ವಿಷಯದ ವಿವರಗಳಿಗೆ ದಾಟಿರಿ

ಜೂನ್ 7, 2014

ಸುಪ್ತ ಪ್ರಜ್ನೆಗೆ ಭವಿಷ್ಯವೂ ಗೊತ್ತಿರುತ್ತದೆ !

by ನಿಲುಮೆ

– ಸಚ್ಚಿದಾನಂದ ಹೆಗಡೆ

ಸುಪ್ತ ಪ್ರಜ್ನೆಹಿಂದಿನ ಜನ್ಮಗಳ ನೆನಪುಗಳ ಆಧಾರದ ಮೇಲೆ ಈ ಜನ್ಮದಲ್ಲಿ ಬಂದಿರುವ ಮನೋದೈಹಿಕ ತೊಂದರೆಗಳನ್ನು ನಿವಾರಿಸುವ ಚಿಕಿತ್ಸೆ ಬಗ್ಗೆ ಬಹುಶಃ ಈಗ ಟೀವಿ ನೋಡುವವರಿಗೆಲ್ಲರಿಗೂ ಗೊತ್ತಿದೆ. ನಮ್ಮ ದೇಶದಲ್ಲಿ ಬಹುಶಃ ನೂರಾರು ಜನ ಇಂಥ ಚಿಕಿತ್ಸಕರಿರಬಹುದು. ಸಮ್ಮೋಹನ, ರೇಕಿ, ಪ್ರಾಣಚೈತನ್ಯ ಚಿಕಿತ್ಸೆ, ಕಾಸ್ಮಿಕ್ ಚಿಕಿತ್ಸೆ ಮುಂತಾದ ಹಲವಾರು ಪದ್ಧತಿಗಳ ಮೂಲಕ ಪೂರ್ವಜನ್ಮಗಳ ನೆನಪುಗಳನ್ನು ಕೆದಕಿ, ಈಗಿನ ತೊಂದರೆಯ ಬೇರುಗಳು ಎಲ್ಲಿ ಅಡಗಿವೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ಮಾಡುವುದು ಈಗ ಅಪರೂಪವೇನೂ ಅಲ್ಲ.

ಸಮ್ಮೋಹನ ಪದ್ಧತಿಯ ಮೂಲಕ ೪೦೦೦ಕ್ಕೂ ಹೆಚ್ಚು ಪ್ರಯೋಗ ನಡೆಸಿ ಪುನರ್ಜನ್ಮದ ಬಗೆಗೆ ಸಂಶೋಧನೆ ನಡೆಸಿರುವುದಾಗಿ ಖ್ಯಾತ ಅಮೇರಿಕನ್ ಮನೋವೈದ್ಯ ಡಾ. ಬ್ರಿಯಾನ್ ವೇಯ್ಸ್ ಹೇಳಿದ್ದಾನೆ. ತಾನು ನಡೆಸಿದ ಪ್ರಯೋಗಗಳನ್ನು ಉಲ್ಲೇಖಿಸಿ ಆತ ಹತ್ತಾರು ಪುಸ್ತಕಗಳನ್ನು ಬರೆದಿದ್ದು ಅವು ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿವೆ. ಅದೇರೀತಿ ಡಾ. ಬ್ರೂಸ್ ಗೋಲ್ಡ್ ಬರ್ಗ್ ಎಂಬ ಚಿಕಿತ್ಸಕನೂ ಜನ್ಮ-ಜನ್ಮಾಂತರಗಳ ವೃತ್ತಾಂತಗಳ ಆಧಾರದ ಮೇಲೆ ತಾನು ನಡೆಸಿದ ಚಿಕಿತ್ಸೆಗಳನ್ನು ಪುಸ್ತಕಗಳ ರೂಪದಲ್ಲಿ ದಾಖಲಿಸಿದ್ದಾನೆ.

ನಾನು ಬೆಂಗಳೂರಿನಲ್ಲಿರುವ ರಾಷ್ಟ್ರಖ್ಯಾತಿಯ ನಿಮ್ಹಾನ್ಸ್ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಯೂ ಪೂರ್ವಜನ್ಮ ಚಿಕಿತ್ಸಕರಿದ್ದಾರೆಂದು ತಿಳಿಯಿತು. (ಅವರ ಹೆಸರುಗಳು ಈಗ ಮರೆತುಹೋಗಿವೆ).

ಇಂಥ ಚಿಕಿತ್ಸೆ-ಪ್ರಯೋಗಗಳಿಗೆ ಸಂಬಂಧಿಸಿ ನಾನು ಕೆಲವು ಪುಸ್ತಕಗಳನ್ನು ಮಗುಚಿಹಾಕಿದ್ದೇನೆ. ಮೊದಮೊದಲು ನನಗೆ ಪೂರ್ವಜನ್ಮದ ನೆನಪುಗಳೆಂದರೆ ತುಂಬ ರೋಮಾಂಚನವಾಗುತ್ತಿತ್ತು. ಆಧ್ಯಾತ್ಮಿಕ ಸಾಧಕರೊಬ್ಬರು ನನ್ನ ಕೆಲವು ಪೂರ್ವಜನ್ಮಗಳ ಬಗ್ಗೆ ಹೊಳಹುಗಳನ್ನು ನೀಡಿದಾಗಲೂ ನನಗೆ ಬಹಳ ಆಶ್ಚರ್ಯವೆನಿಸಿತ್ತು. ಆ ಸಾಧಕರು ನನ್ನ ಈ ಜನ್ಮದ ಒಂದು ವಿಚಿತ್ರ ಸಮಸ್ಯೆಯ ಮೂಲ ಹಿಂದಿನ ಒಂದು ಜನ್ಮದಲ್ಲಿದ್ದುದರ ಬಗ್ಗೆ ಹೇಳಿದಾಗ ನನ್ನ ಆ ಸಮಸ್ಯೆ ಬಹುಮಟ್ಟಿಗೆ ಪರಿಹಾರ ಕಂಡಿತ್ತು. ಆದರೆ ಈಗ ನನಗೆ ಇಂಥ ಸಂಗತಿಗಳು ಸಹಜ ಎನ್ನಿಸತೊಡಗಿವೆ. ಆಧ್ಯಾತ್ಮಿಕ ಸಾಹಿತ್ಯದಲ್ಲಂತೂ ಹಿಂದಿನ ಜನ್ಮಗಳ ಕರ್ಮ ಅನುಭವಿಸುವ ವಿಷಯ ಧಾರಾಳವಾಗಿ ಸಿಗುತ್ತವೆ.

ನನಗೆ ತುಂಬ ವಿಸ್ಮಯವೆನಿಸಿದ್ದು ಮುಂದಿನ ಜನ್ಮಗಳ ಕುರಿತಾಗಿ. ಡಾ. ಬ್ರಿಯಾನ್ ವೇಯ್ಸ್ ತನ್ನ ಒಬ್ಬ ರೋಗಿಯ ಮೇಲೆ ನಡೆಸಿದ ಪ್ರಯೋಗದಲ್ಲಿ ಮುಂದಿನ ಒಂದು ಸಾವಿರ ವರ್ಷಗಳ ಬಳಿಕ ನಡೆಯುವ ವಿಚಾರಗಳನ್ನು ರೋಗಿಯ ಬಾಯಿಯಿಂದ ಹೊರಡಿಸಿದ್ದಾನೆ. ಡಾ. ಬ್ರೂಸ್ ಗೋಲ್ಡ್ ಬರ್ಗ್ ಕೂಡ ೧೯೮೧ರಲ್ಲಿ ಎಮ್ಮಿ ಎಂಬ ತನ್ನ ರೋಗಿಯ ಬಾಯಿಯಿಂದ ೩೬ನೇ ಶತಮಾನದಲ್ಲಿ ಆಕೆಗೆ ಸಂಬಂಧಿಸಿದಂತೆ ನಡೆಯುವ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿದ್ದಾನೆ.

ಆದರೆ ಇವೆಲ್ಲಕ್ಕಿಂತ ನನಗೆ ಅದ್ಭುತ ಎನಿಸಿದ್ದು ಇಂಥ ಒಂದು ಘಟನೆಯನ್ನು ನಾನು ಪ್ರತ್ಯಕ್ಷ ನೋಡಿದ್ದು. ಈ ಘಟನೆಗೆ ನೇರವಾಗಿ ಸಂಬಂಧಿಸಿದ ವ್ಯಕ್ತಿಗಳ ಕುರಿತಾಗಿ ನಾನು ಯಾವ ವಿವರವನ್ನೂ ನೀಡಬಯಸುವುದಿಲ್ಲ. ಈ ವ್ಯಕ್ತಿ ದೀರ್ಘಕಾಲ ಹಾಸಿಗೆ ಹಿಡಿಯುವ ಸನ್ನಿವೇಶ ನಿರ್ಮಾಣವಾಯಿತು. ಸಹಜವಾಗಿ ಈ ವ್ಯಕ್ತಿ ತಾನು ದೀರ್ಘಕಾಲ ಹಾಸಿಗೆ ಹಿಡಿಯುವುದನ್ನು ಊಹಿಸಿಯೂ ಇರಲಿಲ್ಲ. ಆದರೆ ದೀರ್ಘಕಾಲ ಹಾಸಿಗೆ ಹಿಡಿದಾಗ ಬೇಕಾಗುವ ಕೆಲವು ಪರಿಕರಗಳನ್ನು ಈ ವ್ಯಕ್ತಿ ತನಗೆ ಗೊತ್ತಿಲ್ಲದಯೇ ದಶಕಗಳಿಂದ ಸಂಗ್ರಹಿಸುತ್ತ ಬಂದಿದ್ದು! ಅಂದರೆ ಈ ವ್ಯಕ್ತಿಯ ಸುಪ್ತಪ್ರಜ್ನೆಗೆ ಮುಂದೊಂದು ದಿನ ತಾನು ದೀರ್ಘಕಾಲ ಹಾಸಿಗೆ ಹಿಡಿಯುವ ವಿಷಯ ಗೊತ್ತಿತ್ತು ಎಂದಾಯಿತು! ಜಿಪುಣಾಗ್ರೇಸರನೊಬ್ಬ ಪೈಸೆ ಪೈಸೆ ಸಂಗ್ರಹಿಸುವಂತೆ, ಬೇರೆಯವರ ದೃಷ್ಟಿಯಲ್ಲಿ ನಿರುಪಯೋಗವೆನಿಸುವ ವಸ್ತುಗಳನ್ನು ಈ ವ್ಯಕ್ತಿ ಹೀಗೆ ವ್ಯವಸ್ಥಿತವಾಗಿ ಸಂಗ್ರಹಿಸಿಡಲು ಬೇರೆ ಯಾವುದೇ ಕಾರಣ ಗೋಚರಿಸುವುದಿಲ್ಲ.

ಡಾ. ಬ್ರಿಯಾನ್ ವೇಯ್ಸ್ ಪ್ರಯೋಗಗಳು, ಡಾ. ಬ್ರೂಸ್ ಗೋಲ್ಡ್ ಪ್ರಯೋಗಗಳು ಮತ್ತು ನಾನು ಪ್ರತ್ಯಕ್ಷ ನೋಡಿದ್ದು ಇವೆಲ್ಲವೂ ಎಷ್ಟೊಂದು ನಿಖರವಾಗಿ ತಾಳೆಯಾಗುತ್ತವೆ!! ವ್ಯಕ್ತಿಯ ಸುಪ್ತಪ್ರಜ್ನೆಯಲ್ಲಿ ಭೂತ-ವರ್ತಮಾನ-ಭವಿಷ್ಯ ಈ ಮೂರೂ ಕಾಲಗಳು ಪೂರ್ಣಪ್ರಮಾಣದಲ್ಲಿ ಅಡಗಿರುತ್ತವೆ ಮತ್ತು ಹಿಂದಿನ ಕಾಲದ ಋಷಿ-ಮುನಿಗಳು ತಮ್ಮ ತಪಸ್ಸಿನ ಬಲದಿಂದ ತಮ್ಮೊಳಗೆ ಅಡಗಿರುವ ಈ ತ್ರಿಕಾಲ ಜ್ನಾನವನ್ನು ಅರಿಯಬಲ್ಲವರಾಗಿದ್ದರು. ಅದಕ್ಕೇ ಅವರಿಗೆ ತ್ರಿಕಾಲಜ್ನಾನಿಗಳೆಂದು ಆಗ ಕರೆಯುತ್ತಿದ್ದರು. ಸ್ವಾಮಿ ವಿವೇಕಾನಂದರೂ ಸಹ ಶಿಕ್ಷಣದ ಕುರಿತು ವ್ಯಾಖ್ಯಾನ ಮಾಡುವಾಗ ಮನುಷ್ಯನಲ್ಲಿ ಸುಪ್ತವಾಗಿರುವ ಅಗಾಧ ಪ್ರತಿಭೆಯನ್ನು ಹೊರತೆಗೆಯುವುದೇ ಶಿಕ್ಷಣ ಎಂದು ಹೇಳಿದ್ದುದು ಲೋಕಪ್ರಸಿದ್ಧವಾಗಿದೆ.

ಚಿತ್ರಕೃಪೆ :http://www.actioncoach.com

Advertisements

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments