ವಿಷಯದ ವಿವರಗಳಿಗೆ ದಾಟಿರಿ

ಜೂನ್ 2, 2014

1

ಸಾಹಿತ್ಯ ಮತ್ತು ವಿಮರ್ಶೆ

‍ನಿಲುಮೆ ಮೂಲಕ

– ಮು ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯನಾನು ಈ ಲೇಖನ ಬರೆಯುತ್ತಿರುವ ಇವತ್ತಿನ ತನಕ  (೨೯ ಮೇ ೨೦೧೪)  ಡಾ. ಶ್ರೀಪಾದ ಭಟ್ ಅವರ ‘ಸಾಹಿತ್ಯ ಕ್ಷೇತ್ರದ ಒಳ ಹೊರಗು’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಲೇಖನಗಳು  ‘ನಿಲುಮೆ”ಯಲ್ಲಿ  ಪ್ರಕಟವಾಗಿದೆ. (೨೭/೩/೨೦೧೪, ೧೨/೪ ಮತ್ತು ೨೪/೪). ಅವರ ಈ ಲೇಖನಗಳ ಬಗ್ಗೆ ‘ನಿಲುಮೆ’ಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನಾನೂ ಸಹ ಆ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳ ಮುಂದುವರಿದ ಭಾಗವಾಗಿ ಈ ಲೇಖನ ಬರೆದಿದ್ದೇನೆ. ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ/ವಿಮರ್ಶಕರ ನಡುವೆ ಅಂತಹ ಸೌಹಾರ್ದಯುತ ಸಂಬಂಧವೇನೂ ಇಲ್ಲ. ಇವೆರಡರ ನಡುವೆ ಇರುವ ಅಷ್ಟಿಷ್ಟು ನಂಟನ್ನು ಆಗಾಗ ಕಗ್ಗಂಟಾಗಿಸುವ ಸನ್ನಿವೇಶವನ್ನು ‘ಶೀತಲ ಸಮರ’, ಮುಸುಕಿನೊಳಗಿನ ಗುದ್ದಾಟ’ ಅಥವಾ ‘ಬೂದಿ ಮುಚ್ಚಿದ ಕೆಂಡ’  ಇಂತಹ ವಿಶೇಷಣಗಳಿಂದ ವಿವರಿಸಬಹುದು. ಕಾಲಾನುಕಾಲಕ್ಕೆ ವಿಮರ್ಶೆಯ ಪರಿಭಾಷೆಗಳು (=ಲಕ್ಷಣ; ನಿರೂಪಣೆ) ಬದಲಾಗುತ್ತಾ ಬಂದಿವೆ. ವಿಮರ್ಶೆಯೆಂದರೆ ಏನು? ಎಂಬ ಮೂಲಭೂತ ಪ್ರಶ್ನೆಯಿಂದ ಹಿಡಿದು ,ವಿಮರ್ಶೆಯೆಂದರೆ (ಮತ್ತು  ಆ ಮೂಲಕ ಪರೋಕ್ಷವಾಗಿ ಸಾಹಿತ್ಯವೆಂದರೆ)  ‘ಹೀಗೆ ಇರತಕ್ಕದ್ದು’ ಎಂದು ವ್ಯಾಖ್ಯಾನಿಸುವ ಅತ್ಯುತ್ಸಾಹದ, ಆತುರದ ಮಾತುಗಳೂ ಬಂದು ಹೋಗಿವೆ.

ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯಲ್ಲಿ ಒಂದೆರೆಡು ಲೈಂಗಿಕ ಪ್ರಸಂಗಗಳನ್ನು ವಿವರವಾಗಿ ವರ್ಣಿಸಿದಾಗ ‘ಪುಟ್ಟಪ್ಪನವರಿಗೆ ಈ ವಯಸ್ಸಿನಲ್ಲಿ ಈ ಚಪಲವೇಕೆ?’ ಎಂದು ಅಂದಿನ ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು. ನವ್ಯಕಾವ್ಯ/ಸಾಹಿತ್ಯ ಬಂದಾಗ ಅದರಲ್ಲಿ  ಕೆಲವೊಮ್ಮೆ ವಾಚ್ಯವಾಗಿ  ಮತ್ತು ಕೆಲವುಬಾರಿ  ಸೂಚ್ಯವಾಗಿ ಇರುತ್ತಿದ್ದ ಲೈಂಗಿಕ ಅಂಶಗಳು ಹಾಗು  ಅದಕ್ಕೆ ಸಂಬಂಧಿಸಿದ ಪ್ರತಿಮೆ ಪ್ರತೀಕಗಳಿಂದ  ಆ  ಕಾಲದ  ಹಿರಿಯರಿಗೆ ಇರುಸು ಮುರುಸು ಆಗಿದ್ದುಂಟು. ಗೋಪಾಲಕೃಷ್ಣ ಅಡಿಗರ ‘ಪ್ರಾರ್ಥನೆ’ ಕವನ ಪ್ರಕಟವಾದಾಗ (ಬಹುಶಃ ಪ್ರಜಾವಾಣಿ ಪತ್ರಿಕೆಯಲ್ಲಿರಬಹುದು)  ಅದನ್ನು ಓದಿದ ಡಿ ವಿ ಜಿ ಅವರು ಬಹಳ ಸಿಟ್ಟಾಗಿ ಇಂತಹ ಬರವಣಿಗೆಯನ್ನು ಬ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರಂತೆ. ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಅಡಿಗರಿಗೆ ‘ನಿಮ್ಮ ಮೇಲೆ ಇಂಥದ್ದೊಂದು ದೂರು ಬಂದಿದೆ. ಇದಕ್ಕೇನು ಉತ್ತರ’ ಎಂದು ಕೇಳಿ ಪತ್ರ ಬರೆದಿದ್ದರಂತೆ. (ವಿವರಗಳಿಗೆ ನೋಡಿ ಯು ಆರ್ ಅನಂತಮೂರ್ತಿ ಅವರ ‘ಸುರಗಿ’ ಪುಟ  ೧೨೪ ಪ್ರಥಮ ಮುದ್ರಣ ೨೦೧೨ ಪ್ರಕಾಶಕರು–ಅಕ್ಷರ ಪ್ರಕಾಶನ  ಹೆಗ್ಗೋಡು  ಸಾಗರ)  ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ರೀತಿಯಲ್ಲಿ ಸಾಹಿತ್ಯ ರಚಿಸ ಬೇಕೆಂದು ಬಂದ  ಪ್ರಗತಿಶೀಲ ಸಾಹಿತ್ಯದ ಬಗ್ಗೆ ಮಾತನಾಡುತ್ತಾ  ಡಾ. ಎಚ್ ತಿಪ್ಪೇರುದ್ರಸ್ವಾಮಿ ಅವರು  ತಮ್ಮ “ಕವಲುದಾರಿಯಲ್ಲಿ ಕನ್ನಡ ವಿಮರ್ಶೆ”  (ಪ್ರಕಾಶಕರು: ಪ್ರಸಾರಾಂಗ  ಬೆಂಗಳೂರು ವಿ ವಿ  ಬೆಂಗಳೂರು  ೫೬) ಎಂಬ ಕೃತಿಯಲ್ಲಿ  ಹೇಳಿದ ಒಂದು ಮಾತು ಗಮನಾರ್ಹವಾಗಿದೆ. ‘ಅನಕೃ’ ಮತ್ತು ಇತರ ಪ್ರಗತಿಶೀಲ ಸಾಹಿತಿಗಳು ‘ವೇಶ್ಯಾ ಸಮಸ್ಯೆಯನ್ನು ಚಿತ್ರಿಸಲು ಹೊರಟು ವೇಶ್ಯಾವಾಟಿಕೆಗಳ ಚಿತ್ರಣಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡರು ‘. ಇಂತಹ ಸಾಹಿತ್ಯವನ್ನು ಓದಿದಾಗ ಆಗುವ “ಆ ಕ್ಷಣದ” ಆಕರ್ಷಣೆ ಬಿಟ್ಟು ಬೇರೆ  ಆಯಾಮಗಳನ್ನು ಅವು ನೀಡಲಾಗಲಿಲ್ಲ.  ಪ್ರಗತಿಶೀಲರು ಕೇವಲ ವೇಶ್ಯಾ ಸಮಸ್ಯೆಯನ್ನು ಮಾತ್ರ ಚಿತ್ರಿಸಿದರು ಎಂದು ಇದರ ಅರ್ಥವಲ್ಲ. ಅವರು ಯಾವುದೇ ಒಂದು ಸಮಸ್ಯೆಯನ್ನು ಪರಿಭಾವಿಸಿದ ರೀತಿಗೆ ಇದು ಒಂದು ಉದಾಹರಣೆ ಅಷ್ಟೇ. ಅಂತಹ  ಸನ್ನಿವೇಶದಲ್ಲೂ  ನಾಲ್ಕಾರು ಗಟ್ಟಿ ಕೃತಿಗಳು ಪ್ರಗತಿಶೀಲರಿಂದ ಬಂದಿತು. ಅದೇ  ಸಮಾಧಾನಪಟ್ಟುಕೊಳ್ಳಬಹುದಾದ ವಿಷಯ.

                                                                                                                                                 ——೨——

ಸಾಹಿತ್ಯವಲಯದಲ್ಲಿ  ಇರುವ ವಿಮರ್ಶೆ/ವಿಮರ್ಶಕರ ಬಗೆಗಿನ ವಿರೋಧಕ್ಕೆ ಎರಡು ಕಾರಣಗಳನ್ನು ಪ್ರಧಾನವಾಗಿ ಗುರುತಿಸಬಹುದು.  (೧) ವೈಯಕ್ತಿಕ  (೨) ತಾತ್ವಿಕ. ವೈಯಕ್ತಿಕ ವಿರೋಧಕ್ಕೆ ಕಾರಣ ತುಂಬಾ ಸರಳವಾದದ್ದು.  ನಮ್ಮ ಕೆಲಸವನ್ನು/ಕೃತಿಯನ್ನು ವಿಮರ್ಶಕರು ಗಮನಿಸುತ್ತಿಲ್ಲ. ಅದಕ್ಕೆ  ಸಾಕಷ್ಟು ಪ್ರಚಾರ/ಪ್ರೋತ್ಸಾಹ ವಿಮರ್ಶಕವಲಯದಿಂದ ದೊರಕುತ್ತಿಲ್ಲ. ” ನಮ್ಮ ದೃಷ್ಟಿಯಲ್ಲಿ” ನಾವು ಯಾರನ್ನು ಉಪೇಕ್ಷಿಸಿರುತ್ತೆವೆಯೋ ಅಂತಹವರಿಗೆ ಪ್ರಚಾರ ಸಿಗುತ್ತಿದೆ : ಅವರು ಪತ್ರಿಕೆಗಳಲ್ಲಿ, ಸೆಮಿನಾರುಗಳಲ್ಲಿ. ಸಮಿತಿಗಳಲ್ಲಿ ಮಿಂಚುತ್ತಿದ್ದಾರೆ ಇತ್ಯಾದಿ. ಈ syndrome ಗೆ ಮದ್ದಿಲ್ಲ. ಇದರ ಬಗ್ಗೆ ಚರ್ಚೆ ಬೇಕಾಗಿಲ್ಲ.  ತಾತ್ವಿಕ ವಿರೋಧ ಸ್ವಲ್ಪ ಜಟಿಲವಾಗಿದ್ದು  ಅದನ್ನು ಚರ್ಚಿಸಬಹುದಾಗಿದೆ. ನವೋದಯ ಸಾಹಿತ್ಯದ ತಂತ್ರ ಮತ್ತು ಭಾಷೆಯು ಅಭಿವ್ಯಕ್ತಿಯ ತನ್ನ ಎಲ್ಲಾ ಸಾಧ್ಯತೆಗಳನ್ನೂ ಮುಗಿಸಿದೆ ; ಬದಲಾದ ಕಾಲದ ಪರಿಸ್ಥಿತಿಯ ಹೊಸ ಸಂವೇದನೆಗಳ ( “ಅನುಭದ ಅನಂತಕೋಶಗಳ ಶೋಧನೆ ” –ಇದು ಗೋಪಾಲಕೃಷ್ಣ ಅಡಿಗರ ಪ್ರಸಿದ್ಧವಾಗಿದ್ದ ಮಾತು . ನಂತರದಲ್ಲಿ ಈ ಮಾತೇ ಅಡಿಗರು  ಮತ್ತು ನವ್ಯ ಕಾವ್ಯ/ಸಾಹಿತ್ಯವನ್ನು ಟೀಕಿಸಲು  ವ್ಯಂಗ್ಯವಾಗಿ ಉಪಯೊಗವಾಗಿಸಲ್ಪಟ್ಟಿತು)   ,ಹೊಸ ಸವಾಲುಗಳ ಅಭಿವ್ಯಕ್ತಿಗೆ ಭಾಷೆಯ ಬಳಕೆಯಲ್ಲಿ  ಹೊಸತನ ತರಬೇಕು . ಭಾಷೆಯ  ಮತ್ತು ತಂತ್ರದ ನಾನಾ ಸಾಧ್ಯತೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕಾದ ಅವಶ್ಯಕತೆಯಿದೆಯೆಂದು ಬಂದ ನವ್ಯ ಸಾಹಿತ್ಯ,ಕೆಲ ಕಾಲದ ನಂತರ ಒಂದೇ ಕೇಂದ್ರದ ಸುತ್ತ ಸುತ್ತುತ್ತಾ (= ವ್ಯಕ್ತಿ ಕೇಂದ್ರಿತ),ಇನ್ನು ಹೊಸತೇನೂ ಅದರಿಂದ ಸಾಧ್ಯವಿಲ್ಲವೆಂದು ಮತ್ತು ನವ್ಯ ಸಾಹಿತ್ಯ/ಕಾವ್ಯ ಜನರಿಂದ ದೂರವಾಗುತ್ತಿದೆಯೆಂಬ ಕಾರಣದಿಂದ ಸಮೂಹವನ್ನು ಒಳಗೊಳ್ಳುವ ಸಾಹಿತ್ಯ ಸದ್ಯದ ಅವಶ್ಯಕತೆಯೆಂದು ಹುಟ್ಟಿದ ಬಂಡಾಯ ಸಾಹಿತ್ಯ ,ದಲಿತ ಸಾಹಿತ್ಯ ಇವೆಲ್ಲದರ ಹಿಂದೆ ತಾತ್ವಿಕ ಕಾರಣಗಳು ಇದ್ದವು. ಕಾಲ ಬದಲಾದಂತೆ ಸಾಹಿತ್ಯದ Form (ರೂಪ) ಪಕ್ಕಕ್ಕೆ ಸರಿದು ಹೊಸ ಹೊಸ ವಾದಗಳು ಹುಟ್ಟಿಕೊಂಡವು. ವಸಾಹತುಶಾಹಿ, ವಸಾಹತುಪೂರ್ವ,ಆಧುನಿಕೋತ್ತರ,ಪುರೋಹಿತಶಾಹಿ,ಪ್ರಗತಿಗಾಮಿ,ಪ್ರತಿಗಾಮಿ,ಸ್ತ್ರೀವಾದಿ  ,ಮಾರ್ಕ್ಸವಾದದ ನೆಲೆಗಳಿಂದ ಸಾಹಿತ್ಯದ ಮೌಲ್ಯಮಾಪನ ಪ್ರಾರಂಭವಾಯಿತು. ಸಾಹಿತ್ಯವನ್ನು ಈ ವಾದಗಳ ನೆಲೆಯಿಂದ ನೋಡುವ ಪ್ರವೃತ್ತಿ ಪ್ರಾರಂಭವಾದ ಮೇಲೆ ಇದರ ಮುಖಂಡರು ಇನ್ನೊಂದು ಅತಿಗೆ ವಿಮರ್ಶೆಯನ್ನು ತಂದು ನಿಲ್ಲಿಸಿದರು. ತಮ್ಮ  ಸಾಹಿತ್ಯಿಕ ವಾದಗಳು ಹೇಳಿರುವ ರೀತಿಯಲ್ಲಿದ್ದರೆ ಮಾತ್ರ ಅಂತಹ ಸಾಹಿತ್ಯ ಚರ್ಚೆಗೆ,ವಿಮರ್ಶೆಗೆ ಯೋಗ್ಯವಾದದ್ದು. ಇಲ್ಲದಿದ್ದರೆ ಅವೆಲ್ಲಾ ಬೂರ್ಜ್ವಾ! ಇದು ಎದುರಿಗೆ ಇರುವವರ ತಲೆ ಮೇಲೆ ಕೈ ಇಟ್ಟರೆ ಅವರು ಉರಿದು ಭಸ್ಮವಾಗುವ  ಪುರಾಣದ ಭಸ್ಮಾಸುರನ ಕಥೆಯಂತೆ ಆಗುತ್ತಾ ಬಂತು.  ಆದರೆ ಇಂತಹ ‘ಅತಿಗಳು’ ಈಗ  ಮೊದಲಿನ ಕಾವು ಕಳೆದುಕೊಂಡಿದ್ದರೂ ಆಗಾಗ ಹೊಗೆಯಾಡುತ್ತಿರುತ್ತವೆ .

—-೩—-

ಡಾ. ಶ್ರೀಪಾದ ಭಟ್ ಅವರು ‘ನಿಲುಮೆ’ಯಲ್ಲಿ ೧೨-೪-೨೦೧೪ ರಂದು  ಪ್ರಕಟವಾದ ತಮ್ಮ  ‘ಸಾಹಿತ್ಯ ಕ್ಷೇತ್ರದ ಒಳ ಹೊರಗು ‘ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ‘ನನಗೆ ವಿಮರ್ಶಕರ ಬಗ್ಗೆ ಅಷ್ಟೇನೂ ಒಲವಿಲ್ಲ . ಆದರೆ ವಿಮರ್ಶೆಯ ಬಗ್ಗೆ ಒಲವಿದೆ . ಅದನ್ನು ಹೇಳಿದ್ದೇನೆ. ………. ನಮ್ಮ ವಿಮರ್ಶಕರು ಬೆಳೆಸಿದ  ಮಾರ್ಗ  ಕುರಿತು ನನ್ನ ತಕರಾರು ಇರುವುದು’  ಎಂದಿದ್ದಾರೆ. ನವೋದಯ ಸಾಹಿತ್ಯದಿಂದ  ಇಲ್ಲಿಯವರೆಗಿನ ಕನ್ನಡ ಸಾಹಿತ್ಯದ report card ನಮ್ಮ ಮುಂದಿದೆ. ಬಿ ಎಂ ಶ್ರೀ ಅವರಿಂದ ಪ್ರಾರಂಭಿಸಿ ಇಲ್ಲಿಯ ತನಕದ ಸುಮಾರು ಒಂದು ನೂರು ವರ್ಷಗಳ ಹೊಸಗನ್ನಡದ ಸಾಹಿತ್ಯ ಮತ್ತು ವಿಮರ್ಶೆಯ ನಾನಾ ಹಂತಗಳಲ್ಲಿ  ನಾವು ಸಾಗಿಬಂದ ಹಾದಿಯಲ್ಲಿ ಕೆಲವೊಮ್ಮೆ ದಾರಿ ತಪ್ಪಿರಬಹುದು. ಕಾಡ ಮೂಲಕವೆ ಪಥ ಆಗಸಕ್ಕೆ (ಭೂಮಿಗೀತ –ಗೋ ಕೃ ಅಡಿಗ)  ಕಾಡಿನ ಪಯಣದಲ್ಲಿ ಮುಂದಿನ ಹಾದಿ ಒಮ್ಮೊಮ್ಮೆ ಕಾಣದಂತಾಗುವುದು ಸಹಜ. ಕಾಲಾನುಕ್ರಮದಲ್ಲಿ ಸಾಹಿತ್ಯ/ವಿಮರ್ಶೆಯ ಓದನ್ನು ಕುರಿತ ನಮ್ಮ ಮಾನದಂಡಗಳು ಬದಲಾಗುತ್ತಿರುತ್ತವೆ. ಅದು ಸಹಜ ಪ್ರಕ್ರಿಯೆ. ಆದ್ದರಿಂದ  ಸಾಹಿತ್ಯ/ವಿಮರ್ಶೆಯ ಚರ್ಚೆಯಲ್ಲಿ  ಹೊಸದನ್ನು ಸಾರಾಸಗಟಾಗಿ ಇದು ಸರಿಯಿಲ್ಲ ;ಹಿಂದಿನದೇ ಚೆನ್ನಾಗಿತ್ತು/ಸರಿಯಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ. ಓದುಗರು ಮತ್ತು ಕೆಲವೊಮ್ಮೆ ಸಾಹಿತಿಗಳೂ ಸಹ ವಿಮರ್ಶಕರ “ಗುಂಪುಗಾರಿಕೆ”, “conspiracy” ಬಗ್ಗೆ ಆಗಾಗ್ಗೆ ಲೇಖನಗಳನ್ನು ಬರೆಯುವುದು,ಸಭೆ,ಸಮಾರಂಭಗಳಲ್ಲಿ ಮಾತನಾಡುವುದುಂಟು. ಈ ಆಪಾದನೆಯಿಂದ ವಿಮರ್ಶಕರು ಪ್ರಾಯಶಃ ಯಾವ ಕಾಲದಲ್ಲೂ ಪಾರಾಗಿಲ್ಲ/ಪಾರಾಗಲಾರರು. ಓದುಗನಲ್ಲಿ ವಿಮರ್ಶಾಪ್ರಜ್ಞೆ ಇಲ್ಲವಾದರೆ ಒಂದೋ ಅವರು ಓದಿದ್ದೆಲ್ಲವನ್ನೂ ‘ತುಂಬಾ ಚೆನ್ನಾಗಿದೆ’ ಎಂದು ಒಪ್ಪುವ, ಬೆಣ್ಣೆ ಮತ್ತು ಸುಣ್ಣಗಳ ನಡುವೆ ವ್ಯತ್ಯಾಸವನ್ನು ಅರಿಯದ ಭೋಳೆ ಸ್ವಭಾವದವರೂ, ಮುಗ್ಧರೂ ಆಗುತ್ತಾರೆ. ಅಥವಾ  ಎಲ್ಲದರಲ್ಲೂ ಹುಳುಕನ್ನೇ ಕಾಣುವ ,ಮೊಸರಿನಲ್ಲೂ ಕಲ್ಲು ಹುಡುಕುವ ಕುಸಿಪಿಸ್ಟೆಯವರೂ , ವಿಘ್ನ ಸಂತೋಷಿಗಳೂ ಆಗಬಹುದು.  ಓದುಗರಲ್ಲಿ ಅಂತರ್ಗತವಾಗಿರುವ . ವಿಮರ್ಶಾಪ್ರಜ್ನೆ   ಸಾಹಿತ್ಯದ ಸತತ ಓದಿನಿಂದ ತಾನಾಗಿಯೇ ಜಾಗೃತವಾಗಬಹುದು ಅಥವಾ ಕೆಲವೊಮ್ಮೆ ವಿಮರ್ಶೆಯ ಸಹಾಯಬೇಕಾಗಬಹುದು.  ಕಾಲ ಕಳೆದಂತೆ ಇದರಿಂದ ವಿಮರ್ಶೆಗಳಲ್ಲಿನ ವಿಪರ್ಯಾಸವನ್ನೂ ಅರಿಯುವ ಶಕ್ತಿ ಓದುಗನಿಗೆ ಬರುತ್ತದೆ. ಹೀಗಾಗಿ ವಿಮರ್ಶೆಯನ್ನು/ವಿಮರ್ಶಕರನ್ನು ಸಾಹಿತ್ಯ/ಸಾಹಿತಿ ಮತ್ತು ಓದುಗರ ನಡುವೆ ಬಂದು ಕೂರುವ ಅನಪೇಕ್ಷಿತ  ವಿಷಯ/ವ್ಯಕ್ತಿ  ಎಂದು ಉಪೇಕ್ಷೆ ಮಾಡಬಾರದು. ಹಾಗೆ ಮಾಡಿದರೆ ಓದುಗರಿಗೇ ನಷ್ಟವಾಗುತ್ತದೆ. ಮುಖಸ್ತುತಿ ಮತ್ತು ನಿಂದಾಸ್ತುತಿಗಳ ನಡುವೆ ಎಲ್ಲೋ ಒಂದುಕಡೆ ವಸ್ತುನಿಷ್ಠ ವಿಮರ್ಶೆಯ ಝರಿ ಹರಿಯುತ್ತಿರುತ್ತದೆ. ಅದರ ಜಾಡನ್ನು ಅರಸಲು ಎಲ್ಲಾ ಕಾಲದಲ್ಲೂ ಓದುಗರಿಗೇ ಸಾಧ್ಯವಾಗದೆ ಹೋಗಬಹುದು. ಆಗ ದಾರಿ ತೋರುವ ವಿಮರ್ಶಕರನ್ನು ‘ಇವರೆಲ್ಲಾ parasiteಗಳು (= ಪರೋಪಜೀವಿಗಳು) ಎಂಬಂತೆ brand ಮಾಡುವುದು ಸರಿಯಾಗಲಾರದು.

ನಿಲುಮೆಯಲ್ಲಿ ೨೭ ಮೇ ೨೦೧೪ರಂದು ಪ್ರಕಟವಾಗಿರುವ ‘ಸಾಹಿತ್ಯ ಕ್ಷೇತ್ರದ ಒಳಹೊರಗು’ ಲೇಖನದಲ್ಲಿ ಡಾ ಶ್ರೀಪಾದ ಭಟ್ ಅವರು ‘ಜನತಂತ್ರ ಬಂದ ಮೇಲೆ ಸಾಹಿತ್ಯದ ಮೂಲಕ ಸುಲಭವಾಗಿ ಜನಮನ್ನಣೆ ಪಡೆಯಬಹುದು ಎಂಬುದನ್ನು ವ್ಯವಸ್ಥೆಯಲ್ಲಿರುವವರು ಬಹುಬೇಗ ಕಂಡುಕೊಂಡರು. ಕೆಲವರ ಓಲೈಕೆಯಲ್ಲಿ ಅಥವಾ ಕೃಪಾಕಟಾಕ್ಷದಲ್ಲಿ ಹೊಸಗನ್ನಡ ಸಾಹಿತ್ಯ ಬೆಳೆಯುತ್ತಾ ಬಂತು. ಉತ್ತರ ಕರ್ನಾಟಕ ಎಂದರೆ ಬೇಂದ್ರೆ ಎನ್ನುವುದು,ದಕ್ಷಿಣ ಕರ್ನಾಟಕ ಎಂದರೆ ಕುವೆಂಪು ಎನ್ನುವುದು,ಕರಾವಳಿ ಎಂದರೆ ಕಾರಂತ ಅನ್ನುವುದು ಹೀಗೆ ಸಾಹಿತ್ಯದ ಬ್ರಾಂಡುಗಳು ತಯಾರಾದವು’  ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ವ್ಯವಸ್ಥೆಯಲ್ಲಿರುವವರು” ಎಂದರೆ ಸಾಮಾನ್ಯವಾಗಿ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು,ರಾಜಕಾರಣಿಗಳು ಎಂಬ ಅರ್ಥವಿದೆ. ಇವರುಗಳು ತಮ್ಮ ಭಾಷಣಗಳಲ್ಲಿ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಕನ್ನಡ ಸಾಹಿತಿಗಳ ಹೆಸರನ್ನು ಪ್ರಸ್ತಾಪಿಸಿ ಇಂಥವರನ್ನು ಪಡೆದ ನಮ್ಮ ಕನ್ನಡನಾಡು ಪುಣ್ಯದ ಬೀಡು ಎಂದು ಹೇಳಿ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳಬಹುದೇ ಹೊರತು ವೋಟುಗಳನ್ನಲ್ಲ. ಅದು ರಾಜಕಾರಣಿಗಳಿಗೂ ಗೊತ್ತಿದೆ. ಶ್ರೀಪಾದ ಭಟ್ ಅವರ ಮಾತುಗಳ “ಧ್ವನಿ”. “ಅಂತರ್ಯ”  ಬಹುಶಃ ಅದಲ್ಲ.. ಬೇಂದ್ರೆ,ಕುವೆಂಪು,ಮತ್ತು ಕಾರಂತರ ಹೆಸರು ಹೇಳಿಕೊಂಡು, ಅವರ ಆಶ್ರಯದಲ್ಲಿ  ಕೆಲವು  ಸಾಹಿತಿಗಳು ತಮ್ಮ ಸ್ವಾರ್ಥವನ್ನು ಸಾದಿಸಿಕೊಂಡರು  ಎನ್ನುವ ಅರ್ಥವಿರಬಹುದು. ಬೇಂದ್ರೆಯವರು ವಿ ವಿ ಯಲ್ಲಿ ಪ್ರಾಧ್ಯಾಪಕರಾಗಿದ್ದವರಲ್ಲ ಅಥವಾ ಇತರೆ  ಯಾವುದೇ ‘ಆಯಕಟ್ಟಿನ’ ಜಾಗದಲ್ಲಿದ್ದವರಲ್ಲ. ಅವರ ಹೆಸರು ಹೇಳಿಕೊಂಡು ಯಾರು  ಹೇಗೆ ಮುಂದೆ ಬಂದರೋ ತಿಳಿಯದಾಗಿದೆ. ಅವರ ಕವನ ಸಂಕಲನಗಳನ್ನು ಪ್ರಕಟಿಸಿದ ಪ್ರಕಾಶಕರಿಗೆ  ಆಗಿನ ಕಾಲದಲ್ಲಿ ಎಷ್ಟು ಲಾಭವಾಯಿತೋ ಇಲ್ಲವೋ ತಿಳಿಯದಾಗಿದೆ. ಏಕೆಂದರೆ ಈಗಿನ ಹಾಗೆ ಪುಸ್ತಕಪ್ರಕಾಶನ ಒಂದು ಉದ್ಯಮವಾಗಿ, Marketingನ ತಂತ್ರಗಳನ್ನು ಪಡೆದಿರಲ್ಲಿಲ್ಲ.   ಕಾರಂತರು ಸರ್ಕಾರಿ ಉದ್ಯೋಗವನ್ನೇ ಮಾಡಿದವರಲ್ಲ.  ವ್ಯವಸ್ಥೆಯ ಓಲೈಕೆ ಅವರ ಜಾಯಮಾನವೂ ಆಗಿರಲಿಲ್ಲ. ಶೀಘ್ರ ಕೋಪಿಗಳಾಗಿದ್ದ ಅವರ ಜತೆ  ಮಾತಾಡುವುದೇ ಕಷ್ಟದ ಕೆಲಸವಾಗಿತ್ತು. ಇನ್ನು ಓಲೈಕೆಯ ಮಾತು ದೂರವೇ ಉಳಿಯಿತು. ಇವರಿಬ್ಬರಿಗೂ  ರಾಜಕೀಯ/ಅಕಾಡೆಮೆಕ್ ವಲಯದ ವ್ಯವಸ್ಥೆಯನ್ನು ಓಲೈಸಿಕೊಂಡು ಅವರ ಕೃಪಾಕಟಾಕ್ಷದಲ್ಲಿ ತಮ್ಮ ಸಾಹಿತ್ಯವನ್ನು,ಹೆಸರನ್ನು ಬೆಳೆಸಿಕೊಳ್ಳಬೇಕಾದಂತಹ ಯಾವ ದರ್ದೂ ಇರಲಿಲ್ಲ.   ಕುವೆಂಪು ಅವರು ಮೈಸೂರು ವಿ ವಿ ಯಲ್ಲಿ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾರಂಭಿಸಿ ಉಪಕುಲಪತಿಗಳ ಸ್ಥಾನದ ತನಕ   ಅಕಾಡೆಮಿಕ್ ಕ್ಷೇತ್ರದ ವ್ಯವಸ್ಥೆಯಲ್ಲಿದ್ದವರು. ಅವರ ಹೆಸರಿನ ‘ಬಲ’ದಿಂದ ಮೈಸೂರು ವಿ ವಿ ಯಲ್ಲಿ ಕೆಲವರು ತಮ್ಮ ಸ್ಥಾನಮಾನಗಳಲ್ಲಿ ಮುಂದೆ ಬಂದಿರಬಹುದು. ಮತ್ತು ಅದರಿಂದ ತಮ್ಮ ಸಾಹಿತ್ಯವನ್ನು  ಅಷ್ಟಿಷ್ಟು ಮುಂದಿನ ಸಾಲಿನಲ್ಲಿ ಇರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿರಬಹುದು. ಅಂತಹವರ ಸಾಹಿತ್ಯದಲ್ಲಿ  ಅಲ್ಪಸ್ವಲ್ಪವಾದರೂ ಸತ್ವ ಇದ್ದರೆ ಅದು ಕಾಲದ ಪರೀಕ್ಷೆಯಲ್ಲಿ ನಿಂತಿರುತ್ತದೆ . ಇಲ್ಲವಾದರೆ ವಿ ವಿ ಯ ಗ್ರಂಥಾಲಯವೂ ಸೇರಿದಂತೆ ಇತರ ಗ್ರಂಥಾಲಯಗಳಲ್ಲಿ ಮೂಲೆಗುಂಪಾಗಿ ಎಲ್ಲೋ ಒಂದುಕಡೆ ಧೂಳು ತಿನ್ನುತ್ತಾ ಕೂತಿರುತ್ತವೆ  ಈಗ ನಾವು ಅನಂತಮೂರ್ತಿ,ಸಿದ್ದಲಿಂಗಯ್ಯ, ಗಿರೀಶ್ ಕಾರ್ನಾಡ್ ಮತ್ತು ಕೆಲವೊಮ್ಮೆ ದೇವನೂರು ಮಹಾದೇವ ಅವರುಗಳ ಜತೆ  ಅವರ ರಾಜಕೀಯ ಅಭಿಪ್ರಾಯಗಳ ಬಗ್ಗೆ ,ರಾಜಕೀಯ ವ್ಯವಸ್ಥೆ ಜತೆಗಿನ  ಅವರ ಕೆಲವೊಂದು ನಡೆ-ನುಡಿಗಳಿಗಾಗಿ ವಾದ-ವಿವಾದ ನಡೆಸಬಹುದು.  ಅವರ ಜತೆ ನಮಗೆ ಭಿನ್ನಾಭಿಪ್ರಾಯವಿದೆ ಎಂಬ  ಕಾರಣದಿಂದ ಅವರ ಸಾಹಿತ್ಯವನ್ನು ಕಡೆಗಣಿಸಬಾರದು

——–%%%%%%%%——–
ಮುಂದಿನ ಭಾಗದಲ್ಲಿ  “ಸಾಹಿತ್ಯ, ಓದುಗ  ಮತ್ತು ವಿಮರ್ಶಕ 

1 ಟಿಪ್ಪಣಿ Post a comment
  1. M.A.Sriranga
    ಜೂನ್ 2 2014

    ಎರಡು ತಿದ್ದುಪಡಿಗಳು– ಈ ಲೇಖನದ ಭಾಗ (೨) ರಲ್ಲಿ “ಅನುಭದ” ಎಂಬುದನ್ನು “ಅನುಭವದ” ಎಂದು ಮತ್ತು ಭಾಗ (೩) ರಲ್ಲಿ “ಜನತಂತ್ರ” ಎಂದು ಪ್ರಾರಂಭವಾಗುವ ವಾಕ್ಯವನ್ನು “ಜನತಂತ್ರ ವ್ಯವಸ್ಥೆ” ಎಂದೂ ಓದಿಕೊಳ್ಳಬೇಕಾಗಿ ವಿನಂತಿ. –ಮು ಅ ಶ್ರೀರಂಗ

    ಉತ್ತರ

Leave a reply to M.A.Sriranga ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments