ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 12, 2014

3

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦

‍ನಿಲುಮೆ ಮೂಲಕ

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೯

ಕವಲು 

ಆವರಣ ಕಾದಂಬರಿಗೆ ಬಂದಷ್ಟು ಪ್ರತಿರೋಧ, ಪ್ರತಿಭಟನೆಗಳು ಮತ್ತು ವಿಮರ್ಶಾ ಸಂಕಲನಗಳು  ಕವಲು ಕಾದಂಬರಿಗೆ ಬರದೇ ಇದ್ದರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಆವರಣಕ್ಕೆ ಕೋಮುವಾದಿ ಕೃತಿ ಎಂದು  ಹೆಸರಿಟ್ಟಹಾಗೆ ಕವಲು ಕಾದಂಬರಿಗೆ  ಸ್ತ್ರೀವಾದದ ವಿರೋಧಿ ಎಂಬ ಲೇಬಲ್ ಹಚ್ಚಲಾಯಿತು.   ಖ್ಯಾತ ಕತೆಗಾರ, ಪ್ರಭಂಧಕಾರ ಮತ್ತು ಪ್ರಕಾಶಕರಾದ (ಛಂದ ಪುಸ್ತಕ ಪ್ರಕಾಶನ ಬೆಂಗಳೂರು) ವಸುಧೇಂದ್ರ ಅವರು ಕನ್ನಡ ಪ್ರಭ ಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಮಾಡಿದ  ಕವಲು ಕಾದಂಬರಿಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ   ನಾನು ಬರೆದದ್ದು ಈ  ಪತ್ರ. .

 

ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು,                                                                                                                                                                                                    ದಿನಾಂಕ:  ೧೩ ಜೂನ್ ೨೦೧೨

ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆ (೨೯–೮–೨೦೧೦) ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ   ಪ್ರಕಟವಾದ ತಮ್ಮ  ವಿಮರ್ಶೆಯ ಬಗ್ಗೆ  ನನ್ನ ಅನಿಸಿಕೆಗಳನ್ನು ಈಗ ತಿಳಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೊಂಡು ಎರಡು ವರ್ಷಗಳಾಗಿದ್ದರೂ ಈಗ ಕಳಿಸುತ್ತಿರುವುದಕ್ಕೆ ಕಾರಣ ನಿಮ್ಮ ಅಂಚೆ ವಿಳಾಸ/ ಇ ಮೇಲ್ ಐಡಿ ಸಿಗದೇ ಇದ್ದದ್ದು. ಇತ್ತೀಚಿಗೆ ‘ಸಂಚಯ’ ಸಾಹಿತ್ಯಿಕ ಪತ್ರಿಕೆಯ ಪ್ರತಿಗಳನ್ನು ಒಂದೆಡೆ ನೀಟಾಗಿ ಜೋಡಿಸಿಡುತ್ತಾ ಹಾಗೆ ಅದರ ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಒಂದು ಸಂಚಿಕೆಯಲ್ಲಿ ನಿಮ್ಮ ವಿಳಾಸ ಸಿಕ್ಕಿತು. ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದ್ದ ನಿಮ್ಮ ಆ ವಿಮರ್ಶೆಯ ಜೆರಾಕ್ಸ್ ಪ್ರತಿಯನ್ನೂ ಇದರ ಜತೆ ಇಟ್ಟಿದ್ದೇನೆ.

ತಮಗೆ ತಿಳಿದಿರುವಂತೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ನಮ್ಮ ವಿಮರ್ಶಾವಲಯದಲ್ಲಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳು ಅವರ ಧರ್ಮಶ್ರೀ ಕಾಲದಿಂದ ಇಂದಿನ ಕವಲು ಕಾದಂಬರಿಯ ತನಕ ಇದ್ದೇ ಇದೆ. ಇದನ್ನು ನಾನು ಪುನಃ ವಿವರಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. ಈಗ ನೇರವಾಗಿ ಕವಲು ಕಾದಂಬರಿಯನ್ನು ಕುರಿತ ತಮ್ಮ ವಿಮರ್ಶೆಯ ಬಗ್ಗೆ ಹೋಗೋಣ. ನಾಲ್ಕು ಕಾಲಂಗಳ ಆ ವಿಮರ್ಶೆಯಲ್ಲಿ ಎರಡು ಕಾಲಂಗಳು ಆ ಕಾದಂಬರಿಯ ಕಥಾಸಾರಾಂಶವನ್ನು ಹೇಳುವುದಕ್ಕೆ ವಿನಿಯೋಗವಾಗಿದೆ. ಉಳಿದ ಎರಡು ಕಾಲಂಗಳ ಬಗ್ಗೆ ಹೇಳುವುದಾದರೆ—

(೧) ಭೈರಪ್ಪನವರು ಎಲ್ಲಾ ಸ್ತ್ರೀವಾದಿಗಳೂ ಕೆಟ್ಟ ಹೆಂಗಸರೆಂದು  ಆ ಕಾದಂಬರಿಯಲ್ಲಿ  ಎಲ್ಲಿ ಹೇಳಿದ್ದಾರೆ? ಕವಲು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಇಬ್ಬರು ಹೆಂಗಸರ ಬಗ್ಗೆ, ಅವರ ನಡತೆಯ ಬಗ್ಗೆ ಬರೆದಿದ್ದಾರೆ. ಅವರಿಬ್ಬರು  ಎಲ್ಲಾ ಸ್ತ್ರೀ ವಾದಿಗಳನ್ನು  ಪ್ರತಿನಿಧಿಸುತ್ತಾರೆ ಎಂದು ಭಾವಿಸುವುದು ಸರಿಯೇ? ಓದು ಬರಹ ಬಲ್ಲ ಹೆಂಗಸರಿಂದ, ಸ್ತ್ರೀವಾದಿಗಳಿಂದ ಮಾತ್ರ ವರದಕ್ಷಿಣೆ ವಿರೋಧಿ ಕಾನೂನು, ವಿವಾಹ ವಿಚ್ಛೇದನದ ಕಾನೂನು ದುರುಪಯೋಗವಾಗುತ್ತಿಲ್ಲ: ಅದನ್ನು ಇತರರೂ ಮಾಡುತ್ತಿದ್ದಾರೆ ಎಂಬುದಕ್ಕೆ ಕವಲು ಕಾದಂಬರಿಯಲ್ಲೇ ಒಂದು ನಿದರ್ಶನವಿದೆ. ಜಯಕುಮಾರನ ಅಣ್ಣ ಕೇಶವಮೂರ್ತಿಯ ಹೆಂಡತಿ ಇಂದಿರಾ ತನ್ನ ಅತ್ತೆಯನ್ನು ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಜೈಲಿಗೆ ಹಾಕಿಸಲಿಲ್ಲವೇ?  (ಪುಟ ೨೬೧ ಕವಲು) ತಾವೇ ಹೇಳಿರುವಂತೆ  ಕಾನೂನಿನ ಲೂಪ್ ಹೋಲ್ ಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡವರ ಕಥೆ ಕವಲುವಿನದು. ಅಂತಹ ಒಂದು ಕಥೆಯನ್ನು ಹೇಳುವುದಕ್ಕೆ ಒಂದಷ್ಟು ಪಾತ್ರಗಳು ಬೇಕೇ ಬೇಕಲ್ಲವೇ?  ಅಂತಹ ಪಾತ್ರಗಳು ಇಡೀ ಸಮಾಜದ ಪ್ರತಿಬಿಂಬವಾಗಲು ಹೇಗೆ ತಾನೇ ಸಾಧ್ಯ? ಜತೆಗೆ ಮರೆಯಬಾರದ ಸಂಗತಿ ಎಂದರೆ ಪ್ರಗತಿಪರ ,ಬಂಡಾಯ, ದಲಿತ ಸ್ತ್ರೀ ವಾದಿ ಇತ್ಯಾದಿ ಪ್ರಣಾಳಿಕೆಗಳು, ಇವುಗಳ ಬಗ್ಗೆ ಒಲವುಳ್ಳ ಅಷ್ಟನ್ನೇ high light ಮಾಡುವಂತಹ ಸಾಹಿತ್ಯ,ವಿಮರ್ಶೆಗಳು ಏಕಮುಖೀ ಧೋರಣೆ ಉದ್ದೇಶವಿಟ್ಟುಕೊಂಡು ರಚಿತವಾಗಿ ಜೀವನದ ಇತರೆ ಮಗ್ಗುಲುಗಳ ಬಗ್ಗೆ ಗಮನಹರಿಸದೇ ಇರುವುದು ತಿಳಿದ ವಿಷಯವೇ.  ಒಬ್ಬ ಲೇಖಕ/ಸಾಹಿತಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಸಾಮಾಜಿಕ/ರಾಜಕೀಯ ಸಿದ್ಧಾಂತ,ವಾದ ಇತ್ಯಾದಿಗಳ ಪರವಾಗಿ ಮತ್ತು ಅದರ ಚೌಕ್ಕಟ್ಟಿನೊಳಗೇ ಬರೆಯಬೇಕು ಎಂದು ನಿರೀಕ್ಷಿಸುವುದು/ಒತ್ತಾಯಿಸುವುದು  ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಸಹ ನಾವು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ?  ಸಾಹಿತಿಗೆ ಆ  ವಾದಗಳ ಸಾಧಕ  ಬಾಧಕಗಳನ್ನು ತನ್ನ ಕೃತಿಯಲ್ಲಿ ಚರ್ಚಿಸುವ ಸೃಜನಶೀಲತೆಗೆ ಅವಕಾಶವಿರಬಾರದೆ?

(೨)  ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ —ಓದಿದ ಗಂಡಸರೆಲ್ಲ ಎಂಗಸರಾಯ್ತಾರೆ . ಓದಿದ ಎಂಗಸರೆಲ್ಲ.ಗಂಡಸರಾಯ್ತಾರೆ‘.’ ಎಂದು. ಇದು ಕಾದಂಬರಿಯ ತಿರುಳು ಎನ್ನುವಂತೆ ಮೊದಲ ಪುಟದಲ್ಲೇ ಪ್ರಕಟಿಸಲಾಗಿದೆ ಎಂದು ಆಕ್ಷೇಪಣಾ ಧ್ವನಿಯಲ್ಲಿ ಹೇಳಿದ್ದೀರಿ. ಆದರೆ ಇದರ ಜತೆಗೆ  ಆ  ಮೊದಲ ಪುಟದಲ್ಲೇ ಇನ್ನೂ ಏಳು ಮಾತುಗಳನ್ನು ಮುದ್ರಿಸಲಾಗಿದೆ. ಅವುಗಳಲ್ಲಿ ಕೊನೆಯದು ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದುಎಂಬ ಮಾತೂ ಇದೆ. ಇದೇ ಅಲ್ಲವೇ   ಕಾದಂಬರಿಯ ತಿರುಳು?

(೩) ಇಳಾ ಮಗಳು ತಾಯಿಯ ನಡತೆಯಿಂದ ಬೇಸರಪಟ್ಟುಕೊಂಡು ಹಾಸ್ಟೆಲ್ ಗೆ ಸೇರಿಕೊಳ್ಳುತ್ತಾಳೆ. ನಾನೂ ಬಾಯ್ ಫ್ರೆಂಡ್ ಮಾಡಿಕೊಂಡಿದ್ದೇನೆ. ನೀನೂ ಮಾಡಿಕೊ  ಎಂದು ಒಬ್ಬ ತಾಯಿಯೇ ತನ್ನ  ಮಗಳಿಗೆ  ಹೇಳುತ್ತಾಳೆಂದರೆ ಅಂತಹ ತಾಯಿಯ ಬಗ್ಗೆ ಮಗಳಿಗೆ ಯಾವ ರೀತಿಯ ರೀತಿಯ ಪ್ರೀತಿ ಗೌರವಗಳು ಹುಟ್ಟಬಹುದು? ಇಳಾಗೆ ಮಗಳು ಮನೆ ಬಿಟ್ಟು ಹೋದಾಗ ಕಸಿವಿಸಿ, ಬೇಸರ ಆಗುತ್ತದೆ. ( ಕವಲು ಪುಟ ೨೪೭ ನೋಡಿ) . ಆದರೆ ಅದನ್ನು ಕಾದಂಬರಿಯಲ್ಲಿ  ವಿಸ್ತಾರವಾಗಿ ಹೇಳಿಲ್ಲ ಅಷ್ಟೇ . ಆದ್ದರಿಂದ  ‘ಒಬ್ಬ ತಾಯಿ ತಾನು ಸಾಕಿ ಬೆಳೆಸಿದ ಮಗಳನ್ನು ಕಳೆದುಕೊಳ್ಳುವ ನೋವೂ ಕಾದಂಬರಿಕಾರನಿಗೆ ತಟ್ಟುವುದಿಲ್ಲವಲ್ಲ ಎಂದು ದುಃಖವಾಗುತ್ತದೆ’ ಎಂಬ ತಮ್ಮ ಮಾತಿಗೆ ಆಧಾರವಿಲ್ಲ.

(೪) ಭೈರಪ್ಪನವರ ಕಾದಂಬರಿಗಳ ಬಗ್ಗೆ ಬರುತ್ತಿರುವ, ಬಂದಿರುವ ವಿಮರ್ಶೆಗಳ ಒಂದು ವಿಪರ್ಯಾಸ ಎಂದರೆ  ಈ ಕಾದಂಬರಿಯಲ್ಲಿನ  ಕಥೆಯ ಮುಖ್ಯಾಂಶಗಳನ್ನು ಬೇರೆ ರೀತಿ  ಬರೆಯಬೇಕಾಗಿತ್ತು; ಬೇರೆ ಜಾತಿ ಧರ್ಮದವರನ್ನು ನಾಯಕ-ನಾಯಕಿಯರನ್ನಾಗಿ ಮಾಡಬೇಕಿತ್ತು; ಕಾದಂಬರಿಯಲ್ಲಿ ಚಿತ್ರಣಗೊಂಡಿರುವ ಕಾಲ-ಸಮಾಜ-ಪರಿಸರಕ್ಕೆ ಸಾಧ್ಯವಾಗದೇ ಹೋಗಬಹುದಾದಂತಹ ಸನ್ನಿವೇಶಗಳನ್ನು ಆಗುಮಾಡಿಸಬೇಕಿತ್ತು; ಹಾಗೆ ಮಾಡದೆ ಇರುವುದೇ ಈ ಕಾದಂಬರಿಯ ಸೋಲಿಗೆ ಕಾರಣ ಎಂಬ ರೀತಿಯ  ಹೇಳಿಕೆಗಳು. ಭಾರತದ ಉದ್ದ ಅಗಲಕ್ಕೂ ಸಂಚರಿಸಿರುವ, ವಿದೇಶದ ನಾನಾ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನಜೀವನ ,ಉದ್ಯಮ ವ್ಯವಹಾರಗಳ ಸಂಸ್ಥೆಗಳಿಗೆ ಭೇಟಿ ನೀಡಿರುವ (ಅಧ್ಯಯನದ ದೃಷ್ಟಿಯಿಂದ—ತಮ್ಮ ಕಾದಂಬರಿಗಳಿಗೆ ಒಂದು ಗಟ್ಟಿ ತಳಪಾಯ ಬರಲಿ ಎಂಬ ಕಾರಣಕ್ಕಾಗಿ ).ಭೈರಪ್ಪನವರಿಗೆ ಬೆಂಗಳೂರಿನ ಪರಿಚಯ, ಅಲ್ಲಿನ ವಿದ್ಯಮಾನಗಳು ಗೊತ್ತಿಲ್ಲ ಎಂದು ತಾವು ಹೇಳಿರುವುದನ್ನು ಒಂದು ಜೋಕಿನಂತೆ ಓದಿ ನಕ್ಕು ಬಿಡಬಹುದು ಅಷ್ಟೇ!!. ಕವಲು ಕಾದಂಬರಿಯ ಮುಖ್ಯವಾಹಿನಿಗೆ ಬೆಂಗಳೂರಿನ ಆಧುನಿಕ ಬದುಕಿನ ಬಗ್ಗೆ ತಾವು ಪಟ್ಟಿ ಮಾಡಿ ಕೊಟ್ಟಿರುವ ವಿಷಯಗಳ  ಚಿತ್ರಣ ಅಷ್ಟೊಂದು ಅನಿವಾರ್ಯವೇ?  ಕವಲುವಿನ ಮುಖ್ಯಕಥಾಹಂದರ ಕಾನೂನು ಮತ್ತು ನ್ಯಾಯದ ನಡುವಿನ ಗೊಂದಲ,ಪಡಿಪಾಟಲು ಇತ್ಯಾದಿ. ಕವಲು ಕಾದಂಬರಿಯ ಪುಟ ೩೫ರ ಕೊನೆ ಪ್ಯಾರದಲ್ಲಿ  ಅಡ್ವೋಕೇಟ್ ಸುಬ್ಬರಾಮಯ್ಯ ಹೇಳುವ ‘ನ್ಯಾಯ,ಅನ್ಯಾಯ ಮೌಲ್ಯ ಅಪಮೌಲ್ಯಗಳಾವುವೂ ಕಾನೂನಿಗೆ ಸಂಬಂಧಿಸಿದ್ದಲ್ಲ. ಇರುವ ಕಾನೂನನ್ನು ಬಳಸಿಕೊಂಡು ಪ್ರತಿಯೊಂದು ಪಾರ್ಟಿಯೂ ಸಾಧ್ಯವಿದ್ದಷ್ಟನ್ನು ಗುಂಜಿಕೊಳ್ಳುವುದಷ್ಟೇ ಎಲ್ಲೆಲ್ಲಿಯೂ ನಡೆಯೂದು. ಈ ವಿಷಯದಲ್ಲಿ ನ್ಯಾಯಾಧೀಶರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ . ಇದು ಕವಲುವಿನ ಮುಖ್ಯ ಸಮಸ್ಯೆ. ಬೆಂಗಳೂರಿನ ಟ್ರಾಫಿಕ್ ಜಾಮ್,ಕಾಲ್ ಸೆಂಟರ್,ಫ್ಲೈ ಓವರ್, ನೈಸ್ ರಸ್ತೆಗಳಲ್ಲ.

(೫) ನಾನು ಈ ಪತ್ರದ ೪ನೇ ಭಾಗದಲ್ಲಿ ಹೇಳಿರುವ ‘ವಿಪರ್ಯಾಸದ ವಿಮರ್ಶೆ’ಯ ಸಮಸ್ಯೆಯಿಂದ ತಾವೂ ಪಾರಾಗಿಲ್ಲ. ‘ವಿವಾಹೇತರ ಸಂಬಂಧವೆಂಬುದು ಎಲ್ಲಾ ದೇಶ–ಕಾಲಗಳಲ್ಲಿಯೂ ಇದ್ದ ಮಾನವನ ಅಸಹಾಯಕತೆ ಅಷ್ಟೇ ! ‘ ಎಂದು ತಾವೇ ಹೇಳಿದ್ದೀರಿ. ಆದರೆ ಬೆಂಗಳೂರಿನ ಎರಡು ಕುಟುಂಬಗಳ ಪಾತ್ರಗಳಲ್ಲಿ ಅದನ್ನು  ಚಿತ್ರಿಸಿದ ಮಾತ್ರಕ್ಕೆ ‘ಆ ತರಹದ ಚಿತ್ರಣ ಇಂದು ಬೆಂಗಳೂರಿನಲ್ಲಿ ಬಾಳುತ್ತಿರುವ ಒಂದು ಕೋಟಿ ಜನರ ಬಗ್ಗೆ ಮಾಡಿದ ಅವಮಾನವೆಂದೇ ನಾವು ಪರಿಗಣಿಸಬಹುದು’ ಎಂದು  ಷರಾ  ಸಹ ಬರೆಯುತ್ತೀರಿ!!.

(೬) ‘ಪುರಾಣ, ಇತಿಹಾಸಗಳನ್ನು ಚಿತ್ರಿಸುವುದು ಒಂದರ್ಥದಲ್ಲಿ ಸುಲಭ … ‘ಎಂಬ ತಮ್ಮ ಹೇಳಿಕೆ ಪರೋಕ್ಷವಾಗಿ ಭೈರಪ್ಪನವರು ‘ಪರ್ವ’, ‘ಸಾರ್ಥ’, ‘ಆವರಣ’ ಕಾದಂಬರಿಗಳನ್ನು ಬರೆದಿದ್ದರ ಬಗ್ಗೆಯೇ ಎಂದು ಅನಿಸುವುದು ಸಹಜವೇ. ಆದರೆ ‘ಪರ್ವ’ ಬರೆಯಲು ಅವರು ಪಟ್ಟ ಶ್ರಮ, ಮಾಡಿದ ಪ್ರವಾಸಗಳು, ಮಹಾಭಾರತಕ್ಕೆ  ಸಂಬಂಧಿಸಿದಂತೆ ನಾನಾ ಆಯಾಮಗಳ ಗ್ರಂಥಗಳ ಅಧ್ಯಯನ ಇವುಗಳ ಬಗ್ಗೆ ಅವರ ‘ನಾನೇಕೆ ಬರೆಯುತ್ತೇನೆ’ ಕೃತಿಯಲ್ಲಿರುವ ‘ಪರ್ವ ಬರೆದಿದ್ದು’ ಎಂಬ ಲೇಖನವನ್ನು ತಾವು ಗಮನಿಸಿರಬಹುದೆಂದು ಭಾವಿಸುತ್ತೇನೆ. ಸಾಮಾಜಿಕ ಕಾದಂಬರಿಯಾಗಲಿ,  ಪುರಾಣ, ಇತಿಹಾಸ ಕುರಿತ ಕೃತಿಯಾಗಿರಲಿ ಭೈರಪ್ಪನವರು ಸಾಕಷ್ಟು ಸಿದ್ಧತೆ ಇಲ್ಲದೆ ಕೇವಲ ಕಲ್ಪನೆಯ ಮೂಸೆಯಲ್ಲೇ ಒಂದು ಕಾದಂಬರಿಯನ್ನು ಬರೆಯುವ ಜಾಯಮಾನದವರಲ್ಲ ಎಂದು ತಮಗೆ ಅನಿಸುವುದಿಲ್ಲವೇ?

(೭) ಅಂಚು, ಸಾಕ್ಷಿ, ತಂತು, ಮಂದ್ರ, ಕವಲು  ಕಾದಂಬರಿಗಳಲ್ಲಿ ಬರೀ ವ್ಯಭಿಚಾರದ ಸಂಗತಿಗಳೇ ಪ್ರಮುಖವಾಗಿ ಕಾಣಿಸಲು ಕಾರಣವೇನು? ಎಂದು ಪ್ರಶ್ನಿಸಿದ್ದೀರಿ. ಆದರೆ ಕೇವಲ ವ್ಯಭಿಚಾರವಷ್ಟೇ ಅವುಗಳ ಪ್ರಮುಖ ಸಂಗತಿಗಳಲ್ಲ. ತಾವೇ ಒಪ್ಪಿಕೊಂಡಿರುವಂತೆ ವಿವಾಹೇತರ ಸಂಬಂಧ ಮಾನವನ ಅಸಹಾಯಕತೆ ಆಗಿರುವುದರಿಂದ ಆ ಕಾದಂಬರಿಗಳಲ್ಲಿ ವ್ಯಭಿಚಾರದ ಸಂಗತಿಗಳು ಬಂದಿರಬಹುದು. . ಎರಡು ಮೂರು ಉದಾಹರಣೆಗಳ ಮೂಲಕ ಇದನ್ನು ನೋಡೋಣ.

(೧) ಸಾಕ್ಷಿ:- ನಿಜ-ನೀತಿಗಳ ನೆಲೆ ಯಾವುದು?

(೨) ತಂತು:-ಸ್ವಾತಂತ್ರೋತ್ತರ ಭಾರತದ ಜನಜೀವನದ ನಾಡಿ ಮಿಡಿತದ ಕಥೆ–ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮಕಾಲೀನ ಜೀವನದ ಸ್ಥಿತಿ ಗತಿಗಳ ಚಿತ್ರಣ.

(೩) ಮಂದ್ರ:-ಕಲೆಗೂ, ಕಲಾವಿದನ ಬದುಕಿಗೂ ಏಕೆ ದ್ವಂದ್ವವಿರುತ್ತದೆ? ಅವನ ಕಲೆಯಂತೆ ಅವನ ವೈಯಕ್ತಿಕ ಜೀವನ ಉತ್ತಮವಾಗಿರಬಾರದೇಕೆ? ಉತ್ತಮವಾಗಿರುತ್ತದೆ ಎಂಬ ಜನಸಾಮಾನ್ಯರ ನಿರೀಕ್ಷೆಯೇ ಹುಸಿಯಾಗಿಹೋಗುತ್ತದಲ್ಲ  ಏಕೆ ಎಂಬುದರ ವಿಶ್ಲೇಷಣೆ.

ಇಂತಿ ನಿಮ್ಮವ

ಮು ಅ ಶ್ರೀರಂಗ.

( ಪತ್ರ ವಸುಧೆಂದ್ರರಿಗೆ  ತಲುಪಿದ ನಂತರ  ಮತ್ತೆ ನನ್ನ -ಅವರ ನಡುವೆ ಮೂರು ಪತ್ರಗಳ ವಿನಿಮಯವಾಯ್ತು. ಆ ಪತ್ರಗಳಲ್ಲಿನ ವಿಷಯ  ಸಾಹಿತ್ಯ,ವಿಮರ್ಶೆ ಮತ್ತು ನಮ್ಮ ನಮ್ಮ ಓದಿನ ರೀತಿ  ಇವುಗಳಿಗೆ ಸಂಬಂಧಿಸಿದವು.  ಕವಲು  ಕಾದಂಬರಿಯ ಬಗ್ಗೆ ಅಲ್ಲ. ಹೀಗಾಗಿ ಆ ಮೂರು ಪತ್ರಗಳ ಪೂರ್ಣ ಪಾಠವನ್ನು ನಾನು  ನಿಲುಮೆಯಲ್ಲಿ ಬರೆಯುತ್ತಿರುವ  ಸಾಹಿತ್ಯ ಓದುಗ ಮತ್ತು ವಿಮರ್ಶಕ  ಸರಣಿಯ ಮುಂದಿನ ಭಾಗದಲ್ಲಿ ಪ್ರಸ್ತುತಪಡಿಸುತ್ತೇನೆ) 

—————————————————————————————————————————————————————————————————-

                                      ಮುಂದಿನ ಮುಖಾಮುಖಿ  ಕವಲು : ಕಲೆ ಮತ್ತು ಕಾಳಜಿ     ಸಂಪಾದಕರು : ಅಜಕ್ಕಳ ಗಿರೀಶ್ ಭಟ್ 

__________________________________________________________________________________________________________________

3 ಟಿಪ್ಪಣಿಗಳು Post a comment
 1. ಅಜಯ
  ನವೆಂ 12 2014

  ವಸುಧೇಂದ್ರ ಅವರ ಪತ್ರದ ವಿಷಯಗಳನ್ನೂ ಇಲ್ಲಿ ಹಾಕುವುದಿದ್ದರೆ ಮೊದಲು ಅವರ ಅನುಮತಿ ಪಡೆಯುವುದೊಳಿತು. ಖಾಸಗಿ ಪತ್ರ ಮಾತುಕತೆಯಾದ್ದರಿಂದ ಹೀಗೆ ಹೇಳುತ್ತಿದ್ದೇನೆ.

  ಉತ್ತರ
 2. M A Sriranga
  ನವೆಂ 13 2014

  ಅಜಯ ಅವರಿಗೆ– ಶ್ರೀ ವಸುಧೇಂದ್ರ ಅವರು ನನಗೆ ಬರೆದ ಎರಡು ಪತ್ರಗಳನ್ನು ಪ್ರಕಟಿಸಲು ಇ ಮೇಲ್ ಮೂಲಕ ಅನುಮತಿ ಕೊಟ್ಟಿದ್ದಾರೆ. ಅದನ್ನು ‘ನಿಲುಮೆ’ಯ ಮಾಡರೇಟರ್ ಅವರಿಗೆ forward ಮಾಡಿದ್ದೇನೆ.

  ಉತ್ತರ
 3. Nagshetty Shetkar
  ನವೆಂ 17 2014

  “”ನಮ್ಮ ನಡೆ, ಬರಹ, ವಿಚಾರಗಳಲ್ಲಿ ಒಳಹೊಕ್ಕ ವಿಕಾರಗಳನ್ನು ನಾವೇ ಗಮನಿಸಿ ಕಿತ್ತುಹಾಕಬೇಕು. ವಿಮರ್ಶೆಯ ಎಚ್ಚರ ಸದಾ ಜಾಗೃತವಾಗಿರಬೇಕು.”

  [“ಸಾಹಿತಿಗಳ ಬೌದ್ಧಿಕ ದಿವಾಳಿತನ”, ಲೇ: ಡಾ. ಎಚ್. ಎಸ್. ಅನುಪಮಾ]

  ಭೈರಪ್ಪನವರಿಗೆ ಇದು ಸಾಧ್ಯವಾಗಿಲ್ಲ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments