ವಿಷಯದ ವಿವರಗಳಿಗೆ ದಾಟಿರಿ

ಮೇ 29, 2014

ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ಮರಳಿ ಪಡೆದೀತೇ?

by ನಿಲುಮೆ

– ರಾಜೇಶ್ ರಾವ್

ಕೈಲಾಸ ಮಾನಸ ಸರೋವರ“ಅಮೇರಿಕಾದಲ್ಲಿ ನಾವು ಆಶ್ರಯ ಪಡೆದಿದ್ದರೆ ನನ್ನ ಸಂಗಾತಿಗಳೂ ಅಮೇರಿಕರನ್ನರಾಗಿ ನಮ್ಮಲ್ಲೂ ಟಿಬೆಟ್ ತನ ಮಾಯವಾಗುತ್ತಿತ್ತು. ಭಾರತದ ಸಹಿಷ್ಣುತೆಯೇ ಜಗತ್ತಿನಲ್ಲಿ ನಾವು ನಮ್ಮತನವನ್ನು ಉಳಿಸಿಕೊಂಡಿದ್ದೇವೆ”-ದಲಾಯಿ ಲಾಮ.  ಹಿಂದೂಗಳ ಸಹಿಷ್ಣುತೆಯ ಮನೋಭಾವನೆಯನ್ನು ವಿಶ್ವವೇ ಕೊಂಡಾಡುತ್ತದೆ. ಆದರೆ ಸಹಿಷ್ಣುಗಳಾಗುವ ಭರದಲ್ಲಿ ನಮ್ಮ ಭದ್ರತೆಗೆ ನಾವೇ ಕೊಳ್ಳಿ ಇಟ್ಟುಕೊಂಡಿರುವುದು ಅಷ್ಟೇ ಸತ್ಯ! ಬಂದವರಿಗೆಲ್ಲರಿಗೂ ಆಶ್ರಯ ಕೊಟ್ಟೆವು. ಕೆಲವರು ನಮ್ಮೊಂದಿಗೆ ಕಲೆತರು, ಕಲಿತರು. ಇನ್ನು ಕೆಲವರು ನಮ್ಮ ಬುಡಕ್ಕೇ ಕೊಳ್ಳಿ ಇಟ್ಟರು,ಇಡುತ್ತಲೇ ಇದ್ದಾರೆ! ಆಶ್ರಯ ಬೇಡಿ ಬಂದ ದಲಾಯಿ ಲಾಮರಿಗೇನೋ ಆಶ್ರಯ ಕೊಟ್ಟೆವು. ಆದರೆ ಭಾರತದ ರತ್ನ ಖಚಿತ ಕಿರೀಟವನ್ನೇ(ಟಿಬೆಟ್) ಕಳೆದುಕೊಂಡು ಬಿಟ್ಟೆವು!
ಸಹಸ್ರಾರು ವರ್ಷಗಳ ಕಾಲ ಭಾರತದ ಭಾಗವಾಗಿದ್ದು ಕೈಲಾಸ ಮಾನಸ ಸರೋವರಗಳನ್ನೊಳಗೊಂಡ ಟಿಬೆಟ್ ಮಂಗೋಲಿಯಾ, ಚೀನಾದ ರಾಜರುಗಳು ಹಾಗೂ ಬ್ರಿಟಿಷರ ಆಕ್ರಮಣಗಳಿಗೆ ತುತ್ತಾಗಿದ್ದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತ್ತು. ಆದರೆ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಣ ಮಾಡಿದ ನಂತರ ಟಿಬೆಟಿಯನ್ನರು ತಮ್ಮ ಸ್ವಾತಂತ್ರ್ಯ ಸಾರ್ವಭೌಮತೆಗಳನ್ನು ಕಳೆದುಕೊಂಡುಬಿಟ್ಟರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ತನಗೆ ಸಮುದ್ರ ತೀರಗಳಿಲ್ಲದ ಹಿನ್ನೆಲೆಯಲ್ಲಿ ಜಪಾನ್ ಒಡ್ಡಿದ ಸವಾಲಿಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭದಲ್ಲಿ ಭಾರತದಿಂದ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಟಿಬೆಟ್ ಮಾರ್ಗದ ಅನುಮತಿ ಕೇಳಿದಾಗ ಚೀನಾದ ವಿಸ್ತರಣಾವಾದಿ ನೀತಿ ಹಾಗೂ ಗೋಮುಖವ್ಯಾಘ್ರತನವನ್ನು ಅರಿತಿದ್ದ ಟಿಬೆಟ್ ಅನುಮತಿ ನಿರಾಕರಿಸಿತ್ತು.

ಕಳೆದ ಶತಮಾನದ ಆರಂಭದಲ್ಲಿ ಸುಮಾರು 65ಲಕ್ಷದಷ್ಟು ಜನಸಂಖ್ಯೆ ಟಿಬೆಟಿನಲ್ಲಿತ್ತು. ಆದರೆ ಟಿಬೆಟನ್ನು ಆಕ್ರಮಿಸಿದ ಚೀನಾ 15ಲಕ್ಷದಷ್ಟು ಜನರ ಮಾರಣಹೋಮ ನಡೆಸಿತು. ಚೀನಾದ ಪಾಶವೀಯತೆ ಯಾವ ಪರಿ ಇತ್ತೆಂದರೆ ಲಿಥಾಂಗ್ ವಿಹಾರದ ಮೇಲೆ ಬಾಂಬು ಹಾಕಿದಾಗ ವಿಹಾರದೊಳಗಿದ್ದ 6500 ಜನರ ಪೈಕಿ 4500ಕ್ಕೂ ಹೆಚ್ಚು ಜನರು ಹೆಣವಾಗಿ ಬಿದ್ದರು. 1959ರಲ್ಲಿ ದಲಾಯಿ ಲಾಮ ಸ್ವಯಂ ಗಡಿಪಾರಾಗಿ ಭಾರತದ ಆಶ್ರಯ ಪಡೆದರು. ಆದರೆ ಟಿಬೆಟಿಯನ್ನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಟಿಬೆಟನ್ನರು ದಲಾಯಿ ಲಾಮ ಭಾವಚಿತ್ರ ಇಟ್ಟುಕೊಳ್ಳುವುದು, ಬೌದ್ಧವಿಹಾರಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇವೆಲ್ಲಾ ಚೀನಾ ಆಕ್ರಮಿತ ಟಿಬೆಟಿನಲ್ಲಿ ಅಪರಾಧಗಳಾಗಿವೆ. ಟಿಬೆಟಿನಲ್ಲೇ ಇರುವ ಮಾನಸ ಸರೋವರ ಕೈಲಾಸಗ ಪರ್ವತಗಳಿಗೆ ಹೋಗಬೇಕಾದರೂ ಟಿಬೆಟಿಯನ್ನರು ಚೀನಾ ಸರಕಾರದ ಅನುಮತಿ ಪಡೆಯಬೇಕು. TAR ಮಾನ್ಯ ಮಾಡಿರುವ ಧಾರ್ಮಿಕ ಉತ್ಸವಗಳನ್ನು ಮಾತ್ರ ಟಿಬೆಟನ್ನರು ಆಚರಿಸಬೇಕು. ಬೌದ್ಧ ಸನ್ಯಾಸಿಗಳು ಇತರ ವಿಹಾರಗಳಿಗೆ ಭೇಟಿ ನೀಡುವಂತಿಲ್ಲ. ಚೀನಾ ಸರಕಾರ ನಿಗದಿಪಡಿಸಿರುವಷ್ಟೇ ಸಂಖ್ಯೆಯ ಸನ್ಯಾಸಿಗಳು ವಿಹಾರಗಳಲ್ಲಿರಬೇಕು. ಅಲ್ಲದೆ ಅವುಗಳಲ್ಲಿ ಕಡ್ಡಾಯವಾಗಿ ‘ದೇಶಭಕ್ತಿ ಶಿಕ್ಷಣದ’ ತರಗತಿ, ಚೀನಾದ ಆಡಳಿತ ಸಾಧನೆ ಕಂಠಪಾಠ ಮಾಡುವ ತರಗತಿಗಳಿಗೆ ಹಾಜರಾಗುವುದು, “ವಿಶಾಲ ತಾಯ್ನಾಡಿಗೆ” ಗೌರವ ಅರ್ಪಿಸುವ ಪ್ರಮಾಣ ಮಾಡುವುದು ಕಡ್ಡಾಯ. ಪ್ರವಾಸಿಗರು ಸ್ಥಳೀಯ ಟಿಬೆಟನ್ನರೊಂದಿಗೆ ಮಾತಾಡುವುದಾಗಲೀ, ಟಿಬೆಟ್ ಕಾಲೊನಿಗಳಿಗೆ ಹೋಗುವುದಾಗಲೀ ನಿಷಿದ್ದ! ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಅವರ ಕುಟುಂಬದವರೇ ಸಾರ್ವಜನಿಕವಾಗಿ ಕಲ್ಲೆಸೆಯುವಂತಹ ಶಿಕ್ಷೆ ನೀಡಲಾಗುತ್ತದೆ. ಅಲ್ಲದೆ ಅಣ್ವಸ್ತ್ರ ಪರೀಕ್ಷೆಗೂ ಟಿಬೆಟ್ ನೆಲವನ್ನು ಬಳಸಲಾಗುತ್ತಿದೆ.

ಭಾರತದ ಐತಿಹಾಸಿಕ ಮಹಾತಪ್ಪುಗಳು:
ತನ್ನದೇ ಭಾಗವನ್ನು ಕಳೆದುಕೊಂಡ ಭಾರತ ಮತ್ತೆ ಅದನ್ನು ಪಡೆಯುವ ಅವಕಾಶವಿದ್ದಾಗ್ಯೂ ಕಳೆದುಕೊಳ್ಳುತ್ತಾ ಸಾಗಿತು.
1. 1940ರಲ್ಲಿ ಯಾತುಂಗ್ ಮತ್ತು ಸಿಯಾಂತ್ಸೆಗಳಲ್ಲಿರುವ ಸೇನಾನೆಲೆಗಳನ್ನು ರದ್ದುಪಡಿಸಿ ಎಂದು ಕೇಳಿಕೊಂಡಾಗ ಬ್ರಿಟಿಷ್ ಭಾರತ ಸಮ್ಮತಿಸಿತು. ಅಲ್ಲದೆ ಟಿಬೆಟ್ ನೆಲದಲ್ಲಿದ್ದ ತನ್ನ ಅಂಚೆ-ತಂತಿ, ದೂರವಾಣಿ ವ್ಯವಸ್ಥೆ, ವಿಶ್ರಾಂತಿ ಗೃಹಗಳನ್ನು, ಕಛೇರಿಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು.
2. ಸ್ವಾತಂತ್ರ್ಯ ಬಂದಾಗ ಟಿಬೆಟ್ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದು ಭಾರತ ಮಾಡಿದ ದೊಡ್ಡ ತಪ್ಪು!
3. 1950ರಲ್ಲಿ ಚೀನಾ ಆಕ್ರಮಣದ ಸಮಯದಲ್ಲಿ ಟಿಬೆಟ್ ಭಾರತದ ಸಹಾಯ ಯಾಚಿಸಿದಾಗ “ಟಿಬೆಟಿಗೆ ಸೇನಾ ನೆರವು ನೀಡಲು ಸಾಧ್ಯವಿಲ್ಲ. ಚೀನಾ ಆಕ್ರಮಣ ಮಾಡಿದಾಗ ಸಶಸ್ತ್ರ ಪ್ರತಿರೋಧ ಒಡ್ಡುವುದು ತರವಲ್ಲ” ಎಂಬ ಹುಂಬ ಸಲಹೆಯನ್ನು ನೆಹರೂ ಸರಕಾರ ನೀಡಿತು.
4. 1951ರಲ್ಲಿ ಚೀನಾ-ಟಿಬೆಟ್ ಒಪ್ಪಂದ ನಡೆದಾಗ ಮಧ್ಯಪ್ರವೇಶ ಮಾಡದೆ ಇದ್ದುದು ಇನ್ನೊಂದು ದೊಡ್ಡ ತಪ್ಪು.
5. 1954ರಲ್ಲಿ ಟಿಬೆಟ್ ಜೊತೆಗಿನ ವ್ಯಾಪಾರ ಸಂಬಂಧವನ್ನು ಏಕಪಕ್ಷೀಯವಾಗಿ ಕಡಿದುಕೊಂಡು ನಂಬಿದವರಿಗೆ ದ್ರೋಹ ಬಗೆದದ್ದು ನೆಹರೂ ಸರಕಾರದ ಮಗದೊಂದು ತಪ್ಪು.
6. ಕೊರಿಯಾ ಚೀನಾ ಬಿಕ್ಕಟ್ಟಿನಲ್ಲಿ ಚೀನಾದ ಪರವಾಗಿ ನಿಂತಿತು ಭಾರತ.
7. 1954ರಲ್ಲಿ ಸಿನೋ ಇಂಡಿಯನ್ ಒಪ್ಪಂದದಲ್ಲಿ ಟಿಬೆಟ್ ವಿಷಯದಲ್ಲಿ ಮೌನ ತಳೆಯಿತು ಭಾರತ.
8. 1959ರಲ್ಲಿ ಚೀನಾದ ದೌರ್ಜನ್ಯ ಮಿತಿಮೀರಿದಾಗ ಸೈನ್ಯ ಸಹಾಯ ಬೇಡಿದ ಟಿಬೆಟಿಗೆ ಸಹಾಯ ನಿರಾಕರಿಸಿದ್ದು ಬಹು ದೊಡ್ಡ ತಪ್ಪು!
9. 1959ರಲ್ಲಿ ಹಾಗೂ 1961ರಲ್ಲಿ ಟಿಬೆಟಿಯನ್ನರ ಹಕ್ಕುಗಳನ್ನು ಚೀನಾ ಮಾನ್ಯ ಮಾಡಬೇಕೆಂದೂ ಅವರ ಧರ್ಮ-ಸಂಸ್ಕೃತಿಗಳಿಗೆ ಯಾವ ಧಕ್ಕೆಯನ್ನುಂಟು ಮಾಡಬಾರದೆಂದೂ ವಿಶ್ವಸಂಸ್ಥೆ ಗೊತ್ತುವಳಿಯನ್ನು ಸ್ವೀಕರಿಸಿತು. ಆದರೆ ಇದನ್ನು ಬೆಂಬಲಿಸಬೇಕಿದ್ದ ಭಾರತ ತಟಸ್ಥ ನಿಲುವು ತಾಳಿತ್ತು. ಕಾರಣ ಆಗ ನಮ್ಮ ಪ್ರಧಾನಿಯಾಗಿದ್ದದ್ದು ಕಮ್ಯೂನಿಷ್ಟ್ ಮಾನಸಿಕತೆಯ ನೆಹರೂ! (1965ರಲ್ಲಿ ಮತ್ತೆ ಸಭೆ ನಡೆದಾಗ ಭಾರತ ಗೊತ್ತುವಳಿಯನ್ನು ಬೆಂಬಲಿಸಿತು. ಯಾಕೆಂದರೆ ಆಗ ಪ್ರಧಾನಿಯಾಗಿದ್ದವರು ಅಪ್ಪಟ ಭಾರತೀಯ ಲಾಲ್ ಬಹಾದೂರ್ ಶಾಸ್ತ್ರಿ!)

ಬಂಡುಂಗ್ ಸಮ್ಮೇಳನದಲ್ಲಿ ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳು ಚೀನಾಕ್ಕೆ ಮಾನ್ಯತೆ ನೀಡಬೇಕೆಂದು ಆಗ್ರಹಿಸಿತು ಭಾರತ. ವಿಶ್ವಸಂಸ್ಥೆಯಲ್ಲಿ ಚೀನಾಕ್ಕೆ ಸದಸ್ಯತ್ವ ಸಿಗಲೂ ಭಾರತದ ಒತ್ತಾಸೆಯೇ ಕಾರಣ. ಹೀಗೆ ಅಪಾತ್ರ ದೇಶಕ್ಕೆ ಔದಾರ್ಯ ತೋರಿದ ನೆಹರೂ ಈ ದೇಶ 1962ರಲ್ಲಿ ಚೀನಾ ಎದುರು ಸೋಲಲು ಅಡಿಗಲ್ಲು ಹಾಕಿಟ್ಟರು. ಟಿಬೆಟನ್ನು ಆಕ್ರಮಿಸಿ ಮಾರಣಹೋಮ ನಡೆಸಿದ ಚೀನಾ ದಲಾಯಿ ಲಾಮ ಭಾರತಕ್ಕೆ ಬಂದ ಮೂರೇ ವರ್ಷಗಳಲ್ಲಿ ಭಾರತದ ಮೇಲೂ ಆಕ್ರಮಣ ನಡೆಸಿತು. ಹಿಂದಿ-ಚೀನೀ ಭಾಯಿ ಭಾಯಿ ಎಂಬ ಮರೀಚಿಕೆಯ ಬೆನ್ನು ಹತ್ತಿದ್ದ ಮೂರ್ಖ ಸರಕಾರದ ಕಾರಣದಿಂದಾಗಿ ನಮ್ಮ ಅದೆಷ್ಟೋ ವೀರ ಸೈನಿಕರು ಶಸ್ತ್ರಾಸ್ತ್ರ ಹೊಂದಿದ್ದರೂ ಪ್ರಯೋಗಿಸುವ ಅನುಮತಿ ಇಲ್ಲದೆ ಹತರಾದರು. ಒಬ್ಬ ವೀರನಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೇನಿದೆ? ಚೀನಾ ಅಕ್ಸಾಯ್ ಚಿನ್, ಸೋಂಗ್ಡಾ, ಲಿಂಗ್ಜಿತಾಂಗ್, ಚಾಂಗ್ ಚೆನ್ಮೋ, ಡೆಪ್ಸಾಂಗ್, ಪೂರ್ವ ಲಾನಕ್ ಲಾ, ಉತ್ತರ ದುಂಜೊರುಲಾಗಳನ್ನು ವಶಪಡಿಸಿಕೊಂಡಿತು. ಮಾತ್ರವಲ್ಲ ಪದೇ ಪದೇ ಸಿಕ್ಕಿಂ, ಅರುಣಾಚಲಪ್ರದೇಶಗಳನ್ನು ತನ್ನದೆನ್ನುತ್ತಿದೆ. ಮೊನ್ನೆ ಮೊನ್ನೆ ಘನ ಮನಮೋಹನರ ಸರಕಾರ ಮೂಕವಾಗಿ ನೋಡುತ್ತಿರುವಂತೆಯೇ ಹತ್ತೊಂಬತ್ತು ಕಿ.ಮೀಗಳಷ್ಟು ಒಳಗೆ ಬಂತು! ಪಾಕಿಗೆ ನಮ್ಮ ಗಿಲ್ಗಿಟ್-ಬಾಲ್ಟಿಸ್ತಾನದ(ಪಾಕ್ ಆಕ್ರಮಿತ ಕಾಶ್ಮೀರ) ಮೂಲಕ ಈಗಾಗಲೇ ಹೆದ್ದಾರಿಯಿದ್ದು ಇದು ಸಮರ ಸರಂಜಾಮು ಸಾಗಣೆಗಾಗಿಯೇ ನಿರ್ಮಿತವಾಗಿದೆ. ಚೀನಾ ಭಾರತದ ಎಲ್ಲಾ ನೆರೆಯ ದೇಶಗಳನ್ನು ಮಿತ್ರರಾಗಿಯೋ ಇಲ್ಲ ಬಲಾತ್ಕಾರವಾಗಿಯೋ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ರೀತಿ ಬದಲಾಯಿಸಿಕೊಂಡಿದೆ.

ಭಾರತ ವಿಜಯನಾಮ ಸಂವತ್ಸರದ ಶುಭಘಳಿಗೆಯಲ್ಲಿ ನವ ಸೂರ್ಯನ ಸ್ವಾಗತಕ್ಕೆ ಸಿದ್ಧವಾಗುತ್ತಿದೆ. ಭರವಸೆಯ ನವ ಪ್ರಧಾನಿಯ ಮೇಲೆ ಮಹತ್ತರವಾದ ಜವಾಬ್ದಾರಿಗಳಿವೆ. ಕೇವಲ ಚೀನಾದ ಆರ್ಭಟವನ್ನು ತಡೆಯುವುದು ಮಾತ್ರವಲ್ಲ, ಇತಿಹಾಸದಲ್ಲಾದ ತಪ್ಪುಗಳನ್ನು ಸರಿಪಡಿಸುವ ಅವಕಾಶ ಭಾರತಕ್ಕೆ ಈಗ ಒದಗಿದೆ. ತನ್ನದೇ ಗಡಿ ಭದ್ರತೆ, ಸಾರ್ವಭೌಮತೆಯ ರಕ್ಷಣೆಯ ದೃಷ್ಟಿಯಿಂದ ಭಾರತವು ಟಿಬೆಟಿಗೆ ನೆರವಾಗಲೇಬೇಕು. “ಒಟ್ಟಿಗೆ ಬಾಳಲು ಜನರು ತಾಳುವ ಇಚ್ಛಾಶಕ್ತಿ ರಾಷ್ಟ್ರವೊಂದನ್ನು ರೂಪಿಸುತ್ತದೆ” ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖನೀಯ. ಯಾಕೆಂದರೆ ಟಿಬೆಟನ್ನರು ನಮ್ಮೊಂದಿಗೆ, ನಾವು ಅವರೊಂದಿಗೆ ಬೆರೆತು ಬಾಳಬಲ್ಲೆವು. ಅಮಾನವೀಯ ಆಕ್ರಮಣಕ್ಕೆ ತುತ್ತಾದ ಸೋದರ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಹೊಣೆ. ಭಾರತದಲ್ಲಿರುವ ಟಿಬೆಟಿಯನ್ನರನ್ನು ಮತಬ್ಯಾಂಕ್ ಆಗಿ ಉಪಯೋಗಿಸುವ ಹುನ್ನಾರವೂ ನಡೆಯುತ್ತಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಕೈಲಾಸ ಪರ್ವತ, ಮಾನಸ ಸರೋವರಗಳಿಗೆ ಯಾವುದೇ ಪಾಸ್ ಪೋರ್ಟಿನ ಹಂಗಿಲ್ಲದೆ ಹೋಗಿ ಬರುವ ಮುಕ್ತತೆಯನ್ನು ಒದಗಿಸುವ ಅವಕಾಶ ಭರವಸೆಯ ಭಾವೀ ನಾಯಕನಿಗಿದೆ. ಟಿಬೆಟಿಗೆ ಸ್ವಾತಂತ್ರ್ಯ ದೊರಕಿಸಿಕೊಡುವ ಸಾಮರ್ಥ್ಯ ಭಾರತದ ಭಾವೀ ನಾಯಕನಲ್ಲಿ ಖಂಡಿತಾ ಇದೆ. ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ರಕ್ಷಿಸೀತೇ? ಇದು ಅಖಂಡ ಭಾರತದ ಕನಸಿಗೆ ಅಡಿಗಲ್ಲಾದೀತೇ?

ಚಿತ್ರ ಕೃಪೆ : http://www.apnnews.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments