ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2014

1

ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!

by ನಿಲುಮೆ

– ತುರುವೇಕೆರೆ ಪ್ರಸಾದ್

Jayalilthaತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.

ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.

ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಜಯಲಲಿತಾ ವೈಯಕ್ತಿಕವಾಗಿಯೂ ಆಡಂಬರದ ‘ಶೋ ಆಫ್’ ಬದುಕನ್ನು ತೆರೆದಿಟ್ಟರು. ಬಾಯಲ್ಲಿ ತಿಂಗಳಿಗೆ ಕೇವಲ ಒಂದು ರೂ ಸಂಬಳ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ಜಯಲಲಿತಾ ಅತ್ಯಂತ ವೈಭವಯುತ ಜೀವನಕ್ಕೆ ಸಾಕ್ಷಿಯಾದರು. ಪೋಲಿಸರು ದಾಳಿ ಮಾಡಿದಾಗ 10 ಸಾವಿರಕ್ಕೂ ಹೆಚ್ಚು ಸೀರೆ, 500 ಜೊತೆ ಚಪ್ಪಲಿ ಸಿಕ್ಕವು. ಅವರ ದತ್ತು ಮಗನ ಮದುವೆ ‘ನ ಭೂತೋ ನ ಭವಿಷ್ಯತ್’ ಎನ್ನುವಂತೆ ಏರ್ಪಾಡಾಗಿತ್ತು. ಕೇವಲ ಅಲಂಕಾರಕ್ಕೇ 750 ಮಿಲಿಯನ್ ರೂಪಾಯಿ ಹಾಗೂ ಊಟೋಪಚಾರಕ್ಕೆ 15 ಮಿಲಿಯನ್ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಇಂತಹ ಆಢಂಬರದ ಬದುಕು ತಮಗೆ ಮುಳುವಾಗುತ್ತದೆ ಎಂದು ಯೋಚಿಸುವ ತಾಳ್ಮೆಯೂ ಅವರಿಗಿರಲಿಲ್ಲ. ಹಾಗಾಗಿ ಜಯಲಿಲಿತಾ ಅವರು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಕೊಳ್ಳಲಾಗದೆ ತಮ್ಮ ವಿರುದ್ಧ ತಾವೇ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋದರು.

ಸುಮಾರು 18 ವರ್ಷಗಳ ನಂತರ ಜಯಲಲಿತಾ ವಿರುದ್ಧ ತೀರ್ಪು ಬಂದಿದೆ. 2001ಕ್ಕೆ ಮುಂಚೆಯೇ ಈ ತೀರ್ಪ ಬರಬೇಕಿತ್ತು. ಯಾಕೆಂದರೆ ಜಯಲಲಿತಾ ತಮ್ಮ ಅಧಿಕಾರವಾಧಿಯಲ್ಲಿ ಕ್ರಮೇಣ ಮಾಗುತ್ತಾ ನಡೆದಿದ್ದರು. ಅವರದ್ದು ನಿರಂಕುಶ ಧೋರಣೆಯೇ ಆದರೂ ಕಳೆದ 3 ವರ್ಷಗಳಲ್ಲಿ ಜಯಲಲಿತಾ ಆದಷ್ಟೂ ಕಳಂಕ ರಹಿತ ಮಾದರಿಯಲ್ಲಿ ಆಡಳಿತ ನಡೆಸಿದ್ದರು.. ಕಾನೂನು ಸುವ್ಯವಸ್ಥೆ ಉತ್ತಮಗೊಂಡಿತ್ತು. ಗೂಂಡಾಗಿರಿ ಕಡಿಮೆಯಾಗಿತ್ತು. ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬಂದಿತ್ತು. ಸರ್ಕಾರದ ಜನಪ್ರಿಯ ಯೋಜನೆಗಳಿಂದ ಬಡತನದ ರೇಖೆಯ ಕೆಳಗಿದ್ದ ಲಕ್ಷಾಂತರ ಜನರಿಗೆ ನಿಜಕ್ಕೂ ಉಪಯೋಗವಾಗಿತ್ತು. ಅಮ್ಮಾ ಕ್ಯಾಂಟೀನ್ ಮೂಲಕ ಒಂದು ರೂಪಾಯಿಗೆಗೆ ಒಂದು ಇಡ್ಲಿ, 3ರೂಗೆ ಮೊಸರನ್ನ, 5 ರೂಪಾಯಿಗೆ ಅನ್ನ ಸಾಂಬಾರ್ ಲಕ್ಷಾಂತರ ಕಾರ್ಮಿಕರ ಹಸಿವು ನೀಗಿತ್ತು. ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್‍ಟಾಪ್ ನೀಡುವ ಉತ್ತಮ ಯೋಜನೆ ಜಾರಿಗೆ ಬಂದಿತ್ತು. ರೂ.340ರ ಬದಲಿಗೆ ಒಂದು ಚೀಲಕ್ಕೆ ರೂ.110ರ ಬೆಲೆಯಲ್ಲಿ ಅಮ್ಮ ಸೀಮೆಂಟ್ ನೀಡಲಾಗುತ್ತಿತ್ತು. ದೇವಾಲಯಗಳಲ್ಲಿ ಭಕ್ತರಿಗೆ ಹಾಗೂ ಭಕ್ತರಿಗೆ ಉಚಿತ ಊಟ ನೀಡಲಾಗುತ್ತಿದೆ. ವಿಶ್ರಾಂತ ಪೋಲೀಸ್ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಚೆನ್ನೈನಲ್ಲಿ ಬಡ ಕಾರ್ಮಿಕರಿಗೆಂದೇ ವಿಶೇಷ ಮಿನಿ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಮುಂದೆ ಅಮ್ಮಾ ಫಾರ್ಮೆಸಿಯೂ ಜಾರಿಗೆ ಬರಲಿರುವುದಾಗಿ ಘೋಷಿಸಲಾಗಿತ್ತು. ಒಂದು ವೇಳೆ ಇದಕ್ಕೆಲ್ಲಾ ಅಡೆತಡೆ ಬಂದರೆ ಅಮ್ಮ ಹಿಂದೆಂದೋ ಮಾಡಿದ ತಪ್ಪಿನಿಂದಾಗಿ ತಮಿಳುನಾಡುವಿನ ಮಕ್ಕಳು ಶಿಕ್ಷೆ ಅನುಭವಿಸುವಂತಾಗುತ್ತದೆ. ಅಂತೂ ಅಮ್ಮ ಈ ಮಕ್ಕಳ ಪಾಲಿಗೆ ತಾವೇ ಗುಮ್ಮ ಕರೆದಿದ್ದಾರೆ..!

ಇಷ್ಟೆಲ್ಲ ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ಜಯಲಲಿತಾ ಅವರಿಗೆ ಶಿಕ್ಷೆಯಾಗಿದೆ. ಆದರೆ ಸಾವಿರಾರು ಕೋಟಿ ರೂಪಾಯಿಗಳ ಮೇವು ಹಗರಣದ ಆರೋಪಿ ಲಲ್ಲು ಪ್ರಸಾದ್ ಯಾದವ್ ಸೋನಿಯಾ ಗಾಂಧಿಯವರ ಕೃಪಾಕಟಾಕ್ಷದಿಂದ ಕಾನೂನಿನ ಇಕ್ಕಳದಿಂದ ನುಳುಚಿಕೊಳ್ಳುತ್ತಲೇ ಬಂದರು. ಸ್ವತಃ ಜಯಲಲಿತಾ ಅವರ ಕಟ್ಟಾ ಎದುರಾಳಿಗಳ ಮೇಲೂ ಇಂತಹ ಸಾಕಷ್ಟು ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆಯ ಆರೋಪವಿದೆ. ಆದರೆ ಅವರ್ಯಾರೂ ಜೈಲಿಗೆ ಹೋಗಿಲ್ಲ. ಇದರಿಂದ ಭಾರತದ ರಾಜಕೀಯದಲ್ಲಿ ಜಾಣ್ಮೆ ಹಾಗೂ ಬುದ್ದಿವಂತಿಕೆಯ ನಡೆ ಇದ್ದರೆ ಎಂತಹ ಭ್ರಷ್ಟತೆಯನ್ನು ಬೇಕಾದರೂ ಜೀರ್ಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ. ಡೌಲಿನ, ಹಂಚಿ ತಿನ್ನದ ಭ್ರಷ್ಟಾಚಾರ (ಬ್ಲಾಟಂಟ್ ಕರೆಪ್ಶನ್) ಮಾತ್ರ ರಾಜಕೀಯ ವ್ಯಕ್ತಿಗಳನ್ನು ಜೈಲು ಪಾಲು ಮಾಡುತ್ತದೆ. ಇದೇ ಕಾರಣಕ್ಕಾಗಿ ‘ಇನ್ ಇಂಡಿಯಾ ಎವೆರಿಥಿಂಗ್ ಗೋಸ್ ಹ್ಯಾಂಡ್ ಇನ್ ಹ್ಯಾಂಡ್’ ಎಂದು ಹೇಳುವುದು. ಇಂತಹ ಪರಸ್ಪರ ಕೈ ಕುಲುಕುವ ಜಾಣ್ಮೆ ಇಲ್ಲದಿದ್ದರೆ ಕಾನೂನಿನ ಕಪಿಮುಷ್ಟಿಯೊಳಗೆ ಸಿಲುಕಿಬಿದ್ದಂತೆಯೇ ಸೈ! ಏಕೆಂದರೆ ರಾಜಕೀಯ ವ್ಯಕ್ತಿಗಳು ತಮ್ಮ ಮೇಲಿನ ಆರೋಪದ ಮಧ್ಯೆಯೇ ವಿಲಾಸೀ ಜೀವನ ನಡೆಸುತ್ತಿರುತ್ತಾರೆ. ಇಂತಹವರ ವಿರುದ್ಧ ಸಾಮಾನ್ಯರು ದೂರು ನೀಡುವಷ್ಟು ಭಾರತದ ಪ್ರಜಾತಂತ್ರ ರಕ್ಷಣೆ ನೀಡಲಾರದು. ಜೊತೆಗೆ ಈ ರಾಜಕೀಯ ಅಪರಾಧೀಕರಣದ ವಿರುದ್ಧವೇ ಸೆಡ್ಡು ಹೊಡೆದು ನಿಂತು ಸೈದ್ದಾಂತಿಕ ಹೋರಾಟ ಮಾಡುವ ಪಕ್ಷಗಳೂ ಪ್ರಬುದ್ಧತೆ ಮೆರೆದಿಲ್ಲ, ಅಂತಹ ಪ್ರಜ್ಞಾವಂತಿಕೆ, ಸಂಯಮ ಬೆಳೆಸಿಕೊಂಡಿಲ್ಲ. ಸುಬ್ರಹ್ಮಣ್ಯ ಸ್ವಾಮಿಯವರು ರಾಜಕೀಯ ದ್ವೇಷಕ್ಕೋ, ರಾಜಕೀಯ ಶುದ್ದೀಕರಣಕ್ಕೋ ಯಾವುದೇ ದೃಷ್ಟಿಯಿಂದ ದೂರು ದಾಖಲಿಸಿರಬಹುದು. ಆದರೆ ಅವರು ಅಭಿನಂದನಾರ್ಹರು!

1 ಟಿಪ್ಪಣಿ Post a comment
  1. hemapathy
    ಆಕ್ಟೋ 16 2014

    ಲಕ್ಷಾಂತರ ಭ್ರಷ್ಟರಲ್ಲಿ ಜಯ ಒಬ್ಬಳು ಮಾತ್ರ. ಆದರೆ ಅವರೆಲ್ಲರಿಗೂ ಶಿಕ್ಷೆ ನೀಡುವುದರಲ್ಲಿ ನಮ್ಮ ದೇಶದ ಆಡಳಿತಗಾರರು ಸೋತಿದ್ದಾರೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments