ವಿಷಯದ ವಿವರಗಳಿಗೆ ದಾಟಿರಿ

ಮೇ 31, 2014

ಆ ಅಗೋಚರ ‘ಫ್ಯಾಂಟಮ್’ ವ್ಯಕ್ತಿಗೆ ಒಂದು ಸೆಲ್ಯೂಟ್

‍ನಿಲುಮೆ ಮೂಲಕ

– ರಾಘವೇಂದ್ರ ಸುಬ್ರಹ್ಮಣ್ಯ

ರಾಮೇಶ್ವರನಾಥ್ ಖಾವ್ಹಿಂದಿಯ ‘ಡಾನ್’ ಚಿತ್ರದಲ್ಲಿ ವರದಾನ್ ಎಂಬ ಪಾತ್ರದ ಪರಿಚಯ ಮಾಡಿಕೊಡುವಾಗ ‘ಪೊಲೀಸ್ ಇಲಾಖೆಯಬಳಿ ಈತನ ಯಾವುದೇ ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಬರುತ್ತದೆ. ನಾನು ಅದನ್ನುನೋಡುವಾಗ ತಲೆಕೆಡಿಸಿಕೊಂಡಿದ್ದೆ. ಅದು ಹೇಗೆ ಒಬ್ಬ ವೃತ್ತಿನಿರತ ಅಪರಾದಿಯ ಒಂದೇ ಒಂದುಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ ಇಲ್ಲದಿರಲು ಸಾಧ್ಯ? ಹೆಸರು ಗೊತ್ತಿದ್ದಮೇಲೆ, ಒಬ್ಬ ವ್ಯಕ್ತಿಯ ಇರುವಿಕೆಯ ಬಗ್ಗೆ ಗೊತ್ತಿದ್ದ ಮೇಲೆ, ಅದು ಹೇಗೆ ಬೇರೇನೂಗೊತ್ತಿಲ್ಲದಿರಲು ಸಾಧ್ಯ!? ಅಂತೆಲ್ಲಾ ಮೈಪರಚಿಕೊಂಡಿದ್ದೆ. ಇದೇ ವಿಚಾರದಲ್ಲಿ ನೂರಾರುಲೇಖನಗಳನ್ನು ಓದಿದ ನಂತರ ಗೊತ್ತಾಗಿದ್ದೇನೆಂದರೆ, ವರದಾನ್ ಒಬ್ಬನೇ ಅಲ್ಲ, ಜಗತ್ತಿನಲ್ಲಿಇಂತಹುದೇ ವ್ಯಕ್ತಿಗಳು ಬಹಳ ಜನ ಇದ್ದಾರೆ ಎಂದು. ಅದೂ ಅಲ್ಲದೆ ವರದಾನ್ ಕಾನೂನಿನ ಆಚೆಬದಿ ಇದ್ದವ. ಆದರೆ ಕಾನೂನಿನ ಕಡೆಗೇ ಇದ್ದು ತಮ್ಮ ಬಗ್ಗೆ, ತಮ್ಮ ಖಾಸಗೀ ಜೀವನದ ಬಗ್ಗೆಅವನಷ್ಟೇ ರಹಸ್ಯವನ್ನು ಉಳಿಸಿಕೊಂಡು ಬಂದಿರುವವರು ಇದ್ದಾರೆ ಮತ್ತು ಅವರ ದೇಶಗಳಿಗೆಅಂಥವರ ಸೇವೆ ಬಹಳ ದೊಡ್ಡದು ಎಂದೂ ಕೂಡ ತಿಳಿಯಿತು.

ಇಂತವರಲೊಬ್ಬರು ನಮ್ಮ ದೇಶದಮಹಾನ್ ಗೂಡಚಾರ ತಂತ್ರಜ್ಞ ರಾಮೇಶ್ವರನಾಥ್ ಖಾವ್. ಭಾರತದ ಸರ್ಕಾರದ ಅಡಿಯಲ್ಲಿರುವಅತ್ಯಂತ ರಹಸ್ಯಮಯ ಇಲಾಖೆಯಾದ “ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗ (RAW – Research and Analysis Wing) “ದ ಸಂಸ್ಥಾಪಕ ಪಿತಾಮಹ. ಸ್ವತಃ ರಾ ಜಗತ್ತಿನ ಅತ್ಯಂತ ರಹಸ್ಯಮಯರಕ್ಷಣಾ ಇಲಾಖೆ. ಅಮೇರಿಕಾದ CIA ಬಗ್ಗೆಯಾದರೂ ಭಾರತದ ಜನಕ್ಕೆ ಗೊತ್ತಿದೆಯೇನೋ, ಆದರೆ ರಾಬಗ್ಗೆ ವ್ಯಾಪಕವಾಗಿ ತಿಳಿದಿರಲಿಕ್ಕಿಲ್ಲ, ಇತ್ತೀಚೆಗೆ ಸಲ್ಮಾನನ ‘ಏಕ್ ಥಾ ಟೈಗರ್’ ಚಿತ್ರನೋಡುವವರೆಗೂಎಷ್ಟೋ ಬಾರಿ ಸರ್ಕಾರಗಳು ‘ರಾ’ದ ಇರುವಿಕೆಯ ಬಗ್ಗೆಯೇ ಸ್ಪಷ್ಟಿಕರಣ ನೀಡಿರಲಿಲ್ಲ. ಅದರರಚನೆಯೇ ಹಾಗಿದೆ ಬಿಡಿ. ‘ರಾ’ದ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.

ಮೊದಲೇ ಹೇಳಿದಂತೆ ‘ರಾ’ ಅಷ್ಟೊಂದು ರಹಸ್ಯಮಯವಾಗಿದ್ದಮೇಲೆ, ಅದರ ಸಂಸ್ಥಾಪಕ ಕತೆಯೇನೂಬೇರೆಯಲ್ಲ. ಶತ್ರು ರಾಷ್ಟ್ರಗಳಿಗೆ ಮತ್ತವುಗಳ ಗೂಡಚಾರ ಇಲಾಖೆಗೆ ‘ರಾ’ದ ಮುಖ್ಯಸ್ಥ ಯಾರುಮತ್ತವ ನೋಡಲು ಹೇಗಿದ್ದಾನೆ ಎಂಬುದೂ ಬಹಳ ಕಾಲ ತಿಳಿದಿರಲಿಲ್ಲ. 1918ರಲ್ಲಿವಾರಣಾಸಿಯಲ್ಲಿ ಜನಿಸಿದ ಖಾವ್, ಶ್ರೀನಗರದಿಂದ ವಲಸೆಬಂದ ಕಶ್ಮೀರಿ ಪಂಡಿತರ ಕುಟುಂಬದವರು.ಇವರ ತಂದೆತಾಯಿಗಳ ಬಗ್ಗೆ ಯಾವ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಖಾವ್ ಅವರನ್ನುಬೆಳೆಸಿದ್ದು ಅವರ ಮಾವ ಪಂಡಿತ್ ತ್ರಿಲೋಕಿ ನಾಥ್ ಖಾವ್. ತನ್ನ ಮಾವನವರ ಪ್ರೋತ್ಸಾಹಮತ್ತು ಸಹಾಯದಿಂದ ಒಳ್ಳೆಯ ಹಾಗೂ ಅತ್ಯುನ್ನತ ವಿದ್ಯಾಭ್ಯಾಸ ಪಡೆದ ಖಾವ್, 1940ರಲ್ಲಿ ‘ಗುಪ್ತಚರ ದಳ (I.B – Intelligence Bueareu)’ ದಲ್ಲಿ ಪೊಲೀಸ್ ಸಹಾಯಕಸೂಪರಿಂಟೆಂಡೆಂಟ್ ಆಗಿ ನಿಯುಕ್ತಿಗೊಂಡರು. ಸ್ವಾತಂತ್ರಾನಂತರ ನೆಹರೂರವರ ರಕ್ಷಣಾದಳದಮುಖ್ಯಸ್ಥನಾಗಿ ನಿಯೋಜಿತರಾಗಿ, ಆನಂತರ ಒಂದರ ಮೇಲೊಂದು ರೋಚಕ ಮೆಟ್ಟಿಲುಗಳನ್ನೇರುತ್ತಾಹೋದರು.

‘ಕಶ್ಮೀರ್ ಪ್ರಿನ್ಸೆಸ್’ ಸ್ಪೋಟ ತನಿಖೆ, 1965ರ ಇಂಡೋ ಪಾಕ್ ಯುದ್ದ, ‘ರಾ’ ನಿರ್ಮಾಣ ಮತ್ತು ನಿರ್ವಹಣೆ, ಬಾಂಗ್ಲಾದೇಶ ಸ್ವತಂತ್ರ ಯುದ್ದ, ಭಾರತ ಗಣರಾಜ್ಯಕ್ಕೆಸಿಕ್ಕಿಂ ಸೇರ್ಪಡೆ, ಮೊತ್ತಮೊದಲ ಪೋಖ್ರಾನ್ ಅಣು ಸ್ಪೋಟ, ಖಲಿಸ್ತಾನ್ ಚಳುವಳಿಯನ್ನುಹದ್ದುಬಸ್ತಿನಲ್ಲಿಡಲು ರಾಷ್ಟ್ರೀಯ ಭದ್ರತಾ ಗಣದ ಸ್ಥಾಪನೆ, ಹೀಗೆ ದೇಶದ ಆಂತರಿಕಭದ್ರತೆಗೆ ಮತ್ತು ಗೂಡಾಚಾರ ಜಾಲಕ್ಕೆ ಅವರ ಕೊಡುಗೆ ಅಪಾರ. ಬಾಂಗ್ಲಾ ಯುದ್ದ ಹಾಗೂಸಿಕ್ಕಿಂ ಸೇರ್ಪಡೆಯಲ್ಲಂತೂ ಅವರ ಪಾತ್ರ ಗಣನೀಯ. ನೆಹರೂ, ಮತ್ತು ಇಂದಿರಾರಿಗೆಹತ್ತಿರವಾಗಿದ್ದರೆಂಬ ಕಾರಣಕ್ಕೆ ಅವರನ್ನು ವಿಪಕ್ಷಗಳು ಸದಾ ಗುಮಾನಿಯಿಂದಲೇನೋಡುತ್ತಿದ್ದವು. ತುರ್ತುಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅಧಿಕಾರಕ್ಕೆ ಬಂದಾಗತನಗೆ ಒದಗಲಿರುವ ಅಪಾಯವನ್ನು ಮನಗಂಡ ಖಾವ್ ಸದ್ದಿಲ್ಲದೇ ರಾಜೀನಾಮೆ ನೀಡಿ ನೇಪಥ್ಯಕ್ಕೆಸರಿದರು. ಮೊರಾರ್ಜಿ ಸರ್ಕಾರ ಅವರೆನ್ನೇನೂ ಸುಮ್ಮನೆ ಬಿಡಲಿಲ್ಲ. ಸತತ 223 ದಿನಗಳ ತನಿಖೆನಡೆಸಿತು. ಕೊನೆಗೂ ಅವರ ವಿರುದ್ದ ಯಾವುದೇ ಆರೋಪ ಸಾಬೀತಾಗಲಿಲ್ಲ. ಮುಂದೆ ಮತ್ತೊಮ್ಮೆಇಂದಿರಾ ಆಯ್ಕೆಯಾದಾಗ, ಖಾವ್ ಅವರನ್ನು ಸೇವೆಗೆ ಮರುನೇಮಕ ಮಾಡಲಾಯಿತು ಹಾಗೂ ಖಾವ್ ‘ವಾಯುಸಂಶೋಧನಾ ಕೇಂದ್ರ (ARC – Aviation Research Center)’ ಮತ್ತು ‘ರೇಡಿಯೋಸಂಶೋಧನಾ ಕೇಂದ್ರ (RRC – Radio Research Center)’ ಗಳನ್ನು ಸೇರಿಸುವುದರ ಮೂಲಕಗೂಡಚಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸುತ್ತಲೇ ಹೋದರು.

ಎಂದಿಗೂ ಸಾರ್ವಜನಿಕಜೀವನದಲ್ಲಿ ಕಾಣಿಸಿಕೊಳ್ಳದ ಖಾವ್, ಒಬ್ಬ ನಾಚಿಕೆ ಸ್ವಭಾವದ, ವಿನಮ್ರವ್ಯಕ್ತಿಯಾಗಿದ್ದರು. ತನ್ನ ಸ್ನೇಹಿತರ ವಲಯದಲ್ಲಿ ‘ರಾಮ್-ಜೀ’ ಎಂದು ಗುರುತಿಸಲ್ಪಡುವಖಾವ್ ಬಹಳ ಖಾಸಗೀ ಮನುಷ್ಯ. ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಬದುಕಿದ ಖಾವ್ 70ರದಶಕದಲ್ಲಿ ಜಗತ್ತಿನ ಐದು ಮಂದಿ ಅತ್ಯಂತ ಉನ್ನತ ಗೂಡಾಚಾರ ಸಂಸ್ಥೆಯ ಮುಖ್ಯಸ್ಥರೆಂದುಹೆಸರು ಪಡೆದವರು. ಎಂದಿಗೂ ಭ್ರಷ್ಟಚಾರ ಮಾಡದ, ಮೃದು ಸ್ವಭಾವದ ಆದರೆ ಅಷ್ಟೇ ಕಠೋರವೃತ್ತಿಪರನಾದ, ಸ್ಪುರದ್ರೂಪಿಯಾದ ಖಾವ್ ಬಹಳಷ್ಟು ಭಾರತೀಯ ಚಲನಚಿತ್ರಗಳಲ್ಲಿ ಕಂಡುಬರುವ ‘ರಹಸ್ಯ ಏಜೆಂಟರುಗಳ ಬಾಸ್ ಅಥವಾ ಚೀಫ್’ ಪಾತ್ರಕ್ಕೆ ಸ್ಪೂರ್ತಿ. ಸದಾ ಗರಿಯಾದ ಸೂಟು, ದಪ್ಪ ಫ್ರೇಮಿನ ಕನ್ನಡಕ ಧರಿಸಿರುತ್ತಿದ್ದ ಖಾವ್ ತಮ್ಮ ಕರಾರುವಕ್ಕಾದ ಮಾಹಿತಿ ಮತ್ತುನಿರ್ದೇಶನಕ್ಕೆ ಗೌರವಿಸಲ್ಪಟ್ಟವರು. (ಈಗ ಗೊತ್ತಾಯ್ತಾ, ಏಜೆಂಟ್ 000 ಚಿತ್ರಗಳಲ್ಲಿಡಾ.ರಾಜ್ ಅವರ ಚೀಫ್ ಅಥವಾ ‘ಫರ್ಜ್(1967)’ ‘ಆಂಖೇ (1968)’ ಚಿತ್ರಗಳಲ್ಲಿ ಜಿತೇಂದ್ರಮತ್ತು ಧರ್ಮೇಂದ್ರ ಅವರ ಬಾಸ್ ಪಾತ್ರಗಳು ಯಾಕೆ ಹಾಗೆ ಇದ್ವೂ ಅಂಥಾ? ) 1989ರ ನಿವೃತ್ತಿಯ ನಂತರ ದೆಹಲಿಯ ಜಹಾಂಗೀರ್ ರಸ್ತೆಯ ಅತೀವ ಸುರಕ್ಷತೆಯಬಂಗಲೆಯಲ್ಲಿ ತಮ್ಮ ಖಾಸಗೀ ಜೀವನವನ್ನು ಖಾಸಗಿಯಾಗಿಯೇ ಕಳೆದ ಖಾವ್ ತಮ್ಮ ವೃತ್ತಿಪರತೆಯಕಾರಣದಿಂದ ಎಂದೂ ಯಾರಿಗೂ ಸಂದರ್ಶನಗಳನ್ನು ಕೊಡಲೇ ಇಲ್ಲ.

ಇವತ್ತು ಯಾವುದೋ ಒಂದುಕ್ರಿಕೆಟ್ ಮ್ಯಾಚಿನ ಫಿಕ್ಸಿಂಗಿನ ವಿಷಯ ತಿಳಿದಕೂಡಲೇ ‘ಮಿ.X’ ಎಂದುಹೆಸರಿಟ್ಟುಕೊಂಡು ಸುದ್ದಿವಾಹಿನಿಗಳಿಗೆ ಸಂದರ್ಶನ ಕೊಟ್ಟೋ, ಪುಸ್ತಕಬರೆದೋಹೆಸರುವಾಸಿಯಾಗುವ ಅಥವಾ ನಿವೃತ್ತಿಯ ನಂತರ ಪುಸ್ತಕ ಬರೆದು ಇನ್ಯಾರದೋ ಮರ್ಯಾದೆ ತೆಗೆಯುವ (ಸಂಜಯ್ ಬಾರು ಬಗ್ಗೆ ಹೇಳ್ತಾ ಇಲ್ಲ ನಾನು ) ಕ್ಷುಲ್ಲಕ ಪ್ರಾಣಿಗಳಿಗೆ ಒಮ್ಮೆ ಹೋಲಿಸಿ ನೋಡಿ!! ಇಂಗ್ಳೀಷಿನಲ್ಲಿ ಹೇಳುವ ಹಾಗೆ ‘He knew too much to make a public statement or to write a book’. ಅವರ ಒಂದುಸಾರ್ವಜನಿಕ ಹೇಳಿಕೆ ಅಥವಾ ಒಂದು ಪುಸ್ತಕ, ದೇಶದ ಬಗ್ಗೆ ಮತ್ತು ಅದರ ನಾಯಕರ ಬಗ್ಗೆ ನಮ್ಮನಿಮ್ಮೆಲ್ಲರ ನಂಬಿಕೆಗಳನ್ನು ಭಯಂಕರವಾಗಿ ಅಲುಗಾಡಿಸಬಲ್ಲಂತದು. ತನ್ನ ಒಡಲಿನಲ್ಲಿ ಅಂಥಾಅದೆಷ್ಟು ರಹಸ್ಯಗಳನ್ನು ಇಟ್ಟುಕೊಂಡಿತ್ತೋ ಆ ಜೀವ!?

ಬದಲಿಗೆ ತನ್ನ ಕಶ್ಮೀರಿನಂಟಿನ ಬಗ್ಗೆ ಯೋಚಿಸಿದ ಖಾವ್, ನಿವೃತ್ತಿಯ ದಿನಗಳಲ್ಲಿ ಕಶ್ಮೀರಿ ಪಂಡಿತರ ಮಾರಣಹೋಮದಬಗ್ಗೆ, ಅವರ ಘನತೆ ಹಾಗೂ ಗೌರವವನ್ನು ಮರಳಿಸುವ ಬಗ್ಗೆ, ಅವರ ಉಳಿವಿನ ಬಗ್ಗೆ ಸದ್ದುಮಾಡದೇ ಯಾವುದೇ ಪಕ್ಷ ಸೇರದೇ ಹೋರಾಡಿದರು. ಸರ್ಕಾರದ ಎಲ್ಲಾ ನಾಯಕರುಗಳೊಂದಿಗೆ ಸದಾಮಾತನಾಡುತ್ತಾ, ಕಶ್ಮೀರಿ ಪಂಡಿತರ ಮಾರಣಹೋಮದ ವಿಚಾರವನ್ನು ಜೀವಂತವಾಗಿಟ್ಟರು.

ಮೊನ್ನೆ ಮೇ 10ಕ್ಕೆ ಖಾವ್ ಅವರ 96ನೇ ಜನ್ಮದಿನ. ಭಾರತದ ಆಂತರಿಕ ಭದ್ರತೆಗೆ, ಇಂದುನಾವೆಲ್ಲಾ ಸುರಕ್ಷಿತವಾಗಿರುವುದಕ್ಕೆ ‘ರಾ’ದ ಕೊಡುಗೆ ಅಪಾರ, ‘ರಾ’ಗೆ ಅದರ ಇರುವಿಕೆಗೆಖಾವ್ ಅವರ ಕೊಡುಗೆ ಅಪಾರ. ತಾವು ಸ್ವತಃ ಜೀವನದಲ್ಲಿ ಕೇವಲ ಎರಡೇ ಎರಡು ಬಾರಿಫೋಟೊಗಳಲ್ಲಿ ಕಾಣಿಸಿಕೊಂಡರೂ, ನಮ್ಮ ನಿಮ್ಮ ಚಿತ್ರಗಳು, ನಮ್ಮ ಮಧುರಕ್ಷಣಗಳನ್ನುಹೊಸಕಿಹಾಕಲು ಸದಾ ಹೊಂಚು ಕಾಯುತ್ತಿರುವ ಶತ್ರುದೇಶಗಳ ಪ್ರಯತ್ನದ ವಿರುದ್ದ ಬಲಿಷ್ಟವಾದಗೋಡೆಯೊಂದನ್ನು ಕಟ್ಟಿದರು. ಈ ಅಗೋಚರ ‘ಫ್ಯಾಂಟಮ್’ ವ್ಯಕ್ತಿಗೆ ಒಂದು ಸೆಲ್ಯೂಟ್.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments