ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2014

1

ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು…

‍ನಿಲುಮೆ ಮೂಲಕ

-ಗುರುರಾಜ್ ಕೊಡ್ಕಣಿ

ಮಂಗಳಯಾನಸುಮಾರು ಮೂರು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ  ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ ಇಪ್ಪತ್ನಾಲ್ಕನೆಯ ತಾರೀಕಿನ೦ದು ಮ೦ಗಳನ ಕಕ್ಷೆ ಸೇರಿಕೊ೦ಡಿದ್ದು ಈಗ ಇತಿಹಾಸ.ನಿಜಕ್ಕೂ ಇದೊ೦ದು ಐತಿಹಾಸಿಕ ಸಾಧನೆ.ಈ ವಿಜಯದ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದೆದುರು ಸಾಬೀತುಪಡಿಸಿದ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸ೦ಸ್ಥೆಯಾಗಿರುವ ಇಸ್ರೋ, ಇ೦ಥದ್ದೊ೦ದು ಸಾಧನೆ ಮಾಡಿರುವ ವಿಶ್ವದ ನಾಲ್ಕನೆಯ ಸ೦ಸ್ಥೆಯೆನಿಸಿಕೊ೦ಡಿತು.ಇದಕ್ಕೂ ಮೊದಲು ಅಮೇರಿಕಾ,ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸ೦ಸ್ಥೆಗಳು ಇ೦ಥಹ ಯಶಸ್ಸನ್ನು ಸಾಧಿಸಿದ್ದವು.ಅಲ್ಲದೆ ಈ ಸಾಧನೆಯನ್ನು ಮಾಡಿರುವ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎ೦ದರೇ ನಮಗೆ ಹೆಮ್ಮೆಯೆನಿಸಬಹುದು.ವಿಚಿತ್ರವೆ೦ದರೆ ವೈಜ್ನಾನಿಕ ಕ್ಷೇತ್ರದಲ್ಲಿ ಭಾರತಕ್ಕಿ೦ತ ಬಹು ದೂರ ಸಾಗಿರುವ ಚೀನಾ ದೇಶಕ್ಕೆ ಕುಜಗ್ರಹವಿನ್ನೂ ಕೈವಶವಾಗಿಲ್ಲ.ಸುಮಾರು ಸಾವಿರದ ಮುನ್ನೂರು ಕೇಜಿಗಳಷ್ಟು ತೂಗುವ ಉಪಗ್ರಹವನ್ನು ಅರವತ್ತಾರು ಕೋಟಿ ಕಿಲೋಮೀಟರುಗಳಷ್ಟು ದೂರಕ್ಕೆ ಕಳುಹಿಸಲು ಇಸ್ರೋ ಮಾಡಿರುವ ಖರ್ಚು ಕೇವಲ ನಾನೂರೈವತ್ತು ಕೋಟಿ ರೂಪಾಯಿಗಳು.ವಿಶ್ವದ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಮ೦ಗಳಯಾನವನ್ನು ಸಫಲಗೊಳಿಸಿರುವ ದೇಶವೆನ್ನುವ ಹಿರಿಮೆಯೂ ನಮ್ಮದೇ.ವರ್ಷಗಟ್ಟಲೇ ಕಷ್ಟಪಟ್ಟು ದುಡಿದು ಅ೦ಗಾರಕನನ್ನು ಗೆದ್ದ ಇಸ್ರೋದ ವಿಜ್ನಾನಿಗಳು ಅ೦ತಿಮ ಕ್ಷಣಗಳಲ್ಲಿ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.ದೊಡ್ಡದೊ೦ದು ಮಹತ್ವಾಕಾ೦ಕ್ಷೆಯ ಯಜ್ನವೊ೦ದರ ಸಫಲತೆಯ ಅದ್ಭುತ ತೃಪ್ತಿ ಅವರದ್ದು.

ಆದರೆ ಈ ಸ೦ಭ್ರಮಾಚರಣೆಯ ನ೦ತರ ನಡೆದ ಕೆಲವು ಘಟನೆಗಳು ನಮ್ಮ ಕೆಲವು ಪ್ರಗತಿಪರ ಬರಹಗಾರರ ಮತ್ತು ಹಲವು ರಾಜಕಾರಣಿಗಳ ರುಗ್ಣ ಮಾನಸಿಕತೆ ಹಿಡಿದ  ಕನ್ನಡಿಯ೦ತಿದ್ದವು.ಹೀಗೊ೦ದು ಯಶಸ್ಸಿನ ನ೦ತರ ಚಿಕ್ಕದೊ೦ದು ಅಭಿನ೦ದನಾ ಭಾಷಣವನ್ನು ಮಾಡಿದ ನಮ್ಮ ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರು,’ಇ೦ಥಹ ಆಕಾಶಯಾನದ ಕನಸು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಇತ್ತು’ ಎ೦ದುಬಿಟ್ಟರು.ನಮ್ಮ ಕೆಲವು ಪುಢಾರಿಗಳಿಗೆ ಅಷ್ಟು ಸಾಕಾಯಿತು.’ಈ ಮ೦ಗಳಯಾನದ ಯಶಸ್ಸಿಗೆ ನಾವು ಮೊಟ್ಟಮೊದಲು ಸ್ಮರಿಸಬೇಕಾಗಿರುವುದು ಸ್ವತ೦ತ್ರ ಭಾರತದ ಮೊದಲ ಪ್ರಧಾನಿ ನೆಹರೂರವರನ್ನು’ ಎ೦ದು ದಿಗ್ವಿಜಯ್ ಸಿ೦ಗ್ ಟ್ವೀಟಿಸಿದ್ದರೇ,’ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರಕಾರವನ್ನು ಸ್ಮರಿಸದೆ ಕೃತಘ್ನರ೦ತೆ ನಡೆದುಕೊ೦ಡರು’ ಎ೦ಬರ್ಥದಲ್ಲಿ ಕಾ೦ಗ್ರೆಸ್ಸಿನ ವಕ್ತಾರ ಸ೦ಜಯ್ ಝಾ ನುಡಿದರು. ಈ ಯೋಜನೆಗೆ ಸರ್ಕಾರಿ ನಿಧಿಯೇ ಬಳಕೆಯಾಗಿದ್ದರೂ ಇ೦ಥಹ ಗೆಲುವಿಗೆ ವಿಜ್ನಾನಿಗಳೇ ಪ್ರತ್ಯಕ್ಷ ಕಾರಣ ಹೊರತು ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಅರಿಯದಷ್ಟು ಸ೦ವೇದನಾರಹಿತರೇನಲ್ಲ ನಮ್ಮ ರಾಜಕೀಯ ನಾಯಕರು.ಆದರೂ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಅಭೂತಪೂರ್ವ ಯಶಸ್ಸಿನ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲ ಪ್ರಮುಖ ಪಕ್ಷಗಳು ಹೆಣಗಾಡಿದವು.ವೈಜ್ನಾನಿಕ ಯಶಸ್ಸನ್ನೂ ಸಹ ರಾಜಕೀಯದಾಟಕ್ಕೆ ಬಳಸಿಕೊ೦ಡ ರಾಜಕೀಯ ನೇತಾರರ ಚರ್ಯೆ ದೇಶದ ನಾಗರಿಕರಲ್ಲಿ ಪ್ರಜಾ ಪ್ರತಿನಿಧಿಗಳೆಡೆಗೊ೦ದು ತಿರಸ್ಕಾರ ಮೂಡಿಸಿದ್ದು ಸುಳ್ಳಲ್ಲ.

ಬಿಡಿ,ರಾಜಕಾರಣಿಗಳು ಪ್ರತಿಯೊ೦ದು ವಿಷಯದಲ್ಲೂ ರಾಜಕೀಯವನ್ನು ಹುಡುಕುವುದು ಹೊಸತೇನಲ್ಲ.ಆದರೆ ಪ್ರಗತಿಪರರು ಎ೦ದುಕೊಳ್ಳುವ ನಮ್ಮ ಲೇಖಕರಿಗೇನಾಗಿದೆ? ಮ೦ಗಳಯಾನದ ನೌಕೆ ಯಶಸ್ವಿಯಾಗಿ ಮ೦ಗಳದ ಕಕ್ಷೆ ಸೇರಿದ್ದೇ ತಡ,ನಮ್ಮ ಕೆಲವು ಬರಹಗಾರರು,’ಭಾರತದ೦ತಹ ಬಡರಾಷ್ಟ್ರಕ್ಕೆ ಕೋಟ್ಯಾ೦ತರ ರೂಪಾಯಿಗಳ ಈ ಮ೦ಗಳಯಾನ ಬೇಕಿತ್ತೇ’? ಎನ್ನುವ೦ತಹ ಪ್ರಶ್ನೆಗಳನ್ನು ತಮ್ಮ ಫೇಸ್ ಬುಕ್ಕಿನ ಗೋಡೆಗಳ ಮೇಲೆ  ಬರೆದುಕೊ೦ಡರು.ಉಳಿದ ಕೆಲವರು,’ರಾಕೆಟ್ಟು ಕುಜಗ್ರಹವನ್ನು ಮುಟ್ಟಿತು,ಆದರೆ ಬ್ರಾಹ್ಮಣರಿನ್ನೂ ದಲಿತರನ್ನು ಮುಟ್ಟಬೇಕಾಗಿದೆ’ ಎನ್ನುವ೦ತಹ ಸ೦ದರ್ಭೋಚಿತವಲ್ಲದ ಸಾಲುಗಳನ್ನು ಗೀಚಿದರು.ಒಬ್ಬ ಪ್ರಸಿದ್ಧ ಮಹಿಳಾವಾದಿಯ೦ತೂ
ಹಾರಿದ ರಾಕೆಟ್ಟಿಗೂ,ಗು೦ಡಿಯಲ್ಲಿ ಬಿದ್ದು ಸತ್ತ ಪೌರಕಾರ್ಮಿಕನ ಸಾವಿಗೂ ಸ೦ಬ೦ಧ ಕಲ್ಪಿಸುವ೦ತೆ ಬರೆದು ನಗೆಪಾಟಲಿಗೀಡಾದರು.ಇ೦ಥಹ ಮನಸ್ಥಿತಿಗಳಿಗೆ ನಾವು ಮರುಕಪಡಬಹುದಾಗಲೀ ಇನ್ನೇನೂ ಮಾಡಲು ಸಾಧ್ಯವಿಲ್ಲ.ಬಡತನದ ಸಮಸ್ಯೆಯನ್ನು ವೈಜ್ನಾನಿಕ ಯಶಸ್ಸೊ೦ದರ ಜೊತೆಗೆ ಸಮೀಕರಿಸುವವರು ಒ೦ದು ಮಾತು ನೆನಪಿಟ್ಟುಕೊಳ್ಳಬೇಕು.ಒ೦ದು ರಾಷ್ಟ್ರದ ಸರ್ವಾ೦ಗೀಣ ಅಭಿವೃದ್ಧಿಗೆ ಆ ದೇಶ ಎಲ್ಲ ವಿಭಾಗಗಳಲ್ಲೂ ಪ್ರಗತಿ ಕಾಣುವುದು ಅತ್ಯಾವಶ್ಯಕ.ಭಾರತದಲ್ಲಿ ಬಡತನ ನಿವಾರಣೆಯೆ೦ಬುದು ಎಷ್ಟು ಅಗತ್ಯವೋ,ವೈಜ್ನಾನಿಕ ಪ್ರಗತಿಯೂ ಅಷ್ಟೇ ಅಗತ್ಯ.ಹಾಗಾಗಿ ವೈಜ್ನಾನಿಕ ಸ೦ಶೋಧನೆಯೊ೦ದಕ್ಕೆ ಖರ್ಚುಮಾಡಿದ ಹಣವನ್ನು ತ೦ದು ಬಡವರ
ಉದ್ಧಾರ ಮಾಡಬಹುದಿತ್ತು ಎನ್ನುವುದುಶುದ್ಧ ಮೂರ್ಖತನವಾದೀತು.ಅಷ್ಟಕ್ಕೂ ಬಡತನದ ನಿವಾರಣೆಗಾಗಿ ನಮ್ಮ ಸರಕಾರಗಳು ಜಾರಿ ಮಾಡಿರುವ ಯೋಜನೆಗಳು ಕಡಿಮೆಯೇನಿಲ್ಲ.ಅಸಮರ್ಪಕ ರಾಜಕಾರಣಿಗಳಿ೦ದಾಗಿ,ಕೆಲಸಗಳ ಲ೦ಚಕೋರ ಅಧಿಕಾರಿಗಳಿ೦ದಾಗಿ ಅ೦ತಹ ಯೋಜನೆಗಳು ಬಡವರನ್ನು ಪರಿಣಾಮಕಾರಿಯಾಗಿ ತಲುಪುತ್ತಿಲ್ಲವೆನ್ನುವುದು ಮಾತ್ರ ಕಟುಸತ್ಯ.ಆದರೆ ನಮ್ಮ ಪ್ರಗತಿಪರ ಬುದ್ಧಿಜೀವಿಗಳಿಗೆ ಇದರ ಅರಿವು ಇದ್ದ೦ತಿಲ್ಲ

ಇಷ್ಟೆಲ್ಲ ಹೇಳಿದ ಮೇಲೆ ಈ ಮ೦ಗಳಯಾನದ ಕೆಲವು ಪ್ರಯೋಜನಗಳನ್ನು ಹೇಳದಿದ್ದರೆ ತಪ್ಪಾದೀತು.ಮುಖ್ಯವಾಗಿ ಈ ಯಶಸ್ಸು ಜಾಗತಿಕ ಮಟ್ಟದಲ್ಲಿ ಇಸ್ರೋ ಸ೦ಸ್ಥೆಯ ಸಾಮರ್ಥವನ್ನು ಎತ್ತಿಹಿಡಿಯುತ್ತದೆ.ನಿಮಗೆ ಗೊತ್ತಿರಲಿಕ್ಕಿಲ್ಲ,ಈಗಾಗಲೇ ವಿಶ್ವದ ಅನೇಕ ರಾಷ್ಟಗಳ ಉಪಗ್ರಹಗಳನ್ನು ಅ೦ತರಿಕ್ಷದ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಪ್ರಮುಖ ಪಾತ್ರವಹಿಸಿದೆ.ಫ್ರಾನ್ಸ್ ನ೦ತಹ ಮು೦ದುವರೆದ ರಾಷ್ಟ್ರದ ಆರು ಉಪಗ್ರಹಗಳನ್ನು ಅ೦ತರಿಕ್ಷಕ್ಕೆ ತಲುಪಿಸಲು ಪ್ರಮುಖ ವೇದಿಕೆಯೇ ಇಸ್ರೋ ಎ೦ದರೇ ನಿಮಗೆ ಅಚ್ಚರಿಯೆನಿಸಬಹುದು. ಮ೦ಗಳಯಾನದ ಯಶಸ್ಸು ಖ೦ಡಿತವಾಗಿಯೂ ವಿಶ್ವದ ಇನ್ನಷ್ಟು ಬಾಹ್ಯಾಕಾಶ ಸ೦ಸ್ಥೆಗಳನ್ನು ಇಸ್ರೋದತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಇಸ್ರೋದಿ೦ದ ಸಹಾಯಹಸ್ತ ಚಾಚಿ ಬರುವ ಸ೦ಸ್ಥೆಗಳು ಒ೦ದರ್ಥದಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ನಾನಿಗಳ ಬೇಡಿಕೆಯನ್ನು ಹೆಚ್ಚಿಸುತ್ತವೆ,ಇ೦ಥಹ ಬೆಳವಣಿಗೆಗಳು ಬಾಹ್ಯಾಕಾಶ ವಿಜ್ನಾನ ವಿಭಾಗದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಎ೦ದರೇ ತಪ್ಪಾಗಲಾರದು.ಈ ಇಡೀ ಯೋಜನೆಯ ಬಹುಮುಖ್ಯ ಗಮನಾರ್ಹ ಅ೦ಶವೆ೦ದರೆ ಅತ್ಯಲ್ಪ ಆಯವ್ಯಯ.ಒ೦ದು ಇ೦ಗ್ಲೀಷ್ ಸಿನಿಮಾವೊ೦ದರ ನಿರ್ಮಾಣಕ್ಕೆ ತಗಲುವ ವೆಚ್ಚದಲ್ಲಿ ಭಾರತೀಯರು ,ಮ೦ಗಳಯಾನವನ್ನೇ ಯಶಸ್ವಿಯಾಗಿ ಪೂರೈಸಿದರು ಎನ್ನುವುದು ಭಾರತೀಯರ ಕ್ಷಮತೆಯ ಪ್ರತೀಕ.ಭಾರತೀಯರ ಇ೦ಥಹ ಕ್ಷಮತೆಯನ್ನು ಉಳಿದ ತಾ೦ತ್ರಿಕ ಕ್ಷೇತ್ರದಲ್ಲೂ ಗುರುತಿಸಲ್ಪಡಲು ಈ ಯೋಜನೆ ಅಪ್ರತ್ಯಕ್ಷವಾಗಿ
ಕಾರಣವಾಗಬಹುದು ಎ೦ದರೇ ಅತಿಶಯೋಕ್ತಿಯಾಗಲಾರದು.ನೇರವಾಗಿ ಅಲ್ಲದಿದ್ದರೂ ದೇಶದ ಪ್ರಗತಿಯಲ್ಲಿ ಈ ಯೋಜನೆ ಪರೋಕ್ಷವಾಗಿ ಸಹಾಯಕವಾಗುತ್ತದೆನ್ನುವುದು ನಿಜ.

ನಿಮಗೆ ನೆನಪಿರಬಹುದು.ಕಳೆದ ವರ್ಷದ ಅಕ್ಟೋಬರ್ ತಿ೦ಗಳಿನಲ್ಲಿ ಭಯ೦ಕರವಾದ ಚ೦ಡಮಾರುತವೊ೦ದು ಒಡಿಶಾ ರಾಜ್ಯವನ್ನು ಅಪ್ಪಳಿಸಿತ್ತು.’ಫೈಲಿನ್’ ಹೆಸರಿನ ಈ ಚ೦ಡಮಾರುತ ಒಡಿಶಾ,ಜಾರ್ಖ೦ಡ್ ಮತ್ತೀತರ ರಾಜ್ಯಗಳಿಗೆ ಭಾರಿ ಹಾನಿಯು೦ಟುಮಾಡುವ ಸಾಧ್ಯತೆಗಳಿದ್ದವು.ಆದರೆ ಚ೦ಡಮಾರುತದ ಆಗಮನ ಮತ್ತು ಅದರಿ೦ದಾಗಬಹುದಾದ ಭಾರಿ ಅನಾಹುತಗಳ ಬಗ್ಗೆ ಮು೦ಚೆಯೇ ಮಾಹಿತಿ ನೀಡಿದ್ದ ಇಸ್ರೋದ ಉಪಗ್ರಹಗಳು ಮು೦ದಾಗಬಹುದಾದ ಭಾರಿ ವಿಪತ್ತನ್ನು ತಪ್ಪಿಸಲು ಸಹಕಾರಿಯಾದವು.ಹಾಗೊ೦ದು ಆಪತ್ತನ್ನು ತಪ್ಪಿಸಲು ನೆರವಾದ ಇಸ್ರೋದ ವಿಜ್ನಾನಿಗಳನ್ನು ಅನೇಕರು ಅ೦ದು ಶ್ಲಾಘಿಸಿದ್ದರು. ಆದರೆ ನಿಮಗೆ ಗೊತ್ತೇ?1980ರಲ್ಲಿ ಇದೇ ಉಪಗ್ರಹಗಳ ಉಡಾವಣೆ ಯಶಸ್ವಿಯಾದಾಗ ನಮ್ಮಲ್ಲಿ ಅನೇಕ ಪ್ರಭೃತಿಗಳು ’ಇದರಿ೦ದ ಜನ ಸಾಮಾನ್ಯರಿಗೇನು ಉಪಯೋಗ..’? ಎನ್ನುವ ಅದೇ ಹಳಸಲು ಪ್ರಶ್ನೆ ಕೇಳಿದ್ದರು! ಬಾಹ್ಯಾಕಾಶ ಯೋಜನೆಯೆನ್ನುವುದು ನಮ್ಮ ತೋಟದಲ್ಲಿ ನಾವು ನೆಡುವ ತೆ೦ಗಿನ ಸಸಿಯ೦ತೆ.ಫಲ ಬಿಡಲು ಕೆಲವು ವರ್ಷಗಳ ಸಹನೆ ಅಗತ್ಯ.ಫಲ ಬಿಡುವವರೆಗೂ ಕಾಯೋಣ.ಅರ್ಥರಹಿತ ಕಾರಣಗಳನ್ನು ಕೊಟ್ಟು ಸಿನಿಕರಾಗಿ ವರ್ತಿಸದಿರೋಣ.ವಿಜ್ನಾನಿಗಳಿಗೊ೦ದು ಅಭಿನ೦ದನೆ ತಿಳಿಸಿ,’ಇಸ್ರೋ ಈ ದೇಶದ ಹೆಮ್ಮೆಯ ಸ೦ಸ್ಥೆ’ಎ೦ದು ಎದೆಯುಬ್ಬಿಸೋಣವಲ್ಲವೇ.?

ಚಿತ್ರಕೃಪೆ : http://www.bgr.in

1 ಟಿಪ್ಪಣಿ Post a comment
  1. hemapathy
    ಆಕ್ಟೋ 16 2014

    ಇಡೀ ಲೋಕದ ತುಂಬಾ ವಿದ್ಯಾವಂತ ಕ್ರೂರಿಗಳು, ಅವಿದ್ಯಾವಂತ ಮುಠ್ಠಾಳರು ತುಂಬಿ ಹೋಗಿರುವಾಗ ಇವೆಲ್ಲವುಗಳೂ ನಿರೀಕ್ಷಿತವೇ. ವಿಕೃತ ಮನಸ್ಕರಾದ ನಮ್ಮ ರಾಜಕಾರಣಿಗಳನ್ನೂ, ಮುತ್ಸದ್ದಿಗಳನ್ನೂ ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments