ವಿಷಯದ ವಿವರಗಳಿಗೆ ದಾಟಿರಿ

ಜುಲೈ 25, 2014

34

ಅತ್ಯಾಚಾರ: ಹುಯಿಲೆಬ್ಬಿಸುವುದೇಕೆ?

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

Stop Rapeಕಳೆದ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. 2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?

ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.

ಇಷ್ಟರ ನಡುವೆ ವಿಧಾನಸಭೆಯಲ್ಲಿ ಅಧಿವೇಶನ ನಡೆಯುವಾಗ ಇಂಥ ಪ್ರಕರಣ ಕುರಿತು ಗಂಭೀರ ಚರ್ಚೆ ನಡೆಯುವಾಗ ಮಾನ್ಯ ಮುಖ್ಯಮಂತ್ರಿಗಳು ನಿದ್ರೆ ಮಾಡುತ್ತಿದ್ದರು! ಸಾಲದ್ದಕ್ಕೆ ಅತ್ಯಾಚಾರ ಪ್ರಕರಣ ಕುರಿತ ಮಾಧ್ಯಮದವರ ಪ್ರಶ್ನೆಗೆ ನಿಮಗೆ ಬೇರೆ ಕೆಲಸ ಇಲ್ವಾ? ಇದೊಂದೇ ಸುದ್ದೀನಾ ನಿಮ್ಮ ಬಳಿ ಇರೋದು? ಎಂದು ಪ್ರಶ್ನಿಸಿ ಉಡಾಫೆತನ ಬೇರೆ ತೋರಿಸಿಬಿಟ್ಟರು. ಇದನ್ನು ರಾಷ್ಟ್ರೀಯ ಚಾನೆಲ್ಲುಗಳು ಮತ್ತೆ ಮತ್ತೆ ಬಿತ್ತರಿಸಿ ನೋಡಿ ನಮ್ಮ ರಾಜಕಾರಣಿಗಳನ್ನು ಎನ್ನುತ್ತ ದೊಡ್ಡ ಚರ್ಚೆಗೆ ಎಡೆಮಾಡಿದವು. ಬಿಬಿಸಿಯಂಥ ಅಂತಾರಾಷ್ಟ್ರೀಯ ಚಾನೆಲ್ಲು ಕೂಡ ಕರ್ನಾಟಕದಲ್ಲಿ ಅತ್ಯಾಚಾರ ಅವ್ಯಾಹತವಾಗಿದೆ ಎಂಬಂತೆ ದಿನವಿಡೀ ಸುಳಿಸುದ್ದಿ (ಫ್ಲಾಶ್ ನ್ಯೂಸ್) ನೀಡಿತು. ಇಂಥ ವಿದ್ಯಮಾನದಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುತ್ತೋ ಬಿಡುತ್ತೋ ರಾಜ್ಯದ ಮಾನವಂತೂ ಮೂರಾಬಟ್ಟೆಯಾಯಿತು.

ಹಾಗೆ ನೋಡಿದರೆ ಮುಖ್ಯಮಂತ್ರಿಗಳು ಹಾಗೆ ಹೇಳಬಾರದಿತ್ತು ಎನ್ನುವಂತೆಯೇ ಅವರು ಹಾಗೆ ಕೇಳಿದ್ದರಲ್ಲಿ ತಪ್ಪೇನಿದೆ ಎಂದೂ ಕೇಳಬಹುದು. ಐಪಿಸಿ 376ನೇ ವಿಧಿಯ ಪ್ರಕಾರ ಅತ್ಯಾಚಾರ ಗಂಭೀರ ಅಪರಾಧ. ಮಾನವನ ಮಟ್ಟಿಗೆ ನೈತಿಕವಾಗಿಯೂ ಇದು ಹೇಯ. ಯಾವ ಧರ್ಮವೂ ಇದನ್ನು ಪುರಸ್ಕರಿಸುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಹಾನಿ, ಆಘಾತಗಳಾಗುವ ಕಾರಣ ವೈದ್ಯಕೀಯ ದೃಷ್ಟಿಯಿಂದಲೂ ಆಕ್ಷೇಪಾರ್ಹ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕಾರಣದಿಂದ ಸಾಮಾಜಿಕವಾಗಿಯೂ ನಿಷಿದ್ಧ. ಈ ಎಲ್ಲ ಕಾರಣಗಳಿಂದ ನಾಗರಿಕ ಸಮಾಜ ಅತ್ಯಾಚಾರವನ್ನು ಖಂಡನೀಯ ಕೃತ್ಯವಾಗಿ ಕಾಣುತ್ತದೆ. ಇಷ್ಟೆಲ್ಲ ಸಂಗತಿಗಳಿರುವಾಗ ಹಾಗೂ ದೊಡ್ಡವರ ಇಂಥ ಮಾತುಗಳಿಂದ ಅಪರಾಧ ಎಸಗುವವರಿಗೆ ಇದೇನೂ ಅಂಥ ದೊಡ್ಡ ಸಂಗತಿಯಲ್ಲವಂತೆ ಎಂಬ ಸಂದೇಶ ಹೋಗಿ ಮತ್ತಷ್ಟು ಉತ್ತೇಜನ ದೊರೆಯಬಹುದು ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯಾದವರೊಬ್ಬರು ಅತ್ಯಾಚಾರದ ಬಗ್ಗೆ ಲಘುವಾಗಿ ಮಾತನಾಡಬಾರದೆಂದು ಈ ಸಮಾಜ ನಿರೀಕ್ಷಿಸುತ್ತದೆ. ಸರಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಹೀಗಾಗಿ ಮಾಧ್ಯಮಗಳಲ್ಲಿ ಬಂದರೆ ತಪ್ಪೇನು ಎಂಬುದೂ ಸರಿ.

ಆದರೆ ಎಷ್ಟು ಬರಬೇಕು? ಹೇಗೆ ಬರಬೇಕು? ಇದಕ್ಕೊಂದು ಇತಿ-ಮಿತಿ, ನೀತಿ-ನಿಯಮ ಇಲ್ಲವೇ? ಘಟನೆಯ ಪೂರ್ವಾಪರ ವಿಚಾರಿಸದೇ ಹೆಣ್ಣೊಬ್ಬಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಆರೋಪ ಹೊರೆಸಿಬಿಡುತ್ತಾಳೆ ಅಂದುಕೊಳ್ಳೋಣ. ಇದನ್ನು ಸಂಬಂಧಿಸಿದ ಪೊಲೀಸರಿಗೋ, ವೈದ್ಯ, ವಕೀಲರಿಗೋ ತಿಳಿಸುವ ಮೊದಲು ಆಕೆ ಮಾಧ್ಯಮಕ್ಕೇ ತಿಳಿಸಿದರೆ… ಆ ವ್ಯಕ್ತಿಯನ್ನು ಸುತ್ತಲಿನ ಜನ ಏನುಮಾಡಬಹುದು? ಈಗೀಗ ಇಂಥ ಕೆಲವು ಪ್ರಕರಣಗಳು ವರದಿಯಾಗುತ್ತಿವೆ: ಹುಡುಗ-ಹುಡುಗಿ ಫೇಸ್‍ಬುಕ್‍ನಲ್ಲಿ ಪರಿಚಯಮಾಡಿಕೊಂಡರಂತೆ. ವರ್ಷಗಟ್ಟಲೆ ಅಲ್ಲಿ ಇಲ್ಲಿ ತಿರುಗಿದರಂತೆ. ಸಂಬಂಧ ಮದುವೆಯಾಗುವ ಹಂತಕ್ಕೆ ಹೋಯಿತಂತೆ. ಆತ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಬಳಸಿಕೊಂಡನಂತೆ. ಈಕೆಯಿಂದ ಹಣ ಕೀಳುತ್ತಿದ್ದನಂತೆ. ಈ ಹುಡುಗಿ ತನ್ನ ಪಾಲಕರಿಗೆ ಇನ್ನೂ ತನಗೆ ಏನೇನಾಗಿದೆ ಎಂದು ತಿಳಿಸಿಲ್ಲವಂತೆ. ಸದ್ಯ ಪೊಲೀಸರಿಗೆ ದೂರು ಕೊಟ್ಟಿದ್ದಾಳಂತೆ. ಹೀಗೆಂದು ಮಾಧ್ಯಮದ ಮುಂದೆ ಆಕೆ ಅಲವತ್ತುಕೊಳ್ಳುತ್ತಿದ್ದಳು. ಪರಸ್ಪರ ಪ್ರೀತಿಸುತ್ತಿದ್ದ ಗಂಡು-ಹೆಣ್ಣು ಅನೇಕ ತಿಂಗಳ ಹಿಂದೆ ತಿರುಪತಿಗೆ ಹೋದರಂತೆ, ಅಲ್ಲಿ ಆತ ಅತ್ಯಾಚಾರ ಎಸಗಿದನಂತೆ. ಪಾಲಕರಿಗೆ ಇದೆಲ್ಲ ಗೊತ್ತಾದುದೇ ಈಗ! ಇವೆರಡೂ ಈ ವಾರಾಂತ್ಯ ವರದಿಯಾದ ಸುದ್ದಿಗಳು.

ಮಾಧ್ಯಮಗಳು ವರದಿಮಾಡುವ ಅತ್ಯುತ್ಸಾಹದಲ್ಲಿ ಇವುಗಳನ್ನೂ ಅತ್ಯಾಚಾರದ ಪಟ್ಟಿಗೆ ಸೇರಿಸಿಬಿಟ್ಟಿರುತ್ತಾರೆ. ಯಾವುದೇ ಹೆಣ್ಣು ಇಂಥ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ ಎಂಬುದು ಇಂದಿನ ದಿನಗಳಲ್ಲಿ ಕೇವಲ ನಂಬಿಕೆ. ಬಹಳಷ್ಟು ಸಂದರ್ಭಗಳಲ್ಲಿ ಇದು ಸಾಬೀತಾಗಿದೆ. ಹಾಗಾಗಿ ಇಂಥ ವರದಿ ಬಂದ ಕೂಡಲೇ ಭಾವೋನ್ಮಾದಕ್ಕೆ ಒಳಗಾಗಬೇಕಿಲ್ಲ. ಆದರೆ ಅಪ್ರಾಪ್ತ, ಎಳೆ ಕಂದಮ್ಮಗಳ ಮೇಲೆ ದೌರ್ಜನ್ಯ ನಡೆದಾಗ ಆ ವಿಷಯವೇ ಬೇರೆ. ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ಎರಡೂ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು ಪ್ರಾಪ್ತ ವಯಸ್ಕರು, ಆಧುನಿಕ ಶಿಕ್ಷಣ ಪಡೆದವರು. ಇವರು ಹೇಳುತ್ತಿರುವ ಘಟನೆಗಳು ನಡೆದು ತಿಂಗಳು-ವರ್ಷಗಳೇ ಕಳೆದಿವೆ. ಇದುವರೆಗೆ ಪಾಲಕರಿಗೂ ಹೇಳದೇ ಮಾಧ್ಯಮಕ್ಕೆ ಹೇಳುತ್ತಿದ್ದಾರೆ! ಪರಸ್ಪರ ಸಮ್ಮತಿಯಿಂದಲೇ ಘಟನೆ ನಡೆದಿದೆ. ಹುಡುಗ ಈಗ ಮದುವೆ ಆಗುವುದಿಲ್ಲ ಎಂದರೆ ಇದು ವಂಚನೆಯಾಗಬಹುದೇ ವಿನಾ ಅತ್ಯಾಚಾರವಾಗುತ್ತದೆಯೇ? ಇವೆಲ್ಲ ಕಾನೂನಿನ ತೀರ್ಮಾನಕ್ಕೆ ಬಿಟ್ಟ ವಿಷಯ. ಆದರೆ ಪ್ರಚಾರ?

ಅತ್ಯಾಚಾರ, ಮಾನಭಂಗ, ಬಲಾತ್ಕಾರ ಇವೆಲ್ಲ ಕೀಚಕನ ಕಾಲದಿಂದಲೂ ದಾಖಲಾಗಿವೆ. ಲೈಂಗಿಕ ಬಯಕೆ ವೈಯಕ್ತಿಕ. ಅದಕ್ಕೆ ಆರೋಪಿಸಲಾದ ಮಾನ ಸಾಮಾಜಿಕ. ಸಮಾಜಜೀವಿಯಾದ ಮಾನವ ಸಮಾಜದ ಕಟ್ಟುಪಾಡುಗಳನ್ನು ಮೀರಲಾಗದು. ಅದರ ವ್ಯಾಪ್ತಿಯಲ್ಲೇ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಆತ ಪೂರೈಸಿಕೊಳ್ಳಬೇಕಾಗುತ್ತದೆ. ಕಳ್ಳತನ, ಲೈಂಗಿಕತೆ, ಸುಳ್ಳು, ಅಪ್ರಾಮಾಣಿಕತೆಗಳಿಂದ ವ್ಯಕ್ತಿ ಇರುವ ದೂರದ ಮೇಲೆ ಅವನ ಮಾನವನ್ನು ಸಮಾಜ ನಿರ್ಧರಿಸುತ್ತದೆ. ಮಾನ ಕಳೆಯುವವರು ಇರುವಂತೆಯೇ ಮಾನ ಕಾಪಾಡುವವರೂ ಇರುತ್ತಾರೆ. ಸಮಾಜ ಅವರನ್ನು ಗೌರವಿಸಿದೆ.

ಕನ್ನಡ ಶಾಸನಗಳಲ್ಲಿ ಪೆಣ್ಬುಯ್ಯಲ್ (ಹೆಣ್ಣಿನ ಹುಯಿಲು) ಎಂದೂ ಸಾಹಿತ್ಯದಲ್ಲಿ ಉಡೆಉರ್ಚು (ಬಟ್ಟೆ ಬಿಚ್ಚುವುದು) ಎಂದೂ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿವರಿಸಲಾಗಿದೆ. ಅಙ್ಗರನೆಂಬ ವೀರ ಊರ ಸ್ತ್ರೀಯರ ಮಾನಭಂಗಕ್ಕೆ ಯತ್ನಿಸಿದ ಶತ್ರುಗಳ ವಿರುದ್ಧ ಹೋರಾಡಿ ಮಡಿದ ಪ್ರಸಂಗವನ್ನು ಸೊರಬದ ಮನೆಮನೆ ಗ್ರಾಮದ ಶಾಸನ ವರ್ಣಿಸಿದೆ. ಕ್ರಿ.ಶ. 800ರ ರಾಷ್ಟ್ರಕೂಟರ ಕಾಲದ ಈ ಶಾಸನ ಪೆಣ್ಬುಯ್ಯಲ್ ಪ್ರಸಂಗ ವಿವರಿಸುವ ಮೊದಲ ಶಾಸನ. ಇಂಥ 46 ಶಾಸನಗಳು ಕರ್ನಾಟಕದಲ್ಲಿ ದೊರೆತಿವೆ ಎಂದು ತುಮಕೂರು ವಿವಿಯ ಶಾಸನ ತಜ್ಞರಾದ ಪ್ರೊಫೆಸರ್ ಡಿ ವಿ ಪರಮಶಿವಮೂರ್ತಿ ಹೇಳುತ್ತಾರೆ. ಈ ಬಗ್ಗೆ ಅವರೊಂದು ಕೃತಿಯನ್ನೇ ರಚಿಸಿದ್ದಾರೆ (ಪೆಣ್ಬುಯ್ಯಲ್, ಹಂಪಿ ವಿವಿ, 2010). ಹೀಗೆ ಹೋರಾಡಿದ ವೀರನಿಗೆ ದಾನ ದತ್ತಿಗಳು ಪ್ರಾಪ್ತವಾಗಿವೆಯಾದರೂ ನೊಂದ ಮಹಿಳೆಯರಿಗೆ ಎಲ್ಲೂ ಪರಿಹಾರ ದೊರೆತಿಲ್ಲ ಎಂದೂ ಅವರು ತಿಳಿಸುತ್ತಾರೆ.

ಕಾಲಚಕ್ರ ಉರುಳಿದಂತೆ ಸಮಾಜದ ಜೊತೆಗೆ ಈ ವರ್ತನೆಯೂ ಸಾಗುತ್ತಲೇ ಬಂತು. ಸದ್ಯ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ ವರದಿ ಮಾಡಿರುವಂತೆ 1971ರಲ್ಲಿ ದೇಶದಲ್ಲಿ 2487 ಇದ್ದ ಅತ್ಯಾಚಾರ ಸಂಖ್ಯೆ 2013ರಲ್ಲಿ 33,707 ಆಗಿದೆ. ಅಂದರೆ ಇದು ಶೇ.1255.3ರಷ್ಟು ಹೆಚ್ಚಿದೆ! ಹಾಗಂತ ಗಾಬರಿಯಾಗುವ ಅಗತ್ಯವಿಲ್ಲ. ಯಾಕೆಂದರೆ ಅಂದಿನ ಜನಸಂಖ್ಯೆ 54,81,59,652. ಇಂದಿನದು ಬರೋಬ್ಬರಿ 120 ಕೋಟಿ! ಅಲ್ಲದೇ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣ ಪ್ರತಿ ಲಕ್ಷ ಜನರಿಗೆ ಶೇ.2 ಮಾತ್ರ. ಪಶ್ಚಿಮ ಯೂರೋಪ್‍ನಲ್ಲಿ ಇದು ಶೇ.8.1; ಲ್ಯಾಟಿನ್ ಅಮೆರಿಕದಲ್ಲಿ ಶೇ.14.7; ಅಮೆರಿಕದಲ್ಲಿ ಶೇ.28.6; ದಕ್ಷಿಣ ಅಮೆರಿಕದಲ್ಲಿ ಶೇ.40.2ರಷ್ಟಿದೆ.

ಕರ್ನಾಟಕದಲ್ಲಿ 2010-13ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು 2150. ಈಗೀಗ ನಿತ್ಯ ಒಂದೆರಡು, ಕೆಲವೊಮ್ಮೆ ಎಂಟು! ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ದಾಖಲಾಗುವವೇ ಶೇ.10ರಷ್ಟು. ಶೇ.90ರಷ್ಟು ಪ್ರಕರಣಗಳಲ್ಲಿ ಆರೋಪಿ ಸಂಬಂಧಿಕ, ಬಂಧು, ಪರಿಚಿತನೇ ಆಗಿರುತ್ತಾನೆ ಎಂದು ಸಮೀಕ್ಷೆಗಳು ಹೇಳುತ್ತವೆ. ಕೆಲವೊಮ್ಮೆ ಅಪ್ಪ, ಸಹೋದರರೇ ಆಗಿರುತ್ತಾರೆ!

ಅತ್ಯಾಚಾರದ ಹಿಂದೆ ಇಷ್ಟೆಲ್ಲ ಸಂಗತಿಗಳಿರುವಾಗ ಅದನ್ನು ಆಮೂಲಾಗ್ರ ಕಿತ್ತೆಸೆಯುವುದು ಸುಲಭವಲ್ಲ. ಮಾಧ್ಯಮಗಳು ಈಗ ಮಾಡುತ್ತಿರುವಂತೆ ಹುಯಿಲೆಬ್ಬಿಸುವುದರಿಂದಲಂತೂ ಮತ್ತಷ್ಟು ಹಾನಿಯೇ ವಿನಾ ಪ್ರಯೋಜನವಿಲ್ಲ. ಅತ್ಯಾಚಾರಿಗಳನ್ನು ಕಲ್ಲುಹೊಡೆದು ಸಾಯಿಸಿದರೆ, ಅವರ ಪುರುಷತ್ವನಾಶ ಮಾಡಿದರೆ, ಗಲ್ಲಿಗೇರಿಸಿದರೆ ಮುಂದೆ ಆಗುವ ಅಪರಾಧವನ್ನು ತಡೆಯಲು ಸಾಧ್ಯವೇ? ಗೊತ್ತಿಲ್ಲ. ಆದರೆ ಶಾಲೆ, ಕಾಲೇಜುಗಳಲ್ಲಿ, ಪಂಚಾಯ್ತಿ ಕೇಂದ್ರಗಳಲ್ಲಿ ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳ ಮೂಲಕ ಅತ್ಯಾಚಾರದ ವಿರುದ್ಧ ಇರುವ ಕಾನೂನು, ಇಂಥ ಘಟನೆಯಿಂದಾಗುವ ಸಮಸ್ಯೆಗಳ ಕುರಿತು ಜನಜಾಗೃತಿ ಅಭಿಯಾನವನ್ನು ಸರ್ಕಾರ ಹಮ್ಮಿಕೊಳ್ಳುವುದರಿಂದ ಒಂದಿಷ್ಟು ಪ್ರಯೋಜನವಾಗಬಹುದೇನೋ.

34 ಟಿಪ್ಪಣಿಗಳು Post a comment
 1. hemapathy
  ಜುಲೈ 26 2014

  ಕೆಲವರು ಹುಯಿಲೆಬ್ಬಿಸುವುದೇ ಪುಕ್ಕಟೆ ಪ್ರಚಾರ ಪಡೆಯುವುದಕ್ಕಾಗಿ.

  ಉತ್ತರ
 2. hemapathy
  ಜುಲೈ 26 2014

  ಭೂಮಿಯ ಮೇಲೆ ಗಂಡು ಹೆಣ್ಣುಗಳು ಇರುವವರೆಗೆ ಅತ್ಯಾಚಾರದಂತಹ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇವುಗಳನ್ನು ತಪ್ಪಿಸುವುದು ಸುಲಭ ಸಾಧ್ಯವಾದ ಮಾತಲ್ಲ.

  ಉತ್ತರ
  • shripad
   ಜುಲೈ 26 2014

   ಇಲ್ಲವಂತೆ. ವಚನಗಳಲ್ಲಿ ಉತ್ತರವಿದೆಯಂತೆ. ನಮಗೆ ವಚನಗಳೊಂದಿಗೆ ಭಾವನಾತ್ಮಕ ಸಂಬಂಧ. ಆದರೆ ಅವು ಬೇರೆಯಂತೆ. ಮಾರ್ಕ್ಸ್ ವಾದಿ, ಶರಣ ಪ್ರವಾದಿಗಳು ಮತ್ತು ಅವರ ’ಕರು’ಗಳ ಪ್ರಕಾರ ವಚನಗಳು ಕುರ್ ಆನ್ ಅಥವಾ ಮಾರ್ಕ್ಸ್ ವಾದದ ಒಡೆದ ಚೂರುಗಳು! ಇವನ್ನು ಅತ್ಯಾಚಾರಿಗಳಿಗೆ ತಿಳಿಸಿದರೆ ಅತ್ಯಾಚಾರ ಶಾಶ್ವತ ನಿಲ್ಲುತ್ತವೆ ಎಂದು ವದರುವುದನ್ನು ಕೇಳಿಲ್ಲವೆ?

   ಉತ್ತರ
   • Nagshetty Shetkar
    ಜುಲೈ 26 2014

    ವಚನಗಳ ಬೋಧನೆಯನ್ನು ಶಾಲಾ ಮಟ್ಟದಿಂದಲೇ ಮಾಡಿಸಿದರೆ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ದೊರೆತು ಅವರು ಬೆಳೆದು ದೊಡ್ಡವರಾದ ಮೇಲೆ ಅತ್ಯಾಚಾರ ತಸ್ಕರಿ ಮಸ್ಕರಿ ಮಾಡುವುದಿಲ್ಲ. ಆದರೆ ಮನುವಾದಿಗಳಿಗೆ ಮಕ್ಕಳ ಮನಸ್ಸು ಅರಳುವುದು ಬೇಕಿಲ್ಲ, ಅವರು ಸಮಾಜ ಕಂಟಕರಾಗಿ ಬೆಳೆದರೆ ಮನುವಾದಿಗಳಿಗೆ ಲಾಭ.

    ಉತ್ತರ
    • ವಿಜಯ್ ಪೈ
     ಜುಲೈ 26 2014

     ಹೌದು.. ಡಿಗ್ರಿ ಸರ್ಟಿಫಿಕೆಟ್‌ ಬೇಕಾದರೆ, ಕಡ್ಡಾಯವಾಗಿ ಮದಾರಸದಲ್ಲಿ ಎರಡು ವರುಷ ವಚನೋಕ್ತ ಶಿಕ್ಷಣ ಪಡೆದು ಬರಬೇಕು ಎನ್ನುವ ಕಾಯಿದೆ ತರಬೇಕು…ಆಗ ಅತ್ಯಾಚಾರ ತಸ್ಕರಿ ಮಸ್ಕರಿ ಕಡಿಮೆಯಾಗುತ್ತದೆ.

     ಉತ್ತರ
 3. Nagshetty Shetkar
  ಜುಲೈ 26 2014

  ಹೆಂಗಸರಿರುವುದೇ ಅತ್ಯಾಚಾರಕ್ಕೆ ಒಳಗಾಗುವುದಕ್ಕೆ ಎಂಬ ಮನುವಾದಿ ಮನೋಭಾವದಿಂದ ಬರೆದ ಲೇಖನ. ಧಿಕ್ಕಾರವಿರಲಿ ಮನುವಾದಕ್ಕೆ ಮನುವಾದಿಗಳಿಗೆ.

  ಉತ್ತರ
  • shripad
   ಜುಲೈ 26 2014

   ಲೇಖನದಲ್ಲಿ ಹೀಗೆಲ್ಲಿ ಹೇಳಿದೆ? ಸದಾಶಿವನಿಗೆ ಅದೇ ಧ್ಯಾನ ಅಂತಾರಲ್ಲ ಹಾಗೆ ನಿಮ್ಮ ವಿಚಾರ ಸರಣಿ. ಅನಗತ್ಯವಾಗಿ ಮನುವಿನ ಮೇಲೆ ನೀವೆಷ್ಟು ಬಾರಿ ಅತ್ಯಾಚಾರ ಎಸಗಿಲ್ಲ? ಈಗಲೂ ಅದೇ ಧ್ಯಾನದಲ್ಲಿ ಹೀಗೆ ಕಮೆಂಟು ಎಸೆದಿರಬೇಕು?!

   ಉತ್ತರ
   • Nagshetty Shetkar
    ಜುಲೈ 26 2014

    “ನೀವೆಷ್ಟು ಬಾರಿ ಅತ್ಯಾಚಾರ ಎಸಗಿಲ್ಲ?’

    ಶರಣರ ಮೇಲೆ ಅತ್ಯಾಚಾರದ ಆಪಾದನೆ ಹೊರಿಸಿರುವ ಬಿಜ್ಜಳನ ಕುಡಿಗಳಿಗೆ ಧಿಕ್ಕಾರವಿರಲಿ.

    ಉತ್ತರ
    • ವಿಜಯ್ ಪೈ
     ಜುಲೈ 26 2014

     ಗುರು-ಶಿಷ್ಯರು ಮೆಂಟಲ್ ಆಗಿ ‘ಕಲ್ಯಾಣ ಕ್ರಾಂತಿ, ಕಲ್ಯಾಣ ಕ್ರಾಂತಿ’ ಎಂದು ಕೂಗುತ್ತ ಓಡಾಡುವ ದಿನಗಳು ಹತ್ತಿರ ಬಂದಿವೆ ಅನಿಸುತ್ತಿದೆ!. 🙂

     ಉತ್ತರ
     • shripad
      ಜುಲೈ 26 2014

      ಈಗಾಗಲೇ ಇದು ನಡೆಯುತ್ತಿದೆಯಲ್ಲ!?

      ಉತ್ತರ
      • ವಿಜಯ್ ಪೈ
       ಜುಲೈ 26 2014

       ಈಗ ನಾಲ್ಕುಗೊಡೆಗಳ ಮಧ್ಯೆ ಕಂಪ್ಯೂಟರ್ ಮುಂದೆ ನಡೆಯುತ್ತಿದೆ..ಬೀದಿಗೆ ಬರುವ ದಿನಗಳು ದೂರವಿಲ್ಲ 🙂

       ಉತ್ತರ
     • Nagshetty Shetkar
      ಜುಲೈ 26 2014

      ವೈದಿಕರಿಗೆ ಕಲ್ಯಾಣ ಕ್ರಾಂತಿ ಬೆನ್ನ ಹುರಿಯಲ್ಲಿ ನಡುಕ ಹುಟ್ಟಿಸುತ್ತದೆ ಅನ್ನುವುದಕ್ಕೆ ನಿಮ್ಮಗಳ ಕಾಮೆಂಟುಗಳೇ ನಿದರ್ಶನ. ಹೌದು ಕಲ್ಯಾಣ ಕ್ರಾಂತಿಯ ಕಾವ್ಯವನ್ನು ಹಾಡುತ್ತ ನಾವು ತಳವರ್ಗದವರನ್ನು ಶೋಷಣೆಯ ವಿರುದ್ಧ ಹೋರಾಡುವಂತೆ ಹುರಿದುಂಬಿಸುತ್ತೇವೆ. ಸಾಮಾಜಿಕ ನ್ಯಾಯದ ಕ್ರಾಂತಿಯ ಬೀಜ ಬಿತ್ತುವುದೇ ಶರಣರ ಕಾಯಕ.

      ಉತ್ತರ
      • ವಿಜಯ್ ಪೈ
       ಜುಲೈ 26 2014

       ಅಪ್ಪಾ ಮಹಾನುಭಾವರೆ..ಅಲ್ಲಿಯೇ ಹನ್ನೆರಡನೆಯ ಶತಮಾನದಲ್ಲಿ ಗೂಟ ಹೊಡೆದುಕೊಂಡು ಬಿಳಬೇಡಿ. ಸ್ವಲ್ಪ ಈಚೆ ಬನ್ನಿ. ತಾಳೆಗರಿಯ ಮೇಲೆ ಬರೆಯುವ ಕಾಲ ಹೋಗಿ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಗಳ ಕಾಲ ಬಂದಿದೆ. ಇನ್ನೂ ಕಲ್ಯಾಣ ಕ್ರಾಂತಿಯ ಪುಂಗಿ ಊದಿ ಕಲ್ಯಾಣವನ್ನು ಸಾಧಿಸುತ್ತೇವೆ ಎಂಬ ಭ್ರಮೆ ಬಿತ್ತುವುದನ್ನು ಬಿಡಿ. ನಿಮಗಿದು ಗಂಜಿ ಕಸುಬು, ಹೊಟ್ಟೆಪಾಡಿನ, ಹೆಸರಿನ ಅನಿವಾರ್ಯತೆ ಎಂಬುದು ಗೊತ್ತು…ಆದರೆ ತೀರ ನಗೆಪಾಟಲಿಗೆ ಈಡಾಗುತ್ತಿದ್ದೀರಿ , ಅಂತೆಯೇ ನಿಮ್ಮ ತೆವಲಿಗೆ ಸಮಾಜವನ್ನು ಗಬ್ಬೆಬ್ಬಿಸುತ್ತಿದ್ದೀರಿ ಎಂಬುದು ನಿಮಗೆ ಅರ್ಥವಾದರೆ ಒಳ್ಳೆಯದು.

       ಉತ್ತರ
       • shripad
        ಜುಲೈ 26 2014

        ತಳವರ್ಗ, ಶೋಷಿತ ಇತ್ಯಾದಿಗಳಿಗೆ ಎಲ್ಲ ಚುನಾವಣೆಗಳೂ ಮುಗಿದಿರುವುದರಿಂದ ಸದ್ಯ ಜಾಗವಿಲ್ಲ. ಸು(ಲ/ಬು)ದ್ದಿ ಜೀವಿಗಳಿಗೆ ಇದು ಚೆನ್ನಾಗಿ ತಿಳಿದಿದೆ. ಹಾಗಾಗಿ ಅವರು ಇನ್ನೈದು ವರ್ಷ ಹೀಗೆಲ್ಲ ಮಾತಾಡುತ್ತ ಸಮಯ ಹಾಳುಮಾಡಿಕೊಳ್ಳುವುದಿಲ್ಲ. ಪ್ರಗತಿಪರರೆಂದು ಬೋರ್ಡು ಹಾಕಿಕೊಂಡವರೂ ರಾಜ್ಯದಲ್ಲಿ ಆಗುತ್ತಿರುವ ಅತ್ಯಾಚಾರಗಳ ಬಗ್ಗೆ ಹೀಗಾಗಿಯೇ ಮಾತನಾಡುತ್ತಿಲ್ಲ. ಸಿಎಂ ಕುರ್ಚಿಯಲ್ಲೇ ಸಮಾಜವಾದ ಮಲಗಿರುವುದರಿಂದ ಎಲ್ಲವೂ ಸರಿ ಇದೆ ಎಂದು ಇವರಿಗೆಲ್ಲ ಅನಿಸಿರಬೇಕು!

        ಉತ್ತರ
 4. shripad
  ಜುಲೈ 26 2014

  ಇಲ್ಲ, ಒಂದೂ ಇಲ್ಲ, ಎಂದೆಂದೂ ಇಲ್ಲ. ಈ ವಿಷಯದಲ್ಲಿ ’ತನ್ನಂತೆ ಪರರ ಬಗೆದೊಡೆ… ಎಂಬ ವಚನ ಅನ್ವಯಿಸಬೇಡಿ!!!

  ಉತ್ತರ
 5. M.A.Sriranga
  ಜುಲೈ 26 2014

  ಡಾ. ಶ್ರೀಪಾದ್ ಭಟ್ ಅವರಿಗೆ—- ಒಂದು ಹೆಣ್ಣಿನ ಮೇಲೆ ಅತ್ಯಾಚಾರವಾಗುವುದಕ್ಕೂ ಅಥವಾ ಹೆಣ್ಣೇ ಸ್ನೇಹ, ಪ್ರೀತಿ,ಪ್ರೇಮ ಎಂದುಕೊಂಡು ಗಂಡಿನ ಜತೆ ಓಡಾಡಿ ಇಬ್ಬರೂ ಸಮ್ಮತಿಯಿಂದಲೇ ದೇಹ ಸಂಪರ್ಕ ಬೆಳಸಿ ನಂತರ ಆ ಗಂಡು ಮದುವೆ ಆಗಲು ನಿರಾಕರಿಸಿದಾಗ ಹೆಣ್ಣು ತನ್ನ ಮೇಲೆ ಅತ್ಯಾಚಾರವಾಯಿತು ಎಂದು ಬಿಂಬಿಸಿಕೊಂಡು , ಪೊಲೀಸರಿಗೆ ದೂರುಕೊಟ್ಟು ನಂತರ ಮಾಧ್ಯಮಗಳ ಮುಂದೆ ಬಂದು ಆ ಗಂಡನ್ನು ದೂಷಿಸುವುದಕ್ಕೂ ವ್ಯತ್ಯಾಸವಿದೆ. ಅದು ಒಪ್ಪತಕ್ಕ ಮಾತು. ಆದರೆ ಮಾಧ್ಯಮಗಳಿಗೆ ಸುದ್ದಿ ತಿಳಿದಾಗ ಅವುಗಳು ಸತ್ಯ ಏನು ಎಂದು ತಿಳಿಯುವ ತನಕ ಇಂತಹ ಸುದ್ದಿಗಳನ್ನು ಪ್ರಸಾರಮಾಡಬೇಕೇ ಅಥವಾ ಮಾಡಬಾರದೆ ಎಂಬುದು ಈಗ ಬಹು ಚರ್ಚೆ ಆಗುತ್ತಿರುವ ವಿಷಯ. ಮಾಧ್ಯಮಗಳು ಸುದ್ದಿಗಳನ್ನು ಅದು ಒಳ್ಳೆಯದಿರಲಿ ಅಥವಾ ಕೆಟ್ಟದ್ದೇ ಆಗಿರಲಿ ”ವೈಭವೀಕರಿಸುತ್ತವೆ” ಎಂಬುದು ಸಾಮಾನ್ಯವಾಗಿ ಅವುಗಳ ಮೇಲಿರುವ ಆರೋಪ . ಮಾಧ್ಯಮಗಳ ಮುಂದೆ ಒಂದು ಹೆಣ್ಣು ಅಥವಾ ಅವರ ಮನೆಯವರು ತಾವಾಗೇ ಬಂದು ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಾಗ ಮಾಧ್ಯಮದವರು ‘ನಾವು ಸರ್ಕಾರ/ಪೊಲೀಸರು/ಕೋರ್ಟ್ ಹೇಳುವ ತನಕ ನಿಮ್ಮ ಸುದ್ದಿ ಪ್ರಸಾರಮಾಡುವುದಿಲ್ಲ ‘ಎಂದು ಹೇಳಬೇಕೇ? ಇಂತಹ ಪ್ರಕರಣಗಳಲ್ಲಿ ನೊಂದವರು ಕೇವಲ ಟಿ ವಿ ಗಳಲ್ಲಿ ತಮ್ಮ ಕಾರ್ಯಕ್ರಮ ಪ್ರಸಾರವಾಗಲಿ ಎಂಬ ಕಾರಣದಿಂದ ಟಿ ವಿ ಗಳ ಕ್ಯಾಮರಾದ ಮುಂದೆ ಬಂದು ಕೂರುತ್ತಾರೆಯೇ? ಅಥವಾ ಟಿ ವಿ ಗಳೇ ಬಲವಂತದಿಂದ ಎಳೆದು ತಂದು ಕೂರಿಸುತ್ತಾರೆಯೇ? ನಾವು ಮಾತಾಡುವುದಿಲ್ಲ,ಮುಖ ತೋರಿಸುವುದಿಲ್ಲ ಎಂದರೆ ಹಾಗೂ ಬಲವಂತಮಾಡಿದರೆ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಹೇಳಿದರೆ ಮಾಧ್ಯಮದವರು ವಾಪಸ್ಸು ಬರುತ್ತಾರೆ. ಸರ್ಕಾರಕ್ಕೆ/ಪೊಲೀಸರಿಗೆ/ನ್ಯಾಯಾಲಯಗಳಿಗೆ ಸುದ್ದಿ ಯಾವ ಮೂಲದಿಂದಾದರೂ ತಿಳಿದರೆ ತಾನೇ ಅವು ಕ್ರಮ ಕೈಗೊಳ್ಳಲು ಸಾಧ್ಯ. ಭಾರತದ ಪ್ರತಿ ನಗರ/ಪಟ್ಟಣ/ಗ್ರಾಮಗಳ ಪ್ರತಿ ರಸ್ತೆಯಲ್ಲಿ ನಾಲ್ಕಾರು ಜನ ಪೋಲಿಸಿನವರು ಪ್ರತಿ ದಿನ ಇಪ್ಪತ್ತನಾಲ್ಕು ಗಂಟೆಗಳೂ ಸತತವಾಗಿ ಗಸ್ತು ತಿರುಗುತ್ತಾ ಇರಲು ಸಾಧ್ಯವೇ? ಹೆಣ್ಣಿಗೆ ತೊಂದರೆಯಾಗಬಾರದೆಂದು ಸರ್ಕಾರ ವರದಕ್ಷಿಣೆ ವಿರೋಧಿ ಕಾನೂನು ತಂದಮೇಲೆ ನೊಂದ ಹೆಣ್ಣು ದೂರು ಕೊಟ್ಟ ತಕ್ಷಣ ಸಂಬಂಧಪಟ್ಟವರನ್ನು ಮೊದಲು ಬಂಧಿಸುತ್ತದೆ. ವಿಚಾರಣೆ ಆ ಮೇಲೆ. ಅದೇ ರೀತಿ ಅತ್ಯಾಚಾರ ಪ್ರಕರಣದಲ್ಲೂ ಮೊದಲು ಆರೋಪಿಗಳ ಬಂಧನಕ್ಕೆ ಆದ್ಯತೆ. ಇಷ್ಟಾಗಿಯೂ ಇಂತಹ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು, ಸಂಬಂಧಪಟ್ಟ ಇಲಾಖೆಗಳಿಗೆ ಮಾತ್ರ ತಿಳಿಸಬೇಕು ಎಂದಾದರೆ ಆ ರೀತಿ ಕಾನೂನು ತರುವುದೊಂದೇ ಮಾರ್ಗ. ಬೇರೆ ಯಾವ ದಾರಿ ಇದೆ?

  ಉತ್ತರ
  • shripad
   ಜುಲೈ 26 2014

   ಅಲ್ಲ ಶ್ರೀರಂಗ ಅವರೇ, ಬೆಂಗಳೂರೂ ಸೇರಿದಂತೆ ಅತ್ಯಾಚಾರ ನಡೆದಿದೆ ಎನ್ನುವ ಊರುಗಳಲ್ಲಿ ಆಯಾ ದಿನ ಸಾಹಿತ್ಯಕ, ಸಾಂಸ್ಕ್ರತಿಕ ಮಹತ್ವದ ಯಾವ ಕಾರ್ಯಕ್ರಮಗಳೂ ನಡೆದೇ ಇಲ್ಲವಾ? ಇವುಗಳನ್ನೂ ಮಾಧ್ಯಮಗಳು ಪೈಪೋಟಿ ಬಿದ್ದು ವರದಿ ಮಾಡಿದವಾ? ಸಮಾಜದ ಆರೋಗ್ಯಕ್ಕೆ ಏನು ಬೇಕೋ ಅದನ್ನು ವಿಶೇಷವಾಗಿ ಅವು ಕೊಡುವುದಿಲ್ಲ. ಕ್ರೈಂ ಸುದ್ದಿಗಳಿಗೆ ನಮ್ಮ ಮಾಧ್ಯಮಗಳು ಕೊಡುವಷ್ಟು ಸಮಯ, ಶ್ರಮವನ್ನು ಬೇರೆ ದೇಶದ ಸುದ್ದಿ ಮಾಧ್ಯಮಗಳು ಖಂಡಿತ ಕೊಡುವುದಿಲ್ಲ. ನಮ್ಮ ಜನರಿಗೂ ಇದೇ ಬೇಕು ಅನಿಸುತ್ತದೆ. ಮೊದಲು ಪೊಲೀಸು, ನ್ಯಾಯಾಂಗಗಳ ಮೊರೆಹೊಗುವ ಬದಲು ಸೀದಾ ಮಾಧ್ಯಮಗಳ ಮುಂದೆ ಬಂದು ಕೂರುವುದೇಕೆ?
   ಮಾಧ್ಯಮಗಳು ಇಂಥ ಸುದ್ದಿ ಪ್ರಸಾರ ಹೇಗೆ ಮಾಡಬೇಕು ಎಂಬ ನಿಯಮ ಈಗಾಗಲೇ ಇದೆ. ಅದನ್ನು ಅವು ಅನುಸರಿಸುವುದಿಲ್ಲ. ಅವರಿಗೆ ಬೇಕಿರುವುದು ಬ್ರೇಕಿಂಗ್ ನ್ಯೂಸ್!

   ಉತ್ತರ
 6. ವಿಜಯ್ ಪೈ
  ಜುಲೈ 26 2014

  ನಮ್ಮ ಮಾಧ್ಯಮಗಳು ಯಾವ ಮಟ್ಟಿಗೆ ಮುಟ್ಟಿವೆ ಎಂದರೆ, ಹೋದವಾರ ಬೆಳಗ್ಗೆ ಪೇಪರ್ ನೋಡಿದ ಕೂಡಲೇ ನಮ್ಮ ಕಣ್ಣಿಗೆ ಬಿಳುವುದೇ ರೇಪ್ ಆಗಿತ್ತು. ‘ದಿನದ ಪ್ರಾರಂಭ ರೇಪನಿಂದ’ ಎನ್ನುವುದು ಎಲ್ಲ ದಿನಪತ್ರಿಕೆಗಳ ಧ್ಯೇಯವಾಕ್ಯವಾಗಿತ್ತು. ಇದು ಇನ್ನೊಂದು ಸ್ವಲ್ಪ ಕಾಲ ಮುಂದುವರೆದಿದ್ದರೆ ಹೆಣ್ಣು ಮಕ್ಕಳು ಹೋಗಲಿ, ಗಂಡುಗಳಿಗೂ ಕೂಡ ತಾವು ಮನೆ ಬಿಟ್ಟು ಹೊರಗೆ ಕಾಲಿಟ್ಟರೆ ರೇಪ್ ಗೆ ಒಳಗಾಗುತ್ತೇವೆನೊ ಅನಿಸಲು ಸುರುವಾಗುತ್ತಿತ್ತೇನೊ!!

  ಉತ್ತರ
  • shripad
   ಜುಲೈ 26 2014

   ಹೌದು ಪೈಯವರೇ, ಇವೊತ್ತೂ ಒಂದೆರಡು ಕನ್ನಡ ನ್ಯೂಸ್ ಚಾನೆಲ್ ಗಳು ಮತ್ತೆ ರೇಪ್ ಕೇಸ್ ಅಂತ ಬೆಳಿಗ್ಗೆಯೇ ಚರ್ಚೆ ಮಾಡಿಕೊಂಡು ಕೂತಿದ್ದವು. ಅಲ್ರೀ ಕಾಮನ್ವೆಲ್ತ್ ಕ್ರೀಡೆ ಶುರುವಾಗಿ ಎರಡು ದಿನಕಳೆದವು. ಭಾರತ ಚಿನ್ನದ ಬೇಟೆಯಾಡುತ್ತಿದೆ. ನಮ್ಮ ಕ್ರೀಡಾಪಟುಗಳ ಬಗ್ಗೆ ಕಾರ್ಯಕ್ರಮ ನೀಡುವುದು ಬಿಟ್ಟು…ದರಿದ್ರ ಮನೋಧರ್ಮ ಏನುಮಾಡೋಕಾಗುತ್ತೆ?

   ಉತ್ತರ
 7. sanju
  ಜುಲೈ 28 2014

  ದಿನನಿತ್ಯವೂ ರೇಪ್ ಸುದ್ದಿ ಬರುತ್ತಿದೆ ನಿಜ. ಆದರೆ ನಿಜವಾಗಿಯೂ ಸುದ್ದಿ ಆಗೋದು ನೊಂದವರೇ ದನಿ ಎತ್ತಿದಾಗ. ದೆಹಲಿ ಗ್ಯಾಂಗ್ ರೇಪ್ ನಡೆಯುವ ಮುನ್ನ ದೇಶದಲ್ಲಿ ಅತ್ಯಾಚಾರ ಪ್ರಕರಣಗಳೇ ಆಗಿರಲಿಲ್ಲವೇ ಎಂಬ ಪ್ರಶ್ನೆಗಳೂ ಎದ್ದಿದ್ದವು. ಆಗಿದ್ದವು ನಿಜ, ಆದರೆ ನೊಂದವರಿಗೆ ದನಿಯಾಗುವವರು ಯಾರೂ ಸಿಕ್ಕಿರಲಿಲ್ಲ. ಅದೇ ರೀತಿ ಈ ಪ್ರಕರಣ ಕೂಡ. ಶಾಲೆಗಳಲ್ಲೇ ಲೈಂಗಿಕ ದೌರ್ಜನ್ಯವಾಗುತ್ತೆ ಎಂಬ ಸುದ್ದಿ ಆ ಶಾಲೆಯ ಇತರೆ ಪೋಷಕರಿಗೆ ಭಯ ಹುಟ್ಟಿಸಿರುತ್ತದೆ ಎಂಬುದು ಸತ್ಯವಲ್ಲವೇ. ಹೀಗಾಗಿಯೇ ಕಾಮುಕನಿಗೆ ಶಿಕ್ಷೆಯಾಗಬೇಕು ಎಂಬ ಉದ್ದೇಶದೊಂದಿಗೆ ಪ್ರತಿಭಟನೆಗಳಾದವು, ಅಂತೆಯೇ ಮಾಧ್ಯಮಗಳೂ ಈ ಸುದ್ದಿಗಳಿಗೆ ಜಾಗ ಕೊಟ್ಟವು. ಹೀಗಾಗಿ ಈಗ್ಯಾಕೆ ಸುದ್ದಿಯಾಗುತ್ತಿದೆ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ನೀವೇ ಹೇಳಿದ್ದೀರಿ, ಅತ್ಯಾಚಾರಗಳು ಮನೆಯಲ್ಲೇ ಅಪ್ಪನ ಕಡೆಯಿಂದ, ಸಹೋದರನ ಕಡೆಯಿಂದ, ಸಂಬಂಧಿಗಳಿಂದ ಆದಾಗ, ಯಾರ ವಿರುದ್ಧ ಪ್ರತಿಭಟನೆ ಮಾಡೋದು ಅಲ್ಲವೇ. ಇವಕ್ಕೆಲ್ಲಾ ಉತ್ತರ ಹುಡುಕುತ್ತಾ ಹೋಗೋದು ತುಸು ಕಷ್ಟವೇ. ಆದರೆ ರೇಪ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಈ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ ಎಂದಾದಲ್ಲಿ ಅದರಲ್ಲಿ ಹುಳುಕೇಕೇ. ಇನ್ನೊಂದು ವಿಷಯ ಮಾಧ್ಯಮಗಳು ಸುದ್ದಿ ಕೊಡುತ್ತಿವೆಯೇ ಹೊರತು ವೈಭವೀಕರಿಸುತ್ತಿಲ್ಲ. ಇದು ವೈಭವೀಕರಿಸಬಹುದಾದ ಸುದ್ದಿ ಅಲ್ಲವೇ ಅಲ್ಲ.

  ಉತ್ತರ
  • Nagshetty Shetkar
   ಜುಲೈ 28 2014
  • Shripad
   ಜುಲೈ 28 2014

   ನೊಂದವರಿಗೆ ನ್ಯಾಯ ಕೊಡಲು ನ್ಯಾಯ ವ್ಯವಸ್ಥೆ ನಮ್ಮಲ್ಲಿ ಬೇರೆ ಇದೆ. ಮಾಧ್ಯಮಗಳು ಎಲ್ಲವನ್ನೂ ಗುತ್ತಿಗೆ ಪಡೆಯುವ ಅಗತ್ಯವಿಲ್ಲ. ಹೀಗೆ ನೊಂದವರ ಪರ ವರದಿ ಮಾಡುವ ರೀತಿ ನೀತಿಗಳಿವೆ. ಮಾಧ್ಯಮಗಳು ಮೊದಲು ಅದನ್ನು ಪಾಲಿಸಲಿ. ಹೀಗಾಗುತ್ತಿಲ್ಲ ಅಂತಲೇ ಸಿದ್ರಾಮಯ್ಯನವರು ಮಾಧ್ಯಮಗಳ ಮೇಲೆ ಹರಿಹಾಯ್ದದ್ದು. ಪ್ಯಾಶನೇಟ್ ಆಗಿ ಇವನ್ನೆಲ್ಲ ಸುದ್ದಿ ಮಾಡಬೇಕಿಲ್ಲ ಅಲ್ಲವೇ? ಮಾಧ್ಯಮಗಳು ಈಗೀಗ ರೇಪ್ ಬಗ್ಗೆ ನೀಡುತ್ತಿರುವ ಸುದ್ದಿ ವಿಧಾನದಿಂದ ಯಾರೂ ಜಾಗ್ರತರಾಗುವುದಿಲ್ಲ. ಬದಲಿಗೆ ಆಕ್ರೋಶಗೊಳ್ಳುತ್ತಾರೆ. ಇದಾ ಜಾಗ್ರತಿ?

   ಉತ್ತರ
 8. Nagshetty Shetkar
  ಜುಲೈ 29 2014

  _http://ladaiprakashanabasu.blogspot.in/2014/07/blog-post_96.html

  ಉತ್ತರ
  • Nagshetty Shetkar
   ಜುಲೈ 29 2014

   ‘ಅತಿ ಪುರಾತನ ನಾಗರಿಕತೆಯ ಮಹಾನ್ ದೇಶ ಸೀರೆಯುಟ್ಟು, ಹಣೆಗೆ ಕುಂಕುಮವಿಟ್ಟು, ಓಲೆ-ಬಳೆ-ಹೂವು ಮುಡಿದು, ವ್ರತಕತೆ ನಡೆಸುವ ಹೌದಮ್ಮನಾಗಿರುವವರೆಗೆ ದೇವಿ, ಮಾತೆ, ಭಾರತೀಯ ನಾರಿ ಇತ್ಯಾದಿ ಕಿರೀಟಗಳ ತಲೆಗೆ ಕಟ್ಟುತ್ತದೆ. ಅದೇ ಮೇಲುಮೇಲೆ ಸಿಂಗರಿಸಿಕೊಂಡಿರುವ ತಿಪ್ಪೆ ಕೆದರಿ ನಿಜ ಪರಿಸ್ಥಿತಿ ಏನೆಂದು ತೋರಿಸತೊಡಗಿದರೆ ಸಾಕು, ಹುಚ್ಚೆದ್ದು ಕೆರಳಿ ಮಾನಭಂಗಕ್ಕೆ ಯತ್ನಿಸುತ್ತದೆ. ಆದರೆ ‘ಹೆಂಗಸ್ರದ್ದು ಹೆಚ್ಚಾಯ್ತು’ ಎಂದು ಹೆಚ್ಚಾದದ್ದನ್ನು ಕಡಿಮೆ ಮಾಡಲು ಚಡ್ಡಿಬಿಚ್ಚಿ ಹೊರಟಿರುವ ಈ ಎಲ್ಲ ಬಾಲಕರಿಗೆ ಹೆದರದೇ ಅವರನ್ನು ಪೂರಾ ಬೆತ್ತಲಾಗಿಸಿ, ಅವರು ಸೇರಬೇಕಾದ ಜಾಗ ತಲುಪಿಸುವುದೊಂದೇ ಈಗ ಉಳಿದಿರುವ ದಾರಿ. ‘ಹಿತ ವಚನ, ಮಿತ ವಚನ, ಮೃದು ವಚನ’ಗಳನ್ನು ಪ್ರತಿಪಾದಿಸುವ ಸನಾತನಿಗಳ ಮುಖವಾಡ ಕಳಚುವ; ಶೀಲ-ಅಶ್ಲೀಲಗಳ, ಮಾನ-ಅವಮಾನದ ವ್ಯಾಖ್ಯೆ ಬದಲಿಸುವ ಜವಾಬುದಾರಿಯೂ ನಮ್ಮ ಮೇಲೇ ಇದೆ. ಇಲ್ಲದಿದ್ದರೆ ಮತ್ತೆ ಮರ್ಯಾದೆಗಂಜಿ ಮೌನಕ್ಕೆ ಶರಣಾದ ತ್ರೇತಾಯುಗದ ಸೀತೆಯ ಕಾಲಕ್ಕೆ ಮರಳಬೇಕಾಗುತ್ತದೆ.’

   ಉತ್ತರ
   • shripad
    ಜುಲೈ 30 2014

    ಅತ್ಯಾಚಾರ ಪುರೋಹಿತಶಾಹಿ (?) ಯಿಂದ ಹುಟ್ಟಿದ್ದು, ಇದಕ್ಕೆ ಮೇಲ್ವರ್ಗ, ಬಲಿಷ್ಠರೇ ಕಾರಣ, ನೊಂದವರ ಕೂಗು ಮಾಧ್ಯಮಗಳಲ್ಲಿದೆ…ಇತ್ಯಾದಿ ಒಣ ಸೈದ್ಧಾಂತಿಕ ಮುಖ ತೊಡಿಸುವ ಮುಂಚೆ ನಮ್ಮ ಜನ ಹೇಗಿದ್ದಾರೆ ಎಂದು ಮೊದಲು ನೋಡಿ. ಅತ್ಯಾಚಾರದ ಬಹುಮುಖ ಆಯಾಮ ಇಂದಿನ ದಿ ಹಿಂದೂ ಪತ್ರಿಕೆಯ ಮುಖಪುಟದಲ್ಲಿದೆ.

    ಉತ್ತರ
    • Nagshetty Shetkar
     ಜುಲೈ 30 2014

     ಗೌರವಾನ್ವಿತ ಮಹಿಳಾ ಹೋರಾಟಗಾರ್ತಿಯೊಬ್ಬರ ಕುರಿತು ಅವರನ್ನು ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ ವಿ ಆರ್ ಭಟ್ ತರಹದ ವಿಕೃತ ಮನಸ್ಸಿನ ಸನಾತನಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ನಿಮಗೆ ವಿವೇಕ ಎಂದು ಮೂಡುವುದು?!!

     ಉತ್ತರ
     • ವಿಜಯ್ ಪೈ
      ಜುಲೈ 30 2014

      ನಾನೂ ಮೊದಲು ಈ ಹೋರಾಟ ಪ್ರಾಮಾಣಿಕವಾದದ್ದು ಎಂದು ಭಾವಿಸಿದ್ದೆ. ಯಾವಾಗ ಅದು ತಪ್ಪು ಮಾತನಾಡಿದ ವ್ಯಕ್ತಿಯ ವಿರುದ್ಧವಾಗಿರದೇ ಅದರಲ್ಲಿ ಆರ್.ಎಸ್.ಎಸ್, ಸನಾತನ ಧರ್ಮ ಬಂತೊ ಇದು ಎಡಬಿಡಂಗಿಗಳ ರಿವೈವಲ್ ಪ್ರಾಜೆಕ್ಟೆ ಎಂದು ಖಾತರಿಯಾಯಿತು. ನಿಜ ಘಟನೆಗಳು ನಡೆದಾಗ ಕಣ್ಣು ಕಾಣಿಸದವರಂತೆ, ಕಿವಿ ಕೆಳಿಸದವರಂತೆ, ಮಾತು ಬರದವರಂತೆ ತೆಪ್ಪಗೆ ಬಿದ್ದವರು..ಈಗ ಒಮ್ಮೆಗೆ ಪುತು-ಪುತು ಅಣಬೆಗಳಂತೆ…..ಹಾ.ಹಾ ಮಜವಾಗಿದೆ..ವಿ.ಆರ್ ಭಟ್ ಹೆಗಲ ಮೇಲೆ ಬಂದೂಕು ಇಟ್ಟು ಆರ್.ಎಸ್.ಎಸ್ ಗೆ ಹೊಡೆಯುವ ಆಟ!! . ಈ ಯಪ್ಪ ಅತ್ಯಾಚಾರ ಮಾಡಿ ಅಂತ F.B ಯಲ್ಲಿ ಕರೆ ಕೊಟ್ಟರೆ, ಜನ ಬಂದು ಅತ್ಯಾಚಾರ ಮಾಡಲಿಕ್ಕೆ ಆತ ಏನು ಗ್ಯಾಂಗ್ ಲೀಡರ್ರಾ??.. ಒಳ್ಳೆ ಕಾಗೆ-ಗುಬ್ಬಿ ಕಥೆ!.

      ಉತ್ತರ
     • Maaysa
      ಜುಲೈ 30 2014

      ಶೆಟ್ಕರ್ ಸಾಹೇಬರ ಜೀವಪರ ಧರ್ಮದ ಸುದ್ದಿ:

      http://hotair.com/archives/2014/07/24/horrific-isis-orders-women-of-mosul-to-undergo-genital-mutilation/

      ಉತ್ತರ
      • Nagshetty Shetkar
       ಜುಲೈ 30 2014

       ಅಪ್ಪಟ ವೈದಿಕನಾದ ನಿನಗೆ ಅನ್ಯ ಧರ್ಮದ ಆಗು ಹೋಗುಗಳ ಬಗ್ಗೆ ಏಕೆ ಕೆಟ್ಟ ಆಸಕ್ತಿ???

       ಉತ್ತರ
       • Maaysa
        ಜುಲೈ 30 2014

        [ಗೌರವಾನ್ವಿತ ಮಹಿಳಾ ಹೋರಾಟಗಾರ್ತಿಯೊಬ್ಬರ ಕುರಿತು ಅವರನ್ನು ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ ವಿ ಆರ್ ಭಟ್ ತರಹದ ವಿಕೃತ ಮನಸ್ಸಿನ ಸನಾತನಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ನಿಮಗೆ ವಿವೇಕ ಎಂದು ಮೂಡುವುದು?!!]

        ಉತ್ತರ
       • Maaysa
        ಜುಲೈ 30 2014

        [ಅಪ್ಪಟ ವೈದಿಕನಾದ ನಿನಗೆ ಅನ್ಯ ಧರ್ಮದ ಆಗು ಹೋಗುಗಳ ಬಗ್ಗೆ ಏಕೆ ಕೆಟ್ಟ ಆಸಕ್ತಿ???]

        ಯಾವೋನೋ ಏನೋ ಜೀವಪರ ಅಂದ. ಅದಕ್ಕೆ.. ಅದರ ಜೀವಪರತೆಗೆ ನಿದರ್ಶನ ಕೊಟ್ಟೆ ಪೈಗಳಿಗೆ. ನಿನಗಲ್ಲ ದಡ್ಡ! ನಿನಗೆ ಅರ್ಥವಾಗಿರಲ್ಲ.

        [[ಗೌರವಾನ್ವಿತ ಮಹಿಳಾ ಹೋರಾಟಗಾರ್ತಿಯೊಬ್ಬರ ಕುರಿತು ಅವರನ್ನು ಯಾರಾದರೂ ಒಬ್ಬ ರೇಪಿಸ್ಟ್ ಜುಟ್ಟು ಹಿಡಿದು ರೇಪ್ ಮಾಡಬೇಕೆಂದು ಅಪ್ಪಣೆ ಕೊಡಿಸಿದ ವಿ ಆರ್ ಭಟ್ ತರಹದ ವಿಕೃತ ಮನಸ್ಸಿನ ಸನಾತನಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ನಿಮಗೆ ವಿವೇಕ ಎಂದು ಮೂಡುವುದು?!!]]

        ಯಾಕೆ ಒಬ್ಬ ದುಷ್ಟನಿಗೆ ಕೆಳಗಡೆಯದರಲ್ಲಿ ಯಾಕೆ ಆಸಕ್ತಿ? ಯಾರು ಯಾರನ್ನು ಕೇಡಿಸಲು ಹೇಳುದರು ಎಂದು ಅಂಕಿಅಂಶ ಇಡುವ ಕೆಲಸವಿಟ್ಟುಕೊಂಡಿದ್ದಾನ ಇಲ್ಲೊಬ್ಬ?

        ಉತ್ತರ
 9. Nagshetty Shetkar
  ಜುಲೈ 29 2014

  http://ladaiprakashanabasu.blogspot.in/2014/07/blog-post_86.html

  ‘ಇಂತಹ ಫೋಸ್‌ಗಳಿಂದ ಒಂದು ಸಿನೆಮಾ ತಯಾರಾಗಿ ದುಡ್ಡು ದೋಚಬಹುದೇ ಹೊರತು ಹನ್ನೆರಡನೆ ಶತಮಾನದಲ್ಲಿ ಅತ್ಯದ್ಭುತ ಸಾಮಾಜಿಕ ಕ್ರಾಂತಿ ತಂದ ಬಸವಣ್ಣನ ಶರಣತ್ವವನ್ನು ನಿರೀಕ್ಷಿಸಲು ಸಾಧ್ಯವೆ?’

  ಉತ್ತರ
 10. Maaysa
  ಜುಲೈ 30 2014

  [ಅತ್ಯಾಚಾರದ ಹಿಂದೆ ಇಷ್ಟೆಲ್ಲ ಸಂಗತಿಗಳಿರುವಾಗ ಅದನ್ನು ಆಮೂಲಾಗ್ರ ಕಿತ್ತೆಸೆಯುವುದು ಸುಲಭವಲ್ಲ. ಮಾಧ್ಯಮಗಳು ಈಗ ಮಾಡುತ್ತಿರುವಂತೆ ಹುಯಿಲೆಬ್ಬಿಸುವುದರಿಂದಲಂತೂ ಮತ್ತಷ್ಟು ಹಾನಿಯೇ ವಿನಾ ಪ್ರಯೋಜನವಿಲ್ಲ.]

  ಪ್ರಯೋಜನವಿದೆ. ನಮ್ಮ ಕಾನೂನುಗಳು ಹಾಗು ಪೋಲೀಸ್ ವ್ಯವಸ್ಥೆಯು ಎಂತಹ ದರಿದ್ರ ಸ್ಥಿತಿಯಲ್ಲಿದೆ ಹಾಗು ನಾಗರಿಕರಿಗೆ ಎಷ್ಟು ರಕ್ಷಣೆಯನ್ನು ಸರಕಾರವು ನೀಡುತ್ತಿದೆ ಎಂದು ತಿಳಿಯುವುದು.

  ಇದಕ್ಕೆ ಪರಿಹಾರಗಳು ನಾವು ಕಂಡುಕೊಳ್ಳಬೇಕು.

  ೧. ಮಕ್ಕಳಿಗೆ ಲೈಂಗಿಕ ಶೋಷಣೆಯ ಶಿಕ್ಷಣದ ಅವಶ್ಯಕತೆ ಇದೆ.
  ೨. ಪೋಷಕರಿಗೆ ಎಚ್ಚರಿಕೆ ಹಾಗು ತಿಳುವಳಿಕೆಯ ಅಗತ್ಯವಿದೆ. ಮಕ್ಕಳನ್ನು ಯಾರ ಬಳಿ ಬಿಡಬೇಕು, ಬಾರದುಗಳ ಪರಿಜ್ಞಾನವಿಲ್ಲ ನಮ್ಮ ಹೆಚ್ಚಿನ ಜನಕ್ಕೆ.
  ೩. ಯುವಕ(ತಿ)ರಿಗೆ ಆರೋಗ್ಯಕರ ಲೈಂಗಿಕ ನಡವಳಿಕೆಯ ಶಿಕ್ಷಣಬೇಕು.
  ೪. ಬೇಗ ಮದುವೆಯಾಗುವುದನ್ನು ಪೋತ್ಸಾಹಿಸಿ, ಹೆಂಗಸರು ಮುವ್ವತ್ತು ವರ್ಷವಯಸ್ಸಿನ ಹತ್ತಿರದಲ್ಲಿ ನಿಧಾನವಾಗಿ ಮಕ್ಕಳನ್ನು ಪಡೆಯಲು ಸೂಚಿಸಬೇಕು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments