ವಿಷಯದ ವಿವರಗಳಿಗೆ ದಾಟಿರಿ

ಜೂನ್ 9, 2014

2

ಐಡಿಯಾಲಜಿಯ ಅಪಾಯಗಳು!

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

SIಹದಿನಾರನೆಯ ಲೋಕಸಭಾ ಚುನಾವಣಾ ಫಲಿತಾಂಶ ಬಂದು ತಿಂಗಳಾಗುತ್ತ ಬಂತು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಈ ಚುನಾವಣೆ ಕುರಿತ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಏಕೆಂದರೆ ಮಾಧ್ಯಮಗಳು, ಗದ್ದುಗೆಯ ಕನಸು ಕಾಣುತ್ತಿದ್ದ ಗೆದ್ದ-ಸೋತ ಪ್ರಮುಖ ಪಕ್ಷಗಳು, ಯಾರಿಗೂ ಬಹುಮತ ಬರದಿದ್ದರೆ ಆಟವಾಡಿಸುವ ಭ್ರಮೆಯಲ್ಲಿದ್ದ ಪ್ರಾದೇಶಿಕ ಪಕ್ಷಗಳು-ಪುಡಿ ಪಕ್ಷಗಳು, ಒಂದೆರಡು ಸ್ಥಾನಗಳ ಕೊರತೆ ಬಿದ್ದರೆ ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದ ಪಕ್ಷೇತರರು, ಇವರೆಲ್ಲರ ಬೆಂಬಲಿಗರು, ಕಾರ್ಯಕರ್ತರು ಹೀಗೆ ಇವರೆಲ್ಲರಿಗೂ ಅನಿರೀಕ್ಷಿತ ಆಘಾತ ನೀಡಿದ ದೇಶದ ಜನಸಾಮಾನ್ಯರು ಇದುವರೆಗಿನ ಚುನಾವಣೆಯಲ್ಲೇ ಸದ್ಯ ಅತ್ಯಂತ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇಂಥ ಬೆಳವಣಿಗೆ ಅಗತ್ಯ. ಆದರೆ ಈ ಚರ್ಚೆಯ ಆಯಾಮಗಳನ್ನು ಗಮನಿಸುವುದು ಒಳಿತು.

ಉಳಿದ ಸಂಗತಿ ಹಾಗಿರಲಿ. ನಮ್ಮ ದೇಶದಲ್ಲಿ ಒಂದು ಎಂಬುದನ್ನು ಜನ ದೇವರಲ್ಲೂ ಇಟ್ಟುಕೊಂಡಿಲ್ಲ. ಅವು ಕೋಟಿ ಲೆಕ್ಕದಲ್ಲಿ ಇವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯವಂತೂ ಪ್ರತಿ ಹತ್ತಿಪ್ಪತ್ತು ಕಿ.ಮೀ.ಗೆ ಬದಲಾಗುತ್ತದೆ. ಏಕರೂಪತೆಯನ್ನು ಒಪ್ಪದ, ಆದರೆ ಭಾವನಾತ್ಮಕ ಏಕತೆಗೆ ಮಹತ್ವ ನೀಡುವ ಇಂಥ ದೇಶದಲ್ಲಿ ಯಾವುದೋ ಒಂದು ಐಡಿಯಾಲಜಿ ಸ್ಥಾಪನೆಯಾಗಬೇಕು ಎಂದು ಬಯಸುವುದು ಭ್ರಮೆಯಲ್ಲದೇ ಬೇರಲ್ಲ. ಜನತಂತ್ರ ವ್ಯವಸ್ಥೆ ಇಲ್ಲಿನ ವೈವಿಧ್ಯಕ್ಕೆ ಬೆನ್ನೆಲುಬಾಗಿದೆ. ಹೀಗಾಗಿಯೇ ಒಂದೇ ಐಡಿಯಾಲಜಿ ಹೇರುವ ಯಾರಿಗೇ ಆದರೂ ಜನ ಹೊರಹೋಗುವ ಬಾಗಿಲು ತೋರುತ್ತಾರೆ. ತ್ರಿಪುರಾ, ಪ.ಬಂಗಾಳದಲ್ಲಿ ಮಾರ್ಕ್ಸ್ ವಾದಿಗಳು ಜಾಗಖಾಲಿಮಾಡಿದ್ದು ಹೀಗೆ. ಸ್ವಾತಂತ್ರ್ಯ ಬಂದ ಹತ್ತಿಪ್ಪತ್ತು ವರ್ಷ ದೇಶಾದ್ಯಂತ ಸಾರಾಸಗಟು ಸ್ಥಾನ ಪಡೆಯುತ್ತಿದ್ದ ಕಾಂಗ್ರೆಸ್ ಬೆರಳೆಣಿಕೆ ಸ್ಥಾನ ಪಡೆಯಲೂ ಹೆಣಗಾಡುವ ಸ್ಥಿತಿ ಬಂದಿದ್ದೂ ಹೀಗೆಯೇ. ಹಿಂದೂ, ಮುಸ್ಲಿಂ, ಮಾರ್ಕ್ಸ್, ಮಾವೋ, ನೆಹರೂ ಹೀಗೆ ಒಂದನ್ನೇ ಸ್ಥಾಪಿಸಬಯಸುವ ಎಲ್ಲ ಬಗೆಯ ಮೂಲಭೂತವಾದಿಗಳನ್ನೂ ಜನ ತೂಗುವುದು ಒಂದೇ ತಕ್ಕಡಿಯಲ್ಲಿ.

ಈ ಫಲಿತಾಂಶದಿಂದ ಎಡ ಚಿಂತಕರು ಎಂದು ಗುರುತಿಸಿಕೊಂಡವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಪ್ರಚಾರದ ವೇಳೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲವರಂತೂ ನಾಪತ್ತೆಯಾಗಿದ್ದಾರೆ. ಇನ್ನು ಕೆಲವರಿಗೆ ಜೀವನವೇ ಸಾಕಾಗಿದೆ. ಎಡಪಂಥೀಯ ಚಿಂತನೆಯಲ್ಲಿ ಗುರುತಿಸಿಕೊಂಡಿದ್ದವರೊಬ್ಬರು ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಭೇಟಿಯಾದರು. ಅವರ ಮುಖದಲ್ಲಿ ಯಾವ ಉತ್ಸಾಹವೂ ಇರಲಿಲ್ಲ. ಸೂತಕದ ಕಳೆ. ಏನಾಯ್ತು ಅಂದೆ. ಪ್ರಳಯವೇ ಆಗಿ ಇವರೊಬ್ಬರೇ ಬದುಕಿದ್ದಾಗ ಆಗುವ ಹತಾಶೆ, ಸಂಕಟ, ಆಘಾತಗಳೆಲ್ಲ ಅವರಲ್ಲಿ ಮೈವೆತ್ತಿದ್ದವು. ಯಾಕೆಂದು ಕೇಳಿದರೆ ಮೋದಿ ಪ್ರಧಾನಿಯಾಗ್ತಾರಲ್ಲ, ಬಿಜೆಪಿ ಈ ಪಾಟಿ ಸ್ಥಾನ ಗೆದ್ದುಬಿಟ್ತಲ್ಲ ಅಂತೆಲ್ಲ ಗೋಳು ತೋಡಿಕೊಳ್ಳತೊಡಗಿದರು. ಹೋಗ್ಲಿ ಬಿಡಿ ಸಾರ್, ಜನತಂತ್ರ ವ್ಯವಸ್ಥೆಯಲ್ಲಿ ಒಮ್ಮೆ ಅವರು ಮತ್ತೊಮ್ಮೆ ಮತ್ತೊಬ್ಬರು ಮೇಲೆ ಕೆಳಗೆ ಆಗುವುದು ಸಹಜವಲ್ಲವೇ? ಅದನ್ಯಾಕೆ ಇಷ್ಟು ಸೀರಿಯಸ್ಸಾಗಿ ತಗೋತೀರಿ ಅಂದೆ. ಹಂಗಲ್ಲ ಸಾರ್, ನಿಮಗೆ ಅರ್ಥವಾಗಲ್ಲ, ದೇಶದ ಕತೆ ಏನು ಅಂತೆಲ್ಲ ವರಾತ ಶುರು ಇಟ್ಟುಕೊಂಡರು.

ಇತ್ತ ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೇನೆ ಎಂದಿದ್ದ ಅನಂತಮೂರ್ತಿಯವರ ವಿರುದ್ಧ ಮೋದಿ ಅಭಿಮಾನಿಗಳೋ ಪಕ್ಷದ ಕಾರ್ಯಕರ್ತರೋ ಪ್ರತಿಭಟನೆ ನಡೆಸುತ್ತ, ಮೂರ್ತಿಯವರು ಕೂಡಲೇ ದೇಶ ಬಿಡಲಿ ಎಂದು ಒಂದೆಡೆ ಕೂಗಿಕೊಳ್ಳುತ್ತಿದ್ದರೆ ಮತ್ತೊಂದಿಷ್ಟು ಅವಿವೇಕಿಗಳು ಮೂರ್ತಿಯವರಿಗೆ ಪರದೇಶಕ್ಕೆ ವೀಸಾ ಪಾಸ್‍ಪೋರ್ಟು ಮಾಡಿಸುತ್ತೇವೆ, ಒಂದು ರೂ.ಕೊಡಿ ಎನ್ನುವ ಕೆಲಸಕ್ಕೆ ಕೈ ಹಾಕಿದ್ದರು. ಇಂಥ ಒಬ್ಬರನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಳ್ಳಬೇಕಾಯಿತು. ಅನಂತಮೂರ್ತಿಯವರು ಕೂಡ ನಮ್ಮ ಜನತಂತ್ರ ವ್ಯವಸ್ಥೆಯ ಭಾಗ, ನಿಮಗೆ ಇಷ್ಟವಾಗದಿದ್ದರೂ ವ್ಯವಸ್ಥೆಯ ಬಗ್ಗೆ ಅವರಿಗೆ ಅನಿಸಿದ್ದನ್ನು ಹೇಳುವ ಹಕ್ಕು ಖಂಡಿತ ಅವರಿಗೆ ಇದೆ. ಅವರು ಹಾಗಂದಿದ್ದಕ್ಕೆ ನೀವು ತೋರಿಸುತ್ತಿರುವ ಪ್ರತಿಕ್ರಿಯೆ ಯಾರೂ ಒಪ್ಪುವಂಥದ್ದಲ್ಲ ಎಂದೆ. ನೀವು ಸರಿ ಇಲ್ಲ ಅನ್ನುತ್ತ ಮುಖ ತಿರುಗಿಸಿದರು. ಅನಂತಮೂರ್ತಿಯವರ ಹೇಳಿಕೆಯಲ್ಲೂ ಮೋದಿ ಅಭಿಮಾನಿಗಳಲ್ಲೂ ಐಡಿಯಾಲಜಿಯ ಅತಿರೇಕವೇ ಇರುವುದು. ತಾನು ಪ್ರತಿಪಾದಿಸುವ ತತ್ವ, ಸಿದ್ಧಾಂತಗಳನ್ನು ಬಿಟ್ಟು ಬೇರೆಯದನ್ನು ಒಪ್ಪಲು ಐಡಿಯಾಲಜಿ ಅವಕಾಶ ನೀಡುವುದಿಲ್ಲ. ಇದು ನಿಜಕ್ಕೂ ಅಪಾಯಕರ.

ಯಾವುದೋ ಐಡಿಯಾಲಜಿಗಳಿಗೆ ತಮ್ಮನ್ನು ಮಾರಿಕೊಂಡ ಇಂಥ ಎರಡು ಅತಿರೇಕಗಳ ನಡುವೆ ಜನ ಸಾಮಾನ್ಯರ ದೃಷ್ಟಿ ಮತ್ತು ತೀರ್ಪುಗಳಿವೆ. ಇವರು ಯಾರಿಗೂ ಅರ್ಥವಾಗುತ್ತಿಲ್ಲ! ಯಾವುದೇ ಪಕ್ಷ ಅಧಿಕಾರದ ಸೂತ್ರ ಹಿಡಿದರೂ ಅದು ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಆಡಳಿತ ನಡೆಸಬೇಕಾಗುತ್ತದೆ. ತಮ್ಮ ಮೂಗಿನ ನೇರಕ್ಕೆ, ತಮ್ಮ ಇಷ್ಟದಂತೆ ಸವಾರಿ ಮಾಡಲಾಗದು. ಬಿಜೆಪಿ ಅನಿರೀಕ್ಷಿತ ಪ್ರಮಾಣದಲ್ಲಿ ಬಹುಮತ ಪಡೆದಿರಬಹುದು, ಕಾಂಗೈ ಅನಿರೀಕ್ಷಿತ ಸೋಲು ಕಂಡಿರಬಹುದು. ಇವರಿಬ್ಬರು ಇನ್ನೂ ಗೆಲುವಿನ ಸಂಭ್ರಮ ಹಾಗೂ ಸೋಲಿನ ಸಂಕಟದಲ್ಲಿದ್ದರೆ ಜನ ತಮ್ಮ ಕೆಲಸವಾಯಿತೆಂದು ತಮ್ಮ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಸಾಹಿತ್ಯವಾಗಲಿ, ರಾಜಕೀಯವಾಗಲಿ, ಯಾವುದೇ ಕ್ಷೇತ್ರದಲ್ಲಿ ಐಡಿಯಾಲಜಿಗೆ ಅಂಟಿಕೊಳ್ಳುವ ಪ್ರವೃತ್ತಿ ಅದರ ಅನುಯಾಯಿಗಳಿಗೆ, ಕಾರ್ಯಕರ್ತರಿಗೆ ಮುಖ್ಯವೂ ಅನಿವಾರ್ಯವೂ ಆಗಬಹುದು, ಆದರೆ ಜನ ಸಾಮಾನ್ಯರಿಗೆ ಅಲ್ಲ. ಈ ಬಾರಿ ಬಿಜೆಪಿಗೆ ಈ ಪಾಟಿ ಒಲಿದಿದ್ದಾರೆ ಅಂದರೆ ಬಿಜೆಪಿಯ ಐಡಿಯಾಲಜಿಗೆ ಜನ ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟಿದ್ದಾರೆ ಎಂದೂ ಅಲ್ಲ, ಕಾಂಗೈ ತಿರಸ್ಕøತವಾಗಿದೆ ಅಂದರೆ ಅದರ ಐಡಿಯಾಲಜಿಗೆ ಇನ್ನು ಜಾಗವಿಲ್ಲ ಎಂದೂ ಅಲ್ಲ. ಈ ಫಲಿತಾಂಶದಿಂದ ಬಿಜೆಪಿ ಕೊಬ್ಬುವಂತಿಲ್ಲ, ಕಾಂಗೈ ಹತಾಶವಾಗಬೇಕಿಲ್ಲ.

ಕಾಲಧರ್ಮಕ್ಕೆ ಅನುಗುಣವಾಗಿ ಸ್ಪಂದಿಸುವವರನ್ನು ಜನ ಗೌರವಿಸುವ ರೀತಿಯೇ ಬೇರೆ. ಜನತಂತ್ರ ವ್ಯವಸ್ಥೆಯಲ್ಲಿ ಕೆಲಸಕ್ಕೂ ಚಿಂತನೆಗೂ ವ್ಯಾಪಕ ಅವಕಾಶಗಳಿವೆ. ಕಾಂಗೈ ಸೋತಿದ್ದಕ್ಕೆ ಅವರ ಪಕ್ಷದಲ್ಲಿ ಆತ್ಮಾವಲೋಕನ ನಡೆದು ಸೋನಿಯಾ, ರಾಹುಲ್ ಪದತ್ಯಾಗ ಬೇಡ ಅಂದರೆ ಅದು ಪಕ್ಷದವರ ತೀರ್ಮಾನವಷ್ಟೇ, ಜನತೆಯ ತೀರ್ಮಾನವಾಗಬೇಕಿಲ್ಲ. ಆ ಪಕ್ಷದಲ್ಲಿ ವಯಸ್ಸು, ಅನುಭವಗಳಲ್ಲಿ ರಾಹುಲ್-ಪ್ರಿಯಾಂಕ ಗಾಂಧಿಯ ಎರಡರಷ್ಟು ವಯಸ್ಸಾದವರಿದ್ದಾರೆ. ಅಂಥವರನ್ನೆಲ್ಲ ಮೂಲೆಗೆ ತಳ್ಳಿ, ಪಕ್ಷ ಹಾಗೂ ದೇಶದ ಅಧಿಕಾರಗಳನ್ನು ತಮ್ಮ ಮನೆತನದ ಜಹಗೀರು ಎಂಬಂತೆ ಕಾಣುವುದನ್ನು ಜನ ಬಹುಶಃ ಬಯಸಲಾರರು. ಕಾಂಗೈನಲ್ಲಿ ಸದ್ಯ ಅಂತಿಮ ತೀರ್ಮಾನ ಇರುವುದು ಯಾರಲ್ಲಿ ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ, ಸುತ್ತಲ ದೇಶಗಳಿಂದ ಭೀತಿ ಎದುರಿಸುತ್ತಿದೆ, ಆಂತರಿಕ ಸಮಸ್ಯೆಗಳು ಉಲ್ಬಣವಾಗುತ್ತಿವೆ, ಆಹಾರ ಪದಾರ್ಥಗಳ ಬೆಲೆ ಗಗನ ದಾಟಿವೆ. ಇಂಥ ಸುಡು ಸಮಸ್ಯೆಗಳನ್ನು ನಿವಾರಿಸುವ ಸಾಮಥ್ರ್ಯ ಮೇಲ್ನೋಟಕ್ಕಾದರೂ ಸಾಬೀತಾಗುವ ವ್ಯಕ್ತಿಯ ಅಗತ್ಯ ಜನರಿಗಿದೆ. ಇಂದಿರಾ ವಂಶದ ಕುಡಿ ಎಂಬುದನ್ನು ಬಿಟ್ಟರೆ ಇಂಥವನ್ನು ನಿಭಾಯಿಸುವ ಸಾಮಥ್ರ್ಯ ರಾಹುಲ್‍ರಲ್ಲಿ ಕಾಣುತ್ತಿಲ್ಲ. ಅವರ ಸಂದರ್ಶನ, ಮಾತುಕತೆಯ ಧಾಟಿಗಳನ್ನು ಕಂಡ ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ. ಹತ್ತು ವರ್ಷ ಆಡಳಿತ ನೀಡಿದ ಶುದ್ಧಾಂಗ ಮನಮೋಹನ ಸಿಂಗ್‍ರನ್ನು ರಾಹುಲ್ ಬೀಳ್ಕೊಡುಗೆ ಸಂದರ್ಭದಲ್ಲಿ ಕೂಡ ಅವರು ಪಕ್ಷದ ನಿಷ್ಠಾವಂತ, ತಾನು ಮಾಲೀಕ ಎಂಬಂತೆ ನಡೆಸಿಕೊಂಡ ರೀತಿ ಸರಿಯಲ್ಲ. ಮೋದಿಗೆ ಎದುರಾಗಿ ಪ್ರಬಲ ಅಭ್ಯರ್ಥಿಯನ್ನು ತೋರಿಸುವುದು ಕಾಂಗೈಗೆ ಕಷ್ಟವೇನೂ ಇರಲಿಲ್ಲ. ರಾಹುಲ್ ಪಕ್ಷದ ವರಿಷ್ಠ ಸ್ಥಾನದಲ್ಲಿರುವ ಕಾರಣ ಇವೆಲ್ಲ ಆ ಪಕ್ಷದವರಿಗೆ ಸರಿ ಎನಿಸಬಹುದು. ಹಿರಿತಲೆಗಳಿಗೆ ಇದು ಸರಿ ಇಲ್ಲ ಅನಿಸಿದರೂ ಕುಟುಂಬ ನಿಷ್ಠೆಯಿಂದ ಹೇಳಲು ಬಾಯಿ ಬರದೇ ಇರಬಹುದು. ಆದರೆ ಜನಸಾಮಾನ್ಯರು ತಮ್ಮನ್ನು ಯಾರಿಗೂ ತೆತ್ತುಕೊಂಡಿಲ್ಲ!

ರಾಜ್ಯದಲ್ಲಿ ಕಾಂಗೈ ಆಡಳಿತ ನಡೆಸುತ್ತಿರುವುದರಿಂದ, ಜನಪ್ರಿಯ ಯೋಜನೆ ಜಾರಿ ಮಾಡಿದ್ದರಿಂದ ಇಲ್ಲಿನ ಎಲ್ಲ ಸ್ಥಾನಗಳೂ ತಮ್ಮದೇ ಎಂದುಕೊಂಡಿದ್ದವರಿಗೂ ಫಲಿತಾಂಶ ಬಿಸಿ ಮುಟ್ಟಿಸಿದೆ. ಹಳಸಲು ಜಾತ್ಯತೀತ ವರಾತಗಳು, ಗುಂಪುಗಾರಿಕೆ, ಜನಪ್ರಿಯ ಯೋಜನೆಗಳನ್ನು ನೀಡಿ ಜನರನ್ನು ಸೆಳೆಯುವ ತಂತ್ರ, ಭಾಷಣದ ಗಿಮಿಕ್‍ಗಳು ರಾಜಕೀಯದಲ್ಲಿ ಕೆಲಸಮಾಡುವ ಕಾಲ ಇದಲ್ಲ. ಹೊಸ ಮತದಾರರ ಆಸೆ-ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಂಪ್ರದಾಯಿಕ ರಾಜಕೀಯ ನೇತಾಗಳು ಹಾಗೂ ಪಂಡಿತರು ಖಂಡಿತ ಸೋತಿದ್ದಾರೆ. ಸರ್ಕಾರ ಅನ್ನಭಾಗ್ಯ ನೀಡಿದೆ, ಶಾದಿಭಾಗ್ಯ ನೀಡಿದೆ, ಸಾಲಮನ್ನಾ ಮಾಡಿದೆ ಆದರೂ ಓಟು ಹಾಕಿಲ್ಲ ಅಂದರೆ ಜನ ದಡ್ಡರಲ್ಲ. ಇಂಥ ಜನಪ್ರಿಯ ಯೋಜನೆಗಳ ಹೊರೆ ಸುತ್ತುಬಳಸಿ ಇಂದಲ್ಲ ನಾಳೆ ತಮ್ಮ ಕಾಲನ್ನೇ ಸುತ್ತಿಕೊಳ್ಳುತ್ತವೆ ಎಂಬ ಅರಿವು ಅವರಿಗೆ ಇದೆ. ಯಾವುದೇ ಯೋಜನೆ ಕೊಡಿ, ಜನ ಬೇಡ ಎನ್ನುವುದಿಲ್ಲ. ಹಾಗೆಂದ ಮಾತ್ರಕ್ಕೆ ಅದನ್ನೆಲ್ಲ ಜನ ಒಪ್ಪಿದ್ದಾರೆ ಎಂದರ್ಥವಲ್ಲ. ವಾಸ್ತವಿಕತೆಗೆ ದೂರವಾದ ಸಂಗತಿಯನ್ನು ಒಪ್ಪಲು ಜನ ಕಣ್ಣು-ಕಿವಿ ಮುಚ್ಚಿ ಕೂತಿರುವುದಿಲ್ಲ. ಮಾಧ್ಯಮ-ಮಾಹಿತಿಗಳಿಂದ ಸುತ್ತಲ ವಿದ್ಯಮಾನಗಳ ಅರಿವು ಕ್ಷಣಕ್ಷಣಕ್ಕೂ ಜನರ ಮುಂದೆ ಬಂದು ಬೀಳುವ ಕಾಲ ಇದು. ವ್ಯಕ್ತಿಯಲ್ಲಿ ಕಿಂಚಿತ್ತಾದರೂ ರಚನಾತ್ಮಕ ಕೆಲಸ, ನೇರ ನಡೆ, ನುಡಿ ಕಂಡರೂ ವಿಶ್ವಾಸ ಹುಟ್ಟುವ ಸಂದರ್ಭ ಇದು.

ಚುನಾವಣಾ ಸಂದರ್ಭದ ಅನಂತಮೂರ್ತಿಯವರ ಮಾತುಗಳನ್ನೇ ನೋಡಿ: ಜನತಂತ್ರ ವ್ಯವಸ್ಥೆಯಲ್ಲಿ ಜನಾಭಿಪ್ರಾಯವೇ ಮೇಲು, ಅದನ್ನು ಗೌರವಿಸಬೇಕು; ಗುಜರಾತಿನ ಜನ ಅವರನ್ನು ಮತ್ತೆ ಮತ್ತೆ ಆರಿಸಿರಬಹುದು, ಕೋರ್ಟುಗಳು ಮೋದಿ ತಪ್ಪಿತಸ್ಥರಲ್ಲ ಎಂದು ತೀರ್ಪು ನೀಡಿರಬಹುದು, ಆದರೆ ಅದನ್ನು ಒಪ್ಪಲಾಗದು; ಸದ್ಯದ ರಾಜಕಾರಣಿಗಳಲ್ಲಿ ದೇವೇಗೌಡರೇ ಮೇಲು; ಸಿದ್ಧರಾಮಯ್ಯ ಪ್ರಾಮಾಣಿಕರು, ಅವರ ಪಕ್ಷ ಅಧಿಕಾರಕ್ಕೆ ಬರಬೇಕು; ಕಾಂಗ್ರೆಸ್‍ನಲ್ಲಿ ಸರ್ವೋದಯ ಚಿಂತನೆ ಇದೆ, ಅದಕ್ಕೇ ನೀಲೇಕಣಿಗೆ ನಮ್ಮ ಬೆಂಬಲ. ಬಿಜೆಪಿಗೆ ಬಹುಮತ ಬಂದರೆ ತಪ್ಪಿಲ್ಲ, ಆದರೆ ಅಷ್ಟೊಂದು ಬರಬಾರದು; ನಾನು ಮತ ಹಾಕುವುದಾದರೆ ಒಬ್ಬ ಕಮ್ಯೂನಿಸ್ಟನಿಗೆ; ಆದರೆ ಅವರಿಲ್ಲ, ಅವರನ್ನು ಬಿಡಿ; ಆಮ್ ಆದ್ಮಿ ಪಾರ್ಟಿ ಗೆಲ್ಲಬೇಕು, ಇತ್ಯಾದಿ, ಇತ್ಯಾದಿ-ಇವೆಲ್ಲ ಅವರ ಮಾತುಗಳೇ. ಮತ ಹಾಕುವ ಸಾಮಾನ್ಯ ಜನತೆಗೆ ಇಂಥ ಗೊಂದಲಗಳಿಲ್ಲ!

ಇಂದಿನ ವೇಗದ ಜೀವನಶೈಲಿಯಲ್ಲಿ ಜಾತಿ-ಧರ್ಮಗಳ ಕುರಿತ ಒಣ ಚರ್ಚೆಗಳಿಗೆ ಸಮಯವನ್ನೂ ಒಂದೊಂದು ಸತ್ಯವನ್ನು ಹೇಳುವ ಐಡಿಯಾಲಜಿಗಳಿಗೆ ತಲೆಯನ್ನೂ ಹಾಳುಮಾಡಿಕೊಳ್ಳಲು ಜನ ತಯಾರಿಲ್ಲ. ಇದರ ಪರಿಣಾಮವೇ ಈ ಚುನಾವಣಾ ಫಲಿತಾಂಶ. ಇದನ್ನು ಅರ್ಥಮಾಡಿಕೊಳ್ಳದೇ ಗೆದ್ದವರ-ಸೋತವರ ಪರ ವಿರೋಧ; ಸಂಭ್ರಮ-ಸಂಕಟಗಳಲ್ಲೇ ಕಾಲ ಹರಣ ಮಾಡುತ್ತ ಕೂತರೆ ಅಂಥವರಿಗೆ ಮತ್ತೊಂದು ಕೈ ನೋಡಿಕೊಳ್ಳುವ ಸಂದರ್ಭಕ್ಕೆ ಜನಸಾಮಾನ್ಯರು ಕಾಯಬಲ್ಲರೇ ವಿನಾ ಮತ್ತೇನೂ ಹೇಳುವುದಿಲ್ಲ!

2 ಟಿಪ್ಪಣಿಗಳು Post a comment
 1. Universal
  ಜೂನ್ 9 2014

  ಜನ ಸಾಮಾನ್ಯರಿಗೆ ಬೇಕಾಗಿರುವುದು ಒಣ ಮಾತುಗಳಲ್ಲ, ನೇರ ನಡೆ, ನುಡಿ ಹಾಗೂ ರಚನಾತ್ಮಕ ಕೆಲಸ.

  ಉತ್ತರ
 2. Nagaraj
  ಜೂನ್ 9 2014

  URA should not have told like this ….I will leave this country if Mody gets majority ..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments