ವಿಷಯದ ವಿವರಗಳಿಗೆ ದಾಟಿರಿ

ಜುಲೈ 17, 2014

3

ಶಾ ಬಾನು,ಫೆಮಿನಿಸಂ,ಸೆಕ್ಯುಲರಿಸಂ ಮತ್ತು ಸಮಾನ ನಾಗರೀಕ ಸಂಹಿತೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Uniform Civil Codeದೇಶದಲ್ಲಿರುವ ಷರಿಯತ್ ಕೋರ್ಟುಗಳಿಗೆ ಕಾನೂನು ಮಾನ್ಯತೆಯಿಲ್ಲ.ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿದ ತೀರ್ಪು ಮತ್ತೊಮ್ಮೆ “ಸಮಾನ ನಾಗರೀಕ ಸಂಹಿತೆ”ಯ ಜಾರಿಯ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ. ಸಮಾನ ನಾಗರೀಕ ಸಂಹಿತೆಯ ಜೊತೆ ಜೊತೆಗೆ ಈ ತೀರ್ಪಿನ ಜೊತೆಗೆ ನೆನಪಾಗುವುದು ೮೦ರ ದಶಕದ ’ಶಾ ಬಾನು ಪ್ರಕರಣ’

ಏನಿದು ಶಾ ಬಾನು ಪ್ರಕರಣ : ಇಂದೋರಿನ ವಕೀಲ ಮೊಹಮ್ಮದ್ ಅಹ್ಮದ್ ಖಾನ್ ನ ಪತ್ನಿ ಶಾ ಬಾನು.ಮದುವೆಯಾಗಿ ೧೪ ವರ್ಷಗಳ ನಂತರ ಎರಡನೇ ಮದುವೆಯಾದ ಅಹ್ಮದ್ ಖಾನ್.ಇಬ್ಬರು ಹೆಂಡಿರ ಜೊತೆ ಸಂಸಾರ ನಡೆಸಿ ಕಡೆಗೆ ಕೆಲ ವರ್ಷಗಳ ನಂತರ ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನುವನ್ನು ಆಕೆಯ ೬೨ನೇ ವಯಸ್ಸಿನಲ್ಲಿ ಆಕೆಯ ಐದು ಮಕ್ಕಳ ಜೊತೆಗೆ ಹೊರಹಾಕಿದ.ಒಪ್ಪಂದದಂತೆ ಮಾಸಿಕ ೨೦೦ ರೂ ಜೀವನಾಂಶವನ್ನು ಆಕೆಗೆ ನೀಡದಿದ್ದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಏಪ್ರಿಲ್ ೧೯೭೮ರಲ್ಲಿ ದಾವೆ ಹೂಡುತ್ತಾರೆ ಶಾ ಬಾನು.ಮಾಸಿಕ ೫೦೦ರೂ ಜೀವನಾಂಶ ಬೇಕೆಂದು ಕೇಳಿಕೊಳ್ಳುತ್ತಾರೆ.

ನವೆಂಬರ್ ೧೯೭೮ರಲ್ಲಿ ಖಾನ್ ಶಾ ಬಾನು ಅವರಿಗೆ ತಲಾಖ್ ನೀಡಿ,ಈಗ ಆಕೆ ನನ್ನ ಪತ್ನಿಯಲ್ಲ ಮತ್ತು ಆಕೆಗೆ ಇಸ್ಲಾಮಿಕ್ ಲಾ ಮೂಲಕ ಕೊಡಬೇಕಾದ ೫,೪೦೦ ರೂ ಬಿಟ್ಟರೆ ನಾನು ಇನ್ನಾವುದೇ ಹಣವನ್ನು ಕೊಡಬೇಕಾಗಿಲ್ಲ ಎಂದು ವಾದಿಸುತ್ತಾನೆ ಖಾನ್.ಆಗಸ್ಟ್ ೧೯೭೯ರಲ್ಲಿ ಸ್ಥಳೀಯ ನ್ಯಾಯಾಲಯ ಮಾಸಿಕ ೨೫ರೂ ನೀಡುವಂತೆ ತೀರ್ಪು ಕೊಟ್ಟಿತ್ತು.ಶಾ ಬಾನು ಕೇಸನ್ನು ಹೈಕೋರ್ಟಿಗೆ ಕೊಂಡೊಯ್ದರು.ಅಲ್ಲಿ ಶಾ ಬಾನು ಪರವಾಗಿ ೧೯೮೦ರ ಜುಲೈನಲ್ಲಿ ಬಂದ ತೀರ್ಪು ಮಾಸಿಕ ೧೭೯ ರೂ ನೀಡುವಂತೆ ತೀರ್ಪು ನೀಡುತ್ತದೆ.ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಖಾನ್ ಹೋಗುತ್ತಾನೆ.ಶಾ ಬಾನು ಈಗ ನನ್ನ ಪತ್ನಿಯಲ್ಲ ಇಸ್ಲಾಮಿಕ್ ಕಾನೂನಿಂತೆ ಆಕೆಗೆ ನಾನು ತಲಾಖ್ ನೀಡಿ ಎರಡನೇ ಮದುವೆಯಾಗಿದ್ದೇನೆ ಎನ್ನುತ್ತಾನೆ.

ವಾದ ಆಲಿಸಿದ ಸುಪ್ರೀಂ ಕೋರ್ಟಿನ ದ್ವಿ-ಸದಸ್ಯ ಪೀಠ ಪ್ರಕರಣವನ್ನು ಹೆಚ್ಚುವರಿ ಪೀಠಕ್ಕೆ ವರ್ಗಾಯಿಸಿತು.ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮತ್ತು ಜಮಾತೆ ಉಲೇಮಾ ಈ ಹಿಂದ್ ಸಂಘಟನೆಗಳು ಕೂಡ ಪ್ರಕರಣದಲ್ಲಿ ವಾದಿಗಳಾಗಿ ಭಾಗಿಯಾದವು.ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯಾಗಿದ್ದ ಜಸ್ಟೀಸ್ ಚಂದ್ರಚೂಡ್ ಅವರನ್ನೊಳಗೊಂಡಿದ್ದ ಪಂಚ ಸದಸ್ಯ ಪೀಠವೂ ಸಹ ಹೈ ಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು.ಆ ಮೂಲಕ ಮುಸ್ಲಿಂ ಮಹಿಳೆಯಾದರೂ, ಶಾ ಬಾನು ಉಳಿದ ಮಹಿಳೆಯರಂತೆ ಸಂವಿಧಾನ ಬದ್ಧ ಹಕ್ಕು ಪಡೆಯಲು ಸ್ವತಂತ್ರಳು ಮತ್ತು ನಮ್ಮ ಸಂವಿಧಾನವೇ ಇಂತ ಪ್ರಕರಣಗಳಲ್ಲಿ ಅಂತಿಮ ಎನ್ನುವ ಸಂದೇಶವನ್ನು ರವಾನಿಸುವಂತಿತ್ತು ಸುಪ್ರೀಂ ತೀರ್ಪು.

ಕ್ರಿಮಿನಲ್ ಕೋಡ್ ಪ್ರೊಸಿಜರ್ ನ ಸೆಕ್ಷನ್ ೧೨೫ ಜಾತಿ,ರಿಲಿಜನ್ನುಗಳಾಚೆಗೂ ಸಲ್ಲುತ್ತದೆ ಎಂದು ತೀರ್ಪಿನಲ್ಲಿ ಹೇಳಿತ್ತು ಸುಪ್ರೀಂ ಕೋರ್ಟ್. ಅದಕ್ಕಿಂತಲೂ ಮುಖ್ಯವಾಗಿ “ಸಮಾನ ನಾಗರೀಕ ಸಂಹಿತೆ (Uniform Civil Code)” ಅನ್ನು ಜಾರಿಗೆ ತರದಿರುವ ಬಗ್ಗೆಯೂ ವಿಷಾದ ವ್ಯಕ್ತಪಡಿಸಿತ್ತು. ಸಹಜವಾಗಿಯೇ ತೀರ್ಪು ಕಟ್ಟರ್ ರಿಲಿಜಯನ್ ಅನುಯಾಯಿಗಳಿಂದ ವಿರೋಧಕ್ಕೊಳಗಾಯಿತು.ಈ ತೀರ್ಪು ಮುಸ್ಲಿಂ ವೈಯುಕ್ತಿಕ ಕಾನೂನನ್ನು ಬದಿಗೆ ಸರಿಸಿದಂತೆ ಕಟ್ಟರ್ ಮುಸ್ಲಿಂರಿಗೆ ಅನ್ನಿಸಲಿಕ್ಕರಾಂಭಿಸಿತು ಮತ್ತದನ್ನುವರು ದೊಡ್ಡ ದನಿಯಲ್ಲಿ ಪ್ರತಿಭಟಿಸಿದರು.

ಈ ತೀರ್ಪಿನಿಂದಾಗಿ ಕೆರಳಿದ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟಿಸಿತು. ತಮ್ಮ ರಿಲಿಜಯಸ್ ಪ್ರಾಕ್ಟೀಸಿನಲ್ಲಿ ಹಸ್ತಕ್ಷೇಪ ಅಥವಾ ಮೊಟಕುಗೊಳಿಸುವಿಕೆಯನ್ನು ಅದು ತೀವ್ರವಾಗಿ ವಿರೋಧಿಸಿತು.

ದೇಶದ ಕೋಮು ಸಾಮರಸ್ಯಕ್ಕೆ ಕೊಳ್ಳಿಯಿಟ್ಟ ರಾಜೀವ್ ಗಾಂಧಿ :

ಆಗ ಅಧಿಕಾರದಲ್ಲಿದ್ದಿದ್ದು, ಯಾವುದೇ ಅರ್ಹತೆ,ಅನುಭವವಿಲ್ಲದೇ ಕೇವಲ ಅಮ್ಮನ ಹೆಸರಿನ ಬಲದ ಮೇಲೆ ಪ್ರಧಾನಿಗಾದಿಯೇರಿದ್ದ ರಾಜೀವ್ ಗಾಂಧಿ.ಯಾವುದೇ ರಾಜಕೀಯ ಅನುಭವವಿರದೇ ಕೇವಲ ತಾತ,ಅಮ್ಮಂದಿರ ಹೆಸರಲ್ಲಿ ಅಧಿಕಾರ ಪಡೆದ ಅನನುಭವಿಯೊಬ್ಬರು ಮಾಡಬಹುದಾಗಿದ್ದ ಅತ್ಯಂತ ಕೆಟ್ಟ ಕೆಲಸವನ್ನು ರಾಜೀವ್ ಮಾಡಿದ್ದರು. ಮುಸ್ಲಿಂ ಸಮುದಾಯವನ್ನು ಓಲೈಸಿ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಲಲು  ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನಕ್ಕೂ ಮತ್ತು ಶಾ ಬಾನುವಿನಂತ ಮುಸ್ಲಿಂ ಮಹಿಳೆಯರಿಗೂ ಮೋಸ ಮಾಡಿದರು. ಮತ್ತು ಆ ಮೂಲಕ ಈ ದೇಶದ ಕೋಮು ಸಾಮರಸ್ಯಕ್ಕೆ ಕೊಳ್ಳಿ ಇಟ್ಟ ಕೀರ್ತಿ ಶ್ರೀಮಾನ್ ರಾಜೀವ್ ಗಾಂಧಿ ಮತ್ತವರ ಕಾಂಗ್ರೆಸ್ಸ್ ಪಕ್ಷಕ್ಕೇ ಸಲ್ಲಬೇಕು.

Pseudo ಸೆಕ್ಯುಲರ್ ಮಹಾಶಯರ ಮೌನ :

ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳಲಿಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು,ಸುಪ್ರೀಂ ಕೋರ್ಟ್ ತೀರ್ಪೇ ಜಾರಿಯಾಗದಂತೆ ನೋಡಿಕೊಂಡ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯ ವಿರುದ್ಧ ಸಹಜವಾಗಿಯೇ ಹಿಂದೂ ಸಮುದಾಯ ದನಿಯೆತ್ತಿತು.ಕಡೆಗೆ ಹಿಂದೂಗಳನ್ನು ಸಮಾಧಾನಪಡಿಸಲಿಕ್ಕಾಗಿ ಅಯೋಧ್ಯೆಯ ರಾಮಮಂದಿರದ ಬಾಗಿಲು ತೆಗೆಸಿದ ರಾಜೀವ್ ಗಾಂಧಿ ಮುಂದೆ ನಡೆದ ಎಲ್ಲಾ ಘಟನೆಗಳಿಗೆ ಮುನ್ನುಡಿ ಬರೆದಿದ್ದರು.ವಿಚಿತ್ರವೆಂದರೆ,ನಮ್ಮ Pseudo ಸೆಕ್ಯುಲರ್ ಮಹಾಶಯರು ಇವತ್ತಿಗೂ ಬಾಬರಿ ಮಸೀದಿಯ ಬಗ್ಗೆ ಮಾತನಾಡುತ್ತಾರೆಯೇ ಹೊರತು,ರಾಮಮಂದಿರ ಬಾಗಿಲು ತೆಗೆಸಲು ಕಾರಣವಾದ ಶಾ ಬಾನು ಪ್ರಕರಣ ಮತ್ತು ರಾಜೀವ್ ತುಷ್ಟೀಕರಣದ ನೀತಿಯ ವಿರುದ್ಧ ಅಪ್ಪಿ ತಪ್ಪಿಯೂ ಮಾತನಾಡುವುದಿಲ್ಲ.

ರಾಜೀವ್ ಗಾಂಧಿಯವರ ತುಷ್ಟೀಕರಣ ನೀತಿಯನ್ನು ವಿರೋಧಿಸಿ ಆಗ ಅವರ ಸಂಪುಟದಲ್ಲಿ ಮಂತ್ರಿ ಮತ್ತು ಎಐಸಿಸಿ ಸದಸ್ಯರಾಗಿದ್ದ ಆರೀಫ್ ಮೊಹಮ್ಮದ್ ಖಾನ್ ರಾಜೀನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದರು.ನಮ್ಮ Pseudo ಸೆಕ್ಯುಲರ್ ಗಳ ಬಾಯಿಗಳು ಮಾತ್ರ ಬಿದ್ದು ಹೋಗಿತ್ತು.

ಇವತ್ತು ಮಾತಿಗೊಮ್ಮೆ ಮಹಿಳಾ ಹಕ್ಕುಗಳು,ಮಹಿಳಾವಾದ ಎಂದು ಮೈಕುಗಳು ಸಿಕ್ಕಲೆಲ್ಲಾ ಭೀಷಣ ಭಾಷಣ ಮಾಡುವ ಈ Pseudo ಸೆಕ್ಯುಲರ್ ವಂದಿ ಮಾಗಧರು ಅಂದು ರಾಜೀವ್ ವಿರುದ್ಧವೂ ದನಿಯೆತ್ತಲಿಲ್ಲ,ಇಂದು ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಲಿಲ್ಲ.ಈ ಸೆಕ್ಯುಲರ್ ಮಹಾಶಯರುಗಳು ದ್ವಂದ್ವ ನಡೆಗಳು ಹೊಸತೇನು ಅಲ್ಲ. ಮಾತಿಗೊಮ್ಮೆ “ಸಂವಿಧಾನವೇ ಅಂತಿಮ”ಎನ್ನುವ ಈ ಮಹಾಶಯರುಗಳೇ ಮತ್ತೊಂದು ಕಡೆ ನಿಂತು ” ಸಮಾನ ನಾಗರೀಕ ಸಂಹಿತೆ (Uniform Civil Code)” ಯನ್ನು ವಿರೋಧಿಸುತ್ತಾರೆ!

ಈ ಸೆಕ್ಯುಲರ್ ಮಂದಿಯನ್ನು ಪಕ್ಕಕ್ಕಿಡಿ,ಪರಾವಲಂಬಿ ಜೀವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುವುದು ಸಾಮಾನ್ಯ.ಆದರೆ,ನಮ್ಮ “ಮಹಿಳಾ ವಾದಿಗಳು,ಮಹಿಳಾ ಸಂಘಟನೆ”ಗಳಿಗೇನಾಗಿದೆ?
ಹಾಗೆ ನೋಡಿದರೆ,ಸುಪ್ರೀಂ ಕೋರ್ಟಿನ ಮೊನ್ನೆಯ ತೀರ್ಪನ್ನು ಬಹುದೊಡ್ಡ ಮಟ್ಟದಲ್ಲಿ ಮೊದಲಿಗೆ ಸ್ವಾಗತಿಸಬೇಕಾಗಿದ್ದಿದ್ದು ಮಹಿಳಾ ಸಂಘಟನೆಗಳು ಮತ್ತು  ಮಹಿಳಾವಾದಿಗಳು.ಆದರೆ,ಹಾಗೇನು ಆಗಲಿಲ್ಲ!

ಪಬ್ ದಾಳಿಯನ್ನು ವಿರೋಧಿಸುವಾಗಲೋ,ಪಿಂಕ್ ಚಡ್ಡಿ ಅಭಿಯಾನಕ್ಕಾಗಿ ದೊಡ್ಡ ಸದ್ದು ಮಾಡುವವರು ಮುಗ್ಧ “ಶಾ ಬಾನು”ಗಳ ಬಗ್ಗೆ ದನಿಯೆತ್ತುವುದಿಲ್ಲವೇಕೆ?

ಮಾನವಪರ,ಜೀವಪರ,ಮಹಿಳಾ ಪರ ಎನ್ನುತ್ತಲೇ,”ಸಮಾನ ನಾಗರೀಕ ಸಂಹಿತೆ”ಯನ್ನು ವಿರೋಧಿಸುತ್ತ ಮೂಲಭೂತವಾದಿಗಳ ಪರವಾಗಿ ಮತ್ತು ಮಹಿಳಾ ಹಕ್ಕುಗಳ ವಿರುದ್ಧವಾಗಿ ನಿಲ್ಲುತ್ತಿರುವ  ಸೆಕ್ಯುಲರ್ ಪರಾವಲಂಬಿ ಜೀವಿ (ಬುದ್ಧಿ ಜೀವಿ)ಗಳ ಜೊತೆ ಗುರುತಿಸಿಕೊಳ್ಳುವ ದರ್ದೇಕೆ ಇವತ್ತಿನ ಕೆಲ ಮಹಿಳಾವಾದಿಗಳಿಗೆ ಬಂದಿದೇ? ತಮ್ಮ ರಕ್ಷಣೆ,ತಮ್ಮ ಹಕ್ಕುಗಳ ಬಗ್ಗೆ ಅವರಾಗಿಯೇ ಯೋಚಿಸಲಿಕ್ಕಾಗದಷ್ಟು ಮಹಿಳಾವಾದಿಗಳ ಚಿಂತನಾ ಶೈಲಿ ಮುಸುಕಾಗಿದೆಯೇ?

ಷರಿಯತ್ ನ್ಯಾಯಾಲಯಗಳು ಈ ಹಿಂದೆ ನೀಡಿರುವ ತೀರ್ಪುಗಳನ್ನು ನೋಡಿಯೂ ಮಹಿಳಾವಾದಿಗಳು ಸುಮ್ಮನಿದ್ದಾರೆ ಎಂದರೆ ಏನರ್ಥ? ಒಂದು ಉದಾಹರಣೆ ತೆಗೆದುಕೊಂಡರೆ,ಉ.ಪ್ರದೇಶದಲ್ಲಿ ಮಾವನಿಂದ ಅತ್ಯಾಚಾರಕ್ಕೊಳಗಾಗಿದ್ದ ಇಮ್ರಾನಾ ಎಂಬ ಮಹಿಳೆಗೆ ಸಿಕ್ಕ ನ್ಯಾಯವೇನು ಗೊತ್ತೇ? ಮಾವನನ್ನೇ ಮದುವೆಯಾಗುವುದು ಮತ್ತು ತನ್ನ ಪತಿಯನ್ನು ಮಗನ ಸಮಾನವಾಗಿ ನೋಡುವುದು!

ಇಂತ ತೀರ್ಪುಗಳು ಅದ್ಯಾವ ಸೀಮೆಯ ಮಹಿಳಾ ಹಕ್ಕಿನ ರಕ್ಷಣೆಯಾಗುತ್ತದೆ? ಮತ್ತು ನಮ್ಮ ಸೋ-ಕಾಲ್ಡ್ ಮಹಿಳಾವಾದಿಗಳ ಮೌನ ಸಮ್ಮತಿ ಪಡೆಯುತ್ತದೆ!? ಹೊರ ಜಗತ್ತಿಗೆ ತಿಳಿದ ಶಾ ಬಾನು,ಇಮ್ರಾನ ಪ್ರಕರಣಗಳ ಗತಿಯೇ ಹೀಗಾದರೆ,ಎಷ್ಟು ಇಮ್ರಾನಾ,ಶಾ ಬಾನುಗಳ ಅರಣ್ಯ ರೋದನವಾಗಿರಬಹುದು?

ಅಂದು The All India Democratic Women’s Association (AIDWA)ಮುಸ್ಲಿಂ ಮಹಿಳೆಯರನ್ನು ಸೇರಿಸಿಕೊಂಡು ಪ್ರತಿಭಟಿಸಿತ್ತಾದರೂ ಅದರ ದನಿ ಸೆಕ್ಯುಲರ್ ಮಹಾಶಯರಿಗೂ ಸೋ ಕಾಲ್ಡ್ ಸೆಕ್ಯುಲರ್ ಸರ್ಕಾರಕ್ಕೂ ಕೇಳಲೇ ಇಲ್ಲ.

ಅಂದು ಶಾ ಬಾನು ಪ್ರಕರಣದ ಸಮಯದಲ್ಲಿ ತಮ್ಮ ಕಣ್ಣೆದುರೆ  ಮಹಿಳೆಯೊಬ್ಬಳಿಗೆ ಮೋಸವಾಗಿದ್ದು ನೋಡಿಯೂ ಏನು ಮಾಡಲಾಗದಿದ್ದ ಮಹಿಳಾ ಸಂಘಟನೆಗಳಿಗೆ ಈ ಬಗ್ಗೆ ದನಿಯೆತ್ತಲು ಸುಪ್ರೀಂ ಕೋರ್ಟಿನ ತೀರ್ಪು ವರದಾನವಾಗಬಲ್ಲದು.  “ಸಮಾನ ನಾಗರೀಕ ಸಂಹಿತೆ (Uniform Civil Code)”ಜಾರಿಗೆ ತರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಿಕ್ಕೆ ಇದು ಸಕಾಲವೂ ಹೌದು. ” ಸಮಾನ ನಾಗರೀಕ ಸಂಹಿತೆ (Uniform Civil Code)” ಬಗ್ಗೆ ಪರಾವಲಂಬಿ ಸೆಕ್ಯುಲರ್ ಮಹಾಶಯರ  ಸ್ಟೀರಿಯೋಟೈಪ್ ವಾದಗಳನ್ನು ಕೇಳಿಕೊಂಡು ಕೂರುವ ಬದಲಿಗೆ ನಮ್ಮ ಮಹಿಳಾವಾದಿಗಳು ಮತ್ತು ಮಹಿಳಾ ಸಂಘಟನೆಗಳೇಕೆ ಖುದ್ದು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ, ಇವರು ಮಾತನಾಡುವ ಮಹಿಳಾ ಹಕ್ಕುಗಳು ಇತ್ಯಾದಿ ಮಹಿಳಾವಾದಗಳು ಕೇವಲ ಆತ್ಮವಂಚನೆಯಾದೀತು.

ರಿಲಿಜಯನ್ ಮತ್ತು ಸಂಪ್ರದಾಯಗಳ ನಡುವಿನ ಸಮಸ್ಯೆಗಳ ಮೂಲ “ಸೆಕ್ಯುಲರ್ ಪ್ರಭುತ್ವ”ವೇ…!?

ಈ Pseudo ಸೆಕ್ಯುಲರಿಸಂ ಮತ್ತು ಮಹಿಳಾವಾದಗಳನ್ನು ಬದಿಗಿಟ್ಟು ನೋಡಬೇಕಾದ ಇನ್ನೊಂದಿಷ್ಟು ಅಂಶಗಳಿವೆ.ಅವು ಸುಪ್ರೀಂ ತೀರ್ಪು,ನಮ್ಮ ನ್ಯಾಯಾಂಗ ವ್ಯವಸ್ಥೆ,ನಮ್ಮ ದೇಶದ ಸಾಂಪ್ರಾದಾಯಿಕ ನ್ಯಾಯ ಪಂಚಾಯಿತಿ ಮತ್ತು ಷರಿಯತ್ ನ್ಯಾಯ ಪಂಚಾಯಿತಿ.

ಫತ್ವಾದ ಕುರಿತ ಸುಪ್ರಿಂ ಕೋರ್ಟಿನ ತೀರ್ಪು ಸಮಾನ ನಾಗರೀಕ ಸಂಹಿತೆಗೆ ಮುನ್ನುಡಿ ಬರೆದಂತೆ ಕಾಣುತ್ತದೆ.ಫತ್ವಾಗಳು ಯಾವುದೇ  ಸಾಂವಿಧಾನಿಕವಾದ ಮಾನ್ಯತೆಯನ್ನು ಪಡೆದಿಲ್ಲ ಅದಕ್ಕೂ ಹೆಚ್ಚಿನದಾಗಿ ಪರ್ಯಾಯ ಸಂವಿಧಾನದಂತೆ ಕಾರ್ಯನಿರ್ವಹಿಸುವ ಅಧಿಕಾರ ಫತ್ವಾಗಳಿಲ್ಲ ಎಂಬುದು ತೀರ್ಪಿನ ಸಾರಾಂಶ.

ಭಾರತದಲ್ಲಿ  ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ  ನ್ಯಾಯ ಪಂಚಾಯಿತಿಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಯತ್ನಿಸುತ್ತವೆ.ಬಹುತೇಕ ಸಂದರ್ಭದಲ್ಲಿ ಕ್ರಿಮಿನಲ್ ಮೊಕದ್ದಮೆಗಳ ಹೊರತಾಗಿ ಸಮಸ್ಯೆಗಳನ್ನು ಇತ್ಯರ್ಥಮಾಡುತ್ತಿವೆ.ಹಾಗಾದರೆ ಇದು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಲ್ಲವೆ?ಇದೂ ಸಹ ಫತ್ವಾದಂತೆಯೇ ಪರ್ಯಾಯವೆ?ಎಂಬ ಪ್ರಶ್ನೆಗಳೇಳುತ್ತವೆ.

ಆದರೆ,ಸಾಂಪ್ರದಾಯಿಕ ನ್ಯಾಯ ಪಂಚಾಯತಿಗಳನ್ನು ಷರಿಯತ್ ಗಾಗಲಿ ಅಥವಾ ಫತ್ವಾಗಾಗಲಿ ಹೋಲಿಸಲು ಸಾಧ್ಯವಿಲ್ಲ.ಏಕೆಂದರೆ ಅವು ಒಂದಕ್ಕೊಂದು ವಿರುದ್ಧ ದಿಕ್ಕಿನಿಂದ ರೂಪುಗೊಂಡಂತವುಗಳು.
ಉದಾಹರಣೆಗೆ,ಪ್ರಸಕ್ತ ಸುಪ್ರೀಂ ಕೋರ್ಟಿನ ತೀರ್ಪಿಗೆ ಪ್ರತಿಕ್ರಿಯಿಸಿರುವ  ಕುಲ್ ಹಿಂದ್ ಇಮಾಮ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಾಜಿದ್ ರಶೀದ್ “ಧಾರ್ಮಿಕ ವಿಚಾರವನ್ನು ಕೋರ್ಟಿಗೆ ಕೊಂಡೊಯ್ದಿದ್ದೇ ಮೊದಲ ತಪ್ಪು ,ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತಿದ್ದರೆ ಅದರ ಉಪದೇಶವನ್ನು ಪಾಲಿಸಲೇಬೇಕು.ಷರಿಯಾವನ್ನು ಪಾಲಿಸದವನು ನೈಜ ಮುಸಲ್ಮಾನನೇ ಅಲ್ಲ” ಎಂದಿದ್ದಾರೆ.ಅಂದರೆ ಷರಿಯತ್ ಕೋರ್ಟುಗಳು ನಡೆಯುವುದು ಅವರ ರಿಲಿಜಯನ್ ಗ್ರಂಥಗಳ ಚೌಕಟ್ಟಿನೊಳಗೆ ಅಂತಾಯಿತಲ್ಲವೇ?

ಆದರೆ,ಇದೇ ಮಾತು ನಮ್ಮ ಸಾಂಪ್ರದಾಯಿಕ ನ್ಯಾಯ ಪಂಚಾಯಿತಿಗಳಿಗೆ ಅನ್ವಯಿಸುವುದಿಲ್ಲ.ಇಲ್ಲಿ ಯಾವುದೇ ಧರ್ಮ ಗ್ರಂಥಗಳ ಆಧಾರವಿಲ್ಲದೇ ಆಯಾ ಪರಿಸರದ ಮೇಲೆ ಸಮಸ್ಯೆಯ ಪರಿಹಾರಗಳು ಅವಲಂಬಿತವಾಗಿರುತ್ತವೆ.
ಸಾಂಪ್ರದಾಯಿಕ ನ್ಯಾಯಪಂಚಾಯಿತಿಗಳು ನೀಡುವ ತೀರ್ಮಾನವನ್ನು ಪ್ರಶ್ನಿಸಬಹುದು,ಅಥವಾ ಒಪ್ಪಿಕೊಳ್ಳಲೂ ಬಹುದು,ಹಾಗೆಯೇ ಅದು ಸಂವಿಧಾನಕ್ಕೆ ವಿರುದ್ಧವಾದ ತೀರ್ಪುಗಳನ್ನು ನೀಡಲು ಯಾವುದೇ ಅಧಿಕಾರವನ್ನು ಹೊಂದಿಲ್ಲ.ಅದು ತನ್ನ ಸುತ್ತಮುತ್ತಲಿನ ಸ್ಥಳೀಯವಾಗಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ.ಅದಕ್ಕೂ ಮಿಗಿಲಾಗಿ ಬಹುತೇಕ ನ್ಯಾಯಪಂಚಾಯಿತಿಗಳಿಗೆ ಸಾಂಸ್ಥಿಕವಾದ ರಚನೆಗಳಿರುವುದಿಲ್ಲ.ಸಮಸ್ಯೆಯ ಆಳ ಮತ್ತು ಅಗಲದ ಆಧಾರದ ಮೇಲೆ ಪಂಚಾಯತಿಗಳು ರೂಪುಗೊಳ್ಳುತ್ತವೆ.

ಇನ್ನು ಷರಿಯತ್ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಬಂದಿರುವ ತಾತ್ಕಾಲಿಕ ವ್ಯವಸ್ಥೆಯೂ ಅಲ್ಲ,ಅದನ್ನು ಹಿಂಬಾಲಕರು ಅನುಸರಿದಿದ್ದರೆ ಪರಿಣಾಮಗಳು ಇಲ್ಲದೆಯೂ ಇಲ್ಲ.ಫತ್ವಾಗಳು ಒಂದಲ್ಲ ಒಂದು ರೀತಿಯಲ್ಲಿ ಷರಿಯತ್ ಭಾಗವಾಗಿ ಅಥವಾ ಅದರ ಮುಂದುವರಿಕೆಯ ಭಾಗವಾಗಿ ಹೊರಬರುತ್ತವೆ.

ಫತ್ವಾಗಳು ಷರಿಯತ್ ಎಂಬ ರಿಲಿಜನ್ ಪರಿಧಿಯೊಳಗೆ ಬರುವ ಕಾನೂನಿಗೆ ಮಾತ್ರ  ನಿಷ್ಠವಾಗಿರುತ್ತವೆಯೇ ವಿನಃ ಇತರ ಯಾವ ಸಂಗತಿಗಳೂ ಅವುಗಳಿಗೆ ಮುಖ್ಯವಾಗುವುದಿಲ್ಲ.ಆದ್ದರಿಂದಲೇ ಅದು ಅಸಂವಿಧಾನಿಕವಾಗಿದ್ದರೂ ಆಶ್ಚರ್ಯವಿಲ್ಲ.ಇದು ಸೆಕ್ಯುಲರ್ ಪ್ರಭುತ್ವದೊಳಗೆ ಬರುವ ರಿಲಿಜನ್ನಿನ ಸಮಸ್ಯೆ ಎಂದರೆ ತಪ್ಪಾಗಲಾರದು.

ಆದರೆ,ಇಂತಹ ಸಮಸ್ಯೆ ಹಿಂದೂ ಸಂಪ್ರದಾಯಗಳಿಗೆ ಬರುವುದು ಅಸಾಧ್ಯ.ಏಕೆಂದರೆ,ಎಲ್ಲವನ್ನೂ ಒಳಗೊಳ್ಳುವ ಮೂಲಕ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಗುಣ ಸಂಪ್ರದಾಯಗಳಿಗೆ ಇರುತ್ತವೆ ಮತ್ತು ಯಾವುದೇ ಧರ್ಮಗ್ರಂಥಗಳ ಆಧಾರದ ಮೇಲೆ ನಮ್ಮ ಬದುಕು ನಿರ್ಧರಿತವಾಗುವುದಿಲ್ಲ.ನಿಮಗೆ ನೆನಪಿರಬಹುದು,ವರ್ಷಗಳ ಹಿಂದೊಮ್ಮೆ ಹಿಂದೂ ಸಿವಿಲ್ ಕೋಡ್ ತಿದ್ದುಪಡಿ ಕುರಿತಂತೆ ನ್ಯಾಯಾಲಯ “ಹಿಂದೂಗಳ ವಿಷಯದಲ್ಲಿ ಕಾನೂನು ಮಾಡಲು ಆತುರ ತೋರುವ ಸರ್ಕಾರಗಳು ಅದನ್ನೇ ಬೇರೆ ಧರ್ಮಗಳ ವಿಷಯದಲ್ಲಿ ಮಾಡಲಾರರು” ಅನ್ನುವ ರೀತಿಯಲ್ಲಿ ಉಲ್ಲೇಖಿಸಿತ್ತು.

ಈ ಕಾರಣದಿಂದಾಗಿಯೇ ಬಹುಷಃ ಯುರೋಪ್ ಸಮಾಜದ ಕ್ರಿಶ್ಚಿಯನ್ ಥಿಯಾಲಜಿಯ ಮೇಲೆ ರೂಪುಗೊಂಡಿರುವ ನಮ್ಮ ಸಂವಿಧಾನಕ್ಕೆ ಹಿಂದೂಗಳು ಸುಲಭವಾಗಿ ಒಗ್ಗಿಕೊಂಡಿದ್ದಾರೆ.ಆದರೆ,ಇದೇ ಮಾತು ಇಸ್ಲಾಂ ರಿಲಿಜನ್ನಿನ ಅನುಯಾಯಿಗಳ ಕುರಿತು ಹೇಳಲಾಗುವುದಿಲ್ಲ.ರಿಲಿಜನ್ ಗಳಿಗೆ ಒಂದು ದೇಶದ ಕಾನೂನು ಅಥವಾ ಸಾಂವಿಧಾನಿಕ ನಿಯಮಗಳು ತೊಂದರೆಯುಂಟು ಮಾಡುತ್ತವೆ.ಏಕೆಂದರೆ ರಿಲಿಜನ್ ಗಳಿಗೆ ಅವುಗಳದ್ದೇ ಆದ ಆಂತರಿಕ ಕಾನೂನುಗಳಿರುತ್ತವೆ.

ಸೆಕ್ಯುಲರ್ ಪ್ರಭುತ್ವದಲ್ಲಿ ಬದುಕುವ ರಿಲಿಜನ್ ಗಳಿಗೆ ಯಾವುದನ್ನು ಅನುಸರಿಸಬೇಕು ಎಂಬ ಗೊಂದಲ ಏಳುವುದು ಅತ್ಯಂತ ಸಹಜ.ಇದರ ಪರಿಣಾಮವೇ ಶಾ ಬಾನು  ಪ್ರಕರಣ.ಆದ್ದರಿಂದ ಫತ್ವಾಗಳ ನಿಷೇಧ ಅಥವಾ ಷರಿಯತ್ ಕಾನೂನುಗಳನ್ನು ಅನುಸರಿಸುವುದು ಅಥವಾ ಸಂವಿಧಾನದ ಕಾನೂನನ್ನು ಅನುಸರಿಸುವ ದ್ವಂದ್ವವನ್ನು ಹುಟ್ಟಿಹಾಕುತ್ತಿರುವುದು ಈ ಸೆಕ್ಯುಲರ್ ಪ್ರಭುತ್ವ.

ಕೊನೆಯದಾಗಿ ಹೇಳುವುದಾದರೆ ಸಮಾನ ನಾಗರೀಕ ಸಂಹಿತೆಯು ಹಾಗೂ ಷರಿಯತ್ ನ ಕಾನೂನುಗಳನ್ನು ಫಾಲೋ ಮಾಡುವುದು ಒಂದಕ್ಕೊಂದು ವಿರುದ್ಧವಾದ ಕ್ರಿಯೆಗಳಾಗಿರಬಹುದು.ಆದರೆ,ರಿಲಿಜನ್ ಗಳಿಗೆ ಇಂತಹ ಗೊಂದಲದ ಮೂಲ (Root Cause) ಸೆಕ್ಯುಲರ್ ಪ್ರಭುತ್ವವೇ ಎಂದರೂ ತಪ್ಪಾಗಲಾರದು.

ಮುಂದಿನ ಹಾದಿಯೇನು?

ಕೊನೆಯದಾಗಿ ಹೇಳುವುದಾದರೆ ಸಮಾನ ನಾಗರೀಕ ಸಂಹಿತೆಯು ಹಾಗೂ ಷರಿಯತ್ ನ ಕಾನೂನುಗಳನ್ನು ಫಾಲೋ ಮಾಡುವುದು ಒಂದಕ್ಕೊಂದು ವಿರುದ್ಧವಾದ ಕ್ರಿಯೆಗಳಾಗಿರಬಹುದು.ಆದರೆ,ರಿಲಿಜನ್ ಗಳಿಗೆ ಇಂತಹ ಗೊಂದಲದ ಮೂಲ (Root Cause) ಸೆಕ್ಯುಲರ್ ಪ್ರಭುತ್ವವೇ ಎಂದರೂ ತಪ್ಪಾಗಲಾರದು.ರಿಲಿಜನ್ ಮತ್ತು ಹಿಂದೂ ಸಂಪ್ರದಾಯಗಳನ್ನು ಒಳಗೊಳ್ಳುವಂತೆ ರೂಪಿಸುವ ಸಾರ್ವತ್ರಿಕ ನಿಯಮಗಳು ಇಂತಹ ಸಮಸ್ಯೆಗಳನ್ನು ಪ್ರಾಯಶಃ ಪರಿಹರಿಸಬಹುದು.ಹಾಗೆಯೇ ಬಹುಪತ್ನಿತ್ವ,ಬಾಲ್ಯ ವಿವಾಹ ಇತ್ಯಾದಿ ಮಹಿಳಾ,ಮಕ್ಕಳ ಹಕ್ಕುಗಳ ರಕ್ಷಣೆಗೆ ಮತಾಂತರಕ್ಕೆ  ಸಂಬಂಧಿಸಿದಂತೆ ಸೆಕ್ಯುಲರ್ ಪ್ರಭುತ್ವದ ಕಾನೂನುಗಳನ್ನೇ ಪಾಲಿಸುವುದನ್ನು ಕಾನೂನಾತ್ಮಕವಾಗಿ ಹೇರಿಕೆ ಮಾಡಬೇಕಾಗಿಯೂ ಬರಬಹುದು.ಈ ಬಗ್ಗೆ ಮುಕ್ತವಾದ ಚರ್ಚೆಯಾಗಬೇಕಿದೆ.

3 ಟಿಪ್ಪಣಿಗಳು Post a comment
 1. Jayalaxmi Patil
  ಜುಲೈ 18 2014

  ಓದಿದೆ ರಾಕೇಶ್, ಉತ್ತಮ ಉದ್ದೇಶದ ಬರಹ. ನೀವು ಇಲ್ಲಿ ಮಾಡಿರುವ ಹಿಂದೂ, ಮುಸ್ಲೀಮ್, ಕ್ರಿಶ್ಚಾನಿಟಿಯ ತುಲನೆ ಅಗತ್ಯವಿತ್ತೇ ಅನ್ನಿಸುತ್ತಿದೆ ನನಗೆ ಹಾಗೆಯೇ ಮಾನವಪರ/ಮಹಿಳಾವಾದಿ ಇತ್ಯಾದಿ ವರ್ಗವಗಳನ್ನು ಆಡಿಕೊಳ್ಳುವುದು ಸಹ ಅನಗತ್ಯವೆನಿಸಿತು…. ಯಾವುದೇ ಧರ್ಮವಾಗಲಿ, ಆ ಧರ್ಮದ ಹೆಸರಲ್ಲಿ ಅನ್ಯಾಯವೆಸಗುವುದು ಖಂಡನೀಯ. ಒಟ್ಟು ಮಾನವ ಮೂಲಭೂತ ನ್ಯಾಯದ ಬಗ್ಗೆ ಬರೆದಿದ್ದೇ ಆದಲ್ಲಿ ಖಂಡಿತ ಇದೊಂದು ಉತ್ತಮ ಪ್ರತಿಭಟನೆ. ಇನ್ನಿ ಮಹಿಳಾವಾದಿ, ಮಾನವಪರ ಎನ್ನುವ ಜನರ ಬಗ್ಗೆ ಬರೆದಿದ್ದೀರಿ. ಅದರ ಬಗ್ಗೆ ನಿಮ್ಮ ಮರುವಿಮರ್ಶೆ ಅಗತ್ಯವೆನಿಸಿತು ನನಗೆ…

  <<>> ಎಂದಿದ್ದೀರಿ. ಇದನ್ನು ಮಹಿಳಾವಾದಿಗಳೇ ಮಾಡಬೇಕಿಲ್ಲ. ನೀವೂ ನಾನೂ ಸಹ ಮಾಡಬಹುದಲ್ಲವೇ? ಪಿಟಿಶನ್ ಹಾಕುವುದರಿಂದ ಕಾನೂನನ್ನು ಕೋರಬಹುದು/ ಅಥವಾ ಕಾನೂನ ಮೇಲೆ ಇಂಥ ನಿಯಮವನ್ನು ಜಾರಿಗೊಳಿಸಲು ಪ್ರಜೆಗಳು ಒತ್ತಡ ತರಬಹುದು ಅಲ್ಲವೇ? ನೀವು ಪಿಟಿಶನ್ ಹಾಕ್ಲು ರೆಡಿ ಆದಲ್ಲಿ ಈ ವಿಷಯದಲ್ಲಿ ನಾ ನಿಮ್ಮ ಜೊತೆಗಿದ್ದೇನೆ. (ನನಗೆ ಈ ಪಿಟಿಶನ್ ಪ್ರೊಸೀಜರ್‍ಗಳು ಗೊತ್ತಿಲ್ಲವಾದ್ದರಿಂದ ನೀವು ಪಿಟಿಶನ್ ಹಾಕಿ ಎನ್ನುತ್ತಿರುವುದು)

  ಉತ್ತರ
 2. magen
  ಜುಲೈ 18 2014

  deshane haal madbitru maklu.

  ಉತ್ತರ
 3. ಜುಲೈ 25 2014

  2191 ಅಮಾಯಕ ಮುಸ್ಲಿಮರನ್ನು ಹತ್ಯೆ ಮಾಡಲಾದ ನೆಲ್ಲಿ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು 1985 ರಲ್ಲಿ ಬಿಡುಗಡೆಗೊಳಿಸಿದ್ದು ಇದೇ ರಾಜೀವ್ ಗಾಂಧಿಯವರ ಸರಕಾರ. ಅದನ್ನು ಮುಸ್ಲಿಮರಿಂದ ಮರೆಮಾಚುವ ಸಲುವಾಗಿ ಶಾ ಬಾನು ಪ್ರಕರಣದಲ್ಲಿ ಸಂವಿಧಾನ ತಿದ್ದುಪಡಿ ಮಾಡಿರಲೂಬಹುದು

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments