ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2014

2

ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣರಾ?

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

ಗಂಗಾ ಪೂಜೆಪುರೋಹಿತಶಾಹಿ ಎಂದರೆ ಧರ್ಮ, ದೇವರು  ಮತ್ತು ಮಹಾತ್ಮರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಇತರೆ ವರ್ಗಗಳನ್ನು ಅಕ್ಷರ  ಹಾಗೂ ಇನ್ನಿತರ ಸಾಮಾಜಿಕ ಅವಕಾಶಗಳಿಂದ ವಂಚಿಸಿದ  ಒಂದು ಪ್ರಭಾವಶಾಲಿ ವರ್ಗ! ಈ ಪುರೋಹಿತಶಾಹಿ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ಹಾಗೂ ಸ್ವಾರ್ಥಕ್ಕೆ ತಿರುಗಿಸಿಕೊಂಡು ಸಮಾಜದ ದುರ್ಬಲ ವರ್ಗಗಳನ್ನು ಶೋಷಿಸುತ್ತದೆ ಎಂಬ ಆರೋಪವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.

ಪುರೋಹಿತ ಶಾಹಿ ಅರಿವು ಮತ್ತು ಜ್ಞಾನವನ್ನು ತನ್ನ ಖಾಸಗಿ ಸೊತ್ತು ಎಂದು ಭಾವಿಸಿ  ಸಮಾಜದ ಹಿಂದುಳಿದ ವರ್ಗಗಳಿಗೆ ವಿದ್ಯೆಯನ್ನು ಕಲಿಯಲು ಅವಕಾಶ ನೀಡದೆ ವಂಚಿಸಿತು. ರಾಜಾಶಾಹಿ ಜೊತೆ ಕೈ ಜೋಡಿಸಿ ಹಿಂದುಳಿದವರು  ಸಾಮಾಜಿಕ ಸ್ಥಾನಮಾನ ಪಡೆಯದಂತೆ ನಿರ್ಬಂಧಿಸಿತು. ವ್ಯವಸ್ಥೆ ಮತ್ತು ಸಮುದಾಯದಲ್ಲಿ ತರತಮ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಯಿತು. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅರಾಜಕತೆಗೆ ಕಾರಣವಾಯಿತು. ಶುದ್ಧ ರೂಪದಲ್ಲಿದ್ದ ಧರ್ಮ ಪುರೋಹಿತ ಶಾಹಿಯಿಂದ ಭ್ರಷ್ಟವಾಯಿತು.ದೇವರು ಮತ್ತು ಧರ್ಮದ ಏಕಸ್ವಾಮ್ಯವನ್ನು ತಮ್ಮದಾಗಿಸಿಕೊಂಡು ದೇವರು, ಧರ್ಮದ ಏಜೆಂಟರಾಗಿ  ಜನರನ್ನು ಮೂಡನಂಬಿಕೆಯ ಕೂಪಕ್ಕೆ ತಳ್ಳಿತು. ಸ್ವತಃ ದುಡಿಮೆ ಮಾಡದೆ ದಾನ ಧರ್ಮದ ಹೆಸರಿನಲ್ಲಿ ಜನರಿಂದ ಆಹಾರ,ವಸ್ತ್ರ ದ್ರವ್ಯಾದಿಳನ್ನು ಕಿತ್ತು ಜೀವನ ನಡೆಸಿತು. ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿರಿಸಿ ಸಮಾಜದ ಕೆಳಸ್ತರದ ಜನರ ದುಡಿಮೆಯಲ್ಲಿ ಕೂತು ತಿಂದು ಶ್ರಮಸಂಸ್ಕøತಿಯನ್ನು ಧಿಕ್ಕರಿಸಿತು. ನಾವು ಆಸ್ತಿವಂತರು,ನಾವು ಆಳುವವರು,ನಮ್ಮ ಸೇವೆ ಮಾಡಲು, ಬೇಕಾದುದನ್ನೆಲ್ಲಾ ಉತ್ಪತ್ತಿ ಮಾಡಿ ಕೊಡುವವರು ಶೂದ್ರರು ಎಂದು ಪರಿಭಾವಿಸಿ ನಿಕೃಷ್ಟವಾಗಿ ನಡೆದುಕೊಂಡಿತು.

ವಸಾಹತುಶಾಹಿ ವ್ಯವಸ್ಥೆಯೊಂದಿಗೆ ಈ ಪುರೋಹಿತಶಾಹಿ ಶಾಮೀಲಾಗಿ ಅಲ್ಲಿನ ಪ್ರಿಸ್ಟ್ಲಿ ಹುಡ್ ಸಂಸ್ಕøತಿಯನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವಂತೆ ನೋಡಿಕೊಂಡಿತು. ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೂ ಈ ಪುರೋಹಿತಶಾಹಿ ಸನ್ಯಾಸಿ ದೀಕ್ಷೆ ಕೊಡಲು ತಿರಸ್ಕರಿಸಿತು. ಬ್ರಾಹ್ಮಣ್ಯವನ್ನು ತೊರೆದು ಹೋದ ರಾಮಕೃಷ್ಣ ಪರಮಹಂಸರೇ ಕೊನೆಗೆ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ಕೊಟ್ಟರು. ಪುರೋಹಿತಶಾಹಿ ಜಾತಿ ಪದ್ದತಿಯನ್ನು ವಿರೋಧಿಸಿದ ಬಸವಣ್ಣನವರನ್ನು ನಂದಿ ಅವತಾರ ಎಂದು ಬಿಂಬಿಸಿ ಪೂಜೆ ಮಾಡುವಂತೆ ಮಾಡಲಾಗಿದೆ.ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ಧನನ್ನೇ ಅವತಾರ ಪುರುಷ ಎಂದು ಬಿಂಬಿಸಲಾಯಿತು. ಹೀಗೆ ಪುರೋಹಿತಶಾಹಿಯ ಮೇಲೆ ಆರೋಪಪಟ್ಟಿ ಸಾಗುತ್ತದೆ..!

ನಿಜ! ಇದನ್ನೆಲ್ಲ ಒಪ್ಪೋಣ. ಇತಿಹಾಸ ಸುಳ್ಳು ಎಂದು ವಿತಂಡವಾದ ಮಾಡುವ ಯಾರೂ ಪ್ರಜ್ಞಾವಂತರೆನಿಸಿಕೊಳ್ಳಲು ಸಾಧ್ಯವಿಲ್ಲ.ಆದರೆ ಹಾಗೆ ಒಪ್ಪಿದ ನಂತರ ತಮ್ಮಿಂದ ಅಥವಾ ತಮ್ಮ ಪೂರ್ವಜರಿಂದ ತಪ್ಪೇ ನಡೆದಿದೆ ಎಂದು ಪ್ರಾಂಜ್ವಲ ಮನಸ್ಸಿನಿಂದ ಪಶ್ಚಾತ್ತಾಪವನ್ನೂ ಪಡಬೇಕು. ಅಂತದೊಂದು ದುಸ್ಥಿತಿಯನ್ನು ಈ ದೇಶದ ಪುರೋಹಿತಶಾಹಿ ನಿರ್ಮಿಸಿದ್ದಕ್ಕೆ ವಿಷಾಧಿಸಲೂ ಬೇಕು.ಹಾಗೆ ಪ್ರಾಯಶ್ಚಿತ್ತದ ಬೆಂಕಿಯಲ್ಲಿ ಸುಟ್ಟ ಮೇಲಾದರೂ  ಪುರೋಹಿತಶಾಹಿಯ ಅಂಗವೆನಿಸಿದ ವರ್ಗಗಳನ್ನು ವಿನಾಕಾರಣ ಹೀನಾಯವಾಗಿ ನಡೆಸಿಕೊಳ್ಳುವುದನ್ನು ಬಿಡಬೇಕಲ್ಲವೇ?ಶತಶತಮಾನಗಳ ಹಿಂದೆ ಯಾರೋ ಮಾಡಿದ ತಪ್ಪಿಗೆ ಇಂದಿನ ನಿರುಪದ್ರವಿ ಪೀಳಿಗೆಯ ಮೇಲೆ ಅಸಹನೆ, ದ್ವೇಷ ಕಾರುವುದು ಮನುಷ್ಯತ್ವವೇ? ಅವರನ್ನು ಹೀಯಾಳಿಸುತ್ತಾ,ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾ ಅವರನ್ನು ಹಿಂಸಿಸುವುದು ನಾಗರಿಕ ಸಮಾಜದ ಲಕ್ಷಣವೇ?

ಪುರೋಹಿತಶಾಹಿಯ ವಿರುದ್ಧದ ಹೋರಾಟವನ್ನು  ಕ್ಯಾಥೋಲಿಕ್ ಪ್ರೀಸ್ಟ್‍ಹುಡ್ ವಿರುದ್ಧದ ಪ್ರಾಟಸ್ಟೆಂಟರ ಹೋರಾಟಕ್ಕೆ ಸಮೀಕರಿಸಲಾಗುತ್ತದೆ. ವಚನಕಾರರನ್ನು,  12ನೇ ಶತಮಾನದ ಸಮಾಜ ಸುಧಾರಕರನ್ನು ಈ ಹೋರಾಟದ ಮಂಚೂಣಿಯಲ್ಲಿ ನಿಲ್ಲಿಸುತ್ತದೆ. ಈ ಹೋರಾಟದ ಜೊತೆಗೆ ದಾಸರು, ಇನ್ನಿತರ ಸಮಾಜ ಸುಧಾಕರಕರು ಸಹ ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರಂತರ ಶ್ರಮಿಸಿದ್ದಾರೆ ಎನ್ನುವುದನ್ನು ಚರಿತ್ರೆಯ ವಿವಿಧ ಘಟ್ಟಗಳ ಅಧ್ಯಯನದಿಂದ ತಿಳಿಯಬಹುದಾಗಿದೆ. ರಾಜಾಶ್ರಯ ತಪ್ಪಿದ ನಂತರ ವಸಾಹತುಶಾಹಿಯ ಜೊತೆಗೆ ಕೈ ಜೋಡಿಸಿದ್ದ ಪುರೋಹಿತಶಾಹಿ ಸ್ವಾತಂತ್ಯ್ರಾನಂತರ ರೂಪುಗೊಂಡ ಡಾ. ಅಂಬೇಡ್ಕರ್ ಯುಗದ ಸಮಾನತೆ ಚಳುವಳಿಯ ಬೆಂಕಿಯಲ್ಲಿ ತತ್ತರಿಸಿಹೋಗಿದ್ದಂತೂ ನಿಜ. ಭಾರತದ ಸ್ವಂತ ಸಂವಿಧಾನ ರಚನೆ ಮತ್ತು ಅದರ  ಜಾರಿಯೇ ಪುರೋಹಿತಶಾಹಿಗೆ ದೊಡ್ಡ ಮರ್ಮಾಘಾತವಾಗಿತ್ತು.  ನೆಹರೂ ಆಳ್ವಿಕೆಯಲ್ಲಿ ಸಹ ಪುರೋಹಿತಶಾಹಿ ಬಲವಾದ ಹೊಡೆತ ತಿಂದಿತು. ನೆಹರೂ ಅವರಿಗೆ ರಿಲಿಜನ್ ಮತ್ತು ಸಂಸ್ಕøತಿಯ ನಡುವಿನ ವ್ಯತ್ಯಾಸ ಸ್ಪಷ್ಟವಾಗಿರಲಿಲ್ಲ ಎಂಬ ಆರೋಪವಿದೆ. ನೆಹರೂ ಅವರ ಪಾಶ್ಚಾತ್ಯ ಪ್ರಣೀತ ಪ್ರೊಟೆಸ್ಟೆಂಟ್ ಕ್ರಿಶ್ಚಿಯಾನಿಟಿಯ ಸಿದ್ಧಾಂತಗಳು ಸಹ ಪುರೋಹಿತಶಾಹಿಗೆ ವಿರೋಧವಾಗಿದ್ದವು. ಧರ್ಮಗಳು ಗೊಡ್ಡು ಸಂಪ್ರದಾಯಗಳಿಂದ ತುಂಬಿವೆ.ಇಂಥ ಕಂದಾಚಾರಗಳು ಪ್ರಭುತ್ವದ ಒಳಗೆ ಬಂದರೆ ದೇಶ ಮತ್ತೆ ಪುರೋಹಿತಶಾಹಿಗಳ ಕೈಗೆ ಹೋಗಿ ಶೋಷಣೆ ಪ್ರಾರಂಭವಾಗುತ್ತದೆ. ಹಾಗಾಗಿ ಪುರೋಹಿತಶಾಹಿಯನ್ನು ಪ್ರಭುತ್ವದಿಂದ ದೂರವೇ ಇಡಬೇಕು ಎಂದು ನೆಹರು ವಾದಿಸುತ್ತಿದ್ದರು.

ನೆಹರೂ ನಂತರ ಸುಮಾರು 60ವರ್ಷ ಅವರ ವಂಶಜರೇ ಭಾರತವನ್ನು ಆಳಿದ್ದಾರೆ. ಹೆಚ್ಚು ಕಮ್ಮಿ ನೆಹರೂ ಪ್ರಣೀತ ಸಿದ್ಧಾಂತಗಳೇ ಈ 6 ದಶಕಗಳು ಜಾರಿಯಲ್ಲಿದ್ದವು. ಜಾತ್ಯತೀತತೆ (ಸೆಕ್ಯುಲಿಸಂ) ಹಿನ್ನಲೆಯಲ್ಲಿ ಪುರೋಹಿತಶಾಹಿ ಸಾಕಷ್ಟು ಹಿನ್ನಡೆಯನ್ನು ಕಂಡಿದೆ. ಸಂವಿಧಾನಕ್ಕೆ ಹಲವು ತಿದ್ದುಪಡಿಗಳಾಗಿವೆ.  ಬಹುತೇಕ  ತಿದ್ದುಪಡಿಗಳ ಮೂಲಕ ಪುರೋಹಿತಶಾಹಿಯ ಧಾರ್ಮಿಕ, ಆರ್ಥಿಕ ಹಾಗೂ ಆಢಳಿತಾತ್ಮಕ ಅಧಿಕಾರವನ್ನು ಹತ್ತಿಕ್ಕಲಾಗಿದೆ.  ಇಷ್ಟೆಲ್ಲಾ ಆದ ನಂತರವೂ ಈಗಲೂ ಪುರೋಹಿತಶಾಹಿ ಶಿಕ್ಷಣ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇತರರನ್ನು ಶೋಷಿಸುತ್ತಿದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ? ಈ ಹಿನ್ನಲೆಯಲ್ಲಿ ಪುರೋಹಿತಶಾಹಿ ಬಗ್ಗೆ ಮಾತಾಡುವ ಯಾರಾದರೂ ಒಂದಿಷ್ಟು ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕಾಗುತ್ತದೆ:

ಪುರೋಹಿತಶಾಹಿ ಅನ್ನುವುದು ನಿಜವಾಗಲೂ ಈಗಲೂ ಸಂವಿಧಾನದ ಚೌಕಟ್ಟು ಮೀರಿದ ಒಂದು ಅತೀತ ಶಕ್ತಿಯಾಗಿ ಹಿಂದುಳಿದ ವರ್ಗಗಳನ್ನು ಶೋಷಿಸುತ್ತಿದೆಯಾ? ಹಾಗೆ ಪುರೋಹಿತಶಾಹಿ ಇರುವುದೇ ಆದರೆ ಅದರ ಸ್ವರೂಪವೇನು? ಪುರೋಹಿತಶಾಹಿ ಎಂದ ಕೂಡಲೇ ಅದರ ಜೊತೆಗೆ ಬ್ರಾಹ್ಮಣ್ಯ ಎನ್ನುವುದು ಏಕೆ ಸೇರಿಕೊಳ್ಳುತ್ತದೆ?  ಬ್ರಾಹ್ಮಣರನ್ನು ಬಿಟ್ಟು ಬೇರೆ ಯಾವ ಜಾತಿಯವರೂ ಧರ್ಮದ ಹೆಸರಿನಲ್ಲಿ ಈ ಹಿಂದೆ ಮುಗ್ಧರನ್ನು ಶೋಷಿಸಿಲ್ಲವಾ?

ಯೂರೋಪಿನಲ್ಲಿ ನಡೆದ ಪುರೋಹಿತಶಾಹಿಯ ವಿರುದ್ಧದ ಹೋರಾಟ ಒಂದು ಜಾತಿಯ ವಿರುದ್ಧ ನಡೆಯಲಿಲ್ಲ. ಅದು ಒಟ್ಟಾರೆ ಪುರೋಹಿತಶಾಹಿಯ ವಿರುದ್ಧ ನಡೆಯಿತು ಎಂಬುದನ್ನೇಕೆ ನಾವು ಗಮನಿಸಿಲ್ಲ. ಇಲ್ಲೂ ಪುರೋಹಿತಶಾಹಿ ಎಂದಾಗ ಬ್ರಾಹ್ಮಣರನ್ನು ಬಿಟ್ಟು ಇತರೆ ಪ್ರಬಲವರ್ಗಗಳು ಹಾಗೂ ಇತರೆ ಧರ್ಮಗಳೊಳಗಿನ ಪುರೋಹಿತಶಾಹಿ ಏಕೆ ಟಾರ್ಗೆಟ್ ಆಗುವುದಿಲ್ಲ? ಬ್ರಾಹ್ಮಣರು ಮಾತ್ರವೇ ಏಕೆ ಟಾರ್ಗೆಟ್ ಆಗುತ್ತಾರೆ?

ಕುವೆಂಪು ಅವರು ಬ್ರಾಹ್ಮಣ್ಯದೊಳಗಿನ ಪುರೋಹಿತಶಾಹಿಯನ್ನು ಇತರೆ ವರ್ಗಗಳೊಳಗಿನ ಪುರೋಹಿತಶಾಹಿಯಂತೆ ಸಮಾನವಾಗಿ ಖಂಡಿಸುತ್ತಿದ್ದರೇ ವಿನಹ ಅವರು ಬ್ರಾಹ್ಮಣರನ್ನು ದ್ವೇಷಿಸುತ್ತಿರಲಿಲ್ಲ. ಅವರು ಪೂಜನೀಯ ಸ್ಥಾನದಲ್ಲಿರಿಸಿಕೊಂಡಿದ್ದ ವ್ಯಕ್ತಿ ಹಾಗೂ ಅವರ ವಿದ್ಯಾಗುರುಗಳು ಬ್ರಾಹ್ಮಣರೇ ಆಗಿದ್ದರು ಎಂಬುದನ್ನೂ ಅವರು ಸದಾ ಸ್ಮರಿಸುತ್ತಿದ್ದರು. ಇತರೆ ಬುದ್ದಿ ಜೀವಿಗಳಿಗೇಕೆ ಈ ಉದಾರ ದೃಷ್ಟಿಕೋನವಿಲ್ಲ?

ಹಿಂಸಾತ್ಮಕವಾದ ಸಾಮಾಜಿಕ ಕಟ್ಟು ಪಾಡುಗಳ್ನು ಬ್ರಾಹ್ಮಣರು ಕೆಳಜಾತಿಯವರಿಗೆ ಈಗ ವಿಧಿಸಿ ತಾವು ಹಾಯಾಗಿರಲು ಸಾಧ್ಯವೇ? ಬ್ರಾಹ್ಮಣ ಸಮಾಜವನ್ನು ಮೂಢ ಆಚರಣೆಗಳಿಂದ ಬಿಡಿಸಲು ನಡೆದಷ್ಟು ಚಳುವಳಿಗಳು ಬೇರೆ ಸಮುದಾಯಗಳ ದೃಷ್ಟಿಯಿಂದ ನಡೆದಿದೆಯೇ? ಆಯಾ ಜಾತಿಯ ಕಟ್ಟುಪಾಡುಗಳನ್ನು  ತಲೆತಲಾಂತರಗಳಿಂದ ಅವರೇ ರೂಢಿಸಿಕೊಂಡು ಬಂದಿರುತ್ತಾರಲ್ಲವೇ? ಇದು ಗೊತ್ತಿದ್ದೂ ಕೇವಲ ಪುರೋಹಿತಶಾಹಿ ಹಾಗೂ ಬ್ರಾಹ್ಮಣರು ಕಟ್ಟು ಪಾಡು ವಿಧಿಸಿದರು ಎಂದು ಈಗಲೂ ಬೊಬ್ಬಿಡುವುದು ಯಾವ ನ್ಯಾಯ? ( ಇದನ್ನೇ ಡಾ. ಬಾಲಗಂಗಾಧರ್  ಇತರರು ಹಿಂದೆಯೇ ಪ್ರಶ್ನಿಸಿದ್ದರು)

ಕುವೆಂಪು ಅವರು ಸುಮಾರು 40 ವರ್ಷಗಳ ಹಿಂದೆಯೇ ಬೇರೆ ದೇಶಗಳಲ್ಲಿನ ಬೂಷ್ರ್ವಾ ಅಥವಾ ಪ್ರೊಲಿಟೇರಿಯನ್ ವಿಭಜನೆಯನ್ನೇ ನಮ್ಮಲ್ಲಿ ಜಾತಿ ವ್ಯವಸ್ಥೆ ಎಂದು ಹೇಳಲಾಗಿದೆ.  ಪುರೋಹಿತಶಾಹಿ ಎಂದಾಗ ಒಂದು ಜಾತಿಯನ್ನು ನಿರ್ದೇಶಿಸಬಾರದು. ಅದು ಅನೇಕ ಮತಗಳಲ್ಲಿರುವ ಆ ವರ್ಗದ ಜನಕ್ಕೆ ಅನ್ವಯವಾಗುತ್ತದೆ. ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣ ವರ್ಗವಲ್ಲ,  ಮುಸ್ಲಿಮರಲ್ಲಿ, ಕ್ರೈಸ್ತರಲ್ಲಿ, ಬೌದ್ಧರಲ್ಲಿ  ಎಲ್ಲರಲ್ಲೂ ಪುರೋಹಿತಶಾಹಿ ಇದೆ ಎಂದು ಪ್ರತಿಪಾದಿಸಿದ್ದರು.

ಸುಮಾರು 4 ದಶಕಗಳ ಹಿಂದೆಯೇ ಪುರೋಹಿತಶಾಹಿಯ ಕಪಿಮುಷ್ಠಿಯಿಂದ ವ್ಯವಸ್ಥೆ ಬಿಡುಗಡೆಗೊಳ್ಳುತ್ತಿರುವುದನ್ನು ಅವರು ಗುರುತಿಸಿದ್ದರು. ಪುರೋಹಿತವರ್ಗವನ್ನು ದೂಷಣೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಈಗ ಯಾವುದೇ ಸಮಾಜವಾಗಲೀ,ಧರ್ಮಗುರುವಾಗಲೀ ನಿಮಗೆ  ಬಹಿಷ್ಕಾರ ಹಾಕಲಾಗದು, ಯಾವ ದೇವಸ್ಥಾನದ ಪೂಜಾರಿಯಾಗಲೀ, ಭಟ್ಟರಾಗಲಿ ನಿಮ್ಮನ್ನು ದೇವರ ಹೆಸರಿನಲ್ಲಿ ಹೆದರಿಸುವುದಿಲ್ಲ, ಕರೆಯುವುದಿಲ್ಲ. ನೀವೇ ಹೋಗಿ ಕಾಲಿಗೆ ಬಿದ್ದು ನಿಮ್ಮ ಬೆಲೆಯನ್ನೇ ತೆತ್ತುಬರುತ್ತೀರಷ್ಟೇ ಎಂದಿದ್ದರು. ಪಾದಪೂಜೆ ಮಾಡುವ ನಾಡಿನಲ್ಲಿ ಮುಕ್ತ ಸಮಾಜ ನಿರ್ಮಾಣ ಅಸಾಧ್ಯ ಎಂದು ಬೊಬ್ಬಿಡುವವರು ಕುವೆಂಪು ಅವರ ಈ ಮಾತನ್ನು ಅರ್ಥಮಾಡಿಕೊಳ್ಳಬೇಕಿದೆ.

ಇಷ್ಟಕ್ಕೂ  ಒಟ್ಟಾರೆ ಹಿಂದೂ ಧರ್ಮದಲ್ಲಿನ ಪುರೋಹಿತ ಶಾಹಿಯ ಪ್ರಮಾಣವೇ 40 ವರ್ಷಗಳ ಹಿಂದೆ ನಮ್ಮದೇ ಸಂವಿಧಾನ ರಚನೆಗೊಂಡ ಸ್ವಾತಂತ್ಯ್ರೋತ್ತರ ಭಾರತದಲ್ಲಿ ಶೇ.5ರಷ್ಟಿತ್ತು ಎಂದು ಕುವೆಂಪು ಅಭಿಪ್ರಾಯಪಟ್ಟಿದ್ದರು.ಅದರಲ್ಲಿ ಅಲ್ಪಸಂಖ್ಯಾತ ಬ್ರಾಹ್ಮಣರದ್ದು ಗರಿಷ್ಠ ಶೇ.2 ಪಾಲು ಇರಬಹುದೇ?  ಶೇ.95 ಪುರೋಹಿತಶಾಹಿ ಹಾಗಿದ್ದರೆ ಯಾವ ಧರ್ಮಗಳಲ್ಲಿತ್ತು? ಅದರ ಬಗ್ಗೆ ಅಧಿಕೃತವಾಗಿ ಯಾರಾದರೂ ಮಾತಾಡಿದ್ದರೆ? ಹಿಂದೂ ಧರ್ಮದೊಳಗಿನ ಶೇ. 5ರಷ್ಟು ಪುರೋಹಿತ ಶಾಹಿಯಲ್ಲಿ ಯಾವ್ಯಾವ ಜಾತಿಯ ಕಾಣಿಕೆ ಎಷ್ಟು, ಸಾಮಾಜಿಕ ವ್ಯವಸ್ಥೆಯ ಮೇಲೆ ಅದರ ಪ್ರಭಾವ ಏನು  ಎಂದು ಅಧ್ಯಯನ ಮಾಡಿದ್ದರೆ? ಈಗ 40 ವರ್ಷಗಳು ಕಳೆದ ಮೇಲೆ, ನಮ್ಮದೇ ಸಂವಿಧಾನ, ನಮ್ಮದೇ ಕಾನೂನು ಕಟ್ಟಳೆಗಳು ರೂಪುಗೊಂಡ ಮೇಲೆ  ಈ ಪುರೋಹಿತಶಾಹಿಯ ವರ್ಗ ಪ್ರಮಾಣ ಹಾಗೂ ಪ್ರಭಾವ ಯಾವ ಹಂತದಲ್ಲಿದೆ ಎಂದು ಈಗ ಯಾರಾದರೂ ವೈಜ್ಞಾನಿಕ ವಿಧಾನಗಳಿಂದ ಸಮೀಕ್ಷೆ ಮಾಡಿದ್ದಾರಾ?  ಈ ಹಿಂದಿನ ಶೇ.5ರಷ್ಟು ಹಿಂದೂ ಪುರೋಹಿತಶಾಹಿಯನ್ನು ಬೆಂಬಲಿಸುತ್ತಿದ್ದವರಾರು? ಈಗ ಅವರ ಬೆಂಬಲ ಹಾಗೇ ಉಳಿದಿದೆಯಾ? ಅವರು ಯಾವ ಕಾರಣಕ್ಕಾಗಿ ಈ ಪುರೋಹಿತಶಾಹಿಯನ್ನು ಬೆಂಬಲಿಸಿದ್ದರು?ಅದರಲ್ಲಿ ಅವರಿಗೆ ಯಾವ ಲಾಭವಿತ್ತು? ಯಾರೂ ಬೆಂಬಲಿಸದೆ ಶೇ.5 ಪುರೋಹಿತಶಾಹಿ ಹೇಗೆ ಅಷ್ಟು ಪ್ರಭಾವಶಾಲಿಯಾಗಿ ಬೆಳೆಯಿತು?

ಹಿಂದೂ ಧರ್ಮದ ಪುರೋಹಿತಶಾಹಿಯಿಂದ ಆರ್‍ಎಸ್‍ಎಸ್ ಹುಟ್ಟಿಕೊಂಡಿತು ಎನ್ನುವುದಾದರೆ ಇಸ್ಲಾಂ ಧರ್ಮದ ಪುರೋಹಿತಶಾಹಿಯಿಂದ ಹಾಗೂ ಕ್ರಿಶ್ಚಿಯನ್ ಧರ್ಮದ ಪುರೋಹಿತಶಾಹಿಯಿಂದ ಹುಟ್ಟುಕೊಂಡ ಧಾರ್ಮಿಕ ಸಂಘಟನೆಗಳನ್ನೇಕೆ ನಮ್ಮ ಬುದ್ದಿಜೀವಿಗಳು ಹೆಸರಿಸುವುದಿಲ್ಲ..ಅವರಿಗೆ ಧೈರ್ಯವಿಲ್ಲವೇ? ಇಲ್ಲವೆ ಆಷಾಢಭೂತಿತನವೇ? ಕುಡಿಯಲು ನೀರಿಲ್ಲ, ಉಣ್ಣಲು ಅನ್ನವಿಲ್ಲ ಆದರೂ ದೇಶದ ಎಲ್ಲಾ ದೇವಸ್ಥಾನ, ಮಂದಿರಗಳಿಗೆ ಸುಣ್ಣ,ಬಣ್ಣ ಬೇಕು. ಇದು ಪುರೋಹಿತಶಾಹಿ ಪಿತೂರಿ ಎನ್ನುವವರು ದೇವಸ್ಥಾನ, ಮಂದಿರದ ಜೊತೆಗೆ ಲಕ್ಷಾಂತರ ರೂಪಾಯಿ ಅನುದಾನ ಪಡೆದ ಇತರೆ ಧರ್ಮಗಳ ಪೂಜಾಸ್ಥಳಗಳನ್ನು ಹೆಸರಿಸುವ ಧೈರ್ಯ ಏಕೆ ಮಾಡುವುದಿಲ್ಲ?

ಕುವೆಂಪುರವರು ಯಾವುದನ್ನೂ ತಿರಸ್ಕರಿಸದೆ ಪ್ರತಿಕೃತಿ ಮತ್ತು ಪ್ರತಿಮಾ ಸಿದ್ಧಾಂತದ ಮೂಲಕ ವಿವೇಚಿಸುವಂತೆ ಮಾರ್ಗದರ್ಶಿಸಿದ್ದರು. ಯಾವುದೇ ಸಿದ್ಧಾಂತ ಅಥವಾ ಬರವಣಿಗೆಯನ್ನು ಪ್ರತಿಕೃತಿ ದೃಷ್ಟಿಯಿಂದ ನೋಡದೆ ಪ್ರತಿಮಾ ದೃಷ್ಟಿಯಿಂದ ಅಧ್ಯಯನ ಮಾಡಿ ದರ್ಶನ ಧ್ವನಿಯಿಂದ ವ್ಯಾಖ್ಯಾನ ಮಾಡಿ, ಬೇಡವಾದದ್ದನ್ನು ತ್ಯಜಿಸಿ ನಿಮ್ಮದೇ ಹೊಸ ರೂಪಾಂತರ ಸೃಷ್ಟಿಸಿ ಎಂದಿದ್ದರು. ಅದಕ್ಕೆ ಅವರು ಕುಮಾರವ್ಯಾಸನ ಕಾವ್ಯಗಳನ್ನು ಉದಾಹರಿಸಿದ್ದರು. ಈಗಿನ ಬುದ್ದಿಜೀವಿಗಳು ಈ ನಿಟ್ಟಿನಲ್ಲಿ ಬ್ರಾಹ್ಮಣ ತತ್ವಗಳನ್ನು ಜೀವನ ಶೈಲಿಯನ್ನು ಉದಾರ ದೃಷ್ಟಿಯಿಂದ ನೋಡಲಾರದಷ್ಟು ಸಂಕುಚಿತತೆ ಏಕೆ?

ಈಚೆಗೆ  ಒಬ್ಬರು ಸ್ವಾಮಿಗಳು ಹೇಳಿದರು: ಈಗಲೂ ಪುರೋಹಿತಶಾಹಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶೋಷಣೆ ನಡೆಸುತ್ತಿದೆ. ಈ ಬ್ರಾಹ್ಮಣ ಪ್ರೇರಿತ ಪುರೋಹಿತ ಶಾಹಿಯನ್ನು  ಸಂಪೂರ್ಣ ಭಸ್ಮ ಮಾಡಿಬಿಡಬೇಕು ಎಂದು. ಆ ಸ್ವಾಮಿಗಳಲ್ಲಿ ನನ್ನದೊಂದಿಷ್ಟು ವಿನಮ್ರ ಪ್ರಶ್ನೆಗಳಿವೆ:

ಈಗ ಬ್ರಾಹ್ಮಣರು ಯಾರ ವಿದ್ಯೆ ಕಿತ್ತುಕೊಳ್ಳುತ್ತಿದ್ದಾರೆ? ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ಏನು ಶೋಷಣೆ ಮಾಡುತ್ತಿದ್ದಾರೆ? ವೃತ್ತಿಶಿಕ್ಷಣದ ಒಂದು ಸೀಟು, ಒಂದು ಉದ್ಯೋಗ ದೊರಕಿಸಿಕೊಳ್ಳಲು ಅವರು ಹರಸಾಹಸ ಮಾಡಬೇಕಿದೆ. ಬದುಕಿನ ಭದ್ರತೆ ಕಂಡುಕೊಳ್ಳಲು ಹೆಣಗಾಡಬೇಕಿದೆ. ಇದು ಒಂದೆಡೆಯಾದರೆ   ಸ್ಥಿತಿವಂತ ಬ್ರಾಹ್ಮಣರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಯಾವ ಇತರೆ ವರ್ಗಕ್ಕೂ ಕಮ್ಮಿ ಇಲ್ಲ ಎಂಬುದನ್ನು ಏಕೆ ನಮ್ಮ ಬುದ್ದಿಜೀವಿಗಳು ಒಪ್ಪುವುದಿಲ್ಲ..?

ಬ್ರಾಹ್ಮಣರು ಯಾರ ಆಸ್ತಿ ಕಿತ್ತುಕೊಂಡಿದ್ದಾರೆ? ಯಾರು ಈಗ ಬ್ರಾಹ್ಮಣರಿಗಾಗಿ ಉತ್ತು, ಬಿತ್ತಿ ಕಾಳು ತಂದು ಮನೆಗೆ ಹಾಕಿ ಪೋಷಿಸುತ್ತಿದ್ದಾರೆ. ನೂರಾರು ಬ್ರಾಹ್ಮಣರು ಉಂಬಳವಾಗಿ ಬಂದಿದ್ದ ಜಮೀನನ್ನು ಕಳೆದುಕೊಂಡು ಹೊಟ್ಟೆ ಪಾಡಿಗಾಗಿ ಊರೇ ಬಿಟ್ಟು ಹೋಗಿದ್ದಾರೆ ಎಂಬ ಸತ್ಯವನ್ನು ತಿಳಿಯವ ಪ್ರಯತ್ನ ಏಕೆ ಮಾಡುತ್ತಿಲ್ಲ ? ಅಥವಾ ಸತ್ಯ ಗೊತ್ತಿದ್ದೂ ಆತ್ಮವಂಚನೆಯ ಸೋಗಲಾಡಿತನವೇ?

ಬ್ರಾಹ್ಮಣರು ಧರ್ಮದ ರಾಯಭಾರಿಗಳಾಗಿ ದೇವರ, ಭಕ್ತರ ಮಧ್ಯೆ ನಿಂತು ಶೋಷಿಸುವ ಮಾತಂತೂ ದೂರವೇ ಉಳಿಯಿತು. ಈಗ ಎಲ್ಲಾ ದೇವಾಲಯಗಳಿಗೆ ಎಲ್ಲ ವರ್ಗದವರಿಗೂ ಮುಕ್ತ ಪ್ರವೇಶವಿದೆ. ದೇವರು, ಧರ್ಮದ ಅವಲಂಬನೆ ಹಾಗೂ ಧಾರ್ಮಿಕ ಆಚರಣೆಗಳನ್ನು ಬ್ರಾಹ್ಮಣರಲ್ಲದೆಯೂ ಬೇರೆಯ ಜಾತಿ ಮತಗಳ ಜನರು ಸ್ವಯಂ ಪ್ರೇರಣೆಯಿಂದ ಹೆಚ್ಚು ಹೆಚ್ಚು ಆಚರಿಸುತ್ತಿದ್ದಾರೆ. ಇದೇ ಪ್ರಮಾಣದಲ್ಲಿ ಮೌಡ್ಯವೂ ಬ್ರಾಹ್ಮಣರ ಹಸ್ತಕ್ಷೇಪದ ಹೊರತಾಗಿಯೂ ಹೆಚ್ಚಾಗುತ್ತಲೇ ನಡೆದಿದೆ.

ಕಳೆದ 6 ದಶಕಗಳಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಕಾಲೇಜುಗಳನ್ನು ತೆರೆದು ಲಕ್ಷಾಂತರ ರೂಪಾಯಿ ದೇಣಿಗೆ, ಡೊನೇಶನ್ ಪಡೆದು ವಿದ್ಯೆಯನ್ನು ಮಾರಿಕೊಂಡವರು ಯಾರು? ಅದು ಪುರೋಹಿತಶಾಹಿಯೊಳಗಿನ ಮಠಶಾಹಿಯಲ್ಲವೇ? ಅದರಲ್ಲಿದ್ದ ಬ್ರಾಹ್ಮಣ ಮಠಗಳೆಷ್ಟು? ಯಾವುದೇ ಸರ್ಕಾರದ ಮೇಲೆ ಪ್ರಭಾವ ಬೀರುವ, ಸರ್ಕಾರದ ಸವಲತ್ತು ಪಡೆಯುವ ಮಠಶಾಹಿ ಯಾವ ಜಾತಿಗಳ ಪ್ರಾಬಲ್ಯ ಹೊಂದಿದೆ? ಬ್ರಾಹ್ಮಣ ಜಾತಿಯೇ?

ಸಾಮಾಜಿಕವಾಗಿ ಬ್ರಾಹ್ಮಣರು ಅಸ್ಪøಶ್ಯತೆಯನ್ನೇನೂ ಆಚರಿಸುತ್ತಿಲ್ಲ.ಯಾವ ಜಾತಿಯನ್ನೂ ಅವಹೇಳನ ಮಾಡುತ್ತಿಲ್ಲ, ನಿಂದನೆ ಮಾಡುತ್ತಿಲ್ಲ.ಮಡಿವಂತಿಕೆಯ ಪ್ರದರ್ಶನ ಮಾಡುತ್ತಿಲ್ಲ.  ತಮ್ಮ ಶ್ರೇಷ್ಠತೆಯ ಶಂಕ ಊದಿಕೊಳ್ಳಲು ಪುರಸೊತ್ತೂ ಇಲ್ಲ. ಯಾರ ಅನ್ನವನ್ನೂ ಕಿತ್ತುಕೊಂಡಿಲ್ಲ. ಅವರು ಸಾಮಾಜಿಕ ವ್ಯವಸ್ಥೆಯನ್ನು ಶೋಷಿಸುತ್ತಿದ್ದಾರೆ ಎಂದರೆ ಹೇಗೆ?

ಇಂದು ಇರುವ ಪುರೋಹಿತಶಾಹಿ ಎಂದರೆ ಅದು ಮಾಧ್ಯಮ ಪುರೋಹಿತಶಾಹಿ, ರಾಜಕೀಯ ಪುರೋಹಿತಶಾಹಿ ಹಾಗೂ ಓಟ್‍ಬ್ಯಾಂಕ್ ಪುರೋಹಿತಶಾಹಿ! ಈ ಪುರೋಹಿತಶಾಹಿಗಳಲ್ಲಿ ಬ್ರಾಹ್ಮಣರ ಪಾತ್ರ ತೀರ ನಗಣ್ಯ ಎಂಬುದನ್ನು ಯಾವುದೇ ಸಂಶೋಧನೆ ಇಲ್ಲದೆ ಮೇಲ್ನೋಟಕ್ಕೇ ಹೇಳಿಬಿಡಬಹುದು.

ಬೆಳಿಗ್ಗೆ ಎದ್ದರೆ ಟಿವಿ ಚಾನೆಲ್‍ಗಳಲ್ಲಿ  ಜ್ಯೋತಿಷ್ಯದ ಮೂಲಕ ಜನರಲ್ಲಿ ಮೌಢ್ಯ ತುಂಬಿ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದು ಮಾಧ್ಯಮ ಪುರೋಹಿತಶಾಹಿ! ಇದು ಜಾತಿ ಬೇಧವಿಲ್ಲದೆ ನಡೆಯುತ್ತದೆ. ಇಂತಹದೇ ಒಂದು ಗುಂಪು ರಾಜಕೀಯ ವ್ಯಕ್ತಿಗಳ ಮೌಡ್ಯ, ಮೂಡನಂಬಿಕೆಗಳನ್ನು ದಾಳವಾಗಿ ಮಾಡಿಕೊಂಡು ರಾಜಕೀಯ ಹಸ್ತಕ್ಷೇಪ ನಡೆಸುತ್ತದೆ.ಇದೇ ರಾಜಕೀಯ ವ್ಯಕ್ತಿಗಳನ್ನು ಓಲೈಸಲು ಒಂದು ಗುಂಪು ಪುರೋಹಿತಶಾಹಿಯ ಅವಿಭಾಜ್ಯವಾಗಿದ್ದುಕೊಂಡೇ ( ರಾಮಕೃಷ್ಣಪರಮಹಂಸರ ತರ, ಅಂಬೇಡ್ಕರ್ ತರ ಅದರಿಂದ ಆಚೆ ಹೋಗದೆ)ಅದನ್ನು ವಿರೋಧಿಸುವ ಇನ್ನೊಂದು ಬುದ್ದಿಜೀವಿಗಳ ಪುರೋಹಿತಶಾಹಿ ಹಿಡನ್ ಅಜೆಂಡಾ ಹೊಂದಿರುತ್ತದೆ. (ಪುರೋಹಿತಶಾಹಿ ಎಂದರೆ ಸ್ವಾರ್ಥ, ಇನ್ನೊಬ್ಬರ ಅವಕಾಶ ಕಿತ್ತುಕೊಳ್ಳುವುದು, ಶೋಷಿಸುವುದಾದ್ದರಿಂದ ಈ ಗುಂಪು ಸಹ ಒಂದು ಪುರೋಹಿತಶಾಹಿಯೇ!)  ಇನ್ನು ಓಟ್‍ಬ್ಯಾಂಕ್ ಪುರೋಹಿತಶಾಹಿಯಲ್ಲಿ ಹಿಂದೂ ಧರ್ಮದ ಪುರೋಹಿತಶಾಹಿಯಷ್ಟೇ ಪ್ರಮಾಣದಲ್ಲಿ ಅನ್ಯಧರ್ಮದ ಪುರೋಹಿತಶಾಹಿಯ ಪ್ರಭಾವ, ಹಸ್ತಕ್ಷೇಪವೂ ಇದೆ ! ಈ ಮೂರೂ ಪುರೋಹಿತಶಾಹಿ ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಅರ್ಥೈಸುವುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.

ವಿವೇಕಾನಂದರು ಹೇಳಿದ್ದಂತೆ ಪುರೋಹಿತಶಾಹಿ ಶೂದ್ರ ಸಮಾಜವನ್ನು ತನ್ನ ಕಬ್ಬಿಣದ ಕರಾಳ ಮುಷ್ಟಿಯ ಸಹಸ್ರಪಾಶಗಳಿಂದ ಬಿಗಿದು ಬಂದಿಸಿಟ್ಟುಕೊಳ್ಳುವ ಉದ್ದೇಶದಿಂದ, ದೇಹ ಮತ್ತು ಮನಸ್ಸಿನ ಶುದ್ದೀಕರಣದ ಬಾಹ್ಯ ಸಾಧನಗಳೆಂಬ ನೆವದಲ್ಲಿ ತನ್ನ ಸುತ್ತಲೂ ಸುತ್ತಿಕೊಂಡ ಅನಂತ ಸಂಖ್ಯೆಯ ಕರ್ಮ, ಕ್ರಿಯೆ ಮತ್ತು ಆಚಾರ ಸಮೂಹ ರೂಪದ ಕೊನೆಗಾಣದ ಕಣ್ಣಿನ ಬಲೆಯಲ್ಲಿ ಸಿಕ್ಕಿಕೊಂಡು ಪುರೋಹಿತಶಾಹಿ ಉದ್ಧಾರದ ಆಶಾ ಲವಲೇಶವಿಲ್ಲದೆ ಅಪಾದಮಸ್ತಕ ಗೋಜು ಬಿಗಿದುಕೊಂಡು ಸುಸ್ತಾಗಿ, ಸಂಪೂರ್ಣ ಹತಾಶವಾಗಿ ಮೃತಪ್ರಾಯವಾಗಿ, ಪತಿತವಾಗಿ ನಿದ್ದೆಹೋಗುತ್ತಿದೆ. ಆ ಬಲೆಯಿಂದ ಅದಕ್ಕೆ ಬಿಡುಗಡೆಯೇ ಇಲ್ಲ ಎಂದಿದ್ದರು. ಆ ಹಂತವನ್ನು ಬ್ರಾಹ್ಮಣ ಪುರೋಹಿತಶಾಹಿ ಎಂದೋ ತಲುಪಿದೆ. ಆದಾಗ್ಯೂ ನಮ್ಮ ಬುದ್ದಿಜೀವಿಗಳು ಪುರೋಹಿತಶಾಹಿ ಎಂಬ ಬೆದರುಬೊಂಬೆಗೆ ಜೀವ ಕೊಟ್ಟು ಮಾಟದ ಬೊಂಬೆಯಂತೆ ಅದನ್ನಿಟ್ಟುಕೊಂಡು ಬ್ರಾಹ್ಮಣ ಸಮಾಜವನ್ನು ಮಾತ್ರ ಟಾರ್ಗೆಟ್ ಮಾಡಿ  ಅವಹೇಳನ ಮಾಡುವುದು ಏಕೆ?ಚುಚ್ಚಿ ಚುಚ್ಚಿ ಕೊಲ್ಲುವುದೇಕೆ? ಅವರು ಎಲ್ಲಾ ಸಹಿಸುತ್ತಾರೆಂದೇ? ಅಸಹಾಯಕರೆಂದೇ? ಪ್ರತಿರೋಧಿಸಲಾರದವರು ಎಂದೇ? ದೇವರು, ಧರ್ಮದ ಹೆಸರು, ಚಿಹ್ನೆಗಳಿಂದ ದೇಶ ಛಿದ್ರವಾಗುತ್ತದೆ ಎಂಬುದನ್ನು ಅನ್ಯ ಧರ್ಮದ ವಿರುದ್ಧ ಸಂಘರ್ಷಕ್ಕೆ ಕಾರಣವಾದ ಪುರೋಹಿತ ವರ್ಗ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹಿಂದೂ ಪುರೋಹಿತಶಾಹಿಗೆ ಬುದ್ದಿಮಾತು ಹೇಳುವ ಪ್ರಾಜ್ಞರು ಇದೇ ಮಾತನ್ನು ಇತರೆ  ಧರ್ಮಗಳ ಪುರೋಹಿತಶಾಹಿಗೆ ಹೇಳುವ ತಾಕತ್ತು ಏಕೆ ತೋರುವುದಿಲ್ಲ?

ಯಾವುದೇ ಪುರೋಹಿತಶಾಹಿಗೆ ಗುರಿ ಇಟ್ಟು ತಲೆಗೆ ಹೊಡೆದರೆ ಅದು ಒಂದೇ ಹೊಡೆತಕ್ಕೆ ಕೆಳಗೆ ಬೀಳಬೇಕು, ಗಾಯ ಮಾಡಿ ಕೆರಳಿಸಿ ಬಿಡಬಾರದು ಎಂದಿದ್ದರು ಕುವೆಂಪು. ಪುರೋಹಿತಶಾಹಿ ಎಂಬ ಹುಲಿಯನ್ನೂ ಹಾಗೇ ಗುಂಡು ಹಾಕಿ ಕೆಡವಬೇಕು. ಈ ವಿಚಿತ್ರ ಬೇಟೆಯಲ್ಲಿ ಮೊದಲ ಗುಂಡು ತಗುಲಬೇಕಾದ್ದು ಹುಲಿಗಲ್ಲ, ನಿಮ್ಮ ತಲೆಗೆ !ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು. ತಲೆಯೊಳಗೆ ಕಟ್ಟಿರುವ ಅಜ್ಞಾನದ ಇಲ್ಲಣವನ್ನು ಗುಂಡು ಹೊಡೆದು ಕೆಡವಬೇಕು ಎಂದಿದ್ದರು ಕುವೆಂಪು. ಈಗ ಪುರೋಹಿತಶಾಹಿಯನ್ನು ಕಿತ್ತೊಗೆಯಲು ಹೊರಟ ಕೆಲವರು ತಮ್ಮ ತಲೆಗೆ  ತಾವೇ ಈ ಗುಂಡು ಹಾರಿಸಿಕೊಳ್ಳುತ್ತಿದ್ದಾರಾ? ಇಲ್ಲ ಬೇರೆ‘ಗುಂಡು’ ಹಾಕಿ ಜ್ಞಾನಪಿತ್ಥವನ್ನು ತಲೆಗೇರಿಸಿಕೊಂಡಿದ್ದಾರಾ ? ಎಂಬುದೇ ಜಿಜ್ಞಾಸೆಯಾಗಿದೆ.

2 ಟಿಪ್ಪಣಿಗಳು Post a comment
  1. ಸೆಪ್ಟೆಂ 23 2014

    ಬ್ರಾಹ್ಮಣರು ಅಂದರೆ ಯಾರು? ಬ್ರಾಹ್ಮಣ್ಯವೆಂದರೇನು? ಅದೊಂದು ಜಾತಿಯೋ ಅಥವಾ ಜೀವನ ಧರ್ಮವೋ? ಬ್ರಾಹ್ಮಣರಿಂದ ಯಾರಿಗೆ ತೊಂದರೆಯಾಗಿದೆ? ಆ ತೊಂದರೆಯನ್ನು ದೂರ ಮಾಡಲು ಅವರುಗಳೇನು ಮಾಡಬೇಕು? ಅವರ ಹೊಟ್ಟೆಪಾಡಿಗೆ ಅವರುಗಳೇನು ಮಾಡಬೇಕು? ಎಲ್ಲಾ ರೀತಿಯ ಜಾತಿಗಳನ್ನೂ ಧರ್ಮಗಳನ್ನೂ ಸಂಪೂರ್ಣವಾಗಿ ಏಕೆ ನಿರ್ನಾಮ ಮಾಡಬಾರದು? ಜಾತಿಗಳಿಂದ ಹಾಳಾಗಿಹೋಗಿರುವ ನಮ್ಮ ದೇಶವನ್ನು ಜಾತಿಯಿಲ್ಲದ ನಿರ್ಜಾತಿ ದೇಶವನ್ನಾಗಿ ಮಾಡಲು ಎಲ್ಲರೂ ಪ್ರಯತ್ನಿಸಬಹುದಲ್ಲವೆ?

    ಉತ್ತರ
  2. Ravi
    ಸೆಪ್ಟೆಂ 23 2014

    ಪುರೋಹಿತಶಾಹಿ ಎಂಬುದು ಎಲ್ಲಾ ದರ್ಮ ಮತ್ತು ಜಾತಿಯಲ್ಲೂ ಇದೆ. ಆದುದರಿಂದ ಬ್ರಾಹ್ಮಣ ವರ್ಗವನ್ನೇ ಅದಕ್ಕೆ ಗುರಿಪಡಿಸುವುದು ಸರಿಯಲ್ಲ

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments