ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2014

11

ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು

‍ರಾಕೇಶ್ ಶೆಟ್ಟಿ ಮೂಲಕ

ಡಾ.ಸಂತೋಷ್ ಕುಮಾರ್ ಪಿ.ಕೆ

ಗಂಗಾ ಪೂಜೆ

ಭಾರತದ ಸಮಾಜ ಉದ್ದಾರವಾಗಬೇಕಾದರೆ ಇಲ್ಲಿಯ ಸಾಮಾಜಿಕ ಕೊಳೆಯನ್ನು ತೆಗೆಯಬೇಕು ಎಂಬುದು ಸುಧಾರಣಾವಾದಿಗಳು ಹಾಗೂ ಪ್ರಗತಿಪರರ ಮೂಲಮಂತ್ರವಾಗಿದೆ. ಇಂತಹ ಕಾರ್ಯವನ್ನು ಕೈಗೊಳ್ಳಲು ಸಮಾಜವನ್ನೇ ಹಿಡಿತದಲ್ಲಿಟ್ಟುಕೊಂಡು ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿರುವ ಪುರೋಹಿತಶಾಹಿಯನ್ನು ನಾಶಮಾಡುವುದೇ ಅವರ ಗುರಿಯಾಗಿದೆ. ಆದರೆ ಪುರೋಹಿತಶಾಹಿಯ ಸಮಸ್ಯೆ ಭಾರತದ ಬ್ರಾಹ್ಮಣರನ್ನು ನೋಡಿಬಿಟ್ಟರೆ ಅರ್ಥವಾಗುವುದಿಲ್ಲ. ಅದರ ಬದಲು ಆ ಪರಿಕಲ್ಪನೆ ಹಿಂದಿರುವ ಸತ್ಯಾಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಪುರೋಹಿತಶಾಹಿ ಎಂಬುದು ಪ್ರೀಸ್ಟ್ ಹುಡ್ ನ ತರ್ಜುಮೆಯಾಗಿದೆ. ಆದರೆ ಇದು ಸರಿಯಾದ ಅನುವಾದವಲ್ಲ, ಕಾರಣ ಅದಕ್ಕೆ ಸಮನಾದ ಪದ ಕನ್ನಡದಲ್ಲಿ ಇಲ್ಲ ಎಂಬುದಷ್ಟೇ ಅಲ್ಲ ಬದಲಿಗೆ ಆ ಪರಿಭಾಷೆಯೇ ನಮಗೆ ಅರ್ಥವಾಗುವುದಿಲ್ಲ. ಜೊತೆಗೆ ಯಾವುದನ್ನು ಪ್ರೀಸ್ಟ್ ಹುಡ್ ಎಂದು ಪರಿಭಾವಿಸಲಾಗುತ್ತಿದೆಯೋ ಅಂತಹ ವಿದ್ಯಮಾನವೇ ಭಾರತದಲ್ಲಿ ಇಲ್ಲ.

ಪಾಶ್ಚಾತ್ಯರು ಅದರಲ್ಲಿಯೂ ವಿಶೇಷವಾಗಿ ಕ್ರೈಸ್ತರಲ್ಲಿನ ಕ್ಯಾಥೋಲಿಕ್ಕರಲ್ಲಿ ಈ ಪ್ರೀಸ್ಟ್ ಹುಡ್ ಕಲ್ಪನೆ ಮತ್ತು ಅದರ ಸ್ಥಾನಬೆಳೆಯಿತು. ಕ್ರಿಶ್ಚಿಯನ್ ಚರ್ಚುಗಳಲ್ಲಿ ಪ್ರೀಸ್ಟ್ ಹುಡ್ ಎಂಬ ಸ್ಥಾನವಿದೆ. ಪ್ರೀಸ್ಟ್ ಎಂಬವನು ಜನರು ಹಾಗೂ ಗಾಡ್ ನಡುವೆ ಮಧ್ಯವರ್ತಿಯಾಗಿ ರಿಲಿಜನ್ನಿನ ಆಚರಣೆಗಳನ್ನು ನಡೆಸಿಕೊಡುತ್ತಾನೆ. ಅವನಿಗೆ ಈ ಅಧಿಕಾರವನ್ನು ಚರ್ಚಿನ ವ್ಯವಸ್ಥೆ ನೀಡಿರುತ್ತದೆ. ಹಾಗೂ ಅದು ಗಾಡ್ ಕ್ರೈಸ್ತನೊಬ್ಬನಿಗೆ ನೀಡಬಹುದಾದ ಸರ್ವಶ್ರೇಷ್ಠ ಸ್ಥಾನಮಾನ ಎಂಬುದಾಗಿ ಅವರ ಪವಿತ್ರಗ್ರಂಥವು ಹೇಳುತ್ತದೆ. ಚರ್ಚಿನ ವ್ಯವಸ್ಥೆಯು ಎಲ್ಲಾ ಕ್ರಿಶ್ಚಿಯನ್ನರಿಗೂ ಒಂದೇ ರೀತಿ ಅನ್ವಯವಾಗುತ್ತದೆಯಾದ್ದರಿಂದ ಪ್ರೀಸ್ಟ್ನ ಅಧಿಕಾರಕ್ಕೆ ಎಲ್ಲರೂ ಸಮಾನವಾಗಿ ಒಳಗಾಗುತ್ತಾರೆ. ಕ್ಯಾಥೋಲಿಕರು ತಮ್ಮ ಚರ್ಚಿನಲ್ಲಿ ಈ ವ್ಯವಸ್ಥೆಯನ್ನು ತೀರಾ ಕಠಿಣವಾಗಿ ಪಾಲಿಸಿಕೊಂಡು ಬಂದಿದ್ದರು.ಇವರ ಪ್ರಧಾನ ಕೆಲಸ ಜನರಿಗೂ ಮತ್ತು ಗಾಡ್ ಗೂ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುವ ಮೂಲಕ ರಿಲಿಜನ್ನನ್ನು ಮತ್ತು ಅದರ ಸಮುದಾಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ಆಗಿತ್ತು. ಆದ್ದರಿಂದಲೇ ಪ್ರತೀ ಭಾನುವಾರವು ಗಾಡ್ ನನ್ನು ಸ್ಮರಿಸಲು ಪ್ರಾರ್ಥನೆಯನ್ನು ಮಾಡಲೇಬೇಕು ಎಂದು ಚರ್ಚ್ ನಲ್ಲಿ ಎಲ್ಲರನ್ನು ಸೇರಿಸುವ ಕಾರ್ಯವೂ ಅವರದ್ದೇ ಆಗಿತ್ತು.

ಜನರನ್ನು ಒಂದೆಡೆ ಸೇರಿಸುವುದು ಅಷ್ಟೇ ಅಲ್ಲ, ಅವರ ಆಚಾರ ವಿಚಾರಗಳನ್ನು ಹಾಗೂ ಧಾರ್ಮಿಕ ಕ್ರಿಯಾವಿಧಿಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಸಂಪೂರ್ಣ ಹೊಣೆಗಾರಿಕೆ ಈ ಪ್ರೀಸ್ಟ್ ಗಳ ಮೇಲೆ ಇತ್ತು. ಕ್ರೈಸ್ತರ ಬೈಬಲ್ ನ್ನು ಸಾಮಾನ್ಯವಾಗಿ ಎರಡು ಪ್ರಕಾರವಾಗಿ ನೋಡಲಾಗುತ್ತದೆ. ಹಳೆಯ ಮತ್ತು ಹೊಸ ಒಡಂಬಡಿಕೆ ಎಂದು ಅವುಗಳನ್ನು ಕರೆಯಲಾಗುತ್ತದೆ. ‘ಹಳೆಯ ಒಡಂಬಡಿಕೆಯ’ ಪ್ರಕಾರ ‘ಲೆವಿ ಬುಡಕಟ್ಟನ್ನು’ ಪ್ರಿಸ್ಟ್ ಗಳನ್ನಾಗಿ ಗಾಡ್ ನೇ ಆಯ್ಕೆ ಮಾಡಿದನು. ನಂತರ ಬಂದಂತಹ ‘ಹೊಸ ಒಡಂಬಡಿಕೆ’ಯ ಪ್ರಕಾರ ಏಸು ಕ್ರಿಸ್ತನೇ ಪರಮೋಚ್ಚ ಪ್ರೀಸ್ಟ್ ಆಗಿದ್ದನು, ಆಕೆಂದರೆ ಪ್ರೀಸ್ಟ್ ಮಾಡಬೇಕಾದ ವರ್ಷಿಪ್ ಮತ್ತು ಬಲಿದಾನದ ಕಾರ್ಯವನ್ನು ಏಸುವು ಸ್ವತಃ ಶಿಲುಬೆಗೆ ಏರಿ ಉನ್ನತ ಸ್ಥಾನ ಪಡೆದನು. ಹಾಗಾಗಿ ಕ್ರೈಸ್ತರ ರಿಲಿಜನ್ ನಲ್ಲಿ ಪ್ರೀಸ್ಟ್ ಗಳಿಗೆ ವಿಶೇಷವಾದ ಮತ್ತು ನ್ಯಾಯಸಮ್ಮತವಾದ ಸ್ಥಾನಮಾನವನ್ನು ಗ್ರಂಥಗಳೇ ಒದಗಿಸಿಕೊಡುತ್ತವೆ.

16 ನೆಯ ಶತಮಾನದಲ್ಲಿ ಕ್ಯಾಥೋಲಿಕರ ವಿರುದ್ಧ ಸಮರ ಸಾರಿದ ಪ್ರೊಟೆಸ್ಟಾಂಟರು ಮೊದಲು ಹಲ್ಲೆ ಮಾಡಿದ್ದು ಈ ಪ್ರೀಸ್ಟ್ಹುಡ್ ಮೇಲೆ. ಮಾರ್ಟಿನ್ ಲೂಥರ್ ಈ ಚಳುವಳಿಯ ಮುಂದಾಳುವಾಗಿದ್ದನು. ಅವನು ಬೈಬಲ್ಲಿನ ಹೊಸ ಒಡಂಬಡಿಕೆಯ ಭಾಗಗಳನ್ನು ಆಧರಿಸಿ ಪ್ರೀಸ್ಟ್ಹುಡ್ನ ಕಲ್ಪನೆಯನ್ನು ಮರುನಿರೂಪಿಸಿದನು. ಆ ಪ್ರಕಾರ ಎಲ್ಲಾ ಕ್ರೈಸ್ತರೂ ಪ್ರೀಸ್ಟ್ಗಳೇ ಆಗುತ್ತಾರೆ. ಆದರೆ ಕ್ಯಾಥೋಲಿಕರು ಪವಿತ್ರ ಗ್ರಂಥಕ್ಕೆ ವಿರುದ್ಧವಾಗಿ ಅದನ್ನು ಒಂದು ಸಂಸ್ಥೆಯಾಗಿ ಬೆಳೆಸಿದ್ದರಿಂದ ಅದೊಂದು ಶೋಷಣೆಯ ಸಾಧನವಾಯಿತು. ಈ ಕ್ಯಾಥೋಲಿಕ್ ಪ್ರೀಸ್ಟ್ಗಳು ಕ್ರೈಸ್ತರನ್ನು ವಿಭಾಗಿಸಿ ತರತಮಗಳನ್ನು ಹುಟ್ಟುಹಾಕಿದ್ದಾರೆ, ಪವಿತ್ರಗ್ರಂಥವನ್ನು ಸಾಮಾನ್ಯರಿಂದ ದೂರ ಇಟ್ಟು ಅವರನ್ನು ಸತ್ಯದಿಂದ ವಂಚಿಸಿದ್ದಾರೆ, ಪೇಗನ್ ಆಚರಣೆಗಳನ್ನು, ಮೂರ್ತಿಪೂಜೆಯನ್ನು ಪ್ರಚಲಿತದಲ್ಲಿ ತಂದು ಸುಳ್ಳು ರಿಲಿಜನ್ನನ್ನು ಪ್ರಚಾರ ಮಾಡಿದ್ದಾರೆ  ಎಂದೆಲ್ಲಾ ಲೂಥರ್ ಟೀಕಿಸಿದನು. ಅವನ ಸುಧಾರಣೆ ಎಂದರೆ ಇದನ್ನೆಲ್ಲ ತೊಡೆಯುವುದೇ ಆಗಿತ್ತು.ಆದರೂ ಕ್ಯಾಥೋಲಿಕ್ ಅನುಯಾಯಿಗಳು ಇಂದಿಗೂ ಪ್ರೀಸ್ಟ್ ಹುಡ್ ನಲ್ಲಿ ನಂಬಿಕೆಯನ್ನು ಇರಿಸಿದ್ದಾರೆಂಬುದಕ್ಕೆ ರೋಮ್ ನ ಪೋಪ್ ಗೆ ಇರುವ ಅತ್ಯಂತ ಗೌರವಯುತ ಸ್ಥಾನಮಾನ.

ಜಗತ್ತಿನ ಎಲ್ಲಾ ಕ್ಯಾಥೋಲಿಕ್ ಭಾಂದವರನ್ನು ನಿರ್ದೇಶೀಸುವ ಮತ್ತು ನಿಯಂತ್ರಿಸುವ ಕಾರ್ಯವನ್ನು ವ್ಯಾಟಿಕನ್ ಸಿಟಿಯಲ್ಲಿರುವ ಪೋಪ್ ಮಾಡುತ್ತಾರೆ, ಆಧುನಿಕ ಕಾಲಘಟ್ಟದಲ್ಲಿ ಇವರೇ ಹೈ ಪ್ರೀಸ್ಟ್ ಎಂದರೂ ತಪ್ಪಾಗಲಾರದು, ಇನ್ನು ವಿಶ್ವದಾದ್ಯಂತ ಇರುವ ಚರ್ಚುಗಳ ಪ್ರೀಸ್ಟ್ ಗಳು ಇವರ ಅಡಿಯಲ್ಲಿ ಬರುತ್ತಾರೆ. ಕ್ಯಾಥೋಲಿಕ್ ಸಮುದಾಯವನ್ನು ಆಳುವ ಮತ್ತು ಅವರಿಗೆ ಎಲ್ಲಾ ಬಗೆಯ ಧಾರ್ಮಿಕ ಕ್ರಿಯಾವಿಧಿಗಳನ್ನು ಭೋದಿಸುವ ಅಧಿಕಾರ ಇವರಿಗೆ ಇರುತ್ತದೆ. ಪೋಪ್ ನಿಂದ ಹಿಡಿದು ಡಯಕೋನೆಟ್ ವರೆಗೂ ಪ್ರೀಸ್ಟ್ ಗಳ ಶ್ರೇಣೀಕರಣ ವ್ಯವಸ್ಥೆ ನಿಚ್ಚಳವಾಗಿ ಕಂಡುಬರುತ್ತದೆ. ಅಂದರೆ ಪ್ರೀಸ್ಟ್ ಗಳಲ್ಲಿಯೂ ಶ್ರೇಣಿಕೃತ ವ್ಯವಸ್ಥೆ ಇದ್ದು ಅವರ ಸಮುದಾಯವನ್ನು ಒಂದೊಂದು ಹಂತದಲ್ಲಿ ಒಂದೊಂದು ಹಂತದ ಪ್ರೀಸ್ಟ್ ಗಳು ನಿಯಂತ್ರಿಸುತ್ತಿರುತ್ತಾರೆ.

ಇದಿಷ್ಟು ಪ್ರೀಸ್ಟ್ ಹುಡ್ ಹಿಂದಿರುವ ನಿಜಾಂಶಗಳು. ಈ ಹಿನ್ನೆಯಲ್ಲಿಯೇ ಭಾರತಕ್ಕೆ ಬಂದಂತಹ ಪಾಶ್ಚಾತ್ಯರು ಮೊದಲು ಸಮಾಜವನ್ನು ನಿಯಂತ್ರಿಸುವ ಶಕ್ತಿ ಎಲ್ಲಿದೆ ಎಂಬುದನ್ನ ಹುಡುಕಲು ಆಸಕ್ತಿ ತೋರಿದರು, ಮೇಲ್ನೋಟಕ್ಕೆ ಬ್ರಾಹ್ಮಣರು ಪ್ರೀಸ್ಟಗಳಂತೆ ಅವರಿಗೆ ಕಂಡುಬಂದು. ಹಿಂದೂಯಿಸಂ ಕೂಡ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿಯಂತೆ ಒಂದು ರಿಲಿಜನ್ನು ಎಂದು ಅವರು ಅಂದುಕೊಂಡರು. ಕ್ಯಾಥೋಲಿಕ್ ರಿಲಿಜನ್ನಿನಲ್ಲಿ ಪುರೋಹಿತರ ಸ್ಥಾನಮಾನವು ಅತ್ಯುಚ್ಚವಾದುದು ಏಕೆಂದರೆ ಅವರು ಅತ್ಯಂತ ಪವಿತ್ರರು. ಬ್ರಾಹ್ಮಣರು ಹಿಂದೂಯಿಸಂನ ಪುರೋಹಿತಶಾಹಿಯಾಗಿದ್ದಾರೆ, ಅವರು ಯಜ್ಞ-ಯಾಗಾದಿ ಹಿಂದೂ ವಿಧಿ ಆಚರಣೆಗಳನ್ನು ರೂಪಿಸಿ ಅದರಲ್ಲಿ ಬೇರೆ ಬೇರೆ ಜಾತಿಗಳನ್ನು ತರತಮದಲ್ಲಿ ಒಳಗೊಳ್ಳುತ್ತಾರೆ. ಈ ಹಿಂದೂ ವಿಧಿ ಆಚರಣೆಗಳಲ್ಲಿ ಬ್ರಾಹ್ಮಣರು ಅತ್ಯುಚ್ಚ ಸ್ಥಾನಮಾನವನ್ನು ಹೊಂದುತ್ತಾರೆ ಹಾಗೂ ಅದೇ ಅವರ ಜಾತಿ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎಂಬುದು ಇವರ ವಾದವಾಗಿದೆ.

ಆದರೆ ಭಾರತದ ಯಾವ ಪುರೋಹಿತರನ್ನು ನೋಡಿದರೂ ಅವರ ಆಳ್ವಿಕೆ ಯಾರ ಮೇಲಿದೆ ಎಂಬುದು ಮಾತ್ರ ತಿಳಿಯುವುದಿಲ್ಲ. ಎಲ್ಲಾ ಕ್ಯಾಥೋಲಿಕ್ಕರನ್ನು ಪೋಪ್ ನಿಯಂತ್ರಿಸುವಂತೆ ಮತ್ತು ಕ್ರಿಯಾವಿಧಿಗಳಿಗೆ ನಿರ್ದೇಶನ ನೀಡುವಂತೆ ಬ್ರಾಹ್ಮಣ ಪುರೋಹಿತರು ಹಿಂದೂ ಸಮುದಾಯವನ್ನು ನಿಯಂತ್ರಿಸುತ್ತಿರುವುದಕ್ಕೆ ಯಾವ ನಿದರ್ಶನಗಳೂ ದೊರಕುವುದಿಲ್ಲ, ಹಾಗೂ ಪ್ರಗತಿಪರರು ಹೊಡೆಯುವ ಬೊಬ್ಬೆಯೂ ಸಹ ಪುರೋಹಿತಶಾಹಿತ್ವಕ್ಕೆ ಸಾಕ್ಷ್ಯವಂತೂ ಖಂಡಿತವಲ್ಲ. ಉದಾಹರಣೆಗೆ ಇಲ್ಲಿಯ ವೈವಿಧ್ಯಮಯ ಸಮುದಾಯಗಳು ತಮ್ಮ ವಿವಾಹಗಳನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತವೆ. ಅದರಲ್ಲಿ ಬ್ರಾಹ್ಮಣ ಅಥವಾ ಇನ್ನಾವುದೋ ಜಾತಿಯ ಪುರೋಹಿತರಿದ್ದರೂ ಸಹ  ಆ ಸಮುದಾಯದ ಪದ್ದತಿಯ ಅನ್ವಯವೇ ವಿವಾಹವಾಗುತ್ತದೆ. ಕುರುಬರ ವಿವಾಹಕ್ಕೂ, ಬಂಟರ ವಿವಾಹ ಪದ್ದತಿಗೂ ವ್ಯತ್ಯಾಸವಿದೆ, ಬ್ರಾಹ್ಮಣರೇ ಈ ಎರಡೂ ವಿವಾಹಗಳಿಗೆ ಪುರೋಹಿತರಾದರೂ ಎರಡನ್ನೂ ವಿಭಿನ್ನವಾಗಿಯೇ ನಡೆಸುತ್ತಾರೆ, ಏಕೆಂದರೆ ಆ ಕ್ರಿಯಾವಿಧಿಯನ್ನು ನಿರ್ಣಯಿಸುವ ಅಂತಿಮ ಅಧಿಕಾರ ಆ ಸಮುದಾಯಕ್ಕೆ ಇರುತ್ತದೆಯೇ ಹೊರತು ಪುರೋಹಿತರಿಗೆ ಅಲ್ಲ.

ಹಾಗೆಯೇ ಪ್ರೀಸ್ಟ್ ಗಳಲ್ಲಿ ಇರುವಂತಹ ಶ್ರೇಣೀಕರಣ ಭಾರತದ ಪುರೋಹಿತರಲ್ಲಿ ಕಂಡುಬರುವುದಿಲ್ಲ, ಏಕೆಂದರೆ ಪುರೋಹಿತಶಾಹಿ ಎಂಬ ವ್ಯವಸ್ಥಿತ ಸಮುದಾಯವೇ ಅಸ್ತಿತ್ವದಲ್ಲಿ ಇಲ್ಲ. ಬ್ರಾಹ್ಮಣರಲ್ಲೇ, ಅದರಲ್ಲೂ ಪುರೋಹಿತರ ಮನೆಯಲ್ಲೇ ಅನೇಕ ಧಾರ್ಮಿಕ ವಿಧಿಗಳನ್ನು ಹೆಂಗಸರೇ ನಡೆಸುತ್ತಾರೆ. ಬ್ರಾಹ್ಮಣೇತರರಲ್ಲಿ ಕೆಲವು ಸಂದರ್ಭಗಳನ್ನು ಬಿಟ್ಟರೆ ಉಳಿದೆಲ್ಲಾ ಧಾರ್ಮಿಕ ವಿಧಿಗಳನ್ನೂ ಅವರದೇ ಆದ ಐನೋರು, ದಾಸಯ್ಯ, ಜೋಗಯ್ಯ, ಇತ್ಯಾದಿ ಪುರೋಹಿತರು ನಡೆಸುತ್ತಾರೆ, ಇಲ್ಲ ಮನೆಯ ಯಜಮಾನನೊ, ಯಜಮಾನ್ತಿಯೊ ನಡೆಸುತ್ತಾರೆ. ಅವರ ಕಟ್ಟು ಕಟ್ಟಳೆಗಳು ಅವರವರ ಸಂಪ್ರದಾಯಗಳಿಂದ ನಿರ್ಧಾರವಾಗುತ್ತವೆ. ಬ್ರಾಹ್ಮಣೇತರ ಜಾತಿಗಳಿಗೂ ಬ್ರಾಹ್ಮಣ ಜಾತಿಗಳಂತೆ ಅವರವರದೇ ದೇವಾಲಯ, ಮಠಗಳೆಲ್ಲವೂ ಇರುತ್ತವೆ. ಅಲ್ಲೆಲ್ಲ ಅವರವರ ಜಾತಿಯ ಅರ್ಚಕರು ಹಾಗೂ ಪದ್ಧತಿಗಳೇ ಇರುತ್ತವೆ. ಹಾಗಾಗಿ ನಮ್ಮ ಪುರೋಹಿತರು ಕೇವಲ ಬ್ರಾಹ್ಮಣರದೊಂದೇ ಅಲ್ಲ, ಯಾರ ಸಾಂಪ್ರದಾಯಿಕ ವಿಧಿಗಳು ಹಾಗೂ ಕಟ್ಟು ಕಟ್ಟಳೆಗಳನ್ನು ಕೂಡ ರೂಪಿಸುವವರೂ ಅಲ್ಲ, ನಿಯಂತ್ರಿಸುವವರೂ ಅಲ್ಲ. ಅವರು ಉಳಿದ ಕುಶಲ ಕರ್ಮಿಗಳಂತೆ ಜನರು ಬೇಡಿದ ಕಾರ್ಯವನ್ನು ನಡೆಸಿಕೊಟ್ಟು ಉಪಜೀವನ ನಡೆಸುವವರಾಗಿದ್ದಾರೆ. ಈ ಉಪಜೀವನದಿಂದ ಏನೇನು ಅಧಿಕಾರ ಹಾಗೂ ಅದರ ದುರುಪಯೋಗ ಸಾಧ್ಯವೊ ಅಷ್ಟನ್ನು ಕೆಲವರು ಚಲಾಯಿಸಿರಲೂಬಹುದು.

ಒಟ್ಟಿನಲ್ಲಿ ಭಾರತದ ಯಾವ ಪುರೋಹಿತರನ್ನು ತೆಗೆದುಕೊಂಡರೂ ಅವರ ಶಾಹಿತ್ವ ಮಾತ್ರ ಎಲ್ಲಿಯೂ ಕಾಣಸಿಗುವುದಿಲ್ಲ. ಪುರೋಹಿತರು ಇದ್ದ ಮಾತ್ರಕ್ಕೆ ಅಲ್ಲಿ ಪುರೋಹಿತಶಾಹಿ ಇದೆ ಎಂಬುದು ತನ್ನಷ್ಟಕ್ಕೆ ಸಾಬೀತೂ ಆಗುವುದಿಲ್ಲ. ಉದಾಹರಣೆಗೆ ಒಂದು ಅಂಗಡಿಯಲ್ಲಿ ಸಿಗರೇಟ್ ಇದೆ ಎಂದ ಮಾತ್ರಕ್ಕೆ ಅಂಗಡಿಯವನ್ನು ಸೇದುತ್ತಾನೆ ಎಂಬುದು ಸಾಬೀತು ಆಗಲಾರದು, ಅಲ್ಲಿ ಸಿಗರೇಟ್ ಇದೆ ಹಾಗಾಗಿ ಸೇದುತ್ತಾನೆ ಎಂದು ಹೇಳಿದರೆ ಅದು ಅವಸರದ ಮತ್ತು ಅತಾರ್ಕಿಕ ಹೇಳಿಕೆಯಾಗುತ್ತದೆ. ಕ್ಯಾಥೋಲಿಕ್ ಕ್ರೈಸ್ತ ಕನ್ನಡಕವನ್ನು ಹಾಕಿಕೊಂಡು ಭಾರತವನ್ನು ನೋಡಿದಾಗ ಇಲ್ಲಿನ ಬ್ರಾಹ್ಮಣರು ರೋಮನ್ ಕ್ಯಾಥೋಲಿಕ್ಕರಂತೆ ಕಂಡುಬಂದುದರಿಂದ ಹಲವಾರು ಅಪಾರ್ಥಗಳು ಹುಟ್ಟಿಕೊಂಡಿವೆ.

Read more from ಲೇಖನಗಳು
11 ಟಿಪ್ಪಣಿಗಳು Post a comment
 1. sks
  ಆಗಸ್ಟ್ 18 2014

  ಉಡುಪಿಯಲ್ಲಿ ೭-೮ ಮಠಗಳ ಸೌಧಗಳಿವೆಯಲ್ಲ? ಮತ್ತು ಈ ಮಠಗಳು ಈಗಲೂ ’rotation’ ಪದ್ಧತಿಯ ಅನ್ವಯ ಅಧಿಕಾರ ಪಡೆಯುತ್ವಲ? ಈದು ಪುರೋಹಿತಷಾಹಿ ಅಲ್ಲವೆ?

  ಉತ್ತರ
  • JAYARAMA BHAT
   ಆಗಸ್ಟ್ 19 2014

   ಪುರೋಹಿತಷಾಹಿ ಎ೦ದರೆ ಏನು ಎ೦ಬುದನ್ನು ಲೇಖನದಲ್ಲಿ ಹೇಳಿದೆ. ಈ ಅರ್ಥದಲ್ಲಿ ಉದುಪಿಯ ಮಠಗಳ ವ್ಯವಸ್ಠೆ ಪುರೋಹಿತಷಾಹಿ ಅಲ್ಲ.

   ಉತ್ತರ
 2. vipra
  ಆಗಸ್ಟ್ 19 2014

  bullshit who wrote these he dnt know about bharmins and bharmin culture these all bullshit keep it close and dnt publish anything about bharmins………

  ಉತ್ತರ
 3. vasudeva
  ಆಗಸ್ಟ್ 19 2014

  ಸಂತೋಷ್ ಕುಮಾರ್ ಅವರೆ,
  ಪುರೋಹಿತರ ನಿಂದನೆ ಎಂದರೆ ಬ್ರಾಹ್ಮಣ ಜಾತಿಯ ನಿಂದನೆಯಲ್ಲ ಎಂದು ಪ್ರಗತಿಪರರು ಈಗಾಗಲೇ ಸ್ಪಷ್ಟಪಡಿಸಿರುವರಲ್ಲ. ಪುರೋಹಿತರೆಂದರೆ ಬ್ರಾಹ್ಮಣರು ಎಂದೇಕೆ ಭಾವಿಸುವಿರಿ? ಅನ್ಯಾಜಾತಿಗಳಲ್ಲೂ ಜೋಗಯ್ಯ, ದಾಸಯ್ಯ, ಐನೋರು ಇತ್ಯಾದಿ ಪುರೋಹಿತರಿರುವರು ಎಂಬ ಅಂಶ ನಿಮ್ಮ ಲೇಖನದಲ್ಲೇ ವ್ಯಕ್ತವಾಗಿದೆ. ಅಂದ ಮೇಲೆ ವೃಥಾ ವ್ಯಾಕುಲವೇಕೆ? ಯೋಗ್ಯರಾದ ಬ್ರಾಹ್ಮಣರಿಗೆ ಸಮಾಜದಲ್ಲಿ ಗೌರವ ಇದ್ದೇ ಇದೆ. ’ಪುರೋಹಿತ’ ಎಂಬ ಪದದ ಬಗ್ಗೆ ಆಳದಲ್ಲಿ ನಿಮಗಿರುವ ಪ್ರೀತಿ, ಮಮಕಾರಗಳು ನಿಮ್ಮನ್ನು ಬಾಧಿಸುತ್ತಿದೆಯೇ ವಿನಃ ಪ್ರಗತಿಪರರ ಚಿಂತನೆಯಲ್ಲ.

  ಉತ್ತರ
  • JAYARAMA BHAT
   ಆಗಸ್ಟ್ 19 2014

   ಪುರೋಹಿತರನ್ನೇಕೆ ನಿ೦ದಿಸಬೇಕು? ಪ್ರಗತಿಪರರಿಗೆ ಪುರೋಹಿತರ ಸೇವೆ ಅಗತ್ಯವಿಲ್ಲದಿರಬಹುದು. ಆದರೆ ನಿ೦ದಿಸುವ ಅಗತ್ಯ ಏನಿದೆ? ಪರನಿ೦ದನೆಯೇ ಪ್ರಗತಿಯ ಸ೦ಕೇತವೇನು?

   ಉತ್ತರ
   • vasudeva
    ಆಗಸ್ಟ್ 19 2014

    ಜಯರಾಮ ಭಟ್ಟರೇ,
    ಶಕ್ತಿ ಮತ್ತು ಜವಾಬ್ದಾರಿಯುಳ್ಳವರು ತಮ್ಮ ಶಕ್ತಿ, ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದೇ ಹೋದರೆ ಲೋಕದ ಜನ ಅವರನ್ನು ನಿಂದಿಸುವುದು ಸಹಜ. ಈ ದೇಶದ ಬೌದ್ಧಿಕ ಶಕ್ತಿಯ ಉಸ್ತುವಾರಿ ವಹಿಸಿದ್ದವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ಈ ದೇಶ ಎರಡು ಸಾವಿರ ವರ್ಷಗಳ ಗುಲಾಮತನ ಅನುಭವಿಸುತ್ತಿರಲಿಲ್ಲ. ಲೋಕದ ಜನ ನಮ್ಮನ್ನು ನಿಂದಿಸಿದಾಗ ನಾವು ಪ್ರತಿನಿಂದನೆ ಮಾಡದೆ ದೋಷವೆಲ್ಲಿದೆ ಎಂಬುದನ್ನು ಬೆದಕುವುದು ವಿವೇಕವಲ್ಲವೇ? ಆಗ ದೋಷ ಹಾಗೆ ಬೆದಕುವವನಲ್ಲಿಲ್ಲ ಎಂಬುದಾದರೂ ಪ್ರಾಯಶಃ ತಿಳಿದೀತು..

    ಉತ್ತರ
    • JAYARAMA BHAT
     ಆಗಸ್ಟ್ 20 2014

     ದೇಶದ ಬೌದ್ಧಿಕ ಶಕ್ತಿಯ ಉಸ್ತುವಾರಿ ನಮ್ಮ ಊರಿನ ಬಡ ಪುರೋಹಿತರ ಮೇಲೆ ಇರಲಿಲ್ಲ. ಇವರು ಜನರಿಗೆ ಬೇಕಾಗಿದ್ದ ಸೇವೆ ಒದಗಿಸಿ ಸಾಮಾನ್ಯವಾಗಿ ಬಡತನದಲ್ಲಿ ಬದುಕಿದರು. ನೀವು ಯಾರ ಬಗ್ಗೆ ಬರೆಯುತ್ತಿದ್ದೀರೆ೦ದು ತಿಳಿಯಲಿಲ್ಲ.

     ಉತ್ತರ
    • ಆಗಸ್ಟ್ 20 2014

     ನೀವು ಯಾವ ವಿಷಯದ ಕುರಿತಾಗಿ ಮಾತನಾಡುತ್ತಿರುವಿರಿ ಎನ್ನುವುದೇ ತಿಳಿಯುತ್ತಿಲ್ಲ.
     ಮೊದಲಿಗೆ ನೀವು ಹೇಳಿದಿರಿ:
     [[ಪುರೋಹಿತರ ನಿಂದನೆ ಎಂದರೆ ಬ್ರಾಹ್ಮಣ ಜಾತಿಯ ನಿಂದನೆಯಲ್ಲ]]
     ಈಗ ಹೇಳುತ್ತಿರುವುರಿ:
     [[ಈ ದೇಶದ ಬೌದ್ಧಿಕ ಶಕ್ತಿಯ ಉಸ್ತುವಾರಿ ವಹಿಸಿದ್ದವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದರೆ ಈ ದೇಶ ಎರಡು ಸಾವಿರ ವರ್ಷಗಳ ಗುಲಾಮತನ ಅನುಭವಿಸುತ್ತಿರಲಿಲ್ಲ. ಲೋಕದ ಜನ ನಮ್ಮನ್ನು ನಿಂದಿಸಿದಾಗ ನಾವು ಪ್ರತಿನಿಂದನೆ ಮಾಡದೆ ದೋಷವೆಲ್ಲಿದೆ ಎಂಬುದನ್ನು ಬೆದಕುವುದು ವಿವೇಕವಲ್ಲವೇ]]

     ನೀವು ಬ್ರಾಹ್ಮಣ ಜಾತಿಯ ಕುರಿತಾಗಿ ಮಾತನಾಡುತ್ತಿಲ್ಲ ಎನ್ನುತ್ತಾ, ಮುಂದಿನ ಕಾಮೆಂಟಿನಲ್ಲೇ “ದೇಶದ ಬೌದ್ಧಿಕ ಉಸ್ತುವಾರಿ ವಹಿಸಿದ್ದವರು” ಇತ್ಯಾದಿ ಹೇಳಲು ಪ್ರಾರಂಭಿಸಿರುವಿರಿ.
     ಅಂದರೆ, ಬ್ರಾಹ್ಮಣರನ್ನು ನಿಂದಿಸುವುದೇ ನಿಮ್ಮ ಉದ್ದೇಶ ಎನ್ನುವುದು ನಿಮ್ಮ ಮಾತಿನಲ್ಲೇ ಸ್ಪಷ್ಟವಾಗುತ್ತಿದೆ ಅಲ್ಲವೇ?

     ಉತ್ತರ
  • ಆಗಸ್ಟ್ 20 2014

   Priest ಪುರೋಹಿತ ಅಲ್ಲ ಎಂದಾದ ಮೇಲೆ Priesthood ಎನ್ನುವುದು ಪುರೋಹಿತಶಾಹಿ ಅಲ್ಲ ಎನ್ನುವುದು ಸ್ಪಷ್ಟ.
   ಹೀಗಿದ್ದ ಮೇಲೆ, ನೀವು ಪುರೋಹಿತಶಾಹಿ ಎನ್ನುವ ಪದವನ್ನೇ ಬಳಸಬೇಕೆಂಬ ಹಠವೇಕೆ?
   ಪುರೋಹಿತ ಎನ್ನುವುದಕ್ಕೆ ಭಾರತದಲ್ಲಿ ಬೇರೆಯೇ ಆದ ಅರ್ಥವಿದೆ ಎನ್ನುವುದು ಸ್ಪಷ್ಟ.
   ಹೀಗಿದ್ದಾಗ್ಯೂ ನೀವು ಪುರೋಹಿತಶಾಹಿ ಪದವನ್ನೇ ಬಳಸಬೇಕೆಂದು ಹಠ ಮಾಡಿದರೆ, ನಿಮಗೆ ‘ಪುರೋಹಿತ’ ಪದಕ್ಕೆ ಮಸಿ ಬಳಿಯುವ ಉದ್ದೇಶವಲ್ಲದೆ ಮತ್ತೆ ಬೇರಾವ ಉದ್ದೇಶವೂ ಇಲ್ಲವೆಂದು ತಿಳಿಯುತ್ತದಲ್ಲವೇ?

   ಪ್ರಗತಿಪರರಿಗೆ ಭಾರತದಲ್ಲಿಯೂ Priesthood ಇದೆ, ಅದರಿಂದ ತೊಂದರೆಯಾಗುತ್ತಿದೆ ಮತ್ತು ಅದನ್ನು ತೊಲಗಿಸಬೇಕೆಂಬ ಹಂಬಲವಿದ್ದಲ್ಲಿ Priesthood ಎನ್ನುವ ಪದವನ್ನೇ ಬಳಸಿರಿ.

   ಉತ್ತರ
  • ಸಂತೋಷ
   ಆಗಸ್ಟ್ 21 2014

   [ಅನ್ಯಾಜಾತಿಗಳಲ್ಲೂ ಜೋಗಯ್ಯ, ದಾಸಯ್ಯ, ಐನೋರು ಇತ್ಯಾದಿ ಪುರೋಹಿತರಿರುವರು ಎಂಬ ಅಂಶ ನಿಮ್ಮ ಲೇಖನದಲ್ಲೇ ವ್ಯಕ್ತವಾಗಿದೆ.]

   ಹಾಗಿದ್ದಲ್ಲಿ, ಜೋಗಯ್ಯಶಾಹಿ, ದಾಸಯ್ಯಶಾಹಿ, ಐನೋರುಶಾಹಿ ಎಂದು ಬಳಸಿ. ಒಂದು ವರ್ಗಕ್ಕೆ ‘ಪುರೋಹಿತಶಾಹಿ’ ಪದದ ಬಳಕೆಗೆ ಆಕ್ಷೇಪ ಹಾಗು ವಿರೋಧವಿದ್ದರೂ ಸಹ, ಅವರ ವಿರೋಧವನ್ನು ಧಿಕ್ಕರಿಸಿ, ಅವರ ಮನಸ್ಸನ್ನು ನೋಯಿಸುವುದು ಯಾಕೆ?

   ಉತ್ತರ
 4. ಆಗಸ್ಟ್ 20 2014

  ಭಾರತವನ್ನು ಪಶ್ಚಿಮದ ಕನ್ನಡಕದ ಮೂಲಕ ನೋಡುವುದನ್ನು ಬಿಡುವ ತನಕ ಸಮಸ್ಯೆ ಮುಂದುವರೆಯುತ್ತದೆ.
  Priest ಪುರೋಹಿತ ಅಲ್ಲ.
  Religion ಅಂದರೆ ಧರ್ಮವಲ್ಲ.
  Church ಅಂದರೆ ದೇವಸ್ಥಾನವಲ್ಲ.
  Prayer ಅಂದರೆ ಪ್ರಾರ್ಥನೆಯಲ್ಲ.
  God ಅಂದರೆ ದೇವರು ಎಂದಾಗುವುದಿಲ್ಲ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments