ವಿಷಯದ ವಿವರಗಳಿಗೆ ದಾಟಿರಿ

ಜುಲೈ 31, 2014

8

ಮತ್ತೆ ಮತ್ತೆ ಬರಲಿ ಮಗಳ ದಿನ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

ಕಲ್ಪನಾ ಚಾವ್ಲಾಪ್ರತಿವರ್ಷ ಜ.12, ಸೆ.4 ಮತ್ತು ಸೆಪ್ಟೆಂಬರ್ ಕೊನೆಯ ಭಾನುವಾರ ಹೀಗೆ ವಿವಿಧ ದಿನಗಳನ್ನು ವಿವಿಧ ಸಂಘಟನೆಗಳು ಮಗಳ ದಿನವನ್ನಾಗಿ ಆಚರಿಸುತ್ತವೆ. ಆದರೆ ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಖಗೋಳ ವಿಜ್ಞಾನಿ ದಿ.ಕಲ್ಪಾನಾಚಾವ್ಲಾ ಹುಟ್ಟಿದ ದಿನವನ್ನು (ಜುಲೈ 1) ಮಗಳ ದಿನವನ್ನಾಗಿ ಆಚರಿಸುವಂತೆ 2006ರಲ್ಲಿ ಕರೆನೀಡಿತ್ತು. ಆ ವರ್ಷ ಬಹಳಷ್ಟು ಸಂಘ ಸಂಸ್ಥೆಗಳು ಜುಲೈ ತಿಂಗಳು ಪೂರಾ ಕಲ್ಪನಾ ಚಾವ್ಲಾ ಅವರ ಜನ್ಮದಿನೋತ್ಸವವನ್ನು ಮಗಳ ದಿನದ ರೂಪದಲ್ಲಿ ಆಚರಿಸಿದ್ದ ವರದಿಗಳನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ಆ ನಂತರ ಆ ನಿಟ್ಟಿನಲ್ಲಿ ಯಾವುದೇ ಆಚರಣೆಗಳು ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ. ಇದಕ್ಕೆ ಆಡಳಿತಗಳಾಗಲೀ, ಸ್ಥಳೀಯ ಸಂಘ-ಸಂಸ್ಥೆಗಳಾಗಲೀ ಯಾವುದೇ ಮಹತ್ವ ನೀಡಿಲ್ಲ. ಹಾಗಾಗಿ ಈ ತಿಂಗಳಲ್ಲಿ ಮತ್ತೊಮ್ಮೆ ಕಲ್ಪನಾ ಚಾವ್ಲಾ ನೆನಪು ಮೂಡಿಸಿ ಕೋಟಿ ಕೋಟಿ ಹೆಣ್ಣುಮಕ್ಕಳಿಗೆ ಆಕೆ ಸ್ಪೂರ್ತಿಯ ಅನುಕರಣೀಯ ಮಾದರಿ ಆಗುವಂತೆ ಮಾಡಬೇಕಿದೆ.

ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಕುರಿತ ನೂರಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಮಹಿಳಾ ಆಯೋಗಗಳು ರಚನೆಯಾಗಿವೆ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆಯೇ ಕಾನೂನುಬದ್ಧ ಆಸ್ತಿ ಹಕ್ಕು ನೀಡಲಾಗಿದೆ. ಆದರೂ ಇಂದಿಗೂ ಹೆಣ್ಣು ಮಕ್ಕಳ ಸಾಮಾಜಿಕ ಹಾಗೂ ಕೌಟುಂಬಿಕ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಎಂತಹ ಕಠಿಣ ಕಾನೂನು ಮಾಡಿದರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಒಂದು ವರದಿ ಪ್ರಕಾರ ಭಾರತದಲ್ಲಿ ಪ್ರತಿ 22 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. ಎಷ್ಟೋ ಸಾವಿರಾರು ಪ್ರಕರಣಗಳು ದಾಖಲೆಯೇ ಆಗದೆ ಅರೋಪಿಗಳು ಕಾನೂನಿನ ಕೈಯ್ಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಂತಸ್ತು ಗೌರವದ ಹೆಸರಿನಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಾಜಕೀಯ ಶಕ್ತಿ ದೊರಕಿಸಿಕೊಡುವ ಶೇ.33 ಮೀಸಲಾತಿ ಮಸೂದೆ ವರುಷಗಳಿಂದ ನೆನೆಗುದಿಗೆ ಬಿದ್ದಿದೆ. ಏನೆಲ್ಲಾ ಹೋರಾಟದ ನಡುವೆಯೂ ಪುರುಷ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳಿಂದ ಲಕ್ಷಾಂತರ ಮಹಿಳೆಯರು ಹೊರಬರಲಾಗಿಲ್ಲ. ಪರಿಪೂರ್ಣ ಸ್ವಾತಂತ್ಯ್ರದ ಬೆಳಕು ಕಾಣಲಾಗಿಲ್ಲ ಎಂಬುದೇ ದೊಡ್ಡ ದುರಂತ.

ಇದಕ್ಕೆಲ್ಲಾ ಕಾರಣ ಪರಂಪರಾಗತವಾಗಿ ಬಂದಿರುವ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಲಿಂಗತ್ವದ ಪರಿಕಲ್ಪನೆ. ನಮ್ಮ ವಿದ್ಯಾವಂತ ಸಮಾಜವೂ ಸಹ ಈ ಲಿಂಗತ್ವದ ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರಬರಲಾಗದೆ ತೊಳಲಾಡುತ್ತಿದೆ. ಖ್ಯಾತ ಸ್ತ್ರೀವಾದಿ ಆನ್ ಓಕ್ಲೆ ಪ್ರಕಾರ ಲಿಂಗ ಮತ್ತು ಲಿಂಗತ್ವದ ನಡುವಿನ ಸಂಬಂಧ ತೀರಾ ಅಸಹಜವಾದುದು. ಲಿಂಗತ್ವಕ್ಕೂ ಸಂಸ್ಕøತಿಗೂ ತಳುಕು ಹಾಕಿ ಅದನ್ನು ಸಂಪ್ರದಾಯದ ಹಿನ್ನಲೆಯಲ್ಲಿ ವರ್ಗೀಕರಿಸಿ ಸಾಂಸ್ಕøತಿಕ ಪರಿಭಾಷೆಯ ಚೌಕಟ್ಟಿನಲ್ಲಿ ತಾರತಮ್ಯದ ಜವಾಬ್ಧಾರಿಯನ್ನು ಆರೋಪಿಸಲಾಗಿದೆ. ಈ ಕಲ್ಪನೆಯ ಭಾಗವೇ ಗಂಡ್ತನ ಮತ್ತು ಹೆಣ್ತನ. ಪ್ರತಿಯೊಂದು ಸಮಾಜವೂ ವ್ಯವಸ್ಥಿತವಾಗಿ ಗಂಡು ಹೆಣ್ಣಿನಲ್ಲಿ ಈ ಲಿಂಗತ್ವದ ಗುಣಗಳನ್ನು ಹೇರಿ ಅವರ ಹಕ್ಕುಗಳು, ನೀರೀಕ್ಷೆಗಳು ಜವಾಬ್ಧಾರಿಗಳು ಎಲ್ಲದರಲ್ಲೂ ಶ್ರೇಷ್ಠ,ಕನಿಷ್ಟ ಎಂಬ ಭಾವನೆ ಮೂಡುವಂತೆ ಪರಿವರ್ತಿಸಲಾಗುತ್ತದೆ. ಇದಕ್ಕೇ ಸಂಸ್ಕøತಿ ಎಂಬ ಹೆಸರಿಟ್ಟು ಅವರ ವರ್ತನೆಗಳನ್ನು ಈ ಸಾಂಸ್ಕøತಿಕ ಮಾನದಂಡದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಸಾಂಸ್ಕøತಿಕ ಚಹರೆಗಳು,ಮಾನದಂಡಗಳು, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಹಾಗಾಗಿ ಸಮಾಜ ಲಿಂಗದ ಸ್ಥಿರತೆಯನ್ನು ಒಪ್ಪಿಕೊಂಡಂತೆಯೇ ಲಿಂಗತ್ವದ ಬದಲಾಗುವ ಚಲನಶೀಲ ತಾರತಮ್ಯದ ಸ್ವರೂಪಗಳನ್ನೂ ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಲಿಂಗತ್ವದ ಈ ಹಿನ್ನಲೆಯಲ್ಲಿಯೇ ಗಂಡು ಮತ್ತು ಹೆಣ್ಣುಗಳ ಪಾತ್ರಗಳನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತದೆ. ಗಂಡು ಹುಟ್ಟಿದೊಡನೆ ಸಂಭ್ರಮಿಸಿ ಹೆಣ್ಣನ್ನು ಹೀಗಳೆಯಲಾಗುತ್ತದೆ. ಮಕ್ಕಳ ಉಡುಗೆ ತೊಡುಗೆ, ವರ್ತನೆಗಳಲ್ಲಿ ಪರಂಪರಾಗತ ಸಿದ್ಧ ಮಾದರಿಗಳನ್ನು ಅನುಕರಿಸುವಂತೆ ಒತ್ತಡ ಹೇರಲಾಗುತ್ತದೆ. ಈ ಅನುಕರಣೆಯ ವರ್ತನೆ,ಧೋರಣೆ ಮತ್ತು ಪಾತ್ರಗಳನ್ನು ಅಪ್ರಜ್ಞಾಪೂರ್ವಕವಾಗಿ ಅವರಲ್ಲಿ ಅಂತರ್ಗತವಾಗುವಂತೆ ರೂಢಿಸಲಾಗುತ್ತದೆ. ಸಿದ್ಧಮಾದರೀಕರಣ ಮತ್ತು ಸಿದ್ಧಮಾರ್ಗನಿರ್ದೇಶನದ ಮೂಲಕ ಗಂಡಿಗೆ ಶೌರ್ಯ, ಪರಾಕ್ರಮ, ಯಜಮಾನಿಕೆ ಪಟ್ಟ ಕಟ್ಟಲಾಗುತ್ತದೆ. ಅವನನ್ನು ವಿವೇಕಿ, ಧೈರ್ಯಶಾಲಿ, ವ್ಯಾಪಾರ,ವ್ಯವಹಾರ ಕುಶಲ, ಸ್ವತಂತ್ರ ಜೀವಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸಲಾಗುತ್ತದೆ. ಹೆಣ್ಣಿಗೆ ಅಬಲೆ,ಮನೆ ಕೆಲಸಕ್ಕೆ ಲಾಯಕ್ಕಾದವಳು, ಮಕ್ಕಳನ್ನು ಹೆತ್ತು ಸಾಕುವವಳು ಎಂದು ಪರಿಭಾವಿಸಲಾಗುತ್ತದೆ. ಹೆಣ್ತನದಂತೆಯೇ ತಾಯ್ತನವೂ ವಂಶವಾಹಿನಿಯಾಗಿ ಹರಿದು ಬಂದದ್ದು. ಮಕ್ಕಳನ್ನು ಪೋಷಿಸುವುದು ಅವಳ ಆದ್ಯ ಕರ್ತವ್ಯ ಎಂದು ಭಾವಿಸಲಾಗುತ್ತದೆ. ಗಂಡು ಆಳ್ವಿಕೆಯ ಪ್ರಭುತ್ವವನ್ನು ಪಡೆದರೆ ಹೆಣ್ಣು ಅಧೀನತೆಯ ಊಳಿಗಮಾನ್ಯದ ಸಂಕೇತವಾಗುತ್ತಾಳೆ. ಸಾಮಾಜಿಕ ಸಂಸ್ಥೆಗಳಲ್ಲೂ ಗಂಡಿಗೆ ಮಾನ್ಯತೆ ನೀಡಲಾಗುತ್ತದೆ.ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಗಂಡಿಗೆ ಆದ್ಯತೆ ನೀಡಲಾಗುತ್ತದೆ. ಅರ್ಥಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಪಾತ್ರಗಳಿಗೆ ಪುರುಷನೇ ಶ್ರೇಷ್ಠ ಎಂಬ ಭಾವನೆ   ಹೆಣ್ಣು ಮಕ್ಕಳ ಚಲನಶೀಲತೆ, ವೈಯಕ್ತಿಕ ಘನತೆ ಹಾಗೂ ಸಾಮಾಜಿಕ ಸ್ವಾತಂತ್ಯ್ರವನ್ನು ನಿಯಂತ್ರಿಸುತ್ತದೆ. ಹಿಂದಿನ ಮಾತೃಯಜಮಾನ್ಯದ ಸಮಾಜದಲ್ಲಿ ಹೆಣ್ತನವನ್ನು ಎಲ್ಲಾ ಮಾನವೀಯ ಗುಣಗಳ ಒಂದು ಮಾದರಿಯಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಆ ವ್ಯಾಖ್ಯಾನ ಬದಲಾಗಿದೆ. ಇಂದು ಆ ಲಿಂಗತ್ವದ ಮಾತೃಯಜಮಾನ್ಯ ಸೃಜನಶೀಲ ಹಾಗೂ ಮಾನವೀಯ ಗುಣಗಳಿಂದ ದೂರ ಸರಿದಿದೆ. ಹೆಣ್ಣಿನ ದೇಹಕ್ಕಿಂತ ಗಂಡಿನ ಬುದ್ದಿ, ಅವಳ ಪ್ರಕೃತಿಗಿಂತ ಗಂಡಿನ ರೂಢಿಗತ ಸಂಸ್ಕøತಿ, ಹೆಣ್ಣಿನ ಭಾವನೆಗಿಂತ ಗಂಡಿನ ವಿವೇಕವೇ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಅವಳು ಖಾಸಗಿ ಸೊತ್ತು ಹಾಗೂ ಪುರುಷ ಸಾರ್ವಜನಿಕ ಅಸ್ತಿತ್ವ ಉಳ್ಳವನು ಎಂದು ಪರಿಭಾವಿಸಲಾಗುತ್ತದೆ. ಹೆಣ್ಣು ಒಂದು ಅಗ್ಗದ, ಭೋಗದ ಗಂಡಿನ ಸೃಷ್ಟಿ ಎಂದು ಪರಿಗಣಿಸಿ ಅವಳ ಮೇಲೆ ಅಧಿಕಾರ ಸ್ಥಾಪನೆ ಮಾಡಲಾಗುತ್ತದೆ. ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲೂ ಪುರುಷರಿಗೇ ಮಣೆ,ಮನ್ನಣೆ! ಮಹಿಳೆಯರ ಸರ್ವತೋಮುಖ ಅಭಿವೃದ್ದಿಯ ದೃಷ್ಟಿಯಿಂದಲೂ ಲಿಂಗತ್ವ ಒಂದು ದೊಡ್ಡ ತೊಡಕಾಗಿದೆ. ಅಭಿವೃದ್ದಿ ಯೋಜನೆಗಳು ತೀರಾ ಈಚಿನವರೆಗೆ ಲಿಂಗತ್ವಕ್ಕೆ ಕುರುಡಾಗಿ ಮಹಿಳೆಯರ ಆಸಕ್ತಿ, ಅಗತ್ಯ ಮತ್ತು ದೃಷ್ಟಿಕೋನಗಳನ್ನು ಮೂಲೆಗುಂಪು ಮಾಡುತ್ತಾ ಬಂದಿವೆ. ಮಹಿಳೆಯ ಶ್ರಮ ಸಂಸ್ಕøತಿಯನ್ನು ತೀರಾ ನಿಕೃಷ್ಟವಾಗಿ ನೋಡಿ ಆರ್ಥಿಕವಾಗಿ ಆಕೆಯ ಕಾಣಿಕೆ ಏನೂ ಇಲ್ಲ ಎಂಬಂತೆ ಪರಿಗಣಿಸಲಾಗಿದೆ.

ಇವೆಲ್ಲಾ ಈಗಾಗಲೇ ಬಹುಚರ್ಚಿತ ವಿಷಯಗಳೇ ಆಗಿವೆ. ಆದರೆ ಇಂದಿಗೂ ಅವಿದ್ಯಾವಂತರಿರಲಿ, ವಿದ್ಯಾವಂತರಲ್ಲೇ ಲಿಂಗತ್ವದ ಪೂರ್ವಗ್ರಹಗಳು ಹೋಗಿಲ್ಲ ಎಂಬುದು ವಿಷಾಧದ ಸಂಗತಿ. ಮೊನ್ನೆ ಅಧಿಕಾರಿ ಮಿತ್ರರೊಬ್ಬರು ತಮ್ಮ ಮಗಳನ್ನು ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ದೊರಕಿಸಿಕೊಡುವ ಸಂದರ್ಭದಲ್ಲಿ ಹೇಳಿದ್ದು ಹೀಗೆ:” ಹೆಣ್ಣು ಮಕ್ಕಳಿಗೆ ಏನು ಓದಿಸಿ ಏನು ಪ್ರಯೋಜನ? ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತೇವೆ. ಓದು ಮುಗಿಯುವ ಹೊತ್ತಿಗೆ ಮದುವೆಗೆ ಬರುತ್ತಾರೆ.ಮದುವೆ ಮಾಡಿ ಕಳಿಸಲು ಮತ್ತೆ ಒಂದಿಷ್ಟು ಲಕ್ಷ ಖರ್ಚು ಮಾಡಬೇಕು. ಓದಿಸದೆ ಇರುವ ಹಾಗೂ ಇಲ್ಲ. ನಮ್ಮ ಜಾತಿಯಲ್ಲಿ ಗಂಡುಗಳು ಓದಿರುವ ಹುಡುಗಿಯನ್ನೇ ಮದುವೆಯಾಗಲು ಬಯಸುತ್ತಾರೆ.” ಇದಕ್ಕೆ ಏನು ಹೇಳುವುದು? ಹೆಣ್ಣು ಎಂಬ ಕೇವಲ ಒಂದು ಕಾರಣ ಈ ಪರಿವರ್ತನೆಯ ಯುಗದಲ್ಲೂ ಆಕೆಯ ಸ್ವಾತಂತ್ಯ್ರ, ಶಿಕ್ಷಣ,ಉದ್ಯೋಗಾವಕಾಶ, ಸ್ವಾವಲಂಬನೆ ಕಿತ್ತುಕೊಳ್ಳುವುದಾದರೆ ಮಹಿಳೆಯರಿಗೆ ಸಮಾನತೆ ಎಲ್ಲಿದೆ?

ಈ ದಿನ ನಾವು ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೆಲ ಸಂಕಲ್ಪಗಳನ್ನು ಮಾಡಬೇಕಿದೆ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಜಾಗೃತಿ ಮೂಡಿಸಬೇಕು.ನಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.ಅವರಲ್ಲಿ ಕೀಳರಿಮೆ ಬಾರದಂತೆ ಉತ್ತಮ ಪರಿಸರದಲ್ಲಿ ಬೆಳೆಸಲು ಸಾಮಾಜಿಕ ಭದ್ರತೆ ನೀಡಬೇಕು. ಅವರನ್ನು ವಿಚಾರವಂತರನ್ನಾಗಿ ಮಾಡಿ ಸಾಮಾಜಿಕ ಅನಿಷ್ಠಗಳು, ಮೂಡನಂಬಿಕೆಗಳ ವಿರುದ್ಧ ಹೋರಾಡುವಂತೆ ಪ್ರೇರೇಪಿಸಬೇಕು.ಹೆಣ್ಣು ಮಕ್ಕಳ ಅಭಿವ್ಯಕ್ತ ಸ್ವಾತಂತ್ಯ್ರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಕುಟುಂಬ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಅವರ ಅಭಿಪ್ರಾಯಕ್ಕೆ ಗೌರವ, ಮನ್ನಣೆ ಸಿಗಬೇಕು. ಕೌಟುಂಬಿಕ ನಿರ್ಧಾರಗಳಲ್ಲಿ ಅವರ ಪಾತ್ರ ಮತ್ತು ಮಹತ್ವವನ್ನು ಎತ್ತಿ ಹಿಡಿಯಬೇಕು. ಅವರ ಆರ್ಥಿಕ ಸ್ವಾವಲಂಬನೆಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ನೀಡಬೇಕು. ಅವರಲ್ಲಿ ರಾಜಕೀಯ ಇಚ್ಛಾಶಕ್ತಿ ತುಂಬಿ ಆಡಳಿತಾತ್ಮಕ ವಿಷಯಗಳಲ್ಲಿ ಸ್ವತಂತ್ಯ್ರ ನಿರ್ಧಾರಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಬೇಕು.ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ನಮ್ಮ ಆಸ್ತಿ, ಅವರು ಅನಗತ್ಯ ಹೊರೆಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಸೈನ್ಯವೂ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅವರ ಚಾಪು ಮೂಡಿಸಲು ಅವಕಾಶ ಮಾಡಿಕೊಡಬೇಕು. ಮಹಿಳೆಯರ ಲೈಂಗಿಕತೆ, ಸಂತಾನೋತ್ಪತ್ತಿ, ಉತ್ಪಾದನೆ ಹಾಗೂ ದುಡಿಮೆ, ಆಸ್ತಿಹಕ್ಕು, ಮತ್ತು ಸಾಮಾಜಿಕ,ಸಾಂಸ್ಕøತಿಕ ಹಾಗೂ ರಾಜಕೀಯ ಸಂಸ್ಥೆಗಳಲ್ಲಿ ಅವರನ್ನು ಪುರುಷರ ದಬ್ಬಾಳಿಕೆ ಹಾಗೂ ನಿಯಂತ್ರಣದಿಂದ ತಪ್ಪಿಸಬೇಕು.ಲಿಂಗತ್ವದ ಶ್ರಮವಿಭಜನೆಯ ಉತ್ಪಾದಕ, ಪುನರುತ್ಪಾದಕ ಹಾಗೂ ಸಮುದಾಯ ಕಾರ್ಯಗಳಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರದೂ ಸಮಾನ ಪಾತ್ರ ಎಂಬುದನ್ನು ಮನವರಿಕೆ ಮಾಡಬೇಕು. ಕಾನೂನುಗಳು ಹೆಚ್ಚು ಲಿಂಗತ್ವದ ಸೂಕ್ಷ್ಮತೆ ಹೊಂದಿರುವಂತೆ ತಿದ್ದುಪಡಿ ಮಾಡಲಾಗಿದೆ. ಇವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಿದೆ. ಪುರುಷರು ಮತ್ತು ಮಹಿಳೆಯರ ನಡುವೆ ಅಧಿಕಾರದ ಮರುಹಂಚಿಕೆ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಕಲ್ಪನಾ ಚಾವ್ಲಾ ಭಾರತದ ಹೆಣ್ಣುಮಕ್ಕಳಿಗೆ ಒಂದು ಅಪೂರ್ವ ಮಾದರಿ ಎನಿಸಿದ್ದಾರೆ. ಲಕ್ಷಾಂತರ ಭಾರತೀಯ ಹೆಣ್ಣುಮಕ್ಕಳು ಹಿಡಿದಿಟ್ಟ ವ್ಯವಸ್ಥೆಯಿಂದ ಕನಸು,ನಿರೀಕ್ಷೆಯ ಆಗಸಕ್ಕೆ ಪುಟಿಯಲು ಚೈತನ್ಯದ ಚಿಲುಮೆಯಾಗಿದ್ದಾರೆ. ಪುರುಷ ಪ್ರಧಾನ ಚಿಂತನೆ, ಧೋರಣೆ, ಸಂರಚನೆ ಮತ್ತು ಸಂಸ್ಥೆಗಳನ್ನು ಬದಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಲಿಂಗತ್ವದ ಸೂಕ್ಷ್ಮತೆಯನ್ನು ಅರ್ಥೈಸುವ ಮತ್ತು ಜಾಗತೀಕರಣಗೊಳಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಹೆಣ್ಣುಮಕ್ಕಳ ಸಮಸ್ಯೆ ಹಾಗೂ ಸವಾಲುಗಳಾದ ಅತ್ಯಾಚಾರ, ಕುಟುಂಬ ದೌರ್ಜನ್ಯ, ಹೆಣ್ಣುಭ್ರೂಣ ಹತ್ಯೆ,ಬಾಲ್ಯವಿವಾಹ, ಮರ್ಯಾದಾ ಹತ್ಯೆ ಇವು ಪುರುಷರ ಸಮಸ್ಯೆಗಳ ಪ್ರತಿಫಲನ ಎಂದು ಮನವರಿಕೆ ಮಾಡಿಸಬೇಕಿದೆ. ವಸ್ತುಕೇಂದ್ರಿತ-ವ್ಯಕ್ತಿಕೇಂದ್ರಿತ, ಖಾಸಗಿ ಮತ್ತು ಸಾರ್ವಜನಿಕ ಹಾಗೂ ಸಿದ್ಧಾಂತ ಮತ್ತು ಆಚರಣೆಗಳ ನಡುವಿನ ಪ್ರತ್ಯೇಕತೆಯನ್ನು ನಾಶಮಾಡುವ ಮೂಲಕ ಲಿಂಗತ್ವದ ಸಂಬಂಧಗಳನ್ನು ಸುಧಾರಿಸಬೇಕಿದೆ. ಇದನ್ನು ಪದೇ ಪದೇ ನೆನಪಿಸುವ ನಿಟ್ಟಿನಲ್ಲಿ ಕಲ್ಪನಾ ಚಾವ್ಲಾರಂತಹ ಧೀಮಂತ ಹೆಣ್ಣುಮಕ್ಕಳ ಜನ್ಮದಿನವನ್ನು ಅಕ್ಕಂದಿರ ದಿನ, ತಂಗಿಯರ ದಿನ, ಮಗಳ ದಿನವನ್ನಾಗಿ ಆಗಾಗ್ಗೆ ಆಚರಿಸಿದರೆ ಮಗಳ ಮೇಲೇ ಅತ್ಯಾಚಾರ ಎಸಗುವ ಅಪ್ಪಂದಿರ ಕಣ್ಣು ತೆರೆದೀತು!

 

ಚಿತ್ರಕೃಪೆ : spaceflight.nasa.gov

 

Read more from ಲೇಖನಗಳು
8 ಟಿಪ್ಪಣಿಗಳು Post a comment
 1. hemapathy
  ಜುಲೈ 31 2014

  ನಮ್ಮ ಜನ ಮರೆಯುವುದರಲ್ಲಿ ಸಿದ್ಧಹಸ್ತರು. ಅವರಿಗೆ ತಮ್ಮ ಸ್ವಾರ್ಥವೇ ಹೆಚ್ಚು.

  ಉತ್ತರ
 2. ಪ್ರಶ್ನಕ
  ಜುಲೈ 31 2014

  “ಕೋಟಿ ಕೋಟಿ ಹೆಣ್ಣುಮಕ್ಕಳಿಗೆ ಆಕೆ ಸ್ಪೂರ್ತಿಯ ಅನುಕರಣೀಯ ಮಾದರಿ ಆಗುವಂತೆ ಮಾಡಬೇಕಿದೆ.”

  ಮಾನ್ಯರೇ, ಕಲ್ಪನಾ ಚಾವ್ಲ ಅವರು ಬಾಹ್ಯಾಕಾಶದಿಂದ ಭೂಮಿಗೆ ಮರುಳುವಾಗ ಅಪಮೃತ್ಯುಗೀಡಾಗಿದ್ದು ಬಹಳ ಬೇಸರದ ಸಂಗತಿ. ಆದರೆ ಆಕೆ ಕೋಟಿ ಕೋಟಿ ಹೆಣ್ಣುಮಕ್ಕಳಿಗೆ ಏಕೆ ಹಾಗೂ ಯಾವ ರೀತಿಯಲ್ಲಿ ಅನುಕರಣೀಯಳು ಅಂತ ನನಗೆ ಅರ್ಥವಾಗಲಿಲ್ಲ! ಕೋಟಿ ಕೋಟಿ ಹೆಣ್ಣುಮಕ್ಕಳು ಕಲ್ಪನಾರ ಹಾಗೆ ಬಾಹ್ಯಾಕಾಶ ಪ್ರಯಾಣ ಮಾಡಲು ಸಾಧ್ಯವಿಲ್ಲ. ಅಕಸ್ಮಾತ್ ಬಾಹ್ಯಾಕಾಶ ಪ್ರಯಾಣ ಎಲ್ಲರಿಗೂ ಸಾಧ್ಯವಿದ್ದರೂ ಅದು ಆಗ ದೊಡ್ಡ ಸಾಧನೆಯ ವಿಷಯವಾಗಿರುವುದಿಲ್ಲ (ನಮ್ಮ ಬೆಂಗಳೂರಿನ ಮೆಟ್ರೋ ಪ್ರಯಾಣದ ಹಾಗೆ). ಬಾಹ್ಯಾಕಾಶ ಯಾನ ಹೋಗಲಿ ಅದೇ ಮಟ್ಟದ ಮತ್ತೊಂದು ಸಾಧನೆ ಮಾಡಲಿ ನಮ್ಮ ಕೋಟಿ ಕೋಟಿ ಹೆಣ್ಣುಮಕ್ಕಳು ಅಂತ ನೀವು ಹೇಳುತ್ತಿದ್ದೀರಾ? ಅದೂ ಕೂಡ ಸಾಧ್ಯವಿಲ್ಲ. ಏಕೆಂದರೆ ಅಂತಹ ಸಾಧನೆಗಳಿಗೆ ಬಿಲಿಯನ್ ಗಟ್ಟಲೆ ಡಾಲರ್ ಹಣ ಖರ್ಚು ಆಗುತ್ತದೆ. ಕೋಟಿ ಕೋಟಿ ಹೆಣ್ಣುಮಕ್ಕಳ ಮೇಲೆ ಅಷ್ಟು ಹಣ ಖರ್ಚು ಮಾಡಲು ಯಾವ ಸರಕಾರಕ್ಕಾಗಲಿ ಸಂಸ್ಥೆಯಾಗಲಿ ಸಾಧ್ಯವಿಲ್ಲ. ಹಾಗೆ ಮಾಡಲು ಹೊರಟರೆ ಭೂಮಿಯೇ ದಿವಾಳಿಯಾಗುತ್ತದೆ!!

  ಉತ್ತರ
 3. Nagshetty Shetkar
  ಜುಲೈ 31 2014

  “ಪುರುಷ ಸಮಾಜ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ನೋಡುತ್ತದೆ ಎಂಬ ಸಾಮಾನ್ಯ ವಾದ ವ್ಯಾಖ್ಯಾನವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಏಕೆಂದರೆ ಭಾರತದ ಪಿತೃಪ್ರಧಾನ ವ್ಯವಸ್ಥೆ ತನ್ನ ಶ್ರೇಷ್ಠತೆಯ ಅಹಮಿಕೆಯಿಂದ ಮಹಿಳೆಯನ್ನು ಮತ್ತಷ್ಟು ನಿಕೃಷ್ಟವಾಗಿ ನೋಡಲಾರಂಭಿಸಿದೆ. ಕಳೆದ ಒಂದು ದಶಕಗಳಲ್ಲಿ ಹೆಚ್ಚು ತ್ತಿರುವ ಅಗೌರವಯುತವಾದ ಗೌರವಹತ್ಯೆಗಳು ಇದರ ಸಂಕೇತವಾಗಿ ಕಾಣುತ್ತದೆ. ಒಂದು ಕೌಟುಂಬಿಕ ಚೌಕಟ್ಟಿನಲ್ಲಿ, ಸಂಬಂಧಗಳ ಸರಳುಗಳಲ್ಲಿ ಮಹಿಳೆಯನ್ನು ಬಂಧಿಸುತ್ತಿದ್ದ ಭಾರತೀಯ ಸಮಾಜ ಈಗ ಆಕೆಯನ್ನು ಸಾಮುದಾಯಿಕ ಹಾಗೂ ತತ್ಸಂಬಂಧಿ ಸಾಂಸ್ಕೃತಿಕ ಚೌಕಟ್ಟಿನೊಳಗೆ ಬಂಧಿಸಲು ಯತ್ನಿಸುತ್ತಿದೆ. ಸಾಮುದಾಯಿಕ ನೆಲೆಯಲ್ಲಿ ಜಾಗೃತಗೊಳ್ಳುವ ಪುರುಷ ಸಮಾಜ ಮಹಿಳೆಯನ್ನು ನೋಡುವ ವಿಧಾನವೇ ಭಿನ್ನವಾಗಿರುತ್ತದೆ. ಹಾಗಾಗಿಯೇ ಸಮಾಜದಲ್ಲಿ ಒಂಟಿ ಮಹಿಳೆಯರನ್ನು ಅಬಲೆಯರಂತೆಯೇ ಕಾಣಲಾಗುತ್ತದೆ.”

  “ಸಾಮಾನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದ ಜನಸಮುದಾಯಗಳ ಜೀವನ ಶೈಲಿ, ಸಾಂಸ್ಕೃತಿಕ ನೆಲೆಗಳು ಸಾಮಾಜಿಕ ಮೌಲ್ಯಗಳಾಗಿ ಪರಿವರ್ತಿತವಾದ ಸಂದರ್ಭದಲ್ಲಿ ನಾಗರಿಕತೆ ತನ್ನದೇ ಆದ ಆಂತರಿಕ ಮತ್ತು ಬಾಹ್ಯ ಸ್ವರೂಪ ಪಡೆಯುತ್ತದೆ. ಹೀಗೆ ರೂಪುಗೊಂಡ ನಾಗರಿಕತೆಯ ಒಡಲಲ್ಲಿ ಅಂತರ್ಗತವಾಗಿರುವ, ಆಳವಾಗಿ ಬೇರೂರಿರುವ ಜನಸಮು ದಾಯಗಳ ಮೂಲ ಪ್ರವೃತ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳು ತಮ್ಮ ಬಾಹ್ಯ ಸ್ವರೂಪವನ್ನು ಕಳೆದುಕೊಂಡರೂ ಆಂತರಿಕ ಸ್ವರೂಪವನ್ನು ಉಳಿಸಿಕೊಂಡಿರುತ್ತದೆ. ಬೆಳೆಸಿಕೊಳ್ಳುತ್ತಲೂ ಇರುತ್ತದೆ. ಸಮಕಾಲೀನ ಭಾರತೀಯ ಸಮಾಜದಲ್ಲಿ ಈ ದೇಶದ ಮಹಿಳೆಯರು, ದಲಿತರು, ಶೋಷಿತ ವರ್ಗ ಗಳು ಎದುರಿಸುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಚಿತ್ರಹಿಂಸೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಭಾರತೀಯ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಒಳಸುಳಿವು ನಮ್ಮನ್ನು ನಾಗರಿಕತೆಯತ್ತ ಕೊಂಡೊಯ್ಯುತ್ತದೆ.”

  “ನಮ್ಮ ಸಮಾಜದಲ್ಲಿ ದಲಿತರು ಎದುರಿಸುವಷ್ಟೇ ದೌರ್ಜನ್ಯ, ಆಕ್ರಮಣಗಳನ್ನು ಮಹಿಳೆಯರೂ ವಿಭಿನ್ನ ರೀತಿಯಲ್ಲಿ, ವಿಭಿನ್ನ ಆಯಾಮಗಳಲ್ಲಿ ಎದುರಿಸುತ್ತಾರೆ. ಮೇಲ್ಜಾತಿಯ ಮಹಿಳೆಯರಿಗಿಂತಲೂ ದಲಿತ ಮಹಿಳೆಯರು ಹೆಚ್ಚಿನ ದೌರ್ಜನ್ಯ ಎದುರಿಸುತ್ತಾರೆ.”

  http://ladaiprakashanabasu.blogspot.in/2014/07/blog-post_62.html

  ಉತ್ತರ
  • Nagshetty Shetkar
   ಜುಲೈ 31 2014

   “ಏನೆಲ್ಲಾ ಹೋರಾಟದ ನಡುವೆಯೂ ಪುರುಷ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳಿಂದ ಲಕ್ಷಾಂತರ ಮಹಿಳೆಯರು ಹೊರಬರಲಾಗಿಲ್ಲ. ಪರಿಪೂರ್ಣ ಸ್ವಾತಂತ್ಯ್ರದ ಬೆಳಕು ಕಾಣಲಾಗಿಲ್ಲ ಎಂಬುದೇ ದೊಡ್ಡ ದುರಂತ.

   ಇದಕ್ಕೆಲ್ಲಾ ಕಾರಣ ಪರಂಪರಾಗತವಾಗಿ ಬಂದಿರುವ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಲಿಂಗತ್ವದ ಪರಿಕಲ್ಪನೆ. ನಮ್ಮ ವಿದ್ಯಾವಂತ ಸಮಾಜವೂ ಸಹ ಈ ಲಿಂಗತ್ವದ ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರಬರಲಾಗದೆ ತೊಳಲಾಡುತ್ತಿದೆ.”

   ಉತ್ತರ
 4. Maaysa
  ಜುಲೈ 31 2014

  [ಈ ನಿಟ್ಟಿನಲ್ಲಿ ಕಲ್ಪನಾ ಚಾವ್ಲಾ ಭಾರತದ ಹೆಣ್ಣುಮಕ್ಕಳಿಗೆ ಒಂದು ಅಪೂರ್ವ ಮಾದರಿ ಎನಿಸಿದ್ದಾರೆ.]

  ಆಕೆ ಆಮೇರಿಕದಲ್ಲೇ ಉನ್ನತ ಶಿಕ್ಷಣವನ್ನು ಪಡೆದು, ಆ ದೇಶದ ಪೌರತ್ವವನ್ನು ಪಡೆದು, ಭಾರತೀಯ ಪೌರತ್ವವನ್ನು ತ್ಯಜಿಸಿದಾಕೆ. ಆಕೆ ಒಬ್ಬಳು ಪಂಜಾಬಿ ಮೇಲ್ಜಾತಿಯ ಹುಡುಗಿ. ಇದೇ ಇಂದು ನಮ್ಮ ದೇಶದ ಮೇಲ್ಜಾತಿಯ ಪ್ರತಿಭಾವಂತ ವ್ಯಕ್ತಿಗಳಿಗೆ ದಾರಿ. ಆಕೆ ಕೆಲಸವನ್ನು ಮಾಡಿದ ನಾಸಾ ಒಂದು ಸರಕಾರಿ-ಸಂಸ್ಥೆ!

  ಭಾರತವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳಸುವಲ್ಲಿ ವಿಫಲವಾಗಿದೆ. ಹಾಗು ಮೀಸಲಾತಿ ಮುಂತಾದ ನೀತಿಗಳು ಒಂದು ಜಾತಿ/ವರ್ಗದ ಮಂದಿಗಳನ್ನು ಶೋಷಿಸುತ್ತಿದೆ.

  ಉತ್ತರ
 5. ಕೋದಂಡರಾಮ
  ಜುಲೈ 31 2014

  ಈ ಕಾಲದ ಸಬಲೀಕೃತ ಹೆಂಗಸರಿಗೆ ಮಕ್ಕಳನ್ನು ಹೆರುವುದು ಬೇಡ, ಹೆತ್ತ ಮಕ್ಕಳಿಗೆ ಮೊಲೆ ಹಾಲು ಕುಡಿಸುವುದು ಬೇಡ, ಮಕ್ಕಳ ಲಾಲನೆ ಪಾಲನೆ ಬೇಡ. ಅವರಿಗೆ ಬಾಹ್ಯಾಕಾಶದಲ್ಲಿ ತಿರುಗುವ ಕನಸು. ಎಲ್ಲಾ ಹೆಣ್ಣುಮಕ್ಕಳು ಸಬಲೀಕೃತಗೊಂಡರೆ ಮನುಷ್ಯ ಸಂತತಿ ಮುಂದುವೆರೆಯುವುದು ಅನುಮಾನ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments