ವಿಷಯದ ವಿವರಗಳಿಗೆ ದಾಟಿರಿ

ಜೂನ್ 25, 2014

1

ಇತಿಹಾಸ ಮರು ಕಲಿಸಬೇಕೇ?

‍ನಿಲುಮೆ ಮೂಲಕ

-ಅ.ಸು.ರವೀಂದ್ರ,ಶಿವಮೊಗ್ಗ

Eminent HistoriansHistory Repeats. ಇತಿಹಾಸ ಮರುಕಳಿಸುತ್ತಿದೆ. ಯಾವುದೇ ಮಹತ್ತರ ಘಟನೆ ಪುನರಾವರ್ತನೆಗೊಂಡಾಗ ಮಾಧ್ಯಮಗಳಲ್ಲಿ ಕೇಳಿ ಬರುವ ಪದಗಳಿವು. ಆದರೆ ಈಗಿನ ಚರ್ಚೆಯ ವಿಷಯ ಇತಿಹಾಸವನ್ನು ಮರು `ಕಲಿಸುವ` ಬಗ್ಗೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಭಾ.ಜ.ಪ. ಸರ್ಕಾರ ಅಧಿಕಾರಕ್ಕೆ ಬರುತ್ತಲೆ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯ ಪ್ರಕಾರ ಇತಿಹಾಸದ ಪಾಠಗಳನ್ನು ತಿದ್ದಬಹುದೆಂಬ ಹುಯಿಲು ಎಡಪಂಥೀಯ ಹಾಗೂ ಮೆಕಾಲೆ ಗೋತ್ರಜರಿಂದ ಆರಂಭವಾಗಿದೆ. ಎನ್.ಡಿ.ಎ. ಸರ್ಕಾರದ ಅಧಿಕಾರದ ಸಂದರ್ಭದಲ್ಲಿಯೇ ಆಗಿನ ಸಚಿವ ಶ್ರೀ ಮುರಳಿ ಮನೋಹರ ಜೋಷಿಯವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರಾದರೂ ಹೆಚ್ಚಿನ ಯಶ ಕಂಡಿರಲಿಲ್ಲ. ಆಗ ಹುಸಿ ಜಾತ್ಯಾತೀತ ವಾದದ ಭ್ರಮೆ ನಮ್ಮ ರಾಜಕೀಯ ಕ್ಷೇತ್ರವನ್ನು ಆವರಿಸಿದ್ದ ಕಾಲ. ಮೈತ್ರಿಕೂಟದ ಮಿತ್ರ ಪಕ್ಷಗಳೂ ಈ ವಿಚಾರದಲ್ಲಿ ಭಾ.ಜ.ಪ.ವನ್ನು ಬೆಂಬಲಿಸಲು ತಯಾರಿರಲಿಲ್ಲ. ಬೌದ್ಧಿಕ ಕ್ಷೇತ್ರದಲ್ಲಿ ದಶಮಾನಗಳಿಂದ ಪ್ರತಿಷ್ಠಾಪಿಸಿದ್ದ ವರ್ಗಕ್ಕೆ ಇತಿಹಾಸ, ಪರಂಪರೆ, ಸ್ವಾಭಿಮಾನಿ ರಾಷ್ಟ್ರ ಭಕ್ತಿಯಂತಹ ವಿಷಯಗಳು ಹೇಗೂ ವರ್ಜ್ಯವಾಗಿದ್ದವು. ಇವರ ತಾಳಕ್ಕೆ ಕುಣಿಯುವ ಮಾಧ್ಯಮಗಳು ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಈ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲು ಅವಕಾಶವನ್ನೇ ಕೊಡಲಿಲ್ಲ. ಸ್ವಯಂ ಬಹುಮತವಿಲ್ಲದ ಪಕ್ಷ ದಿಟ್ಟ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಗಂಗೆ ಯಮುನೆಯರಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಾಪಿತ ಎಲ್ಲಾ ಸೈದ್ಧಾಂತಿಕ ಮಿಥ್ಯೆಗಳನ್ನು ನಿವಾಳಿಸಿ ಮತದಾರ ತೀರ್ಪು ನೀಡಿದ್ದಾನೆ, ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಹೊಸ ಶಕೆಯನ್ನು ಆರಂಭಿಸುವ ಆಡಳಿತ ಪಕ್ಷದ ಭರವಸೆಗಳನ್ನು ನಂಬಿ ಆದೇಶ ನೀಡಿದ್ದಾನೆ.

ಈಗ ಪ್ರಶ್ನೆ ಎದ್ದಿರುವುದು ನಮಗೆ ಇಂತಹ ಇತಿಹಾಸದ ಪಾಠಗಳ ಪುನರ್ವಿಮರ್ಶೆ ಅಗತ್ಯವಿದೆಯೋ ಇಲ್ಲವೋ ಎಂಬುದು. ಇದೆ ಎಂದಾದಲ್ಲಿ ಹಿಂದಿನ ವ್ಯವಸ್ಥೆಯ ಲೋಪವನ್ನು ಒಫ್ಫಿಕೊಂಡು ಸರಿಪಡಿಸಿಕೊಳ್ಳಬೇಕು. ಇಲ್ಲವೆಂದಾದಲ್ಲಿ ಈವರೆಗೆ ಅನುಸರಿಸಿದ ಕ್ರಮಗಳಿಂದ ನಾವು ಸಾಧಿಸಿರುವುದಾದರೂ ಏನು ಎಂಬುದರ ಮೌಲ್ಯಮಾಪನ ಆಗಬೇಕು. ೧೯೪೭ ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದಾಗಲೇ ಇಂತಹ ಕ್ರಮದ ಅಗತ್ಯ ಇತ್ತು. ಆಗ ನಮಗೆ ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿತ್ತು. ಆದರೆ ಎರಡು ಶತಮಾನಗಳ ಅವರ ಆಡಳಿತದ ಪ್ರಭಾವದಿಂದಾಗಿ ನಮ್ಮ ವೈಚಾರಿಕ, ಸಾಂಸ್ಕೃತಿಕ ವಿಚಾರಗಳ ದಾಸ್ಯದ ಮನಸ್ಥಿತಿ ಬದಲಾಗಲೇ ಇಲ್ಲ. ಪಂಡಿತ್ ನೆಹರೂರವರು ಮನಸ್ಸು ಮಾಡಿದಲ್ಲಿ ಒಂದು ಸ್ವತಂತ್ರ ಸ್ವಾಭಿಮಾನಿ ರಾಷ್ಟ್ರಕ್ಕೆ ಅಗತ್ಯವಾಗಿದ್ದ, ತನ್ನ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನವುಳ್ಳ, ಅಂತಹ ಧೀಃಶಕ್ತಿಯನ್ನು ಪ್ರೇರೇಪಿಸಬಲ್ಲ ನವಪೀಳಿಗೆಯನ್ನು ಬೆಳೆಸಬಹುದಿತ್ತು. ಸ್ವಾತಂತ್ರ್ಯ ಪಡೆದ ಘಳಿಗೆಯಲ್ಲಿನ ಜನಮಾನಸದ ಹುಮ್ಮಸ್ಸು, ಮನಸ್ಥಿತಿ, ಅಂತಹ ಕ್ರಮಗಳಿಗೆ ಪೂರಕವಾಗಿ ಸ್ಪಂದಿಸುವುದರಲ್ಲಿ ಅನುಮಾನವಿರಲಿಲ್ಲ. ಅವರ ಅಂದಿನ ಆಡಳಿತಾತ್ಮಕ ಕ್ರಮಗಳು ಪ್ರಜಾ ಸಂಕುಲಕ್ಕೆ ಹೊಟ್ಟೆ ಬಟ್ತೆ ನೀಡುವ ಮಟ್ಟಿಗೆ ಸೀಮಿತವಾಗಿದ್ದವು ಅನ್ನಿಸುತ್ತವೆ. ದೇಶವೊಂದರ ಚುಕ್ಕಾಣಿ ಹಿಡಿದ ನಾಯಕತ್ವಕ್ಕೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಆದ್ಯತೆಗಳೂ ಇರುತ್ತವೆ ಎಂಬುದನ್ನು ಅಂದಿನ ಸರ್ಕಾರ ಮರೆತಿದ್ದೇ ನಾವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವಿಸುತ್ತಿರುವ ಅನಾಥ ಪ್ರಜ್ಞೆಗೆ ಕಾರಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಮೊಗಲ್ ಶಾಹಿಯ ಛಾಪನ್ನೇ ಮೈವೆತ್ತುಕೊಂಡಿದ್ದ ಆನಂದಭವನದ ಅರಸೊತ್ತಿಗೆಯ ಸಂಸ್ಕಾರ ಪಡೆದ ಮೈಮನಸ್ಸುಗಳಿಗೆ ಭವ್ಯ ಭಾರತದ ಕನಸುಗಳು ಬಿದ್ದಿರಲಿಕ್ಕಿಲ್ಲ. ಅಂತಹ ಕನಸು ಹೊಂದಿದ್ದ ಸುಭಾಷ್, ಸಾವರ್ಕರ್, ಶ್ಯಾಂ ಪ್ರಸಾದ್ ಮುಖರ್ಜಿಯವರನ್ನು ನಿವಾರಿಸಿಕೊಂಡಾಗಿತ್ತು. ಇವರು ಅಧಿಕಾರಕ್ಕೆ ಬಂದ ಕೂಡಲೇ ಎರವಲು ಪಡೆದ ವಿಚಾರಧಾರೆಯ ಸಿದ್ಧಾಂತಿಗಳು ಶಿಕ್ಷಣ ಕ್ಷೇತ್ರದ ಆಯಕಟ್ಟಿನಲ್ಲಿ ಪ್ರತಿಷ್ಟಾಪನೆಗೊಂಡು ಇತಿಹಾಸದ ಪಠ್ಯಗಳನ್ನು ಹೇಗೆ ತಿದ್ದಿದರೆಂಬುದನ್ನು ನಾವೆಲ್ಲಾ ಕಂಡಿದ್ದೇವೆ. (ಶ್ರೀ ಅರುಣ್ ಶೌರಿಯವರ Eminent Historians’ (ಕನ್ನಡ ಅನುವಾದ ` ಮಹಾನ್ ಇತಿಹಾಸಕಾರರು`: ಶ್ರೀ ಮಂಜುನಾಥ ಅಜ್ಜಂಪುರ, ಪ್ರಕಟಣೆ ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರು) ಪುಸ್ತಕದಲ್ಲಿ ಈ ಶೈಕ್ಷಣಿಕ ಮಾಮರದ ಬಂದಳಿಕೆಗಳು ನಡೆಸಿನ ಭಾನಗಡಿಗಳೆಲ್ಲಾ ಎಳೆ ಎಳೆಯಾಗಿ ಅನಾವರಣಗೊಂಡಿವೆ).

ವಿಶ್ವ ಕಾರ್ಮಿಕ ಭಾತೃತ್ವದ ಕನಸು ಕಂಡವರ,’ಧರ್ಮವೆಂಬುದು ಧಾರ್ಮಿಕತೆಯ ಅಮಲೇರಿಸುವ ಅಫೀಮು”, “ರಾಷ್ಟ್ರ ಭಕ್ತಿ ಎಂಬುದು ವರ್ಗ ಸಂಘರ್ಷವನ್ನು ಹತ್ತಿಕ್ಕಲು ಬೂರ್ಜ್ವಾ ಶಕ್ತಿಗಳ ಅಸ್ತ್ರ” ,ಎಂಬೆಲ್ಲಾ ನಂಬಿಕೆಗಳು ಸ್ವಾತಂತ್ರೋತ್ತರ ಭಾರತವನ್ನು ಸ್ವತಂತ್ರ ವಿಚಾರಧಾರೆಯ ಸ್ವಾಭಿಮಾನಿ ರಾಷ್ಟ್ರವನ್ನಾಗಿ ರೂಪಿಸಲು ವಿಫಲವಾಯಿತು.ಈ ಇತಿಹಾಸಕಾರರ ಪುಟಗಳಲ್ಲಿ ಭಾರತದ ಇತಿಹಾಸ ಸಾವಿರ ವರ್ಷಗಳಿಗಿಂತ ಹಿಂದೆ ಹೋಗುವುದೇ ಇಲ್ಲ, ಭೂಮಿ ಒಂದು ಗೋಲವೆಂದು ಮೊದಲೇ ಅರಿತಿದ್ದ, ಗಣಿತ ಶಾಸ್ತ್ರಕ್ಕೆ ಶೂನ್ಯವನ್ನು ಕೊಡುಗೆಯಾಗಿ ನೀಡಿದ, ದಶಾವತಾರಗಳಲ್ಲೇ ಡಾರ್ವಿನ್‌ನ ವಿಕಾಸವಾದವನ್ನು ಕಂಡುಕೊಂಡ, ರಾಜ್ಯಶಾಸ್ತ್ರದ ಸತ್ವಸಾರಗಳನ್ನೆಲ್ಲ ತನ್ನ ಅರ್ಥಶಾಸ್ತ್ರದಲ್ಲಿ ದಾಖಲಿಸಿದ ಗುರು ಪರಂಪರೆಯ ಹಿರಿಮೆ ಸಾರಿದ ಚಾಣಕ್ಯ ಇವೆಲ್ಲ ನಮ್ಮ ಭವ್ಯ ಪರಂಪರೆಯ ಹಿರಿಮೆ ಸಾರುವ ಹೆಗ್ಗಳಿಕೆಗಳು ಎಂಬುದನ್ನು ಬಿಂಬಿಸಲು ಯತ್ನಿಸಲೇ ಇಲ್ಲ. ನಮ್ಮ ದೇಶದ ಇತಿಹಾಸ, ಅದರ ಸತ್ವ, ಶಕ್ತಿಗಳ ಬಗೆಗಿನ ತಿಳುವಳಿಕೆಯನ್ನು ನೀಡಿ ನಮ್ಮ ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸಿ ಚಾರಿತ್ರ್ಯಶೀಲರನ್ನಾಗಿಸುವುದರಲ್ಲಿ ತಪ್ಪೇನಿದೆ? ಇದು ಯಾರನ್ನೂ ಹೀಗಳೆಲಾಗಲಿ, ದಮನ ಮಾಡಲಾಗಲೀ ಮಾಡುತ್ತಿಲ್ಲವಲ್ಲ. ಬರೀ ಕಲಿಕೆಯ ಉದ್ದೇಶದ ಗೊಡ್ಡು ಶಿಕ್ಷಣ ನಿಮಗೆ ಪಾಂಡಿತ್ಯವನ್ನು ತಂದು ಕೊಡಬಹುದು, ಒಳ್ಳೆಯ ಉದ್ಯೋಗ- ಸಾಕಷ್ಟು ಹಣವನ್ನೂ ಸಂಪಾದಿಸಿಕೊಡಬಹುದು, ಆದರೆ ನೈತಿಕ ತಳಹದಿ ಇಲ್ಲದ, ಬರಿ ಲೌಕಿಕ ಸುಖೋಪಭೋಗಗಳನ್ನು ಬೆಂಬತ್ತಿದ ಶಿಕ್ಷಣದಿಂದ ಸದಾ ಅಶಾಂತಿ, ನೆಮ್ಮದಿ ರಹಿತ, ಕ್ಷೋಭೆಯಿಂದ ಕೂಡಿದ ಸಮಾಜದ ನಿರ್ಮಾಣ ನಮಗೆ ಬೇಕೆ? ಪಾಶ್ಚಾತ್ಯ ಸಮಾಜದ ದುರವಸ್ಥೆಯನ್ನು ನೋಡಿಯೂ ಪಾಠ ಕಲಿಯಬೇಡವೆ? ಸಚ್ಚಾರಿತ್ರ್ಯಶೀಲ ನಾಗರಿಕರ ನಿರ್ಮಾಣಕ್ಕೆ ಉತ್ತಮ ನೈತಿಕ ಶಿಕ್ಷಣ ಅವಶ್ಯವೆಂಬುದನ್ನು ನಾವು ಅರಿಯಬೇಕಲ್ಲವೇ? ಕಳೆದ ದಶಕಗಳಲ್ಲಿನ ಈ ರೀತಿಯ ಪಠ್ಯ ಕ್ರಮಗಳು ಉದ್ಯೋಗ ಅರಸುವ ರೋಬೋಟ್ ಸ್ವರೂಪಿಗಳನ್ನು ಸೃಷ್ಟಿಸುವಲ್ಲಿ ಮಾತ್ರ ಯಶಸ್ವಿಯಾಗಿವೆ ಎಂದು ಅನ್ನಿಸುವುದಿಲ್ಲವೇ? ಅವುಗಳ ಮೌಲ್ಯ ಮಾಪನ ಇಂದಿನ ಅವಶ್ಯಕತೆ ಅಲ್ಲವೇ?

ನಮಗೆ ಇಂದು ಆದರ್ಶವಾಗಬೇಕಾಗಿರುವುದು ಜಪಾನ್ ಮತ್ತು ಇಸ್ರೇಲಿನಂತಹ ಶಕ್ತಿಗಳು. ಪ್ರಪಂಚದ ಎರಡನೇ ಮಹಾಯುದ್ಧದಲ್ಲಿ ಅಣುಬಾಂಬ್ ದಾಳಿಗೆ ತುತ್ತಾದ ನಂತರ ಜಪಾನ್ ಇಂದು ವಿಶ್ವದ ಆರ್ಥಿಕ ದಿಗ್ಗಜಗಳಲ್ಲಿ ಒಂದಾಗಿದ್ದರೆ ಅದಕ್ಕೆ ಅವರ ಕರ್ತೃತ್ವ ಶಕ್ತಿ ಮತ್ತು ಕ್ಷಮತೆ ಮಾತ್ರವಲ್ಲ ತಮ್ಮ ತಾಯ್ನಾಡನ್ನು ಮತ್ತೆ ಶಕ್ತಿ ಸಂಪನ್ನ ರಾಷ್ಟ್ರವಾಗಿ ರೂಪಿಸಬಲ್ಲೆವು ಎಂಬ ಅವರ ಸಂಕಲ್ಪ ಶಕ್ತಿ ಹಾಗೂ ಅಂತಹ ಅರ್ಪಣಾ ಮನೋಭಾವವನ್ನು ಸೃಷ್ಟಿಸಬಲ್ಲ ಸಂಸ್ಕಾರಗಳೂ ಕಾರಣ. ಆಧುನಿಕ ಜಗತ್ತಿನ ಜ್ಞಾನ ಭಂಡಾರವನ್ನು ಇಂಗ್ಲೀಷಿನ ಆಸರೆ ಇಲ್ಲದೆಯೂ ಸೂರೆಗೊಳ್ಳಬಹುದೆಂಬುದನ್ನು ಸಾಧಿಸಿ ತೋರಿಸಿದರು. ಇನ್ನು ಇಸ್ರೇಲಿನಂತಹ ಸಣ್ಣ ರಾಷ್ಟ್ರವೊಂದು ಸುತ್ತಲೂ ತನ್ನನ್ನು ಬೇಟೆಯಾಡಲು ಸೀಳುನಾಯಿಗಳಂತೆ ಕಾದಿರುವ ಅರಬ್ ರಾಷ್ಟ್ರಗಳನ್ನು ಸದಾ ಎಚ್ಚರದಿಂದ ಹದ್ದು ಬಸ್ತಿನಲ್ಲಿಟ್ಟುರುವುದು ತಾಯ್ನೆಲಕ್ಕಾಗಿ ಎಲ್ಲವನ್ನೂ ಅರ್ಪಿಸಿ ದುಡಿಯುವ ಅವರ ಬದ್ಧತೆ. ಇಂದು ತನ್ನ ಇಂತಹ ಅಂತಃಸತ್ವದಿಂದಲೇ ಅಮೆರಿಕದ ಸೆನೆಟ್‌ನಲ್ಲೂ ತನ್ನ ಪರ ಲಾಬಿ ಮಾಡಬಲ್ಲ ಗುಂಪೊಂದನ್ನು ಇಸ್ರೇಲ್ ಹೊಂದಿದೆ.ರಾಷ್ಟ್ರದ ಪ್ರಗತಿಯ ಅಳತೆಗೋಲು ಬರೀ ಅದರ ಆರ್ಥಿಕ ಸದೃಢತೆಯ ಮೇಲೆ ನಿರ್ಧರಿಸಬೇಕಿಲ್ಲ. ಇಂದು ನಾವು ಬೌದ್ಧಿಕವಾಗಿ ಜಗತ್ತಿನಲ್ಲಿ ಮೇರುಸ್ಥಾನವನ್ನು ಉಳಿಸಿಕೊಂಡಿದ್ದೇವೆ, ಆ ಸಂಪತ್ತನ್ನು ಉಳಿದ ರಾಷ್ಟ್ರಗಳಿಗೆ ಮಾರಿಕೊಳ್ಳುವ ಬದಲು ಅವುಗಳಿಗೆ ಸ್ವಾಭಿಮಾನದ ಶಿಕ್ಷಣದ ಎರಕ ಹೊಯ್ದು ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲ ಶಕ್ತಿಕೇಂದ್ರಗಳಾಗಿ ಏಕೆ ಉಪಯೋಗಿಸಿಕೊಳ್ಳಬಾರದು? ಈ ಸಂಪನ್ಮೂಲವನ್ನು ತಯಾರು ಮಾಡಲು ಅಗತ್ಯ ಸಂಸ್ಕಾರ- ಶಿಕ್ಷಣ ಅವಶ್ಯಕವಲ್ಲವೇ? ಜಾತಿ- ಮತ -ಕುಲಗಳ ಭಿನ್ನತೆಯನ್ನೆ ಹೋರಾಟದ ವಸ್ತುವಾಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಬದಲು ರಾಷ್ಟ್ರ ನಿರ್ಮಾಣದ ಕನಸು ನನಸಾಗಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಇಂದಿನ ಅಗತ್ಯವನ್ನು ಮೈಗೂಡಿಸಿಕೊಂಡು, ನಮ್ಮಲ್ಲಿನ ನ್ಯೂನ್ಯತೆಗಳನ್ನು ಸಾಮರಸ್ಯದಿಂದಲೇ ನಿವಾರಿಸಿಕೊಂಡು ಹೋಗುವುದು ಇಂದಿನ ಅಗತ್ಯವಲ್ಲವೇ? ಈ ನಿಟ್ಟಿನಲ್ಲಿ ನಾವು ಮುಂದಿನ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಪಠ್ಯಕ್ರಮದಲ್ಲಿನ ಬದಲಾವಣೆ ಅವಶ್ಯ. ಸ್ವಾತಂತ್ರ್ಯ ಬಂದಾಗಲೇ ಆಗಬೇಕಾಗಿದ್ದ ಈ ಕೆಲಸ ಈಗ ಶುರುವಾಗಬೇಕಾಗಿದೆ. BETTER LATE THAN NEVER. ಭಾರತ ಗಣತಂತ್ರದ ೨.೦ ಆವೃತ್ತಿಯಲ್ಲಿ ಇಂತಹ ಚೇತೋಹಾರಿ ಕ್ರಮಗಳು ಭವ್ಯ ಭಾರತದ ನಿರ್ಮಾಣದ ಕನಸನ್ನು ನನಸಾಗಿಸಲಿ.

1 ಟಿಪ್ಪಣಿ Post a comment
  1. hemapathy
    ಜೂನ್ 27 2014

    ನಿಜ. ನಾವು ಜಪಾನ್ ಮತ್ತು ಇಸ್ರೇಲ್ ನಂತಹ ರಾಷ್ಟ್ರಗಳಿಂದ ಕಲಿಯಬೇಕಾದ್ದು, ಕಲಿತು ಅಳವಡಿಸಿಕೊಳ್ಳಬೇಕಾದ್ದು ಬಹಳಷ್ಟಿದೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments