ಕೊಳವೆಬಾವಿ ಅವಾಂತರ-ಕೊನೆ ಹೇಗೆ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.
ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.
ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.
ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!
ಕೊಳವೆ ಬಾವಿಯಿಂದ ಭೂಗರ್ಭದಲ್ಲಿ ಅಡಗಿದ ನೀರನ್ನು ಸುಲಭವಾಗಿ ಎತ್ತಬಹುದು, ಆದರೆ ಮರುಪೂರಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಭೂಮಿಯಲ್ಲಿ ನೀರು ಬೇಕಾದಷ್ಟಿದೆ, ಅದು ಖಾಲಿಯಾಗುವುದೇ ಇಲ್ಲ, ಆದರೂ ಮತ್ತೆ ತಾನಾಗಿ ಅಲ್ಲಿ ನೀರು ತುಂಬಿಕೊಳ್ಳುವುದೇ ನಿಸರ್ಗದ ಕ್ರಮ ಎಂಬ ಭ್ರಮೆ ಸಾರ್ವತ್ರಿಕವಾಗಿದೆ.
ನೀರಿಗೆ ಯಾವಾಗಲೂ ತತ್ವಾರ ಇರುವ ಬಯಲುಸೀಮೆಯಲ್ಲಿ ಕೊಳವೆ ಬಾವಿ ಇಲ್ಲದ ಮನೆಯಾಗಲೀ ಜಮೀನಾಗಲೀ ಇಲ್ಲವೇ ಇಲ್ಲ. ಒಂದೊಂದು ಜಮೀನಿನಲ್ಲಿ ಮೂರಕ್ಕೂ ಹೆಚ್ಚು ಕೊಳವೆ ಬಾವಿಗಳಿರುವುದೂ ಸಾಮಾನ್ಯ. ಇಲ್ಲೆಲ್ಲ ಐದುನೂರರಿಂದ ಸಾವಿರ ಅಡಿ ಆಳದ ಕೊಳವೆ ಬಾವಿಗಳಿಗೆ ಕೊರತೆಯೇ ಇಲ್ಲ. ಆದರೇನು ನೀರಿರುವ ಬಾವಿಗಳೇ ಅಪರೂಪ!
ನೀರು ಬತ್ತಿದ ಕೂಡಲೇ ಮತ್ತೊಂದು ಕೊಳವೆ ಬಾವಿ ತೆಗೆಸುವುದು! ಹೀಗಾಗಿ ಸುತ್ತ ಮುತ್ತಲ ತೋಡು ಬಾವಿಗಳು ಬತ್ತಿಹೋಗಿವೆ, ಮಳೆ ನೀರು ಹಿಡಿದಿಡುತ್ತಿದ್ದ ಕೆರೆ ಕಟ್ಟೆಗಳು ಕೂಡ ಒಣಗಿವೆ. ಅಂತರ್ಜಲವನ್ನೆಲ್ಲ ಹೀರಿದ ಕಾರಣ ನೆಲದ ಹಸನು ಕನಸಾಗಿಬಿಟ್ಟಿದೆ. ಈ ಕುರಿತು ಕನಿಷ್ಠ ನೀತಿ ರೂಪಿಸಬೇಕಿದ್ದ ಸರ್ಕಾರ ಕೊಳವೆ ಬಾವಿ ನಿಯಂತ್ರಿಸುವ ಬದಲು ಸಬ್ಸಿಡಿ ನೀಡಿ ಮತ್ತಷ್ಟು ಬಾವಿ ಕೊರೆಯಲು ಉತ್ತೇಜನ ನೀಡಿತು! ಹಾಗೆ ನೋಡಿದರೆ ಕೇಂದ್ರಸರ್ಕಾರದಲ್ಲಿ ಕೊಳವೆಬಾವಿಗೆ ಪ್ರಾಧಿಕಾರವೊಂದಿದೆ. ಕೊಳವೆಬಾವಿ ನೀರನ್ನು ಕುಡಿಯುವ ಉದ್ದೇಶಕ್ಕಲ್ಲದೇ ಬೇರೆ ಯಾವುದೇ ಚಟುವಟಿಕೆಗೆ ಬಳಸಕೂಡದು, ಕೆರೆ ಕಟ್ಟೆಗಳ ಬಳಿ ಕೊಳವೆಬಾವಿ ತೋಡುವಂತಿಲ್ಲ ಇತ್ಯಾದಿ ನಿಯಮಗಳೂ ಇವೆ. ಆದರೆ ಇದನ್ನೆಲ್ಲ ಪಾಲಿಸುವವರು ಯಾರು? ಸಮಾಜ ಮತ್ತು ಸರ್ಕಾರಗಳೆರಡೂ ದೂರದೃಷ್ಟಿ ಕಳೆದುಕೊಂಡ ಸಂದರ್ಭದಲ್ಲಿ ದಾರಿ ತೋರಬೇಕಾದ ಶಿಕ್ಷಣ ಸಂಸ್ಥೆಗಳು ನಿದ್ರೆ ಮಾಡುತ್ತಿದ್ದರೆ ಮುಂದಿನ ತಲೆಮಾರುಗಳು ಎಂಥ ಸಂಕಟ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಕೊಳವೆ ಬಾವಿಯೇ ನಿದರ್ಶನ.
ಸುಲಭದಲ್ಲಿ ನೀರು ಕಾಣುವ ಕೊಳವೆ ಬಾವಿ ಮಾರ್ಗ ಈಗ ಬೇರೆ ಬಗೆಯಲ್ಲಿ ಸಮಾಜಕ್ಕೆ ಪಾಠ ಹೇಳಿಕೊಡುತ್ತಿದೆ. ನೂರಾರು ಅಡಿ ಕೊರೆಸಿದ ಕೊಳವೆ ಬಾವಿ ಎರಡು ಮೂರು ವರ್ಷದಲ್ಲಿ ಬತ್ತಿಹೋಗುತ್ತದೆ. ಕೇವಲ ಎರಡು ದಶಕದ ಹಿಂದೆ ಯಾರಾದರೂ ಕುಡಿಯುವ ನೀರನ್ನು ಮಾರುತ್ತಾರೆ ಎಂದರೆ ಅಪಹಾಸ್ಯ ಮಾಡುತ್ತಿದ್ದ ಜನ ಈಗ ಒಂದು ಲೀಟರ್ ಶುದ್ಧ ಕುಡಿಯುವ ನೀರಿಗೆ ಇಪ್ಪತ್ತು ರೂ. ತೆರುತ್ತಿದ್ದಾರೆ! ಆದರೂ ಪರಿಸ್ಥಿತಿ ಏಕೆ ಹೀಗಾಗಿದೆ ಎಂದು ಚಿಂತಿಸುವ ವ್ಯವಧಾನ ಮಾತ್ರ ಕಾಣುತ್ತಿಲ್ಲ.
ಯಾರೋ ಮಾಡಿದ ತಪ್ಪಿಗೆ ಅಮಾಯಕ ಮಕ್ಕಳು ಸಾಯುವುದು ಕೊಲೆಯಲ್ಲದೇ ಬೇರೆಯಲ್ಲ. ಕೊಳವೆ ಬಾವಿಯನ್ನು ಪಾಳು ಬೀಳುವಂತೆ ಮಾಡುವ ಅದರ ಮಾಲೀಕ ಮತ್ತು ಬಾವಿಯ ಗುತಿಗೆದಾರ ಇಬ್ಬರೂ ಇದರಲ್ಲಿ ಅಪರಾಧಿಗಳೇ. ಆದರೆ ಸಮರ್ಪಕ ಕಾನೂನು ಇಲ್ಲದ ಕಾರಣ ಇವರನ್ನು ಏನೂ ಮಾಡಲಾಗದು.
2007ರಲ್ಲಿ ಕಾರ್ತಿಕ್ ಎಂಬ ಆರು ವರ್ಷದ ಬಾಲಕನೊಬ್ಬ ಆಂಧ್ರದ ಪ್ರಕಾಶಂ ಜಿಲ್ಲೆಯ ಬೊಟ್ಲಗುಡೂರ್ನ ಹಳ್ಳಿಯಲ್ಲಿ ಪಾಳು ಕೊಳವೆ ಬಾವಿಗೆ ಬಿದ್ದ. ಸತತ 48ಗಂಟೆಗಳಿಗೂ ಹೆಚ್ಚು ಕಾಲ ಆತನ ರಕ್ಷಣಾ ಕಾರ್ಯ ನಡೆಯಿತು. ಆತ ಶವವಾಗಿ ಸಿಕ್ಕ. ಅಂದಿನ ಮುಖ್ಯಮಂತ್ರಿ ವೈಎಸ್ಆರ್ ರೆಡ್ಡಿ ಜಮೀನಿನ ಮಾಲೀಕ ಮತ್ತು ಕೊಳವೆ ಬಾವಿ ಗುತ್ತಿಗೆದಾರರ ಮೇಲೆ ಐಪಿಸಿ ಸೆಕ್ಷನ್ 304(ಎ)ರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿ ತಲಾ 2 ಲಕ್ಷ ರೂ. ದಂಡ ಕಟ್ಟುವಂತೆ ನಿರ್ದೇಶನ ನೀಡಿದ್ದರು. ನಂತರ ಆರೋಪಿಗಳಿಬ್ಬರೂ ದಂಡ ಕಟ್ಟಿ ಜಾಮೀನು ಪಡೆದು ಆರಾಮವಾಗಿ ಹೊರಬಂದರು.
ಕೊಳವೆ ಬಾವಿ ಕಾನೂನೇ ಅಳ್ಳಕವಾಗಿದೆ. ನಮ್ಮಲ್ಲೂ ರಾಯಚೂರಿನ ಸಂದೀಪ್ ಕೊಳವೆ ಬಾವಿಯಲ್ಲಿ ಬಿದ್ದು ಮೃತನಾದಾಗ ಆತನ ಸಂಬಂಧಿಗಳು ಜಮೀನು ಮಾಲೀಕ ಗೋಪಾಲ ಮತ್ತು ಬಾವಿ ಗುತ್ತಿಗೆದಾರರಿಬ್ಬರ ಮೇಲೂ ಪ್ರಕರಣ ದಾಖಲಿಸಿದ್ದರು. ಕೆಲ ದಿನಗಳಲ್ಲಿ ಇಬ್ಬರೂ ಜಾಮೀನು ಪಡೆದು ಹೊರಬಂದುದು ಮಾತ್ರವಲ್ಲ, ಶಿಕ್ಷೆಯಿಂದಲೂ ಬಚಾವಾದರು.
ಪಾಳುಬಿದ್ದ ಕೊಳವೆ ಬಾವಿಗಳನ್ನು ಮುಚ್ಚಲು ಏನು ಕಷ್ಟ ಎಂದು ಸರ್ವೋಚ್ಚ ನ್ಯಾಯಾಲಯ 2009ರ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಟುವಾಗಿ ಪ್ರಶ್ನಿಸಿತ್ತು. ಎರಡೂ ಸರ್ಕಾರಗಳು ಇದಕ್ಕೆ ಇನ್ನೂ ಉತ್ತರ ಹುಡುಕುತ್ತಲೇ ಇವೆ. ಇಂಥ ಬಾವಿಗಳನ್ನು ಮುಚ್ಚುವುದಿರಲಿ, ದೇಶ-ರಾಜ್ಯಗಳ ಮಟ್ಟ ಹೋಗಲಿ, ಕಸಬಾ ಮಟ್ಟದಲ್ಲಿ ಕೂಡ ಎಲ್ಲೆಲ್ಲಿ ಎಷ್ಟೆಷ್ಟು ಕೊಳವೆ ಬಾವಿಗಳಿವೆ ಎಂಬ ಲೆಕ್ಕವೇ ಯಾವ ಸರ್ಕಾರದ ಬಳಿಯೂ ಇಲ್ಲ! ಮಕ್ಕಳು ಬಿದ್ದು ಸುದ್ದಿಯಾದಾಗಲೇ ಅಲ್ಲೊಂದು ಪಾಳು ಕೊಳವೆ ಬಾವಿ ಇದೆ ಎಂದು ಗೊತ್ತಾಗುವುದು! ಇದು ನಮ್ಮ ಸರ್ಕಾರದ ಆಡಳಿತ ವೈಖರಿ.
2001ರಿಂದ ಕೊಳವೆ ಬಾವಿಗಳ ಆವಾಂತರ ಇಷ್ಟೆಲ್ಲ ನಡೆಯತೊಡಗಿದ ಮೇಲೆ ಸರ್ಕಾರಗಳು ಜನರ ಒತ್ತಡಕ್ಕೆ ಮಣಿದು ಕೊಳವೆ ಬಾವಿಗಳ ಅಂದಾಜು ಲೆಕ್ಕ ಮಾಡುವಂತೆ ತಹಸೀಲ್ದಾರ್, ಗ್ರಾಮ ಲೆಕ್ಕಿಗರಿಗೆ ಸೂಚಿಸಿತ್ತು. 2005ರಲ್ಲಿ ಸರ್ಕಾರೇತರ ಸಂಸ್ಥೆಯೊಂದು ಮೈಸೂರಿನಲ್ಲಿ ಇಂಥ ಲೆಕ್ಕಾಚಾರ ಮಾಡಿತು. ಅದರ ಪ್ರಕಾರ ಮೈಸೂರು ಸುತ್ತ ಅಂದಾಜು 12000 ಕೊಳವೆ ಬಾವಿಗಳು ನಿರ್ಗತಿಕವಾಗಿ ಬಿದ್ದಿವೆಯಂತೆ. ನೀರಿನ ಕೊರತೆ ಅಷ್ಟಾಗಿರದ ಮೈಸೂರಲ್ಲೇ ಕೊಳವೆ ಬಾವಿ ಈ ಪ್ರಮಾಣದಲ್ಲಿದ್ದರೆ ಇನ್ನು ವರ್ಷದ ಹತ್ತು ತಿಂಗಳ ಕಾಲ ಹರಿಯುವ ನೀರನ್ನೇ ಕಾಣದ ಬಯಲುಸೀಮೆಯ ತುಮಕೂರು, ರಾಯಚೂರು, ಗುಲ್ಬರ್ಗಾ, ಬಳ್ಳಾರಿ, ವಿಜಾಪುರ, ದಾವಣಗೆರೆ, ಕೊಪ್ಪಳದಂಥ ಜಿಲ್ಲೆಗಳಲ್ಲಿ ಒಟ್ಟು ಲಕ್ಷಕ್ಕೂ ಹೆಚ್ಚು ಪಾಳು ಕೊಳವೆ ಬಾವಿಗಳರಲು ಸಾಕು.
ಕೊಳವೆ ಬಾವಿಗಳನ್ನು ತೆಗೆಸುವುದರಿಂದ ಭೂಮಿಗೂ ಜನರಿಗೂ ಮುಂದಿನ ತಲೆಮಾರಿಗೂ ಕಷ್ಟ ಕಟ್ಟಿಟ್ಟದ್ದು ಎಂಬುದು ಈಗ ಅರಿವಾದ ಸಂಗತಿ. ಅಲ್ಪ ಲಾಭದ ಇಂಥ ಹಾಳು ಬಿದ್ದ ಬಾವಿಗಳಿಗೆ ಮುಚ್ಚಳ ಹಾಕಲು ಇರುವ ಸಮಸ್ಯೆಯಾದರೂ ಏನು?
ಕಾಂಕ್ರೀಟ್ ಮುಚ್ಚಳಕ್ಕೆ ತಗಲುವ ವೆಚ್ಚ ಹೆಚ್ಚೆಂದರೆ 300ರೂ. ಬಾವಿ ತೆಗೆದಾಗ ಅದರಲ್ಲಿ ಗುತ್ತಿಗೆದಾರರು ಕೇಸಿಂಗ್ ಪೈಪ್ ಹಾಕುತ್ತಾರೆ. ಕನಿಷ್ಠ ಪಕ್ಷ ಅದಿದ್ದರೂ ಮಕ್ಕಳು ಸುಲಭವಾಗಿ ಬಾವಿಗೆ ಬೀಳುವುದಿಲ್ಲ. ಆದರೆ ನೀರು ಬತ್ತುವುದನ್ನೇ ಕಾಯುತ್ತ ಕೂರುವ ಗುತ್ತಿಗೆದಾರರು ಕೇಸಿಂಗ್ ಪೈಪ್ ತೆಗೆದು ಮತ್ತೊಂದು ಬಾವಿಗೆ ಹಾಕುತ್ತಾರೆ. ಕೇಸಿಂಗ್ ಪೈಪು ತಲಾ 4000-5000 ರೂ. ಬೆಲೆ ಬಾಳುತ್ತದೆ. ಬತ್ತಿದ ಬಾವಿಯ ಹಳೆಯ ಪೈಪನ್ನೇ ಹೊಸ ಬಾವಿಗೆ ಅಳವಡಿಸುವ ಗುತ್ತಿಗೆದಾರರು ಹೊಸ ಲೆಕ್ಕದ ಜೊತೆಗೆ ಯಾವುದೋ ಮಕ್ಕಳ ಹಣೆಬರಹವನ್ನೂ ಬರೆಯುತ್ತಾರೆ.
ಹಾಳು ಬಿದ್ದ ಕೊಳವೆ ಬಾವಿಗಳನ್ನು ಕಂಡ ಜನ ಅದನ್ನು ಮುಚ್ಚಿಸುವ ಉಸಾಬರಿ ನಮಗೇಕೆ ಎಂದು ಓಡಾಡುತ್ತಿರುತ್ತಾರೆ. ಈ ಮನೋಧರ್ಮ ಇರುವವರೆಗೂ ಅಕ್ಷತಾಳ ಬಲಿ ಇದಕ್ಕೆ ಖಂಡಿತ ಕೊನೆಯಾಗದು.
ಮಾನ್ಯರೇ, ಪ್ರಾರಂಭದಿಂದಲೂ ಇದೂವರೆಗೂ ಕೊಳವೆ ಬಾವಿಗಳ ಅವಗಡಗಳ ಬಗ್ಗೆ ದೀರ್ಘವಾದ ಸಮೀಕ್ಷೆ ನಡೆಸಿ ಒಳ್ಳೆಯ ಮಾಹಿತಿ ನೀಡಿದ್ದೀರಿ. ನಿಮಗೆ ಧನ್ಯವಾದಗಳು.ನಮ್ಮ ರೈತರು ಬೆಳೆ ಬೆಳೆಯಲು ಅಥವಾ ರಕ್ಷಣೆಗಾಗಿ ಕೊಳವೆ ಭಾವಿ ತೋಡಿಸುತ್ತಿದ್ದಾರೆ. ಆದರೆ ಅ ಭಾವಿಯಲ್ಲಿ ನೀರು ಬರುತ್ತದೋ ಇಲ್ಲವೋ ಅದು ನಂತರದ ಮಾತು. ಬಹುತೇಕ ಸಮೃದ್ದಿಯಾಗಿ ನೀರು ಬರದಿದ್ದರೂ ಅಷ್ಟೋ ಇಷ್ಟು ಬರಬಹುದು. ಇಲ್ಲವಾದರೆ, ವಿಫಲಬಹುದು. ವಿಫಲವಾದ ಕೊಳವೆ ಬಾವಿಗಳಿಂದ ರೈತ ಆರ್ಥಿಕವಾಗಿ ಚೇತರಿಸಿಕೊಳ್ಳಲಾರದ ಸ್ಥಿತಿಗೆ ಬರುತ್ತಾನೆ. ಅ ಸಮಯದಲ್ಲಿ ಹತಾಶನಾಗಿ ಕೊಳವೆ ಬಾವಿಯ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾರದ ಸ್ಥಿತಿಗೆ ಬರುತ್ತಾನೆ. ಇಂತಹವಕ್ಕೆ ಮುಗ್ಧ ಮಕ್ಕಳು ಬಲಿಯಾಗುತ್ತಾರೆ. ಕಾರಣ ಏನೇ ಆಗಿರಲಿ. ಕೊಳವೆ ಬಾವಿಗಳನ್ಫ್ನು ತೋಡಿಸಿದವರು. ಮಾನವೀಯತೆಯಿಂದ ಮುಚ್ಚಬೇಕಾದ್ದು ಅವರ ಕರ್ತವ್ಯ. ಇಷ್ಟೆಲ್ಲಾ ೨೦೦೧ ರಿಂದ ಅವಗಡಗಳು ಸಂಭವಿಸುತ್ತಿದ್ದರು ನಮ್ಮ ಅಧಿಕಾರಿಗಳು ನಿರ್ಲಕ್ಷತೆಯಿಂದಿರುವುದು ಸರಿಯಲ್ಲ. ಆದುದರಿಂದ ಇನ್ನು ಮುಂದಾದರೂ ಯಾರೇ ಅಗಲಿ ಕೊಳವೆ ಬಾವಿಗಳನ್ನು ಕೊರೆಯುವ ಮೊದಲು ಸಂಬಂದಿಸಿದವರಿಂದ ಅನುಮತಿ ಪಡೆಯಲೇ ಬೇಕೆಂದು ಕಡ್ಡಾಯ ಮಾಡಬೇಕು. ಕೊರೆದ ನಂತರ ಅ ಬಾವಿ ವಿಫಲವಾದಲ್ಲಿ ಕೂಡಲೇ ಬಾವಿ ಕೊರೆಯಲು ಅನುಮತಿ ನೀಡಿದ ಅಧಿಕಾರಿಗೆ ಕೂಡಲೇ ಮಾಹಿತಿ ನೀಡಬೇಕು. ಅದನ್ನು ಸುರಕ್ಷಿತವಾಗಿ ಮುಚ್ಚಿದ್ದಾರೆಯೇ ಎಂಬುದನ್ನು ಒಬ್ಬ ಜವಾಬ್ದಾರಿಯುತ ಅಧಿಕಾರಿ ಪರಿಸೀಲಿಸಿ ಪ್ರಮಾಣಿಕರಿಸಬೇಕು. ಇಲ್ಲವಾದರೆ ಅವಗಡ ಸಂಭವಿಸಲಿ ಬಿಡಲಿ ಕೊಳವೆ ಬಾವಿ ಕೊರೆಸಿದವರು, ಕೊರೆದ ಸಂಸ್ತೆಯ ವಿರುದ್ದ ಕೊಲೆ ಅಥವಾ ಕೊಲೆ ಪ್ರಯತ್ನವೆಂದು ಪರಿಗಣಿಸಿ ಮೇಲಧಿಕಾರಿಗಳು ಸ್ವಯಂ ಪ್ರೆರಣೆಯಿಂದ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವುದು ಸೂಕ್ತ. ಇಲ್ಲವಾದರೆ. ಸಂಬಂದಿಸಿದ ಅಧಿಕಾರಿಗಳು ಕರ್ಥವ್ಯ ನಿರ್ಲಕ್ಷ್ಯವೆಂದು ಬಾವಿಸಿ ಅವರ ವಿರುದ್ದವೇ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೂಕ್ತ.
ಧನ್ಯವಾದಗಳು ನಂಜುಂಡರಾಜು ಅವರೇ. ಈಗ ದುರಂತ ನೋಡಿ. ಮೂರು ದಿನ ಯತ್ನ ನಡೆಸಿಯೂ ತಿಮ್ಮಣ್ಣನನ್ನು ಹೊರತೆಗೆಯಲಾಗಲಿಲ್ಲ (ಆಗಸ್ಟ್ ೫). ಹೇಗೂ ಆತ ಬದುಕಿರಲಾರ, ಈಗಾಗಲೇ ಇರುವ ಎಕರೆ ಜಮೀನನ್ನು ಬೇಕಾಬಿಟ್ಟಿ ಅಗೆದಿದ್ದೀರಿ. ಅತ್ತ ಮಗನೂ ಇಲ್ಲ, ಇತ್ತ ಜಮೀನೂ ಇಲ್ಲ ಎನ್ನುವಂತಾಗುತ್ತದೆ. ಅಗೆದುದು ಸಾಕು. ನಿಲ್ಲಿಸಿ. ನನಗೆ ಹೆಣ್ಣು ಮಕ್ಕಳಿದ್ದಾರೆ, ಹೇಗೋ ಜೀವನ ಮಾಡಿಕೊಳ್ತೇವೆ ಎಂದು ತಿಮ್ಮಣ್ಣನ ತಂದೆ ಅಲವತ್ತುಕೊಳ್ಳುತ್ತಿದ್ದಾರೆ. ಕ್ರೂರ ವ್ಯಂಗ್ಯವಲ್ಲವೇ?
ಮಾನ್ಯ ಶೆಟ್ಕರ್ ಅವರೇ ಎಲ್ಲಿದ್ದೀರಿ? ದೇಶಾದ್ಯಂತ ಕಾಡುತ್ತಿರುವ ಕೊಳವೆ ಬಾವಿ ಸಮಸ್ಯೆಗೆ ಪುರೋಹಿತಶಾಹಿ (ವೈದಿಕ ಅಥವಾ ಮನುವಾದ) ಹೇಗೆ ಕಾರಣ ಹಾಗೂ ದರ್ಗಾ-ವಚನಗಳಲ್ಲಿ ಇದಕ್ಕೆ ಪರಿಹಾರ ಇದೆಯೇ ಎಂಬುದು ಹೊಳೆಯುತ್ತಿಲ್ಲ. ದಯವಿಟ್ಟು ದಾರಿ ತೋರಿ. ನಿಮ್ಮ ಕಮೆಂಟು ಇಲ್ಲದ ಯಾವ ಲೇಖನಕ್ಕೂ ಬೆಲೆಯೇ ಇಲ್ಲ!
ಪ್ರಚಲಿತ ಘಟನೆಯ ಬಗ್ಗೆ ಉತ್ತಮ ಲೇಖನ. ಈ ಎಲ್ಲ ಘಟನೆಗಳಲ್ಲಿ, ಹೆಚ್ಚಿನ ಘಟನೆಗಳು ನಡೆದದ್ದು ಗ್ರಾಮೀಣ ಪ್ರದೇಶದಲ್ಲಿ ಎಂಬುದನ್ನು ಗಮನಿಸಬೇಕು. ಈಗ ಟಿ.ವಿ ಮಾಧ್ಯಮ ಹಳ್ಳಿಗಳ ಬಹುತೇಕ ಎಲ್ಲರ ಮನೆಯನ್ನು ಮುಟ್ಟಿದೆ. ಕೊಳೆವೆ ಬಾವಿ ಕೊರೆಯಿಸುವ ಅರ್ಹತೆ ಮುಟ್ಟಿರುವವರ ಮನೆಯಲ್ಲಂತೂ ಇದ್ದೇ ಇರುತ್ತದೆ. ದೇಶ/ ರಾಜ್ಯದಲ್ಲಾಗುವ ದುರಂತಗಳ ವರದಿಗಳನ್ನು, ಆದ ಸಂಕಷ್ಟವನ್ನು ನೋಡಿದ ಮೇಲೆಯೂ, ತಾವು ಕೊರೆಯಿಸಿ, ನೀರು ಬರದಾಗ ಮುಚ್ಚದೇ ಬಿಟ್ಟ ಕೊಳವೆ ಬಾವಿಯ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದ್ದಾರೆಂದರೆ..ಈ ಜಮೀನುಗಳ ಮಾಲಕರು ಕ್ಷಮೆಗೆ ಅರ್ಹರಲ್ಲ.
ನನಗನಿದಂತೆ, ಇನ್ನು ಮುಂದಾದರೂ ಯಾರಾದರೂ ಈ ಕೊಳವೆ ಬಾವಿ ಕೊರೆಸಬೇಕಾದರೆ, ಈ ಕೆಳಗಿನ ವ್ಯವಸ್ಥೆ ಬಂದರೆ ಒಳ್ಳೆಯದೆಂದು ನನಗನಿಸುತ್ತದೆ..
೧) ಜಮೀನಿನ ಮಾಲಕ ಸಂಬಂಧಪಟ್ಟ ಪಂಚಾಯತಿಗೆ ಹೋಗಿ, ಪಂಚಾಯತಿ ನಿಕ್ಕಿ ಮಾಡಿದ ಹಣವನ್ನು ತುಂಬಿ ಕೊಳವೆಬಾವಿ ತೆಗೆಯಲು ಪರ್ಮಿಶನ್ ಕೇಳಬೇಕು. ಪಂಚಾಯತಿ ಸಿಬ್ಬಂದಿ ಹೋಗಿ ಆ ಸ್ಥಳದ GPS ಮಾಹಿತಿಯನ್ನು ರೆಕಾರ್ಡ ಮಾಡಿಕೊಂಡು ಪರ್ಮಿಶನ್ ಕೊಡಬೇಕು.
೨) ಕೊಳವೆಬಾವಿ ಕೊರೆಯುವವನು ಈ ಪರ್ಮಿಶನ್ ನ ಕಾಪಿಯನ್ನು ಇಟ್ಟುಕೊಂಡು ಬೊರವೆಲ್ ತೆಗೆಯಲು ಪ್ರಾರಂಭ ಮಾಡಬೇಕು. ಇದಿಲ್ಲದೇ ಮಾಡುವ ಬೊರೆವೆಲ್ ಗಾಡಿಯವನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು.
೩) ಅಕಸ್ಮಾತ ಕೊಳವೆಬಾವಿ ನೀರು ಬರದೆ ಫೇಲಾದರೆ, ಕೊಳವೆಬಾವಿ ಕೊರೆಸಿದವನು, ಅದನ್ನು ಮುಚ್ಚಿ, ಸಂಬಂಧ ಪಟ್ಟ ಪಂಚಾಯತ ಕಾರ್ಯದರ್ಶಿಗೆ ತೋರಿಸಿ, ಮುಚ್ಚಿದ ಬಗ್ಗೆ ಪಂಚಾಯತ್ ದಿಂದ ಒಂದು ಲೆಟರ್ ನ್ನು ಪಡೆದುಕೊಳ್ಳಬೇಕು. ಇಲ್ಲಿ ಕೊಳವೆ ಬಾವಿ ಮುಚ್ಚಿದ ಬಗ್ಗೆ ಪರೀಶಿಲನೆ, ಸ್ಥಳ ಪರೀಶೀಲನೆ (GPS) ಮಾಡಿ ಲೆಟರ್ ಕೊಡುವುದು ಸಂಬಂಧ ಪಟ್ಟ ಪಂಚಾಯತಿಯ ಜವಾಬ್ದಾರಿ.
೪) ಕೊಳವೆಬಾವಿ ಸಫಲ ಆದಲ್ಲಿ, ಅದಕ್ಕೆ ಪಂಪ್ ಹಾಕಲು ವಿದ್ಯುತ ಸೌಲಭ್ಯ ಕೊಡುವಾಗ, ವಿದ್ಯುತ ಇಲಾಖೆ ಈ ಕೊಳವೆಬಾವಿ ಸಕ್ರಮ ಎಂದು ಖಾತ್ರಿ ಮಾಡಿಕೊಳ್ಳಲು ಪಂಚಾಯತ ಕೊಟ್ಟ ಪರ್ಮಿಶನ್ ಲೆಟರ್ ನ ಕಾಪಿ ತೆಗೆದುಕೊಳ್ಳಬೇಕು.
ಆಗ ಅಕಸ್ಮಾತ ದುರಂತವಾದಲ್ಲಿ,
೧) ಅಕಸ್ಮಾತ ಕೊಳವೆ ಬಾವಿ ಮಚ್ಚಿದ ಲೆಟರ್ ಇದ್ದು, ದುರಂತ ನಡೆದರೆ, ಕೊಳವೆ ಬಾವಿ ಮುಚ್ಚಿದ ಬಗ್ಗೆ ಪರೀಶೀಲಿಸಿ ಲೆಟರ್ ಕೊಟ್ಟ ಪಂಚಾಯತ್ ಸಿಬ್ಬಂದಿಯ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು.
೨) ಕೊಳವೆ ಬಾವಿ ಮುಚ್ಚಿದ ಬಗ್ಗೆ ಪಂಚಾಯತ್ ಕೊಟ್ಟ ಲೆಟರ್ ಇಲ್ಲದಿದ್ದರೆ ಜಮೀನಿನ ಮಾಲಕನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು.
ಇದರ ಮತ್ತೊಂದು ಲಾಭವೇನೆಂದರೆ, ಒಂದು ಏರಿಯಾದಲ್ಲಿ ಎಷ್ಟು ಕೊಳವೆಬಾವಿಗಳೆಂಬ ಮಾಹಿತಿ ತಟ್ಟನೆ ಸಿಗುತ್ತದೆ ಕೂಡ..ಈ ಮಾಹಿತಿಯಿಂದ ಅಂತರ್ಜಲ ಬಳಕೆಯ ಬಗ್ಗೆಯೂ ಕೃಷಿ/ಜಲಸಂಪೂನ್ಮೂಲ ಇಲಾಖೆ ಸರಿಯಾದ ಪ್ಲಾನಿಂಗ್ ಮಾಡಬಹುದು.