ವಿಷಯದ ವಿವರಗಳಿಗೆ ದಾಟಿರಿ

ಜೂನ್ 10, 2014

11

ಎಲ್ಲರ ಕನ್ನಡದ ಶಂಕರ ಬಟ್ ರಿಗೊಂದು ಪತ್ರ

‍ನಿಲುಮೆ ಮೂಲಕ

– ವಿನಾಯಕ್ ಹಂಪಿಹೊಳಿ

ಶಂಕರ ಬಟ್ಅಲ್ರೀ ಶಂಕರ್,

ನೀವೇನೋ ಹಳೆಗನ್ನಡ, ತಮಿಳು, ಮಲಯಾಳಂ, ತುಳು, ಹವ್ಯಕ ಕನ್ನಡ ಎಲ್ಲಾ ಓದೀರಿ. ಇವೆಲ್ಲಾ ದ್ರವಿಡ ಭಾಷಾಗಳು, ಹಿಂಗಾಗಿ ಋ, ಖ, ಘ, ಙ, ಛ, ಝ, ಞ, ಠ, ಢ, ಥ, ಧ, ಫ, ಭ ಎವೆಲ್ಲ ಅಕ್ಷರಗಳು ಕನ್ನಡದಾಗ ಬ್ಯಾಡಾ ಅಂತನೂ ಹೇಳೀರಿ. ಅಚ್ಚಗನ್ನಡ ಶಬ್ದದಾಗ ಮಹಾಪ್ರಾಣ ಅಕ್ಷರಗಳು ಬರಂಗಿಲ್ಲ ಅಂತನೂ ಅಂದ್ರಿ. ಜತಿಗೆ, ಷ ಬ್ಯಾಡ ಅಂತನೂ ಅಂದ್ರಿ. ಆ ಬದ್ಲಾವಣಿ ನಿಮ್ಮಿಂದನಽ ಶುರೂನೂ ಮಾಡಿದ್ರಿ. ನಿಮ್ಮ ಹೆಸರು ಭಟ್ಟ ಅಂತಿತ್ತು ಅದನ್ನು ಬಟ್ ಅಂತ ಮಾಡ್ಕೊಂಡೀರಿ. ಇರ್ಲಿ. ಇಂಗ್ಲೀಷನ್ಯಾಗ ಬರ್ಯೋಮುಂದ ಜ್ವಾಕಿ. ಆದ್ರ ನಿಮ್ಮ ಸಲಹಾ ಸರ್ಕಾರ ಕೇಳ್ತದೋ ಬಿಡ್ತದೋ, ಆದರೆ ಅದಕ್ಕೂ ಮೊದ್ಲ ನನ್ನ ಮಾತಿಗೂ ಸ್ವಲ್ಪ ಬೆಲಿ ಕೊಟ್ಟು ವಿಚಾರ ಮಾಡ್ರೀ..

ನಾವು ಧಾರವಾಡದ ಮಂದಿ. ನಮ್ಮ ಉತ್ತರ ಕರ್ನಾಟಕದ ಕನ್ನಡ, ಕನ್ನಡ ಹೌದೋ ಅಲ್ಲೋ? ಉತ್ತರ ಕರ್ನಾಟಕದ ಕನ್ನಡದಾಗ, ಸಾಹಿತ್ಯ, ಕಾದಂಬರಿ, ಕಾವ್ಯಗಳು ಐತೋ ಇಲ್ಲೋ? ಮುಂದನೂ ಈ ಕನ್ನಡ ಇರ್ಬಕೋ ಬ್ಯಾಡೋ? ನೀವು ಎಲ್ಲ ಮಹಾಪ್ರಾಣಗಳನ್ನು ನಮ್ಮ ಕನ್ನಡದ ಲಿಪಿಯಿಂದ ತಗದ್ರ ನಮ್ಮ ಸಾಹಿತ್ಯಕ್ಕ ಯಾವ ಲಿಪಿ ಇಟ್ಕೋಳೂಣು? ಬೆಂಗ್ಳೂರವ್ರು ಸತ್ಯ ಅನ್ಲಿಕ್ಕೆ ನಿಜ, ದಿಟ ಅನ್ನು ಪದ ಉಪಯೋಗಸ್ತಾರ. ಆದ್ರ ನಮ್ದು ಗಂಡ್ ಕನ್ನಡ ನೋಡ್ರಿ. ಖರೇನ ಹೇಳ್ತೀನಿ, ನಾವು ’ಖರೆ’ ಅನ್ನುಮುಂದ ವಟ್ಟ ’ಕರೆ’ ಅಂತ ಯಾವತ್ತೂ ಅನ್ನಂಗಿಲ್ರೀ. ನೀವು ಹವ್ಯಕರು, ಅಡಿಗಿ ಹೆಂಗಾಗ್ಯದ ಅಂತ ಕೇಳಿದ್ರ ’ಬಾಽಽರಿ ಚೊಲೊ ಆಯ್ದು ಮಾರಾಯ’ ಅಂತೀರಿ. ಆದ್ರ ನಾವು ನಮ್ಮ ಗಂಡ್ ಕನ್ನಡದಾಗ ’ಭಾರೀಽಽ ಛೊಲೋ ಆಗ್ಯದ್ ಲೇ ಮಂಗ್ಯಾ’ ಅಂತೀವಿ.

ನಾವು ಕಿಟಕಿ ಅನ್ನಂಗಿಲ್ಲ. ಸ್ಪಷ್ಟ ಖಿಡಕಿ ಅಂತೀವಿ. ಸ್ಪಷ್ಟ ಶಬ್ದದಾಗೂ ’ಷ’ ಅಕ್ಷರ ಭಾರೀ ಖಡಕ್ಕಾಗಿ ಬರ್ತೈತಿ ನಮ್ಮ ಮಾತ್ನ್ಯಾಗ. ನಾವು ನಿಮ್ಮಂಗ ಗಂಟೆ ಅನ್ನಂಗಿಲ್ರೀ. ಫಕ್ತ ಘಂಟಿ ಅಂತೀವಿ. ನೀವು ಸೆಲೆ ಅಂತೀರಿ. ನಾವು ನೀರಿನ ಝರಿ ಅಂತೀವಿ. ಅನ್ನಕ್ಕ ಹಚ್ಕೊಳ್ಳಿಕ್ಕೆ ಮೈದಾ ಹಿಟ್ಟಿಲೆ ಝುಣಕ ಅಂತ ಮಾಡ್ತೇವಿ. ಬಯ್ಯೋಮುಂದ ’ಭಾಮ್ಟ್ಯಾ’ ಅಂತ ಬೈತೀವಿ. ನಿಮಗ ಉಚ್ಚಾರ ಮಾಡ್ಲಿಕ್ಕೆ ತ್ರಾಸಾಗ್ತದ, ಅದ್ರ ನಮಗ ಅಗ್ದೀ ಸರಽಽಳ ನೋಡ್ರಿ. ಯಾರರೇ ಭಾಳಽಽ ದಪ್ಪ್ ಇದ್ರ ಢೇಪ್ಯಾ ಅಂತೀವಿ. ಠೇವಣಿ ಶಬ್ದ ಹೆಂಗದನೋ ಹಂಗ ಬಳಸ್ತೀವಿ. ಬಹಳ ಅನ್ನಂಗಿಲ್ರೀ. ತಟ್ಟೆ ಅನ್ನಂಗಿಲ್ರೀ. ಥಾಬಾಣ ಅಂತೀವಿ. ಕಚ್ಚಿ ಉಡೋ ದೊಡ್ಡ ಪಂಜಾಕ್ಕ ಧೋತ್ರ ಅಂತೀವಿ.

ಧಾರವಾಡ ಊರನ್ನು ತಪ್ಪಿಯೂ ದಾರವಾಡ ಅಂತ ಯಾರೂ ಅನ್ನಂಗಿಲ್ರೀ. ಇನ್ನು ಅಲ್ಲಿ ಸ್ಪೆಷಲ್ ಫೇಮಸ್ ಫೇಡೆನ್ನ ನಾವು ಎಂದರೆ ’ಪೇಡಾ’ ಅಂದಿದ್ದನ್ನ ನೀವು ನೋಡೀರೇನು? ಞ ಅಕ್ಷರ ತಗದ್ರ, ನಮ್ಮ ಕಯ್ಯಾರ ಕಿಞ್ಞಣ್ಣ ರೈ ಬಗ್ಗೆ ಏನಂತ ಬರಿಯೂಣು?

ನಾ ಹೇಳೋದಿಷ್ಟ ನೋಡ್ರೀ. ನಮ್ದು ಗಂಡ್ ಕನ್ನಡ ಯಾಕಂದ್ರ ನಾವು ಕಚಟತಪ ಹೆಂಗ್ ಉಪಯೋಗಿಸ್ತೀವೋ ಹಂಗ, ಖಛಠಥಫ ಗಳನ್ನೂ ಉಪಯೋಗಿಸ್ತೀವಿ. ನೀವು ಹಂಗೂ ಎಲ್ಲ ಮಹಾಪ್ರಾಣ ತಗದ್ರ ನಾವು ನಮ್ಮ ಸಾಹಿತ್ಯಕ್ಕ ಮರಾಠಿ, ತೆಲಗು ಲಿಪಿ ನೋಡ್ಕೋಬೇಕಾಗ್ತದ. ಆಗ ಸುಮ್ನ ಲಿಪಿ ಬ್ಯಾರೆ ಆತು ಅಂತ ಬ್ಯಾರೆ ರಾಜ್ಯ ಮಾಡ್ಬಿಡ್ತಾರ ಈ ರಾಜಕಾರಣಿಗಳು. ಅದಕ್ಕ ಹೇಳ್ಳಿಕತ್ತೀನಿ, ಈಗಿರೋ ಕನ್ನಡದಾಗ ಯಾವ ಅಕ್ಷರಾನೂ ತಗೀಬ್ಯಾಡ್ರಿ. ನಮ್ಮ ಕನ್ನಡ ಜಾತಿಯಿಂದ, ಜಾತಿಗೆ, ಊರಿಂದ ಊರಿಗೆ ಬ್ಯಾರೆ ಬ್ಯಾರೆ ಅದ. ಹಿಂಗಾಗಿ, ನಮ್ಮ ಕನ್ನಡದ ಲಿಪಿ, ಕರಾವಳಿ ಹವ್ಯಕರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ರಾಯಚೂರ್ ಸಾಬ್ರ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು. ಬೆಳಗಾವಿ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು, ಚಾಮರಾಜನಗರದ ಕನ್ನಡ ಬರಿಲಿಕ್ಕೂ ಬರ್ತಿರ್ಬೇಕು. ಹುಡಗ್ರಿಗೆ ೧೦ ಅಕ್ಷರ ಕಲೀಲಿಕ್ಕೆ ಜಾಸ್ತಿ ಆಗ್ತದ ಅಂತ ಹೇಳಿ ಅವನ್ನೆಲ್ಲ ತಗದು ಈಗಾಗ್ಲೇ ಹುಡಗ್ರಿಗೆ ಗೊತ್ತಿರೊ ೧೦ ಸಾವಿರ ಶಬ್ದಕ್ಕ ಬ್ಯಾರೆ ೧೦ ಸಾವಿರ ಶಬ್ದ ಹುಡಿಕಿ ಅದನ್ನ ಹುಡಗ್ರ ತಲ್ಯಾಗ ತುಂಬುದು ಎಲ್ಲಿ ಶಾಣ್ಯಾತನ?

ಇಂತಿ ನಿಮ್ಮ
ಗಂಡು ಕನ್ನಡದ ಅಭಿಮಾನಿ

11 ಟಿಪ್ಪಣಿಗಳು Post a comment
 1. Universal
  ಜೂನ್ 10 2014

  ಇರೋದು ಇದ್ಹಾಗೆ ಇದ್ರೆ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಬದಲಾವಣೆಗಳನ್ನೂ ನಾವು ಸ್ವಾಗತಿಸುತ್ತಿರಬೇಕು. ಎರಡು ರೀತಿಯ ಶ/ಷ ಗಳು ಬೇಕಿಲ್ಲ. ಇದು ನನ್ನ ಅನಿಸಿಕೆ. ‘ಕಯ್ಯಾರ ಕಿಞ್ಞಣ್ಣರೈ’ ಅವರ ಹೆಸರನ್ನು ‘ಕಯ್ಯಾರ ಕಿಯ್ಯಿಣ್ಣ ರೈ’ ಅಂತಲೂ ಸುಲಭವಾಗಿ ಬರೆಯಬಹುದು.

  ಉತ್ತರ
 2. Bindu
  ಜೂನ್ 10 2014

  Chappaa:Le 🙂

  ಉತ್ತರ
 3. Hemanth.M
  ಜೂನ್ 10 2014

  ಭಾಷೆ ಭಾವನೆಗೆ ಸ೦ಬದ್ದಿಸಿದ್ದು…ಆಯಾ ಭಾಗದ ಭಾಷಿಕರಲ್ಲಿ ವಿಭಿನ್ನ ಉಚ್ಚರಣೆ….ಮಾತನಾಡುವ ಶೈಲಿ ಸಹಜ….ಭಾಷೆಯನ್ನು ಹೇಗೆ ಮಾತನಾಡಬೇಕು, ಯಾವ ಅಕ್ಷರ ಇರಬೇಕು, ಇರಬಾರದು, ಅನ್ನೋದು ಈಗಿನ ಸನ್ನಿವೇಶದಲ್ಲಿ ಅವಶ್ಯವಲ್ಲ….ಆ ಭಾಷೆಯ ಉಳಿವಿಗೆ ಶ್ರಮಿಸುವುದು ಅವಶ್ಯ…ಮು೦ದಿನ ಪೀಳಿಗೆಗೆ ಕನ್ನಡ ಉಳಿಯುವ೦ದೆ ಮಾಡುವುದು ನಮ್ಮ ಕೈಲಿದೆ.

  ಉತ್ತರ
 4. ಜೂನ್ 10 2014

  ಇದೇ ಮಾತನ್ನೇ ಎಷ್ಟು ಸಲ ಹೇಳ್ತಿದ್ದರೂ “ಎಲ್ಲರ” ಅಂತ ಸೇರಿಸಿದ ಮಾತ್ರಕ್ಕೆ “ಎಲ್ಲರದ್ದಾಗಿ ಬಿಟ್ಟಿತು” ಅಂತ ಭಾವಿಸಿ ಅದನ್ನೇ ಡಂಗೂರ ಸಾರುತ್ತಿರುವ “ಕೆಲವರು” ಕೇಳಬೇಕಲ್ಲ!

  ಉತ್ತರ
 5. ಜೂನ್ 10 2014

  ಕನ್ನಡದಲ್ಲಿ ಯಾವ ಅಕ್ಷರ ಇರಬೇಕು ಅಥವಾ ಇರಬಾರದು ಎನ್ನುವುದಕ್ಕಿಂತ ಇವತ್ತು ಮುಖ್ಯವಾಗಿರೋದು ಕನ್ನಡ ಇರಬೇಕೋ ಬೇಡವೋ ಅಂತ.
  ಹಿಂದೆ ಮೇಲ್ವರ್ಗದ ಮನೆಯ ಮಕ್ಕಳು ಕಾನ್ವೆಂಟ್ ಶಾಲೆಗೆ ಹೋಗುತಿದ್ದರು. ಇವತ್ತು ಕೆಳಮಧ್ಯಮ ವರ್ಗದವರೂ ತಮ್ಮ ಮಕ್ಕಳನ್ನು ಕಷ್ಟ ಪಟ್ಟಾದರೂ ಇಂಗ್ಲಿಷ್ ಶಾಲೆಗೇ ಕಳುಹಿಸುತ್ತಿದ್ದಾರೆ.
  ಇಂಗ್ಲಿಷ್ ಶಾಲೆಯಲ್ಲಿ ಕಲಿತ ಮಕ್ಕಳು ಕನ್ನಡ ಬರೆಯೋದು ಇರಲಿ, ಮಾತನಾಡೋಕ್ಕೂ ಇಷ್ಟ ಪಡೋದಿಲ್ಲ!
  ಇದು ಇದೇ ರೀತಿ ಮುಂದುವರೆದರೆ ಇನ್ನೊಂದು ಇಪ್ಪತ್ತೈದು ವರುಷದಲ್ಲಿ ಕನ್ನಡವೇ ಇರೋದಿಲ್ಲ!
  ಹೀಗಾಗಿ ಕನ್ನಡದಲ್ಲಿ ಷ ಬೇಕೋ ಮಹಾಪ್ರಾಣ ಅಗತ್ಯವಿದೆಯೋ ಇಲ್ಲವೋ ಎನ್ನುವುದಕ್ಕಿಂತ, ಕನ್ನಡವನ್ನು ಉಳಿಸಿಕೊಳ್ಳೋದು ಹೇಗೆ ಎಂದು ಚಿಂತಿಸುವುದೇ ಇಂದಿನ ಅಗತ್ಯ.

  ಉತ್ತರ
 6. ಜುಲೈ 19 2014

  ವಿ -ನಾಯಕರೆ !
  ಕನ್ನಡಿಗರು ಕನ್ನಡದ್ದೇ ಆದ ಪದಗಳನ್ನು ಬಳಸಿದರೆ ನಿಮಗೆ ಯಾಕೆ ಸಿಟ್ಟು ಅಂತ ಗೊತ್ತಾಗ್ತಿಲ್ಲ !?
  ಮೈಸೂರು ಅಂತ ಹೇಳಿದರು & ಮಯ್ಸೂರು ಅಂತ ಹೇಳಿದರು ಕಿವಿಗೆ ಒಂದೇ ತರವಾಗಿ ಕೇಳುತ್ತದೆ.!
  ನಾವು ಮಾತನಾಡುವಾಗ ಮಹಾಪ್ರಾಣಗಳನ್ನು ಬಳಸುವಿದಿಲ್ಲ,ಬಳಸಿದರು ಗೊತ್ತೇ ಆಗುವುದಿಲ್ಲ ಬಿಡಿ ಆದ್ದರಿಂದ ಇವುಗಳು ಇದ್ದರೆಷ್ಟು ಬಿಟ್ಟರೆಷ್ಟು.
  ಮೊಬೈಲು ಹಳೆತಾದರೆ ನಾವುಗಳು ಇದನ್ನು ‘ಪ್ರಾಚೀನವಾದ ಮೊಬೈಲು’ ಅಂತ ಹೇಳ್ತೀವ ? ಇಲ್ಲ ‘ಹಳೆ ಮೊಬೈಲು ಅಂತ ಹೇಳ್ತೀವಿ ! ಮಾತಾಡುವ ನುಡಿ ಮತ್ತು ಬರೆಯುವ ನುಡಿಗೆ ಅಂತಾರೆ ಏಕೆ ?ಆದ್ದರಿಂದ ಎಲ್ಲರ ಕನ್ನಡವನ್ನು ಬಳಸಿಕೊಳ್ಳುವವರು/ಬೇರೆಯುವವರನ್ನು ಅವರಪಾಡಿಗೆ ಬಿಟ್ಟುಬಿಡ್ರಪ್ಪ !

  ಉತ್ತರ
 7. ಜುಲೈ 19 2014

  ^ ಅಂತರ

  ಉತ್ತರ
 8. ಜಗನ್
  ಫೆಬ್ರ 13 2022

  ವಿನಾಯಕ್ ಹಂಪಿಹೊಳಿ ಯವರೇ ಅದೇ ಹೈದ್ರಾಬಾದ್ ಕರ್ನಾಟಕದ ಮಂದಿಗೆ za, fa ಲಿಪಿ ಕೊಡೋರು ಯಾರು
  ಬೆಂಗಳೂರು ಜನ ಕೊಡ, fa za ಬಳಸುತ್ತಾರೆ ಅದಕ್ಕೆ ಕನ್ನಡದಲ್ಲಿ ಲಿಪಿ ಇದ್ದವಾ
  ಆ ಲಿಪಿಗಳನ್ನ ಕನ್ನಡಕ್ಕೆ ಸೇರಿಸೋದು ಯಾವಾಗ?
  ಹಾಗೆ ಹವಿಗನ್ನಡ ದಲ್ಲಿ ಹಳೆಗನ್ನಡದ ರ್ರ, ಳ zha ಇವೆ ಅದಕ್ಕೆ ಹೊಸಗನ್ನಡಕ್ಕೆಆ ಲಿಪಿಗಳನ್ನ ಸೇರಿಸೋದು ಯಾವಾಗ?

  ಉತ್ತರ
  • ಫೆಬ್ರ 15 2022

   ಫ಼ ಮತ್ತು ಜ಼ ಅಕ್ಷರಗಳನ್ನು ಉಪಯೋಗಿಸಿ, ತೊಂದರೆಯಿಲ್ಲ.

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments