ವಿಷಯದ ವಿವರಗಳಿಗೆ ದಾಟಿರಿ

ಜೂನ್ 6, 2014

3

ಬುದ್ಧಿಜೀವಿಗಳೇ, ಕಾದು ನೋಡುವುದಲ್ಲದೆ ನಿಮಗೆ ಅನ್ಯ ಮಾರ್ಗವಿಲ್ಲ!

by ನಿಲುಮೆ

– ಸಹನಾ ವಿಜಯ್ ಕುಮಾರ್

ಪ್ರಗತಿಪರರು ಹಾಗೂ ಬುದ್ಧಿಜೀವಿಗಳುAction and reaction are equal and opposite. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿದ್ದರೂ ಸಮಬಲದಿಂದಿರುತ್ತವೆ. ಇದು ನ್ಯೂಟನ್ನ ಮೂರನೆಯ ನಿಯಮ. ಸುಮಾರು ಮೂರು ಶತಕಗಳಿಗೂ ಹಿಂದೆ, ಅಂದರೆ ಕ್ರಿ.ಶ. 1687ರಲ್ಲಿ ನ್ಯೂಟನ್ ಜಗತ್ತಿಗೆ ಸಾಬೀತುಪಡಿಸಿದ್ದು. ಈಗ 2014ರಲ್ಲಿ ನಾವು ಭಾರತೀಯರು ಈ ನಿಯಮದ ಸತ್ಯಾಸತ್ಯತೆಯನ್ನು ಮತ್ತೆ ಸಾಬೀತುಪಡಿಸಿದ್ದೇವೆ! ಇಲ್ಲಿ ಕ್ರಿಯೆ – ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ ಒಂದು ವ್ಯವಸ್ಥಿತ ಜಾಲವು ಮೋದಿಯವರ ಕುರಿತ ಭಯವನ್ನು ಹುಟ್ಟುಹಾಕಿದ್ದು. ಪ್ರತಿಕ್ರಿಯೆ – ಜನಸಾಮಾನ್ಯರು ಆ ಭಯದ ಹುಟ್ಟಡಗಿಸಿ ಮೋದಿಯವರಿಗೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟಿದ್ದು. ಒಂದು ವಿಶೇಷವೆಂದರೆ ಪ್ರತಿಕ್ರಿಯೆಯು ಕ್ರಿಯೆಗಿಂತ ಬಹಳ ಪಟ್ಟು ಹೆಚ್ಚಿದೆ, ತೀಕ್ಷ್ಣವಾಗಿದೆ ಹಾಗೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ! ಈಗ ನ್ಯೂಟನ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ!

ಹೀಗೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿತ್ತು. ಏಕೆಂದರೆ ಈ ಕ್ರಿಯೆಯನ್ನು ಹುಟ್ಟುಹಾಕಿದವರು ಅಂತಿಂಥವರಲ್ಲ, ಮೂರು ವರ್ಗಗಳಾಗಿ ವಿಂಗಡಿಸಬಹುದಾದ ಘಟಾನುಘಟಿಗಳು. ಒಂದು ವರ್ಗ ರಾಜಕಾರಣಿಗಳದ್ದಾದರೆ ಮತ್ತೊಂದು ಸುದ್ದಿ ಮಾಧ್ಯಮಗಳದ್ದು. ಮೂರನೆಯ ಹಾಗೂ ಅತ್ಯಂತ ಕುಲೀನ(?) ವರ್ಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳದ್ದು. ರಾಜಕಾರಣಿಗಳು ಸಿದ್ಧಾಂತ ಭೇದ ಮರೆತು ಒಂದಾದರು. ಮೋದಿಯವರನ್ನು ರಾಕ್ಷಸನೆಂದು ಬಿಂಬಿಸಿ ತಮ್ಮ ಕ್ರಿಯೆಗೆ ಮೊದಲಿಟ್ಟುಕೊಂಡರು. ಇನ್ನು ಸುದ್ದಿ ಮಾಧ್ಯಮದವರು ಹಿಂದೆ ಬೀಳುತ್ತಾರೆಯೇ? ಅಪಸ್ಮಾರ ಇರುವವರಿಗಿಂತ ಹೆಚ್ಚಾಗಿ ದೇಹ ಮನಸಿನ ಸ್ಥಿಮಿತ ಕಳೆದುಕೊಂಡು ಆ ಕ್ರಿಯೆಗೆ ಶಕ್ತಿ ಹಾಗೂ ವೇಗ ತುಂಬಿದರು. ಯಾವ ರಾಷ್ಟ್ರೀಯ ಚಾನೆಲ್ ನೋಡಿದರೂ ಮೋದಿ ಎಂಬ ನರಹಂತಕನ ಗೋಧ್ರಾ ಕಥೆಯೇ. ಇನ್ನುಳಿದವರು ಪ್ರಗತಿಪರರು ಹಾಗೂ ಬುದ್ಧಿಜೀವಿಗಳು. ಇದೊಂಥರಾ ವಿಚಿತ್ರ ತಳಿ. ತಮಗೆ ತಲೆಯಿಂದ ಕಾಲಿನವರೆಗೂ ರಕ್ತ ಮಾಂಸಗಳ ಬದಲು ಬುದ್ಧಿಯೇ ತುಂಬಿಕೊಂಡಿದೆಯೆಂಬ ಭ್ರಾಂತಿಯ ಜನ. ಉಳಿದವರು ಕೇವಲವೆಂಬ ಉದ್ಧಟತನ. ಜೊತೆಗೆ ಇವರ ಆವುಟವನ್ನು ಎಲ್ಲರೂ ಸಹಿಸ ಲೇಬೇಕೆಂಬ ತಿಕ್ಕಲುತನ. ಇವರೂ ಗುಂಪುಕಟ್ಟಿಕೊಂಡು ತಮ್ಮ ಕೈಲಾದಷ್ಟು ‘ಭಯೋತ್ಪಾದನೆ'(ಭಯ+ಉತ್ಪಾದನೆ) ಮಾಡಿದರು.

ಈಗ ಇವರೆಲ್ಲರಿಗೂ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ನೋಡಿ, ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾ ದತ್ ಹಾಗೂ ಅರ್ಣಬ್ ಗೋಸ್ವಾಮಿಯರು ಇಂಗು ತಿಂದ ಮಂಗನ ಮುಖ ಮಾಡಿಕೊಂಡು ವಿಧಿಯಿಲ್ಲದೆ ಮೋದಿ ಸರ್ಕಾರದ ಮೊದಲ ದಿಟ್ಟ ಹೆಜ್ಜೆಗಳ ಸಮಾಚಾರ ಬಿತ್ತರಿಸುತ್ತಿದ್ದಾರೆ. ಕಡೇಪಕ್ಷ ಇವರು ಜನರಿಂದ ಓಡಿಹೋಗುತ್ತಿಲ್ಲ. ತಮ್ಮ ಲೆಕ್ಕಾಚಾರ ತಪ್ಪಾದುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ದಂಡಿದೆಯಲ್ಲ, ಇವರ ಪಾಡು ಯಾರಿಗೂ ಬೇಡ. ಅತ್ತ ತಪ್ಪನ್ನು ಒಪ್ಪಿಕೊಳ್ಳಲಾಗದೆ, ಇತ್ತ ಸತ್ಯವನ್ನು ಅಲ್ಲಗಳೆಯಲೂ ಆಗದೆ ಕಾದ ಹೆಂಚಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಾರೆ.

ಉದಾಹರಣೆಗೆ ಪ್ರಗತಿಪರರ ಧೀಮಂತ ನಾಯಕಿ ‘ಸುಜಾನ ಅರುಂಧತಿ ರಾಯ್’ ಫಲಿತಾಂಶ ಸಿಕ್ಕೊಡನೆ ಮಾಡಿದ ಮೊದಲ ಕೆಲಸವೇನು ಹೇಳಿ? ಪಾಕಿಸ್ತಾನದ ‘ಡಾನ್’ ಪತ್ರಿಕೆಯ ಬಳಿ ಹೋಗಿ ‘ನಮಗೆ ಹೀಗೊಂದು ಸಂಪೂರ್ಣ ಬಹುಮತದ ಸರ್ಕಾರ ಸಿಕ್ಕಿಬಿಟ್ಟಿದೆ ಮತ್ತು ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲ’ ಎಂದು ಅಲವತ್ತುಕೊಂಡಿದ್ದು! ಇದೇ ಅರುಂಧತಿ ಕೆಲ ತಿಂಗಳುಗಳ ಹಿಂದೆ ವೆಂಡಿ ಡೋನಿಗರ್‍ಳ ಕೊಳಕು ಪುಸ್ತಕ ‘ದಿ ಹಿಂದೂಸ್: ಆನ್ ಆಲ್ಟರ್‍ನೇಟಿವ್ ಹಿಸ್ಟರಿ’ಯನ್ನು ಪೆಂಗ್ವಿನ್ ಪಬ್ಲಿಕೇಷನ್ಸ್ ಭಾರತದಲ್ಲಿ ಹಿಂಪಡೆದಾಗ ರಾದ್ಧಾಂತ ಮಾಡಿಬಿಟ್ಟಿದ್ದಳು. ಪೆಂಗ್ವಿನ್‍ಗೆ ಪತ್ರ ಬರೆದಿದ್ದ ಈಕೆ “ಇನ್ನೂ ಚುನಾವಣೆಗೆ ಕೆಲ ತಿಂಗಳುಗಳು ಮಾತ್ರವೇ ಉಳಿದಿವೆ. ಫ್ಯಾಸಿಸ್ಟ್ ಗಳು ಇನ್ನೂ ಪ್ರಚಾರ ಮಾಡುತ್ತಿದ್ದಾರೆ ಹೊರತು ಅಧಿಕಾರಕ್ಕೆ ಬಂದಿಲ್ಲ. ನೀವು ಇಷ್ಟು ಬೇಗ ಸೋತುಹೋದಿರೇ? ನಾವು ಬರೀ ಹಿಂದುತ್ವಕ್ಕೆ ಪೂರಕವಾದ ಪುಸ್ತಕಗಳನ್ನೇ ಪ್ರಕಟಿಸಬೇಕೇ?’ ಎಂದು ಕೇಳಿದ್ದಳು.

ಕ್ರಿಶ್ಚಿಯನ್ ಅಮ್ಮ ಹಾಗೂ ಹಿಂದು ಅಪ್ಪನ ಈ ಮಿಶ್ರತಳಿಗೆ ಭಾರತವೆಂದರೆ, ವಿಶೇಷವಾಗಿ ಹಿಂದೂಗಳೆಂದರೆ ವಿಪರೀತ ಅಲರ್ಜಿ! ಅದೂ ಯಾವ ಮಟ್ಟದ್ದೆಂದರೆ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂಬ ಕೂಗಿಗೆ ಈಕೆಯದ್ದು ಮೊದಲಿನಿಂದಲೂ ಮುಕ್ತ ಬೆಂಬಲ. 2008ರ ಆಗಸ್ಟ್ 18 ರಂದು ಶ್ರೀನಗರದಲ್ಲಿ ನಡೆದ ಪ್ರತ್ಯೇಕತಾವಾದಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದಳು. ಈಕೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೊಡುತ್ತಿರುವ ತಪ್ಪು ಸಂದೇಶವನ್ನು ಆಗಿನ ಕಾಂಗ್ರೆಸ್ ಧುರೀಣರಾಗಿದ್ದ ಸತ್ಯ ಪ್ರಕಾಶ ಮಾಳವೀಯರು ತೀವ್ರವಾಗಿ ಖಂಡಿಸಿದ್ದರು. ಅಷ್ಟಕ್ಕೂ ಈಕೆಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ‘ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಪುಸ್ತಕವನ್ನು ಕ್ಯಾಕರಿಸಿ ಉಗಿದವರಲ್ಲಿ ಮೊದಲಿಗರು ಈಕೆಯ ರಾಜ್ಯ (ಕೇರಳ)ದ ಮುಖ್ಯಮಂತ್ರಿಯಾಗಿದ್ದ ಇ.ಕೆ.ನಯನಾರ್‍ರವರು. ಬೂಕರ್ ಪ್ರಶಸ್ತಿ ಸಮಿತಿಯ ಸದಸ್ಯರಾದ ಕಾರ್ಮೆನ್ ಕ್ಯಾಲಿಲ್‍ರವರೂ ಇದನ್ನು ಅತ್ಯಂತ ಕೆಟ್ಟ ಪುಸ್ತಕ ಎಂದು ಕರೆದಿದ್ದರು. ನಕ್ಸಲರನ್ನು ಬೆಂಬಲಿಸಿದ್ದು, ಸಂಸತ್ತಿನ ಮೇಲೆ ದಾಳಿ ನಡೆಸಿದ ಮಹಮ್ಮದ್ ಅಫ್ಜಲ್‍ನನ್ನು ಯುದ್ಧಕೈದಿ ಎಂದು ವಹಿಸಿಕೊಂಡಿದ್ದು ಈಕೆಯ ಮಹತ್ಸಾಧನೆಗಳಲ್ಲಿ ಕೆಲವು. 2008ರ ಮುಂಬೈ ದಾಳಿಯನ್ನು ಗೋಧ್ರಾ ಘಟನೆಯ ಪರಿಣಾಮ ಎಂದು ಸಾರಿದ ಈಕೆಯ ಪ್ರಕಾರ ಕಾಶ್ಮೀರಿ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಮಾಡುವುದೆಲ್ಲ ಸರಿ.

ಇಂಥ ಹಿನ್ನೆಲೆಯವಳ ಸಾರಥ್ಯದಲ್ಲಿ ಸಲ್ಮಾನ್ ರಶ್ದಿ, ಜಯತಿ ಘೋಷ್, ದೀಪಾ ಮೆಹ್ತಾ ಮುಂತಾದವರೆಲ್ಲ ನೂರಾರು ಊರುಗಳನ್ನು ಸುತ್ತಿ ಮನೆ-ಮನೆ ಬಾಗಿಲು ಬಡಿದಿದ್ದರು. ‘ಮಾಧ್ಯಮಗಳು ನಿಮಗೆ ಹೇಳದ ಗುಜರಾತಿನ ಸುದ್ದಿ’ ಎಂಬ ಭಿತ್ತಿಪತ್ರಗಳನ್ನು ಎಲ್ಲರಿಗೂ ಹಂಚಿ ಎಲ್ಲರಲ್ಲೂ ಸಾಕಷ್ಟು ಭಯ ಹುಟ್ಟಿಸುವ ಪ್ರಯತ್ನ ಮಾಡಿದ್ದರು. ಈಕೆಯ ಓರಗೆಯವಳೇ ಆದ ತೀಸ್ತಾ ಸೇತಲ್ವಾಡ್ ಮತ್ತೊಂದು ರೀತಿಯಲ್ಲಿ ಮಿಶ್ರತಳಿ. ಮುಂಬಯಿಯಲ್ಲಿ ಅಮೆರಿಕದ ಫೋರ್ಡ್ ಫೌಂಡೇಷನ್‍ನಿಂದ ಪ್ರಾಯೋಜಿತ CIP ಎಂಬ NGO ನಡೆಸುತ್ತಿರುವಾಕೆ. ಗೋಧ್ರಾ ಹತ್ಯಾಕಾಂಡದಲ್ಲಿ ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಿ, ಅವರು ನೋಡದ್ದನ್ನೆಲ್ಲಾ ಹೇಳಿಸಿ ಕೊನೆಗೆ ಸಿಕ್ಕಿಹಾಕಿಕೊಂಡು ಛೀಮಾರಿ ಹಾಕಿಸಿಕೊಂಡ ಈಕೆಯ ಬಗ್ಗೆ ಬರೆಯಲು ಕುಳಿತರೆ ಒಂದು ಬೃಹತ್ ಗ್ರಂಥಕ್ಕಾಗುವಷ್ಟು ಕೊಳಕು, ಮೋಸದ ಸರಕು ಸಿಗುತ್ತದೆ. ಗೋಧ್ರಾ ಗಲಭೆಯ ಸಂತ್ರಸ್ತರ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಅದನ್ನು ನುಂಗಿ ನೀರು ಕುಡಿದ ಪ್ರಕರಣಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈಕೆಯ ಹಿಂಬಾಲಕರ ದಂಡಿನಲ್ಲಿ ಜಾವೇದ್ ಅಖ್ತರ್, ರಾಹುಲ್ ಬೋಸ್ ಹಾಗೂ ವಿಜಯ್ ತೆಂಡೂಲ್ಕರ್ ಪ್ರಮುಖರು.

ಇಂಥ ಬುದ್ಧಿ ಜೀವಿಗಳ ಪಟಾಲಂ ಎಲ್ಲ ಸೇರಿ ನಮ್ಮೆಲ್ಲರನ್ನೂ ಭಯಪಡಿಸಲು ಪ್ರಯತ್ನಿಸಿತ್ತು. ತಮ್ಮ ಬಳಿಯಿದ್ದ(?) ಬುದ್ಧಿಯನ್ನು ಖರ್ಚು ಮಾಡಿ ಮುಗಿದಾಗ ಅಮೆರಿಕ ಹಾಗೂ ಪಾಕಿಸ್ತಾನಗಳಿಂದ ಎರವಲು ಪಡೆದು ಶತಾಯ ಗತಾಯ ನಮ್ಮನ್ನು ಹೆದರಿಸಿಯೇ ತೀರುವುದೆಂಬ ಪಣ ತೊಟ್ಟಿತ್ತು. ಈಗ ನಾವು ಸರಿಯಾದ ಏಟು ಹಾಕಿದ ಮೇಲೆ ಇತ್ತ ಸುಳಿದಿಲ್ಲ. ಸದ್ಯಕ್ಕೆ ಕುಂಯ್‍ಗುಟ್ಟುತ್ತಾ ದುಃಖ ದುಮ್ಮಾನಗಳನ್ನೆಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದೆ. ಮೋದಿಯವರು ಒಮ್ಮೆ ಗುಟುರು ಹಾಕಿದೊಡನೆ ಅದೂ ಸಂಪೂರ್ಣ ನಿಂತುಹೋಗಲಿದೆ!

ಇದು ರಾಷ್ಟ್ರಮಟ್ಟದ ವಿಷಯವಾಯಿತು. ಇನ್ನು ನಮ್ಮ ರಾಜ್ಯದ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ಸ್ಥಿತಿ ನೋಡಿ. ಚುನಾವಣೆಯ ಅಬ್ಬರ ಶುರುವಾದಾಗ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕೆ. ಮರುಳಸಿದ್ದಪ್ಪ ಸೇರಿದಂತೆ ಎಂಟು ಜನ ಚಿಂತಕರು ‘ಸಮಕಾಲೀನ ವಿಚಾರ ವೇದಿಕೆ’ ಎಂಬ ಚಾವಡಿ ಕಟ್ಟಿದರು. ನಿರೀಕ್ಷಿಸಿದಂತೆ ಅವ್ಯಾಹತವಾಗಿ ಮೋದಿ ದೂಷಣೆ ನಡೆಯಿತು. ಫಲಿತಾಂಶದ ನಂತರ ಅನಂತಮೂರ್ತಿಯವರನ್ನು ಸುವರ್ಣ ವಾಹಿನಿ ಎಳೆದು ತಂದಾಗ ಅರಳು-ಮರುಳು ಎಂಬಂತೆ ನಟಿಸಿಬಿಟ್ಟರು. ಇವರ ಯೌವ್ವನ ಮರುಕಳಿಸುವುದು ಬೈರಪ್ಪನವರನ್ನು ಖಂಡಿಸುವಾಗ ಮತ್ತು ಮೋದಿಯವರನ್ನು ನಿಂದಿಸುವಾಗ ಮಾತ್ರ. ಉಳಿದಂತೆ ಇವರು ಏನೂ ಅರ್ಥವಾಗದ, ಕೈಲಾಗದ ಅಸಹಾಯಕ ವೃದ್ಧರಾಗಿ ಕುಳಿತುಬಿಡುತ್ತಾರೆ. ಇನ್ನು ಚುನಾವಣಾ ಪ್ರಚಾರ ನಿಮಿತ್ತ ರೋಹಿಣಿ ನಿಲೇಕಣಿಯವರೊಂದಿಗೆ ಬಸವನಗುಡಿಯ ಬೀದಿ ಬೀದಿ ಸುತ್ತಿದ್ದ ಕಾರ್ನಾಡರಂತೂ ಪತ್ತೆಯೇ ಇಲ್ಲ. ಮೋದಿ ವಿರುದ್ಧ ಪ್ರಚಾರಕ್ಕೆಂದು ಕಾಶಿಗೆ ಹೋಗಿದ್ದವರು ಅಲ್ಲೇನಾದರೂ ಬಿಟ್ಟು ಬಂದರೋ ಅಥವಾ ತಾವೇ ಅಲ್ಲಿ ಉಳಿದು ಬಿಟ್ಟರೋ ಗೊತ್ತಿಲ್ಲ. ಗೋವಿಂದರಾವ್, ಮರುಳಸಿದ್ಧಪ್ಪ ಮುಂತಾದವರು ದುರ್ಬೀನು ಹಿಡಿದು ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲ.

ಇದೆಲ್ಲದರ ನಡುವೆ ತಮ್ಮ ಚಿಪ್ಪಿನಿಂದ ಹೊರಬಂದಿರುವ ಅಗ್ನಿ ಶ್ರೀಧರ್ ರೈಲೊಂದನ್ನು ಬಿಡಲು ಹೋಗಿ ಸಂಪೂರ್ಣ ಹಳಿ ತಪ್ಪಿಸಿದ್ದಾರೆ. ಇದೇ ಶ್ರೀಧರ್ 2013ರ ಏಪ್ರಿಲ್ 28ರಂದು ಆನಂದ್‍ರಾವ್ ವೃತ್ತದಲ್ಲಿ ‘ಹಿಟ್ಲರ್ ಮೋದಿ, ಹಿಂತಿರುಗಿ ಹೋಗು, ಹಿಂತಿರುಗಿ ಹೋಗು’ ಎಂದು ಗಂಟಲು ಹರಿಯುವಂತೆ ಅರಚಿದ್ದರು. ಮೋದಿಯವರ ಭೇಟಿಯ ಹಿನ್ನೆಲೆಯಲ್ಲಿ ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ಯ ವತಿಯಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೋದಿಯವರ ಬಗ್ಗೆ ಇವರಲ್ಲಿ ಹೊತ್ತಿ ಉರಿಯುತ್ತಿದ್ದ ರೋಷಾಗ್ನಿ, ದ್ವೇಷಾಗ್ನಿಗಳು ಈಗ ಇದ್ದಕ್ಕಿದ್ದಂತೆ  ಆರಿ ಹೋಗಿವೆಯೆಂದು ನಾವು ನಂಬಿ ಬಿಡುತ್ತೇವೆಯೇ? ದಾದಾಗಿರಿಯ ದಿನಗಳ ಶ್ರೀಧರ್‍ರವರೇ ಇಲ್ಲಿ ಕೇಳಿ, ನೀವೆಷ್ಟೇ ನಾಜೂಕಾಗಿ ಲೇಖನ ಬರೆದರೂ ನಾವು ಎಂದಿಗೂ, ಯಾವ ಕಾರಣಕ್ಕೂ ನಿಮ್ಮ ರೈಲು ಹತ್ತುವುದಿಲ್ಲ.

ಇವರಷ್ಟೇ ನೈಪುಣ್ಯದಿಂದ ಟಿ.ಎನ್.ಸೀತಾರಾಂರವರೂ ಕಥೆ ಹೆಣೆದಿದ್ದಾರೆ. ಮೋದಿ ಪ್ರಧಾನಿಯಾಗಿ ಬಿಟ್ಟರೆ ಏನೇನೋ ಆಗಿ ಹೋಗುತ್ತದೆಂಬ ಭಯವಿತ್ತು ಎನ್ನುತ್ತಾರಲ್ಲ ಹೊಸದಾಗಿ ಆಗುವಂಥದ್ದೇನು ಉಳಿಸಿದ್ದಾರೆ ನೆಹರು ಕುಟುಂಬದವರು? ಅಷ್ಟಕ್ಕೂ ಇವರ ಧಾರಾವಾಹಿಗಳಲ್ಲಿ ಬರುವ ಹೆಣ್ಣು ಮಕ್ಕಳಲ್ಲಿರುವ ಗಟ್ಟಿತನ, ದಿಟ್ಟತನ, ಎದೆಗುಂದದಿರುವಿಕೆ ನಿಜಜೀವನದಲ್ಲಿ ಓರ್ವ ಗಂಡಸಿಗಿದ್ದರೆ ಇವರೇಕೆ ಭಯಪಡಬೇಕು? ಸೀತಾರಾಂರವರೇ, ಹಿಂದುವಾಗಿರುವುದೇ ಅಪರಾಧ ಎಂಬ ತೀರ್ಮಾನಕ್ಕೆ ಬಂದು ಅದರ ಮೂಲೋತ್ಪಾಟನೆಗೆ ಟೊಂಕಕಟ್ಟಿ ನಿಂತವರನ್ನೆಲ್ಲ ಕಂಡಾಗ ಆಗದಿದ್ದ ಭಯ ಈಗೇಕೆ? ನಿಮ್ಮ ಧಾರಾವಾಹಿಗಳಲ್ಲಿ ಬಳಕೆಯಾಗುವ ಸ್ವಚ್ಛ ಭಾಷೆ, ಶುದ್ಧ ಚಾರಿತ್ರ್ಯ, ನಡವಳಿಕೆಗಳೆಲ್ಲ ಯಾವ ಸಂಸ್ಕೃತಿಯ ಪ್ರತಿಫಲನ ಹೇಳಿ?

ಎಲ್ಲ ಬುದ್ಧಿಜೀವಿಗಳೂ ಪ್ರಗತಿಪರರೂ ಸೋತು ಸುಣ್ಣವಾಗಿದ್ದಾರೆ. ನಮ್ಮ ಪ್ರತಿಕ್ರಿಯೆಗೆ ತರಗೆಲೆಗಳಂತೆ ಹಾರಿ ಹೋಗಿದ್ದಾರೆ. ಜನಾದೇಶವಾದ್ದರಿಂದ ನೇರವಾಗಿ ಸಿಟ್ಟು, ಅತೃಪ್ತಿ ವ್ಯಕ್ತಪಡಿಸುವ ಹಾಗಿಲ್ಲ. ಆದ್ದರಿಂದ ಲೇಖನಗಳಲ್ಲಿ, ಫೇಸ್‍ಬುಕ್‍ ಗೋಡೆಗಳಲ್ಲಿ ಇವರು ಆಯ್ದುಕೊಂಡಿರುವ ಮಾರ್ಗ ‘ಸುಮ್ಮನಿದ್ದು ಮೋದಿಯವರನ್ನು ಗಮನಿಸುವುದು’. ಜೊತೆಗೆ, ‘ಪ್ರತಿಪಕ್ಷವಿಲ್ಲದ್ದರಿಂದ ಆಡಳಿತ ಪಕ್ಷ ಅಂಕೆ ಮೀರಿ  ವರ್ತಿಸುವಂತಿಲ್ಲ’ ಎಂಬ ಹಿತೋಪದೇಶ ನೀಡುವುದು. ನಿಜ, ಇವರು ಗಮನಿಸಲು ಶುರು ಮಾಡಿರುವುದು ಈಗ. ನಾವು ಒಂದು ದಶಕದಿಂದಲೇ ಗಮನಿಸಿದ್ದೇವಲ್ಲ, ಹಾಗಾಗಿ ನಮ್ಮಲ್ಲಿ ಭಯವಲ್ಲ, ನಂಬಿಕೆಯಿದೆ. ಸಾರ್ಥಕ್ಯವಿದೆ.

ಇಷ್ಟು ದಿನಗಳ ನಮ್ಮ ಭಯಕ್ಕೆ ನಾವು ಉತ್ತರ ಕಂಡುಕೊಂಡಿದ್ದೇವೆ. ನಿಮ್ಮ ಭಯಕ್ಕೂ ಉತ್ತರ ಖಂಡಿತ ಸಿಗಲಿದೆ. ಅಲ್ಲಿಯತನಕ ಯಾವ ಸೋಗಲಾಡಿತನದ ವೇಷಗಳನ್ನೂ ಹಾಕದೆ ಶಾಂತಚಿತ್ತದಿಂದ ಕಾದು ನೋಡಿ! Just Wait and Watch!

3 ಟಿಪ್ಪಣಿಗಳು Post a comment
 1. Universal
  ಜೂನ್ 6 2014

  Aptly said: “Wait & see”.

  ಉತ್ತರ
 2. MAHAMMED BARY
  ಜೂನ್ 8 2014

  ಸಹನಾ ರವರಿಗೆ, ಬುದ್ಧಿಜೀವಿ,ಪ್ರಗತಿಪರರ ಬಗ್ಗೆ ‘ಸಹಿಸದಷ್ಟು’ ಕೊಪವಿತ್ತೇನೋ
  ಈಗ ಅದೆನ್ನೆಲ್ಲ ಹೊರಹಾಕಿದ್ದಾರೆ .
  ಹೌದು ನಿಮ್ಮ ಪ್ರಿಯ ಮೋದಿ ಚುನಾವಣಾ ಭಾಷಣದಲ್ಲಿ ಪಾಕಿಸ್ತಾನ ಮತ್ತು ನವಾಜ್ ಶರೀಫ್
  ಬಗ್ಗೆ ೨೦ ವರ್ಷಗಳ ಶತ್ರುವಿನಂತೆ … ಹಿಗ್ಗಾಮುಗ್ಗಾ ಜಾಡಿಸಿದ್ದರಲ್ಲವೆ ? ಈಗ ಅದ್ಹೇಗೆ ‘ಚಡ್ಡಿ’ ದೋಸ್ತ್
  ನಂತೆ ತೇರೀಮೇರಿ ಕಹಾನಿ ….. ಹಾಡುತ್ತಿದ್ದಾರೆ ??

  ಉತ್ತರ
 3. valavi
  ಜೂನ್ 9 2014

  ಸಹನಾ ಚನ್ನಾಗಿ ಝಾಡಿಸಿದ್ದೀರಿ ಈ ಸೋಗಲಾಡಿಗಳನ್ನು ಥ್ಯಾಂಕ್ಶ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments