್ತರ. ಈ ಲೇಖನ ಬರೆಯುವ ಮೂಲಕ ವಲವಿಯವರು ಈಗಾಗಲೇ ಬೆಕ್ಕಿಗೆ ಗಂಟೆ ಕಟ್ಟಿಲ್ಲವೇ? ದೊಡ್ಡ ದೊಡ್ಡ ಕಾರ್ಯಗಳು ಆರಂಭವಾಗುವುದು ಹೀಗೆ. ನಮ್ಮಲ್ಲಿ ಬಹುತೇಕ ಜನರಿಗೆ ತಮ್ಮ ಸ್ವಂತ ಹೆಸರಿನಲ್ಲಿ ಇಲ್ಲಿ ಒಪ್ಪಿಗೆ ಸೂಚಿಸುವುದೇ ಕಷ್ಟ. ಅಂಥದ್ದರಲ್ಲಿ ಒಬ್ಬರು ಈ ಕುರಿತು ಲೇಖನ ಬರೆದಿದ್ದಾರೆ ಎಂಬುದೇ ದೊಡ್ಡ ಮಾತು.

  ಉತ್ತರ
 4. ಮೇ 28 2014
 5. ಗಿರೀಶ್
  ಮೇ 28 2014

  ೧೦ ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ಎಲ್ಲ ಜಾತಿ ಜನರಿಗೆ ಮೀಸಲಾತಿ ಸಿಗುವಂತಾಗಬೇಕೆಂಬುದು ನಿಮ್ಮ ಅಭಿಪ್ರಾಯವೆ?

  ಉತ್ತರ
  • ವಲವಿ
   ಮೇ 28 2014

   ಗಿರೀಶ್ ಅವರೆ ದಲಿತರು ಎಲ್ಲರಿಗಿಂತ ಹೆಚ್ಚು ಶೋಷಣೆಗೆ ತಲೆಮಾರುಗಳಿಂದಲೂ ಒಳಗಾಗಿದ್ದಾರೆ. ನೀವು ಹಳ್ಳಿಗಳಲ್ಲಿ ಬೆಳೆದಿರುವಿರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಬೆಳೆದಿರುವದರಿಂದ ಹೇಳುತ್ತಿದ್ದೇನೆ. ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯತೆಯ ಆಚರಣೆ ಇದೆ. ಎಲ್ಲರೂ ಮುಟ್ಟುವ ಕೆರೆ ಬಾವಿಗಳನ್ನು ದಲಿತರಿಗೆ ಮುಟ್ಟಿಸಿಕೊಡುವದಿಲ್ಲ. ಹಾಗೆ ದೇವಾಲಯಗಳಿಗೆ ಪ್ರವೇಶವಿಲ್ಲ. ಇನ್ನೂ ಕೂಡ ಶಾಲೆಗಳಲ್ಲಿ ದಲಿತ ಮಕ್ಕಳಿಗೆ ಸಮಾನ ಸ್ಥಾನಮಾನಗಳಿಲ್ಲ. ಆದರೆ ಪಟ್ಟಣಗಳಲ್ಲಿ ಇರುವವರು ಇವಾವುದನ್ನೂ ಅನುಭವಿಸುವದಿಲ್ಲ. ದೊಡ್ಡ ದೊಡ್ಡ ಸಿಟಿಗಳಲ್ಲಿ ಪಕ್ಕದ ಮನೆಯವನದು ಯಾವ ಜಾತಿ ಎನ್ನುವದಕ್ಕಿಂತ ಅವನ ಆದಾಯವೇನು ಅನ್ನುವದೇ ಮುಖ್ಯವಾಗುತ್ತದೆ. ಆದಾಯ ಚನ್ನಾಗಿದ್ದರೆ ಅವಳು ಅಥವಾ ಅವನು ಮಾನ ಮಾರ್ಯಾದೆ ಪಡೆಯುತ್ತಾರೆ ಯಾವ ಜಾತಿ ಇದ್ದರೂ ಕೂಡ. ಅದೇ ಬಡವನು ಮೇಲ್ಜಾತಿ ಇದ್ದರೂ ಅವನಿಗೆ ಮಾನ ಮರ್ಯಾದೆಗಳು ಸಲ್ಲುವದಿಲ್ಲ. ಕಾರಣ ಮೀಸಲಾತಿ ದಲಿತರಿಗೆ ಜಾತಿ ಆಧಾರಿತವೂ ಆರ್ಥಿಕತೆ ಆಧಾರಿತವೂ ಆಗಿ ಇನ್ನು ಕೆಲವು ವರ್ಷಗಳು ಬೇಕು. ಮುಖ್ಯವಾಗಿ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಹೋಗುವವರೆಗಾದರೂ ಬೇಕೆ ಬೇಕು.

   ಉತ್ತರ
   • ಮೇ 28 2014

    [[ಕಾರಣ ಮೀಸಲಾತಿ ದಲಿತರಿಗೆ ಜಾತಿ ಆಧಾರಿತವೂ ಆರ್ಥಿಕತೆ ಆಧಾರಿತವೂ ಆಗಿ ಇನ್ನು ಕೆಲವು ವರ್ಷಗಳು ಬೇಕು. ಮುಖ್ಯವಾಗಿ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಹೋಗುವವರೆಗಾದರೂ ಬೇಕೆ ಬೇಕು.]]
    ನೀವೇ ಹೇಳಿದಂತೆ, ಗ್ರಾಮೀಣ ಭಾಗದಲ್ಲಿ ಜಾತಿ ಆಧಾರಿತ ಅಸ್ಪೃಷ್ಯತೆ ಆಚರಣೆಯಲ್ಲಿದೆ. ಅಲ್ಲಿ ವ್ಯಕ್ತಿಯ ಬಳಿ ಹಣ ಅಥವಾ ವಿದ್ಯೆ ಇದ್ದರೂ ಆತನ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಗುವುದಿಲ್ಲ.
    ಹೀಗಿರುವಾಗ, ಮೀಸಲಾತಿಯಿಂದ ಅಸ್ಪೃಷ್ಯತೆ ಹೇಗೆ ಹೋಗುತ್ತದೆ?

    ಕಳೆದ ೬೦ ವರ್ಷಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಮೀಸಲಾತಿಗಳನ್ನು ನೀಡಲಾಗುತ್ತಿದೆ.
    ಇಷ್ಟು ವರ್ಷಗಳ ಪ್ರಯೋಗದ ನಂತರವಾದರೂ ಮೀಸಲಾತಿಯಿಂದಾದ ಪರಿವರ್ತನೆಗಳು ಕಾಣಬೇಕಲ್ಲವೇ?
    ನಮ್ಮ ದೇಶದಲ್ಲಿರುವ ೫ ಲಕ್ಷ ಗ್ರಾಮಗಳಲ್ಲಿ, ಮೀಸಲಾತಿಯಿಂದಾಗಿ ಅಸ್ಪೃಷ್ಯತೆ ನಿವಾರಣೆಯಾದ ಗ್ರಾಮಗಳೆಷ್ಟು ಮತ್ತು ಯಾವುವು?

    ಉತ್ತರ
    • valavi
     ಮೇ 29 2014

     s s n kಅವರೆ ಮೀಸಲಾತಿಯಿಂದ ದಲಿತರಿಗೆ ಲಾಭವಾಗಿಲ್ಲವೆಂದಾದರೆ ನಗರಗಳಲ್ಲಿನ ದಲಿತರ ಸ್ಥಾನ ಮಾನ ನೋಡಿ. ಇನ್ನು ಉನ್ನತ ವಿದ್ಯಾಭ್ಯಾಸ ಉತ್ತಮ ಕೆಲಸ ಇರುವವರು ಹಳ್ಳಿಗಳಿಗೆ ಬರುವದಿಲ್ಲ. ಹಳ್ಳಿಗಳಲ್ಲಿ ಕೇವಲ ಬಡ ದಲಿತರಿದ್ದಾರೆ. ಅವರು ಶೋಷಣೆಗೆ ಒಳಗಾಗಿದ್ದಾರೆ. ಶ್ರೀಮಂತರಿದ್ದರೆ ಶೋಷಣೆಗೆ ಒಳಗಾಗುತ್ತಿರಲಿಲ್ಲ. ಶ್ರೀಮಂತರು ಯಾರಾದರೂ ಎಲ್ಲಿದ್ದರೂ ಶೋಷಿತರಾಗುವದಿಲ್ಲ. ಇನ್ನು Universal ಅವರ ಹೆಳಿಕೆಯಂತೆ ಮನುಷ್ಯರ ಮನಸ್ಸು ಬದಲಾವಣೆ ಆಗಲೇಬೇಕಾಗಿದೆ. ಕೆಲವು ಕೆಲಸಗಳನ್ನು ಕೀಳಾಗಿ ಕಾಣುವದನ್ನು ನಾವು ಬಿಡಬೇಕಾಗಿದೆ.

     ಉತ್ತರ
    • Universal
     ಮೇ 29 2014

     ಇನ್ನೆಷ್ಟೇ ದಶಕಗಳಾದರೂ ಜಾತಿಯಾಧಾರಿತ ಮೀಸಲಾತಿಯಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಇಂತಹ ಬದಲಾವಣೆಗಳನ್ನು ದಲಿತರೇ ತಂದುಕೊಳ್ಳಬೇಕು. ಅದನ್ನು ಬೇರೆ ಯಾರಿಂದಲೂ ತಂದು ಕೊಡಲು ಸಾಧ್ಯವೇಯಿಲ್ಲ. ತಮ್ಮ ಕೀಳರಿಮೆಯಿಂದ ದಲಿತರು ಹೊರ ಬರಲು ಅವರು ವಿದ್ಯಾವಂತರಾಗಲು ಮುನ್ನುಗ್ಗಬೇಕು. ಮೂಢ ನಂಬಿಕೆಗಳಿಂದ ಹೊರ ಬರಬೇಕು. ವಿವೇಕಶಾಲಿಗಳಾಗಬೇಕು. ವಿದ್ಯಾವಂತರಾಗುತ್ತಾ ಬಂದಂತೆಲ್ಲಾ ತಾನೇ ತಾನಾಗಿ ಅವರಿಗೆ ಮೇಲ್ಜಾತಿ ದೊರೆಯುತ್ತೆ. ಅವರಿಗೆ ಬೇರೆ ಇನ್ಯಾವ ದಾರಿಯೂ ಇಲ್ಲ.

     ಉತ್ತರ
   • Universal
    ಮೇ 29 2014

    ಇದಕ್ಕೆ ಮುಖ್ಯವಾಗಿ ಆಗಬೇಕಾದ್ದು ಎಲ್ಲರ ಮಾನಸಿಕ ಬದಲಾವಣೆ. ಜೊತೆಗೆ ದಲಿತರು ತಮ್ಮ ಅಸ್ಪೃಶ್ಯತಾ ಮನೋಭಾವ ತೊರೆದು ಮುಂದೆ ಬರಲು ಪ್ರಯತ್ನಿಸುವುದು. ಹಾಗೂ ತಮ್ಮನ್ನು ತಾವು ಬಿಡದೇ ವಿದ್ಯಾವಂತರಾಗುವ ಬಗ್ಗೆ ಹಠ ಧೋರಣೆ ತಳೆಯುವುದು. ಬರೀ ಮೀಸಲಾತಿಯನ್ನು ನೀಡುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲವೆನ್ನುವುದನ್ನು ನೀವು ತಿಳಿಯಬೇಕು. ನಾನು ಹಳ್ಳಿ ಮತ್ತು ನಗರ ಎರಡೂ ಕಡೆಯೂ ಇದ್ದವನು. ದಲಿತರಿಗೆ ಮೀಸಲಾತಿ ನೀಡಿದ್ದರಿಂದ ಮೇಲ್ಜಾತಿಯವರಿಗೂ ಅಷ್ಟೇ ಮೋಸವಾಗಿದೆ ಎಂಬುದನ್ನು ನೀವು ತಿಳಿಯಬೇಕು. ಹಣ ಕೈಗೆ ಸಿಕ್ಕ ಕೂಡಲೇ ಬಾರ್ ಗೆ ಹೋಗಿ ಹಣ ಹಾಳು ಮಾಡುವವರೇ ಹೆಚ್ಚು. ನೀವು ಹಳ್ಳಿಯ ಬಗ್ಗೆ ಹೇಳಲು ಹೋಗಿದ್ದೀರಿ. ಬೆಂಗಳೂರಿನಂಥ ನಗರ ಪ್ರದೇಶದಲ್ಲೂ ಇಂದಿಗೂ ಸರಿಯಾದ ಡ್ರೈನೇಜ್ ಸಂಪರ್ಕವಿಲ್ಲದೇ ನಾವು ಜಾಡಮಾಲಿಗಳ ಮೇಲೆ ಅವಲಂಬಿತರಾಗಿದ್ದೇವೆ. ಒಬ್ಬನಿಗೆ 500 ರಿಂದ 1000 ರೂಗಳ ಮೇಲೆ ಕೂಲಿ ಕೊಡಬೇಕಾಗಿದೆ. ಅವರೂ ಕೂಡ ಹಣದ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ಹೇಗೆ ಸರಿಪಡಿಸುತ್ತೀರಿ? ಇವೆಲ್ಲಾ ಅನಾನುಕೂಲಗಳಾಗಿರುವುದೇ ಜಾತಿಗಳ ಸೃಷ್ಟಿಯಿಂದ. ಜಾತಿಗಳ ನಿರ್ಮೂಲನೆಯೊಂದೇ ಇದಕ್ಕೆ ಸರಿಯಾದ ಉತ್ತರ. ಖಂಡಿತವಾಗಿಯೂ ಮೀಸಲಾತಿಯಿಂದ ಯಾವ ಉಪಯೋಗವೂ ಇಲ್ಲ.

    ಉತ್ತರ
 6. Universal
  ಮೇ 29 2014

  ಯಾವುದೇ ಕೆಲಸವೂ ಮೇಲೂ ಅಲ್ಲ, ಕೀಳೂ ಅಲ್ಲ. ಅಷ್ಟೇ ಅಲ್ಲದೇ ಮನುಷ್ಯರಲ್ಲೇ ಒಬ್ಬರನ್ನೊಬ್ಬರು ಕೀಳು ಮೇಲು ಎಂದು ಭಾವಿಸುವುದೇ ದುರಹಂಕಾರದ ಮೂರ್ಖತನ. ದಲಿತರು ತಮ್ಮನ್ನು ತಾವು ಕೀಳೆಂದು ಏಕೆ ಭಾವಿಸಬೇಕು? ಮೊದಲು ಈ ರೀತಿಯ ಕೀಳರಿಮೆಯಿಂದ ಅವರು ಹೊರಗೆ ಬರಬೇಕು. ಇವೆಲ್ಲಾ ಜಾತಿ ಆಧಾರಿತ ಮೀಸಲಾತಿಯಿಂದ ಎಂದಿಗೂ ಸರಿಹೋಗುವುದಲ್ಲ/ದಿಲ್ಲ.

  ಉತ್ತರ
 7. ವಿಜಯ್ ಪೈ
  ಮೇ 29 2014

  ಉತ್ತಮ ಲೇಖನ..ಅಷ್ಟೆ ಉತ್ತಮ ಪ್ರತಿಕ್ರಿಯೆಗಳು :). ಇಲ್ಲಿರುವ ಎಲ್ಲ ಅಭಿಪ್ರಾಯಗಳೊಂದಿಗೆ ( ನಮ್ಮ ಪ್ರಖ್ಯಾತ ಶೆಟ್ಕರ್ ಸಾಹೇಬರದೊಂದನ್ನು ಬಿಟ್ಟು!) ಸಹಮತಿಯಿದೆ. ಎಲ್ಲರಿಗೂ ಧನ್ಯವಾದಗಳು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments