ಪಾರತಂತ್ರ್ಯದಿಂದ ಮುಕ್ತವಾಗದ ಸ್ವಾತಂತ್ರ್ಯ
ಡಾ. ಸಂತೋಷ್ ಕುಮಾರ್ ಪಿ.ಕೆ.
(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ)
ಆಗಸ್ಟ್ ತಿಂಗಳು ಬಂದಿತೆಂದರೆ ಸ್ವಾತಂತ್ರ ದಿನಾಚರಣೆಯ ಸಂಭ್ರಮಕ್ಕೆ ಎಲ್ಲೆಡೆಯೂ ಭರ್ಜರಿ ಸಿದ್ಧತೆ ನಡೆಯವುದು ಸರ್ವೇಸಾಮಾನ್ಯ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳ ಮೇಲೆ ದೇಶದ ತ್ರಿವರ್ಣ ಬಾವುಟ ಹಾರಾಡುವುದು ನಮ್ಮ ದೇಶವು ಸ್ವತಂತ್ರ ಪಡೆದ ಸಂಕೇತವಾಗಿ ಗೋಚರಿಸುತ್ತದೆ. ಒಂದು ರಾಷ್ಟ್ರೀಯ ಹಬ್ಬವನ್ನಾಗಿ ಸ್ವತಂತ್ರ ದಿನಾಚರಣೆಯನ್ನು ಆಚರಿಸುವ ಮೂಲಕ ದೇಶದ ಜನರಲ್ಲಿ ಐತಿಹಾಸಿಕ ನೆನಪನ್ನು ಮರುಕಳಿಸುವ ಮೂಲಕ ದೇಶಪ್ರೇಮವನ್ನು ಬೆಳೆಸಲು ಪ್ರಯತ್ನಿಸಲಾಗುತ್ತದೆ. ರಾಷ್ಟ್ರೀಯ ಹಬ್ಬದ ಅಂಗವಾಗಿ ರಾಜಕೀಯ ನೇತಾರರು, ವಿವಿಧ ಕ್ಷೇತ್ರಗಳ ಗಣ್ಯರು ವರ್ಷಂಪ್ರತಿ ರಾಷ್ಟ್ರದ ಸಮಸ್ಯೆಗಳನ್ನು ಮತ್ತು ಮುಂದೆ ಆಗಬೇಕಿರುವ ಕಾರ್ಯಗಳನ್ನು ನೆನಪಿಸುವತ್ತ ತಮ್ಮ ಮಾತನ್ನು ಕೇಂದ್ರೀಕರಿಸಿರುತ್ತಾರೆ.
ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲಿ ನೇತಾರರ ಭಾಷಣಗಳನ್ನು ಆಲಿಸಿದರೆ ಒಂದು ರೀತಿಯ ಅತೃಪ್ತಿ ಅವರ ಮಾತುಗಳಲ್ಲಿ ಕಂಡುಬರುತ್ತದೆ. ಭಾರತವು ಸ್ವಾತಂತ್ರ ಪಡೆದು 6 ದಶಕ ಕಳೆದರೂ ನಮ್ಮ ನಿರೀಕ್ಷೆಗಳು ಈಡೇರಿಲ್ಲ ಎಂಬುದೇ ಆ ಅತೃಪ್ತಿಗೆ ಕಾರಣವಾಗಿದೆ. ರಾಷ್ಟ್ರವು ಅಭಿವೃದ್ಧಿಯಾಗ ಬೇಕಾದ ಮಟ್ಟಿಗೆ ಅಭಿವೃದ್ದಿಯಾಗದಿರುವುದು, ಮಹಿಳೆಯರಿಗೂ ಸಮಾನತೆ ಸ್ವಾತಂತ್ರ ದೊರಕದಿರುವುದು, ಕಾರ್ಮಿಕರ ಮೇಲಿನ ಶೋಷಣೆ ಜರುಗುತ್ತಿರುವುದು ಹಾಗೂ ರೈತ ಮೇಲಿನ ಅನ್ಯಾಯಗಳು ಹೀಗೆ ಇತ್ಯಾದಿ ಸಮಸ್ಯೆಗಳು ಇನ್ನೂ ಸಹ ಜೀವಂತವಾಗಿವೆ ಎಂದು ಸಾಕ್ಷಿ ಸಮೇತರಾಗಿ ಮಾತನಾಡುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಇದರ ಅರ್ಥ, ನಿಜವಾಗಿ ಭಾರತ ಸ್ವತಂತ್ರ ಪಡೆದು ಏನನ್ನು ಸಾಧಿಸಬೇಕಾಗಿತ್ತೋ ಅದನ್ನು ಸಾಧಿಸಿಲ್ಲ ಎಂಬುದು ಮಾತ್ರ ಮೇಲಿನ ಎಲ್ಲಾ ಅಂಶಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಅತೃಪ್ತಿ ಮತ್ತು ಸಮಾಜದಲ್ಲಿ ಜನಸಾಮಾನ್ಯರಿಗೆ ಇನ್ನೂ ಸ್ವಾತಂತ್ರ ದೊರಕಿಲ್ಲ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿರುವುದರಿಂದ ಇಂದು ನಾವು ಅಂತಹ ಸಮಸ್ಯೆಗಳ ಕುರಿತು ಬೇರೆ ರೀತಿಯಲ್ಲಿ ಆಲೋಚಿಸಬೇಕಾಗಿದೆ.
ಭಾರತವು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ನಂತರ ಭಾರತದ ಹಲವಾರು ಸಮಾಜ ಸುಧಾರಕರು, ಗಣ್ಯರು, ರಾಷ್ಟ್ರೀಯ ಕಾಂಗ್ರೇಸ್ನ ನೇತಾರರು ಬ್ರಿಟೀಷರ ವಿರುದ್ಧ ಚಳುವಳಿಯನ್ನು ರೂಪಿಸಿದರು. ಇದರ ಇತಿಹಾಸವು ಜನಜನಿತವಾಗಿರುವುದರಿಂದ ಅದನ್ನು ಇಲ್ಲಿ ಮತ್ತೆ ಪುನರಾವರ್ತಿಸುವ ಗೋಜಿಗೆ ಹೋಗುವುದಿಲ್ಲ. ಅದರ ಬದಲಿಗೆ ಸ್ವತಂತ್ರ ದಿನಾಚರಣೆಯ ತಿಂಗಳಲ್ಲಿ ನಾವು ಮೂಲಭೂತವಾಗಿ ಆಲೋಚಿಸಬೇಕಾದ ವಿಷಯ ಒಂದಿದೆ ಎಂಬುದು ನನ್ನ ಅಭಿಮತ. ಅದೆಂದರೆ ನಾವು ಪಡೆದ ಸ್ವಾತಂತ್ರದ ನಿಜವಾದ ಉದ್ದೇಶವೇನು? ಹಾಗೂ ಇಂದು ನಾವು ಸ್ವಾತಂತ್ರ ಎಂದು ಮಾತನಾಡುತ್ತಿರುವ ವಿಷಯದಲ್ಲಿ ಎಷ್ಟು ಸ್ವತಂತ್ರರಾಗಿದ್ದೇವೆ? 47 ರ ಸ್ವಾತಂತ್ರವನ್ನು ಕನಿಷ್ಟಪಕ್ಷ 67 ವರ್ಷಗಳ ಬಳಿಕವಾದರೂ ಪರ್ಯಾಲೋಚನೆ ಮಾಡಬೇಕಾದ ಅಗತ್ಯತೆ ಕಂಡುಬರುತ್ತಿದೆ.
ಭಾರತವು ಸ್ವತಂತ್ರ ಪಡೆದದ್ದು ಬ್ರಿಟೀಷರಿಂದ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಭಾರತ ಯಾವುದರಿಂದ ಸ್ವಾತಂತ್ರ ಪಡೆಯಿತು? ಎಂಬುದು ಮಾತ್ರ ಇಂದಿಗೂ ಒಂದು ರೀತಿಯಲ್ಲಿ ನಿಗೂಢವಾದ ಪ್ರಶ್ನೆಯಾಗಿಯೇ ಉಳಿದುಕೊಂಡಂತೆ ತೋರುತ್ತದೆ. ಈ ಪ್ರಶ್ನೆಯನ್ನು ಆಳವಾಗಿ ಆಲೋಚಿಸಿದರೆ ಓದುಗರಿಗೂ ನನಗಿರುವ ಗೊಂದಲ ಏಳಬಹುದು. ಸ್ವತಂತ್ರ ಚಳುವಳಿಯು ಬ್ರಿಟೀಷರಿಂದ ಆಡಳಿತ ಮತ್ತು ರಾಜಕೀಯ ಮುಕ್ತಿಯನ್ನು ಪಡೆಯುವ ಉದ್ದೇಶವನ್ನು ಹೊಂದಿತ್ತು. ಆಂಗ್ಲರ ಸಂಪೂರ್ಣ ಹಿಡಿತದಿಂದ ಹೊರಬಂದು ಸ್ವಾಯತ್ತತೆಯಿಂದ ಕೂಡಿದ ಸ್ವರಾಜ್ಯವನ್ನು ಸ್ಥಾಪಿಸುವುದು ಸ್ವತಂತ್ರ ಚಳುವಳಿಯ ಕನಸಿನ ಕೂಸಾಗಿತ್ತು. 1947 ರ ಹೊತ್ತಿಗೆ ಭಾಗಶಃ ಅದು ಕಾರ್ಯಸಾಧುವೂ ಆಯಿತು. ಬ್ರಿಟೀಷರು ಭಾರತೀಯರಿಗೆ ಆಡಳಿತದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ತಮ್ಮ ದೇಶಕ್ಕೆ ಹಿಂದಿರುಗಿರುವುದು ಇಂದಿಗೆ ಇತಿಹಾಸ.
ಆಡಳಿತವನ್ನು ಭಾರತೀಯರು ವಹಿಸಿಕೊಂಡ ನಂತರ ಸಂಪೂರ್ಣವಾಗಿ ಸ್ವಾತಂತ್ರ ಪಡೆದಂತಾಯಿತೆ? ಎಂದು ನೋಡಿದರೆ ಅಲ್ಲಿಂದಲೆ ಗೊಂದಲ ಪ್ರಾರಂಭವಾಗುತ್ತದೆ. ಏಕೆಂದರೆ ಸ್ವಾತಂತ್ರದ ಮೂಲ ಉದ್ದೇಶ ಯಾವುದೇ ಅಡೆತಡೆಯಿಲ್ಲ, ಯಾವುದೇ ಬಂಧನವಿಲ್ಲದೆ, ವ್ಯಕ್ತಿ ಅಥವಾ ರಾಷ್ಟ್ರ ತನ್ನಷ್ಟಕ್ಕೆ ಸ್ವಯಂ ರೂಪಣೆಗೊಳ್ಳುವುದೇ ಆಗಿರುತ್ತದೆ. ಭಾರತವು ದೈಹಿಕವಾಗಿ ಬ್ರಿಟೀಷರನ್ನು ಹೊರದೂಡುವಲ್ಲಿ ಯಶಸ್ವಿಯಾದರೂ ಸಹ ಅವರ ಹಲವಾರು ಪಳಿಯುಳಿಕೆಗಳು ಭಾರತದಲ್ಲಿ ಹಾಗೆಯೇ ಉಳಿದುಕೊಂಡುಬಿಟ್ಟವು. ಅಂದರೆ ಬ್ರಿಟೀಷರನ್ನು ಕಳುಹಿಸಿ ಅವರ ಎಲ್ಲಾ ಸಂಗತಿಗಳನ್ನು ಚಾಚೂತಪ್ಪದೇ ಅಳವಡಿಸಿಕೊಂಡಿತು ಭಾರತ.
ಮಹಾತ್ಮ ಗಾಂಧಿಯವರ ಒಂದು ಸುಪ್ರಸಿದ್ಧವಾದ ಹೇಳಿಕೆ ಬ್ರಿಟೀಷರ ಕುರಿತು ಇದೆ, ಹುಲಿಯನ್ನು ಓಡಿಸಿ ಅದರ ಗುಣಗಳನ್ನು ಇಟ್ಟುಕೊಂಡರೆ ಅದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ ಇದರ ಅರ್ಥ ಹುಲಿ ಇದ್ದರೂ ಒಂದೇ ಹೋದರೂ ಒಂದೇ. ಅದರ ಇರುವಿಕೆ ಮತ್ತು ಇಲ್ಲದಿರುವಿಕೆಯ ವ್ಯತ್ಯಾಸವಾಗುವುದು ಅದರ ಗುಣಗಳನ್ನು ನಾವು ಅಳವಡಿಕೊಳ್ಳದಿದ್ದಾಗ ಮಾತ್ರ. ಇದೇ ಪರಿಸ್ಥಿತಿಯಲ್ಲಿ ಭಾರತ ಇಂದು ಇದೆ ಎಂದರೆ ತಪ್ಪಾಗಲಾರದು. ಬ್ರಿಟೀಷರನ್ನು ಅವರ ದೇಶಕ್ಕೆ ಓಡಿಸಿದ ವೇಗದಲ್ಲಿಯೇ ಅವರ ಕೆಲವಾರು ರಚನೆಗಳನ್ನು ಅಷ್ಟೇ ರಭಸವಾಗಿ ಇಲ್ಲಿ ಅಳವಡಿಸಿಕೊಳ್ಳಲಾಯಿತು.
ಭಾರತದ ಸಂವಿಧಾನವು ಐರೋಪ್ಯ ಮತ್ತು ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಂದ ಪ್ರೇರೇಪಿತವಾಗಿ ರೂಪುಗೊಂಡಿದೆ, ಹಾಗೂ 1935 ರ ಭಾರತ ಸರ್ಕಾರ ಕಾಯ್ದೆಯ ಹಲವಾರು ಅಂಶಗಳು ಸಂವಿಧಾನಕ್ಕೆ ಅಡಿಪಾಯವಾಗಿವೆ, ಇಂಗ್ಲೆಂಡಿನಿಂದ ಸಂಸದೀಯ ಪದ್ದತಿಯನ್ನು ಅಳವಡಿಕೊಳ್ಳಲಾಯಿತು, ಭಾರತದ ದಂಡ ಸಂಹಿತೆಗೆ ಬ್ರಿಟೀಷರ 19ನೆ ಶತಮಾನದ ಕಾನೂನುಗಳೇ ಮೂಲಾಧಾರವಾಗಿವೆ, ನೌಕರಶಾಹಿ ವ್ಯವಸ್ಥೆಯನ್ನೂ ಯುರೋಪಿನ ರಾಷ್ಟ್ರಗಳ ರೀತಿಯಲ್ಲೇ ಅಳವಡಿಸಿಕೊಳ್ಳಲಾಯಿತು, ಭಾರತದ ಶಿಕ್ಷಣ ಪದ್ಧತಿಯೂ ಸಹ ಆಂಗ್ಲರ ಮೆಕಾಲೆಯ ಪ್ರಭಾವದಿಂದ ಕೂಡಿರುವಂತಾದ್ದಾಗಿದೆ, ನಾಗರೀಕ ಸೇವೆಗಳಿಗೆ ಆಯ್ಕೆಯ ವಿಧಾನವೂ ಬ್ರಿಟೀಷರ ಪದ್ದತಿಯನ್ನು ಅನುಸರಿಸಿದೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಅದರ ವಿಧಿವಿಧಾನಗಳು ಎಲ್ಲವೂ ಪಾಶ್ಚಾತ್ಯ ವಿಧಾನಗಳಾಗಿವೆ. ನ್ಯಾಯಾಲಯದಲ್ಲಿ ಮೊದಲು ಬೈಬಲ್ ನ್ನು ಪ್ರಮಾಣ ಮಾಡಲು ಇಡುತ್ತಿದ್ದರು ಭಾರತದಲ್ಲಿ ಭಗವದ್ಗೀತೆಯನ್ನು ಇಡಲಾಗುತ್ತಿತ್ತು, (ಇತ್ತೀಚೆಗೆ ಅದನ್ನೂ ಬಿಡಲಾಗಿದೆ ಎಂದು ಕೇಳಿದ್ದೇನೆ). ಇದಕ್ಕಿಂತಲೂ ಹೆಚ್ಚಿನದಾಗಿ ಭಾರತೀಯ ಸಮಾಜವನ್ನು ಅರ್ಥೈಸಿಕೊಳ್ಳುವ ವಿಧಾನವೂ ಸಹ ಪಾಶ್ಚಾತ್ಯರ ಸಮಾಜ ವಿಜ್ಞಾನದಿಂದಲೇ ಬಂದಿದ್ದು, ಭಾರತದ ಕುರಿತು ಮಾತನಾಡುವ ಬಹುತೇಕ ಬುದ್ದಿಜೀವಿಗಳ ಮಾತುಗಳನ್ನು ಆಲಿಸಿದರೆ ಪಾಶ್ಚಾತ್ಯರೆ ಭಾರತೀಯ ಭಾಷೆಯಲ್ಲಿ ಮಾತನಾಡಿದಂತೆ ತೋರುತ್ತದೆ. ನಮ್ಮನ್ನು ಅರ್ಥೈಸಿಕೊಳ್ಳುವ ಅಂದರೆ ನಮ್ಮ ಕುರಿತು ಜ್ಞಾನವನ್ನು ಕಟ್ಟುವ ವಿಧಾನದಿಂದ ಹಿಡಿದು ನಮ್ಮನ್ನು ಆಳುವವರೆಗೆ ಎಲ್ಲವೂ ನಮ್ಮ ವಿಧಾನಗಳಲ್ಲ ಎಂಬುದು ಮಾತ್ರ ಸ್ಪಷ್ಟ.
ಮೇಲ್ಕಾಣಿಸಿದ ಸಂಗತಿಗಳು ಭಾರತವು ಸ್ವತಂತ್ರ ಪಡೆದಾಗ ಒಂದು ದೇಶವನ್ನು ರೂಪಿಸಲು ಪೂರಕವಾಗಿ ನಿಂತಂತವುಗಳಾಗಿದ್ದವು. ಹಾಗೂ ಇಂದಿಗೂ ಅವೆಲ್ಲವೂ ಇವೆ. ಇವುಗಳನ್ನು ನೋಡಿದರೆ, ಭಾರತವನ್ನು ಆತುರದಲ್ಲಿ ನಿರ್ಮಿಸುವ ಉದ್ದೇಶದಿಂದ ನಮ್ಮದಲ್ಲದ ಸಂಗತಿಗಳನ್ನೇ ನಮ್ಮದನ್ನಾಗಿ ಮಾಡಿಕೊಳ್ಳಲಾಯಿತೆ? ಭಾರತವನ್ನು ಕಟ್ಟಲು ಭಾರತದ್ದೇ ಆದ ಸಂಗತಿಗಳು ಇರಲಿಲ್ಲವೆ? ಹಾಗಾದರೆ ನಾವು ಪಡೆದ ಸ್ವಾತಂತ್ರ ಮತ್ತು ಸ್ವಾಯತ್ತತೆ ಯಾವುದರಿಂದ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಸಾರಾಸಗಟಾಗಿ ಐರೋಪ್ಯರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವಾಗ ನಮ್ಮತನ ಅಥವಾ ಸ್ವಾತಂತ್ರದ ಪ್ರಶ್ನೆ ಎಲ್ಲಿ ಮಾಯವಾಗಿತ್ತು ಎಂಬುದು ಸೋಜಿಗದ ಸಂಗತಿಯಾಗಿದೆ.
ಇಡೀ ರಾಜಕೀಯ ರಚನೆಯನ್ನು ಗಮನಿಸಿದಾಗ ಅಲ್ಲಿ ಕೇವಲ ಬ್ರಿಟೀಷರ ಬದಲಿಗೆ ಭಾರತೀಯರು ಮಾತ್ರ ಕಾಣುತ್ತಾರೆ. ಅವೇ ಹಳೆಯ ನಿಯಮಗಳು, ಶಿಷ್ಟಾಚಾರಗಳು, ಅನಗತ್ಯ ವೆಚ್ಚಗಳು, ವಿಳಂಬ ನೀತಿಗಳು ಹಾಗೂ ಸ್ವೇಚ್ಚಾಚಾರದ ಕೆಲವು ರಾಜಕಾರಣಿಗಳನ್ನು ಗಮನಿಸಿದರೆ ಇಂತಹ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಲಿಕ್ಕೆ ಬ್ರಿಟೀಷರ ವಿರುದ್ಧ ಹೋರಾಟ ನಡೆಸಲಾಯಿತೆ ಎಂಬ ಪ್ರಶ್ನೆ ಏಳದೆ ಇರದು. ಭಾರತೀಯ ಸಂಸ್ಕೃತಿಯ ಲವಶೇಷವನ್ನೂ ಬಳಸಿಕೊಳ್ಳದೆ ಪಾಶ್ಚಾತ್ಯರ ಎಲ್ಲಾ ನಿಯಮಗಳನ್ನು, ರಚನೆಗಳನ್ನು ಯಥಾಶಕ್ತಿಯಾಗಿ ಅಳವಡಿಕೊಂಡ ಮೇಲೆ ನಮ್ಮ ಸ್ವಾಯತ್ತತೆ ಎಂಬುದು ಕಂಡುಬರುವುದಿಲ್ಲ. ಸ್ವಾತಂತ್ರ ಬರುವ ಮುನ್ನ ನಾವೆಲ್ಲರೂ ಬ್ರಿಟೀಷರಿಗೆ ಅಧೀನರಾಗಿದ್ದೆವು, ಸ್ವಾತಂತ್ರಾ ನಂತರ ಅವರ ವ್ಯವಸ್ಥೆಗಳಿಗೆ ಅಧೀನರಾಗಿದ್ದೇವೆ. ಪ್ರತ್ಯಕ್ಷವಾಗಿ ಆಂಗ್ಲರನ್ನು ಒದ್ದೋಡಿಸಿ ಪರೋಕ್ಷವಾಗಿ ಅವರಿಗೆ ಗುಲಾಮರಾಗಿರುವುದು ಕಟು ವಾಸ್ತವ. ಬ್ರಿಟೀಷರ ರಾಜಕೀಯ ರಚನೆಗಳನ್ನು ಭಾರತ ಅಳವಡಿಕೊಂಡಿರುವುದಕ್ಕೆ ಏನೇ ಸಮರ್ಥನೆಗಳನ್ನು ನೀಡಿದರೂ ಸಹ ಅದು ಭಾರತ ಮಣ್ಣಿನ ರಾಜಕೀಯ/ಸಾಂಸ್ಕೃತಿಕ ಪರಂಪರೆಯ ಕುರಿತು ದಿನ್ಯನಿರ್ಲಕ್ಷವಹಿಸಿರುವುದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.
ಭಾರತದ ರಾಜಕೀಯ ವ್ಯವಸ್ಥೆ ಹಿಂದೆ ಹೇಗಿದ್ದಿರಬಹುದು ಎಂಬ ಸಣ್ಣ ಕುತೂಹಲವನ್ನಾದರೂ ನೇತಾರರು ತೋರಿಸಬಹುದಿತ್ತು, ಆದರೆ ಇದಕ್ಕೆ ವಿರುದ್ಧವಾಗಿ ಪಾಶ್ಚಾತ್ಯರದೇ ಶ್ರೇಷ್ಠ ಎಂಬ ಭ್ರಮೆಯು ಭಾರತದ ನೇತಾರರನ್ನು ಅತ್ತಿತ್ತ ನೋಡದಂತೆ ತಡೆಯೊಡ್ಡಿತು. ರಾಜಕೀಯ ವ್ಯವಸ್ಥೆ ಎಂದರೆ ಅದು ಆಧುನಿಕ ಮೌಲ್ಯಗಳನ್ನು ಒಳಗೊಂಡಿದ್ದ ಐರೋಪ್ಯ ಮಾದರಿಯದ್ದೇ ಸೂಕ್ತ ಎಂಬ ಒಮ್ಮತ ಅಭಿಪ್ರಾಯ ಭಾರತೀಯ ಗಣ್ಯರಲ್ಲಿ ಮೂಡಿತು.
ಭಾರತೀಯ ಸಮಾಜಕ್ಕೆ ಒಗ್ಗುವಂತಹ ಕಾನೂನುಗಳು ಯಾವುವು ಎಂಬುದನ್ನು ಯಾರೂ ಸಹ ಅಧ್ಯಯನ ನಡೆಸಲಿಲ್ಲ, ಅದರ ಬದಲಿಗೆ ವಿಶ್ವದ ಹಲವಾರು ಸಂವಿಧಾನಗಳನ್ನು ಅಧ್ಯಯನ ಮಾಡಲಾಯಿತು. ಇದರಿಂದ ವಿಶ್ವದ ಬೇರೆ ಬೇರೆ ಸಂವಿಧಾನಗಳು ಅರ್ಥವಾದವೇ ವಿನಃ ಭಾರತಕ್ಕೆ ಎಂತಹ ನಿಯಮಗಳನ್ನು ರೂಪಿಸಬೇಕೆಂಬುದು ತಿಳಿಯಿತು ಎಂಬುದು ಮಾತ್ರ ಅನುಮಾನವಾಗಿಯೇ ಉಳಿಯುತ್ತದೆ.
ಸ್ವತಂತ್ರದ ನಿಜ ಅರ್ಥವು ಎಲ್ಲದರಿಂದ ಮುಕ್ತಿ ಪಡೆಯುವುದೇ ಆಗಿರುತ್ತದೆ. ಆದರೆ ಭಾರತದ ಒಟ್ಟಾರೆ ರಾಜಕೀಯ, ಆಡಳಿತ, ಹಾಗೂ ಶೈಕ್ಷಣಿಕ ವ್ಯವಸ್ಥೆಗಳನ್ನು ನೋಡಿದರೆ, ಅವೆಲ್ಲವೂ ಸ್ವಯಂ ತಂತ್ರವಾಗಿರದೆ ಪರತಂತ್ರದಂತೆಯೇ ಗೋಚರಿಸುತ್ತವೆ. ಬ್ರಿಟೀಷರು ಮತ್ತು ಪಾಶ್ಚಾತ್ಯರು ತಮ್ಮ ಸಂಸ್ಕೃತಿ ಮತ್ತು ರಚನೆಗಳು ಜಗತ್ತಿನಲ್ಲಿಯೇ ಶ್ರೇಷ್ಠವಾದವುಗಳು ಎಂಬ ಭ್ರಮೆಯನ್ನು ಹುಟ್ಟಿಸಿದ್ದರ ಪರಿಣಾಮವಾಗಿ, ಅವರ ಅಸ್ತಿತ್ವದಿಂದ ಮುಕ್ತರಾಗಿದ್ದರೂ ಅವರು ಕಟ್ಟಿಕೊಟ್ಟ ಭ್ರಮೆಯಿಂದ ವಿಮುಕ್ತರಾಗಲು ಸಾಧ್ಯವಾಗಿಲ್ಲ. ಅದಕ್ಕೆ ನಾವು ಅಳವಡಿಕೊಂಡಿರುವ ಅಥವಾ ಕಾಪಿ ಪೇಸ್ಟ್ ಮಾಡಿಕೊಂಡಿರುವ ಅವರ ವ್ಯವಸ್ಥೆಗಳೇ ಸ್ಪಷ್ಟ ನಿದರ್ಶನಗಳಾಗಿವೆ.
ಇವುಗಳ ಜೊತೆಗೆ ನಮ್ಮ ಕುರಿತು ಇರುವ ಜ್ಞಾನವೂ ಸಹ ಬಹುತೇಕವಾಗಿ ಪಾಶ್ಚಾತ್ಯರಿಂದಲೇ ರೂಪಿತವಾಗಿದೆ, ಉದಾಹರಣೆಗೆ ಭಾರತೀಯ ಸಮಾಜದ ಕುರಿತು ಇರುವ ಸಮಾಜವಿಜ್ಞಾನದ ವಿವರಣೆಗಳು ಪಾಶ್ಚಾತ್ಯರ ದೃಷ್ಟಿಕೋನದಲ್ಲಿ ಹುಟ್ಟಿಕೊಂಡಿವೆ. ಇದರಿಂದ ಮುಕ್ತಿಗೊಳ್ಳುವ ಉದ್ದೇಶದಿಂದ ಹಲವಾರು ಪ್ರಯತ್ನಗಳು ಸಾಹಿತ್ಯ ವಲಯದಲ್ಲಿ ನಡೆದಿವೆ. ವಸಾಹತುಶಾಹಿಗಳಿಂದ ನಮ್ಮ ಕುರಿತ ಜ್ಞಾನವನ್ನು ಮತ್ತು ಚಿಂತನೆಗಳನ್ನು ಮುಕ್ತಗೊಳಿಸಿ ನಮ್ಮದೇ ಆದ ಚಿಂತನೆಯನ್ನು ಕಟ್ಟುವ ಪ್ರಕ್ರಿಯೆಗೆ ನಿರ್ವಸಾಹತೀಕರಣ ಎಂದು ಕರೆಯಲಾಗುತ್ತದೆ. ಆದರೆ, ಇದರ ಸಮಸ್ಯೆ ಎಂದರೆ ಪಾಶ್ಚಾತ್ಯರ ಎಲ್ಲಾ ವ್ಯವಸ್ಥೆಗಳನ್ನು ನಾವು ಅಳವಡಿಸಿಕೊಂಡ ಮೇಲೆ ನಮ್ಮ ಸಮಾಜವನ್ನು ಸಂಪೂರ್ಣವಾಗಿ ಅವರ ವ್ಯವಸ್ಥೆಗೆ ಗುಲಾಮರನ್ನಾಗಿ ಮಾಡಿಕೊಂಡಿದ್ದೇವೆ. ಅದರ ಪರಿಣಾಮವಾಗಿ ನಮ್ಮ ಸಮಾಜವು ಸಹ (ವಿಶೇಷವಾಗಿ ಪ್ರಗತಿಪರರ ಸಮಾಜವು) ಪಾಶ್ಚಾತ್ಯ ಸಂಸ್ಕೃತಿಯ ನಕಲಾಗಿ ಬದಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಸಮಾಜ ವಿಜ್ಞಾನಗಳನ್ನು ನಮ್ಮದೇ ರೀತಿಯಲ್ಲಿ ಕಟ್ಟಬೇಕಾದರೆ ಮೊದಲು ನಮ್ಮದೇ ಆದ ರಾಜಕೀಯ, ಆಡಳಿತ ಮುಂತಾದ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಿರ್ವಸಾಹತೀಕರಣವು ಕೇವಲ ಅಕ್ಷರಗಳಲ್ಲಿ ಮಾತ್ರ ಉಳಿಯುತ್ತದೆ. ಒಂದೊಮ್ಮೆ ಅದು ಪ್ರಯತ್ನಪಟ್ಟರೂ ನಮ್ಮ ಕುರಿತ ಜ್ಞಾನವನ್ನು ಕಟ್ಟಲು ಸಾಧ್ಯವಾಗದೆ, ಪಾಶ್ಚಾತ್ಯರ ಮತ್ತೊಂದು ಆಯಾಮವನ್ನು ಮಾತ್ರ ತಿಳಿಸಿಕೊಡುತ್ತದೆ. ಅಂದರೆ ಸಮಾಜ ವಿಜ್ಞಾನದ ನಿರ್ವಸಾಹತೀಕರಣವು ಪಾಶ್ಚಾತ್ಯರಿಂದ ಮುಕ್ತಿಗೊಂಡು ಅವರ ವ್ಯವಸ್ಥೆಗಳಿಗೆ ಪಲ್ಲಟಗೊಳ್ಳುತ್ತದೆ ಅಷ್ಟೆ.
ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದರೆ ನಮಗೆ ನಿಜವಾದ ಸ್ವಾತಂತ್ರ ಬಂದಿದೆಯೇ ಎಂದು ಪುನರಾವಲೋಕಿಸಬೇಕಾಗಿದೆ. ಬ್ರಿಟೀಷರ ಸಂರಚನೆಗಳನ್ನೆ ಮುರಿದು ಕಟ್ಟುವ ಮೂಲಕ ಭಾರತಕ್ಕೆ ಸ್ವಾತಂತ್ರ ಬಂದಿದೆ ಎಂದು ಹೇಳುವುದರಲ್ಲಿ ಯಾವುದೇ ಪುರುಷಾರ್ಥವಿಲ್ಲ. ಅದರ ಬದಲಿಗೆ 67 ವರ್ಷದ ಬಳಿಕವಾದರೂ ಭಾರತೀಯತೆಯಿಂದ ಕೂಡಿದ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಹೆಜ್ಜೆ ಹಾಕಬೇಕಾಗಿದೆ. ಅದನ್ನು ಮಾಡಲು ಮೊದಲು ಭಾರತವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ.
ಚಿತ್ರಕೃಪೆ:http://www.chapterscapistrano.com/blog/2014/05/26/redefining-freedom-means-addiction-recovery/
ನಿಜವಾದ ಅರ್ಥದಲ್ಲಿ ನಮಗಿನ್ನೂ ಸ್ವಾತಂತ್ರ್ಯವೆಂಬುದು ಬಂದೇ ಇಲ್ಲ. ಅದರ ಅರ್ಥ ಯಾರಿಗೂ ಆಗಿಲ್ಲ.