ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 14, 2014

28

ಧರ್ಮ ಮತ್ತು ಅಂಧತ್ವ

‍ನಿಲುಮೆ ಮೂಲಕ

-ಡಾ ಅಶೋಕ್ ಕೆ ಆರ್.

World_Religionಆಗ ನಾನು ಕಲ್ಬುರ್ಗಿಯಲ್ಲಿ ಓದುತ್ತಿದ್ದೆ. ಗೆಳೆಯನೊಬ್ಬನನ್ನು ಕಾಣುವ ಸಲುವಾಗಿ ಕಲ್ಬುರ್ಗಿಯಿಂದ ಲಿಂಗಸೂರು ಕಡೆಗೆ ಹೋಗುವ ಬಸ್ಸನ್ನೇರಿದೆ. ದಾರಿ ಮಧ್ಯದಲ್ಲಿ ಕುಟುಂಬವೊಂದು ಬಸ್ಸಿನೊಳಗೆ ಬಂತು. ಮಗ, ಸೊಸೆ ಮತ್ತು ಅತ್ತೆ ಎಂಬುದು ಅವರ ಮಾತಿನಿಂದ ಅರಿವಾಗುತ್ತಿತ್ತು. ಅದು ಮುಸ್ಲಿಂ ಕುಟುಂಬವೆಂದು ತಿಳಿದಿದ್ದು ಬುರ್ಖಾ ಧರಿಸಿದ್ದ ಸೊಸೆಯ ಉಡುಪಿನಿಂದ. ಉತ್ತರ ಕರ್ನಾಟಕದ ಕಡೆ (ನಂತರದ ದಿನಗಳಲ್ಲಿ ಕರಾವಳಿ ಭಾಗದಲ್ಲೂ ಕಂಡಂತೆ) ಮುಸ್ಲಿಮರನ್ನು ಅವರ ಮಾತಿನ ದಾಟಿಯಿಂದ ಗುರುತು ಹಿಡಿಯಲಾಗುವುದಿಲ್ಲ ನಮ್ಮ ಹಳೆ ಮೈಸೂರು ಭಾಗದಲ್ಲಿ ಗುರುತಿಸುವಂತೆ, ಮತ್ತು ಬಹುತೇಕ ಎಲ್ಲ ಕನ್ನಡ ಚಿತ್ರಗಳಲ್ಲೂ ತೋರಿಸಿರುವಂತೆ. ಅಂದು ಬಸ್ಸೇರಿದ ಕುಟುಂಬದಲ್ಲಿ ಅತ್ತೆ ಉತ್ತರ ಕರ್ನಾಟಕದ ಕಡೆಯ ಸೀರೆಯನ್ನು ಉಟ್ಟಿದ್ದರು, ಸೊಸೆ ಬುರ್ಖಾಧಾರಿಯಾಗಿದ್ದರು.

ಕಳೆದೊಂದು ವಾರದಿಂದ ಅಂತರ್ಜಾಲ ತಾಣಗಳಲ್ಲಿ ಬುರ್ಖಾದ ಬಗೆಗಿನ ಚರ್ಚೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಮೇಲಿನ ಘಟನೆ ನೆನಪಾಯಿತು. ‘ನಾನು ವಿವಾದದ ವಿಷಯಗಳನ್ನು ಎತ್ತಿಕೊಂಡು ಮಾತನಾಡುತ್ತಿದ್ದೇನೋ ಅಥವಾ ನಾನು ಮಾತನಾಡಿದ್ದೆಲ್ಲವೂ ವಿವಾದವಾಗುತ್ತೋ ಗೊತ್ತಿಲ್ಲ’ ಎಂದೇ ಮಾತುಗಳನ್ನಾರಂಭಿಸಿದ್ದ ದಿನೇಶ್ ಅಮೀನ್ ಮಟ್ಟುರವರ ಮಾತುಗಳು ಮತ್ತೆ ಚರ್ಚೆಗಳೊಂದಷ್ಟನ್ನು ಹುಟ್ಟುಹಾಕಿವೆ. ಪತ್ರಕತ್ರ ಬಿ.ಎಂ.ಬಷೀರ್‍ರವರ “ಬಾಡೂಟದ ಜೊತೆ ಗಾಂಧಿ ಜಯಂತಿ” ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ. ಅವರು ಮೋದಿಯ ಬಗ್ಗೆ, ಮಾಧ್ಯಮದ ಬಗ್ಗೆ, ಮಂಗಳೂರಿನ ಕೋಮು ಸಾಮರಸ್ಯದ ಬಗ್ಗೆ, ಆ ಕೋಮು ಸಾಮರಸ್ಯದಿಂದಲೇ ಹುಟ್ಟಿದ ಕೋಮುವಾದತನದ ಬಗ್ಗೆ, ಕೋಮುವಾದಿಗಳ ಅಟ್ಟಹಾಸದ ನಡುವೆಯೇ ನಿಜ ಜಾತ್ಯತೀತ ಮನೋಭಾವದ ಧರ್ಮಸಹಿಷ್ಣುಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಕೊನೆಗೆ ಅವರ ಭಾಷಣ ಚರ್ಚೆಗೊಳಗಾಗುತ್ತಿರುವುದು ಅವರು ಪ್ರಸ್ತಾಪಿಸಿದ ಬುರ್ಖಾ ಪದ್ಧತಿಯ ಬಗೆಗೆ ಮಾತ್ರ! ಅವರು ಬುರ್ಖಾ ವಿಷಯಕ್ಕೆ ಬರುವುದಕ್ಕೆ ಮೊದಲು ಮುಸ್ಲಿಂ ಸಮಾಜದ ಒಳಬೇಗುದಿಗಳನ್ನು ಸಮಾಜದ ಮುಂದೆ ತೆರದಿಡುವ ಕೆಲಸವನ್ನು ಬೋಳುವಾರ ಮೊಹಮದ್, ಸಾರಾ ಅಬೂಬಕ್ಕರ್, ಫಕೀರ್ ಮೊಹಮದ್ ಕಟ್ಪಾಡಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಹಾಕಿದ ದಾರಿಯಲ್ಲಿ ಜ್ಯೋತಿಯನ್ನಿಡಿದು ನಡೆಯುವವರ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳನ್ನು ಹೇಳಿದ್ದಾರೆ. ಬಿ.ಎಂ.ಬಷೀರ್ ಸ್ವಲ್ಪ ಸಾಫ್ಟ್ ಕಾರ್ನರಿನಲ್ಲಿ ಬರೆಯೋದು ಜಾಸ್ತಿ. ಮುಸ್ಲಿಂ ಸಮುದಾಯದ ತಲ್ಲಣಗಳು ಈ ಪುಸ್ತಕದಲ್ಲಿ ಕಾಣಸಿಗುತ್ತಿಲ್ಲ ಎಂದು ಸಲಹೆಯನ್ನು ಕೊಟ್ಟಿದ್ದಾರೆ. ಮುಸ್ಲಿಮನಾದವನು ಆ ಸಮುದಾಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯ ಎಂಬುದು ಎಷ್ಟು ಸತ್ಯವೋ ಮುಸ್ಲಿಂ ಲೇಖಕನಾದ ಮಾತ್ರಕ್ಕೆ ಮುಸ್ಲಿಂ ಸಮುದಾಯದ ತಲ್ಲಣಗಳನ್ನಷ್ಟೇ ಬರೆಯಬೇಕು ಎಂಬುದೂ ಒಪ್ಪತಕ್ಕ ವಿಷಯವೇನಲ್ಲ.

ಬುರ್ಖಾದ ವಿಷಯವಾಗಿ ನಡೆಯುತ್ತಿರುವ ಚರ್ಚೆಗಳು ಬಹುಶಃ ಸಮಾಜ ನಡೆಯುತ್ತಿರುವ ದಾರಿಯನ್ನು ತೋರಿಸುತ್ತಿವೆಯೇನೋ. ಇಲ್ಲಿಯವರೆಗೆ ದಿನೇಶ್ ಅಮೀನ್ ಮಟ್ಟು ತಮ್ಮ ಲೇಖನಗಳಿಂದ, ವಿಚಾರಗಳಿಂದ ಹಿಂದೂ ಧರ್ಮಾಂಧರ ಟೀಕೆಗೆ ಗುರಿಯಾಗಿದ್ದರೆ, ಈಗ ಬುರ್ಖಾದ ವಿಷಯವಾಗಿ ಚರ್ಚೆಗೆ ನಾಂದಿ ಹಾಡಿದ ಕಾರಣ ಮುಸ್ಲಿಂ ಧರ್ಮಾಂಧರ ಟೀಕೆಗೆ ಗುರಿಯಾಗುತ್ತಿದ್ದಾರೆ. ದಿನೇಶರನ್ನು ಮತ್ತವರನ್ನು ಬೆಂಬಲಿಸುತ್ತಿರುವವರನ್ನು ‘ಅಲ್ಲಾಹುನ ವಿರೋಧಿಗಳು’ ‘ಆರ್ರೆಸ್ಸಿನ ವಕ್ತಾರರು’ ಇನ್ನಿತರ ಚರ್ವಿತಚರ್ಣ ಮಾತುಗಳಿಂದ ಹೀಯಾಳಿಸುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಧರ್ಮಾಂಧರು ತಮ್ಮ ಧರ್ಮದ ಮೇಲೆ ಸ್ವಲ್ಪ ಮಟ್ಟಿಗೆ ಟೀಕೆ ಎದುರಾದರೂ ಒಂದೇ ರೀತಿಯಲ್ಲಿ ವರ್ತಿಸುತ್ತಾರೆನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಚರ್ಚೆಗೆ, ಪ್ರಶ್ನೆಗೆ ಒಡ್ಡಿಕೊಳ್ಳದ ಧರ್ಮ ತನ್ನ ಸ್ಥಗಿತತೆಯಿಂದಾಗಿಯೇ ಅಸ್ತಿತ್ವವನ್ನು ಕಳೆದುಕೊಳ್ಳುವ, ಅದಕ್ಕಿಂತಲೂ ಹೆಚ್ಚಾಗಿ ಅರ್ಥ ಕಳೆದುಕೊಳ್ಳುವ, ಅಪಾರ್ಥವಾಗಿ ಅನರ್ಥಕ್ಕೆಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದ್ಯಾಕೆ ಈ ಧರ್ಮಾಂಧರಿಗೆ ಅರಿವಾಗುವುದಿಲ್ಲ.

ಮೇಲ್ನೋಟಕ್ಕೆ ಹಿಂದೂ ಧರ್ಮ ಉದಾರವಾದಿಯಾಗಿಯೂ, ಎಲ್ಲಾ ತರಹದ ಪ್ರಶ್ನೆಗಳಿಗೆ ಉತ್ತರವನ್ನೀಯಲು ಪ್ರಯತ್ನಿಸುವ ಧರ್ಮವಾಗಿಯೂ ಕಾಣುತ್ತದೆ. ಅದು ಭಾಗಶಃ ಸತ್ಯ ಮತ್ತು ಭಾಗಶಃ ಸುಳ್ಳು. ಹಿಂದೂ ಧರ್ಮದ ಕೆಲವು ಬದಲಾವಣೆಗಳೂ ಜಾರಿಯಾಗಲು ಶತಮಾನಗಳೇ ಹಿಡಿದಿವೆ, ಶತಮಾನಗಳು ಉರುಳಿದರೂ ಮತ್ತಷ್ಟು ಕಂದಾಚಾರಗಳು ಹಾಗೆಯೇ ಉಳಿಯುತ್ತವೆ. ಧರ್ಮ ವಿರೋಧಿಗಳನ್ನು ಮಟ್ಟವಾಕುವಲ್ಲಿ ಹಿಂದೂ ಧರ್ಮದ ವಕ್ತಾರರೆನ್ನಿಸಿಕೊಂಡವರು ತಮ್ಮ ಪಾಲಿನ ಕ್ರೌರ್ಯ ಮೆರೆದಿದ್ದಾರೆ. ಆ ಕ್ರೌರ್ಯದ ಫಲವಾಗಿಯೇ ಭಾರತದಲ್ಲಿ ಹುಟ್ಟಿಯೂ ಬೌದ್ಧ ಧರ್ಮ ನೆಲೆಯನ್ನರಸಿ ಬೇರೆಡೆಗೆ ತೆರಳಿದ್ದು. ಇದೆಲ್ಲದರ ನಡುವೆಯೂ ಪ್ರಶ್ನೆ ಕೇಳಿದವರನ್ನೆಲ್ಲಾ, ಸಂಪ್ರದಾಯವನ್ನು ಚರ್ಚೆಯ ನಿಕಷಕ್ಕೆ ಒಡ್ಡಿದವರನ್ನೆಲ್ಲಾ ಅಂತ್ಯ ಕಾಣಿಸದ ಕಾರಣದಿಂದ ಲಿಂಗಾಯತ ಧರ್ಮ ತಲೆಯೆತ್ತಲು ಸಾಧ್ಯವಾಯಿತು. ಏಕದೇವಕ್ಕೆ ಸೀಮಿತವಾಗದೆ ತನ್ನ ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ದೇವರನ್ನು ನಿರ್ಮಿಸಿಕೊಂಡು ಪೂಜಿಸಿದ್ದೂ ಕೂಡ ಹಿಂದೂ ಧರ್ಮದಲ್ಲಿ ಸ್ವಲ್ಪ ಮಟ್ಟಿಗಿನ ಉದಾರಿತನ ಉಳಿದುಕೊಳ್ಳಲು ಕಾರಣವಾಯಿತೆನ್ನಬಹುದು.

ಏಕದೇವತೆಯ ಆಧಾರದಲ್ಲೇ ಹುಟ್ಟಿಕೊಂಡ ಕ್ರಿಶ್ಚಿಯಾನಿಟಿ, ಇಸ್ಲಾಂನಂತಹ ಧರ್ಮಗಳಲ್ಲಿ ಆ ಕಾರಣದಿಂದಾಗಿಯೇ ಅಸಹಿಷ್ಣುತೆ ಹೆಚ್ಚಾಗಿಬಿಟ್ಟಿತಾ? ಯಾರೋ ರಾಮನಿಗೆ ಅವಹೇಳನ ಮಾಡುವಂತಹ ಮಾತನ್ನಾಡಿದರೆ ಅದು ಅನೇಕ ‘ಹಿಂದೂ’ಗಳಿಗೆ ವಿಚಲಿತವನ್ನುಂಟುಮಾಡುವ ಸಂಗತಿಯೆನ್ನಿಸುವುದೇ ಇಲ್ಲ. ಯಾಕೆಂದರೆ ಅನೇಕರಿಗೆ ರಾಮ, ಕೃಷ್ಣ ರಾಮಾಯಣ, ಮಹಾಭಾರತದ ಒಂದು ಪಾತ್ರವಷ್ಟೇ, ಮನೆ ದೇವರು ಬೇರೆಯೇ ಇರುತ್ತಾರೆ. ಕ್ರಿಶ್ಚಿಯಾನಿಟಿ, ಇಸ್ಲಾಂನಲ್ಲಿ ಪ್ರಶ್ನೆ ಕೇಳುವ ಹಾಗೇ ಇಲ್ಲ ಎಂದ್ಹೇಳುವುದೂ ಭಾಗಶಃ ಸತ್ಯವಾಗುತ್ತದಷ್ಟೇ. ಇಸ್ಲಾಂ ಧರ್ಮದ ಹುಟ್ಟಿನ ಇತಿಹಾಸವನ್ನು ಗಮನಿಸಿದರೆ ಅದು ಕ್ರಿಶ್ಚಿಯಾನಿಟಿಯದೇ ಮುಂದುವರೆದ ರೂಪ, ಮೊಹಮದ್ ಪೈಗಂಬರರಂತೆ ಜೀಸಸ್ ಕೂಡ ದೇವರ ಪ್ರವಾದಿ. ಪೈಗಂಬರರ ಮನಸ್ಸಿನಲ್ಲಿ ಅಲ್ಲಿಯವರೆಗಿದ್ದ ಧರ್ಮಗಳ ಬಗ್ಗೆ ಚರ್ಚೆ ನಡೆಯದಿದ್ದಲ್ಲಿ, ಪ್ರಶ್ನೆ ಮೂಡದಿದ್ದಲ್ಲಿ ಇಸ್ಲಾಂ ಧರ್ಮ ರೂಪುಗೊಳ್ಳುತ್ತಿತ್ತೆ? ಹಿಂದಿನ ಧರ್ಮಗಳ, ಆಚರಣೆಗಳ ವಿರುದ್ಧ ಜೀಸಸ್ ಪ್ರಶ್ನೆ ಮಾಡದಿದ್ದಲ್ಲಿ ಕ್ರಿಶ್ಚಿಯಾನಿಟಿ ಹುಟ್ಟುತ್ತಿತ್ತೇ? ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಧರ್ಮಗಳ ಜನನವಾದ ನಂತರವೂ ಅದೇ ಧರ್ಮದೊಳಗೆ ಪ್ರಶ್ನೆಗಳು ಹುಟ್ಟದೆ, ಚರ್ಚೆಗಳಾಗದೆ ಇದ್ದಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಾಗಲೀ ಇಸ್ಲಾಂ ಧರ್ಮದಲ್ಲಾಗಲೀ ಅಷ್ಟೊಂದು ಪಂಗಡಗಳು ಹುಟ್ಟುಪಡೆಯುತ್ತಿತ್ತೆ? ಬುರ್ಖಾದ ಬಗೆಗೆ ಚರ್ಚೆಯೇ ಬೇಡವೆನ್ನುವವರು ಒಮ್ಮೆ ಯೋಚಿಸಬೇಕು.

ಬುರ್ಖಾದ ಬಗ್ಗೆ ಮುಸ್ಲಿಮರಷ್ಟೇ ಚರ್ಚಿಸಬೇಕು ಉಳಿದರಿಗ್ಯಾಕೆ ಅದರ ಗೊಡವೆ ಎಂಬ ಪ್ರಶ್ನೆ ಅನೇಕರದ್ದು. ಒಂದು ಸಮಾಜದಲ್ಲಿ ಎಲ್ಲ ಜಾತಿ – ಧರ್ಮದವರೂ ಬಾಳುತ್ತಿರುವಾಗ ಒಂದು ಧರ್ಮದ ಜನರ ಕಷ್ಟ ಸುಖಗಳಿಗೆ ಮತ್ತೊಂದು ಧರ್ಮದವರು ಆಗುತ್ತಿರುವಾಗ ಒಂದು ಧರ್ಮದ ಬಗೆಗೆ ಮತ್ತೊಂದು ಧರ್ಮದವರು ಚರ್ಚಿಸುವುದು ಮತ್ತು ಆ ಚರ್ಚೆಗೆ, ಚರ್ಚೆಗೊಳಪಡಲ್ಪಟ್ಟ ಧರ್ಮದ ಸದಸ್ಯರು ಬೆಂಬಲಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ನಮ್ಮ ಸಮಾಜ ಅನಾರೋಗ್ಯದ ಮಡುವಿನಲ್ಲಿ ಹೊರಳಾಡುತ್ತಿದೆಯೆನ್ನಿಸಿದರೂ ಚರ್ಚೆಗೆ ಅವಕಾಶವಿನ್ನೂ ಇರುವ ಕಾರಣ ಇದು ಇತರೆ ಎಷ್ಟೋ ಸಮಾಜಗಳಿಗಿಂತ ಆರೋಗ್ಯಕರವಾಗಿಯೇ ಇದೆ. ಮುಸ್ಲಿಂ ಹುಡುಗರು ಧರಿಸುವ ದಿರಿಸಿನ ಬಗ್ಗೆ ನಡೆಯದ ವಿವಾದ ಮಹಿಳೆಯರು ತೊಡಬೇಕೆನ್ನಲಾಗುವ ಬುರ್ಖಾದ ವಿಷಯವಾಗಿ ಯಾಕಾಗುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಅದು ಇಸ್ಲಾಂ ಇರಲಿ, ಕ್ರಿಶ್ಚಿಯಾನಿಟಿ ಇರಲಿ, ಹಿಂದೂ ಧರ್ಮವಿರಲಿ ‘ಧರ್ಮ ರಕ್ಷಣೆಯ’ ನೆಪದಲ್ಲಿ, ‘ಸಂಸ್ಕೃತಿಯ ರಕ್ಷಣೆಯ’ ನೆಪದಲ್ಲಿ ಹೆಚ್ಚು ತೊಂದರೆಗೊಳಗಾಗುವುದು, ಧರ್ಮ – ಸಂಸ್ಕೃತಿ ‘ರಕ್ಷಿಸುವ’ ಹೊಣೆಗಾರಿಕೆ ಹೆಚ್ಚಾಗಿ ತಗುಲಿಕೊಳ್ಳುವುದು ಮಹಿಳೆಗೆ. ಇಸ್ಲಾಂ ಹುಟ್ಟಿದ ನಾಡಿನಲ್ಲಿ ಅಲ್ಲಿನ ಪುರುಷರು ಧರಿಸುವ ಉದ್ದುದ್ದದ ಪೈಜಾಮ ಥರಹದ ಧಿರಿಸನ್ನು ಅಬ್ಬಬ್ಬಾ ಎಂದರೆ ಹಬ್ಬದ ದಿನಗಳಲ್ಲಿ ಬಿಟ್ಟು ಉಳಿದ ದಿನಗಳಲ್ಲಿ ಎಷ್ಟು ಮುಸ್ಲಿಮರು ಧರಿಸುತ್ತಾರೆ?. ಮಹಿಳೆಯರು ಸೀರೆಯನ್ನಷ್ಟೇ ಧರಿಸಬೇಕು ಎಂದಬ್ಬರಿಸುವವರ್ಯಾಕೆ ಜುಬ್ಬಾ ಪೈಜಾಮ ಧರಿಸದೆ ಪಾಶ್ಚಿಮಾತ್ಯರ ಬಳುವಳಿಯಾದ ಪ್ಯಾಂಟು ಶರ್ಟುಗಳನ್ನು ಧರಿಸುತ್ತಾರೆ? ಗಂಡು ಮಕ್ಕಳು ಪೋಲಿ ತಿರುಗಿದರೂ ಸರಿ ಹೆಣ್ಣು ಮಕ್ಕಳು ಆ ಪೋಲಿ ಗಂಡು ಮಕ್ಕಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾ ಸಂಸ್ಕೃತಿಯ ರಕ್ಷಣೆ ಮಾಡಬೇಕು! ಇದು ಹೆಚ್ಚು ಕಡಿಮೆ ಎಲ್ಲ ಧರ್ಮಗಳ ಮನಸ್ಥಿತಿ. ನನ್ನ ಓದಿನ ಪರಿಧಿಯಿಂದ ಅರಿವಾದಂತೆ ಇಸ್ಲಾಂ ಧರ್ಮ ಉಳಿದೆಲ್ಲ ಧರ್ಮಗಳಿಗಿಂತ ಹೆಚ್ಚು ಡೆಮಾಕ್ರಟಿಕ್ ಆಗಿದ್ದ ಧರ್ಮ, ಹೆಣ್ಣುಮಕ್ಕಳನ್ನು ಪುರುಷರಿಗೆ ಸರಿಸಮಾನವಾಗಿ ಕಂಡ ಧರ್ಮ. ಆ ಧರ್ಮವೂ ಕೂಡ ಉಳಿದನೇಕ ಧರ್ಮಗಳಂತೆ ಪುರುಷ ‘ಪೌರುಷಕ್ಕೆ’ ಶರಣಾಗುತ್ತ ಮಹಿಳೆಯರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣಲು ಪ್ರಾರಂಭಿಸಿತು. ಇನ್ನಿತರ ಧರ್ಮಗಳ ವಕ್ತಾರರಂತೆ ಈ ಮನಸ್ಥಿತಿಗೆ ಹೆಣ್ಣುಮಕ್ಕಳ ರಕ್ಷಣೆಯ ಸಲುವಾಗಿ ಎಂಬ ಸಾಲುಗಳನ್ನು ಉದುರಿಸುತ್ತದೆ!

ಧರ್ಮವೆಂದರೆ ಕೇವಲ ಬಟ್ಟೆಯೊಂದರಿಂದಡಗಿ ಕುಳಿತ ಅಧೈರ್ಯವಂತ ಜೀವವೇ? ಬಟ್ಟೆಗಳೇ ಸೃಷ್ಟಿಯಾಗದ ಕಾಲದಿಂದಲೂ ಧರ್ಮವೊಂದು ಅಸ್ತಿತ್ವದಲ್ಲಿದೆ. ಅದು ಮಾನವ ಧರ್ಮ. ಸ್ಥಳೀಯ ಅನುಕೂಲತೆಗೆ, ಅಲ್ಲಿನ ಪ್ರಕೃತಿ ಹುಟ್ಟಿಸಿದ ಭೀತಿಗೆ – ಪ್ರೀತಿಗೆ ಮಾನವ ಧರ್ಮವೆಂಬುದು ಸಾವಿರಾರು ಟಿಸಿಲುಗಳಾಗಿ ಚಿಗುರೊಡೆದಿವೆ. ಆ ಚಿಗುರುಗಳಲ್ಲಿ ಬಹುತೇಕವು ತನ್ನ ಮೂಲವಾದ ಮಾನವ ಧರ್ಮಕ್ಕೆ ಮರ್ಮಾಘಾತವನ್ನೀಯುತ್ತಿವೆ. ಬುರ್ಖಾವೆಂಬುದು ಕಂದಾಚಾರವೇನಲ್ಲ, ಬುರ್ಖಾ ಧರಿಸುವುದು ಎಷ್ಟರಮಟ್ಟಿಗೆ ಮುಸ್ಲಿಂ ಮಹಿಳೆಯ ಹಕ್ಕೋ, ಬುರ್ಖಾ ಧರಿಸದಿರುವುದೂ ಆಕೆಯ ಹಕ್ಕೇ ಹೌದು ಎಂಬುದನ್ನು ಮರೆಯಬಾರದು. ನನ್ನ ವಿದ್ಯಾರ್ಥಿಗಳಲ್ಲನೇಕರು ಮುಸ್ಲಿಮರಿದ್ದಾರೆ. ಬುರ್ಖಾ ಧರಿಸಿ ಕಾಲೇಜಿನವರೆಗೆ ಬಂದು ಕಾಲೇಜಿನಲ್ಲಿ ತಲೆಯ ಮೇಲೊಂದು ವಸ್ತ್ರವನ್ನು (ಹಿಜಾಬನ್ನು) ಧರಿಸುವವರಿದ್ದಾರೆ. ಇದ್ಯಾವುದನ್ನೂ ಧರಿಸದೆ ಬರುವವರ ಸಂಖೈಯೂ ಕಡಿಮೆಯಿಲ್ಲ. ಧರಿಸದವರಿಗೆ ಅವರ ಗೆಳತಿಯರು ಮತ್ತು ಮುಸ್ಲಿಂ ಹುಡುಗರು ಕೆಲವೊಮ್ಮ ಹೀಯಾಳಿಸುತ್ತಲೂ ಇದ್ದರು, ಕೆಲವರು ಹೀಯಾಳಿಕೆಗೆ ಬಗ್ಗಲಿಲ್ಲ, ಕೆಲವರು ಹೀಯಾಳಿಕೆ ತಡೆಯಲಾಗದೆ ಧರಿಸಲಾರಂಭಿಸಿದರು. ಅವರ ವ್ಯಕ್ತಿತ್ವವನ್ನು ಬದಲಿಸದ ಈ ಬದಲಾವಣೆಯಿಂದ ಧರ್ಮಕ್ಕಾಗಲೀ ಆಕೆಗಾಗಲೀ ಯಾವ ಅನುಕೂಲವಾಯಿತು? ಚಿಕ್ಕಂದಿನಿಂದಲೂ ಹೀಗೆಯೇ ಇರಬೇಕು ಇಂಥದ್ದೇ ಮಾಡಬೇಕು ಯಾವುದನ್ನೂ ಪ್ರಶ್ನಿಸಕೂಡದು (ಮನೆಯಲ್ಲಿ ಪ್ರತಿಯೊಂದು ಸಂಪ್ರದಾಯಕ್ಕೂ ಆಚರಣೆಗೂ ಪ್ರಶ್ನೆ ಮೇಲೆ ಪ್ರಶ್ನೆ ಹಾಕುವ ನನ್ನಂಥವರಿಗೆ ‘ಸುಮ್ನಿರು ಎಷ್ಟು ತಲೆ ತಿಂತೀಯಾ’ ಎಂಬ ಬೈಗುಳ ಖಾಯಂ!) ಎಂಬುದನ್ನು ತಲೆಗೆ ತುಂಬಿದ ಕಾರಣ ಒಂದು ಸಂಪ್ರದಾಯವನ್ನು ಆಚರಿಸದವರು, ಪ್ರಶ್ನಿಸುವವರು ಧರ್ಮವಿರೋಧಿಗಳಾಗಿ ಕಾಣಲಾರಂಭಿಸುತ್ತಾರೆ.

ಧರ್ಮಗಳುಟ್ಟುವುದಕ್ಕೆ ಮುಂಚಿನಿಂದಲೂ ಮನುಷ್ಯರಿದ್ದಾರೆ ಎಂಬ ಸಾಮಾನ್ಯ ಜ್ಞಾನವಿಲ್ಲದಿದ್ದಾಗ ಮಾತ್ರ ‘ಧರ್ಮದೊಳಗಿನ ಕಂದಾಚಾರಗಳನ್ನು ಒಣ ಆಚರಣೆಗಳನ್ನು ವಿರೋಧಿಸೋಣ’ ಎಂದು ಹೇಳಿದ ಮಾತುಗಳೂ ಕೂಡ ಧರ್ಮವಿರೋಧಿ ನಡುವಳಿಕೆಯಾಗಿ ಕಾಣುವುದು. ಪ್ರಶ್ನೆಗಳೇ ಮೂಡದಿದ್ದ ಪಕ್ಷದಲ್ಲಿ ಇವತ್ತಿದ್ದ ಧರ್ಮಗಳ್ಯಾವೂ ಇರುತ್ತಿರಲಿಲ್ಲ. ಸಾವಿರ ವರುಷದ ನಂತರ ಉತ್ತಮವೋ ಅಧಮವೋ ಆದ ಧರ್ಮ ಹುಟ್ಟುವುದಕ್ಕೂ ಪ್ರಶ್ನೆಗಳಿರಲೇಬೇಕು. ಧರ್ಮವನ್ನು ಸ್ಥಗಿತಗೊಳಿಸುವ ಹುನ್ನಾರದಿಂದಲೇ ಧರ್ಮವನ್ನುಟ್ಟು ಹಾಕಿದವರನ್ನು ಧಾರ್ಮಿಕ ಸರಪಳಿಗಳಿಂದ ಬಂಧಿಸಿ ಅವರ ವಿಚಾರಗಳನ್ನು ಮರೆತು ಕೆಲವು ಆಚರಣೆಗಳನ್ನಷ್ಟೇ ಧರ್ಮಕ್ಕೆ ಸೀಮಿತಗೊಳಿಸುವ ಕಾರ್ಯ ಸಾಂಗೋಸಾಂಗವಾಗಿ ಬಹುತೇಕ ಎಲ್ಲಾ ಧರ್ಮದಲ್ಲೂ ನಡೆಯುತ್ತಿರುವುದು. ಎಲ್ಲರೂ ಸಮಾನರಾಗಬೇಕೆನ್ನುವ ಆಶಯದಿಂದ ಲಿಂಗಾಯತ ಧರ್ಮ ಹುಟ್ಟುಹಾಕಿದ ಬಸವಣ್ಣ ಪ್ರತಿಮೆಗಳಿಗ ಸೀಮಿತವಾಗಿ, ಬ್ರಾಹ್ಮಣರ ನಂತರ ನಮ್ಮದೇ ಶ್ರೇಷ್ಠ ಜಾತಿ ಎಂದು ಲಿಂಗಾಯತರಲ್ಲನೇಕರು ಪರಿಭಾವಿಸುವುದಕ್ಕೆ, ಪ್ರತಿಯೊಬ್ಬನಿಗೂ ಬುದ್ಧನಾಗುವುದಕ್ಕೆ ಸಾಧ್ಯವಿದೆ ಪ್ರತಿಯೊಬ್ಬನೂ ಬುದ್ಧನಾಗುವುದಕ್ಕೆ ತನ್ನದೇ ಸ್ವಂತ ದಾರಿ ಹುಡುಕಿಕೊಳ್ಳಬೇಕು ಎಂದ್ಹೇಳಿದ ಬುದ್ಧನನ್ನೇ ಬೌದ್ಧ ಧರ್ಮಕ್ಕೆ ಸೀಮಿತವಾಗಿಸಿದ್ದಕ್ಕೆ, ದೇವರನ್ನು ಗೆಳೆಯನನ್ನಾಗಿ ಕಾಣುವ, ಹೊಗಳುವ – ತೆಗಳುವ ಸೂಫಿ ಪದ್ಧತಿಯನ್ನು ವಿರೋಧಿಸುವುದಕ್ಕೆ ಧರ್ಮ ಸ್ಥಗಿತವಾಗಿರಬೇಕೆಂಬ ಹುನ್ನಾರವೇ ಕಾರಣವೆಂದರೆ ತಪ್ಪಾಗಲಾರದು.

ಕೆಲವು ದಿನಗಳ ಹಿಂದೆ ಪತ್ರಕರ್ತ ಮೊಹಮ್ಮದ್ ಇರ್ಷಾದ್ ತಮ್ಮ ಫೇಸ್ ಬುಕ್ ಪುಟದಲ್ಲಿ ಖ್ಯಾತ ಇಸ್ಲಾಮೀ ಪ್ರಗತಿಪರ ಚಿಂತಕ ಜಿಯಾವುದ್ದೀನ್ ಸರ್ದಾರ್ ಅವರ “ಸ್ವರ್ಗ ಸಾಧನೆಯ ಉತ್ಕಟ ಬಯಕೆ” ಸಂದೇಹಿಮುಸ್ಲಿಮನ ಯಾತ್ರೆಗಳು ಪುಸ್ತಕದಿಂದ ಆಯ್ದ ಭಾಗವನ್ನು ಹಾಕಿದ್ದರು –

“ಜಿಯಾವುದ್ದೀನ್ ಸರ್ದಾರ್ ಪಾಕಿಸ್ಥಾನದ ಮದರಸಾದ ವಿದ್ಯಾರ್ಥಿಯೊಬ್ಬನ ಜೊತೆಗೆ ಚರ್ಚಿಸುತ್ತಾ …… ವಿದ್ಯಾರ್ಥಿ ನೀವು ಶಿಯಾನಾ? ಎಂದು ಕೇಳಿದ .. ನಾನು ಅಲ್ಲ ಎಂದೆ. ‘ಶಿಯಾಗಳು ಮುಸ್ಲಿಮರಲ್ಲ. ಅವರುನಿಜವಾದ ಇಸ್ಲಾಮೀ ಗಣರಾಜ್ಯಕ್ಕೆ ಸೇರುವುದಿಲ್ಲ” ಎಂದು ಆತ ಯಾವುದೇ ಹಿಂಜರಿಕೆ ಇಲ್ಲದೆ ಹೇಳಿದ. ನೀವು ಒಳ್ಳೆಯ ಮುಸ್ಲಿಮರೇ? ಎಂದು ಆತ ಕೇಳಿದ ನಾನೊಬ್ಬ ಮುಸ್ಲಿಮ್. ಆದ್ರೆ ಒಳ್ಳೆಯ ಮುಸ್ಲಿಮನೋ ಹೇಗೆಎಂದು ನನಗೆ ಗೊತ್ತಿಲ್ಲ” ಎಂದೆ. ನೀವು ಮುಸ್ಲಿಮರಾಗಿದ್ದರೆ ನಿಮಗೆ ಗಡ್ಡವೇಕಿಲ್ಲ? ಯಾಕೆಂದರೆ ಮುಸ್ಲಿಮರಾಗಲು ಗಡ್ಡದ ಅವಶ್ಯಕತೆಯಿಲ್ಲ. ಇಲ್ಲ, ಅದು ಪ್ರವಾದಿಗಳ ಸುನ್ನಾ (ಸಂಪ್ರದಾಯದ ಮುಂದುವರಿಕೆ).ಯಾರು ಪ್ರವಾದಿಗಳ ಸುನ್ನಾವನ್ನು ಅನುಸರಿಸುವುದಿಲ್ಲವೋ ಅವರು ಮುಸ್ಲಿಮರಲ್ಲ’
‘ಹಾಗಾದರೆ ನೀವ್ಯಾಕೆ ಒಂಟೆಗಳ ಮೇಲೆ ಓಡಾಡುತ್ತಿಲ್ಲ? ನನ್ನ ಮಾತಿನಿಂದ ಆತ ಗಲಿಬಿಲಿಗೊಂಡಿದ್ದ ‘ಏನು ನೀವು ಹೇಳುತ್ತಿರುವುದು? ‘ ಒಂಟೆಯ ಮೇಲೆ ಓಡಾಡುವುದು ಕೂಡಾ ಸುನ್ನಾ . ಪ್ರವಾದಿಗಳು ತಮ್ಮಬದುಕಿನ ಬಹಳಷ್ಟು ಸಮಯವನ್ನು ಒಂಟೆಯ ಬೆನ್ನ ಮೇಲೆ ಕುಳಿತೇ ಕಳೆದಿದ್ದರು” ‘ಆದರೆ ಇವತ್ತು ನಮ್ಮ ಹತ್ತಿರ ಕಾರು ಬಸ್ಸುಗಳಿವೆಯಲ್ಲಾ.’ ‘ಹಾಂ. ಅದೇ ನಾನು ಹೇಳುತ್ತಿದ್ದುದು.’ ಎಂದು ನಾನು ಆವನಿಗೆ ಹೇಳಿದೆ. ‘ಆಗಿನ ಕಾಲದಲ್ಲಿ ಬ್ಲೇಡುಗಳು ಇದ್ದಿದ್ದರೆ ಪ್ರವಾದಿಗಳೂ ಅದನ್ನು ಉಪಯೋಗಿಸುತ್ತಿದ್ದರು. ಅದರಲ್ಲಿ ಅನುಮಾನವೇ ಇಲ್ಲ. ನೀವು ಸುರ್ಮಾ ಹಚ್ಚಿಕೊಂಡಿದ್ದೀರಿ ಅಲ್ಲವೇ? ಎಂದು ನಾನು ಕೇಳಿದೆ ಹೌದು ಅದು ಸುನ್ನಾ .ಆದರೆ ಅದರಲ್ಲಿ ಸೀಸವು ಸೇರಿಸುತ್ತದೆ. ಅದು ನಿಮ್ಮ ಕಣ್ಣುಗಳನ್ನು ಹಾಳುಮಾಡಿ ನಿಮ್ಮ ದೇಹಕ್ಕೆ ವಿಷವನ್ನು ಸೇರಿಸಬಹುದು. ಆತ ಸುಮ್ಮನೆ ನಿಂತಿದ್ದ. ಪ್ರವಾದಿಯರ ಹಲವು ಕೃತ್ಯಗಳು ಅವರ ಕಾಲದಲ್ಲಿಅನಿವಾರ್ಯವಾಗಿದ್ದವು. ಅವುಗಳೆಲ್ಲಾ ಸುನ್ನಾದ ಅಂಶಗಳೆಂದು ನಾನು ತಿಳಿಯುವುದಿಲ್ಲ. ನನ್ನಾ ಪ್ರಕಾರ ಸುನ್ನಾ ಎಂದರೆ ಅವರು ಪ್ರತಿಪಾದಿಸಿದ ಮೌಲ್ಯಗಳ ಚೈತನ್ಯಕ್ಕೆ ಸಂಬಂಧಿಸಿದ್ದು. ಅವರ  ಔದಾರ್ಯ , ಪ್ರೀತಿ, ಮತ್ತುಸಹನೆ, ತಮಗೆ ಕಿರುಕುಳ ಕೊಟ್ಟವರನ್ನೂ , ಶೋಷಿಸಿದವರನ್ನೂ ಮನ್ನಿಸುವ ಅವರ ಕ್ಷಮಾಗುಣ, ಹಿರಿಯರು, ಮಕ್ಕಳು,ಮತ್ತು ಪರಿತ್ಯಕ್ತರ ಬಗ್ಗೆ ಅವರು ತೋರಿಸುತ್ತಿದ್ದ ಗೌರವ ಮತ್ತು ಕಾಳಜಿ, ನ್ಯಾಯ ಧರ್ಮ ಮತ್ತುಸಮಾನವಕಾಶಗಳಿಗಾಗಿ ಇದ್ದ ತುಡಿತ , ಶೋಧನೆ , ಜ್ಞಾನ ಮತ್ತು ವಿಮರ್ಶೆಗಳಿಗೆ ಅವರಿಗಿದ್ದ ಅರ್ಪಣಾ ಮನೋಭಾವ.” ಸಂಪ್ರದಾಯದ ವಿರುದ್ಧ ಪ್ರಶ್ನೆಗಳನ್ನು ಕೇಳಿದವರನ್ನೆಲ್ಲಾ ದೈವವಿರೋಧಿಗಳು, ಧರ್ಮನಿಂದಕರು ಎಂದು ಜರೆಯುವ ಮನೋಭಾವವನ್ನು ಮೊದಲು ಬಿಡಬೇಕು. ಏನೊಂದೂ ಪ್ರಶ್ನಿಸದೇ ಮಾತೇ ಆಡದೆ ಪೂಜಿಸಿ ಹೊರನಡೆದುಬಿಡುವ ಅಂಧ ಆಸ್ತಿಕನಿಗಿಂತ ಪ್ರಶ್ನೆ ಕೇಳಿ ಕೇಳಿ ತಲೆಚಿಟ್ಟಿಡಿಸುತ್ತ ಚರ್ಚಿಸುವ ನಾಸ್ತಿಕನೇ ದೇವರಿಗೆ ಹೆಚ್ಚು ಪ್ರಿಯರೆಂಬುದನ್ನೂ ಮರೆಯಬೇಡಿ!
*‌*‌*‌*‌*****************

28 ಟಿಪ್ಪಣಿಗಳು Post a comment
 1. hemapathy
  ಸೆಪ್ಟೆಂ 15 2014

  ನನಗೆ ತಾರ್ಕಿಕ ಮನೋಭಾವ ಬರುವ ಮುಂಚೆ ನಾನು ಹಿಂದೂ ದೇವಸ್ಥಾನಗಳಿಗೂ, ಕ್ರಿಶ್ಚಿಯನ್ನರ ಚರ್ಚುಗಳಿಗೂ, ಮುಸ್ಲಿಮರ ಮಸೀದಿ ಮತ್ತು ದರ್ಗಾಗಳಿಗೂ ಹಲವಾರು ಸಲ ಭೇಟಿ ನೀಡಿದ್ದೇನೆ. ಹಾಗೆಯೇ ಆ ಕೋಮುಗಳಿಗೆ ಸೇರಿದ ಜನರ ಮನೋಭಾವವನ್ನೂ ಕೂಡ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ನನಗೆ ಕಂಡು ಬಂದ ರೀತಿಯಲ್ಲಿ ಅತೀ ಕೋಮುವಾದವನ್ನು ಪ್ರದರ್ಶಿಸುವವರು ಮುಸ್ಲಿಮರೇ ಅನ್ನುವುದು ನನ್ನ ಗಮನಕ್ಕೆ ಬಂದಿದೆ. ಕ್ರಿಶ್ಚಿಯನ್ನರಾಗಲೀ, ಮುಸ್ಲಿಮರಾಗಲೀ ಹಿಂದೂಗಳ ದೇವಸ್ಥಾನಗಳಿಗೆ ಅಪ್ಪಿತಪ್ಪಿಯೂ ಭೇಟಿ ಕೊಡುವುದಿಲ್ಲ. ಆದರೆ ಹಿಂದೂಗಳಲ್ಲಿ ಇಂತಹ ಬೇಧ ಭಾವನೆಗಳನ್ನು ನಾನು ಕಂಡಿಲ್ಲ. ಕ್ರಿಶ್ಚಿಯನ್ನರು ಬೇರೆ ಕೋಮಿನವರ ಮೇಲೆ ಮುಸ್ಲಿಮರಂತೆ ನೇರ ದಾಳಿ ಮಾಡಲು ಹೋಗುವುದಿಲ್ಲ. ಓದು ಬರಹ ಬಲ್ಲದ ಬಡಜನರನ್ನೇ ಹುಡುಕಿ, ಇಲ್ಲದ ಆಮಿಷ ತೋರಿಸಿ, ಮತ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕ್ರಿಶ್ಚಿಯನ್ನರು ತಾವು ಸ್ನೇಹಶೀಲರಂತೆ ತಮ್ಮನ್ನು ತಾವು ಬಿಂಬಿಸಿಕೊಂಡು ಮತ ಪರಿವರ್ತನೆಗೆ ಪ್ರಯತ್ನಿಸುತ್ತಾರೆ. ಮುಸ್ಲಿಮರು ‘ಲವ್ ಜಿಹಾದ್’ ಹೆಸರಿನಲ್ಲಿ ಈ ಕಾರ್ಯ ಪ್ರಾರಂಭಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಯಾರಿಗೂ ತಮ್ಮ ತಮ್ಮ ಧರ್ಮಗಳ ಮೂಲ ನೀತಿಯೇ ಅರ್ಥವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ವಿವಿಧ ಪಂಗಡಗಳಿರುವುದರಿಂದ ಯಾವ ಧರ್ಮವೂ ಸಂಪೂರ್ಣತೆ ಹೊಂದಿಲ್ಲ. ದೇವರೆಂದರೆ ಏನೆಂಬುದೇ ಯಾರಿಗೂ ತಿಳಿಯದಿರುವುದರಿಂದ, ಆ ಕಣ್ಣಿಗೆ ಕಾಣದ, ಕೈಗೆ ಸಿಕ್ಕದ ದೇವರುಗಳ ಹೆಸರಿನಲ್ಲಿ ಧರ್ಮಾಂಧರಾಗುವುದು ವಿವೇಕಿಗಳ ಕೆಲಸವಲ್ಲ.

  ಉತ್ತರ
  • ಸೆಪ್ಟೆಂ 15 2014

   ನಿಮ್ಮ ಅನಿಸಿಕೆ ಭಾಗಶಃ ಸತ್ಯ. ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿ ಸ್ಥಳೀಯ ಹಿಂದೂ ದೇವಾಲಯಗಳಿಗೆ ಮುಸ್ಲಿಮರು ಬರುತ್ತಾರೆ. ನಾನು ಗಮನಿಸಿದ್ದೇನೆ. ಹಿಂದೊಮ್ಮೆ ನಮ್ಮ ಕ್ಲಾಸಿನವರು ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಅನೇಕ ದೇವಸ್ಥಾನಗಳಲ್ಲಿ “ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ” ಎಂಬ ಫಲಕ ಲಗತ್ತಿಸಿದ್ದರು. ಕರ್ನಾಟಕದ ದೇವಾಲಯಗಳಲ್ಲೂ ಇರಬಹುದೇನೋ ನಾನು ಗಮನಿಸಿಲ್ಲ. ನಾನು ಕೆಲವು ವರುಷಗಳಿದ್ದ ಕಲ್ಬುರ್ಗಿಯ ಸುತ್ತಮುತ್ತ ದರ್ಗಾಗಳಿಗೆ ಹಿಂದೂಗಳು, ಕೆಲವು ದೇವಸ್ಥಾನಗಳಿಗೆ ಮುಸ್ಲಿಮರು ಹಬ್ಬ ಹರಿದಿನದ ಸಂದರ್ಭದಲ್ಲಿ ಭೇಟಿ ಕೊಡುವುದು ಮಾಮೂಲಿ ಸಂಗತಿ….

   ಉತ್ತರ
 2. ಸೆಪ್ಟೆಂ 15 2014
 3. Rajaram Hegde
  ಸೆಪ್ಟೆಂ 15 2014

  “ಧರ್ಮ ವಿರೋಧಿಗಳನ್ನು ಮಟ್ಟವಾಕುವಲ್ಲಿ ಹಿಂದೂ ಧರ್ಮದ ವಕ್ತಾರರೆನ್ನಿಸಿಕೊಂಡವರು ತಮ್ಮ ಪಾಲಿನ ಕ್ರೌರ್ಯ ಮೆರೆದಿದ್ದಾರೆ. ಆ ಕ್ರೌರ್ಯದ ಫಲವಾಗಿಯೇ ಭಾರತದಲ್ಲಿ ಹುಟ್ಟಿಯೂ ಬೌದ್ಧ ಧರ್ಮ ನೆಲೆಯನ್ನರಸಿ ಬೇರೆಡೆಗೆ ತೆರಳಿದ್ದು. ”
  ಈ ಹೇಳಿಕೆಗಳಿಗೆ ಏನಾದರೂ ಐತಿಹಾಸಿಕ ಆಧಾರ ಇದೆಯಾ? ಹೋಗಲಿ ವರ್ತಮಾನದಲ್ಲಾದರೂ ಆಧಾರ ಇದೆಯಾ? ಬೌದ್ಧ ಧರ್ಮವು ಭಾರತದಲ್ಲಿ ಕ್ರಿ. ಪೂ. 6ನೆಯ ಶತಮಾನದಿಂದ ಮಧ್ಯಕಾಲದವೆಗೂ ಆಚರಣೆಯಲ್ಲಿತ್ತು. ಅದರಲ್ಲೂ ಕ್ರಿ.ಶ. 5ನೆಯ ಶತಮಾನದ ವರೆಗೆ ರಾಜರ, ಪ್ರತಿಷ್ಠಿತರ ಆಶ್ರಯವನ್ನು ಪಡೆದ ಏಕಮೇವ ಜನಪ್ರಿಯ ಧರ್ಮವೂ ಅದೇ ಆಗಿತ್ತು. ಹಿಂದೂ ಧರ್ಮದ ವಕ್ತಾರರು ಅದನ್ನು ಹುಟ್ಟಿದ ತಕ್ಷಣ ಹತ್ತಿಕ್ಕದೇ ಸುಮಾರು ಸಾವಿರ ವರ್ಗಳ ವರೆಗೆ ಸುಮ್ಮನೇಕೆ ಕುಳಿತರು? ಅಷ್ಟರ ನಂತರ ಕೂಡ ಅವರು ಅದನ್ನು ಭಾರತದಿಂದ ಓಡಿಸಿದರು ಎನ್ನಲಿಕ್ಕೆ ಬ್ರಿಟಿಷ್ ಕಾಲದಲ್ಲಿ ಕಟ್ಟಿದ ಕಾರಣಗಳು ಸೂಕ್ತ ಆಧಾರಗಳ ಮೇಲೆ ನಿಂತಿಲ್ಲ. ಬೌದ್ಧಧರ್ಮ ಭಾರತದಲ್ಲಿ ಮಧ್ಯಕಾಲದ ನಂತರ ಕಾಣಿಸಿಕೊಳ್ಳುವುದಿಲ್ಲ ಅಷ್ಟೆ.

  ವರ್ತಮಾನದಲ್ಲಿ ನೀವು ಗಮನಿಸಿದರೆ ಪ್ರಗತಿಪರ ಆಧುನಿಕರಿಂದಲೇ ಹಿಂದೂ ಧರ್ಮದ ಒಂದೊಂದೇ ಆಚರಣೆಗಳು ನಿಲ್ಲುತ್ತ ಬಂದಿವೆಯೇ ಹೊರತೂ ಇಂಥ ಯಾವುದಾದರೂ ಪ್ರಗತಿಪರ ಸಂಘಟನೆಯನ್ನು ಸಂಪ್ರದಾಯಸ್ಥರು ನಾಶ ಮಾಡಿದ ಒಂದು ಉದಾಹರಣೆ ಇದೆಯಾ? ಮೂಢನಂಬಿಕೆಯ ವಿರುದ್ಧ ಕಾನೂನನ್ನು ಮಾಡಲು ಹೊರಟವು ಯಾರು?ಬದಲಾಗಿ ಪ್ರಗತಿಪರರು ಸಂಪ್ರದಾಯವಾದ ಎಂದು ಆರೋಪಿಸಿ ಮುಚ್ಚಿಸಿದ ಸಂಸ್ಥೆಗಳಿಗೆ, ನಿಲ್ಲಿಸಿದ ಆಚರಣೆಗಳಿಗೆ ಉದಾಹರಣೆಗಳಿವೆ.

  ಇದರರ್ಥ ನಾನು ಹಿಂದೂ ಆಚರಣೆಗಳಲ್ಲಿ ಸುಧಾರಣೆ ನಡೆಯಬಾರದಿತ್ತು ಎಂದು ಪ್ರತಿಪಾದಿಸುತ್ತಿದ್ದೇನೆ ಎಂಬುದಾಗಿ ತಿಳಿಯಬೇಡಿ. ಹಿಂದೂಗಳ ಆಚರಣೆಗಳೆಲ್ಲ ಹಾಗೇ ಮುಂದುವರಿಯಬೇಕು ಅಂತಲೂ ಅಲ್ಲ. ನನ್ನ ಆಕ್ಷೇಪಣೆ ಇರುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳನ್ನು ಹಾಗೂ ಹಿಂದೂ ಧರ್ಮವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದರ ಬಗೆಗೆ. ಅವು ರಿಲಿಜನ್ನುಗಳು. ದೈವವಾಣಿಯನ್ನಾಧರಿಸಿದ ಸತ್ಯ ಪ್ರತಿಪಾದನೆಗಳು. ಅದರ ಮೇಲೆ ನಂಬಿಕೆ ಹಾಗೂ ಫೇತ್ ಮುಖ್ಯ. ಅವರ ಸಂಪ್ರದಾಯವಾದಕ್ಕೆ ಈ ಸತ್ಯದ ಹಾಗೂ ಫೇತ್ನ ಆಯಾಮವಿದೆ. ನಾನು ಬುರ್ಖಾದ ಕುರಿತೂ ಏನನ್ನೂ ಹೇಳಲು ಬಯಸುವುದಿಲ್ಲ. ನನಗೆ ಏನನ್ನಾದರೂ ಹೇಳಬೇಕು ಅನ್ನಿಸುವುದಿಲ್ಲ. ತೀರಾ ಲಿಬರಲ್ ಆಗಿ ನೋಡಿದರೂ ಕೂಡ ಅದು ಮುಸ್ಲಿಂ ಸ್ತ್ರೀಯರಿಗೆ ಬಿಟ್ಟ ವಿಷಯ.

  ಹಿಂದೂ ಧರ್ಮದ ನ್ಯೂನತೆಗಳನ್ನು ಕ್ರಿಶ್ಚಿಯಾನಿಟಿ, ಇಸ್ಲಾಂಗಳ ನ್ಯೂನತೆಗೆ ಸಮೀಕರಿಸುವ ಪೃವೃತ್ತಿ ಇಂದು ಎಲ್ಲೆಲ್ಲೂ ಕಾಣುತ್ತದೆ. ಅವುಗಳನ್ನು ಬೇರ್ಪಡಿಸಿ ನೋಡದಿದ್ದರೆ ಅವುಗಳನ್ನು ಪರಿಹರಿಸುವ ಸಾಧ್ಯತೆಯೂ ತೆರೆಯಲಾರದು. ಹಿಂದೂ ಧರ್ಮ ಬೇರೆ, ಇಸ್ಲಾಂ ಕ್ರಿಶ್ಚಿಯಾನಿಟಿಗಳು ಬೇರೆ ಎಂಬುದನ್ನು ನಮ್ಮ ಬುದ್ಧಿಜೀವಿಗಳು ಅರಿಯುವವರೆಗೆ ಈ ಮೇಲಿನ ಸಮಸ್ಯೆಗಳ ಸ್ವರೂಪವೂ ಅರ್ಥವಾಗಲಾರದು. ಜಗತ್ತಿನ ಎಲ್ಲ ಓರೆಕೋರೆಗಳೂ ನಮಗೆ ಗೊತ್ತು, ಅವೆಲ್ಲದನ್ನೂ ನಾವು ತಿದ್ದುತ್ತೇವೆ ಎನ್ನುವ ಭರಾಟೆಯಲ್ಲಿ ಎದುರಿಗೆ ಯಾವ ವಸ್ತುವಿದೆ ಎಂಬ ಭೇದವೇ ತಿಳಿಯದಿದ್ದರೆ ಸಮಸ್ಯೆ ಪರಿಹಾರವಾಗುವ ಬದಲು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು.

  ಉತ್ತರ
  • anatomy ppt
   ಸೆಪ್ಟೆಂ 15 2014

   ಇಲ್ಲಿ ಹಿಂದೂ ಧರ್ಮದ ನೂನ್ಯತೆಗಳನ್ನು ಇತರೆ ಧರ್ಮಗಳ ನೂನ್ಯತೆಯೊಂದಿಗೆ ಸಮೀಕರಿಸುವ ಉದ್ದೇಶ ಖಂಡಿತ ನನಗಿರಲಿಲ್ಲ. ಕೆಲವೊಂದು ವಾಕ್ಯಗಳು ಆ ರೀತಿಯ ಅಭಿಪ್ರಾಯ ತಮ್ಮಲ್ಲಿ ಮೂಡುವಂತೆ ಮಾಡಿಬಿಟ್ಟಿರಬಹುದು. ಹಿಂದೂ ಇಸ್ಲಾಂ ಕ್ರಿಶ್ಚಿಯಾನಿಟಿಗಳು ಬೇರೆ ಬೇರೆ ಎಂಬುದು ಎಷ್ಟು ಸತ್ಯವೋ ಆ ಮೂರನ್ನೂ ಸೇರಿದಂತೆ ಬಹುತೇಕ ಎಲ್ಲ ಧರ್ಮಗಳು(ಅದರ ಪ್ರತಿಪಾದಕರಿಂದಾಗಿ, ತಪ್ಪು ಪ್ರತಿಪಾದಕರಿಂದಾಗಿ ಎಂಬುದು ಹೆಚ್ಚು ಸರಿಯೇನೋ) ತನ್ನ ಮೂಲತತ್ವಗಳನ್ನು ಮರೆತು ನಿರ್ದಿಷ್ಟ ಜನರನ್ನು – ಮನಸ್ಸನ್ನು ಬಂಧನದ ಹತೋಟಿಯಲ್ಲಿಡಲು ಪ್ರಯತ್ನಿಸುತ್ತವೆಯಷ್ಟೇ.
   ಇನ್ನು ಬೌಧ್ದ ಧರ್ಮದ ವಿಷಯವಾಗಿ – ಐತಿಹಾಸಿಕ ಆಧಾರಗಳನ್ನು ನೀಡಲು ಖಂಡಿತವಾಗಿ ನಾನು ಇತಿಹಾಸ ತಜ್ಞನಲ್ಲ 🙂 ನೀವೇ ಹೇಳಿರುವಂತೆ “ಬೌದ್ಧ ಧರ್ಮ ಭಾರತದಲ್ಲಿ ಮಧ್ಯಕಾಲದ ನಂತರ ಕಾಣಿಸಿಕೊಳ್ಳುವುದಿಲ್ಲ ಅಷ್ಟೆ.”! ಅದಕ್ಕೆ ಕಾರಣವೇನಿರಬಹುದೆಂದು ಸಾಮಾನ್ಯನಾಗಿ ಯೋಚಿಸಿದಾಗ ಹಿಂದೂ ಧರ್ಮ ತನ್ನ ಬಲ ಕುಂದುತ್ತಿರುವ ಸಾಧ್ಯತೆಗಳು ಕಂಡ ನಂತರ ಬೌದ್ಧ ಧರ್ಮದ ಪ್ರಬಾವವನ್ನು ಕಡಿಮೆಗೊಳಿಸುವತ್ತ ಅನೇಕ ರೀತಿಯ ಕಾರ್ಯಗಳನ್ನು ಮಾಡಿರಬಹುದೆಂದು ನನಗನ್ನಿಸುತ್ತದೆ. ಕಲ್ಬುರ್ಗಿಯ ಸಮೀಪ ಸನ್ನತಿ ಎಂಬ ಊರಿದೆ. ಅಲ್ಲಿ Archeology ವಿಭಾಗದವರು ಸಾವಿರಾರು ವರುಷಗಳ ಹಿಂದಿನ ಬೌದ್ಧ ಸ್ಥೂಪವನ್ನು ಉತ್ಖನನ ಮಾಡುತ್ತಿದ್ದರು. ಆದರೆ ಈಗ ಆ ಊರಿನ ಸುತ್ತಮುತ್ತಾಗಲೀ ಹತ್ತಿರದಲ್ಲೇ ಇರುವ ಕಲ್ಬುರ್ಗಿಯಲ್ಲಿ ಎಷ್ಟು ಜನರು ಬೌದ್ಧರಿದ್ದಾರೆ? ಬೌದ್ಧ ಧರ್ಮ ಭಾರತದಿಂದ ಹೊರಹೋಗಲು ಆ ಕಾಲದಲ್ಲಿ ನಡೆದ ಯಾವುದೋ ಘಟನೆಗಳು ಕಾರಣವಾಗಿರಲೇಬೇಕಲ್ಲವೇ? ಬೌದ್ಧ ಧರ್ಮ ಪ್ರಿಯರಿಗೆ ಅದು ಹಿಂದೂ ಧರ್ಮ ಮಾಡಿದ ಕ್ರೌರ್ಯದಂತೆ ಕಂಡಿರಬಹುದು, ಹಿಂದೂ ಧರ್ಮ ಪ್ರಿಯರಿಗೆ ಅದು ಹಿಂದೂ ಧರ್ಮಕ್ಕೆ ದೊರೆತ ಜಯವೆಂಬಂತೆ ಭಾಸವಾಗಬಹುದು. “ಪ್ರತಿಯೊಬ್ಬರಿಗೂ ಬೌದ್ಧನಾಗುವ ಅವಕಾಶವಿದೆ” ಎಂದು ಹೇಳಿದ ಬುದ್ಧನಿಂದಾದ ಕೊಂಚ ಮಟ್ಟಿಗಿನ ಪ್ರಭಾವ ಲೇಖನದಲ್ಲಿ ‘ಹಿಂದೂ ಧರ್ಮದ ಕ್ರೌರ್ಯ’ ಎಂಬ ವಾಕ್ಯರಚನೆಗೆ ಅಪ್ರಜ್ಞಾಪೂರಕವಾಗಿ ಕಾರಣವಾಗಿರಬೇಕು 🙂

   ಉತ್ತರ
 4. ಸೆಪ್ಟೆಂ 15 2014

  [[ಆ ಕ್ರೌರ್ಯದ ಫಲವಾಗಿಯೇ ಭಾರತದಲ್ಲಿ ಹುಟ್ಟಿಯೂ ಬೌದ್ಧ ಧರ್ಮ ನೆಲೆಯನ್ನರಸಿ ಬೇರೆಡೆಗೆ ತೆರಳಿದ್ದು]]
  ಬೌದ್ಧಮತ ಭಾರತದಲ್ಲಿ ನೆಲೆಯೂರಿದ ನಂತರವೇ ಹೊರದೇಶಗಳಲ್ಲಿ ವಿಸ್ತರಿಸಿದ್ದು.
  ಅದನ್ನು ಭಾರತದಿಂದ ಹೊಡೆದೋಡಿಸಲಾಯಿತು ಎನ್ನುವುದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ.
  ಯಾವ ರಾಜನ ಕಾಲದಲ್ಲಿ ಬೌದ್ಧಮತವನ್ನು ಹತ್ತಿಕ್ಕಲಾಯಿತು? ಎಷ್ಟು ಜನ ಬೌದ್ಧ ಸಂನ್ಯಾಸಿಗಳನ್ನು ಕೊಲ್ಲಲಾಯಿತು? ಇತ್ಯಾದಿ ವಿಷಯಗಳನ್ನು ಇತಿಹಾಸದಲ್ಲಿ ಹುಡುಕಲು ಹೊರಟರೆ ತಿಳಿಯುತ್ತದೆ, ಆ ರೀತಿ ಎಂದೂ ನಡೆದೇ ಇಲ್ಲವೆನ್ನುವುದು!
  ಸಾಮ್ರಾಟ ಅಶೋಕನ ಕಾಲದಲ್ಲಂತೂ ರಾಜ್ಯದ ಕೋಶ/ಅಧಿಕಾರಗಳನ್ನುಪಯೋಗಿಸಿ ಬೌದ್ಧಮತ ಪ್ರಚಾರ ನಡೆಯಿತು.
  ಆತನ ಕಾಲದಲ್ಲಿಯೇ ಆತನ ಮಕ್ಕಳು ಸಿಂಹಳಕ್ಕೆ ತೆರಳಿ ಬೌದ್ಧಮತ ಪ್ರಚಾರ ಮಾಡಿದರು.
  ಅಶೋಕನ ರಾಜ್ಯದಲ್ಲಿ ಬೌದ್ಧಮತ ಹತ್ತಿಕ್ಕಲಾಗಿದ್ದರಿಂದ, ಅದನ್ನು ಸಿಂಹಳದಲ್ಲಿ ಸ್ಥಾಪಿಸಲಾಯಿತೇ?

  8ನೇ ಶತಮಾನದ ನಂತರ ಭಾರತದ ಮೇಲೆ ಸತತ ಧಾಳಿ ಮಾಡಿದ ವಿದೇಶೀ ಮುಸಲ್ಮಾನ ಆಕ್ರಮಣಕಾರರು ಭಾರತದಲ್ಲಿದ್ದ ಎಲ್ಲ ಮತಗಳನ್ನೂ ಧ್ವಂಸ ಮಾಡತೊಡಗಿದರು; ಇಸ್ಲಾಂ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಯಿತು; ದೊಡ್ಡ ಪ್ರಮಾಣದಲ್ಲಿ ಮತಾಂತರಗಳು ನಡೆದವು. ಈ ಕಾರಣಗಳಿಂದಲೇ ಬೌದ್ಧಮತದ ಪ್ರಚಾರಕ್ಕೂ ಕಡಿವಾಣ ಬಿದ್ದಿತು. ನಿಧಾನವಾಗಿ ಜನರಿಗೆ ಅದರಲ್ಲಿ ಆಸಕ್ತಿ ಕಡಿಮೆಯಾಯಿತು.

  ಉತ್ತರ
  • anatomy ppt
   ಸೆಪ್ಟೆಂ 15 2014

   ಕ್ರೌರ್ಯವೆಂದರೆ ಕೊಲ್ಲುವುದು ಮಾತ್ರವಲ್ಲ ಎನ್ನುವುದು ನನ್ನ ನಮ್ರ ಅನಿಸಿಕೆ. ಇನ್ನುಳಿದಂತೆ ಮೇಲೆ ರಾಜಾರಾಮ್ ಹೆಗ್ಡೆಯವರಿಗೆ ನೀಡಿರುವ ಮರುಉತ್ತರದಲ್ಲಿ ನನ್ನರಿವಿಗೆ ದಕ್ಕಿದಷ್ಟನ್ನು ತಿಳಿಸಿದ್ದೇನೆ….. ನಾವೇಗೆ ಮುಸಲ್ಮಾನ ಆಕ್ರಮಣಕಾರರು, ಬ್ರಿಟೀಷ್ ಆಕ್ರಮಣಕಾರರು ಎಂದು ಹೇಳುತ್ತೇವೋ ಯಾರಿಗೆ ಗೊತ್ತು ಬೌದ್ಧ ಧರ್ಮದವರು ಹಿಂದೂ ಆಕ್ರಮಣಕಾರರು ನಮ್ಮ ಧರ್ಮವನ್ನು ಓಡಿಸಿಬಿಟ್ಟರು ಎಂದು ಹೇಳುತ್ತಾರೋ ಏನೋ!

   ಉತ್ತರ
 5. ಸೆಪ್ಟೆಂ 15 2014

  ಬುರ್ಖಾ ಧರಿಸುವುದು ಕುರಾನ್ ಪ್ರಕಾರ ಕಡ್ಡಾಯವಲ್ಲ.
  http://www.quran-islam.org/articles/part_3/the_burqa_(P1357).html

  ಆದರೆ, ಬುರ್ಖಾ ಧರಿಸುವುದು ಮುಸಲ್ಮಾನರ ಒಂದು ಸಂಪ್ರದಾಯವಾಗಿದೆ.
  ಅದನ್ನು ಕಾನೂನಿನ ಮೂಲಕ ನಿಷೇಧಿಸುವುದು ಸಲ್ಲದು – ಜಾತ್ಯಾತೀತ ಸರಕಾರವು ಯಾವುದೇ ಮತಾಚರಣೆಗಳಲ್ಲಿ ಕೈಹಾಕಬಾರದು.
  ಮುಸಲ್ಮಾನ ಸಮಾಜವೇ ಬುರ್ಖಾ ಕುರಿತಾಗಿ ಯೋಚಿಸಿ, ಭಾರತದಲ್ಲಿ ಅದರ ಆವಶ್ಯಕತೆಯಿದೆಯೇ ಎನ್ನುವುದನ್ನು ವಿಮರ್ಶಿಸಿ ನಿರ್ಧಾರಕ್ಕೆ ಬರಬೇಕು. ಈ ವಿಷಯದಲ್ಲಿ ಮುಸಲ್ಮಾನ ಮಹಿಳೆಯರ ಮಾತಿಗೆ ಹೆಚ್ಚಿನ ಬೆಲೆ ನೀಡಿ ನಿರ್ಧಾರ ತೆಗೆದುಕೊಳ್ಳುವುದೊಳ್ಳೆಯದು.

  ಉತ್ತರ
 6. vasudeva
  ಸೆಪ್ಟೆಂ 16 2014

  ಮಾನ್ಯ ಅಶೋಕ್, ರಾಜಾರಾಮ ಹೆಗಡೆ ಮತ್ತು ಎಸ್.ಎಸ್.ಎನ್.ಕೆ.ಅವರಿಗೆ,
  ಭಾರತದಲ್ಲಿ ಬೌದ್ಧಧರ್ಮ ಅಧಃಪತನದ ಹಾದಿಯನ್ನು ತುಳಿಯುತ್ತಿದ್ದ ಸ್ಥಿತ್ಯಂತರದ ಕಾಲಮಾನದಲ್ಲಿ ಹ್ಯೂಯೆನ್ ತ್ಸಾಂಗ್ ಭಾರತಕ್ಕೆ ಪಾದಾರ್ಪಣೆ ಮಾಡಿದ್ದ. ಆ ವೇಳೆಗಾಗಲೇ ಭಾರತದಲ್ಲಿ ಬೌದ್ಧಧರ್ಮ ಹಂತ ಹಂತವಾಗಿ ವಿನಾಶದತ್ತ ನಡೆಯುತ್ತಿದ್ದುದನ್ನು ಕಂಡಿದ್ದ ಅವನು ಅದನ್ನೆಲ್ಲ ವಿಸ್ತೃತವಾಗಿ ದಾಖಲಿಸಿರುವನಾದರೂ ವೈದಿಕರೇ ಅದರ ಕಾರಣಕರ್ತರರೆಂದು ಅವನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ (ಆಗ ಕ್ರಿಶ್ಚಿಯನ್ ಅಥವಾ ಮುಸ್ಲಿಮರ ದಾಳಿಗಳು ಇನ್ನೂ ಪ್ರಾರಂಭವಾಗಿರಲಿಲ್ಲ). ಆದರೆ ಶಶಾಂಕನೆಂಬ ಶೈವದೊರೆ ಬೌದ್ಧಧರ್ಮದ ಮೇಲೆ ಅವ್ಯಾಹತವಾಗಿ ದಾಳಿ ನಡೆಸಿದ್ದನೆಂಬ ಬಗ್ಗೆ ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ (ವಿನಯ್ ಲಾಲ್‌ರ ಸಂಶೋಧನೆಗಳನ್ನು ಅವಗಾಹಿಸಬಹುದು).
  ನಿಜ, ಬೌದ್ಧಧರ್ಮದ ಅವಸಾನಕ್ಕೆ ಅದರೊಳಗೆ ಹುದುಗಿದ್ದ ಕೆಲವು ದೋಷಗಳೂ ಕಾರಣವಿರಬಹುದು. ಶ್ರೀಯುತರು “ಬೌದ್ಧಧರ್ಮದ ಮೇಲೆ ದಾಳಿ ಮಾಡಲು ವೈದಿಕರು ಅದೇಕೆ ಅಷ್ಟು ಕಾಲ ಕಾಯಬೇಕಾಯಿತು?” ಎಂದು ಕೇಳಿದ್ದಾರೆ. ಯಾವುದೇ ಅನುಭಾವ ಪರಂಪರೆ ಕಾಲಕ್ರಮೇಣ ಒಂದು ಸಂಪ್ರದಾಯವಾಗಿ, ಒಂದು ಜಡಸಿದ್ಧಾಂತವಾಗಿ ಮಾರ್ಪಡುತ್ತದೆ. ಬುದ್ಧ ತೀರಿಕೊಂಡ ಮೇಲೂ ಬೌದ್ಧಧರ್ಮದಲ್ಲಿ ಬೋಧಿಧರ್ಮ, ಸರಹಪಾದ, ನಾಗಾರ್ಜುನ, ಅತಿಶಾ ದೀಪಂಕರ ಶ್ರೀಜ್ಞಾನ ಮೊದಲಾದ ಅನುಭಾವಿಗಳು ಮತ್ತೆ ಮತ್ತೆ ಅವತರಿಸುತ್ತಿದ್ದರು. ಅನುಭವ ಪ್ರಾಮಾಣ್ಯದಿಂದ ನುಡಿಯುತ್ತಿದ್ದ ಇಂತಹ ಅನುಭಾವಿಗಳೊಂದಿಗೆ ವಾಗ್ವಾದ ನಡೆಸುವ ಛಾತಿ ಅಂದಿನ ಯಾವ ವೈದಿಕನಿಗೂ ಇರಲಿಲ್ಲ. ಕ್ರಮೇಣ ಈ ಅನುಭಾವಿಗಳ ಸ್ಥಾನವನ್ನು ಅಶ್ವಘೋಷ, ಬುದ್ಧಘೋಷ, ವಸುಬಂಧು ಮೊದಲಾದ ಬೌದ್ಧಪಂಡಿತರುಗಳು ತುಂಬಲಾರಂಭಿಸಿದರು. ಅತ್ಯಂತ ಪ್ರಾಚೀನ ಪರಂಪರೆಯಿದ್ದ ವೈದಿಕ ಪಂಡಿತರುಗಳ ಎದುರು ಇವರೆಲ್ಲ ಇನ್ನೂ ಅಂಬೆಗಾಲಿಡುತ್ತಿದ್ದರು. ಸಹಜವಾಗಿಯೇ ಈ ಮಹಾಮಹೋಪಾಧ್ಯಾಯರುಗಳ ಮುಂದೆ ವಾದದಲ್ಲಿ ನಿಲ್ಲಲಾರದೆ ಅವರೆಲ್ಲ ಬೌದ್ಧಧರ್ಮದ ಅವಸಾನಕ್ಕೆ ಕಾರಣರಾದರು ಅಥವಾ ಸಾಕ್ಷಿಯಾದರು. ಎಲ್ಲಕ್ಕಿಂತ ಮಿಗಿಲಾಗಿ ಬುದ್ಧನೇ ತನ್ನ ಧರ್ಮ ಇಷ್ಟು ಕಾಲ ಜೀವಂತವಾಗಿರುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದ ಕಾರಣ ಅದರ ಅವಸಾನಕ್ಕೆ ಯಾರನ್ನೂ ನಿರ್ದಿಷ್ಟವಾಗಿ ಹೊಣೆಗಾರರನ್ನಾಗಿ ಮಾಡುವುದು ದುಡುಕಾಗುತ್ತದೆ.
  ಬ್ರಿಟಿಷ್ ಶಿಕ್ಷಣ ಮತ್ತು ಬ್ರಿಟಿಷರ ಸಂಶೋಧನಾ ವಿಧಿವಿಧಾನಗಳಿಂದಲೇ ಬೆಳೆದ ಡಾ. ಅಂಬೇಡ್ಕರ್ ಕೂಡ ಬೌದ್ಧರ ಅವಸಾನಕ್ಕೆ ವೈದಿಕರು ಕಾರಣರೆಂದು ಎಲ್ಲೂ ಹೇಳಿಲ್ಲ. ಮುಸ್ಲಿಂ ದಾಳಿಕೋರರೇ ಕಾರಣರೆಂದು ಅವರು ಪುರಾವೆಗಳೊಂದಿಗೆ ದಾಖಲಿಸಿರುವರು. ಮುಸ್ಲಿಂ ದಾಳಿಕೋರರು ಎಲ್ಲಾದರೂ ‘ಇವರು ಬೌದ್ಧರು ಮತ್ತು ಇವರು ವೈದಿಕರು’ ಎಂಬ ಭೇದವನ್ನು ಎಣಿಸುವರೇ? ಅವರು ಶ್ರಮಣ ಸಂಸ್ಕೃತಿಯ ಮೇಲೂ ಹಾಗೆಯೇ ವೈದಿಕರ ಮೇಲೂ ಸಮಾನವಾಗಿ ದಾಳಿ ನಡೆಸಿದರು. ಆದರೆ ಅಷ್ಟೆಲ್ಲ ದಾಳಿ ನಡೆದರೂ ವೈದಿಕ ಧರ್ಮಕ್ಕೆ ಮತ್ತೆ ತಲೆಯೆತ್ತಲು ಸಾಧ್ಯವಾದಂತೆ ಬೌದ್ಧರಿಗೆ ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಉಳಿಯುತ್ತದೆ. ದಾಳಿ ನಡೆದಾಗ ವೈದಿಕರು ರಾಜಾಶ್ರಯ ಪಡೆದು ತಮ್ಮನ್ನು ತಾವು ಉಳಿಸಿಕೊಂಡರಾದರೂ ಆ ಉಳಿವಿನ ದಾರಿಗಳನ್ನು ತನ್ನೊಂದಿಗೆ ಶತಶತಮಾನಗಳ ಕಾಲ ಸಹಜೀವನ ನಡೆಸಿದ ಶ್ರಮಣಧಾರೆಗಳಿಗೂ ತೋರಿಸಬೇಕಿತ್ತಲ್ಲವೇ? ಆದರೆ ಅವರು ಹಾಗೆ ಮಾಡದೆ ಅದರ ವಿನಾಶಕ್ಕೆ ವ್ಯವಸ್ಥಿತವಾಗಿ ಹುನ್ನಾರ ಮಾಡಿದರು. ಇಂಥವರನ್ನು ಅಮಾಯಕರೆಂದು ಸಾಬೀತು ಪಡಿಸಲು ಬಾಲಗಂಗಾಧರ ಮತ್ತು ಇತರ ವಿದ್ವಾಂಸರುಗಳು ಹರಸಾಹಸ ಮಾಡುತ್ತಿರುವರು. ಇದನ್ನು ರಸ್ತೆ ಅಪಘಾತದಿಂದ ಯಾರಾದರೂ ನರಳುತ್ತಿದ್ದರೆ ಅವನ ನರಳಿಕೆಗೆ ನನ್ನ ವಾಹನ ಕಾರಣವಲ್ಲ ಎನ್ನುತ್ತ ಕಣ್ಣೆದುರಿನ ಸಮಸ್ಯೆಯನ್ನೇ ನಿರ್ಲಕ್ಷಿಸಿ ತಮ್ಮನ್ನು ತಾವು ಜೋಪಾನ ಮಾಡಿಕೊಂಡು ಮುಂದೆ ಸಾಗುವವರ ಧೋರಣೆಗೆ ಹೋಲಿಸಬಹುದು.
  ಎಲ್ಲಕ್ಕಿಂತ ವಿಚಿತ್ರ ಸಂಗತಿಯೆಂದರೆ ಭವಿಷ್ಯ ಪುರಾಣ, ಭಾಗವತ ಪುರಾಣ ಇನ್ನೂ ಮೊದಲಾದ ಪುರಾಣಗಳಲ್ಲಿ ಬುದ್ಧನನ್ನು ಪದೇ ಪದೇ ಉಲ್ಲೇಖಿಸಲಾಗಿದೆ. ಕಲಿಯ ಆಗಮನಕ್ಕೆ ಸೂಕ್ತವಾದ ವಾತಾವರಣವನ್ನು ನಿರ್ಮಿಸಲು ಅಥವಾ ಪಾಪಿಗಳ ಸಂಖ್ಯೆ ಹೆಚ್ಚಿಸಲು ಶ್ರೀವಿಷ್ಣುವೇ ಶಾಕ್ಯಮುನಿಯಾಗಿ ಅವತರಿಸುವನು ಎಂದು ಭವಿಷ್ಯಪುರಾಣ ಸ್ಪಷ್ಟವಾಗಿ ಉಲ್ಲೇಖಿಸಿದೆ. ತನ್ನ ಹಲವು ಪೂರ್ವಭವಗಳನ್ನು ನಿರ್ವಚಿಸುವ ಬುದ್ಧ ಇಂತಹ ಮಾತುಗಳನ್ನು ಎಲ್ಲೂ ಹೇಳಲಿಲ್ಲ. ಎಂದ ಮೇಲೆ ಹನ್ನೆರಡನೆಯ ಶತಮಾನದ ನಂತರ ರಚನೆಯಾದ ಇಂತಹ ಕತೆಗಳು ಬುದ್ಧನ ತೇಜಸ್ಸನ್ನು ಮಂಕುಗೊಳಿಸುವ ಒಂದು ವ್ಯವಸ್ಥಿತ ಹುನ್ನಾರವಾಗಿದೆ ಎಂದಲ್ಲದೆ ಬೇರೆ ಮತ್ತೇನೆಂದು ತಿಳಿಯುವುದು?
  ವಿನಾಶವೆಂದರೆ ಬಾಹ್ಯದಲ್ಲಿ ನಡೆವ ದಾಳಿ, ಹತ್ಯಾಕಾಂಡ, ವಿಧ್ವಂಸಕ ಕೃತ್ಯಗಳೇ ಆಗಿರಬೇಕು ಎಂದೇನಿಲ್ಲ. ಭಾರತದಲ್ಲಿ ಬೌದ್ಧಧರ್ಮದ ವಿನಾಶವೆಂಬುದು ತುಂಬ ಸಂಕೀರ್ಣವಾದ ಒಂದು ಪ್ರಕ್ರಿಯೆಯಾಗಿದೆ. ಭಾರತದಲ್ಲಿ ಬೌದ್ಧಧರ್ಮ ಬುಡಮೇಲಾಗಲು ಹಲವು ಶತಮಾನಗಳು ಬೇಕಾದವು. ಈ ವಿನಾಶಕ್ಕೆ ಮಹಾ ಪ್ರತಿಭಾವಂತರಾದ ಶಂಕರ, ರಾಮಾನುಜ, ಮಧ್ವಾದಿ ಆಚಾರ್ಯರುಗಳ ಸೈದ್ಧಾಂತಿಕ ದಾಳಿಯೂ ಸಾಕಷ್ಟು ಕೊಡುಗೆಗಳನ್ನು ನೀಡಿವೆ. ಅಲ್ಲದೆ ಬೌದ್ಧಧರ್ಮ ವಿನಾಶವಾಗುವ ಪ್ರಕ್ರಿಯೆಯಲ್ಲಿ ಆ ಧರ್ಮದ ಅದೆಷ್ಟೋ ಸತ್ವಪೂರ್ಣ ಅಂಶಗಳು ವೈದಿಕ ಧರ್ಮದಲ್ಲಿ ವಿಲೀನಗೊಂಡವು. ಶಂಕರರ ಜ್ಞಾನೈಕ ಮಾರ್ಗ, ಬ್ರಹ್ಮವಾದ, ಮಠಗಳ ಮತ್ತು ಉತ್ತರಾಧಿಕಾರಿಗಳ ಸ್ಥಾಪನೆ ಮತ್ತು ಶ್ರಮಣಧಾರೆಗಳಿಗೇ ವಿಶಿಷ್ಟವಾದ ಅಹಿಂಸೆ, ಅಪರಿಗ್ರಹಗಳಂತಹ ಮೌಲ್ಯಗಳಿಗೆ ಕಾಲಕ್ರಮೇಣ ವೈದಿಕಧರ್ಮಗಳಲ್ಲಿ ಸಿಕ್ಕ ಪ್ರಾಮುಖ್ಯ ಮೊದಲಾದ ಅಂಶಗಳಲ್ಲಿ ಬೌದ್ಧಧರ್ಮದ ಮೂಲಧಾತುಗಳನ್ನು ಕಾಣಬಹುದು.
  ವೇದಧರ್ಮದ ಬಗ್ಗೆ ಆಕ್ಷೇಪಣೆ ದನಿ ಎತ್ತಿದ ಕೂಡಲೆ ಸಾಕ್ಷಿ ಪುರಾವೆಗಳನ್ನು ಕೇಳುವ ಬಾಲಗಂಗಾಧರ ಮತ್ತು ಅವರ ಸಂಗಡಿಗರು ಅಧ್ಯಯನ ಮತ್ತು ಸಂಶೋಧನೆಗಳನ್ನು ನ್ಯಾಯಾಲಯದಲ್ಲಿ ನಡೆಯುವ ವಾದ-ವಿವಾದಗಳ ಮಟ್ಟಕ್ಕೆ ಇಳಿಸಿರುವುದು ದುರದೃಷ್ಟಕರ. ಇದಕ್ಕೆ ಪ್ರಗತಿಪರರ ಪೂರ್ವಗ್ರಹ ಪೀಡಿತ ವಿತಂಡವಾದಗಳೂ ಕೆಲಮಟ್ಟಿಗೆ ಕಾರಣವೆನಿಸುತ್ತದೆ. ಅವರು ಹೇಳುವಂತೆ ಬ್ರಿಟೀಷ್ ಪ್ರಣೀತ ಅಧ್ಯಯನ ವಿಧಿವಿಧಾನಗಳನ್ನು ಕುರುಡು ಕುರುಡಾಗಿ ಅನುಸರಿಸುವುದರಿಂದ ನಮ್ಮ ಅಧ್ಯಯನ ದಾರಿ ತಪ್ಪಬಹುದು ನಿಜ. ಆದರೆ ಬ್ರಿಟೀಷ್ ವಿದ್ವಾಂಸರ ಸಮಸ್ತ ಸಂಶೋಧನೆಗಳೂ ಸಾರಾಸಗಟಾಗಿ ತಿರಸ್ಕರಿಸುವಂತಹುದಲ್ಲ. ಹಾಗೆಯೇ ಬಾಲಗಂಗಾಧರ ಮೊದಲಾದ ವಿದ್ವಾಂಸರು ಪ್ರತಿಪಾದಿಸುವಂತೆ ವೇದಧರ್ಮವನ್ನು ೨೪ ಕ್ಯಾರಟ್ ಅಪ್ಪಟ ಚಿನ್ನದಂತೆ ಭಾವಿಸುವುದೂ ಮತ್ತೊಂದು ಪೂರ್ವಗ್ರಹವೇ ಆಗುತ್ತದೆ.
  “ಬೌದ್ಧವಿವೇಕವು ವಿಶ್ವನಾಗರಿಕತೆಗೆ ಭಾರತ ನೀಡಿದ ಬೆಲೆಕಟ್ಟಲಾಗದ ಕೊಡುಗೆ” ಎಂದು ಹರ್ಮನ್ ಹೇಸ್, ಎಚ್.ಜಿ. ವೇಲ್ಸ್ ಮೊದಲಾದ ವಿದ್ವಾಂಸರುಗಳು ನಿರ್ವಂಚನೆಯಿಂದ ಹೊಗಳಿರುವರು. ಅಪ್ಪಟ ವೈದಿಕರಾಗಿದ್ದ ಎಂ. ಹಿರಿಯಣ್ಣನವರೂ ಬುದ್ಧನ ಹಿರಿಮೆಯನ್ನು ಕೊಂಡಾಡಿರುವರು. ಹೀಗಿರುವಾಗ ಬೌದ್ಧರ ಪತನಕ್ಕೆ ತಾವು ಕಾರಣರಲ್ಲ ಎಂದು ಪ್ರತಿಪಾದಿಸುವುದಷ್ಟೇ ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸುವ ವಿದ್ವಾಂಸರು ಸೀಮಿತ ದೃಷ್ಟಿಯನ್ನು ಬೆಳೆಸಿಕೊಂಡಿರುವಂತೆ ಕಾಣಿಸುತ್ತದೆ. ಅಥವಾ ಬಾಲಗಂಗಾಧರರಂತಹವರು ಪ್ರಾರಂಭಿಸಿರುವ ಸಿದ್ಧಾಂತ ಕೇಂದ್ರಿತ ಸಂಶೋಧನೆಗಳು ಅನಿವಾರ್ಯವಾಗಿ ಇಂತಹ ಸೀಮಿತ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೇನೋ?
  ಒಂದರ್ಥದಲ್ಲಿ ಭಾರತದಲ್ಲಿ ಬೌದ್ಧವಿವೇಕ ಸಾಯಲಿಲ್ಲ. ಆದಿಶಂಕರರಂತಹ ಆಚಾರ್ಯರುಗಳ ಮೂಲಕ ಬುದ್ಧ ಮತ್ತೆ ಮರುಹುಟ್ಟು ಪಡೆದ. ಎಸ್.ಎನ್. ದಾಸ್‌ಗುಪ್ತರಂತಹ ವಿದ್ವಾಂಸರು ಶಂಕರನನ್ನು ‘ಪ್ರಚ್ಛನ್ನ ಬೌದ್ಧ’ನೆಂದೇ ವರ್ಣಿಸಿರುವರು. ಆದರೆ ಬಹುತೇಕ ಶಂಕರರ ಅನುಯಾಯಿಗಳು ಮತ್ತು ಅವರ ವಿರೋಧಿಗಳು ಅದನ್ನು ಇಂದಿಗೂ ಒಂದು ನಿಂದನೆಯ ಮಾತೆಂದೇ ಭಾವಿಸಿರುವುದು ದುರದೃಷ್ಟಕರ.

  ಉತ್ತರ
  • valavi
   ಸೆಪ್ಟೆಂ 20 2014

   ಮಾನ್ಯ ವಾಸುದೇವ ಅವರೆ ನಿಮ್ಮ ವಿಮರ್ಶೆ ನನಗೆ ಹಿಡಿಸಿತು. ಆದರೆ ಬೌದ್ಧರ ಪತನವಾಗದಂತೆ ವೈದಿಕರು ನೋಡಿಕೊಳ್ಳಬೇಕಾಗಿತ್ತು ಎಂದು ತಾವು ಹೇಳಿರುತ್ತೀರಿ. ವೈರಿಯೊಬ್ಬ ಬಂದಾಗ ಮೊದಲು ನನ್ನ ರಕ್ಷಣೆ ಎನ್ನುವದು ಎಲ್ಲರಿಗೂ ಮೊದಲ ಆದ್ಯತೆಯಾಗುತ್ತದೆ. ತಾಯಿ ಮಂಗ ತನ್ನ ಮರಿಯನ್ನು ಕಾಲಲ್ಲಿ ಹಾಕಿ ತಾನು ರಕ್ಷಿಸಿಕೊಂಡಿದ್ದನ್ನು ಕಥೆಯಲ್ಲಿ ನೀವೆಲ್ಲಾ ಕೇಳಿದ್ದೀರಿ. ನೀವು ಉದಾಹರಿಸಿರುವ ಅಂಬೇಡ್ಕರ್ ಅವರೇ ಬೌದ್ಧ ಧರ್ಮದ ಅವನತಿಗೆ ಮುಸ್ಲೀಂ ದಾಳಿ ಕೋರರನ್ನು ಹೆಸರಿಸಿ ನಂತರ ಅವರು ಕೇವಲ ಬೌದ್ಧರ ಮೇಲಷ್ಟೇ ದಾಳಿ ಮಾಡಲಿಲ್ಲ. ವೈದಿಕರ ಮೇಲೂ ಮಾಡಿದರು. ಆದರೆ ವೈದಿಕರು ತಮ್ಮ ಧರ್ಮದಲ್ಲಿ ಕೆಲವು ಮಾರ್ಪಾಡು ಮಾಡಿಕೊಂಡರು . ಅವು ರಾಜ ಹತ್ಯೆಯನ್ನು ಮಾಡಬಹುದು. ಬ್ರಾಹ್ಮಣ ರಾಜನಾಗಬಹುದು. ಶಸ್ತ್ರ ಹಿಡಿಯಬಹುದು. ಇಂಥ ಮಾರ್ಪಾಡು ಮಾಡಿಕೊಂಡರು. ದುರದೃಷ್ಟವಶಾತ್ ಇಂಥ ಯಾವ ಬದಲಾವಣೆಗಳನ್ನು ಬೌದ್ಧರು ಮಾಡಿಕೊಳ್ಳಲಿಲ್ಲ. ಅಲ್ಲದೆ ಬೌದ್ಧ ಸನ್ಯಾಸಿಗಳ ಮಾರಣ ಹೋಮ ಮಾಡಿದಾಗ ಮುಂದಿನವರಿಗೆ ದೀಕ್ಷೆ ಕೊಡಲು ಯಾರೂ ಉಳಿಯಲಿಲ್ಲ. ವೈದಿಕರಲ್ಲಿ ಸನ್ಯಾಸಿಯೇ ದೀಕ್ಷೆ ಕೊಡಬೇಕೆಂಬ ಕಟ್ಟು ಪಾಡುಗಳಿರದ್ದರಿಂದ ಅವರಿಗೆ ಧರ್ಮ ಉಳಿಸಿಕೊಳ್ಲಲು ಸಾಧ್ಯವಾಯಿತೆಂದು ಅಂಬೇಡ್ಕರರೇ ತಿಳಿಸಿದ್ದಾರೆ. ಅಂದರೆ ವೈದಿಕರು ಉಳಿದುಕೊಂಡು ಬೌದ್ಧರಷ್ಟೇ ನಾಶವಾಗಲು ಕಾರಣಗಳೇನು ಎಂಬುದಕ್ಕೆ ಅವರೇ ಕಾರಣವನ್ನು ತಿಳಿಸಿದ್ದಾರೆ. ಹಾಗೆ ವೈದಿಕ ಧರ್ಮದಲ್ಲಿ ಎಲ್ಲರೂ ಅಹಿಂಸೆ ಪಾಪ ಪುಣ್ಯಗಳನ್ನು ಲೆಕ್ಕ ಹಾಕುತ್ತಾ ಕೂಡಬೇಕೆಂದು ಹೇಳಿಲ್ಲ. ಕೇವಲ ಬ್ರಾಹ್ಮಣರಷ್ಟೆ ಆ ಕೆಲಸ ಮಾಡಲು ತಿಳಿಸಿದ್ದಾರೆ. ಕ್ಷತ್ರಿಯನಿಗೆ ಯುದ್ಧ ಮಾಡದಿದ್ದರೇನೇ ಪಾಪ ಎಂದು ತಿಳಿಸಿದ್ದಾರೆ. ಆದರೆ ಬುದ್ಧನ ಅಹಿಂಸೆ ತತ್ವವು ಬೌದ್ಧರೆಲ್ಲಾ ಕೊಲ್ಲುವದು ಪಾಪ ಎಂದು ಹೇಳಿತು. ಹೀಗಾಗಿ ಕಾಯಬೇಕಾದ ಯೋಧ ಅಹಿಂಸೆ ಆಚರಿಸುತ್ತಾ ತನ್ನ ಕ್ಷಾತ್ರ ತೇಜಸ್ಸನ್ನು ಕಳೆದುಕೊಂಡ. ಇದೂ ಸಹ ಬೌದ್ಧರ ಅವನತಿಗೆ ಕಾರಣ ಎನ್ನಬಹುದು. ಇನ್ನೊಂದೆಂದರೆ ಬೌದ್ಧರಲ್ಲಿ ಎಲ್ಲರು ಸನ್ಯಾಸಿ ಆಗಬೇಕೆಂದು ತಿಳಿಸುತ್ತಾರೆ. ಸನ್ಯಾಸವನ್ನು ಎಲ್ಲರು ಅನುಸರಿಸಲು ಸಾಧ್ಯವೇ? ಸಂಸಾರದ ಸುಖ ಸಾಕಾದಾಗ ಸನ್ಯಾಸಿಯಾದರೆ ಆ ಆಶ್ರಮಕ್ಕೆ ನ್ಯಾಯ ಒದಗಿಸಲು ಸಾಧ್ಯವಲ್ಲವೆ? ಇಲ್ಲವಾದರೆ ಸನ್ಯಾಸಿಯಾದವನು ಆ ಆಶ್ರಮಕ್ಕೆ ನ್ಯಾಯ ಹೇಗೆ ಒದಗಿಸಿಯಾನು? ಇನ್ನೂ ಅನೇಕ ಬದಲಾವಣೆಗಳನ್ನು ಬೌದ್ಧ ಧರ್ಮ ಮಾಡಿಕೊಳ್ಳಲಿಲ್ಲ. ಇದರಿಂದ ಮತ್ತು ಅದರ ಆಚರಣೆಗಳು ಸರಳವಾಗಿರದ್ದರಿಂದ ರಾಜಾಶ್ರಯವಿದ್ದರೂ ಕೂಡ ಅದು ಅವನತಿಯತ್ತ ಸಾಗಿತು. ಇಲ್ಲಿ ಭಾವಾವೇಷಕ್ಕೆ ಎಡೆ ಕೊಡದೇ ಎರಡೂ ಪಂಗಡದವರು ಬೌದ್ಧ ಧರ್ಮ ಭಾರತ ಬಿಟ್ತು ಹೋಗಿದ್ದಕ್ಕೆ ಕಾರಣ ಕಂಡು ಹಿಡಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೇ ವಿನಃ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವದನ್ನು ಬಿಡಬೇಕು. ಇನ್ನೊಂದು ವಿಷಯವೇನೆಂದರೆ [ “ವೇದಧರ್ಮದ ಬಗ್ಗೆ ಆಕ್ಷೇಪಣೆ ದನಿ ಎತ್ತಿದ ಕೂಡಲೆ ಸಾಕ್ಷಿ ಪುರಾವೆಗಳನ್ನು ಕೇಳುವ ಬಾಲಗಂಗಾಧರ ಮತ್ತು ಅವರ ಸಂಗಡಿಗರು ಅಧ್ಯಯನ ಮತ್ತು ಸಂಶೋಧನೆಗಳನ್ನು ನ್ಯಾಯಾಲಯದಲ್ಲಿ ನಡೆಯುವ ವಾದ-ವಿವಾದಗಳ ಮಟ್ಟಕ್ಕೆ ಇಳಿಸಿರುವುದು ದುರದೃಷ್ಟಕರ. ”] ಹೀಗೆ ತಾವು ಹೇಳುತ್ತಿರುವಿರಿ. ನನ್ನ ಮೂಗಿನ ನೇರಕ್ಕೆ ನಾನೇ ಹೇಳಿದ್ದು ಸತ್ಯವೆಂದುಕೊಂಡರೆ ಹೇಗೆ ಅದಕ್ಕೆ ಐತಿಹಾಸಿಕವಾಗಿ ಕೆಲವಾದರೂ ಸಾಕ್ಷಿ ಬೇಕಲ್ಲವೆ? ಇನ್ನು ಬಾಲು ತಂಡ ವೈದಿಕ ಧರ್ಮವನ್ನು ಅಪ್ಪಟ ಚಿನ್ನವೆನ್ನುತ್ತಾರೆಂದಿರುವಿರಿ. ಹಾಗೇನಿಲ್ಲವಲ್ಲಾ? ಅನೆಕ ನ್ಯೂನತೆಗಳನ್ನು ಅವರೂ ತಿಳಿಸಿದ್ದಾರೆ. ಅವರ ಲೇಖನ ಓದಿ. ನಂತರ ಹೇಳಿ. ವೈದಿಕ ಧರ್ಮದ ಕೆಲವು ಆಚರಣೆಗಳು ವೈಜ್ಞಾನಿಕ ಹಾಗೆ ಹೀಗೆ ಹೇಳುವವರಿಗೆ ಬಾಲು ಅವರು ಇವನ್ನು ಹೀಗೆ ಆಚರಿಸಿ ಅಂತಾ ಎಲ್ಲಿಯೂ ತಿಳಿಸಿಲ್ಲ. ಆದರೂ ಕೆಲವರು ಹಾಗೆಂದು ಕೊಂಡಿದ್ದಾರೆ ಇತ್ಯಾದಿ ಬರೆದಿದ್ದಾರೆ. ಪೂರ್ವಾಗ್ರಹ ಬಿಟ್ತು ಅವರ ಲೇಖನ ಓದಿ. ಕೊನೆಯದಾಗಿ ತಾಜಮಹಲ್ ಹಿಂದೂ ದೇವಾಲಯವಾಗಿತ್ತು ಎಂದರೆ ಸುಮ್ಮನೆ ಎಲ್ಲಾರೂ ಒಪ್ಪಿಕೊಳ್ಳುತ್ತಾರೆಯೇ?? ಸಾಕ್ಷಿ ಪುರಾವೆ ಹೇಳಿದರೂ ಒಪ್ಪಿಕೊಳ್ಳುತ್ತಿಲ್ಲ ವಾಸ್ತವಿಕತೆ ಹೀಗಿರುವಾಗ……….???????

   ಉತ್ತರ
  • ಸೆಪ್ಟೆಂ 22 2014

   ಮಾಹಿತಿಗೆ ಧನ್ಯವಾದಗಳು

   ಉತ್ತರ
 7. ಸೆಪ್ಟೆಂ 17 2014

  ಬೌದ್ಧ ಧರ್ಮ ನಾಶಕ್ಕೆ ಇಸ್ಲಾಂ ಕಾರಣ ಎನ್ನುವವರನ್ನು ಕೋಮುವಾದಿಗಳು ಎಂದು ಕರೆಯಲಾದರೆ, ಬೌದ್ಧ ಧರ್ಮ ನಾಶಕ್ಕೆ ವೈದಿಕರು ಕಾರಣ ಎನ್ನುವವರನ್ನು ಪ್ರಗತಿಪರರು ಎಂದೂ ಕರೆಯಲಾಗುತ್ತದೆ.

  ಉತ್ತರ
 8. Rajaram Hegde
  ಸೆಪ್ಟೆಂ 18 2014

  “ಹೀಗಿರುವಾಗ ಬೌದ್ಧರ ಪತನಕ್ಕೆ ತಾವು ಕಾರಣರಲ್ಲ ಎಂದು ಪ್ರತಿಪಾದಿಸುವುದಷ್ಟೇ ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸುವ ವಿದ್ವಾಂಸರು ”
  ಈ ವಾಕ್ಯ ನನಗೆ ವಿಚಿತ್ರವಾಗಿ ಕಾಣಿಸುತ್ತಿದೆ. ನಾನು ಕಾರಣ ಎಂದು ಯಾರು ಆರೋಪಿಸಿದ್ದಾರೆ? ನಾನು ಕಾರಣನಲ್ಲ ವಾದಿಸಿದೆನೆ? ವಿಚಿತ್ರವಾಗಿದೆ! ಬೌದ್ಧ ಮತವು ಭಾರತದಲ್ಲಿ ಅವನತಿ ಹೊಂದಲಿಕ್ಕೆ ವೈದಿಕರು ಕಾರಣ ಎಂಬ ವಾದಕ್ಕೆ ಆಧಾರಗಳಿಲ್ಲ ಎಂಬವರನ್ನು ಒಂದು ಗುಂಪಿಗೆ ಸೇರಿಸಿ (ಪುರೋಹಿತಶಾಹಿಗಳೆ?) ಅದರೊಳಗೆ ನಮ್ಮನ್ನು ಸೇರಿಸಿ ಅರ್ಥೈಸಲಾಗಿದೆ ಎಂಬುದು ಸ್ಪಷ್ಟ. ಇತಿಹಾಸ ಸಂಶೋಧನೆಗೆ ಸಂಬಂಧಪಟ್ಟ ವಿಷಯವನ್ನು ನಾನು ಹೇಳಿದ್ದೇನೆ. ನಮಗೆ ಗೊತ್ತೇ ಇರದ ಕಾಲದಲ್ಲಿ ನನ್ನವರು ಯಾರು, ಯಾರು ಪರರು ಎಂಬುದೂ ನನಗೆ (ನಿಜವಾಗಿಯೂ) ಗೊತ್ತಿಲ್ಲ. ನನ್ನ ಅಜ್ಜನಿಗಿಂತ ಹಿಂದೆ ನನಗೆ ಈ ಕೊಂಡಿ ತಪ್ಪಿಹೋಗಿದೆ. (ವಾಸುದೇವ ಅವರಿಗೆ ಇವೆಲ್ಲ ಸ್ಪಷ್ಟವಾಗಿರುವಂತೆ ಕಾಣುತ್ತದೆ), ಅವರ ಬರವಣಿಗೆಯನ್ನು ನೋಡಿದರೆ ಅವರು ಇತಿಹಾಸ ಕಾಲದುದ್ದಕ್ಕೂ ಸಾಕ್ಷಿಯಾಗಿ ನಿಂತು ಈ ಎಲ್ಲವನ್ನೂ ನೋಡಿದ್ದಾರೆ ಎಂದು ಭಾಸವಾಗುತ್ತದೆ.ಬೌದ್ಧಮತ ಭಾರತದಲ್ಲಿ ಅವನತಿ ಹೊಂದಿದ್ದರಿಂದ ನನಗಾಗಲೀ, ನನ್ನ ಜಾತಿಯವರಿಗಾಗಲೀ, ವೈದಿಕಮತಕ್ಕಾಗಲೀ, ಏನು ಲಾಭವಾಗಿದೆ ಎಂಬುದೂ ನನಗೆ ಗೊತ್ತಿಲ್ಲ. ವಾಸುದೇವ ಅವರು ನನಗೆ ಅದನ್ನು ಸ್ವಲ್ಪ ತಿಳಿಸಿ ಹೇಳಬೇಕು. ಏಕೆಂದರೆ ನನ್ನವರಲ್ಲೂ ಕಷ್ಟ ಪಡುವವರಿದ್ದಾರೆ. ಅವರಾದರೂ ಈ ಲಾಭವನ್ನು ತಮ್ಮದನ್ನಾಗಿ ಮಾಡಿಕೊಂಡು ಬದುಕಿಕೊಳ್ಳುತ್ತಾರೆ.
  ಅಂದಹಾಗೆ ಇತಿಹಾಸ ಕಾಲದ ಕುರಿತು ತಿಳಿದುಕೊಳ್ಳಲಿಕ್ಕೆ ಸಂಶೋಧನೆ ಮಾಡಿ ಕಷ್ಟಪಡುವ ಅಗತ್ಯವಿಲ್ಲ ಎಂಬುದನ್ನು ಇಂಥ ಬರೆಹಗಳು ಆಗಾಗ್ಗೆ ನನಗೆ ನೆನಪಿಸುತ್ತವೆ. ಎದುರಾಳಿಯ ವಾದವನ್ನು ವಿಮರ್ಶಿಸುವುದು ಹೇಗೆಂಬ ಸಮಸ್ಯೆ ಎದ್ದರೆ ಅವರನ್ನು ಬ್ರ್ಯಾಂಡ್ ಮಾಡಿಕೊಳ್ಳಿ, ಕೆಲಸ ಸುಲಭವಾಗುತ್ತದೆ.

  ಉತ್ತರ
 9. vasudeva
  ಸೆಪ್ಟೆಂ 20 2014

  ವಲವಿ ಅವರೆ
  ಗ್ರೀಕರ ಗುಲಾಮ ಪದ್ಧತಿಗೂ, ಭಾರತದ ಜಾತಿ ಪದ್ಧತಿಗೂ, ಅಮೆರಿಕಾದ ವರ್ಣಭೇದ ನೀತಿಗೂ, ಕ್ರಿಶ್ಚಿಯನ್ನರ ಯಹೂದೀ ದ್ವೇಷಕ್ಕೂ ನೇರ ಸಂಬಂಧವಿದೆ ಎನ್ನಲಾಗುವುದಿಲ್ಲ. ಅವುಗಳ ನಡುವೆ ಸಾಮ್ಯ ಹುಡುಕಲು ಹೊರಟರೆ ಅದು ಹುಂಬತನವೇ ಆಗುತ್ತದೆ. ಆದರೆ ಗುಲಾಮ ಪದ್ಧತಿಯನ್ನು ಕಂಡವನಿಗೆ ವರ್ಣಭೇದ ನೀತಿ ಅರ್ಥವಾಗುವುದಿಲ್ಲವೆಂದೋ ಅಥವಾ ಯಹೂದೀ ದ್ವೇಷ ಬೆಳೆಸಿಕೊಂಡವನು ಜಾತಿ ಪದ್ಧತಿಯನ್ನು ಗ್ರಹಿಸಲಾರ ಎಂದೋ ವಾದಿಸುವುದು ಉಚಿತವೆನಿಸುವುದಿಲ್ಲ. ಏಕೆಂದರೆ ಎಲ್ಲ ನಾಗರಿಕತೆಗಳೂ ಆಳದಲ್ಲಿ ಸಮಾನವಾದ ಕ್ರೌರ್ಯ, ಅಸಹನೆಗಳನ್ನು ಬೆಳೆಸಿಕೊಂಡಿದ್ದು ಬಾಹ್ಯದಲ್ಲಿ ಆ ಕೆಡುಕುಗಳ ಅಭಿವ್ಯಕ್ತ ರೂಪಗಳಲ್ಲಿ ವ್ಯತ್ಯಾಸಗಳಿರುತ್ತವೆ ಎಂದು ನನ್ನಂಥವರು ನಂಬಿರುತ್ತಾರೆ (ಇದು ಬ್ರಿಟಿಷರು ಬಿತ್ತಿದ ನಂಬಿಕೆ ಎಂಬ ಆಕ್ಷೇಪಣೆಗೆ ನಮ್ಮ ಬಳಿ ಉತ್ತರವಿಲ್ಲ). ಅಂತಹ ಕ್ರೌರ್ಯ ಮತ್ತು ಶೋಷಣೆಗಳಿಗೆ ಭಾರತವೇನೂ ಹೊರತಲ್ಲ.
  ಬ್ರಿಟಿಷ್ ಶಿಕ್ಷಣದಿಂದ ಪ್ರಣೀತವಾದ ಸಂಶೋಧನೆಗಳು ಎಲ್ಲೆಲ್ಲಿ ದಾರಿ ತಪ್ಪಿಸುತ್ತವೆ ಎಂಬ ತರಹದ ಸಂಶೋಧನೆ ನಿಜಕ್ಕೂ ಸ್ವಾಗತಾರ್ಹ. ಅಂತಹ ಸಂಶೋಧನೆ ಸ್ವವಿಮರ್ಶೆಯಿಂದ ಅಂದರೆ ಒಂದು ಸಮುದಾಯ ಎರಡು ಸಾವಿರ ವರ್ಷಗಳ ಸತತ ದಾಳಿ, ಅನ್ಯಾಕ್ರಮಣ ಮತ್ತು ಅನ್ಯ ಆಳ್ವಿಕೆಗಳನ್ನು ಅನುಭವಿಸಿದ್ದಲ್ಲಿ ಆ ಸಮುದಾಯದ ಬೌದ್ಧಿಕ ಮತ್ತು ಸಾಂಸ್ಕೃತಿಕ ಉಸ್ತುವಾರಿಕೆ ವಹಿಸಿಕೊಂಡಿದ್ದವರು ಎಷ್ಟರ ಮಟ್ಟಿಗೆ ಹೊಣೆ ಎಂಬ ಸ್ವಯಂ ಜಿಜ್ಞಾಸೆಯಿಂದ ಮೊದಲಾಗಬೇಕು ಎಂಬುದಷ್ಟೇ ನನ್ನಂಥವರ ಅಪೇಕ್ಷೆ. ಬ್ರಾಹ್ಮಣರು ಅಂತಹ ಹೊಣೆಯನ್ನು ಎಂದೂ ಹೊತ್ತೇ ಇರಲಿಲ್ಲ ಎಂದು ವಾದಿಸುವವರ ಬಳಿ ಸಂವಾದ ಸಾಧ್ಯವಿಲ್ಲ.
  ನಾನು ಬಾಲು ಅವರ ಹಲವು ಲೇಖನಗಳನ್ನು ಓದಿದ್ದೇನೆ. ನೀವು ಹೇಳುವಂತೆ ಅವರು ವೇದಧರ್ಮದ ನ್ಯೂನತೆಗಳನ್ನು ತಿಳಿಸಿರುವರಾದರೂ ಬಹುತೇಕ ಕಡೆಗಳಲ್ಲಿ ಜಾತೀಯತೆ ಒಂದು ಪಿಡುಗೇ ಅಲ್ಲ, ಬ್ರಾಹ್ಮಣ್ಯ ಅನ್ಯಜಾತಿಗಳಲ್ಲಿ ಹುಟ್ಟಿಸುವ ಕೀಳರಿಮೆ ಒಂದು ಸಮಸ್ಯೆಯೇ ಅಲ್ಲ ಎಂಬ ತರಹದ ಅವರ ನಿಲುವುಗಳು ನನ್ನಂಥವರಿಗೆ ಆಘಾತ ಉಂಟು ಮಾಡುತ್ತದೆ. ಒಂದು ಸಣ್ಣ ನಿದರ್ಶನ ನೀಡುತ್ತೇನೆ. ಸಿಎಸ್‌ಎಲ್‌ಸಿ ಲೇಖನ ಮಾಲೆಯ ೧೧ನೇ ಕಂತಿನಲ್ಲಿರುವ ಈ ಕೆಲವು ಸಾಲುಗಳನ್ನು ಗಮನಿಸಿ:
  “ಎಲ್ಲಾ ಬ್ರಾಹ್ಮಣರೂ ಪುರೋಹಿತರಲ್ಲ. ಬ್ರಾಹ್ಮಣರಲ್ಲಿ ಪುರೋಹಿತರು ಎಂದು ಕರೆಸಿಕೊಂಡ ಒಂದು ಪ್ರಭೇದವಿದೆ”
  (ಕುವೆಂಪು ಮೊದಲ್ಗೊಂಡು ಎಲ್ಲ ಪ್ರಗತಿಪರರೂ ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದರೂ ಬಾಲು ಅವರು ಇದನ್ನು ಹೊಸವಿಚಾರ ಎಂಬಂತೆ ಮಂಡಿಸುತ್ತಾರೆ).
  “ಎಲ್ಲರೂ ಬ್ರಾಹ್ಮಣರು ಜಾತಿಯಲ್ಲಿ ಮೇಲೆ ಅನ್ನುತ್ತಾರೆ, ಸಾಂಪ್ರದಾಯಿಕ ಬ್ರಾಹ್ಮಣರು ಅನ್ಯ ಜಾತಿಯವರನ್ನು ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ, ಸಹಪಂಕ್ತಿ ಭೋಜನವನ್ನು ಮಾಡುವುದಿಲ್ಲ, ಇತರ ಜಾತಿಯವರ ಜೊತೆಗೆ ವಿವಾಹ ಸಂಬಂಧವನ್ನು ನಿರಾಕರಿಸುತ್ತಾರೆ, ಇತರ ಜಾತಿಯವರು ಅವರನ್ನು ಬಹುವಚನದಲ್ಲಿ ಸಂಬೋಧಿಸಬೇಕು, ಆದರೆ ಬ್ರಾಹ್ಮಣರ ಮಕ್ಕಳೂ ಕೂಡ ಇತರ ಜಾತಿಯವರನ್ನು ಏಕವಚನದಲ್ಲೇ ಕರೆಯುತ್ತವೆ, ಇಷ್ಟನ್ನೇ ಇಟ್ಟುಕೊಂಡು ಪುರೋಹಿತರಿಗೆ ಹಾಗೂ ಆ ಮೂಲಕ ಬ್ರಾಹ್ಮಣರಿಗೆ ಉಳಿದ ಸಮಸ್ತ ಜನರ ಜೀವನದ ಮೇಲೆ ನಿಯಂತ್ರಣ ಬಂದು ಆಳ್ವಿಕೆ ನಡೆಯಿತು ಎಂದರೆ ನಂಬಬಹುದೆ?”
  ಇವರ ಪ್ರಕಾರ ಯುರೋಪಿನಲ್ಲಾದ ಚಾರಿತ್ರಿಕ ವಿಪ್ಲವಗಳು ಅನ್ಯ ಕಾಲ-ದೇಶಗಳಲ್ಲಿಯೂ ಯಥಾವತ್ತಾಗಿ ಮರುಕಳಿಸಿದಾಗ ಮಾತ್ರ ಆಳ್ವಿಕೆ ನಡೆಯಲು ಸಾಧ್ಯವಾಗುತ್ತದೆ!! ಅವರ ಒಟ್ಟು ಲೇಖನಗಳಲ್ಲಿ ಬ್ರಾಹ್ಮಣ್ಯದ ನಿರಪರಾಧಿತನವನ್ನು ಎತ್ತಿಹಿಡಿಯುವ ಇಂತಹ ಹಲವು ನಿದರ್ಶನಗಳು ಸಿಗುತ್ತವೆ. ಹೀಗೆಲ್ಲ ವಾದಿಸುವವರನ್ನು ’ಬ್ರ್ಯಾಂಡ್’ ಮಾಡದಿರಲು ಹೇಗೆ ಸಾಧ್ಯ ನೀವೇ ಹೇಳಿ?

  ಉತ್ತರ
  • Nagshetty Shetkar
   ಸೆಪ್ಟೆಂ 20 2014

   ಹೌದು ವಾಸುದೇವ ಅವರೇ, ಈ ಬಾಲು ಹಾಗೂ ಅವರ ಬಾಲಂಗೋಚಿಗಳು ವೈದಿಕ ಧರ್ಮವನ್ನು ಸಮರ್ಥಿಸಲೆಂದೇ ಸಂಶೋಧನೆ ಮಾಡುತ್ತಿದ್ದಾರೆ. ಇವರ ಬಂಡವಾಳ ಏನೆಂಬುದು ಪ್ರಜಾವಾಣಿ ಪ್ರಕಾಶನ ಪ್ರಕಟಿಸಿರುವ ‘ವಚನ ಸಾಹಿತ್ಯ: ಒಂದು ಸಂವಾದ’ ಸಂಗ್ರಹದಲ್ಲಿ ಬಯಲಾಗಿದೆ.

   ಉತ್ತರ
  • ಷಣ್ಮುಖ
   ಸೆಪ್ಟೆಂ 21 2014

   ವಾಸುದೇವರೇ, ಯಾರೊಬ್ಬರೂ ಗುಮನಿ ಅನುಮಾನಗಳಿಂದ ಒಂದು ಸಂಶೋದನಾ ವಾದವನ್ನು ತಪ್ಪೆಂದಾಗಲೀ ಸರಿ ಎಂದಾಗಲೀ ಸಾಬೀತು ಮಾಡಲಾಗುವುದಿಲ್ಲ! ಎಲ್ಲಾ ಕಾಲದಲ್ಲೂ ಹೊಸ ವಿಚಾರಗಳನ್ನು ಹೊಸ ಪ್ರಶ್ನೆಗಳನ್ನು ಮುಂದಿಟ್ಟಾಗ ಅಸ್ತಿತ್ವದಲ್ಲಿರುವ ವಾದಗಳಿಗೇ ಆತುಕೊಂಡಿರುವವರ ಪ್ರತಿಕ್ರಿಯೆಯಂತೆಯೇ ತಮ್ಮದೂ ಇದೆ. “ವೈದಿಕ ಧರ್ಮ”ವೆನ್ನುವ ಒಂದು ಸಂಗತಿಯ ಅಸ್ತಿತ್ವವನ್ನೇ ಪ್ರಶ್ನಿಸುವವರನ್ನು(Are there any native religions in India?_http://www.asha-academy.org/publications/details/150/section:5) ವೈದಿಕ ಧರ್ಮದ ಸಮರ್ಥಕರು ಎನ್ನುವಂತೆ ವಾದಿಸುವವರಿಗೆ ಏನು ಹೇಳಬೇಕು? ಸುಮ್ಮನೆ ಕಪೋಲಕಲ್ಪಿತ ಊಹೆಗಳನ್ನು ವಾದವೆಂಬಂತೆ ಕಲ್ಪಿಸಿಕೊಳ್ಳುವ ಬದಲು ನಿಮ್ಮ ಅದೇ ವಿಚಾರಗಳನ್ನು ಪ್ರತಿಪಾದಿಸಲು ವಿಜ್ಞಾನದ ದಾರಿಯನ್ನು ಹಿಡಿಯಿರಿ. ಹೀಗೆ ಮಾಡಬೇಕಂದರೆ ಆಧಾರಸಹಿತ ತರ್ಕಬದ್ದವಾದ ಚರ್ಚೆಯನ್ನು ಮಾಡಿ. ಅದನ್ನು ಬಿಟ್ಟು ಲೇಖನಗಳ ಸಾಲುಗಳನ್ನು ಎತ್ತಿಟ್ಟು ಅದಕ್ಕೆ ನಿಮ್ಮ ಗುಮಾನಿಯೇ ಬ್ರಾಂಡಿಗ್ ಗೆ ಕಾರಣ ಎನ್ನುವ ಅಬೌದ್ದಿಕ ದಾರಿಯನ್ನೇಕೆ ಹಿಡಿಯುತ್ತೀರಿ. ಅದೇ ಸಾಲುಗಳನ್ನೇ ಆಧಾರರಹಿತ, ತರ್ಕಹೀನ ಎಂದು ಸಾಭೀತುಪಡಿಸಿ ಅವು ಅವೈಜ್ಞಾನಿಕ ನಿಲುವು ಎಂದಾದರೂ ತೋರಿಸಿ. ಈ ದಾರಿ ಲಭ್ಯವಿದ್ದಾಗಲೂ ಅನುಮಾನ, ಗುಮಾನಿಗಳ ಮೊರೆಹೋಗುವುದು ಬೌದ್ದಿಕ ದುರ್ಬಲತೆಯನ್ನು ಪ್ರದರ್ಶಿಸಿದಂತಾಗುತ್ತದೆಯೇ ವಿನಃ ಆ ವಾದವನ್ನು ತಪ್ಪೆಂದು ತೋರಿಸಿದಂತಾಗುವುದಿಲ್ಲ. ಈ ತಂಡದ ವಾದ ತಪ್ಪೆಂದು ತಮಗೆ ಅಷ್ಟು ಬಲವಾಗಿ ಅನಿಸಿರಬೇಕಾದರೆ ಅವನ್ನು ವೈಜ್ಞಾನಿಕವಾಗಿ ತಪ್ಪೆಂದು ತೋರಿಸುವ ಮೂಲಕ ಒಂದು ತಪ್ಪಾದ ಅವೈಜ್ಞಾನಿಕ ವಾದವನ್ನು ಒಪ್ಪಿಕೊಳ್ಳುವ ದುರಂತದಿಂದ ಜ್ಞಾನದಾಹಿಗಳನ್ನು ಪಾರುಮಾಡಿ.

   ಉತ್ತರ
   • Nagshetty Shetkar
    ಸೆಪ್ಟೆಂ 21 2014

    ರೀ ಷಣ್ಮುಖ, ವೈದಿಕ ಧರ್ಮದ ಕುರಿತು ನಿಮ್ಮ ಗುಂಪಿನ ನಿಲುವು ಏನು ಅಂತ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಒಂದು ಲೇಖನ ಬರೆಯಿರಿ. ಅದನ್ನು ಬೇಕಾದರೆ ಪ್ರಜಾವಾಣಿಯಲ್ಲಿ ಪ್ರಕಟಿಸುವ ವ್ಯವಸ್ಥೆಯನ್ನು ನಾನೇ ಮಾಡುತ್ತೇನೆ. ಅಥವಾ ನಿಳುಮೆಯಲ್ಲೇ ಪ್ರಕಟಿಸಿ. ಅದು ಬಿಟ್ಟು ಕೇವಲ ನಿಮ್ಮ ಗುಂಪಿನವರಿಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಬರೆದಿರುವ ಸಂಶೋಧನಾ ಕಗ್ಗವನ್ನೆಲ್ಲ ಓದಲು ಹೇಳಬೇಡಿ.

    ಉತ್ತರ
    • ಷಣ್ಮುಖ
     ಸೆಪ್ಟೆಂ 21 2014

     ಕ್ಷಮಿಸಿ ನಾಗಶೆಟ್ಟಿ ಶೆಟ್ಕರರೇ ನಾನು ನಿಮಗೆ ಯಾವ ಪುಸ್ತಕವನ್ನೂ ಓದಲು ಹೇಳಿಲ್ಲ! ನಾನು ಹೇಳಿದ್ದು ವಾಸುದೇವರಿಗೆ! ನಿಮ್ಮ ಪಾಂಡಿತ್ಯ ನಮಗೆ ಗೊತ್ತೇ ಇರುವುದರಿಂದ ನಿಮಗೆ ಹೇಳುವ ಉದ್ದಟತನ ನಮಗಿಲ್ಲ 🙂

     ಉತ್ತರ
     • Nagshetty Shetkar
      ಸೆಪ್ಟೆಂ 22 2014

      ಬ್ರಾಹ್ಮಣ್ಯದ ಸೊಕ್ಕು.

      ಉತ್ತರ
  • Nagshetty Shetkar
   ಸೆಪ್ಟೆಂ 21 2014

   “ಇತರ ಜಾತಿಯವರು ಅವರನ್ನು ಬಹುವಚನದಲ್ಲಿ ಸಂಬೋಧಿಸಬೇಕು, ಆದರೆ ಬ್ರಾಹ್ಮಣರ ಮಕ್ಕಳೂ ಕೂಡ ಇತರ ಜಾತಿಯವರನ್ನು ಏಕವಚನದಲ್ಲೇ ಕರೆಯುತ್ತವೆ.”

   ಹೌದು ವಾಸುದೇವ ಅವರೇ! ಬ್ರಾಹ್ಮಣ್ಯದ ನಿದರ್ಶನವನ್ನು ಶೂದ್ರ ಶ್ರೀನಿವಾಸ ಅವರು ನಿರೂಪಿಸಿರುವ ಈ ಘಟನೆಯಲ್ಲಿ ನೋಡಬಹುದು:

   “ಅನಂತಮೂರ್ತಿಯವರಿಗೆ ಕೇರಳದ ‘‘ಸೋಷಿಯಲ್ ಸೈಂಟಿಸ್ಟ್’’ ಸಂಸ್ಥೆಯ ಮಾದರಿಯಲ್ಲಿ ಒಂದು ಸಂಸ್ಥೆಯನ್ನು ಕಟ್ಟುವ ಆಸೆ ಇತ್ತು. ಅದಕ್ಕೆ ಒಂದು ಅದ್ಭುತ ಟಿಪ್ಪಣಿಯನ್ನು ಡಿ.ಆರ್.ನಾಗರಾಜ್ ಸಿದ್ಧ ಪಡಿಸಿದ್ದ. ಅದನ್ನು ಕುರಿತು ಚರ್ಚಿಸಲು ಬೆಳಗ್ಗೆ ತಿಂಡಿಗೆ ಅಥಿತಿ ಗೃಹಕ್ಕೆ ಕರೆದಿದ್ದರು. ಗೆಳೆಯ ಭರತಾದ್ರಿ ನಾವು ಕಾಯುತ್ತಿದ್ದೆವು ಅಷ್ಟರಲ್ಲಿ ಕನ್ನಡದ ಹಿರಿಯ ವಿಮರ್ಶಕರಿಬ್ಬರು ಬಂದರು ಅವರಿಬ್ಬರೂ ಅತ್ಯಂತ ಮೇಲ್ಜಾತಿಯವರು, ಇದ್ದಕ್ಕಿದ್ದಂತೆ ಅವರಿಬ್ಬರಲ್ಲಿ ಒಬ್ಬರು ಡಿ.ಆರ್ ನಾಜರಾಜ್ ನನ್ನು ಕುರಿತು ‘‘ನಾಗರಾಜ್ ನಿಮಗೆ ಕನ್ನಡವೇ ಬರೆಯೋದಕ್ಕೆ ಬರುವುದಿಲ್ಲ’’ ಎಂದರು ಅದನ್ನು ಸರ್ಟಿಫೈ ಮಾಡುವ ರೀತಿಯಲ್ಲಿ ಇನ್ನೊಬ್ಬರು ‘‘ಹೌದು ನಾಗರಾಜ್ ನನಗೂ ಹಾಗೆ ಅನ್ನಿಸುತ್ತದೆ.’’ಎಂದರು.”

   ಉತ್ತರ
 10. ಷಣ್ಮುಖ
  ಸೆಪ್ಟೆಂ 21 2014

  _http://books.google.co.in/books?id=ZrqLAgAAQBAJ&dq=any+native+religions+in+India+hipkapi&output=html_text&source=gbs_navlinks_s ಈ ಪುಸ್ತಕವನ್ನು ಓದಿ ನಂತರ ಈ ಸಂಶೋದನಾ ಗುಪು ‘ವೈದಿಕ ಧರ್ಮ’ದ ಅಸ್ತಿತ್ವದ ಕುರಿತ ನಿಲುವೇನೆಂದು ಅರಿತು ತಮ್ಮ ಊಹಾ(ಗುಮಾನಿಯಿಂದ ಹುಟ್ಟಿದ ಕಪೋಲಕಲ್ಪಿತ) ಸಿದ್ದಾಂತವನ್ನು ಮಂಡಿಸಿ.

  ಉತ್ತರ
 11. ಗಿರೀಶ್
  ಸೆಪ್ಟೆಂ 22 2014

  <<>>

  ಮಾನ್ಯ ಅಶೋಕ್ ಅವರೆ, ನಿಮ್ಮ ಈ ವಾಕ್ಯಗಳನ್ನು ಗಮನಿಸಿದರೆ, ಹಿಂದೂ (ಎನ್ನುವ ಆಚರಣೆಯಲ್ಲಿಲ್ಲದ) ಧರ್ಮ ಉದಾರವಾದಿಯಾಗಿಯೂ ಕಂದಾಚಾರಗಳನ್ನು ಉಳಿಸಿಕೊಂಡೂ ಬದುಕಿತು. ನಿಮ್ಮ ಸಮಸ್ಯೆ ಏನು? ಧರ್ಮ ಎಂದರೆ ನಿಮ್ಮ ಅರ್ಥ, ಮತಗಳಂತೆ ಅವು ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ಸರಿಯಿರಬೇಕೆಂದು ಬಯಸುತ್ತಿರುವುದು ನಿಮ್ಮ ಸೆಕ್ಯುಲರ್ ಧರ್ಮದ ಮೊದಲ ನಿಯಮದಂತೆ ಕಾಣಿಸುತ್ತಿದೆ.
  ಉದಾರವಾದಿ ಆಗಿತ್ತು ಮತ್ತು ತನ್ನ ಕೆಲ ಆಚರಣೆಗಳನ್ನು ಉಳಿಸಿಕೊಂಡಿದೆಯೆಂದರೆ ಅಗತ್ಯವಿತ್ತು ಉಳಿಸಿಕೊಂಡಿದೆ.

  ನಿಮ್ಮ ಮೂಗಿನ ನೇರಕ್ಕೆ ಇಡೀ ಸಮಾಜ ಧರ್ಮ ಇರಬೇಕೆಂದು ಬಯಸುವುದು ಸರಿಯೇ? ಹಾಗೆ ಇರಲಾಗುತ್ತದೆಯೆ ನಿಮ್ಮ ಬಯಸುವಿಕೆಯಲ್ಲಿಯೇ ಸಮಸ್ಯೆ ಇರುವುದು ಕಾಣಿಸುತ್ತಿಲ್ಲವೆ? ಇನ್ನು ನಿಮ್ಮ ಇಡೀ ಲೇಖನವನ್ನು ಪೊಲಿಟಿಕಲಿ ಕರೆಕ್ಟಾಗಿರುವಂತೆ ಬರೆಯಲು ಶ್ರಮಿಸಿದ್ದು ಎದ್ದು ಕಾಣುತ್ತಿದೆ. ದಯವಿಟ್ಟು ನೇರವಾಗಿ ಬರೆದರೆ ಖಂಡಿತ ನೀವು ಇಂತಹ ಲೇಕನ ಬರೆಯಲಾರಿರಿ ಎಂದು ನನ್ನ ಅನಿಸಿಕೆ.
  ಬೌದ್ದ ಧರ್ಮ ಇಲ್ಲಿ ಹುಟ್ಟಲು ಅವಕಾಶವಿತ್ತು ಎಂದರೆ ಅದಕ್ಕಿಂತ ಉದಾರವಾದಿತನ ನೀವು ಪ್ರತಿಪಾದಿಸುವ ಸೆಕ್ಯುಲರ್ ಮತದಲ್ಲೂ ಇಲ್ಲವಲ್ಲ. ಇದೆಲ್ಲ ನಿಮ್ಮ ಕಣ್ಣೀಗೆ ತಪ್ಪಾಗಿ ಕಾನಿಸುವುದಕ್ಕೆ ಮೂಲ ಕಾರಣ ನೀವು ಆವಾಹಿಸಿಕೊಂಡಿರುವ ಸಕ್ಯುಲರ್ ಮತ. ಅದರ ಕಣ್ಣಿಂದಲೇ ನೀವು ಸಮಾಜವನ್ನು ನೋಡುತ್ತಿದ್ದೀರಿ ಮತ್ತು ಅದು ಮಾತ್ರ ಸರಿಯಾದದ್ದು ಎಂದು ಭಾವಿಸಿದ್ದೀರಿ. ಆ ವಿಷಯದಲ್ಲಿ ಸನಾತನಿ ಹಿಂದೂ ಗಳೆ ನಿಮಗಿಂತ ಮುಂದೆ ಇದ್ದಾರೆ. ಇದು ನಿಮ್ಮನ್ನು ಕುರಿತು ವೈಯಕ್ತಿಕವಲ್ಲ, ಎಲ್ಲ ಸೆಕ್ಯುಲರ್ ಮತೀಯರ ಕಥೆಯ ಬಗ್ಗೆ ಒಟ್ಟಾರೆ ಅನಿಸಿಕೆ.

  ಉತ್ತರ
  • ಸೆಪ್ಟೆಂ 22 2014

   ಅಭಿಪ್ರಾಯಕ್ಕೆ ಧನ್ಯವಾದಗಳು.
   ಎಲ್ಲರೂ ಅವರವರಿಗೆ ತೋಚಿದ ಸತ್ಯವನ್ನೇ , ನಿಮ್ಮ ಮಾತಿನ ಪ್ರಕಾರ ಮೂಗಿನ ನೇರಕ್ಕೇ ಬರೆಯುವುದು. ನಾನೂ ಅದಕ್ಕೆ ಹೊರತಲ್ಲ.
   ಬರೆಯುವದನ್ನು ಶ್ರಮವೆಂದು ನಾನು ಪರಿಗಣಿಸಿಲ್ಲವಾದ್ದರಿಂದ ಪೊಲಿಟಿಕಲಿ ಕರೆಕ್ಟಾಗಿ ಬರೆಯಬೇಕಾದ ಅನಿವಾರ್ಯತೆ ಖಂಡಿತ ನನಗಿಲ್ಲ.
   ಹಿಂದೂ ಧರ್ಮದ ಉದಾರತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯಲ್ಲಿರುವುದಕ್ಕಿಂತ ಹೆಚ್ಚನ್ನೇ ಲೇಖನದಲ್ಲಿ ಬರೆದಿರಬೇಕು.
   ಸೆಕ್ಯುಲರ್ ತನವೆಂಬುದು ಬದುಕಿನಲ್ಲಿ ಇರಬೇಕಾದ ಅಂಶವೇ ಹೊರತು ಬರಹದಲ್ಲಿ ಮಾತ್ರವಲ್ಲ ಎಂಬುದು ನನ್ನ ತಿಳಿವು. ಹಾಗಾಗಿ ಎಂದಿನ ‘ಸೆಕ್ಯುಲರ್’ ಪದದ ಹೀಯಾಳಿಕೆಗೆ ನನ್ನಲ್ಲಿ ಉತ್ತರವಿಲ್ಲ.
   ನೇರವಾಗಿ ಬರೆಯಿರಿ ಎಂದಿದ್ದೀರಿ. ನನಗೆ ತಿಳಿದಿದ್ದನ್ನು ನೇರವಾಗೇ ಬರೆದಿದ್ದೀನಿ. ನೇರವಾಗಿ ಬರೆಯುವುದೆಂದರೆ ನಿಮ್ಮ ಮೂಗಿನ ನೇರಕ್ಕೆ ಎಂದಾದರೆ ಅದನ್ನು ನೀವೇ ಬರೆಯಬೇಕು! ಯಾಕೆಂದರೆ ನಾನು ನನ್ನ ಮೂಗಿನ ನೇರಕ್ಕಷ್ಟೇ ಬರೆಯಲು ಸಾಧ್ಯ!

   ಉತ್ತರ
 12. ಗಿರೀಶ್
  ಸೆಪ್ಟೆಂ 22 2014

  ಸೆಕ್ಯುಲರ್ ಪದದ ಹೀಯಾಳಿಕೆಗೆ ಉತ್ತರವಿಲ್ಲ ಎಂದರೆ ನಿಮ್ಮ ಇಡೀ ಲೇಖನ ಕೇವಲ ಮಣ್ಣಾಂಗಟ್ಟಿ. ಏಕೆಂದರೆ ನಿಮ್ಮ ಇಡೀ ಲೇಖನ ಸಮಾಜವನ್ನು ಸೆಕ್ಯುಲರ್ ಕನ್ನಡಕದಿಂದಷ್ಟೇ ನೋಡಿದೆ.
  ಧರ್ಮ ನಿಮ್ಮ ನನ್ನ ಮೂಗಿನ ನೇರಕ್ಕೆ ಇರುವುದಿಲ್ಲ. ಅದು ಸಮಾಜ ಪಾಲಿಸುತ್ತದೆ ಅಷ್ಟೇ. ಆದರೆ ನೀವು ನಿಮ್ಮ ಮೂಗಿನ ನೇರಕ್ಕಿಲ್ಲವೆಂದು ಅಲವತ್ತು ಕೊಂಡಿದ್ದೀರಿ. ಅದು ನಿಮಗೆ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಧರ್ಮ ಎಂದರೇನೆಂದು ಇಲ್ಲಿ ನಿಲುಮೆಯಲ್ಲಿ ಕೆಲವು ಬರಹಗಳಿವೆ ಅವನ್ನು ಒಮ್ಮೆ ಓದಿಕೊಳ್ಳಿ.

  ಮತ್ತೊಮ್ಮೆ ವಿಷದ ಪಡಿದುತ್ತಿದ್ದೇನೆ ಆಗಲೂ ಹೇಳಿದ್ದೆ ನಿಮಗದು ಬಹುಶಃ ಕಾಣಿಸಿರಲಿಕ್ಕಿಲ್ಲ.

  {{ಇದು ನಿಮ್ಮನ್ನು ಕುರಿತು ವೈಯಕ್ತಿಕವಲ್ಲ, ಎಲ್ಲ ಸೆಕ್ಯುಲರ್ ಮತೀಯರ ಕಥೆಯ ಬಗ್ಗೆ ಒಟ್ಟಾರೆ ಅನಿಸಿಕೆ}}

  ಉತ್ತರ
  • Nagshetty Shetkar
   ಸೆಪ್ಟೆಂ 22 2014

   ಪ್ರಪಂಚವನ್ನು ಸೆಕ್ಯೂಲರ್ ಕಣ್ಣಿನಿಂದ ನೋಡುವುದರಲ್ಲೇ ಪ್ರಪಂಚದ ಒಳಿತಿದೆ. ಕೋಮುವಾದದ ದೃಷ್ಟಿಯಿಂದ ನೋಡಿದರೆ ಪ್ರಪಂಚ ನಿರ್ನಾಮವಾಗುವುದು ಖಂಡಿತ. ಬಹುಶ ಕೋಮುವಾದಿಗಳು ಬಯಸುವುದು ಅದನ್ನೇ ಇರಬೇಕು.

   ಉತ್ತರ
  • ಸೆಪ್ಟೆಂ 22 2014

   ಒಂದು ಪ್ರಾಂತ್ಯದ ಆ ಕಾಲಘಟ್ಟದ ಜನರು ಪಾಲಿಸುವ ಧರ್ಮ ಅವರ ಮೂಗಿನ ನೇರಕ್ಕೆ ಮಾತ್ರ. ಇಲ್ಲವಾದಲ್ಲಿ ಕಾಲಕಾಲಕ್ಕೆ ಧರ್ಮಗಳಲ್ಲಿ ಕಾಣಿಸುವ ಮಾರ್ಪಾಟು ಕಾಣುತ್ತಿರಲಿಲ್ಲ ಅಲ್ಲವೇ?
   ನನ್ನ ಮೂಗಿನ ನೇರಕ್ಕೆ ಇಲ್ಲವೆಂದ ಮಾತ್ರಕ್ಕೆ ಅದು ಸಮಸ್ಯೆಯೆಂದೇನೂ ನನಗನಿಸಿಲ್ಲ. To be frank ನಾವಿಬ್ಬರೂ ನಡೆಸುತ್ತಿರುವ ಚರ್ಚೆಗೂ ಈ ಲೇಖನಕ್ಕೂ ಏನು ಸಂಬಂಧವೆಂಬುದೇ ತಿಳಿಯುತ್ತಿಲ್ಲ!
   ಸೆಕ್ಯುಲರ್ ಕನ್ನಡಕದ ಬಗ್ಗೆ ಅಷ್ಟೆಲ್ಕ ಹೇಳಿದ್ದೀರ. . ನಿಮ್ಮದ್ಯಾವ ಕನ್ನಡಕ, ಅದನ್ನೊಮ್ಮೆ ತೆಗೆದು ನೋಡಿ ಎಂದು ಹೇಳುವ ದಾರ್ಷ್ಯ ನನಗಿಲ್ಲ.
   ನಿಮ್ಮ ಪ್ರಕಾರ ನನ್ನದು ಸೆಕ್ಯುಲರ್ ಕನ್ನಡಕವೇ ಆಗಿದ್ದರೆ ಚಿಂತಿಲ್ಲ. .ಆ ಸೆಕ್ಯುಲರ್ ಕನ್ನಡಕ ಇಲ್ಲಿವರೆಗೆ ನನ್ನನ್ನು (ವ್ಯೆಯಕ್ತಿಕವಾಗೇ ಹೇಳುತ್ತಿದ್ದೇನೆ) ಸರಿದಾರಿಯಲ್ಲಿಯೇ ನಡೆಸಿದೆ.
   anyhow ಮಣ್ಣಾಂಗಟ್ಟಿ ಲೇಖನವನ್ನೂ ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ.

   ಉತ್ತರ
 13. ಗಿರೀಶ್
  ಸೆಪ್ಟೆಂ 22 2014

  ಯಾರ ಒಳಿತಿದೆ? ಎನ್ನುವುದು ಮುಖ್ಯ ಶೆಟ್ಕರ್, ಗಂಜಿ ಕೇಂದ್ರಾಶ್ರಯಿತರಿಗಾದರೆ ಸರಿ. ಅದು ಗೊತ್ತಿರುವ ವಿಚಾರವೆ.

  ಉತ್ತರ
 14. ಇಸಾಯಿ ಮಹಮದ್ ಸಿಖ್ಖರು ಒಂದೇ
  ಭಾರತ ನೆಲದಲಿ ಹಿಂದುಗಳೆ
  ಹಿಂದೂ-ಮುಸ್ಲಿಂ ಕ್ರೈ ಸ್ತರೆಲ್ಲ ಗೆ ಒಂದೇ ಭಾರತ ಮಂದಿರ ಹಿಂದೂ-ಮುಸ್ಲಿಮನಾಗು ಬೌದ್ಧ ಕ್ರೈಸ್ತನೆ ಆಗು
  ಚಾರ್ವಾಕನೇ ಆಗು ಏನಾದರೂ ಆಗು
  ಮೊದಲು ಮಾಡಿದವನಾಗು

  ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments