ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 4, 2014

21

ವಿಗ್ರಹಾರಾಧನೆಯ ರಹಸ್ಯ ತತ್ವ

‍ರಾಕೇಶ್ ಶೆಟ್ಟಿ ಮೂಲಕ

– ಮಂಜುನಾಥ ಅಜ್ಜಂಪುರ

ದುರ್ಗೆಮಹರ್ಷಿ ಅರವಿಂದರಂತಹ ಋಷಿಮುನಿಗಳು, ಆನಂದಕುಮಾರಸ್ವಾಮಿ, ಸ್ಟೆಲ್ಲಾ ಕ್ರ್ಯಾಮ್ರಿಶ್, ಅಲಿಸ್ ಬೋನರ್ರಂತಹ ವಿದ್ವಾಂಸರು ಹಿಂದೂ ವಿಗ್ರಹಾರಾಧನೆಯ ಬಗೆಗೆ ಅಧ್ಯಯನ ಮಾಡಿದ್ದಾರೆ, ಧ್ಯಾನಿಸಿದ್ದಾರೆ, ಚಿಂತನೆ ನಡೆಸಿದ್ದಾರೆ. ಮಾನವ ಕೋಟಿಯ ಮನೋಭೂಮಿಕೆಯ ಸಾಮಾನ್ಯ ಮಿತಿಗಳನ್ನು ಮೀರಿದ, ದಾಟಿದ ರೂಪ – ಸತ್ತ್ವ – ಗುಣಲಕ್ಷಣಗಳನ್ನು ಈ ಹಿಂದೂ ವಿಗ್ರಹಗಳಲ್ಲಿ ಕಾಣುತ್ತೇವೆ, ಎಂದು ಅವರೆಲ್ಲಾ ದೃಢವಾಗಿ ಗಟ್ಟಿಯಾಗಿ ಹೇಳುತ್ತಾರೆ. ಇವು ಮನುಷ್ಯರ – ಪ್ರಾಣಿಪಕ್ಷಿಗಳ ಕೇವಲವಾದ ಭೌತಿಕ ರೂಪಗಳ ನೆರಳಚ್ಚುಗಳು ಅಲ್ಲ, ಎಂದೂ ಹೇಳಿದ್ದಾರೆ. ಅವು ಅನಂತತೆಯನ್ನು – ಅಸೀಮವಾದುದನ್ನು ಒಂದು ಪರಿಮಿತಿಯಲ್ಲಿ – ಸೀಮಿತ ಸ್ವರೂಪದಲ್ಲಿ ಕಾಣುವಂತಹ, ಅಮೂರ್ತವಾದುದನ್ನು ಮೂರ್ತಸ್ವರೂಪದಲ್ಲಿ ನೋಡುವಂತಹ ಪರಿಕಲ್ಪನೆಗಳು, ಎನ್ನುತ್ತಾರೆ. ಅವು ಅವುಗಳ ಭೌತಿಕ ಸ್ವರೂಪಗಳನ್ನು ಮೀರಿದ ಅತೀತವಾದುದನ್ನು ಹೇಳುತ್ತವೆ; ಬಹಿರಂಗದಿಂದ ಅಂತರಂಗದೆಡೆಗೆ ನಮ್ಮ ಆಲೋಚನೆಗಳು – ಚಿಂತನೆಗಳು ಹರಿಯುವಂತೆ ಮಾಡುತ್ತವೆ, ಎಂದಿದ್ದಾರೆ.

ಹಿಂದೂ ಶಿಲ್ಪಶಾಸ್ತ್ರಗಳು, ಶಿಲೆಯಲ್ಲಿ – ಲೋಹದಲ್ಲಿ ಮತ್ತು ಬೇರೆ ಬೇರೆ ವಸ್ತು ಬಳಸಿ ಈ ಹಿಂದೂ ವಿಗ್ರಹಗಳನ್ನು ಕೆತ್ತುವಾಗ, ರೂಪಿಸುವಾಗ ಏನೆಲ್ಲಾ ಮಾಡಬೇಕು, ಯಾವೆಲ್ಲಾ ಬಾಹ್ಯರೂಪದ ತಾಂತ್ರಿಕವಾದ ಸೂತ್ರ – ವಿಧಾನಗಳನ್ನು ಅನುಸರಿಸಬೇಕು, ಎನ್ನುವುದನ್ನು ಮಾತ್ರವೇ ಹೇಳುವುದಿಲ್ಲ. ಒಂದು ದೇವತೆಯ ಮೂರ್ತಿಯನ್ನು ಕೆತ್ತುವ – ನಿರ್ಮಿಸುವ ಪೂರ್ವದಲ್ಲಿ, ಆ ದೇವತೆಯ ಸ್ವರೂಪ ಲಕ್ಷಣಗಳನ್ನು ಮನೋಭೂಮಿಕೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೆ ಮೊದಲು, ಶಿಲ್ಪಿಯು – ಕಲಾವಿದನು ಎಷ್ಟು ಸಮಯ ಉಪವಾಸವಿರಬೇಕು, ಎಷ್ಟೆಷ್ಟು ಮತ್ತು ಹೇಗೆ ಹೇಗೆ ಪ್ರಾರ್ಥನೆ ಮಾಡಬೇಕು ಮತ್ತು ತನ್ನನ್ನು ತಾನು ಹೇಗೆಲ್ಲಾ ಶುದ್ಧೀಕರಣ ಮಾಡಿಕೊಳ್ಳಬೇಕು, ಎಂಬುದರ ಬಗೆಗೆ ವಿಸ್ತೃತವಾದ ಸಂಹಿತೆಯನ್ನೇ ತಿಳಿಸುತ್ತವೆ. ತದನಂತರವೇ, ಮೂರ್ತಿ ನಿರ್ಮಿಸಲು ಅನುಮತಿ ದೊರೆಯುತ್ತದೆ. ಭೂಮಂಡಲದ ತುಂಬ ವ್ಯಾಪಿಸಿರುವ – ಕಾಣುವ ಬಹುಸಂಖ್ಯೆಯ ದೈವಿಕವಾದ ಶಿಲ್ಪಗಳಲ್ಲಿ – ಚಿತ್ರಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ, ಚಿದಂಬರಂ ದೇವಾಲಯದ ನಟರಾಜ, ಸಾರನಾಥದ ಬುದ್ಧ, ವಿದಿಶಾ ನಗರದ ವರಾಹಮೂರ್ತಿಗಳಂತಹ ಅಪೂರ್ವ ಪ್ರತಿಮೆಗಳ ನಿರ್ಮಿತಿಯ ಆಂತರ್ಯವನ್ನು – ಮಹತ್ತ್ವವನ್ನು, ಈ ಹಿಂದೂ ಶಿಲ್ಪಶಾಸ್ತ್ರಗಳ ಉದಾತ್ತ ನಿಯಮಗಳು ಮಾತ್ರ ವಿವರಿಸಬಲ್ಲವು. ಅಂತಹ ಮಹೋನ್ನತ ವಾದ ಸಂಹಿತೆಯ ಪರಿಚಯವಿಲ್ಲದ ಆಧುನಿಕ ಶಿಲ್ಪಿಗಳು, ಮೂಲ ಶಿಲ್ಪಕಲಾಕೃತಿ ಗಳಂತಹ ಕೌತುಕಗಳನ್ನು – ವಿಸ್ಮಯಗಳನ್ನು ಸೃಷ್ಟಿಸಲಾರರು ಮತ್ತು ಬರಿಯ ಅಣಕುರೂಪಗಳನ್ನು ಮಾತ್ರ ನೀಡಬಲ್ಲರು.

ಮೇಲೆ ಹೇಳಿದಂತಹ ಆಧುನಿಕ ಕಾಲದ ಋಷಿಗಳು – ವಿದ್ವಾಂಸರು, ಹಿಂದೂ ದೇವಾಲಯಗಳ ವಾಸ್ತು – ವಿನ್ಯಾಸ – ಬಂಧ ಮತ್ತು ಪೂಜೆಯ ವೇಳೆಯ ಶಾಸ್ತ್ರ – ಸಂಪ್ರದಾಯಗಳು ಕೂಡ ಇದೇ ರೀತಿಯ ಉದಾತ್ತವಾದ ಉನ್ನತವಾದ ಸಂಹಿತೆಯನ್ನೇ ಹೊಂದಿವೆ, ಎಂದಿದ್ದಾರೆ. ಇವು ಕ್ಲಿಷ್ಟವಾದ – ಸಂಕೀರ್ಣವಾದ -ಆಳವಾದ ಚಿಂತನ ವಿಷಯಗಳು ಸಾಮಾನ್ಯನ ವ್ಯಾಪ್ತಿಯನ್ನು ಮೀರಿದ ತತ್ತ್ವವಿಚಾರಗಳು. ಹಾಗಾಗಿ, ನಾನು ಇನ್ನಷ್ಟು ವಿವರವಾಗಿ ಚರ್ಚೆ ಮಾಡದೆಯೇ ಮುಂದುವರಿಯುತ್ತೇನೆ. ನಾನು ಒತ್ತಿಹೇಳುವುದು ಇಷ್ಟೇ; ಹಿಂದೂ ದೇವಾನುದೇವತೆಗಳ ಬಹುತ್ವವಾಗಲೀ, ಆ ದೇವತೆಗಳ ಮೂರ್ತಸ್ವರೂಪದ ಶಿಲ್ಪಗಳಾಗಲೀ, ಅವುಗಳನ್ನು ಪ್ರತಿಷ್ಠಾಪಿಸಿರುವ ದೇವಾಲಯಗಳಾಗಲೀ, ಪೂಜೆ – ಆರಾಧನೆಗಳ ಶಾಸ್ತ್ರ – ಸಂಪ್ರದಾಯಗಳಾಗಲೀ, ಆಳವಾದ ಆಧ್ಯಾತ್ಮಿಕ ದರ್ಶನಗಳೆಡೆಗಿನ ಸಾಧನಗಳಷ್ಟೇ ಅಲ್ಲ, ಅವು ಅರಿವಿನ ಪಥಗಳು – ದಾರಿದೀಪಗಳು.

ಚಿಂತನ ತಪಸ್ವಿ ರಾಮಸ್ವರೂಪರು, 1980ರಲ್ಲಿ ಪ್ರಕಟವಾದ ” The Word as Revelation: Names of Gods” (ಹಿಂದೂ ದೇವತೆಗಳ ಹೆಸರುಗಳು: ಅವು ತಿಳಿಯಪಡಿಸುವ ಜ್ಞಾನತತ್ತ್ವಗಳು) ಎಂಬ ತಮ್ಮ ಗ್ರಂಥದಲ್ಲಿ, ಹಿಂದೂ ದೇವತೆಗಳ ಬಹುತ್ವ ಕುರಿತು, ಅವುಗಳ ಮೂರ್ತಸ್ವರೂಪಗಳ ಆವಿಷ್ಕಾರ ಕುರಿತು, ಒಂದು ಯಥೋಚಿತವಾದ ದೃಷ್ಟಿಕೋನವನ್ನು ಹೀಗೆ ನೀಡಿದ್ದಾರೆ:

1. ಅದು ಮಾನವಚಿಂತನೆಯ – ಮನೋಭಿವ್ಯಕ್ತಿಯ ಸ್ವಾಭಾವಿಕ ಪ್ರಕ್ರಿಯೆ ಆಗಬೇಕು.
2. ಮಾನವಕೋಟಿಯ ಜ್ಞಾನಸಂಪದವು ಆಧ್ಯಾತ್ಮಿಕ ಅರಿವಿನಲ್ಲಿ ಅತ್ಯುನ್ನತ ಸ್ಥಿತಿ ತಲುಪಬೇಕು.
3. ಮಾನವನ ಭಾಷಾಲೋಕವು ಸಹಜವಾಗಿ ಬೆಳೆಯುತ್ತಾ ಜ್ಞಾನ ಮತ್ತು ದರ್ಶನಗಳನ್ನು ಒಳಗೊಳ್ಳಬೇಕು ಮತ್ತು ಪರಿಣಾಮಕಾರಿಯಾಗಿ ಸಂವಹನ ಮಾಡಬೇಕು.

ಚಿತ್ರಕೃಪೆ : http://www.indiamarks.com

Read more from ಲೇಖನಗಳು
21 ಟಿಪ್ಪಣಿಗಳು Post a comment
 1. kannadamasti. net
  ಸೆಪ್ಟೆಂ 4 2014

  Kannada mp3 songs free download Kannada 3gp mp4 videos free download Kannada star hits all old songs free download

  ಉತ್ತರ
 2. ಸೆಪ್ಟೆಂ 4 2014

  ಬಹಳ ಉಪಯೋಗಕರವಾದ ವಿಷಯಗಳನ್ನು ತಿಳಿಸಿರುವಿರಿ, ಧನ್ಯವಾದಗಳು.

  ಉತ್ತರ
 3. ಅತಿಥಿ
  ಸೆಪ್ಟೆಂ 5 2014

  ಕಣ್ಣಿಗೆ ಕಾಣದ ದೇವರನ್ನು ವಿಗ್ರಹಗಳ ಮೂಲಕ ಕಲ್ಪಿಸಿಕೊಂಡಿದ್ದಾರೆ.

  ಉತ್ತರ
 4. vasudeva
  ಸೆಪ್ಟೆಂ 6 2014

  ಶ್ರೀ ಮಂಜುನಾಥ್ ಅವರೆ,
  ನೀವು ನಿಮ್ಮ ಲೇಖನದಲ್ಲಿ ಶ್ರೀ ಅರವಿಂದ, ಆನಂದಕುಮಾರ ಸ್ವಾಮಿ ಮೊದಲಾದವರನ್ನು ಉಲ್ಲೇಖಿಸಿರುವಿರಿ. ಆದರೆ ಭಾರತದ ಅತ್ಯಂತ ಪ್ರಾಚೀನ ಶಾಸ್ತ್ರಪ್ರಮಾಣವಾದ ವೇದಗಳನ್ನೂ ನೀವು ಪರಿಗಣಿಸಬೇಕಿತ್ತು ಎನಿಸುತ್ತದೆ. ಏಕೆಂದರೆ ವಿಗ್ರಹಪೂಜೆ ವೇದೋಕ್ತ ವಿಧಿಯಲ್ಲ, ವೇದಗಳು ವಿಗ್ರಹ ಪೂಜೆಯನ್ನು ಎಲ್ಲೂ ಅನುಮೋದಿಸಿದಂತೆ ತೋರುವುದಿಲ್ಲ. ದಯಾನಂದ ಸರಸ್ವತಿಯಂತಹ ಸುಧಾರಣಾವಾದಿಗಳಂತೂ ಅದನ್ನು ಒಂದು ಸಾಮಾಜಿಕ ಮೌಢ್ಯವೆಂದೇ ಪ್ರತಿಪಾದಿಸುವರು.
  ಭಾರತದಲ್ಲಿ ಬುದ್ಧನ ತರುವಾಯವಷ್ಟೇ ಈ ವಿಗ್ರಹಾರಾಧನೆ ಪ್ರಚಾರಗೊಂಡಿತು. ಅವರೊಡನೆ ಪೈಪೋಟಿಕೆ ಬಿದ್ದಿದ್ದ ಅಂದಿನ ವೈದಿಕರು ಆಮೇಲೆ ಈ ಪದ್ಧತಿಯನ್ನೇ ತಮ್ಮಲ್ಲಿ ಅಳವಡಿಸಿಕೊಂಡರು. ವೇದಧರ್ಮನಿಷ್ಠೆಗಿಂತ ಅವರಿಗೆ ಚಿಲ್ಲರೆ ಪೈಪೋಟಿಯೇ ಮುಖ್ಯವಾಯಿತಲ್ಲ ಎಂದು ವಿಷಾದವಾಗುತ್ತದೆ. ಅದೇನೇ ಇರಲಿ ವೈದಿಕಧರ್ಮವನ್ನು ಯಥಾರ್ಥವಾಗಿ ಮರುವ್ಯಾಖ್ಯಾನಿಸಲು ಪ್ರಯತ್ನಿಸುವವರಿಗೆ ವಿಗ್ರಹ ಪೂಜೆಯ ಪ್ರತಿಪಾದನೆ ಅನಗತ್ಯ ಉಪದ್ವ್ಯಾಪ ಎನಿಸುವುದಿಲ್ಲವೇ?

  ಉತ್ತರ
  • valavi
   ಸೆಪ್ಟೆಂ 7 2014

   ವಾಸು ದೆವ ಅವರೆ ನಿಮ್ಮ ಹೇಳಿಕೆ ಬಹ ಳ ಸತ್ಯವಾಗಿದೆ. ನನಗೆ ಇಷ್ಟವಾಯಿತು.

   ಉತ್ತರ
 5. Nagshetty Shetkar
  ಸೆಪ್ಟೆಂ 7 2014

  ಬಸವಧರ್ಮವು ವಿಗ್ರಹಾರಾಧನೆಯನ್ನು ಒಪ್ಪುವುದಿಲ್ಲ.

  ಉತ್ತರ
  • vasudeva
   ಸೆಪ್ಟೆಂ 7 2014

   nagashetty shetkar avare, ishtalinga vigrahavallave? athava allamana maatanne ullekhisuvudaadare ishtalinga ondu kuruhu (idol) allave?

   ಉತ್ತರ
   • Nagshetty Shetkar
    ಸೆಪ್ಟೆಂ 8 2014

    ಇಷ್ಟಲಿಂಗ ಪೂಜೆ ಬಗ್ಗೆ ವಿಶದವಾಗಿ ಬರೆಯಲಾಗಿದೆ ನೀವು ನೋಡಿಲ್ಲ ಮಿ. ಆನಂದ ಪ್ರಸಾದ್.

    “ಬಸವಧರ್ಮದಲ್ಲಿ ಎರಡು ಪ್ರಕಾರದ ಲಿಂಗಗಳಿವೆ. ಒಂದು ಇಷ್ಟಲಿಂಗ, ಇನ್ನೊಂದು ಜಂಗಮಲಿಂಗ. ಭಕ್ತನಾದವನು ಇಷ್ಟಲಿಂಗ ಪೂಜೆಯಲ್ಲಿ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಇಷ್ಟಲಿಂಗ ಪೂಜೆ ಎಂಬುದು ಅರಿವಿನ ಪೂಜೆ. ನಮ್ಮೊಳಗಿನ ಅರಿವೇ ಗುರು. ಆ ಗುರುವೇ ದೇವರು. ಇಷ್ಟಲಿಂಗವೆಂಬುದು ಆ ಅರಿವಿನ ಕುರುಹು ಮಾತ್ರ. ಇಷ್ಟಲಿಂಗ ಪೂಜಕ ಆ ಕುರುಹನ್ನು ಹಿಡಿದು ತಮ್ಮೊಳಗಿನ sಘನದ ಪೂಜೆಯನ್ನು ಮಾಡಬೇಕಾಗುತ್ತದೆ. ಆ ಘನವೇ ಅರಿವಿನ ರೂಪದಲ್ಲಿ ಇರುತ್ತದೆ. ಅರಿವೆಂದರೆ ಕಣ್ಣಿಗೆ ಕಾಣದ ಪರವಸ್ತು (ದೇವರು) ಮತ್ತು ಆ ಪರವಸ್ತುವನ್ನು ಅನುಭಾವಿಸುವ ಮೂಲಕ ಅದೇ ಆಗಿರುವಂಥ ಸ್ಥಿತಿ. ಇಂಥ ಸ್ಥಿತಿಯಲ್ಲಿ ಮಾನವನ ಒಳಗೆ ಇಡೀ ಜಗತ್ತು ಬಂದು ಸೇರುತ್ತದೆ. ನಂತರ ಆತ ಇಡೀ ಜಗತ್ತಿನಲ್ಲಿ ಒಂದಾಗಿ ಹೋಗುತ್ತಾನೆ. ಎಲ್ಲ ಜೀವಾತ್ಮರಲ್ಲಿ ತನ್ನನ್ನೇ ಕಾಣುತ್ತಾನೆ. ಈ ಅಚಲ ನಂಬಿಕೆಯೊಂದಿಗೆ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುತ್ತಾನೆ. ಆಗ ಸಹಜವಾಗಿಯೇ ಜೀವಕಾರುಣ್ಯವು ಧರ್ಮದ ಮೂಲವಾಗುತ್ತದೆ.

    ಶರಣಧರ್ಮೀಯರು ಬರಿ ಇಷ್ಟಲಿಂಗ ಪೂಜೆ ಮಾಡಿದರಷ್ಟೇ ಸಾಲದು. ಅವರು ಜಂಗಮಲಿಂಗ ಪೂಜೆಯನ್ನೂ ಮಾಡಬೇಕಾಗುತ್ತದೆ. ತನ್ನೊಳಗಿನ ದೇವರ ಜೊತೆ ಒಂದಾಗಿ, ಆ ದೇವರೇ ವಿಶ್ವರೂಪದಲ್ಲಿ ಕಾಣುವ ಜಂಗಮಲಿಂಗ ಸ್ವರೂಪಿಯಾಗಿದ್ದಾನೆ ಎಂಬುದನ್ನು ಇಷ್ಟಲಿಂಗ ಪೂಜೆಯ ಮೂಲಕ ಭಕ್ತನಾದವನು ಅರಿತುಕೊಳ್ಳುತ್ತಾನೆ.

    ಜಂಗಮಲಿಂಗಕ್ಕೆ ಐದು ಅರ್ಥಗಳಿವೆ. ೧) ಜಂಗಮ ಎಂದರೆ ಅಳಿವಿಲ್ಲದ್ದು. ಚೈತನ್ಯಕ್ಕೆ ಅಳಿವಿಲ್ಲ. ಆದ್ದರಿಂದ ಜಂಗಮ ಎಂದರೆ ಚೈತನ್ಯ. ಕಣ್ಣಿಗೆ ಕಾಣದ ಈ ಚೈತನ್ಯದಿಂದಲೇ

    ಕಣ್ಣಿಗೆ ಕಾಣುವ ವಸ್ತುರೂಪಿ ಜಗತ್ತಿನ ಸೃಷ್ಟಿಯಾಗಿದೆ. ವಸ್ತುರೂಪಿ ಜಗತ್ತಿನ ಪ್ರತಿ ಕಣದಲ್ಲೂ ಈ ಚೈತನ್ಯವು ಚಲನಶೀಲವಾಗಿ ಇದೆ. ಸ್ಥಾವರದ ಒಳಗಿನ ಚೈತನ್ಯವೇ ದೇವರು. ಹೀಗೆ ದೇವರು ಚಲನಶೀಲವಾದುದು. ಆದ್ದರಿಂದ ಜಂಗಮಲಿಂಗ ಎಂದರೆ ಚೈತನ್ಯರೂಪಿ ಚಲನಶೀಲ ದೇವರು. ೨) ಜಂಗಮಲಿಂಗ ಎಂದರೆ ಕಣ್ಣಿಗೆ ಕಾಣುವ ವಿಶ್ವ. ಇದರೊಳಗೂ ದೇವರು ಚೈತನ್ಯರೂಪವಾಗಿ ಇರುವುದರಿಂದ ಇಡೀ ವಿಶ್ವವನ್ನೇ ದೇವರು ಎಂದು ಭಾವಿಸುವುದು. ೩) ಜಂಗಮಲಿಂಗ ಎಂದರೆ ಸಕಲಜೀವಾತ್ಮರು. ಸಕಲಜೀವಾತ್ಮರಲ್ಲಿ ದೇವರು ಚೈತನ್ಯಸ್ವರೂಪದಲ್ಲಿ ಇರುವುದರಿಂದ ಸಕಲಜೀವಾತ್ಮರನ್ನು ದೇವರು ಎಂದು ಭಾವಿಸುವುದು. ೪) ಜಂಗಮಲಿಂಗ ಎಂದರೆ ಸಮಾಜ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೊಳಗೆ ದೇವರಿದ್ದಾನೆ ಎಂದು ಭಾವಿಸುವುದು. ಆದ್ದರಿಂದ ಯಾವ ವ್ಯಕ್ತಿಯೂ ಹಸಿವಿನಿಂದ ಬಳಲಬಾರದು ಎಂಬ ಸಾಮಾಜಿಕ ಕಾಳಜಿಯನ್ನು ಹೊಂದುವುದು. ೫) ಈ ಸರ್ವಸಮತ್ವದ ತತ್ತ್ವವನ್ನು ಸಂಪೂರ್ಣ ಸಮರ್ಪಣಾಭಾವದಿಂದ ಸಾರುವವನೇ ಜಂಗಮ. ಆದ್ದರಿಂದ ಆತನೂ ದೇವಸ್ವರೂಪನೇ ಆಗುತ್ತಾನೆ.”

    [ವಚನ ವಿವೇಕ – 8 ಲೇ: ರಂಜಾನ್ ದರ್ಗಾ]

    “ಎಲ್ಲ ಮಾನವರು ಪ್ರೇಮಭಾವದೊಂದಿಗೆ, ನದಿಯೊಳಗೆ ನದಿ ಬೆರೆತ ಹಾಗೆ ಒಂದಾಗಿ ಬದುಕಬೇಕು. ಯಾರೂ ಹೆಚ್ಚಿನವರಲ್ಲ ಯಾರೂ ಕಡಿಮೆಯಲ್ಲ. ಎಲ್ಲರೂ ಸಮಾನರು. ಆದ್ದರಿಂದ ಎಲ್ಲ ಜಾತಿ, ಜನಾಂಗ ಮತ್ತು ಧರ್ಮದವರು ಸೇರಿ ಒಂದಾಗಿ ಬದುಕಬೇಕು. ಇಂಥ ಪ್ರಜ್ಞೆಯನ್ನು ಮೂಡಿಸುವುದೇ ಇಷ್ಟಲಿಂಗ ಪೂಜೆಯ ಉದ್ದೇಶವಾಗಿದೆ. ಒಂದು ವೇಳೆ ಇಷ್ಟಲಿಂಗ ಪೂಜಕರು ಈ ರೀತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮಾನವ ಏಕತೆ ಸಾಧಿಸಲಿಕ್ಕಾಗದು. ಆಗ ಇಷ್ಟಲಿಂಗ ಪೂಜೆಯ ಉದ್ದೇಶ ಈಡೇರದು.”

    “ಶೋಷಣೆಯ ಮೂಲವಾದ ಕರ್ಮಸಿದ್ಧಾಂತವನ್ನು ಬಸವಣ್ಣನವರು ಕಾಯಕಸಿದ್ಧಾಂತದ ಮೂಲಕ ವಿರೋಧಿಸಿದರು. ಕರ್ಮ ಎನ್ನುವುದು ನಮ್ಮ ಮನದೊಳಗಿನ ಕತ್ತಲೆ. ಅದನ್ನು ಇಷ್ಟಲಿಂಗವೆಂಬ ನಮ್ಮೊಳಗಿನ ಅರಿವಿನ ಬೆಳಕಿನ ಮೂಲಕ ಇಲ್ಲವಾಗಿಸಬೇಕು.

    ಸರ್ವಸಮತ್ವವನ್ನು ಸಾರುವ ಇಷ್ಟಲಿಂಗದಲ್ಲಿ ಕರ್ಮವನ್ನು ನಾಶಗೊಳಿಸುವ ಶಕ್ತಿ ಇದೆ. ಇಷ್ಟಲಿಂಗ ಪೂಜಕರು ಕರ್ಮಸಿದ್ಧಾಂತವನ್ನು ನಂಬಬಾರದು. ಮಾನವಕಲ್ಯಾಣದ ತತ್ತ್ವಕ್ಕೆ ಬದ್ಧರಾದವರಿಗೆ ಕರ್ಮಸಿದ್ಧಾಂತ ಬಾಧಿಸಲು ಸಾಧ್ಯವಿಲ್ಲ. ದುರ್ಬಲ ಮನಸ್ಸಿನವರ ಮೇಲೆ ಮಾತ್ರ ಕರ್ಮಸಿದ್ಧಾಂತ ಸವಾರಿ ಮಾಡುವುದು. ಒಂದುವೇಳೆ ಇಷ್ಟಲಿಂಗ ಪೂಜೆ ಮಾಡಿಯೂ ಕರ್ಮಸಿದ್ಧಾಂತದ ಮೇಲೆ ನಂಬಿಕೆ ಇಟ್ಟರೆ ಪೂಜೆ ಮಾಡಿ ಉಪಯೋಗವಿಲ್ಲ. ಏಕೆಂದರೆ ಇಷ್ಟಲಿಂಗತತ್ತ್ವ ಮತ್ತು ಕರ್ಮಸಿದ್ಧಾಂತ ತದ್ವಿರುದ್ಧವಾಗಿವೆ. ಕರ್ಮಸಿದ್ಧಾಂತ ಕತ್ತಲೆಯಾದರೆ, ಇಷ್ಟಲಿಂಗ ಬೆಳಕು. ಕರ್ಮಸಿದ್ಧಾಂತವನ್ನು ‘ಕಬ್ಬಿಣ’ ಎಂದು ಭಾವಿಸಿದರೆ, ಇಷ್ಟಲಿಂಗ ಪರುಷ. ಇಷ್ಟಲಿಂಗವೆಂಬ ಬೆಳಕು ಕರ್ಮಸಿದ್ಧಾಂತವೆಂಬ ಕತ್ತಲೆ ಕಳೆಯದಿದ್ದರೆ ಆ ಇಷ್ಟಲಿಂಗ ಪೂಜೆಯ ಅವಶ್ಯಕತೆ ಏನು? ಎಂದು ಪ್ರಶ್ನಿಸುವಷ್ಟು ಬಸವಣ್ಣನವರು ಕರ್ಮಸಿದ್ಧಾಂತವನ್ನು ತಿರಸ್ಕಾರದಿಂದ ನೋಡುತ್ತಾರೆ. ಏಕೆಂದರೆ ಯುಗಯುಗಗಳಿಂದಲೂ ಜನಸಮುದಾಯ ಈ ಕರ್ಮಸಿದ್ಧಾಂತದ ಬಲೆಗೆ ಸಿಕ್ಕಿ ಒದ್ದಾಡುತ್ತಿದೆ.

    ಅರಿವಿನ ಸಂಕೇತವಾದ ಇಷ್ಟಲಿಂಗವು ಅಜ್ಞಾನದ ಸಂಕೇತವಾದ ಕರ್ಮಸಿದ್ಧಾಂತದಂಥ ಅನಿಷ್ಟಗಳನ್ನು ಹೊಡೆದೋಡಿಸುವಂಥದ್ದು.

    ಇಷ್ಟಲಿಂಗ ಪೂಜೆಯು, ದುರ್ಬಲ ಮನಸ್ಸಿನವರಲ್ಲಿ ಶಕ್ತಿ ತುಂಬುವುದು. ಸಮರ್ಪಣಾ ಭಾವದ ಇಷ್ಟಲಿಂಗ ಪೂಜಕನು ಹೀಗೆ ಮಾನಸಿಕ ಸ್ಥೈರ್ಯವನ್ನು ಹೊಂದುವವನು. ವೈಚಾರಿಕ ನೆಲೆಯಲ್ಲಿ ಬದುಕನ್ನು ನೋಡುವ ದೃಷ್ಟಿಕೋನವನ್ನು ಪಡೆಯುವನು. ಸುಲಿಗೆಯ ವಿಷವರ್ತುಲಗಳಿಂದ ಹೊರ ಬರುವ ಮಾರ್ಗ ಕಂಡುಕೊಳ್ಳುವನು. ಕರ್ಮಸಿದ್ಧಾಂತದಿಂದ ಜಾತಿಗಳು, ಅಸ್ಪೃಶ್ಯತೆ, ಮೇಲುಕೀಳು ಮತ್ತು ಶೋಷಣೆ ಜನ್ಮತಾಳಿದ್ದನ್ನು ಆತ ಬಹುಬೇಗ ಅರ್ಥಮಾಡಿಕೊಳ್ಳುವನು. ಮಾನವ ಈ ಎಲ್ಲ ರೀತಿಯ ಮನೋದೌರ್ಬಲ್ಯ, ಅಸಹಾಯಕತೆ, ಕೀಳರಿಮೆ ಮತ್ತು ಶೋಷಣೆಯಿಂದ ಹೊರಬಂದು ಕಾಯಕದ ಮೂಲಕ ಆತ್ಮಗೌರವದೊಂದಿಗೆ ಬದುಕುವ ಪ್ರಜ್ಞೆಯನ್ನು ಇಷ್ಟಲಿಂಗ ಪೂಜೆಯು ಮೂಡಿಸುವುದು.

    ಇಷ್ಟಲಿಂಗವನ್ನು ಕೊಡುವುದರ ಮೂಲಕ ಬಸವಣ್ಣನವರು ಶೋಷಣೆಯ ಕೇಂದ್ರವಾಗಿರುವ ದೇವಾಲಯಗಳಿಗೆ ಜನ ಹೋಗದಂತೆ ಮಾಡಿದರು. ದೇವರು ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳು ಇಲ್ಲದಂತೆ ಮಾಡಿದರು. ಆಗ ಜನ ಆರ್ಥಿಕ ಮತ್ತು ಮಾನಸಿಕ ಶೋಷಣೆಯಿಂದ ಮುಕ್ತರಾದರು. ದೇವರು ತಮ್ಮೊಳಗೇ ಇರುವುದರಿಂದ ಅವರಿಗೆ ಎಲ್ಲ ಕಾಲವೂ ಒಳ್ಳೆಯ ಕಾಲವೇ ಆಯಿತು. ಎಲ್ಲ ದಿನಗಳೂ ಒಳ್ಳೆಯ ದಿನಗಳೇ ಆದವು. ತಮ್ಮೊಳಗಿನ ದೇವರು ’ಕರ್ಮಹರ’ ಎಂಬ ನಂಬಿಕೆ ಅವರಲ್ಲಿ ಮೂಡಿತು. ಎಲ್ಲ ಕಾಯಕಗಳೂ ದೇವರ ದೃಷ್ಟಿಯಲ್ಲಿ ಸಮ ಎಂಬ ಅರಿವು ಮೂಡಿದಾಗ ಎಲ್ಲ ಕಾಯಕಜೀವಿಗಳು ಸಮಾನರು ಎಂಬ ಸತ್ಯವನ್ನು ಸಾರಿದರು. ಹೀಗೆ ಇಷ್ಟಲಿಂಗವು ಎಲ್ಲ ಕಾಯಕಜೀವಿಗಳನ್ನು ಒಂದುಗೂಡಿಸಿ ಸಮುದಾಯದ ಶಕ್ತಿಯನ್ನು ನೀಡಿತು. ವೈದಿಕರು ಸೃಷ್ಟಿಸಿದ ಎಲ್ಲರೀತಿಯ ಧಾರ್ಮಿಕ ಭಯ, ಮೂಢನಂಬಿಕೆ ಮತ್ತು ಮೇಲುಕೀಳು ಭಾವಗಳಿಂದ ಮುಕ್ತನಾಗುವ ಮೂಲಕ ’ಭಯವೇ ಧರ್ಮದ ಮೂಲ’ ಎಂಬುದನ್ನು ಅಲ್ಲಗಳೆದು ’ದಯವೇ ಧರ್ಮದ ಮೂಲ’ ಎಂಬ ಲಿಂಗತತ್ತ್ವವನ್ನು ಸಾರಿದರು.

    ಕರ್ಮಸಿದ್ಧಾಂತವು ಬಹುಸಂಖ್ಯಾತ ಬಡವರ ಜೀವ ಹಿಂಡುವ ಕ್ರೂರ ಸಿದ್ಧಾಂತವಾಗಿದೆ. ಅವರು ಬದುಕಿನಲ್ಲಿ ಮೇಲೇಳದಂಥ ಮಾನಸಿಕ ವಾತಾವರಣವನ್ನು ಅದು ಸೃಷ್ಟಿಸುತ್ತದೆ. ಕಳ್ಳರು, ಸುಳ್ಳರು, ಸುಲಿಗೆಕೋರರು, ಅನ್ಯಾಯದಿಂದ ಧನ ಗಳಿಸುವವರು, ಧನಾಡ್ಯರು ಮತ್ತು ರಾಜ ಮಹಾರಾಜರಂಥವರು ಕೂಡ ತಮ್ಮ ’ಸೇವೆ’ ಮಾಡುವಂಥ ವ್ಯವಸ್ಥೆಯನ್ನು ವೈದಿಕರು ಮೂಢನಂಬಿಕೆಗಳ ತಾಯಿಯಾದ ಕರ್ಮಸಿದ್ಧಾಂತದ ಮೂಲಕ ಸೃಷ್ಟಿಸಿದರು.

    ಕರ್ಮ ಎಂದರೆ ಕೆಲಸ. ಕರ್ಮ ಎಂದರೆ ಒಬ್ಬ ವ್ಯಕ್ತಿಯ ಸುಖ ಮತ್ತು ದುಃಖಕ್ಕೆ ಕಾರಣವಾದ ಪೂರ್ವಜನ್ಮದ ಕೃತ್ಯ. ಹೀಗೆ ಕರ್ಮವನ್ನು ಅರ್ಥೈಸುತ್ತಾರೆ. ಆದರೆ ಜನಮನದಲ್ಲಿ ’ಕರ್ಮ’ ಎಂದ ಕೂಡಲೇ ಪೂರ್ವಜನ್ಮದ ಪಾಪಕೃತ್ಯ ಎಂಬ ವಿಚಾರವೇ ಹೊಳೆಯುತ್ತದೆ. ಜನ್ಮ ಕಾಲದ ತಿಥಿ. ವಾರ, ನಕ್ಷತ್ರ ಮುಂತಾದ ವಿವರಗಳನ್ನೂ ಆಗಿನ ಗ್ರಹಗಳ ಸ್ಥಿತಿಯನ್ನು (ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ) ತಿಳಿಸುವುದೇ ಜಾತಕ. ಜಾತಕ ಬರೆಯುವುದೆಂದರೆ, ೧೨ ಮನೆಗಳ ರೇಖಾಕೃತಿಯಿಂದ ಜನ್ಮಕುಂಡಲಿಯನ್ನು ತಯಾರಿಸುವುದು. ಕರ್ಮಸಿದ್ಧಾಂತವನ್ನು ನಂಬುವವರ ಜನ್ಮಕುಂಡಲಿಯನ್ನು ವೈದಿಕರು ಜಾಲಾಡಿಸುತ್ತ ಅವರ ಕರ್ಮ ಪರಿಹಾರ ಮಾಡುವ ಭರವಸೆ ನೀಡುತ್ತಾರೆ. ಗ್ರಹಗಳು ಅವರ ಪರವಾಗಿ ಇರುವಂತೆ ನೋಡಿಕೊಳ್ಳುವುದಾಗಿ ತಿಳಿಸುತ್ತಾರೆ. ಕರ್ಮ ಪರಿಹಾರಕ್ಕಾಗಿ ಯಜ್ಞ, ಯಾಗ, ಬಲಿ ಮತ್ತು ದಾನ ಮುಂತಾದ ಸಲಹೆಗಳನ್ನು ನೀಡುತ್ತಾರೆ. ಹೀಗೆ ಜನರನ್ನು ಸುಲಿದು ಬದುಕುವಂಥವರನ್ನೂ ಸುಲಿಯುತ್ತಾರೆ. ಅಂಥವರನ್ನು ಪಾಪದಿಂದ ವಿಮೋಚನೆಗೊಳಿಸುವ ನಾಟಕವೇ ಇವರ ಉದ್ಯೋಗವಾಗಿರುತ್ತದೆ.

    ಲಿಂಗಾಯತ ಧರ್ಮ ನಿರ್ಜಾತಿ ಧರ್ಮವಾಗಿರುವುದರಿಂದ ಜಾತಿ ಉಪಜಾತಿ ಭ್ರಮೆಯಿಂದ ಹೊರಬರುವುದು ಅವಶ್ಯವಾಗಿದೆ. ಇಲ್ಲದಿದ್ದರೆ ವೈದಿಕದ ಎಲ್ಲ ಅನಿಷ್ಟಗಳ ಒಟ್ಟುರೂಪವಾದ ಬ್ರಾಹ್ಮಣಿಕೆಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ.”

    [ಬ್ರಾಹ್ಮಣಿಕೆ ವಿರುದ್ಧ ಸಿಡಿದೆದ್ದ ಶರಣರು ಲೇ: ರಂಜಾನ್ ದರ್ಗಾ]

    ಉತ್ತರ
    • vasudeva
     ಸೆಪ್ಟೆಂ 9 2014

     ನಾಗಶೆಟ್ಟಿ ಷೆಟ್ಕರ್ ಅವರೆ
     ನಾನು ಆನಂದ್ ಪ್ರಸಾದ್ ಅಲ್ಲ,
     ನೀವು ಇಷ್ಟಲಿಂಗದ ಬಗ್ಗೆ ಶ್ರೀ ರಂಜಾನ್ ದರ್ಗಾರ ಅಭಿಪ್ರಾಯಗಳನ್ನು ವಿಶದವಾಗಿ ಕೋಟ್ ಮಾಡಿರುವಿರಿ, ಧನ್ಯವಾದಗಳು. ದರ್ಗಾ ವಿಚಾರಗಳು ನಾಡಿನಲ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅಂದ ಮೇಲೆ ಅವರನ್ನು ಕೋಟ್ ಮಾಡುವ ನಿಮ್ಮ ಪ್ರಯತ್ನ ವೃಥಾ ಶ್ರಮವಲ್ಲವೇ? ಅಲ್ಲದೆ ಇದು ವಿಗ್ರಹ ಪ್ರಜೆಯ ಕುರಿತ ಚರ್ಚೆಯಾಗಿದೆ, ಇಷ್ಟಲಿಂಗ, ಪ್ರಾಣಲಿಂಗ ಇತ್ಯಾದಿಗಳ ವಿವೇಚನೆಯಲ್ಲ, ಇರಲಿ.
     ಆದರೂ ರಂಜಾನ್ ದರ್ಗಾ ವಿಚಾರಗಳಲ್ಲಿ ಕಂಡುಬಂದ ಕೆಲವು ದೋಷಗಳನ್ನು ಇಲ್ಲಿ ಪರಿಶೀಲಿಸಿದ್ದೇನೆ:
     ನಿಮ್ಮ ಉಲ್ಲೇಖದಲ್ಲಿ ಇಷ್ಟಲಿಂಗವೆಂಬುದು ಆ ಅರಿವಿನ ಕುರುಹು ಮಾತ್ರ ಎಂದಿರುವಿರಿ.
     ಆದರೆ ಅರಿವಿಗೆ ಕುರುಹಿಲ್ಲ ಎಂದು ವಚನಕಾರರು ಪದೇ ಪದೇ ಹೇಳಿರುವರು. ಗೀತೆ ಮತ್ತು ಉಪನಿಷತ್ತುಗಳೂ ಅರಿವನ್ನು ಅವ್ಯಕ್ತ, ಅಚಿಂತ್ಯ, ಅವಿಕಾರ್ಯ ಇತ್ಯಾದಿ ಮಾತುಗಳಲ್ಲಿ ವರ್ಣಿಸುವವು. ಇದು ನಿಮಗೆ ಗೊತ್ತೇ ಇರುತ್ತದೆ.
     ‘ಎಲ್ಲರೂ ಸಮಾನರು. ಆದ್ದರಿಂದ ಎಲ್ಲ ಜಾತಿ, ಜನಾಂಗ ಮತ್ತು ಧರ್ಮದವರು ಸೇರಿ ಒಂದಾಗಿ ಬದುಕಬೇಕು. ಇಂಥ ಪ್ರಜ್ಞೆಯನ್ನು ಮೂಡಿಸುವುದೇ ಇಷ್ಟಲಿಂಗ ಪೂಜೆಯ ಉದ್ದೇಶವಾಗಿದೆ. ಒಂದು ವೇಳೆ ಇಷ್ಟಲಿಂಗ ಪೂಜಕರು ಈ ರೀತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮಾನವ ಏಕತೆ ಸಾಧಿಸಲಿಕ್ಕಾಗದು. ಆಗ ಇಷ್ಟಲಿಂಗ ಪೂಜೆಯ ಉದ್ದೇಶ ಈಡೇರದು.”
     ಎಂಬ ಮಾತುಗಳನ್ನು ಉಲ್ಲೇಖಿಸಿರುವಿರಿ. ಇಂಥದೇ ಮಾತನ್ನು ಕ್ರಿಶ್ಚಿಯನ್ನರೂ ಹಾಗೆಯೇ ಅನ್ಯಧರ್ಮಿಯರೂ ಹೇಳುವರು. ಮೇಲಿನ ಉಲ್ಲೇಖದಲ್ಲಿ ಇಷ್ಟಲಿಂಗ ಎಂಬ ಪದಕ್ಕೆ ಬದಲಿಗೆ ಶಿಲುಬೆ ಎಂಬ ಪದ ಹಾಕಿದರೆ ಕ್ರಿಶ್ಚಿಯನ್ ನಂಬಿಕೆಗೂ ಲಿಂಗಾಯಿತರ ನಂಬಿಕೆಗೂ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ ಈ ನಂಬಿಕೆ ವಾಸ್ತವ ಜಗತ್ತಿನಲ್ಲಿ ಕಾರ್ಯಗತಗೊಂಡಿದೆಯೇ ಎಂಬ ಪ್ರಶ್ನೆಯ ವಿವೇಚನೆ ನಿಮಗೇ ಬಿಟ್ಟಿದ್ದು. ಮೇಲಿನ ಉಲ್ಲೇಖದ ಆಶಯಕ್ಕೆ ಅನುಗುಣವಾಗಿ ಇಷ್ಟಲಿಂಗದ/ಶಿಲುಬೆಯ ಪೂಜೆ ಮತ್ತು ಸಾಧನೆ ನೆರವೇರುತ್ತಿಲ್ಲ ಎಂಬುದೇ ಇಂದಿನ ವಾಸ್ತವವಾಗಿದೆ.
     “ಶೋಷಣೆಯ ಮೂಲವಾದ ಕರ್ಮಸಿದ್ಧಾಂತವನ್ನು ಬಸವಣ್ಣನವರು ಕಾಯಕ ಸಿದ್ಧಾಂತದ ಮೂಲಕ ವಿರೋಧಿಸಿದರು
     ಎಂದಿರುವಿರಿ ಆದರೆ ಬಸವಣ್ಣನನ್ನೂ ಒಳಗೊಂಡಂತೆ ನಮ್ಮ ವಚನಗಳಲ್ಲಿ ಕರ್ಮಸಿದ್ಧಾಂತದ ಪ್ರತಿಪಾದನೆಯನ್ನು ಧಾರಾಳವಾಗಿ ಕಾಣಬಹುದು (ಉದಾ. ಕಳ್ಳಗಂಜಿ ಕಾಡ ಹೊಕ್ಕರೆ ಹುಲಿ ತಿಂಬುದ ಮಾಬುದೇ? ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿಂಬುದ ಮಾಬುದೇ? ಕಾಲಕಂಜಿ ಭಕ್ತನಾದೊಡೆ ಕರ್ಮ ತಿಂಬುದ ಮಾಬುದೇ?)
     ಅರಿವಿಗೆ ಕುರುಹುಂಟೇ? ಎಂದು ಪದೇ ಪದೇ ಕೇಳುವ ಅಲ್ಲಮಪ್ರಭು ಅಜ್ಞಾನವನ್ನು ನೆರಳಿಗೆ ಹೋಲಿಸುವನು. ನೆರಳ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ ಎನ್ನುತ್ತ ಅಜ್ಞಾನದ ವಿರುದ್ಧ ಸಮರ ಸಾರುವವರನ್ನು ವಿಡಂಬಿಸುವನು. ಹೀಗಿರುವಾಗ ನಿಮ್ಮ ಅರಿವಿನ ಸಂಕೇತವಾದ ಇಷ್ಟಲಿಂಗವು ಅಜ್ಞಾನದ ಸಂಕೇತವಾದ ಕರ್ಮಸಿದ್ಧಾಂತದಂಥ ಅನಿಷ್ಟಗಳನ್ನು ಹೊಡೆದೋಡಿಸುವಂಥದ್ದು ಎಂಬ ವೀರಾವೇಶದ ಮಾತುಗಳು ವಚನಕಾರರ ಸಂಯಮದ ನಿಲುವಿಗೇ ವ್ಯತಿರಿಕ್ತವಾದುದಾಗಿದೆ.
     ಸುಲಿಗೆಯ ವಿಷವರ್ತುಲಗಳಿಂದ ಹೊರ ಬರುವ ಮಾರ್ಗ ಕಂಡುಕೊಳ್ಳುವನು. ಕರ್ಮಸಿದ್ಧಾಂತದಿಂದ ಜಾತಿಗಳು, ಅಸ್ಪೃಶ್ಯತೆ, ಮೇಲುಕೀಳು ಮತ್ತು ಶೋಷಣೆ ಜನ್ಮತಾಳಿದ್ದನ್ನು ಆತ ಬಹುಬೇಗ ಅರ್ಥಮಾಡಿಕೊಳ್ಳುವನು
     ಎಂದಿರುವಿರಿ. ಈ ಮಾತುಗಳು ಮೇಲ್ನೋಟಕ್ಕೆ ನ್ಯಾಯೋಚಿತವೆನಿಸಿದರೂ ನಮ್ಮ ವಚನಕಾರರ ಸಂದರ್ಭದಲ್ಲಿ ಅಪ್ರಸ್ತುತವೆನಿಸುತ್ತದೆ. ಸಾಮಾಜಿಕವಾದ ಸುಲಿಗೆ, ಶೋಷಣೆಗಳನ್ನು ವಿವರಿಸುವಂತಹ ಒಂದೆರಡು ವಚನಗಳನ್ನಾದರೂ ದಯಮಾಡಿ ಉಲ್ಲೇಖಿಸುವಿರಾ?
     ಈ ಪ್ರಗತಿಪರರೆನಿಸಿಕೊಂಡ ಚಿಂತಕರು ಕಾಯಕತತ್ವವನ್ನು ಅಷ್ಟೆಲ್ಲ ದೊಡ್ಡದಾಗಿ ವರ್ಣಿಸುತ್ತಾರೆ. ಆದರೆ ಬಸವಣ್ಣನ ಒಟ್ಟು ವಚನದಲ್ಲಿ ಕಾಯಕ ಎಂಬ ಪದ ಬರೀ ಮೂರೇ ಮೂರು ಸಲ ಪ್ರಸ್ತಾಪವಾಗಿದೆ ಎಂದು ಓ.ಎಲ್. ನಾಗಭೂಷಣಸ್ವಾಮಿಯವರು ಒಮ್ಮೆ ನನ್ನ ಬಳಿ ಹೇಳಿದ್ದರು. ಈಗ ನೀವೇ ಹೇಳಿ. ನಮ್ಮ ಕೆಲವು ಹಿತಾಸಕ್ತಿಗಳಿಗಾಗಿ ವಚನಗಳನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವುದರಿಂದ ವಚನಕಾರರು ಹೊಸತಲೆಮಾರಿಗೆ ಇನ್ನೂ ಅಪರಿಚಿತರಾಗಿಬಿಡುವುದಿಲ್ಲವೇ?
     ಅಂತಹ ದುರ್ಬಳಕೆಗೆ ಇನ್ನೂ ಕೆಲವು ನಿದರ್ಶನಗಳನ್ನು ನೀಡುತ್ತೇನೆ:
     ಇಷ್ಟಲಿಂಗ ಪೂಜೆಯು, ದುರ್ಬಲ ಮನಸ್ಸಿನವರಲ್ಲಿ ಶಕ್ತಿ ತುಂಬುವುದು.. ಇಷ್ಟಲಿಂಗ ಪೂಜಕನು ಹೀಗೆ ಮಾನಸಿಕ ಸ್ಥೈರ್ಯವನ್ನು ಹೊಂದುವವನು
     ಇಂತಹ ಮಾತುಗಳು ಅನುಭಾವವನ್ನು ಸೈಕೋಥೆರಪಿ ಮಟ್ಟಕ್ಕೆ ಇಳಿಸುತ್ತವೆ. ಸೈಕೋಥೆರಪಿ ರೋಗಗ್ರಸ್ತರಿಗೆ ಪ್ರಯೋಜನಕಾರಿಯಾದರೆ ಅನುಭಾವ ಆರೋಗ್ಯಕರ ಮನಸ್ಸುಗಳಿಗೆ ಸಂಬಂಧಿಸಿದ ಒಂದು ಕಾಳಜಿಯಾಗಿದೆ.
     ಇಷ್ಟಲಿಂಗವನ್ನು ಕೊಡುವುದರ ಮೂಲಕ ಬಸವಣ್ಣನವರು ಶೋಷಣೆಯ ಕೇಂದ್ರವಾಗಿರುವ ದೇವಾಲಯಗಳಿಗೆ ಜನ ಹೋಗದಂತೆ ಮಾಡಿದರು. ದೇವರು ಮತ್ತು ಭಕ್ತರ ಮಧ್ಯೆ ಮಧ್ಯವರ್ತಿಗಳು ಇಲ್ಲದಂತೆ ಮಾಡಿದರು. ಆಗ ಜನ ಆರ್ಥಿಕ ಮತ್ತು ಮಾನಸಿಕ ಶೋಷಣೆಯಿಂದ ಮುಕ್ತರಾದರು
     ಬಸವಣ್ಣ ಅದನ್ನೆಲ್ಲ ಮಾಡಿದನೋ ಇಲ್ಲವೋ ಗೊತ್ತಿಲ್ಲ ಆದರೆ ಅವನ ಕಾಲದ ಜನ ಆರ್ಥಿಕ ಮತ್ತು ಮಾನಸಿಕ ಶೋಷಣೆಯಿಂದ ಮುಕ್ತರಾಗಲಿಲ್ಲ ಎಂಬುದಂತೂ ನಿರ್ವಿವಾದ. ಬಸವಣ್ಣನ ಒಟ್ಟು ಚಳವಳಿ ಒಂದು ವಿಫಲ ಹೋರಾಟವಾಗಿತ್ತು ಎಂದು ಡಾ. ಚಿದಾನಂದಮೂರ್ತಿಯಂತಹವರೂ ಅಭಿಪ್ರಾಯ ಪಟ್ಟಿರುವರು. ಕೊನೆಗೆ ಬಸವಣ್ಣ ಕೂಡಲಸಂಗಮಕ್ಕೆ ಹೋಗಿ ಸ್ಥಾವರವಾಗಿ ಕುಳಿತುಬಿಟ್ಟ ಎಂದು ೧೩ನೇ ಶತಮಾನದ ತುರುಗಾಹಿ ರಾಮಣ್ಣ ಎಂಬ ವಚನಕಾರ ತನ್ನ ವಚನವೊಂದರಲ್ಲಿ ತಿಳಿಸಿದ್ದಾನೆ.
     ಲಿಂಗಾಯತ ಧರ್ಮ ನಿರ್ಜಾತಿ ಧರ್ಮವಾಗಿರುವುದರಿಂದ ಜಾತಿ ಉಪಜಾತಿ ಭ್ರಮೆಯಿಂದ ಹೊರಬರುವುದು ಅವಶ್ಯವಾಗಿದೆ
     ಲಿಂಗಾಯತ ಧರ್ಮದಲ್ಲಿ ಅದೆಷ್ಟು ಜಾತಿ ಉಪಜಾತಿ ವರ್ಗಗಳಿವೆ ಎಂಬುದು ಇಂದು ಎಲ್ಲರಿಗೂ ಬಹಿರಂಗವಾಗಿ ತಿಳಿದಿರುವ ವಿಚಾರವಾಗಿದೆ.
     ಇಲ್ಲದಿದ್ದರೆ ವೈದಿಕದ ಎಲ್ಲ ಅನಿಷ್ಟಗಳ ಒಟ್ಟು ರೂಪವಾದ ಬ್ರಾಹ್ಮಣಿಕೆಗೆ ಬಲಿಯಾಗುತ್ತಲೇ ಇರಬೇಕಾಗುತ್ತದೆ”
     ಇಂದು ಲಿಂಗವಂತರಲ್ಲೂ ಬ್ರಾಹ್ಮಣಿಕೆ ಹುಟ್ಟಿಕೊಂಡಿದೆ. ಆ ಬ್ರಾಹ್ಮಣರನ್ನು ಆರಾಧ್ಯರು, ಜಂಗಮರು ಇತ್ಯಾದಿಯಾಗಿ ಕರೆಯುವರು. ಮೊದಲು ಅಲ್ಲಿನ ಹೊಲಸನ್ನು ಶುಚಿಗೊಳಿಸಿ ಬಳಿಕ ಅನ್ಯಜಾತಿಗಳನ್ನು ಶುಚಿಗೊಳಿಸಲಾರಂಭಿಸುವುದು ಯುಕ್ತವಾಗಿದೆ.
     ಲೋಕವಿಮರ್ಶೆಗಿಂತ ಆತ್ಮವಿಮರ್ಶೆ ಬಹಳ ಮುಖ್ಯ ಎಂಬುದು ನಮ್ಮ ಶರಣರ ನೀತಿಯಾಗಿದೆ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ..ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ.. ಎಂದು ಬಸವಣ್ಣನೂ ನುಡಿದಿರುವನಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ ಶರಣರ ಮೌಲ್ಯಗಳನ್ನು ನಂಬುವವರು ಯಾರನ್ನೂ ಅನಿಷ್ಠ, ದುಷ್ಟ, ನೀಚ, ಕಪಟಿ ಎಂದೆಲ್ಲ ಭರ್ತ್ಸನೆ ಮಾಡುವುದಿಲ್ಲ, ನಮ್ಮ ವಚನಕಾರರು ಲೋಕದ ಜನಗಳಲ್ಲಿ ಅಂತಹ ಸಣ್ಣತನವನ್ನು ಕಂಡರೆ ನಕ್ಕು ವಿಡಂಬಿಸುವರು ಎಂಬುದನ್ನು ದರ್ಗಾ ಸರ್ ಅವರು ಮರೆತಂತಿದೆ. ದಯಮಾಡಿ ಒಮ್ಮೆ ಅವರಿಗೆ ಇದನ್ನು ನೆನಪಿಸಿ.

     ಉತ್ತರ
     • shripad
      ಸೆಪ್ಟೆಂ 10 2014

      Class comment Dear Vasudeva.

      ಉತ್ತರ
     • Nagshetty Shetkar
      ಸೆಪ್ಟೆಂ 12 2014

      ವಾಸುದೇವ ಅವರೇ, ನಿಮ್ಮ ಪ್ರತಿಕ್ರಿಯೆಯು ನಿಮ್ಮ ಅಜ್ಞಾನ ಹಾಗೂ ಭಂಡತನದ ದ್ಯೋತಕವೇ ಆಗಿದೆ. ನೀವು ಏನು ಹೇಳುತ್ತಿದ್ದೀರಿ ಎಂಬುದರ ಅರಿವು ನಿಮಗಿಲ್ಲ. ಏಕೆಂದರೆ ಅರಿವಿನ ಕುರುಹು ನಿಮಗಿಲ್ಲ! ಸುಮ್ಮನೆ ವಚನಕಾರರ ತತ್ವಗಳನ್ನು ಬೇಕಾಬಿಟ್ಟಿ ತಿರುಚಿ ವಾದ ಮಾಡುವುದನ್ನು ನಿಲ್ಲಿಸಿ. ದರ್ಗಾ ಸರ್ ಅವರ ಬರಹವನ್ನು ಅರ್ಥ ಮಾಡಿಕೊಳ್ಳಲು ನೀವು ಯೋಗ್ಯರಲ್ಲ. ದರ್ಗಾ ಸರ್ ಅವರಿಗೇ ವಚನಗಳ ಪಾಠ ಮಾಡುವ ಹುಂಬತನ ತೋರಿಸಬೇಡಿ.

      ಉತ್ತರ
      • vasudeva
       ಸೆಪ್ಟೆಂ 12 2014

       ಶ್ರೀ ನಾಗಶೆಟ್ಟಿ ಷೆಟ್ಕರ್ ಅವರೆ,
       ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಅಲ್ಲಮ ಕೂಡ ನಿಮ್ಮಂತೆಯೇ ನುಡಿದಿರುವನು, ಬ್ರಹ್ಮನನ್ನು ನುಡಿಗಳಲ್ಲಿ ವಿವರಿಸಲು ಹೋಗುವುದೇ ಅಜ್ಞಾನ, ಸೂತಕ ಎಂದಿರುವನು. ಆದರೆ ಮೇಲಿನ ಪ್ರತಿಕ್ರಿಯೆಯಲ್ಲಿ ಅಲ್ಲಮನ ಎರಡು ವಚನಗಳನ್ನು ಮತ್ತು ಬಸವಣ್ಣನ ಎಂಬ ಒಂದು ವಚನವನ್ನು ಕೇವಲ ಉಲ್ಲೇಖಿಸಿರುವೆನೇ ವಿನಃ ಆ ವಚನಗಳನ್ನು ನಾನು ವ್ಯಾಖ್ಯಾನಿಸಲು ಹೋಗಿಲ್ಲ. ಅತ್ಯಂತ ಸರಳವಾದ ಆ ಸಾಲುಗಳಿಗೆ ವ್ಯಾಖ್ಯಾನದ ಅಗತ್ಯವೂ ಇಲ್ಲ. ಅಂದ ಮೇಲೆ ನಿಮಗೆ ಎಲ್ಲಿ ’ಬೇಕಾಬಿಟ್ಟಿ ತಿರುಚಿ ವಾದ ಮಾಡಿರುವುದು’ ಕಾಣಿಸುತ್ತಿದೆಯೋ ನನಗರ್ಥವಾಗಲಿಲ್ಲ. ಸಮಾಜದ ಶೋಷಣೆ, ಸುಲಿಗೆಗಳನ್ನು ವಿವರಿಸುವ ಒಂದೆರಡು ವಚನಗಳನ್ನಾದರೂ ಉಲ್ಲೇಖಿಸಿ ಎಂದು ಕೇಳಿದ್ದೆ, ಅದನ್ನು ಉಲ್ಲೇಖಿಸಲಿಲ್ಲ, ಬಿಡಿ. ಕೊನೆಯ ಪಕ್ಷ ನನ್ನ ಪ್ರತಿಕ್ರಿಯೆಯಿಂದ ವಚನಗಳಿಗೆ ಹೇಗೆ ಅಪಚಾರವಾಗುತ್ತಿದೆ ಎಂಬುದನ್ನಾದರೂ ಸ್ಪಷ್ಟಪಡಿಸಿ.. ದರ್ಗಾ ಸರ್ ಅವರ ಬರಹವನ್ನು ಅರ್ಥ ಮಾಡಿಕೊಳ್ಳಲು ಯೋಗ್ಯರಲ್ಲ ಎಂದು ತೀರ್ಮಾನಿಸಿರುವಿರಿ. ಲೋಕದ ಜನರ ನಡುವೆ ’ಯೋಗ್ಯ-ಅಯೋಗ್ಯ’, ’ಅಧಿಕಾರಿ-ಅನಧಿಕಾರಿ’ ಎಂಬ ಭೇದವನ್ನು ಎಣಿಸುವ ದ್ವೈತ ದೃಷ್ಟಿ (ಮಧ್ವರ ದ್ವೈತ ಸಿದ್ಧಾಂತ ಎಂಬ ಅರ್ಥದಲ್ಲಲ್ಲ) ಸಮಾನತೆಯನ್ನು ಪ್ರತಿಪಾದಿಸುವ ನಿಮಗೂ ಸಿದ್ಧಿಸಿರುವುದೇ? ನಿಜಕ್ಕೂ ಆಶ್ಚರ್ಯ!!

       ಉತ್ತರ
       • vasudeva
        ಸೆಪ್ಟೆಂ 12 2014

        ಶ್ರೀ ನಾಗಶೆಟ್ಟಿ ಷೆಟ್ಕರ್ ಅವರೆ,
        ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಅಲ್ಲಮ ಕೂಡ ನಿಮ್ಮಂತೆಯೇ ನುಡಿದಿರುವನು, ಬ್ರಹ್ಮನನ್ನು ನುಡಿಗಳಲ್ಲಿ ವಿವರಿಸಲು ಹೋಗುವುದೇ ಅಜ್ಞಾನ, ಸೂತಕ ಎಂದಿರುವನು. ಆದರೆ ಮೇಲಿನ ಪ್ರತಿಕ್ರಿಯೆಯಲ್ಲಿ ಅಲ್ಲಮನ ಎರಡು ವಚನಗಳನ್ನು ಮತ್ತು ಬಸವಣ್ಣನ ಎಂಬ ಒಂದು ವಚನವನ್ನು ಕೇವಲ ಉಲ್ಲೇಖಿಸಿರುವೆನೇ ವಿನಃ ಆ ವಚನಗಳನ್ನು ನಾನು ವ್ಯಾಖ್ಯಾನಿಸಲು ಹೋಗಿಲ್ಲ. ಅತ್ಯಂತ ಸರಳವಾದ ಆ ಸಾಲುಗಳಿಗೆ ವ್ಯಾಖ್ಯಾನದ ಅಗತ್ಯವೂ ಇಲ್ಲ. ಅಂದ ಮೇಲೆ ನಿಮಗೆ ಎಲ್ಲಿ ’ಬೇಕಾಬಿಟ್ಟಿ ತಿರುಚಿ ವಾದ ಮಾಡಿರುವುದು’ ಕಾಣಿಸುತ್ತಿದೆಯೋ ನನಗರ್ಥವಾಗಲಿಲ್ಲ. ಸಮಾಜದ ಶೋಷಣೆ, ಸುಲಿಗೆಗಳನ್ನು ವಿವರಿಸುವ ಒಂದೆರಡು ವಚನಗಳನ್ನಾದರೂ ಉಲ್ಲೇಖಿಸಿ ಎಂದು ಕೇಳಿದ್ದೆ, ಅದನ್ನು ಉಲ್ಲೇಖಿಸಲಿಲ್ಲ, ಬಿಡಿ. ಕೊನೆಯ ಪಕ್ಷ ನನ್ನ ಪ್ರತಿಕ್ರಿಯೆಯಿಂದ ವಚನಗಳಿಗೆ ಹೇಗೆ ಅಪಚಾರವಾಗುತ್ತಿದೆ ಎಂಬುದನ್ನಾದರೂ ಸ್ಪಷ್ಟಪಡಿಸಿ.. ದರ್ಗಾ ಸರ್ ಅವರ ಬರಹವನ್ನು ಅರ್ಥ ಮಾಡಿಕೊಳ್ಳಲು ಯೋಗ್ಯರಲ್ಲ ಎಂದು ತೀರ್ಮಾನಿಸಿರುವಿರಿ. ಲೋಕದ ಜನರ ನಡುವೆ ’ಯೋಗ್ಯ-ಅಯೋಗ್ಯ’, ’ಅಧಿಕಾರಿ-ಅನಧಿಕಾರಿ’ ಎಂಬ ಭೇದವನ್ನು ಎಣಿಸುವ ದ್ವೈತ ದೃಷ್ಟಿ – ಮಧ್ವರ ದ್ವೈತ ಸಿದ್ಧಾಂತ ಎಂಬ ಅರ್ಥದಲ್ಲಲ್ಲ – ಸಮಾನತೆಯನ್ನು ಪ್ರತಿಪಾದಿಸುವ ನಿಮಗೂ ಸಿದ್ಧಿಸಿರುವುದೇ? ನಿಜಕ್ಕೂ ಆಶ್ಚರ್ಯ!!

        ಉತ್ತರ
        • ವಿಜಯ್ ಪೈ
         ಸೆಪ್ಟೆಂ 12 2014

         ಈ ಶೆಟ್ಕರ್ ಸಾಹೇಬರ ನೆಂಟರ ಬ್ಲಾಗಿನಲ್ಲಿಯೇ ..ಬಸವಣ್ಣನನ್ನು ಆಸ್ತಿ, ಹೊಟ್ಟೆಪಾಡು ಮಾಡಿಕೊಂಡವರ ಬಗ್ಗೆ ಹೀಗೆ ಬರೆದಿದ್ದಾರೆ..:)
         [ಬಸವನ ಹೆಸರು ಬಳಸಿಕೊಂಡು ಪ್ರತಿಷ್ಟೆ ಮೆರೆಯುವವರಿಗಿಂತಾ ಇವರು ಭಿನ್ನವಾಗಿ ಕಾಣುವದಿಲ್ಲ. ನಡೆ-ನುಡಿಯ ನಡುವೆ ಅಪಾರ ಅಂತರವಿದ್ದರೂ ತತ್ವ, ಸಿದ್ಧಾಂತ, ಬದ್ಧತೆ ಎನ್ನುವ ಬೂಸಾತನ ಮಾತ್ರ ಇವರು ಬಿಡುವದಿಲ್ಲ. ಇವರು ನಿಜವಾಗಿಯೂ ಲಂಕೇಶರಂಥವರ ಪಾಲಿಗೆ ಕಳಂಕಿತರು.]

         ಉತ್ತರ
       • Nagshetty Shetkar
        ಸೆಪ್ಟೆಂ 12 2014

        “ಸಮಾಜದ ಶೋಷಣೆ, ಸುಲಿಗೆಗಳನ್ನು ವಿವರಿಸುವ ಒಂದೆರಡು ವಚನಗಳನ್ನಾದರೂ ಉಲ್ಲೇಖಿಸಿ ಎಂದು ಕೇಳಿದ್ದೆ’

        ವಿಪ್ರರ ಬಗ್ಗೆ ಬರೆದಿರುವ ವಚನಗಳನ್ನು ನೋಡಿ.

        ಅಂದ ಹಾಗೆ ನೀವು ವಾಸುದೇವ ಅವರ ಹೆಸರಿನಲ್ಲೇಕೆ ಕಮೆಂಟು ಮಾಡುತ್ತಿದ್ದೀರಿ ಮಿಸ್ ಸಹನಾ? 😉

        ಉತ್ತರ
     • valavi
      ಸೆಪ್ಟೆಂ 12 2014

      ವಾಸುದೇವ ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸರಿಯಾಗಿ ವಿವರಿಸಿದ್ದೀರಿ. ನಿಮಗೆ ಉತ್ತರಿಸಲಾಗದೇ ವೈಯುಕ್ತಿಕ ನಿಂದನೆಗಳಲ್ಲಿ ತೊಡಗುತ್ತಾರೆ ನಾಗಶೆಟ್ಟರು. ಅದು ಅವರ ಹತಾಶೆಯಾಗಿದೆ. ಪ್ರತಿಯೊಬ್ಬರಿಗೂ ಈ ಶೆಟ್ಟರು ನಿವು ಸಹನಾನಾ ನಿವು ಸಹನಾನಾ ಎಂದು ಕೇಳುವದು ನೋಡಿದರೆ ನನಗೆ ಅಕ್ಕಮಹಾದೇವಿ ಅಥವಾ ಯಾರೋ ಒಬ್ಬ ವಚನಕಾರರು ಮಲ್ಲಯ್ಯನ ಕಂಡಿರೇ ಅಯ್ಯ ನೀವು ಎಂದು ಕೇಳುವದು ನೆನಪಾಗುತ್ತದೆ. ಹೋಲಿಕೆ ಸರಿ ಇಲ್ಲವಾದರೂ ಆ ಸಹನಾ ಈ ಶೆಟ್ಟರ ಮೇಲೆ ಬೀರಿದ ಆಗಾಧ ಪ್ರಭಾವ ಕಂಡು ಮೂಕ ವಿಶ್ಮಿತಳಾಗಿದ್ದೇನೆ. ಹ್ಯಾಟ್ಸ್ ಅಪ್ ಸಹನಾ ನಿಮಗೆ.

      ಉತ್ತರ
      • Nagshetty Shetkar
       ಸೆಪ್ಟೆಂ 12 2014

       ವಾಳವಿ ಮೇಡಂ, ವರ್ತಮಾನದಲ್ಲಿ ಹಾಸ್ಯಾಸ್ಪದವಾಗಿ ವಾದ ಮಾಡಿದ ನೀವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ನಿಲುಮೆಗೆ ಬಂದು ನನ್ನನ್ನು ನಿಂದಿಸಿ ವಿಕೃತ ಆನಂದ ಪಡೆಯುತ್ತಿದ್ದೀರಿ. ನಿಮ್ಮ ಸಂಸ್ಕೃತಿ ಎಂಥದ್ದು ಅಂತ ಸಾಬೀತು ಪಡಿಸಿಸಿದ್ದೀರಿ. ನಾನು ವಾಸುದೇವ ಅವರಿಗೆ ಏನನ್ನಾದರೂ ಕೇಳುತ್ತೇನೆ, ಅದು ನನ್ನ ಹಾಗೂ ವಾಸುದೇವ ಅವರ ನಡುವಿನ ವಿಚಾರ. ನೀವೇಕೆ ತಲೆ ಹಾಕುತ್ತಿಡ್ದೀರಿ? ನಿಮ್ಮ ಕೆಲಸ ನೋಡಿಕೊಳ್ಳಿ ಅಂತಷ್ಟೇ ನಾನು ನಿಮಗೆ ಹೇಳುವುದು.

       ಉತ್ತರ
       • ಸೆಪ್ಟೆಂ 13 2014

        [[ನಿಮ್ಮ ಸಂಸ್ಕೃತಿ ಎಂಥದ್ದು ಅಂತ]]

        ಇದೇನು ಶೇಟ್ಕರ್ ಸಾಹೇಬರು ‘ಸಂಸ್ಕೃತಿ’ ಎಂಬ ಸಂಸ್ಕೃತದ, ವೈದಿಕರ, ಬ್ರಾಹ್ಮಣರ ಪದವನ್ನು ಬಳಸುತ್ತಿದ್ದೀರಲ್ಲ!?
        ಶರಣ ಸಾಹಿತ್ಯದಲ್ಲಿ ಬೇರಾವ ಪರ್ಯಾಯ ಪದವೂ ಸಿಗಲಿಲ್ಲವೇ? 😉
        ಪ್ರಗತಿಪರ ಎಂದೆಲ್ಲಾ ಕುಣಿದಾಡಿ, ಸಂಸ್ಕೃತವನ್ನೇ ಕೊನೆಗಾಣಿಸಿ ಬಿಡುತ್ತೇವೆ ಎಂದೆಲ್ಲಾ ಹಾರಾಡುವ ನೀವು ಸಂಸ್ಕೃತ ಪದವಾದ ‘ಸಂಸ್ಕೃತಿ’ಯನ್ನು ಈ ರೀತಿಯೆಲ್ಲಾ ಉಪಯೋಗಿಸುವುದು ಶರಣರಿಗೆ, ಪ್ರಗತಿಪರರಿಗೆ, ಮಾರ್ಕ್ಸ್ ಪಂಥೀಯರಿಗೆ, ದರ್ಗಾ ಸಾಹೇಬರಿಗೆ, ಎಲ್ಲರಿಗೂ ಅಪಮಾನ!!

        ಉತ್ತರ
       • valavi
        ಸೆಪ್ಟೆಂ 13 2014

        ನಾಗಶೆಟ್ಟಿಯವರೆ ವೈಯುಕ್ತಿಕ ನಿಂದನೆಗಿಳಿಯುವದು ನಿಮ್ಮ ಜನ್ಮ ಜಾತಕದಲ್ಲೇ ಇದೆ. ನಿಮ್ಮ ವೈಯುಕ್ತಿಕ ನಿಂದನಾ ಕಮೆಂಟಿಗೆ ಉತ್ತರಿಸುವದು ಸಾಧ್ಯವಿಲ್ಲವೆಂದು ಆನಂದ್ ಪ್ರಸಾದ್ ವರ್ತಮಾನದಲ್ಲೇ ನಿಮ್ಮನ್ನು ಝ್ಹಾಡಿಸಿದ್ದಾರೆ. ಮೊದಲು ನಿಮ್ಮ ಸಂಸ್ಕೃತಿ ಬಗ್ಗೆ ಕನ್ನಡಿಯಲ್ಲಿ ನೋಡಿಕೊಳ್ಳಿ. ಇರಲಿ ಕೇವಲ ವಾಸುದೇವ ಅವರಿಗಷ್ಟೇ ಅಲ್ಲ ನೀವು ಈ ಪ್ರಶ್ನೆ ಕೇಳುತ್ತಿರುವದು. ಸುಮಾರು 4/ 5 ಜನಕ್ಕೆ [ನನಗೆ ನೆನಪಿದ್ದ ಮಟ್ಟಿಗೆ ]ಈ ಪ್ರಶ್ನೆ ಕೇಳಿದ್ದೀರಿ. [ನೀವು ಸಹನಾನಾ? ಎಂಬ ಪ್ರಶ್ನೆ.] ಅಷ್ಟೊಂದು ಪ್ರಭುದ್ದ ಮಟ್ಟದಲ್ಲಿ ಪ್ರಶ್ನೆ ಕೇಳುವ ಆ ಸಹನಾ ಎನ್ನುವವರು ಯಾಕೆ ಬೇರೆ ಹೆಸರಿನಿಂದ ಕೇಳುತ್ತಾರೆ? ಅವಧಿಯಲ್ಲಿ ದರ್ಗಾ ಅವರಿಗೇ ನೀರು ಕುಡಿಸಿದ ಅವರು ಇಲ್ಲಿಯೂ ನೇರವಾಗಿಯೇ ಕೇಳುತ್ತಿದ್ದರು. ಇರಲಿ ನಾನು ಏನಾದರೂ ಯಾರಿಗಾದರೂ ಪ್ರಶ್ನೆ ಕೇಳುತ್ತೇನೆ ನಿಮಗೇಕೆ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಉಪದೇಶಿಸುತ್ತಿದ್ದೀರಲ್ಲಾ? ಈ ಸಾರ್ವಜನಿಕ ಬ್ಲಾಗ್ ನಲ್ಲಿ ನೀವೇಕೆ ಕಮೆಂಟಿಸುತ್ತೀರಿ. ನಿಮ್ಮ ಬ್ಲಾಗ್ ಮಾಡಿಕೊಂಡು ಏನಾದರೂ ಮಾಡಿಕೊಳ್ಳಿ ನಾನೇನು ನಿಮ್ಮ ಉಸಾಬರಿಗೆ ಬರಲ್ಲ. ಸಾರ್ವಜನಿಕ ಬ್ಲಾಗಿಗೆ ಬಂದ ಮೇಲೆ ಎಲ್ಲಾದಕ್ಕೂ ಸಹನೆಯಿಂದ ಉತ್ತರಿಸುವ ಸಂಸ್ಕೃತಿ ಕಂಡುಕೊಳ್ಳಿ. ನನಗೂ ವೈಯುಕ್ತಿಕ ನಿಂದನೆಗೆ ಇಳಿಯಲು ಬರುತ್ತದೆ. ಆದರೆ ನನ್ನ ವೈದಿಕ ಧರ್ಮ ನಿಮ್ಮಂತಲ್ಲ ಅದು ನನಗೆ ಸಹನೆಯನ್ನು ಬೋಧಿಸಿದೆ. ನೀವು ನಿಂದನೆಗೆ ಇಳಿದರೆ ನಾನೂ ಇಳಿಯಬೇಕಾಗುತ್ತದೆ. ಯಾಕೆಂದರೆ ವೈದಿಕ ಧರ್ಮ ಇನ್ನೊಂದು ಕಪಾಳ ಕೊಡು ಎಂದು ಬೊಧಿಸಿಲ್ಲವಲ್ಲ?

        ಉತ್ತರ
        • Nagshetty Shetkar
         ಸೆಪ್ಟೆಂ 13 2014

         ಜಗಳಗಂಟಿ. ಬೇರೆ ಯಾರಾದರೂ ಪುಕ್ಕಟೆ ಸಿಕ್ಕರೆ ಅವರ ಜೊತೆ ಜಗಳವಾಡಿ. ನನ್ನ ಸಹನೆಯನ್ನು ಕೆಣಕುವ ಪ್ರಯತ್ನ ವ್ಯರ್ಥ ಬೇಡ.

         ಉತ್ತರ
      • Naani
       ಸೆಪ್ಟೆಂ 12 2014

       ಹ್ಹ ಹ್ಹ ಹ್ಹ…..!!!! ಅವಧಿಯಲ್ಲಿ ಈ ದರ್ಗಾಗೆ ಮತ್ತು ಇಲ್ಲಿ ಗುರುಶಿಷ್ಯರಿಬ್ಬರಿಗೂ ಸಹನಾರವರು ಯಾವಮಟ್ಟಿಗೆ ನೀರು ಕುಡಿಸಿದ್ದಾರೆಂದರೆ ಇವರಿಬ್ರೂ ಉತ್ತರಿಸಲಾಗದೆ ವಿಚಲಿತರಾಗುವವಂತಹ ಪ್ರಶ್ನೆಗಳನ್ನು ಯಾರೇ ಕೇಳಿದರೂ ಸಹನಾ ಎಂದು ಬೆದರಿ ಸಹನಾನ ಸಹನಾನ ಎಂದು ಬೆದರುತ್ತಾರೆ!!! ಹ್ಯಾಟ್ಸ್ ಅಪ್ ಸಹನಾ! 🙂

       ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments