ಪ್ರತಿಭಟನೆ ಮಾಡಿದವರೆಲ್ಲ ಕೃತಿಯನ್ನು ಓದಿದ್ದರೇ?
– ವೃಷಾಂಕ ಭಟ್
ಡಾ.ಕೆ.ಎಸ್.ನಾರಾಯಣಾಚಾರ್ಯರು ಬರೆದ ‘ವಾಲ್ಮೀಕಿ ಯಾರು?’ ಎಂಬ ಪುಸ್ತಕದ ವಿರುದ್ಧ ಹಲವು ಪ್ರತಿಭಟನೆಗಳನು ನಡೆದವು. ನನಗೆ ಹೆಚ್ಚು ಹಾಸ್ಯಾಸ್ಪದವೆನಿಸಿದ್ದು ಸಿಪಿಎಂ ನಡೆಸಿದ ಪ್ರತಿಭಟನೆ. ದೇವರ ಅಸ್ಥಿತ್ವವನ್ನೇ ಒಪ್ಪದ ಎಡಪಂಥೀಯರು ರಾಮನನ್ನು ದೇವರೆಂದು ಬರೆದ ವಾಲ್ಮೀಕಿ ಪರ ವಕಾಲತ್ತು ವಸಿದ್ದಕ್ಕೆ ಏನು ಹೇಳಬೇಕು? ಓಟ್ ಬ್ಯಾಂಕ್ ಸೃಷ್ಟಿಸಲು ತಮ್ಮ ಸಿದ್ಧಾಂತವನ್ನೇ ಮರೆತ ಪಕ್ಷವಲ್ಲವೇ? ಅದೇನೇ ಇರಲಿ, ಕೃತಿಯೊಂದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯಾದಾಗ, ಆ ಕೃತಿಯನ್ನೋದಬಯಸುತ್ತದೆ ಮನಸ್ಸು. ಹಿಂದೆ ‘ಡುಂಡಿ’ ಬಿಡುಗಡೆಯಾದಗಲೂ ಕದ್ದು ಓದುವ ಪ್ರಯತ್ನ ಮಾಡಿದ್ದೆ. ಕದ್ದು ಓದಿದ್ದೇಕೆಂದರೆ ಆ ಕೃತಿಯನ್ನು ನಿಷೇಸಲಾಗಿತ್ತು. ಹೀಗೆ ಕದ್ದು ಓದಲು ಯತ್ನಿಸಿದ ಡುಂಡಿಯನ್ನು ಹತ್ತು ಪುಟಕ್ಕಿಂತ ಹೆಚ್ಚು ಓದಲಾಗಲಿಲ್ಲ. ‘ವಾಲ್ಮೀಕಿ ಯಾರು’ ಕೃತಿಯೂ ಇದರಿಂದ ಹೊರತಾಗಿರದು ಎಂಬ ಪೂರ್ವಾಲೋಚನೆಯಲ್ಲಿದ್ದವನನ್ನು, ಕೃತಿ ಸೋಲಿಸಿತು!
ಈ ಕೃತಿಯ ವಿರುದ್ಧ ಹೋರಾಟನಡೆಸಿದವರಲ್ಲಿ ಹೆಚ್ಚಿನವರು ಕೃತಿಯನ್ನೇ ಓದಿರುವುದಿಲ್ಲ ಎಂದು ನಾನು ಪಂದ್ಯ ಕಟ್ಟಬಲ್ಲೆ. ಅದರಲ್ಲಿ ಹಂಗಿದೆಯಂತೆ, ಹಿಂಗಿದೆಯಂತೆ ಎಂದು ಹರಡುವ ಮಾತನ್ನೇ ನಂಬಿ ಕೆಲವರು ದೊಂಬಿ ಎಬ್ಬಿಸುತ್ತಾರೆ. ಉಳಿದವರು ಕುರಿಗಳಂತೆ ಸೇರಿಕೊಳ್ಳುತ್ತಾರೆ. ಆದರೆ ಈ ಲೇಖನ ಬರೆಯುವ ಮುನ್ನ ನಾನು ಕೃತಿಯನ್ನು ಸಂಪೂರ್ಣವಾಗಿ ಓದ್ದೇನೆ. ಓದಿದ್ದನ್ನು ನನ್ನ ಸಾಮರ್ಥ್ಯಕ್ಕೆ ನಿಲುಕುವಷ್ಟು ಅರ್ಥೈಸಿಕೊಂಡಿದ್ದೇನೆ. ಕೃತಿಯ ವಿರುದ್ಧ ಗಲಾಟಗಳಾದ ಕೂಡಲೇ ಈ ಲೇಖನವನ್ನು ಬರೆಯಬಹುದಿತ್ತು. ಆದರೆ ಪ್ರತಿಭಟನಕಾರರ ಮನಸ್ಸು ಇನ್ನೊಬ್ಬರ ಮಾತನ್ನು ಆಲಿಸುವಷ್ಟು ಮಟ್ಟಿಗೆ ಶಾಂತವಾಗುವ ತನಕ ಬರೆಯದೇ ಇರುವುದು ಲೇಸು ಎನ್ನಿಸಿತು. ಎಲ್ಲಕ್ಕೂ ಮಿಗಿಲಾಗಿ, ಈ ಕೃತಿಯ ಬಗ್ಗೆ ಇಷ್ಟೆಲ್ಲಾ ಗಲಾಟೆ ಇದ್ದರೂ, ಹೆಚ್ಚಿನವರಿಗೆ ಓದಲು ಈ ಪುಸ್ತಕ ಸಿಕ್ಕಿಲ್ಲ. ಅವರೆಲ್ಲರ ಕುತೂಹಲವೂ ತಣಿಯಬಹುದೆಂಬ ನಂಬಿಯಿದೆ.
ಮೊದಲಿಗೆ ಆಚಾರ್ಯರು ಬರೆದ ಯಾವ ಸಾಲುಗಳಿಂದ ವಾಲ್ಮೀಕಿ ಜನಾಂಗದವರಿಗೆ ನೋವುಂಟಾಗಿರಬಹುದೆಂಬುದನ್ನು ತಿಳಿಯಲು ಯತ್ನಿಸೋಣ.
1. ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ರೀತಿ ಇದೆಂದು ಹೇಳುವುದು ಹಾಸ್ಯಾಸ್ಪದವೇ ಆಗುತ್ತದೆ.
2. ವಾಲ್ಮೀಕಿಯ ವಾಗ್ವೈಭವಕ್ಕೆ ಈವರೆಗೆ ನಾವು ಅವನ ಪಾತ್ರರಚನೆ, ಪೋಷಣೆ, ವಾಕ್ಯಗಳ ವಿವರಣೆಗಳನ್ನು ಇತ್ತಿರುವುದೆಲ್ಲ ಸಾಕ್ಷಿ ಎಂದ ಮೇಲೆ ಹೆಚ್ಚು ಹೇಳುವುದೇನಿದೆ? ಪಾಮರನಿಗೆ ಇವೆಲ್ಲ ಶಕ್ಯವೇ?
3. ವಾಲ್ಮೀಕಿ ಬೇಡನೆಂಬುದಕ್ಕೆ ‘ಶ್ರೀ ವಾಲ್ಮೀಕಿ ರಾಮಾಯಣ’ದಲ್ಲಿ ಯಾವ ಆಧಾರಗಳೂ ಇಲ್ಲ.
4. ಕೃತಿಗಳನ್ನು ಓದದೆ ಕೇವಲ ಹೆಸರು ಅಂಟಿಸಿಕೊಂಡರೆ ಅವರಿಗೂ ಅಪಕೀರ್ತಿ, ನಿಮಗೂ ಹಾನಿ!
ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆಯುವುದು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕೇವಲ ಬೇಡನೊಬ್ಬನೇ ಅಲ್ಲ. ಇಂದಿನ ಸಂಸ್ಕೃತ ಓದದ ಬ್ರಾಹ್ಮಣರೂ ಕೂಡ ದಿಢೀರನೆ ಶ್ಲೋಕ ರಚಿಸಲು ಸಾಧ್ಯವಿಲ್ಲ. ಯಾವ ಕೆಲಸವನ್ನು ಬೇಡ ತನ್ನ ಜೀತಾವಧಿಯಲ್ಲಿ ಮಾಡಿಲ್ಲವೋ, ಅಂಥವನು ಕಾವ್ಯ ರಚಿಸಿದನೆಂಬುದನ್ನು ಹೇಗೆ ನಂಬುವುದು? ಆತನಿಗೆ ಸಾಹಿತ್ಯದ ಜ್ಞಾನವಿರದಿದ್ದರೆ ಪಾತ್ರ ರಚನೆ, ಪೋಷಣೆ, ವಾಕ್ಯಗಳ ವಿವರಣೆ ಇವೆಲ್ಲ ಹೇಗೆ ಸಾಧ್ಯ? ರಾಮಾಯಣವನ್ನು ಕಾವ್ಯವಾಗಿ ಪ್ರವಚನ ರೂಪದಲ್ಲಿ ಆಸ್ವಾದಿಸಲು ವೇದ ಬಲ್ಲವರು, ಪೌರಾಣಿಕರು, ಸ್ವರಲಕ್ಷಣ ಬಲ್ಲವರು, ಪಾದ, ಅಕ್ಷರ, ಸಮಾಸಜ್ಞರು, ಛಂದೋದರು, ಜೋತಿಷ್ಯ ಬಲ್ಲವರು ಭಾಷಾಶಾಸ್ತ್ರಜ್ಞರು, ತಾರ್ಕಿಕರು, ಚಿತ್ರಜ್ಞರು, ನಾಟ್ಯ ಬಲ್ಲವರು ಇತ್ಯಾದಿ ದ್ವಾಂಸರು ಸಭೆಯಲ್ಲಿರಬೇಕೆಂದು ಸ್ವತಃ ವಾಲ್ಮೀಕಿಯೇ ಹೇಳಿದ್ದಾನೆ ಎಂದು ಆಚಾರ್ಯರು ಬರೆದಿದ್ದಾರೆ. ಹಾಗಿದ್ದ ಮೇಲೆ ಬೇಡನೊಬ್ಬನಿಗೆ ಇಷ್ಟೆಲ್ಲ ವಿಷಯಗಳನ್ನು ಕ್ರೂಡಿಕರಿಸಿ ಕಾವ್ಯ ಬರೆಯಲು ಹೇಗೆ ಸಾಧ್ಯ? ಇಲ್ಲಿ ಬೇಡರನ್ನು ಅಸಡ್ಡೆ ಮಾಡುತ್ತಿಲ್ಲ. ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವ, ಯಾತ್ರಿಕರನ್ನು ದೋಚುವ ಜೀವನ ಅಳವಡಿಸಿಕೊಂಡವನು ಕಾವ್ಯ ಹೇಗೆ ಬರೆಯಹುದು? ಅಭ್ಯಾಸವಿಲ್ಲದಿದ್ದರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ.
ವಾಲ್ಮೀಕಿ ರಾಮಾಯಣ ಬರೆದಿದ್ದಾನೆಂದಮೇಲೆ ಆತ ಶಾಸ್ತ್ರೋಕ್ತವಾದ ಅಧ್ಯಯನ ನಡೆಸಿದ್ದಾನೆ. ಆದರೆ ಆತ ಅಧ್ಯಯನ ನಡೆಸಿದ್ದು ಯಾವಾಗ? ವಾಲ್ಮೀಕಿ ತನ್ನನ್ನು ತಾನು ಬೇಡನೆಂದು ಎಲ್ಲೂ ಹೇಳಿಕೊಂಡಿಲ್ಲ. ಶ್ರೀ ರಾಮನಿಗೆ ತನ್ನನ್ನು ತಾನು ಪರಿಚುಸಿಕೊಳ್ಳುವಾಗ ‘ಪ್ರಚೇತಸೋಹಂ ದಶಮಃ ಪುತ್ರೋ, ರಘುನಂದನ’ ಅಂದರೆ ‘ಹೇ ರಾಮಾ, ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆ ಮಗ’ ಎಂದು ಹೇಳಿಕೊಳ್ಳುತ್ತಾನೆ. ಅಲ್ಲಿಗೆ ಮೂಲ ರಾಮಾಯಣದಲ್ಲಿ ವಾಲ್ಮೀಕಿ ಬ್ರಾಹ್ಮಣ ಎಂಬುದು ಸಿದ್ಧವಾಯಿತು. ನಂತರದ ಬಂದ ರಾಮಾಯಣದಲ್ಲಿ ವಾಲ್ಮೀಕಿ ಬೇಡನಾಗಿದ್ದ ಎಂಬ ಕಥೆ ಸೇರಿಕೊಂಡಿತು. ಮೂಲ ರಾಮಾಯಣದಲ್ಲಿರದ ಹಲವು ಉಪಕಥೆಗಳು ಸೇರಿಕೊಂಡವು. ಉದಾಹರಣೆಗೆ ತೆಲುಗು ಸಿನಿಮಾವೊಂದನ್ನು ಕನ್ನಡಲ್ಲಿ ರಿಮೇಕ್ ಮಾಡುವಾಗ, ಕನ್ನಡದ ನೇಟಿವಿಟಿಗೆ ಬೇಕಾಗುವ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುವುದಿಲ್ಲವೇ, ಹಾಗೆ. ಹೊಸತರಲ್ಲಿ ಇರುವ ಬದಲಾವಣೆಯನ್ನು ಮೂಲಕ್ಕೆ ಹೋಲಿಸುವುದು ತಪ್ಪು. ನಾಳೆ ನಾನೊಂದು ಕಾದಂಬರಿ ಬರೆದು ನೆಹರು ಮತ್ತು ಇಂದಿರಾ ಗಾಂಧಿ ಅಣ್ಣ ತಂಗಿಯರು ಎಂದು ಬರೆದರೆ, ಅವರಿಬ್ಬರ ಬದಲಾದೀತೆ?
ಆಚಾರ್ಯರು ತಮ್ಮ ಕೃತಿಯಲ್ಲಿ ‘ಕೃತಿಗಳನ್ನು ಓದದೆ ಕೇವಲ ಹೆಸರು ಅಂಟಿಸಿಕೊಂಡರೆ ಅವರಿಗೂ ಅಪಕೀರ್ತಿ, ನಿಮಗೂ ಹಾನಿ!’ ಎಂದಿದ್ದಾರೆ. ಇದು ಅಕ್ಷರಶಃ ನಿಜ. ಪುರೋಹಿತ್ ಎಂದು ಹೆಸರಿಟ್ಟುಕೊಂವಡನು ವೃತ್ತಿಯಲ್ಲಿ ಪುರೋತನಾಗಿರದಿದ್ದರೆ ಏನು ಉಪಯೋಗ? ವಾಲ್ಮೀಕಿ ಸಮಾಜದವರಿಗೂ ಇದು ಅನ್ವಯವಾಗುತ್ತದೆ.
ಪ್ರತಿಭಟನಕಾರರ ಪ್ರಶ್ನೆಗಳು ಮತ್ತು ಅದಕ್ಕೆ ನನ್ನ ಉತ್ತರ :
1)ರಾಮಾಯಣ ದರ್ಶನಂ ಬರೆದ ಕುವೆಂಪು, ವಾಲ್ಮೀಕಿ ಬೇಡ ಎಂದೇ ಬರೆದಿದ್ದಾರೆ. ಅವರೇಕೆ ವಾಲ್ಮೀಕಿ ಬ್ರಾಹ್ಮಣ ಎಂದು ಬರೆದಿಲ್ಲ. ಅವರಿಗಿಂತ ನಾರಾಯಣಾಚಾರ್ಯರಿಗೆ ಚೆನ್ನಾಗಿ ಇತಿಹಾಸ ತಿಳಿದಿದೆಯೇ?
ಉತ್ತರ: ಕುವೆಂಪು ಇತಿಹಾಸ ತಿಳಿದದ್ದು ಹೇಗೆ? ಕುವೆಂಪು ಜೀವಿಸಿದ್ದು ಕಲಿಯುಗದ 20ನೇ ಶತಮಾನದಲ್ಲಿ. ರಾಮಾಯಣ ನಡೆದದ್ದು ತ್ರೇತಾಯುಗದಲ್ಲಿ. ಹಾಗಿದ್ದ ಮೇಲೆ ಕುವೆಂಪು ರಾಮಾಯಣವನ್ನು ಕಣ್ಣಾರೆ ಕಂಡಿಲ್ಲ. ಇತರ ಕವಿಗಳು ಬರೆದ ಕಾವ್ಯವನ್ನು ಓದಿಯೇ ಹೊಸದೊಂದನ್ನು ಬರೆದಿದ್ದಾರಷ್ಟೇ ಹೊರತು ಸ್ವಂತದ್ದಲ್ಲ. ವಾಲ್ಮೀಕಿ ಬೇಡ ಎಂದು ಯಾವ ಆಧಾರದ ಮೇಲೆ ಬರೆದಿರಿ ಎಂದು ಕುವೆಂಪು ಅವರನ್ನೇ ಕೇಳಿದರೆ ಬೇರ್ಯಾವುದೋ ಕೃತಿಯ ಹೆಸರು ಹೇಳುತ್ತಿದ್ದರು.
2)ಬೇಡರಿಂದ ರಾಮಾಯಣ ಬರೆಯಲು ಸಾಧ್ಯವಿಲ್ಲ. ಬ್ರಾಹ್ಮಣರಿಂದ ಮಾತ್ರ ಸಾಧ್ಯ ಎನ್ನುವ ರೀತಿ, ನಾರಾಯಣಚಾರ್ಯರು ಹೇಳಿರುವುದು ಇಡೀ ಸಮಾಜಕ್ಕೆ ಅವಮಾನ.
ಉತ್ತರ: ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಕರ್ಣ ಪರಷುರಾಮರ ಬಳಿ ವಿದ್ಯೆ ಕಲಿಯುತ್ತಿರುತ್ತಾನೆ. ಒಂದು ದಿನ ಪರುಶುರಾಮರು ಕರ್ಣನ ತೊಡೆಯ ಮೇಲೆ ಮಲಗಿದ ಸಂದರ್ಭ. ಕರ್ಣನ ತೊಡೆಗೆ ದುಂಬಿ ಕಚ್ಚತೊಡಗುತ್ತದೆ. ಗುರುಗಳಿಗೆ ನಿದ್ರಾಭಂಗವಾಗಬಾರದೆಂಬ ಕಾರಣಕ್ಕೆ ಕರ್ಣ ನೋವು ಸಹಿಸಿಕೊಂಡು ಕೂರುತ್ತಾನೆ. ತೊಡೆಯಿಂದ ಸುರಿದ ರಕ್ತ ಪರಶುರಾಮರ ಕೆನ್ನೆಗೆ ತಾಗಿ ಎಚ್ಚರಗೊಂಡು ‘ನೀನು ಬ್ರಾಹ್ಮಣನಾಗಿದ್ದರೆ ಇಷ್ಟೊಂದು ನೋವು ತಡೆಯುವ ಶಕ್ತಿ ಇರುತ್ತಿರಲಿಲ್ಲ’ ಎಂದು ಹೇಳುತ್ತಾರೆ. ಪರಷುರಾಮರು ಬ್ರಾಹ್ಮಣರನ್ನೆಲ್ಲ ಶಕ್ತೀನರೆಂದು ಜರೆದರು ಎಂದು ಆಗಿನ ವೈದಿಕರೆಲ್ಲ ಪ್ರತಿಭಟನೆಗೆ ಕೂತರೆ? ಬ್ರಾಹ್ಮಣರು ಹೋಮ ಯಜ್ಞಾದಿಗಳನ್ನು ನಡೆಸುತ್ತ ಜೀವನ ಸಾಗಿಸುವವರು. ದೇಹಕ್ಕೆ ಶ್ರಮವಾಗುವಂತ ಕೆಲಸ ಮಾಡುವವರಲ್ಲ. ಹಾಗಾಗಿ ಈ ನೋವನ್ನು ಸಹಿಸುವ ಶಕ್ತಿ ಅವರಿಗಿಲ್ಲ ಎಂಬುದೇ ಪರಷುರಾಮರ ಮಾತಿನ ಅರ್ಥ.
ನಾರಾಯಣಾಚಾರ್ಯರು ಹೇಳಿರುವುದು ಅದನ್ನೇ. ಬೇಡ ವೃತ್ತಿಯನ್ನು ಪೋಷಿಸಿಕೊಂಡು ಬಂದವನು ದಿಢೀರ್ ಕಾವ್ಯ ರಚನೆ ಹೇಗೆ ಮಾಡಲು ಸಾಧ್ಯ ಎಂದು.
3)ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಸಾ್ವುೀಜಿ ಹೇಳುತ್ತಾರೆ, ‘ಬ್ರಾಹ್ಮಣರು ಶ್ರೇಷ್ಠ ವ್ಯಕ್ತಿಗಳನ್ನು ಹೈಜ್ಯಾಕ್ ಮಾಡುತ್ತಾರೆ. ಶ್ರೇಷ್ಠ ವ್ಯಕ್ತಿಗಳನ್ನು ಹುಟ್ಟಿಸಲಾಗದಿದ್ದರೆ ಹೇಳಿ ನಾವು ಹುಟ್ಟಿಸಿಕೊಡುತ್ತೇವೆ’!
ಉತ್ತರ : ಶಬ್ಬಾಶ್. ಅರಿಶಡ್ವರ್ಗಗಳನ್ನು ಮೆಟ್ಟಿ ನಿಂತವರ ಬಾಯಲ್ಲಿ ಎಂಥಾ ಮಾತು! ‘ಜಗದ್ಗುರು’ ಎಂದು ನಿಮ್ಮ ಹೆಸರಿಗೆ ಸೇರಿಸಿರುವಾಗ ಅದಕ್ಕೆ ಅವಮಾನವಾಗದಂತೆ ನಡೆದುಕೊಳ್ಳಬೇಕಾಗಿತ್ತು. ನಿಮ್ಮ ತನ ತೋರಿಸಿದ್ದೀರಿ. ಹೋಗಲಿ ಬಿಡಿ. ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಇಂದು ಸಮಾಜದಲ್ಲಿ ಅತ್ಯಂತ ಹೆಚ್ಚು ಪೂಜೆಗೊಳಗಾಗುವ ರಾಮ, ಕೃಷ್ಣ, ವಿವೇಕಾನಂದ, ಶಿರಡಿ ಸಾಯಿಬಾಬರನ್ನು ಬ್ರಾಹ್ಮಣರು ತಮ್ಮ ಜಾತಿಯವರೆಂದು ಹೇಳಿಲ್ಲ. ಹುಟ್ಟು ಬ್ರಾಹ್ಮಣರೇ ಎಲ್ಲಡೆಯಿರಬೇಕೆಂದು ಬಯಸಿದ್ದರೆ ಉಡುಪಿಯಲ್ಲಿ ಕನಕನ ಕಿಂಡಿಯನ್ನೇ ಇಡುತ್ತಿರಲಿಲ್ಲ. ಈಗಿನ ಜಾತಿ ವ್ಯವಸ್ಥೆಗೂ ಆಗಿನ ವರ್ಣಾಶ್ರಮಕ್ಕೂ ವ್ಯತ್ಯಾಸವಿದೆ. ಬ್ರಾಹ್ಮಣ್ಯವನ್ನು ಪಡೆದವನು ಬ್ರಾಹ್ಮಣನಾಗಬಹುದಿತ್ತು. ವಿಶ್ವಾಮಿತ್ರ ಬ್ರಾಹ್ಮಣನಾದದ್ದು ಹಾಗೆ. ರಾವಣ ಸ್ವಭಾವದಲ್ಲಿ ರಾಕ್ಷಸನಾದರೂ, ಆತ ಬ್ರಾಹ್ಮಣ ಎಂದು ಏಕೆ ಒಪ್ಪಿಕೊಂಡಿದ್ದಾರೆ? ಬುದ್ದಿಜೀಗಳು ಹೇಳುವಂತೆ ರಾಮಾಯಣವನ್ನು ತಿದ್ದಿರುವುದೇ ಹೌದಾದರೆ ರಾವಣ ಒಬ್ಬ ಶೂದ್ರ ಎಂದು ಬರೆದು ಬಿಡಬಹುದಿತ್ತಲ್ಲ?
ಒಂದು ಕ್ಷಣದ ಮಟ್ಟಿಗೆ ವಾಲ್ಮೀಕಿ ಬೇಡನಾಗಿದ್ದುಕೊಂಡೇ ರಾಮಾಯಣ ಬರೆದ ಅಂದಿಟ್ಟುಕೊಳ್ಳೋಣ. ಗರ್ಭಿಣಿ ಸೀತೆಯನ್ನು ವಾಲ್ಮೀಕಿಗಳ ಆಶ್ರಮಕ್ಕೆ ಬಿಡುವಂತೆ ರಾಮ ಲಕ್ಷ್ಮಣನಿಗೆ ಆದೇಶಿಸುತ್ತಾನೆ. ಇನ್ನೇನು ಕೆಲವು ತಿಂಗಳಲ್ಲಿ ಸೀತೆಗೆ ಹೆರಿಗೆಯಾಗಲಿದೆ. ಮಕ್ಕಳಿಗೆ ವಿದ್ಯಾಭ್ಯಾಸವಾಗಬೇಕು. ಉತ್ತಮ ವಾತಾವರಣ ದೊರೆಯಬೇಕು. ಪರಿಸ್ಥಿತಿ ಹೀಗಿರುವಾಗ, ರಾಮ ತನ್ನ ಹೆಂಡತಿಯನ್ನು ಒಬ್ಬ ಬೇಡನ ಮನೆಗೆ ಕಳಿಸಲು ಸಾಧ್ಯವೇ? ರಾಮ ಸೀತೆಯನ್ನು ಆಕೆಯ ತೌರಿಗೆ ಕಳಿಸಬಹುದಿತ್ತು. ಆದರೆ ವಾಲ್ಮೀಕಿಗಳ ಆಶ್ರಮಕ್ಕೇ ಏಕೆ ಕಳಿಸಿದ? ವಾಲ್ಮೀಕಿ ಬೃಹತ್ ವಿದ್ಯಾಕೇಂದ್ರ ನಡೆಸುತ್ತಿದ್ದ. ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಕಾರಣದಿಂದಲೇ ಆತ ಸೀತೆಯನ್ನು ವಾಲ್ಮೀಕಿಗಳ ಆಶ್ರಮಕ್ಕೆ ಕಳಿಸಿದ. ಸ್ವಲ್ಪ ಯೋಚಿಸಿ.
ಅಷ್ಟಕ್ಕೂ ನಾರಾಯಣಾಚಾರ್ಯರು ಈ ಕೃತಿಯನ್ನೇಕೆ ಬರೆದರು?
ರಾಮಾಯಣವನ್ನು ಓದದೇ ಕೇವಲ ವಾಲ್ಮೀಕಿಯನ್ನು ಪೂಜಿಸುವ ಪದ್ದತಿ ಪ್ರಾರಂಭವಾಗಿದೆ. ಜಾತ್ಯಾತೀತ ವಾದಿಗಳು ಈ ಪದ್ದತಿಯನ್ನು ವೈಭವೀಕರಿಸುವ ಪ್ರಯತ್ನದಲ್ಲಿದ್ದಾರೆ. ರಾಮಾಯಣವನ್ನು ಓದದೆ ವಾಲ್ಮೀಕಿಯನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ವಾಲ್ಮೀಕಿ ಬೇಕು, ರಾಮ ಬೇಡ ಎಂಬುದು ಹೇಗೆ ಸರಿ ಎಂಬುದು ಆಚಾರ್ಯರ ನೇರ ಪ್ರಶ್ನೆ. ಈ ಕೃತಿಯಲ್ಲಿ ಆಚಾರ್ಯರು ಸಾಹಿತ್ಯದ ಹಲವು ವಿಷಯಗಳನ್ನು ಚರ್ಚೆಗೆ ಎಳೆದಿದ್ದಾರೆ. ಜಾನಪದ ಶಬ್ದಕ್ಕೆ ಸ್ಪಷ್ಟ ಆಕಾರವನ್ನೂ ಕೊಟ್ಟಿದ್ದಾರೆ. ಆಸಕ್ತರು ಓದಿಕೊಳ್ಳಬಹುದು. ಮುಖ್ಯವಾಗಿ ಪ್ರತಿಭಟನೆಗೆ ರಸ್ತೆಗಿಳಿದವರೆಲ್ಲ ಓದಲೇಬೇಕಾದ ಕೃತಿ ‘ವಾಲ್ಮೀಕಿ ಯಾರು’.
ಯಾವುದೇ ವಿಷಯದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೊದಲು ಆ ವಿಷಯದ ಬಗ್ಗೆ ಕೂಲಂಕಷವಾಗಿ ತಿಳಿದು ನಂತರ ನಮ್ಮ ಅನಿಸಿಕೆಯನ್ನು ಯಾವುದೇ ಪೂರ್ವಾಗ್ರಹಕ್ಕೊಳಗಾಗದೇ ವ್ಯಕ್ತಪಡಿಸುವುದು ಸೂಕ್ತ. ನಿಮ್ಮ ಹೇಳಿಕೆಯನ್ನು ನಾನು ಅನುಮೋದಿಸುತ್ತೇನೆ.
ಚೆನ್ನಾಗಿ ಬರೆದಿದ್ದೀರಿ. ಸ್ವಲ್ಪ ಪತ್ರಿಕಾ ಶೈಲಿಯಲ್ಲಿ ಬರೆದು ಪತ್ರಿಕೆಯಲ್ಲಿ ಪ್ರಕಟವಾದರೆ ಜನರಿಗೆ ವಿಶಯ ತಿಳಿಸುವುದರ ಜೊತೆಗೆ ಒಳ್ಳೆಯ ಚರ್ಚೆಗೂ ನಾಂದಿಯಾಗಬಲ್ಲುದು.
ಲೇಖನ ಅರ್ಥವತ್ತಾಗಿದೆ. ನಾನಿನ್ನೂ ನಾರಾಯಣಾಚಾರ್ಯರ ಪುಸ್ತಕವನ್ನೋದಿಲ್ಲ ಆದರೆ ಅದಕ್ಕೂ ಮುಂಚೆಯೇ ವಾಲ್ಮೀಕಿ ಬ್ರಾಹ್ಮಣನೇ ಎಂಬ ಬಗ್ಗೆ ಲೇಖನ ಬರೆದಿದ್ದೆ.
ಈ ಕಥೆ ಮೊದಲು ದೊರಕುವುದು ಆಧ್ಯಾತ್ಮ ರಾಮಾಯಣದಲ್ಲಿ. ಚಿತ್ರಕೂಟದ ಸಮೀಪ ವಾಲ್ಮೀಕಿ ದರ್ಶನಕ್ಕೆ ಬಂದ ರಾಮನಿಗೆ ವಾಲ್ಮೀಕಿಯೇ ಹೇಳುವುದು:
ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ |
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ||
ನಾನು ಬೆಳೆದದ್ದೆಲ್ಲ ಕಿರಾತರ ನಡುವೆ, ಶೂದ್ರಾಚಾರದಲ್ಲೇ ನಾನಿದ್ದೆ. ಕೇವಲ ಜನ್ಮದಿಂದ ಮಾತ್ರ ನಾನು ದ್ವಿಜನಾಗಿದ್ದೆ.(ಗಮನಿಸಿ ಇಲ್ಲಿ ಕಿರಾತನೆಂದಿದೆಯೇ ಹೊರತೂ ಬೇಡನೆಂದಲ್ಲ)
ಅನಂತರ ಕಳ್ಳರ ಸಹವಾಸದಿಂದ ಕಳ್ಳನಾದೆ. ಒಮ್ಮೆ ಸಪ್ತರ್ಷಿಗಳ ವಸ್ತುಗಳನ್ನು ಅಪಹರಿಸಲು ಹೊರಟಾಗ ಅವರೆಂದರು “ನೀನು ಯಾವ ಹೆಂಡತಿ ಮಕ್ಕಳಿಗಾಗಿ ಇಷ್ಟು ಪಾಪಕಾರ್ಯಗಳನ್ನು ಮಾಡುತ್ತಿರುವೆಯೋ ಅದರಲ್ಲಿಯೂ ಅವರು ಭಾಗಿಗಳಾಗುವರೋ ಕೇಳಿಕೊಂಡು ಬಾ” ಎಂದು. ನಾನು ಹಾಗೆ ಕೇಳಿದಾಗ ಯಾರೂ ಭಾಗಿಗಳಾಗಲು ಒಪ್ಪಲಿಲ್ಲ. ಅದರಿಂದ ವೈರಾಗ್ಯವುಂಟಾಯಿತು. ಅವರು ಅಲ್ಲಿಯೇ ಜಪಮಾಡುವಂತೆ ’ಮರಾ’ ಎಂಬ ಮಂತ್ರೋಪದೇಶ ಮಾಡಿದರು.
’ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ’
ನಾನು ಹಾಗೆಯೇ ಮಾಡುತ್ತಿರಲು ನನ್ನಮೇಲೆ ಹುತ್ತ ಬೆಳೆಯಿತು. ವರ್ಷಗಳ ನಂತರ ಋಷಿಗಳು ಬಂದು ನನ್ನನ್ನು ಹೊರಬರುವಂತೆ ಕರೆದರು.
ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ |
ಮಾಮಪ್ಯಾಹುರ್ಮುನಿಗಣಾಃ ವಾಲ್ಮೀಕಿಸ್ತ್ವಂ ಮುನೀಶ್ವರಃ ||
ವಲ್ಮೀಕದಿಂದ ಹೊರಬಂದುದರಿಂದ ಮುಂದೆ ಈತ ವಾಲ್ಮೀಕಿಯೆಂದೇ ಹೆಸರಾದ. ಅಲ್ಲದೇ ವರುಣನು(ಪ್ರಚೇತ) ಮಳೆಯನ್ನು ಸುರಿಸಿ ಹುತ್ತವನ್ನು ಕರಿಗಿಸಿದ್ದರಿಂದ ಪ್ರಾಚೇತಸನೆಂಬ ಹೆಸರೂ ಬಂದಿತು. ಇದಕ್ಕೂ ಮೊದಲು ಆತನಿಗೆ ಯಾವ ಹೆಸರಿತ್ತೆಂಬುದು ರಾಮಾಯಣದಲ್ಲೆಲ್ಲೂ ಉಲ್ಲೇಖವಿಲ್ಲ.
ಇದೇ ಕಥೆಯು ಮುಂದೆ ಆನಂದ ರಾಮಾಯಣದಲ್ಲೂ ಇದೆ. ಇದಕ್ಕೆ ಪುಷ್ಟಿಕೊಡುವ ವಿಚಾರ ಮಹಾಭಾರತದ ಅನುಶಾಸನ ಪರ್ವದಲ್ಲೂ ಕಂಡುಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ವಾಲ್ಮೀಕಿಯು ಹೇಳುತ್ತಾನೆ.
ವಾಲ್ಮೀಕಿಶ್ಚಾಹ ಭಗವಾನ್ ಯುಧಿಷ್ಠಿರಮಿದಂ ವಚಃ |
ವಿವಾದೇ ಸಾಗ್ನಿಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ
ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ |
ಸೋಽಹಮೀಶಾನಮನಘಂ ಅಮೋಘಂ ಶರಣಂ ಗತಃ ||
ಮುಕ್ತಶ್ಚಾಸ್ಮಿತತೋ ಪಾಪೈಃ
“ಅಗ್ನಿಪೂಜಕರಾದ ಮುನಿಗಳೊಡನೆ ನಾನು ವಿವಾದ ಮಾಡಿದ್ದರಿಂದ ನೀನು ಬ್ರಹ್ಮಘ್ನನೆಂದುಬಿಟ್ಟರು. ಕೂಡಲೇ ನಾನು ಅಧರ್ಮಿಷ್ಟನಾದೆ. ಕಡೆಗೆ ಈಶ್ವರನನ್ನು ಶರಣುಹೋಗಿ ಪಾಪಮುಕ್ತನಾದೆ.”
ಅಶ್ವಘೋಷನ ಬುದ್ಧಚರಿತ್ರೆಯಲ್ಲೂ ವಾಲ್ಮೀಕಿಯ ವೃತ್ತಾಂತವಿದೆ. ಅಲ್ಲಿ ವಾಲ್ಮೀಕಿಯನ್ನು ಚ್ಯವನ ಮಹರ್ಷಿಯ ಮಗನೆಂದಿದೆ.
’ವಾಲ್ಮೀಕಿರಾದೌ ಚ ಸಸರ್ಜ ಪದ್ಯಂ ಜಗ್ರಂಥಯನ್ನ ಚ್ಯವನೋ ಮಹರ್ಷಿಃ ’
ಈ ಚ್ಯವನನು ಭೃಗುವಿನ ಮಗ.
’ಭೃಗೋಮಹರ್ಷೇಃ ಪುತ್ರೋಽಭೂತ್ ಚ್ಯವನೋ ನಾಮ ಭಾರ್ಗವಃ’
ಭಾರ್ಗವನಾದ ವಾಲ್ಮೀಕಿಯೇ ರಾಮಚರಿತೆಯನ್ನು ಬರೆದವನೆಂದು ಶಾಂತಿಪರ್ವದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಶ್ಲೋಕಶ್ಚಾಯಂ ಪುರಾಗೀತೋ ಭಾರ್ಗವೇನ ಮಹಾತ್ಮನಾ |
ಆಖ್ಯಾತೇ ರಾಮಚರಿತೇ ನೃಪಂತಿ ಪ್ರತಿ ಭಾರತ ||
ಸ್ವತಃ ರಾಮಾಯಣ, ಮಹಾಭಾರತಗಳಲ್ಲೇ ವಾಲ್ಮೀಕಿಯು ಬ್ರಾಹ್ಮಣನೆಂದಿದೆಯೇ ಹೊರತೂ ಬೇಡನೆಂದಲ್ಲ. ಆದರೆ ಕೆಲವು ಕಾಲ ಶೂದ್ರಾಚಾರ ನಿರತನಾಗಿದ್ದರೂ ಇರಬಹುದು.
ರಾಮಾಯಣದ ಹುಟ್ಟಿಗೆ ಕಾರಣವೆನಿಕೊಂಡ ’ಮಾನಿಷಾದ’ ಶ್ಲೋಕವನ್ನೇ ಗಮನಿಸಿ. ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಕ್ರೌಂಚ ಪಕ್ಷಿಯೊಂದನ್ನು ನಿಷಾದನೊಬ್ಬನು ಕೊಂದು ಕೆಡಹುತ್ತಾನೆ. ನೆಲಕ್ಕೆ ಬಿದ್ದು ಹೊರಳಾಡಿ ಸಾಯುತ್ತಿರುವ ಅದನ್ನು ಕಂಡ ವಾಲ್ಮೀಕಿಯ ಬಾಯಿಂದ ಹೊರಬಂದ ಶ್ಲೋಕವಿದು. ಪಕ್ಷಿಯನ್ನು ಕೊಂದದ್ದಕ್ಕಾಗಿ ವಾಲ್ಮೀಕಿ ನಿಷಾಧನನ್ನು ಶಪಿಸುತ್ತಾನೆ. ಬೇಟೆಯಾಡುವುದು ಬೇಡನ ಸಹಜ ಧರ್ಮ. ವಾಲ್ಮೀಕಿ ಮೂಲತಃ ಬೇಡನೇ ಆಗಿದ್ದಲ್ಲಿ ಹಕ್ಕಿಯನ್ನು ಕೊಂದವನೊಬ್ಬನನ್ನು ಹೀಗೆ ಶಪಿಸಲು ಸಾಧ್ಯವೇ ಇರುತ್ತಿರಲಿಲ್ಲ.
ತುಂಬಾ ಚೆನ್ನಾಗಿದೆ… ಸಾಹಿತಿಗಳ ಯೋಚನೆಗೆ ನಮ್ಮ ಒಂದು ಹ್ಯಾಟ್ಸಾಫ್… (y)
ಇದು ನಾರಾಯಣ ಚಾರ್ಯ ಕೃಪಾ ಪೋಷಿತ ಕಲ್ಪನೆ. ಹೇಗಾದರೂ ಮಾಡಿ ವಾಲ್ಮೀಕಿ ಯನ್ನೂ ಬ್ರಾಹ್ಮಣ ಸಮಾಜಕ್ಕೆ ಸೇರಿಸುವ ಒಂದು ಗುರುತರ ಅಪರಾಧ. ತನ್ನ ಜೇವನದ ಸಂಧ್ಯಾ ಕಾಲದಲ್ಲಿ ಇರುವ ಇವರು. ತಮ್ಮ ಬರವಣಿಗೆ ರೂಪದಲ್ಲಿ ಬ್ರಾಹ್ಮಣ ಸಮಾಜದ ಪ್ರಧಾನ ವಿದ್ವಾನ್ ಆಗುವ ಕನಸು ಕಂಡವರು.
ಇನ್ನೂ ವಾಲ್ಮೀಕಿ ಯಾರೂ ಎಂಬ ರಾಮಾಯಣ ಮುಂಚೆ , ಇವರ ಅಧ್ಯಯನ ಎಲ್ಲವೂ ” ರಾಮ ನ ಬಗ್ಗೆ ಇದ್ದು ” ತಮ್ಮ ಜೇವನದ ಸಂದ್ಯಾಕಾಲದಲ್ಲಿ ತಮ್ಮ ಅಧ್ಯಯನ ವಾಲ್ಮೀಕಿ ಬಗ್ಗೆ ತಿರುಗಿಸುತ್ತಾರೆ. ಇದಕ್ಕೆ ಇವರಿಗೆ ಸಿಕ್ಕ ಆಧಾರ್ ಯಾವುದು ???
ಇನ್ನೂ ಒಂದು ಕಡೆ ಇವರು ಬರೆಯುತ್ತಾರೆ ವಾಲ್ಮೀಕಿಯನ್ನು ಸಂಪೂರ್ಣವಾಗಿ ತಮ್ಮ ಆಹ್ವಾನೆಗೆ ತೆಗೆದುಕೊಂಡು ರಾಮನ ಬಗ್ಗೆ ಬರೆಯುತ್ತಾ ಇದ್ದೇನೆ ಅಂತ ಹೇಳುತ್ತಾರೆ. ನನ್ನನ್ನು ಪ್ರಶ್ನೆ ಮಾಡುವವರು ಆ ವಾಲ್ಮೀಕಿ ಯನ್ನು ತೆಗೆಳಿದಂತೆ ಅನ್ನುವ ವಿತಂಡ ವಾದವನ್ನು ಮಂಡಿಸುತ್ತಾರೆ.
ಇವರು ಬರೆಯುವ ವಾಲ್ಮೀಕಿ ಯಾರೂ ಕೃತಿಯಲ್ಲಿ ಬರೆಯುತ್ತಾರೆ ವಾಲ್ಮೀಕಿ ಮಗು ಇದ್ದ ಸಮಯದಲ್ಲಿ, ತಾಯಿ ಮಗುವನ್ನು ತನ್ನ ಅಂಗಳದಲ್ಲಿ ಆಟವಾಡಲು ಬಿಟ್ಟಾಗ , ಅಲ್ಲಿಗೆ ಬಂದಂತ ಹದ್ದು ಗರುಡ ಮಗುವನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬೇಡ ಬೇಟೆಗಾರ ರಲ್ಲಿ ಬಿಟ್ಟಿತು ಅದರಿಂದ ವಾಲ್ಮೀಕಿ ಬೇಡ ಬೇಟೆಗಾರ ಸಮುದಾಯ ಆದರೂ ಅಂತ. ಇದನ್ನು ಅವರೆ ಹೇಳಿದ ಹಾಗೆ ನನ್ನ ಊಹೆ ಅಂತ ಹೇಳಿದ ಮೇಲೆ ಇದೂಕ್ಕಿನ ಆಧಾರ್ ಬೇಕೆ ??