ವಿಷಯದ ವಿವರಗಳಿಗೆ ದಾಟಿರಿ

ಜುಲೈ 25, 2014

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು – ಪುಸ್ತಕ ಪರಿಚಯ – ೩

‍ನಿಲುಮೆ ಮೂಲಕ

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೧
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೨

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳುದಾಖಲೆಗಳು 

   ಮೂಲ : ವಿನಯಲಾಲ್                                  ಕನ್ನಡಕ್ಕೆ : ಅಕ್ಷರ  ಕೆ.ವಿ

ನಾಗರಿಕತೆಗಳು, ದೇಶಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನೂ ಕೂಡಿದಂತೆ ಎಲ್ಲ ಸಂಗತಿಗಳ ‘ಪ್ರಗತಿ’ ಮತ್ತು ‘ಪತನಗಳನ್ನು’ ಅಳೆಯುವುದಕ್ಕೆ ನಾವು ಬಳಸುವ ದಾಖಲೆಗಳನ್ನು ಕುರಿತಂತೆ ಚಿತ್ರ ವಿಚಿತ್ರವಾದ ಹಲವಾರು ವಿಚಾರಗಳನ್ನು ಹೇಳಬಹುದು. ನಾಜಿಗಳು ಮೃತರಾದ ಖೈದಿಗಳನ್ನು ಕುರಿತಂತೆ ಇಟ್ಟಿರುವ ದಾಖಲೆಪುಸ್ತಕಗಳಲ್ಲಿ ಯಾವ ಯಾತನಾಶಿಬಿರಕ್ಕೆ ಯಾವ ರೈಲಿನ ಮೂಲಕ ಯಾವ ಯಾವ ಯಹೂದಿಗಳನ್ನು ಸಾಗಿಸಲಾಯಿತು, ಪ್ರತಿ ರೈಲಿನಲ್ಲಿದ್ದ ಯಹೂದಿಗಳ ಸಂಖ್ಯೆ, ವಿಷಾನಿಲ ಪ್ರಯೋಗದಿಂದ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ ಈ ಎಲ್ಲವೂ  ವಿವವರವಾಗಿ ದೊರೆಯುತ್ತದೆ.

ಭಾರತವನ್ನಾಳಿದ ಬ್ರಿಟಿಷರಿಗೂ ಇಷ್ಟೇ ವಿಸ್ತಾರವಾದ ಆಡಳಿತಾತ್ಮಕ ದಾಖಲೆಗಳನ್ನು ಇಡುವ ಪರಿಪಾಠವಿತ್ತು. 19ನೆಯ ಶತಮಾನದ ತುದಿಯ ವರ್ಷಗಳಲ್ಲಿ ರಾಷ್ಟ್ರೀಯತಾವಾದವು ಪ್ರಬಲವಾಗುತ್ತಿದ್ದಂತೆ ಈ ದಾಖಲೆಗಳು ಇನ್ನೂ ಇನ್ನೂ ವಿವರಗಳನ್ನು ಸೇರಿಸಿಕೊಳ್ಳುತ್ತಾ ಹೋಯಿತು. ಸ್ಥಳಿಯರ ನಡವಳಿಕೆಗಳ ಬಗ್ಗೆ ಮುನ್ಸೂಚನೆ ನೀಡಿ ಅವರಲ್ಲಿ ದಂಗೆಕಾರರನ್ನು ಹತೋಟಿಯಲ್ಲಿಡಲಿಕ್ಕೂ ಇವೇ ದಾಖಲೆಗಳು ಸಹಾಯಕವಾಗುತ್ತದೆಂಬ ಹೊಸ ಭಾರವು ಆಗ ರಾಜ್ಯದ ಮೇಲೆ ಬಿತ್ತು. ಮುಂದೆ ಹೊಸದಾಗಿ ಅವಿಷ್ಕಾರಗೊಂಡ ರಾಷ್ಟ್ರಪ್ರಭುತ್ವವೂ ಇದೇ ಸಾಮ್ರಾಜ್ಯಶಾಹಿ ದಾಖಲೆ ವಿಧಾನವನ್ನು ಮುಂದುವರಿಸಿತು. ಇವತ್ತು ರಾಷ್ಟ್ರ ಪ್ರಭುತ್ವವೊಂದರ ಸೂಚಕ ಚಿನ್ಹೆಗಳಾಗಿ ಒಂದು ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇರುವಂತೆ ರಾಷ್ಟ್ರೀಯ ಪತ್ರಾಗಾರವೂ ಇದೆ. ಈ ರಾಷ್ಟ್ರೀಯ ದಾಖಲೆ ಸಂಗ್ರಹಾಲಯಗಳು ಆಯಾ ರಾಷ್ಟ್ರಗಳ ರಹಸ್ಯಗಳ,ದೌರ್ಜನ್ಯಗಳ ಮತ್ತು ದುಷ್ಕರ್ಮಗಳ ಅಡಗುದಾಣವೂ ಆಗಿರುತ್ತದೆ.

ಹಿಂದೂಗಳ ಸಾಂಸ್ಕೃತಿಕ ಸೃಷ್ಟಿ ಪುರಾಣಗಳಲ್ಲಿ ವರ್ಗೀಕರಣ ಮತ್ತು ಗಣನೆಗಳೆರೆಡೂ ತುಂಬಾ ಅತ್ಯಂತಿಕವಾದ ಒಂದು ಉಪಕರಣವೆಂದು ಭಾವಿಸಲ್ಪಟ್ಟಿದ್ದವು. ದೇವರಪೂಜೆಯಲ್ಲಿ, ಬಲಿಯ  ವಿಧಿಗಳಲ್ಲಿ, ಸಾಹಿತ್ಯ ಕೃತಿಗಳ ನಿರ್ಮಾಣದಲ್ಲಿ, ವಂಶವೃಕ್ಷಗಳ ನಿರೂಪಣೆಯಲ್ಲಿ , ಜ್ಯೋತಿಷ್ಯದಲ್ಲಿ ಮತ್ತು ಕಾಮಶಾಸ್ತ್ರದಲ್ಲಿಯೂ ಕೂಡ ಸಂಖ್ಯೆಗಳು ಬಳಕೆಯಾಗುತ್ತಿದ್ದವು. ಅಥರ್ವವೇದವು (ದಾಳಗಳನ್ನು ಉಪಯೋಗಿಸಿ) ಐವತ್ಮೂರು ಬಗೆಯ ಮಾಟ  ಮಂತ್ರಗಳನ್ನು ಮಾಡಬಹುದು ಎಂದೂ ಮತ್ತು ಸಾವಿನಲ್ಲಿ ಒಟ್ಟು 101 ಬಗೆಯ ಮರಣಗಳಿವೆಯೆಂದೂ ನಿಖರವಾಗಿ ಹೇಳುತ್ತದೆ. ಇಂಗ್ಲೇಡಿನಲ್ಲಿ  ಸಹ ಇನ್ನೊಂದು ಬಗೆಯ ಸಂಖ್ಯಾ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿತ್ತು. ಅಲ್ಲಿ ಮೃತ ದೇಹಗಳನ್ನು  ಭರದಿಂದ ಎಣಿಸಲಾಗುತ್ತಿತ್ತು. ಒಂದು ವರ್ಷದ ಅವಧಿಯಲ್ಲಿ ರೂಢಿಗತ ಅಪರಾಧಿಗಳಿಗೆ ಎಷ್ಟು ಬಾರಿ ಛಡಿಯೇಟಿನ ಶಿಕ್ಷೆ ನೀಡಲಾಯಿತೆಂಬ ಅಂಕಿ ಅಂಶದಿಂದ ಆರಂಭಿಸಿ, ಜೈಲುಗಳಲ್ಲಿ, ಆಶ್ರಯಧಾಮಗಳಲ್ಲಿ ಎಷ್ಟು ಜನ ಕುಡುಕರು-ಹುಚ್ಚರು ಇದ್ದಾರೆಂಬ ಲೆಕ್ಕಾಚಾರದವರೆಗೆ-ನಾನಾ ಮಾದರಿಯ ಸಂಖ್ಯಾರಾಶಿಗಳನ್ನು ಇಂಗ್ಲೇಡಿನಲ್ಲಿ ಕಲೆಹಾಕಲಾಯಿತು. ಮುಂದೆ ನಡೆಯತೊಡಗಿದ ಅನಾಹುತಗಳ ದಾಖಲೆಗಳಿಗೆ ಈ ಗಣತಿಯೇ ಆರಂಭವೆಂದೂ ಬೇಕಿದ್ದರೆ ಹೇಳಬಹುದು. ಈ ದಾಖಲೆಗಳ ಮೂಲಕವೇ ಆ ಸಮಾಜವು ತನ್ನೊಳಗಿನ ಬಂಡುಕೋರರನ್ನು, ಬಹಿಷ್ಕೃತರನ್ನು, ದಲಿತ-ದಮನಿತರನ್ನು, ಅಪರಾಧಿಗಳನ್ನು, ಭಿನ್ನಮತೀಯರನ್ನು,ವಿರೋಧಿಗಳನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ನಿರ್ವಹಿಸಬೇಕೆಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿತ್ತು.

ಇಡಿಯ  ಜಗತ್ತಿನಲ್ಲೇ ಅಸಾಧಾರಣವೆನ್ನಿಸುವ ‘ಮಾನವ ಗಣಕ’ ಎಂದು ಹೆಸರಾದವರು  ಭಾರತದ ಶಕುಂತಲಾ ದೇವಿ .ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ‘ಜೀವಂತ ವಿಸ್ಮಯ’ವೆಂದು ಖ್ಯಾತರಾದ ಇವರಿಗೆ ಒಮ್ಮೆ ಗುಣಾಕಾರ ಮಾಡಲಿಕ್ಕೆಂದು ಎರಡು ಹದಿಮೂರು ಅಂಕಿಗಳ ಸಂಖ್ಯೆಗಳನ್ನು ಕೊಟ್ಟಾಗ (.78,86,36,97,74,870 ಮತ್ತು  24,65,09,97,45,779)  ಅದನ್ನು ಅವರು ಇಪ್ಪತೆಂಟು ಸೆಕೆಂಡುಗಳಲ್ಲಿ ಸರಿಯಾಗಿ ಗುಣಿಸಿ ಹೇಳಿದ್ದರು.

“ವಿಚಿತ್ರ ಆದರೂ ಸತ್ಯ” ಎನ್ನುವಂತಹ ಕೆಲವು ದಾಖಲೆಗಳು ಹೀಗಿವೆ. ಇವುಗಳಲ್ಲಿ ಕೆಲವು ಗಿನ್ನೆಸ್ ದಾಖಲೆಯಲ್ಲೂ ಸೇರಿವೆ.

(೧) ಮಸ್ತ್ರಾಮ್ ಬಾಪು ಎಂಬ ಹೆಸರಿನವರು ಒಂದೇ ಸ್ಥಳದಲ್ಲಿ ಇಪ್ಪತ್ತೆರೆಡು ವರ್ಷ ಕೂತು ಕೊಂಡೇ ಇದ್ದ.

(೨) 1994ರಲ್ಲಿ ಲೋಟನ್ ಬಾಬು ಎಂಬ ಸಾಧುವು ಸತತ ಎಂಟು ತಿಂಗಳ ಕಾಲ ತನ್ನ ದೇಹವನ್ನು ಉರುಳಿಸಿ ದಾಖಲೆ ಮಾಡಿದ್ದಾನೆ; ವೈಷ್ಣೋದೇವಿಗೆ ಹರಕೆ ಸಲ್ಲಿಸುವುದಕ್ಕಾಗಿ ಆತ ರಟ್ಲಾ ಮ್ ನಿಂದ ಜಮ್ಮುವಿನವರೆಗೆ ಸುಮಾರು ೪೦೦೦ ಕಿ ಮೀ ದೂರವನ್ನು ದಿನಕ್ಕೆ ಸರಾಸರಿ 16 ಕಿ ಮೀ ಗಳಂತೆ ಉರುಳು ಸೇವೆ ಮಾಡಿರುವ ದಾಖಲೆ ಆತನ ಹೆಸರಿಗೆ ಸಂದಿದೆ.

(೩) ಜಗದೀಶ್ ಚಂದರ್ ಎಂಬಾತ ತನ್ನ ಭಕ್ತಿಯ ಹಿಂದೂಮಾತೆಯ ಪ್ರೀತರ್ಥವಾಗಿ 1400 ಕಿ ಮೀ ಗಳಷ್ಟು ದೂರ ಅಂಬೆಗಾಲಿಟ್ಟು ಸಾಗಿದ್ದಾನೆ. (ಅಂಬೆಗಾಲಿನ ಈ ದಾಖಲೆಯಿಂದ ಭಾರತದ ಇತಿಹಾಸದ ವಿಧ್ಯಾರ್ಥಿಗಳಿಗೆ 1919ರಲ್ಲಿ ಅಮೃತಸರದ ಹತ್ಯಾಕಾಂಡ ನಡೆಸಿದ ಕುಪ್ರಸಿದ್ಧ ಜನರಲ್ ಡೈಯರ್ ನ ನೆನಪಾದೀತು. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ರಸ್ತೆಯೊಂದರಲ್ಲಿ ಇಂಗ್ಲಿಷ್ ಹೆಂಗಸೊಬ್ಬಳ ಮೇಲೆ ಹಲ್ಲೆ ನಡೆದಿದ್ದಕ್ಕೆ ಶಿಕ್ಷೆಯಾಗಿ ಭಾರತೀಯರೆಲ್ಲರೂ ಆ ನಿರ್ದಿಷ್ಟ ರಸ್ತೆಯಲ್ಲಿ ಅಂಬೆಗಾಲಿನಲ್ಲಿಯೇ  ನಡೆಯಬೇಕೆಂದು ಜನರಲ್ ಡೈಯರ್ ತಾಕೀತು ಮಾಡಿದ್ದ).

(೪) ಬ್ರಿಟಿಷ್ ಪ್ರಜೆಯೊಬ್ಬ ಕೇವಲ ಒಂಬತ್ತೂವರೆ ಗಂಟೆಗಳಲ್ಲಿ 45.8 ಕಿ ಮೀ ದೂರಅಂಬೆಗಾಲಿಕ್ಕಿದ್ದು ಸದ್ಯದ ದಾಖಾಲೆಯಾಗಿದೆ.

(೫) ಉತ್ತರಪ್ರದೇಶದಲ್ಲಿರುವ ಶಹಜಾನ್ ಪುರದ ಸ್ವಾಮಿ ಮೌಜಗಿರಿ ಮಹಾರಾಜ್ ಎಂಬಾತ ಹದಿನೇಳು ವರ್ಷಗಳಾದ್ಯಂತ ಸತತವಾಗಿ ನಿಂತೇ ಇದ್ದ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾನೆ.

(೬) ಭಾರತದ ಅರವಿಂದ ಪಾಂಡ್ಯ ಎಂಬಾತ ‘ಹಿಮ್ಮುಖವಾಗಿ ಓಡುವ’ ವಿಶ್ವದಾಖಲೆಯೊಂದನ್ನು ಮಾಡಿದ್ದ.

ಭಾರತದ ಮಧ್ಯಮವರ್ಗದ ಜನ ಸಮೂಹಕ್ಕೆನೋ ತಮ್ಮ ದೇಶವು ಜಾಗತಿಕಮಟ್ಟದ ಒಂದು ಶಕ್ತಿಯಾಗಬೇಕು ಎಂಬ ಹುಚ್ಚಿದೆ. ಭಾರತದ ದಾಖಲೆಗಳು ಹೆಚ್ಚಾಗಿ ಗಿನ್ನೆಸ್ ಪುಸ್ತಕದೊಳಕ್ಕೆ ಮಾತ್ರ ಪ್ರವೇಶಿಸುತ್ತವೆಯೆಂಬುದು ಇವರಿಗೆ ತಮ್ಮ ದೇಶಕ್ಕೆ ಒದಗಿದ ನಾಚಿಕೆಯ ಸಂಗತಿಯಾಗಿಯೂ ಕಾಣುತ್ತದೆ. ಒಂದು ಬಿಲಿಯ ಜನಗಳಿರುವ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಒಂದು ಕಂಚಿನ ಪದಕಕ್ಕಿಂತ ಹೆಚ್ಚಿನದೇನೂ ಯಾಕೆ ದಕ್ಕುವುದಿಲ್ಲ ಎಂಬ ಬಗ್ಗೆ ಭಾರತೀಯರು ವಿಸ್ಮಯಪಡುತ್ತಾರೆ. ಆಫ್ರಿಕನ್ ದೇಶವೊಂದು ಅಲ್ಲಿರುವ ಹಸಿವು–ರಾಜಕೀಯ ಷಡ್ಯಂತ್ರ–ಅಸ್ಥಿರತೆಗಳ ನಡುವೆಯೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಭಾರತದ ಎಲ್ಲ ಆಟೋಟಗಾರರೂ  ಒಟ್ಟಾಗಿ ಪಡೆದದ್ದಕ್ಕಿಂತ ಹೆಚ್ಚು ಬಂಗಾರದ ಪದಕಗಳನ್ನು ಬಾಚಿಕೊಳ್ಳುತ್ತದೆಯಲ್ಲ ಯಾಕೆ? ಎಂಬುದೂ ಭಾರತಕ್ಕೆ ಅಚ್ಚರಿಯ ಸಂಗತಿಯಾಗಿ ಕಾಣುತ್ತದೆ .(ಸೌಂದರ್ಯ ಸ್ಪರ್ದೆಗಳಲ್ಲಿ ಮಾತ್ರ ಭಾರತವು ಪದೇ ಪದೇ ವಿಶ್ವ ಮಟ್ಟದ ಪದಕಗಳನ್ನು ಪಡೆಯುತ್ತದೆ. 1990ರ ದಶಕದ ದ್ವೀತೀಯಾರ್ಧದಾದ್ಯಂತ ಭಾರತವು ವಿಶ್ವ ಸುಂದರಿ ಪಟ್ಟಗಳಲ್ಲಿ ಏಕಸ್ವಾಮ್ಯ ಸ್ಥಾಪಿಸಿತ್ತು). ಆದರೆ ಒಂದು ದೇಶದ ಕ್ರೀಡಾ ಸಾಧನೆಗಳ ನಿಜವಾದ ಅಳತೆಗೋಲು ಒಲಂಪಿಕ್ಸ್ ಆಟಗಳೆಂದೂ ಭಾರತದ ಮಧ್ಯಮವರ್ಗವು ಭಾವಿಸಿದೆ. ಆದ್ದರಿಂದ ಇವರಿಗೆ ಗಿನ್ನೆಸ್ ದಾಖಲೆವೀರರನ್ನು ಕಂಡರೆ ಒಂದು ಕಡೆ ಮುಜುಗರವೆನ್ನಿಸುತ್ತದೆ. ಏಕೆಂದರೆ ಅವರು ಸಂಪೂರ್ಣ ವಿಚಿತ್ರ ಮತ್ತು ಅನುಪಯುಕ್ತವಾಗಿರುವ ಕ್ಷೇತ್ರಗಳಲ್ಲಿ ಮಾತ್ರವೇ ದಾಖಲೆಗಳನ್ನು ಮಾಡುತ್ತಾ ಇರುವುದು.

ಕೊನೆಯದಾಗಿ ಮೇಲ್ನೋಟಕ್ಕೇ ನಿರುಪಯುಕ್ತವೆಂದು ಕಾಣುವಂತಹ ಕೆಲವು ಸಾಧನೆಗಳು.

(೧) ಶ್ರೀಧರ ಚಿಲ್ಲಾಳನು ತನ್ನ ಎಡಗೈಯಲ್ಲಿ ಐದು ಮೀಟರ್ ಉದ್ದದ ಉಗುರನ್ನು ಬೆಳೆಸಿದ್ದು.

(೨) ಕಲ್ಯಾಣ ರಾಮ್ ಜಿ ಸೇನ್ ಮೂರರಿಂದ ನಾಲ್ಕು ಮೀಟರ್ ಉದ್ದದ ಮೀಸೆ ಬೆಳೆಸಿದ್ದು.

(೩) ಕಲ್ಯಾಣ್ ರಾಮ್ ಜಿ ಸೇನ್ ಗಿಂತ ಮೊದಲು ಮೀಸೆ ಬೆಳೆಸುವ ವಿಭಾಗದಲ್ಲಿ ದಾಖಲೆಯನ್ನು ನಿರ್ಮಿಸಿದ್ದವನು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ದೆಹಲಿಯ ಕರ್ಮಾ ರಾಮ್ ಭೀಲ್ ಎಂಬಾತ. ಆ ಮೀಸೆಯನ್ನು ಬೆಳೆಸುವುದಕ್ಕೆ ಬಂದೀಖಾನೆಯ ಅಧಿಕಾರಿಗಳೂ ಸಹಾಯಮಾಡಿರಬಹುದು. ಭೀಲ್ ತನ್ನ ಮೀಸೆಯನ್ನು ಹದವಾಗಿಡಲಿಕ್ಕೆ ಕಡಲೆ ಎಣ್ಣೆ,ಬೆಣ್ಣೆ ಮತ್ತು ಹಾಲಿನ ಕೆನೆಯ ಲೇಪನವನ್ನು ಬಳಸುತ್ತಿದ್ದನೆಂದು ಗಿನ್ನೆಸ್ ದಾಖಲೆ ಪುಸ್ತಕವೇ ಉಲ್ಲೇಖಿಸಿದೆ.

(೪) ಹರ ಪ್ರಕಾಶ್ ರಿಷಿ ಎಂಬಾತ ಸತತ 1001 ಗಂಟೆಗಳ ಕಾಲ ತನ್ನ ಮೋಟಾರ್ ಬೈಕನ್ನು 1990ರ ಎಪ್ರಿಲ್ 22 ಮತ್ತು ಜೂನ್ 3ರ ನಡುವೆ ಪುಣೆಯ ಟ್ರಾಫಿಕ್ ಪಾರ್ಕಿನಲ್ಲಿ ಒಟ್ಟು 60195 ಕಿ. ಮೀಗಳಷ್ಟು ಅಂತರವನ್ನು ಈ ಬೈಕಿನಲ್ಲಿ ಕ್ರಮಿಸಿದ್ದ. ಮುಂದೆ ಆತ ಗಿನ್ನೆಸ್ ರಿಷಿಯೆಂದೇ ಹೆಸರಾದ.

ಗಿನ್ನೆಸ್ ಪುಸ್ತಕದಲ್ಲಿ ಇಂಥ ವಿಚಿತ್ರ ದಾಖಲೆಗಳನ್ನು ಕೆತ್ತುವ ಉತ್ಸಾಹವು ಭಾರತೀಯರಲ್ಲೇ ಯಾತಕ್ಕೆ ಹೆಚ್ಚು ಕಾಣಸಿಗುತ್ತದೆ ಎಂಬುದಕ್ಕೆ ಪ್ರಾಯಶಃ ಈ ಜನಸಮುದಾಯಗಳಲ್ಲಿ (ಮತ್ತು ಇಲ್ಲಿನ ರಾಷ್ಟ್ರೀಯತೆಯಲ್ಲಿಯೂ ಸಹ) ತಾನು ಪೌರುಷಹೀನ ಎಂದು ಸುಪ್ತವಾಗಿ ಅಡಗಿರುವ ಒಂದು ಆತಂಕವೇ ಕಾರಣವಿರಬಹುದು. ದೀರ್ಘಕಾಲದ ವಸಾಹತು ಅನುಭವವು ಭಾರತೀಯರ ಮೇಲೆ ಮಾಡಿರುವ ಒಂದು ಪರಿಣಾಮವೆಂದರೆ ತನ್ನನ್ನು ತಾನು ಐರೋಪ್ಯ ಗಂಡಸಿನೊಂದಿಗೆ ಹೋಲಿಸಿ ನೋಡಿಕೊಳ್ಳುವ ರೂಢಿಯನ್ನು ಅದು ಇಲ್ಲಿ ಸೃಷ್ಟಿಸಿದೆ. ಆ ಐರೊಪ್ಯ ಗಂಡಸಿನಿಂದ ಮನ್ನಣೆ ಪಡೆಯುವ ಒಂದು ಸ್ಥಳವಾಗಿ,ಸಾಧ್ಯತೆಯಾಗಿ ಗಿನ್ನೆಸ್ ಪುಸ್ತಕವು ಗೋಚರವಾಗುತ್ತದೆ.

%%%%%%

ಲೇಖಕರ ಪರಿಚಯ :- ಜಾನ್ ಹಾಪ್ ಕಿನ್ಸ್ ಮತ್ತು ಯೂನಿವರ್ಸಿಟಿ ಆಫ್ ಷಿಕಾಗೊಗಳಲ್ಲಿ ಅಭ್ಯಾಸ ಮುಗಿಸಿದ ವಿನಯ ಲಾಲ್  ಪ್ರಸ್ತುತ ಲಾಸ್ ಏಂಜಲೀಸ್ ನ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇತಿಹಾಸೇತರ ಸ್ವರೂಪದ ಗತಕಾಲದ ಕಥನಗಳನ್ನು ಕುರಿತು ವಿಶೇಷ ಅಧ್ಯಯನಗಳನ್ನು ಪ್ರಸ್ತುತಪಡಿಸುವ ಅವರ ಈಚಿನ ಪುಸ್ತಕ–‘ದಿ ಹಿಸ್ಟರಿ ಆಫ್ ಹಿಸ್ಟರಿ:ಪಾಲಿಟಿಕ್ಸ್ ಎಂಡ್ ಸ್ಕಾಲರ್ಷಿಪ್ ಇನ್ ಮಾಡ್ರನ್ ಇಂಡಿಯಾ (ಡೆಲ್ಲಿ: ಆಕ್ಸ್ ಫರ್ಡ್ , ೨೦೦೩)

   %%%%%%

 

  ಭೂಪಟಗಳು 

 ಮೂಲಲೇಖಕರು : ಶಂಕರನ್ ಕೃಷ್ಣ                                                ಕನ್ನಡಕ್ಕೆ: ಜಸವಂತ ಜಾಧವ 

ಭೂಪಟಗಳನ್ನು ವಿನ್ಯಾಸಗೊಳಿಸುವುದು ಮತ್ತು ವ್ಯಾಖ್ಯಾನಿಸುವುದು ಎರಡೂ ಕೂಡ ಪ್ರತಿನಿಧೀಕರಣದ ಪದ್ಧತಿಗಳಾಗಿವೆ. ಭೂಪಟವನ್ನು ಹೀಗೆ ಪಟರೂಪದ ಮೂಲಕ ಪ್ರತಿನಿಧಿಸುವ ಭೂಪಟಕರ್ತೃಗಳಿಗೆ ತಮ್ಮ ಕೃತಿಗಳ ಬಗ್ಗೆ ಎಂತಹ ಅಸೀಮವಾದ ನಂಬುಗೆಯಿರುತ್ತದೆಯೆಂದರೆ, ಪಟರೂಪವು ಎಲ್ಲ ಅಂಶಗಳಲ್ಲೂ ಭೂರೂಪದ ಪ್ರತಿಕೃತಿಯೇ ಆಗಿರುತ್ತದೆಯೆಂದು ಅವರು ತಿಳಿಯಬಯಸುತ್ತಾರೆ. ಅಷ್ಟೇ ಅಲ್ಲ ಆ ತಿಳುವಳಿಕೆಯಲ್ಲಿ ಕೊನೆಗೆ, ಪ್ರತ್ಯಾಕೃತಿಗಳು ವಾಸ್ತವಾಕೃತಿಗಳಿಗಿಂತಲೂ ಮಿಗಿಲಾಗುವ ಮತ್ತು ಅದರ ಸ್ಥಾನ ಮಾನಗಳನ್ನು ತಾವೇ ಆಕ್ರಮಿಸಿಕೊಳ್ಳುವ ಒಂದು ಘಟ್ಟವೂ ಬಂದು ಹೋಗುತ್ತದೆ. ಭೂಪಟಶಾಸ್ತ್ರದ ಇತಿಹಾಸ ಹಾಗೂ ಅದರ ವರ್ತಮಾನ ತೋರುವಂತೆ ಭೂಪಟಗಳ ರಚನಾಕ್ರಮದ ಯಾವೊಂದು ಅಂಶವೂ ವಾದ–ವಿವಾದಗಳಿಂದ ಮುಕ್ತವಾಗಿಲ್ಲ.

ಹಳ್ಳಿಗಾಡಿನಲ್ಲಿ ದಿಕ್ಕು ದಾರಿ ತಿಳಿಹೇಳುವಾಗ ಮಾನವರು ತಮ್ಮ ಮಾಹಿತಿರಾಶಿಯನ್ನು ಗಿಡಮರ–ಕಾಡುಗಳು ಇತ್ಯಾದಿಯಾದ ಪ್ರಾಕೃತಿಕ ಗುರುತುಗಳ ಸುತ್ತ ಹೆಣೆದು ಹೇಳುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಇದೆ ಪ್ರಕೃತಿ-ಪರಿಸರಗಳು ಆಧುನಿಕರಿಗೆ ಗೋಚರಿಸುವುದು ನಿರ್ಜೀವ ಭೂವಲಯವೊಂದಾಗಿ; ಹಾಗಾಗಿ ಅವರು ಮಾರ್ಗಸೂಚಿ ನೀಡುವಾಗ ಹೇಳುವುದು ‘ಇದೆ ರಸ್ತೆಯಲ್ಲಿ ನೇರ ಐವತ್ತು ಅಡಿ ಹೋಗಿ, ಅಲ್ಲಿ ಎಡಕ್ಕೆ ಸಿಗುವ ಮೂರನೇ ತಿರುವಿನಲ್ಲಿ ಹೊರಳಿ’ ಇತ್ಯಾದಿಯಾಗಿ. ಇಲ್ಲಿ ಕಂಡುಬರುವ ಐವತ್ತು, ನೇರ, ರಸ್ತೆ, ಎಡ, ಮೂರನೆಯ ತಿರುವು ಎಂಬುದೆಲ್ಲವೂ ಸಂಖ್ಯಾ ಪ್ರಧಾನವೂ, ದ್ವಿ–ಆಯಾಮ ಸೀಮಿತವೂ ಸರಳ ರೇಖಾತ್ಮಕವೂ ಆದ ಆಧುನಿಕ ಜಗದೃಷ್ಟಿಯ ಚಿನ್ಹೆಗಳಾಗಿವೆ.  ಈ  ದೃಷ್ಟಿ ಕ್ರಮಕ್ಕೂ, ಬಾಗುತ್ತ ಬಳಕುತ್ತ ಇಂದ್ರಿಯಾನುಭಾವದಿಂದ ತುಳುಕುತ್ತ ಅಳತೆಗಳಲ್ಲಿ ಅತಿ ನಿಖರತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂದಾಜು ಅಂಶಗಳನ್ನೇ ಬಳಸುವ ಆಧುನಿಕ ಪೂರ್ವ ದೃಷ್ಟಿ ಕ್ರಮಕ್ಕೂ ಇರುವ ಪ್ರತ್ಯೇಕತೆ ಅಗಾಧವಾದುದು. ಹೀಗೆ ದೇಶ–ಪರಿಸರ (space)ಗಳನ್ನು ಬರಿದೇ ಪದಾರ್ಥಗಳನ್ನು ತುಂಬಿಕೊಂಡ ಪೆಟ್ಟಿಗೆಗಳಂತೆ ಕಾಣುವ ಈ ಆಧುನಿಕ ಮನೋಭಾವದಲ್ಲಿ ಅಂತಸ್ಥವಾಗಿರುವ ಹಿಂಸಾಗುಣ ಅಂತಿಮವಾಗಿ ದೇಶ–ಸಮಾಜಗಳ ವಿಭಜನೆಗೂ, ಸಮಾಜ ಶುದ್ಧೀಕರಣದ ಹೆಸರಿನಲ್ಲಿ ನಡೆಯುವ ಪರ ಸಮುದಾಯಗಳ ಕಗ್ಗೊಲೆಗೂ, ಪ್ರಾಣಿ–ಪಕ್ಷಿ–ಸಸ್ಯ–ಮಾನವ ಸಂಕುಲಗಳಾವುದಕ್ಕೂ ಕಾಳಜಿ ತೋರದೆ ನಿರ್ದಿಷ್ಟ ಪ್ರದೇಶಗಳ ಅಂಗುಲಂಗುಲದ ಮೇಲೂ ಅಗ್ನಿಗಂಬಳಿ ಹಾಸುವಂತೆ ವಾಯು ಸೈನ್ಯಗಳು ನಡೆಸುವ ಕಾರ್ಪೆಟ್–ಬಾಂಬಿಗಿಗೂ, ಬೃಹತ್ ಸಂಖ್ಯೆಯಲ್ಲಿ ಜನರನ್ನು ಕೊಲ್ಲುವುದಷ್ಟೇ ಅಲ್ಲದೆ ಜೀವವುಳಿದವರನ್ನು ಜೀವಾವಧಿ ಅನೂಹ್ಯವಾದ ಬಾಧೆಗಳಿಗೆ ಗುರಿ ಮಾಡುವಂತಹ ನೆಪಾಮ್(=ಪೆಟ್ರೋಲ್ ಆಧಾರಿತ) ಬಾಂಬಿನ ಬಳಕೆಗೂ ಕಾರಣವಾಗಬಲ್ಲದು: ಈಗಾಗಲೇ ಕಾರಣವಾಗಿದೆ ಕೂಡ. ಈ ಎಲ್ಲಾ ಭೀಕರತೆಗಳ ಬೀಜ ಆಧುನಿಕ ಭೂಪಟ ನಿಯಂತ್ರಿತ ವ್ಯವಸ್ಥೆಯ ಒಳಗೆಯೇ ಅಡಗಿರುವುದು. ಭೂಪಟಗಳು ವೈಜ್ಞಾನಿಕ, ತರ್ಕಶಕ್ತಿ, ಪ್ರಗತಿಗಾಮಿ ಆದ ವಿಧಾನಗಳನ್ನೇ ಆಧರಿಸಿದೆ ಎಂದು ನಂಬಿಸಲು ಅದರ ಪರವಾಗಿರುವವರು ಪ್ರಯತ್ನಿಸುತ್ತಿದ್ದರೂ ಸಹ ಭೂಪಟ ಪ್ರಜ್ಞೆಯನ್ನು ಪರಮಾಧಾರವಾಗಿಟ್ಟುಕೊಂಡು ನಡೆದಿರುವ ಹಾಗೂ ನಡೆಯುತ್ತಿರುವ ಹಿಂಸಾಕಾಂಡಗಳು ತೋರುವ ಸತ್ಯ ಬೇರೆಯೇ ಬಗೆಯದಾಗಿದೆ.

ತೃತೀಯ ಜಗತ್ತಿನಲ್ಲಿಂದು, ಅತಿ ಸ್ಪಷ್ಟ ಹಾಗೂ ಸ್ಥಿರೀಕೃತ ಗಡಿಗಳಿಂದ ನಿರ್ಮಾಣಗೊಂಡ ರಾಷ್ಟ್ರಾಕೃತಿಗೆ ನಿಷ್ಠೆಯಿಂದ ನಡೆದುಕೊಳ್ಳುವುದೇ ವಸಾಹತ್ತೋತ್ತರ ಅಭಿವೃದ್ಧಿಯ ಪರಮ ಮಾರ್ಗ ಎಂಬ ನಂಬುಗೆ ಆಳವಾಗಿ ಬೇರೂರಿದೆ.  ಇಡೀ ತೃತೀಯ ಜಗತ್ತಿನಲ್ಲಿ ಸರಿಸುಮಾರು ಎಲ್ಲಾ ಸೀಮೆಗಳೂ ಹಾಗೂ ಗಡಿಗಳೂ ವಿವಾದಗ್ರಸ್ತವಾಗಿವೆ. ಇವುಗಳಲ್ಲಿ ಹಲವು ರಾಷ್ಟ್ರಗಳು ತಮ್ಮ ನೆರೆಹೊರೆಯವರ ಮೇಲೆ ನಕ್ಷಾ ಸಂಬಂಧಿ  ಆಕ್ರಮಣಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿವೆ.

ಆಧುನಿಕ ನಕ್ಷಾನಿಷ್ಠ ಜಗದ್ ಪ್ರಜ್ಞೆ ಏಕರೂಪತೆಯೆಂಬ ಅಸಾಧ್ಯ ಅಸಹಜ ಆದರ್ಶದ ಸಂಮೋಹದಲ್ಲಿ ಸಿಲುಕಿಕೊಂಡಿರುವಂಥದು. ಅಂದರೆ ಪ್ರತಿಯೊಂದು ರಾಷ್ಟ್ರವೂ ಸುಸ್ಪಷ್ಟ ಗಡಿಗಳಿಂದ ರಚಿತವಾಗಿರಬೇಕು. ಅಂತಹ ಪ್ರತಿಯೊಂದು ಭೂಭಾಗದಲ್ಲಿಯೂ ಸುಸ್ಪಷ್ಟವೂ ಏಕರೂಪಿಯೂ ಆದ ರಾಷ್ಟ್ರೀಯತೆಯ ಭಾವವನ್ನು ಹೊಂದಿರುವಂತಹ ಜನಗಳೇ ವಾಸವಾಗಿರಬೇಕು ಎಂಬುದು ಅದರ ಆದರ್ಶ ವಾಸ್ತವದ ಕಲ್ಪನೆಯಾಗಿದೆ. ಅಟ್ಲಾಸುಗಳಲ್ಲಿ ಕಂಡುಬರುವ ಬಹುವರ್ಣ ರಾಜಕೀಯ ಪಟಗಳು ತಮ್ಮ ಕರಾರುವಾಕ್ಕು ಗಡಿರೇಖೆಗಳು ಹಾಗೂ ವಿವಿಧ ವರ್ಣಗಳೊಂದಿಗೆ ಚಿತ್ರವತ್ತಾಗಿಯೂ ಅಹ್ಲಾದಕರವಾಗಿಯೂ ಗೋಚರಿಸುವುದೇನೋ ಹೌದು. ಆದರೆ ಆ ಚಿತ್ತಾಕರ್ಷತೆಯ  ಹಿಂದೆ  ವ್ಯಕ್ತಿ–ಸಮುದಾಯ– ವಿದ್ಯಮಾನಗಳ ಬಹುಮುಖಗಳನ್ನು ಅಸ್ಪಷ್ಟರೂಪಗಳನ್ನು ಒಪ್ಪಿಕೊಳ್ಳಲಾರದಂತಹ ಆಳ ಅಸಹನೆಯ ಮನೋಧರ್ಮವೊಂದು ಅಡಗಿ ಕುಳಿತಿದೆ. ಸಮಾಜ ಜೀವನವೆನ್ನುವುದು ಮ್ಯಾಪುಗಳ ರೂಪಕದ ಚೌಕಟ್ಟಿನಾಚೆಗೂ ಇರುವಂತಹುದು ಎಂಬ ಸರಳ ಸತ್ಯವನ್ನು ಸ್ವೀಕರಿಸಲು ಆಶಕ್ತವಾದ ಈ ಮನೋಭಾವ ತನ್ನ ಪರಾಕಾಷ್ಟೆಯನ್ನು ಮುಟ್ಟಿರುವುದು ಇಂದು ತಮ್ಮ ತಮ್ಮ ಗಡಿ ಗಟ್ಟಿಗೊಳಿಸಿಕೊಂಡಿರುವ ಬಹಳಷ್ಟು ದೇಶ ಪ್ರದೇಶಗಳಲ್ಲಿ, ಅಲ್ಲಿ ಬಲಪ್ರಯೋಗದಿಂದಾದರೂ ಅನ್ಯತ್ವಗಳನ್ನು ನಾಶಗೈದಾದರೂ ಏಕರೂಪಿ ಸ್ವತ್ವಗಳನ್ನು ಸ್ಥಾಪಿಸಲು ಹೊರಟಿರುವ ನಿರ್ದಯ,ನಿರ್ನಾಮಕ ಯೋಜನೆಗಳಲ್ಲಿ.

ಇಂದು ಸಿದ್ಧಿಯಾಗಿರುವ ಕಂಪ್ಯೂಟರ್ ಇಮೇಜಿಂಗ್ ತಂತ್ರಗಳನ್ನೂ.  ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಯೋಗ್ರಾಫಿಕ್ ಇನ್ಫರ್ಮೇಷನ್ ಸಿಸ್ಟಮ್ –ಜಿ ಪಿ ಎಸ್) ಎಂಬ ಹೆಸರಿನಡಿಯಲ್ಲಿ ಒಗ್ಗೂಡಿಸಲ್ಪಟ್ಟಿರುವ ಅತ್ಯಾಧುನಿಕ ಮಾಹಿತಿ ಸಂಸ್ಕರಣ ತಂತ್ರಜ್ಞಾನಗಳ ಅಪರಿಮಿತ ಗಣನ ಬಲವನ್ನೂ ಬಳಿಸಿಕೊಂಡು ಪಟ ವಾಸ್ತವ (ಭೂಪಟದಲ್ಲಿರುವಂತಹುದು) ಮತ್ತು ದಿಟ ವಾಸ್ತವಗಳ (ನಿಜವಾಗಿ ಇರುವಂತಹುದು) ನಡುವೆ ಈವರೆಗೂ ಉಳಿದುಕೊಂಡಿರುವ ಅಂತರವನ್ನು ಇನ್ನು ನಿಶ್ಚಿತವಾಗಿ ಅಳಿಸಿಹಾಕಬಹುದೆಂಬ ವಾದ ಕೇಳಿಬರುತ್ತಿದೆ. ತಂತ್ರಜ್ಞಾನವು ಸಮಾಜದಿಂದಲೂ, ಅಧಿಕಾರ/ಪ್ರಾಬಲ್ಯಗಳ ಪ್ರಶ್ನೆಗಳಿಂದಲೂ ಸಂಪೂರ್ಣವಾಗಿ ಮುಕ್ತವಾದುದಲ್ಲ. ಪಟಾಂಧ(ಭೂಪಟ) ಬುದ್ಧಿ ಅತ್ಯಂತ ಅಪಾಯಕಾರಿಯಾದುದು. ಭೂಪಟಗಳು ಎಂದೆಂದಿಗೂ ನಾವು ಕೆಲವರು ಪರರ  ಮೇಲೆ ಸಾಧಿಸಿದ ಆಧಿಪತ್ಯದ ಪತಾಕೆಗಳು.

%%%%%%%

 ಲೇಖಕರ ಪರಿಚಯ :- ಮನೋವಾದ ಹವಾಯಿ ವಿ ವಿ ಯ ಸೆಂಟರ್ ಫಾರ್ ಸೌತ್ ಏಷಿಯನ್ ಸ್ಟಡೀಸ್ ವಿಭಾಗದಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಶಂಕರನ್ ಕೃಷ್ಣ ಅವರು ಸಮಕಾಲೀನ ಭಾರತದ ರಾಜಕಾರಣ ಮತ್ತು ಅಂತರಾಷ್ಟ್ರೀಯ ಸಂಬಂಧಗಳನ್ನು ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರ ಪ್ರಮುಖವಾದ ಕೃತಿ–‘ಪೋಸ್ಟ್ ಕಲೋನಿಯಲ್ ಇನ್ ಸೆಕ್ಯುರಿಟಿಸ್ :ಇಂಡಿಯಾ,ಶ್ರೀಲಂಕಾ ಅಂಡ್ ದಿ ಕ್ವೆಶ್ಚನ್ ಆಫ್ ನೇಶನ್ ಹುಡ್’ (ಯೂನಿವರ್ಸಿಟಿ ಆಫ್ ಮಿನೆಸೋಟಾ ಪ್ರೆಸ್, ೧೯೯೯)

%%%%%%%

ನಿಲುಮೆಗಾಗಿ ಸಾರಾಂಶ ಮಾಡಿದ್ದು :-  ಮು.ಅ ಶ್ರೀರಂಗ ಬೆಂಗಳೂರು

 

ಮುಂದಿನ ಭಾಗದಲ್ಲಿ :- (೧) ಬಡತನ  ಮತ್ತು (೨) ಮಾರ್ಕ್ಸ್ ವಾದ 

———————————————————————————————————————————————————————————————

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments