ಕನ್ನಡದ ಅಳಿವು–ಉಳಿವು ಮತ್ತು ಭಾಷಾ ಮಾಧ್ಯಮ: ಕೆಲವು ಟಿಪ್ಪಣಿಗಳು
– ಎಂ.ಎಸ್. ಚೈತ್ರ, ನಿರ್ದೇಶಕರು, “ಆರೋಹಿ” ಸಂಶೋಧನಾ ಸಂಸ್ಥೆ, ಬೆಂಗಳೂರು
ಕಳೆದ ಒಂದು ತಿಂಗಳಿನಿಂದ ಭಾರತದ ಸುಪ್ರೀಂ ಕೋರ್ಟ್‍ನ ತೀರ್ಪೊಂದು ಕರ್ನಾಟಕದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ, ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕುರಿತು ನೀಡಿದ ತೀರ್ಪಿನ ಕಾರಣಕ್ಕಾಗಿ ಎಲ್ಲ ಹುಟ್ಟು ಹೋರಾಟಗಾರರು, ಸಾಹಿತಿಗಳು, ಬುದ್ಧಿ ಜೀವಿಗಳು ದಿಢೀರನೇ ರಾಜ್ಯದಲ್ಲಿ ಕನ್ನಡದ ಡಿಂಡಿಮ ಬಾರಿಸಲು ಪ್ರಾರಂಭಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಕನ್ನಡದ ಕೆಲವು ಚಿಂತಕರು ಆವೇಶ ಪೂರಿತ ಹೋರಾಟದ ಹಾದಿಯನ್ನು ಬಿಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ಗೌರವಿಸಿ, ಕನ್ನಡದ ಬಗ್ಗೆ ಗಂಭೀರವಾಗಿ ಯೋಚಿಸಲು ಇದು ಸರಿಯಾದ ಸಮಯವೆಂದು ವಾದಿಸುತ್ತಿದ್ದಾರೆ. ನಮ್ಮ ಹಿರಿಯರ-ಹೋರಾಟಗಾರರ ಆದೇಶ-ಅಬ್ಬರಗಳಿಗೆ ಮಣಿದ ಕೆಲವರು ಸುಮ್ಮನಾದರೆ, ಮತ್ತೆ ಕೆಲವರ ಪಿಸು ಮಾತುಗಳು ಯಾರಿಗೂ ಕೇಳಿಸುತ್ತಿಲ್ಲ. ಈ ಎಲ್ಲ ಹಿನ್ನಲೆಯಲ್ಲಿ ಸ್ವಲ್ಪ ಕ್ರಮಬದ್ಧವಾಗಿ, ಈಗಿರುವ ನ್ಯಾಯಾಲಯದ ತೀರ್ಪು ಮತ್ತು ಅದಕ್ಕೂ ಕನ್ನಡದ ಉಳಿವಿಗೂ ಇರುವ ಸಂಬಂಧದ ಕುರಿತು ಯೋಚಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತೇನೆ.
ಮೇಲೆ ತಿಳಿಸಿದ ಯೋಚನೆ ಮಾಡಲು ನಾನು ಕೆಲವು ಪ್ರಮುಖ ವಿಷಯಗಳನ್ನು ಪ್ರಾರಂಭದಲ್ಲೇ ಪಟ್ಟಿ ಮಾಡಿ, ಅದೇ ಕ್ರಮದಲ್ಲಿ ಚರ್ಚೆಯನ್ನು ಕಟ್ಟುವ ಸಣ್ಣ ಪ್ರಯತ್ನವನ್ನು ಮಾಡುತ್ತೇನೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಭಾಷೆಯ ಉಳಿವಿನ ಕುರಿತು ನಾವು ಚಿಂತಿಸುವ ಮುನ್ನ ನಮಗೆ ತಿಳಿಯ ಬೇಕಿರುವ ಸಂಗತಿಗಳು ಯಾವವು ಮತ್ತು ಆ ರೀತಿಯ ಚಿಂತನೆಯ ಪ್ರಯತ್ನವನ್ನು ಮಾಡುವುದೇ ಆದಲ್ಲಿ, ಆಗ ನಮ್ಮ ಮುಂದೆ ಏಳುವ ಸವಾಲುಗಳು ಯಾವ ರೀತಿಯಲ್ಲಿರುತ್ತವೆ ಎಂಬುದನ್ನು ಹುಡುಕುವುದೇ ಈ ಲೇಖನದ ಮೂಲ ಆಶಯ.
ಈ ಆಶಯಗಳ ಹಿನ್ನೆಲೆಯಲ್ಲಿ, ಈ ಲೇಖನವು ತೆಗೆದುಕೊಳ್ಳಬಹುದಾದ ವಿಷಯಗಳನ್ನು ಪಟ್ಟಿಮಾಡುವ ಪ್ರಯತ್ನ ಆರಂಭಿಸುತ್ತೇನೆ.
1. ಅಸಲಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯದ ಕೇಂದ್ರವೇನು? ಅದರಿಂದ ನಮ್ಮ ಕನ್ನಡದ ಹೋರಾಟಗಾರರು ಗುರುತಿಸುತ್ತಿರುವ ಸಮಸ್ಯೆ ಯಾವುದು ಮತ್ತು ಆ ಕುರಿತು ನಮ್ಮ ಬುದ್ಧಿ ಜೀವಿಗಳು ಸರಿಯಾದ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಎನ್ನುವುದು.
2. ನಮ್ಮ ಹೋರಾಟಗಾರರು ವಾದಿಸುವಂತೆ, ಕನ್ನಡ ಮಾಧ್ಯಮದ ಶಿಕ್ಷಣಕ್ಕೂ ಮತ್ತು ಕನ್ನಡ ಭಾಷೆಯ ಅಳಿವು-ಉಳಿವಿಗೂ ಏನಾದರೂ ಸಂಬಂಧವಿದೆಯೇ? ಮತ್ತು ಹೇಗೆ ಕನ್ನಡ ಮಾಧ್ಯಮ ಶಾಲೆಗಳು ಕನ್ನಡವನ್ನು ಉಳಿಸಬಲ್ಲವು? ಎಂಬುದು.
3. ಅಂತಿಮವಾಗಿ ಈ ಎಲ್ಲ ವಾದಗಳ ಗುಣ ದೋಷಗಳನ್ನು ಗುರುತಿಸಿ, ಕನ್ನಡವನ್ನು ಕುರಿತಂತೆ ಒಂದು ಗಂಭೀರ ಯೋಚನೆಯನ್ನು ಹುಟ್ಟುಹಾಕಲು ಸಾಧ್ಯವಾದರೆ, ಆ ಮಾರ್ಗದ ಸಾಧ್ಯತೆಯನ್ನು ಹುಡುಕುವುದು.
ಈ ಮೂರು ವಿಷಯಗಳನ್ನು ಕುರಿತು ಚರ್ಚಿಸಲು ಪ್ರಯತ್ನಿಸುವಾಗ ಅನೇಕ ಜ್ಞಾನ ಶಾಖೆಗಳ ಸಂಶೋಧನೆಯ ಫಲಿತಗಳನ್ನು ಬಳಸಿಕೊಂಡಿದ್ದರೂ ಈ ಹಂತದ ಚರ್ಚೆಯಲ್ಲಿ, ಆ ಆಕರಗಳ ನಿರ್ದಿಷ್ಟ ಉಲ್ಲೇಖ ಮತ್ತು ವಿವರಣೆಗಳ ಅಗತ್ಯ ಇಲ್ಲಿ ಇಲ್ಲವೆಂದೆನಿಸಿರುವುದರಿಂದ, ಅವುಗಳನ್ನು (ಪಠ್ಯಗಳನ್ನು) ಇಲ್ಲಿ ಉಲ್ಲೇಖಿಸುವ ಪ್ರಯತ್ನ ಮಾಡಿಲ್ಲ. ಈ ಲೇಖನವೇನಾದರೂ ಆ ರೀತಿಯ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರೆ, ಮುಂದೆ ಆ ಆಕರಗಳು ಮತ್ತು ಅವುಗಳ ಹಿನ್ನೆಲೆ ಇತ್ಯಾದಿಯನ್ನು ಕುರಿತೂ ಚರ್ಚಿಸಬಹುದು.
1. ಸುರ್ಪೀಂ ಕೋರ್ಟ್ ತೀರ್ಪು ಮತ್ತು ಬುದ್ಧಿ ಜೀವಿಗಳ ಪ್ರತಿಭಟನೆ:
ಕರ್ನಾಟಕದಲ್ಲಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಕಡ್ಡಾಯವಾಗಿ ಕನ್ನಡವಾಗಿರಬೇಕು ಎಂಬ ಚರ್ಚೆ ಮೂರು ದಶಕಗಳಷ್ಟು ಹಳೆಯದು. 80ರ ದಶಕದಲ್ಲಿ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಮಾನ್ಯತೆಯುಳ್ಳ ಶಾಲೆಗಳಲ್ಲಿ ಪ್ರಾಥಮಿಕ ಹಂತಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವಿರಬೇಕೆಂದೂ ಈ ಶಾಲೆಗಳಲ್ಲಿ ಹೈಸ್ಕೂಲ್‍ವರೆಗಿನ ಶಿಕ್ಷಣದಲ್ಲಿ ಪ್ರಥಮ ಭಾಷೆ ಕನ್ನಡವಾಗಿರಬೇಕೆಂದೂ ಕೆಲವು ಸರ್ಕಾರಿ ವರದಿಗಳು ಮತ್ತು ಕೆಲವು ಶಾಸನಬದ್ಧ ಅಧಿಸೂಚನೆಗಳು ಜಾರಿಯಾದವು. ಸುಮಾರು 90ರ ದಶಕದಿಂದ ಈ ಚರ್ಚೆಗಳನ್ನು ಅನೇಕರು ವಿವಿಧ ಸ್ತರದ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದರ ಪರಿಣಾಮವಾಗಿ, ಮೊನ್ನೆ ಮೊನ್ನೆ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಅಂತಿಮ ತೀರ್ಮಾನವನ್ನು ಪ್ರಕಟಿಸಿದೆ. ಒಟ್ಟಾರೆಯಾಗಿ ಈ ಕಾನೂನು ಹೋರಾಟದ ಸ್ವರೂಪ ಮತ್ತು ಹಿನ್ನೆಲೆಯನ್ನು ಕುರಿತು ಚರ್ಚಿಸಲು ಹೊರಟರೆ ಅದೇ ಒಂದು ದೊಡ್ಡ ಲೇಖನವಾದೀತು. ಆದರೆ ನಮಗೆ ಆ ಎಲ್ಲಾ ಮಾಹಿತಿಗಳೂ ಮುಖ್ಯವಲ್ಲದ ಕಾರಣ, ಒಟ್ಟು ಕಾನೂನು ಸಮರದ ಪರಿಣಾಮಗಳನ್ನು ಈ ಕೆಳಕಂಡಂತೆ ಗುರುತಿಸಿಕೊಳ್ಳಬಹುದು.
• ಪ್ರತಿಯೊಂದು ರಾಜ್ಯದಲ್ಲೂ ಆಯಾ ರಾಜ್ಯ ಸರಕಾರಗಳು ಮಾತೃ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಬಹುದು.
• ಮಾತೃ ಭಾಷೆಯೆಂದರೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ, ಬಹುಜನರು ಬಳಸುವ ಭಾಷೆಯಲ್ಲ.
• ಮಾತೃ ಭಾಷೆ ಯಾವುದು ಎಂಬುದನ್ನು ಪೋಷಕರು ವಿವರಿಸಬೇಕೇ ವಿನಾ ರಾಜ್ಯವಲ್ಲ.
• ಯಾವುದೇ ರಾಜ್ಯವೂ ಕಾನೂನು ಮೂಲಕ ಮಾತೃ ಭಾಷೆಯನ್ನು ಭಾಷಾ ಮಾಧ್ಯಮವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೇರುವಂತಿಲ್ಲ.
• ಪ್ರತಿಯೊಬ್ಬ ವಿದ್ಯಾರ್ಥಿಗೆ (ಪ್ರಾಥಮಿಕ ಹಂತಗಳಲ್ಲಿ ವಿದ್ಯಾರ್ಥಿಗಳ ಪರವಾಗಿ ಪೋಷಕರಿಗೆ) ಯಾವ ಭಾಷಾ ಮಾಧ್ಯಮದಲ್ಲಿ ತಾನು ಕಲಿಕೆಯನ್ನು ಮಾಡುತ್ತೇನೆ ಎಂಬ ಆಯ್ಕೆಯ ಸ್ವಾತಂತ್ರ್ಯವಿದೆ.
• ಈ ಆಯ್ಕೆಯ ಸ್ವಾತಂತ್ರ್ಯವು ವ್ಯಕ್ತಿಯೊಬ್ಬನಿಗೆ ಸಂವಿಧಾನದತ್ತವಾಗಿ ಸ್ಟೇಟ್ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳು ಎಂಬ ಪರಿಕಲ್ಪನೆಯ ತಳಹದಿಯಿಂದ ದೊರೆಯುತ್ತದೆ.
• ಈ ಎಲ್ಲಾ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಭಾಷಾ ಮಾಧ್ಯಮವನ್ನು ಸರಕಾರ ಕಾನೂನುಬದ್ಧವಾಗಿ ಕಡ್ಡಾಯಗೊಳಿಸಲು ಸಾಧ್ಯವಿಲ್ಲ.
• ಒಟ್ಟಾರೆಯಾಗಿ ಈ ತೀರ್ಪಿನ ವ್ಯಾಪ್ತಿ ಕನ್ನಡದ ಹಾಗಿರುವ ಭಾರತದ ಎಲ್ಲಾ ರಾಜ್ಯಗಳಿಗೂ ಮತ್ತು ಭಾಷೆಗಳಿಗೂ ಅನ್ವಯಿಸುತ್ತದೆ.
ಇಂದಿನ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಸುಪ್ರೀಂ ಕೋರ್ಟ್‍ನ ತೀರ್ಪನ್ನು ಯಾರಾದರೂ ಓದಿದರೆ, ಈ ತೀರ್ಪಿನಲ್ಲಿ ನಡೆಸಿರುವ ಸವಿಸ್ತಾರ ಚರ್ಚೆಯಿಂದಾಗಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೂ ಈ ಸಂದರ್ಭದಲ್ಲಿ ನಮ್ಮ ನಾಡಿನ ಪ್ರತಿಷ್ಠಿತರು ತೀರ್ಪನ್ನು ವಿರೋಧಿಸಿದ್ದಾರೆ. ಹಾಗಾದರೆ ಕನ್ನಡಿಗರು ಈ ತೀರ್ಪನ್ನು ವಿರೋಧಿಸಿದ್ದು ಭಾವನಾತ್ಮಕವೇ ಅಥವಾ ಅವರಿಗೆ ಸುಪ್ರೀಂ ಕೋರ್ಟಿನ ತೀರ್ಮಾನವನ್ನು ಎದುರಿಸಲು ಬೇಕಾದ ತಯಾರಿ ಇತ್ತೇ ಎಂಬ ಪ್ರಶ್ನೆ ಸಹಜವಾಗಿ ನಮ್ಮ ಕಣ್ಮುಂದೆ ಬರುತ್ತದೆ.
ಈ ಪ್ರಶ್ನೆಯನ್ನು ವಿಸ್ತರಿಸಲು ಕಳೆದ ಒಂದು ತಿಂಗಳಿನಿಂದ ಕರ್ನಾಟಕದ ವಿವಿಧ ಪತ್ರಿಕೆ, ಬ್ಲಾಗ್ ಗಳ ಕಡೆ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ನಮಗೆ ಉತ್ತರ ದೊರೆತಂತಾಗುತ್ತದೆ. ಸುಪ್ರೀಂ ಕೋರ್ಟಿನ ಈ ತೀರ್ಪು ನಮ್ಮ ಭಾಷೆಯ ಅಳಿವಿಗೆ ಕಾರಣವಾಗುತ್ತದೆ. ಇದಕ್ಕಾಗಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ, ಇತ್ಯಾದಿ ನಮ್ಮ ಚಿಂತಕರ ಹೇಳಿಕೆಗಳಿವೆ. ಇದಲ್ಲದೆ, ಹೋರಾಟಗಾರರು ಮತು ಸಾಹಿತಿಗಳ ಸಮಿತಿಯೊಂದನ್ನು ಸರ್ಕಾರ ರಚನೆಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಮೂಲಭೂತವಾಗಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಕೇಳಿದ ಪ್ರಶ್ನೆಗಳೇನು ಮತ್ತು ಅದಕ್ಕೆ ಉತ್ತರಿಸುವುದು ಹೇಗೆ ಎಂಬುದರ ಕುರಿತಾಗಿ ಇವರು ಚರ್ಚಿಸಿದಂತೆ ಕಾಣುವುದಿಲ್ಲ. ಉದಾಹರಣೆಗೆ, ಈ ತೀರ್ಪಿನಲ್ಲಿ ಮಾತೃ ಭಾಷೆ ಎಂದರೆ ಯಾವುದು ಎಂಬುದನ್ನು ಕುರಿತ ಸವಿಸ್ತಾರವಾದ ಚರ್ಚೆಯಿದೆ. ಈ ಚರ್ಚೆಯ ಮೂಲಕ ತೀರ್ಪಿನಲ್ಲಿ ಮಾತೃ ಭಾಷೆ ಯಾವುದು ಎಂಬುದನ್ನು ನ್ಯಾಯಾಲಯ ವ್ಯಾಖ್ಯಾನಿಸಿದೆ. ಈ ಚರ್ಚೆ ಕುರಿತು ನಮ್ಮ ಸಾಹಿತಿಗಳು ಮತ್ತು ಹೋರಾಟಗಾರರು ಏನಾದರೂ ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡದೇ ಮಾತೃ ಭಾಷಾ ಶಿಕ್ಷಣ ಕುರಿತು ಉದ್ದುದ್ದ ಭಾಷಣ ಮತ್ತು ಬೀಸು ಹೇಳಿಕೆಗಳನ್ನು ನೀಡತೊಡಗಿದ್ದಾರೆ. ನನಗೆ ತಿಳಿದ ಮಟ್ಟಿಗೆ ಗಂಭೀರವಾದ ಪೊಲಿಟಿಕಲ್ ಥಿಯರಿಸ್ಟ್ ಮತ್ತು ಸಂವಿಧಾನ ತಜ್ಞರ ಜೊತೆ ನಮ್ಮ ಸಾಹಿತಿಗಳು ಮತ್ತು ಹೋರಾಟಗಾರರು ಸರಿಯಾದ ಚರ್ಚೆಯನ್ನೇ ಮಾಡಿಲ್ಲ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತ ನ್ಯಾಯಾಲಯದ ವಿವರವಾದ ಚರ್ಚೆಯನ್ನು ಅರ್ಥೈಸಲು ವಿಸ್ತಾರವಾದ ಪಶ್ಚಿಮದ ತತ್ವಜ್ಞಾನ ಮತ್ತು ಪೊಲಿಟಿಕಲ್ ಥಿಯರಿಯ ಚಾರಿತ್ರಿಕ ಜ್ಞಾನದ ಅವಶ್ಯಕತೆ ಇದೆ. ಅವರ ಹೇಳಿಕೆಗಳನ್ನು ಗಮನಿಸಿದರೆ ನಮ್ಮ ಬುದ್ಧಿ ಜೀವಿಗಳು ಈ ನಿಟ್ಟಿನಲ್ಲಿ ಚಿಂತಿಸಿದ್ದಾರೆ ಎನಿಸುವುದಿಲ್ಲ. ಭಾಷಾ ಮಾಧ್ಯಮ ಕನ್ನಡವಾಗದಿದ್ದರೆ, ಕನ್ನಡದ ಅಳಿವು ಖಚಿತ ಮತ್ತು ಕನ್ನಡದ ಉಳಿವಿನ ಏಕೈಕ ಮಾರ್ಗವೆಂದರೆ ಕನ್ನಡ ಭಾಷಾ ಮಾಧ್ಯಮವೆಂಬುದು ಇವರೆಲ್ಲರ ಖಚಿತ ನಿಲುವು ಎಂಬಂತೆ ಕಾಣುತ್ತದೆ. ಹಾಗಾಗಿ ನಾವು ಅದು ಅಸಂವಿಧಾನಿಕವಾದರೂ ಸರಿ, ಕನ್ನಡ ಭಾಷಾ ಮಾಧ್ಯಮವನ್ನು ಹೋರಾಟ ಮಾಡಿಯಾದರೂ ಕಡ್ಡಾಯಗೊಳಿಸಬೇಕು ಎಂಬ ನಿಲುವನ್ನು ಅವರು ಪ್ರತಿಪಾದಿಸಿದ್ದಾರೆ. ಹಾಗಾದರೆ ಈ ಚರ್ಚೆಯನ್ನು ಅರ್ಥೈಸುವುದು ಹೇಗೆ?
2. ಕನ್ನಡ ಭಾಷಾ ಮಾಧ್ಯಮ ಮತ್ತು ಕನ್ನಡದ ಉಳಿವು:
ಈಗಾಗಲೇ ಎಲ್ಲರೂ ವಾದಿಸುತ್ತಿರುವಂತೆ, ಕನ್ನಡವನ್ನು ಭಾಷಾ ಮಾಧ್ಯಮವಾಗಿ ಕಡ್ಡಾಯವಾಗಿ ಕಲಿಸದಿದ್ದರೆ ಕನ್ನಡದ ಉಳಿವು ಬಹಳ ಕಷ್ಟ ಎಂಬುದು ಒಂದು ಪ್ರಶ್ನಾತೀತ ಹೇಳಿಕೆಯಾಗಿದೆ. ಇದು ಬಹುಶಃ ಇಡೀ ರಾಜ್ಯದ ಹಿರಿಯರನ್ನೂ ಒಳಗೊಂಡಂತೆ ಎಲ್ಲರೂ ಕನ್ನಡ ಮಾಧ್ಯಮ ಕುರಿತು ಚರ್ಚೆ ಮಾಡಲು ಒಂದಾಗಿಸಿರುವ ಭಾವನಾತ್ಮಕ ಅಂಶವೂ ಹೌದು. ಆದರೆ ಈ ರೀತಿಯ ಹೇಳಿಕೆ/ ಚರ್ಚೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಕೆಲವು ತೊಡಕುಗಳಿವೆ. ಅವುಗಳನ್ನು ಚರ್ಚಿಸುವುದು ಈ ಭಾಗದ ಉದ್ದೇಶ.
ಮೊದಲಿಗೆ ಕನ್ನಡ ಅಳಿವು ಎಂದರೆ ಏನು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳೋಣ. ತುಂಬಾ ಸರಳವಾಗಿ ಚರ್ಚಿಸುವುದಾದರೆ, ನಾಳೆಯಿಂದ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರು ಇಲ್ಲವಾದರೂ ಕೂಡಾ ಕನ್ನಡ ಬದುಕಿರುತ್ತದೆ. ಏಕೆಂದರೆ ಈಗಾಗಲೇ ಹಸ್ತಪ್ರತಿಗಳು, ಅಚ್ಚಾದ ಪುಸ್ತಕಗಳು ಇತ್ಯಾದಿ ನೂರಾರು ತರಹದ ವಿಭಿನ್ನ ತಂತ್ರಗಳಿಂದ ಕನ್ನಡವನ್ನು ಸಂರಕ್ಷಿಸಿ ಇಡಲಾಗಿದೆ. ಹಾಗಾಗಿ ಕನ್ನಡಿಗರು ಇರದಿದ್ದರೂ ಕನ್ನಡ ಬದುಕಿರುತ್ತದೆ ಎಂದು ವಾದಿಸಲು ಅಡ್ಡಿಯಿಲ್ಲ. ಆದರೆ ನಮ್ಮ ಬುದ್ಧಿ ಜೀವಿಗಳ ವಾದ ಈ ರೀತಿಯ ಉಳಿವಿನದ್ದಲ್ಲ. ಅದು ಕನ್ನಡಿಗರೆಂಬ ಒಂದು ಸಮುದಾಯದ ಕುರಿತಾದ ಚರ್ಚೆ. ಆ ರೀತಿಯ ಭಾಷಿಕರ ಸಮುದಾಯ ಭಾರತದಲ್ಲಿ ಇದೆಯೆ ಎಂಬುದನ್ನು ನಾವು ಮೊದಲು ಗುರುತಿಸಿಕೊಳ್ಳಬೇಕಾಗುತ್ತದೆ. ಅಂದರೆ ಭಾಷೆಯಿಂದ ಸಮುದಾಯದ ನಿರ್ಮಾಣವಾಯಿತೋ ಅಥವಾ ಸಮುದಾಯದ ಭಾಗವಾಗಿ ಭಾಷೆ ಇದೆಯೊ ಎಂಬ ಪ್ರಶ್ನೆಯನ್ನೂ ನಾವೂ ಕೇಳಿಕೊಳ್ಳಬೇಕಾಗುತ್ತದೆ. ಈ ಪ್ರಶ್ನೆಗಳನ್ನು ಬದಿಗಿಟ್ಟು ಆ ರೀತಿಯ ಭಾಷಿಕ ಸಮುದಾಯವೊಂದು ಇದೆ ಎಂದು ಭಾವಿಸಿ ಮುಂದುವರೆಯೋಣ. ಈ ಹಿನ್ನಲೆಯಲ್ಲಿ, ಒಂದು ಭಾಷಿಕರ ಸಮುದಾಯ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿದರೆ ಮಾತ್ರ ಕನ್ನಡಿಗರ ಸಮುದಾಯ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ನಾವು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಸಮುದಾಯದ ಕುರಿತು ಚರ್ಚಿಸುವಾಗ ಆ ಸಮುದಾಯಕ್ಕೆ ಒಂದು ಪರಂಪರೆಯಿರುತ್ತದೆ, ಅದರಲ್ಲಿ ಅನೇಕ ಆಚರಣೆ, ಶ್ರದ್ಧೆಗಳು ಇರುತ್ತವೆ. ಇದೇ ರೀತಿ ಕನ್ನಡಿಗರಿಗೆ ಹಲ್ಮಿಡಿಯಿಂದ ಪ್ರಾರಂಭವಾಗಿ, ಕವಿರಾಜಮಾರ್ಗಕಾರನಿಂದ ಹಿಡಿದು ಇಲ್ಲಿಯವರೆಗಿನ ಭಾಷಾ ಸಂಪತ್ತಿನ ಪರಂಪರೆಯಿದೆ. ಇದರಲ್ಲಿ ಜಾನಪದ, ಶಾಸ್ತ್ರೀಯ ಎಲ್ಲವೂ ಅಡಕವಾಗಿರುತ್ತದೆ. ಇಷ್ಟು ದೊಡ್ಡ ಇತಿಹಾಸವಿರುವ ಸಮುದಾಯ, ಕೇವಲ ಭಾಷಾ ಮಾಧ್ಯಮ ಕನ್ನಡವಾಗಿದ್ದರಿಂದ ಬದುಕಿತ್ತೋ ಅಥವಾ ಅದರ ಅಂತಃಸತ್ವ ಬೇರೆಲ್ಲಾದರೂ ಇದೆಯೋ ಎಂಬ ಪ್ರಶ್ನೆಯೊಂದಿಗೆ ಚರ್ಚೆಯನ್ನು ಒರೆಗೆ ಹಚ್ಚಬೇಕಾಗಿದೆ.
ಈ ರೀತಿ ಮಾಡಿದಾಗ ಕೇವಲ ಅಕ್ಷರ ಮಾಧ್ಯಮದಿಂದ, ಕನ್ನಡ ಶಾಲೆಯಿಂದ ಕನ್ನಡ ಸಮುದಾಯ ಪರಂಪರೆ ಬದುಕಲಿಲ್ಲ. ಕನ್ನಡದಲ್ಲಿ ಸಂವಹನ ಮಾಡಲು ವಚನ, ಮಠ ಮಾನ್ಯಗಳು, ಗಮಕ, ಕಂಸಾಳೆ, ತಾಳ ಮದ್ದಳೆ, ಬಯಲಾಟ, ಕೋಲಾಟ ಇತ್ಯಾದಿಗಳು ಇದ್ದವು. ಆ ಕಾರಣದಿಂದಲೇ ಇಂದಿನ ಉದಾರವಾದಿ ಚಿಂತಕರು ಗುರುತಿಸುವ ಅನಕ್ಷರಸ್ಥ, ದಲಿತ/ಹಿಂದುಳಿದ ಸಾಮಾನ್ಯನೊಬ್ಬ ಸಾಂಗತ್ಯ, ಕಂದಪದ್ಯಗಳೆರಡನ್ನೂ ಬಳಸಬಲ್ಲವನಾಗಿದ್ದ. ಇಂಥವರಿಗೆ ಅನೇಕ ಭಾಷೆಗಳೊಡನೆ ವ್ಯವಹರಿಸುವುದೂ ತಿಳಿದಿತ್ತು. ತಮ್ಮ ಜೀವನದ ಶ್ರದ್ಧೆಯ ಆಚರಣೆಗಳ ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ಇವರು ಕನ್ನಡವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದರು. ಒಂದೆಡೆ ಕನ್ನಡ ಭಾಷಾ ಸಮುದಾಯ ನಿರಂತರವಾಗಿ ತಮಿಳು, ತೆಲುಗು, ಮಲಯಾಳಂ, ಸಂಸ್ಕೃತ, ಮರಾಠಿಗರ ಜೊತೆ ಸಹಬಾಳ್ವೆ ಮಾಡಿದರೆ ಮತ್ತೊಂದೆಡೆ ಹವ್ಯಕ, ಸಂಕೇತಿ, ತುಳು, ಕೊಂಕಣಿ, ಬ್ಯಾರಿ ಇತ್ಯಾದಿಗಳು ಕನ್ನಡ ಸಮುದಾಯದ ಭಾಗವೇ ಆಗಿಹೋದವು. ಹೀಗೆ ಅಕ್ಷರ/ಭಾಷಾ ಮಾಧ್ಯಮಗಳ ಹೊರತಾಗಿಯೂ ಕನ್ನಡ ಎಂಬುದು ಜನ ಜೀವನದ ಭಾಗವಾಗಿ ಪರಂಪರೆಯಲ್ಲಿ ಹರಿದು ಬಂದಿತು.
ಈ ವಾದವನ್ನು ಒಪ್ಪುವುದಾದಲ್ಲಿ ಕನ್ನಡ ಎಂಬುದು ಶಿಕ್ಷಣದಲ್ಲಿ ಭಾಷಾ ಮಾಧ್ಯಮವಾಗುವುದು ಅಥವಾ ಆಗದಿರುವುದು ಅದರ ಅಳಿವು-ಉಳಿವುಗಳನ್ನು ನಿರ್ಧರಿಸುವುದಿಲ್ಲ. ಇದನ್ನು ಇನ್ನೂ ಹೆಚ್ಚು ಸ್ಪಷ್ಟಪಡಿಸಿಕೊಳ್ಳಲು ನಾವು ಜಗತ್ತಿನ ಬೇರೆ ಭಾಷೆಗಳ ಉದಾಹರಣೆಯನ್ನೂ ಗಮನಿಸಬಹುದು. ಉದಾಹರಣೆಗಾಗಿ ಹಿಬ್ರೂ ಭಾಷೆಯನ್ನು ಗಮನಿಸಿದಾಗ, ನಮಗೆಲ್ಲರಿಗೂ ತಿಳಿದಿರುವಂತೆ, ಯಹೂದಿಗಳು ಸಾವಿರಾರು ವರ್ಷಗಳ ಕಾಲ ಅಲೆಮಾರಿಗಳಾಗಿದ್ದರೂ ಯಾವುದೇ ಹಿಬ್ರೂ ಮಾಧ್ಯಮದ ಶಾಲೆಗಳಿಲ್ಲದೆಯೂ ಹಿಬ್ರೂ ಭಾಷಾ ಸಮುದಾಯ ಜೀವಂತವಾಗಿತ್ತು, ಈಗ ಮತ್ತೆ ಅದು ಪುಟಿದೆದ್ದಿದೆ.
3. ಕನ್ನಡಿಗರ ಸಮುದಾಯ ಉಳಿವಿನ ಪ್ರಶ್ನೆ:
ನಿಜವಾದ ಅರ್ಥದಲ್ಲಿ ಕನ್ನಡ ಭಾಷಾ ಸಮುದಾಯ ಉಳಿಯಬೇಕೆಂದರೆ, ಕನ್ನಡವನ್ನು ಇಷ್ಟು ಶತಮಾನಗಳ ಕಾಲ ಜನಗಳ ನಡುವೆ ರಕ್ಷಿಸಿದ ಗಮಕ, ಹರಿಕಥೆ, ಕೋಲಾಟಗಳಿಂದ ಹಿಡಿದು ಯಕ್ಷಗಾನದವರೆಗಿನ ಸಾಂಸ್ಥಿಕ ಪಾರಂಪರಿಕ ವ್ಯವಸ್ಥೆಗಳನ್ನು ಉಳಿಸಬೇಕಾಗುತ್ತದೆ. ಆ ರೀತಿ ಪ್ರಯತ್ನ ಮಾಡಲು ಎರಡು ದೊಡ್ಡ ಪ್ರಮುಖ ಸಮಸ್ಯೆಗಳಿವೆ. ಮೊದಲನೆಯದಾಗಿ ಈಗಾಗಲೇ ನಮ್ಮ ಪ್ರಗತಿಪರರು ವಾದಿಸುವಂತೆ, ಕನ್ನಡದಲ್ಲಿರುವ ಹಿಂದಿನ ಸಾಹಿತ್ಯವೆಲ್ಲ ಧಾರ್ಮಿಕ ಸಾಹಿತ್ಯ, ಇದು ಶೋಷಣೆಯ ಪ್ರತೀಕ, ಮತ್ತು ಕನ್ನಡವನ್ನು ಉಳಿಸಿ ಬೆಳೆಸಿದ ಇಂಥ ಎಲ್ಲ ಸಾಂಸ್ಥಿಕ ವ್ಯವಸ್ಥೆಗಳು ದಲಿತರನ್ನೋ ಮಹಿಳೆಯರನ್ನೋ ಮತ್ಯಾರನ್ನೊ ತುಳಿಯಲು ಹುಟ್ಟಿದವು ಹಾಗೂ ಇವು ಬ್ರಾಹ್ಮಣೀಕರಣ ಅಥವಾ ಪುರೋಹಿತಶಾಹಿಯ ಹುನ್ನಾರ ಇತ್ಯಾದಿಯಾಗಿ ಬಿಂಬಿಸಿರುವುದರಿಂದ ಅವುಗಳ ಬಗ್ಗೆ ಪುನರ್ ವಿಮರ್ಶೆ ವಿಶ್ಲೇಷಣೆ ಮಾಡುವುದೇ ಸಂಪ್ರದಾಯವಾದ/ಕೋಮುವಾದ /ಬ್ರಾಹ್ಮಣೀಕರಣ ಪ್ರಯತ್ನ ಇತ್ಯಾದಿಗಳಾಗಿಬಿಡುತ್ತವೆ. ಎರಡನೆಯದಾಗಿ ಈ ಎಲ್ಲ ಸಾಂಸ್ಥಿಕ ವ್ಯವಸ್ಥೆಗಳನ್ನು ಒಂದಲ್ಲ ಒಂದು ಸರ್ಕಾರಿ ಅಕಾಡೆಮಿ/ವಿಶ್ವವಿದ್ಯಾನಿಲಯಕ್ಕೆ ನಾವು ಅಡ ಇಟ್ಟಿರುವುದರಿಂದ ಅವುಗಳನ್ನು ಇಂದು ಕೇವಲ ‘ಮ್ಯೂಸಿಯಂ ಪೀಸ್’ನ ಸ್ವರೂಪದಲ್ಲಿ ನಮ್ಮ ಸಂಶೋಧಕರು ಅಧ್ಯಯನ ಮಾಡಿ ಆಂಥ್ರೊಪೊಲಾಜಿಕಲ್/ ಮನೋವಿಶ್ಲೇಷಣಾತ್ಮಕ ವಿವರಣೆಗಳನ್ನು ನೀಡುತ್ತ, ಇಂಥ ಆಚರಣೆಯಲ್ಲಿ ಭಾಗಿಯಾದವರು ಅತ್ಯಂತ ಮೂರ್ಖರು ಎಂಬ ಹಣೆ ಪಟ್ಟಿಯನ್ನು ಕೊಡುವ ಯತ್ನಮಾಡಲಾಗುತ್ತಿದೆ.
ಇಷ್ಟೆಲ್ಲ ಮಾಡಿ ಈ ಸಾಂಸ್ಥಿಕ ವ್ಯವಸ್ಥೆಗಳು ಅವಸಾನದ ಅಂಚು ತಲುಪಿದಾಗ ಸುಲಭವಾಗಿ ಇದಕ್ಕೆಲ್ಲಾ ಜಾಗತೀಕರಣವೇ ಕಾರಣ ಎಂದು ವಾದಿಸುತ್ತಿದ್ದೇವೆ. ಒಂದರ್ಥದಲ್ಲಿ ಯಾರು ಇಂದು ಕನ್ನಡದ ಉಳಿವಿನ ಕುರಿತು ಉದ್ದುದ್ದ ಭಾಷಣ ಮಾಡುತ್ತಿದ್ದಾರೋ ಅವರೆಲ್ಲರೂ ಪರಂಪರೆಯ ಭಂಜನೆಯ ಹೆಸರಿನಲ್ಲಿ ಭಾಷೆಯ ಅಂತಃಸತ್ವವನ್ನು ಹಾಳುಮಾಡುವುದರಲ್ಲಿ ಪಾಲುಪಡೆದಿದ್ದಾರೆ. ಅವರು ಎಲ್ಲವನ್ನೂ ಭಂಜಿಸಿದರೇ ವಿನಾ ನೂರ್ಕಾಲ ಉಳಿಯಬಲ್ಲ ಅಂತಃಸತ್ವವುಳ್ಳ ಹೊಸ ಪರಂಪರೆಯನ್ನು ಕಟ್ಟಲಿಲ್ಲ. ಇಂದಿನ ಭಾಷೆಯ ಅಳಿವಿನ ಪ್ರಶ್ನೆಯನ್ನು ನಾವು ಗಂಭೀರವಾಗಿ ಚಿಂತಿಸಲು ಪ್ರಯತ್ನಿಸುವಾಗ, ನಮ್ಮ ಭಾಷೆಯ ಅವಸಾನವೇನಾದರೂ ಆಗುತ್ತಿದ್ದರೆ, ಅದರಲ್ಲಿ ಈ ಉದಾರವಾದಿ ಬುದ್ಧಿಜೀವಿಗಳ ಪಾತ್ರ ದೊಡ್ಡದು ಎಂಬುದನ್ನು ಅಲ್ಲಗೆಳೆಯಲಾಗದು.
ಮುಂದೆ … ?
ಒಂದರ್ಥದಲ್ಲಿ ಈ ಜಡ ಸಮಸ್ಯೆಗಳಿಂದ ಹೊರಬರಬೇಕಾದರೆ ಪರಂಪರೆಯ ಕಡೆಗೆ ತಿರುಗಿ ನೋಡಬೇಕಾಗಿದೆ. ನಾವು ಇಂದು ಗ್ರಹಿಸಿರುವಂತೆ ನಮ್ಮ ದೇಶದಲ್ಲಿ ಭಾಷಿಕ ಸಮುದಾಯಗಳು ಕಾಣುವುದಿಲ್ಲ. ಅವುಗಳನ್ನು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಮ್ಮ ಸಂಪ್ರದಾಯಗಳು ಅಥವಾ ಸಮುದಾಯಗಳು ಅನೇಕ ಭಾಷೆಗಳ ಜೊತೆ ಏಕಕಾಲಕ್ಕೆ ಬದುಕುತ್ತಿವೆ. ಹಾಗಾಗಿ ಇಂದು ನಮ್ಮ ಭಾಷೆಯನ್ನು ಉಳಿಸುವುದೆಂದರೆ ನಮ್ಮ ಸಂಸ್ಕೃತಿಯನ್ನು ಉಳಿಸುವುದು ಎಂದೇ ಅರ್ಥವಾಗುತ್ತದೆ. ಇದು ನಮ್ಮ ಸಂಸ್ಕೃತಿಯ ಇಂದಿನ ನಿಜವಾದ ಸಮಸ್ಯೆಯೆಂದು ಗುರುತಿಸಲು ಎಡ್ವರ್ಡ್ ಸಯೀದರಿಂದ ಪ್ರಾರಂಭಿಸಿ ಬಾಲಗಂಗಾಧರರವರೆಗಿನ ಬೌದ್ಧಿಕ ಪ್ರಕಲ್ಪಗಳೊಡನೆ ಮುಖಾಮುಖಿಯಾಗುವುದು ಅನಿವಾರ್ಯವಾಗುತ್ತದೆ. ನಮ್ಮ ಭಾಷೆಯ ಉಳಿವಿನ ಕುರಿತು ಚರ್ಚಿಸುವಾಗ, ಇಂದಿನ ನಮ್ಮ ವಾದಗಳು ಏನಿದ್ದರೂ ಭಾರತ ಕುರಿತಂತೆ ಯೂರೋಪಿನವರ ಅನುಭವಗಳ (ಓರಿಯೆಂಟಲಿಸಂನ) ಪುನರುತ್ಪಾದನೆ ಎಂಬುದನ್ನು ಅನಿವಾರ್ಯವಾಗಿ ಒಪ್ಪಬೇಕಾಗುತ್ತದೆ. ನಮಗರ್ಥವಾಗದ ಕನ್ನಡ ನ್ಯಾಷನಲಿಸಂ/ ಸೆಕ್ಯುಲರಿಸಂ ಇತ್ಯಾದಿ ಶಬ್ದ ಜಾಲದಿಂದ ಹೊರಬಂದು ಈ ಸಮಸ್ಯೆಯನ್ನು ನೋಡಬೇಕಾಗಿದೆ. ಈ ಕಾರಣಕ್ಕಾಗಿ ನಾವು ವಿವೇಚನೆಯುಳ್ಳ ಸಂಪ್ರದಾಯವಾದಿಗಳಾಗುವ (ಖಿhoughಣಜಿuಟ ಅoಟಿseಡಿvಚಿಣives) ಅನಿವಾರ್ಯತೆಯಿದೆ. ನಾನು ಅದಕ್ಕೆ ಸಿದ್ಧನಿದ್ದೇನೆ. ನೀವು…?
ನನ್ನ ಈ ವಿಚಾರವನ್ನು ನೀವು ಒಪ್ಪಬೇಕಿಲ್ಲ, ಆದರೆ ಸುಸಂಬದ್ಧವಾಗಿ, ತರ್ಕಬದ್ಧವಾಗಿ, ವಿವೇಚನಾಯುಕ್ತವಾಗಿ ನನ್ನೊಡನೆ ಜಗಳವಾಡಿ, ಕನ್ನಡವನ್ನು ಉಳಿಸುವ ಮೊದಲ ಹೆಜ್ಜೆಯನ್ನು ನಾವು ಒಟ್ಟಿಗೆ ಇಡಲು ಸಾಧ್ಯವಿದೆ. ಮಕ್ಕಳ ಶಿಕ್ಷಣದ ಮತ್ತು ಭಾಷಾ ಮಾಧ್ಯಮ ಕುರಿತು ಚಿಂತಿಸಲು ನೀವು ಮಕ್ಕಳ ಪೋಷಕರಿಗೆ ಅವಕಾಶ ಕೊಡಿ.
ಕೃತಜ್ಞತೆಗಳು:
ಈ ಲೇಖನಕ್ಕೆ ಪೂರಕವಾದ ಚರ್ಚೆಯನ್ನು ಪರಿಚಯಿಸಿದ್ದಕ್ಕಾಗಿ ಆರೋಹಿ ಸಂಶೋಧನಾ ಸಂಸ್ಥೆಯು ಆಯೋಜಿಸಿದ್ದ ಮಾತುಕತೆ ಎಂಬ ತರಬೇತಿ ತರಗತಿಗಳು ಮತ್ತು ಅಲ್ಲಿ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದ ಡಾ. ನರಹರಿರಾವ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರೊಡನೆ ನಮ್ಮ ಕೋರ್ಸಿನ ಸಹಪಾಠಿಗಳು ಹಾಗೂ ನಮ್ಮ ಹಿರಿಯ ಮಾರ್ಗದರ್ಶಕರಾದ ಡಾ. ವಿವೇಕ ಧಾರೇಶ್ವರ್ ಅವರಿಗೆ, ಆರೋಹಿ ಬಳಗ ಮತ್ತು ಸುಧಿ ನೆಟ್ ವಕ್ರ್ಸ್‍ನ ಎಲ್ಲಾ ಸ್ನೇಹಿತರು, ಶ್ರೀಪಾದ ಭಟ್, ಭಾರತಿ ದೇಸಾಯಿ, ಅಶ್ವಿನಿ ದೇಸಾಯಿ, ಎಸ್. ಕಾರ್ತಿಕ್ ಮತ್ತು ಮಾಲತಿ ಪಟ್ಟಣ ಶೆಟ್ಟಿಯವರಿಗೆ ನನ್ನ ಕೃತಜ್ಞತೆಗಳು.
———————————————————–
1. ಈ ಲೇಖನವು ಸಂಚಯ ಪತ್ರಿಕೆಯ 104ನೆ ಸಂಚಿಕೆಯಲ್ಲಿ ಪ್ರಕಟವಾಗಿದೆ (ಪುಟ ಸಂಖ್ಯೆ 55 – 60)
ಎಂ ಎಸ್ ಚೈತ್ರ ಅವರಿಗೆ—-….. >>>>ಒಟ್ಟಾರೆಯಾಗಿ ಈ ತೀರ್ಪಿನ ವ್ಯಾಪ್ತಿ ಕನ್ನಡದ ಹಾಗಿರುವ ಭಾರತದ ಎಲ್ಲಾ ರಾಜ್ಯಗಳಿಗೂ ಮತ್ತು ಭಾಷೆಗಳಿಗೂ ಅನ್ವಯಿಸುತ್ತದೆ>>> ಸುಪ್ರೀಂ ಕೋರ್ಟಿನ ತೀರ್ಪು ಬಂದಾಗಲಿನಿಂದ ಪತ್ರಿಕೆಗಳಲ್ಲಿ,ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ಭಾಷಾ ಮಾಧ್ಯಮದ ಪ್ರಶ್ನೆ,ಸಮಸ್ಯೆ ಕನ್ನಡಿಗರಿಗೆ ಮಾತ್ರವಲ್ಲ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ ಎಂದು “ಮೂಗಿಗೆ ತುಪ್ಪ ಸವರುವ” ಮಾತುಗಳನ್ನು ಆಡುತ್ತಾ,ಬರೆಯುತ್ತಾ ಬಂದಿದ್ದಾರೆ. ನಿಮ್ಮ ಲೇಖನದಲ್ಲಿ ಸ್ವಲ್ಪ ಭಿನ್ನವಾಗಿ ಕನ್ನಡದ ಹಾಗಿರುವ ಎಂದು ಬರೆದಿದ್ದೀರಿ. . ಏಕೆಂದರೆ ನಮ್ಮ ಕನ್ನಡದಷ್ಟು ದುಸ್ಥಿತಿಗೆ ಇತರ ರಾಜ್ಯಗಳು ತಮ್ಮ ರಾಜ್ಯದ ಭಾಷೆಯನ್ನು ನೂಕಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಸರ್ಕಾರವೇ ಘೋಷಿಸಿದ ನಂತರವೂ ಅದನ್ನು ಕಡ್ಡಾಯವಾಗಿ ಜಾರಿಗೆ ತರಬೇಕೆಂದು ಸುಮಾರು ಮುನ್ನೂರು ಸುತ್ತೋಲೆಗಳನ್ನು (circulars) ನಮ್ಮ ಸರ್ಕಾರ ಕಳುಹಿಸಿದ್ದರೂ ಇನ್ನೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಹೇಳಿದ್ದಾರೆ. ಹೀಗಾಗಿ ಭಾರತದ ಇತರ ರಾಜ್ಯಗಳಲ್ಲಿ ಅವರವರ ಭಾಷೆಗಳಿಗೆ ನಮ್ಮ ಕರ್ನಾಟಕದ ಕನ್ನಡದ ಭಾಷೆಯಂತಹ ಸ್ಥಿತಿ ಇಲ್ಲವೆಂದೇ ತೋರುತ್ತದೆ . ಇದ್ದಿದ್ದರೆ ಸುಪ್ರೀಂ ಕೋರ್ಟಿನ ತೀರ್ಪು ಬಂದಮೇಲೆ ಯಾವ ರಾಜ್ಯದಲ್ಲಿ ಈ ಬಗ್ಗೆ ಆತಂಕ ಹುಟ್ಟಿದೆ? ಆತಂಕ ಹುಟ್ಟಿದ್ದರೆ ಅವರುಗಳು ನಮಗಿಂತ ಜಾಸ್ತಿಯಾಗಿ ಆತಂಕ ಪಡುತ್ತಿದ್ದರು; ಪ್ರತಿಭಟಿಸುತ್ತಿದ್ದರು. ಇದಕ್ಕೆ ಇತ್ತೀಚಿಗೆ ಕೇಂದ್ರ ಸರ್ಕಾರ “ಸಾಮಾಜಿಕ ಜಾಲತಾಣ” ಗಳಲ್ಲಿ ಹಿಂದಿಯನ್ನು ಕ್ರಮೇಣ ಜಾರಿ ತರಬೇಕು ಎಂದಾಗ, ಪಕ್ಷಾತೀತವಾಗಿ ಮೊದಲ ಪ್ರತಿಭಟನೆ ಬಂದಿದ್ದು ತಮಿಳುನಾಡಿನಿಂದ. ನಮ್ಮ ಕರ್ನಾಟಕ ಸರ್ಕಾರ ಶಾಸ್ತ್ರಕ್ಕಾಗಿಯಾದರೂ ಒಂದು ಪತ್ರ ಬರೆದಿದೆಯೇ? ಕೆಲವೊಂದು ಸಮಸ್ಯೆಗಳಿಗೆ ಉತ್ತರ ರಾಜಕೀಯ ಇಚ್ಚಾಶಕ್ತಿಗಳಲ್ಲಿ ಇರುತ್ತದೆ; ಅದನ್ನು ನೆರವೇರಿಸುವ ಮನಸ್ಸುನಮ್ಮನಾಳುವ ಧಣಿಗಳಿಗೆ ಇರಬೇಕಷ್ಟೇ . ಕೇವಲ ‘ ಅಂದರಿಕಿ ಮಂಚಿವಾಡು ಅನಂತಯ್ಯ’ (ಎಲ್ಲರಿಗೂ ಒಳ್ಳೆಯವನು ಅನಂತಯ್ಯ) ಎಂದು ಹೊಗಳಿಸಿಕೊಳ್ಳಲು ಹೊರಟರೆ ಕನ್ನಡಿಗರಂತೆ ಮನೆ-ಮಾರುಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ . ತಮ್ಮ ಲೇಖನಕ್ಕೆ Related ಎಂದು ಕೊಟ್ಟಿರುವ ‘ನಿಲುಮೆ’ ಬ್ಲಾಗಿನ ಮೊದಲ ಎರಡು ಲೇಖನಗಳಲ್ಲಿನ ನನ್ನ ಪ್ರತಿಕ್ರಿಯೆಗಳಲ್ಲಿ , ನಿಮ್ಮ ಲೇಖನದ ಇತರ ಅಂಶಗಳಿಗೆ ಸಂಬಂಧಪಟ್ಟಂತೆ ನಾನು ಬರೆದಿರುವುದರಿಂದ ಅದನ್ನು ಪುನಃ ಪ್ರಸ್ತಾಪಿಸುವ ಅಗತ್ಯವಿಲ್ಲ.
3-7-2014ರ ಕನ್ನಡಪ್ರಭ ದಿನಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿರುವ ಸುದ್ದಿಯ ಆಯ್ದ ಭಾಗಗಳು:-
(೧) 539 ಶಾಲೆ ಮುಚ್ಚಿಸಿದ ಮಾತೃಭಾಷಾ ಶಿಕ್ಷಣ ತೀರ್ಪು. (೨) ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆದಿದೆ. ಶಿಕ್ಷಕ ಸಮುದಾಯ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ನಡೆಸಿದ ಪ್ರಯತ್ನ ವಿಶೇಷ ಫಲ ನೀಡಿಲ್ಲ. ಪಾಲಕರೇ ತಮ್ಮ ಮಕ್ಕಳನ್ನು ಸರ್ಕಾರಿ (ಕನ್ನಡ) ಶಾಲೆಗಳಿಂದ ಬಿಡಿಸಿ, ಖಾಸಗಿ (ಇಂಗ್ಲೀಷ್) ಶಾಲೆಗಳಿಗೆ ಸೇರಿಸುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ಕಾರಣ ಎನ್ನುವುದು ಒಂದು ತಿಂಗಳ ಅವಧಿಯಲ್ಲಿ ಸ್ಪಷ್ಟವಾಗಿದೆ. (೩) ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ 1.65ಲಕ್ಷ (ಒಂದು ಲಕ್ಷದ ಅರವತ್ತೈದು ಸಾವಿರ) ಮಕ್ಕಳು ಸರ್ಕಾರಿ ಶಾಲೆ ಬಿಟ್ಟಿದ್ದಾರೆ. ಅವರ ಪೈಕಿ 98 ಸಾವಿರ ಮಕ್ಕಳು ನಗರ ಪ್ರದೇಶದವರು ಎನ್ನುವುದು ಗಮನಿಸಬೇಕಾದ ಅಂಶ. (೪) ಸರ್ಕಾರದ ಮೌನವೇಕೆ? :- ಭಾಷಾ ಮಾಧ್ಯಮದ ಕುರಿತು ನ್ಯಾಯಾಲಯದ ತೀರ್ಪು ಬಂದ ಮೇಲೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ನೂರಾರು ಶಾಲೆಗಳು ಮಕ್ಕಳ ಕೊರತೆ ಎದುರಿಸುತ್ತಿವೆ. ಇಷ್ಟಾದರೂ ರಾಜ್ಯ ಸರ್ಕಾರವೇಕೆ ಮೌನವಹಿಸಿದೆ? ಸರ್ಕಾರ ಪರೋಕ್ಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದೆಯೇ ಎಂಬ ಜನರ ಪ್ರಶ್ನೆಗೆ ಶಿಕ್ಷಣ ಸಚಿವರೇ ಉತ್ತರಿಸಬೇಕು.