ಸೂಪರ್ ನ್ಯೂಮರರಿ ಕೋಟಾ: ಪ್ರಾಮಾಣಿಕತೆಗೆ ಟಾಟಾ?
– ತುರುವೇಕೆರೆ ಪ್ರಸಾದ್
ಎಐಸಿಟಿಯು 2011-12ನೇ ಸಾಲಿನಲ್ಲಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ರೂ.2.5ಲಕ್ಷ ಕಡಿಮೆ ಆದಾಯ ಇರುವ ಪೋಷಕರ ಮಕ್ಕಳಿಗೆ ಪ್ರತಿ ಕೋರ್ಸ್ಗಳ ಒಟ್ಟು ಪ್ರವೇಶಾತಿಯ ಮೇಲೆ ಶೇ.5ರಷ್ಟು ಸಂಖ್ಯಾಧಿಕ ಸೀಟುಗಳನ್ನು ಬೋಧನಶುಲ್ಕ ವಿನಾಯಿತಿ ಯೋಜನೆಯಡಿ(ಸೂಪರ್ ನ್ಯೂಮರರಿ ಕೋಟಾ) ಹಂಚಿಕೆ ಮಾಡುವ ಯೋಜನೆಯನ್ನು ಜಾರಿಗೆ ತಂದಿತ್ತು. 2013-14ನೇ ಸಾಲಿಗೆ ಈ ಯೋಜನೆಯಡಿ ಆದಾಯ ಮಿತಿಯನ್ನು ರೂ.4.5ಲಕ್ಷಕ್ಕೆ ಏರಿಸಲಾಗಿತ್ತು. ಸದರಿ ವಾರ್ಷಿಕ ಆದಾಯವನ್ನು ಎಐಸಿಟಿಯು ರೂ.6 ಲಕ್ಷಕ್ಕ ಏರಿಸಿದ್ದು ರೂ.6 ಲಕ್ಷ ಆದಾಯದಡಿ ಹೆಚ್ಚಿನ ವಿದ್ಯಾರ್ಥಿಗಳು ಇರುವುದರಿಂದ ವಾರ್ಷಿಕ ಆದಾಯ ರೂ.2.5 ಲಕ್ಷ ಆದಾಯ ಮಿತಿಯೊಳಗಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೀಟು ಸಿಗುವ ಸಂಭವ ಕಡಿಮೆ ಎಂಬುದನ್ನು ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ 2014-15ನೇ ಸಾಲಿನಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಫೆ.26ರಂದು ನಡೆದ ಪರೀಕ್ಷಾ ಪ್ರಾಧಿಕಾರದ ಆಢಳಿತ ಮಂಡಳಿಯ ಸಭೆಯಲ್ಲಿ ಬೋಧನಾ ಶುಲ್ಕದ ವಿನಾಯಿತಿ ನೀಡಲು ಕೇಂದ್ರ ಸರ್ಕಾರದ ಸೂಪರ್ ನ್ಯೂಮರರಿ ಕೋಟಾ ಅಡಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪೋಷಕರ ಆದಾಯ ಮಿತಿಯನ್ನು ಪರಿಷ್ಕರಿಸಿ 5 ವರ್ಗಗಳಾಗಿ (ರೂ.1-2ಲಕ್ಷ, 2-3 ಲಕ್ಷ, 3-4 ಲಕ್ಷ, 4-5 ಲಕ್ಷ, 5-6ಲಕ್ಷ) ವಿಂಗಡಿಸಲಾಗಿದೆ. ಒಟ್ಟಾರೆ ಲಭ್ಯವಿರುವ ತಾಂತ್ರಿಕ ಕಾಲೇಜು ಸೀಟುಗಳ ಶೇ.5ರಷ್ಟು ಸೀಟುಗಳಲ್ಲಿ ಈ ಯೋಜನೆಯಡಿ ಮೊದಲು 1-2 ಲಕ್ಷ ಆದಾಯ ಮಿತಿ ಇರುವ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಸೀಟು ಹಂಚಿಕೆ ಮಾಡಿ ಉಳಿದ ಸೀಟುಗಳನ್ನು ಹಂಚಲು ಇದೇ ಕ್ರಮವನ್ನು ಇತರೆ 4 ವರ್ಗಗಳಿಗೆ ಅನುಸರಿಸಲಾಗುತ್ತದೆ. ಇದು ಎಲ್ಲಾ ಸರ್ಕಾರಿ, ವಿಶ್ವವಿದ್ಯಾಲಯ, ಅನುದಾನಿತ, ಖಾಸಗಿ ಅನುದಾನರಹಿತ( ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತವಲ್ಲದ)ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಲಭ್ಯವಿರುವ ಸುಮಾರು 90 ಸಾವಿರ ಎಂಜಿನಿಯರಿಂಗ್ ಸೀಟುಗಳಲ್ಲಿ ಪ್ರತಿ ಕೋರ್ಸ್ನ ಶೇ.5 ಅಂದರೆ ಸುಮಾರು 4500 ಸೀಟುಗಳು ಸೂಪರ್ ನ್ಯೂಮರರಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಆದಾಯವನ್ನು ಪ್ರಮಾಣೀಕರಿಸುವ ಸಂಬಂಧಿಸಿದ ಪ್ರಾಧಿಕಾರ ( ತಹಸೀಲ್ದಾರ್, ನಗರಪಾಲಿಗೆ ಅಧಿಕಾರಿ) ನೀಡಿದ ಅಧಿಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಈ ಬಾರಿ ಸೂಪರ್ನ್ಯೂಮರರಿ ಕೋಟಾದ ಆದಾಯ ಮಿತಿ ತಗ್ಗಿಸಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಈ ಯೋಜನೆಯಡಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ತಮ್ಮ ಪೋಷಕರ ವಾರ್ಷಿಕ ಆದಾಯವನ್ನೂ ಘೋಷಿಸಿಕೊಂಡಿದ್ದಾರೆ. ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಈ ಪಟ್ಟಿಯನ್ನು ನೋಡುತ್ತಾ ಹೋದರೆ ಆಶ್ಚರ್ಯದ ಜೊತೆಗೆ ಆಘಾತವೂ ಆಗುವಂತಿದೆ. ಏಕೆಂದರೆ ಸಾವಿರಾರು ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಕೇವಲ ರೂ.10-24 ಸಾವಿರ ರೂಪಾಯಿ ಒಳಗಿದೆ. 10ಸಾವಿರ, 11 ಸಾವಿರ ವಾರ್ಷಿಕ ಆದಾಯ ಘೋಷಿಸಿಕೊಂಡ ವಿದ್ಯಾರ್ಥಿಗಳ ಸಂಖ್ಯೆಯೂ ಸಾವಿರಗಳಲ್ಲೇ ಇದೆ. 50 ಸಾವಿರದೊಳಗೆ ಆದಾಯ ಘೋಷಿಸಿರುವವರ ಸಂಖ್ಯೆ ಲೆಕ್ಕವಿಲ್ಲದಷ್ಟು.ಒಬ್ಬ ವಿದ್ಯಾರ್ಥಿ ವಾರ್ಷಿಕ ರೂ.9 ಸಾವಿರ ಆದಾಯ ಘೋಷಿಸಿದ್ದಾರೆ. ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಪಟ್ಟಿಯಲ್ಲಿರುವಂತೆ ಒಂದು ಶ್ರೇಣಿಯ 42 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ರೂ.11ಸಾವಿರ ಆದಾಯ ಘೋಷಿಸಿದ್ದಾರೆ.
ಇದು ಅತ್ಯಂತ ಅಸಹಜ ಹಾಗೂ ಸತ್ಯಕ್ಕೆ ದೂರವಾದ ಸಂಗತಿ ಎಂಬುದು ಮೇಲ್ನೋಟಕ್ಕೇ ಯಾರಿಗಾದರೂ ತಿಳಿಯುತ್ತದೆ. ಎಂತಹ ಬಡ ಕುಟುಂಬವೂ ಇಂದು ಕೇವಲ ರೂ.10 ಸಾವಿರ ವಾರ್ಷಿಕ ಆದಾಯದಲ್ಲಿ ಜೀವನ ನಿರ್ವಹಿಸಲು ಸಾಧ್ಯವಿಲ್ಲ. ಆಹಾರ ಭದ್ರತೆ ಹೊರತುಪಡಿಸಿಯೂ ವಸತಿ,ಆರೋಗ್ಯ,ಶಿಕ್ಷಣ ಈ ಎಲ್ಲಾ ವೆಚ್ಚವನ್ನೂ ರೂ.10-11 ಸಾವಿರದಲ್ಲಿ ನಿಭಾಯಿಸಲು ಸಾಧ್ಯವೇ ಇಲ್ಲ. ಇಂದು ಟಿವಿ,ಮೊಬೈಲ್ ಇಲ್ಲದ ಮನೆಗಳೇ ಇಲ್ಲ. ನರೇಗ ಯೋಜನೆಯಡಿ ಕಳೆದ ಸಾಲಿನಲ್ಲಿ ನೂರು ದಿನಗಳ ಕೂಲಿ ಪಡೆದ ಕುಟುಂಬದ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವೇ ರೂ.17,400. ಹೀಗಿರುವಾಗ ತಾಂತ್ರಿಕ ಶಿಕ್ಷಣ ಪಡೆಯ ಬಯಸುವ ಸಾವಿರಾರು ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 10 ಸಾವಿರ, 11ಸಾವಿರ ಇರಲು ಹೇಗೆ ಸಾಧ್ಯ?
ಭಾರತದಲ್ಲಿ ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿಗೆ 2400 ಕ್ಯಾಲರಿ ಆಹಾರಕ್ಕಾಗಿ (ಸುಮಾರು ದಿನಕ್ಕೆ 650ಗ್ರಾಂ) ತಿಂಗಳಿಗೆ ರೂ.368 ಹಣ ಬೇಕಾಗುತ್ತದೆ ಎಂದು ಒಂದು ವರದಿ ತಿಳಿಸಿದೆ. 15 ವರ್ಷಗಳ ಹಿಂದೆಯೇ 9ನೇ ಪಂಚವಾರ್ಷಿಕ ಯೋಜನೆಯಡಿ ವಾರ್ಷಿಕ ರೂ.20ಸಾವಿರಕ್ಕಿಂತ ಕಮ್ಮಿ ಆದಾಯ, 2 ಹೆಕ್ಟೇರ್ಗಿಂತ ಕಡಿಮೆ ಭೂಮಿ, ಟೆಲಿವಿಶನ್, ರೆಫ್ರೆಜರೇಟರ್ ಇಲ್ಲದ ಕುಟುಂಬವನ್ನು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬ ಎಂದು ಪರಿಗಣಿಸಲಾಗಿತ್ತು. 1978ರಲ್ಲೇ ಈ ಆದಾಯಮಿತಿಯನ್ನು ಗ್ರಾಮೀಣ ಪ್ರದೇಶದ ವ್ಯಕ್ತಿಯೊಬ್ಬನಿಗೆ ದಿನಕ್ಕೆ ರೂ.61.80 ಮತ್ತು ನಗರವಾಸಿಗೆ ರೂ. 71.30 ಎಂದು ನಿಗಧಿಗೊಳಿಸಲಾಗಿತ್ತು. ಈ ಲೆಕ್ಕದಲ್ಲಿ ನೋಡಿದರೂ ವಾರ್ಷಿಕ ಆದಾಯ 20 ಸಾವಿರ ಮೀರುತ್ತದೆ. ಕಳೆದ ವರ್ಷ ಬಡತನ ರೇಖೆಯ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವ್ಯಕ್ತಿಗೆ ರೂ.22.45 ಮತ್ತು ನಗರ ಪ್ರದೇಶದಲ್ಲಿ ರೂ. 28.65 ಎಂದು ತೆಂಡೂಲ್ಕರ್ ವಿಧಾನದ ಮೂಲಕ ನಿಗಧಿ ಮಾಡಿದ್ದು ತೀವ್ರ ವಿವಾದ ಸೃಷ್ಟಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಬಡತನದ ರೇಖೆಯಡಿ ಇರುವ ಜನರ ಪ್ರಮಾಣ 2012-13ರಲ್ಲಿ ಶೇ.37.2 ರಿಂದ ಶೇ.22ಕ್ಕೆ ಕುಸಿದಿದೆ ಎಂದು ಭಾರತ ಸರ್ಕಾರ ಹೇಳುತ್ತದೆ. ಆದರೆ ಸೂಪರ್ ನ್ಯೂಮರರಿ ಕೋಟಾದಡಿ ಎಂಜಿನಿಯರಿಂಗ್ ಸೀಟಿಗೆ ಪ್ರವೇಶ ಪಡೆಯಲು ಆದಾಯ ಘೋಷಣೆ ಮಾಡಿರುವುದನ್ನು ನೋಡಿದರೆ ಬಡತನರೇಖೆಯಡಿ ಇರುವವರ ಸಂಖ್ಯೆ ವರ್ಷ ವರ್ಷ ಹೆಚ್ಚುತ್ತಿದೆ ಅನಿಸುತ್ತದೆ.
ಆದಾಯ ಘೋಷಣೆ ಮಾಡಿದ ಅಭ್ಯರ್ಥಿಗಳೆಲ್ಲರೂ ನಿಗಧಿತ ಪ್ರಾಧಿಕಾರದಿಂದ ಪಡೆದಿರುವ ಆದಾಯ ಪ್ರಮಾಣ ಪತ್ರವನ್ನೂ ಲಗತ್ತಿಸಲೇಬೇಕಾಗುತ್ತದೆ. ನನಗೆ ಗೊತ್ತಿರುವ ಮಟ್ಟಿಗೆ ನೂರಾರು ಗಿಡ ತೆಂಗು,ಅಡಕೆ ತೋಟಉಳ್ಳವರು, ಜಮೀನ್ದಾರರು, ತೆರಿಗೆ ಪಾವತಿಸುವ ವ್ಯವಹಾರಸ್ಥರು, ಸರ್ಕಾರಿ ಕೆಲಸದಲ್ಲಿರುವವರೂ ಸಹ ಸುಳ್ಳು ಆದಾಯ ಘೋಷಿಸಿದ್ದಾರೆ. ತಹಸೀಲ್ದಾರ್ ಕಛೇರಿಗಳಲ್ಲಿ ರೂ.500ಕ್ಕೆಲ್ಲ ಕೇಳಿದ ಆದಾಯಕ್ಕೆ ಒಂದು ಆದಾಯ ಪ್ರಮಾಣ ಪತ್ರ ಸಿಗುತ್ತದೆ. ಇಂತಹ ಬೇಜವಾಬ್ಧಾರಿ ಆಡಳಿತ ವ್ಯವಸ್ಥೆಯಿಂದ ಆದಾಯ ಪ್ರಮಾಣ ಪತ್ರದ ಸಿಂಧುತ್ವವನ್ನು ಪ್ರಶ್ನಿಸುವವರೇ ಇಲ್ಲದಾಗಿದೆ.
ಈ ರೀತಿ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸುವುದರಿಂದ ಅರ್ಹ ಪ್ರತಿಭಾವಂತ ಬಡವಿದ್ಯಾರ್ಥಿಗೆ ನಿಜಕ್ಕೂ ಅನ್ಯಾಯವಾಗುತ್ತದೆ. ಒಂದು ಲಕ್ಷ ಆದಾಯ ಮಿತಿಯೊಳಗಿನ ವರ್ಗದಲ್ಲೇ ಎಲ್ಲಾ ಸೂಪರ್ ನ್ಯೂಮರರಿ ಕೋಟಾ ಸೀಟುಗಳು ಹಂಚಿಕೆಯಾಗುವ ಸಂಭವವಿರುವುದರಿಂದ ಪ್ರಾಮಾಣಿಕವಾಗಿ ಆದಾಯ ಘೋಷಿಸಿದ ಪ್ರತಿಭಾವಂತ ಮಧ್ಯಮ ವರ್ಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುವುದರಿಂದ ವಂಚಿತರಾಗುತ್ತಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಎಲ್ಲರೂ ಒಪ್ಪಬಹುದಾದ ಒಂದು ಆದಾಯ ಮಿತಿಯನ್ನು ಕನಿಷ್ಠ ಆದಾಯ ಮಿತಿ ಎಂದು ಘೋಷಿಸಿ ಹೊಸ ಮಾನದಂಡ ರೂಪಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಲೆಕ್ಕಿಗರು, ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕುಟುಂಬದ ಆದಾಯವನ್ನು ಪರಿವೀಕ್ಷಿಸಿ ಆದಾಯ ಪ್ರಮಾಣ ಪತ್ರ ನೀಡಬೇಕು. ಪೋಷಕರೂ ಸಹ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರೀಕ್ಷಾ ಪ್ರಾಧಿಕಾರ ಪ್ರವೇಶ ನೀಡಿದ ನಂತರ ಆದಾಯದ ಮೂಲಗಳನ್ನು ಪರಿಶೀಲಿಸಿ ಸುಳ್ಳು ಆದಾಯ ಘೋಷಿಸುವವರ ಪ್ರವೇಶವನ್ನು ರದ್ದು ಪಡಿಸಬೇಕು.
ಚಿತ್ರಕೃಪೆ : http://www.nytimes.com