ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 8, 2014

38

ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

‍ನಿಲುಮೆ ಮೂಲಕ

– ಚೇತನಾ ತೀರ್ಥಹಳ್ಳಿ    

Jayalilthaಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಜಯಲಲಿತಾ ಬೇಲ್‌ಗೆ ಅರ್ಜಿ ಹಾಕಿಕೊಂಡು ಕೂತಿದ್ದಾರೆ. ಅವರ ಚಪ್ಪಲಿ ಸಂಖ್ಯೆಗಳ, ಸೀರೆಗಳ, ಚಿನ್ನ ಭಂಡಾರದ ಚರ್ಚೆ ನಡೆಯುತ್ತ ಆಕೆಯ ಭ್ರಷ್ಟತೆಯ ಚರ್ಚೆ ಸಾಗುತ್ತಿದೆ. ಇವುಗಳಾಚೆ ಜಯಲಲಿತ ಸಾವಿರಾರು ಎಕರೆ ಭೂಮಿ, ಸ್ಥಿರ – ಚರಾಸ್ತಿಗಳನ್ನು ಮಾಡಿಟ್ಟುಕೊಂಡಿದ್ದಾರೆ. ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?
~
ಜಯಲಲಿತಾ ಅಪ್ಪಟ ಜೀವನ ಪ್ರೀತಿಯ ಹೆಣ್ಣಾಗಿದ್ದವರು. ಬಿಷಪ್‌ ಕಾಟನ್ಸ್‌ನಲ್ಲಿ ಓದುತ್ತಿದ್ದ ಕಾಲಕ್ಕೆ ಬಹಳ ಬುದ್ಧಿವಂತೆ ಮತ್ತು ಪಠ್ಯೇತರ ಪುಸ್ತಕಗಳನ್ನೂ ಓದುವ ಆಸಕ್ತಿ ಇದ್ದವರು. ಹಾಡು, ನೃತ್ಯ, ಆಟ ಎಲ್ಲದರಲ್ಲು ಸದಾ ಪುಟಿಯುವ ಉತ್ಸಾಹ. ಅವತ್ತಿನ ಕ್ರಿಕೆಟಿಗ ಪಟೌಡಿಯ ಮೇಲೆ ಕ್ರಶ್ ಬೆಳೆಸಿಕೊಂಡಿದ್ದ ಜಯಾ, ಅವರನ್ನ ನೋಡಲಿಕ್ಕೆಂದೇ ಕ್ರಿಕೆಟ್‌ಗೆ ಹೋಗ್ತಿದ್ದರಂತೆ!

ಅವರಮ್ಮ ಸಂಧ್ಯಾ ನಟಿಯಾಗಿ ಮಗಳನ್ನು ಸಲಹುತ್ತಿದ್ದ ಕಾಲಕ್ಕೆ ಒಮ್ಮೆ ಜಯಲಲಿತಾ ಸುಮ್ಮನೆ ಮೇಕಪ್‌ ಬಾಕ್ಸಿನಿಂದ ಏನೆಲ್ಲ ತೆಗೆದು ಮುಖಕ್ಕೆ ಹಚ್ಚಿಕೊಂಡಿದ್ದರಂತೆ. ಆಗ ಅವರಮ್ಮ “ನನ್ನದಂತೂ ಹೀಗಾಯಿತು, ನೀನು ಮಾತ್ರ ಇದನ್ನೆಲ್ಲ ಮಾಡೋದು ಬೇಡ” ಅಂದಿದ್ದರಂತೆ. ಆದರೆ ಇದೇ ಅಮ್ಮ ಕೆಲವೇ ವರ್ಷಗಳ ನಂತರ ಮಗಳನ್ನು ನಟನೆಗೆ ಒತ್ತಾಯಿಸಬೇಕಾಗಿ ಬಂದಿದ್ದು ದುರಂತ. ಆ ಹೊತ್ತಿಗೆ ಜಯಾ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆದು ಮುಂದಿನ ಓದಿಗೆ ಸ್ಕಾಲರ್‌ಶಿಪ್ಪನ್ನೂ ಪಡೆದಿದ್ದರು. ಆದರೆ ಕುಟುಂಬ ಹೊರೆಯುವ ಅನಿವಾರ್ಯತೆ ಅವರನ್ನ ನಟನೆಗೆ ನೂಕಿತ್ತು. ವಿ.ವಿ.ಗಿರಿಯವರ ಮಗ ತೆಗೆದ ಇಂಗ್ಲಿಶ್‌ ಸಿನೆಮಾ ಒಂದರಲ್ಲಿ ಅಭಿನಯಿಸುವ ಮೂಲಕ ಭರ್ಜರಿ ಓಪನಿಂಗ್ ಶುರು ಮಾಡಿದರು ಜಯಲಲಿತಾ. ಆಗ ಅವರಿಗೆ ಕೇವಲ ಹದಿನೈದು ವರ್ಷ ವಯಸ್ಸು.

ಮುಂದೆ ತೆಲುಗು, ತಮಿಳು, ಕನ್ನಡ, ಒಂದೆರಡು ಹಿಂದಿ ಚಿತ್ರಗಳು ಎಂದೆಲ್ಲ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಅಕ್ಷರಶಃ ಚಿತ್ರರಂಗವನ್ನು ಆಳತೊಡಗುತ್ತಾರೆ. ಕೇವಲ ಸೌಂದರ್ಯವಷ್ಟೆ ಅಲ್ಲ, ಬುದ್ಧಿವಂತಿಕೆಯೂ ಇದ್ದ ಈ ಹುಡುಗಿ ಅವತ್ತಿನ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಎಂಜಿಆರ್‌ ಕಣ್ಣು ಕುಕ್ಕಲಿಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಮೆಲ್ಲಗೆ ರಾಜಕಾರಣದಲ್ಲೂ ತೊಡಗಿಸಿಕೊಳ್ಳುತ್ತಿದ್ದ ಎಂಜಿಆರ್‌ ಜಯಲಲಿತಾರಿಗೆ ತಮ್ಮ ಜೊತೆ ನಟಿಸಲು ಅವಕಾಶ ಕೊಡುತ್ತ, ತಮ್ಮೊಡನೆಯೇ ಇರಿಸಿಕೊಂಡು ಪ್ರಮೋಟ್ ಮಾಡುತ್ತಾರೆ. ಆಕೆಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಮತ್ತು ಮಾತುಗಾರಿಕೆ ತನಗೆ ಲಾಭವಾಗುತ್ತದೆಂದು ಪಕ್ಷದೊಳಕ್ಕೂ ಬಿಟ್ಟುಕೊಳ್ತಾರೆ. ಅಲ್ಲಿಂದ ಮುಂದೆ ಜಯಲಲಿತಾ ಎಂಜಿಆರ್‌ ಚಿತ್ರಗಳ ಖಾಯಂ ನಾಯಕಿ ಎಂದಾಗಿಬಿಡುತ್ತದೆ.

ಆದರೆ ಎಂಜಿಆರ್‌ ಏಳು ಕೆರೆಯ ನೀರು ಕುಡಿದವರು. ಜಯಲಲಿತಾ ಅವರಿಗೊಂದು ಆಯ್ಕೆ ಅಷ್ಟೇ. ಹಾಗೆಂದೇ ಇದ್ದಕ್ಕಿದ್ದಂತೆ ತಮ್ಮ ಒಂದು ಸಿನೆಮಾಕ್ಕೆ ಬೇರೆ ನಾಯಕಿಯನ್ನ ಹಾಕಿಕೊಳ್ತಾರೆ. ಜಯಲಲಿತಾರ ಸ್ವಾಭಿಮಾನ ಹಾಗೂ ಆತ್ಮಗೌರವದ ಪರಿಚಯ ಆಗೋದು ಆವಾಗಲೇ. ಹೆಚ್ಚೂಕಡಿಮೆ ತನ್ನನ್ನು ಪ್ರೇಯಸಿಯಂತೆಯೇ ನಡೆಸಿಕೊಳ್ತಿದ್ದ ಎಂಜಿಆರ್‌ ವಿರುದ್ಧ ಸಿಡಿದು ಬೀಳುವ ಜಯಾ ತೆಲುಗಿನತ್ತ ಮುಖ ಮಾಡುತ್ತಾರೆ. ಅಲ್ಲಿನ ಸೂಪರ್‌ ಸ್ಟಾರ್‌ ಶೋಭನ್‌ ಬಾಬುವಿನ ಜೊತೆ ನಟಿಸತೊಡಗುತ್ತಾರೆ. ಅವರೊಂದಿಗೆ ಲಿವ್‌ಇನ್‌ ಬದುಕು ಆರಂಭಿಸುವ ಜಯಲಲಿತಾ ಅವರನ್ನು ಇನ್ನಿಲ್ಲದಂತೆ ಪ್ರೇಮಿಸುತ್ತಾರೆ ಕೂಡಾ. ಬಹುಶಃ ಜಯಾ ಬದುಕಿನ ಮೊದಲ ಮತ್ತು ಕೊನೆಯ ಪ್ರೇಮ ಅದೊಂದೇ. ಎಂಜಿಆರ್‌ ಜೊತೆ ಅವರಿಗೆ ಇದ್ದದ್ದು ಮುಲಾಜು ಮಾತ್ರ.

ಇದೇ ಮುಲಾಜು ಮತ್ತೆ ಅವರಿಬ್ಬರನ್ನು ಒಂದುಗೂಡಿಸುತ್ತದೆ. ಎಂಜಿಆರ್‌ ಜಯಲಲಿತಾರನ್ನು ಪುಸಲಾಯಿಸಿ ಮತ್ತೆ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಅವರ ಪಕ್ಷಕ್ಕೆ ಕೆಲಸ ಮಾಡುತ್ತ ಪುನಃ ಎಂಜಿಆರ್‌ ಕಡೆ ವಾಲುವ ಜಯಾ ಶೋಭನ್‌ ಬಾಬುವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ.

“ನನ್ನ ಬದುಕಲ್ಲಿ ಬಂದ ಯಾವ ಗಂಡಸೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ” ಎಂದು ಒಂದೆಡೆ ಹೇಳಿಕೊಳ್ಳುವ ಜಯಲಲಿತಾ ಎಂಜಿಆರ್‌ರಿಂದ ಹೊಡೆತ ತಿಂದಿದ್ದೂ ಇದೆ. ಈಕೆಯ ಹಿಂದೆ ಗೂಢಚಾರರನ್ನು ಬಿಟ್ಟು ಪ್ರತಿ ದಿನದ ಅಪ್‌ಡೇಟ್ಸ್ ತರಿಸಿಕೊಳ್ತಿದ್ದರಂತೆ ಎಂಜಿಆರ್‌. ಆ ಮನುಷ್ಯ ಈಕೆಯನ್ನು ಪ್ರಮೋಟ್‌ ಮಾಡಿದ್ದಕ್ಕಿಂತ ಗೋಳಾಡಿಸಿದ್ದೇ ಹೆಚ್ಚು. ಬಹುಶಃ ಈ ಕಾರಣದಿಂದಲೇ ಜಯಲಲಿತಾ ಶಶಿಕಲಾರನ್ನು ತಮ್ಮ ಅಂತರಂಗಕ್ಕೆ ಬಿಟ್ಟುಕೊಳ್ಳುವುದು ಮತ್ತು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸುವುದು.

ಈಗ ಜಯಾ ಆಪ್ತ ಸಹಾಯಕಿ ಎಂದೇ ಬಿಂಬಿತವಾಗುತ್ತಿರುವ ಶಶಿಕಲಾ ಮೊದಲು ಬಂದಿದ್ದು ಈಕೆಯ ವಿರುದ್ಧ ಸ್ಪೈ ಮಾಡಲೆಂದೇ. ಸ್ವತಃ ಎಂಜಿಆರ್‌ ಆಕೆಯನ್ನು ಅದಕ್ಕಾಗಿ ಕರೆಸಿದ್ದರೆಂದು ಹೇಳಲಾಗುತ್ತದೆ.

ವಿಡಿಯೋ ಪಾರ್ಲರ್ ಒಂದನ್ನು ನಡೆಸುತ್ತಿದ್ದ ಶಶಿಕಲಾ ಏಕಾಏಕಿ ಜಯಾ ಬದುಕಿನ ಸೂತ್ರಗಳೆಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದು, ತಾನಿಲ್ಲದೆ ಆಕೆಯ ಕೆಲಸಗಳ್ಯಾವುದೂ ನಡೆಯದು ಎನ್ನುವ ಮಟ್ಟಕ್ಕೆ ತಂದಿಡುತ್ತಾರೆ. ಇದು ಕೇವಲ ಗೃಹಕೃತ್ಯಗಳಿಗಷ್ಟೇ ಅಲ್ಲ, ಜಯಾ ರಾಜಕಾರಣಕ್ಕೂ ಹರಡುತ್ತದೆ. ಜಯಾರಿಗಿರುವ ಶಶಿಕಲಾ ಮೇಲಿನ ಅವಲಂಬನೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳ ಕುರಿತು ಎಚ್ಚರಿಸಿದವರನ್ನೆಲ್ಲ ದೂರ ಮಾಡುತ್ತ ಬರುತ್ತಾರೆ ಜಯಲಲಿತಾ. ಸಾಕಷ್ಟು ಸ್ನೇಹ ಸಂಪಾದಿಸಿದ ಮೇಲೆ ಒಂದು ದಿನ ಶಶಿಕಲಾ ತನ್ನ ತವರು ಮನ್ನಾರ್‌ಗುಡಿಯಿಂದ ನಲವತ್ತು ಜನರನ್ನು ಕಟ್ಟಿಕೊಂಡು ಜಯಲಲಿತಾರ ಬಂಗಲೆಯ ಮುಂದೆ ಬಂದಿಳಿಯುತ್ತಾರೆ. ಅಲ್ಲಿದ್ದವರನ್ನೆಲ್ಲ ಓಡಿಸಿ, ಅಡುಗೆಮನೆಯಿಂದ ಹಿಡಿದು ಗೇಟು ಕಾಯುವವರೆಗೆ ಎಲ್ಲ ಕಡೆಯಲ್ಲೂ ತನ್ನ ಜನರೇ ಇರುವಂತೆ ನೋಡಿಕೊಳ್ಳುತ್ತಾರೆ. ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ತನ್ನ ಪರಿವಾರದವರನ್ನು ಕೂರಿಸಿ ಹಣ ದೋಚಲು ಶುರುವಿಡುತ್ತಾರೆ. ೧೯೯೬ ವೇಳೆಗೆ ಶಶಿಕಲಾ ಮಾತ್ರವಲ್ಲ, ಆಕೆಯ ವಂಶದ ಕಟ್ಟಕಡೆಯ ಸದಸ್ಯನೂ ಕೋಟ್ಯಧೀಶ್ವರನಾಗುವಂತೆ ನೋಡಿಕೊಳ್ಳುತ್ತಾರೆ ಶಶಿಕಲಾ. ಕೆಲವು ವರ್ಷಗಳ ಹಿಂದೆ ಜಯಲಲಿತಾ ಶಶಿಕಲಾ ಮತ್ತವರ ಪರಿವಾರದಿಂದ ಉಸಿರುಗಟ್ಟಿ, ಎಲ್ಲ ಕಡೆಯಿಂದಲೂ ಬುದ್ಧಿಮಾತು ಕೆಳಿ ಜ್ಞಾನೋದಯವಾದಂತಾಗಿ ಆಕೆಯನ್ನು ಹೊರಗಟ್ಟುತ್ತಾರೆ. ಪಕ್ಷದಿಂದಲೂ ಮನೆಯಿಂದಲೂ ಆಚೆ ಇಡುತ್ತಾರೆ. ಆದರೆ ಈ ಮುನಿಸು ಬಹಳ ಕಾಲ ಬಾಳಲಿಲ್ಲ. ಜಯಲಲಿತಾರ ಅನಾಥಪ್ರಜ್ಷೆ, ಅಸಹಾಯಕತೆ, ದೌರ್ಬಲ್ಯಗಳೆಲ್ಲವನ್ನು ನಿಭಾಯಿಸುತ್ತ ಆಕೆಯನ್ನು ವಶೀಕರಣ ಮಾಡಿಕೊಂಡಂತೆ ಇದ್ದ ಶಶಿಕಲಾರನ್ನು ಕೇವಲ ಒಂದೇ ವರ್ಷದಲ್ಲಿ ಮರಳಿ ಕರೆಸಿಕೊಳ್ತಾರೆ ಜಯಾ. ಬಹುಶಃ ಜಯಲಲಿತಾರ ಇಂದಿನ ಸ್ಥಿತಿಗೆ ಶಶಿಕಲಾ ಮತ್ತು ಸುಬ್ರಮಣಿಯನ್‌ ಸ್ವಾಮಿ ಹೇಳುವಂತೆ ಆಕೆಯ ಮನ್ನಾರ್‌ಗುಡಿ ಗ್ಯಾಂಗ್‌ ಮುಖ್ಯ ಕಾರಣ.
~
ಜಯಲಲಿತಾ ಇಷ್ಟೆಲ್ಲ ದೂರ ಕ್ರಮಿಸಿದ್ದು ಹೂವಿನ ದಾರಿಯ ನಡಿಗೆಯಿಂದಲ್ಲ. ಎಂಜಿಆರ್‌ ಆಕೆಯನ್ನು ಬೆಳೆಸಿದಂತೆ ಕಂಡರೂ ಆತ ಆಕೆಯನ್ನು ಬಳಸಿಕೊಂಡಿದ್ದೇ ಹೆಚ್ಚು. ತನ್ನ ಪ್ರೇಮವನ್ನೂ ಮುರಿದುಕೊಂಡು ಅವರಿಗೆ ಯೀಲ್ಡ್‌ ಆದ ಜಯಲಲಿತಾ ಅದಕ್ಕೆ ತಕ್ಕ ಪ್ರತಿಫಲವನ್ನು ಬಯಸಿದರು. ಎಂಜಿಆರ್‌ ಸ್ಟ್ರೋಕ್‌ ಹೊಡೆದು ಹಾಸಿಗೆ ಹಿಡಿದಾಗ ದೆಹಲಿಗೆ ತೆರಳಿದ ಜಯಲಲಿತಾ, ಅವರ ಅಸಾಮರ್ಥ್ಯದ ಕಾರಣ ನೀಡಿ ತಮ್ಮನ್ನೆ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಕೇಳಿಕೊಂಡಿದ್ದರು! ಇದರಿಂದ ಕೆಂಡಾಮಂಡಲರಾದ ಎಂಜಿಆರ್‌ ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಜಯಾ ಕೊಟ್ಟ ಉತ್ತರ ಸ್ಪಷ್ಟವಿತ್ತು. “ಇಂದು ನಾನು ಬೆಳೆದು ನಿಂತ ಪ್ರತ್ಯೇಕ ವ್ಯಕ್ತಿ. ನನ್ನಲ್ಲಿ ರಾಜ್ಯ ನಡೆಸುವ ಸಾಮರ್ಥ್ಯವಿದೆ. ನಿಮ್ಮ ಈ ವರೆಗಿನ ಸಹಾಯಕ್ಕೆ ವೈಯಕ್ತಿಕವಾಗಿ ಕೃತಜ್ಞಳಾಗಿದ್ದೇನೆ, ಮುಂದೆಯೂ ಆಗಿರುತ್ತೇನೆ. ಆದರೆ ನನ್ನ ಬೆಳವಣಿಗೆಯ ಹಾದಿಯಲ್ಲಿ ನಾನೇ ಹೆಜ್ಜೆ ಇಡುವುದು ಅಗತ್ಯವಿದೆ”.

ಇದಾದ ನಂತರ ಎಂಜಿಆರ್‌ ಬಹಳ ವರ್ಷ ಬದುಕಲಿಲ್ಲ. ಅವರು ಇಲ್ಲವಾದ ಕಾಲಕ್ಕೆ ಅವರ ಹೆಂಡತಿ ಜಾನಕಿ ಅಧಿಕಾರಕ್ಕೆ ಬಂದರು. ಅವರ ವಿರುದ್ಧ ಸೆಟೆದುಬಿದ್ದ ಜಯಾ ಎಂಜಿಆರ್‌ ಮೇಲೆ ತಮಗಿದ್ದ ಹಕ್ಕನ್ನು ಪ್ರತಿಪಾದಿಸುತ್ತಾ ಮತ್ತೊಂದು ಬಣ ಹುಟ್ಟುಹಾಕಿದರು. ಅಪಾರ ಬೆಂಬಲಿಗರೊಂದಿಗೆ ಛಲಕ್ಕೆ ಬಿದ್ದು ಮೂರ್ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿಯೂ ಬಿಟ್ಟರು.

ಈ ಎಲ್ಲ ಸಂದರ್ಭಗಳಲ್ಲೂ ಅವರ ಜೊತೆಗಿದ್ದರು ಶಶಿಕಲಾ. ಅಧಿಕಾರ ಹಿಡಿದ ನಾಲ್ಕೇ ವರ್ಷಗಳಲ್ಲಿ ಹಗರಣಗಳ ಸರಮಾಲೆ ಜಯಾ ಕೊರಳನ್ನು ಸುತ್ತಿತು. ಅನಂತರದ ಚುನಾವಣೆಗಳಲ್ಲಿ ಹೇವು ಏಣಿಯಾಟ ಆಡಿದರು ಜಯಲಲಿತಾ. ಜಿದ್ದು – ಸೇಡಿನ ರಾಜಕಾರಣಗಳು ನಡೆದವು. ಇವುಗಳ ನಡುವೆ ಒಂದೂವರೆ ಲಕ್ಷ ಅಥಿತಿಗಳಿಗೆ ಉಣಬಡಿಸಿ ತಮ್ಮ ಸಾಕುಮಗನಿಗೆ ಅದ್ದೂರಿಯ ಮದುವೆ ಮಾಡಿ ಗಿನ್ನಿಸ್‌ ಪುಸ್ತಕದಲ್ಲೂ ದಾಖಲೆಯಾದರು ಜಯಲಲಿತಾ.

ವಿಧಾನ ಸಭೆಯಲ್ಲಿ ಕಿಡಿಗೇಡಿಗಳು ಆಕೆಯ ಸೀರೆ ಎಳೆದರೆಂದು ಗೌನ್‌ ಹಾಕಿಕೊಂಡು ಓಡಾಡತೊಡಗಿದರು. ಕರುಣಾನಿಧಿ ಅಧಿಕಾರಕ್ಕೆ ಬಂದಾಗ ತಮ್ಮ ಆಭರಣಗಳನ್ನು ಸೀಜ್‌ ಮಾಡಿದರೆಂದು ಕೋಪಿಸಿಕೊಂಡ ಜಯಾ ಹದಿನಾಲ್ಕು ವರ್ಷಗಳ ಕಾಲ ಆಭರಣವನ್ನ ತೊಟ್ಟಿರಲಿಲ್ಲ! ಅವರು ಮತ್ತೆ ಚಿನ್ನ ಮುಟ್ಟಿದ್ದು ಮತ್ತೆ ಅಧಿಕಾರದ ಗಾದಿ ಏರಿದಾಗಲೇ.
~
ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ. ಭ್ರಷ್ಟ ಜಯಲಲಿತಾ ಈ ಎಲ್ಲದರ ಫಲಿತಾಂಶ ಎಂದನ್ನಿಸುತ್ತದೆಯಲ್ಲವೆ?
~
ಅಂದ ಹಾಗೆ, ನಮ್ಮ ನಮ್ಮ ನೆಲೆಗೆ ಅನ್ವಯಿಸಿಕೊಂಡಾಗ ನಾವು ಎಲ್ಲೆಲ್ಲಿ ಭ್ರಷ್ಟರಾಗಿದ್ದೇವೆ? ನಮನಮಗೆ ಸಿಕ್ಕ ಅವಕಾಶಗಳಲ್ಲಿ?

ಚಿತ್ರಕೃಪೆ : http://www.thehindu.com

38 ಟಿಪ್ಪಣಿಗಳು Post a comment
 1. vasudeva
  ಆಕ್ಟೋ 8 2014

  ಚೇತನಾ ಅವರೆ,
  ಜಯಲಲಿತಾ ಬಗ್ಗೆ ಯಾರೂ ಅರಿಯದ ಸಾಕಷ್ಟು ಮಾಹಿತಿ ಒದಗಿಸಿರುವಿರಿ. ಧನ್ಯವಾದಗಳು.
  ಆದರೆ ಒಬ್ಬ ಪ್ರಾಮಾಣಿಕ ಬರಹಗಾರನಿಗೆ ಮತ್ತು ಓದುಗನಿಗೆ ಇದು ಜಯಲಲಿತಾಳ ಪರವಾದ ನೈತಿಕ ವಕಾಲತ್ತಿನ ಲೇಖನ ಎನಿಸದಿರದು. ಈ ತರಹದ ನೈತಿಕ ವಕಾಲತ್ತಿನ ಬರೆಹಗಳು ನಮ್ಮ ಸಾಹಿತ್ಯದಲ್ಲಿ ವಿಪುಲವಾಗಿ ಕಂಡುಬರುತ್ತವೆ. ಜ್ಯೂಲಿಯಸ್ ಸೀಸರ್‌ನ ಬಗ್ಗೆಯ ಕ್ಯಾಷಿಯಸ್ ಸಹ ಹೀಗೆಯೇ ವಾದಿಸುತ್ತಾನೆ (ಅಥವಾ ಇದಕ್ಕಿಂತಲೂ ಅದ್ಭುತವಾಗಿ ಕಾವ್ಯಾತ್ಮಕವಾಗಿ ತನ್ನ ವಾದಗಳನ್ನು ಮಂಡಿಸುತ್ತಾನೆ).
  ರೋಗ ವಿಷಮಾವಸ್ಥೆ ತಲುಪಿದಾಗ ಜಾಗರೂಕತೆಯಿಂದ ಪ್ರತಿಜೀವಕಗಳನ್ನು (ಆಂಟಿ-ಬಯೋಟಿಕ್) ಬಳಸಬೇಕಾದಂತೆ ಸಮಾಜದ ಜಟಿಲವಾದ ಸಮಸ್ಯೆಗಳನ್ನು ಬಗೆವಾಗ ಮಾತ್ರ ಸ್ತ್ರೀವಾದ ದಲಿತವಾದಗಳೆಂಬ ಆಂಟಿ-ಬಯೋಟಿಕ್‌ಗಳನ್ನು ಆಪದ್ಧರ್ಮದಂತೆ ಬಳಸಬೇಕಾಗುತ್ತದೆ. ಹಾಗಲ್ಲದೆ ಜುಜುಬಿ ಕಾಯಿಲೆಗಳಿಗೆಲ್ಲ ಆಂಟಿ-ಬಯೋಟಿಕ್ ಮೊರೆ ಹೋಗುವುದು ಮೂರ್ಖತನ? ಜಯಲಲಿತಾಳ ಅಪರಾಧದ ಸತ್ಯಗಳು ಮತ್ತು ಶಿಕ್ಷೆಯ ಸತ್ಯಗಳು ಎಲ್ಲ ಶ್ರೀಸಾಮಾನ್ಯನಿಗೂ ಗೊತ್ತಿರುವ ಮತ್ತು ನ್ಯಾಯಸಮ್ಮತವೆನಿಸುವ ಸತ್ಯಗಳಾಗಿವೆ. ಇಂಥದನ್ನು ಜಟಿಲೀಕರಿಸುವ ಪ್ರಯತ್ನ ಮೇಲ್ನೋಟಕ್ಕೆ ಮಾನವೀಯ, ಸ್ತ್ರೀಪರ ಇತ್ಯಾದಿ ಎನಿಸಿದರೂ ಅದು ಮತ್ತೊಂದು ಮೂರ್ಖ ಪ್ರಯತ್ನವೇ ಆಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.
  ಪ್ರತಿಯೊಂದಕ್ಕೂ ಸ್ತ್ರೀವಾದ-ಪುರುಷವಾದಗಳನ್ನು ತಳುಕುಹಾಕುವವರಿಗೆ ಈ ನನ್ನ ಪ್ರತಿಕ್ರಿಯೆ ಒಂದು ಆಕ್ಷೇಪಣೆ ಅಥವಾ ಸ್ತ್ರೀನಿಂದನೆ ಎನಿಸಬಹುದು. ಆದರೆ ಅದಕ್ಕೆ ನಾನು ಹೊಣೆಯಲ್ಲ: ಒಂಬತ್ತು ತಿಂಗಳು ಪೂರ್ತಿಯಾಗುವ ಮುನ್ನವೇ ಮಗು ಹುಟ್ಟಿದರೆ ಅದನ್ನು ಪ್ರಸವವೆನ್ನುವುದಿಲ್ಲ, ಗರ್ಭಪಾತವೆನ್ನುತ್ತಾರೆ. ಅದೇ ರೀತಿ ಇಷ್ಟು ತ್ವರಿತವಾಗಿ ಜಯಲಲಿತಾ ಬಗ್ಗೆ ತೀರ್ಮಾನಿಸಿ ಚಿಂತನೆ ನಡೆಸುವುದು ಅಪ್ರಸ್ತುತ. ಆಕೆ ಮೊದಲು ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಪೂರ್ತಿಯಾಗಿ ಅನುಭವಿಸಿ ಕಾನೂನಿನ ದೃಷ್ಟಿಯಿಂದ ಪರಿಶುದ್ಧಳಾಗಿ ಹೊರಬರಲಿ. ಆಮೇಲೆ ಈತರಹದ ಅನುಕಂಪಪೂರಿತ ಲೇಖನ, ಚಿಂತನೆಗಳನ್ನು ಬರೆದು ಚರ್ಚಿಸೋಣ.
  ನಮ್ಮ ಕಾಲದ ಸಮಾಜವಾದಿ, ಸ್ತ್ರೀವಾದಿ, ನೈತಿಕವಾದೀ ಇತ್ಯಾದಿ ಚಿಂತಕರುಗಳು ತಾವು ಜನಸಾಮಾನ್ಯರಿಗಿಂತಲೂ ಮತ್ತು ಸಂವಿಧಾನಕ್ಕಿಂತಲೂ ಮಿಗಿಲಿನ ನೆಲೆಯಲ್ಲಿ ಆಲೋಚಿಸಬಲ್ಲೆವು ಎಂಬ ದುರಭಿಮಾನ ಬೆಳೆಸಿಕೊಂಡಿರುವಂತಿದೆ. ಭಾರತದ ಪ್ರಕಾಂಡ ಚಿಂತಕ ಆಶಿಶ್ ನಂದಿ ಕೂಡ ಮೊನ್ನೆ ದಿವಸ ಇದೇ ತರಹ ದಲಿತರ ಭ್ರಷ್ಟಾಚಾರದ ಬಗ್ಗೆ ಚಿಂತನ ಮಂಥನ ನಡೆಸಲು ಹೋಗಿ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಬಂದಿದ್ದರು. ಗುರುತಿರದ ಚಹರೆಯಿರದ (ಕವಿಯಾದವನು ತನ್ನ ಪಾಲಿನ ಭಾಗ್ಯವೆಂದು ಭಾವಿಸುವ) ಒಬ್ಬ ಸಹೃದಯನಿಗೆ ‘ನಮ್ಮ ನಮ್ಮ ನೆಲೆಗೆ ಅನ್ವಯಿಸಿಕೊಂಡಾಗ ನಾವು ಎಲ್ಲೆಲ್ಲಿ ಭ್ರಷ್ಟರಾಗಿದ್ದೇವೆ? ನಮನಮಗೆ ಸಿಕ್ಕ ಅವಕಾಶಗಳಲ್ಲಿ?‘ ಎಂದು ಪ್ರಶ್ನಿಸುತ್ತಿರುವುದು ಆ ದುರಭಿಮಾನದ ಪರಮಾಭಿವ್ಯಕ್ತಿಯಾಗಿದೆ. ಹುಲುಮಾನವನು ಆಂತರ್ಯದಲ್ಲಿ ಭ್ರಷ್ಟಾತಿಭ್ರಷ್ಟನೂ ಹೌದು ಹಾಗೆಯೇ ಮಹಾತ್ಮರುಗಳಲ್ಲೇ ಮಹಾತ್ಮನೂ ಹೌದು. ಅವನ ಸಣ್ಣತನ ಅಥವಾ ಹಿರಿಮೆಗಳು ಹೊರಗೆ ಸಮಾಜದಲ್ಲಿ ಪಸರಿಸದೆ ಅವನ ಮಟ್ಟಿಗೆ ಅವನೊಳಗೆ ಖಾಸಗಿಯಾಗಿ ಇರುವಷ್ಟೂ ಕಾಲ ಅದನ್ನು ಅನ್ಯರು ಬಗೆಯಲು, ಪ್ರಶ್ನಿಸಲು, ಹೋಗಬಾರದು. ನ್ಯಾಯಾಲಯ ಕೂಡ ಕಳ್ಳತನ ಮಾಡುವವನನ್ನು ಶಿಕ್ಷಿಸುತ್ತದೆಯೇ ವಿನಃ ಕಳ್ಳಮನಸ್ಸಿನವನ ತಂಟೆಗೆ ಹೋಗುವುದಿಲ್ಲ.

  ಉತ್ತರ
  • Nagshetty Shetkar
   ಆಕ್ಟೋ 9 2014
   • ಮಾರ್ಕ್ಸ್ ಮಂಜು
    ಆಕ್ಟೋ 9 2014

    ಈಕೆ ಪೆರಿಯಾರ್ ವಾದದ ಬದಲು ಮಹರ್ಷಿ ಮಾರ್ಕ್ಸ್ ವಾದದ ಪ್ರೇರಣೆಯಲ್ಲಿ ನಡೆದಿದ್ದರೆ ಜೈಲು ಸೇರುತ್ತಿರಲಿಲ್ಲವೆಂಬುದು ನನ್ನ ಧೃಡವಾದ ನಂಬಿಕೆ

    ಉತ್ತರ
    • Nagshetty Shetkar
     ಆಕ್ಟೋ 9 2014

     ಪೆರಿಯಾರ್ ಮಾರ್ಗವೂ ಮಾರ್ಕ್ಸ್ ಮಾರ್ಗವೇ ಆಗಿದೆ; ಪ್ರಗತಿಪರರೆಲ್ಲರದ್ದೂ ಒಂದೇ ಮಾರ್ಗ ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲದೆ ಹೋಯಿತಲ್ಲ ಎಂದು ಬೇಸರವಾಗುತ್ತಿದೆ ಮಂಜು ಅವರೇ! ದಯವಿಟ್ಟು ನಿಮ್ಮನ್ನು ಮಾರ್ಕ್ಸ್ ಮಂಜು ಎಂದು ಕರೆದುಕೊಂಡು ಮಾರ್ಕ್ಸ್ ನಿಗೆ ಮುಜುಗರವನ್ನುಂಟು ಮಾಡಬೇಡಿ. ಬೇಕಿದ್ದರೆ ನಿಮ್ಮನ್ನು ಮೂರಕ್ಸ್ ಮಂಜು ಎಂದು ಕರೆದುಕೊಳ್ಳಿ.

     ಉತ್ತರ
     • ಮಾರ್ಕ್ಸ್ ಮಂಜು
      ಆಕ್ಟೋ 10 2014

      ಕಾಮ್ರೇಡ್ ಶೆಟ್ಟರ್, ನೀವು ಈ ರೀತಿ ಮಾತನಾಡುವರು ಮಾರ್ಕ್ಸ್ ಓದಿಲ್ಲ ಎಂದು ಸಾಬೀತು ಮಾಡಿದ್ದೀರಿ. ಮಾರ್ಕ್ಸ್ ಅರ್ಥವಾಗದವರೆಲ್ಲ ಇಲ್ಲಿ ಮಾರ್ಕ್ಸ್ ವಾದಿಗಳಾಗಿದ್ದರಿಂದ ನಮ್ಮ ಮಹರ್ಷಿ ಇಲ್ಲಿನ ಜನರಿಗೆ ಅರ್ಥವಾಗದೆ ನಿಮ್ಮಂತೆ ಮಾತನಾಡುತ್ತಿದ್ದಾರೆ.ಅಪಾರಅಪಾ

      ಉತ್ತರ
     • ವಿಜಯ್ ಪೈ
      ಆಕ್ಟೋ 11 2014

      [ಪ್ರಗತಿಪರರೆಲ್ಲರದ್ದೂ ಒಂದೇ ಮಾರ್ಗ ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲದೆ …]
      ಪರಗತಿ ಪರರೆಲ್ಲರದೂ, ಅದರಲ್ಲೂ ಕರ್ನಾಟಕದ ಪರಗತಿಪರರದ್ದು ಒಂದೇ ಮಾರ್ಗ..ಅದು ‘ಗಂಜಿ ಮಾರ್ಗ’ ಎಂಬುದು ಮಾರ್ಕ್ಸ ಮಂಜುರಿಗೆ ಗೊತ್ತಿಲ್ಲದ್ದು ಖೇದಕರ!. ಅವರು ನಮ್ಮ ಶೆಟ್ಕರ್ ಹತ್ತಿರ ಟ್ಯೂಶನ್ ಗೆ ಹೋಗಿ ಇಂಪ್ರೂವಿಸಲಿ ಎಂಬ ಸದಿಚ್ಛೆ ನನ್ನದು.. 🙂

      ಉತ್ತರ
      • ಮಾರ್ಕ್ಸ್ ಮಂಜು
       ಆಕ್ಟೋ 13 2014

       Mr.ವಿಜಯ್ ಪೈ
       We Marxvaadis are not Ganji Jeevis.

       ಮಾರ್ಕ್ಸ್,ಮಾವೋ,ಪೆರಿಯಾರ್ ಎಲ್ಲವನ್ನೂ ಕಲಬೆರಕೆ ಮಾಡಿಕೊಂಡ ಈ ಶೆಟ್ಕರ್ ಅಂತವರಿಂದ ನನಗೆ ಟ್ಯುಷನ್ ಅಗತ್ಯವಿಲ್ಲ.ಕರ್ನಾಟಕದಲ್ಲಿ ಮಾರ್ಕ್ಸ್ ಮಹರ್ಶಿಗೆ ದೊಡ್ಡ ತೊಡಕು ಈ ರೀತಿ ಕಲಬೆರಕೆ ಮಾಡಿದ ಜನರೇ ಆಗಿದ್ದಾರೆ

       ಉತ್ತರ
 2. M A Sriranga
  ಆಕ್ಟೋ 8 2014

  ಚೇತನಾ ಅವರಿಗೆ— ಜಯಲಲಿತಾ ಅವರ ವ್ಯಕ್ತಿ ಚಿತ್ರಣವನ್ನು ಚೆನ್ನಾಗಿ ಕೊಟ್ಟಿದ್ದೀರಿ. ಇದರ ಹಿಂದಿನ ‘ಧ್ವನಿ’ ಆಕೆಗೆ ಈಗ ಕೋರ್ಟು ವಿಧಿಸಿರುವ ಶಿಕ್ಷೆಯಿಂದ ವಿನಾಯಿತಿ ಕೊಡಬೇಕು ಎಂಬದು ಅಲ್ಲ ಎಂದು ಭಾವಿಸುತ್ತೇನೆ.

  ಉತ್ತರ
 3. ಆಕ್ಟೋ 9 2014

  ಭ್ರಷ್ಟ ಜಯಲಲಿತಾ ತಾನು ಮಾಡಿದ ಭ್ರಷ್ಟತೆಯ ಪಲಿತಾಂಶವಷ್ಟೇ. ಬೇರೆ ಯಾವುದರದ್ದೂ ಅಲ್ಲ. ಜಯಲಲಿತಾ ಮಾತ್ರವಲ್ಲದೆ, ಅಲ್ಲೆಲ್ಲೋ ಉಲ್ಲೇಖಿಸಿದಂತ ಐದೂ ಹೆಂಗಸರಿಗೆ ತನ್ನವರೆಂದು ಹೇಳಿಕೊಳ್ಳಲು ಯಾರೂ ಇಲ್ಲ.

  “ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ” ಎಂಬ ಮಾತು 50% ತಪ್ಪು. Because, sensible humans ALWAYS have a choice. ವಂಚಕರಾಗಿಯೂ ಮುಂದುವರೆಯಬಹುದು, enlightened ಆಗಿಯೂ ಮುಂದುವರೆಯಬಹುದು.

  ಫೆಮಿನಿಸಂನ ಪೆನ್ನನ್ನು ಬದಿಗಿಟ್ಟು, ಸಾಮಾನ್ಯ ರೆನೋಲ್ಡ್ಸ್ ಪೆನ್ನಿನಲ್ಲಿ ಬರೆದಿದ್ದರೆ ಒಳ್ಳೆಯದಿತ್ತೇನೋ.

  ಉತ್ತರ
 4. sandeep shetty
  ಆಕ್ಟೋ 9 2014

  ಜಯಲಲಿತಾಳ ಭ್ರಷ್ಟಾಚಾರವನ್ನು,ಮಮತಾ ಬ್ಯಾನರ್ಜಿಯ ದರ್ಪವನ್ನು,ಸೋನಿಯಾಳ ಹಗರಣಗಳನ್ನೂ ಸಹ ಸ್ತ್ರೀಸ೦ವೇದನೆಗಳ ಸ್ಪರ್ಶದೊ೦ದಿಗೆ ನೋಡುವ ಸ್ತ್ರೀವಾದಿಗಳೂ ನಮ್ಮಲ್ಲಿದ್ದಾರೆ ಎನ್ನುವುದು ಕನ್ನಡ ಸಾಹಿತ್ಯ ಮತ್ತು ಸ್ತ್ರೀವಾದದ ದುರ೦ತವೇ ಸರಿ ’ಚೇ,ಚೇ..!!’ಅದೇಕೋ ಜಯಲಲಿತಾಳ ಹಿ೦ದಿನ ಕತೆಗಳೆಲ್ಲವನ್ನೂ ಬರೆದಿರುವ ಲೇಖಕಿ ಆಕೆ ತನ್ನ ಸೋದರ ಮತ್ತು ಸೋದರಿಯರನ್ನುದೂರವಿಟ್ಟಿರುವ ಅಹ೦ಕಾರದ ಬಗ್ಗೆ ಹೇಳಲೇ ಇಲ್ಲ..

  ಉತ್ತರ
 5. divin
  ಆಕ್ಟೋ 9 2014

  it’s a mirror image kind of article!!means you are objective manner here or you are the OTHER!!.just image if you are person of Tamilnadu of beneficiary of her government.in that situation how can you feel?or how you feel if you are subjective?

  ಉತ್ತರ
 6. Nagshetty Shetkar
  ಆಕ್ಟೋ 10 2014

  ಅಯ್ಯಂಗಾರ್ ಬ್ರಾಹ್ಮಣ ಹಿನ್ನೆಲೆಯ ಜಯಲಲಿತಾ ಅವರ ಬಗ್ಗೆ ಅಪಾರ ಕನಿಕರ ವ್ಯಕ್ತಪಡಿಸಿರುವ ಚೇತನಾ ಅವರಿಗೆ ಒಂದು ಪ್ರಶ್ನೆ. ಜಯಲಲಿತಾ ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗುವ ಸಂದರ್ಭದಲ್ಲಿ ನೀವು ನಡೆಸಿರುವ ತುಮುಲ ಭರಿತ ಜಿಜ್ಞಾಸೆಯನ್ನು ಈ ಹಿಂದೆ ಇಂಥದ್ದೇ ಆರೋಪದ ಮೇಲೆ ಜೈಲಿಗೆ ಹೋದ ಕನ್ನಿಮೋಳಿ ಅವರ ಸಂದರ್ಭದಲ್ಲಿ ಏಕೆ ನಡೆಸಲಿಲ್ಲ? ಕನ್ನಿಮೋಳಿ ಬ್ರಾಹ್ಮಣ ಜಾತಿಗೆ ಸೇರಿದವಳಲ್ಲ, ಹಿಂದುಳಿದ ಜಾತಿಗೆ ಸೇರಿದವಳು. “ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ.” ಎಂಬ ನಿಮ್ಮ ಮಾತು ಮೇಲ್ಜಾತಿಯ ಜಯಲಲಿತಾಗಷ್ಟೇ ಅಲ್ಲ ತಳವರ್ಗದ ಕನ್ನಿಮೋಳಿಗೂ ಅನ್ವಯವಾಗುತ್ತದೆಯಲ್ಲ! ಕೇವಲ ಜಯಲಲಿತಾ ಕುರಿತು ಏಕೆ ಸಿಂಪತಿ??

  ಉತ್ತರ
  • Nagshetty Shetkar
   ಆಕ್ಟೋ 11 2014

   ಚೇತನಾಜಿ, ನನ್ನ ಪ್ರಶ್ನೆಗೆ ಉತ್ತರ ಕೊಡಿ.

   ಉತ್ತರ
   • ಆಕ್ಟೋ 12 2014

    ಶೆಟ್ಕರ್ ಮಹಾಶಯರೇ,
    ನಾನು ತಿಳಿದಂತೆ, ಚೇತನಾ ಅವರು ನಿಮ್ಮಂತೆ ಜಾತಿ ಲೆಕ್ಕಾಚಾರದ “ಜಾತ್ಯಾತೀತ”ರಲ್ಲ. ಹಿಂದೊಮ್ಮೆ ನನ್ನದೊಂದು ಲೇಖನಕ್ಕೂ ತಾವು ಇದೇ ರೀತಿ ಪ್ರತಿಕ್ರಿಯಿಸಿದ್ದಿರಿ.

    “ಜಾತ್ಯಾತೀತ”ನೆಂದು ಕಂಡ ಕಂಡೆಡೆ ಕೂಗಿಕೊಂಡರೆ
    ಮನದೊಳಗಿನ “ಜಾತಿ ಲೆಕ್ಕಾಚಾರ” ಹೋಗಬಲ್ಲುದೇ ಸೆಕ್ಯುಲರೇಶ್ವರಾ!

    ಉತ್ತರ
    • Nagshetty Shetkar
     ಆಕ್ಟೋ 12 2014

     ಜಾತಿ ಒಂದು ವಾಸ್ತವ ಮಿ. ಶೆಟ್ಟಿ. ನೀವು ನಿಮ್ಮ ಹೆಸರಿನ ಜೊತೆಗೆ ಶೆಟ್ಟಿ ಎಂಬ ಜಾತಿ ಸೂಚಕ ಉಪನಾಮ ಇತ್ತುಕೊಂದಿರುವುದೂ ಜಾತಿ ಲೆಕ್ಕಾಚಾರವೇ ಆಗಿದೆ.

     ಉತ್ತರ
     • ಆಕ್ಟೋ 13 2014

      ಜಾತಿ ಎಂಬುದು ’ವಾಸ್ತವ’ ಎಂದು ತಿಳಿದುಕೊಂಡಿರುವುದರಿಂದಲೇ ನನಗೆ ಅದನ್ನು “ಮೀರುವ” ಅಥವಾ “ಜಾತ್ಯಾತೀತ”ನೆಂದು ಕರೆದುಕೊಳ್ಳುವ ಭ್ರಮೆಯಿಲ್ಲ.ಇನ್ನು ನನ್ನ ಹೆಸರಿನಿಂದ ಮುಂದೆ ಇರುವ “ಶೆಟ್ಟಿ” ಕೂಡ ಅದನ್ನೇ ಸೂಚಿಸುತ್ತದೆ.

      ಆದರೆ, “ಜಾತಿ” ಹೆಸರೇಳಿಕೊಂಡು ಜಾತಿ ರಾಜಕೀಯ,ಲಾಬಿ ಮಾಡುವ “ಜಾತ್ಯಾತೀತ”ರ ಪೈಕಿ ನಾನು ಸೇರಿಲ್ಲ ಎನ್ನುವುದೇ ಸಮಾಧಾನ

      ಉತ್ತರ
     • ವಿಜಯ್ ಪೈ
      ಆಕ್ಟೋ 13 2014

      – ಜಾತಿ ಪದ್ಧತಿ ಹುಟ್ಟಿದ್ದು ಮನುವಾದಿಗಳಿಂದ
      – ಜಾತಿ ನಿರ್ಮೂಲನೆ ಆಗಬೇಕು.
      – ಜಾತಿ ನಿರ್ಮೂಲನೆ ಆಗುವ ತನಕ ಸಮಾನತೆ ಅಸಾಧ್ಯ
      ——–
      – ಹಿಂದುಳಿದವರು ತಮ್ಮ ತಮ್ಮ ಜಾತಿ ಸಮಾವೇಶಗಳನ್ನು ಸಂಘಟಿಸಿ ಬಲಗೊಳ್ಳಬೇಕು
      – ನಾವೆಲ್ಲ ಒಂದೇ ಅನ್ನುವವರ ಹುಸ್ನಾರಕ್ಕೆ ಬಲಿಯಾಗದೇ, ಜಾತಿ ಅಸ್ಮಿತೆ ಉಳಿಸಿಕೊಳ್ಳಬೇಕು.

      ದೇವರೇ..ಇಮ್ಮಂಡೆ ಹಾವುಗಳಾದ ಈ ಗಂಜಿ ಗಿರಾಕಿಗಳಿಂದ ದೇಶವನ್ನು ಕಾಪಾಡು…ಸ್ವಚ್ಛತಾ ಆಂದೋಲನದ ದೆಸೆಯಲ್ಲಿ ಇವರನ್ನೆಲ್ಲ ಗುಡಿಸಿ, ತಿಪ್ಪೆಗೆ ಎಸೆಯುವ ಬುದ್ಧಿ ಕೊಡು!!

      ಉತ್ತರ
  • ವಿಜಯ್ ಪೈ
   ಆಕ್ಟೋ 11 2014

   ನಾನು ಅದನ್ನೇ ವಿಚಾರ ಮಾಡುತ್ತಿದ್ದೆ..ನಮ್ಮ ಜಾತ್ಯತೀತ ‘ಶರಣ’ರಿಗೆ ಜಯಲಲಿತಾ ಜಾತಿ ಹೇಗೆ ಕಾಣಲಿಲ್ಲ ಅಂತ!!.. ಕನ್ನಡಕದ ನಂಬರ ಏನಾದರೂ ಬದಲಾಗಿದೆಯೊ ಅಂತ!.. ಹೂಂ. ಸರಿಯಿದೆ ನೀವು ಹೇಳಿದ್ದು.ಕನಿಮೋಳಿ, ಮಾಯಾವತಿ ಕೂಡ ಪರಿಸ್ಥಿತಿಯ ಬಲಿಪಶುಗಳೆ..ಮೇಲ್ವರ್ಗಗಳ (ಅಂದರೆ ಬ್ರಾಹ್ಮಣರ), ಮನುವಾದಿಗಳ ಹುನ್ನಾರಕ್ಕೆ ಬಲಿಯಾದವರು.
   ಅಂದಹಾಗೆ ಶರಣರೆ..ಚೇತನಾಜಿ ಕೂಡ ನಿಮ್ಮ ಕಡೆಯವರೆ..ಮತ್ತೆ ಅವರ ಜಾತಿ ಹುಡುಕಲು ಹೋಗಬೇಡಿ!. ಅವರು ಜಾತ್ಯತೀತರು..ಅನಂತಮೂರ್ತಿಗಳಂತೆ..

   ಉತ್ತರ
   • shripad
    ಆಕ್ಟೋ 13 2014

    “ಮೇಲ್ಜಾತಿಯ ಜಯಲಲಿತಾಗಷ್ಟೇ ಅಲ್ಲ ತಳವರ್ಗದ ಕನ್ನಿಮೋಳಿಗೂ ಅನ್ವಯವಾಗುತ್ತದೆಯಲ್ಲ! ಕೇವಲ ಜಯಲಲಿತಾ ಕುರಿತು ಏಕೆ ಸಿಂಪತಿ??…” “ಮೇಲ್ವರ್ಗಗಳ (ಅಂದರೆ ಬ್ರಾಹ್ಮಣರ), ಮನುವಾದಿಗಳ ಹುನ್ನಾರಕ್ಕೆ ಬಲಿಯಾದವರು…”
    ವರ್ಣ, ವರ್ಗ ಮತ್ತು ಜಾತಿ ಪರಿಕಲ್ಪನೆಗಳು ನಮಗೆ ಇನ್ನೂ ಸ್ಪಷ್ಟವಾಗಿಲ್ಲ ಎಂಬುದನ್ನು ಇಂಥ ಮಾತುಗಳು ತೋರಿಸುತ್ತವೆ. ವರ್ಣ ಎಂಬುದು ವ್ಯಕ್ತಿತ್ವ ಪಡೆದುಕೊಂಡ ಒಂದು ಸ್ಥಿತಿ. ಯಾವ ಜಾತಿವರು ಬೇಕಾದರೂ ಯಾವ ವರ್ಣಕ್ಕೆ ಬೇಕಾದರೂ ಚಲಿಸಬಹುದಾದ ಸ್ಥಿತಿ ಹಾಗೂ ಅವಕಾಶ ಅದು. ನಮ್ಮ ದೇಶದುಸನಾತನ ಸಾಮಾಜಿಕ ಕ್ರಮದಲ್ಲಿ ಅದು ಇದ್ದುದನ್ನು ಮನಗಾಣಬಹುದು. ಇದೊಂದು ವಿಶಾಲ ಅರ್ಥವುಳ್ಳ ಪರಿಕಲ್ಪನೆ. ನಮ್ಮೊಂದಿಗಿನ ಇಂದಿನ ಢೋಂಗಿ ಜಾತ್ಯತೀತವಾದಿಗಳು ಅಥವಾ ಜಾತಿನಾಶದ ಬಗ್ಗೆ ಭಾಷಣ ಬಿಗಿಯುವವರು ಆರೋಪಿಸುವ ಅರ್ಥ ಇದಕ್ಕೆ ಇರುವಂತೆ ಕಾಣುವುದಿಲ್ಲ.
    ಜಾತಿ ಹುಟ್ಟಿನಿಂದ ಬರುವಂಥದ್ದು. ಈ ಪದದ ನಿಷ್ಪತ್ತಿಯೇ ಹಾಗಿದೆ. ಹೀಗಾಗಿ ಒಂದು ಜಾತಿಯಲ್ಲಿ ಜನಿಸಿದವನು ಮತ್ತೊಂದು ಜಾತಿಗೆ ಚಲಿಸಲು ಅವಕಾಶವಿಲ್ಲ. ವರ್ಣ ಚಲನಶೀಲವಾದರೆ ಜಾತಿ ನಿಶ್ಚಲ.
    ಇನ್ನು ವರ್ಗ. ಇದು ಎಡವಾದಿಗಳ ಪರಿಕಲ್ಪನೆ. ಕ್ಲಾಸ್ ಪದದ ಅನುವಾದ. ಬಂದದ್ದು ಮಾರ್ಕ್ಸ್ ವಾದದಿಂದ. ಆತ ಹೇಳಿದ್ದು ಮೇಲ್ವರ್ಗ ಹಾಗೂ ಕೆಳವರ್ಗ. ಅಂದರೆ ಕ್ರಮವಾಗಿ ಹಣವಂತರು ಮತ್ತು ಬಡವರು. ಆತ ಯೂರೋಪಿನ ಸಮಾಜ ನೋಡಿ ಬರೆದವ. ಅಲ್ಲಿ ಇರುವುದು ಈ ಎರಡೇ ವರ್ಗ. ನಮ್ಮಲ್ಲಿ ಹಾಗಲ್ಲ. ಇವೆರಡನ್ನೂ ಜೋಡಿಸುವ ಮುಖ್ಯವಾದ ಮಧ್ಯಮ ವರ್ಗ ಎಂಬುದೊಂದಿದೆ. ನಮ್ಮ ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಗತಿಗಳು ನಿರ್ಧಾರವಾಗುವುದೇ ಇವರಿಂದ. ಇವರಿಗೆ ಜಾಗವಿಲ್ಲದ ಮಾರ್ಕ್ಸ್ ವಾದಕ್ಕೆ ನಮ್ಮ ದೇಶದಲ್ಲೂ ಹೇಳಿಕೊಳ್ಳುವ ಜಾಗ ಎಂದೂ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಅಲ್ಲದೇ ನಮ್ಮವರೇ ಆದ ಅಂಬೇಡ್ಕರ್ ಹಾಗೂ ಲೋಹಿಯಾ ಅವರ ವಾದಗಳು ಮಾರ್ಕ್ಸ್ ವಾದದಲ್ಲಿ ಇಲ್ಲದ ಅಂಶಗಳನ್ನು ಹೇಳುವುದರಿಂದ ಹಾಗೂ ನಮ್ಮ ಸಮಾಜದ ಒಳಗನ್ನು ಒರೆಗೆ ಹಚ್ಚುವುದರಿಂದ ಈ ಎರಡು ವಾದಗಳು ಇರುವವರೆಗೆ ಮಾರ್ಕ್ಸ್ ವಾದಕ್ಕೆ ಕೂರಲೂ ಜಾಗವಿಲ್ಲ. ಚರ್ಚೆ ಮತ್ತು ವಾದಗಳಲ್ಲಿ ಅದು ಜಾಗ ಪಡೆದುಕೊಂಡು ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ ಅಷ್ಟೆ.
    ಹೀಗಾಗಿ ಸಾಮಾಜಿಕ ವಿಷಯಗಳ ಚರ್ಚೆ ಅದರಲ್ಲೂ ಜಾತೆ ವಿಚಾರ ಬಂದಾಗ ವರ್ಣ, ಜಾತಿಗಳ ಸಮಾನ ಅರ್ಥವೇನೋ ಎಂಬಂತೆ ಎಲ್ಲರೂ ಒಮ್ಮೆ ವರ್ಣ ಅಂದರೆ ಮತ್ತೊಮ್ಮೆ ಮೇಲ್ವರ್ಗ ಅನ್ನುತ್ತಾರೆ, ಮಗದೊಮ್ಮೆ ಮೇಲ್ಜಾತಿ ಅನ್ನುತ್ತಾರೆ! ವರ್ಣ ಎಂಬುದು ಧಾರ್ಮಿಕ ಅಥವಾ ಆಧ್ಯಾತ್ಮಿಕ ಪರಿಕಲ್ಪನೆಯಾದರೆ ಜಾತಿ ಸಾಮಾಜಿಕ ಪರಿಕಲ್ಪನೆ. ವರ್ಗ ಎಂಬುದು ಆರ್ಥಿಕ ಪರಿಕಲ್ಪನೆ. ಯಾವ ಜಾತಿಯವನು ಬೇಕಾದರೂ ಯಾವುದೇ ವರ್ಣಕ್ಕೆ ಹೋಗಬಹುದಾದಂತೆ ಯಾವ ಜಾತಿಯವನು ಬೇಕಾದರೂ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಮೇಲ್ವರ್ಗದವನಾಗಬಹುದು ಅಥವಾ ಕೆಳವರ್ಗದವನಾಗಬಹುದು. ವರ್ಣ, ಜಾತಿ ಮತ್ತು ವರ್ಗಗಳ ಇಂಥ ಪ್ರಾಥಮಿಕ ಸಂಗತಿ ಅರ್ಥಮಾಡಿಕೊಳ್ಳದೇ ಸಿಕ್ಕ ಸಿಕ್ಕ ಪದಗಳನ್ನು ಮನಬಂದಂತೆ ಸೋ ಕಾಲ್ಡ್ ಪ್ರಗತಿಪರರು ಎಡವಾದಿಗಳು ಬಳಸುತ್ತ, ಪ್ರಚಾರಮಾಡುತ್ತ ಬಂದುದರಿಂದಲೇ ಇವು ಮತ್ತಷ್ಟು ಸಿಕ್ಕು ಸಿಕ್ಕಾಗಿರುವುದು.

    ಉತ್ತರ
    • ಆಕ್ಟೋ 13 2014

     @shripad +1 🙂 🙂

     ಉತ್ತರ
     • ಮಾರ್ಕ್ಸ್ ಮಂಜು
      ಆಕ್ಟೋ 13 2014

      although, I don’t agree with Mr.shripad’s comment on ಮಹರ್ಷಿ ಮಾರ್ಕ್ಸ್ saying “ಮಾರ್ಕ್ಸ್ ವಾದಕ್ಕೆ ನಮ್ಮ ದೇಶದಲ್ಲೂ ಹೇಳಿಕೊಳ್ಳುವ ಜಾಗ ಎಂದೂ ಸಿಕ್ಕಿಲ್ಲ, ಸಿಗುವುದೂ ಇಲ್ಲ.”. But I appreciate him for speaking about Marx.

      Mr.Nagshetty Shetkar : Please learn something from this comment and stop comparing everything on earth with ಮಹರ್ಷಿ ಮಾರ್ಕ್ಸ್

      ಉತ್ತರ
      • Nagshetty Shetkar
       ಆಕ್ಟೋ 13 2014

       ಸರಿ, ನಿಮ್ಮ ಅಪ್ಪಣೆಯಂತೆಯೇ ನಡೆಯುತ್ತೇನೆ ಮಹಾಸ್ವಾಮಿ!

       ಉತ್ತರ
       • Nagshetty Shetkar
        ಆಕ್ಟೋ 13 2014

        ಮೂರಕ್ಸ್ ಮಂಜು ಅವರು ಶ್ರೀಪಾದ ಅವರ ಬೆನ್ನು ನೆಕ್ಕುತ್ತಿರುವುದು ನೋಡಿದರೆ ಮುಂದೆ ಏನಾಗಬಹುದು ಎಂಬುದರ ಸುಳಿವು ಸಿಗುತ್ತದೆ!

        ಉತ್ತರ
        • ಮಾರ್ಕ್ಸ್ ಮಂಜು
         ಆಕ್ಟೋ 14 2014

         all this ‘ಬೆನ್ನು ನೆಕ್ಕು’ ಕೆಲಸ ನಿಮ್ಮತರದ ಎಲ್ಲ ವಾದಗಳನ್ನು ಮಾರ್ಕ್ಸ್ ವಾದಕ್ಕೆ ಹೋಲಿಸುವ ಜನರಿಗೆ ಸೇರಿದುದಾಗಿದೆ Mr Nagshetty Shetkar and don’t call me ‘ಮಹಾಸ್ವಾಮಿ’ and all like typical Vaidikashahis. If you want you can call me ‘ಕಾಮ್ರೇಡ್’

         ಉತ್ತರ
         • shripad
          ಆಕ್ಟೋ 15 2014

          ಮಾರ್ಕ್ಸ್ ಮಂಜು ಅವರೇ ಮಾರ್ಕ್ಸ್ ಕುರಿತ ನಿಮ್ಮ ಅಭಿಮಾನ ಅದ್ಭುತ. ಅಭಿನವ ಮಾರ್ಕ್ಸ್ ಎಂದು ಬೇಕಾದರೂ ಕರೆದುಕೊಳ್ಳಿ, ಅಭ್ಯಂತರವಿಲ್ಲ. ಆದರೆ ಮಹಾಸ್ವಾಮಿ ಎಂಬುದು ವೈದಿಕ ಎನ್ನುವ ತಮಗೆ ಸ್ವತಃ ಮಾರ್ಕ್ಸ್ ನನ್ನು ಮಹರ್ಷಿ ಎಂದು ಕರೆಯುವುದು ಕೂಡ ವೈದಿಕ ಸಂಬೋಧನೆಯಾಗುತ್ತದೆ ಎಂದು ಹೊಳೆಯಲಿಲ್ಲವೇ? ಅಷ್ಟು ಸುಲಭವಾಗಿ ವೈದಿಕದಿಂದ ತಪ್ಪಿಸಿಕೊಳ್ಳಲಾರಿರಿ. ನಿಮಗೆ “ಪೂರ್ವಾವಲೋಕನ” (ಅನು.ರಾಜಾರಾಮ ಹೆಗಡೆ) ಅತ್ಯಗತ್ಯ!

          ಉತ್ತರ
          • ಮಾರ್ಕ್ಸ್ ಮಂಜು
           ಆಕ್ಟೋ 15 2014

           are there not ಅವೈದಿಕ ಮಹರ್ಷಿ’s?

          • shripad
           ಆಕ್ಟೋ 15 2014

           ಹಾಗಾದರೆ ಅವೈದಿಕ ಮಹಾಸ್ವಾಮಿಗಳೂ ಇದ್ದಾರೆ. ಸುಖಾಸುಮ್ಮನೆ ಸಿಕ್ಕಿದ್ದಕ್ಕೆಲ್ಲ ವೈದಿಕ ಪದ ಅಂಟಿಸುವ ಚಾಳಿ ಬಿಡಿ. ಟೀಕಿಸಲು ಬೇರೆ ಬೇಕಾದಷ್ಟು ಪದಗಳು ಸಿಗುತ್ತವೆ.

        • shripad
         ಆಕ್ಟೋ 15 2014

         ಶೆಟ್ಕರ್ ಮಹಾಶಯರೇ ಹಾಗಂತ ನೀವು ಮತ್ತೊಂದು ನೆಕ್ಕಲು ಬಂದುಬಿಟ್ಟೀರಾ?!

         ಉತ್ತರ
         • ಮಾರ್ಕ್ಸ್ ಮಂಜು
          ಆಕ್ಟೋ 15 2014

          you sound somewhat logical Mr.shripad. ವೈದಿಕ,ಅವೈದಿಕ ಇತ್ಯಾದಿ ಬೂರ್ಜ್ವಾ ಬುದ್ಧಿಜೀವಿಗಳ ಸ್ವತ್ತು.ನನ್ನ ಸ್ವತ್ತು ಮಹರ್ಷಿ ಮಾರ್ಕ್ಸ್ ಮಾತ್ರವೇ ಆಗಿದ್ದಾರೆ

          ಉತ್ತರ
          • A Comrade
           ಆಕ್ಟೋ 15 2014

           Comrade manju,
           Please stop prefixing your adjective “maharshi” to Karl Marx. The word maharshi sounds ‘Bourgeois’ and anti communist. Maharshi is a non proletarian pig, Whether it is vedic or non vedic. Or are you signifying that Karl Marx is also a Bourgeois? just, because he was not a proletarian and depended his whole life on his friend Friedrich Engels for his daily bread? How can a communist use a phrase like “ನನ್ನ ಸ್ವತ್ತು ಮಹರ್ಷಿ ಮಾರ್ಕ್ಸ್”?

          • shripad
           ಆಕ್ಟೋ 16 2014

           ಈಗ ಸರಿಹೋಯ್ತು. ಸುಮ್ಮನೆ ಮಾರ್ಕ್ಸ್ ಅನ್ನಿ. ಮಹರ್ಷಿ, ಸಂತ, ಶರಣ ಮೊದಲಾದವೆಲ್ಲ ನಿಮ್ಮವರು ಗುರುತಿಸುವಂತೆ ಬೂರ್ಜ್ವಾ ಪದಗಳು! ಅವುಗಳ ಸಹವಾಸ ಇದ್ದಷ್ಟೂ ನಿಮಗೆ ಕಷ್ಟ. ನಿಮ್ಮ ಪಾಲಿಗೆ ಇವು ಬೂರ್ಜ್ವಾ ಆದರೆ ಇನ್ನು ಕೆಲವರ ಪಾಲಿಗೆ ಕಾಫಿರ್ ಆಗಿವೆ. ಇನ್ನು ಕೆಲವರಿಗೆ ಇವೇ ಅನ್ನಭಾಗ್ಯ!!

          • shripad
           ಆಕ್ಟೋ 16 2014

           @ ಬೇನಾಮಿ ಕಾಮ್ರೇಡ್ ಗೆ: ಇಂಥ ಆಧಾರ ರಹಿತ ದಪ್ಪ ದಪ್ಪ ಪದಗಳಿಂದಲೇ ಮಾರ್ಕ್ಸ್ ವಾದ ಸೊರಗುತ್ತಿರುವುದು. ಮಹರ್ಷಿ ಎಂಬುದು ನಾನ್ ಪ್ರೊಲಿಟೇರಿಯನ್ ಪಿಗ್ ಅಂತೆ! ಹಾಗಾದರೆ ಮಹರ್ಷಿ ವಾಲ್ಮೀಕಿ? ನಿಮ್ಮ ಡಬ್ಬಾ ವಾದಗಳನ್ನು ಬದಿಗಿಟ್ಟು ಮಾತಾಡಿ

      • shripad
       ಆಕ್ಟೋ 15 2014

       ಮಾರ್ಕ್ಸ್ ಸೇರಿದಂತೆ ಯಾರನ್ನು ಯಾರು ಬೇಕಾದರೂ ಓದಿಕೊಳ್ಳಬಹುದು. ಅಂತೆಯೇ ದರ್ಗಾರನ್ನೂ ವಚನಗಳನ್ನೂ. ಹಾಗಂತ ಅವುಗಳಿಗೇ ನಮ್ಮನ್ನು ನಾವು ಮಾರಿಕೊಳ್ಳಬೇಕಿಲ್ಲ. ಆಯಾ ವಾದ, ಪಂಥ, ಸಿದ್ಧಾಂತಗಳಿಗೆ ಮಾರುಹೋಗಿ ಸ್ವಂತಿಕೆ ಮಾರಿಕೊಂಡರೆ ಅಂಥವರ ವರ್ತನೆಗೂ ಮೂಲಭೂತವಾದಿಗಳೆಂದು ಸೋಕಾಲ್ಡ್ ಪ್ರಗತಿಪರರು ಕರೆಯುತ್ತಾರಲ್ಲ? ಅಂಥವರ ವರ್ತನೆಗೂ ಹೇಳಿಕೊಳ್ಳುವ ಯಾವ ವ್ಯತ್ಯಾಸವೂ ಇರುವುದಿಲ್ಲ. ನಕ್ಸಲರನ್ನೇ ನೋಡಿ. ಅವರ ಕಥೆ ಮತ್ತಿನ್ನೇನು? ಪ್ರಬಲ ಎಡವಾದಿಗಳು ಕೇವಲ ಭಾಷಣಕ್ಕೆ ಸೀಮಿತವಾಗಿದ್ದರೆ ನಕ್ಸಲರು ಕ್ರಿಯೆಗೆ ಇಳಿದಿದ್ದಾರೆ ಅಷ್ಟೆ.

       ಉತ್ತರ
       • ಮಾರ್ಕ್ಸ್ ಮಂಜು
        ಆಕ್ಟೋ 16 2014

        Comrade,

        I strongly belive that Marx can be understood by this country people only when we talk in their language.So I use “ಮಹರ್ಷಿ” to show these people his importance. And FYI , I started using this “ಮಹರ್ಷಿ ಮಾರ್ಕ್ಸ್” after reading an article from one of finest mind in Kannada Literature Devanur.He has used this word which made me fascinate and I started using it

        ಉತ್ತರ
        • Nagshetty Shetkar
         ಆಕ್ಟೋ 16 2014

         ” I started using this “ಮಹರ್ಷಿ ಮಾರ್ಕ್ಸ್” after reading an article from one of finest mind in Kannada Literature Devanur.”

         ಸ್ವಂತ ಚಿಂತನಾ ಶಕ್ತಿ ಇಲ್ಲದವರು ತಮ್ಮ ಹಾಗೆ ದೊಡ್ಡ ಹೆಸರಿನವರನ್ನು ಕುರುಡಾಗಿ ಅನುಕರಣೆ ಮಾಡುತ್ತಾರೆ. ಮಹರ್ಷಿ ಎಂಬ ಪರಿಕಲ್ಪನೆಯೇ ವೈದಿಕ ಸಂಸ್ಕೃತಿಯ ಸೂಚಕವಾಗಿದೆ. ಮಹರ್ಷಿಗಳು ಬ್ರಾಹ್ಮಣ್ಯವನ್ನು ಮೆರೆದವರು. ಮಾರ್ಕ್ಸ್ ಅನ್ನು ಮಹರ್ಷಿ ಅಂತ ಕರೆದು ಅವನಿಗೆ ಅವಮಾನ ಮಾಡುವುದು ಸರಿಯೇ? ಮಾರ್ಕ್ಸ್ ಅನ್ನು ಮಾರ್ಕ್ಸ್ ಎಂದು ಕರೆಯಲು ನಿಮಗೆ ಸಾಧ್ಯವಾಗದಿದ್ದರೆ ಬಾಬಾಸಾಹೇಬ್ ಮಾರ್ಕ್ಸ್ ಅಂತ ಕರೆಯಿರಿ. ಮತ್ತು ಮಹಾದೇವ ಅವರಿಗೂ ಇದನ್ನೇ ಹೇಳಿ.

         ಉತ್ತರ
         • ಮಾರ್ಕ್ಸ್ ಮಂಜು
          ಆಕ್ಟೋ 16 2014

          Mr.Nagshetty Shetkar, I asked same Qn to Mr.Sripad. ಅವೈದಿಕ ಮಹರ್ಷಿಗಳಿಲ್ಲವೇನು ಎಂದು.You better go and read that first.Then we can talk further. I don’t think ur a Comred.So y do u worry so much on my Marx.. u follow your Guru and chant… I have seen ur chanting in this site

          ಉತ್ತರ
 7. ಗಿರೀಶ್
  ಆಕ್ಟೋ 12 2014

  ##“ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ.” ##

  ಈ ಸಾಲುಗಳು ಲೇಖಕರ ಮನದಾಳದ ಸ್ವಗತದಂತೆ ತೋತಿದರೂ, ಮಹಿಳಾವಾದವನ್ನು ಅದರ ಮೂರ್ಖತನವನ್ನು ಸಮರ್ಥಿಸಿಕೊಳ್ಳಲೆಂದೆ ಬಳಸಿದ ಪದಗಳು ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಭ್ರಷ್ಠತೆಯನ್ನು ಹೀಗೂ ಸಮರ್ಥಿಸಿಕೊಳ್ಳಬಹುದೆಂದು ಲೇಖಕರು ತೋರಿಸುತ್ತಿದ್ದಾರೆ.

  ಉತ್ತರ
 8. shripad
  ಆಕ್ಟೋ 16 2014

  ಈಗ ಸರಿಹೋಯ್ತು. ಸುಮ್ಮನೆ ಮಾರ್ಕ್ಸ್ ಅನ್ನಿ. ಮಹರ್ಷಿ, ಸಂತ, ಶರಣ ಮೊದಲಾದವೆಲ್ಲ ನಿಮ್ಮವರು ಗುರುತಿಸುವಂತೆ ಬೂರ್ಜ್ವಾ ಪದಗಳು! ಅವುಗಳ ಸಹವಾಸ ಇದ್ದಷ್ಟೂ ನಿಮಗೆ ಕಷ್ಟ. ನಿಮ್ಮ ಪಾಲಿಗೆ ಇವು ಬೂರ್ಜ್ವಾ ಆದರೆ ಇನ್ನು ಕೆಲವರ ಪಾಲಿಗೆ ಕಾಫಿರ್ ಆಗಿವೆ. ಇನ್ನು ಕೆಲವರಿಗೆ ಇವೇ ಅನ್ನಭಾಗ್ಯ!!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments