ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 1, 2014

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ನಾಟಕದ ಕುರಿತಂತೆ ವೃತ್ತಿಪರ ಇತಿಹಾಸಕಾರರ ಒಂದು ಇತಿಹಾಸ ಬಂದಿದ್ದೇ 1970 ರಲ್ಲಿ. ಅಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಇತಿಹಾಸಕ್ಕೇ ಪ್ರತ್ಯೇಕ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ. ಕರ್ನಾಟಕದ ಕುರಿತ ವೃತ್ತಿಪರ ವ್ಶೆಜ್ಞಾನಿಕ ಇತಿಹಾಸವು ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸದ ಚೌಕಟ್ಟಿನಲ್ಲಿ ಮೂಡಿಬಂದಿದೆ. ಏಕೀಕೃತ ಕರ್ನಾಟಕದ ಇತಿಹಾಸವಾಗಿ ಪಿ. ಬಿ. ದೇಸಾಯಿ ಮತ್ತಿತರರು 1970ರಲ್ಲಿ ಹೊರತಂದ A History of Karnataka ದ ಮುನ್ನುಡಿಯಲ್ಲಿ ಈ ಕರ್ನಾಟಕದ ಗಾಥೆಯನ್ನು ಈ ರೀತಿ ಇಡಲಾಗಿದೆ: ‘ ಈ ಶತಮಾನದ ಪ್ರಾರಂಭದ ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸವು ಅತ್ಯಂತ ಕತ್ತಲೆಯ ಕಾಲವಾಗಿದೆ, ಇದಕ್ಕೆ ನೆಲವಿರಲಿಲ್ಲ, ಭಾಷೆಯಿರಲಿಲ್ಲ, ಇತಿಹಾಸವಿರಲಿಲ್ಲ.. ಆದರೆ ಈಗ ಕರ್ನಾಟಕಕ್ಕೆ ಇತಿಹಾಸವರುವುದೊಂದೇ ಅಲ್ಲದೇ, ಅದು ವೈಭವೊಪೇತವೂ, ಅಸೂಯೆ ಹುಟ್ಟಿಸುವಂಥದ್ದೂ ಆಗಿದೆ ಎಂಬುದು ಗೊತ್ತಾಗಿದೆ.. ಆದಿಮ ಗತಕಾಲದಿಂದ ಅನೇಕ ಶತಮಾನಗಳ ಸುದೀರ್ಘ ಕಾಲದವರೆಗೆ ಅಡೆತಡೆಯಿಲ್ಲದೇ ಅಭಿಮುಖವಾಗಿ ಅದು ಚಲಿಸುತ್ತಿದೆ… ಕರ್ನಾಟಕದ ಜನತೆಗೆ ಯಾವುದೇ ನಾಗರಿಕ ರಾಷ್ಟ್ರವು ನ್ಯಾಯೋಚಿತವಾಗಿ ಹೆಮ್ಮೆಪಡಬಹುದಾದಂಥ ಉನ್ನತ ಸಾಧನೆಗಳಿವೆ.’ (ಸಂಕ್ಷಿಪ್ತಗೊಳಿಸಲಾಗಿದೆ) ಇಷ್ಟೇ ಅಲ್ಲದೆ, ಪ್ರಸ್ತುತ ಇತಿಹಾಸವು ಏನನ್ನು ನಿರ್ದೇಸುತ್ತದೆ? ಇದು ಒಂದು ಜನತೆಯು ನಾಗರೀಕ ಪೂರ್ವ ಅವಸ್ಥೆಯಿಂದ ನಾಗರೀಕ ಅವಸ್ಥೆಗೆ ಪದಾರ್ಪಣ ಮಾಡಿದ ಕಥನವಾಗಿದೆ. ಸದಾಕಾಲವೂ ಮಹೋನ್ನತ ಭಾರತ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡೇ ಒಂದು ಒಟ್ಟಂದದ ಸಾಂಸ್ಕೃತಿಕ ಘಟಕವಾಗಿ ಅವರ ವಿಕಾಸ, ಏಳ್ಗೆ, ಅವನತಿ ಮತ್ತು ವಿಘಟನೆಗಳು, ಹಾಗೂ ಆಧುನಿಕ ಕಾಲದಲ್ಲಿ ಮತ್ತೆ ಒಂದು ಏಕೀಕೃತ ಪ್ರಭುತ್ವದ ಜನತೆಯಾಗಿ ಅವರ ಪುನರುತ್ಥಾನ..(ಗಳ ಕಥನವಾಗಿದೆ)’ ಇವುಗಳ ಜೊತೆಗೇ ಇಂದಿನ ಕರ್ನಾಟಕದ ಹೊರಗಿನ ಪ್ರದೇಶಗಳ ಮೇಲೆ ಹಿಂದೆ ಅದಕ್ಕಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ‘ಮಹಾನ್ ಕರ್ನಾಟಕ’ (Greater Karnataka) ಎಂಬ ಪರಿಭಾಷೆಯಲ್ಲಿ ವರ್ಣಿಸಲಾಗಿದೆ. ‘ ಅತ್ಯಂತ ಹೆಚ್ಚಿನ ರಾಜರನ್ನು ಸೃಷ್ಟಿಸಿದ ಏಕಮೇವ ಪ್ರದೇಶ ಇದಾಗಿದೆ. ಇಲ್ಲಿನ ರಾಜರು ಓರಿಸ್ಸಾ, ಗೋವಾ, ಗುಜರಾಥ್, ಬಿಹಾರ, ರಾಜಸ್ಥಾನ, ಬೆಂಗಾಲ ಇತ್ಯಾದಿ ಪ್ರದೇಶಗಳಲ್ಲಿ ಆಳಿದ್ದಾರೆ. ಅದರ ಸಂಸ್ಸೃತಿಯ ಪ್ರಭಾವ ಹೊರಭಾಗಗಳಮೇಲೆ ಹೇಗಾಯಿತು, ಹಾಗೂ ‘ಮಹಾನ್ ಭಾರತ’ ಕ್ಕೆ ಕರ್ನಾಟಕದ ಕಾಣಿಕೆ ಏನು? ಇತ್ಯಾದಿಗಳ ಕುರಿತೂ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ.

ಈ ಗ್ರಂಥವನ್ನು ಬರೆಯುವ ಉದ್ದೇಶದ ಕುರಿತೂ ಪ್ರಸ್ತಾಪಿಸಲಾಗಿದೆ. ಇದಕ್ಕೂ ಹಿಂದೆ ಕರ್ನಾಟಕದ ಇತಿಹಾಸವನ್ನು ಭಾಗಶಃ ಚಿತ್ರಿಸಲು ಪ್ರಯತ್ನಗಳು ನಡೆದರೂ ಅವು ಹಳತಾಗಿವೆ ಹಾಗೂ ಅಸಮರ್ಪಕವಾಗಿವೆ. ಮೈಸೂರು ಸರ್ಕಾರವು ಪ್ರಕಟಿಸಿದ Karnataka Through the Ages ಗ್ರಂಥವು ಸುದೀರ್ಘವೂ, ಶ್ಲಾಘನೀಯವೂ ಆಗಿದ್ದರೂ, ಕರ್ನಾಟಕದ ಇತಿಹಾಸದ ಮೇಲೆ ಒಂದು ಸಪ್ರಮಾಣಿತ, ವಿಮರ್ಶಾತ್ಮಕ ಗ್ರಂಥವು ಉನ್ನತ ಶಿಕ್ಷಣದಲ್ಲಿ ಅಗತ್ಯವಾಗಿದೆ. ಹಾಗಾಗಿ ಲಭ್ಯವಿರುವ ಅಗಾಧವಾದ ಶಾಸನ ಆಕರಗಳನ್ನು ಮತ್ತು ಹರಡಿಹೋಗಿರುವ ಇತರ ಆಕರಗಳನ್ನು ಉಪಯೋಗಿಸಿಕೊಳ್ಳುವ ಸವಾಲನ್ನು ಎದುರಿಸಿ ಈ ಕೆಲಸವನ್ನು ನಿರ್ವಹಿಸಲಾಗಿದೆ. ಈ ರೀತಿ ವೃತ್ತಿಪರರ ಇತಿಹಾಸದ ವಿಧಾನ ಮತ್ತು ಅಗತ್ಯಗಳಿಗನುಗುಣವಾಗಿ ಹೊರಬಂದ ಮೊತ್ತಮೊದಲ ಕರ್ನಾಟಕದ ಇತಿಹಾಸ ಈ ಗ್ರಂಥ ಎಂಬುದನ್ನು ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅದಕ್ಕನುಗುಣವಾಗಿ ಈ ಗ್ಪ್ರಂಥದ ಮೊದಲ ಅಧ್ಯಾಯವು ಆಕರಗಳ ಸಮೀಕ್ಷೆಗಾಗಿ ಮೀಸಲಾಗಿದೆ. ಪ್ರಾಗೈತಿಹಾಸದಿಂದ ಪ್ರಾರಂಭವಾಗಿ, ನಂತರ ಕರ್ನಾಟಕದವೆಂದು ಗುರುತಿಸಲಾದ ವಿಭಿನ್ನ ರಾಜಮನೆತನಗಳ ಇತಿಹಾಸವನ್ನು ವಿಜಯನಗರ ಕಾಲದವರೆಗೂ ಪ್ರತ್ಯೇಕ ಅಧ್ಯಾಯಗಳಲ್ಲಿ ನಿರೂಪಿಸಿದ್ದಾರೆ. ಪ್ರತೀ ರಾಜನಮನೆತನದ ವಂಶಾವಳಿ, ಮತ್ತು ಅವುಗಳ ಉಗಮಗಳನ್ನು ಇಲ್ಲಿ ಕಡ್ಡಾಯವಾಗಿ ಚರ್ಚಿಸುವುದನ್ನು ನೋಡಬಹುದು. ಇವುಗಳ ಇತಿಹಾಸ ಎಂದರೆ ವಿಭಿನ್ನ ರಾಜರು ನಡೆಸಿದ ಯುದ್ಧಗಳು, ನೀಡಿದ ಆಶ್ರಯ ಹಾಗೂ ವಯಕ್ತಿಕ ಸಾಧನೆಗಳು. ಅಧ್ಯಾಯದ ಅಂತ್ಯದಲ್ಲಿ ಕಲೆ, ಸಾಹಿತ್ಯ, ಮತಧರ್ಮ ಇತ್ಯಾದಿಗಳಿಗೆ ಅವರ ಕೊಡುಗೆ ಇತ್ಯಾದಿಗಳು ಇರುತ್ತವೆ. ಈ ಅಂಶಗಳನ್ನು ಗಮನಿಸಿದಾಗ ಈ ಕತೃಗಳು ಕರ್ನಾಟಕದ ಇತಿಹಾಸವನ್ನು ವೃತ್ತಿಪರ ಇತಿಹಾಸದ ಮಟ್ಟಕ್ಕೆ ಏರಿಸುವ ಪ್ರಯತ್ನದಲ್ಲಿದ್ದಾರೆಂಬುದು ಸ್ಪಷ್ಟ. ಇದರ ಫಲವಾಗಿ ಮೈತಳೆಯುವುದು ರಾಷ್ಟ್ರೀಯ ವೃತ್ತಿಪರ ಇತಿಹಾಸದ ಒಂದು ಸಿದ್ಧ ಚೌಕಟ್ಟು. ಈ ಅಧ್ಯಾಯಗಳನ್ನು ಭಾರತೀಯ ಇತಿಹಾಸದಲ್ಲಿ ಸೇರಿಸಿದರೂ ಯಾವ ವ್ಯತ್ಯಾಸವಾಗುವುದಿಲ್ಲ. ಉದಾಹರಣೆಗೆ ನೀಲಕಂಠ ಶಾಸ್ತ್ರಿಯವರ A History of South India, ಯಾಝದಾನಿಯವರ A history of the Deccan, ಭಾರತೀಯ ವಿದ್ಯಾ ಭವನ ಪ್ರಕಟಿಸಿದ History and Culture of Indian People, , ಸಂಪುಟಗಳಲ್ಲಿ ಇವುಗಳನ್ನು ಹಾಗೇ ಸೇರಿಸಿದರೂ ಏನೂ ವ್ಯತ್ಯಾಸವಾಗುವುದಿಲ್ಲ.

ಅಂದರೆ, ವೃತ್ತಿಪರ ಇತಿಹಾಸಗಳು ಮಾಡಿದ್ದೆಂದರೆ, ಕರ್ನಾಟಕದ ಇತಿಹಾಸವನ್ನು ರಾಷ್ಟ್ರೀಯ ವೃತ್ತಿಪರ ಇತಿಹಾಸದ ಮಟ್ಟಕ್ಕೆ ಏರಿಸಿ ಅದರ ಏಕರೂಪತೆಯಲ್ಲಿ ಇದನ್ನು ಜೋಡಿಸಿದ್ದು. ಹಾಗಾಗಿ ಕರ್ನಾಟಕ ಎಂಬ ಗುರುತಿಗೆ ಇರಬಹುದಾದ ಸಮರ್ಥನೆ, ಅನನ್ಯತೆ, ಸಮಸ್ಯೆ ಮುಂತಾದವುಗಳ ಚರ್ಚೆಗಳ ಅನಾವರಣ ಈ ವೃತ್ತಿಪರ ಇತಿಹಾಸಗಳಿಂದ ನಡೆಯಲಿಲ್ಲ. ಇದೊಂದೇ ಅಲ್ಲ, ಕರ್ನಾಟಕದ ಇತಿಹಾಸವು ಕನ್ನಡ ಚಳುವಳಿಯ ತಾತ್ವಿಕತೆಯ ಪ್ರೇರಣೆಯನ್ನು ಒಳಗೊಂಡು ರಾಷ್ಟ್ರೀಯ ಇತಿಹಾಸದ ರೂಪವನ್ನು ಧರಿಸುವುದರ ಜೊತೆಗೇ ಪಾಶ್ಚಾತ್ಯ ವಸಾಹತು ಇತಿಹಾಸದ ತಾತ್ವಿಕತೆ ಮತ್ತು ದೃಷ್ಟಿಕೋನಗಳನ್ನೂ ಅದು ತನ್ನದನ್ನಾಗಿ ಮಾಡಿಕೊಳ್ಳುತ್ತದೆ. ಈ ಹಿನ್ನೆಲೆಯನ್ನಿಟ್ಟುಕೊಂಡೇ ವೃತ್ತಿನಿರತ ಇತಿಹಾಸಕಾರರು ಕನ್ನಡ ರಾಷ್ಟ್ರೀಯತೆಗೆ ಸ್ಪಂದಿಸುವುದನ್ನು ಕಾಣುತ್ತೇವೆ. ಅವರ ರಾಷ್ಟ್ರೀಯತೆಯ ಅಭಿವ್ಯಕ್ತಿಗೆ ಕೆಲವು ಕ್ರಮಗಳಿವೆ: ಈ ಇತಿಹಾಸವೇ ರಾಜಮನೆತನಗಳ ಇತಿಹಾಸದ ಚೌಕಟ್ಟನ್ನು ಅಳವಡಿಸಿಕೊಳ್ಳುವುದರಿಂದ ಯಾವ ರಾಜಮನೆತನಗಳು ಕನ್ನಡಕ್ಕೆ ಸೇರಿವೆ ಎಂಬುದನ್ನು ನಿದರ್ಶಿಸುವುದು, ರಾಜಮನೆತನಗಳ ಕನ್ನಡ ಉಗಮವನ್ನು ಸಮರ್ಥಿಸುವುದು ಬಹಳ ನಿರ್ಣಾಯಕವೆಂದು ಇವರು ಭಾವಿಸುತ್ತಾರೆ. ಮೇಲೆ ಉಲ್ಲೇಖಿಸಿದ A History of Karnataka ದಲ್ಲಿ ವಿಜಯನಗರದ ಸಂಸ್ಥಾಪಕರಾದ ಹಕ್ಕ-ಬುಕ್ಕರು ಮೂಲತಃ ಕನ್ನಡದವರು ಎಂಬುದನ್ನು ನಿದರ್ಶಿಸಲಿಕ್ಕೆ 20 ಪುಟಗಳಷ್ಟು ಚರ್ಚೆ ನಡೆಸಲಾಗಿದೆ, ಹಾಗೂ ಉಳಿದೆಲ್ಲ ಅಭಿಪ್ರಾಯಗಳನ್ನೂ ಪರಾಮರ್ಶಿಸಿದ ನಂತರ ಅವನ್ನು ತಿರಸ್ಕರಿಸಿ ಅವರು ಕನ್ನಡ ಮೂಲದವರೇ ಎಂಬುದನ್ನು ತೋರಿಸಲಾಗಿದೆ. ದೇವಗಿರಿ ಯಾದವರ ಕುರಿತೂ ಇಂಥವೆ ಚರ್ಚೆಗಳಿವೆ. ಅರಸರು ಕನ್ನಡದವರೆಂದು ನಿದರ್ಶಿಸಿದ ನಂತರ, ಇತರ ಭಾಷೀಯ ಅರಸರ ಎದುರು ಇವರ ಹೆಗ್ಗಳಿಕೆ ಏನು ಎಂಬುದನ್ನು ಗುರುತಿಸಲಾಗುತ್ತದೆ. ಈ ಹೆಗ್ಗಳಿಕೆಯನ್ನು ರಚಿಸುವಂಥ ಗುಣಗಳು ಆಲೂರರು ಕನ್ನಡಿಗರ ಕುರಿತು ತಿಳಿಸುವಂಥವೇ ಆಗಿವೆ. ಅವರು ಉದಾರಿಗಳು, ಸರ್ವಮತ ಸಹಿಷ್ಣುಗಳು, ವೀರರು, ಸಾಹಿತ್ಯ-ಕಲಾಸಕ್ತರು, ಉದಾತ್ತ ಚರಿತರು, ಉತ್ತಮ ಆಡಳಿತಗಾರರು, ಇತ್ಯಾದಿ.

6. ಇಂದಿನ ಕರ್ನಾಟಕ ಎಂಬ ಭೌಗೋಳಿಕ ಪ್ರದೇಶದ ಇತಿಹಾಸದ ಕುರಿತು ಕರ್ನಾಟಕ ಇತಿಹಾಸ ಎಂಬ ಚೌಕಟ್ಟನ್ನು ಇಟ್ಟುಕೊಳ್ಳದೇ ಅನೇಕ ಲೇಖನಗಳು, ಗ್ರಂಥಗಳು ವೃತ್ತಿಪರ ಇತಿಹಾಸಕಾರರಿಂದ ಬಂದಿವೆ ಹಾಗೂ ಇತರ ಶಾಸ್ತ್ರ್ರಗಳಾದ ಮಾನವಶಾಸ್ತ್ರ, ಜಾನಪದ ಅಧ್ಯಯನ, ಕನ್ನಡ ಸಂಶೋಧನೆ, ಇತ್ಯಾದಿಯಾಗಿ ಈ ಪ್ರದೇಶದ ಸಮಾಜ, ಸಂಸ್ಕೃತಿ ಮುಂತಾದವುಗಳ ಕುರಿತು ಬಂದಿವೆ. ನನ್ನ ಆಸಕ್ತಿ ಇರುವುದು ಈ ಲೇಖನದ ಪ್ರಾರಂಭದಲ್ಲಿ ಕನ್ನಡ ಚಳುವಳಿಗಳು ಇಟ್ಟುಕೊಂಡ ಕನ್ನಡತ್ವದ ಗುರುತನ್ನು ಐತಿಹಾಸಿಕವಾಗಿ ಇವು ಎಷ್ಟರ ಮಟ್ಟಿಗೆ ಕಟ್ಟಿಕೊಡುತ್ತವೆ ಎಂಬುದರ ಕುರಿತು. ಹಾಗಾಗಿ ಇತಿಹಾಸದ ಮೇಲೆ ಇಲ್ಲಿ ಕೇಂದ್ರೀಕರಿಸುತ್ತೇನೆ. ಹಾಗೆ ಮಾಡಿದಾಗ ಈ ಕೆಳಗಿನ ಅಂಶಗಳು ಅನಾವರಣಗೊಳ್ಳುವುದನ್ನು ಕಾಣುತ್ತೇವೆ:
1) ರಾಜಮನೆತನಗಳನ್ನು ಕನ್ನಡ ಮನೆತನಗಳು ಎಂದು ಗುರುತಿಸಿದಷ್ಟಕ್ಕೆ ಕರ್ನಾಟಕದ ಐತಿಹಾಸಿಕ ಭೂಗೋಲ ಸ್ಪುಟವಾಗಿ ಬಿಡುವುದಿಲ್ಲ. ಏಕೆಂದರೆ ಅವರು ಆಳಿದ ಪ್ರದೇಶಗಳು ಇಂದಿನ ಕರ್ನಾಟಕಕ್ಕೆ ಹೊಂದುವುದಿಲ್ಲ. ಅವು ಇಂದಿನ ಕರ್ನಾಟಕದ ಗಡಿಯನ್ನು ಕತ್ತರಿಸಿ ಹೊರಚಾಚುತ್ತವೆ. ಯಾದವರಂಥ ಮನೆತನಗಳ ಕೇಂದ್ರವು ಇಂದು ಹೊರರಾಜ್ಯಗಳಲ್ಲಿ ಇದೆ. ಕನ್ನಡ ಇತಿಹಾಸದ ಸುವರ್ಣಯುಗವೆಂದು ಗುರುತಿಸಿದ ವಿಜಯನಗರವು ದಕ್ಷಿಣದ ಎಲ್ಲಾ ಭಾಷಿಕ ಪ್ರದೇಶಗಳನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು.

2) ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡರೂ ಅದರ ಐತಿಹಾಸಿಕ ಭೂಗೋಲವು ಇಂದಿನ ಗಡಿಗಳಿಗೆ ಹೊಂದುವುದಿಲ್ಲ. ಇಂದಿನ ಕರ್ನಾಟಕ ಪ್ರದೇಶದ ಅನೇಕ ಪೂಜಾ ಪಂಥಗಳು, ಮತಗಳು ಹೊರರಾಜ್ಯಗಳಲ್ಲಿ, ಅನ್ಯ ಭಾಷಿಕ ವಲಯಗಳಲ್ಲಿ ತಮ್ಮ ಕೇಂದ್ರಗಳನ್ನು ಹೊಂದಿವೆ. ಐತಿಹಾಸಿಕವಾಗಿ ಕಲೆ, ವಾಸ್ತುಶಿಲ್ಪ, ಶೈಲಿಗಳು ಕೂಡ ಇಂದಿನ ಗಡಿಯನ್ನು ಕತ್ತರಿಸುತ್ತವೆ.

3) ಇಂದಿನ ಕರ್ನಾಟಕದ ಇತಿಹಾಸವು ಒಂದು ಸಿದ್ಧ ಚೌಕಟ್ಟಿನೊಳಗೆ ಮೈದಳೆಯುವುದರಿಂದ ಒಂದು ಪ್ರಾದೇಶಿಕ ಇತಿಹಾಸವಾಗಿಯೂ ಅದು ತನ್ನ ಅನನ್ಯತೆಯನ್ನು ಪ್ರಕಟಿಸುವುದಿಲ್ಲ. ಇದು ಇಂದಿನ ಪ್ರಾದೇಶಿಕ ಇತಿಹಾಸ ರಚನೆಯ ಸಾಮಾನ್ಯ ಮಿತಿಯೂ ಆಗಬಹುದು. ಮಹಾರಾಷ್ಟ್ರದ ಇತಿಹಾಸ, ಆಂಧ್ರದ ಇತಿಹಾಸ, ತಮಿಳು ನಾಡಿನ ಇತಿಹಾಸಕ್ಕಿಂತ ಕರ್ನಾಟಕದ ಇತಿಹಾಸ ಹೇಗೆ ಬೇರೆ ಎಂಬುದನ್ನು ನಾವು ಮನಗಾಣುವುದಿಲ್ಲ. ಆಳಿದ ರಾಜರು, ನಡೆದ ಘಟನೆಗಳು, ವ್ಯಕ್ತಿಗಳು ಬೇರೆ ಬೇರೆ ಎಂಬುದನ್ನು ಬಿಟ್ಟರೆ ಈ ಎಲ್ಲ ಭಾಷಾವಾರು ಪ್ರದೇಶಗಳ ಇತಿಹಾಸಗಳ ನಡೆಯೂ ಒಂದೇ ರೀತಿ ಗ್ರಹಿಸಲ್ಪಟ್ಟಿದೆ.

4) ವಿಭಿನ್ನ ಸೈದ್ಧಾಂತಿಕ ಚೌಕಟ್ಟುಗಳಿಂದ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಿದವರು ಕರ್ನಾಟಕ ಎಂಬ ಪ್ರದೇಶದ ಕುರಿತು ಗಮನ ನೀಡದೇ ತಮ್ಮ ವಾದಗಳನ್ನು ಮಂಡಿಸಿದ್ದಾರೆ ಹಾಗೂ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡಾಗ ಭಾಷಾವಾರು ಗಡಿಗಳು ಇತಿಹಾಸಕಾರರಿಗೆ ಗೌಣವಾಗುತ್ತವೆ.

ಇಂದಿನ ಏಕೀಕೃತ ಕರ್ನಾಟಕದ ಗಡಿಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕತ್ವದ ಇತಿಹಾಸವನ್ನು ಭಾವಿಸಿಕೊಳ್ಳಬೇಕಾದರೆ ಐತಿಹಾಸಿಕವಾಗಿ ಕನ್ನಡ ಭಾಷೆಗೇ ಪ್ರತ್ಯೇಕವಾದ ಒಂದು ಭೂಗೋಲ ಮತ್ತು ಸಂಸ್ಕೃತಿಯಿತ್ತು ಎಂಬುದನ್ನು ಗುರುತಿಸಬೇಕಾದ ನಿರ್ಬಂಧ ಉಂಟಾಗುತ್ತದೆ. ಆದರೆ ವೃತ್ತಿಪರ ಇತಿಹಾಸವು ನಿದರ್ಶಿಸುವಂತೆ ಭಾಷೆಯನ್ನಾಧರಿಸಿ ಒಂದು ಸಂಸ್ಕೃತಿಯನ್ನಾಗಲೀ, ಐತಿಹಾಸಿಕ ಪ್ರಭುತ್ವದ ಗಡಿಯನ್ನಾಗಲೀ ಗುರುತಿಸುವುದು ಅಸಾಧ್ಯ. ಹಾಗಾದರೆ ಕನ್ನಡ ಪ್ರದೇಶ ಹಾಗೂ ಸಂಸ್ಕೃತಿ ಎಂಬುದೊಂದು ಐತಿಹಾಸಿಕ ಸತ್ಯವನ್ನು ಶೋಧಿಸುವುದಾದರೂ ಹೇಗೆ? ಇಲ್ಲಿರುವ ಮೂಲ ಸಮಸ್ಯೆಯೆಂದರೆ, ನಾವು ಇಂದಿನ ಕರ್ನಾಟಕದ ಗಡಿಯನ್ನು ಒಂದು ಭಾಷಾಧಾರಿತವಾಗಿ ಗುರುತಿಸಿಕೊಂಡು ಅದರದೊಂದು ಪ್ರಭುತ್ವವನ್ನು ರಚಿಸಿದ್ದೇವೆ. ಭಾಷೆ ಇಲ್ಲಿ ಪ್ರಭುತ್ವದ ಆಕರವಾಗಿದೆ. ಈ ಭಾಷಾ ಪ್ರಭುತ್ವಕ್ಕೆ ಒಂದು ಸಾಂಸ್ಕೃತಿಕ ವ್ಯಕ್ತಿತ್ವ ಇದೆ ಎಂಬುದಾಗಿ ಭಾವಿಸಿಕೊಂಡಿದ್ದೇವೆ. ಇದು ಕನ್ನಡ ರಾಷ್ಟ್ರೀಯತೆಯ ಕಲ್ಪನೆಯಾಗಿದ್ದು ಈ ಕನ್ನಡತ್ವದ ಐತಿಹಾಸಿಕ ಸತ್ಯಶೋಧನೆಗೆ ಬದ್ಧವಾದ ವೃತ್ತಿಪರ ಇತಿಹಾಸವು ಇದನ್ನು ನಿದರ್ಶಿಸುವುದರಲ್ಲಿ ವಿಫಲವಾಗಿರುವುದಂತೂ ಹೌದು. ಈ ವೃತ್ತಿಪರ ಇತಿಹಾಸವು ನಮಗೆ ತಿಳಿಸುವಂತೆ ಐತಿಹಾಸಿಕ ಕಾಲದಲ್ಲಿದ್ದ ಯಾವ ರಾಜಪ್ರಭುತ್ವವೂ ಒಂದು ಭಾಷಾ ಪ್ರಭುತ್ವವಾಗಿರಲಿಲ್ಲ. ಈ ಮನೆತನಗಳು ಕನ್ನಡ ಭಾಷೆಯ ಪ್ರದೇಶದಲ್ಲಿ ಆಳಿರಬಹುದು, ಅಲ್ಲಿ ಕನ್ನಡದಲ್ಲೇ ವ್ಯವಹರಿಸಿರಬಹುದು, ಆದರೆ ಅವರ ಪ್ರಭುತ್ವದ ಆಕರವಾಗಿ ಈ ಭಾಷೆಯಿರಲಿಲ್ಲ. ವಿಭಿನ್ನ ಮತಪಂಥಗಳನ್ನು ಪೋಷಿಸುವಂತೆ, ಭಾಷೆಗಳನ್ನೂ ಪೋಷಿಸುವುದು ಅವರ ರಾಜಧರ್ಮದ ಒಂದು ಭಾಗವಾಗಿತ್ತು. ಏಕೆಂದರೆ, ಈ ರಾಜರು ಅನ್ಯ ಭಾಷಿಕ ಪ್ರದೇಶದಲ್ಲಿಯೂ ರಾಜ್ಯವಿಸ್ತಾರ ಮಾಡುತ್ತಿದ್ದರು. ಈ ರೀತಿ ಭಾಷೆಗೂ ಪ್ರಭುತ್ವಕ್ಕೂ ಒಂದು ಅವಿನಾಭಾವಿಯಾದ ಸಂಬಂಧವಿರಲಿಲ್ಲ. ಅದೇ ರೀತಿ ಒಂದು ಭಾಷೆಗೂ ಸಂಸ್ಕೃತಿಗೂ ಕೂಡ ತಾರ್ಕಿಕ ಸಂಬಂಧ ತೋರಿಸುವುದು ಸಾಧ್ಯವಿಲ್ಲ. ಹೀಗಿರುವಾಗ ಐತಿಹಾಸಿಕವಾಗಿ ಭಾಷೆಯನ್ನಾದರಿಸಿಯೇ ಸಂಸ್ಕೃತಿ ರೂಪುಗೊಂಡಿತೆಂಬುದನ್ನು ಭಾವಿಸಿಕೊಳ್ಳುವುದಕ್ಕೆ ಆಧಾರವೇ ಇಲ್ಲ.

ಕರ್ನಾಟಕದ ಇತಿಹಾಸ ಎಂದು ಏನನ್ನು ಇಂದು ಓದುತ್ತೇವೆಯೋ ಅದು ಇಂದಿನ ಭಾಷಾವಾರು ರಾಜ್ಯದ ಎಲ್ಲೆಯೊಳಗೆ, ಕನ್ನಡತ್ವದ ಪರಿಕಲ್ಪನೆಯೊಳಗೆ ಬರಲು ಈ ರೀತಿ ಸೋಲುತ್ತದೆ. ಜೊತೆಗೇ ವೃತ್ತಿಪರ ಇತಿಹಾಸವು ತನ್ನ ವಸ್ತುನಿಷ್ಠ ವಿಧಾನದಿಂದಾಗಿ ಕನ್ನಡತ್ವದ ಇತಿಹಾಸಕ್ಕೆ ತೊಡಕುಗಳನ್ನೂ ಸೃಷ್ಟಿಸುವುದನ್ನೂ ಕಾಣಬಹುದು. ಎಷ್ಟರಮಟ್ಟಿಗೆಂದರೆ, ಕನ್ನಡತ್ವದ ಕಲ್ಪನೆಯನ್ನೇ ಭಂಜಿಸುವುದಕ್ಕೂ ಅದನ್ನು ಉಪಯೋಗಿಸಬಹುದು. ವೃತ್ತಿಪರ ಇತಿಹಾಸಗಳು ಹೋರಾಟಗಳ ಇತಿಹಾಸಗಳಿಗೆ ಒಂದುಕಾಲದಲ್ಲಿ ಜೀವನೀಡಿದರೆ ಮತ್ತೊಂದು ಕಾಲದಲ್ಲಿ ಜೀವತೆಗೆಯುವ ಪಾತ್ರವನ್ನು ವಹಿಸುತ್ತವೆ ಎಂಬುದು ಸಾಕಷ್ಟು ನಿದರ್ಶನವಾಗಿದೆ. ಹೋರಾಟಗಳು ಇತಿಹಾಸ ಕಲ್ಪನೆಗಳನ್ನು ದಾಟಿಕೊಳ್ಳುವಂತಿದ್ದರೆ ಮಾತ್ರ ಈ ಆಘಾತವನ್ನು ಸಹಿಸಿಕೊಳ್ಳಬಹುದು, ಇಲ್ಲವೆ, ವೃತ್ತಿಪರ ಇತಿಹಾಸದಲ್ಲಿ ಅಸಮರ್ಪಕ ಎಂದು ಬೀಸಾಡಿದ ಹಳೇ ವಿಚಾರಗಳನ್ನೇ ಸಮರ್ಥಿಸಿಕೊಳ್ಳುತ್ತ ಹೋರಾಟ ಮುಂದುವರಿಯಬೇಕಾಗುತ್ತದೆ. ಸತ್ಯವಾದ ವೃತ್ತಿಪರ ಇತಿಹಾಸವೇ ಹೋರಾಟಗಳಿಗೆ ತಳಹದಿಯಾಗಬೇಕು ಎಂಬ ನಂಬಿಕೆಯೇ ಆ ಹೋರಾಟಗಳಿಗೆ ಉರುಳಾಗುತ್ತದೆ.

7. ಇಂದಿನ ವೃತ್ತಿಪರ ಇತಿಹಾಸ ಲೇಖನವು ಇಂಥ ಬಲವಂತವಾದ ನಿರ್ಬಂಧಗಳನ್ನು ಎದುರಿಸುತ್ತಿದೆ ಎಂದೇನೂ ನನ್ನ ಇಂಗಿತವಲ್ಲ. ಆದರೆ ಒಂದು ಐಡಿಯಾಲಜಿಯಾಗಿ ಕನ್ನಡತ್ವದ ಚೌಕಟ್ಟು ಸೂಕ್ಷ್ಮವಾಗಿ ಇತಿಹಾಸಕಾರರನ್ನು ಪ್ರಭಾವಿಸುತ್ತದೆ ಎಂಬುದನ್ನು ನಾನು ಇಲ್ಲಿ ಎತ್ತಿ ಹೇಳಬೇಕಿಲ್ಲ. ಆಧುನಿಕ ಪ್ರಭೇದಗಳನ್ನು ಗತಕಾಲಕ್ಕೆ ತೊಡಿಸುವಾಗ ಸಹಜವಾಗಿಯೇ ನಡೆಯಬಹುದಾದ ರಾಜಕೀಯ ಮತ್ತು ಹಿಂಸೆಗಳಿಂದ ವೃತ್ತಿಪರ ಇತಿಹಾಸವು ತನ್ನನ್ನು ರಕ್ಷಿಸಿಕೊಳ್ಳುವ ಮುಂಜಾಗ್ರತೆಯ ಕುರಿತು ಹೇಳುತ್ತಿದ್ದೇನೆ ಅಷ್ಟೆ. ಇಂಥ ಸಂದಿಗ್ಧಪೂರ್ಣ ಹಂತದಲ್ಲಿ ವೃತ್ತಿಪರರ ಇತಿಹಾಸವು ಯಾವ ಹೆಜ್ಜೆ ಇಡಬಹುದು?

ಒಂದಂತೂ ಅತ್ಯಗತ್ಯ: ಇಂದಿನ ಕರ್ನಾಟಕದ ಗಡಿಯನ್ನಾಧರಿಸಿ ಸಾಂಸ್ಕೃತಿಕ ಇತಿಹಾಸವನ್ನು ಗ್ರಹಿಸಬಾರದು ಹಾಗೂ ಪ್ರಾಚೀನ ಪ್ರಭುತ್ವಗಳನ್ನು ಭಾಷಾ ಪ್ರಭುತ್ವಗಳೆಂಬಂತೆ ಗ್ರಹಿಸಬಾರದು. ಈ ಚೌಕಟ್ಟೇ ನಮ್ಮ ಐತಿಹಾಸಿಕ ಗ್ರಹಿಕೆಗೆ ಒಂದು ತೊಡಕಾಗಿದೆ, ಏಕೆಂದರೆ ನಮ್ಮ ಗತಕ್ಕೆ ಈ ಅಂಶಗಳು ಅಪರಿಚಿತ. ಒಂದು ಭಾಷೆಯನ್ನೇ ಮೂಲವಾಗಿಟ್ಟುಕೊಂಡು ಸಂಸ್ಕೃತಿಯನ್ನು ಗುರುತಿಸುವುದು ಸಾಧ್ಯವಿಲ್ಲ. ಹೆಚ್ಚೆಂದರೆ ಭಾಷೆ ಸಂಸ್ಕೃತಿಯ ಒಂದು ಅಭಿವ್ಯಕ್ತಿಮಾಧ್ಯಮವಾಗಬಹುದು. ನಮ್ಮ ಆಧುನಿಕ ರಾಷ್ಟ್ರೀಯತೆಯ ಕಲ್ಪನೆಗಳಲ್ಲಿ ಸಂಸ್ಕೃತಿ, ಭಾಷೆ, ಮತಧರ್ಮ ಹಾಗೂ ಪ್ರಭುತ್ವಗಳ ಮಧ್ಯೆ ಅವಿನಾಭಾವೀ ಸಂಬಂಧ ಕಲ್ಪಿಸುವ ಜರೂರು ಬೆಳೆದುಬಂದಿದೆ. ಇಂಥ ಸಂಬಂಧಗಳನ್ನು ಕಲ್ಪಿಸಿಕೊಳ್ಳದ ಕಾಲವೊಂದರ ಕುರಿತು ನಾವು ಅಧ್ಯಯನ ನಡೆಸುತ್ತಿದ್ದೇವೆಂಬ ಎಚ್ಚರ ಅಗತ್ಯ.

ಅದರ ಜೊತೆಗೆ ಹೆಸರುಗಳು, ಘಟನೆಗಳು ಬೇರೆ ಇದ್ದಾಕ್ಷಣ ಪ್ರಾದೇಶಿಕತೆ ಸಿದ್ಧವಾಗಿಬಿಡುವುದಿಲ್ಲ. ಪ್ರಾದೇಶಿಕತೆಯನ್ನು ಇತಿಹಾಸದ ಜೀವನಕ್ರಮದಲ್ಲಿ ಅರಿಯುವ ಅಗತ್ಯವಿದೆ. ಅದಕ್ಕೆ ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಬೇಕು. ಇಂದು ಸಂಸ್ಕೃತಿಯ ಕುರಿತು ನಮಗಿರುವ ಕಲ್ಪನೆ ಒಂದೇ ಒಂದು, ಅದು ಪಾಶ್ಚಾತ್ಯರದ್ದು. ಅದು ರಿಲಿಜನ್ನಿನ ತಳಪಾಯದ ಮೇಲೆ ನಿಂತಿದೆ. ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಅಧ್ಯಯನವನ್ನು ಹುಟ್ಟುಹಾಕಿದಾಗ ಅವರು ಅದನ್ನು ತಮ್ಮ ಮೂಗಿನ ನೇರಕ್ಕೆ ವರ್ಣಿಸಿದರು. ಹಾಗಾಗಿ ಭಾರತೀಯ ಸಂಸ್ಕೃತಿಯ ಕುರಿತು ಇಂದು ಅಸ್ತಿತ್ವದಲ್ಲಿರುವ ಸಿದ್ಧಾಂತಗಳನ್ನು ಬಳಸಿದರೆ ಕನ್ನಡತ್ವ ಇರಲಿ, ಭಾರತೀಯತೆಯೂ ಸಿಗುವುದಿಲ್ಲ. ಹಾಗಾಗಿ ನಮ್ಮ ಸಂಸ್ಕೃತಿಯ ಕುರಿತ ಪರ್ಯಾಯ ಸಿದ್ಧಾಂತಗಳನ್ನು ಕಂಡುಕೊಳ್ಳದೇ ಕನ್ನಡ ಸಂಸ್ಕೃತಿಯ ಕುರಿತು ಮಾತನಾಡುವುದೇ ವ್ಯರ್ಥ.

ಕರ್ನಾಟಕವು ಒಂದು ಏಕರೂಪೀ ಐತಿಹಾಸಿಕ ಘಟಕವೂ ಅಲ್ಲ. ಇಂದಿನ ಕರ್ನಾಟಕದಲ್ಲೇ ವಿಭಿನ್ನ ವಲಯಗಳು ಹಾಗೂ ವಿಷಯಗಳು ನಮ್ಮ ಅಧ್ಯಯನಕ್ಕನುಗುಣವಾಗಿ ಮೈದಳೆಯಬಹುದು. ಈ ವಲಯಗಳು ಪರಿಸರಾವಲಂಬನೆಯ ವ್ಯವಸ್ಥೆ, ಸಮಾಜ, ಸಂಪ್ರದಾಯ, ಭೂಗೋಲ, ಅರ್ಥವ್ಯವಸ್ಥೆ, ಇತ್ಯಾದಿಯಾಗಿ ಅನೇಕ ಭೌತಿಕ ಅಂಶಗಳನ್ನಾಧರಿಸಿ ರೂಪುಗೊಂಡಿರುತ್ತವೆ. ಈಗಾಗಲೇ ವೃತ್ತಿಪರ ಇತಿಹಾಸವು ಈ ನಿಟ್ಟಿನಲ್ಲಿ ಸಾಕಷ್ಟು ಮುಂದುವರಿದಿದೆ.

ಕರ್ನಾಟಕದ ಇತಿಹಾಸವನ್ನು ಬರೆಯಲಿಕ್ಕೆ ಹೋರಾಟಗಾರರ ಸಾಮಾನ್ಯ ಜ್ಞಾನ ಹಾಗೂ ಭಾಷಾ ರಾಜಕೀಯದ ಘೋಷಣೆಗಳಷ್ಟೇ ಸಾಕು ಎಂದು ವೃತ್ತಿಪರ ಇತಿಹಾಸಕಾರರು ಭಾವಿಸುವವರೆಗೆ ಈ ಕ್ಷೇತ್ರದಲ್ಲಿ ಅವರಿಂದ ಯಾವ ಕೊಡುಗೆಯನ್ನೂ ನಿರೀಕ್ಷಿಸುವಂತಿಲ್ಲ, ಕರ್ನಾಟಕದ ಇತಿಹಾಸವು ಒಂದು ಪ್ರಾದೇಶೀಕ ಇತಿಹಾಸವಾಗಿ ಬೆಳೆಯುವ ಸಾಧ್ಯತೆಯೂ ಕಾಣಿಸುವುದಿಲ್ಲ. ಅಷ್ಟೊಂದೇ ಅಲ್ಲ ಕನ್ನಡತ್ವದ ಅವಾಸ್ತವಿಕ ಆಯಾಮಗಳು ಹಾಗೂ ಅದರಿಂದ ಹುಟ್ಟಬಹುದಾದ ಗೊಂದಲಗಳು, ಹಿಂಸೆಗಳು ಮತ್ತು ತಪ್ಪುಗಳನ್ನು ಗುರುತಿಸುವ ಒಂದು ಸಾಧ್ಯತೆ ಮುಚ್ಚಿಹೋಗುತ್ತದೆ.

ಆಧಾರ ಗ್ರಂಥಗಳು
1) Desai P.B. (Ed), 1970, A History of Karnataka, Kannada Research Institute, Karnataka University Dharwad.
2) 1968 Karnataka Through the Ages
3) Hukkerikar R.S. 1955, Karnataka Darshana, Bombay.
4) Krishna Rao (Ed.) 1960, Glimpses of Karnataka, Mysore Government
5) ಮಲ್ಲೇಪುರಂ ಜಿ. ವೆಂಕಟೇಶ, (ಸಂ) 1999, ಶಂ.ಬಾ. ಸಂಪುಟ 1, ಕಣ್ಮರೆಯಾದ ಕನ್ನಡ; ಸಂಪುಟ-2, ಕನ್ನಡದ ನೆಲೆ, ಎಡೆಗಳು ಹೇಳುವ ಕಂನಾಡ ಕಥೆ, ಕಂನ್ನುಡಿಯ ಹುಟ್ಟು, ಕನ್ನಡ ನುಡಿಯ ಜೀವಾಳ; ಸಂಪುಟ- 3, ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ
6) ಗೋವಿಂದರಾಜು ಸಿ. ಆರ್ 1995, ಕನ್ನಡ-ಕರ್ನಾಟಕತ್ವ, ಹಂಪಿ ವಿಶ್ವವಿದ್ಯಾನಿಲಯ
7) ಆಲೂರು ವೆಂಕಟರಾಯರು, 1909, ಶ್ರೀ ವಿದ್ಯಾರಣ್ಯರು
8) 1917, ಕರ್ನಾಟಕದ ಗತವೈಭವ
9) 1930 ಕರ್ನಾಟಕದ ವೀರರತ್ನಗಳು
10) 1950 ಕರ್ನಾಟಕತ್ವದ ಸೂತ್ರಗಳು
11) 1957 ಕರ್ನಾಟಕತ್ವದ ವಿಕಾಸ
12) ಸಣ್ಣಯ್ಯ ಬಿ.ಎಸ್. 1988, ರಾಜಾವಳೀ ಕಥಾಸಾರ, ಕನ್ನಡ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments