ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 6, 2014

ವೇಶ್ಯಾವೃತ್ತಿ: ಮಹಿಳೆಯರ ರಕ್ಷಣೆಗೆ ಮಹಿಳೆಯರ ಅತ್ಯಾಚಾರವೇ?

by ನಿಲುಮೆ

– ತುರುವೇಕೆರೆ ಪ್ರಸಾದ್

ಮಹಿಳಾ ದೌರ್ಜನ್ಯವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕು. ಇದರಿಂದ ಸ್ವಲ್ಪ ಮಟ್ಟಿಗೆ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಹಾಗೂ ಅತ್ಯಾಚಾರಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಪ್ರಪಂಚದ ಹಲವು ಕಡೆ ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನಗಳಲ್ಲಿ ಇದಕ್ಕೆ ಪೂರಕವಾದ ಅಂಕಿ ಅಂಶಗಳು ಸಿಕ್ಕಿವೆ. ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ ಎನ್‍ಬಿಇಎಲ್ ಅಧ್ಯಯನದ ಪ್ರಕಾರ ರೋಡ್ ದ್ವೀಪದಲ್ಲಿ 2003-2009ರ ಅವಧಿಯಲ್ಲಿ ವೇಶ್ಯಾ ವೃತ್ತಿಯನ್ನು ಕಾನೂನುಬದ್ಧಗೊಳಿಸಿದಾಗ ಶೇ.39 ರಷ್ಟು ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿದ್ದವು. ಗೊನೇರಿಯಾ ಕಾಯಿಲೆಯ ಹರಡುವಿಕೆ ಪ್ರಮಾಣ    ಶೇ.45ರಷ್ಟು ಕಡಿಮೆಯಾಗಿತ್ತು. ಬೈಲಾರ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳಾದ ಸ್ಕಾಟ್ ಕನ್ನಿಂಗ್ ಹ್ಯಾಮ್ ಮತ್ತು ಮಾನಿಷಾ ಶಾ ವೇಶ್ಯೆಯರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದೆ ತೆಗೆದ ಪರಿಣಾಮ ಹೆಂಗಸರ ಮೇಲಿನ ಅಪರಾಧ ಹಾಗೂ ದೌರ್ಜನ್ಯಗಳ ಸಂಖ್ಯೆ ಇಳಿಮುಖವಾಗಿತ್ತು ಎಂಬುದನ್ನು ಗುರುತಿಸಿದ್ದಾರೆ. ನಾರ್ತ್ ಈಸ್ರ್ಟನ್ ಸ್ಟೇಟ್ ಯೂನಿವಸಿಟಿಯ ಕಿರ್ಬಿ ಆರ್. ಕಂಡೀಫ್ ಅಮೇರಿಕಾದಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿದರೆ       ಶೇ.25ರಷ್ಟು ಅಂದರೆ 25ಸಾವಿರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದೆಂದು ಬಹಳ ಹಿಂದೆಯೇ ಸಲಹೆ ನೀಡಿದ್ದರು. ಕ್ವೀನ್ಸ್‍ಲ್ಯಾಡ್‍ನಲ್ಲಿ ಕಾನೂನುಬದ್ಧವಾಗಿ ನಡೆಸುತ್ತಿದ್ದ ವೇಶ್ಯಾಗೃಹಗಳನ್ನು ಮುಚ್ಚಿದಾಗ ಅಲ್ಲಿನ ಅತ್ಯಾಚಾರ ಪ್ರಕರಣಗಳ ಪ್ರಮಾಣ ಶೇ.149ಕ್ಕೆ ಏರಿತು ಎಂದು ಲಿಂಡಾ ರಿಚ್‍ಮ್ಯಾನ್ ಅಭಿಪ್ರಾಯ ಪಡುತ್ತಾರೆ. 2004ರಲ್ಲಿ ಜರ್ಮನಿಯಲ್ಲಿ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಿ ನೊಂದಾಯಿಸಿದ ವೇಶ್ಯೆಯರಿಗೆ ಆರೋಗ್ಯವಿಮೆ, ನಿವೃತ್ತಿ ವೇತನ ಇತರೆ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಲಾಗಿತ್ತು. ಇದರಿಂದ ಪ್ರವಾಸೋದ್ಯಮ ಬೃಹತ್ತಾಗಿ ಬೆಳೆಯಿತು. ಹೆಂಗಸರಿನ ಮೇಲಿನ ಅಪರಾಧ ಪ್ರಕರಣಗಳು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾದವು. ಅದರೆ ಕೇವಲ 44 ಮಂದಿ ವೃತ್ತಿನಿರತ ಮಹಿಳೆಯರು ಮಾತ್ರವೇ ಸರ್ಕಾರದ ಸವಲತ್ತು ಪಡೆದರು. ಇದೇ ಅವಧಿಯಲ್ಲಿ ಜರ್ಮನ್ ಧೋರಣೆಗೆ ವಿರುದ್ಧವಾಗಿ ಸ್ವೀಡನ್ ವೇಶ್ಯಾವೃತ್ತಿಯನ್ನು ಸಂಪೂರ್ಣ ನಿಯಂತ್ರಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು. ಇದರ ಪರಿಣಾಮ ಸ್ವೀಡನ್‍ನಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಏರುಪ್ರಮಾಣ ದಾಖಲಿಸಿತು. ವೇಶ್ಯಾವೃತ್ತಿಯಲ್ಲಿ ತೊಡಗುವವರು ವಯಸ್ಕರಾಗಿರಬೇಕು ಮತ್ತು ಯಾವುದೇ ಒತ್ತಡಕ್ಕೆ ಬಲಿಯಾಗದಂತೆ ಈ ವೃತ್ತಿಯನ್ನು ಕಾನೂನು ಬದ್ಧಗೊಳಿಸಬಹುದು. ಇದರಿಂದ ಭಾರತದಲ್ಲಿ ಸಹ ಅತ್ಯಾಚಾರ ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ ಎಂದು ಖ್ಯಾತ ಪತ್ರಕರ್ತ ದಿ. ಕುಶ್ವಂತ್‍ಸಿಂಗ್ ಸಹ ಅಭಿಪ್ರಾಯಪಟ್ಟಿದ್ದರು.

ಆದರೆ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸುವುದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಲ್ಲ. ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸುವುದರಿಂದ ಅಪರಾಧ ಪ್ರಕರಣಗಳು ಮೇಲ್ನೋಟಕ್ಕೆ ಕಡಿಮೆಯಾದಂತೆನಿಸಿದರೂ ಕಾನೂನಿನ ಮರೆಯಲ್ಲಿ ಒಂದು ವರ್ಗದ ಮಹಿಳೆಯರನ್ನು ನಿರಂತರವಾಗಿ ಶೋಷಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯವಿದೆ.   ರೋಡ್ ವಿಶ್ವವಿದ್ಯಾನಿಲಯದ ಡೊನ್ನಾಹಗ್ಸ್ ‘ವೇಶ್ಯೆಯರು ಕ್ರಿಮಿನಲ್ಸ್ ಅಲ್ಲ, ಅವರ ಗಿರಾಕಿಗಳು ಕ್ರಿಮಿನಲ್‍ಗಳು, ವೇಶ್ಯೆಯರು ಕೇವಲ ಬಲಿಪಶುಗಳು ಎನ್ನುತ್ತಾರೆ. ಮಹಿಳಾ ಸಮಾನತೆ ಎಂದರೆ ಎಲ್ಲಾ ಮಹಿಳೆಯರೂ ಲೈಂಗಿಕ ಶೋಷಣೆಯಿಂದ,ದೌರ್ಜನ್ಯದಿಂದ ಮುಕ್ತರಾಗಿರುವುದು ಎಂದೇ ಅರ್ಥ.ವೇಶ್ಯಾವೃತ್ತಿಯೇ ಸ್ವತಃ ಅತ್ಯಾಚಾರವಾಗಿರುವುದರಿಂದ ಅದು ಅತ್ಯಾಚಾರವನ್ನು ಕಡಿಮೆಮಾಡುತ್ತದೆ ಎನ್ನುವುದೇ ಹಾಸ್ಯಾಸ್ಪದ. ಮಹಿಳೆಯರನ್ನು ಕರೆತಂದು ಅಥವಾ ಕದ್ದು ತಂದು ಕಾನೂನು ಬದ್ಧವಾಗಿ ಅತ್ಯಾಚಾರಕ್ಕೆ ಅಣಿಗೊಳಿಸುವುದು ಮತ್ತು ಪುರುಷರ ಲೈಂಗಿಕ ಕ್ರಿಯೆಗೆ ಮಹಿಳೆಯರನ್ನು ಭೋಗದ ವಸ್ತುವನ್ನಾಗಿಸುವುದು ದೊಡ್ಡ ಅಪರಾಧ ಎನ್ನುತ್ತಾರೆ ಖ್ಯಾತ ಮಹಿಳಾ ಹೋರಾಟಗಾರ್ತಿ ಹಾಗೂ ವೇಶ್ಯಾವೃತ್ತಿಯ ಕಟ್ಟಾ ವಿರೋಧಿ ಮೆಲಿಸಾ ಫಾರ್ಲೆ. ಕಾನೂನುಬದ್ಧ ವೇಶ್ಯಾವೃತ್ತಿ ಎಂದರೆ ಸಮಾಜದ ಸ್ಥಿತಿವಂತ ಮಹಿಳಾ ಸಮುದಾಯದ ಘನತೆ, ಶೀಲ ಕಾಪಾಡಲು ಮತ್ತೊಂದು ಅಸಹಾಯಕ ವರ್ಗವಾದ ಶೋಷಿತ ಮಹಿಳೆಯರನ್ನು ರೇಪ್ ಮಾಡಿಸುವುದು ಎಂದಾಗುತ್ತದೆ.

ಹಲವು ಅಧ್ಯಯನಗಳ ಪ್ರಕಾರ ಬಹುತೇಕ ಅತ್ಯಾಚಾರಿಗಳು ವೇಶ್ಯಾವೃತ್ತಿಯನ್ನು ಬೆಂಬಲಿಸುವುದಿಲ್ಲ, ಅಥವಾ ಒಮ್ಮೆಯೂ ಆ ಅನುಭವ ಪಡೆದವರಲ್ಲ, ಅತ್ಯಾಚಾರಿಗಳಲ್ಲಿ ಹಲವರಿಗೆ ಸ್ನೇಹಿತೆಯರಿರುತ್ತಾರೆ, ಕೆಲವರಿಗೆ ಮದುವೆಯೂ ಆಗಿ ಪತ್ನಿಯೊಂದಿಗೆ ಸಂಸಾರ ಮಾಡುತ್ತಿರುತ್ತಾರೆ, ಇನ್ನು ಕೆಲವರು ಲಿವಿಂಗ್ ಟುಗೆದರ್ ಸಂಬಂಧಗಳಲ್ಲಿರುತ್ತಾರೆ. ಆಗಾಗ್ಗೆ ವೇಶ್ಯೆಯರ ಸಹವಾಸ ಮಾಡುವ ವಯಸ್ಸಿನ ಗಂಡಸರಿಗಿಂತ ಅತ್ಯಾಚಾರಿಗಳು ಕಡಿಮೆ ವಯಸ್ಸಿನವರಾಗಿರುತ್ತಾರೆ. ವಿಯಟ್ನಾಂನಲ್ಲಿ ಅಮೇರಿಕಾ ಯೋಧರಿಗೆಂದೇ ಮಿಲಿಟರ್ ಬೇಸ್‍ಕ್ಯಾಂಪ್ ಪ್ರದೇಶದಲ್ಲಿ ಕಾನೂನುಬದ್ಧ ವೇಶ್ಯಾಗೃಹಗಳನ್ನು ನಿರ್ಮಿಸಲಾಗಿತ್ತು. ಆದರೂ ಅಮೇರಿಕನ್ ಯೋಧರು ಮುಗ್ಧ ವಿಯೆಟ್ನಾಂ ಹೆಂಗಸರು ಹಾಗೂ ಹೆಣ್ಣುಮಕ್ಕಳ ಮೇಲೆ ಇತಿಹಾಸದಲ್ಲಿ ಮರೆಯಲಾಗದಂತಹ ಘೋರ ಅತ್ಯಾಚಾರ ಎಸಗಿದರು. ಹೀಗಾಗಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದರಿಂದ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗುತ್ತದೆಂದು ಹೇಗೆ ನಂಬುವುದು?

ವೇಶ್ಯಾವೃತ್ತಿಯನ್ನು 4 ರೀತಿಯಲ್ಲಿ ಪರಿಗಣಿಸಬಹುದಾಗಿದೆ. ವೇಶ್ಯಾವೃತ್ತಿಯನ್ನು ಅಪರಾಧೀಕರಣಗೊಳಿಸುವುದು, ಕಾನೂನುಬದ್ಧಗೊಳಿಸುವುದು, ನಿರಪರಾಧೀಕರಣಗೊಳಿಸುವುದು ಅಥವಾ ನಿಷೇಧಿಸುವುದು. ಅಪರಾಧೀಕರಣಗೊಳಿಸಿದರೆ ವೃತ್ತಿ ನಿರತರು, ಬ್ರೋಕರ್, ಪಿಂಪ್ ಎಲ್ಲರೂ ಶಿಕ್ಷಾರ್ಹರಾಗುತ್ತಾರೆ. ಕಾನೂನುಬದ್ಧಗೊಳಿಸಿದರೆ ಒಂದು ಸ್ಥಳೀಯ ಸಂಸ್ಥೆಯ ಮೂಲಕ ಈ ವೃತ್ತಿ ನಿಯಂತ್ರಿಸಲ್ಪಡಬಹುದು. ನಿರಪರಾಧೀಕರಣಗೊಳಿಸಿದರೆ ಮಾತ್ರ ಬ್ರೋಕರ್, ಮಧ್ಯವರ್ತಿಗಳ ವಿರುದ್ಧ ಇರುವ ಕಾನೂನು ಸಡಿಲಗೊಳ್ಳುತ್ತದೆ.ವೇಶ್ಯಾವೃತ್ತಿಯ ನಿಷೇಧ ಮಾನವ ಹಕ್ಕು ಆಧಾರಿತ ಕ್ರಮವಾಗಿದ್ದು ಇದು ಹೆಣ್ಣುಮಕ್ಕಳ ಸಾಗಣೆ, ಮಾರಾಟ ಹಾಗೂ ಕೊಳ್ಳುವಿಕೆಯನ್ನು ಕಾನೂನು ಮೂಲಕ ಹತ್ತಿಕ್ಕಿ ಲೈಂಗಿಕ ಕಾರ್ಯಕರ್ತೆಯರನ್ನು ಶಿಕ್ಷಿಸುವ ಬದಲು ವೃತ್ತಿಯಿಂದ ಮುಕ್ತಗೊಳಿಸುವುದಾಗಿದೆ.

ವಿಶ್ವಸಂಸ್ಥೆ ನಡೆಸಿದ ಒಂದು ಸಂದರ್ಶನದ ಪ್ರಕಾರ ವೇಶ್ಯಾವೃತ್ತಿಯಲ್ಲಿರುವ ಶೇ.80ರಷ್ಟು ಮಹಿಳೆಯರು ಅತ್ಯಾಚಾರದ ಬಲಿಪಶುಗಳಾಗಿದ್ದಾರೆ. ಒಬ್ಬಾಕೆ ‘ವೇಶ್ಯೆಯ ಪ್ರತಿ ಲೈಂಗಿಕ ಅನುಭವವೂ ಒಂದು ಅತ್ಯಾಚಾರ’ ಎಂದು ವಿಷಾಧಿಸುತ್ತಾಳೆ. ಈ ವೃತ್ತಿಯಲ್ಲಿರುವ ಪ್ರತಿ ಮಹಿಳೆಯೂ ವರ್ಷಕ್ಕೆ ಕನಿಷ್ಠ 8 ರಿಂದ 10 ಬಾರಿ ಅತ್ಯಾಚಾರಕ್ಕೊಳಗಾಗುತ್ತಾಳೆ. ನಮ್ಮ ಭೂಗ್ರಹದ ಮೇಲೆ ಅತ್ಯಂತ ಹೆಚ್ಚು ಬಾರಿ ಅತ್ಯಾಚಾರಕ್ಕೊಳಗಾದ ಸಮೂಹ ಎಂದರೆ ಈ ವೃತ್ತಿಯಲ್ಲಿರುವ ಮಹಿಳೆಯರು ಎನ್ನುತ್ತಾರೆ       ಸುಸಾನ್ ಕೆ ಹಂಟರ್ ಮತ್ತು ರೀಡ್. ಕೌನ್ಸಿಲ್ ಫಾರ್ ಪ್ರಾಸ್ಟಿಟ್ಯೂಶನ್ ಅಲ್ಟ್ರನೇಟೀವ್ಸ್‍ನ ಸಹಾಯ ಯಾಚಿಸಿ ಬಂದ ಶೇ.78 ರಷ್ಟು ಮಹಿಳೆಯರು ವರ್ಷಕ್ಕೆ ಸರಾಸರಿ 16 ಬಾರಿ ದಲ್ಲಾಳಿಗಳಿಂದ ಮತ್ತು 33 ಬಾರಿ ಮಧ್ಯವರ್ತಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ. ಒರೆಗಾನ್ ಮತ್ತು ಪೋರ್ಟ್‍ಲ್ಯಾಂಡ್‍ನಲ್ಲಿ ಶೇ.85ರಷ್ಟು ವೃತ್ತಿನಿರತ ವೇಶ್ಯೆಯರು ನಿರಂತರ ಅತ್ಯಾಚಾರಕ್ಕೊಳಗಾಗಿದ್ದಾರೆ. ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಟರ್ಕಿ, ಯುಎಸ್‍ಎ ಮತ್ತು ಜಾಂಬಿಯಾ ಈ ಐದು ದೇಶಗಳಲ್ಲಿ ವೇಶ್ಯಾವೃತ್ತಿ ಕುರಿತು ನಡೆದ ಸಮೀಕ್ಷೆಯಲ್ಲಿ ಶೇ.62 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ, ಶೇ.73 ಮಹಿಳೆಯರು ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ. ಶೇ.72 ಮಹಿಳೆಯರು ವಸತಿ ಹೀನರಾಗಿದ್ದಾರೆ. ಶೇ.92 ಮಹಿಳೆಯರು ತಕ್ಷಣ ಈ ವೃತ್ತಿಯಿಂದ ಈಚೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬುದು ಕಂಡುಬಂದಿದೆ. ಶೇ.75ರಷ್ಟು ಮಹಿಳೆಯರು ಒಂದಿಲ್ಲೊಂದು ರೀರಿಯಲ್ಲಿ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಾರೆ. ಕೆನಡಾದ ಒಂದು ವರದಿ ಪ್ರಕಾರ ವೇಶ್ಯಾವೃತ್ತಿಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿ ಮರಣ ಪ್ರಮಾಣಕ್ಕಿಂತ ಶೇ.40ರಷ್ಟಿತ್ತು ಎನ್ನುವುದು ತೀರಾ ಗಾಬರಿ ಮೂಡಿಸುವ ಸಂಗತಿ. ಯಾವುದೇ ವೃತ್ತಿ ಆತ್ಮತೃಪ್ತಿ, ಘನತೆ, ಗೌರವಗಳನ್ನು ಹೆಚ್ಚಿಸಬೇಕು. ಬದುಕಿನ ಭದ್ರತೆ ನೀಡಬೇಕು, ಯಾರ ಹಂಗೂ ಇಲ್ಲದೆ ಸ್ವತಂತ್ಯವಾಗಿ ನಿಭಾಯಿಸುವ ನೈಪುಣ್ಯ, ವೃತ್ತಿ ಕೌಶಲ ಇರಬೇಕು. ಇದಾವುದೂ ಇಲ್ಲದ ಒಂದು ಅನಿವಾರ್ಯ ಶೋಷಣೆಯನ್ನು ವೃತ್ತಿ ಎಂದು ಕರೆಯುವುದೇ ದೊಡ್ಡ ವಿಪರ್ಯಾಸ.

ಚಿತ್ರಕೃಪೆ : ektamacha.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments