ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 19, 2014

ಇತಿಹಾಸದಿಂದ ಏನನ್ನೂ ಕಲಿಯಲು ಸಿದ್ಧರಾಗಿದ್ದಲ್ಲಿ,ಮರುಕಳಿಸುವ ಇತಿಹಾಸವನ್ನೇ ನೋಡಬೇಕಾಗುತ್ತದೆ

‍ನಿಲುಮೆ ಮೂಲಕ

 – ಮಯೂರಲಕ್ಷ್ಮಿ

ಇತಿಹಾಸಜಾರ್ಜ ಸಂತಾಯನ ಎನ್ನುವ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ಇತಿಹಾಸವನ್ನು ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾನೆ.

ಒಂದು ದೇಶದ ಸಂಸ್ಕೃತಿಯ ದ್ಯೋತಕ ಅದರ ಪರಂಪರೆ ಧ್ಯೇಯ ನಿಷ್ಠೆ ಮತ್ತು ಅದರ ಇತಿಹಾಸವನ್ನೂ ಅವಲಂಬಿಸಿದೆ.

ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶಗಳು ಸುಭಿಕ್ಷವಾಗುವುದು ತನ್ನಲ್ಲಿ ಅಂತರ್ಗತವಾಗಿರುವ ಐತಿಹಾಸಿಕ ಮೌಲ್ಯಗಳ ಜಾಗೃತಿಯಿಂದ ಮಾತ್ರ.

ತಮ್ಮ ಅಸಾಧಾರಣ ಇಚ್ಛಾಶಕ್ತಿಯಿಂದ ಅಪರಿಮಿತ ಸಂಕಲ್ಪಶಕ್ತಿಯಿಂದ ಇತಿಹಾಸವನ್ನೇ ನಿರ್ಮಿಸಿದವರ ಸಂಖ್ಯೆ ಅತ್ಯಾಧಿಕ. ಇಂತಹ ಇತಿಹಾಸದ ಅರಿವು ಶಿಕ್ಷಣದಿಂದ ಮಾತ್ರ ಸಾಧ್ಯವೇ? ಹಾಗಿದ್ದಲ್ಲಿ ಇತಿಹಾಸವನ್ನು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಇತಿಹಾಸ ಇರಬೇಕೋ ಅಥವಾ ಐಚ್ಛಿಕವಾಗಿ ಕಲಿಯಬೇಕೋ ಎನ್ನುವ ಪ್ರಶ್ನೆ ಮೂಡುವುದು.

ಒಂದು ವ್ಯವಸ್ಥೆಯಲ್ಲಿ ಸಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಇತಿಮಿತಿಗಳನ್ನರಿತು ಅವಲೋಕಿಸಿದಾಗ ನಮ್ಮ ಮುಂದಿನ ದೇಶದ ರೂವಾರಿಗಳಾದ ಇಂದಿನ ಯುವಶಕ್ತಿಗೆ ಇತಿಹಾಸವನ್ನೂ ಇತಿಹಾಸದಿಂದ ನಾವು ಕಲಿತಿರುವ ಮತ್ತು ಕಲಿಯಬೇಕಾಗಿರುವುದನ್ನೂ ಅರಿಯಬೇಕಾದ ಇತಿಹಾಸ ಪ್ರಜ್ಞೆ ಇದೆಯೇ? ಅಥವಾ ಜಾಗೃತವಾಗಿಲ್ಲವೇ? ನಮ್ಮ ತರುಣ ಪೀಳಿಗೆಯನ್ನು ಗತವೈಭವ ಎನ್ನುವ ನಮ್ಮ ಇತಿಹಾಸದತ್ತ ಸಂಪರ್ಕಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ಈ ಮೊದಲು ನಡೆದ ಎಲ್ಲಾ ಘಟನೆಗಳು ಇತಿಹಾಸದ ಭಾಗವೇ ಆಗಿದ್ದಲ್ಲಿ ಪುರಾಣದ ಕಥೆಗಳೂ ರಾಮಾಯಣ ಮಹಾಭಾರತವೂ ಇತಿಹಾಸದ ಒಂದು ಭಾಗವೇ ಎಂದು ಸೂಚಿಸುವ ಪುರಾತತ್ವ ಇಲಾಖೆಯ ಉತ್ಖನನಗಳು ಮತ್ತು ಅದಕ್ಕೆ ಪೂರಕವಾದದ್ದು ಮುಂದೆ ನಡೆದ ಸಂಶೋಧನೆಗಳ ಫಲಿತಾಂಶ. ಇನ್ನು ಈ ಎಲ್ಲವೂ ಕೇವಲ ಕಾಲ್ಪನಿಕ ಕಥೆಗಳೆನ್ನುವ ಅಭಿಮತಗಳಿಗೆ ದಾಖಲೆಗಳನ್ನು ಒದಗಿಸುತ್ತಾ ಹೋದಲ್ಲಿ ಉದ್ಭವಿಸಬಹುದಾದ ಪ್ರಶ್ನೆಗಳು ಕೇವಲ ವಾದಗಳಾಗುತ್ತವೆಯೇ ಹೊರತು ತಾರ್ಕಿಕ ವಿಚಾರಗಳ ವಿನಿಮಯ ಆಗುವ ಸಂಭವ ಕಡಿಮೆ.

ಹಾಗೆ ನೋಡಿದಲ್ಲಿ ನಮ್ಮ ದೇಶ ಶತಶತಮಾನಗಳ ಹಿಂದೆ ಸುಭಿಕ್ಷವಾಗಿತ್ತೆಂದೂ ಬಂಗಾರದ ಪಂಜರಗಳಲ್ಲಿ ಬಂಗಾರದ ಪಕ್ಷಿಗಳು ಸಂತಸದಿಂದ ನಲಿಯುತ್ತಿದ್ದವೆಂದೂ ನುಡಿದಲ್ಲಿ ಎಲ್ಲಾ ಇತಿಹಾಸದ ಘಟನೆಗಳಿಗೆ ಪುರಾವೆ ಬೇಕೆಂದು ಕೇಳುತ್ತಾ ಹೋದಲ್ಲಿ ಏನನ್ನೂ ನಂಬದ ಅನಿಶ್ಚಿತ ಸ್ಥಿತಿಗೆ ನಾವು ಬಂದು ತಲುಪಿರುವ ಅಸಹಾಯಕತೆಯನ್ನೇ ಸೂಚಿಸುತ್ತದೆ.

ಭಾರತೀಯ ಇತಿಹಾಸದ ಅವಲೋಕನ ಈ ದೇಶದ ಸಂಸ್ಕೃತಿಯ ಮತ್ತು ಪರಂಪರೆಯ ಅವಲೋಕನವೇ ಆಗಿದೆ.ಇಂದಿನ ಯುವಜನತೆಯಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇಲ್ಲದಿದ್ದರೂ ಅಧಿಕವಾಗಿ ಕಾಣಬರುವುದು ನಮ್ಮ ದೇಶದ ಇತಿಹಾಸವನ್ನು ಕುರಿತು ಗಂಭೀರ ಚಿಂತನೆಯ ಕೊರತೆ.ಒಂದಿಡೀ ವರ್ಷದಲ್ಲಿ ಸ್ವಾತಂತ್ರ್ಯ ದಿನದಂತಹ ಸಂದರ್ಭದಲ್ಲಿ ಭುಗಿಲೇಳುವ ದೇಶಭಕ್ತಿಯನ್ನು ಕಂಡಾಗ ನಮ್ಮ ಯುವಜನತೆ ಹೀಗೇಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ.ಅನೇಕ ಬಾರಿ ದೇಶಭಕ್ತಿ ಮತ್ತು ಸ್ವದೇಶೀ ಚಿಂತನೆಯಂತಹ ವಿಷಯಗಳು ಕೇವಲ ‘ಬೋರ್’ ಹೊಡೆಸುವ ಒಣ ವಿಚಾರಗಳಾಗುತ್ತವೆಯೇ ಹೊರತು ಆಸಕ್ತಿದಾಯಕವಲ್ಲಾ.

ವಿಪರ್ಯಾಸವೆಂದರೆ ಸ್ವಾತಂತ್ರ ದಿನಾಚರನೆಯಂತಹ ವಿಶೇಷ ಸಂರ್ಭಗಳಲ್ಲಿ ನಮ್ಮ ಜನರನ್ನು ಈ ದೇಶದ ಬಾವುಟ ಅಥವಾ ಸ್ವತಂತ್ರ ಯೋಧರನ್ನು ಕುರಿತು ಸರಳ ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸಲು ತಡವರಿಸುವುದನ್ನು ಕಾಣಬಹುದು. ‘ಈ ದೇಶ ನನ್ನದು’ ಎಂಬ ಅಭಿಮಾನವಿದ್ದಲ್ಲಿ ಚರಿತ್ರೆಯನ್ನು ಕುರಿತು, ಸ್ವತಂತ್ರಕ್ಕಾಗಿ ಹೋರಾಡಿ ಬಲಿದಾನಗೈದ ಮಹಾತ್ಮರ ಜೀವನವನ್ನೂ ಅರಿಯುವ ಆಸಕ್ತಿ ತಾನಾಗಿಯೇ ಮೂಡುವುದು.

ಇನ್ನು ಪದವಿಗಳನ್ನು ಪಡೆದು ಉನ್ನತ ಶಿಕ್ಷಣವನ್ನೂ ಪಡೆದ ನಂತರ ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳುವ ಕೆಲವು ‘ಸುಶಿಕ್ಷಿತರು’ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ತಮ್ಮತನವನ್ನೇ ಮರೆತು ಬಿಡುವುದು ವಿಪರ್ಯಾಸ!

ಬದಲಾಗುವ ಆಹಾರ ಶೈಲಿಯೂ ಹಾಗೂ ‘ಬ್ರ್ಯಾಂಡೆಡ್’ ವಸ್ತುಗಳನ್ನೇ ಬಳಸಿ ಹೆಚ್ಚಿಸುತ್ತಿರುವ ವಿದೇಶೀ ಉತ್ಪನ್ನಗಳ ಬಳಕೆ ನಮ್ಮ ದೇಶದ ಆರ್ಥಿಕ ಅವನತಿಗೆ ಕಾರಣ ಎನ್ನುವ ಅರಿವು ಇಂದಿನ ಯುವಜನತೆಗೆ ಅವಶ್ಯವಾಗಿ ಮೂಡಲೇಬೇಕು!

ಸಮೀಕ್ಷೆಯೊಂದರ ಪ್ರಕಾರ ನಮ್ಮ ಬಹುಪಾಲು ಸಾಫ್ಟ್ವೇರ್ ಮತ್ತಿತರ ಉದ್ಯಮದಲ್ಲಿರುವವರು ತಮ್ಮ ಎಡಬಿಡದ ದುಡಿತದಲ್ಲಿ ಸಂತೃಪ್ತ ಜೀವನ ನಡೆಸುತ್ತಿಲ್ಲ ಎನ್ನುವುದು.ಕೆಲಸದ ಒತ್ತಡ ಒಂದೆಡೆಯಾದರೆ ತಮಗಿರುವ ಸಮಯದ ಅಭಾವದಿಂದ ತಮ್ಮನ್ನು ಯಾವುದೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ ಎನ್ನುವ ವ್ಯಥೆ ಮತ್ತೊಂದೆಡೆ.ಇಂದಿನ ಕಾಲೇಜ್ ವಿದ್ಯಾರ್ಥಿಗಳಿಗಂತೂ (ಅದರಲ್ಲೂ ವಿಜ್ಞಾನ ವಿಭಾಗ ವಿದ್ಯಾರ್ಥಿಗಳು ) ತಾವು ತಮ್ಮ ಶಾಲಾ ಅವಧಿಯಲ್ಲಿ ಕಲಿತಿದ್ದ ಭಾರತದ ಇತಿಹಾಸವೂ ನೆನಪಿರುವುದಿಲ್ಲ,ಅವರ ಐಚ್ಛಿಕ ವಿಷಯಗಳು ಭಿನ್ನವಾಗಿರುವುದರಿಂದಲೂ ಮತ್ತು ಬದಲಾದ ಅವರ ಜೀವನಶೈಲಿಯಿಂದಲೂ ಎನ್ನಬಹುದು. ಆಧುನಿಕ ಶಿಕ್ಷಣ ಪದ್ಧತಿಯೂ ಕಾರಣವಾಗಿರಬಹುದೇ?

ತಮ್ಮ ಬಾಲ್ಯದಲ್ಲಿ ತಾವು ಕಲಿತಿದ್ದ ನೀತಿ ಕಥೆಗಳು, ದೇಶಭಕ್ತರ ಕಥೆಗಳು ಆಸಕ್ತಿದಾಯಕ ವಿಷಯಗಳಾಗಿ ಉಳಿಯುವುದಿಲ್ಲ. ಬಾಲ್ಯದಲ್ಲಿ ಕಲಿತ ಸತ್ಯ-ಧರ್ಮಗಳ ಸಂಕೇತವೆನಿಸುವು ಪುರಾಣ ಕಥೆಗಳೂ, ಸತ್ಯವೇ ಭಗವಂತ ಎಂದು ಸಾರಿದ ‘ಪುಣ್ಯಕೋಟಿ’ಯಂತಹ ಕಥೆಗಳು ಕಾಲ್ಪನಿಕ ಎನಿಸಿದರೂ ಅವು ಸಾರುವ ತತ್ವಗಳು ಅಪಾರವಲ್ಲವೇ? ಇಂದಿನ ಚಿಕ್ಕ ಮಕ್ಕಳಲ್ಲಿ ನಾವಿಂದು ಕಾಣುವ ನಮ್ಮ ದೇಶವನ್ನು ಕುರಿತ ಆಲೋಚನೆಗಳು ಅವರು ಬೆಳೆಯುತ್ತಿದ್ದಂತೆಯೇ ಕಾಣೆಯಾಗುವುದು. ಹಾಗೆ ಬೆಳೆಯುತ್ತಾ ಬಾಲ್ಯದಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು ಬಾಳುವ ಗುಣವಿರುವ ಮಕ್ಕಳು ಬೆಳೆಯುತ್ತಾ ಸ್ವಾರ್ಥಿಗಳಾಗ ತೊಡಗಿ ಕೊನೆಗೆ ತನ್ನವರೊಂದಿಗೆ ಬೆರೆತು ಬಾಳುವ ಸಹನೆಯೂ ಕ್ರಮೇಣ ಕಡಿಮೆಯಾಗುತ್ತಾ ಹೋಗುವುದು.

ಆಧುನಿಕ ತಂತ್ರಜ್ಞಾನವು ಅವಶ್ಯವೋ?ಅನವಶ್ಯವೋ?ಎಂದೆನಿಸಿದರೂ ಸಂಪರ್ಕ ಸಾಧನಗಳನ್ನಂತೂ ಕೊಡುತ್ತಲೇ ಇದೆ. ಹೊಸ ಹೊಸ ಅವಿಷ್ಕಾರಗಳು ಹೊಸತೆನಿಸುವುದನ್ನು ದಿನದಿನವೂ ನೀಡಿತ್ತಲೇ ಇದೆ, ಆದರೆ ಮೌಲ್ಯಗಳನ್ನಾಧರಿಸಿದ ಬದುಕನ್ನು ಕೊಡುವತ್ತ ಸೋಲುತ್ತಿದೆ.ತಮ್ಮ ‘ರೋಲ್ ಮಾಡೆಲ್’ಗಳು ಅಥವಾ ತಮ್ಮ ನೆಚ್ಚಿನ ಸಿನೆಮಾ ನಾಯಕ-ನಾಯಕಿಯರ ಅಥವಾ ಕ್ರಿಕೆಟ್ ಆಟಗಾರರನ್ನು ಅನುಕರಿಸಿ ಅನುಸರಿಸುವ ಆಸಕ್ತಿದಾಯಕ ತರುಣರಿಗೆ ದೇಶಕ್ಕಾಗಿ ತನ್ನ ಜೀವನವನ್ನೇ ಬಲಿಕೊಟ್ಟ ಸ್ವತಂತ್ರ್ಯ ಯೋಧರಾಗಲೀ ಅಥವಾ ಕೊರೆವ ಛಳಿಯಲ್ಲಿ ಗಡಿ ಕಾಯುತ್ತಾ ಪ್ರಾಣದ ಹಂಗಿಲ್ಲದೆ ಹಗಲಿರುಳೂ ಶ್ರಮಿಸುವ ಸೈನಿಕರು ‘ಯುವಶಕ್ತಿಯ ಐಕಾನ್’ಗಳೆನಿಸುವುದಿಲ್ಲವೇಕೆ?

ಸಾಮಾಜಿಕ ತಾಣಗಳಲ್ಲಿ ಸಂಪರ್ಕ ಸಾಧಿಸಲು ಹಾತೊರೆಯುವವರು ತಮ್ಮ ಸಾಮಾಜಿಕ ಬದುಕಲ್ಲಿ ಅನ್ಯರ ಕಷ್ಟಗಳಿಗೆ ಮರುಗುವ ಅನ್ಯರಿಗೆ ನೆರವಾಗುವ ಮನೋಭಾವವನ್ನೂ ಹೊಂದಿರುತ್ತಾರೆಯೇ? ಅಥವಾ ತಮಗೇ ಅರಿವಿಲ್ಲದ ‘ಐಡೆಂಟಿಟಿ ಕ್ರೈಸಿಸ್’ನಿಂದ ಆಗುವ ಪರಿಣಾಮವೂ ಇದು. ಆದರೆ ಜಾಗತೀಕರಣವೂ ಈ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎನ್ನುವುದು ನಿಜ.’ಗ್ಲೋಬಲ್ ವಿಲೇಜ್’ ಎನ್ನುವ ಉದಾರ ನೀತಿಯು ನಮ್ಮ ದೇಶದ ಯುವಕರು ಉನ್ನತ ಶಿಕ್ಷಣದ ನಂತರ ಹೊರದೇಶಗಳಿಗೆ ಹೋಗಿ ನೆಲೆಸಲು ಅನುವಾಗಿದೆ.ಈ ಪ್ರತಿಭಾ ಪಲಾಯನವೂ ನಮ್ಮ ದೇಶದ ಅಭಿವೃದ್ಧಿಗೆ ಮಾರಕವೇ!

ನಮ್ಮ ಇಂದಿನ ಯುವಜನತೆಗೆ ಇದರ ಅರಿವಾಗುವುದು ಅವಶ್ಯ, ಸನಾತನ ಅಭಿಮತಗಳ ತಳಹದಿಯಲ್ಲಿ ನಿಂತಿರುವ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಕೊಡುವ ಬಲಿದಾನಿಗಳನ್ನು ನಾವು ಅಪೇಕ್ಷಿಸಲಾಗುವುದಿಲ್ಲ, ಆದರೆ ಈ ದೇಶದ ಔನ್ನತ್ಯಕ್ಕಾಗಿ ಶ್ರಮಿಸುವ ಮನೋಭಿಲಾಷೆಯನ್ನಂತೂ ಅಪೇಕ್ಷಿಸಬಹುದು.

ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ನೂರಾರು ವರ್ಷಗಳ ಹಿಂದೆಯೇ ಅನೇಕ ಮಹನೀಯರು ಮನಗಂಡು ದೇಶವನ್ನು ರಕ್ಷಿಸುವ ಎಚ್ಚರಿಕೆಯ ನುಡುಗಳನ್ನು ನುಡಿದಿದ್ದರು. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದಂತೆ ನಮ್ಮ ದೇಶದಲ್ಲಿ ಇಂದು ಅವಶ್ಯವಿರುವುದು ತೋರ್ಪಡಿಕೆಯ ಬದುಕಲ್ಲಿ ಐಷಾರಾಮ ಜೀವನದಲ್ಲಿ ತಮ್ಮ ಸಮಯವನ್ನು ವ್ಯರ್ಥಗೊಳಿಸುವು ಯುವಜನತೆಯಲ್ಲ, ಇಂದಿನ ಹಾಗೂ ಮುಂದೆಂದೂ ನಮಗೆ ಬೇಕಿರುವುದು ವಿವೇಕಾನಂದರೇ ನುಡಿದಂತೆ, “ಈ ದೇಶದ ಅವಶ್ಯಕತೆ ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು ಇರುವ ವ್ಯಕ್ತಿಗಳು, ಪ್ರಪಂಚದ ರಹಸ್ಯವನ್ನೆಲ್ಲಾ ಭೇಧಿಸಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳುವ ಯುವಶಕ್ತಿ” ಅಷ್ಟೇ ಅಲ್ಲಾ.. ಈ ದೇಶವನ್ನು ತನ್ನ ತಾಯಿಯಂತೆ ಕಾಣುವ ಅಪರಿಮಿತ ದೇಶಭಕ್ತಿ, ಈ ದೇಶಕ್ಕಾಗಿ ಏನನ್ನಾದರೂ ಸಾಧಿಸಿಯೇ ತೀರುವೆನೆಂಬ ಅನನ್ಯ ಇಚ್ಛಾಶಕ್ತಿ, ಮತ್ತು ಈ ದೇಶದ ಧರ್ಮ ಮೌಲ್ಯಾಧರಿತ ಭವ್ಯ ಇತಿಹಾಸದ ಪ್ರಜ್ಞೆಯುಳ್ಳ ಈ ದೇಶದ ಅಭ್ಯುದಯಕ್ಕಾಗಿ ತುಡಿವ ಮನ:ಶಕ್ತಿ. ಈ ದೇಶದ ಸೈನಿಕರಲ್ಲಿ ತಮ್ಮ ಸೋದರರನ್ನು ಕಾಣುವ ಸಹೃದಯ.. ನಮ್ಮ ಇಂದಿನ ಯುವಶಕ್ತಿಯ ಆಲೋಚನೆಗಳಲ್ಲಿ ಅಲ್ಪ ಬದಲಾವಣೆಯಿಂದ ಇದು ಸಾಧ್ಯ!

ಚಿತ್ರಕೃಪೆ : http://www.ehow.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments