ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 11, 2014

ಕಾನೂನು Vs ಪ್ರತ್ಯೇಕತೆ – ಬದಲಾಗಬೇಕಾಗಿದ್ದು ಯಾರು ?

by ನಿಲುಮೆ

– ಶೈಲೇಶ್ ಕುಲ್ಕರ್ಣಿ

Jammu-Kashmirಕಾಲಕಾಲಕ್ಕೆ ಭಾರತದ ಕೆಲವೊಂದು ರಾಜ್ಯಗಳ ಆಡಳಿತಾರೂಢ ಜನಪ್ರತಿನಿಧಿಗಳೇ ಭಾರತವಿರೋಧಿ ಭಾವನೆಗಳನ್ನ ಸಾರ್ವಜನಿಕವಾಗಿ ಪ್ರದರ್ಶನಕ್ಕಿಡೋದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.ಈಗ್ಗೆ ಸ್ವಲ್ಪ ಸಮಯದ ಕೆಳಗೆ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂವಿಧಾನದ ೩೭೦ನೆ ವಿಧಿ ಆ ರಾಜ್ಯದಲ್ಲಿ ಜಾರಿಗೊಂಡ ಪಕ್ಷದಲ್ಲಿ ಆ ರಾಜ್ಯ ಭಾರತದಭಾಗವಾಗಿ ಮುಂದುವರೆಯೋದಿಲ್ಲ ಅಂತ ಸಾರ್ವಜನಿಕವಾಗಿಯೇ ಹೇಳಿದ್ದರು.ಹೀಗೆ ಪ್ರತೀ ಬಾರಿ ಒಡಕಿನ ರಾಗ ಆಲಾಪಿಸಿದಾಗಲೂ ಅವರೆಲ್ಲರ ದುಃಖಕ್ಕೆ  AFSPA ನಂಥ  ಕಾನೂನನ್ನೇ  ಹೊಣೆಯಾಗಿಸೋದು ಮಾಮೂಲಿ ಸಂಗತಿ .

ಜಮ್ಮು-ಕಾಶ್ಮೀರದ ಜೊತೆಗೇ ಭಾರತದ ನೈಋತ್ಯದ ರಾಜ್ಯಗಳ(ಅಸ್ಸಾಂ, ಮಣಿಪೂರ್) ಕೆಲ ಚುನಾಯಿತ ಪ್ರತಿನಿಧಿಗಳು ತಮ್ಮ ರಾಜ್ಯಗಳಲ್ಲಿ ಭಾರತೀಯ ಸೈನ್ಯ AFSPA (ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ೧೯೫೮) ಕಾನೂನಿನ ಅಡಿಯಲ್ಲಿ ಇರೋದನ್ನ ಬಲವಾಗಿ ವಿರೋಧಿಸಿಕೊಂಡೆ ಬಂದಿದ್ದಾರೆ. ಈ ವಿಶೇಷಾಧಿಕಾರದ ಅನ್ವಯದಿಂದ ತಮ್ಮ ರಾಜ್ಯಗಳು ಸೈನ್ಯದ ಛಾಯೆಯಲ್ಲೇ ಬದುಕಬೇಕಾದ ಅನಿವಾರ್ಯಕ್ಕೆ ಸಿಲುಕಿವೆ. ಸಂಪೂರ್ಣರಾಷ್ಟ್ರವೇ ಮಿಲಿಟರಿಯ ಹಂಗಿಲ್ಲದೆ ಮನಸೋಇಚ್ಛೆ ಬಾಳ್ವೆ ನಡೆಸುತ್ತಿರುವಾಗ ಪ್ರಜಾತಂತ್ರದ ಹೆಸರಿನಡಿಯಲ್ಲಿ ಹಾಡುಹಗಲೇ ತಮ್ಮ ಸ್ವಾತಂತ್ರ್ಯಹರಣಕ್ಕೆ ಸೈನ್ಯದಬಳಕೆ ಪ್ರಜಾತಂತ್ರಕ್ಕೆ ಮತ್ತು ಮಾನವೀಯತೆಗೆ ಮಾಡಿದ ಅಪಚಾರ ಅನ್ನೋದು ಅವರ ವಾದ .
ಪರಿಸ್ಥಿತಿಯ ಲಾಭಪಡೆವ ಸೈನ್ಯ ಅಲ್ಲಿನ ಪ್ರಜೆಗಳ ಮೇಲೆ ದೌರ್ಜನ್ಯಕ್ಕೂ ಮುಂದಾಗುತ್ತದೆ ಅನ್ನೋದು ಆ ವಾದದ ಸರಣಿ. .

ಕೂಲಂಕುಶವಾಗಿ ಈ ಎಲ್ಲ ವಾದಗಳ ಮೂಲ ಕೆದಕಿದಲ್ಲಿ ಅಲ್ಲಿ ಅಡಗಿರೋದು ಕ್ಷುದ್ರರಾಜಕಾರಣವಲ್ಲದೆ ಜನಪರ ಕಾಳಜಿ ಅಥವ ಮಾನವಸಂವೇದನೆ ಖಂಡಿತ ಅಲ್ಲ ಅನ್ನೋದು ಸ್ಪಷ್ಟವಾಗಿ ಕಾಣಬಹುದು.

ಕಾಶ್ಮಿರದ ಉದಾಹರಣೆಯನ್ನೇ ತೆಗೆದುಕೊಂಡಲ್ಲಿ, ಅಬ್ದುಲ್ಲಾ ಕುಟುಂಬ ಸ್ವಾತಂತ್ರ್ಯೋತ್ತರ ಸಮಯದಿಂದಲೂ ಗಣನೀಯ ಅವಧಿಗೆ ಕಣಿವೆಯಲ್ಲಿ ಅಧಿಕಾರದಲ್ಲಿದೆ. ಅಧಿಕಾರದ ಈ ಸುಧೀರ್ಘ ಅವಧಿಯಲ್ಲಿ ತಮ್ಮರಾಜ್ಯದಲ್ಲಿ ನಡೆದುಕೊಂಡು ಬಂದಿರುವ ಉಗ್ರರ ನುಸುಳುವಿಕೆ ಮತ್ತು ತತ್ಪರಿಣಾಮವಾಗಿ ಇಡೀ ದೇಶವೇ ಆ ಉಗ್ರರ ಕರಿನೆರಳಲ್ಲಿ ಬದುಕಬೇಕಾದ ಘಟನಾಕ್ರಮಗಳ ಬಗ್ಗೆ ಅವರಿಗೆ “ವ್ಯವಸ್ಥಿತ ತಿಳಿವಳಿಕೆ” ಇದ್ದೆಇದೆ.  ಹಾಗಾದ್ರೆ ತನ್ನ ದೀರ್ಘ ಕಾಲಾವಧಿಯ ಅಧಿಕಾರದಲ್ಲಿ ಸಂಪಾದಿಸಿದ ಅನುಭವದಿಂದ ತನ್ನ ಆಡಳಿತದಲ್ಲಿರುವ ರಾಜ್ಯದಿಂದ ನಡೆಯುವ ದೇಶವಿರೋಧಿ ಚಟುವಟಿಕೆಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಯಾವ ಸಾರ್ಥಕಪ್ರಯಾಸಗಳನ್ನ ಹಿರಿ ಮತ್ತು ಕಿರಿ ಅಬ್ದುಲ್ಲಾ ಸರ್ಕಾರ ತೆಗೆದುಕೊಂಡಿವೆ ?

ಅಧಿಕಾರದ ರಾಜವೈಭೋಗ ತಲತಲಾಂತರದಿಂದ ಭೋಗಿಸಿಕೊಂಡು ಬಂದವರಿಗೆ ಇಂದಿನವರೆಗೂ  ಕಣಿವೆ ಪ್ರದೇಶದಲ್ಲಿ ಪ್ರತ್ಯೇಕತೆಯ ಭಾವನೆಯನ್ನ ದೂರಗೊಳಿಸೋದು ಯಾಕೆ ಸಾಧ್ಯವಾಗಿಲ್ಲ?. ಪ್ರತ್ಯೇಕತೆಯ ಬೆಂಕಿ ತನ್ನ ಜನರ ಒಡಲಲ್ಲಿ ಉರಿಯುತ್ತಿರುವವರೆಗೂ ತಾವುಗಳು ಗದ್ದುಗೆಯಲ್ಲಿ ಆಸೀನರಾಗಿರಲು ಸಾಧ್ಯ ಅನ್ನೋ “ಸತ್ಯ”  ಅಬ್ದುಲ್ಲಾ ಕುಟುಂಬ ಮತ್ತು ಕಣಿವೆಯ ಒಂದು ನಿರ್ದಿಷ್ಟ ರಾಜಕೀಯ ಗುಂಪು ತುಂಬಾ ಚೆನ್ನಾಗಿ ಅರಿತಿವೆ . ತನ್ನ ಅಧಿಕಾರದುದ್ದಕ್ಕೂ  “ಸ್ವಾತಂತ್ರ್ಯಹನನ” ಎಂಬ ತೋಳದ ಹೆಸರು ಹೇಳಿಕೊಂಡೆ ಪ್ರತ್ಯೇಕತೆಯ ಭಾವನೆಯನ್ನ ಅಲ್ಲಿನ ಜನರಲ್ಲಿ ಪೋಷಿಸಿ, ದೇಶದ ಇತರೇ ಜನತೆಯ ಸಂವಹನ ತಪ್ಪಿಸಿ ತಾವು ಎಂದಿಗೂ ಈ ದೇಶದ ಭಾಗವಾಗಿದ್ದವರೇ ಅಲ್ಲ ಎಂಬಂಥ ಭಾವನೆಯನ್ನ ಬಲವತ್ತರವಾಗಿಸದೆ ಹೋದಲ್ಲಿ ಅವರ ರಾಜಕೀಯ ವಾಂಛೆ ಪೂರ್ತಿಯಾಗೋದು ಹೆಂಗೆ ?

ಸ್ಥೂಲವಾಗಿ ನೋಡಿದಲ್ಲಿ , ಈ ವಿಶೇಷಾಧಿಕಾರ(AFSPA) ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎದುರಾದ ಬಂಡಾಯವನ್ನ ಎದುರಿಸಲು ಸೇನಾ ಉಪಯೋಗವನ್ನ ಸಲೀಸುಗೊಳಿಸುವಂಥ ವಿಧಿ (ಆಕ್ಟ್).ಕಾನೂನು ರೀತ್ಯ ಒಂದು ಪ್ರದೇಶವನ್ನು ಸಶಸ್ತ್ರಪಡೆಗಳ ವಿಶೇಷಾಧಿಕಾರಕ್ಕೆ ಅನ್ವಯಿಸುವ ಮೊದಲು “ಗಲಭೆ ಪೀಡಿತ ಅಥವಾ ಅಶಾಂತ ಪ್ರದೇಶ ” ಎಂದು ಘೋಷಿಸಬೇಕು. ಸಂವಿಧಾನದನ್ವಯ ನಮ್ಮಸೇನೆಗೆ ಸಾಮಾನ್ಯ ಪೊಲೀಸ್ ಅಧಿಕಾರಗಳೂ ಲಭ್ಯವಿಲ್ಲ (ವಾರಂಟ್ ,ಬಂಧನ ಇತ್ಯಾದಿ). ಇಂಥ ಸರ್ಕಸ್ ಹುಲಿಯಂತಿರುವ ಸೈನ್ಯಕ್ಕೆ ಸದಾಕಾಲ ಗಡಿಯಾಚೆಯಿಂದ ಸುರಿಯುತ್ತಲೇ ಇರುವ ಗುಂಡಿನಮಳೆಯಮರೆಯಲ್ಲಿ ಒಳನುಸುಳುವ ಉಗ್ರರ ಉಪಟಳದ ವಾತಾವರಣ ಒಂದುಕಡೆಯಾದರೆ ಸ್ಥಳೀಯರ ಬೆಂಬಲ,ಅವರ ಸಹಾಯ-ಸಹಕಾರಗಳಿಂದ ಆ ಪ್ರದೇಶದ ಆಂತರ್ಯದಲ್ಲಿ ಸದಾ ಪ್ರಕ್ಷುಬ್ದವಾಗಿರುವಂತೆ ಪ್ರತ್ಯೇಕತಾವಾದಿಗಳಿಂದ ದಂಗೆಖೋರರಿಂದ ಸೃಷ್ಟಿಯಾದ ವಿದ್ವೇಷದ ವಾತಾವರಣ ಸಹಿಸುವ ಸವಾಲು ಮತ್ತೊಂದೆಡೆ.ಇಂಥ ಕಠಿಣ ಸವಾಲನ್ನು ಎದುರಿಸಲು ತಾನು ತೆಗೆದುಕೊಂಡ ದಿಟ್ಟಕ್ರಮಗಳ ಅರಿವಿಲ್ಲದ ದಿನಬೆಳಗಾಗೆದ್ದು ಸೈನ್ಯದಿಂದ ಮುಗ್ಧರ ಜೀವಹಾನಿ, ಮಾನಿನಿಯರ ಮಾನಹಾನಿ, ಅವರ ಆಸ್ತಿಪಾಸ್ತಿಯ ಲೂಟಿ ಅಂತ ದೇಶವಿದೇಶಗಳ ಎದುರಲ್ಲಿ ತನ್ನದೇ ದೇಶದ ಮಾನಹರಾಜುಹಾಕುವ “ವಿಕೃತ ಮಾಧ್ಯಮ ಮತ್ತು ಬುದ್ಧಿಜೀವಿ ವರ್ಗ “. ಇಂಥ ಅತಂತ್ರ ವ್ಯತಿರಿಕ್ತ ಸನ್ನಿವೇಶದಲ್ಲಿ ವಿಶೇಷಾಧಿಕಾರದ ಸಹಾಯವಿಲ್ಲದೇ ಸೈನ್ಯದಿಂದ ಉಗ್ರರ ಚಟುವಟಿಕೆಯಾಗಲಿ, ಪ್ರತ್ಯೇಕತಾವಾದಿಗಳ ದಂಗೆಯಾಗಲಿ ನಿಯಂತ್ರಿಸೋದು ಅಸಾಧ್ಯ.

ಒಳನುಸುಳುವಿಕೆಯ ಪ್ರಕರಣಗಳು ತಾತ್ಕಾಲಿಕವಾಗಿ ಕುಗ್ಗಿದಂತೆ ಕಂಡುಬಂದ ಸಂದರ್ಭದಲ್ಲೇ, ಆ ಕಾಲಕ್ಕೆ ನೆಲೆಮಾಡಿರುವ ಶಾಂತಿಯನ್ನೇ ನೆಪವಾಗಿಸಿ ಒಮರ್ ಅಬ್ದುಲ್ಲಾ ರಂಥ  ನಾಯಕರಿಗೆ ಈ ವಿಶೇಷಾಧಿಕಾರದ ಹುಳುಕು ಮತ್ತೆ ಕಣ್ಣಿಗೆ ಗುಡ್ಡದಂತೆ ಕಂಡುಬರುತ್ತದೆ . ಪರಿಸ್ಥಿತಿ ಶಾಂತವಿರುವಾಗಲೂ ಈ ಕಾನೂನು ಹೇಗೆ ತನ್ನ ಕಬಂಧಬಾಹುಗಳಿಂದ ತನ್ನ ರಾಜ್ಯದ ಪ್ರಜೆಗಳನ್ನ ಬಂಧಿಸಿದೆ ಎಂಬ ತನ್ನ ಹಳೆ ರಾಗದ ಆಲಾಪನೆಗೆ ತೊಡಗುತ್ತಾರೆ. ತಾತ್ಕಾಲಿಕೆ ಶಾಂತಿ ದೀರ್ಘಾವಧಿಗೆ ಮುಂದುವರಿಯಲು ಕಣಿವೆಯ ವಾತಾವರಣ ಇನ್ನಷ್ಟು ಹಿತಕರಗೊಳಿಸಲು ಸೇನೆಯನ್ನ ಅಲ್ಲಿಂದ ತೆರವುಗೊಳಿಸಿ ತನ್ನ ರಾಜ್ಯದ ಜನರಲ್ಲಿ ನಂಬಿಕೆಯ ಮನೋಭಾವ ಬಲಗೊಳ್ಳಲು ಆಸ್ಪದಕಲ್ಪಿಸಬೇಕು ಅನ್ನೋ ದೂರದೃಷ್ಟಿ ಮತ್ತೆ ಜಾಗೃತವಾಗುತ್ತದೆ ಆದರೆ ಈ ತಾತ್ಕಾಲಿಕೆ ಶಾಂತಿಯೂ ಸೇನೆಯ ಪ್ರಯತ್ನದ ಪರಿಣಾಮ ಅನ್ನೋ ವಿಚಾರಕ್ಕೆ ಜಾಣ ಕುರುಡು ಪ್ರದರ್ಶಿಸುತ್ತಾರೆ.  ಇದೇ ಶಾಂತಿಯುತ ವಾತವರಣ ತನ್ನ ಮತ್ತು ತನ್ನ ಪರಿವಾರದ ಸದಸ್ಯರಿಗೆ ದೊರೆಯುತ್ತಿರುವ ರಕ್ಷಣೆ ಕಡಿಮೆಗೊಳಿಸುವ ಅವಕಾಶ ಅಂತ ಯಾವತ್ತೂ ಅವರಿಗೆ ಅನ್ನಿಸೋದೆ ಇರೋದು ಸೋಜಿಗ.

ವಾರ್ಷಿಕವಾಗಿ ಸುಮಾರು ಮೂರು-ನಾಲ್ಕು ಲಕ್ಷ ಭಕ್ತರು ದೇಶದ ಉದ್ದಗಲಗಳಿಂದಲೂ ಅಮರನಾಥ್ ಗುಹೆಗೆ ತೀರ್ಥಯಾತ್ರೆಗೆಂದು ಭೇಟಿಕೊಡುತ್ತಾರೆ, ಕಣಿವೆಯ ಆರ್ಥಿಕತೆಗೆ ಗಣನೀಯ ಕೊಡುಗೆ ಈ ಯಾತ್ರೆಯಿಂದಲೇ ಸಲ್ಲುತ್ತದೆ . ಹೋಟೆಲ್ ಉದ್ಯಮಿಗಳು , ಶಿಕಾರಾ (ನದಿಯ ಮೇಲಿನ ದೋಣಿ) , ನೇಕಾರಿಕೆ ಇತ್ಯಾದಿಗಳನ್ನೇ ತಮ್ಮ ಜೀವನಾಧಾರವಾಗಿಸಿದ ಸಾವಿರಾರು ಜನರಿಗೆ ಈ ಪವಿತ್ರ ಯಾತ್ರೆಯೇ ಕೆಲಸ ನೀಡಿ ಅವರ ಉದರನಿರ್ವಹಣೆಯ ಪ್ರಶ್ನೆ ಬಿಡಿಸುತ್ತದೆ. ವಾಸ್ತವ ಹೀಗಿದ್ದಾಗಲೂ ಕೆಲ ಸಮಯದ ಹಿಂದೆ  ಪವಿತ್ರ ಅಮರನಾಥ ಗುಹೆಯ ವಿಶ್ವಸ್ಥ ಮಂಡಳಿ, ದೇಶದಿಂದೆಲ್ಲ ಬರುವ ಭಕ್ತರ ಅನುಕೂಲಕ್ಕೆ ಬಲ್ತಾಲ ಎಂಬಲ್ಲಿ ತಾತ್ಕಾಲಿಕ ತಂಗುದಾಣ ನಿರ್ಮಿಸಲು  ಭೂಮಿಯನ್ನ ಭೋಗ್ಯಕ್ಕೆ ಕೊಡುವಂತೆ ರಾಜ್ಯಸರಕಾರದಲ್ಲಿ  ವಿನಂತಿಸಿತ್ತು . ಆದರೆ ಆ ರಾಜ್ಯದ ಪ್ರತ್ಯೇಕತಾವಾದಿಗಳ ಮಾತುಹಾಗಿರಲಿ ಸ್ವತ: ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರೇ ಟ್ರಸ್ಟಿನ ಈ ವಿನಂತಿಯನ್ನ ತನ್ನ  ರಾಜ್ಯದ “ವಿಶೇಷ ಸ್ಥಾನಮಾನ” ಗಳಲ್ಲಿ ಇತರರ ಅನಗತ್ಯ ಹಸ್ತಕ್ಷೇಪ ಅನ್ನೋ ನೆಪದಲ್ಲಿ  ವಿಧಾನಸಭೆಯಲ್ಲಿಯೇ ಘಂಟಾಘೋಷವಾಗಿ ವಿರೋಧಿಸಿದ್ರು.

ಅದೇ ಸಮಯಕ್ಕೆ ಕೇಂದ್ರದಿಂದ ತನ್ನ ರಾಜ್ಯಕ್ಕೆ ಸಲ್ಲಬೇಕಾದ ವಿಶೇಷ ಸವಲತ್ತು ಮಾತ್ರ ಯಾವದೇ ರೀತಿಯಲ್ಲೂ ಕಡಿಮೆಗೋಳ್ಳುವಂತಿಲ್ಲ ಎಂಬುದರ ಬಗ್ಗೆ ಅತ್ಯಂತ ಜಾಗೃತೆ ವಹಿಸುತ್ತಾರೆ .ಒಂದು ರಾಜ್ಯದ ಮುಖಮಂತ್ರಿಯೇ ಅಲ್ಲಿನ ಜನಗಳ ಹೊಟ್ಟೆಹೊರೆಯುವ ಪ್ರಶ್ನೆಗೆ ಉತ್ತರಕಂಡುಕೊಂಡಿರುವ ರೀತಿ ಇದು.

ಉಗ್ರವಾದದಂಥ ದೇಶದ್ರೋಹಿ ಕೆಲಸದಲ್ಲಿ ಲಿಪ್ತರಾಗಿದ್ದು ಅದನ್ನ ಈಗ ಬಿಟ್ಟಿದ್ದೇನೆ(?) ಎಂದು  ಏಕಾಏಕಿ ಘೋಷಿಸಿ ಕೊಳ್ಳುವ  ಯಾವದೇ ಅಪರಾಧಿಗೂ  ಪೂರ್ವಾಪರ ವಿವೇಚನೆ ಇಲ್ಲದೇ ಕಣಿವೆಯ ಪೋಲೀಸ್ ಇಲಾಖೆಯಲ್ಲಿ ನೌಕರಿಯ ಬಹುಮಾನ ಕೊಡುತ್ತಾರೆ. ದೇಶವಿಭಜನೆಯ ನಂತರ ಕಳೆದ ೬೭ ವರ್ಷಗಳಿಂದ ಕಣಿವೆಯ ಗಡಿಯಲ್ಲಿ  ಬಂದು ನೆಲೆಸಿರುವ ಅನೇಕ ಹಿಂದೂ-ಸಿಖ್ ಪ್ರಜೆಗಳಿಗೆ ಕನಿಷ್ಠ ಭಾರತೀಯ ಪೌರತ್ವವೇ ಇನ್ನೂ ಸಿಕ್ಕಿಲ್ಲ. ಈ ದೇಶಭ್ರಷ್ಟರಿಗೆ ಅಲ್ಲಿನ ಮುಖ್ಯಮಂತ್ರಿಯ ಮಾತಿರಲಿ ಕಣಿವೆಯ ಯಾವುದೇ ರಾಜಕಾರಣಿಯ ಸಾಂತ್ವನದ ಮಾತು ಇನ್ನೂ ಕೇಳಿಸಿಲ್ಲ .
ಈ ಬಡಪಾಯಿ ಜೀವಗಳು ತಮ್ಮದೇ ನೆಲದಲ್ಲಿ ತಮ್ಮದೇ ತಾಯ್ನಾಡಲ್ಲಿ ತಬ್ಬಲಿಗಳು. ಆ ಹತಭಾಗ್ಯರಿಗೆ ಮಾತ್ರ ಸೈನ್ಯವೇ ನೆರವು ಮತ್ತು ಬೆಂಬಲ .

ದೇಶದ  ಸಮಗ್ರತೆಗೆ ಒಗ್ಗಟ್ಟಿಗೆ ಪೂರಕವಾಗುವ ಯಾವದೇ ನಿರ್ದಿಷ್ಟ ಕಾರ್ಯಕ್ರಮವಿಲ್ಲದೆ ,ರಾಜ್ಯದ ಜನತೆಗೆ ಹಿತ ತರುವ ಒಂದೇಒಂದು ಯೋಜನೆಯೂ ಗೊತ್ತುಗುರಿಯೂ ಇಲ್ಲದೇ ಬರೀ ಪ್ರತ್ಯೇಕತೆಯ ಹೆಸರಿನಲ್ಲೇ ತನ್ನ ಕಾಳುಹುರಿಯುವ ಇಂಥ ರಾಜಕಾರಣಿಗಳು ಈ ದೇಶದ ಕಾನೂನಿನಲ್ಲಿ ಇಟ್ಟಿರುವ ನಿಷ್ಠೆಯೇ ಪ್ರಶ್ನಾರ್ಹ.

ಇಂಥವರು ನಿಜವಾಗಿಯೂ ಈ ದೇಶದವ್ಯವಸ್ಥೆಯಲ್ಲಿ ಪ್ರಾಮಾಣಿಕ ಆಸ್ಥೆಯುಳ್ಳವರೇ ಆಗಿದ್ದಲ್ಲಿ ಅವರು ಮೊದಲು  ಭಾರತ ವಿರೋಧಿ ಪ್ರತ್ಯೇಕಭಾವನೆಯನ್ನೇ ಹೋಗಲಾಡಿಸಲಿ ಆಗ AFSPA ನಂಥ ವಿಧಿಗಳ ಅವಶ್ಯಕತೆಯೇ ಇರಲಾರದು.

Advertisements

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments