ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 14, 2014

8

ನಮ್ಮ ನಮ್ಮ ಭಾಷೆಯ ಸಮಸ್ಯೆ

‍ನಿಲುಮೆ ಮೂಲಕ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಕನ್ನಡ ಕಲಿವಾರಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು.ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.

ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು.

ಜ್ಯೋತಿಷವನ್ನು ಕುರಿತು ಅದರಲ್ಲಿ ಹೇಳಿದ್ದೇ ಪರಮ ಸತ್ಯ ಎನ್ನುವವರು ಭಾಸ್ಕರಾಚಾರ್ಯರೂ ಅಲ್ಲ, ವರಾಹಮಿಹಿರರೂ ಅಲ್ಲ. ಹಾಗೆಯೇ ಮಾನವ ಅಂದರೇನು? ಅವನ ಸಾಧನೆಯೇನು? ಚಂದ್ರನಿಗೆ ಹೋಗಿದ್ದಾನೆ, ಮಂಗಳನ ಅಂಗಳಕ್ಕೆ ಏಣಿ ಹಾಕಿದ್ದಾನೆ, ಇದು ಕಂಪ್ಯೂಟರ್ ಯುಗ. ಇಸ್ರೋ ವಿಜ್ಞಾನಿಗಳು ರಾಕೆಟ್ ಉಡಾಯಿಸುವ ಮುಂಚೆ ಧರ್ಮಸ್ಥಳಕ್ಕೆ ಹೋಗ್ತಾರೆ, ತಿರುಪತಿಗೆ ಹೋಗಿ ಪೂಜೆ ಮಾಡ್ತಾರೆ. ಎಂಥ ವ್ಯಂಗ್ಯ, ಮೌಢ್ಯ ನೋಡಿ ಎಂದು ವಿಜ್ಞಾನದ ಪ್ರತಿನಿಧಿಗಳು ಅಂದುಕೊಂಡವರು ತೀವ್ರ ವೈಚಾರಿಕ ಅಂದುಕೊಂಡ ಭ್ರಮೆಯಲ್ಲಿ ವಾದಕ್ಕಿಳಿಯುತ್ತಾರೆ. ಹಾಗಂತ ಇವರ್ಯಾರೂ ಆಕಾಶಕ್ಕೆ ಒಂದೇ ಒಂದು ರಾಕೆಟ್ ಉಡಾಯಿಸಿದವರಲ್ಲ, (ಉಡಾಯಿಸಿದ್ದರೆ ಮಕ್ಕಳ ಪಟಾಕಿ-ರಾಕೆಟ್ ಉಡಾಯಿಸಿರಬಹುದಷ್ಟೇ!). ಜೊತೆಗೆ ನ್ಯೂಟನ್, ಐನ್‍ಸ್ಟೈನ್, ವಿಕ್ರಂ ಸಾರಾಭಾಯ್ ಅಥವಾ ರಾಮಾನುಜಂ ಅವರೂ ಅಲ್ಲ, ಅವರ ಸಂತತಿಯವರೂ ಅಲ್ಲ. ಆದರೂ ವಿಜ್ಞಾನ-ತಂತ್ರಜ್ಞಾನದ ಸಾಧನೆಗಳನ್ನು ತಾವೇ ಸಿದ್ಧಮಾಡಿ ತೋರಿಸಿದ ಹುಮ್ಮಸ್ಸಿನಲ್ಲಿ ವಿಜ್ಞಾನದ ಮುಂದೆ ಮತ್ತೇನೂ ಇಲ್ಲ ಎಂಬಂತೆ ತರ್ಕ ಹೂಡುತ್ತಾರೆ. ಇವರ ದೌರ್ಭಾಗ್ಯ ನೋಡಿ-ವಿಜ್ಞಾನದ ಮಹಾನ್ ಸಾಧಕರಾದವರು ಯಾರೂ ವಿಜ್ಞಾನವೇ ಅಂತಿಮ ಎಂದು ಹೇಳಿಲ್ಲ! ಅದು ಕೂಡ ಜ್ಞಾನ ಸಾಧನೆಯ ಒಂದು ಮಾರ್ಗವಷ್ಟೇ. ಇಲ್ಲಿರುವುದು ಋಷಿಮುನಿಗಳ ಹಾಗೂ ನೈಜ ವಿಜ್ಞಾನಿಗಳ ಮಾತನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ಆಗಿರುವ ಸಂವಹನದ ಸಮಸ್ಯೆ. ಇವೆರಡೂ ಜ್ಞಾನ ಮಾರ್ಗಗಳನ್ನು ಅರಿಯಲು ಅನುಸರಿಸಬೇಕಾದ ವಿಧಾನಗಳು ಬೇರೆ ಬೇರೆ. ಜ್ಯೋತಿಷ ಅರಿಯುವ ದೃಷ್ಟಿಯಿಂದ ವಿಜ್ಞಾನದ ಇಂದಿನ ಕ್ರಮವನ್ನೂ ವಿಜ್ಞಾನದ ಇಂದಿನ ಅರಿವಿನ ಕ್ರಮದಿಂದ ಜ್ಯೋತಿಷವನ್ನೂ ಅರಿಯಲು ಮುಂದಾದರೆ ಆಗುವುದೇ ಹೀಗೆ. ಎರಡರ ಭಾಷೆ ಹಾಗೂ ಅರಿಯುವ ಕ್ರಮಗಳೇ ಭಿನ್ನ.

ವೇದವಾಕ್ಯಗಳಿಗೂ ಆಗಿರುವುದು ಇದೇ ದುರ್ಗತಿ. “ಬ್ರಾಹ್ಮಣೋಸ್ಯ ಮುಖಮಾಸೀತ್ ” ಅಂದರೆ ಬ್ರಾಹ್ಮಣರು ಮುಖದಿಂದ ಜನಿಸಿದರು ಎಂದೂ “ಪದ್ಭ್ಯಾಗಮ್ ಶೂದ್ರೋ ಅಜಾಯತಃ ” ಅಂದರೆ ಪಾದಗಳಿಂದ ಶೂದ್ರರು ಹುಟ್ಟಿದರು ಎಂದೂ ಅರ್ಥ ಕಲ್ಪಿಸಿ ಪ್ರಚಾರ ಮಾಡಿಯೇ ಮಾಡುತ್ತೇವೆ! ಈ ಮೂಲ ವಾಕ್ಯಗಳನ್ನು ಮೊದಲು ಯಾರು ಹೀಗೆ ಅರ್ಥೈಸಿದರೋ ಅದನ್ನು ಯಾವ ಮಹಾಶಯ ಹೀಗೆ ಅನುವಾದಿಸಿದನೋ ಅಂತೂ ಭಾರೀ ಜನಪ್ರಿಯವಂತೂ ಆಗಿ ಇದೇ ಅರ್ಥ ಕೂತುಬಿಟ್ಟಿದೆ. ಇಂಥ ಅನಾಹುತಗಳು ನಿತ್ಯ ಜೀವನದಲ್ಲೂ ಆಗುತ್ತವೆ. ಇದೇ ನೋಡಿ ಭಾಷೆಯ ಸಮಸ್ಯೆ.

ಈಚೆಗೆ ಒಬ್ಬ ಭೇಟಿಯಾದ. ಅಣ್ಣಾ ಚೆನ್ನಾಗಿದ್ದೀರಾ? ಅಂದ. ಹೌದಪ್ಪಾ ಅಂದೆ. ಅಕ್ಕ ಹೆಂಗಿದ್ದಾರಣ್ಣಾ? ಅಂದ. ಯಾವ ಅಕ್ಕ ಅಂದ್ರೆ, ಏನಣ್ಣಾ ಹಿಂಗತೀರಿ? ನಿಮ್ಮ ಮನೆಯವರು ಅಂದ. ಎಲಾ ಇವನ ಅಂದುಕೊಂಡು ಅಲ್ಲಾ ಮಾರಾಯ, ನಾನು ಅಣ್ಣ ಆದ್ಮೇಲೆ ನನ್ನ ಹೆಂಡ್ತಿ ನಿನಗೆ ಅತ್ತಿಗೆ ಆಗ್ಬೇಕಲ್ವಾ? ಅದು ಹೆಂಗೆ ಅಕ್ಕ ಆಗ್ತಾಳೆ ಎಂದು ಕೇಳಿದೆ. ಅದು ಹಂಗೆ ಸರ್ ಅಂದ. ಇವನ ಮಾತಿನಂತೆಯೇ ಹೋದರೆ ಅಣ್ಣನ ಹೆಂಡತಿ ಅತ್ತಿಗೆಯಲ್ಲ, ಅಕ್ಕ. ಅಂದರೆ ಅಣ್ಣನಿಗೂ ಅಕ್ಕನಿಗೂ ಇವರು ಮದುವೆ ಮಾಡಿಸಿಬಿಡ್ತಾರೆ ಎಂದು ತಿಳಿಯುವಂತಿಲ್ಲ. ಯಾಕೆಂದರೆ ಅದು ಹಂಗೇ!

ಕರ್ನಾಟಕದಲ್ಲೇ ಕೆಲವೆಡೆ ಅಪ್ಪನನ್ನು ಅಣ್ಣ ಎಂದೂ ತಾಯಿಯನ್ನು ಅಕ್ಕ ಎಂದೂ ಮತ್ತೆ ಕೆಲವೆಡೆ ಅಪ್ಪನನ್ನು ಭಾವ ಎಂದೂ ತಾಯಿಯನ್ನು ಅಕ್ಕ ಎಂದೂ ಸಂಬೋಧಿಸುವುದು ಇದೆ. ಹಳೆಗನ್ನಡದ ಅನೇಕಾನೇಕ ಪದಗಳು ಇನ್ನೂ ಆಡುಭಾಷೆಯಲ್ಲಿರುವ ಹವ್ಯಕರಲ್ಲಿ ತಾಯಿಯನ್ನು ಅಬ್ಬೆ ಎಂದೂ ಆಯಿ ಎಂದೂ ಸಂಬೋಧಿಸುವುದು ಇದೆ. ಆಯಿ ಮರಾಠಿಯಲ್ಲಿ ಹೆಚ್ಚು ಪ್ರಚಲಿತ. ಯಾವ ಹೆಣ್ಣು ಮಗಳಿಗಾದರೂ ಈ ಪದ ಅಲ್ಲಿ ಸಲ್ಲುತ್ತದೆ.

ಕೆಲವೊಮ್ಮೆ ಅನ್ಯ ಭಾಷಿಕ ಸಂಪರ್ಕದಿಂದ ಅಗತ್ಯಕ್ಕೆ ಅನುಗುಣವಾಗಿ ಹೊಸ ಪದಗಳು ಬಂದು ಸೇರುತ್ತವೆ. ಕನ್ನಡಕ್ಕೆ ಸಂಸ್ಕೃತದಿಂದ ಅನೇಕಾನೇಕ ಪದಗಳು ಬಂದಂತೆ ಇಂದು ಇಂಗ್ಲಿಷಿನಿಂದ ಬರುತ್ತಿವೆ. ಅಷ್ಟೇ ಅಲ್ಲ, ಅವು ಇಲ್ಲಿಯವೇ ಆಗಿಬಿಟ್ಟಿವೆ. ಎಷ್ಟರಮಟ್ಟಿಗೆ ಎಂದರೆ ಇಲ್ಲಿಗೆ ಅತಿಥಿಗಳಾಗಿ ಬಂದು ಶಾಶ್ವತ ಠಿಕಾಣಿ ಹೂಡಿದ ಈ ಪದಗಳನ್ನು ಆ ಭಾಷೆಯ ಮೂಲ ಜನರೇ ಬಂದರೂ ಗುರುತಿಸಲಾರರು. ಉದಾಹರಣೆಗೆ ನೋಡಿ: ಕಾಂಟ್ರ್ಯಾಕ್ಟ್ ಎಂಬ ಪದ ಕನ್ನಡಕ್ಕೆ ಕಂಟ್ರಾಕ್ಟು ಎಂದೂ ಕಂತ್ರಾಟು ಎಂದೂ ಬಂದಿದೆಯಷ್ಟೇ ಅಲ್ಲ ಅದರ ಮೂಲ ಅರ್ಥವೇ ಬಿದ್ದು ಹೋಗಿ ಭಾನಗಡಿ ಕಿಡಿಗೇಡಿ ಎಂಬ ಅರ್ಥ ಪ್ರಾಪ್ತವಾಗಿದೆ. ಅವನೊಬ್ಬ ಫಿರ್ಕೀಸು ಎಂಬ ಪದ ಈಚೆಗೆ ಕಿವಿಗೆ ಬಿತ್ತು. ಈ ಫಿರ್ಕೀಸು ಅಂದರೇನು ಎಂದು ತಿಳಿಯಲು ಅದರ ಬೆನ್ನು ಬಿದ್ದೆ. ನೋಡಿದರೆ ಅದು ಇಂಗಿಷಿನ ಫ್ರೀಕ್ (ತಿಕ್ಕಲ) ಪದದ ಅಪಭ್ರಂಶ! ಲೈನು ಎಂಬುದು ಗೆರೆ ಎಂಬರ್ಥದಿಂದ ದೂರವಾಗಿ ಹುಡುಗ ಹುಡುಗಿಗೆ ಲೈನು ಹೊಡೆದ ಎಂಬರ್ಥದಲ್ಲಿ ಬಳಕೆಯಾಗುತ್ತ ಆಸಕ್ತಿ ತೋರಿದ ಎನ್ನುವಂತಾಗಿದೆ. ಹಾಗೆಯೇ ಬಂಡಲ್=ಬಡಾಯಿ; ಬಕೇಟು ಹಿಡಿ= ಚೇಲಾಗಿರಿ ಇತ್ಯಾದಿ. ಹುಡುಕಿದಷ್ಟೂ ಇವು ದೊರೆಯುತ್ತವೆ. ಅದಿರಲಿ. ಪಿಎಂ, ಸಿಎಂ, ಹೀರೋ, ವಿಲನ್ ಇವನ್ನೆಲ್ಲ ನಾವೆಂದೂ ಆಡುಮಾತಿನಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ನಾಯಕ, ಖಳನಾಯಕ ಎನ್ನುವುದಿಲ್ಲ!

ಕನ್ನಡೀಕರಣಗೊಂಡ ಆಂಗ್ಲ ಪದಗಳಿಗೆ ಮೂಲ ಅರ್ಥ ಎಷ್ಟೋ ಮೈಲು ದೂರದಲ್ಲಿದೆ. ನಿದರ್ಶನಕ್ಕೆ ನೋಡಿ: ಜನಸಾಮಾನ್ಯರಿರಲಿ, ಪ್ರೊಫೆಸರುಗಳೂ ಕಾರ್ಯಕ್ರಮವೊಂದು ನಿಗದಿತ ದಿನ ಅಥವಾ ಸಮಯಕ್ಕೆ ಮುಂಚೆ ಘಟಿಸುವಾಗ ಅದನ್ನು ಪ್ರೀಫೋನ್ ಅನ್ನುತ್ತಾರೆ. ಈ ಪದವೇ ಇಂಗ್ಲಿಷಿನಲ್ಲಿ ಇಲ್ಲ! ಪೋಸ್ಟ್ಫೋನ್ ಎಂಬುದಕ್ಕೆ ಇವರೇ ಹುಟ್ಟಿಸಿಕೊಂಡ ಸಹಜ ವಿರುದ್ಧಾರ್ಥಕ ಪದ ಇದು. ಹೀಗೆಯೇ ಇವರು ನನ್ನ ಕಸಿನ್ ಸಿಸ್ಟರು, ಕಸಿನ್ ಬ್ರದರು ಎನ್ನುವುದಿದೆ. ಈ ಪದಗಳೂ ಇಂಗ್ಲಿಷಿನಲ್ಲಿಲ್ಲ. ಆತ ಬ್ರದರ್ ಅಥವಾ ಸಿಸ್ಟರ್ ಅಲ್ಲದ ಕಾರಣದಿಂದಲೇ ಕಸಿನ್ ಆಗಿರುವುದು. ಅಂದ ಮೇಲೆ ಈ ಕಸಿನ್ ಬ್ರದರ್, ಸಿಸ್ಟರ್ ಅಂದರೆ ಯಾರು-ಏನರ್ಥ? ಇಂಗ್ಲಿಷಲ್ಲಿ ಇಲ್ಲದಿರಬಹುದು-ನಮ್ಮಲ್ಲಿದೆ! ಇನ್ನು ಆಂಟಿ ಅಂಕಲ್ ಪದಗಳ ಬಳಕೆ ಬಗ್ಗೆ ಬೇರೆಯೇ ಲೇಖನ ಬರೆಯಬಹುದು!

8 ಟಿಪ್ಪಣಿಗಳು Post a comment
 1. ಗಿರೀಶ್
  ಆಕ್ಟೋ 14 2014

  ಕೊನೆಯ ನಾಲ್ಕು ಪ್ಯಾರಾಗಳು ಮತ್ತು ಮೊದಲ ನಾಲ್ಕು, ಯಾವ ಸಂಬಂಧವಿದೆ? ಎರಡು ಲೇಖನಗಳನ್ನು ಒಂದಾಗಿ ಪ್ರಕಟಿಸಿದರೆ ನಿರ್ವಾಹಕರು 🙂

  ಉತ್ತರ
  • shripad
   ಆಕ್ಟೋ 15 2014

   ಇದೆ. ಮತ್ತೆ ಓದಿ! ನಮ್ಮ ನಮ್ಮ ಸಂವಹನದ ಸಮಸ್ಯೆ ಇದು. ಭಾ‍ಷೆಯನ್ನು ಸಂವಹನ ಸಾಧನವಾಗಿ ಅರಿತು ಮುಂದೆ ಓದುವುದು. ಸುಲಿದ ಬಾಳೆಹಣ್ಣಿನ ಅಂದದಲ್ಲಿ ಇದಿಲ್ಲ.

   ಉತ್ತರ
 2. M A Sriranga
  ಆಕ್ಟೋ 14 2014

  ಶ್ರೀಪಾದ ಭಟ್ ಅವರಿಗೆ— ಭಾರತದ ಮಂಗಳ ಯಾನದ ಪ್ರಯೋಗ ಯಶಸ್ವಿಯಾದ ನಂತರ ಟಿ ವಿ ವಾಹಿನಿಗಳಲ್ಲಿ ನಡೆದ ಚರ್ಚೆಗೂ ನಮ್ಮ ನಮ್ಮ ಭಾಷೆಯ ನಡುವಿನ ಸಂವಹನದ ಸಮಸ್ಯೆಗೂ ಏನು ಸಂಬಂಧ ಎಂಬುದು ತಿಳಿಯಲಿಲ್ಲ. ಇತ್ತೀಚಿನ ಮಂಗಳಯಾನದ ಯಶಸ್ಸಿನ ಹಿಂದೆ ಇಸ್ರೋದ ಇಂದಿನ ಮತ್ತು ಹಿಂದಿನ ಸಾವಿರಾರು ವಿಜ್ಞಾನಿಗಳ ಪರಿಶ್ರಮವಿದೆ. ಅಂದು ನಡೆದ ಚರ್ಚೆಯಲ್ಲಿ ಇಸ್ರೋ ಅಧ್ಯಕ್ಷರು/ಇಸ್ರೋದ ಒಬ್ಬ ಪ್ರಮುಖ ವಿಜ್ಞಾನಿ ಭಾಗವಹಿಸಿದ್ದರೆ ಆ ಚರ್ಚೆ ಅರ್ಥಪೂರ್ಣವಾಗುತ್ತಿತ್ತು ಎಂಬುದನ್ನು ತಾತ್ವಿಕವಾಗಿ ಒಪ್ಪಿಕೊಳ್ಳಬಹುದು. ಆದರೆ ಅವರು ಆ ಯಾನದ ವೈಜ್ಞಾನಿಕ ವಿವರಗಳನ್ನು ಕನ್ನಡದಲ್ಲೇ ಹೇಳಿದ್ದರೂ ಸಹ ಒಬ್ಬ ಸಾಮಾನ್ಯ ಟಿ ವಿ ವೀಕ್ಷಕನಿಗೆ ಅದರಲ್ಲಿ ಅರ್ಥವಾಗುತ್ತಿದ್ದದ್ದು ಎಷ್ಟು? ಇಲ್ಲಿ ಭಾಷೆಯ ಸಂವಹನದ ಸಮಸ್ಯೆಗಿಂತ ‘ವಿಜ್ಞಾನದ ಅರಿವು,ಅದರ ಪಾರಿಭಾಷಿಕ ಶಬ್ಧಗಳಿಗಿರುವ ಅರ್ಥ’ ಅಷ್ಟಿಷ್ಟು ಓದಿಕೊಂಡ ಪ್ರೇಕ್ಷಕರಿಗೇ ಆಗಲಿ ಆಗುತ್ತಿತ್ತೇ ಎಂಬುದು ಮುಖ್ಯ. (೧) ‘ಆ ಚರ್ಚೆಯಲ್ಲಿ ಭಾಗವಹಿಸಿದವರು ನ್ಯೂಟನ್,ಐನ್ ಸ್ಟೈನ್ ,ವಿಕ್ರಂ ಸಾರಾಭಾಯ್ ಅಥವಾ ರಾಮಾನುಜಂ ಅಲ್ಲ. ಅವರ ಸಂತತಿ ಅವರೂ ಅಲ್ಲ’ ಮತ್ತು (೨) ‘ಯಾರೋ ಮಾಡಿದ ಪ್ರಯೋಗ ಅದರ ಫಲಿತಗಳ ಅಂತಿಮ ಫಲಾನುಭವಿಗಳು ‘ಎಂಬ ತಮ್ಮ ಲೇಖನದಲ್ಲಿನ ಎರಡು ವಾಕ್ಯಗಳ ಬಗ್ಗೆ — ವಿಜ್ಞಾನವಾಗಲಿ ಅಥವಾ ಇನ್ನ್ಯಾವುದೇ ಜ್ಞಾನದ ಶಾಖೆಗಳಿರಲಿ ಅಲ್ಲಿ ವಂಶಪಾರಂಪರ್ಯದ ಏಕಸ್ವಾಮ್ಯವನ್ನು ನಿರೀಕ್ಷಿಸುವುದು ಹೇಗೆ ತಾನೇ ಸಾಧ್ಯ? ಇಂದಿನ ವಿಜ್ಞಾನಿಗಳಿರಲಿ ಅಥವಾ ಹಿಂದಿನ ವಿಜ್ಞಾನಿಗಳಿರಲಿ ಅವರುಗಳು ಆಯಾ ಕ್ಷೇತ್ರಗಳಲ್ಲಿ ಅವರಿಗಿಂತ ಹಿಂದೆ ನಡೆದ ಪ್ರಯೋಗಗಳ ಫಲಿತಗಳನ್ನು ಮುಂದುವರಿಸುತ್ತಾರೆ ಅಲ್ಲವೇ? ಹಿಂದೆ ಎರಡು ಮೂರು ಕೊಠಡಿಗಳಲ್ಲಿ ಸ್ಥಾಪಿತವಾಗಬೇಕಿದ್ದ ಕಂಪ್ಯೂಟರ್ ಇಂದು ಲ್ಯಾಪ್ ಟಾಪ್ ಆಗಿ ನಮ್ಮ ಮುಂದಿದೆ. ನಾಳೆ ಅಥವಾ ನಾಡಿದ್ದು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಕಂಪ್ಯೂಟರ್ ಬರಬಹುದು. ಮುಂದೆ ಉಬ್ಬಿದ ಸ್ಕ್ರೀನ್ ಇದ್ದ ಟಿ ವಿ ಹೋಗಿ ಫ್ಲ್ಯಾಟ್ ಸ್ಕ್ರೀನ್ ಟಿವಿ ಬಂತು. ಈಗ curved ಸ್ಕ್ರೀನ್ ಟಿ ವಿ ಬಂದಿದೆ. Two dimension ಟಿ ವಿ ಬದಲಿಗೆ three dimension ಟಿ ವಿ ಬಂದಿದೆ. ಹಾಗೆಂದು ಇವರೆಲ್ಲಾ ಮೊಟ್ಟ ಮೊದಲು ಕಂಪ್ಯೂಟರ್/ಟಿ ವಿ ಕಂಡುಹಿಡಿದವನ ವಂಶದವರಲ್ಲ ಎಂದು ಟೀಕಿಸುವುದು ಸರಿಯೇ? ಇಂಥಾ ಹಲವಾರು ‘ಫಲಿತಗಳನ್ನು’ ಉದಾಹರಣೆಯಾಗಿ ಕೊಡಬಹುದು. ಮುಖ್ಯವಾದ ಮಾತೆಂದರೆ ವಿಜ್ಞಾನ ನಿಂತ ನೀರಾಗದೆ ಹರಿಯುತ್ತಿದೆ. ಜ್ಯೋತಿಷ್ಯವೂ ಅದೇ ರೀತಿ ಆಗುತ್ತಿದೆಯೇ? ಎಂಬುದಷ್ಟೇ ಹೊರತು ಬೇರೇನೂ ಅಲ್ಲ.

  ಉತ್ತರ
  • shripad
   ಆಕ್ಟೋ 15 2014

   ನಿಮ್ಮ ಪ್ರಶ್ನೆಯೇ ಇದು ನಮ್ಮ ನಮ್ಮ ಸಂವಹನದ ಸಮಸ್ಯೆ ಎಂಬುದನ್ನು ಮತ್ತೆ ಹೇಳುತ್ತಿದೆ. ಜ್ಯೋತಿಷವನ್ನು (ಜ್ಯೋತಿಷ್ಯ ಅಲ್ಲ) ಸಾಂಪ್ರದಾಯಿಕ ರೀತಿಯಲ್ಲಿ ಕಲಿತವರು ಅದೇ ಹೆಚ್ಚು ಎಂದೂ ವಿಜ್ನಾನವನ್ನು ಆಧುನಿಕ ಕಲಿಕಾ ಕ್ರಮದಲ್ಲಿ ಕಲಿತವರು ಅಥವಾ ಆ ಬಗ್ಗೆ ಅಷ್ಟಿಷ್ಟು ಓದಿದವರು ಅದೇ ಹೆಚ್ಚು ಎಂದು ವಾದ ಮಾಡುವುದರ ಬಗ್ಗೆ ನನ್ನ ತಕರಾರು ಇರುವುದು. ಎರಡೂ ಕಲಿಕಾ ಕ್ರಮಗಳ ವಿಧಾನಗಳೇ ಬೇರೆ, ಗ್ರಹಿಕೆಗಳೇ ಬೇರೆ. ಇವೆರಡನ್ನೂ ಸರಿಯಾಗಿ ಅರ್ಥಮಾಡಿಕೊಳ್ಳುವ ಏಕೈಕ ಕಲಿಕಾ ಮಾದರಿ ನಮ್ಮ ನಡುವೆ ಇನ್ನೂ ಸೃಷ್ಟಿಯಾಗಿಲ್ಲ. ಹೀಗಾಗಿ ಎರಡೂ ಪಕ್ಷದವರು ರೈಲ್ವೆ ಹಳಿಗಳಂತೆ ಅಕ್ಕ ಪಕ್ಕ ಇರಬಲ್ಲರೇ ವಿನಾ ಎಂದೂ ಒಂದಾಗಲಾರರು.
   ಎರಡನ್ನೂ ನಮ್ಮ ನಮ್ಮ ಗ್ರಹಿಕೆಗಳ ನೆಲೆಯಲ್ಲಿ ಅರ್ಥಮಾಡಿಕೊಂಡ ಹಿನ್ನೆಲೆಯಲ್ಲಿಯೇ ಚರ್ಚಿಸಲು ಹೊರಡುವುದರಿಂದ ಹೀಗಾಗುತ್ತದೆ ಅನಿಸುತ್ತದೆ.

   ಉತ್ತರ
   • M A Sriranga
    ಆಕ್ಟೋ 16 2014

    ಶ್ರೀಪಾದ್ ಭಟ್ ಅವರಿಗೆ– ಮಾನವನು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ್ದಾನೆ. ಭಾರತ ಮತ್ತು ಇತರೆ ಮೂರು ದೇಶಗಳು ಮಂಗಳನ ಮೇಲೆ/ಮಂಗಳನ ಸುತ್ತಾ ತಮ್ಮ ನೌಕೆಯನ್ನು ಹಾರಿಸಿವೆ. . ನಾಸಾ/ಅಮೇರಿಕ ಇನ್ನೂ ಮುಂದೆ ಹೋಗಿ ಜನರನ್ನೇ ಅಲ್ಲಿಗೆ ಕಳಿಸಲು ತಯಾರಿ ನಡೆಸಿವೆ. ಅದು one way journey. ಭೂಮಿಗೆ ವಾಪಸ್ ಬರುವಂತಿಲ್ಲ. ಆ ಜನಗಳ ಮುಂದಿನ ಜೀವನ ಮರಣ ಅಲ್ಲಿಯೇ. ಇಷ್ಟಾದರೂ ಅಲ್ಲಿಗೆ ಹೋಗಲು ಆಸಕ್ತ ಜನರು ರೆಡಿ ಆಗಿ ತಮ್ಮ ಟಿಕೆಟ್ ಬುಕ್ ಮಾಡಿಸಿ ಆಗಿದೆ . ಅಂತಹವರಲ್ಲಿ ಭಾರತೀಯರೂ ಕೆಲವರಿದ್ದಾರಂತೆ. ಇಷ್ಟೆಲ್ಲಾ ಆದಮೇಲೂ ನಮ್ಮ ಇಂದಿನ ಜ್ಯೋತಿಷಿಗಳು ಚಂದ್ರ ಮತ್ತು ಮಂಗಳನ ಬಗ್ಗೆ ತಮ್ಮ ಹಳೆಯ ಕಥೆಯನ್ನೇ ಹೇಳುತ್ತಿದ್ದಾರೆ. ಮದುವೆಯಾಗುವ ಹೆಣ್ಣು ಮಕ್ಕಳಿಗೆ ಕುಜ ದೋಷ (ಮಂಗಳನ ದೋಷ) ಇದೆ ಎಂದು ಗಂಡುಗಳು ಸಿಗದೇ ಇರುವ ಪರಿಸ್ಥಿತಿಯೂ ಇದೆ. ಇಂಥ ಸನ್ನಿವೇಶದಲ್ಲಿ ವಿಜ್ಞಾನ ಮತ್ತು ಜ್ಯೋತಿಷ ರೈಲ್ವೆ ಹಳಿಗಳಂತೆ ಸಮಾನಾಂತರವಾಗೇ ಇರುವುದು ಸಹಜ ಮತ್ತು ಅನಿವಾರ್ಯ. ಇದು ಭಾಷಾ ಸಂವಹನದ ಸಮಸ್ಯೆ ಅಲ್ಲ. ಈ ಕುಜ ದೋಷ ಕೇವಲ ಹಿಂದುಗಳಲ್ಲಿ ಅದರಲ್ಲೂ ಮೇಲ್ವರ್ಗದ,ಜಾತಿಯ ಹೆಣ್ಣು ಮಕ್ಕಳನ್ನೇ ಏಕೆ ಕಾಡಬೇಕು? ಆ ದೋಷ ಇಡೀ ಜಗತ್ತಿಗೆ ಸಾರ್ವತ್ರಿಕವಾಗಿ ಒಂದು ನಿಯಮವಾಗಿದ್ದರೆ ಮುಸ್ಲಿಂ ಮತ್ತು ಕ್ರೈಸ್ತ ಹೆಣ್ಣು ಮಕ್ಕಳನ್ನೂ ಕಾಡಬೇಕಲ್ಲವೇ? ಅದೇ ರೀತಿ ಮೂಲಾ ನಕ್ಷತ್ರದ ಹೆಣ್ಣುಗಳಿಗೆ ಮಾವನಿಲ್ಲದ ಮನೆಯ ಗಂಡೇ ಆಗಬೇಕಂತೆ . (ಅಂದರೆ ಗಂಡನಾಗುವವನಿಗೆ ಅವನ ಅಪ್ಪ ನಿಧನ ಹೊಂದಿರಬೇಕು) ಅಂತರ್ಜಾತಿ ವಿವಾಹ ಮಾಡಿಕೊಂಡವರಿಗೆ ( ಹೆಣ್ಣು ಮೇಲ್ವರ್ಗಕ್ಕೆ ಅಥವಾ ಮೇಲ್ಜಾತಿಗೆ ಸೇರಿದ್ದರೂ ಸಹ) ಇದು ಏಕೆ ಸಮಸ್ಯೆ ಆಗಿಲ್ಲ? ಇದರ ಜತೆಗೆ ಮತ್ತೊಂದು ಸಾಮಾನ್ಯ ವಿಷಯ ಸೂರ್ಯ ಮತ್ತು ಚಂದ್ರನ ಗ್ರಹಣದ್ದು.ಆದಿನ ಗ್ರಹಣ ಹಿಡಿದ ಮೇಲೆ ಊಟ ಮಾಡುವಂತಿಲ್ಲ;ತಿಂಡಿ ತಿನ್ನುವಂತಿಲ್ಲ. ಆದರೆ ಇದು ಚಿಕ್ಕ ಮಕ್ಕಳು ಮತ್ತು ರೋಗಿಗಳಿಗೆ ಅನ್ವಯವಿಲ್ಲ ಎಂಬ ರಿಯಾಯ್ತಿ! ಹಿಂದೆ ಬ್ರಾಹ್ಮಣರಲ್ಲಿ ಅತಿ ಎನಿಸುವಷ್ಟು ಇದ್ದ ಈ ಪದ್ಧತಿ ಈಗ ಟಿ ವಿ ಜ್ಯೋತಿಷಿಗಳಿಂದ ಸುಮಾರು ಜಾತಿಗಳಿಗೆ ಹಬ್ಬುತ್ತಾ ಬಂದಿದೆ. ಪುನಃ ಇದು ಹಿಂದೂ ಧರ್ಮೀಯರಿಗೆ ಮಾತ್ರ. ಇತರ ಧರ್ಮೀಯರಿಗೆ ಏಕಿಲ್ಲ ಎಂದರೆ ನಮ್ಮ ಅವರ ಆಚರಣೆ,ದೇವರುಗಳು ಬೇರೆ ಬೇರೆ ಎಂಬ ಹಾರಿಕೆಯ ಉತ್ತರ. ಆದರೆ ಸೂರ್ಯ ಚಂದ್ರ ಎಲ್ಲರಿಗೂ ಒಂದೇ ಅಲ್ಲವೇ? ಎಂದರೆ ಉತ್ತರವಿಲ್ಲ. ಗ್ರಹಣದ ಪ್ರಭಾವ ಒಂದು ವೈಜ್ಞಾನಿಕ ಸತ್ಯವಾಗಿದ್ದರೆ ಜಾತಿ,ಮತ,ಧರ್ಮ ಇತ್ಯಾದಿ ಯಾವ ಎಲ್ಲೆಗಳನ್ನೂ ಹಾಕಿಕೊಳ್ಳದೆ ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ? ಇದು ವಿಜ್ಞಾನ ಮತ್ತು ಜ್ಯೋತಿಷದ ನಡುವಿನ ಭಾಷೆಯ ಸಂವಹನದ ಸಮಸ್ಯೆ ಅಲ್ಲ. ಇವತ್ತು ಟಿ ವಿ ಯಲ್ಲಿ ಜ್ಯೋತಿಷ ಹೇಳುವ ಮಹಾಶಯರೊಬ್ಬರು ಉದ್ದಿನ ಬೇಳೆ ಮತ್ತು ಎಳ್ಳನ್ನು ದಾನ ಮಾಡಿದರೆ ಮೈಗ್ರೈನ್ ತಲೆ ನೋವು ಹೋಗುತ್ತದೆ ಎಂದು ಉಪದೇಶ ಮಾಡಿದರು! ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾನ್ಹ ಹನ್ನೆರೆಡು ಗಂಟೆಯ ತನಕ ಒಂದಲ್ಲ ಒಂದು channelನಲ್ಲಿ ಇವರದೇ ಹಾವಳಿ. ಇವರಿಗೆ ಭಾಷೆಯ ಸಂವಹನದ ಸಮಸ್ಯೆ ಇಲ್ಲ. ಅಖಿಲ ಕರ್ನಾಟಕದ ಎಲ್ಲಾ ಭಾಗದ ಜನರಿಗೂ ಇವರ ಮಾತು ಅರ್ಥವಾಗುತ್ತದೆ. ಅಂತಹ ಭಾಷಾ ಪ್ರೌಢಿಮೆ ಸಿದ್ಧಿಸಿದೆ!!

    ಉತ್ತರ
    • hemapathy
     ಆಕ್ಟೋ 17 2014

     ನಿಮ್ಮ ಅನಿಸಿಕೆಯೆ ನನ್ನದೂ ಕೂಡ. ನಮ್ಮ ದೇಶದ ತುಂಬಾ “ವಿದ್ಯಾವಂತ ಕ್ರೂರಿಗಳು, ಅವಿದ್ಯಾವಂತ ಮುಠ್ಠಾಳರು, ಮೂಢನಂಬಿಕೆಗೆ ಜೋತು ಬೀಳುವ ಕುರಿಮಂದೆಯಂತಹ ಜನರೇ” ತುಂಬಿ ಹೋಗಿರುವುದಿ ಇವಕ್ಕೆಲ್ಲ ಮುಖ್ಯ ಕಾರಣ. ತಮ್ಮ ಪಾಡಿಗೆ ತಾವಿರುವ ನಿರ್ಜೀವ ಗ್ರಹಗಳಿಗೆ ಹೆಸರುಗಳನ್ನು ಕೊಟ್ಟಿದ್ದಲ್ಲದೇ ಅವುಗಳನ್ನೇ ಬಂಡವಾಳ ಮಾಡಿಕೊಂಡು ಅಮಾಯಕರನ್ನು ದಿಕ್ಕು ತಪ್ಪಿಸಿ ಹೊಟ್ಟೆ ಹೊರೆಯಲು ಹೊರಟಿದ್ದಾರೆ ಈ ಜ್ಯೋತಿಷಿಗಳು. ಅಷ್ಟಕ್ಕೇ ಸುಮ್ಮನಿರದೇ 33 ಕೋಟಿಯಷ್ಟು ಎಲ್ಲೂ ಇಲ್ಲದ, ಕಣ್ಣಿಗೆ ಕಾಣದ, ಕೈಗೂ ಸಿಗದ ದೇವರುಗಳನ್ನೂ ಸೃಷ್ಟಿಸಿ ಮೌಢ್ಯದ ಪರಾಕಾಷ್ಟೆಗೆ ಜನರನ್ನು ತಳ್ಳಿಬಿಟ್ಟಿದ್ದಾರೆ. ತನ್ನನ್ನು ತಾನು ಕಾಪಾಡಿಕೊಳ್ಳಲಾಗದ ಆ ದೇವರನ್ನು ಸರ್ವಂತರ್ಯಾಮಿ, ಮಹಾ ಶಕ್ತಿವಂತ ಎಂದು ಕರೆಯುವ ಈ ಮೂಢರು, ದೇವಸ್ಥಾನಕ್ಕೆ ಬೀಗ ಬೇರೆ ಜಡಿಯುತ್ತಾರೆ. ಏಕೆಂದರೆ ಅಲ್ಲಿರುವ ಹುಂಡಿ ಹಣ, ವಿಗ್ರಹದ ಮೈಮೇಲೆ ಇರುವ ಚಿನ್ನದ ಆಭರಣಗಳನ್ನು ಇವರು ತಮ್ಮ ಅನುಕೂಲಕ್ಕಾಗಿ ಕಾಪಾಡಬೇಕಾಗಿದೆ. ಇದರಲ್ಲಿ ಶ್ರೀಮಂತ ಮತ್ತು ಬಡ ದೇವರುಗಳೆಂದು ವಿಂಗಡನೆ ಬೇರೆ ಮಾಡಿದ್ದಾರೆ. ಇದನ್ನು ಕಂಡರೂ ಕಾಣದಂತೆ ಬಂದು ಹೋಗುವ ಭಕ್ತಾದಿಗಳು. ಕಣ್ಣು ಮುಚ್ಚಿಕೊಂಡು ಹುಂಡಿಗೆ ಹಣ ಸುರಿದು ತಮ್ಮ ಜೇಬು ಖಾಲಿ ಮಾಡಿಕೊಂಡು ಇನ್ಯಾರನ್ನೋ ಉದ್ಧಾರ ಮಾಡುವ ಮಂಕುತಿಮ್ಮಗಳು ಇರುವವರೆಗೆ ಇಂತಹ ಅನಾಚಾರಗಳು, ಅವ್ಯವಹಾರಗಳು ನಿಲ್ಲುವುದೇ ಇಲ್ಲ.

     ಉತ್ತರ
 3. hemapathy
  ಆಕ್ಟೋ 14 2014

  ಜ್ಯೋತಿಷ್ಯದ ಮೂಲಕ ಮಂಗಳ ಯಾನ ಮಾಡಲು ಸಾಧ್ಯವಿಲ್ಲ. ಯಾವುದೇ ವಿಷಯಗಳಿರಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಮಂಡಿಸುವುದು ಹೆಚ್ಚು ಸೂಕ್ತ.

  ಉತ್ತರ
 4. Mandagadde Srinivasaiah
  ಆಕ್ಟೋ 14 2014

  There is no issue for discussion which looks like a discussion on a street with out proper agenda

  ಉತ್ತರ

ನಿಮ್ಮದೊಂದು ಉತ್ತರ M A Sriranga ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments