ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 12, 2014

25

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

‍ನಿಲುಮೆ ಮೂಲಕ

-ಎಸ್.ಎನ್.ಭಾಸ್ಕರ್‍

ihk

 

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ, ತರ್ಕ, ಜ್ಞಾನ, ಚಿತ್ತ ಇವುಗಳ ಕಾರಣವಾಗಿ ಮಾತ್ರ ಮಾನವ ಇತರ ಪ್ರಾಣಿಗಳಿಗಿಂತ ಬಿನ್ನವಾಗಿದ್ದಾನೆಯೇ ಹೊರತು ಉಳಿದಂತೆ ಮಾನವ ಸಹಾ ಮೂಲತಃ ಪ್ರಾಣಿಯೇ ಎಂಬುದು ಎಲ್ಲರು ಒಪ್ಪಿರತಕ್ಕಂತಹ ಸಂಗತಿಯೇ ಆಗಿದೆ. ಈ ಮೂಲಭೂತ ಕ್ರಿಯೆಗಳನ್ನು ಮೀರಿ ನಿಲ್ಲುವುದು ಅಥವಾ ಇವುಗಳನ್ನು ಗೆದ್ದು ಜೀವಿಸಲು ಯತ್ನಿಸುವುದು ತಾನು ಪ್ರಾಣಿಯೇ ಅಲ್ಲ ಎಂದು ತೋರ್ಪಡಿಸುಚ ಯತ್ನವಾಗಿರುತ್ತದೆ. ಅಸಲಿಗೆ ಗೆಲುವಾದರೂ ಯಾರ ವಿರುದ್ದ ? ಸಕಲ ಜೀವಸಂಕುಲದ ವಿರುದ್ದವೇ ? ಈ ಪ್ರಕೃತಿಯ ವಿರುದ್ದವೇ ? ಜೀವಿ ಹಾಗೂ ಪ್ರಕೃತಿಯನ್ನು ಹೊತ್ತ ಭೂಮಂಡಳದ ವಿರುದ್ದವೇ ? ಭೂಮಿಯ ಅಸ್ತಿತ್ವದ ಆಧಾರವಾಗಿರುವ ಸೂರ್ಯವ ವಿರುದ್ದವೇ ? ಅದಕ್ಕೂ ಮೀರಿ ಇಡೀ ವಿಶ್ವದ ವಿರುದ್ದವೇ ? ಸುತ್ತಲೂ ಗೆರೆಯೊಂದನ್ನು ಗೀಚಿ ಮೀರಿ ನಡೆದರೆ ಶಿಕ್ಷಿಸಲು ಭ್ರಮೆಯೊಂದನ್ನು ಹುಟ್ಟಿಸಿ ಹತ್ತು ಹಲವು ನಿಷೇಧಗಳನ್ನು ತಾವೇ ಹೇರಿಕೊಂಡು, ತಿನ್ನಲೊಂದು ನಿಯಮ, ತೇಗಲೊಂದು ನಿಯಮಗಳನ್ನು ಹಾಕಿಕೊಂಡು ಬಾಳುವ ಬದುಕಿನ ಸಾರ್ಥಕ್ಯವಾದರೂ ಏನು ? ಡಾ.ಯು.ಆರ್‍. ಅನಂತ ಮೂರ್ತಿ ಯವರ ಸಂಸ್ಕಾರ ಕಾದಂಬರಿಯ ಒಟ್ಟು ಸಾರಾಂಶ ಸಹಾ ಇದೇ ಆಗಿದೆ. ಅರ್ಥವಿಲ್ಲದ ಆಚಾರಗಳನ್ನು, ತರ್ಕಹೀನ ಸಂಪ್ರದಾಯಗಳನ್ನು ಕಡೆಗಣಿಸಿ ಬದುಕಿನ ನೆಲೆಯನ್ನು ವಿಸ್ತರಿಸಿ ಅರಿಯುವ ಪ್ರಯತ್ನ ಈ ಕಾದಂಬರಿಯಲ್ಲಿ ಕಂಡು ಬರುತ್ತದೆ. ಹಲವು ವಿವಾದಗಳನ್ನೂ ಮೀರಿ ಉನ್ನತ ವೈಚಾರಿಕ ಚಿಂತನೆಯ ಹರಿವಿನೊಂದಿಗೆ ಡಾ. ಯು.ಆರ್‍. ಅನಂತ ಮೂರ್ತಿಯವರ ಬರಹಗಳು ಪ್ರಿಯವೆನಿಸುತ್ತದೆ.

ಕೇವಲ ಧಾರ್ಮಿಕ ಹಾದಿಯ ಮುಕ್ತಿಯ ಭ್ರಮೆಯಲ್ಲಿ, ಆಚಾರ-ಸಂಪ್ರದಾಯಗಳ ಸರಪಳಿಗಳ ಬಂಧನದಲ್ಲಿ ಮಾನವ ಎಂದಿಗೂ ಸಹಾ ಮುಕ್ತವಾಗಲು ಸಾಧ್ಯವೇ ಇಲ್ಲ. ಮುಕ್ತನಾಗದ ಹೊರತು ಉನ್ನತಿಯ ಹಾದಿಯು ಮರೀಚಿಕೆಯೇ ಆಗಿರುತ್ತದೆ. ಬೌಧ್ದಿಕ ಉನ್ನತಿಯಿಂದ ಮಾತ್ರ ಮನುಕುಲದ ವಿಕಾಸ ಸಾಧ್ಯವಾಗುತ್ತದೆ. ಆದರೆ ಇಂದು “ಮುಕ್ತಿ” ಯ ಹಾದಿಯನ್ನು ತೋರಿಸಲು ನಮ್ಮಲ್ಲೇ ಹತ್ತು ಹಲವು ಮಾರ್ಗದರ್ಶಕರಿದ್ದಾರೆ. ಒಬ್ಬೊಬ್ಬರದೂ ಒಂದೊಂದು ಹಾದಿ ನನ್ನ ಹಾದಿಯೇ ಸರಿ ಎಂಬುದು ಎಲ್ಲರ ಸಮರ್ಥನೆ. ಎಲ್ಲರೂ ಹೇಳುವ ಗಮ್ಯ ಒಂದೇ ಆಗಿದ್ದರೂ ಸಹಾ ಇದಕ್ಕಾಗಿ ಕ್ರಮಿಸುವ ಹಾದಿ ಮಾತ್ರ ಬೇರೆ ಬೇರೆ. ಎಷ್ಟೇ ವೈಜ್ಞಾನಿಕ ಅನ್ವೇಷಣೆಗಳ ನಂತರವೂ ಶನಿ ಕಾಟಕ್ಕೆ ಪರಿಹಾರ ಹೇಳುವವರು ಇಲ್ಲಿ ನೂರು ಮಂದಿ ಸಿಗುತ್ತಾರೆ. ಯಾವುದೆ ಜಾತಿ ಬೇದ ಇಲ್ಲದೇ ಶುದ್ದ ಭಕ್ತಿಗೆ ಒಲಿದ ದೇವರು ಶತನಾಮಾವಳಿ, ಅಷ್ಟೋತ್ತರ, ಮಂತ್ರಪುಷ್ಪಗಳನ್ನು ಬಿಟ್ಟು, ಧೂಪ, ದೀಪ ನೈವೇದ್ಯಗಳನ್ನು ಕಡೆಗಣಿಸಿ ತಾನೇ ವಿರುದ್ದ ದಿಕ್ಕಿಗೆ ಮುಖ ಮಾಡಿರುವ ಪುರಾಣದ ಕಥೆ ಎಲ್ಲರಿಗೂ ತಿಳಿದೇ ಇದೆ. ಇದರ ನಿದರ್ಷನವೇ ಆಗಿರುವ ಉಡುಪಿಯ ಕನಕನಕಿಂಡಿ ಇಂದಿಗೂ ಹಾಗೇ ಇದೆ. ಆದರೆ ಇದೇ ಉಡುಪಿಯಲ್ಲಿ ಮಡಿವಂತಿಕೆ ಇನ್ನೂ ಜೀವಂತವಾಗಿದೆ. ಬ್ರಾಹ್ಮಣರೊಡನೆ ಇತರರ ಭೋಜನ ಇಲ್ಲಿ ನಿಷಿದ್ದ. ಬ್ರಾಹ್ಮಣ ಕುಲದಲ್ಲಿಯೇ ಮಾದ್ವ, ಸ್ಪಾರ್ಥರ ನಡುವೆ ಮಡಿ ತಾರತಮ್ಯ. ಇದಕ್ಕೂ ಅಚ್ಚರಿ ಹಾಗೂ ಅಸಹ್ಯ ಹುಟ್ಟಿಸುವ ವಿಷಯವೆಂದರೆ ನಿರ್ಮಲ ಭಕ್ತಿಯ ಹರಿಕಾರ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಹೀಗಿರುವಾಗ ಪುರಾಣ ಕಥೆಗಳ ಅರ್ಥವಾದರೂ ಏನು. ಈ ಕಥೆಗಳು ಹರಿಕಥೆ ಹೇಳಲು ಮಾತ್ರ ಸೀಮಿತವೇ ? ಅಥವಾ ನೀತಿ ತಾತ್ಪರ್ಯಗಳನ್ನು ಸಾರುವ ಪೌರಾಣಿಕ ಕಥೆಗಳು ಕೇವಲ ಕಲ್ಪಿತವೇ ?

“ನೂರು ದೇವರನೆಲ್ಲಾ ನೂಕಾಚೆ ದೂರ” ಎಂದು ಹಾಗೂ “ಮನು ನಿನಗೆ ನೀನು.. ಮನು ನಿನಗೆ ನೀನು” ಎಂದು ಹೇಳಿರುವ ರಾಷ್ಟ್ರ ಕವಿ ಕುವೆಂಪುರವರೂ ಮಾನವಕುಲದಲ್ಲಿ ವೈಚಾರಿಕ ದೃಷ್ಟಿಯ ಅಗತ್ಯವನ್ನು ಒತ್ತಿ ಸಾರಿದ್ದಾರೆ. ನಿಗೂಢ ಸೃಷ್ಟಿಯೊಂದಿಗೆ ಅತ್ಯಂತ ಸರಳವಾದ, ಸುಂದರವಾದ, ರಸವತ್ತಾದ  ಜೀವನವನ್ನು ಅನುಭವಿಸ ಬೇಕಾಗಿರುವ ಮನುಕುಲಕ್ಕೆ ವೈರಾಗ್ಯವೆಂಬ ಹಾಗೂ ಮುಕ್ತಿಗೆ ವೈರಾಗ್ಯ ಅನಿವಾರ್ಯವೆಂಬ ಅರ್ಥಹೀನ ಭ್ರಮೆಯನ್ನು ಹುಟ್ಟಿಸಲಾಗುತ್ತಿದೆ. ಕೆಲವು ನೀತಿಗಳು ವೈರಾಗ್ಯದ ಹಾದಿಯನ್ನು ನೇರವಾಗಿಯೇ ಹೇಳಿದರೆ ಮತ್ತೆ ಕೆಲವು ಸುತ್ತು ಬಳಸಿ ಹೇಳುತ್ತಿವೆ. ಈ ದೇಹವೇ ನಿನ್ನದಲ್ಲ ಎಂಬುದೂ ಸಹಾ ಅರ್ಥ ಹೀನ ವೈರಾಗ್ಯದ ಪ್ರಥಮ ಹೆಜ್ಜೆಯೇ ಆಗಿದೆ. ಈ ರೀತಿ ಸಾರುವ ಪಂಥದ ಕಲ್ಪಿತ ವಿಚಾರಗಳಿಗೆ ಅವರದೇ ಆದ ತರ್ಕದ ಬುನಾದಿ ಸಹಾ ಹಾಕಲಾಗಿದೆ. ಇಂತಹ ಧಾರ್ಮಿಕ ನೀತಿಗಳು ಮಾನವ ಕುಲದ ಬೌದ್ದಿಕ ಉನ್ನತಿಗೆ ಅಡ್ಡಗಾಲು ಹಾಕುತ್ತಿವೆ ತನ್ಮೂಲಕ ಮಾನವನ ಮನಸ್ಸು ಸಂಕುಚಿತವಾಗುತ್ತಾ ಸಾಗಿದೆ. ಕುವೆಂಪು ರವರಾಗಲೀ ಅನಂತ ಮೂರ್ತಿಯವರಾಗಲೀ ಅಥವಾ ವೈಚಾರಿಕ ಚಿಂತನೆಯ ಹರಿವಿನ ಸಾಹಿತಿಗಳು, ಬುದ್ದಿಜೀವಿಗಳು ತಮ್ಮ ವೈಚಾರಿಕ ನಿಲುವನ್ನು ಪ್ರಕಟಿಸುವ ಮೂಲಕ ಮನುಕುಲದ ಬೌಧ್ದಿಕ ಉನ್ನತಿಗೆ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ..

ಬೌದ್ದಿಕ ಉನ್ನತಿಗೆ ಅಡ್ಡಿಯಾಗಿರುವ ಇಂತಹ ಧಾರ್ಮಿಕ ನೀತಿ ನಿಯಮಗಳು ಋಣಾತ್ಮಕವಾದ ಶಕ್ತಿಯನ್ನು ತುಂಬತೊಡಗಿದರೆ, ಮನುಕುಲದ ನಾಷವನ್ನೇ ಸಾರುವ ಉಗ್ರ ಪಂಥವಾದಗಳು ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಾ ಸಮಾಜಕ್ಕೆ ಮಾರಕವಾಗಿದೆ. ಇಂದು ಧಾರ್ಮಿಕ ಉಗ್ರವಾದ ಜಗತ್ತಿಗೆ ಮಾರಕವಾಗಿರುವ ಸಂಗತಿಯಾಗಿದೆ. ತಮ್ಮ ಧರ್ಮದ ನೀತಿಯನ್ನು ಇಲ್ಲಿ ಅನುಯಾಯಿಗಳ ಮೇಲೆ ಹೇರಲಾಗುತ್ತದೆ. ಇತರ ಧರ್ಮದವರನ್ನು ಕೊಂದರೂ ಇಲ್ಲಿ ಸ್ವರ್ಘ ಪ್ರಾಪ್ತಿಯಂತೆ. ಧರ್ಮ ವಿರೋಧಿಗಳ ಕೊಂದು ಅಥವಾ ಈ ಯತ್ನದಲ್ಲಿ ವೀರ ಮರಣ (!!??) ಹೊಂದಿದಲ್ಲಿ ಅಪ್ಸರೆಗಿಂತಲೂ ಸುಂದರ ಕನ್ಯೆಯರು ಸ್ವರ್ಘದಲ್ಲಿ ಜೊತೆಗೋಡುವರೆಂಬ ಹಿಂಸೆಗೆ ಪ್ರೇರೆಪಿಸುವ ಸಿದ್ದಾಂತ!! ಇಂತಹ ನೀತಿಯನ್ನು ಖಂಡಿಸುವುದೂ ಸಹಾ ಮನುಕುಲಕ್ಕೆ ಮಾಡುವ ಉಪಕಾರವೇ ಅಲ್ಲವೇ ? ಆದರೆ ಈಗ ಆಗುತ್ತಿರುವುದಾದರೂ ಏನು ? ಒಂದು ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸಿ, ಅಂಧ ಆಚರಣೆ ಸಂಪ್ರದಾಯಗಳನ್ನು ವಿರೋಧಿಸಿದರೆ ಬುದ್ದಿಜೀವಿಗಳು, ವೈಚಾರಿಕ ಸಾಹಿತ್ಯ ಎಂಬ ಹಣೆ ಪಟ್ಟಿ ದೊರೆತರೆ ಅದೇ ಮತ್ತೊಂದು ಧರ್ಮದ ಉಗ್ರ, ಹಿಂಸಾ ನೀತಿಯನ್ನು ವಿರೋಧಿಸುವ ಧೈರ್ಯವನ್ನು ತೋರುವವರಿಗೆ ದೊರೆಯುವ ಹಣೆ ಪಟ್ಟಿ ಬಲಪಂಥೀಯ ಲೇಖಕ ಅಥವಾ ಕೋಮುವಾದ ಪ್ರಚೋದನಾ ಸಾಹಿತ್ಯ ಎಂಬುದು ಎಷ್ಟರ ಮಟ್ಟಿಗೆ ಸರಿ ? ವೈಚಾರಿಕ ನಿಲುವಿಗೆ ಧರ್ಮ ಅಥವಾ ಜಾತಿಯ ಆಧಾರವಿಹುದೇ ? ನಿಜವಾಗಿಯೂ ಯೋಚಿಸತಕ್ಕ ವಿಚಾರವೇ ಅಲ್ಲವೇ ಇದು.

ಒಬ್ಬ ಲೇಖಕ, ಚಿಂತಕ ಅಥವಾ ಯಾವುದೇ ಸಾಮಾನ್ಯ ವ್ಯಕ್ತಿಯೇ ಆಗಲೀ ತನ್ನದೇ ಜಾತಿಯ ಅಥವಾ ತನ್ನದೇ ಧರ್ಮದ ನೀತಿ ನಿರೂಪಣೆಗಳನ್ನು ಖಂಡಿಸಿ ಅದರ ವಿಮುಖವಾಗಿ ನಡೆದಾದ ಸಹಜವಾಗಿಯೇ ಆತನ ಚಿಂತನೆಗಳು ಹೆಚ್ಚು ಪ್ರಚಲಿತವಾಗುತ್ತವೆ. ಆದರೆ ಯಾವುದೇ ಪ್ರಕಾರದ ವೈಚಾರಿಕ ಸಾಹಿತ್ಯ ಎಲ್ಲಾ ಧರ್ಮಗಳಿಗೂ ಅತೀತವಾಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನುಕುಲದ ಉನ್ನತಿಗೆ, ಮಾನವ ಪ್ರೀತಿಗೆ ಧರ್ಮನಿಷ್ಟೆಯ ಬಣ್ಣ ಬಳಿಯಬಾರದು. ಮೌಡ್ಯ, ಕಂದಾಚಾರಗಳಿರಬಹುದು, ಜಿಹಾದ್ ಉಗ್ರವಾದಗಳಿರಬಹುದು ಇಂತಹ ನೀತಿಗಳೆಲ್ಲವೂ ಸಮಾಜಕ್ಕೆ ಅಂಟಿರುವ ಕೊಳಕುಗಳಾಗಿವೆ. ಆರೋಗ್ಯಕರವಾದ, ಚಿಂತನೆಗೆ ಪ್ರರೇಪಿಸುವ ಸಾಹಿತ್ಯ ಬಂದಲ್ಲಿ  ಅದನ್ನು ಇನ್ನೊಂದು ದೃಷ್ಟಿಯಿಂದ ಎಂದಿಗೂ ನೋಡಬಾರದು. ಇಷ್ಟಕ್ಕೂ ಒಬ್ಬ ಲೇಖಕ ರಚಿಸುವ ಸಾಹಿತ್ಯವು ಅವರ ವ್ಯಕ್ತಿತ್ವ, ಅನುಭವಗಳು, ಯೋಚನಾ ಲಹರಿಗಳು, ನಿಲುವುಗಳು ಇವುಗಳ ಆಧಾರದ ಮೇಲೆ ಒಂದು ಕಥಾವಸ್ತುವಿನ ಸುತ್ತಾ ಹೆಣೆಯಲ್ಪಟ್ಟಿರುತ್ತವೆ. ನಮ್ಮದೇ ತರ್ಕವನ್ನು ಬುದ್ದಿಯನ್ನು ಅನುಭವದ ಸಾಣೆಗೆ ಹಿಡಿದು ತೂಗಿ ನೋಡಿ ಸ್ವೀಕರಿಸಲರ್ಹವಾದ ಅಂಶಗಳನ್ನು ಸ್ವೀಕರಿಸಿ ಉಳಿದುವನ್ನು ತ್ಯಜಿಸಲು ಯಾವ ಅಡ್ಡಿಯೂ ಇಲ್ಲವಲ್ಲ.

ಹಲವಾರು ವೈಚಾರಿಕ ಚಿಂತನೆಗಳು ತುಂಬಿದ ಅರ್ಥಪೂರ್ಣ ಸಾಹಿತ್ಯವನ್ನು ಕನ್ನಡಕ್ಕೆ ಕೊಟ್ಟಿರುವ ಡಾ. ಯು.ಆರ್‍.ಅನಂತಮೂರ್ತಿ ಯವರು ಈ ಜಗತ್ತನ್ನು ಅಗಲಿ ತೆರಳಿದ್ದಾರೆ. ಇವರ ಸಾಹಿತ್ಯದ ವೈಚಾರಿಕ ವಸ್ತುವಿನದ್ದೇ ಒಂದು ತೂಕವಾದರೆ ಕಥೆ ಕಾದಂಬರಿಗಳ ಶೈಲಿ, ಪಾತ್ರಗಳ ತೂಕ, ಅದ್ಭುತ ವರ್ಣನೆಗಳದ್ದೇ ಮತ್ತೊಂದು ತೂಕ. ಇವರ ಅಗಲಿಕೆ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ನಷ್ಟವೇ ಸರಿ. ದೇವಸ್ಥಾನದಲ್ಲಿ ಕೊಟ್ಟ ಪ್ರಸಾದದಂತೆ ಇವರು ತಮ್ಮ ಜೀವನವನ್ನು ಸ್ವೀಕರಿಸಿ ಆರೋಗ್ಯಕರ ವಿಮರ್ಷೆ, ಚಿಂತನೆಗಳನ್ನು ಪಸರಿಸಿ ವಿಧಿಯಲ್ಲಿ ಲೀನವಾಗಿದ್ದಾರೆ. ಆದರೆ ಅವರ ಸಾಹಿತ್ಯ ಮಾತ್ರ ಮನುಕುಲದ ಅಸ್ತಿತ್ವ ಈ ಸೃಷ್ಟಿಯಲ್ಲಿ ಇರುವವರೆಗೂ ನಿಸ್ಸಂದೇಹವಾಗಿ ಉಳಿಯುವುದು.

“ಹೀಗೊಂದು ಕನಸು”

ಕಂದಾಚಾರಗಳನ್ನು ಚಿತೆಗೆ ಹಾಕಿ,

ಹೊತ್ತುರಿಯಲಿ ಚಿತಾ ಭಸ್ಮ;

ಅನರ್ಥ ಆಚರಣೆಗಳಿಗೆ ಅಷ್ಟ ದಿಗ್ಭಂಧನ,

ಬೆಳಗಲಿ ಜ್ಞಾನದೀವಿಗೆ ಮನದ ತುಂಬ.

 

ಹಳಸು ಚಿಂತನೆಗಳನ್ನು ಹೊಸಕಿ ಹಾಕಿ,

ಹಬ್ಬಿ ಬರಲಿ ತುಂಬು ಪ್ರೀತಿ ನಿತ್ಯ ನಿರಂತರ;

ಮೇಲು-ಕೀಳೆಂಬ ಭಾವಕ್ಕೆ ಬಿಡಿ ರಾಮ ಬಾಣ,

ಮೂಳೆ-ಮಾಂಸದ ಮಾನವರು ನಾವು ಇದೆಂತಹ ಅಂತರ.

 

ಮಡಿ-ಮೈಲಿಗೆ ಮುಳ್ಳಾಗಿದೆ ಮನುಕುಲಕೆ,

ನಡೆಯಲಿ ಇನ್ನು ಅಂತ್ಯ ಸಂಸ್ಕಾರ;

ಮನ-ಮನಗಳಲ್ಲಿ ಮೊಳೆಯಲಿ ಪ್ರೀತಿ,

ಮಾನವೀಯತೆಗೆ ಹಾಕೋಣವಿನ್ನು ಜೈಕಾರ.

 

ಇಂದಿದ್ದು ನಾಳೆ ಹೋಗುವ ಬದುಕಾಗಲಿ ಸೊಗಸು,

ಮನದಲ್ಲಿ ಪ್ರೀತಿಯ ಧಾರೆಯ ನೀ ಹರಿಸು;

ಕಾಣದ ಕೈಗಳ ಹಿಡಿತದಿಂದ ಮುಕ್ತವಾಗಲಿ ಮನಸು,

ನನಸಾಗಲಿ ಮಾನವ ಪ್ರೀತಿ ಬರಿತ ಕನಸು,

 

ಮರಳಿ ಬಾರದ ಲೋಕಕ್ಕೆ ತೆರಳಿದ ಡಾ. ಯು.ಆರ್‍. ಅನಂತಮೂರ್ತಿ ಯವರಿಗೆ ಈ ಕವನ ಅರ್ಪಣೆ.

 

25 ಟಿಪ್ಪಣಿಗಳು Post a comment
 1. ಸೆಪ್ಟೆಂ 12 2014

  ಲೇಖನ ಚೆನ್ನಾಗಿ ಮೂಡಿಬಂದಿದೆ.

  ಉತ್ತರ
 2. ಸೆಪ್ಟೆಂ 12 2014

  ಮಾನ್ಯರೇ, ಈ ಜಾತಿ ಪದ್ದತಿ ಎಂಬ ಅನಿಷ್ಟಪದ್ದತಿ ಹೇಗೆ ಬಂತೋ ಅದನ್ನು ತೊಲಗಿಸುವುದು ಹೇಗೆ? ಇತ್ತಿತ್ತಲ್ಲಾಗಿ ಜಾತಿಗೊಂದು,ಉಪ ಜಾತಿಗೊಂದರಂತೆ ಮಠಗಳು ಹುಟ್ಟಿಕೊಳ್ಳುತ್ತಿವೆ. ಮನುಷ್ಯ ಮನುಷ್ಯನನ್ನು ದ್ವೇಶಿಸುವ ಗತಿ ಬಂದಿದೆ. ಉಡುಪಿಯಲ್ಲಿ ಕನಕದಾಸ ಮಹಾ ಭಕ್ತ. ಆವನ ಭಕ್ತಿಗೆ ಮೆಚ್ಚಿ ದೇವರು ಕಿಂಡಿಯ ಮೂಲಕ ಧರ್ಶನ ನೀಡಿದ. ಆದರೆ ಈಗಲೂ ಆ ಕನಕದಾಸ ದೇವರ ಗುಡಿಯಿಂದ ಹೊರಗೆ ನಿಂತಿದ್ದಾನೆ. ಅವನಿಗೆ ಗುಡಿಯೂ ಇಲ್ಲ. ಪೂಜೆಯೂ ಇಲ್ಲ. ಇದಕ್ಕೆ ಭಕ್ತರು ತಲೆಕೆಡಿಸಿಕೊಂಡಿಲ್ಲ. ಮೇಲು ಕೀಳು ಎಂಬ ಭಾವನೆ ಪ್ರಪಂಚ ಇರುವವರೆಗೂ ಹೋಗುವುದಿಲ್ಲವೆಂದು ಕಾಣುತ್ತದೆ. ಇದರಿಂದ ಮಾನವನ ಜೀವನ ಏಳಿಗೆಯಾಗುವುದಿಲ್ಲ ಹಾಗೂ ದೇಶದ ಅಭಿವೃದ್ದಿಗೂ ಮಾರಕ.

  ಉತ್ತರ
 3. Nagshetty Shetkar
  ಸೆಪ್ಟೆಂ 12 2014

  ಕತ್ತಿ ಹಿಡಿಯುವ ಕಾಲದಲ್ಲಿ ಕವಿತೆ ಬರೆಯುತ್ತಾ ಸಮಯ ಹಾಳುವುದು ತಿಳಿಗೇಡಿತನ. ಪೂರ್ಣ ಕ್ರಾಂತಿಗಿದು ಕಾಲ. ಬನ್ನಿ ಹೋರಾಡುವ.

  ಉತ್ತರ
 4. M A Sriranga
  ಸೆಪ್ಟೆಂ 12 2014

  ಎಸ್ ಎನ್ ಭಾಸ್ಕರ್ ಅವರಿಗೆ—- ಯು ಆರ್ ಅನಂತಮೂರ್ತಿ ಅವರು ತಾವು ಭಾವಿಸಿರುವಷ್ಟು “ಒಣ ವೈಚಾರಿಕತೆ”ಯನ್ನು ನಂಬಿದವರೂ ಅಲ್ಲ; ಅದರ ಪ್ರಚಾರಕರೂ ಅಲ್ಲ. ಅದರ ಬದಲಾಗಿ ಆ ರೀತಿ ಮಾತಾಡುತ್ತಿದ್ದವರ, ಬರೆಯುತ್ತಿದ್ದವರ ಬಗ್ಗೆ ಅವರಿಗೆ ಕನಿಕರವಿತ್ತು. ಏಕೆಂದರೆ ಅಂತಹವರು ಮನುಷ್ಯನ ಜೀವನದ ನಾನಾ ಮುಖಗಳ ಅರಿವಿಲ್ಲದರಂತೆ ಗಟ್ಟಿ ಗಂಟಲಲ್ಲಿ ಕಿರುಚಿತ್ತಿದ್ದಾರಲ್ಲ ಎಂದು. ‘ಸಂಸ್ಕಾರ’ ಕಾದಂಬರಿಯನ್ನು ತಾವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಪ್ರಾಣೇಶಾಚಾರ್ಯ ತನ್ನ ಕಾಲದ ಸಮಾಜದ ವಿರುದ್ಧ ದಂಗೆ ಎದ್ದ rebel ಅಲ್ಲ. ಆ ಸಮಾಜದಲ್ಲೇ ಇದ್ದು ಅದರ ಎಲ್ಲಾ ಮುಖಗಳನ್ನು, ಚೆಲುವನ್ನು,ಸುಖವನ್ನು ಆಸ್ವಾದಿಸಿದಾತ. ಕೊನೆಗೆ ತನ್ನ ಇಂದಿನ ಮತ್ತು ಹಿಂದಿನ ಜೀವನದ ರೀತಿಯನ್ನು ತೂಗಿ ನೋಡಿ ತಾನು ದಾರಿ ತಪ್ಪಿದವನೇ ಎಂದು ಮರುಗಿದವನು. ಅನಂತಮೂರ್ತಿಯವರ ಕಥೆಗಳು,ಕಾದಂಬರಿಗಳು ಹಾಗೂ ಸಂಸ್ಕೃತಿ ಚಿಂತನಾ ಬರಹಗಳು , ಅಂಕಣ ಬರಹಗಳು, ಅವರ ಆತ್ಮಕಥೆ ‘ಸುರಗಿ’ ನಮಗೆ ಆಪ್ತವಾಗುವುದು ಅವರ ಜೀವನ ಪ್ರೀತಿಯಿಂದಲೇ ಹೊರತು ‘ಒಣ ವೈಚಾರಿಕತೆ’ಯಿಂದಲ್ಲ. ಕುವೆಂಪು ಅವರು ‘ನೂರು ದೇವರನು ನೂಕಾಚೆ ದೂರ’ ಎಂದಿದ್ದರೂ ಸಹ ಅವರು ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ಮಠಕ್ಕೆ ನಿಯಮಿತವಾಗಿ ಹೋಗುತ್ತಿದ್ದರು ಎಂಬುದು ತಮಗೆ ತಿಳಿದಿರಬಹುದು ಎಂದು ಭಾವಿಸುತ್ತೇನೆ.
  –ಮು ಅ ಶ್ರೀರಂಗ

  ಉತ್ತರ
  • ಸೆಪ್ಟೆಂ 13 2014

   ಆತ್ಮೀಯರೇ,
   ಸಕಲ ಶಾಸ್ತ್ರ ಪ್ರವೀಣ, ವೇದ ಪಾರಂಗತ, ಧರ್ಮ ಸೂಕ್ಷ್ಮಗಳನ್ನು ಅರಿತ ಅಪಾರವಾದ ಪಾಂಡಿತ್ಯ ತನ್ನ ರೋಗಿ ಹೆಂಡತಿಯ ಆರೈಕೆಯೊಂದಿಗೆ ಧರ್ಮೋಪದೇಶ, ಸಂದ್ಯಾವಂದನೆಗಳನ್ನು ಮಾಡುತ್ತಾ ಅಥವಾ ಇಷ್ಟು ಮಾತ್ರವೇ ಮಾಡುತ್ತಾ ತನ್ನದೇ ಗ್ರಾಮಸ್ಥರಿಗೆ ವೈದಿಕ ಧರ್ಮದ ಮಾರ್ಗದರ್ಶಕರಾಗಿ ಗುರುಸ್ಥಾನದಲ್ಲಿದ್ದವರು ಪ್ರಾಣೇಶಾಚಾರ್ಯರು.

   ಇಂತಹ ಪ್ರಾಣೇಶಾಚಾರ್ಯರಿಗೆ ತಾವು ನಂಬಿ ಆಚರಿಸಿಕೊಂಡು ಬಂದಿದ್ದ ನೀತಿಗಳು ಎಷ್ಟು ಸಡಿಲ ಎಂಬುದು ಕೇವಲ ಒಂದು ಹೆಣ್ಣಿನ ಮೊಲೆಯ ಸ್ಪರ್ಷದಿಂದಲೇ ಅರಿವಿಗೆ ಬಂತು. ಸತ್ತಂತೆ ಬಿದ್ದಿದ್ದ ನಾಗರಹಾವು ಯಾವುದೋ ಸ್ಪರ್ಷಕ್ಕೆ ಹೆಡೆ ಎತ್ತಿ ನಿಂತಂತೆ ಇವರಲ್ಲಿ ಅದುಮಿಕೊಂಡಿದ್ದ ಕಾಮ ಹೆಡೆ ಎತ್ತಿ ನಿಂತಿತ್ತು. ತನ್ನ ವೈದಿಕ ಧರ್ಮದ ನೀತಿ ಕಟ್ಟಳೆಗಳನ್ನು ಆ ಕ್ಷಣ ಮರೆತ ಅವರು ತನ್ನ ಜಾತಿಯೇ ಅಲ್ಲದ, ತಾನು ಸ್ಪರ್ಷಿಸಲೂ ಅರ್ಹಳಲ್ಲದ ಹೆಣ್ಣೊಡನೆ ಲೀನವಾಗಿದ್ದರು. ಆ ಕ್ಷಣಕ್ಕೆ ಆಕೆ ಅವರಿಗೆ ಕೇವಲ ಹೆಣ್ಣಾಗಿ ಮಾತ್ರ ಕಂಡಿದ್ದಳು. ಮಹಾ ವೈರಾಗ್ಯದಿಂದ ಬೋದಿ ವೃಕ್ಷದ ಕೆಳಗೆ ಬುದ್ದನಿಗೆ ಜ್ಞಾನೋದಯವಾದರೆ, ಹೆಡೆ ಎತ್ತಿದ ಕಾಮ ಭೋಗದೊಡನೆ ಹೆಣ್ಣಿನೊಳಗೆ ತಾ ಪ್ರವೇಶಿಸಿದ ಗಳಿಗೆಗೆ ಒಬ್ಬ ಯಃಕಶ್ಚಿತ್ ವ್ಯಭಿಚಾರಿ ಹೆಣ್ಣಿನ ಬೆತ್ತಲೇ ಎದೆಯ ಮೇಲೆ ಮೈಚೆಲ್ಲಿ ಮಲಗಿದ ಆ ಕ್ಷಣಕ್ಕೆ ತನ್ನ ಸಮಸ್ತ ಸಾರಸ್ವತಕ್ಕೂ ಮಿಗಿಲಾದ, ಎಂತಹುದೇ ಧಾರ್ಮಿಕ ನೀತಿ ಕಟ್ಟಳೆಗಳು ತಲೆಬಾಗಲೇ ಬೇಕಾದ ಪರಿಸ್ಥಿತಿಯಲ್ಲಿ ಜ್ಞಾನೊದಯವನ್ನು ಹೊಂದಿದರು. ದೈಹಿಕ ತೃಷೆಯನ್ನು ಮಾನವ ಸಹಜ ಕರ್ಮಗಳನ್ನು ಯಾವುದೇ ಧಾರ್ಮಿಕ ನೀತಿ ಕಟ್ಟಳೆಗಳು ಗೆಲ್ಲಲಾರವು ಎಂದರಿತರು, ವೈರಾಗ್ಯ, ಮುಕ್ತಿಗಳು ಪೊಳ್ಳು ಎಂದು ಮನಗಂಡ ಇವರು ಮನ ಬಯಸಿದ ಜೀವನ ನಡೆಸಲು ಸಂಕಲ್ಪಿಸಿದರು. ತಾವು ಗಮನಿಸಬೇಕು ಇಲ್ಲಿ ಪ್ರಾಣೇಶಾಚಾರ್ಯರ ಈ ಸಂಧಿಗ್ದತೆಯನ್ನು ನಾನು ಎಲ್ಲಿಯೂ “ಕ್ರಾಂತಿ” ಎಂದು ಹೇಳಿಲ್ಲ. ಮಾನವನ ಮನೋದೈಹಿಕ ವಾಂಛೆಗಳನ್ನು ಗೆಲ್ಲುವುದು ವೇದ ಶಾಸ್ತ್ರ ಪಾರಂಗರಾದ ಪ್ರಾಣೇಶಾಚಾರ್ತರಿಗೇ ಸಾದ್ಯವಾಗಲಿಲ್ಲ ಎಂದಾದರೇ ಇನ್ನು ಸಾಮಾನ್ಯರ ಪಾಡೇನು? ಈ ತಾತ್ಪರ್ಯವನ್ನು ಕಥೆ,ಕವನ ಅಥವಾ ಕಾದಂಬರಿಗಳ ಮೂಲಕ ಪ್ರಚುರ ಪಡಿಸುವುದು ವೈಚಾರಿಕ ವಾದವೇ ಅಲ್ಲ ಕೇವಲ ಜೀವನಪ್ರೀತಿ ಎಂಬುದು ಹೇಗೆ ಸಾಧ್ಯ.

   ಇನ್ನು ಕುವೆಂಪು ರವರು ರಾಮಕೃಷ್ಣ ಮಠಕ್ಕೆ ಹೋಗುತ್ತಿದ್ದರೋ ಅಥವಾ ಉಡುಪಿಯ ಪೇಜಾವರ ಮಠಕ್ಕೆ ಹೋಗುತ್ತಿದ್ದರೊ ನನಗೆ ತಿಳಿಯದು. ಅವರ ಬರಹಗಳ ಮೂಲಕ ವೈಚಾರಿಕತೆಯನ್ನು ಅವರು ಪಸರಿಸಿದರು ಎಂದಷ್ಟೇ ನಾನು ಹೇಳಿದ್ದೇನೆ.
   ಕುವೆಂಪು ರವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮುಪ್ಪು ಹಾಗು ಆದ್ಯಾತ್ಮದ ಬಗ್ಗೆ ಎಷ್ಟು ಸುಂದರವಾಗಿ ವರ್ಣಿಸಿದ್ದಾರೆ ದಯವಿಟ್ಟು ರಾಮಕೃಷ್ಣ ಮಠದಿಂದ ಹೊರಬಂದು ತಾವಿದನ್ನು ಆಸ್ವಾಧಿಸಬೇಕು.

   “ಮುಪ್ಪಿಗೆ ಇರುಳೆಂದರೆ ಅನಿವಾರ್ಯವಾದ ಒಂದು ಮಹಾ ಈತಿಬಾಧೆ. ಸಾವಿನ ಅನಂತ ನಿದ್ರೆ ಬಳಿಸಾರುವುದರಿಂದಲೋ ಏನೋ ಬಾಳೆಲ್ಲ ದುಃಸ್ವಪ್ನವೆಂಬಂತೆ ಆಯಾಸಕರವಾಗಿ ಪರಿಣಮಿಸುತ್ತದೆ. ಇಷ್ಟವಿರಲಿ ಬಿಡಲಿ ಮರಣಕ್ಕೆ ಮುಳುಗಲೇ ಬೇಕಾಗುತ್ತದೆ ಎಂಬ ಅರಿವಿನಿಂದ ಮೈದೋರುವ ಆತ್ಮದ ಅಶಾಂತಿ ನಿರಾಕಾರವಾಗಿದ್ದರೂ ಸಾಂಸಾರಿಕವಾದ ನೂರಾರು ಕೋಟಳೆಗಳ ಆಕಾರ ತಾಳಿ ನಿದ್ದೆಯನ್ನೆಲ್ಲಾ ಕದಡಿ ಬಿಡುತ್ತದೆ. ಅದರಲ್ಲಿಯೂ ದೇವರು ಧರ್ಮ, ಕಲೆ, ಸಾಹಿತ್ಯ ಸಂಸ್ಕ್ರತಿ ಇತ್ಯಾದಿಗಳಿಂದ ದೂರವಾಗಿ ಹಗಲೂ ಬೈಗೂ ಐಹಿಕ ಸಂಪತ್ತಿನ ಸಂಪಾದನೆ ಮತ್ತು ಸಂರಕ್ಷಣೆಗಳಲ್ಲಿಯೇ ಮನಸ್ಸು ಮುಳುಗಿ ಕ್ರಿಯಾಪೂರ್ಣ ನಾಸ್ತಿಕತೆಯ ಸಜೀವ ಸಾಹಸಕ್ಕಿಂತಲೂ ಸಾವಿರ ಪಾಲು ನಿರ್ಜೀವವಾದ ಸಂಪ್ರದಾಯದ ಆಸ್ತಿಕತೆಯ ಮುಂದೆ ಔದಾಸೀನ್ಯದ ಮೃತ್ಯುವಿಗೆ ತುತ್ತಾದ ಮುದುಕನಿಗಂತೂ ಇರುಳೆಂದರೆ ನರಕ ಶಿಕ್ಷೆ, ಸಹಧರ್ಮಿಣಿಯ ಸೇವೆಯೂ ಆಕೆಯ ಮರಣದಿಂದ ನಷ್ಟವಾಗಿದ್ದರಂತೂ ಮನಸ್ಸಿನ ಖಾಲಿ ಪಿಶಾಚಿಯ ಕಾರ್ಖಾನೆಯಾಗುತ್ತದೆ.”
   (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪುಟ ಸಂಖ್ಯೆ ೩೪)

   ಉತ್ತರ
   • ಸೆಪ್ಟೆಂ 13 2014

    ನಿಜ, ದೈಹಿಕ ತೃಷೆಯನ್ನು ಮಾನವ ಸಹಜ ಕರ್ಮಗಳನ್ನು ಯಾವುದೇ ಧಾರ್ಮಿಕ ನೀತಿ ಕಟ್ಟಳೆಗಳು ಗೆಲ್ಲಲಾರವು. ನಾರಣಪ್ಪನ ಹೆಂಡತಿ ನಾರಣಪ್ಪನ ಹೆಣದ ಅಂತ್ಯಸಂಸ್ಕಾರವಾಗುವ ಮೊದಲೇ ಪ್ರಾಣೇಶಾಚಾರ್ಯರ ಜೊತೆ ಮಲಗಿಬಿಡುತ್ತಾಳೆ.

    ಉತ್ತರ
    • Nagshetty Shetkar
     ಸೆಪ್ಟೆಂ 13 2014

     ಹೆಂಡತಿ ಅಲ್ಲ ಅವಳು, ಸೂಳೆ. ಹಿಂದೂ ಧರ್ಮದಲ್ಲಿ ಸೂಳೆಯ ಧರ್ಮ ಕೂಡುವುದು, ಹೆಣ್ಣಿನ ಧರ್ಮ ಹೆರುವುದು. ಆದುದರಿಂದಲೇ ಸಂಸ್ಕಾರದ ಚಂದ್ರಿ ಪ್ರಾಣೇಶಪ್ಪನ ಜೊತೆ ಕೂಡುವ ಅವಕಾಶ ಸಿಕ್ಕಾಗ ಎಲ್ಲವನ್ನೂ ಮರೆತು ಅವನೊಡನೆ ಕೂಡುತ್ತಾಳೆ, ಪುತ್ರ ಕಾಮದಿಂದ.

     ಉತ್ತರ
   • Nagshetty Shetkar
    ಸೆಪ್ಟೆಂ 13 2014

    ಭಾಸ್ಕರ ಅವರೇ, ತಮಗೆ ಸಂಸ್ಕಾರ ಕೃತಿಯ ಬಗ್ಗೆ ತಪ್ಪು ಗ್ರಹಿಕೆಗಳಿವೆ. ಪ್ರಾಣೇಶಪ್ಪನು ಕಾಮವನ್ನು ಅದುಮಿ ಇಟ್ಟುಕೊಂಡಿದ್ದು ವೇದ ಶಾಸ್ತ್ರಗಳ ಕಾರಣದಿಂದಲ್ಲ! ಆತನ ಹೆಂಡತಿ ಆಜೀವ ರೋಗಗ್ರಸ್ತೆ, ಆಕೆಯೊಡನೆ ಕೂಡುವುದು ಸಾಧ್ಯವಿರಲಿಲ್ಲ. ವೈವಾಹಿಕ ಸಂಬಂಧಕ್ಕೆ ನಿಷ್ಠನಾಗಿದ್ದ ಪ್ರಾಣೇಶಪ್ಪನು ವಿವಾಹೇತರ ಸಂಬಂಧವನ್ನು ಬಯಸಲಿಲ್ಲ. ಹೆಂಡತಿಯೊಡನೆ ಕೂಡಬೇಡ ಅಂತ ಎಲ್ಲಿಯೂ ವೈದಿಕ ಧರ್ಮ ಶಾಸ್ತ್ರಗಳು ಹೇಳಿಲ್ಲ! ವೇದಗಳು ದೈಹಿಕ ತೃಷೆಯನ್ನು ಅದುಮಿಟ್ಟುಕೊಳ್ಳಿ ಅಂತಾನೂ ಹೇಳಿಲ್ಲ. ಅಕಸ್ಮಾತ್ ಪ್ರಾಣೇಶಪ್ಪನ ಹೆಂಡತಿಯ ಆರೋಗ್ಯ ಸರಿ ಇದ್ದಿದ್ದರೆ ಪ್ರಾಣೇಶಪ್ಪನೂ ಇತರ ವೈದಿಕರ ಹಾಗೆ ಕನಿಷ್ಠ ಒಂದು ಡಜನ್ ಮಕ್ಕಳನ್ನು ಹುಟ್ಟಿಸದೇ ಇರುತ್ತಿರಲಿಲ್ಲ. ಎಲ್ಲ ಪುರೋಹಿತವರ್ಗದ ವೇದಪಾರಂಗತರಿಗೆ ಕನಿಷ್ಠ ಒಂದು ಹೆಂಡತಿ ಒಂದಿಬ್ಬರು ಉಪಹೆಂಡತಿಯರು ಹಾಗೂ ಬೆರಳೆಣಿಕೆಗೆ ಸಿಗದಷ್ಟು ಮಕ್ಕಳು ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ! 😉

    ಉತ್ತರ
 5. Rajaram Hegde
  ಸೆಪ್ಟೆಂ 13 2014

  “ಹಾಗೂ ಅಸಹ್ಯ ಹುಟ್ಟಿಸುವ ವಿಷಯವೆಂದರೆ ನಿರ್ಮಲ ಭಕ್ತಿಯ ಹರಿಕಾರ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಹೀಗಿರುವಾಗ ಪುರಾಣ ಕಥೆಗಳ ಅರ್ಥವಾದರೂ ಏನು. ಈ ಕಥೆಗಳು ಹರಿಕಥೆ ಹೇಳಲು ಮಾತ್ರ ಸೀಮಿತವೇ ? ”
  ಪುರಾಣಗಳ ಅರ್ಥವನ್ನು ಹೀಗೆ ಜಾತೀಯವಾಗಿ ತಿರುಚಿದವರು ಹರಿಕಥೆ ಕೇಳುವವರಲ್ಲ. ಹರಿಕಥೆ ಕೇಳದ ಪ್ರಗತಿಪರರು ಎಂಬುದನ್ನು ಸ್ವಲ್ಪ ಗಮನಿಸಿ.
  ” 1ದೈಹಿಕ ತೃಷೆಯನ್ನು ಮಾನವ ಸಹಜ ಕರ್ಮಗಳನ್ನು ಯಾವುದೇ ಧಾರ್ಮಿಕ ನೀತಿ ಕಟ್ಟಳೆಗಳು ಗೆಲ್ಲಲಾರವು ಎಂದರಿತರು, 2 ವೈರಾಗ್ಯ, ಮುಕ್ತಿಗಳು ಪೊಳ್ಳು ಎಂದು ಮನಗಂಡ ಇವರು 3 ಮನ ಬಯಸಿದ ಜೀವನ ನಡೆಸಲು ಸಂಕಲ್ಪಿಸಿದರು.”
  ವಾಕ್ಯದ ಮೊದಲನೆಯ ಭಾಗವು ಪ್ರಾಣೇಶಾರ್ಯರಿಗೆ ಕಂಡ ಒಂದು ಮಾನವ ಸತ್ಯ. ಆದರೆ ಅದರಿಂದ ಎರಡನೆಯ ಭಾಗದಲ್ಲಿರುವ ತೀರ್ಮಾನಕ್ಕೆ ಬರುವುದು ಅಕಾರಣವಾಗಿದೆ. ಆ ಸತ್ಯದಿಂದಾಗಿ ವೈರಾಗ್ಯ ಮುಕ್ತಿಗಳು ಪೊಳ್ಳು ಎಂದು ಸಾಬೀತಾಗುತ್ತದೆ ಅಂತಾದರೆ ಭಾರತೀಯ ಪರಂಪರೆಯನ್ನೇ ಅಲ್ಲಗಳೆದಂತೆ ಹಾಗೂ ಯಾವ ವಿರಾಗಿಗಳಿಗೂ ಮುಕ್ತಿ ಎಂಬುದು ಸಿಗಲು ಸಾಧ್ಯವೇ ಇಲ್ಲ ಎಂದಂತೇ ಅಗುತ್ತದೆ. ಅನಂತಮೂರ್ತಿಯವರೂ ಹೀಗೆ ಹೇಳಿರುವ ಸಾಧ್ಯತೆ ಇಲ್ಲ. ಲೇಖಕರ ಪ್ರಕಾರ ಮೂರನೆಯ ಭಾಗವು ಸರಿಯಾದ ನಿರ್ಣಯ ಎಂದಾದರೆ ರೇಪು ಮಾಡುವುದು ಕೂಡ ಏಕೆ ಸರಿಯಲ್ಲ ಎಂಬ ಪ್ರಶ್ನೆಗೆ . ಉತ್ತರಿಸುವ ಜರೂರಿದೆ. ಈ ಮೇಲಿನ ಲೇಖನಕ್ಕೆ ಅದನ್ನು ಉತ್ತರಿಸಲಾಗದಿದ್ದರೆ ಅದು ತನ್ನ ತರ್ಕದ ಪ್ರಕಾರ ಆ ನಿರ್ಣಯಕ್ಕೆ ಎಳೆಯುತ್ತಿಲ್ಲ ಎಂದು ಹೇಗೆ ಹೇಳುವುದು?

  ಉತ್ತರ
  • ಸೆಪ್ಟೆಂ 13 2014

   ಇಲ್ಲಿ ಮುಕ್ತಿ ಮತ್ತು ವೈರಾಗ್ಯಗಳು ಭ್ರಮೆ ಎಂಬ ತೀರ್ಮಾನಕ್ಕೆ ಬಂದಿಲ್ಲ. ಇವುಗಳ ಬಗ್ಗೆ ಚರ್ಚೆಯಷ್ಟೇ. ಪ್ರಾಣೇಶಾಚಾರ್ಯರು ಆ ಕ್ಷಣದಲ್ಲಿ ಕಾಮವನ್ನು ಗೆಲ್ಲಲಾರದೇ ವೈರಾಗ್ಯವನ್ನು ತ್ಯಜಿಸಿದ್ದರು. ಧರ್ಮ ನಿಷ್ಟೆ, ನಿಷ್ಕಾಮ ಕರ್ಮಗಳ ಸಾಧನೆ, ವೈರಾಗ್ಯದ ಮೂಲಕ ಮುಕ್ತಿ ಸಾಧ್ಯ ಎಂಬುದು ಆ ಸಮಯದಲ್ಲಿ ಅವರಿಗೆ ಭ್ರಮೆ ಎಂದು ಅನಿಸಿತ್ತು.
   ಇಲ್ಲಿ ಮತ್ತೊಂದು ಮಗ್ಗುಲಿದೆ. ಕೇವಲ ನಿಷ್ಕಾಮ ಕರ್ಮಯೋಗಳಿಂದ, ಸಂದ್ಯಾವಂದನೆ ಧರ್ಮೋಪದೇಶದಿಂದ, ಬ್ರಹ್ಮಚರ್ಯದಿಂದ ಜೀವನ ಕಳೆಯುತ್ತಿರುವ ಒಬ್ಬ ವ್ಯಕ್ತಿಯು ಇದ್ದಕ್ಕಿಂದ್ದಂತೆ ಉಂಟಾದ ಮೈಥುನದಿಂದ, ರೋಮ ರೋಮದಲ್ಲೂ ಎದ್ದು ನಿಂತ ವಾಂಛೆಗಳಿಂದ, ಸುಖಾನುಭವಗಳಿಂದ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಾನೆ. ಇದೂ ಸಹಾ ಒಂದು ರೀತಿಯಲ್ಲಿ ಮುಕ್ತಿಯೇ ಅಲ್ಲವೇ..?
   ಅದೇ ರೀತಿ ಸಕಲ ಸುಖ ಭೋಗಗಳಲ್ಲಿ, ಲೋಲುಪತೆಯಲ್ಲಿ, ಐಹಿಕ ಸುಖಗಳನ್ನು ಅನುಭವಿಸಿ ಇವುಗಳಲ್ಲೇ ಜೀವನದ ಪಾರಮ್ಯತೆಯನ್ನು ಕಂಡ ವ್ಯಕ್ತಿಯು ಒಂದು ಕಾಲಕ್ಕೆ ಆದ್ಯಾತ್ಮದಿಂದ ಆಕರ್ಷಿತನಾಗುತ್ತಾನೆ, ವೈರಾಗ್ಯದ ಮೊರೆ ಹೋಗುತ್ತಾನೆ, ಸಕಲ ಸುಖಭೋಗಗಳನ್ನು ತ್ಯಜಿಸುತ್ತಾನೆ. ಇದೂ ಸಹಾ ಮುಕ್ತಿಯೇ ಅಲ್ಲವೇ.?
   ತಾನು ಅನುಸರಿಸಿದ್ದ ಸಿದ್ದಾಂತಗಳಿಂದ, ತಾನು ಕಂಡುಕೊಂಡಿದ್ದ ಸತ್ಯದಿಂದ ಸಂಪೂರ್ಣ ವಿಮುಖರಾಗಿ ಹೊರಬಂದಾಗ ಅದು ತಾತ್ಕಾಲಿಕವಾದರೂ ಸರಿಯೇ ದೊರೆಯುವ ತೃಪ್ತಭಾವವೇ ಆ ಸಂಧರ್ಭಕ್ಕೆ ಮುಕ್ತಿ. ಮುಕ್ತಿ ಎಂಬುದೂ ಸಹಾ ಚನಲಶೀಲ ಹಾಗೂ ನಿರಂತರ..ಮುಕ್ತಿ ಎಂಬುವುದು ಅಂತಿಮ ಘಟ್ಟವಾಗಲು ಸಾಧ್ಯವಿಲ್ಲ.

   ಉತ್ತರ
   • Nagshetty Shetkar
    ಸೆಪ್ಟೆಂ 13 2014

    ನಾರಣಪ್ಪನ ಅಂತ್ಯಕ್ರಿಯೆಯು ಆಗುವ ವರೆಗೆ ಪ್ರಾಣೇಶಪ್ಪನೂ ಊಟ ಮಾಡುವ ಹಾಗಿಲ್ಲ. ಎರಡು ದಿನ ಊಟ ನೀರು ಇಲ್ಲದೆ ಹಸಿವಿನಿಂದ ಬಳಲಿದ್ದ ವ್ಯಕ್ತಿ ಒಬ್ಬ ಸೂಳೆಯ ಮೊಲೆ ಸೋಂಕಿದೊಡೆ ಅವಳನ್ನು ಕೂಡುತ್ತಾನೆ ಎನ್ನುವುದು ಕವಿಸಮಯ, ವಾಸ್ತವದಲ್ಲಿ ಸಂಭಾವ್ಯ ಸನ್ನಿವೇಶವಲ್ಲ.

    ಉತ್ತರ
    • Nagshetty Shetkar
     ಸೆಪ್ಟೆಂ 13 2014

     ಬೇಕಿದ್ದರೆ ಭಾಸ್ಕರ ಅವರೇ ಎರಡು ದಿನ ಅನ್ನ ನೀರು ಬಿಟ್ಟು ಕಂಗೆಟ್ಟ ಮೇಲೆ ತಮಗೆ ಕಾಮೋದ್ರೇಕ ಆಗುತ್ತದೆಯೋ ಇಲ್ಲವೋ ಅಂತ ಪ್ರತ್ಯಕ್ಷ ಪರೀಕ್ಷೆ ಮಾಡಿ ಹೇಳಲಿ.

     ಉತ್ತರ
     • ಸೆಪ್ಟೆಂ 13 2014

      ನಾಗಶೆಟ್ಟಿ ರವರೇ,

      ನಿಮಗೆ ನನ್ನದೊಂದು ಸಲಹೆ, ತಾವು ನಿತ್ಯಾನಂತ ಸ್ವಾಮಿಗಳ ಆಪ್ತ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿದ್ದೀರ ಎಂದೆನಿಸುತ್ತಿದೆ. ಬಹುಶಃ ನಿಮ್ಮ ಅವಶ್ಯಕತೆ ಅವರಿಗೆ ಪ್ರಸ್ತುತ ಸನ್ನಿವೇಶದಲ್ಲಿ ಬಹಳ ಇದೆ ಎಂದೆನಿಸುತ್ತದೆ. ಕಾಮೋದ್ರೇಕವಾಗದಿರಲು ನಿಮ್ಮಲ್ಲಿರುವ ಉಪಾಯಗಳನ್ನು ಸ್ವಾಮಿಗಳಿಗೆ ತಿಳಿಸ ಬಹುದು. ತಾವು ಸ್ವತಃ ಪರೀಕ್ಷೆ ಸಹಾ ಮಾಡಿದಂತಿದೆ.

      ಇಲ್ಲಿ ಚರ್ಚೆ ದಿಕ್ಕು ತಪ್ಪುತ್ತಿದ್ದೆ. ಸಂಸ್ಕಾರ ಕಾದಂಬರಿಯ ಬಗ್ಗೆ ಈಗಾಗಲೇ ಹತ್ತು ಹಲವು ವೇದಿಕೆಗಳಲ್ಲಿ ಚರ್ಚೆಗಳು ನಡೆದಿದೆ.
      ಯಾವುದೇ ವಿಷಯದ ಚರ್ಚೆ ಆರೋಗ್ಯಕರವಾಗಿದ್ದರೆ ಉತ್ತಮ.

      ವೈಚಾರಿಕತೆ-ವೈರಾಗ್ಯ-ಮೋಕ್ಷ-ಸಂಸ್ಕಾರ ದಿಂದ ಆರಂಭವಾದ ಚರ್ಚೆ ಕಾಮೋದ್ರೇಕದ ವರೆಗೂ ಬಂದು ತಲುಪಿರುವುದು ನಿಜಕ್ಕೂ ಸೋಜಿಗವೇ ಸರಿ.

      ಇನ್ನು ಈ ಲೇಖನದ ಬಗ್ಗೆ ನಾನು ಅಪಕ್ವವಾದ ಪ್ರತಿಕ್ರಿಯೆಗಳಿಗೆ ಮರುತ್ತರ ನೀಡಲು ಹೋಗುವುದಿಲ್ಲ.

      ಉತ್ತರ
      • Nagshetty Shetkar
       ಸೆಪ್ಟೆಂ 13 2014

       ಸಂಸ್ಕಾರದ ಅತ್ಯಂತ ಮುಖ್ಯ ಸನ್ನಿವೇಶವೇ ಪ್ರಾಣೇಶಪ್ಪ ಚಂದಿರ್ಯನ್ನು ಕೂಡುವ ಸನ್ನಿವೇಶ. ನೀವೇ ಹೇಳಿದ ಹಾಗೆ ಹೆಣ್ಣಿನ ಮೊಲೆಯ ಸ್ಪರ್ಶದಿಂದಲೇ ಪ್ರಾಣೇಶಪ್ಪನ ಕಾಮಪ್ರಜ್ಞೆ ಉದ್ರಿಕ್ತಗೊಂಡದ್ದು. ಸಂಸ್ಕಾರ ಕಾದಂಬರಿಯಲ್ಲಿ ಈ ಸನ್ನಿವೇಶವನ್ನು ತೆಗೆದುಬಿಟ್ಟರೆ ಕತೆಯಲ್ಲಿ ಏನೂ ಉಳಿಯುವುದಿಲ್ಲ. ಕತೆಯ ಪ್ರಾಣ ಇರುವುದು ಈ ಸನ್ನಿವೇಶದಲ್ಲೇ! ಎರಡು ದಿನ ಹಸಿವು ನೀರಡಿಕೆ ಹಾಗೂ ಧರ್ಮಜಿಜ್ಞಾಸೆಯಿಂದ ಬಳಲಿದ ವ್ಯಕ್ತಿಯೊಬ್ಬ ಕಾಮಕ್ರೀಡೆಯಲ್ಲಿ ತೊಡಗಬಲ್ಲನೆ? ಒಂದು ವೇಳೆ ನೀವು ಹಾಗೆ ಮಾಡಬಲ್ಲಿರಿಯಾದರೆ ನೀವು ಸಾಮಾನ್ಯ ಮನುಷ್ಯರಲ್ಲ ದೈತ್ಯರೇ ಹೌದು! ಆದುದರಿಂದಲೇ ನಾನು ಚಂದ್ರಿಯನ್ನು ಕೂಡುವ ಸನ್ನಿವೇಶವನ್ನು ಕವಿಸಮಯ ಎಂದದ್ದು. ನಿಮ್ಮ ತಪ್ಪು ಗ್ರಹಿಕೆಗಳನ್ನ ತಿದ್ದಿಕೊಳ್ಳುವ ಬದಲು ನನ್ನ ಪ್ರತಿಕ್ರಿಯೆಯನ್ನು ಅಪಕ್ವ ಎಂದು ಕರೆದದ್ದು ಸರಿಯೇ?

       ಉತ್ತರ
      • valavi
       ಸೆಪ್ಟೆಂ 13 2014

       ಭಾಷ್ಕರನ್ ಅವರೆ ಅತ್ಯುತ್ತಮವಾಗಿ ಪ್ರತಿಕ್ರಿಯೆ ನೀಡಿದ್ದೀರಾ? ನಿಮ್ಮನ್ನು ಜಗಳಗಂಟ ಎಂದು ವೈಯುಕ್ತಿಕ ನಿಂದನೆಗೆ ಇಳಿಯಬಹುದು. ಎಚ್ಚರವಾಗಿರಿ. ಕೆಲವರ ಜಾಯಮಾನವೆ ಅಂಥದ್ದು. ಉತ್ತರಗಳಿಲ್ಲದಿದ್ದಾಗ ವೈಯುಕ್ತಿಕ ನಿಂದನೆಗೆ ಇಳಿಯುವದು.

       ಉತ್ತರ
 6. Krishnappa
  ಸೆಪ್ಟೆಂ 13 2014

  ಬಹಳ ಸಮಯದಿಂದ ಹೆಣ್ಣಿನ ಸಂಗ ಇಲ್ಲದೆ ಬಾಯಾರಿದ ವ್ಯಕ್ತಿ ಎರಡು ದಿನ ಹೊಟ್ಟೆಗೆ ಆಹಾರ ಇಲ್ಲದಿದ್ದರೂ ಕಾಮೋದ್ರೇಕಗೊಳ್ಳಬಲ್ಲ ಎಂಬುದು ವೈಜ್ಞಾನಿಕ ಸತ್ಯ. ಕಾಮೋದ್ರೇಕ ಎಂಬುದು ಹಾರ್ಮೋನುಗಳ ನಿಯಂತ್ರಣದಲ್ಲಿ ಇರುವುದು. ಎರಡು ದಿನ ಆಹಾರ ಇಲ್ಲದಿದ್ದರೂ ಲೈಂಗಿಕ ಹಾರ್ಮೋನುಗಳು ನಿಷ್ಕ್ರಿಯವಾಗುವುದಿಲ್ಲ. ಓರ್ವ ಆರೋಗ್ಯವಂತ ವ್ಯಕ್ತಿ ಎರಡು ದಿನ ಆಹಾರ ಇಲ್ಲದಿದ್ದರೂ ದೇಹದಲ್ಲಿ ಮುಖ್ಯವಾಗಿ ಪಿತ್ತಕೋಶದಲ್ಲಿ ಗ್ಲೈಕೋಜನ್ ರೂಪದಲ್ಲಿ ಸಂಗ್ರಹವಾಗಿರುವ ಗ್ಲುಕೋಸ್ ದೇಹದ ಶಕ್ತಿ ಅಗತ್ಯವನ್ನು ಪೂರೈಸುತ್ತದೆ. ಪಿತ್ತಕೋಶದಲ್ಲಿ ಸಂಗ್ರಹವಾಗಿರುವ ಗ್ಲೈಕೋಜನ್ ಮುಗಿದರೆ ದೇಹದ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನುಕರಗಿಸಿ ದೇಹವು ತನ್ನ ಶಕ್ತಿಯ ಅಗತ್ಯವನ್ನು ಪೂರೈಸಿಕೊಳ್ಳುತ್ತದೆ. ಹೀಗಾಗಿ ‘ಸಂಸ್ಕಾರ’ ಕಾದಂಬರಿಯಲ್ಲಿ ಪ್ರಾಣೇಶಾಚಾರ್ಯ ಚಂದ್ರಿಯ ಸ್ತನ ಸೊಂಕಿದಾಗ ಕಾಮೋದ್ರೇಕಗೊಂಡ ಚಿತ್ರಣ ಕವಿಸಮಯದ ಚಿತ್ರಣವೇನೂ ಅಲ್ಲ, ವಾಸ್ತವದಲ್ಲಿ ಸಂಭವಿಸಬಹುದಾದ್ದು. ಕಾಮೋದ್ರೇಕಗೊಳ್ಳುವಲ್ಲಿ ಹೆಣ್ಣಿನ ಸ್ಪರ್ಶ ಮಿಂಚಿನಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯ.

  ಉತ್ತರ
  • Nagshetty Shetkar
   ಸೆಪ್ಟೆಂ 13 2014

   “ಬಹಳ ಸಮಯದಿಂದ ಹೆಣ್ಣಿನ ಸಂಗ ಇಲ್ಲದೆ ಬಾಯಾರಿದ ವ್ಯಕ್ತಿ ಎರಡು ದಿನ ಹೊಟ್ಟೆಗೆ ಆಹಾರ ಇಲ್ಲದಿದ್ದರೂ ಕಾಮೋದ್ರೇಕಗೊಳ್ಳಬಲ್ಲ ಎಂಬುದು ವೈಜ್ಞಾನಿಕ ಸತ್ಯ.”

   ವೈಜ್ಞಾನಿಕ ಸತ್ಯ ಆಗಿದ್ದರೆ ಅದನ್ನು ಸೂಕ್ತ ಆಧಾರಗಳ ಸಹಿತ ಸಾಬೀತು ಪಡಿಸಿ. ನಿಮ್ಮ ಅನುಭವ ಏನನ್ನು ಹೇಳುತ್ತದೆ? ನೀವು ಎರಡು ದಿನ ಊಟ ನಿದ್ರೆ ನೀರು ಬಿಟ್ಟಿದ್ದು ನೋಡಿದ್ದೀರಾ ಕಾಮೋದ್ರೇಕ ಆಗುತ್ತದೆಯ ಇಲ್ಲವ ಅಂತ?

   ಉತ್ತರ
   • Krishnappa
    ಸೆಪ್ಟೆಂ 14 2014

    ವಿಜ್ಞಾನದಲ್ಲಿ ಪರೋಕ್ಷ ವಿಧಾನಗಳ ಮೂಲಕವೂ ಸತ್ಯವನ್ನು ಕಂಡುಕೊಳ್ಳುವದಾರಿಗಳು ಇವೆ. ಉದಾಹರಣೆಗೆ ವಿಜ್ಞಾನಿಗಳು ಸೂರ್ಯನ ಉಷ್ಣತೆಯನ್ನು ನಿಖರವಾಗಿ ಕಂಡುಕೊಂಡಿದ್ದಾರೆ. ಆದರೆ ಸೂರ್ಯನಲ್ಲಿಗೆ ಹೋಗಿಯೇ ಉಷ್ಣತೆಯನ್ನು ಕಂಡುಕೊಂಡದ್ದು ಅಲ್ಲ ಏಕೆಂದರೆ ಸೂರ್ಯನ ಹತ್ತಿರ ಹೋದರೆ ಸುಟ್ಟು ಬೂದಿಯಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗೆಂದು ವಿಜ್ಞಾನಿಗಳು ಕಂಡುಕೊಂಡ ಸೂರ್ಯನ ಉಷ್ಣತೆಯನ್ನು ತಪ್ಪು ಏಕೆಂದರೆ ನೀವು ಅಲ್ಲಿಗೆ ಸ್ವತಃ ಹೋಗಿ ಕಂಡುಕೊಂಡಿಲ್ಲ ಎಂದು ಯಾರೂ ತಕರಾರು ಎತ್ತಿಲ್ಲ. ಅದೇ ರೀತಿ ನಾನು ಎರಡು ದಿನ ಆಹಾರ ಸೇವಿಸದೆ ಇದ್ದರೂ ಮನುಷ್ಯನ ಕಾಮೋದ್ರೇಕಗೊಳ್ಳುವ ಸಾಧ್ಯತೆಗಳ ವೈಜ್ಞಾನಿಕ ಸಾಧ್ಯತೆಯ ಬಗ್ಗೆ ಹೇಳಿದ್ದೇನೆ. ನಾನು ಇದಕ್ಕೆ ಸ್ವತಃ ಉಪವಾಸ ಇದ್ದು ನೋಡಿಲ್ಲ ಏಕೆಂದರೆ ನನಗೆ ಅದರ ಅಗತ್ಯ ಬಿದ್ದಿಲ್ಲ.

    ಕಾದಂಬರಿಗಳಲ್ಲಿ ವೈಚಾರಿಕತೆ ಇರಬಾರದೆಂದೇನೂ ಇಲ್ಲ. ಶಿವರಾಮ ಕಾರಂತರ ಕಾದಂಬರಿಗಳು ವಿಚಾರವಂತರಿಗೆ ಇಷ್ಟವಾಗುತ್ತವೆ. ಬರಿಯ ಹೊತ್ತು ಕಳೆಯಲು ಹಾಗೂ ಮನೋರಂಜನೆಗಾಗಿ ಓದುವವರಿಗೆ ಶಿವರಾಮ ಕಾರಂತರ ಕಾದಂಬರಿಗಳು ರುಚಿಸಲಾರವು. ಅಂಥವರಿಗೆ ಸಾಪ್ತಾಹಿಕಗಳಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಬರುವ ಧಾರಾವಾಹಿ ಸ್ವರೂಪದ ಕಾದಂಬರಿಗಳಷ್ಟೇ ರುಚಿಸುತ್ತವೆ ಏಕೆಂದರೆ ಅವುಗಳನ್ನು ಜನ ಕುತೂಹಲದಿಂದ ಕಾದುಕುಳಿತು ನೋಡಬೇಕು ತನ್ಮೂಲಕ ತಮ್ಮ ಪ್ರಸಾರ/ಟಿ. ಆರ್. ಪಿ. ಹೆಚ್ಚಿಸಿ ಕೊಳ್ಳಬೇಕೆಂಬ ಏಕೈಕ ಉದ್ಧೇಶದಿಂದ ರಚಿಸಲಾಗುತ್ತದೆ. ಹೀಗಾಗಿ ಕೃತಕವಾಗಿ ಹಾಗೂ ಉದ್ಧೇಶ ಪೂರ್ವಕವಾಗಿ ಕಂತು ಕಂತಿನಲ್ಲಿಯೂ ತಿರುವುಗಳನ್ನು ಕೊಡುತ್ತಾ ಅವುಗಳನ್ನು ನಿರಂತರವಾಗಿ ಎಳೆಯಲಾಗುತ್ತಿರುತ್ತದೆ.

    ಉತ್ತರ
 7. M A Sriranga
  ಸೆಪ್ಟೆಂ 13 2014

  ಭಾಸ್ಕರ್ ಅವರಿಗೆ– . >>>’…..ಈ ತಾತ್ಪರ್ಯವನ್ನು ಕಥೆ,ಕವನ ಅಥವಾ ಕಾದಂಬರಿಗಳ ಮೂಲಕ ಪ್ರಚುರಪಡಿಸುವುದು ವೈಚಾರಿಕವಾದವೇ ಅಲ್ಲ. ಕೇವಲ ಜೀವನ ಪ್ರೀತಿ ಎಂಬುದು ಹೇಗೆ ಸಾಧ್ಯ?’>>.> ಸೃಜನಶೀಲ ಸಾಹಿತ್ಯದ ಪ್ರಕಾರಗಳಾದ ಕಥೆ,ಕವನ,ಕಾದಂಬರಿಗಳು ಒಂದು ‘ವಿಷಯವನ್ನು’ ಪ್ರಚಾರ ಮಾಡಲು ಇಳಿದಾಗ ಅದರಲ್ಲಿನ ‘ಸಾಹಿತ್ಯ’ ದ ಅಂಶ ಸಹಜವಾಗಿ ಮರೆಯಾಗಿ ಹೋಗುತ್ತದೆ. ವೈಚಾರಿಕತೆಯನ್ನು ಪ್ರಚಾರ ಮಾಡುವುದೇ ಉದ್ದೇಶವಾದಾಗ/ಇದು ಸರಿ ಇದು ತಪ್ಪು ಎಂದು ಸಾಹಿತಿ ನ್ಯಾಯ ಮಾಡಲು ಕೂತಾಗ ಆ ಕೃತಿಯಲ್ಲಿನ ಆ ಭಾಗಗಳಲ್ಲಿ ಸಾಹಿತ್ಯದ ಅಂಶಗಳು ಸಹಜವಾಗಿ ಆವಿಯಾಗಿ ಹೋಗುತ್ತವೆ. . ಇದು ನಮ್ಮ ಹಿರಿಯ ಕಾದಂಬರಿಕಾರರಾದ ಶಿವರಾಮ ಕಾರಂತ ಮತ್ತು ಭೈರಪ್ಪನವರನ್ನೂ ಬಿಟ್ಟಿಲ್ಲ. ಇದನ್ನು ಕುರಿತು ಸಾಕಷ್ಟು ವಿಮರ್ಶೆಗಳು ಬಂದಿವೆ. ಕಾರಂತರಿಗೆ ತಮ್ಮ ಒಂದು ಕಾದಂಬರಿಯ ವಸ್ತುವನ್ನು ಹೇಗೆ ಹೇಳಬೇಕೆನ್ನುವ ತಂತ್ರ,ಸ್ವರೂಪ ಮುಖ್ಯವಾಗದೆ ಏನು ಹೇಳಬೇಕು ಎಂಬುದಷ್ಟೇ ಮುಖ್ಯವಾದಾಗ ಅದು ಸಾಹಿತ್ಯಿಕವಾಗಿ ಸೋತದ್ದೂ ಉಂಟು. ಚೋಮನದುಡಿ,ಮರಳಿಮಣ್ಣಿಗೆ,ಬೆಟ್ಟದಜೀವ, ಅಳಿದ ಮೇಲೆ ಕಾದಂಬರಿಗಳ ಮಟ್ಟವನ್ನು ಅವರ ಇತರ ಕಾದಂಬರಿಗಳು ಸಾಹಿತ್ಯಿಕವಾಗಿ ಮುಟ್ಟಲು ಸಾಧ್ಯವಾಗಿಲ್ಲ. ಅದೇ ರೀತಿ ಭೈರಪ್ಪನವರ ವಂಶವೃಕ್ಷ , ದಾಟು ಕಾದಂಬರಿಗಳು ವಸ್ತುವಿನ ದೃಷ್ಟಿಯಿಂದ ಉತ್ಕೃಷ್ಟವಾಗಿದ್ದರೂ ಸಹ ಅದರಲ್ಲಿನ ಕೆಲವು ವಿವರಣೆಗಳನ್ನು ಬಿಟ್ಟಿದ್ದರೆ ಚೆನ್ನಾಗಿತ್ತು ಎಂದು ಭೈರಪ್ಪನವರೇ ತಮ್ಮ ಲೇಖನಗಳಲ್ಲಿ, ಆತ್ಮಕಥೆಯಲ್ಲಿ ಹೇಳಿದ್ದಾರೆ. ಈ ಎರಡು ಕಾದಂಬರಿಗಳ ನಡುವೆ ಬಂದ ‘ಜಲಪಾತ’, ‘ಗೃಹಭಂಗ’ ಯಾವುದೇ ವಿಚಾರ, ವಾದ-ವಿವಾದಗಳ ಮುಖವಾಣಿಯಾಗದೆ ಅತ್ಯುತ್ತಮವಾಗಿದೆ. ಭೈರಪ್ಪನವರು ತಮ್ಮ ಈ ಸಮಸ್ಯೆಯನ್ನು ‘ಅನ್ವೇಷಣ’ ಕಾದಂಬರಿಯಲ್ಲಿ ನಿವಾರಿಸಿಕೊಂಡಿದ್ದಾರೆ. ಆ ನಂತರದ ಕಾದಂಬರಿಗಳಲ್ಲಿ ಅವರನ್ನು ಆ ಸಮಸ್ಯೆ ಕಾಡದಂತೆ ಎಚ್ಚರವಹಿಸಿದ್ದಾರೆ. ‘ಅನ್ವೇಷಣ’ ಕಾದಂಬರಿಯ ನಂತರದ ಕಾದಂಬರಿಗಳ ವಸ್ತು-ವಿಷಯಗಳ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಕಾದಂಬರಿಯ formಅನ್ನು ಮೀರಿ ಅವರು ತಮ್ಮ ವಿಚಾರಗಳನ್ನು ಓದುಗರ ಮೇಲೆ ಹೇರಿಲ್ಲ ಎಂಬುದನ್ನು ಮರೆಯಬಾರದು. ತಮ್ಮ ಲೇಖನ ಮತ್ತು ಪ್ರತಿಕ್ರಿಯೆಗಳಿಗೆ ಪೂರಕವಾಗಿ ಬಂದಂತಹ (‘ಸಂಸ್ಕಾರ’ ಕಾದಂಬರಿಯನ್ನು ಕುರಿತಂತೆ) ಒಬ್ಬ ಓದುಗರ ಒಂದು ಅಭಿಪ್ರಾಯಕ್ಕೆ ಮಾತ್ರ ನನ್ನ ಸಹಮತವಿದೆ. –ಪ್ರಾಣೇಶಾಚಾರ್ಯ ಮತ್ತು ಚಂದ್ರಿ’ಯ ನಡುವೆ ನಡೆದ ಸಂಯೋಗ ‘ಕವಿ ಸಮಯ’ ಅಷ್ಟೇ’ ಎಂದು ಅವರು ಸರಿಯಾಗಿ ಹೇಳಿದ್ದಾರೆ. ಇನ್ನುಳಿದಂತೆ ಅವರ ಇತರೆ ಅಭಿಪ್ರಾಯಗಳಾಗಲೀ, ಆ ಸಂದರ್ಭದ ವೈಜ್ಞಾನಿಕ ,ವೈದ್ಯಕೀಯ ಸತ್ಯಾಸತ್ಯತೆಗಳಾಗಲಿ ಆ ಕಾದಂಬರಿಯ ವಸ್ತುವಲ್ಲ ಮತ್ತು ವಸ್ತುವಾಗ ಬೇಕಾಗಿಲ್ಲ. ಅದು ವೈಚಾರಿಕತೆಯೂ ಅಲ್ಲ. . ಆ ಪ್ರಸಂಗ ಬಿಟ್ಟರೆ ‘ಸಂಸ್ಕಾರ’ದಲ್ಲಿನ ಮುಂದಿನ ಕಥೆಗೆ ವಸ್ತು ಮತ್ತು ಚಲನೆ ಎಲ್ಲಿದೆ?

  ಉತ್ತರ
 8. ಸೆಪ್ಟೆಂ 14 2014

  ಪ್ರಾಣೇಶಾಚಾರ್ಯರು ಚಂದ್ರಿಯನ್ನು ಕೂಡುವ ಪ್ರಸಂಗ ಒಟ್ಟಾರೆ ಕಾದಂಬರಿಯಲ್ಲಿ ಮಹತ್ವದ ತಿರುವುಳ್ಳಂತಹ ಸನ್ನಿವೇಶವಾಗಿದೆ ಎಂಬುದು ನಿಜವೇ. ಆದರೆ ಇದನ್ನು ಹೊರತುಪಡಿಸಿ ಕಾದಂಬರಿಯಲ್ಲಿ ಮತ್ತೇನೂ ಮಹತ್ವದ ಅಂಶಗಳಿಲ್ಲ ಅಥವಾ ಸಾಹಿತ್ಯಕ ರೂಪಕಗಳನ್ನು ಕಡೆಗಣಿಸಲಾಗಿದೆ ಎಂಬುದು ಸಂಸ್ಕಾರ ಕಾದಂಬರಿಯ ಮಟ್ಟಿಗೆ ಒಪ್ಪಲು ಸಾಧ್ಯವಿಲ್ಲ.
  ಕಾದಂಬರಿಯಲ್ಲಿ ಹಲವು ಗಮನಿಸತಕ್ಕ ಅಂಶಗಳಿವೆ.
  ೧. ಪ್ರಾಣೇಶಚಾರ್ಯರು ತಮ್ಮ ರೋಗಗ್ರಸ್ಥ ಹೆಂಡತಿಯ ಬಗ್ಗೆ ತಳೆದಿದ್ದ ನಿಲುವನ್ನು ಈ ರೀತಿ ವಿವರಿಸಲಾಗಿದೆ “ ಪಂಚಾಮೃತ ಸೇವನೆಯಷ್ಟು ಸುಖವಾದ, ಧನ್ಯಭಾವ, ಪಶ್ಚಾತ್ತಾಪ ಹೆಂಡತಿಯ ಮೇಲೆ ಬಂದು ಇವಳು ರೋಗಿಯಾದ್ದಾರಿಂದ ನಾನು ಇನ್ನಷ್ಟು ಹದನಾದೆ ಎಂದು ತಮ್ಮ ಪಾಡಿನ ಬಗ್ಗೆ ಹಿಗ್ಗುತ್ತಾರೆ”
  ಇಲ್ಲಿ ಪ್ರಾಣೇಶಾಚಾರ್ಯರಿಗೆ ಹೆಂಡತಿಯ ರೋಗದ ಕಾರಣ ತಾನು ದೈಹಿಕ ಸುಖದಿಂದ ವಂಚಿತನಾಗುತ್ತಿದ್ದೇನೆ ಎಂಬುದರ ಬಗ್ಗೆ ಯಾವುದೇ ರೀತಿ ಅಹಿತಕರ ಭಾವ ಇರಲಿಲ್ಲ. ಬದಲಿಗೆ ಇದರಿಂದ ಅಂದರೆ ಕಾಮದಿಂದ ದೂರವಿರುವುದರಿಂದ ನನ್ನ ವ್ಯಕ್ತಿತ್ವ ಇನ್ನಷ್ಟು ವಿಕಸಿತವಾಗುತ್ತದೆ, ಹದವಾಗುತ್ತದೆ ಎಂಬ ಭಾವ ಹೊಂದಿದ್ದರು. ಉದ್ದೇಶಪೂರ್ವಕವಾಗಿ ವಿರಾಗಿಯಾಗದಿದ್ದರೂ ಕಾಮದ ವಿಚಾರವಾಗಿ ತನಗೆ ಒದಗಿಬಂದ ಅನಿವಾರ್ಯ ವೈರಾಗ್ಯದ ಬಗ್ಗೆ ತೃಪ್ತರಾಗಿದ್ದರು.
  ೨. ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು, ಅವುಗಳ ವರ್ಣನೆ, ಕಥಾವಸ್ತುವಿಗೆ ಸಂಬಂಧಿಸಿದಂತೆ ಹೆಣೆಯಲಾದ ಪಾತ್ರಗಳು, ಪಾತ್ರಗಳ ನಿರೂಪಣೆ, ಅಗ್ರಹಾರದ ಚಿತ್ರಣ ಇತ್ಯಾದಿ ಅಂಶಗಳು ಸಾಹಿತ್ಯಕವಾಗಿ ಉತ್ತಮವಾಗಿ ಮೂಡಿಬಂದಿದೆ.
  ೩. ಅಗ್ರಹಾರದ ಜನರಲ್ಲಿ ಆಚಾರ-ವಿಚಾರಗಳ ಬಗ್ಗೆ ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಮನೆಮಾಡಿರುವ ಆತಂಕಗಳು, ಭಯ, ಬೀತಿಗಳ ಚಿತ್ರಣ, ಸ್ವತ್ತಿನ, ಸಂಪತ್ತಿನ, ಬಂಗಾರದ ವಿಷಯ ಬಂದಾಗ ಹೊರಬರುವ ಸ್ವಾರ್ಥ, ಲೋಲುಪತನ, ಆಸೆಗಳು.
  ೩. ಧರಿಸಿದ ಜನಿವಾರದಂತೆಯೇ ಧರಿಸಿರುವ ಮುಖವಾಡಗಳು. ಮುಖವಾಡದ ಹಿಂದೆ ಮನೆಮಾಡಿರುವ ಮೋಹ, ದೈಹಿಕ ವಾಂಛೆಗಳು ಮನುಸ್ಯ ಸಹಜ ಆಸೆ ಆಕಾಂಕ್ಷೆಗಳು.
  ೪. ಆಚಾರ-ವಿಚಾರಗಳ ಬಗ್ಗೆ ಇವುಗಳ ಆಚರಣೆಗಳ ಬಗ್ಗೆ ಬ್ರಾಹ್ಮಣರಲ್ಲೇ ಇರುವ ಬಿನ್ನತೆಗಳು, ಸ್ಮಾರ್ಥ-ಮಾದ್ವರ ನಡುವಿನ ಮೇಲು ಕೀಳೆಂಬ ಭಾವಗಳು.
  ೫. ಇಡೀ ಅಗ್ರಹಾರವನ್ನು ವ್ಯಾಪಿಸ ತೊಡಗುವ ನಾರಾಣಪ್ಪನ ಹೆಣದ ಕೊಳೆತ ವಾಸನೆ – ಇಲ್ಲಿ ಗಮನಿಸಬೇಕಾದ್ದು ಶವ ಬ್ರಾಹ್ಮನದ್ದೇ ಆಗಿರಲಿ, ಶೂದ್ರನದ್ದೇ ಆಗಿರಲಿ ಸತ್ತ ಮರು ಕ್ಷಣ ಕೊಳೆಯತೊಡಗುತ್ತದೆ ಭರಿಸಲಾರದ ವಾಸನೆ ಸುತ್ತಲೂ ಹಬ್ಬತೊಡಗುತ್ತದೆ.
  ೬. ಅಗ್ರಹಾರವನ್ನು ಆವರಿಸತೊಡಗುವ ಪ್ಲೇಗ್ ರೋಗ-ಇದು ಅಂದಿನ ಕಾಲದ ಸಾಮಾಜಿಕ ಸ್ಥಿತಿಯ ಬಗ್ಗೆ ತಿಳಿಸುತ್ತದೆ.
  ೭. ಚಂದ್ರಿಯನ್ನು ಕೂಡಿದ ನಂತರ ಪ್ರಾಣೇಶಾಚಾರ್ಯರ ಸಂಧಿಗ್ಧತೆ, ದ್ವಂದ್ವಗಳು ಓದುಗರನ್ನು ಚಿಂತನೆಗೆ ಹಚ್ಚಿಸುತ್ತದೆ.

  ಉತ್ತರ
  • Nagshetty Shetkar
   ಸೆಪ್ಟೆಂ 14 2014

   “ಇವಳು ರೋಗಿಯಾದ್ದಾರಿಂದ ನಾನು ಇನ್ನಷ್ಟು ಹದನಾದೆ”

   ರೋಗಿಷ್ಠ ಹೆಂಡತಿಯ ಆರೈಕೆ ಹಾಗೂ ಶುಶ್ರೂಷೆ ಮಾಡುತ್ತಾ ಪ್ರಾಣೇಶಾಚಾರ್ಯರು “ಹೆಂಡತಿ ಇರುವುದು ಗಂಡನ ಸೇವೆಗೆ ಹಾಗೂ ಗಂಡನ ಕುಲವನ್ನು ಮುಂದುವರೆಸುವ ಮಕಳನ್ನು ಹೇರುವುದಕ್ಕೆ” ಎಂಬ ಸನಾತನ ಹಿಂದೂ ತತ್ವಕ್ಕೆ ವಿರುದ್ಧವಾಗಿ ತಮ್ಮ ವೈವಾಹಿಕ ಜೀವನವನ್ನು ಬದುಕಿದ್ದಾರೆ. ಆದುದರಿಂದ ಅವರಿಗೆ ತಮ್ಮ ಹೆಂಡತಿಯನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ, ಹಾಗೂ ಆಕೆಯ ಬಗ್ಗೆ ಮೇಲ್ ಶಾವನಿಸ್ಟ್ ಅಲ್ಲದ ಸಂವೇದನೆ ಬೆಳೆಸಿಕೊಂಡಿದ್ದಾರೆ. ಆಕೆ ಅಕಸ್ಮಾತ್ ರೋಗಿಯಲ್ಲದಿದ್ದರೆ ಮಿಕ್ಕ ಎಲ್ಲ ಹಿಂದೂ ಹೆಣ್ಣುಮಕ್ಕಳ ಹಾಗೆ ಗಂಡನ ಸೇವೆ ಮಾಡುತ್ತಾ ಮಕ್ಕಳನ್ನು ಹೇರುತ್ತಾ ತನ್ನ ಜೀವವನ್ನು ಸವೆಯುತ್ತಿದ್ದಳು, ಮತ್ತು ಪ್ರಾಣೇಶಾಚಾರ್ಯರು ಮಿಕ್ಕ ಎಲ್ಲಾ ಪೌರೋಹಿತ ವರ್ಗದ ಬ್ರಾಹ್ಮಣರ ಹಾಗೆ ಸೂತ್ರಬದ್ಧವಾದ ಕೌಟುಮ್ಬಿಕ ಜೀವನ ನಡೆಸುತ್ತಿದ್ದರು. ಪ್ರಾಣೇಶಾಚಾರ್ಯರ ಹೆಂಡತಿ ರೋಗಿಯಾಗಿದ್ದರಿಂದಲೇ ಅವರಿಬ್ಬರ ಸಂಬಂಧ ಪಕ್ವವಾಯಿತು. ಇದನ್ನೇ ಅಲ್ಲವೇ ಪ್ರಾಣೇಶಾಚಾರ್ಯರು ಹೇಳಿರುವುದು?

   “ಕಾಮದಿಂದ ದೂರವಿರುವುದರಿಂದ ನನ್ನ ವ್ಯಕ್ತಿತ್ವ ಇನ್ನಷ್ಟು ವಿಕಸಿತವಾಗುತ್ತದೆ, ಹದವಾಗುತ್ತದೆ ಎಂಬ ಭಾವ ಹೊಂದಿದ್ದರು.”

   ತಪ್ಪು. ಕಾಮದಿಂದ ದೂರವಿದ್ದುದರಿಂದಲ್ಲ ಪ್ರಾಣೇಶಾಚಾರ್ಯರ ವ್ಯಕ್ತಿತ್ವ ವಿಕಸನವಾಗಿದ್ದು. ರೋಗಿಷ್ಠ ಹೆಂಡತಿಯ ಸೇವೆಯನ್ನು ಮಾಡುವ ಮೂಲಕ ಸೂತ್ರಬದ್ಧವಲ್ಲದ ಕೌಟುಮ್ಬಿಕ ಜೀವನ ನಡೆಸುವುದರಿಂದ ಅವರ ವ್ಯಕ್ತಿತ್ವ ವಿಕಸನವಾಗಿದ್ದು.

   ಗಂಡು-ಹೆಣ್ಣಿನ ನಡುವಿನ ಭಾವನಾತ್ಮಕ ಸಂಬಂಧವನ್ನು ದೈಹಿಕ ಸಂಬಂಧಕ್ಕೆ ಕಟ್ಟು ಹಾಕಿ ಹಿಂದೂ ಧರ್ಮ ತಪ್ಪು ಮಾಡಿದೆ. ಹೆಂಡತಿ ಎಂದರೆ ಗಂಡನ ಲೈಂಗಿಕ ತೃಷೆಯನ್ನು ತೀರಿಸಲು ಇರುವ ಉಪಕರಣ ಎಂಬ ಭಾವನೆ ಸಾಂಪ್ರದಾಯಿಕ ಸಮಾಜದಲ್ಲಿದೆ. ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿ ಇದನ್ನು ಪ್ರಶ್ನಿಸಿದ್ದಾರೆ. ಆಚಾರ್ಯ ಹಾಗೂ ಅವರ ಹೆಂಡತಿಯ ನಡುವಿನ ಸಂಬಂಧ ಭಾವನಾತ್ಮಕವಾದದ್ದು. ಅದಕ್ಕೆ ದೈಹಿಕ ಸಂಬಂಧದ ಹಂಗಿಲ್ಲ. ಆಚಾರ್ಯರ ವೈವಾಹಿಕ ಜೀವನ ಎಷ್ಟೇ ಸಂಕಷ್ಟವಿದ್ದರೂ ಹದವಾಗಿದ್ದು ತನ್ನದೇ ಲಯದಲ್ಲಿ ಸಾಗುತ್ತಾ ಸಾರ್ಥಕತೆಯನ್ನು ಪಡೆಯಲು ಆಚಾರ್ಯರು ಭಾವನಾತ್ಮಕ ಸಂಬಂಧವನ್ನು ಲೈಂಗಿಕ ಸಂಬಂಧದಿಂದ ಪ್ರತ್ಯೇಕಗೊಳಿಸಿದ್ದೇ ಕಾರಣ.

   ಆಚಾರ್ಯರು ಕಾಮದಿಂದ ದೂರವಿದ್ದದ್ದು ಹಿಂದೂ ಸಾಂಪ್ರದಾಯಿಕ ಸಮಾಜದ ಕಟ್ಟುಪಾಡುಗಳಿಗೆ ಅಂಜಿ. ಆಚಾರ್ಯರ ಬದುಕು ಹೆಣ್ಣಿನೊಂದಿಗೆ ಭಾವನಾತ್ಮಕ ಸಂಬಂಧವಿಟ್ಟುಕೊಂಡು ಹದವಾಗಿದ್ದರೂ ಅವರ ಲೈಂಗಿಕ ಬದುಕು ಬಿಸಿಲಿನಲ್ಲಿ ಒಣಗಿದ ಮರಳಿನಂತೆ ಇತ್ತು. ಚಂದ್ರಿ ಎರೆದ ನೀರಿನಿಂದ ಅದು ತುಸು ತಂಪಾಯಿತು. ಹಿಂದೂ ಹೆಣ್ಣಿನ ಸ್ಟೀರಿಯೋಟೈಪ್ ಮಾದರಿಗಳನ್ನು ಅನಂತಮೂರ್ತಿ ಆಚಾರ್ಯರ ಪತ್ನಿ ಹಾಗೂ ಚಂದ್ರಿ ಪಾತ್ರಗಳ ಮೂಲಕ ಮುರಿದಿದ್ದಾರೆ.

   ಉತ್ತರ
   • Nagshetty Shetkar
    ಸೆಪ್ಟೆಂ 18 2014

    ವಾಳವಿ ಮೇಡಂ ಈಗೇಕೆ ಹೀಗೇಕೆ ಮೌನವಾಗಿದ್ದಾರೆ?!

    ಉತ್ತರ
 9. ಸೆಪ್ಟೆಂ 16 2014

  ಅನರ್ಥ ಮೂರ್ತಿಯ ಬಗ್ಗೆ ನಿರರ್ಥಕ ಚರ್ಚೆ !

  ಉತ್ತರ
 10. M A Sriranga
  ಸೆಪ್ಟೆಂ 17 2014

  ಸಿಂಹ ಅವರಿಗೆ— ಜೀವನದ ಅರ್ಥ ಅನರ್ಥಗಳ ಶೋಧವೇ ಸಾಹಿತ್ಯದ ವಸ್ತು. ಇದುವರೆಗೆ ಈ ಲೇಖನದ ಬಗ್ಗೆ ನಡೆದ ಚರ್ಚೆ ಅನರ್ಥ ಎಂಬುದು ತಮ್ಮ ಅಭಿಪ್ರಾಯವಾಗಿದ್ದರೆ ಏಕೆ ಮತ್ತು ಹೇಗೆ ಅನರ್ಥ ಎಂದು ವಿವರವಾಗಿ ಬರೆಯುವುದು,ಪ್ರತಿಕ್ರಿಯಿಸುವುದು ಉತ್ತಮವಾದ ಮಾರ್ಗ. ಕೇವಲ ಅಕ್ಷರ ಮತ್ತು ಪದಗಳ ವಕ್ರ ತುಂಡೋಕ್ತಿಯಿಂದ (pun) ಏನೂ ಪ್ರಯೋಜನವಿಲ್ಲ.

  ಉತ್ತರ
 11. udaya dharmasthala
  ಸೆಪ್ಟೆಂ 25 2014

  People should be free from illussons. They should be more practicle.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments