ವಿಷಯದ ವಿವರಗಳಿಗೆ ದಾಟಿರಿ

ಮೇ 30, 2014

ತುಳುಲಿಪಿ ಒಂದು ವಿಶ್ಲೇಷಣೆ

‍ನಿಲುಮೆ ಮೂಲಕ

– ದ್ಯಾವನೂರು ಮಂಜುನಾಥ್

Tulu-Scriptಕನ್ನಡ ನಾಡಿನ ಹಸ್ತಪ್ರತಿ ಇತಿಹಾಸದಲ್ಲಿ ತುಳುಲಿಪಿ ಹಸ್ತಪ್ರತಿಗಳಿಗೆ ಒಂದು ವಿಶಿಷ್ಟಮಯವಾದ ವಾತಾವರಣವಿದ್ದು, ದಕ್ಷಿಣ ಭಾರತದ ಸಾಂಸ್ಕೃತಿಕ ಬದುಕಿನ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಇಲ್ಲಿನ ಭೌಗೋಳಿಕ ಸಾಮ್ಯತೆ ಈ ಪ್ರದೇಶಕ್ಕಿದ್ದರೂ, ಇಲ್ಲಿ ವಿಭಿನ್ನ ಸಂಸ್ಕೃತಿಗಳು ಬೆಳೆದು ಬಂದಿದೆ. ಕನ್ನಡ, ತುಳು, ಕೊಂಕಣಿ, ಮಲೆಯಾಳ ಇಲ್ಲಿನ ಜನರ ಪ್ರಧಾನ ಭಾಷೆಗಳಾಗಿವೆ. ಈ ಭಾಷೆಗಳಲ್ಲಿ ‘ತುಳುಭಾಷೆ’ ಮತ್ತು ನೆಲೆಸಿದ ಪ್ರದೇಶ ‘ತುಳುನಾಡು’ (ತೌಳವ) ದು ಪ್ರಸಿದ್ಧ. ವಿದೇಶಿ ಪ್ರವಾಸಿ ಬಾರ್ಕೋಸನ ವರದಿ ಮತ್ತು ಗೋವರ್ಧನ ಗಿರಿ ಓಂಕಾರ ಬಸದಿಯ ಶಾಸನಗಳ ಆಧಾರದಿಂದ ತುಳುನಾಡು ಚಂದ್ರಗಿರಿಯ ಉತ್ತರಕ್ಕೆ ಮತ್ತು ಗಂಗಾವತಿ ನದಿಗಳ ದಕ್ಷಿಣಕ್ಕೆ ಸೀಮಿತವಾಗಿತ್ತು ಎಂದು ಸ್ಥೂಲವಾಗಿ ಹೇಳಬಹುದು. ಹೀಗಿದ್ದರೂ ತುಳುಭಾಷೆಯನ್ನಾಡುವ ಜನಸಮುದಾಯವು ಈಗ ಕಲ್ಯಾಣಪುರ ಮತ್ತು ಚಂದ್ರಗಿರಿ ನದಿಗಳವರೆಗಿನ ಕರಾವಳಿ ಪ್ರದೇಶಗಳಿಗೆ ಸೀಮಿತವಾಗಿದೆ.

ಕಾಸರಗೋಡು ತುಳು ನಾಡೆಂದು ಸಂಗಮ ಸಾಹಿತ್ಯ ಹೇಳಿದೆ. ತುಳು ಭಾಷೆಯ ಪ್ರಾಚೀನತೆಯನ್ನು ಕ್ರಿ.ಶ.9ನೆಯ ಶತಮಾನದ ತನಕ ಹೋಗುತ್ತದೆಯೆಂಬ ಅಭಿಪ್ರಾಯ ನಿಕೋರಸ್ ನ ವರದಿ ಸೂಚಿಸುವುದಾದರೂ ಈ ಭಾಷೆಯು ತುಳುನಾಡು, ತುಳು ದೇಶ, ತುಳು ವಿಷಯ ಶಬ್ದಗಳು ಕ್ರಿ.ಶ.12ನೆಯ ಹಾಗೂ 16ನೆಯ ಶತಮಾನದ ಕೆಲವು ಶಾಸನಗಳಲ್ಲಿ ಉಲ್ಲೇಖಗಳಿಂದ ಕಾಣಬಹುದಾಗಿದೆ. ಇಂತಹ ಶಾಸನಗಳು ಬ್ರಹ್ಮಾವರ, ಉಡುಪಿ, ಕಂದಾವರ ಮತ್ತು ಗುಣವಂತೆಗಳಲ್ಲಿ ಪತ್ತೆಯಾಗಿದೆ. ಕ್ರಿ.ಶ.14ನೆಯ ಶತಮಾನದ ಮತ್ತು ಅಂತ್ಯದಲ್ಲಿ ತುಳುಶಾಸನ ತುಳುಲಿಪಿಯಲ್ಲಿ ಲಿಖಿಸುವಷ್ಟು ಪ್ರಬಲವಾಗಿತ್ತೆಂಬುದಕ್ಕೆ ಕುಂಬಳೆ ಸಮೀಪದ ಅನಂತಪುರದ ಶಾಸನ, ಪೆರ್ಲದ ಬಜಂಕೂಡ್ಲು ಶಾಸ, ಪುತ್ತೂರು ಸಮೀಪದ ಈಶ್ವರ ಮಂಗಲದ ಶಾಸನಗಳ ಅಧ್ಯಯನಗಳಿಂದ ತಿಳಿದು ಬರುತ್ತದೆ. ಕೊಳನಕೋಡು ದೇವಸ್ಥಾನ ಕೊಂಗುಬಳ್ಳಿ ಮನೆಯ ಪರಿಸರದಲ್ಲಿ ಮೊತ್ತ ಮೊದಲನೆಯ ತುಳುಲಿಪಿ ಶಾಸನವನ್ನು ಡಾ||ಗುರುರಾಜ ಭಟ್ಟರು ಶೋಧಿಸಿದ್ದರೆ.

ಪ್ರಾಚೀನ ಲಿಪಿಗಳಾದ ಸಿಂಧು, ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳ ಪೈಕಿ ಅತ್ಯಂತ ಪ್ರಾಚೀನವಾದ್ದು ಸಿಂಧು ಲಿಪಿ. ಈ ಲಿಪಿ ಎಲ್ಲರೂ ಒಪ್ಪದ ರೀತಿಯಲ್ಲಿ ಓದಲು ಸಾಧ್ಯವಾಗಿಲ್ಲ. ಆದರೆ ಬ್ರಾಹ್ಮಿಶಾಸನಶಾಸ್ತ್ರ ಇತಿಹಾಸ ಪ್ರಾರಂಭದ ಬ್ರಾಹ್ಮಿ ಶಾಸನಗಳು ದೊರೆಯುವಲ್ಲಿಂದ ಆರಂಭವಾಗುತ್ತದೆ ಎಂದು ವಿದ್ವಾಂಸರ ಅಭಿಮತ, ಬ್ರಾಹ್ಮಿ ಭಾರತದಲ್ಲಿನ ನಂತರದ ಉತ್ತರ ಹಾಗೂ ದಕ್ಷಿಣದ ಎಲ್ಲಾ ಲಿಪಿಗಳಿಗೆ ಮೂಲವಾಗಿದೆ.

ಕಾಲ ದೇಶಗಳು ಬದಲಾದಂತೆ ಲಿಪಿಯ ವ್ಯತ್ಯಯ ಅಕ್ಷರ ರೇಖೆಯಲ್ಲಿ ವಕ್ರತೆ, ಮಣಿತ ಹಾಗೆ ಅನೇಕ ವಿಷಯಗಳಲ್ಲಿ ಸ್ಪಷ್ಟವಾದ ಬದಲಾವಣೆ ಉಂಟಾಗುವ ಸಾಧ್ಯತೆಗಳಿವೆ. ಇದು ದಕ್ಷಿಣ ಭಾರತದ ಲಿಪಿಗಳಲ್ಲಿ ಬಂದಾಗ ತುಳುಲಿಪಿಯ ಬೆಳವಣಿಗೆಯಲ್ಲಿಯೂ ಕಾಣಬಹುದು. ಕ್ರಿ.ಶ.1ನೆಯ ಶತಮಾನದಲ್ಲಿ ದಕ್ಷಿಣದ ತಮಿಳು ನಾಡಿನ ಕೆಲವು ಗುಹೆಗಳಲ್ಲಿ ಕಂಡು ಬರುವ ದಕ್ಷಿಣದ ಬ್ರಾಹ್ಮಿ ಬರಹದಿಂದ ಹುಟ್ಟಿ ವಿಕಾಸವಾಗಿ 7ನೆಯ ಶತಮಾನದ ಸಮಯದಲ್ಲಿ ತಮಿಳುನಾಡು, ಕೇರಳ ಪ್ರದೇಶದಲ್ಲಿ ಪ್ರಚಾರಕ್ಕೆ ಬಂದ ಲಿಪಿ 30 ಅಕ್ಷರಗಳುಳ್ಳ ಚೇಳರು ಆಡಳಿತಾತ್ಮಕವಾಗಿ ಬಳಸುತ್ತಿದ್ದ ‘ವಟ್ಟೆಳುತ್ತು’ ಎಂಬ ಹೆಸರಿನ ಲಿಪಿ. ತಮಿಳು ಭೂಯಿಷ್ಟವಾದ ಮೆಲೆಯಾಳವನ್ನು ಬರೆಯಲು ಈ ಲಿಪಿ ಸಾಕಾಗುತ್ತಿತ್ತು. ಅದರಂತೆ ಪಲ್ಲವರ ಶಾಸನದಲ್ಲಿ ಉಪಯೋಗ ಮಾಡಿದ ಲಿಪಿ ಮಧ್ಯಗ್ರಂಥ ಆಧುನಿಕ ಗ್ರಥಲಿಪಿಗೆ ಇದೇ ಮೂಲ. ದಕ್ಷಿಣ ಭಾರತದವರು ಸಂಸ್ಕೃತ ಗ್ರಂಥಗಳನ್ನು ಒರೆಯಲು 50 ಅಕ್ಷರಗಳುಳ್ಳಗ್ರಂಥ ಲಿಪಿಯನ್ನು ಬಳಸುತ್ತಿದ್ದರು. ಇದುವೇ ಸ್ವಲ್ಪ ರೂಪಾಂತರವಾಗಿ ‘ಆರ್ಯ ಎಳತ್ತು’ ಎಂದಾಯಿತು. ಮಲೆಯಾಳಕ್ಕೆ ಸಂಸ್ಕೃತದ ಧ್ವನಿಗಳು ಬಂದಾಗ ತುಳುನಾಡಿನ ವೈದಿಕರು ಉಪಯೋಗಿಸುತ್ತಿದ್ದ ಆರ್ಯ ಎಳತ್ತು ಸ್ವೀಕರಿಸುವುದು ಅನಿವಾರ್ಯವಾಯಿತು. ಹೀಗೆ ಸುಮಾರು ಕ್ರಿ.ಶ.12ನೆಯ ಶತಮಾನದಲ್ಲಿ ತೌಳವರು ಕೇರಳದ ತಿರುವನಂತಪುರಕ್ಕೆ ಹೋಗಿ ಜ್ಯೋತಿಶಾಸ್ತ್ರ ಮೊದಲಾದ ಗ್ರಂಥಗಳನ್ನು ಅಧ್ಯಾಪಿಸುತ್ತಿದ್ದರೆಂದು ಇಲ್ಲಿ ದೊರೆತ ಗ್ರಂಥಗಳು ತಿಳಿಸುತ್ತವೆ.

12ನೆಯ ಶತಮಾನದ “ಸ್ವನಂದಪುರಂ ಸಮುಚ್ಚಯಂ” ಸಂಸ್ಕೃತ ಕಾವ್ಯದ ಕರ್ತೃ ಮಣಿ ಗ್ರಾಮದ ತಮಿಳುನಾಡಿನವನು. ಇವನ ತಂದೆ ವಿಷ್ಣು ಮತ್ತು ಗುರು ಮಾಧವ. ಸ್ವನಂದಪುರಣ (ಈಗಿನ ತಿರುವನಂತಪುರ) ಕವಿ ವಿದ್ಯಾದಾನವನ್ನು ಮಾಡುತ್ತಿದ್ದನು. ಇಲ್ಲಿ ಕಲಿಸುವ ವಿದ್ಯೆ ಲೌಕಿಕ ಮತ್ತು ಧಾರ್ಮಿಕವಾಗಿತ್ತು. ಧನುರ್ವೇದ, ದಂಡ ನೀತಿ, ಆಯುರ್ವೇದ ಮತ್ತು ಗಂಧರ್ವ ವಿದ್ಯೆಗಳು ಲೌಕಿಕವಾಗಿಯೂ – ವೇದ, ವೇದಾಂಗ, ಬ್ರಾಹ್ಮಣ ಕಲ್ಪಸೂತ್ರ, ಸ್ಮೃತಿ ಮತ್ತು ಪುರಾಣಗಳು ಧಾರ್ಮಿಕ ವಿದ್ಯೆಯಾಗಿತ್ತು. ತೌಳವ ಮತ್ತು ಮಲೆಯಾಳ ಸಂಸ್ಕೃತಿಯ ನಿಕಟತೆಯ ಪ್ರಾಚೀನತೆಯನ್ನು 12ನೆಯ ಶತಮಾನದ ಅಂತ್ಯದಲ್ಲಿ ಬರೆದ ಕೊಲ್ಲೂರು ಮಂಟಪ ಸಾಸನವು ದೃಢೀಕರಿಸುತ್ತದೆ. ಇಷ್ಟಲ್ಲದೆ ಈ ಸಂಸ್ಕೃತಿಗಳ ನಿಕಟತೆಯನ್ನು ಪುಷ್ಟೀಕರಿಸುವ ಕೆಲವು ಅಪ್ರಕಟಿತ ದಾಖಲೆಗಳು ತಿರುವಾಂಕೂರು ಪ್ರಾಚ್ಯ ವಿದ್ಯಾ ಕೇಂದ್ರದಲ್ಲೂ ಮತ್ತು ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇವಾಲಯದ ಪುಸ್ತಕ ಭಂಡಾರದಲ್ಲಿರುವ ಒರುವ ‘ವಿಶ್ವದರ್ಶನ’ ತುಳು ನಾಡು ಮತ್ತು ಕೇರಳದ ಸಂಪರ್ಕವನ್ನು ತಿಳಿಸುವ ಅಪ್ರಕಟಿತ ಸಂಸ್ಕೃತ ಕಾವ್ಯ. ಇದರ ಕರ್ತೃ ಕುಂದಾಪುರಿಯ ಶ್ರೀಪತಿ ಕ್ಷೇತ್ರದವನು. ಇವನು ತಿರುವಾಂಕೂರು ರಾಜನ ಆಸ್ಥಾನದಲ್ಲಿ ಈ ಕಾವ್ಯವನ್ನು ಕ್ರಿ.ಶ.1600ರಲ್ಲಿ ಬರೆದನು. ಈ ಕಾವ್ಯದಲ್ಲಿ ತುಳುನಾಡಿನ ಬಾಲಕೂರು (ಬಾರಕೂರು) ಮತ್ತು ಅಜಪುರಗಳ ವರ್ಣನೆ ಇದೆ. ಇದನ್ನು ಅಧ್ಯಯಿಸಿದಾಗ ತುಳುನಾಡು ಮತ್ತು ಕೇರಳಗಳೊಳಗೆ ಸಾಂಸ್ಕೃತಿಕ ವಿನಿಮಯ ನಡೆಯುತ್ತಿತ್ತೆಂದು ತಿಳಿದು ಬರುತ್ತದೆ.

ಇಷ್ಟಲ್ಲದೆ ತಿರುವನಂತಪುರ ಹಸ್ತಪ್ರತಿ ವಿಭಾಗದಲ್ಲಿ ನೂರಾರು ತುಳುಲಿಪಿಯ ಸಂಗ್ರಹಗಳಿವೆ. ತುಳು ಭಾಷೆಗೆ ಸ್ವತಂತ್ರವಾದ ಲಿಪಿ ಸಾಹಿತ್ಯ ರುವುದು ಈಗ ಸ್ಪಷ್ಟ ಈ ವಿಷಯದಲ್ಲಿ ಅಧ್ಯಯನ ಸಂಶೋಧನೆಗಳು ಸಾಕಷ್ಟು ನಡೆದಿವೆ. ತುಳುಲಿಪಿಯಲ್ಲಿ ಬರೆದ ಶಿಲಾ ಶಾಸನ, ತಾಡೋಲೆ ಹಾಗೂ ಕಾಗದದ ಹಸ್ತಪ್ರತಿಗಳು ಸಾಕಷ್ಟು ದೊರೆಯುತ್ತಿದವೆ. ಇವುಗಳಲ್ಲಿ ತುಳು ಲಿಪಿ-ಭಾಷೆ ಸಂಸ್ಕೃತ, ತುಳುಲಿಪಿ-ಪ್ರಾಚೀನ ತುಳು ಬಾಷೆ, ತುಳುಲಿಪಿ-ಭಾಷೆ ಕನ್ನಡ ಮತ್ತು ತುಳು ಲಿಪಿ-ಲೌಕಿಕದಲ್ಲಿರುವ ಸಾಹಿತ್ಯ ಕೃತಿಗಳು ಇಂದು ಸಾಕಷ್ಟು ಸಂಗ್ರಹ, ಸಂರಕ್ಷಣೆ ಪಡೆದಿದೆ. ತುಳುನಾಡಿನ ಪ್ರಾಚೀನ ಮನೆ ಮಠ ಹಾಗೂ ಪ್ರಾಚ್ಯ ವಿದ್ಯಾಸಂಸ್ಥೆಗಳಲ್ಲಿ ಸುಮಾರು 15,000 ತುಳು ಗ್ರಂಥಗಳ ಸಂಗ್ರಹವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನವೊಂದರಲ್ಲೇ ಸುಮಾರು 1500ಕ್ಕೂ ಮಿಕ್ಕಿ ತಾಡೋಲೆ ಹಾಗೂ ಕಾಗದದ ಹಸ್ತಪ್ರತಿಗಳಿವೆ. ವಿಶೇಷಮಾಗಿ ವೇದ, ಉಪನಿಷತ್ತು, ತಂತ್ರಗಮ, ಜ್ಯೋತಿಷ್ಟ ಸ್ಮೃತಿ, ಶಾಂತಿಮಂತ್ರ, ಇತಿಹಾಸ, ಪುರಾಣ, ಕಾವ್ಯ, ವೈದ್ಯ ಮೊದಲಾದ ಸಂಸ್ಕೃತ ಭಾಷೆಯ ಶಾಸ್ತ್ರ ಗ್ರಂಥಗಳಾಗಿವೆ. ಪ್ರಾಚೀನ ತುಳು ಲಿಪಿಯ ಸಂಸ್ಕೃತ ಸುರಕ್ಷಿತ ತಾಡೋಲೆಯ ಕೃತಿ ಆಚಾರ್ಯ ಮಧ್ವರ ಗ್ರಂಥಗಳನ್ನು ಅವರ ಮೊದಲ ಶಿಷ್ಯ ಶ್ರೀ ಹೃಷಿಕೇಶ ತೀರ್ಥರು ಸ್ವಹಸ್ತಾಕ್ಷರದಿಂದ ಬರೆದ ‘ಸರ್ವಮೂಲ’ ಗ್ರಂಥವಾಗಿದೆ. ಇದರ ಕಾಲ 13ನೆಯ ಶತಮಾನವಾಗಿದ್ದು, ಉಡುಪಿಯ ಅಷ್ಟ ಮಠಗಳಲ್ಲೊಂದಾದ ಪಲಿಮಾರು ಮಠದಲ್ಲಿ ಸಂರಕ್ಷಿತವಾಗಿದೆ. ತುಳು ಲಿಪಿ ಬಾಷೆ ಕನ್ನಡಲ್ಲಿರುವ ತೌಳವ ದೇಶ ಗ್ರಾಮ ಪದ್ಧತಿ, ಅಮರಕೋಶ ಟೀಕಾ, ಕೊಕ್ಕಕಶಾಸ್ತ್ರ, ಶಾರದಾತಿಲಕ, ಭುಜನೆಗಳು,ದಾಸರ ಕೀರ್ತನೆಗಳು ಇತ್ಯಾದಿ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳಿವೆ.

ತುಳು ಭಾಷೆ – ಲಿಪಿ ಇಲ್ಲದೆ ಇರುವ ಭಾಷೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ತುಳು ಭಾಷೆಯನ್ನು ಬರೆಯಲು ಈ ಲಿಪಿಯನ್ನು ಬಳಸುತ್ತಿದ್ದರು ಎಂಬುದಕ್ಕೆ ಪ್ರಾಚೀನ ತುಳು ಭಾಷೆಯಲ್ಲಿರುವ ‘ತುಳುಭಾಗವತೋ’ ‘ತುಳು ಮಹಾಭಾರತ’ ‘ತುಳುರಾಮಾಯಣ’ ಕಾವೇರಿ, ದೇವಿ ಮಹಾತ್ಮೆ, ಪುಣ್ಯಾಹವಿಧಿ, ವಿನಾಯಕ ಹವನ ನಿಧಿ ಮತ್ತು ಮೈದ್ಯಗ್ರಂಥ ಸಂಗ್ರಶ ತುಳು ಹಸ್ತಪ್ರತಿಗಳು ಸಂಪಾದಿಸಲ್ಪಟ್ಟು ಬೆಳಕಿಗೆ ಬಂದಿರುವುದು ನಿಜಕ್ಕೂ ಸ್ತುತ್ಯಾರ್ಹ. ಕನ್ನಡ ನಾಡಿನ ಸಾಹಿತ್ಯದ ಪರಿಕಲ್ಪನೆ ಮಾಡಿದಲ್ಲಿ ತುಳುನಾಡಿನಈ ಪ್ರಾಚೀನ ಗ್ರಂಥ ಸಾಹಿತ್ಯದ ರಚನೆಯಲ್ಲಿ ಅದರದೇ ಆದ ಮಹತ್ವವಿದೆ. ವಸ್ತು, ಭಾಷೆ, ಬರವಣಿಗೆಯ ವಿನ್ಯಾಸ, ಸೌಂದರ್ಯ ಪ್ರಜ್ಞೆ ಈ ಅಂಶಗಳು ಇಲ್ಲಿನ ಪರಿಸರ, ಪ್ರಕೃತಿ, ಜನರ ಆಸಕ್ತಿ, ಜೀವನ ಶೈಲಿ, ಸಂಸ್ಕೃತಿ ಇತ್ಯಾದಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ರೀತಿಯಲ್ಲಿ ಪ್ರಾಚೀನ ಕವಿಗಳು ತಮ್ಮ ಮಹಾಕಾವ್ಯಗಳನ್ನು ರಚಿಸಿದ್ದಾರೆ ಎಂಬುದಕ್ಕೆ ಉದಾಹರಣೆಗಳಿವೆ.

ಮಲ್ಲೆ ಮಲ್ಲಿಕ ಜಾದಿ ಕೇತಕಿ ರೆಂಜೆ ದಾಸನ ಕುಂದೊಮ

ಮಲ್ಲಿಕೇಕರ ವೀರೋಶೋಕೆಯ ನಾಗದುರ್ದುರೊಮಾರ್ಕ್ಕೊಮಾ |

ಬೆಲ್ಲ ಪತ್ರೆಯ ಅಂಬೆಲಬ್ಬಲಿಕೇಯ ನೆಯ್ಯಳ್ ವಾರಿಜೊ

ಮೆಲ್ಲ ಮೆಲ್ಲಿನೆಯಾತ್ರಿತಾ ವನೊಂಟೆಯ್ಯಾ ದೆರ್ಶಿತಳಕ್ಷಿಣೊ ||

                                                                                –ತುಳು ರಾಮಾಯಣ

ಕವಿಯು ತುಳುನಾಡಿನ ವನಗಳಲ್ಲಿಯ ವೃಕ್ಷಗಳ ಹೂಗಳ ವಿವಿಧತೆಯನ್ನು ಪ್ರಕೃತಿ ಸೌಂದರ್ಯವನ್ನು ತುಳುರಾಮಾಯಣ ಕಾವ್ಯದಲ್ಲಿ ಕವಿಯು ವರ್ಣಿಸಿದ್ದಾನೆ. ಅಂತೂ ತುಳು ಭಾಷೆ ಬರೀ ಜಾನಪದೀಯವಾಗಿ ಉಳಿದಿಲ್ಲ. ಅದಕ್ಕೊಂದು ಶಿಷ್ಟ ಕಾವ್ಯ ಪರಂಪರೆಯೇ ಇದೆ ಎಂಬುದು ಈ ತುಳು ಲಿಪಿ ಹಸ್ತಪ್ರತಿಗಳ ಸಂಪಾದನೆಯಿಂದ ಸುವಿಧಿತವಾಗಿದೆ. ಇದು ತುಳುನಾಡಿನ ಸೌಭಾಗ್ಯವೆನ್ನಬೇಕು.

(ಈ ತುಳುಲಿಯ ಬಗ್ಗೆ ನನಗೆ ಸಂಗ್ರವಾದ ಮಾಹಿತಿಯನ್ನು ನೀಡಿವರು ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ಡಾ|| ಎಸ್.ಅರ್.ವಿಘ್ನರಾಜ್)

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments