ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2014

ಕನ್ನಡ – ಕನ್ನಡ

by ನಿಲುಮೆ

– ಭರತೇಶ ಅಲಸಂಡೆಮಜಲು

ಕನ್ನಡ ಕಲಿಅ.. ಆ.. ಅ. ಆ..
ಇ.. ಈ.. ಇ.. ಈ..
ಅಆಇಈ ಕನ್ನಡದ ಅಕ್ಷರಮಾಲೆ
ಅ…. ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ
ಆ…. ಆಟ, ಊಟ, ಓಟ ಕನ್ನಡ ಒಂದನೇ ಪಾಠ
ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ…

ಇದು “ಕರುಳಿನ ಕರೆ” ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ ಒತ್ತಡಕ್ಕೆ ಸಿಳುಕಿ ಹಾರಾಡಿ ಅದು ತರಂಗಗಳಾಗಿ ತಮಟೆಗೆ ಬಡಿದು ಅನಾಥವಾದರೆ ಶಬ್ಧ, ಅದು ಅರ್ಥವಾದರೆ ಭಾಷೆಯಾಗುತ್ತದೆ. ಪ್ರತಿಯೊಬ್ಬರಿಗೂ ಭಾಷೆಯ ಬಗೆಗೆ ವಿಧ ವಿಧವಾದ ವ್ಯಾಖ್ಯಾನಗಳಿವೆ ಭಾಷೆ ಒಂದು ಸಂಸ್ಕಾರದ ಪರಿಶೋಧನೆಗೆ ಸಂಕೇತಗಳ ರೂಪ ನೀಡಿ ವ್ಯವಹರಿಸಲಿರುವ ವಿಶೇಷ ಸಾಮಥ್ರ್ಯ ಹಾಗೂ ಪಶು-ಪಕ್ಷಿಗಳಿಂದ ಪ್ರತ್ಯೇಕಿಸುವ ಘಟಕವೆಂದೆ ಬಿಂಬಿತವಾಗಿದೆ. ಭಾಷೆಯೆಂಬುದು ಆ ಪ್ರಾಂತ್ಯದ , ಜನ ಮಾನಸದ, ವ್ಯವಹಾರದ, ಸಮಾಜ ಸಂಸ್ಕ್ರತಿಯ ಸೊಗಡನ್ನು ಅಭಿವ್ಯಕ್ತಿ ಪಡಿಸುವ ರಾಯಭಾರಿಯಿದ್ದಂತೆ. ನಾವು ನಮ್ಮನ್ನು ಪರಿಚಯಿಸುವುದೇ ನಮ್ಮ ಭಾಷೆ, ನಮ್ಮ ನಾಡಿನ ಹೆಸರುಗಳ ಮೂಲಕ, ನಮ್ಮದು ಕನ್ನಡ ಭಾಷೆ ಅದರ ನವ್ಯತೆ, ನವಿರತೆ, ಮುಗ್ಧತೆ, ಸ್ಪಷ್ಟತೆ, ಉಚ್ಚರಣೆ, ಭಾವಾವಿಶೇಷಣಗಳು ಕನ್ನಡಿಗನೆನ್ನುವವನ ಮನ ಗೌರವವೆನಿಸುತ್ತದೆ.. ಅದಿ ದ್ರಾವಿಡ ಭಾಷೆಯಿಂದ ಕವಳೊಡೆದು ಒಸರಿನಂತೆ ಜಿನುಗಿ ಅದರ ಗಟ್ಟಿತನ , ಪ್ರಾಚೀನತೆ, ಸ್ವತಂತ್ರ ಪರಂಪರೆ, ಅಪಾರ ಸಾಹಿತ್ಯ ಬಿನ್ನತೆ, ಉನ್ನತ ಮಟ್ಟದ ಮೌಖಿಕ , ಶ್ರೇಷ್ಠ ಜಾನಪದ ನೆಲೆಯಲ್ಲಿ ಇಂದು ಕನ್ನಡ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಕುಲಪುರೋಹಿತ ಅಲೂರು ವೆಂಕಟರಾಯರು ಹೇಳುತ್ತಾ ” ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತ್ಯಗಳು ಇಲ್ಲವೆಂಬುದು ಎಷ್ಟು ನಿಜವೋ, ಅಷ್ಟೇ ಕರ್ನಾಟಕ ಮುಂತಾದ ಪ್ರಾಂತ್ಯಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜ !!!

ಭಾರತೀಯನಲ್ಲದವನು ಹೇಗೆ ನಿಜವಾದ ಕನ್ನಡಿಗನಾಗಲಾರನೋ ಹಾಗೆಯೇ ಕನ್ನಡಿಗನಲ್ಲದವನು ನಿಜವಾದ ಭಾರತೀಯನಾಗಲಾರನು ಕರ್ನಾಟಕವೂ ಕನ್ನಡಿಗನ ದೇಹವು, ಜೀವವು, ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದೋ ಹಾಗೆ ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಾಂಬೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು ಅವರಿಗೆ ಅನ್ಯ ಮಾರ್ಗವಿಲ್ಲ. ಅನ್ಯ ಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಚಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡಲು ಕರ್ನಾಟಕತ್ವವೇ ರಾಜಮಾರ್ಗ; ಕನ್ನಡೇತರರು ಹಾಗೆ ಮಾಡಲಾರರು ಎಂಬುವುದು ಸತ್ಯ”

ಇಂದು ನಮ್ಮ ಕನ್ನಡ ಭಾಷೆ ಒಣಗಿ ಎಳ್ಕೊಟೆಯಾಗ ಹೊರಟಂತಿದೆ, ನಮ್ಮ ಹುಟ್ಟು, ನುಡಿ, ಸ್ಪರ್ಶ, ಧನ್ಯತೆ, ಭಾವ, ಕಠೋರತೆ, ನಮ್ಮತನ, ಸಂಸ್ಕಾರ ರೂಪ ಕೊಟ್ಟು ನಮ್ಮನ್ನು ಸಮಾಜಕ್ಕೆ ಯಾವ ಭಾಷೆ ಪರಿಚಯಿಸಿತ್ತೋ ಅದೇ ನಮ್ಮ ಸ್ವಂತ ಭಾಷೆ ಪರಕೀಯವಾಗುತ್ತಿದೆ, ಹಿಂದುಳಿಯುತ್ತಿದೆ, ಭಾಷೆಯ ಬಗೆಗಿನ ನಿರುತ್ಸಾಹ , ಹೆಮ್ಮೆಯ ಕೊರತೆಯಿಂದ ಜೀವಂತಿಗೆ ಕಳಕೊಳ್ಳುತ್ತಿದೆ. ಬೆಳಿಗ್ಗೆ ಎದ್ದ ಕೂಡಲೇ ಗುಡ್ ಮಾರ್ನಿಂಗ್ ಮಲಗುವಾಗ ಗುಡ್ ನೈಟ್,….ಹುಟ್ಟುಹಬ್ಬ, ಹಬ್ಬ ಹರಿದಿನ ಹ್ಯಾಪಿ ಬತ್ ್ ಡೇ, ಹ್ಯಾಪಿ ಯಿಂದ ಘೀಳಿಡುವ ಜಡ ಶಬ್ಧಗಳು ಇನ್ನೂ ಉಳಿದಂತೆ ಸೂಪರ್, ಸ್ಮಟ್ ್, ವಾವ್, ನೈಸ್ ಹೀಗೆ ಉದ್ಗಾರಗಳು …. ಆ ಆರ್ಥವಾಗದ ಪದಗಳ ಬದಲಾಗಿ ಶುಭೋದಯ, ಸುಪ್ರಭಾತ, ನಲ್ಬೆಳಗು… ಹುಟ್ಟು ಹಬ್ಬದ ಶುಭಾಶಯಗಳು, ಜನುಮದಿನದ ಶುಭಾಶಯಗಳು ಹೊಸವರುಷದ ಶುಭಾಷಯಗಳು… ಚೆನ್ನಾಗಿದೆ, ಇಷ್ಟವಾಯಿತು,ಸುಂದರವಾಗಿದೆಯೆಂಬುದೆಂದು ಪರ್ಯಾಯವಾಗಿ ಬಳಸಬಹುದಲ್ಲವೇ!!! ಮೇಲೆ ಬಳಸಿದ ಅಂಗ್ಲ ಪದಗಳ ಬಳಕೆಯಿಂದ ಭಾಷಾ ಜ್ಞಾನ ಹೆಚ್ಚುತ್ತದೆಯೇ? ಶಬ್ಧ ಭಂಡಾರ ವೃದ್ಧಿಸುತ್ತದೆಯೇ? ವ್ಯಾಕರಣ ಉತ್ತಮಗೊಳ್ಳುತ್ತದೆಯೇ? ಅಥವಾ ಪದಗಳು ಮರೆಯುತ್ತವೆಯೆಂದು ಆಗೀಗ ನೆನಪಿಸುವ ಪರಿಯೇ? ಆ ಇಂಗ್ಲಿಷ್ ಭಾಷೆಗೆ ಅದರದೇ ಅದ ಗೋತ್ರದವರಿದ್ದಾರೆ, ಮಾತೃ ಭಾಷಿಗರಿದ್ದಾರೆ, ಬಳಸುವವರಿದ್ದಾರೆ, ಅವರು ಅದನ್ನು ಒತ್ತಡವಿಲ್ಲದೇ ಉಳಿಸುತ್ತಾರೆ, ನಾವು ಬೆಳೆಸುವ ಅಗತ್ಯವಿಲ್ಲ , ಅಳಿಯುವುದು ನಮ್ಮ ಭಾಷೆ ಮಾತ್ರ.

ಕರ್ನಾಟಕದಲ್ಲಿ ಕನ್ನಡವನೇಕೆ ಕಡ್ಡಾಯ ಮಾಡಬಾರದು? ಅರಬರಿಗೆ ಅರಬೀ ಕಡ್ಡಾಯ , ಪ್ರಾನ್ಸ್ ನಲ್ಲಿ ಪ್ರೆಂಚ್ ಕಡ್ಡಾಯ , ಜಪಾನಿನಲ್ಲಿ ಜಪಾನಿ ಕಡ್ಡಾಯ, ಚೀನಾದಲ್ಲಿ ಚೀನಿ ಕಡ್ಡಾಯ ಮಾತೃ ಭಾಷೆಯಲ್ಲೇ ಕಲಿತು ಬೆಳೆದ ಆ ರಾಷ್ಟ್ರಗಳಾವುವೂ ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲ. ಮಡಿ , ಮೈಲಿಗೆಯ ಪರಿಧಿಯ ಪೊರೆಯ ಕಳಚಿ ಬೆಳೆದಾಗ ಮಾತ್ರ ಭಾಷೆಯೊಂದು ಜೀವಂತವಾಗಿರಲು ಸಾಧ್ಯ, ಬೇರೆ ಭಾಷೆಗಳ ಶಬ್ಧಗಳನ್ನು ದತ್ತು ಪಡೆದು, ವಿಷಯಗಳನ್ನು ತರ್ಜುಮೆ ಮಾಡಿ ಭಾಷೆ ಚಲನಶೀಲವಾಗಬೇಕು ಚಲಿಸಬೇಕು. ನಮ್ಮ ಇಡ್ಲಿ – ಚಟ್ನಿಗಳು ಅಂಗ್ಲರು ಬಳಸುತಿಲ್ಲವೇ? ಅರಬ್ಬರಿಗೆ ಗೊತ್ತಿಲ್ಲವೇ?. ಚರಟಗಳ ಸೋಸಿ, ಜಿಗುಟು ಬಿಟ್ಟು ಭಾಷೆ ಸರಳವಾಗಿ, ಕೃತಿಮ ಕನ್ನಡದ ಬದಲು ಸಹಜ ಕನ್ನಡದ ಬಳಸಿದಾದರೆ ನಮ್ಮ ಕನ್ನಡ ಉತ್ತುಂಗದಲ್ಲಿ ಹಾರಾಡಲು ಸಾಧ್ಯ. ನಮ್ಮ ನೆರೆಯ ಕೇರಳಿಗನ್ನನ್ನೊಮ್ಮೆ ನೋಡಿ ಆತ ಜಪಾನಿನಲ್ಲಿರಲಿ, ಒಮಾನಿನಲ್ಲಿರಲಿ, ಜರ್ಮನಿಯಲ್ಲಿರಲಿ ಭಾರತೀಯನಲ್ಲೇ ಕೇರಳವನ್ನು ನೋಡುವ ತವಕ “ನಿಂಙ ಮಲಿಯಾಳಿಂಯೋ?” ಎಂದೇ ಮಾತಿಗೆ ಶುರುವಿಡುವುದು, ನಿಮಗೂ ಗೊತ್ತಿರಬಹುದು ಮಲಯಾಳ ಇಂದು ಅರಬ್ಬ್ ರಾಷ್ಟ್ರಗಳಲ್ಲಿ ದ್ವೀತಿಯ ಭಾಷೆಯ ಮಟ್ಟಿಗೆ ಬೆಳೆದು ನಿಂತಿದೆ. ಕಾರಣ ಕೇರಳಿಗರು ಕಾಂಚಾಲಿ ಬಿಟ್ಟು, ನಾಡಿನ, ಭಾಷೆಯ ಪ್ರೇಮದಿಂದ ದಿನ ಬಳಸಿರುವುದರಿಂದ ಮಾತ್ರ ಸಾಧ್ಯವಾಗಿದೆ.ಯಾಕೋ ವಾಸ್ತವದ ವಸ್ತುಸ್ಧಿತಿಗೆ ಮಂದಬುದ್ಧಿಯವರು ಸಹ ಅಂಗ್ಲ ಭಾಷೆ ಬರತ್ತದೆಯೆಂದರೆ ನೌಕರಿ ದೊರೆಯುತ್ತದೆಯೆಂಬ ಜಗದ ಅಮಿಥ್ಯ ಖಚಿತವಾಗಿರುವುದರಿಂದ ಅಂಗ್ಲದ ಜಕ್ಕೆಲಿಗೆ ಜಾರುತ್ತಿದ್ದಾರೆ, ನಿಜವಾಗಿಂಯೂ ನಿಜವಾದ ವಿದ್ವತ್ತು ಅಂಗ್ಲದಿಂದ ಬರುವುದೇ ಇಲ್ಲ, ಅವಕಾಶ ಕೊಡುವುದು ಇಲ್ಲ ಎಂಬುದು ಅಂಗ್ಲ ಮಾನಿಸಿಕ ಗುಲಾಮರಿಗೆ ಅರ್ಥವಾದ ಹಾಗಿಲ್ಲ.

ಎಲ್ಲಿ ಅಗತ್ಯತೆ ಇದೆಯೋ ಅಲ್ಲಿ ಬಳಸಲೇಬೇಕು ನಮ್ಮನ್ನು ನಾವು ಪರಿಚಯಿಸಿಕೊಳ್ಳಬೇಕು, ಎಂದರೆ ಕನ್ನಡ ಯಾವುದೇ ಭಾಷೆಗಿಂತಲೂ ಕೀಳೆಂದಲ್ಲ, ಅದರೆ ನಮ್ಮ ಮಲಿನವಾಗಿರುವ ರಕ್ತಮಜ್ಜೆಗಳಲ್ಲಿ, ಮೆದುಳಿನ ನೆರಿಗೆಗಳಲ್ಲಿ ಲೀನವಾಗಿರುವ ಕೀಳರಿಮೆಗೆ ಔಷಧಿ ನೀಡಬೇಕಷ್ಟೇ, ನೀವು ಅಪ್ಪಟ ಕನ್ನಡದಲ್ಲಿ ಮಾತನಾಡಿದರೆ ನಗುವವರೆಷ್ಟು ಜನ, ಗೇಲಿ ಮಾಡುವವರೆಷ್ಟು ಜನ, ಇದು ನಮ್ಮಮ್ಮನನ್ನೇ ಹಾಸ್ಯ ಮಾಡಿದಂತಲ್ಲವೇ? ಸ್ವಲ್ಪ ಕನ್ನಡದ ಕನ್ನಡಕವನ್ನಿಟ್ಟು ಚಿಂತಿಸಿ , ಇಂದು ಸ್ಪುಟ ಕನ್ನಡ ತನ್ನತೆಯೊಂದಿಗೆ ನಲಿದಾಡುತ್ತದೆಯೆಂದರೆ ಅದು ಹಳ್ಳಿಯ ಜನರಿಂದ, ನಮ್ಮ ಯಕ್ಷಗಾನಗಳಿಂದ, ರಂಗಸಂಘಗಳಿಂದ, ಜಾನಪದರಿಂದ ಮಾತ್ರ.

ಕೊನೆಗೆ ಕನ್ನಡ ಕಸ್ತೂರಿಯೆಂದು ಮುಚ್ಚಿದ ಡಬ್ಬದಲ್ಲಿ ಮುಚ್ಚಿಡದೇ ಪರಿಮಳ ಪಸರಿಸಲು ಬಿಟ್ಟು ಬಿಡಿ, ಓದುತ್ತಿರುವ ನೀವು ಹೆಮ್ಮೆಯ ಕನ್ನಡದ ಕಂದ ಕಾಂಚಾಲಿ ಬಿಡಿ ತಾವು ಬಳಸುವ ಚರವಾಣಿ, ಗಣಕಯಂತ್ರಗಳಲ್ಲಿ ಕನ್ನಡ ತಂತ್ರಾಂಶ ಬಳಸಿ, ಬರೆಯುವ ಹೆಸರು,ವಿಳಾಸ, ಸಾಮಾನು ಚೀಟಿಗಳನ್ನು ಮುಗ್ಧ, ದುಂಡಾಗಿನ ಸುಂದರ ಕನ್ನಡ ಅಕ್ಷರಗಳಲ್ಲಿ ಬರೆಯಿರಿ. ಇದು ಕೋರಿಕೆಯಲ್ಲ ಕರ್ನಾಟಕದವನೆಂದು, ಕನ್ನಡದವನೆನ್ನುವ ನಿಮಗೆ ನಿಮ್ಮ ಪ್ರತಿಷ್ಠೆಯ ಪ್ರಶ್ನೆ, ಸ್ವಂತಕ್ಕಾಗಿ ಹೋರಾಡುವ ನಾವು ನಾನು, ನನ್ನದು , ನನ್ನ ಮನೆ, ನನ್ನ ಜಾಗ ಹೀಗೆ ಅಹಂನಿಂದ ಸ್ವಾರ್ಥಿಯಾದಂತೆ ನನ್ನ ಭಾಷೆಯ ಬಗೆಗೂ ಸ್ವಾರ್ಥಿಯಾಗೋಣ ಏನಂತೀರಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments