ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2014

3

ವಿಜ್ಞಾನಿಗಳೇಕೆ ಪೂಜೆ ಮಾಡಬಾರದು?

‍ನಿಲುಮೆ ಮೂಲಕ

– ಡಾ. ಪ್ರವೀಣ್ ಟಿ. ಎಲ್

ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ

Isro Chief in Turupatiಮಂಗಳಯಾನದ ಯಶಸ್ವೀ ಕಾರ್ಯಾಚರಣೆ ಬಗ್ಗೆ ಇಡೀ ದೇಶವೇ ಸಂತಸಪಟ್ಟಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತರ ಸಾಧನೆಯನ್ನು ಭಾರತೀಯ ವಿಜ್ಞಾನಿಗಳು ಮಾಡಿರುವುದು ಮಹಾನ್ ಸಾಧನೆಯೇ ಸರಿ. ಆದರೆ ಕೆಲವು ‘ಚಿಂತಕರು’ ಈ ಇಡೀ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ವಿಜ್ಞಾನಿ ರಾಧಾಕೃಷ್ಣನ್‍ರವರ ನಡೆಯ ಕುರಿತು ತಮ್ಮ ಕುಹಕ, ತಕರಾರುಗಳನ್ನು ಅಂತರ್ಜಾಲ, ಮತ್ತಿತರ ಕಡೆಗಳಲ್ಲಿ ಹರಿಯಬಿಡುತ್ತಿದ್ದಾರೆ. ರಾಧಾಕೃಷ್ಣನ್‍ರವರು ‘MOM’ ನ ಸಣ್ಣ ಮಾದರಿಯೊಂದನ್ನು ತಿರುಪತಿಗೆ ತಂದು, ತಮ್ಮ ಧರ್ಮಪತ್ನಿಯೊಡನೆ ಪೂಜಾ ಕಾರ್ಯಗಳನ್ನು ನೇರವೇರಿಸಿದ್ದು ಅವರ ಟೀಕೆಗೆ ಕಾರಣ.

ಉಡಾವಣೆಗೊಂಡ ‘MOM’ ಮಂಗಳನ ತಲುಪುವ ಮುಂಚೆಯೇ ಇದೊಂದು ವಿಫಲಯತ್ನವೇನೋ ಎಂಬಂತೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇನ್ನೂ ಕೆಲವರು ವಿಫಲವಾಗಿದೆ ಎಂಬ ತೀರ್ಮಾನಕ್ಕೂ ಬಂದಿದ್ದರು. ಅಷ್ಟೇ ಅಲ್ಲದೇ ಈ ವಿಫಲತೆಗೆ ವಿಜ್ಞಾನಿಗಳು ತಿರುಪತಿಗೆ ತೆರಳಿ ‘ತಲೆಬೋಳಿಸಿ’ಕೊಳ್ಳದೇ ವಾಪಾಸಾದುದೇ ಪ್ರಮುಖ ಕಾರಣ ಎಂಬಂತೇ ಕುಹಕವಾಡಲು ಶುರುಮಾಡಿದರು. ಕುಹಕಗಳಿಗೆಲ್ಲಾ ಉತ್ತರವನ್ನು ವಿಜ್ಞಾನಿಗಳು ಈಗಾಗಲೇ ನೀಡಿದ್ದಾರೆ.

ಈ ‘ವೈಜ್ಞಾನಿಕ’ ಚಿಂತಕರ ಪ್ರಮುಖ ತಕರಾರೆಂದರೆ, ವಿಜ್ಞಾನಿಗಳು ದೇವಸ್ಥಾನಗಳಿಗೆ ತೆರಳಿ ತಾವು ತಯಾರಿಸಿದ ಆಯುಧದ ಪೂಜೆ ನೆರವೇರಿಸಿರುವುದು ಎಷ್ಟು ಸರಿ. ವಿಜ್ಞಾನಿಗಳಿಗೆ ವಿಶ್ವದ ಸೃಷ್ಟಿಯ ಕುರಿತು ವೈಜ್ಞಾನಿಕ ಕಾರಣಗಳು ತಿಳಿದಿದ್ದರೂ ಸಹಾ ದೇವರ ಅಸ್ತಿತ್ವವನ್ನು ನಂಬುತ್ತಾರೆ ಮತ್ತು ತಮ್ಮ ವೈಜ್ಞಾನಿಕ ಪ್ರಯೋಗಗಳಲ್ಲಿ ದೇವರ ಕೈವಾಡ ಇದೆ ಎಂದುಕೊಳ್ಳುವುದು ಅಜ್ಞಾನ/ ಮೂಢತೆ ಎಂಬುದವರ ವಾದ. ISRO ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಭಾರತ ಒಂದು ಜಾತ್ಯಾತೀತ ರಾಷ್ಟ್ರ ಎಂಬುದನ್ನು ರಾಧಾಕೃಷ್ಣನ್‍ರವರು ನೆನಪಿಡಬೇಕು ಎಂದು ಅಪ್ಪಣೆ ಹೊರಡಿಸುತ್ತಾರೆ.

ಮೇಲಿನ ತಕರಾರುಗಳು ಭಾರತದ ಕುರಿತ ಈ ಚಿಂತಕರ ಅಜ್ಞಾನವನ್ನೂ, ಅವೈಜ್ಞಾನಿಕತೆಯನ್ನೂ, ಮೌಢ್ಯತೆಯನ್ನೂ ಪ್ರದರ್ಶಿಸುತ್ತಿವೆ. ಈ ಚಿಂತಕರುಗಳು ತಪ್ಪಾದ ‘ಯೂರೋಪಿನ ಗ್ರಹಿಕೆ’ಗಳಿಂದ ಕೂಡಿದ ತಮ್ಮ ವಿವರಣೆಗಳನ್ನೇ ವೈಜ್ಞಾನಿಕ ಎಂದು, ತಾವೇ ವಿಜ್ಞಾನದ ಪಿತಾಮಹರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಜೊತೆಗೆ ಯೂರೋಪಿನ ಸೆಕ್ಯುಲರ್ ಚಿಂತನೆಯ ನಕಲನ್ನು ಭಾರತದಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡುಬರುತ್ತದೆ. ವಿಜ್ಞಾನಿಗಳ ಈ ನಡೆಯನ್ನು ಅವೈಜ್ಞಾನಿಕ, ಮೌಢ್ಯ ಎನ್ನಲು ಕಾರಣ ಅವರ ಆಚರಣೆ ಮತ್ತು ನಂಬಿಕೆಗಳ ನಡುವಿನ ಸಂಬಂಧ. ಅಂದರೆ ಬಾಹ್ಯಾಕಾಶ ನೌಕೆಯ ಉಡಾವಣೆಗೂ ದೇವರ ಮೇಲಿನ ನಂಬಿಕೆಗೂ ಸಂಬಂಧ ಇದೆ ಎಂಬುದು. ದೇವರೇ ಬಂದು ಕ್ಷಿಪಣಿಯನ್ನು ಉಡಾವಣೆ ಮಾಡುತ್ತಾನೆ ಎಂದೇನೂ ವಿಜ್ಞಾನಿಗಳು ನಂಬಿಲ್ಲವಲ್ಲ. ಹಾಗಿದ್ದರೆ ಅವರು ವರ್ಷಗಟ್ಟಲೇ ಶ್ರಮಪಟ್ಟು ತಯಾರಿಸುವ ಅವಶ್ಯಕತೆಯಾದರೂ ಏನಿತ್ತು. ಅಲ್ಲದೇ ಅದಕ್ಕೆ ನಿರ್ದಿಷ್ಟ ಕಾಲಕ್ಕೆ ಬೇಕಾಗುವಷ್ಟು ಇಂಧನವನ್ನು, ಆಧುನಿಕ ತಂತ್ರಜ್ಞಾನವನ್ನು ಬಳಸುವ ಅಗತ್ಯವಾದರೂ ಏಕೆ?

ಅಂದರೆ ಅವರು ದೇವರೇ ಉಡಾವಣೆ ಮಾಡುತ್ತಾನೆಂದು ನಂಬಿಲ್ಲ ಎಂಬುದು ಸ್ಪಷ್ಟ. ಈ ಸಂದರ್ಭದಲ್ಲಿ ನೆನಪಾಗುವ ವಿಟ್ಗೆನ್‍ಸ್ಟೈನ್ ವಿವರಣೆಯೊಂದು ಹೀಗಿದೆ: ಮಳೆಗಾಗಿ ನಡೆಸುವ ಆಚರಣೆಗಳ ಕುರಿತಂತೆ ಫ್ರೇಜರ್ ಎಂಬ ಚಿಂತಕ ಅದನ್ನು ‘ಮೌಢ್ಯತೆ’ ಎಂದು ತೀರ್ಮಾನಿಸುತ್ತಾನೆ. ಈ ಕ್ರಿಯೆಯಿಂದಾಗಿಯೇ ಮಳೆಬರುತ್ತದೆ ಎಂದು ಜನ ನಂಬಿದ್ದಾರೆ, ಇವರೆಂಥಾ ಮೂರ್ಖರು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಆಗ ವಿಟ್ಗೆನ್‍ಸ್ಟೈನ್ ಜನರು ಮೂರ್ಖರೂ ಅಲ್ಲ, ಮೂಢರೂ ಅಲ್ಲ. ಜನರು ತಾವು ನಡೆಸುವ ಆಚರಣೆ ಇಂದಲೇ ಮಳೆಬರುತ್ತದೆ ಎಂದುಕೊಂಡಿದ್ದರೆ, ಅವರು ಅದನ್ನು ಕಡು ಬೇಸಿಗೆಯಲ್ಲೋ ಅಥವಾ ಮರಳುಗಾಡಿನಲ್ಲೋ ನಡೆಸುತ್ತಿದ್ದರು. ಆದರೆ ಅಂತಹ ಆಚರಣೆಗಳನ್ನು ಅವರು ಮಳೆಗಾಲದಲ್ಲಿಯೇ ನಡೆಸುತ್ತಾರೆ. ಆಚರಣೆಗಳಿಗೆ ಅರ್ಥಹಚ್ಚುವ ಪ್ರಕ್ರಿಯೆಯೇ ಅಸಮಂಜಸ. ಆ ಅರ್ಥ ವಿವರಣೆಗಳು ಆಚರಣೆಗಳ ವೈಶಿಷ್ಟ್ಯತೆಯನ್ನು ಹಾಳುಗೆಡವುತ್ತವೆ ಎನ್ನುತ್ತಾರೆ.

ವ್ಯಕ್ತಿಯು ನಡೆಸುವ ಕ್ರಿಯೆಗಳನ್ನು ಅರ್ಥೈಸುವ, ವಿವರಿಸುವ ಪ್ರಕ್ರಿಯೆ ಯೂರೋಪಿನಲ್ಲಿ ಆರಂಭವಾಯಿತು. ಅವರು ಮನುಷ್ಯನ ಕ್ರಿಯೆಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತಾರೆ. ಒಂದು, ರಿಲಿಜನ್ನಿನ ಕ್ರಿಯೆಗಳು, ಈ ಕ್ರಿಯೆಗಳಿಗೆ ರಿಲಿಜನ್ನಿನ ಪಠ್ಯಗಳಿಂದ ನಿರ್ದೇಶನವಿರುತ್ತದೆ. ಎರಡು, ವೈಜ್ಞಾನಿಕ ಕ್ರಿಯೆಗಳು, ಈ ಕ್ರಿಯೆಗಳಿಗೆ ವೈಜ್ಞಾನಿಕ ಕಾರಣಗಳ ಹಿನ್ನೆಲೆ ಇರಬೇಕು. ಈ ಎರಡೂ ರೀತಿಯ ತಳಹದಿಯನ್ನು ಹೊಂದಿರದ, ರಿಲಿಜಿಯಸ್ಸೂ ಅಲ್ಲದ ವೈಜ್ಞಾನಿಕವೂ ಅಲ್ಲದ, ಕ್ರಿಯೆಗಳನ್ನು ‘ಮೂಢಾಚರಣೆಗಳು’, ‘ಮೂಢನಂಬಿಕೆಗಳು’, ‘ಅವೈಜ್ಞಾನಿಕ’ ಎಂಬ ತೀರ್ಮಾನಕ್ಕೆ ಬರಲಾಗುವುದು. ಇದು ಯೂರೋಪು ಮನುಷ್ಯ ಕ್ರಿಯೆಗಳನ್ನು ಪರಿಭಾವಿಸುವ ರೀತಿಯಾಗಿದೆ. ಈ ಹಿನ್ನೆಲೆಯಿಂದ ಭಾರತಕ್ಕೆ ಬೇಟಿ ನೀಡಿದ ಐರೋಪ್ಯರು ಭಾರತದಲ್ಲಿದ್ದಂತಹ ಆಚರಣೆಗಳನ್ನು ಮೇಲಿನ ಎರಡೂ ರೀತಿಯಲ್ಲಿ ಗ್ರಹಿಸಲು ಮುಂದಾದರು. ವಸಾಹತು ಕಾಲದಲ್ಲಿ ಭಾರತೀಯರು ತಮ್ಮಲ್ಲಿದ್ದಂತಹ ಅಸಂಖ್ಯಾತ ಆಚರಣೆಗಳಿಗೆ ಒಂದೋ ಶಾಸ್ತ್ರಾಧಾರ/ಪಠ್ಯಾಧಾರವನ್ನು ಒದಗಿಸಬೇಕು ಇಲ್ಲವೇ ‘ವೈಜ್ಞಾನಿಕ’ ಕಾರಣವನ್ನು ನಿರೂಪಿಸಬೇಕು. ಐರೋಪ್ಯರಿಗೆ ಮುಖಾಮುಖಿಯಾದ ಭಾರತೀಯ ವಿದ್ವಾಂಸರಲ್ಲಿ ಕೆಲವರು ಶಾಸ್ತ್ರಗಳ ಹುಡುಕಾಟದಲ್ಲಿ ಮಗ್ನರಾದರೆ, ಉಳಿದವರು ನಮ್ಮ ಆಚರಣೆಗಳಿಗೆ ‘ವೈಜ್ಞಾನಿಕ’ವೆನಿಸುವ ಕಾರಣಗಳ ಹುಡುಕಾಟದಲ್ಲಿ ನಿರತರಾದರು. ಅದರಲ್ಲಿ ಕೆಲವು ಆಚರಣೆಗಳಿಗೆ ಕಾರಣಗಳನ್ನು ಹುಡುಕುವಲ್ಲಿ ಯಶಸ್ವಿಯೂ ಆದರು. ಆದರೆ ಇಲ್ಲಿ ಅಸ್ತಿತ್ವದಲ್ಲಿರುವ ಹಲವಾರು ಆಚರಣೆಗಳಿಗೆ ಶಾಸ್ತಾಧಾರವೂ ಇಲ್ಲದ ವೈಜ್ಞಾನಿಕ ಕಾರಣವೂ ಸಿಗುವುದಿಲ್ಲ. ಆಗ ಸಿದ್ಧವಾದ ನಿರ್ಣಯವೆಂದರೆ, ಭಾರತೀಯರ ಈ ಆಚರಣೆಗಳೆಲ್ಲಾ ‘ಮೂಢಾಚರಣೆಗಳು’.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಐರೋಪ್ಯರ ಪ್ರಶ್ನೆಗಳು ನಮ್ಮ ಭಾರತವನ್ನು ಅರ್ಥೈಸುವ ಹೊಸ ಚೌಕಟ್ಟಿನೊಳಗೆ ನಮ್ಮನ್ನು ಸೆರೆ ಹಿಡಿದವು. ನಾವು ಯಾವುದೋ ಚೌಕಟ್ಟಿನೊಳಗೆ ಸೆರೆಯಾಗಿದ್ದೇವೆ/ಆಗುತ್ತಿದ್ದೇವೆ ಎಂಬ ವಿಚಾರವೇ ಭಾರತೀಯ ವಿದ್ವಾಂಸರಿಗೆ ತಿಳಿಯದಾಯಿತು. ರಿಲಿಜನ್ನಿನ ಸಮಾಜವನ್ನು ಅರ್ಥೈಸಲು ಆ ಚೌಕಟ್ಟು ಹೆಚ್ಚು ಸಹಕಾರಿಯಾಗಬಹುದಾದರೂ, ರಿಲಿಜನ್ ಅಸ್ತಿತ್ವದಲ್ಲಿಲ್ಲದ ಭಾರತದಂತಹ ಸಮಾಜಗಳನ್ನು ಅರ್ಧೈಸಲು ಸಹಕರಿಸುವ ಬದಲು ಇನ್ನಷ್ಟು ಕಗ್ಗಂಟಾಗಿಸಿತು. ಭಾರತದಲ್ಲಿನ ಸಾಂಪ್ರದಾಯಿಕ ಆಚರಣೆಗಳ ಸ್ವರೂಪ ಏನು? ಅವುಗಳು ಹೇಗೆ ತಲೆಮಾರುಗಳಿಂದ ದಾಟಿಕೊಂಡು ಬಂದಿವೆ? ಎಂಬುದನ್ನು ಗ್ರಹಿಸಲು ಐರೋಪ್ಯರ ಚೌಕಟ್ಟು ಖಂಡಿತವಾಗಿಯೂ ಸಹಕಾರಿಯಾಗುವುದಿಲ್ಲ. ರಿಲಿಜನ್‍ಗಳಿಲ್ಲದ ಭಾರತದಂತಹ ಸಂಸ್ಕøತಿಯಲ್ಲಿ ಅದು ಅಪ್ರಸ್ತುತ ಕೂಡ. ಸಂಪ್ರದಾಯಗಳ ಸ್ವರೂಪವೇ ಬೇರೆ, ರಿಲಿಜನ್ನುಗಳ ಸ್ವರೂಪವೇ ಬೇರೆ. ಸಂಪ್ರದಾಯಗಳು ಆಚರಣೆ ಪ್ರಧಾನವಾಗಿರುತ್ತವೆ. ಮತ್ತು ಆ ಆಚರಣೆಗಳು ಶಾಸ್ತ್ರಾಧಾರವನ್ನಾಗಲೀ, ಇವರುಗಳು ಹೇಳುವಂತಹ ‘ವೈಜ್ಞಾನಿಕ’ ಕಾರಣಗಳನ್ನಾಗಲೀ ಬೇಡುವುದಿಲ್ಲ. ಬದಲಾಗಿ ಪರಂಪರೆಯಿಂದ ನಡೆಸಿಕೊಂಡು ಬಂದಂತಹದ್ದು ಎಂಬುದೇ ಅದಕ್ಕಿರುವ ವೈಜ್ಞಾನಿಕತೆ. ಆಚರಣೆಗಳಿಂದ ಸಮಾಜಕ್ಕೆ, ಸಮುದಾಯಕ್ಕೆ ಹಾನಿಯಾಗುತ್ತಿದೆ ಎಂದು ಮನವರಿಕೆಯಾಗುತ್ತಿದ್ದಂತೆಯೇ ಅದನ್ನು ಬದಲಿಸುವ ಸಾಧ್ಯತೆಯನ್ನೂ ಈ ಸಂಪ್ರದಾಯ ಪ್ರಧಾನ ಸಮಾಜಗಳು ಹೊಂದಿರುತ್ತವೆ. ಅಂತಹ ಸಮಾಜಗಳಲ್ಲೊಂದು ಭಾರತ. ಇಲ್ಲಿನ ಆಚರಣೆಗಳೇ ಸಾಂಪ್ರದಾಯಿಕ ಆಚರಣೆಗಳು.

ಐರೋಪ್ಯ ಚೌಕಟ್ಟನ್ನು ಬಳಸುವ ಭಾರತೀಯ ವೈಚಾರಿಕರು ಇಲ್ಲಿನ ಆಚರಣೆಗಳನ್ನು ‘ಮೌಢ್ಯತೆ’, ‘ಅಂಧಕಾರ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿಯೇ ನಮ್ಮ ‘ಘನ’ ಪಂಡಿತರು ಮೇಲಿನ ISRO ಮುಖ್ಯಸ್ಥರ ನಡೆಯನ್ನು ‘ಅವೈಜ್ಞಾನಿಕ’, ‘ಮೂಢ’ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ. ಆದರೆ ಭಾರತೀಯ ಸಂಸ್ಕøತಿಯ ಕುರಿತಂತೆ ಈ ಟೀಕಾಕಾರರು ಎಷ್ಟು ಅಜ್ಞಾನಿಗಳು ಎಂಬುದು ಭಾರತೀಯ ಸಂಪ್ರದಾಯಗಳ ಕುರಿತು ಪರಿಚಯವಿರುವ ಯಾರಿಗಾದರೂ ತಿಳಿಯುತ್ತದೆ. ಏನಾದರೂ ಹೊಸ ಆಯುಧಗಳನ್ನು ತಯಾರಿಸಿದಾಗ ಅದರ ಕಾರ್ಯಾರಂಭ ನೆರವೇರುವುದು ಪೂಜೆಪುನಸ್ಕಾರದಂತಹ ಆಚರಣೆಗಳಿಂದಲೇ ಆಗಿದೆ. ಇಂತಹ ಹಲವು ಆಚರಣೆಗಳು ಇಂದಿಗೂ ಪ್ರಚಲಿತದಲ್ಲಿವೆ. ಮನೆ ಕಟ್ಟುವ ಮುಂಚೆ ಶಂಕುಸ್ಥಾಪನೆ/ ಪೂಜೆ ನಡೆಸುವುದು, ಹೊಸ ವಾಹನಗಳ ಖರೀದಿ ನಂತರ ಪೂಜೆ, ಸರ್ಕಾರಿ ಮತ್ತು ಖಾಸಗೀ ಕಛೇರಿಗಳಲ್ಲಿ ಶುಕ್ರವಾರದ ಲಕ್ಷ್ಮೀ ಪೂಜೆ, ಸರ್ಕಾರಿ ಶಾಲೆಗಳಲ್ಲಿ ಸರಸ್ವತಿ, ಶಾರದಾ ಪೂಜೆ, ಆಯುಧಪೂಜೆಗಳಂತಹ ಹಲವಾರು ಆಚರಣೆಗಳನ್ನು ನೆರವೇರಿಸುತ್ತೇವೆ. ಈ ಘಟನೆಗಳು ಮೇಲಿನ ವಿಜ್ಞಾನಿಗಳ ನಡೆಯನ್ನು ಹೋಲುವ ಘಟನೆಗಳಾಗಿವೆ. ಮತ್ತೇ ಯಾರೂ ಸಹಾ ಪೂಜೆ ನೇರವೇರಿಸಿದಾಕ್ಷಣ ಮನೆ ನಿರ್ಮಾಣವನ್ನು ದೇವರು ಮಾಡುತ್ತಾನೆಂದು ನಂಬುವುದಿಲ್ಲ, ಕಛೇರಿಯ ಕೆಲಸಗಳನ್ನು ದೇವರು ಮಾಡುತ್ತಾನೆಂದು ನೌಕರರು ಸುಮ್ಮನೆ ಇರುವುದೂ ಇಲ್ಲ, ವಾಹನ ಪೂಜೆ ಮಾಡಿದಾಕ್ಷಣ ವಾಹನ ಇಂಧನವಿಲ್ಲದೇ ಚಲಿಸುತ್ತದೆ ಎಂದಾಗಲೀ, ದೇವರು ಅಪಘಾತವಾಗದಂತೆ ತಡೆಯುತ್ತದೆ ಎಂದಾಗಲೀ ಯಾರೂ ನಂಬುವುದೂ ಇಲ್ಲ. ಅದೊಂದು ಆಚರಣೆಯಷ್ಟೇ, ಅದನ್ನು ಭಾರತೀಯರು ನೆರವೇರಿಸುತ್ತಾರೆ.

ಈ ನಿಟ್ಟಿನಲ್ಲಿ ರಾಧಾಕೃಷ್ಣನ್ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿರುವುದು ಭಾರತೀಯ ಸಂಸ್ಕøತಿಯ ಪ್ರತೀಕ ಎಂಬುದರಲ್ಲಿ ಎರಡು ಮಾತಿಲ್ಲ. ರಿಲಿಜನ್ ಇರುವ ಸಂಸ್ಕøತಿಯ ತರ್ಕವನ್ನು ಸಂಪ್ರದಾಯ ಪ್ರಧಾನ ಸಂಸ್ಕøತಿಯ ಮೌಲ್ಯಮಾಪನಕ್ಕೆ ಬಳಸಿರುವುದು ಕ್ರಿಕೆಟ್ ಆಟದ ನಿಯಮಗಳನ್ನು ಚೆಸ್ ಆಟದಲ್ಲಿ ಅಳವಡಿಸಿ, ಸರಿಯಾಗಿಯೇ ಆಡುತ್ತಿರುವ ಚೆಸ್ ಆಟಗಾರರನ್ನು ಹಿಗ್ಗಾ ಮುಗ್ಗಾ ಟೀಕಿಸಿದಂತಾಗುತ್ತದೆ. ಇದನ್ನೇ ನಮ್ಮ ಟೀಕಾಕಾರರು ಮಾಡುತ್ತಿರುವುದು.

ವಿಜ್ಞಾನಿಗಳು ಆಚರಣೆಗಳನ್ನು ನೆರವೇರಿಸಿದಾಗ ಅದೊಂದು ಘೋರ ಅಪರಾಧ ಎಂಬಂತೆ ನೋಡುವುದೇ ಯೂರೋಪಿನ ಲಕ್ಷಣ. ಅಲ್ಲಿ ರಿಲಿಜನ್‍ಅನ್ನು ವಿರೋಧಿಸಿ ವಿಜ್ಞಾನ ಅಸ್ತಿತ್ವಕ್ಕೆ ಬಂದಿದೆ ಎಂಬ ಪೂರ್ವಾಗ್ರಹ. ಹಾಗಾಗಿ ವಿಜ್ಞಾನಿಯೊಬ್ಬ ರಿಲಿಜನ್ ಅನ್ನು, ಗಾಡ್ ಅನ್ನು ನಂಬಬಾರದೆಂಬ ವಿಚಾರ. ಆದರೆ ಪಶ್ಚಿಮದಲ್ಲಿ ವಿಜ್ಞಾನ ಬೆಳವಣಿಗೆಗೆ ರಿಲಿಜನ್ನೇ ಕಾರಣ ಎಂದು ಕೆಲವರು ಸಾಧಿಸಿ ತೋರಿಸಿದ್ದಾರೆ. ಲೇಖನದ ಮಿತಿಯಲ್ಲಿ ಅದನ್ನು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಆದರೆ ಭಾರತೀಯರಿಗೆ ವಿಜ್ಞಾನ ಎಂದೂ ತಮ್ಮ ಸಂಪ್ರದಾಯಗಳಿಗೆ ಎದುರಾಗಿ ನಿಲ್ಲಲೇ ಇಲ್ಲ. ಎಷ್ಟೋ ಜನರು ಕಾಲೇಜುಗಳಲ್ಲಿ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರೆ, ಮನೆಯಲ್ಲಿ ಪಕ್ಕಾ ಆಚರಣೆಗಳನ್ನು ನೆರವೇರಿಸುವವರೂ ಆಗಿದ್ದಾರೆ. ಅವರಿಗೆ ಎಂದೂ ಅವೆರಡೂ ಪರಸ್ಪರ ವಿರುದ್ಧವಾದುದು ಎನಿಸಿಯೇ ಇಲ್ಲ.  

3 ಟಿಪ್ಪಣಿಗಳು Post a comment
 1. hemapathy
  ಆಕ್ಟೋ 31 2014

  ಅಂಧ ಶ್ರದ್ಧೆಯ ಹಿಂದೆ ಹೋಗುವುದರಿಂದ ಯಾವುದೇ ಉಪಯೋಗವಿಲ್ಲ. ಉಪಯೋಗವಿಲ್ಲದ ಮೂಢ ನಂಬಿಕೆಗಳನ್ನು ಪಾಲಿಸುವುದು ವಿವೇಕಿಗಳ ಕೆಲಸವಲ್ಲ. ವಿಜ್ಞಾನ ಮತ್ತು ಮೂಢನಂಬಿಕೆ ಒಂದಕ್ಕೊಂದು ವಿರೋಧಾಬಾಸ. ವಿದ್ಯಾವಂತ ಮೂರ್ಖರು, ಅವಿದ್ಯಾವಂತ ಮುಠ್ಠಾಳರೇ ತುಂಬಿರುವ ನಮ್ಮ ದೇಶದಲ್ಲಿ ವಿಚಾರವಾದಕ್ಕೆ ಬೆಲೆಯೇ ಇಲ್ಲ.

  ಉತ್ತರ
 2. ನವೆಂ 2 2014

  ಮೊದಲಿಗೆ, ಲೇಖಕರು ಸಂಪ್ರದಾಯಬದ್ಧ, ರಿಲಿಜಸ್ ಅಲ್ಲದ ಭಾರತೀಯ ಆಚರಣೆಗಳನ್ನು ರಿಲಿಜನ್ ಮತ್ತು ಶಾಸ್ತ್ರದ ಪರಿಧಿಯನ್ನೊಳಗೊಂಡ ಐರೋಪ್ಯ ಚೌಕಟ್ಟಿನಲ್ಲಿ ಮೌಢ್ಯವೆಂದು ನಿರ್ಧರಿಸುವುದು ತಪ್ಪೆಂದು ನಿರೂಪಿಸುತ್ತಾ, ಪೂಜೆ ಅಂತಹ ನಾನ್- ರಿಲಿಜಸ್, ಶಾಸ್ತ್ರೀಯವಲ್ಲದ ಕೇವಲ ವಿಧಿಯಾಗಿ ನಮ್ಮ ವೈಜ್ಞಾನಿಕ ಅಲೋಚನಾ ಕ್ರಮ, ವಿಚಾರ, ಆಚರಣೆಗೆ ಧಕ್ಕೆ ಬರದಿರುವುದರಿಂದ ಅದನ್ನು ವಿರೋಧಿಸುವುದು ಅವಿವೇಕಿತನವೆಂಬಂತೆ ನಿರೂಪಿಸಹೊರಟು, ವೈಚಾರಿಕ ಭಾರತೀಯ ಮನಸ್ಸಿನೊಳಗಿನ ಈ ಸಂಪ್ರದಾಯ ಆಚರಣೆಗೆ ಮಾನ್ಯತೆ ಒದಗಿಸುತ್ತಾರೆ. ಇವು ಸೂರ್ಯ-ಚಂದ್ರಗ್ರಹಣಗಳ ದಿನದಂದು ನಡೆಸುವ ಪೂಜಾವಿಧಿ, ಆಚರಣೆ ಮತ್ತು ಅವು ಪೋಷಿಸಿಕೊಂಡು ಬಂದಿರುವ ಸೂರ್ಯ-ಚಂದ್ರರನ್ನು ನುಂಗುವ ರಾಹು ಕೇತುಗಳ ವೃತ್ತಾಂತಕ್ಕೆ ನೀರೆರೆಯುವುದನ್ನೂ ಪುಷ್ಟಿ ಕರಿಸುತ್ತವೆ ಎಂಬುದನ್ನು ಮರೆಯುತ್ತಾರೆ.

  ಡಾ.ಎಚ್. ನರಸಿಂಹಯ್ಯನವರು ಇಂಥಹ ಆಚರಣೆಗಳ ಕುರಿತು ಹೀಗೆ ಹೇಳುತ್ತಾರೆ: Science is merely a lively hood, not a way of life for these science teachers who teach their students of the ways of Solar and lunar eclipses, but in their private lives they believe and practice things contrary to what they teach their students in class rooms.

  ಹಾಗೆಯೇ, ಲೇಖಕರು ಪ್ರಗತಿ ಪರವಲ್ಲದ ಸಂಪ್ರದಾಯ ಬದ್ಧ ಆಚರಣೆಗಳನ್ನು ಕೈಬಿಡುವ ಮಾತುಗಳನ್ನೂ ಆಡುತ್ತಾರೆ!

  ಇವೆಲ್ಲವೂ ನಮ್ಮ ವೈಚಾರಿಕ ನಿಲುವು ರೂಪುಗೊಳ್ಳುವ ಹಾದಿಯಲ್ಲಿ ಉಳಿಸಿಕೊಳ್ಳುವ ಕೂಳೆಯನ್ನು ಮುಚ್ಚುವ ಪ್ರಯತ್ನವಾಗಿದೆ. ಇವು ನಮ್ಮ ಮಕ್ಕಳನ್ನು ಎಂಥಹ ಗೊಂದಲಕ್ಕೆ ಈಡು ಮಾಡುತ್ತವೆ ಎಂಬುದನ್ನೂ ಮರೆಯುತ್ತಾರೆ.

  ಉತ್ತರ
 3. ವಿಶ್ವಮಾನವ
  ಫೆಬ್ರ 21 2017

  ನಮ್ಮ ಜನರಲ್ಲಿ ಬೇರೂರಿರುವ ಇಬ್ಬಂದಿ ಮನೋಭಾವನೆಯನ್ನು ಇದು ಎತ್ತಿ ತೋರಿಸುತ್ತದೆ!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments