ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 17, 2014

38

ಶ್ರೇಣಿಕೃತ ವ್ಯವಸ್ಥೆ ಜಾತಿಗಳಿಗೆ ಮಾತ್ರ ಸೀಮಿತವೇ?

by ನಿಲುಮೆ

– ಪ್ರಸನ್ನ ಬೆಂಗಳೂರು

ಜಾತಿ ವ್ಯವಸ್ಥೆಕನ್ನಡಪ್ರಭದಲ್ಲಿ ರಾಕೇಶ್ ಶೆಟ್ಟಿಯವರ ಲೇಖನವನ್ನು ಅರ್ಥ ಮಾಡಿಕೊಳ್ಳದ ಕೆಲವರು ಜಾಲತಾಣದಲ್ಲಿ ಆ ಲೇಖನದ ವಿಶ್ಲೇಷಣೆಗಿಳಿದು ವ್ಯಂಗ್ಯ ವಿಡಂಬನೆ ಮೂಲಕ ಆ ಲೇಖನದ ಬಿಸಿಯನ್ನು ತಗ್ಗಿಸಲು ಪ್ರಯತ್ನಿಸಲು ನಿಂತರು. ಲೇಖನವನ್ನು ಬರೆಯಲು ಷಣ್ಮುಖ ಅರ್ಮುಗಂ ಅವರೂ ಕೂಡ ಹಲವಾರು ಬಾರಿ ಒತ್ತಾಯಿಸಿದ್ದರೂ ಸಹ ಯಾವುದೇ ವಿಷಯ ನನ್ನೊಳಗೆ ಕುದ್ದು ಖೋವ ಆಗದೆ ಬರಹ ರೂಪಕ್ಕಿಳಿಯಲಾಗದು ಎಂಬ ಕನ್ನಡದ ಅತ್ಯುತ್ಕೃಷ್ಹ ಸಾಹಿತಿ ಭೈರಪ್ಪನವರ ಮಾತಿನಂತೆ ಆ ವಿಷಯ ನನ್ನೊಳಗೆ ಹರಳುಗಟ್ಟಲು ಬಿಟ್ಟಿದ್ದೆ. ಪುರೋಹಿತಶಾಹಿ ಎಂದರೇನು ಎನ್ನುವುದನ್ನು ನಾನಿಲ್ಲಿ ವಿವರಿಸಲು ಹೊರಟಿಲ್ಲ. ಅಂತಹ ಯಾವ ವ್ಯವಸ್ಥೆಯೂ ಇಲ್ಲವೆಂದು ಈಗಾಗಲೆ CSLC ತಂಡ ಧೃಢಪಡಿಸಿದೆ. ಆದರೆ, ಜಾತಿ ವ್ಯವಸ್ಥೆಯ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಿರುತ್ತವೆ. ಜಾತಿ ಇಲ್ಲವೆ? ಪದ್ದತಿ ಇಲ್ಲವೆ? ವ್ಯವಸ್ಥೆ, ಶ್ರೇಣಿ ಇಲ್ಲವೆ? ಎಂಬ ಪ್ರಶ್ನೆಗಳು ಏಳುವುದು ಸಾಮಾನ್ಯ.

ಈ ಸಂಶೋಧನಾ ತಂಡದ ಪ್ರಕಾರ ಹೇಳುವುದಾದರೆ, ಭಾರತೀಯ ಸಮಾಜವು ವ್ಯವಸ್ಥಿತವಾಗಿ ಯೂರೋಪಿಯನ್ನರು ಹೇಳುವಂತೆ ಇರಲಿಲ್ಲ. ಯೂರೋಪಿಯನ್ನರು ಅವರ ಕನ್ನಡಕದಲ್ಲಿ ಭಾರತೀಯ ಸಮಾಜವನ್ನು ನೋಡಿ ಅವರ ಸಮಾಜಕ್ಕೆ ಸಮೀಕರಿಸಿಕೊಂಡು ಅನರ್ಥೈಸಿ ಕಥೆಗಳನ್ನು ಹೆಣೆದರು. ಆ ಕಥೆಗಳನ್ನೇ ‘ವಾಸ್ತವ ಸತ್ಯ’ ವೆಂದು ನಂಬಿಕೊಂಡ ನಮ್ಮ ಮೂರ್ಖಶಿಖಾಮಣಿಗಳು ಈಗ ಕೂಗಾಟ ಅರಚಾಟ, ಹಾರಾಟ ಓರಾಟಗಳಲ್ಲಿ ತೊಡಗಿದ್ದಾರೆ. ಹೀಗೆ ಭಾರತದ ಕುರಿತ ಯುರೋಪಿಯನ್ನರ ಚಿತ್ರಣ ಮತ್ತು ಅವುಗಳನ್ನೇ ಸತ್ಯವೆಂದು ನಂಬಿ ಆ ನಕಲುಗಳನ್ನೇ ಪುನರುತ್ಪಾದಿಸುತ್ತಿರುವ ಚಿಂತನೆಗಳ ಮಿತಿಯನ್ನು, ವಿಫಲತೆಯನ್ನು ಎತ್ತಿ ತೋರಿಸುವ ಮೂಲಕ ವಾಸ್ತವವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ಈ ಸಂಶೋಧನಾ ತಂಡ ಶೋಧಿಸುತ್ತಿದೆ. ಅದರಲ್ಲಿ ಬಹುತೇಕ ಯಶಸ್ಸನ್ನೂ ಕಂಡಿದೆ. ಆದರೆ ಇದನ್ನೆಲ್ಲಾ ಹೇಳ ಹೊರಟರೆ ಈ ಎಡಬಿಡಂಗಿಗಳಿಗೆ ತಮ್ಮ ಮೂಲಕ್ಕೆ ಪೆಟ್ಟು ಬಿದ್ದು ಹೊಟ್ಟೆಹೊರೆಯುವಿಕೆ ನಿಂತು ಹೋಗುತ್ತದೆಂಬ ಭಯದಿಂದ ಶತಾಯಗತಾಯ ಅದನ್ನು ವಿರೋಧಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿ ರಾಜಕೀಯ ಒತ್ತಡ ತಂದು ಆ ಕೇಂದ್ರವನ್ನು ಮುಚ್ಚಿಸಿದ್ದೂ ಅದಕ್ಕಾಗಿ ಖುಷಿ ಪಟ್ಟಿದ್ದೂ ಆಯ್ತು.

ಜಾತಿ, ಶ್ರೇಣಿಕರಣ, ಪುರೋಹಿತಶಾಹಿ ಪರಿಕಲ್ಪನೆಗಳಲ್ಲಿನ ಸಮಸ್ಯೆಗಳನ್ನು ವಿವರಿಸಲು ತಮ್ಮ ಸಂಶೋಧನಾ ಭಾಷೆ ಮತ್ತು ಗ್ರಾಂಥಿಕ ಶಬ್ಧಗಳು ಮತ್ತು ಪಠ್ಯ ಪುಸ್ತಕ ಮಾದರಿ ಶಬ್ಧಗಳ ಮೂಲಕ ವಿವರಿಸಲು ಸಂಶೋಧಕರು ತೊಡಗುವುದು ಸಾಮಾನ್ಯರಾದ ನಮಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಇದೇನೋ ಸಂಶೋಧಕರಿಗೆ ಮಾತ್ರ ಸೀಮಿತ ಎಂದು ಸುಮ್ಮನಾಗುವ ಸಾಧ್ಯತೆಯೂ ಇದೆ.

ಇವೆರಡೂ ಸಮಸ್ಯೆಗಳು ಕಾಡದಂತೆ ಮಾಡಲು ಜಾತಿವ್ಯವಸ್ಥೆಯಿಂದ ಹೊರನಿಂತು ಅದರ ಸಮಸ್ಯೆಗಳೆಂದು ಗುರುತಿಸಲ್ಪಡುವ ಸಂಗತಿಗಳನ್ನು ನೋಡಬೇಕಾಗುತ್ತದೆ, ಹಾಗೆ ನೋಡಿದಾಗ ಮಾತ್ರ ಅವರ ಸಂಶೋಧನೆಗಳಲ್ಲಿರುವ ಸತ್ಯ ಸಂಗತಿ ಕಾಣಿಸುತ್ತದೆ. ಆದರೆ ಅದನ್ನು ಮಾಡುವುದು ಹೇಗೆ? ಅದಕ್ಕೆ ಬೇರೆ ದೇಶಗಳ ಮತಗಳ ಉದಾಹರಣೆ ಕೊಡಬೇಕಾಗುತ್ತದೆ. ಆದರೆ, ತಕ್ಷಣ ಆ ದೇಶಗಳಲ್ಲಿ ಜಾತಿಗಳಿಲ್ಲ, ಶ್ರೇಣಿಕರಣವಿಲ್ಲ, ಅಸ್ಪೃಶ್ಯತೆಯಿಲ್ಲ ಎಂದು ಕೂಗಾಡುವ ತಂಡ ಮೇಲೆ ಬೀಳುತ್ತದೆ. ಹಾಗಾಗಿ ನಮ್ಮದೇ ಮದ್ಯೆ ಇರುವ ಶ್ರೇಣಿಕರಣ, ಅಸ್ಪೃಶ್ಯತೆಯನ್ನು ಜಾತಿಗಳಿಗೆ ಅಂಟಿಕೊಳ್ಳದೆ ತೋರಿಸುವ ಪ್ರಯತ್ನಕ್ಕಾಗಿ ನಾನು ಈ ವಿಷಯ ಹೇಳುತ್ತಿದ್ದೇನೆ. ವಿಷಯಕ್ಕಿಂತ ಪೀಠಿಕೆ, ಮೂಗಿಗಿಂತ ಮೂಗುತಿಯೇ ಭಾರವಾಗಿದ್ದಕ್ಕೆ ಕ್ಷಮೆಯಿರಲಿ

ಈಗ ನಾನು ಹೇಳಲು ಹೊರಟಿರುವುದು ಸಂಸ್ಥೆಯೊಂದು ಕಾರ್ಯ ನಿರ್ವಹಿಸುವ ರೀತಿಯಲ್ಲಿರುವ ಶ್ರೇಣಿಕೃತ ವ್ಯವಸ್ಥೆಯ ಬಗ್ಗೆ. ಇದು ನಮ್ಮ ಸಾಂಪ್ರದಾಯಿಕ ಜಾತಿಗಳಿಂದ ಹೊರನಿಂತು ನೋಡುವಲ್ಲಿ ಸಹಾಯವಾಗಬಹುದು ಎಂದು ನನ್ನ ಅನಿಸಿಕೆ. ಅಷ್ಟೇ ಅಲ್ಲ ಅದನ್ನು ಅನುಭವಿಸಿದವರಿಗೆ ಅದು ಬಹು ಬೇಗ ಅರಿವಿಗೆ ಬರುತ್ತದೆ. ಶತವಾಧಾನಿ ಗಣೇಶ್ ಹೇಳುವಂತೆ ಸೂಕ್ಷ್ಮ ಮನಸ್ಸಿನ ಅಂತಃಚಕ್ಷುವಿರುವ ವ್ಯಕ್ತಿಗೆ ಬದಲಾವಣೆಯ ಆರಂಭದಲ್ಲೇ ಗೊತ್ತಾಗುತ್ತದೆ. ಆದರೆ ಅಂತಹ ಸಾಮರ್ಥ್ಯ ಇಲ್ಲದವರಿಗೆ ಒಮ್ಮೆಲೆ ಮೇಲೆ ಬಂದೆರಗಿದಂತಾಗಿ ಆಘಾತವಾಗುತ್ತದೆ. ನಾನು ಮೊದಲು ಸಂಸ್ಥೆಗೆ ಬಂದಾಗ ಇದು ಅರ್ಥವಾಗಿರಲಿಲ್ಲ ಅದರಲ್ಲಿ ಹೆಚ್ಚು ಕಾಲಕಳೆಯುತ್ತಾ ಹೋದಂತೆ ಅದರ ರಚನೆಗಳು ಅರ್ಥವಾಗುತ್ತಾ ಹೋದಂತೆ ಇದನ್ನು ನನ್ನದೇ ವಿಶ್ಲೇಷಣೆಗೆ ಒಳಪಡಿಸಿಕೊಳ್ಳುವ ಮೂಲಕ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತಾ ಹೋಯ್ತು.

ಯಾವುದೇ ಒಂದು ಸಂಸ್ಥೆಯಲ್ಲಿ ಶ್ರೇಣೀಕರಣ ವ್ಯವಸ್ಥೆಗಳು ಇರುತ್ತವೆ, ನನ್ನದೇ ಸಂಸ್ಥೆಯಲ್ಲಿನ ರಚನೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಮೂಲತಃ ಇಲ್ಲಿ ಎರಡು ವಿಂಗಡಣೆ (ಜಾತಿ)ಗಳಿರುತ್ತವೆ. ಅವೆಂದರೆ ನೌಕರರು ಮತ್ತು ಅಧಿಕಾರಿಗಳು.

ಇವು ಹೊರ ಜಗತ್ತಿಗೆ ನೇರವಾಗಿ ಗೋಚರವಾಗುವ ಕಣ್ಣಿಗೆ ರಾಚುವಂತಹ ವ್ಯತ್ಯಾಸಗಳು. ಇವುಗಳ ಪ್ರಭಾವ ಎಷ್ಟಿದೆಯೆಂದರೆ, ನೌಕರರಿಗೆ ಬೇರೆಯದೇ ಊಟದ ಮನೆಗಳು, ಒಳ ಹೋಗಲು ಬಾಗಿಲುಗಳು, ನಂಬಿದರೆ ನಂಬಿ ಬಿಟ್ಟರೆ ಬಿಡಿ ಬೇರೆಯದೇ ಕಕ್ಕಸ್ಸು ಮತ್ತು ಮೂತ್ರಾಲಯಗಳು. ಅಧಿಕಾರಿಗಳಾಗಲು ಅರ್ಹತೆ ಬಹುತೇಕ ಇಂಜಿನಿಯರುಗಳಿಗೆ ಅಂದರೆ ಬಿ ಇ ಪದವಿಧರರು ಮತ್ತು ಅದರ ಮೇಲ್ಪಟ್ಟವರಿಗೆ ಮಾತ್ರ ಸಾಧ್ಯ. ಆದಕ್ಕಿಂತ ಕೆಳಗಿನ ವಿದ್ಯಾರ್ಹತೆಗಳೆಲ್ಲ ನೌಕರರೆ!!!

ನೌಕರ ಮತ್ತು ಅಧಿಕಾರಿಗಳ ಮದ್ಯೆ ಕೇವಲ ಸಂಬಳದಲ್ಲಿನ ಅಗಾಧ ವ್ಯತ್ಯಾಸವಲ್ಲದೆ ಸೌಲಭ್ಯಗಳ ಪ್ರತಿಯೊಂದು ಹಂತದಲ್ಲೂ ತಾರತಮ್ಯವಿರುತ್ತದೆ. ಅಂದರೆ ಅಧಿಕಾರಿಗಳಿಗೆ ಸಿಗುವ ಎಷ್ಟೋ ಸೌಲಭ್ಯಗಳು ನೌಕರರಿಗೆ ಲಭ್ಯವಿರುವುದಿಲ್ಲ. ಅಷ್ಟೇ ಅಲ್ಲ ಅವರ ಜೀವಮಾನ ಕಾಲದಲ್ಲಿ ಅವರಿಗದು ಲಭ್ಯವಾಗುವುದೇ ಇಲ್ಲ. ಅದು ಆರೋಗ್ಯ ಸೌಲಭ್ಯಗಳಿರಬಹುದು, ಪ್ರಯಾಣದ ಭತ್ಯೆಗಳಿರಬಹುದು, ಕೆಲಸದ ನಿಮಿತ್ತ ಹೊರ ಜಾಗಗಳಿಗೆ ಹೋಗುವಾಗಿನ ರೈಲಿನ ದರ್ಜೆಗಳಲ್ಲಿ ಪ್ರಯಾಣಿಸಲು ಅರ್ಹತೆಯಿರಬಹುದು (ನೌಕರನೊಬ್ಬನಿಗೆ ವಿಮಾನದಲ್ಲಿ ಪ್ರಯಾಣಿಸುವ ಸೌಲಭ್ಯ ಜೀವಮಾನದಲ್ಲಿ ಬರುವುದೇ ಇಲ್ಲ ವಿದೇಶ ಪ್ರಯಾಣಗಳನ್ನು ಹೊರತು ಪಡಿಸಿ) ವಿದೇಶಗಳಿಗೆ ಹೋದಾಗ ಸಿಗುವ ಡಾಲರ್ ಕೂಡ ನೌಕರನಿಗೆ ಸಿಗುವ ಮತ್ತು ಅಧಿಕಾರಿಗೆ ಸಿಗುವುದರಲ್ಲಿ ವ್ಯತ್ಯಾಸವಿರುತ್ತದೆ. ಹೊರ ಸ್ಥಳಗಳಲ್ಲಿನ ವಸತಿಯಲ್ಲಿ ಹವಾ ನಿಯಂತ್ರಿತ ಕೋಣೆಗಳನ್ನು ಯಾವತ್ತೂ ನೌಕರ ಬಳಸುವಂತಿಲ್ಲ. ಅದೆಷ್ಟೇ ಉಷ್ಣ ಪ್ರದೇಶವಾದರೂ ಸೈ. ಇಂತಹ ಇನ್ನೂ ಅನೇಕ ತಾರತಮ್ಯಗಳಿವೆ ಬರೆಯುತ್ತಾ ಹೋದರೆ ೪ ದೊಡ್ಡ ಪ್ರಬಂಧಗಳಾಗಬಹುದು ಹಾಗಾಗಿ ಅವುಗಳನ್ನು ಇನ್ನು ಹೆಚ್ಚು ಎಳೆದಾಡಲು ಹೋಗುತ್ತಿಲ್ಲ.

ಮುಂದುವರೆದು ಇದು ಹೇಗೆ ಜಾತಿಯಾಗುತ್ತದೆ ಎಂಬುದಕ್ಕೆ ಇಲ್ಲಿ ನೌಕರರೆಂದಾಕ್ಷಣ ಅಲ್ಲಿ ವಿಂಗಡಣೆಗಳಿಲ್ಲ ಎಂದು ಕೊಳ್ಳುವುದು ಅಪ್ಪಟ ಸುಳ್ಳು. ಇಲ್ಲಿ ಮತ್ತೆ ವಿದ್ಯಾರ್ಹತೆಯೆ ಮೇಲೆ ವಿಂಗಡಣೆಗಳು ಆರಂಭವಾಗುತ್ತವೆ. ೧೦ ನೇ ತರಗತಿಯವನಿಗೆ ಅತಿ ಕಡಿಮೆ ಸಂಬಳ ಮತ್ತು ಸೌಲಭ್ಯಗಳು. ಹಾಗೆ ಮುಂದುವರೆಯುತ್ತಾ ಹೋಗುತ್ತದೆ ಒಂದೊಂದು ವಿದ್ಯಾರ್ಹತೆಯವರು ಇತರರನ್ನು ತಮಗಿಂತ ಕಡಿಮೆ ಅರ್ಹತೆಯವನೆಂದು ವಿಂಗಡಿಸಿ ನೋಡುವುದು ಇಲ್ಲಿ ಒಂದು ಒಪ್ಪಿತ (ಆದರೆ ಎಲ್ಲಿಯೂ ದಾಖಲೆಯಾಗದ) ವ್ಯವಸ್ಥೆ. ಸಾಮಾನ್ಯ ಪದವಿ ( ಬಿ ಎ, ಬಿ ಕಾಂ, ಬಿ ಎಸ್ಸಿ) ಪಡೆದವರು ನಾಲ್ಕನೆ ಶ್ರೇಣಿಗೆ ಸೇರುತ್ತಾರೆ. ಇವರೆಂದೂ ಅಧಿಕಾರಿಗಳಾಗಿ ಬಡ್ತಿ ಹೊಂದುವ ಅವಕಾಶವೇ ಇರುವುದಿಲ್ಲ. ಡಿಪ್ಲೋಮ ಪದವಿಧರ ೭ ನೇ ಶ್ರೇಣಿಗೆ ಆಯ್ಕೆಯಾಗುತ್ತಾನೆ ಇವನಿಗೆ ಮಾತ್ರ ಅಧಿಕಾರಿ ಜಾತಿಗೆ ಬಡ್ತಿ ಹೊಂದುವ ಅವಕಾಶವಿದೆ, ಅದರಲ್ಲೂ ತೊಡಕುಗಳಿವೆ, ಅಧಿಕಾರಿಯಾದರೂ ನೌಕರ ಮಟ್ಟದಿಂದ ಬಂದವರನ್ನು ಪ್ರತ್ಯೇಕವಾಗಿಯೇ ನೋಡಲಾಗುತ್ತದೆಯೇ ವಿನಃ ಆತನೆಂದಿಗೂ ಮೂಲ ಅಧಿಕಾರಿಯಾದವನೊಂದಿಗೆ ಸೇರಲು ಅವಕಾಶವಿರುವುದಿಲ್ಲ.

ಇನ್ನೂ ಅಧಿಕಾರಿಗಳಲ್ಲಿ ಈ ತಾರತಮ್ಯ ಇಲ್ಲ ಎಂದು ಕೊಂಡರೆ ಅದು ಕೂಡ ಸುಳ್ಳು. ಇಲ್ಲಿಯೂ ವಿದ್ಯಾರ್ಹತೆಯ ಮೇಲೆ ಅವನಿಗೆ ಹುದ್ದೆ ಸಿಗುತ್ತದೆ. ಸಾಮಾನ್ಯ ಬಿ ಇ ಪದವಿಧರ ಇ-೨ ಶ್ರೇಣಿಯಲ್ಲಿ ಸೇರಿದರೆ ಎಂ ಟೆಕ್ ಪಧವಿಧರ ಇ-೩ ಅಥವ ನಾಲ್ಕು ಶ್ರೇಣಿಗೆ ಸೇರುತ್ತಾನೆ. ಇನ್ನೂ ಮುಂದುವರೆದು ವಿದ್ಯಾರ್ಹತೆ ಪ್ರಮಾಣ ಹೆಚ್ಚಾದಂತೆಲ್ಲಾ ಆತನ ಶ್ರೇಣಿ ಮೇಲಕ್ಕೆ ಹೋಗುತ್ತಿರುತ್ತದೆ. ಬಡ್ತಿಗಳಂತೂ ಸೌಲಭ್ಯಗಳನ್ನು ಸಂಬಳಗಳನ್ನು ಆಕಾಶಕ್ಕೆ ಕರೆದೊಯ್ಯುತ್ತಿರುತ್ತವೆ. ಆದರೆ ಇದೇ ಸೌಲಭ್ಯಗಳು ನೌಕರನಿಂದ ಅಧಿಕಾರಿಯಾಗಿ ಬಡ್ತಿ ಪಡೆದವನಿಗೆ ಸಿಗುವುದಿಲ್ಲ. ಇದೆಲ್ಲವೂ ನಿಯಮಗಳ ಪ್ರಕಾರ ನಡೆಯುವುದಾದರೆ ಇವುಗಳ ಮಧ್ಯೆ ನಡತೆ ಬಂದಾಗ ಒಬ್ಬ ಶ್ರೇಣಿಯ ವ್ಯಕ್ತಿ ಮತ್ತೊಬ್ಬ ಶ್ರೇಣಿಯವನನ್ನು ಶ್ರೇಣಿಯ ಆಧಾರದ ಮೇಲೆ ನೋಡುತ್ತಾನೆ ಭಾವಿಸುತ್ತಾನೆ ವ್ಯವಹರಿಸುತ್ತಾನೆ. ಇದು ನೌಕರರಲ್ಲೂ ಅಧಿಕಾರಿಗಳಲ್ಲೂ ಮಾಮೂಲಿ. ಇವೆಲ್ಲವೂ ಒಂದು ಇಡೀ ಜಾತಿಯಂತೆ ತೋರುವ ಬಲೆಯೊಂದನ್ನು ಹೆಣೆದು ಪರಸ್ಪರ ಹಿಡಿದು ಕೊಂಡಿವೆ. ಆದರೆ ಇದು ಎಲ್ಲೂ ನಿಮಗೆ ಲಿಖಿತರೂಪದ ಹೊರಜಗತ್ತಿನಲ್ಲಿ ಕರೆಯಲ್ಪಡುವ ಸಂವಿಧಾನ ಅಥವ ವೇದಗಳೆಂದು ಕರೆಸಲ್ಪಡುವ ನಮ್ಮದೇ ಆದ ನಿಯಮಗಳಲ್ಲಿ ಹೇಳಲಾಗಿಲ್ಲ. ಆದರೂ ಆಚರಣೆಗೆ ಬಂದಿದೆ. ಉತ್ಪಾದನೆಯಲ್ಲಿ ದೈಹಿಕ ಶ್ರಮ ವ್ಯಯಿಸುವ ವ್ಯಕ್ತಿ ಶೂದ್ರನಾದರೆ ಸಂಸ್ಥೆ ಮುನ್ನಡೆಸುವ ಬ್ರಾಹ್ಮಣನಾಗಿ ನಿರ್ದೇಶಕರುಗಳಿರುತ್ತಾರೆ. ಕ್ಷತ್ರಿಯರಾಗಿ ಅಧಿಕಾರಿಗಳಿರುತ್ತಾರೆ. ವೈಶ್ಯರಾಗಿ ಹಣಕಾಸು ಮತ್ತು ಲೆಕ್ಕ ವಿಭಾಗವಿರುತ್ತದೆ.

ಹೀಗೆ ಒಂದು ಸಂಸ್ಥೆಯೊಳಗೆ ಜಾತಿಗಳನ್ನು ಸೃಷ್ಠಿಸಿದವರಾರು? ಇದು ಲಿಖಿತ ಸಂವಿಧಾನದಲ್ಲಿದೆಯೆ? ಖಂಡಿತ ಇಲ್ಲ. ಶೋಷಣೆ ನಡೆಯುತ್ತದೆಯೆ? ಅಧಿಕಾರಿಯನ್ನು ಕೇಳಿ ನೋಡಿ ಇಲ್ಲ ಎನ್ನುತ್ತಾನೆ. ನೌಕರನನ್ನು ಕೇಳಿ ನೋಡಿ ಅವನ ಗೊಣಗಾಟ ನಿಲ್ಲುವುದೇ ಇಲ್ಲ. ಏಕೆಂದರೆ ಆತ ತನ್ನನ್ನು ಅಧಿಕಾರಿಗೆ ಹೋಲಿಸಿಕೊಂಡು ತನ್ನದು ಕಠಿಣ ಪರಿಶ್ರಮದ ಕೆಲಸ ಎಂದು ಅಲವತ್ತು ಕೋಳ್ಳುತ್ತಾನೆ. ತನಗೆ ಸಿಗದ ಸೌಲಭ್ಯಗಳು ಅಧಿಕಾರಿಗೆ ಲಭ್ಯವಾಗುತ್ತಿರುವುದನ್ನು ನೌಕರ ತನಗಾಗುವ ಶೋಷಣೆಯೆಂದು ಭಾವಿಸುತ್ತಾನೆ ಮತ್ತು ಬಿಂಬಿಸಿಕೊಳ್ಳುತ್ತಾನೆ. ಈ ತಾರತಮ್ಯಗಳು ಸರ್ಕಾರ ರೂಪಿಸಿದ ನಿಯಮಗಳು. ಅಂದರೆ ವೇದಗಳಲ್ಲಿದೆಯೆ? ಇಲ್ಲ. ಆದರೆ ತಾರತಮ್ಯ ಇದೆ. ಹೇಗೆ? ಇಲ್ಲಿ ಶೋಷಣೆ ಇದೆಯೆ? ನೌಕರನನ್ನು ಕೇಳಿ ನೋಡಿ, ಖಂಡಿತ ಇದೆ. ಅಧಿಕಾರಿಯನ್ನು ಕೇಳಿ ನೋಡಿ, ಇಲ್ಲ ಎಂಬುದು ಆತನ ಉತ್ತರವಾಗಿರುತ್ತೆ.

ಇನ್ನು ಇಲ್ಲಿನ ಎಡಪಂಥೀಯತೆಯತ್ತ ಗಮನ ಹರಿಸೋಣ. ಇವರುಗಳು ಕಾಣಿಸಿಕೊಳ್ಳುವುದು ನೌಕರ ವರ್ಗದಲ್ಲಿ ಕಾರ್ಮಿಕ ಸಂಘಗಳು ಹೊರ ಜಗತ್ತಿನಲ್ಲಿರುವ ಎಡಪಂಥೀಯರಂತೆ ಕಾರ್ಯ ನಿರ್ವಹಿಸುತ್ತವೆ. ಇಲ್ಲಿ ಗೊಂದಲ ಬೇಡ. ಹೊರ ಜಗತ್ತಿನ ಅಂದರೆ ಕಮ್ಯುನಿಸ್ಟ್ ಕಾರ್ಮಿಕ ಸಂಘಗಳೆಂದು ಹೇಳುತ್ತಿಲ್ಲ. ಬದಲಿಗೆ ಒಟ್ಟೂ ಕಾರ್ಮಿಕ ಸಂಘಗಳನ್ನು ಎಡಪಂಥಿಯತೆಗೆ ಹೋಲಿಸುತ್ತಿದ್ದೇನೆ. ಇಲ್ಲಿ ಬಲಪಂಥೀಯ ಧೋರಣೆಯ BMS ಇಂದ ಹಿಡಿದು ಸ್ವತಂತ್ರ ಕಾರ್ಮಿಕ ಸಂಘಗಳು ಮತ್ತು CITU ನಂತಹ ಅಪ್ಪಟ ಕಮ್ಯುನಿಸ್ಟ್ ಸಂಘಗಳೂ ಇವೆ. ಇವೆಲ್ಲವೂ ಆಡಳಿತ ಎಂಬ ಯಂತ್ರದ ಎದುರು ಎಡಪಂಥೀಯರ ಕಾರ್ಯ ನಿರ್ವಹಿಸುತ್ತವೆ. ನೌಕರ ಸಂಘಗಳನ್ನು ರಚಿಸಿಕೊಂಡು ಹಲವಾರು ಸಮಿತಿಗಳನ್ನು ರಚಿಸಿಕೊಂಡು ಮೈಗಳ್ಳರುಗಳು ಅವುಗಳಲ್ಲಿ ಕುಳಿತು ಕೆಲಸ ಮಾಡದೆ ಹೋರಾಟ ಹಾರಾಟ ಮಾಡುತ್ತಾರೆ. ನೌಕರರ ಕುಂದುಕೊರತೆಯನ್ನು ಬಂಡವಾಳ ಮಾಡಿಕೊಂಡು ಆಡಳಿತದವರನ್ನು ಹೆದರಿಸುತ್ತಾ ಸೌಲಭ್ಯಗಳನ್ನು ನಾವೇ ಕೊಡಿಸಿದ್ದೇವೆಂದು ಕೊಚ್ಚಿ ಕೊಳ್ಳುತ್ತಾ ಅದರಿಂದ ಆದಾಯ ಮಾಡಿಕೊಳ್ಳುತ್ತಾ ಅಪ್ಪಟ ಎಡಪಂಥೀಯ ಪುಗಸಟ್ಟೆ ಕಾಸು ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಏನಾದರೂ ಸಮಸ್ಯೆ ಬಂದರೆ ಅದನ್ನು ಶೋಷಣೆ ದಮನಕಾರಿ ನೀತಿ ಎಂದು ಆಡಳಿತ ವರ್ಗದೆದುರು ಪ್ರತಿಭಟನೆ ಧರಣಿಯ ನಾಟಕವಾಡುತ್ತಾ ನೌಕರನ ಮೂಗಿಗೆ ತುಪ್ಪ ಸವರುತ್ತಾ ತಾವು ಮಾತ್ರ ದುಂಡಗಾಗುತ್ತಾ ಹೋಗುತ್ತಾರೆ. ಅದನ್ನು ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಒಂದು ಉದಾಹರಣೆಯ ಮೂಲಕ ವಿವರಿಸುತ್ತಿದ್ದರು.

ಇವರುಗಳು ಹೇಗೆಂದರೆ ಒಂದು ಹೆಣವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಲ್ಲಿ ಅದನ್ನು ಸಂಸ್ಕಾರ ಮಾಡಲು ಬಿಡದೆ ಅದನ್ನು ಮುಂದಿಟ್ಟುಕೊಟ್ಟು ಧರಣಿ ಹೂಡುತ್ತಾರೆ. ಯಾವುದೇ ಕಾರಣಕ್ಕೂ ಹೆಣ ಮತ್ತೆ ಬದುಕುವುದಿಲ್ಲ ಹೆಣ ಮತ್ತೆ ಊರೊಳಗೆ ತರುವುದಿಲ್ಲ. ಆದರೆ ಸಂಸ್ಕಾರ ಮಾಡಲು ಬಿಡುವುದಿಲ್ಲ. ಇದು ಈ ಎಡಪಂಥೀಯರ ಧೋರಣೆ. ಇದನ್ನು ತಡವಾಗಿ ಅರ್ಥ ಮಾಡಿಕೊಂಡ ಆಡಳಿತ ವರ್ಗ ಇಂತಹ ದುಂಡಗಾಗುತ್ತಿದವರನ್ನು (ಹಾಗೆ ಬೆಳೆಸಿದ್ದೂ ಆಡಳಿತ ವರ್ಗದ ಪಿತೂರಿಯೆ) ನಿಯಮಗಳಡಿ ತಂದು ಅವರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಕಡಿತಗೊಳಿಸಿ ಮಟ್ಟ ಹಾಕುವಲ್ಲಿ ಯಶಸ್ವಿಯಾಗುತ್ತಿದೆ.

ಇನ್ನು ಅಸ್ಪೃಶ್ಯತೆ ಇದೆಯೆ? ಎಲ್ಲಿದೆ ಹೇಗಿದೆ? ಇದು ಹೊರಜಗತ್ತಿನ ಅಸ್ಪೃಶ್ಯತೆಗೆ ಸಮವಾಗಿಲ್ಲದಿದ್ದರೂ ಅದರ ಪಳೆಯುಳಿಕೆ ಇದೆ. ಇಲ್ಲಿನ ಅಧಿಕಾರಿ ಸಂಘಗಳಿಗೆ ನೌಕರರಿಗೆ ಪ್ರವೇಶವಿಲ್ಲ. ಅಧಿಕಾರಿಗಳ ಸಭೆಗಳಿಗೆ ಭೋಜನಾಲಯಗಳಿಗೆ ಶೌಚಾಲಯಗಳಿಗೆ ನೌಕರರಿಗೆ ಪ್ರವೇಶವಿಲ್ಲ.

ಇದೆಲ್ಲದರಲ್ಲೂ ನೀವು ಜಾತಿ ಪದ್ದತಿ ಇದೆಯೆ ಎಂದು ಕೇಳಿದರೆ ಇಲ್ಲ ಮತ್ತು ಇದೆ ಎಂದು ಹೇಳಬಹುದು ಮತ್ತು ಇಲ್ಲ ಮತ್ತು ಇದೆಯೆನ್ನುವುದನ್ನು ಸ್ಟಿರಿಯೋ ಟೈಪ್ ವಾದಗಳ ಮೂಲಕ ಸಾಧಿಸಿ ತೋರಿಸಬಹುದು. ಆದರೆ ಸ್ಪಷ್ಠವಾಗಿ ಹೇಳಬೇಕೆಂದರೆ ಇಲ್ಲಿ ಜಾತಿ ಪದ್ದತಿ ಇಲ್ಲ ಆಚರಣೆಯೂ ಇಲ್ಲ.

ಅಸ್ಪೃಶ್ಯತೆಯ ಬಗ್ಗೆ ಸಣ್ಣದೊಂದು ಉದಾಹರಣೆ ಕೊಟ್ಟು ಮುಗಿಸುತ್ತೇನೆ.

ನನ್ನ ಮನೆಯಲ್ಲೊಮ್ಮೆ ಚರಂಡಿ ಕಟ್ಟಿಕೊಂಡಿತ್ತು. ಹೊಸ ಬಡಾವಣೆಯಾದ್ದರಿಂದ ಸ್ವಚ್ಚಗೊಳಿಸಲು ಯಾರೂ ಸಿಗುತ್ತಿರಲಿಲ್ಲ. ಹಾಗಾಗಿ ನಮ್ಮ ಕಾರ್ಖಾನೆ & ವಸತಿಗಳ ಚರಂಡಿಗಳನ್ನು ನಿರ್ವಹಿಸಲು ಇರುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬರಲು ವಿನಂತಿಸಿಕೊಂಡೆ. ಭಾನುವಾರ ಬಂದವನಿಗೆ ತಿಂಡಿ ಕಾಫಿ ನಂತರ ಕೆಲಸ ಮುಗಿಸಿ ಹೊರಟಾಗ ಹಣ ಎಷ್ಟು ಕೊಡಬೇಕೆಂದು ಕೇಳಿದೆ ಆತ ಕಣ್ಣೀರು ಹಾಕಲು ಆರಂಭಿಸಿದ ಯಾಕಪ್ಪ ನನ್ನಿಂದೇನಾದರೂ ತಪ್ಪಾಯ್ತೆ ಎಂದೆ. ಇಲ್ಲ ಸಾರ್, ನಮ್ಮನ್ನು ಯಾರೂ ಮನೆಯ ಒಳಗೆ ಕರ್ದು ತಿಂಡಿ ಕಾಫಿ ಕೊಡಲ್ಲ ಸಾರ್. ನೀವು ಕೊಟ್ರಿ ಎಂದ. ಆಗ ನನಗರ್ಥವಾಯ್ತು ಈತ ಏಕೆ ಮನೆಯೊಳಗೆ ಬರಲ್ಲ ಎಂದು ಹಠ ಹಿಡಿದಿದ್ದ ಎಂದು. ಇರಲಿ ಬಿಡು. ಎಂದು ಅವನಿಗೆ ಹಣ ಕೊಟ್ಟೆ. ಸಾರ್, ನಮ್ ಮೇಸ್ತ್ರಿನೂ ನಮ್ ಜಾತಿಯವನೇ ಸಾರ್ ಆದರೆ ಅವನೇ ನಮ್ಮನ್ನು ಆಫೀಸೊಳ್ಗೆ ಬಿಟ್ಕಣಲ್ಲ ಸಾ ಎಂದು ಸೈಕಲ್ ಹತ್ತಿ ಹೊರಟು ಹೋದ.

ಇಂತಹ ಒಂದು ವ್ಯವಸ್ಥೆ ಶ್ರೇಣಿಕರಣಗೊಳ್ಳುವುದು ಸಮಾಜ ಮುನ್ನಡೆಯಲು ಮಾತ್ರ, ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಅವಿಭಕ್ತ ಕುಟುಂಬವನ್ನೂ ಉದಾಹರಣೆಗೆ ತೆಗೆದುಕೊಂಡು ವಿವರಿಸ ಬಹುದು. ಇನ್ನೂ ಅತ್ಯಂತ ಹತ್ತಿರದ ಉದಾಹರಣೆಯಾಗಿ ಮನುಶ್ಯನ ದೇಹಕ್ಕೆ ಪುರುಷ ಸೂಕ್ತದಲ್ಲಿನ ಮಂತ್ರದಂತೆ ಹೋಲಿಸಬಹುದು. ಆದರೆ ಅದು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ. ಹಾಗಾಗಿ ಅದನ್ನು ಹೇಳದಿರುವುದೇ ಸೂಕ್ತ

Advertisements
38 ಟಿಪ್ಪಣಿಗಳು Post a comment
 1. ಆಕ್ಟೋ 17 2014

  ಗುಂಪಿನಲ್ಲಿ ವಾಸಿಸುವ ಎಲ್ಲ ಜೀವಿಗಳಲ್ಲೂ ಶ್ರೇಣಿಯ ವ್ಯವಸ್ಥೆ ಇದ್ದೇ ಇದೆ. ಅತ್ಯಂತ ಚಿಕ್ಕ ಮೆದುಳು ಹೊಂದಿರುವ ಇರುವೆಗಳ ಜೀವನಕ್ರಮ ಇದಕ್ಕೆ ಉತ್ತಮ ಉದಾಹರಣೆ.

  ಉತ್ತರ
 2. Nagshetty Shetkar
  ಆಕ್ಟೋ 18 2014

  ಬ್ರಾಹ್ಮಣ್ಯವು ಜಾತಿಗಳಿಗೆ ಮಾತ್ರ ಸೀಮಿತವೇ? ಎಲ್ಲೆಲ್ಲಿ ಬ್ರಾಹ್ಮಣ್ಯವಿದೆಯೋ ಅಲ್ಲೆಲ್ಲ ಶ್ರೇಣೀಕೃತ ವ್ಯವಸ್ಥೆ ಇದೆ.

  ಉತ್ತರ
  • shripad
   ಆಕ್ಟೋ 18 2014

   ಹೌದು ಹೌದು. ಶರಣ ಶೆಟ್ಕರ್ ಹೇಳಿದ್ದು ೧೦೦% ಸರಿ. ಬ್ರಾಹ್ಮಣ್ಯ ಇರುವೆಗಳಲ್ಲೂ ಇದೆ. ಶರಣರಲ್ಲೂ ಇದೆ. ಭಕ್ತ, ಮಹೇಶ, ಪ್ರಾಸಾದಿ ಇತ್ಯಾದಿಗಳೆಲ್ಲ ಶ್ರೇಣಿಯಲ್ಲದೇ ಮತ್ತೇನು? ಇದೊಂದು ವಾಸ್ತವ. ಶೆಟ್ಕರ್ ಸಾಹೇಬ್ರು ಕೊನೆಗೂ ಒಂದು ಸತ್ಯ ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು.

   ಉತ್ತರ
   • Nagshetty Shetkar
    ಆಕ್ಟೋ 18 2014

    ಬ್ರಾಹ್ಮಣ್ಯ ಶರಣರಲ್ಲಿ ಇಲ್ಲ, ವೀರಶೈವರಲ್ಲಿ ಇದೆ.

    ಉತ್ತರ
    • shripad
     ಆಕ್ಟೋ 18 2014

     ಓಹೋ. ಆದರೆ ಈ ಶರಣರನ್ನೂ ವೀರಶೈವರನ್ನೂ ಬೇರ್ಪಡಿಸುವುದು ಹೇಗೆ ನಾಗೇಶ್ವರಾ? ಚೆನ್ನಬಸವಣ್ಣ ಒಪ್ಪೀಯಾನೆ? ಚಿಮೂ ಒಪ್ಪೀಯಾರೆ? ಕಲಬುರ್ಗಿ ಒಪ್ಪೀಯಾರೆ? ಬ್ರಾಹ್ಮಣ್ಯ ತಮ್ಮಲ್ಲಿಲ್ಲ, ಲಿಂಗಾಯತರಲ್ಲಿಲ್ಲ, ಅವರಲ್ಲಿದೆ ಇವರಲ್ಲಿದೆ ಎನ್ನುವುದೆಲ್ಲ ಬರೆಯಲು ಎಷ್ಟು ಚೆಂದ ನೋಡಾ ನಾಗೇಶ್ವರಾ!

     ಉತ್ತರ
     • Nagshetty Shetkar
      ಆಕ್ಟೋ 18 2014

      ವೀರಶೈವರು ವೈದಿಕ ಸಂಪ್ರಾದಯವನ್ನು ಮಾನ್ಯ ಮಾಡುತ್ತಾರೆ, ಲಿನ್ಗಾಯತರದ್ದು ಸಂಪೂರ್ಣ ಅವೈದಿಕ.

      ಉತ್ತರ
      • ಗಿರೀಶ್
       ಆಕ್ಟೋ 20 2014

       ಶೆಟ್ಕರ್ ಮಹಾಶಯರೆ, ದಯವಿಟ್ಟು ವೀರಶೈವರಿಂದ ಬಸವಣ್ಣನನ್ನು ಬಿಡಿಸಿಕೊಳ್ಳಿ.

       ಉತ್ತರ
       • Nagshetty Shetkar
        ಆಕ್ಟೋ 21 2014

        ಖಂಡಿತ! ದರ್ಗಾ ಸರ್ ಅವರ ಪ್ರಯತ್ನ ಇದೇ ನಿಟ್ಟಿನಲ್ಲಿ ಸಾಗಿದೆ. ಇರುವುದೊಂದೇ ಮಾರ್ಗ – ಬಸವ ಮಾರ್ಗ. ದರ್ಗಾ ಸರ್ ಅವರ ಪ್ರಯತ್ನದಿಂದ ವೀರಶೈವರು ವೈದಿಕತೆಗೆ ತಿಲಾಂಜಲಿ ಇತ್ತು ಬಸವಮಾರ್ಗದಲ್ಲಿ ಸಾಗುತ್ತಾರೆ ಎಂಬ ನಂಬಿಕೆ ಇಟ್ಟುಕೊಳ್ಳಬಹುದು.

        ಉತ್ತರ
        • Naani
         ಆಕ್ಟೋ 21 2014

         [ಲಿನ್ಗಾಯತರದ್ದು ಸಂಪೂರ್ಣ ಅವೈದಿಕ.]

         ಈ ಅವೈದಿಕ ಲಿಂಗಾಯತಕ್ಕೆ ಸೇರಿದ ಸಮುದಾಯಗಳು ಎಲ್ಲಿದ್ದಾರೆ ಅವರು ಯಾರ್ಯಾರು ಅಂತ ಹೇಳಿ, ಹೇಳದಿದ್ರೆ ನಿಮ್ದು ಬರೀ ಬುರುಡೆ ಅಷ್ಟೆ. ಎಷ್ಟು ಸಾರಿ ಕೇಳಿದ್ರೂ ಇಂತ ಪ್ರಶ್ನೆಗಳಿಗೆ ಉತ್ತರಿಸದೆ ಇದ್ರೂ ವೀರಶೈವ ಬೇರೆ ಲಿಂಗಾಯತ ಬೇರೆ ಅಂತ ನಿಮ್ಮ ಬುರುಡೆ ಮಾತ್ರ ನಿಲ್ಲಿಸಿಲ್ಲ. ನೀವು ಹೇಳೋ ಈ ಅವೈದಿಕ ಲಿಂಗಾಯತರು ಕರ್ನಾಟಕದಲ್ಲಿ ಎಲ್ಲೆಲ್ಲಿ ಇದ್ದಾರೆ ಒಸೆ ಹೇಳಿ ಗುರುವೇ !

         ಉತ್ತರ
         • Nagshetty Shetkar
          ಆಕ್ಟೋ 21 2014

          ಲಿಂಗಾಯತರು ಕರ್ನಾಟಕದ ಎಲ್ಲಾ ಕಡೆ ಇದ್ದಾರೆ. ಅವರೆಲ್ಲರ ವಿಳಾಸ ನಿಮಗೆ ಕೊಡಲು ಸಾಧ್ಯವಿಲ್ಲ, ಕ್ಷಮಿಸಿ.

          ಉತ್ತರ
          • Naani
           ಆಕ್ಟೋ 22 2014

           Escapist 😊😃!

          • Nagshetty Shetkar
           ಆಕ್ಟೋ 23 2014

           ಸಮಾಜಘಾತುಕ ಶಕ್ತಿಗಳಿಗೆ ಲಿಂಗಾಯತರ ಹೆಸರು ವಿಳಾಸ ಕೊಟ್ಟರೆ ಆಗುವ ಅವಘಡಗಳನ್ನು ಊಹಿಸಿಕೊಳ್ಳಿ ಮಿ. ನಾಣಿ.

          • Naani
           ಆಕ್ಟೋ 23 2014

           ಓಹೊೋ ಹಾಗಾಗಿಯೇ ಯಾವ ಲಿಂಗಾಯತರೂ ನಿಮಗೆ ವಿಳಾಸ ಕೊಡಲಿಲ್ಲವೇ!!??. ಸರಿಸರಿ ನೀವೇಕೆ ಇಂತಹ ಪ್ರಶ್ನೆಗಳಿಂದ ಜಾರಿಕೊಳ್ಳುತ್ತೀರಿ ಎಂದು ಅರ್ಥವಾಯಿತು! 🙂 ! ನಿಮ್ಮ ಕಷ್ಟ ಶೀಘ್ರ ಗುಣವಾಗಲಿ! ಬೇಗ ಆ (ಲಿಂಗಾಯತವನ್ನು ಇಸ್ಲಾಮೀಕರಿಸುವ) ಸಮಾಜಘಾತಕ ಕೆಲಸಗಳನ್ನು ಬಿಟ್ಟುಬಿಡಿ ಮತ್ತೆ! 🙂

       • Nagshetty Shetkar
        ಆಕ್ಟೋ 21 2014

        “ಲಿಂಗಾಯತರೆಂದರೆ ಅಂಗದ ಮೇಲೆ ಲಿಂಗವ ಧರಿಸಿ, ಇಷ್ಟಲಿಂಗವೇ ಸರ್ವಸ್ವವೆಂದು ತಿಳಿದು ತನ್ನ ಅಂತರಂಗದ ಚಿತ್‌ ಕಳೆ ಎಂದು ಆರಾಧಿಸಿ ಪೂಜಿಸಿಕೊಳ್ಳುವವರು. ಇವರು ಏಕ ದೇವೋಪಾಸಕರು. ಅದನ್ನು ಬಿಟ್ಟರೆ ಗುಡಿ ಗುಂಡಾರ, ಮೂರ್ತಿಪೂಜೆ, ಸ್ಥಾವರ ಪೂಜೆಗಳನ್ನು ಮಾಡುವವರು ಲಿಂಗಾಯತರಲ್ಲ. ವೀರಶೈವ-ಲಿಂಗಾಯತ ಎಂದರೆ ಎರಡು ದೋಣಿಯಲ್ಲಿ ಕಾಲಿಟ್ಟಂತಾಗುತ್ತದೆ. ಆದ್ದರಿಂದ ವೀರಶೈವವೇ ಬೇರೆ ಲಿಂಗಾಯತವೇ ಬೇರೆ. ವೀರಶೈವವು ಒಂದು ಧರ್ಮವಾದರೆ, ಒಂದು ಧರ್ಮಕ್ಕೆ ಇರಬೇಕಾದ ಕನಿಷ್ಠ ತತ್ವಗಳನ್ನು ಬಲ್ಲವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ?

        1. ವೀರಶೈವ ಧರ್ಮಕ್ಕೆ ಧರ್ಮ ಗುರು ಯಾರು?
        2. ವೀರಶೈವ ಧರ್ಮದ ಭಾಷೆ ಯಾವುದು?
        3. ವೀರಶೈವ ಧರ್ಮದ ಮಂತ್ರ ಯಾವುದು?
        4. ವೀರಶೈವ ಧರ್ಮದ ಗ್ರಂಥ ಯಾವುದು?
        5. ವೀರಶೈವ ಧರ್ಮದ ಧ್ವಜ ಯಾವುದು?
        6. ವೀರಶೈವ ಧರ್ಮದ ಲಾಂಛನ ಯಾವುದು?
        7. ವೀರಶೈವ ಧರ್ಮದ ಕ್ಷೇತ್ರ ಯಾವುದು?
        8. ವೀರಶೈವ ಧರ್ಮದ ಕೇಂದ್ರ ಯಾವುದು?
        9. ವೀರಶೈವ ಧರ್ಮದ ಧ್ಯೇಯ ಏನು ?
        ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಲ್ಲಿ ವೀರಶೈವವು ಒಂದು ಧರ್ಮವಾಗಲು ಸಾಧ್ಯ. ಇಲ್ಲದಿದ್ದರೆ ಅದು ಸಪ್ತಶೈವಗಳಲ್ಲಿಯ ಒಂದು ಪ್ರಭೇದವಾಗುತ್ತದೆ. ಅಲ್ಲದೆ ಈ ವೀರಶೈವದ ಜೊತೆಗೆ ಲಿಂಗಾಯತ ಪದವನ್ನು ಬಳಸುವುದು ಎಷ್ಟು ಸೂಕ್ತ? ಏಕೆಂದರೆ ಲಿಂಗಾಯತದಲ್ಲಿ ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಲಿಂಗಾಯತ ಧರ್ಮಕ್ಕೆ,
        1. ಧರ್ಮ ಗುರು -ಜಗಜ್ಯೋತಿ ಬಸವಣ್ಣನವರು.
        2. ಧರ್ಮ ಭಾಷೆ – ಕನ್ನಡ.
        3. ಧರ್ಮ ಮಂತ್ರ – ನಮಃ ಶಿವಾಯ.
        4. ಧರ್ಮ ಗ್ರಂಥ – ವಚನ ಸಾಹಿತ್ಯ
        5. ಧರ್ಮ ಧ್ವಜ – ಷಟ್‌ಸ್ಥಲ ಧ್ವಜ.
        6. ಧರ್ಮ ಲಾಂಛನ – ಇಷ್ಟಲಿಂಗ.
        7. ಧರ್ಮ ಕ್ಷೇತ್ರ – ಕೂಡಲ ಸಂಗಮ.
        8. ಧರ್ಮ ಕೇಂದ್ರ – ಬಸವ ಕಲ್ಯಾಣ.
        9. ಧರ್ಮ ಧ್ಯೇಯ – ಕಲ್ಯಾಣ ರಾಜ್ಯ ನಿರ್ಮಾಣ.

        ಇವುಗಳನ್ನು ನಡೆಯಲ್ಲಿ ಆಚರಿಸಿಕೊಂಡು ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ (ಇವು ಮೂರು ಒಂದೇ ದೇಹದ ತನು, ಮನ, ಭಾವಗಳಾಗಿವೆ), ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದಗಳಲ್ಲಿ ಪೂಜಿಸಿಕೊಳ್ಳುವರೋ ಅವರೆಲ್ಲ (ಜಾತಿಯಲ್ಲಿ ಯಾರಾದಾರೂ ಆಗಿರಲಿ) ಲಿಂಗವಂತರಾಗುತ್ತಾರೆ. ಇಲ್ಲಿ ಜಾತಿಯು ಅಡ್ಡ ಬರುವುದಿಲ್ಲ. ಯಾವುದೇ ಜಾತಿಯಾದರೂ ಸರಿಯೇ. ಈ ತತ್ವವು ಲಿಂಗಾಯತರಲ್ಲಿದೆಯೇ ಹೊರತು ವೀರಶೈವ ಪಂಚಾಚಾರ್ಯರಲ್ಲಿಲ್ಲ. ಇಲ್ಲಿ ಪಂಚಾಚಾರ್ಯರು ಲಿಂಗಾಯತರಲ್ಲಿ ಪಂಚಾಚಾರದ ಬದಲಿಗೆ ಪಂಚಾಚಾರ್ಯವೆಂದು ತಪ್ಪು ತಿಳಿವಳಿಕೆಯನ್ನು ನೀಡುತ್ತಾ ನಾವೇ ನಿಮ್ಮ ಗುರುಗಳು, ನೀವೇ ನಮ್ಮ ಶಿಷ್ಯರು, ನಮ್ಮ ಸೇವೆಯನ್ನು ಮಾಡಿದರೆ ನಿಮಗೆ ಮುಕ್ತಿ ಸಿಗುವುದು, ಗುರು ಮುಟ್ಟಿದ್ದು ಗುಡ್ಡ ಎಂದು ಮುಗ್ಧ ಲಿಂಗಾಯತರಲ್ಲಿ ನೂರಾರು ವರ್ಷಗಳಿಂದ ತಪ್ಪು ತಿಳಿವಳಿಕೆ ಬಿತ್ತುತ್ತ ಬಂದಿರುತ್ತಾರೆ. ಸತ್ಯವು ಎಂದಾದರೊಂದು ದಿನ ಬಯಲಾಗಲೇಬೇಕು. ಆದ್ದರಿಂದ ಲಿಂಗಾಯತ ಬಾಂಧವರು ಪಂಚಾಚಾರ್ಯ ಹಾಗೂ ಪಂಚಾಚಾರದ ನಡುವಿನ ವ್ಯತ್ಯಾಸವನ್ನು ಮೊದಲು ಅರಿಯಬೇಕು. ಇವುಗಳ ವ್ಯತ್ಯಾಸವನ್ನು ಮುಗ್ಧ ಜನರಿಗೆ ತಿಳಿಸುವ ಕಾರ್ಯವನ್ನು ಲಿಂಗಾಯತ ಪೀಠದ ಪ್ರಥಮ, ದ್ವಿತೀಯ, ತೃತೀಯ ಹೀಗೆ ಜಗದ್ಗುರುಗಳು ಎಂದು ಹೇಳಿಕೊಳ್ಳುವ ಪೀಠಾಧ್ಯಕ್ಷರು ಮಾಡಬೇಕಲ್ಲದೆ ತಾವೇ ಸ್ವತಃ ವೀರಶೈವರೆಂದು ಹೇಳಿಕೊಳ್ಳುವ ಶೋಚನೀಯ ಸ್ಥಿತಿ ನಮ್ಮ ಸಮಾಜದಲ್ಲಿ ಒದಗಿ ಬಂದಿರುವುದು ಲಿಂಗಾಯತರ ದುರ್ದೈವವೇ ಸರಿ.

        ಬಸವಣ್ಣನವರೇ ನಿಜವಾದ ಗುರುವೆಂಬ ಸತ್ಯವನ್ನು ಮತ್ತು ವಿಶ್ವಗುರು ಬಸವಣ್ಣನವರಲ್ಲದೇ ಮತ್ತಾರೂ ಲಿಂಗಾಯತಕ್ಕೆ ಗುರುವಿಲ್ಲವೆಂಬ ಸತ್ಯವನ್ನು ಲಿಂಗಾಯತರು ಅರಿಯಬೇಕಾಗಿದೆ. ಬಸವ ಧರ್ಮದಲ್ಲಿ ಗುರು ಮುಟ್ಟಿ ಗುರುವಾಗುವ ಹಾಗೆ ವೀರಶೈವ ಪಂಚಾಚಾರ್ಯರಲ್ಲಿ ಗುರುವು ಗುರುವಾಗೇ ಇರುವರು, ಶಿಷ್ಯರು ಶಿಷ್ಯರಾಗೇ ಇರುವರು. ವೀರಶೈವ ಪಂಚಾಚಾರ್ಯರೆಂದರೆ ಪಂಚ ಪೀಠಾಧೀಶರು.

        1.ರೇಣುಕಾಚಾರ್ಯರು- ರಂಭಾಪುರಿ ಪೀಠ.
        2.ಮರುಳಾರಾಧ್ಯರು- ಉಜ್ಜನಿ ಪೀಠ.
        3.ಮಲ್ಲಿಕಾರ್ಜುನ ಪಂಡಿತಾರಾಧ್ಯ- ಶ್ರೀಶೈಲ ಪೀಠ.
        4.ಏಕೋರಾಮಾರಾಧ್ಯ- ಕೇದಾರ ಪೀಠ.
        5.ಕಾಶಿ ವಿಶ್ವಾರಾಧ್ಯರು- ಕಾಶಿ ಪೀಠ.

        ಇವರುಗಳಿಂದಲೇ ವೀರಶೈವ ಧರ್ಮವು ಹುಟ್ಟಿತೆಂದು ಇವರೇ ಅದಕ್ಕೆ ವಾರಸುದಾರರೆಂದು ಇವರೇ ಜಗದ್ಗುರುಗಳೆಂದು ಹೇಳಿಕೊಳ್ಳುತ್ತಾರೆ. ದೇವಸ್ಥಾನ ಕಟ್ಟಿಸಲು, ಜೀರ್ಣೋದ್ಧಾರ ಮಾಡಲು, ಯಾಗ ಯಜ್ಞ ಹೋಮ ರುದ್ರಾಭಿಷೇಕ ಮಾಡಲು, ಅಡ್ಡಪಲ್ಲಕ್ಕಿ ಮಹೋತ್ಸವ ಪೂರ್ಣಕುಂಭ ಮಾಡಲು, ಪುರಾಣ ಹೇಳಿಸಲು, ಹಬ್ಬ ಹರಿದಿನಗಳನ್ನು ಮಾಡಲು, ತಮ್ಮ ಸಕಲ ಸವಲತ್ತುಗಳನ್ನು ಪಡೆಯಲು ಈ ಮಠಗಳಿಗೆ ಲಿಂಗಾಯತರಿಂದ ಕಾಣಿಕೆ, ದೇಣಿಗೆ ರೂಪದಲ್ಲಿ ಹಣ ದವಸ ಧಾನ್ಯ ಬೇಕು. ಆದರೆ ಲಿಂಗಾಯತರನ್ನು ತಮಗೆ ಸಮಾನವಾಗಿ ಕಾಣಲು ಇವರು ಒಪ್ಪುವುದಿಲ್ಲ. ಇರುವುದೊಂದು ಜಗತ್ತಿಗೆ ಎಷ್ಟು ಜಗದ್ಗುರುಗಳು? ಹಾಗೇನಾದರೂ ಜಗತ್ತಿಗೆ ಗುರು ಎನಿಸಿಕೊಂಡವರೆಂದರೆ ಭಕ್ತಿ ಭಂಡಾರಿ, ಜಗಜ್ಯೋತಿ ವಿಶ್ವಗುರು ಬಸವಣ್ಣನವರನ್ನು ಬಿಟ್ಟರೆ ಮತ್ತಾರೂ ಇರಲಾರರು. ಬಸವಣ್ಣನವರು ಸರ್ವಸಮಾನತೆಯ ಸಂಕೇತವಾಗಿ ಇಷ್ಟಲಿಂಗವನ್ನು ನೀಡಿದ ಅರಿವೇ ಗುರು, ದೇಹವೇ ದೇಗುಲ, ಕಾಯಕವೇ ಕೈಲಾಸ, ಕಾಯಕವೇ ಪೂಜೆ, ಸತ್ಯ ಶುದ್ಧ ಕಾಯಕವನ್ನು ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೇ ಮಾಡಿ ಬಂದುದರಲ್ಲಿ ತಾನುಂಡು ಉಳಿದುದ ಜಂಗಮ ದಾಸೋಹಕ್ಕೆಂದು ಮೀಸಲಿಡುವ ತತ್ವವನ್ನು ತಿಳಿಸಿಕೊಟ್ಟು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಮಹಾಗುರು. ಅವರ ಧರ್ಮೀಯರಾದ ಲಿಂಗಾಯತರೆಲ್ಲಿ, ವೇದ, ಶಾಸ್ತ್ರ, ಆಗಮ, ಉಪನಿಷತ್‌, ಪುರಾಣಗಳನ್ನು ಆಧಾರವಾಗಿಟ್ಟುಕೊಂಡು ಪಂಚಾಂಗ, ತಿಥಿ, ವಾರ, ನಕ್ಷತ್ರ, ಶಾಸ್ತ್ರ, ಗುಡಿ-ಗುಂಡಾರಗಳಿಗೆ ನಡೆದುಕೊಳ್ಳುವ ವೀರಶೈವರೆಲ್ಲಿ?

        ಲಿಂಗಾಯತರೆಂದರೆ ಯಾರು ಅಂಗದ ಮೇಲೆ ಲಿಂಗವ ಧರಿಸಿ, ಇಷ್ಟಲಿಂಗವೇ ಸರ್ವಸ್ವವೆಂದು ತಿಳಿದು ತನ್ನ ಅಂತರಂಗದ ಚಿತ್‌ ಕಳೆ ಎಂದು ಆರಾಧಿಸಿ ಪೂಜಿಸಿಕೊಳ್ಳುವರೋ ಅವರು. ಇವರು ಏಕ ದೇವೋಪಾಸಕರು. ಅದನ್ನು ಬಿಟ್ಟರೆ ಗುಡಿ ಗುಂಡಾರ, ಮೂರ್ತಿಪೂಜೆ, ಸ್ಥಾವರ ಪೂಜೆಗಳನ್ನು ಮಾಡುವವರು ಲಿಂಗಾಯತರಲ್ಲ. ವೀರಶೈವ-ಲಿಂಗಾಯತ ಎಂದರೆ ಎರಡು ದೋಣಿಯಲ್ಲಿ ಕಾಲಿಟ್ಟಂತಾಗುತ್ತದೆ. ಆದ್ದರಿಂದ ವೀರಶೈವವೇ ಬೇರೆ ಲಿಂಗಾಯತವೇ ಬೇರೆ. ಇದನ್ನರಿತು ವೀರಶೈವರು ವೀರಶೈವರಾಗೇ ಇದ್ದು ಲಿಂಗಾಯತರನ್ನು ಲಿಂಗಾಯತರನ್ನಾಗಿಯೇ ಬಿಡುವುದೊಳ್ಳೆಯದು.

        ಬಸವ ಗುರುವಿನ ಹೆಸರ ಬಲ್ಲವರಾರಿಲ್ಲ?
        ಹುಸಿ ಮಾತನಾಡಿ ಕೆಡದಿರಿ, ಲಿಂಗಾಯತಕೆ
        ಬಸವನೇ ಕತೃì ಸರ್ವಜ್ಞ
        ಈ ಸತ್ಯವನ್ನರಿತು ಲಿಂಗಾಯತ ಧರ್ಮೀಯರು ವೀರಶೈವದ ಅಂಟನ್ನು ಅಂಟಿಸಿಕೊಳ್ಳದೇ ಲಿಂಗಾಯತ ಧರ್ಮೀಯರಾಗೇ ಉಳಿದರೆ ಲಿಂಗಾಯತ ಧರ್ಮವನ್ನುಳಿಸಿದಂತಾಗುತ್ತದೆ, ಬೆಳೆಸಿದಂತಾಗುತ್ತದೆ.

        *ಯೋಗ ಗುರು ವಿಶ್ವನಾಥ ಹ.ನಿ.
        ದಾವಣಗೆರೆ “

        ಉತ್ತರ
        • ರಂಜನಾ ರಾಮ್ ದುರ್ಗ
         ಆಕ್ಟೋ 21 2014

         ಸಹೋದರ್ ಶೆಟ್ಕರ್,

         ಲಿಂಗಾಯಿತರಲ್ಲಿ ಜಾತಿಗಳಿಲ್ಲವೆನ್ನುವುದು ಕೇಳಿ ನಾನು ತಲೆಯ ಮೇಲೆ ಕೈಯಿಟ್ಟುಕೊಂಡಿದ್ದೇನೆ.ಕರ್ನಾಟಕ ಸರ್ಕಾರದ ಜಾತಿ ವರ್ಗೀಕರಣದಲ್ಲಿ ಸರಿ ಸುಮಾರು ೫೦ ಜಾತಿಗಳನ್ನು ಲಿಂಗಾಯಿತರಲ್ಲಿ ಪಟ್ಟಿಮಾಡಿರುವುದು ತಮಗೇ ತಿಳಿದಿದೆಯೇ

         ಉತ್ತರ
         • Nagshetty Shetkar
          ಆಕ್ಟೋ 21 2014

          ಈ ಜಾತಿಗಳಿರುವುದು ವೀರಶೈವರಲ್ಲಿ, ಲಿಂಗಾಯತರಲ್ಲಲ್ಲ!

          ಉತ್ತರ
          • ರಂಜನಾ ರಾಮ್ ದುರ್ಗ
           ಆಕ್ಟೋ 21 2014

           ಅಯ್ಯೋ ಹೌದೇನು!ಎಂಥಾ ಅಚಾತುರ್ಯವಾಗುತ್ತಿದೆ ನೋಡಿ ಸಹೋದರರೇ.ಸರ್ಕಾರಿ ದಾಖಲೆಯಲ್ಲೇ ಹೀಗೆ ಇರುವುದು ಸರಿಯಲ್ಲವಷ್ಟೇ

          • Nagshetty Shetkar
           ಆಕ್ಟೋ 21 2014

           ತಂಗಿ, ನಿನ್ನ ಅಸಲಿ ಹೆಸರು ಏನು? ನಿನ್ನದು ಯಾವ ವೈದಿಕ ಮಠ?

          • ರಂಜನಾ ರಾಮ್ ದುರ್ಗ
           ಆಕ್ಟೋ 21 2014

           ನನ್ನ ಹೆಸರು ರಂಜನಾ ರಾಮ್ ದುರ್ಗ ಎಂಬುದಾಗಿದೆ ಸಹೋದರರೇ.ನಾನು ಮಠಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿಲ್ಲ.ಓಶೋ ನನಗೆ ಸ್ಪೂರ್ತಿಯಾಗಿದ್ದಾನೆ

          • Nagshetty Shetkar
           ಆಕ್ಟೋ 21 2014

           ತಂಗಿ, ನೀನು ಸತ್ಯವನ್ನೇ ಹೇಳುತ್ತಿದ್ದಿ ಎಂದು ಭಾವಿಸುತ್ತೇನೆ. ನಿನಗೆ ಒಳ್ಳೆಯದಾಗಲಿ.

 3. shripad
  ಆಕ್ಟೋ 18 2014

  “ಹಾಡಿ ಮಾಡುವರೆಲ್ಲ ಹಾದರಗಿತ್ತಿಯ ಮಕ್ಕಳಯ್ಯಾ,
  ಕೂಡಿ ಮಾಡುವರೆಲ್ಲ ಕುಂಟಣಿಗಿತ್ತಿಯ ಮಕ್ಕಳಯ್ಯಾ,
  ಬೇಡಿ ಮಾಡುವರೆಲ್ಲ ಬೇಡಿತಿಯ ಮಕ್ಕಳಯ್ಯಾ,
  ಡಂಬಕತನದಲ್ಲಿ ಮಾಡುವರೆಲ್ಲ ಡೊಂಬಗಿತ್ತಿಯ ಮಕ್ಕಳಯ್ಯಾ,
  ಅಚ್ಚ ಪ್ರಸಾದಿಗಳೆಂಬವರೆಲ್ಲ ಮುಚ್ಚಗಿತ್ತಿ[ಮಾದಗಿತ್ತಿ ?]ಯ ಮಕ್ಕಳಯ್ಯಾ,
  ಸಮಯಾಚಾರದಲ್ಲಿಪ್ಪವರೆಲ್ಲ ಸಮ್ಮಗಾರಿಯ ಮಕ್ಕಳಯ್ಯಾ,
  ಜಂಗಮ ಬಂದ ಬರವ, ನಿಂದ ನಿಲುಕಡೆಯ ನೋಡಿ,
  ಮಾಡಿ ನೀಡಿ ಸ್ವಯಾನುಭಾವದ ಸಮ್ಯಗ್‍ಜ್ಞಾನವನರಿವವರು
  ಕೂಡಲಚೆನ್ನಸಂಗನ ಶರಣರಯ್ಯಾ” (ಸಮಗ್ರ ವಚನ ಸಂಪುಟ ೩)
  -ಇಲ್ಲಿ ಶ್ರೇಣಿಯೇ ಇಲ್ಲ ನೋಡಿ!?

  ಉತ್ತರ
  • Nagshetty Shetkar
   ಆಕ್ಟೋ 18 2014

   ವಿಪ್ರರ ಮಕ್ಕಳು ಶ್ರೇಷ್ಠ, ಹಾದರಗಿತ್ತಿಯ ಮಕ್ಕಳು ಕನಿಷ್ಠ, ಕುಂಟನಗಿತ್ತಿಯ ಮಕ್ಕಳು ಕನಿಷ್ಠ, ಬೇಡಿತಿಯ ಮಕ್ಕಳು ಕನಿಷ್ಠ, ಡೊಂಬಗಿತ್ತಿಯ ಮಕ್ಕಳು ಕನಿಷ್ಠ, ಮುಚ್ಚಗಿತ್ತಿಯ ಮಕ್ಕಳು ಕನಿಷ್ಠ, ಸಮಗಾರಿಯ ಮಕ್ಕಳು ಕನಿಷ್ಠ ಎಂಬ ಶ್ರೇಣೀಕೃತ ಸಮಾಜದ ನಿಯಮಗಳನ್ನು ವ್ಯಂಗ್ಯವಾಡಲು ಅಣ್ಣ ಬಸವಣ್ಣ ಮೇಲಿನ ವಚನ ರಚಿಸಿದ್ದಾರೆ. ಹಾದರಗಿತ್ತಿ ಆದಿಯಾಗಿ ಸಮಾಜದ ಕೆಳಸ್ಥರದ ಜನರ ಪರವಾಗಿ ಧ್ವನಿ ತೆಗೆದಿದ್ದಾರೆ. ಹಾದರಗಿತ್ತಿಯ ಮಕ್ಕಳೆಂದು ಅವಹೇಳನ ಮಾಡುವ ಮೇಲ್ಜಾತಿಯ ಜನರಿಗೆ ನೀವು ಹಾಡಿ ಮಾಡುವವರು ನೀವೇ ಹಾದರಗಿತ್ತಿಯ ಮಕ್ಕಳು ಎಂದು ವ್ಯಂಗ್ಯ ಮಾಡಿದ್ದಾರೆ. ಹಾದರಗಿತ್ತಿಯ ಮಕ್ಕಳಾಗಲಿ ಬೇಡಿತಿಯ ಮಕ್ಕಳಾಗಲಿ ಶರಣರಲ್ಲಿ ಯಾವ ಭೇದವೂ ಇಲ್ಲ. ಅನುಭವ ಮಂಟಪದಲ್ಲಿ ಜಾತೀಯತೆಗೆ ಅವಕಾಶವಿಲ್ಲ.

   ಉತ್ತರ
   • shripad
    ಆಕ್ಟೋ 18 2014

    ವಾವ್ಹ್ ತಮ್ಮ ವಚನ ತಿಳಿವಳಿಕೆ ನಿಜಕ್ಕೂ ದಿವ್ಯವಾಗಿದೆ ಸಾಹೇಬ್ರೇ. ಜಾಣರು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಲ್ಲರು! ನಿಮ್ಮ ವ್ಯಾಖ್ಯೆ ಏನೇ ಇರಲಿ ಪಠ್ಯ ಏನು ಹೇಳುತ್ತಿದೆಯೋ ಅದನ್ನಷ್ಟೇ ಹೇಳಿ. ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾನೆ ಎಂದು ಬೊಗಳೆ ಬಿಡುವವರಂತೆ ಆಗದಿರಿ. ಅಂದ ಹಾಗೆ ಇದು ಬಸವಣ್ಣನ ವಚನವಲ್ಲ.

    ಉತ್ತರ
    • ಆಕ್ಟೋ 18 2014

     ನಮ್ಮಂತ ಪೆದ್ದರಿಗೆ ವಚನಗಳು ಸರಿಯಾಗಿ ಅರ್ಥವಾಗುವುದಿಲ್ಲ. ತಾವು ಕರುಣೆಯಿಟ್ಟು ಬರೀ ವಚನಗಳನ್ನು ಮಾತ್ರ ಉಲ್ಲೇಖಿಸದೇ ತಮಗೆ ಅರ್ಥವಾಗಿರುವುದನ್ನೂ ನಮಗೆ ತಿಳಿಸಿಕೊಟ್ಟರೆ ನಾವೂ ಕೂಡ ತಮ್ಮಂತೆ ಆಗುತ್ತೇವೆ.ಕನಿಷ್ಟ ಈ ಮೇಲಿನ ವಚನದ ಅರ್ಥವನ್ನಾದರೂ ವಿವರಿಸಿ ದಯೆ ತೋರಿ

     ಉತ್ತರ
    • Nagshetty Shetkar
     ಆಕ್ಟೋ 18 2014

     ಮಿ. ಭಟ್, ಮೇಲಿನ ವಚನ ಏನು ಹೇಳುತ್ತಿದೆ ಎಂಬುದನ್ನೇ ನಾನು ನಿಮಗೆ ಹೇಳಿದ್ದೇನೆ. ವಾಟ್ ಈಸ್ ರಾಂಗ್ ವಿಥ್ ಯೂ??

     ಉತ್ತರ
 4. vasudeva
  ಆಕ್ಟೋ 18 2014

  ಚರಂಡಿ ಸ್ವಚ್ಛಗೊಳಿಸಲು ಬಂದಿದ್ದವನನ್ನು ಮಾನವೀಯತೆಯಿಂದ ನಡೆಸಿಕೊಂಡ ಲೇಖಕರ ವರ್ತನೆ ನಿಜಕ್ಕೂ ಸ್ತುತ್ಯರ್ಹ. ಈ ಶ್ರೇಣೀಕರಣವನ್ನು ತೊಲಗಿಸಲೆಂದೇ ಗಾಂಧಿ ಸೇವಾಗ್ರಾಮದ ಕಲ್ಪನೆ ನೀಡಿದರು. ಸೇವಾಗ್ರಾಮದಲ್ಲಿ ಕಾಂಗ್ರೇಸ್ ಧುರೀಣನೆನಿಸಿಕೊಂಡವನೂ ಶೌಚಾಲಯವನ್ನು ಶುಚಿಗೊಳಿಸಬೇಕಾದುದು ಕಡ್ಡಾಯವಾಗಿತ್ತು (ಆದರೆ ಈಗ ಗಾಂಧಿಯ ಆದರ್ಶವನ್ನು ಪಾಲಿಸುವ ಗೊಡವೆಗೆ ಯಾವ ಸಮಾಜ ಸೇವಕನೂ ಹೋಗುವುದಿಲ್ಲ ಎಂಬುದು ಬೇರೆಯ ಮಾತು). ನಮ್ಮಲ್ಲಿ ಜಾತಿಗಳಿವೆಯೇ ವಿನಃ ಜಾತಿ ವ್ಯವಸ್ಥೆ ಇಲ್ಲ ಎಂದು ಬಾಲು ಅಭಿಪ್ರಾಯ ಪಡುತ್ತಾರೆ. ಅದು ವ್ಯವಸ್ಥೆಗೊಂಡಿಲ್ಲದ ಕಾರಣದಿಂದ ಇಂದು ಯಾವುದನ್ನು ಹೇಗೆ ಬೇಕಾದರೂ ಅರ್ಥೈಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಗೊಂದಲಮಯ ಸನ್ನಿವೇಶ ನಿರ್ಮಾಣವಾಗಬಾರದೆಂದು ಸ್ವಾತಂತ್ರ್ಯ ಬಂದ ನಂತರ ಜಾತಿಗಳನ್ನು ವ್ಯವಸ್ಥೀಕರಿಸಿ ಗೊಂದಲವನ್ನು ನಿವಾರಿಸುವ ಪ್ರಯತ್ನ ನಡೆದುದುಂಟು. (ಸಾ.ಅ., ಪ್ರವರ್ಗ, ೧, ೧ಎ, ೨,.. ಪ.ಜಾ., ಪ.ಪಂ., ಇತ್ಯಾದಿ.). ಆದರೆ ಅದೂ ಫಲಕೊಡಲಿಲ್ಲ. (ಇನ್ನು ಮೀಸಲಾತಿಯ ಸಾಧಕ ಬಾಧಕಗಳ, ಉಚಿತಾನುಚಿತತೆಗಳ ಚರ್ಚೆ ಇಲ್ಲಿ ಅಪ್ರಸ್ತುತ).
  ಆದರೆ ಶ್ರೇಣೀಕರಣ, ಜಾತೀಯತೆ, ಅಸ್ಪೃಶ್ಯತೆ ಎಲ್ಲವನ್ನೂ ಪ್ರಸ್ತಾಪಿಸುತ್ತ ಲೇಖಕರು ನಿಜಕ್ಕೂ ಏನನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತಿರುವರೋ ಅರ್ಥವಾಗುತ್ತಿಲ್ಲ.
  “ಇನ್ನು ಅಸ್ಪೃಶ್ಯತೆ ಇದೆಯೆ? ಎಲ್ಲಿದೆ ಹೇಗಿದೆ? ಇದು ಹೊರಜಗತ್ತಿನ ಅಸ್ಪೃಶ್ಯತೆಗೆ ಸಮವಾಗಿಲ್ಲದಿದ್ದರೂ ಅದರ ಪಳೆಯುಳಿಕೆ ಇದೆ. ಇಲ್ಲಿನ ಅಧಿಕಾರಿ ಸಂಘಗಳಿಗೆ ನೌಕರರಿಗೆ ಪ್ರವೇಶವಿಲ್ಲ. ಅಧಿಕಾರಿಗಳ ಸಭೆಗಳಿಗೆ ಭೋಜನಾಲಯಗಳಿಗೆ ಶೌಚಾಲಯಗಳಿಗೆ ನೌಕರರಿಗೆ ಪ್ರವೇಶವಿಲ್ಲ.
  ಇದೆಲ್ಲದರಲ್ಲೂ ನೀವು ಜಾತಿ ಪದ್ದತಿ ಇದೆಯೆ ಎಂದು ಕೇಳಿದರೆ ಇಲ್ಲ ಮತ್ತು ಇದೆ ಎಂದು ಹೇಳಬಹುದು ಮತ್ತು ಇಲ್ಲ ಮತ್ತು ಇದೆಯೆನ್ನುವುದನ್ನು ಸ್ಟಿರಿಯೋ ಟೈಪ್ ವಾದಗಳ ಮೂಲಕ ಸಾಧಿಸಿ ತೋರಿಸಬಹುದು. ಆದರೆ ಸ್ಪಷ್ಠವಾಗಿ ಹೇಳಬೇಕೆಂದರೆ ಇಲ್ಲಿ ಜಾತಿ ಪದ್ದತಿ ಇಲ್ಲ ಆಚರಣೆಯೂ ಇಲ್ಲ”.
  ಏನು ಹೀಗೆಂದರೆ? ಕೇಡೆಂಬುದಿದೆ ಆದರೆ ಅದು ವ್ಯವಸ್ಥಿತ ರೂಪದಲ್ಲಿಲ್ಲ ಎಂದೇ? ಅಥವಾ ಕೇಡೆಂಬುದಿದೆ ಆದರೆ ಅದಕ್ಕೆ ಯಾರೂ ಹೊಣೆಯಲ್ಲ ಎಂದೇ? ಅಥವಾ ನಮ್ಮ ವ್ಯವಸ್ಥೆಯಲ್ಲಿ ಕೇಡು ಅನಿವಾರ್ಯ ಎಂದೇ? ಅಥವಾ ಕೇಡು ಕೇಡೇ ಅಲ್ಲ ಎಂದೇ..

  ಉತ್ತರ
  • ಪ್ರಸನ್ನ
   ಆಕ್ಟೋ 20 2014

   ವಸುದೇವ ಅವರೆ, ಲೇಖನದ ಉದ್ದೇಶ ಏನೆಂಬುದನ್ನು ಮೊದಲ ಮೂರ್ನಾಲ್ಕು ಪ್ಯಾರಾಗಳಲ್ಲಿ ಹೇಳಿದ್ದೇನೆ. ಧರ್ಮದಿಂದ ಜಾತಿಗಳು ಅಥವ ಯಾರೋ ಒಬ್ಬ ವ್ಯಕ್ತಿಯಿಂದ ಅಥವ ಒಂದು ಜನಾಂಗದಿಂದ ಸಮೂಹದಿಂದ ಜಾತಿ ಎನ್ನುವುದು ಹುಟ್ಟುಹಾಕಲು ಆಚರಿಸಲು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಉದಾಹರಣೆಯಾಗಿ ೨೦ ನೇ ಶತಮಾನದಲ್ಲಿ ಸಂವಿಧಾನದ ಪ್ರಕಾರವೇ ಸ್ಥಾಪಿತಗೊಂಡ ಉದ್ದಿಮೆಗಳೂ ಹೊರತಲ್ಲ ಎನ್ನುವುದನ್ನು ಹೇಳಿದ್ದೇನೆ.

   ಉತ್ತರ
 5. ಮಾರ್ಕ್ಸ್ ಮಂಜು
  ಆಕ್ಟೋ 20 2014

  ಬೂರ್ಜ್ವಾ ಚರ್ಚೆ ಬಿಟ್ಟು ಮಹರ್ಷಿ ಮಾರ್ಕ್ಸ್ ಸನ್ನಿಧಾನಕ್ಕೆ ಶರಣು ಬನ್ನಿ ಮಿ.ಪ್ರಸನ್ನ ಬೆಂಗಳೂರು ಸರ್ವ ಸಮಾನತೆಯ ಸಮಾಜ ಕಟ್ಟೋಣ

  ಉತ್ತರ
  • Nagshetty Shetkar
   ಆಕ್ಟೋ 20 2014

   “ಸರ್ವ ಸಮಾನತೆಯ ಸಮಾಜ ಕಟ್ಟೋಣ”

   +1

   ಉತ್ತರ
  • ಪ್ರಸನ್ನ
   ಆಕ್ಟೋ 21 2014

   ಮಾರ್ಕ್ಸ್ ಮಂಜು ಸರ್ವ ಸಮಾನತೆಯ ಸಮಾಜವನ್ನು ಅಥವ ಅಂತಹ ಕಾಲ್ಪನಿಕ ಸಮಾಜವನ್ನು ತೋರಿಸಿ ಖಂಡಿತ ಕಟ್ಟೋಣ.

   ಉತ್ತರ
   • ಮಾರ್ಕ್ಸ್ ಮಂಜು
    ಆಕ್ಟೋ 21 2014

    ಸೋವಿಯತ್ ಒಕ್ಕೂಟದಲ್ಲಿ ಅದು ಇತ್ತು ಮಿ.ಪ್ರಸನ್ನ.ಕ್ರುಶ್ಚೇವ್ ತರುವಾಯ ಬಂಡವಾಳಶಾಹಿಗಳ ನಿರಂತರ ಪಿತೂರಿಯಿಂದ ಈಗ ಬದಲಾಗಿದೆ.ಆದರೆ ಮಹರ್ಷಿ ಮಾರ್ಕ್ಸ್ ವಾದವೂ ಮತ್ತೆ ಧೂಳಿನಿಂದ ಎದ್ದು ಬರುತ್ತದೆ.ಆಗ ಸರ್ವ ಸಮಾನತೆಯ ಸಮಾಜವು ಮತ್ತೆ ನಿರ್ಮಾಣವಾಗುತ್ತದೆಯೆನ್ನಬಹುದಾಗಿದೆ.

    ಉತ್ತರ
    • Nagshetty Shetkar
     ಆಕ್ಟೋ 21 2014

     “ಮಾರ್ಕ್ಸ್ ವಾದವೂ ಮತ್ತೆ ಧೂಳಿನಿಂದ ಎದ್ದು ಬರುತ್ತದೆ”

     ಅಂದರೆ ನಿಮ್ಮ ಪ್ರಕಾರ ಮಾರ್ಕ್ಸ್ ವಾದ ಸದ್ಯಕ್ಕೆ ಧೂಳೀಪಟವಾಗಿದೆ ಅಂತ ಆಯಿತು! ಆಹಾ! ನಿಮ್ಮಂತಹ ಮೂರಕ್ಸ್ ಮಂಜು ಅನ್ನು ನಾನು ಬೇರೆಲ್ಲೂ ನೋಡಿಲ್ಲ!

     ಮಿ. ಮಂಜು, ಮಾರ್ಕ್ಸ್ ವಾದ ಧೂಳೀಪಟವೂ ಆಗಿಲ್ಲ, ಮಾರ್ಕ್ಸ್ ವಾದಕ್ಕೆ ಧೂಳೂ ಹಿಡಿದಿಲ್ಲ. ನಿಮ್ಮಂತಹ ನಕಲಿ ಶ್ಯಾಮರ ಕಣ್ಣಿಗೆ ಧೂಳು ಬಿದ್ದಿದೆ, ಅಷ್ಟೇ.

     ಉತ್ತರ
     • ಮಾರ್ಕ್ಸ್ ಮಂಜು
      ಆಕ್ಟೋ 22 2014

      ನಿಮ್ಮನ್ನು ಶೆಟ್ಕರ್ ಎಂದು ಕರೆಯುವ ಬದಲು “ಕೆಟ್ಕರ್” ಎಂದು ಕರೆಯುವುದು ಸರಿಯಾದುದಾಗಿದೆ ಮಿ.ಶೆಟ್ಕರ್.ವೈದಿಕರಂತೆ ಗತವೈಭವದ ಮೆಲುಕು ಹಾಕುವ ನೀವೊಬ್ಬರು ಮಾರ್ಕ್ಸ್ ವಿರೋಧಿಯೆನ್ನುವುದು ವಿಧಿತವಾಗಿದೆ.ನಿಮ್ಮ ಧೋರಣೆಯೂ ಬೇರೆ ಯಾವುದೋ ವಾದದ ಮೇಲೆ ಕೇಂದ್ರಿಕೃತವಾಗಿದೆ

      ಉತ್ತರ
   • Nagshetty Shetkar
    ಆಕ್ಟೋ 21 2014

    ಕ್ಯಾಸ್ಟ್ರೋ ನೇತೃತ್ವದ ಕ್ಯೂಬಾ ಸಮಾಜ.

    ಉತ್ತರ
 6. Nagshetty Shetkar
  ಆಕ್ಟೋ 23 2014

  ಚರಂಡಿ ಚೊಕ್ಕ ಮಾಡುವುದು ವೇದಮಂತ್ರಗಳನ್ನು ಪಠಿಸುವಷ್ಟು ಸುಲಭವಲ್ಲ. ಪುರೋಹಿತಶಾಹಿಗಳಿಗೆ ಚರಂಡಿ ತುಂಬುವುದಷ್ಟೇ ಗೊತ್ತು, ಚೊಕ್ಕ ಮಾಡಿ ಅಭ್ಯಾಸವಿಲ್ಲ.

  ಉತ್ತರ
 7. ರವಿರಾಮ
  ಆಕ್ಟೋ 28 2014

  ಕಾರ್ಲ್ ಮಾರ್ಕ್ಸ್ ಮತ್ತೆ ಧೂಳಿನಿಂದ ಎದ್ದು ಬಂದು ಶೇಟ್ಕರ್ ರವರ ಎದೆಗೆ ಒದೆಯಲಿದ್ದಾನೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

Note: HTML is allowed. Your email address will never be published.

Subscribe to comments