ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2014

3

ಅವರೆಲ್ಲರೂ ಪ್ರತಿಭಾವಂತರೇ ಆದರೆ…..

‍ನಿಲುಮೆ ಮೂಲಕ

-ಡಾ ಅಶೋಕ್ ಕೆ ಆರ್
corruption

ಭಾರತದಲ್ಲಿ ಹಗರಣಗಳು ಹೊಸದಲ್ಲ, ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.

ಸಲಹೆ ಸೂಚನೆಗಳು ಜಾರಿಗೆ ಬರದಿರಲು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ, ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಅನಿವಾರ್ಯತೆ, ಅಧಿಕಾರಸ್ಥ ಪಕ್ಷಗಳೇ ಬದಲಾವಣೆಗೊಳ್ಳುವುದು ಮತ್ತು ಕೆಲವು ಸಂದರ್ಭದಲ್ಲಿ ಆರೋಪಕ್ಕೊಳಗಾದವರು ಮತ್ತು ವಿವಿಧ ಕಾರಣಗಳಿಂದ ಅವರಿಗೆ ಬೆಂಬಲ ನೀಡುವವರು ಪ್ರತಿಭಟನೆಯ ರೂಪದಲ್ಲಿ ವಿರೋಧ ವ್ಯಕ್ತಪಡಿಸುವುದು. ಬಿಜೆಪಿಯ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ಸಿಗೆ ಅವಕಾಶ ನೀಡಿದ ಕರ್ನಾಟಕದ ಮತದಾರ ಕಳೆದೊಂದೂವರೆ ವರುಷದಿಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಭ್ರಮನಿರಸನಕ್ಕೊಳಗಾಗಿರುವುದೇ ಅಧಿಕ.
ಹಿಂದಿನ ಸರಕಾರದ ಅಸಂಬದ್ಧ ನಡವಳಿಕೆಗಳು ಈ ಬಾರಿ ಕಾಣುತ್ತಿಲ್ಲವಾದರೂ ಕೆಲವು ಜನಪ್ರಿಯ ಯೋಜನೆಗಳನ್ನೊರತುಪಡಿಸಿದರೆ ಸರಕಾರದ ಕಾರ್ಯವೈಖರಿ ತೃಪ್ತಿಕರವಾಗಿಯಂತೂ ಇಲ್ಲ. ದಕ್ಷ ಆಡಳಿತಗಾರರೆಂಬ ಹೆಸರು ಪಡೆದಿದ್ದ ಸಿದ್ಧರಾಮಯ್ಯನವರ ಛಾಪು ಕಾಣದೆ ಹಳೆ ಕಾಂಗ್ರೆಸ್ ಸರಕಾರಗಳ ಛಾಪೇ ಕಾಣುತ್ತಿರುವುದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರ ವೈಫಲ್ಯವೆಂದೇ ಹೇಳಬಹುದು. ತತ್ ಕ್ಷಣದಲ್ಲಿ ವೋಟುಗಳಾಗಿ ಪರಿವರ್ತಿಸಬಲ್ಲ ಯೋಜನೆಗಳು ಅಧಿಕವಾಗುತ್ತಿವೆಯೇ ಹೊರತು ದೂರದೃಷ್ಟಿಯ ಯೋಜನೆಗಳ ಕೊರತೆ ಎದ್ದು ಕಾಣುತ್ತಿದೆ. ಒಂದಷ್ಟು ಏಳು ಬಹಳಷ್ಟು ಬೀಳುಗಳ ಜೊತೆಜೊತೆಗೆ ಸಾಗುತ್ತಿರುವ ಸಿದ್ಧರಾಮಯ್ಯ ಸರಕಾರ ಭವಿತವದ ದಿನಗಳಲ್ಲಿ ಮಹತ್ತರ ಪರಿಣಾಮ ಬೀರಬಹುದಾದ ಒಂದು ನಿರ್ಣಯ ತೆಗೆದುಕೊಂಡಿದೆ. ಕೆ.ಪಿ.ಎಸ್.ಸಿ ಹಗರಣದ ಸಂಬಂಧ ಸತತ ಮೂರು ತಿಂಗಳ ತನಿಖೆಯ ನಂತರ 10/09/2013ರಂದು ಸಿ.ಐ.ಡಿ ಪೋಲೀಸರು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿದ್ದ ಸೂಚನೆಗಳನ್ನು ಜಾರಿಗೊಳಿಸಲು ಮುಂದಾಗುವ ಮಹತ್ವದ ತೀರ್ಮಾನವನ್ನು ಸಿದ್ಧರಾಮಯ್ಯ ನೇತೃತ್ವದ ಸರಕಾರ ತೆಗೆದುಕೊಂಡಿದೆ. ಪಕ್ಷದೊಳಗಡೆಯೇ ಈ ವರದಿ ಜಾರಿಯಾಗಲು ಕೆಲವು ವಿರೋಧಗಳಿದ್ದಾಗ್ಯೂ ಸರಕಾರ ವಿಚಲಿತವಾಗದೆ ವರದಿಯನ್ನು ಜಾರಿಗೊಳಿಸಿದೆ.

ಏನಿದು ಕೆ.ಪಿ.ಎಸ್.ಸಿ ಹಗರಣ?

ಇದು ಮೂರು ವರುಷಕ್ಕೂ ಮುಂಚೆ ನಡೆದ ಬಹುದೊಡ್ಡ ಹಗರಣ. ಅದಕ್ಕೂ ಹಿಂದಿನ ವರುಷಗಳಲ್ಲೂ ಕೆ.ಪಿ.ಎಸ್.ಸಿಯಲ್ಲಿ ಇದರಷ್ಟೇ ಬೃಹತ್ ಹಗರಣಗಳು ನಡೆದಿವೆಯಾದರೂ ಅವಕಾಶ ವಂಚಿತ ಅಭ್ಯರ್ಥಿಯೊಬ್ಬರ ಸತತ ಪ್ರಯತ್ನದಿಂದ 2011ರ ಕೆ.ಪಿ.ಎಸ್.ಸಿ ಹಗರಣ ಮಹತ್ವ ಪಡೆದುಕೊಂಡಿದೆ. ಕರ್ನಾಟಕದ ಅಧಿಕಾರಿ ವರ್ಗವನ್ನು ಆಯ್ಕೆ ಮಾಡಲು ಕೇಂದ್ರದ ಯು.ಪಿ.ಎಸ್.ಸಿ ಮಾದರಿಯಲ್ಲಿ Karnataka Public Service Commission (ಕೆ.ಪಿ.ಎಸ್.ಸಿ) ಇದೆ. ಆದರೆ ಕೆ.ಪಿ.ಎಸ್.ಸಿಯ ಪರೀಕ್ಷೆಗಳು ಮತ್ತು ಮೌಖಿಕ ಸಂದರ್ಶನಗಳೆಂದೂ ಯು.ಪಿ.ಎಸ್.ಸಿಯಷ್ಟು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ನಡೆದಿದ್ದೇ ಇಲ್ಲ. ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಹಗರಣಗಳೂ ಹೊಸದಲ್ಲ, ತನಿಖೆಗಳೂ ಹೊಸದಲ್ಲ. ಹಿಂದೆ 1998,1999 ಮತ್ತು 2004ರ ಪರೀಕ್ಷೆಗಳ ಬಗೆಗೂ ತನಿಖೆಗಳು ಸಿಐಡಿ ಸಂಸ್ಥೆಯಿಂದಲೇ ನಡೆದಿತ್ತು. ಎ.ಕೆ.ಮೋನಪ್ಪ ಮತ್ತು ಇತರೆ ಹನ್ನೊಂದು ಆರೋಪಿಗಳ ಮೇಲಿನ ಪ್ರಕರಣ ವಿಚಾರಣೆಯಲ್ಲಿದೆ. ಹಿಂದೆ ಕೆ.ಪಿ.ಎಸ್.ಸಿಯ ಅಧ್ಯಕ್ಷರಾಗಿದ್ದ ಡಾ.ಹೆಚ್.ಎನ್ ಕೃಷ್ಣ ತಮ್ಮ ಮೇಲಿನ ಆರೋಪಗಳಿಂದಾಗಿ ಜೈಲು ಸೇರಿದ್ದರು. ಹೆಚ್.ಎನ್.ಕೃಷ್ಣ ಮತ್ತಿತರ ಐದು ಜನರ ಮೇಲಿನ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಎಲ್ಲಾ ತನಿಖೆಗಳು ತಿಳಿಸುವುದೇನೆಂದರೆ ಕರ್ನಾಟಕವನ್ನು ಮುನ್ನಡೆಸುವ ಜವಾಬ್ದಾರಿ ಹೊರುವ ಆಡಳಿತಾಧಿಕಾರಿಗಳ ನೇಮಕದ ಸಂದರ್ಭದಲ್ಲೇ ಬೃಹತ್ ಭ್ರಷ್ಟಾಚಾರ ನಡೆದುಹೋಗುತ್ತಿದೆ. ಭ್ರಷ್ಟತೆಯ ಮುಖಾಂತರ ಅಧಿಕಾರ ಹಿಡಿದ ಅಧಿಕಾರಿಗಳಿಂದ ಮತ್ತೊಂದು ಸುತ್ತಿನ ಭ್ರಷ್ಟಾಚಾರವನ್ನೇ ನಿರೀಕ್ಷಿಸಬೇಕೆ ಹೊರತು ಉತ್ತಮ ಜನಪರ ಆಡಳಿತವನ್ನಲ್ಲ.

03/11/2011ರಂದು ಕೆ.ಪಿ.ಎಸ್.ಸಿ 362 ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಆಹ್ವಾನಿಸುತ್ತಾರೆ. ಪ್ರಿಲಿಮನರಿ ಪರೀಕ್ಷೆ ಹಾಜರಾದ ಸರಿಸುಮಾರು ಲಕ್ಷ ಅಭ್ಯರ್ಥಗಳಲ್ಲಿ 7188 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಗಿಟ್ಟಿಸುತ್ತಾರೆ. ಮುಖ್ಯ ಪರೀಕ್ಷೆಯ ಮುಖಾಂತರ ಮೌಖಿಕ ಸಂದರ್ಶನಕ್ಕೆ ಆಯ್ಕೆಯಾದವರು 1085 ಅಭ್ಯರ್ಥಿಗಳು. ಮುಖ್ಯ ಪರೀಕ್ಷೆಯ ಫಲಿತಾಂಶ ಬಂದಿದ್ದು 16/03/2013ರಂದು. ಸಂದರ್ಶನದಲ್ಲಿ ಹಣ, ಪ್ರಭಾವ, ಜಾತಿ ಮುಖ್ಯವಾಗುತ್ತದೆಯೇ ಹೊರತು ಪ್ರತಿಭೆಯಲ್ಲ. ಹಣ ನೀಡದ ಅಭ್ಯರ್ಥಿಗೆ ಕಡಿಮೆ ಅಂಕ ನೀಡಿ, ಹಣ ನೀಡಿದ ಅಭ್ಯರ್ಥಿಗೆ ಹೆಚ್ಚು ಅಂಕ ನೀಡಿ ಮುಖ್ಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಅಭ್ಯರ್ಥಿ ಉನ್ನತ ಅಧಿಕಾರ ಪಡೆಯುವಂತೆ, ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಣ ನೀಡಿದವರಿಗಿಂತಲೂ ಪ್ರತಿಭಾವಂತರಾಗಿದ್ದ ಅಭ್ಯರ್ಥಿಗಳಿಗೆ ನೈಜವಾಗಿ ಸಿಗಬೇಕಿದ್ದ ಉನ್ನತ ಅಧಿಕಾರ ತಪ್ಪಿಸಲಾಗುತ್ತದೆ. ಇದು ಪ್ರತಿ ಬಾರಿಯೂ ನಡೆಯುತ್ತಿದ್ದ ಸಂಗತಿಯೇ ಆದರೂ ಈ ಬಾರಿ ಒಬ್ಬ ಅಭ್ಯರ್ಥಿ ಇಡೀ ವ್ಯವಸ್ಥೆಯ ವಿರುದ್ಧ ಹೋರಾಡಲು ನಿರ್ಧರಿಸುತ್ತಾಳೆ. ಆಕೆ ಡಾ.ಮೈತ್ರಿ.

ಪರಿಶಿಷ್ಟ ಪಂಗಡಕ್ಕೆ ಸೇರಿದ ಡಾ.ಮೈತ್ರಿ ಆ ಪಂಗಡದಲ್ಲಿ(ಪ.ಪಂ – ಮಹಿಳೆ) ಅತಿ ಹೆಚ್ಚು ಅಂಕ (1009) ಗಳಿಸುತ್ತಾರೆ. ಅವರ ನಂತರದ ಸ್ಥಾನದಲ್ಲಿದ್ದ ಅಭ್ಯರ್ಥಿ ಸುಪ್ರಿಯಾ ಬಣಗಾರ್ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ್ದ ಅಂಕ 937. ರೆವಿನ್ಯೂ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಹುದ್ದೆ ಬೇಕೆಂದರೆ 75ಲಕ್ಷದಿಂದ ಒಂದೂವರೆ ಕೋಟಿವರೆಗೆ ಲಂಚ ನೀಡಬೇಕಾಗುತ್ತದೆ. ಕೆ.ಪಿ.ಎಸ್.ಸಿ ಸದಸ್ಯರೊಲ್ಲಬ್ಬರಾದ ಮಂಗಳಾ ಶ್ರೀಧರ್ ನೇರವಾಗಿ ಮತ್ತು ತಮ್ಮ ಸಹಾಯಕ ಅಶೋಕ್ ಕುಮಾರ್ ಕಡೆಯಿಂದ ಡಾ.ಮೈತ್ರಿಯನ್ನು ಸಂಪರ್ಕಿಸಿ ಹಣಕ್ಕೆ ಒತ್ತಾಯಿಸುತ್ತಾರೆ. ಯಾವಾಗ ಡಾ.ಮೈತ್ರಿ ಹಣ ನೀಡಲು ಒಪ್ಪುವುದಿಲ್ಲವೋ ಸಂದರ್ಶನದಲ್ಲಿ ಅಂಕ ನೀಡುವಾಗ ದುರುದ್ದೇಶಪೂರ್ವಿತವಾಗಿ ವ್ಯತ್ಯಾಸ ಮಾಡಲಾಗುತ್ತದೆ. ಡಾ.ಮೈತ್ರಿಗೆ 75 ಅಂಕಗಳನ್ನಷ್ಟೇ ನೀಡಿ, ಸುಪ್ರಿಯಾ ಬಣಗಾರಳಿಗೆ 150 ಅಂಕ ನೀಡಲಾಗುತ್ತದೆ. ಅಲ್ಲಿಗೆ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಒಟ್ಟು ಅಂಕಗಳನ್ನು ಕೂಡಿದರೆ ಮೈತ್ರಿ 1084 ಅಂಕ ಗಳಿಸಿದರೆ ಸುಪ್ರಿಯಾ 1087 ಅಂಕ ಗಳಿಸುತ್ತಾರೆ. ತನಗಾದ ಅನ್ಯಾಯದಿಂದ ಕ್ರೋಧಗೊಂಡ ಡಾ.ಮೈತ್ರಿ ಅಡ್ವೋಕೇಟ್ ಜನರಲ್ ರವರಿಗೆ ಮಂಗಳಾ ಶ್ರೀಧರ್ ಮತ್ತು ಅಶೋಕ್ ಕುಮಾರ್ ವಿರುದ್ಧ ದೂರು ನೀಡುತ್ತಾರೆ. ಇದೇ ಸಮಯದಲ್ಲಿ ಮತ್ತಷ್ಟು ನೊಂದ ಅಭ್ಯರ್ಥಿಗಳ ಪರವಾಗಿ ಗಂಗಾಧರ್ ಎಂಬುವವರು ಕೆ.ಪಿ.ಎಸ್.ಸಿ ಅಧ್ಯಕ್ಷರಾದ ಗೋನಾಳ್ ಭೀಮಪ್ಪ, ಕಾರ್ಯದರ್ಶಿ ಸುಂದರ್, ವಿಶೇಷ ಅಧಿಕಾರಿ ಅರುಣಾಚಲಮ್ ಮತ್ತಿತರರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ದೂರು ನೀಡುತ್ತಾರೆ. ಮಾಜಿ ಸಚಿವ ಬಿ.ಕೆ. ಚಂದ್ರಶೇಖರ್ ಮುಖ್ಯಮಂತ್ರಿಗೆ ಪತ್ರ ಬರೆದು ಇಡೀ ಸಂದರ್ಶನವನ್ನು ಹೊಸ ಸದಸ್ಯರನ್ನು ನೇಮಿಸಿ ಪುನರ್ ನಡೆಸಬೇಕೆಂದು ಮನವಿ ಮಾಡುತ್ತಾರೆ. ಇದೇ ವೇಳೆಗೆ ಟಿ.ವಿ 9 ಕನ್ನಡ ಸುದ್ದಿ ವಾಹಿನಿ ಕುಟುಕು ಕಾರ್ಯಾಚರಣೆ ನಡೆಸಿ ಕೆ.ಪಿ.ಎಸ್.ಸಿ ಸದಸ್ಯರ ಏಜೆಂಟರು ಪ್ರತಿಯೊಂದು  ಹುದ್ದೆಗಾಗೂ ಇಂತಿಷ್ಟೆಂದು ಹಣ ಕೀಳುವ ಸಂಗತಿಯನ್ನು ಜಗಜ್ಜಾಹೀರುಗೊಳಿಸಿತು. ಈ ಎಲ್ಲಾ ಕಾರಣಗಳಿಂದಾಗಿ ಸಿಐಡಿಗೆ ಈ ಪ್ರಕರಣವನ್ನು ಒಪ್ಪಿಸಲಾಗುತ್ತದೆ. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪಡೆದೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುತ್ತಾರೆ.

ಉಳಿದ ಅನೇಕ ತನಿಖೆಗಳಂತೆಯೇ ಈ ತನಿಖೆಯೂ ಮತ್ತದರ ವರದಿಯೂ ಧೂಳು ಹಿಡಿಯುತ್ತಿತ್ತೋ ಏನೋ ಆದರೆ ತನಿಖಾ ವರದಿ ಒಳಗಿನವರಿಂದಲೇ ಸೋರಿಕೆಯಾಗಿ ಅದರ ಸಂಪೂರ್ಣ ವರದಿಯನ್ನು ಪ್ರಜಾವಾಣಿ ಪ್ರಕಟಿಸಿತು(ವರದಿ ಮಾಡಿದ್ದು ರವೀಂದ್ರ ಭಟ್ಟ). ಅನೇಕ ಅಚ್ಚರಿಯ ಆಘಾತಕ್ಕೊಳಪಡಿಸುವ ವಿಷಯಗಳಿದ್ದವು ಆ ವರದಿಯಲ್ಲಿ. ಸೋರಿಕೆಯಾದ ವರದಿ, ಆ ವರದಿಯ ಪರಿಣಾಮದಿಂದ ರೂಪುಗೊಂಡ ಚಳುವಳಿಗಳೆಲ್ಲವೂ ಸತತವಾಗಿ ಸರಕಾರದ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದವು. ಕರ್ನಾಟಕದ ಅಡ್ವೋಕೇಟ್ ರವಿವರ್ಮ ಕುಮಾರ್ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ ಕೆಲವು ಅಭ್ಯರ್ಥಿಗಳ ಆಯ್ಕೆಯನ್ನು ಊರ್ಜಿತಗೊಳಿಸಿ, ಕೆಲವರದನ್ನು ಅನೂರ್ಜಿತಗೊಳಿಸುವುದು ಕಷ್ಟದ ಕೆಲಸ. ಇಡೀ ಆಯ್ಕೆ ಪ್ರಕ್ರಿಯೆಯನ್ನೇ ಅನೂರ್ಜಿತಗೊಳಿದಲ್ಲಿ ಕೆಲವು ಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆ ಆಗಿಬಿಡುತ್ತದೆ. ಭ್ರಷ್ಟಾಚಾರ ನಡೆಸಿದ ಅಭ್ಯರ್ಥಿಗಳ್ಯಾರು ನಡೆಸದ ಅಭ್ಯರ್ಥಿಗಳ್ಯಾರು ಎಂಬುದನ್ನು ತನಿಖೆಯಿಂದ ಸಂಪೂರ್ಣವಾಗಿ ಅರಿಯಲಾಗದಿದ್ದರೆ ಇಡೀ ಆಯ್ಕೆ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಅಡ್ವೋಕೇಟ್ ಜನರಲ್. ಅವರ ಅಭಿಪ್ರಾಯದ ನಂತರ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುತ್ತದೆ, ಮೂರು ತಿಂಗಳ ಪರಿಶ್ರಮದ ನಂತರ ಸಿಐಡಿ ಸರಕಾರಕ್ಕೆ ತನ್ನ ವರದಿಯನ್ನು ಒಪ್ಪಿಸುತ್ತದೆ. ತನಿಖೆ ಕೇವಲ ಗೋನಾಳ್ ಭೀಮಪ್ಪ, ಸುಂದರ್, ಅರುಣಾಚಲಮ್, ಮಂಗಳಾ ಶ್ರೀಧರ್, ಅಶೋಕ್ ಕುಮಾರರಿಗೆ ಸೀಮಿತವಾಗದೆ ಕೆ.ಪಿ.ಎಸ್.ಸಿಯ ಇನ್ನಿತರ ಸದಸ್ಯರು, ಆ ಸದಸ್ಯರ ಸಹಾಯಕರು, ಏಜೆಂಟರನ್ನೆಲ್ಲ ಒಳಗೊಂಡಿದೆ. ವರದಿಯ ಆಧಾರದ ಮೇಲೆ ಆಂತರಿಕ ಒತ್ತಡಗಳಿದ್ದಾಗ್ಯೂ ಸಿದ್ಧರಾಮಯ್ಯ ಇಡೀ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಆ ಎಲ್ಲಾ 362 ಹುದ್ದೆಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸುವ ನಿರ್ಣಯ ಕೈಗೊಂಡಿದ್ದಾರೆ.

ಇದು ಸುಲಭದ ನಿರ್ಣಯವಲ್ಲ

ಸರಕಾರ ತನ್ನ ನಿರ್ಧಾರ ಪ್ರಕಟಿಸಿದ ಮೇಲೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಹೋರಾಟ ಸರಕಾರದ ನಿರ್ಣಯವನ್ನೇ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡುತ್ತಿದೆ. ವೈಯಕ್ತಿಕ ಕಾರಣಕ್ಕೋ ರಾಜಕೀಯ ಕಾರಣಕ್ಕೋ ರಾಜಕಾರಣಿಗಳು ಈ ‘ನೊಂದ’ ಅಭ್ಯರ್ಥಿಗಳ ಪರ ನಿಂತಿದ್ದಾರೆ. ಈ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಮುಖ್ಯ ವಾದವೆಂದರೆ ‘ನಾವು ಮೂರು ನಾಲ್ಕು ವರುಷ ಕಷ್ಟಪಟ್ಟು ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾಗಿ ಸಂದರ್ಶನದಲ್ಲೂ ಆಯ್ಕೆಗೊಂಡು ಹುದ್ದೆ ಪಡೆದಿದ್ದೀವಿ. ಈಗ ಇಡೀ ಪ್ರಕ್ರಿಯೆಯನ್ನೇ ರದ್ದು ಪಡಿಸಿಬಿಟ್ಟರೆ ನಮ್ಮ ಗತಿಯೇನು? ಈಗ ಹೊಸದಾಗಿ ಪರೀಕ್ಷೆ ಬರೆದು ಹೊಸ ಅಭ್ಯರ್ಥಗಳೊಡನೆ ಸ್ಪರ್ಧಿಸಿ ಮತ್ತೊಮ್ಮೆ ಆಯ್ಕೆಯಾಗಲು ಸಾಧ್ಯವೇ?’ ‘ನಮಗೀಗ ಸಂಸಾರವಿದೆ, ಮಕ್ಕಳಿವೆ. ಓದಲು ಹೇಗೆ ಸಾಧ್ಯ?’ ‘ಮೈತ್ರಿಯೆಂಬ ಅಭ್ಯರ್ಥಿಗೆ ಆದ ಅನ್ಯಾಯಕ್ಕೆ ನಮಗೆಲ್ಲಾ ಯಾಕೆ ಶಿಕ್ಷೆ?’ ‘ಮೈತ್ರಿಗಿಂತ ಹೆಚ್ಚು ಅಂಕಗಳನ್ನು ಮುಖ್ಯ ಪರೀಕ್ಷೆಯಲ್ಲಿ ಪಡೆದು, ಸಂದರ್ಶನದಲ್ಲಿ ಆಕೆಗಿಂತ ಕಡಿಮೆ ಅಂಕ ಪಡೆದಿದ್ದೇವೆ. ಆದರೂ ಸಿಕ್ಕ ಹುದ್ದೆಗೆ ತೃಪ್ತಿ ಪಟ್ಟುಕೊಂಡಿದ್ದ ನಮ್ಮ ಜೀವನದ ಜೊತೆ ಆಟವಾಡಬಾರದು’ ‘ಕೆ.ಪಿ.ಎಸ್.ಸಿಗೆ ಹೊಸ ಸದಸ್ಯರನ್ನು ನೇಮಿಸಿ ಮತ್ತೊಮ್ಮೆ ಸಂದರ್ಶನ ಮಾಡಬಹುದಲ್ಲ’. ಮೇಲ್ನೋಟಕ್ಕೆ ಇವೆಲ್ಲಾ ವಾದಗಳೂ ಸರಿಯೆನ್ನಿಸುತ್ತವೆ. ಹಣ ನೀಡಲಾಗದ ಪ್ರತಿಭಾವಂತರಾಗಿದ್ದೂ ಮನೆಯ ಕಡೆಯ ಕಷ್ಟದ ಕಾರಣಕ್ಕೆ ಸಿಕ್ಕ ಕೆಲಸ ಒಪ್ಪಿಕೊಂಡವರು ಇದ್ದೇ ಇರುತ್ತಾರೆ. ಆದರೆ ಬಹಳಷ್ಟು ಅಭ್ಯರ್ಥಿಗಳು ಹಣ, ಪ್ರಭಾವದ ಮುಖಾಂತರವೇ ಆಯ್ಕೆಯಾಗಿರುವುದು ಸುಳ್ಳಲ್ಲ. ಯಾವ ಅಭ್ಯರ್ಥಿಯೂ ಪ್ರಾಮಾಣಿಕವಾಗಿ ನಾನಿಷ್ಟು ಹಣ ನೀಡಿ ಹುದ್ದೆ ಪಡೆದಿದ್ದೇನೆ. ಈಗ ಹಣವೂ ಹೋಯಿತು, ಹುದ್ದೆಯೂ ಹೋಯಿತು ಎಂಬ ಹೇಳಿಕೆ ನೀಡಿದ್ದು ವರದಿಯಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳೆಲ್ಲ ಮೇಲ್ ಮಧ್ಯಮ ಅಥವಾ ಶ್ರೀಮಂತ ವರ್ಗದವರೇನಲ್ಲ, ಅವರಲ್ಲನೇಕರು ನೀಡಿರುವ ಲಂಚದ ಹಣವೂ ಸಾಲದ್ದೇ ಆಗಿರುತ್ತದೆ. ಯಾವ ಧೈರ್ಯದ ಮೇಲೆ ಸಾಲ ಮಾಡಿರುತ್ತಾರೆಂಬುದನ್ನು ವಿವರಿಸಬೇಕಿಲ್ಲ.

ಮತ್ತೊಮ್ಮೆ ಸಂದರ್ಶನ ಮಾಡುವುದು ಇದಕ್ಕೆಲ್ಲಾ ಪರಿಹಾರವಾಗುತ್ತದಲ್ಲ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಸಿ.ಐ.ಡಿ ವರದಿಯನ್ನು ಸಂಪೂರ್ಣವಾಗಿ ಓದಿದವರಾರೂ ಈ ಚರ್ಚೆ ನಡೆಸುವುದಿಲ್ಲ. ಕಾರಣ ಭ್ರಷ್ಟಾಚಾರವೆಂಬುದು ಕೇವಲ ಸಂದರ್ಶನದಲ್ಲಿ ನಡೆದ ಸಂಗತಿಯಲ್ಲ. ಲಿಖಿತ ಪರೀಕ್ಷೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಿಐಡಿ ವರದಿ ಒತ್ತಿ ಹೇಳುತ್ತದೆ. ಗೋನಾಳ್ ಭೀಮಪ್ಪರವರ ಸೂಚನೆಯ ಮೇರೆಗೆ ಜಿಯೋಗ್ರಫಿಯನ್ನು ಐಚ್ಛಿಕವಾಗಿ ಪಡೆದುಕೊಂಡ ಅಭ್ಯರ್ಥಿಗಳಿಗೆ ಹೆಚ್ಚೆಚ್ಚು ಅಂಕಗಳನ್ನು ನೀಡಲಾಗಿದೆ. ಎಕನಾಮಿಕ್ಸ್ ಪ್ರೊಫೆಸರ್ ಗ್ರಾಮೀಣಾಭಿವೃದ್ಧಿಯ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದರೆ ಆ್ಯಂಥ್ರಪಾಲಜಿ ಪತ್ರಿಕೆಯನ್ನು ಸೋಷಿಯಾಲಜಿ ಅಧ್ಯಾಪಕರು ಮೌಲ್ಯಮಾಪನ ಮಾಡುತ್ತಾರೆ! ಆಂಗ್ಲ ಪತ್ರಿಕೆಗಳನ್ನು ಕನ್ನಡ ಉಪನ್ಯಾಸಕರು ಕನ್ನಡ ಪತ್ರಿಕೆಯನ್ನು ಆಂಗ್ಲ ಉಪನ್ಯಾಸಕರು ಮೌಲ್ಯಮಾಪನ ಮಾಡುವ ವಿಸ್ಮಯವೂ ಕೆ.ಪಿ.ಎಸ್.ಸಿಯಲ್ಲಿ ನಡೆದುಬಿಡುತ್ತದೆ! ಪ್ರಭಾವಿ ವ್ಯಕ್ತಿಗಳ ಸಂಬಂಧಿಗಳು ಮುಖ್ಯ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿದ ಅಂಕಗಳನ್ನು ಪಡೆದ ವಿವರಗಳೂ ಸಿಐಡಿ ವರದಿಯಲ್ಲಿದೆ. ಕೆ.ಪಿ.ಎಸ್.ಸಿ ಅಧಿಕಾರಿಯ ಮಗನಾದ ಅಭಿಷೇಕ್ ಹೆಗ್ಡೆ ಪ್ರಿಲಿಮಿನರಿ ಪರೀಕ್ಷೆಯಲ್ಲಿ 236 ಅಂಕಗಳನ್ನು ಪಡೆದು ಮುಖ್ಯ ಪರೀಕ್ಷೆಗೆ ಅರ್ಹತೆ ಗಿಟ್ಟಿಸುತ್ತಾನೆ. ಮುಖ್ಯ ಪರೀಕ್ಷೆಯಲ್ಲಿ ಉತ್ತಮವೇ ಎನ್ನಬಹುದಾದ 995 ಅಂಕಗಳನ್ನು ಪಡೆದು ಸಂದರ್ಶನದಲ್ಲಿ ಅತ್ಯುತ್ತಮ 150 ಅಂಕಗಳನ್ನು ಗಳಿಸುತ್ತಾನೆ. ಅಭಿಷೇಕ್ ಹೆಗ್ಡೆಯ ತಾಯಿ ಕೆ.ಪಿ.ಎಸ್.ಸಿಯಲ್ಲಿನ ಅಧಿಕಾರಿ ಪದ್ಮರೇಖ ಅನೇಕ ಕೆ.ಪಿ.ಎಸ್.ಸಿ ಸದಸ್ಯರನ್ನು ಮತ್ತವರ ಸಹಾಯಕರನ್ನು ಸಂಪರ್ಕಿಸಿರುವುದಕ್ಕೆ ಅನೇಕ ಸಾಕ್ಷಿಗಳು ಲಭಿಸುತ್ತವೆ. ಇವಿಷ್ಟೇ ಅಲ್ಲದೆ ಕೆ.ಪಿ.ಎಸ್.ಸಿಯಲ್ಲಿ ಮೌಲ್ಯಮಾಪನ ಮಾಡಲು ವಿವಿಧ ವಿಶ್ವವಿದ್ಯಾಲಯಗಳು ಅರ್ಹ ಮೌಲ್ಯಮಾಪಕರ ಪಟ್ಟಿಯನ್ನು ಕೆ.ಪಿ.ಎಸ್.ಸಿಗೆ ಕಳುಹಿಸಿಕೊಡುತ್ತದೆ. ಅರ್ಹ ಮೌಲ್ಯಮಾಪಕರು ಲಭ್ಯವಿದ್ದರೂ ಅನರ್ಹರಿಂದ ಮೌಲ್ಯಮಾಪನ ಮಾಡಿಸುತ್ತದೆ ಕೆ.ಪಿ.ಎಸ್.ಸಿ. ಮೊದಲು ಮತ್ತು ಎರಡನೇ ಮೌಲ್ಯಮಾಪನದಲ್ಲಿ ಬಹಳಷ್ಟು ವ್ಯತ್ಯಾಸಗಳು ಗೋಚರಿಸುತ್ತವೆ. ವ್ಯತ್ಯಾಸಗಳು 45 ಅಂಕಗಳಿಗಿಂತ ಅಧಿಕವಿದ್ದ ಪಕ್ಷದಲ್ಲಿ ಮೂರನೇ ಮೌಲ್ಯಮಾಪನ ನಡೆಯಬೇಕು. ಅಚ್ಚರಿಯೆಂದರೆ ತೊಂಭತ್ತೈದು ಪ್ರತಿಶತಃಕ್ಕೂ ಅಧಿಕ ಪ್ರಕರಣಗಳಲ್ಲಿ ಮೂರನೇ ಮೌಲ್ಯಮಾಪನದ ಅಂಕ ಮೊದಲ ಮತ್ತು ಎರಡನೆಯದಕ್ಕಿಂತ ಅಧಿಕ! ಮರುಎಣಿಕೆಗೆ ಹಾಕಿದ ಸಂದರ್ಭದಲ್ಲೂ ಅಂಕಗಳನ್ನು ತಿದ್ದುವ ಕೆಲಸವಾಗಿರುವುದು ಫೊರೆನ್ಸಿಕ್ ವರದಿಗಳಿಂದ ಸಾಬೀತಾಗಿದೆ. ಮೌಲ್ಯಮಾಪಕರನ್ನು ಅಭ್ಯರ್ಥಿಗಳು ಸಂಪರ್ಕ ಮಾಡಿದ ಉದಾಹರಣೆಗಳೂ ಇದೆ. ಒಟ್ಟಿನಲ್ಲಿ ಇವೆಲ್ಲವೂ ಏನನ್ನು ಸಾಬೀತುಪಡಿಸುತ್ತವೆಂದರೆ ಸಂದರ್ಶನಕ್ಕೆ ಆಯ್ಕೆಯಾಗುವ ಮುಂಚಿನಿಂದಲೂ ಇಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ. ಇಡೀ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಲು ಲಿಖಿತ ಪರೀಕ್ಷೆ ನಡೆದ ರೀತಿಯೇ ಸಾಕೆನ್ನಿಸುತ್ತದೆ ಸಿಐಡಿ ವರದಿ ಓದಿದಾಗ. ಅಲ್ಲಿಗೆ ಮತ್ತೊಮ್ಮೆ ಸಂದರ್ಶನ ನಡೆಸಿಬಿಟ್ಟರೆ ಆದ ಅನ್ಯಾಯಗಳೆಲ್ಲ ಸರಿಯಾಗಿಬಿಡುತ್ತದೆ ಎಂಬುದಂತೂ ಸುಳ್ಳು.

ಕೆ.ಪಿ.ಎಸ್.ಸಿ ಇರಲಿ, ಯು.ಪಿ.ಎಸ್.ಸಿ ಇರಲಿ ಪ್ರಿಲಿಮನರಿ ಪರೀಕ್ಷೆಗಳನ್ನೂ ಪಾಸು ಮಾಡಲು ಅಭ್ಯರ್ಥಿಗಳು ಪಡುವ ಕಷ್ಟಗಳು ಅನುಭವಿಸಿದವರಿಗೇ ಗೊತ್ತು. ಏನೂ ಕೆಲಸ ಮಾಡದೆ ಏನೋ ಓದ್ತಾ ಕುಂತವ್ರೆ ಎಂಬ ಮಾತು ಕೇಳಿ ಕೇಳಿಯೇ ಓದುತ್ತಿರುತ್ತಾರೆ. 2011ರ ಕೆ.ಪಿ.ಎಸ್.ಸಿಯಲ್ಲಿ ಆಯ್ಕೆಯಾಗಿದ್ದ 362 ಮಂದಿಯೂ ಇದೇ ರೀತಿ ಕಷ್ಟ ಪಟ್ಟಿರುತ್ತಾರೆ. ಅವರು ಲಿಖಿತ ಪರೀಕ್ಷೆಯಲ್ಲಿ ಅನ್ಯಾಯ ನಡೆಸಿದ್ದರೂ ಸಂದರ್ಶನದಲ್ಲಿ ಹಣ ಚೆಲ್ಲಿದ್ದರೂ ಪರೀಕ್ಷೆಗಾಗಿ ಅವರು ಅಗಾಧ ಪರಿಶ್ರಮದಿಂದಲೇ ಓದಿರುತ್ತಾರೆ. ಅವರ ಬಗ್ಗೆ ಎಷ್ಟೆಲ್ಲಾ ಅನುಕಂಪ ತೋರಿಸಿದರೂ ಅವರಲ್ಲಿ ಬಹುತೇಕರು ಭ್ರಷ್ಟಾಚಾರದ ಭಾಗವಾಗಿರುವ ಸಂಗತಿ ಸುಳ್ಳಾಗಲಾರದು. ಹಣ ನೀಡಿ ಹಣ ಮಾಡಲೆಂದೇ ಒಂದಿಡೀ ಅಧಿಕಾರ ವರ್ಗ ಸೃಷ್ಟಿಯಾದರೆ ಮುಂದೆ ಕಷ್ಟವನ್ನನುಭವಿಸುವುದು ಜನತೆ ಎಂಬುದನ್ನು ಮರೆಯಬಾರದು. ಇದು 362 ಜನರ ಭವಿತವ್ಯವಷ್ಟೇ ಅಲ್ಲ ಇಡೀ ಕರ್ನಾಟಕದ ಆಡಳಿತದ ಭವಿಷ್ಯ, ಜನರ ಭವಿಷ್ಯ. ಯಾವುದೇ ಲಂಚ ನೀಡದೆ ಹುದ್ದೆ ಪಡೆದುಕೊಂಡವರೇ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿರುವಾಗ ಲಕ್ಷಗಟ್ಟಲೇ, ಕೋಟಿಗಟ್ಟಲೇ ಹಣ ಸುರಿದು ಹುದ್ದೆಯೇರಿದವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆಂದು ನಂಬಲಾಗುತ್ತದೆಯೇ? ಈ ಕಾರಣಕ್ಕಾಗೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭ್ಯರ್ಥಿಗಳ ಪರವಾಗಿ ಸರಕಾರದ ವಿರುದ್ಧ, ಮೈತ್ರಿ ಮತ್ತವರ ತಂದೆಯ ವಿರುದ್ಧ ಕೀಳು ಮಟ್ಟದ ವೈಯಕ್ತಿಕ ಆರೋಪಗಳನ್ನು ಹೊರಿಸಿದಾಗ್ಯೂ ಅವರದೇ ಪಕ್ಷದ ಎಂ.ಸಿ.ನಾಣಯ್ಯ ಮತ್ತು ವೈ.ಎಸ್.ವಿ. ದತ್ತಾ ಸರಕಾರದ ಪರವಾಗಿ ಮಾತನಾಡುತ್ತಿರುವುದು. ಇಲ್ಲಿರುವ ಪ್ರಶ್ನೆ ಮುನ್ನೂರವತ್ತೆರಡು ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿರದೆ ಒಂದು ಭ್ರಷ್ಟ ಕೂಪವನ್ನು ನಿಗ್ರಹಿಸುವ ಪ್ರಶ್ನೆಯಾಗಿದೆ. ಸರಕಾರದ ಇದೊಂದು ನಿರ್ಣಯದಿಂದ ಕರ್ನಾಟಕ ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಬಿಡುವುದಿಲ್ಲ. ಕೆ.ಪಿ.ಎಸ್.ಸಿ ಸದಸ್ಯರ ನೇಮಕದಲ್ಲೇ ಭ್ರಷ್ಟಾಚಾರ, ಜಾತಿ ರಾಜಕಾರಣವಿದೆ. ಆ ಭ್ರಷ್ಟಾಚಾರ ನಂತರ ಅಭ್ಯರ್ಥಿಗಳ ಆಯ್ಕೆಯಲ್ಲಿ ಭ್ರಷ್ಟತೆ ಮೂಡಿಸಿ ತದನಂತರ ಅಧಿಕಾರಿಗಳು ಜನರಿಂದ ಹಣವನ್ನು ಸುಲಿಯುವಂತೆ ಮಾಡುತ್ತದೆ. ಒಬ್ಬರು ಮತ್ತೊಬ್ಬರೆಡೆಗೆ ಕೈತೋರಿಸುತ್ತಾರಷ್ಟೇ! ಉಳಿದದ್ದೇನೆ ಇರಲಿ ಸರಕಾರದ ಈ ನಿರ್ಣಯ ಮುಂದಿನ ದಿನಗಳಲ್ಲೂ ಬದಲಾಗದಿದ್ದರೆ ಕೊನೇ ಪಕ್ಷ ಮುಂದಿನ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಹಣ ನೀಡಲು ಸಿದ್ಧನಾದ ಅಭ್ಯರ್ಥಿಯೊಬ್ಬ ಕೆ.ಪಿ.ಎಸ್.ಸಿ 2011ರ ಹಗರಣವನ್ನು ನೆನಪಿಸಿಕೊಂಡು ಹಣ ನೀಡಲು ಹಿಂಜರಿದರೆ ಅಷ್ಟರಮಟ್ಟಿಗೆ ಭ್ರಷ್ಟಾಚಾರವನ್ನು ಹತ್ತಿಕ್ಕಿದ ಕೀರ್ತಿ ಸಿದ್ಧರಾಮಯ್ಯರವರಿಗೆ ಲಭಿಸುತ್ತದರಲ್ಲಿ ಸಂಶಯವಿಲ್ಲ.

*‌*‌‌*‌*****************

ಚಿತ್ರಕೃಪೆ: ಗೂಗಲ್ ಇಮೇಜ್

3 ಟಿಪ್ಪಣಿಗಳು Post a comment
  1. ಆಗಸ್ಟ್ 15 2014

    Good article. CM deserves full credit for taking bold decision.

    ಉತ್ತರ
  2. Shiva Prakash
    ಆಗಸ್ಟ್ 15 2014

    Thanks for your un-biased article

    ಉತ್ತರ
  3. Pavan
    ಆಗಸ್ಟ್ 20 2014

    I have faced same problem with KPSC when I have shortlisted for AD post in Servery department. I have got 79% in Engg and one of my friend got 72% in engg, he got 14 marks in the interview(Suresh Gowda MLA from Tumkur came to do lobby for him) and I got 4 marks(I do not have any god father in KPSC or in Politics 😦 ) in Interview. finally that guy selected and I did not get selected.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments