ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2014

ಕನ್ನಡದ ಇಲ್ಲಗಳು!

by ನಿಲುಮೆ

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

ಕನ್ನಡದ ಇಲ್ಲಗಳುಕನ್ನಡ ಸಾವಿರ ವರ್ಷಗಳಿಂದ ಉಳಿದು ಬಂದ ಬಗೆ ಬೆರಗು ಹುಟ್ಟಿಸುವಂಥದ್ದೇನಲ್ಲ. ಅದು ಎಲ್ಲ ಜೀವಂತ ಭಾಷೆಗಳಂತೆಯೇ ಸಹಜವಾಗಿ ಸವಾಲುಗಳನ್ನು ಎದುರಿಸಿ ತನ್ನೊಡಲೊಳಗೆ ಸೇರಿಸಿಕೊಂಡು, ತನ್ನದನ್ನಾಗಿ ಮಾಡಿಕೊಂಡಿದೆ. ಹೀಗೆಂದರೆ ಬಿಸಿಲು, ಮಳೆ ಗಾಳಿಗಳನ್ನು ಎದುರಿಸಿ ಸಾವಿರ ವರ್ಷಗಳಿಂದ ಜಗ್ಗದೇ ಈ ಕಲ್ಲು ನಿಂತಿದೆ ಎಂಬಂತೆ ಕನ್ನಡ ಎಂದರೆ ಯಾವುದೋ ಎರಡನೆಯ ವಸ್ತುವಲ್ಲ. ಕನ್ನಡ ದಕ್ಕಿಸಿಕೊಂಡಿದೆ ಎಂದರೆ ಕನ್ನಡ ಮಾತನಾಡುವ ಜನ ಹಾಗೆ ಮಾಡಿದ್ದಾರೆ ಎಂದರ್ಥ. ಆದರೆ ಇಂದೇನಾಗಿದೆ? ಕನ್ನಡಿಗರು ಕನ್ನಡವೇ ಬೇರೆ, ತಾವೇ ಬೇರೆ ಎಂಬಂತೆ ಇದ್ದಾರೆ. ಎಲ್ಲವನ್ನೂ ಸಿದ್ಧಮಾದರಿಯಲ್ಲಿ ಬಯಸುವ ನಮಗೆ ಕನ್ನಡವೂ ಸಿದ್ಧಮಾದರಿಯಲ್ಲಿ ಉದ್ಧಾರವಾಗಬೇಕು! ನಾನೊಬ್ಬ ಕನ್ನಡ ಮಾತಾಡದಿದ್ದರೆ ಏನಂತೆ? ನನ್ನ ಮಗ/ಮಗಳು ಕನ್ನಡ ಕಲಿಯದಿದ್ದರೆ ಏನಂತೆ? ಎಂದು ಒಬ್ಬೊಬ್ಬರೂ ಭಾವಿಸಿ ಅಂತೆಯೇ ವರ್ತಿಸುತ್ತಿರುವುದೇ ಕನ್ನಡದ ಇಂದಿನ ಸಮಸ್ಯೆಗೆ ಬಹುಪಾಲು ಕಾರಣ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಯಾದ ಭಾಷೆಯನ್ನು ಆರ್ಥಿಕ-ಔದ್ಯೋಗಿಕ ಮತ್ತು ರಾಜಕೀಯ ದೃಷ್ಟಿಯಿಂದ ನೋಡುವ ಪರಿಪಾಠ ಇನ್ನೊಂದು ಅಪಾಯ. ಕಾಲ ಕಾಲಕ್ಕೆ ಆಯಾ ಭಾಷಿಕ ಪರಿಸರದಲ್ಲಿ ಕಾಣಿಸುವ ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಮೊದಲಾದ ಸನ್ನಿವೇಶಗಳನ್ನು ಎದುರಿಸುತ್ತ, ಅದನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತ ಹೋಗಬೇಕಾದ ಸವಾಲು ಇರುವುದರಿಂದ ಕನ್ನಡ ಎಂದಲ್ಲ, ಎಲ್ಲ ಜೀವಂತ ಭಾಷೆಗಳೂ ಸದಾ ಕಾಲ ಸಂಕ್ರಮಣ ಸ್ಥಿತಿಯಲ್ಲೇ ಇರುತ್ತವೆ.

ಸದ್ಯದ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಕ್ಕಾಗಿ ಇರುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು ನೂರನ್ನೂ ಮೀರುತ್ತವೆ. ಇಷ್ಟಾದರೂ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಿದ್ಧವಾಗುವಂತೆ ಕನ್ನಡವನ್ನು ಕಟ್ಟುವ ಮತ್ತು ರೂಪಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ. ಇದು ಆಕ್ಷೇಪವಲ್ಲ, ವಾಸ್ತವ. ಆಧುನಿಕ ತಂತ್ರಜ್ಞಾನದಿಂದ ಇಂದು ಭಾಷೆ, ಶಿಕ್ಷಣ ಮತ್ತು ಸಾಹಿತ್ಯದ ಸ್ವರೂಪವೇ ಬದಲಾಗಿಹೋಗಿದೆ. ಕಂಪ್ಯೂಟರ್, ಮೊಬೈಲ್ ತಂತ್ರಜ್ಞಾನಗಳು ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಹೊಸ ಜಗತ್ತಿನ ಈ ಹೊಸ ಸಂಪರ್ಕ ಮಾಧ್ಯಮಗಳು ಭಾಷೆಯನ್ನು ಬಳಸಿಕೊಳ್ಳುವ ಬಗೆಯೇ ಬೇರೆ. ಈ ತಂತ್ರಜ್ಞಾನಗಳಿಗೆ ಒಳಪಡದ ಭಾಷೆ ಅಳಿವು ಉಳಿವಿನ ಪ್ರಶ್ನೆಯನ್ನು ಎದುರಿಸುವುದು ಖಂಡಿತ. ಕನ್ನಡ ಈಗ ಈ ಸವಾಲು ಎದುರಿಸುತ್ತಿದೆ.

ಕನ್ನಡ ಸಮೃದ್ಧ ಭಾಷೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೃಷಿ, ತಂತ್ರಜ್ಞಾನ, ವಿಜ್ಞಾನ, ವೈದ್ಯ, ಕಾನೂನು ಹೀಗೆ ಯಾವುದೇ ವಿಷಯವನ್ನೂ ಕನ್ನಡದಲ್ಲಿ ನೀಡಲು ಸಾಧ್ಯ, ಈಗಾಗಲೇ ಇವುಗಳ ನಿದರ್ಶನ ಬೇಕಾದಷ್ಟಿದೆ, ಇಂಥ ಯತ್ನ ಅನೇಕ ದಶಕಗಳಿಂದಲೂ ನಡೆಯುತ್ತಲೇ ಇದೆ. ಪ್ರಶ್ನೆ ಅದಲ್ಲ. ಇಂಥ ಸಮೃದ್ಧ ಭಾಷೆ ಆಧುನಿಕ ತಂತ್ರಜ್ಞಾನ ಎನಿಸಿದ ಕಂಪ್ಯೂಟರ್ ಮತ್ತು ಮೊಬೈಲ್‍ಗಳಲ್ಲಿ ಜಾಗ ಪಡೆಯದೇ ಇದ್ದರೆ ಹೊಸ ತಲೆಮಾರು ಈ ಭಾಷೆಯನ್ನು ಒಪ್ಪಲಾರದು. ಆಧುನಿಕ ತಂತ್ರಜ್ಞಾನ ಹಳ್ಳಿಗಳನ್ನೂ ತೆಕ್ಕೆಗೆ ತೆಗೆದುಕೊಂಡಿದೆ. ಆಧುನಿಕ ಸಂಪರ್ಕ ವಿಧಾನಕ್ಕೆ ತೆರೆದುಕೊಳ್ಳದ ಭಾಷೆ ನಿಧಾನವಾಗಿ ನಾಪತ್ತೆಯಾಗುತ್ತ ಹೋಗುತ್ತದೆ. ಕನ್ನಡ ಹಿಡಿದ ದಾರಿ ಸದ್ಯ ಇದೇ.

1894ರಲ್ಲಿ ಕಿಟ್ಟೆಲ್ ಸಂಗ್ರಹಿಸಿದ 70,000 ಪದಗಳ ಕನ್ನಡ ಕೋಶವೇ ಇಂದಿಗೂ ನಮಗೆ ಪ್ರಮಾಣ. ಅದರಲ್ಲಿರುವ ಎಷ್ಟೋ ಪದಗಳು ಇಂದು ಬಳಕೆಯಲ್ಲೇ ಇಲ್ಲ. ಹೊಸ ವಿಷಯಗಳ ಜೊತೆ ಪರಿಚಯವಾದ ಪದಗಳಿಗೆ ಹೊಸ ಕನ್ನಡ ಪದಗಳಿಗೆ ಅರ್ಥ ಕೊಡುವ ಪ್ರಯತ್ನಗಳೂ ಸಾಕಷ್ಟಿಲ್ಲ.

ಕನ್ನಡವನ್ನು ಕಂಪ್ಯೂಟರಿನಲ್ಲಿ ಮುದ್ರಿಸಲು ಅನೇಕ ಲಿಪಿಗಳು ಲಭ್ಯವಿದ್ದರೂ ಅವುಗಳ ಸಾಫ್ಟ್ವೇರ್ ಅಥವಾ ಯಂತ್ರಾಂಶ ಬಹುತೇಕ ಟ್ರಾನ್ಸ್‍ಲಿಟರೇಶನ್ ಮಾದರಿಯದು. ಕೀಲಿಮಣೆಯೂ ಇಂಗ್ಲಿಷ್‍ನದೇ. ಕೆಲವು ಮೊಬೈಲ್‍ಗಳಲ್ಲಿ ಕೀಲಿಮಣೆಯಲ್ಲಿ ಕನ್ನಡದ ಲಿಪಿ ಇದ್ದರೂ ಅದರೊಳಗೆ ಅಡಕವಾದ ಯಂತ್ರಾಂಶ ಮತ್ತೆ ಇಂಗ್ಲಿಷ್ ಕೀಲಿಗೆ ಸಂವಾದಿಯನ್ನೇ ಹುಡುಕಿ ಕೊಡುವಂಥದ್ದು. ಇದೇ ಯಂತ್ರಾಂಶ ಅಳವಡಿಸಿಕೊಂಡು ಕನ್ನಡದ ವಿವಿಧ ಅಕ್ಷರ ವಿನ್ಯಾಸ ಮೂಡಿಸುವ ಪ್ರಜಾ, ಬರಹ, ಶ್ರೀಲಿಪಿ, ನುಡಿ, ಕಾವೇರಿ, ತುಂಗಾ ಇತ್ಯಾದಿ ನೂರಾರು ಲಿಪಿಗಳಿದ್ದರೂ ಒಂದು ವಿನ್ಯಾಸದಲ್ಲಿ ಮೂಡಿಸಿದ್ದನ್ನು ಮತ್ತೊಂದು ವಿನ್ಯಾಸಕ್ಕೆ ಪರಿವರ್ತಿಸಿದರೆ ಅನೇಕ ಅಕ್ಷರಗಳು ಬಿದ್ದುಹೋಗುತ್ತವೆ ಅಥವಾ ಒಡೆಯುತ್ತವೆ. ಇಂಗ್ಲಿಷ್‍ನಲ್ಲಿ ಇಂಥ ಅನೇಕ ಅಕ್ಷರ ವಿನ್ಯಾಸಗಳಿದ್ದರೂ ಅವುಗಳ ವಿನ್ಯಾಸ ಪರಿವರ್ತನೆಯಿಂದ ಭಾಷೆಗೆ ಏನೂ ಅಪಚಾರವಾಗುವುದಿಲ್ಲ. ಇದಕ್ಕೆ ಅದರದ್ದೇ ಆದ ಆಪಟೇರಿಂಗ್ ಸಿಸ್ಟಂ ಅಥವಾ ಕಾರ್ಯ ವ್ಯವಸ್ಥೆ ಇರುವುದೇ ಕಾರಣ. ಕರ್ನಾಟಕ ಅದರಲ್ಲೂ ಬೆಂಗಳೂರು ಮಹಾನ್ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ, ಕನ್ನಡದ್ದೇ ಜಗದ್ವಿಖ್ಯಾತ ಕಂಪ್ಯೂಟರ್ ತಂತ್ರಜ್ಞರನ್ನು ಹೊಂದಿದ್ದರೂ ಇನ್ನೂ ಕನ್ನಡದ್ದೇ ಆದ ಕಾರ್ಯವ್ಯವಸ್ಥೆ ಹೊಂದಿಲ್ಲದಿರುವುದು ವ್ಯಂಗ್ಯವೋ ದುರಂತವೋ ಅರ್ಥವಾಗುವುದಿಲ್ಲ. ತಮಿಳು, ಹಿಂದಿಯಂಥ ಭಾಷೆಗಳು ಈ ಸಮಸ್ಯೆಯನ್ನು ಎಂದೋ ನಿವಾರಿಸಿಕೊಂಡಿವೆ. ಹಾಗಾಗಿ ಅಂತರ್ಜಾಲದಲ್ಲಿರಲಿ, ಆಧುನಿಕ ತಂತ್ರಜ್ಞಾನದಲ್ಲಿರಲಿ ಅವರ ಭಾಷೆ ಸರಾಗವಾಗಿ ಎಲ್ಲೆಂದರಲ್ಲಿ ಸುಳಿದಾಡುತ್ತಿದೆ. ಕನ್ನಡದ ಈ ಕೊರತೆ ತುಂಬುವುದು ತಡವಾದಷ್ಟೂ ಆಧುನಿಕರಿಂದ ಅದು ಅಷ್ಟಷ್ಟು ದೂರವಾಗುತ್ತಲೇ ಹೋಗುತ್ತದೆ.

ಸದ್ಯ ಕನ್ನಡದ ಯಾವುದೇ ಮಾಹಿತಿಯನ್ನು ಅಂತರ್ಜಾಲದಲ್ಲಿ ಜಾಲಾಡಲು ಕುಳಿತರೆ ಇಂಗ್ಲಿಷ್ ನೆರವು ಬೇಕೇ ಬೇಕು. ಇದನ್ನು ನಿವಾರಿಸುವ ಕನ್ನಡ ಕಣಜ ಯೋಜನೆ ಕುಂಟುತ್ತ ಸಾಗಿದೆ. ಲೇಖನ ಬರೆದು ಕೊಡುವವರಿಲ್ಲ. ಕೊಟ್ಟರೂ ಅದರಲ್ಲಿ ಅಗತ್ಯ ಮಾಹಿತಿಗಳಿರುವುದಿಲ್ಲ. ಮಾಹಿತಿ ಇದ್ದರೂ ಭಾಷೆ ಸರಿ ಇರುವುದಿಲ್ಲ. ಇವೆಲ್ಲ ಸರಿ ಇದ್ದರೂ ಅದನ್ನೊಂದು ನಿರ್ದಿಷ್ಟ ಸ್ವರೂಪದಲ್ಲಿ ಕೊಡುವ ವ್ಯವಸ್ಥೆ ಇಲ್ಲ. ಪ್ರಸ್ತುತ ಕನ್ನಡದಂತೆಯೇ ಅದೊಂದು ಇಲ್ಲಗಳ ಸಂತೆ!

ಕನ್ನಡದ ಸಮಗ್ರ ಗ್ರಂಥಸೂಚಿಯೇ ಇನ್ನೂ ಲಭ್ಯವಿಲ್ಲ. ದಶಕಗಳ ಹಿಂದೆ ಹಾಮಾ ನಾಯಕರು ಮಾಡಿದ ಗ್ರಂಥಸೂಚಿಗೆ ಅಲ್ಪಸ್ವಲ್ಪ ಸೇರ್ಪಡೆ ನಡೆದು ಅದೇ ಮತ್ತೆ ಪ್ರಕಟವಾಗಿದೆ. ಕನ್ನಡ ಲೇಖಕರ ಸೂಚಿ ಅಂತರ್ಜಾಲದಲ್ಲಿ ಲಭ್ಯವಿಲ್ಲ. ಕನ್ನಡದ ಡೇಟಾ ಬ್ಯಾಂಕ್ (ದತ್ತಾಂಶ ಕೋಶ) ಎಲ್ಲಿಯೂ ಇಲ್ಲ. ಕನ್ನಡದ ಸಮಗ್ರ ಪರಿಚಯದ ಒಂದೇ ಒಂದು ಸಾಲೂ ಕನ್ನಡದಲ್ಲಿ ಸಿಗುವುದಿಲ್ಲ. ಕೃಷ್ಣಾನಂದ ಕಾಮತರು ದಶಕದ ಹಿಂದೆ ಸ್ವಯಂ ಪ್ರೇರಿತರಾಗಿ ನಕಾರಾತ್ಮಕ ಟೀಕೆಗಳ ನಡುವೆಯೂ ಪೋಟ್‍ಪುರಿಯ ಅಪೂರ್ವ ಕೆಲಸ ಮಾಡಿದ್ದರೂ ಅದು ಇರುವುದು ಇಂಗ್ಲಿಷ್‍ನಲ್ಲಿ.

ಕನ್ನಡ ಕಲಿತವರನ್ನು ಉದ್ಯೋಗವೇನೂ ಕೈಬೀಸಿ ಕರೆಯುವುದಿಲ್ಲ. ಕೊತ್ತುಂಬರಿ ಸೊಪ್ಪಿನಿಂದ ಹಿಡಿದು ಕಂಪ್ಯೂಟರ್‍ವರೆಗೆ ಯಾವುದಕ್ಕೂ ಕನ್ನಡವೇ ಬೇಕು ಎಂಬ ಪರಿಸ್ಥಿತಿ ಇಲ್ಲವೇ ಇಲ್ಲ. ಹೀಗಾಗಿ ಆಧುನಿಕ ಕನ್ನಡದ ಸಮಾಜಕ್ಕೆ ಅಗತ್ಯವಾದುದೆಲ್ಲವನ್ನೂ ಇಂಗ್ಲಿಷ್ ಭಾಷೆಯೇ ಕೊಡುವುದಾದರೆ ಕನ್ನಡದ ಅನಿವಾರ್ಯತೆ ಇರುವುದಾದರೂ ಎಲ್ಲಿ?

ನಿತ್ಯ ಬಳಕೆಯ ಕನ್ನಡ ಪದಗಳ ಸಮೀಕ್ಷೆ ನಡೆದೇ ಇಲ್ಲ. ಅದಕ್ಕೊಂದು ಯೋಜನೆಯನ್ನೂ ಯಾವುದೇ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿಲ್ಲ. ಹಂಪಿ ವಿವಿ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ಹೊಸ ಪದಗಳ ಅಸಮಗ್ರ ಪಟ್ಟಿ ಕೊಡುವ ಕೆಲಸ ಮಾಡುತ್ತಿದೆ. ಉಳಿದಂತೆ ಬೇರೆ ವಿವಿಗಳ ಕನ್ನಡ ವಿಭಾಗದ ಕೆಲಸಕ್ಕೂ ಅದರ ಕೆಲಸಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಕಿಟೆಲ್ ಕೋಶದಲ್ಲಿ ಎಪ್ಪತ್ತುಸಾವಿರ ಪದಗಳಿದ್ದರೂ ಕನ್ನಡದ ನಿತ್ಯ ಪತ್ರಿಕೆಗಳಲ್ಲಿ ಸುಮಾರು ಹತ್ತು ಸಾವಿರ ಪದಗಳು ಮಾತ್ರವೇ ಬಳಕೆಯಾಗುತ್ತವಂತೆ. ಅವುಗಳಲ್ಲಿರುವುದು ಅದದೇ ಪದಗಳು, ಒಂದೇ ಬಗೆಯ ವಾಕ್ಯ ರಚನೆಗಳು, ಆಯಾ ಸಂದರ್ಭಕ್ಕೆ ತಕ್ಕ ಸಿದ್ಧ ಮಾದರಿಯ ಶೈಲಿಗಳು. ವಿಶ್ವವಿದ್ಯಾನಿಲಯಗಳು ಜಾಹೀರಾತು ಭಾಷೆಯ, ಪತ್ರಿಕಾ ಭಾಷೆಯ, ನಿತ್ಯ ವ್ಯವಹಾರ ಭಾಷೆಯ ಕನ್ನಡದ ಸ್ಥಿತಿಗತಿಯ ಅಧ್ಯಯನಕ್ಕೆ ಮುಂದಾಗಬೇಕಿದೆ. ಕನ್ನಡ ಸಂಶೋಧನೆಯ ವಿದ್ಯಾರ್ಥಿಗಳಿಗೇನೂ ವಿವಿಗಳಲ್ಲಿ ಬರವಿಲ್ಲ. ಯಾವುದೇ ವಿವಿಯ ಯಾವುದೇ ವಿಷಯದ ಬಹುಪಾಲು ಪಿಎಚ್.ಡಿ ಅಧ್ಯಯನದ ಶೀರ್ಷಿಕೆ ಚರ್ವಿತ ಚರ್ವಣವೇ ಆಗಿರುತ್ತದೆ. ಬಹುತೇಕ ಕನ್ನಡ ಪಿಎಚ್.ಡಿಗಳೆಲ್ಲ ಕುವೆಂಪು ಕಾದಂಬರಿಯಲ್ಲಿ/ಕಾವ್ಯದಲ್ಲಿ ಮಹಿಳೆ, ಕಾರಂತರ ಕೃತಿಗಳಲ್ಲಿ ಸಮಾಜ ಜೀವನ, ಚದುಗಂಗರ ಕಾದಂಬರಿಯಲ್ಲಿ ಹಳ್ಳಿ ಚಿತ್ರಣ, ಅವರಿವರ ಜೀವನ ಮತ್ತು ಕೃತಿಗಳು ಇತ್ಯಾದಿ ವಿಷಯಗಳನ್ನೇ ಹೊಂದಿರುತ್ತವೆ. ವಿವಿಗಳಲ್ಲಿ ನಡೆಯುವುದೆಲ್ಲ ಬರೇ ಇಂಥವೇ ಸಂಶೋಧನೆಗಳಾದರೆ ಬದಲಾದ ಈ ಸನ್ನಿವೇಶದಲ್ಲಿ ಕನ್ನಡದ ಭವಿಷ್ಯಕ್ಕೆ ಏನಾದರೂ ಲಾಭವಿದೆಯೇ?

ಇನ್ನು ಕನ್ನಡದ ಹೆಸರಿನಲ್ಲಿ ಹೋರಾಡುವ ಸಂಘಟನೆಗಳ ಬಗ್ಗೆ ಹೇಳದಿರುವುದೇ ವಾಸಿ. ಸುದ್ದಿಗಲ್ಲದೇ ರಚನಾತ್ಮಕ ಕಾರಣಕ್ಕೆ ಅವು ನಡೆಸುವ ಹೋರಾಟ ಗೋಕಾಕ್ ಚಳವಳಿಯೊಂದಿಗೇ ಮುಕ್ತಾಯ ಕಂಡಿದೆ.

ಈ ವಾಸ್ತವ ಹಿನ್ನೆಲೆಯಲ್ಲೇ ಕರ್ನಾಟಕ ಉಚ್ಚ ನ್ಯಾಯಾಲಯ ಶಾಲಾ ಮಾಧ್ಯಮದಲ್ಲಿ ಕನ್ನಡ ಕಡ್ಡಾಯ ಎಂಬ ಸರ್ಕಾರದ ನಿಲುವಿಗೆ ಈಚೆಗೆ ಅಡ್ಡ ಬಂದುದು. ತಮ್ಮ ಮಕ್ಕಳ ಭವಿಷ್ಯಕ್ಕೆ ಕನ್ನಡ ಕಲಿಕೆ ಪೂರಕ ಎಂಬ ಭಾವನೆ ಪೋಷಕರಲ್ಲಿ ಉಂಟಾಗುವ ವಾತಾವರಣ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ.

 

Advertisements

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments