ನಂಬಿಕೆ-ಮೂಢನಂಬಿಕೆ ಗೆರೆ ಎಳೆಯುವುದು ಹೇಗೆ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಬೆಂಗಳೂರಿನಲ್ಲಿ ಇನ್ನೂರಾ ಎಂಟು ಪ್ರಗತಿಪರ ಸ್ವಾಮೀಜಿಗಳೆಂದು ಕರೆದುಕೊಂಡಿರುವವರು ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸಂತೋಷ. ಯಾರಲ್ಲೂ ಮೌಢ್ಯ ಎಂಬುದು ಇರಬಾರದು. ಯಾಕೆಂದರೆ ನಾವೆಲ್ಲ ವೈಜ್ಞಾನಿಕ (ಹಾಗೆಂದರೇನು ಎಂಬುದೇ ಬೇರೆ ಚರ್ಚೆಯ ಸಂಗತಿ) ಯುಗದಲ್ಲಿದ್ದೇವೆ! ಈಗ ಧರಣಿ ಕುಳಿತಿದ್ದ ಸ್ವಾಮೀಜಿಗಳು ಕಾವಿ ಧರಿಸಿದ್ದಾರೆ, ಕೆಲವರು ವಿಭೂತಿಯನ್ನೂ ರುದ್ರಾಕ್ಷಿ ಮಾಲೆಯನ್ನೂ ಧರಿಸಿದ್ದಾರೆ. ಅನೇಕಾನೇಕ ಜನರ ನಂಬಿಕೆಯನ್ನು ಪ್ರತಿನಿಧಿಸುವ ಮಠಾಧೀಶರಾಗಿದ್ದಾರೆ. ಇವೆಲ್ಲದರ ಗೋಜಿಲ್ಲದೇ ಆರಾಮವಾಗಿ ದೇಶದ ಸಂವಿಧಾನಕ್ಕೆ ಅನುಸಾರವಾಗಿ ನಾನಂತೂ ಬದುಕುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಈ ಸ್ವಾಮೀಜಿಗಳ ವೇಷವೇ ಮೌಢ್ಯ. ಅವರು ಪ್ರತಿನಿಧಿಸುವ ಮಠಗಳೂ ಮೌಢ್ಯ. ಆದರೂ ಅವರು ಇವುಗಳಿಗೆ ಹೊರತಾದ ಯಾವುದೋ ಮೌಢ್ಯ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ತಮಾಷೆ ಎಂದರೆ ನವೆಂಬರ್ ಎರಡನೆಯ ವಾರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತೀಯ ಪ್ರಾಚೀನ ಪರಂಪರೆಯ ಉಳಿವಿನ ಪಣ ತೊಟ್ಟ ಕೆಲವು ಸ್ವಾಮೀಜಿಗಳೂ ಈ ಧರಣಿಯಲ್ಲಿದ್ದಾರೆ. ಮೂಢ ನಂಬಿಕೆ ನಿಷೇಧದ ಪಟ್ಟಿಯಲ್ಲಿರುವ ಪೂಜೆ, ಪಾದಪೂಜೆಯಾದಿಯಾಗಿ ಅನೇಕಾನೇಕ ಸಂಗತಿಗಳನ್ನು ಸದ್ಯ ಆಚರಿಸುತ್ತಿರುವ ಸ್ವಾಮೀಜಿಗಳು ಇವರು!
ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಸರ್ಕಾರದಿಂದ ರಚಿತವಾದ ಸಮಿತಿಯೊಂದು ಮೂಢ ನಂಬಿಕೆ ನಿಷೇಧ ಕಾಯ್ದೆಯ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅದಿನ್ನೂ ಸರ್ಕಾರದ ಪರಿಶೀಲನೆಯ ಹಂತದಲ್ಲೇ ಇದೆ. ಸಾರ್ವಜನಿಕ ಚರ್ಚೆಗೆ ಅದಿನ್ನೂ ತೆರೆದುಕೊಂಡಿಲ್ಲ. ಅದರಲ್ಲಿ ಹೇಳಲಾದ ಕೆಲವು ಸಂಗತಿಗಳು ಅಂತರ್ಜಾಲದ ಕೆಲವು ಮೂಲಗಳಿಂದ ಅಷ್ಟಿಷ್ಟು ಲಭ್ಯವಾಗಿದೆ. ಹತ್ತಾರು ಬಗೆಯ ಆಚಾರ ವಿಚಾರಗಳನ್ನು, ನಂಬಿಕೆ ನಿಷೇಧಗಳನ್ನು ಅನುಸರಿಸುವ ಆದರೂ ಜೊತೆಯಲ್ಲೇ ಬದುಕುವ ವೈವಿಧ್ಯಮಯ ಸಮಾಜ ನಮ್ಮದು. ಸಾಲದ್ದಕ್ಕೆ ಜನತಂತ್ರ ವ್ಯವಸ್ಥೆ ಬೇರೆ ಇದೆ. ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಅಂದರೇನೆಂದು ನಾವು ಅನುಸರಿಸುವ ಸಂವಿಧಾನವೂ ಸ್ಪಷ್ಟವಾಗಿ ಹೇಳಿದೆ. ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಮುಕ್ತ ಚರ್ಚೆಗೆ ಕರಡನ್ನು ತೆರೆದು ಕೂಲಂಕಷವಾಗಿ ತಿದ್ದುಪಡಿ ಮಾಡದೇ ಸರ್ಕಾರ ನೇಮಿಸಿದ ಸಮಿತಿಯ ಕೆಲ ಸದಸ್ಯರ ಹಾಗೂ ತಾವು ಸಂದರ್ಶಿಸಿದ್ದೇವೆ ಎಂದು ಹೇಳಲಾದ ಆಯ್ದ ಕೆಲವರ ಅಭಿಪ್ರಾಯವನ್ನು ಸಮಾಜದ ಸಕಲರ ಅಭಿಪ್ರಾಯ ಎಂದು ಸ್ವೀಕರಿಸುವುದಾದರೂ ಹೇಗೆ? ಇಂಥ ಮೂಲಭೂತ ಸಂಗತಿ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದಾಗಲೇ ಸಾಕಷ್ಟು ಚರ್ಚೆಯಾಗಿದೆ. ಅದಿರಲಿ.
ಪ್ರಸ್ತುತ ಮಸೂದೆಯಲ್ಲಿ ಮೂಢ ನಂಬಿಕೆ ಎಂದರೇನು? ಹೋಗಲಿ, ನಂಬಿಕೆ ಎಂದರೇನು ಎಂಬುದನ್ನು ಸ್ಪಷ್ಟಪಡಿಸಿಲ್ಲದಿರುವುದು ಸ್ಪಷ್ಟ. ಇದೊಂದು ಅಮೂರ್ತ ಸಂಗತಿ. ಮೂಢ ನಂಬಿಕೆ ಎಂಬುದೊಂದು ಇದ್ದರೆ ಅದಕ್ಕೆ ವಿರುದ್ಧ ಪದವೂ ಇರಬೇಕು. ಅದೇನು? ತಿಳಿದಿಲ್ಲ. ಹಾಗಾದರೆ ಈ ಪದ ಬಂದಿದ್ದು ಎಲ್ಲಿಂದ? ಯೂರೋಪ್ ಶಿಕ್ಷಣದ ಜೊತೆ, “ಬ್ಲೈಂಡ್ ಬಿಲೀಫ್” ಎಂಬುದರ ಅನುವಾದದಿಂದ. ಕೆಲವರು ಇದನ್ನು ಅಂಧಶ್ರದ್ಧೆ ಎಂದರೆ, ಇನ್ನು ಕೆಲವರು ಮೂಢ ನಂಬಿಕೆ ಎನ್ನುತ್ತಾರೆ. ಯಾವುದು “ಅಂಧ” ಅಥವಾ “ಮೂಢ” ಎಂಬುದಕ್ಕೆ ಯೂರೋಪಿನಲ್ಲಿ ಸ್ಪಷ್ಟ ಗೆರೆ ಇದೆ. ಬೈಬಲ್ನಲ್ಲಿ ಉಲ್ಲೇಖವಾಗಿರದ ಎಲ್ಲ ನಂಬಿಕೆ, ಆಚರಣೆಗಳೂ ಅಲ್ಲಿ ಅಂಧ, ಮೂಢ. ಆದರೆ ಭಾರತದಂಥ ವೈವಿಧ್ಯಮಯ ಸಾಂಸ್ಕೃತಿಕ ಪರಿಸರದಲ್ಲಿ ಬೈಬಲ್ ಸೇರಿದ್ದು ಪಾಶ್ಚಾತ್ಯರ ಆಗಮನದ ಜೊತೆ. ಕೆಲವೇ ಶತಮಾನಗಳ ಈಚೆಗೆ. ಅಂದರೆ, ನಮ್ಮೊಳಗಿನ ಅಂಧತ್ವ ಅಥವಾ ಮೌಢ್ಯಗಳು ಕಾಣಿಸತೊಡಗಿದ್ದೂ ಈಚೆಗೇ. ನಂಬಿಕೆ ಪ್ರಶ್ನಿಸುವ ನಮ್ಮ ವೈಚಾರಿಕರು ಇದನ್ನು ಸ್ವಲ್ಪ ವಿಸ್ತರಿಸಿ ಯಾವುದು ವೈಜ್ಞಾನಿಕವಲ್ಲವೋ ಅದೆಲ್ಲ ಮೌಢ್ಯ ಎಂದು ಹೇಳುತ್ತಾರೆ! ಇದು ವೈಜ್ಞಾನಿಕ, ಇದು ಅವೈಜ್ಞಾನಿಕ ಎಂದು ಹೇಳಲು ಯಾವುದೇ ನಿರ್ದಿಷ್ಟ ಮಾನದಂಡವಿಲ್ಲ.
ಸರಳವಾಗಿ ಹೇಳುವುದಾದರೆ, ಯಾವುದೇ ನಂಬಿಕೆಯಿಂದ ಮತ್ತೊಂದು ಜೀವಕ್ಕೆ ಭಾಷಿಕ, ಮಾನಸಿಕ ಅಥವಾ ದೈಹಿಕ ತೊಂದರೆ ಆಗುತ್ತಿಲ್ಲ ಎನ್ನುವುದಾದರೆ ಅಂಥ ನಂಬಿಕೆಯನ್ನು ಹೇಗೆ ಮೌಢ್ಯ ಎನ್ನುವುದು? ಜಗತ್ತಿನ ಅಸಂಖ್ಯ ಸಮುದಾಯಗಳಲ್ಲಿ ಅನ್ಯ ಸಮುದಾಯಗಳಿಗೆ ಸರಿ ಕಾಣದ ಅಸಂಖ್ಯ ನಂಬಿಕೆಗಳಿವೆ, ಜೀವನ ವಿಧಾನಗಳಿವೆ. ಕೆಲವು ಕಾಲಾಂತರ ಬದಲಾಗುತ್ತವೆ. ಕೆಲವನ್ನು ಸಮಾಜವೇ ಬದಲಾಯಿಸಿಕೊಳ್ಳುತ್ತದೆ, ಕೆಲವನ್ನು ಕೈಬಿಡುತ್ತದೆ. ಶಾಸ್ತ್ರ ಕೇಳುವುದರಿಂದ ಒಬ್ಬ ವ್ಯಕ್ತಿಗೆ ಮಾನಸಿಕ ಶಾಂತಿ ದೊರೆಯುವುದಾದರೆ ಅದನ್ನು ಬೇರೆಯವರು ಮೌಢ್ಯ ಎಂದೇಕೆ ಕರೆಯಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ದೊರೆಯುವುದಿಲ್ಲ.
ನಂಬಿಕೆಯ ಪ್ರಶ್ನೆಯೇ ಹಾಗೆ. ಬೇರೆಯವರಿಗೆ ತೃಪ್ತಿಯಾಗುವ ಉತ್ತರ ಅದರಲ್ಲಿ ಇಲ್ಲ. ಏಕೆಂದರೆ ಅದರ ಸ್ವರೂಪವೇ ಅಂಥದ್ದು. ಜೀವನವೇ ಒಂದು ನಂಬಿಕೆ. ಇಂದು ನಾವು ಮಾಡುವ ಕೆಲಸಗಳೆಲ್ಲ ನಾಳೆ ಒಳ್ಳೆಯದಾಗಲಿ ಎಂದಲ್ಲವೇ? ಇದನ್ನು ವೈಜ್ಞಾನಿಕಗೊಳಿಸುವುದು ಹೇಗೆ? ನಂಬಿಕೆಯ ನಾಳೆಗಳೆಲ್ಲ ಒಂದರ್ಥದಲ್ಲಿ ಮೌಢ್ಯವೇ!
ಅಷ್ಟಕ್ಕೂ ನಂಬಿಕೆ, ಆಚರಣೆ ಮೊದಲಾದವೆಲ್ಲ ವೈಜ್ಞಾನಿಕವೇ ಏಕಾಗಬೇಕು? ಸಾಹಿತ್ಯ ವಿಜ್ಞಾನವೇ? ಇತಿಹಾಸ ವಿಜ್ಞಾನವೇ? ಇಂಥ ಪ್ರಶ್ನೆಗಳಿಗೆ ಅರ್ಥವಿಲ್ಲ. ವಿಜ್ಞಾನದಂತೆ ಇವೂ ಸಮಾಜದ ಒಂದು ಸೃಷ್ಟಿಗಳು. ಬರೀ ವಿಜ್ಞಾನವೇ ಜೀವನವಲ್ಲ. ಕಲೆ, ಸಾಹಿತ್ಯ ಇತ್ಯಾದಿ ಮಾನವಿಕ, ಸಾಮಾಜಿಕ ಅಧ್ಯಯನದ ಅನೇಕಾನೇಕ ವಿಷಯಗಳು ವಿಜ್ಞಾನೇತರವಾದವು. ನಿಜವಾಗಿ ವಿಜ್ಞಾನ ವಿಷಯಗಳಲ್ಲೇ ಶುದ್ಧ ವಿಜ್ಞಾನ, ಆನ್ವಯಿಕ ವಿಜ್ಞಾನ ಇತ್ಯಾದಿ ವಿಂಗಡಣೆಗಳಿವೆ. ಆಧುನಿಕ ಅಧ್ಯಯನ ಶಿಸ್ತುಗಳಲ್ಲೇ ವಿಜ್ಞಾನೇತರ ಸಂಗತಿಗಳಿಗೆ ಜಾಗವಿದೆ. ಬದುಕಿನಲ್ಲಿ ಏಕಿರಬಾರದು?
ನಾವು ಈಗ ಅಂದುಕೊಳ್ಳುವ ನಂಬಿಕೆಗಳಲ್ಲಿನ ವೈಜ್ಞಾನಿಕತೆಯ ಹಿಂದೆ ಒಂದು ನಂಬಿಕೆಯಲ್ಲಿ ಕಾರ್ಯ ಕಾರಣ ಸಂಬಂಧ ಕಾಣಿಸಬೇಕು, ಅದು ಸಾರ್ವತ್ರಿಕ ಸತ್ಯವಾಗಬೇಕು ಎಂಬ ವಿಜ್ಞಾನದ ಪ್ರಾಥಮಿಕ ನಿಯಮಗಳೇ ಕಾಣಿಸುತ್ತವೆ. ನಂಬಿಕೆಗಳು ಹೀಗೆ ಇರಬೇಕಿಲ್ಲ. ಇದ್ದರೆ ನಮ್ಮ ಸಾಂಸ್ಕೃತಿಕ ಬದುಕಿನ ವೈವಿಧ್ಯ ಇರುವುದಿಲ್ಲ. ಪ್ರಸ್ತುತ ಮಂಡಿತವಾದ ಮಸೂದೆ ಜೀವನ ಕ್ರಮದಲ್ಲಿ ಏಕರೂಪತೆಯನ್ನು ಕಾನೂನಿನ ಮೂಲಕ ಹೇರುವ ಯತ್ನ ಮಾಡುತ್ತಿದೆ ಎನಿಸುತ್ತಿದೆ. ಮೂಲತಃ ಇದು ಮುಹೂರ್ತದಂಥ ಎಲ್ಲ ಜನರ ಆಚರಣೆಗೂ ಒಂದಲ್ಲ ಒಂದು ರೀತಿ ಪ್ರಮುಖ ಎನಿಸಿದ ಸಂಗತಿಯನ್ನು ಅರ್ಥಹೀನ ಎಂಬ ಕಾರಣಕ್ಕೆ ನಿಷೇಧಿಸುತ್ತಿದೆ. ಇದೇ ನಿಜವಾಗಿ ಮೌಢ್ಯ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿವಿಧ ಜಾತಿ ಸಮುದಾಯಗಳ ಕ್ಷೇತ್ರಕಾರ್ಯ ಒಡನಾಟದಲ್ಲಿ ಆಯಾ ಸಮುದಾಯಗಳ ಆಚರಣೆಯಲ್ಲಿ ಮುಹೂರ್ತ ಇರುವುದನ್ನು ಕಂಡಿದ್ದೇನೆ. ಈ ಮುಹೂರ್ತ ನಿಗದಿಗೆ ಪಂಚಾಂಗವೇ ಬೇಕಿಲ್ಲ. ನೈಸರ್ಗಿಕ ಬದಲಾವಣೆ ಗಮನಿಸಿ ಮುಹೂರ್ತ ನೋಡುವ ಅವರವರದೇ ವಿಧಾನಗಳಿವೆ. ಕರಾವಳಿಯ ಜನ ಮುಂಗಾರು ತಿಳಿಯಲು ಸಮುದ್ರದ ಬದಲಾವಣೆಯನ್ನು ಗಮನಿಸಿ ಸಮುದ್ರದಲ್ಲಿ “ಕರಿನೀರು” ಬಂದಕೂಡಲೇ ಒಕ್ಕಲು ಕೆಲಸದ ಮುಹೂರ್ತ ಇಟ್ಟುಕೊಳ್ಳುತ್ತಾರೆ. ಸುಗ್ಗಿ ಕುಣಿತಕ್ಕೂ ಇಂಥ ಮತ್ತೊಂದು ನೈಸರ್ಗಿಕ ಮುಹೂರ್ತ ನೋಡುತ್ತಾರೆ. ಇದಕ್ಕೇನು ಮಾಡುವುದು? ಇದೇ ರೀತಿ ನಂದಿಕೋಲು, ಪೂಜಾ ಕುಣಿತ, ದೊಡ್ಡಾಟ, ಸಣ್ಣಾಟ, ಚೌಡಿಕೆ ಮೇಳ, ಕಂಸಾಳೆ, ಒಂದೇ ಎರಡೇ ಈ ಎಲ್ಲ ಕಲೆಗಳೂ ಒಂದಲ್ಲ ಒಂದು ಧಾರ್ಮಿಕ ಆಚರಣೆಯ, ನಂಬಿಕೆಯ ಮೇಲೆ ನಿಂತಿವೆ. ಇವು ನಿರ್ದಿಷ್ಟ ಮುಹೂರ್ತವನ್ನು ಅವಲಂಬಿಸಿವೆ. ಮಸೂದೆ ಪ್ರಕಾರ ಇವೂ ನಿಷಿದ್ಧವಾಗುತ್ತವೆ. ಅಂದರೆ ಜನಪದರ ಒಂದು ಜ್ಞಾನ, ಒಂದು ಕಲೆಗೆ ಮೂಲ ಆಧಾರವಾದ ಸಂಗತಿಯನ್ನೇ ವೈಜ್ಞಾನಿಕತೆಯ ಹೆಸರಲ್ಲಿ ಇಲ್ಲವಾಗಿಸುವ ಯತ್ನ ಇದು.
ಮಸೂದೆ ಮಂಡಿಸಿದ ಸಮಿತಿಯಲ್ಲಿ ಇರುವವರ ಮಾನವೀಯ ಕಾಳಜಿಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಸಮಿತಿಯಲ್ಲಿರುವವರು ತಾವು ನಿಷೇಧಿಸಲು ಹೇಳುತ್ತಿರುವ ಸಂಗತಿಗಳ ಬಹು ಆಯಾಮವನ್ನು ಪರಿಶೀಲಿಸಿಲ್ಲ ಎಂಬುದು ಸ್ಪಷ್ಟ. ಬಗೆ ಬಗೆಯ ಮುಹೂರ್ತ, ಜಾತಕಗಳ ಮೂಲಕ ಒಳಿತು ಕೆಡುಕಾಗುತ್ತದೆಯೇ ಎಂಬುದನ್ನು ತಿಳಿದೇ ಬಹುಪಾಲು ಆಚರಣೆ, ನಂಬಿಕೆ, ಕಲೆಗಳು ಉಳಿದುಬಂದಿವೆ. ಆಚರಣೆ ಮಾಡುವ ವ್ಯಕ್ತಿಗೆ ನಿರ್ದಿಷ್ಟ ದಿನ ತಿಳಿಯುವ ವಿಧಾನಗಳಾಗಿ ಜಾತಕ ಮತ್ತು ಮುಹೂರ್ತಗಳಿವೆ. ಇವುಗಳನ್ನು ನಿಷೇಧಿಸಿದ ರಾಜ್ಯದಲ್ಲಿ ಶಿವರಾತ್ರಿಯಂದು ಹರಿಕಥೆ ಮಾಡಿಸಿ ಒಳಿತಾಗುತ್ತದೆ ಎಂದು ಒಬ್ಬರು ಶಾಸ್ತ್ರ ಹೇಳಿದರೆ ಆತ ಇಷ್ಟ ಬಂದಾಗ ಶಿವರಾತ್ರಿ ಮಾಡಬಹುದೇ? ಕಷ್ಟ ಪರಿಹಾರಕ್ಕೆ ನವರಾತ್ರಿಯಂದು ನಂದಿಕೋಲು ಹೊತ್ತುಕೊಳ್ಳಿ ಎಂದರೆ ಆತ ಏನು ಮಾಡಬೇಕು? ಹೋಗಲಿ. ಯಾರೋ ಇಂಥ ಶಾಸ್ತ್ರ ಹೇಳಿದರು, ಕಷ್ಟದಲ್ಲಿರುವಾತ ಮಾಡಿ, ನೆಮ್ಮದಿ ಕಂಡುಕೊಂಡರೆ ಯಾರಿಗೆ ಏನು ಹಾನಿ? ಪರಮಾನಸಶಾಸ್ತ್ರ (ಪ್ಯಾರಾ ಸೈಕಾಲಜಿ)ದ ಯಾವುದೇ ಚಿಕಿತ್ಸಕನನ್ನು ಕೇಳಿ, ಆತ ಇಂಥ ನೆವಗಳಿಂದ ಯಾವ ಹೈಟೆಕ್ ಆಸ್ಪತ್ರೆಯಲ್ಲೂ ವಾಸಿಯಾಗದ ಸಾವಿರ ಸಾವಿರ ಕಾಯಿಲೆ ಗುಣಪಡಿಸಿರುತ್ತಾನೆ.
ಇಲ್ಲಿರುವುದು ಆಸ್ತಿಕತೆ, ನಾಸ್ತಿಕತೆಯ ಪ್ರಶ್ನೆಯಲ್ಲ. ಸಾಂಸ್ಕೃತಿಕ ಬಹುಳತೆಯ ನಾಶದ ಪ್ರಶ್ನೆ. ಸಾಮಾನ್ಯವಾಗಿ ಪ್ರಶ್ನಿಸುವವರು ಬರೇ ಪ್ರಶ್ನಿಸುತ್ತಾರಷ್ಟೆ. ಉತ್ತರ ದೊರೆತರೆ ಸುಮ್ಮನಾಗುತ್ತಾರೆ. ಆದರೆ ಅವರಲ್ಲಿ ಯಾವುದೇ ಪರ್ಯಾಯಗಳಿರುವುದಿಲ್ಲ. ಕಲೆ ವೈವಿಧ್ಯಕ್ಕೆ ಆಚರಣೆ ಮೂಲ, ಆಚರಣೆಗೆ ಮುಹೂರ್ತದ ಬಲ. ಮುಹೂರ್ತವನ್ನೇ ನಿಷೇಧಿಸಿದರೆ ಉಳಿಯುವುದೇನು? ಏಕರೂಪ ಜೀವನ.
ನಂಬಿಕೆಗಳ ಪ್ರಶ್ನೆ ಬಂದಾಗ ನೆನಪಾಗುವುದು ಪ್ರಭುಶಂಕರರು,ಕುವೆಂಪು ಕುರಿತ ಸಮಾರಂಭದಲ್ಲಿ ಹೇಳಿದ ಸಂದರ್ಭ. ಹೀಗಿದ್ದರು ಕುವೆಂಪು ಎಂಬ ಕೃತಿಯಲ್ಲೂ ಆಮೇಲೆ ಇದು ದಾಖಲಾಗಿದೆ. ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕುವೆಂಪು ಮತ್ತು ಪ್ರಭುಶಂಕರರು ವಾಯುವಿಹಾರ ಮಾಡುವಾಗ ತಲೆ ಬೋಳಿಸಿಕೊಂಡ ಮಹಿಳೆ, ಮಕ್ಕಳು-ಮರಿ, ಮುದುಕರು, ಯುವಕರು ಎಲ್ಲ ಬರುತ್ತಿದ್ದರಂತೆ. ಅವರೆಲ್ಲ ಯಾರು ಅಂದಾಗ, ಸಾರ್ ಅವರೆಲ್ಲ ಮಾದೇಶ್ವರ ಜಾತ್ರೆಯಿಂದ ಬರುತ್ತಿರುವವರು ಎಂದ ಕೂಡಲೇ ಕುವೆಂಪು ಅವರು ಈ ದೇಶ ಉದ್ಧಾರವಾಗಲ್ಲ, ಎಂಥ ಮೌಢ್ಯ ಅಂದರಂತೆ. ಆಗ ಹೌದಾ ಸಾರ್? ಹಾಗಾದ್ರೆ ನಾನೂ ನೀವು ಮೂರೂ ಹೊತ್ತು ರಾಮಕೃಷ್ಣಾಶ್ರಮಕ್ಕೆ ಹೋಗಿ ಕೂರ್ತೀವಲ್ಲ, ಅದೇನು? ಅಂದಾಗ ಕುವೆಂಪು ಸುಮ್ಮನಾದರಂತೆ.
ಎಲ್ಲರಿಗೂ ಅವರವರ ನಂಬಿಕೆ ಮಾತ್ರ ಶ್ರೇಷ್ಠ. ಉಳಿದವರ ನಂಬಿಕೆ, ಆಚರಣೆ ಅರ್ಥಹೀನವೂ ಮೌಢ್ಯವೂ ಆಗಿ ಕಾಣುತ್ತದೆ. ಈ ಮಸೂದೆ ಈಗ ಇದ್ದಂತೆ ಜಾರಿಯಾದರೆ ಕಾವೇರಿ, ಹೇಮಾವತಿಗಳಿಗೆ ಬಾಗಿನವೂ ಇಲ್ಲ, ನಾಡಹಬ್ಬ ದಸರಾವೂ ಇಲ್ಲ. ಶಿವರಾತ್ರಿಯೂ ಇಲ್ಲ ಇದ್ದರೂ ಇವನ್ನು ಇಷ್ಟಬಂದಾಗ ಮಾಡಿಕೊಳ್ಳಬೇಕು. ದಿನವಿಲ್ಲ, ಮುಹೂರ್ತವಿಲ್ಲ!
ಈ ಮಸೂದೆ ತಯಾರಿಸಿದ ಸಮಿತಿ ಕರಡು ಸಿದ್ಧಮಾಡಿ, ಮುಖ್ಯಮಂತ್ರಿಗಳಿಗೆ ನೀಡಿ ವರ್ಷವಾಗುತ್ತ ಬಂತು. ಕರಡು ಸಲ್ಲಿಕೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಇದನ್ನು ಒಪ್ಪುತ್ತಾರೆ, ಕಾಯ್ದೆ ಕೂಡಲೇ ಜಾರಿಯಾಗುತ್ತದೆ ಎಂದೆಲ್ಲ ಸಮಿತಿ ನಂಬಿತ್ತು. ಸಮಿತಿಯ ಪ್ರಕಾರ ಬೇರೆಲ್ಲ ನಂಬಿಕೆಗಳು ಮೌಢ್ಯವಾದಂತೆ, ಸಮಿತಿಯ ಈ ನಂಬಿಕೆಯೇ ಮೌಢ್ಯವಾಗಿಬಿಟ್ಟಿದೆ! ನಂಬಿಕೆಯ ಸಂಕೀರ್ಣತೆ ಸರ್ಕಾರಕ್ಕೆ ಇದೀಗ ಸ್ವಲ್ಪ ಅರ್ಥವಾಗಿರುವುದರಿಂದಲೇ ಮಸೂದೆಯ ಜಾರಿಗೆ ಅವಸರ ತೋರುತ್ತಿಲ್ಲ. ಸರ್ಕಾರಕ್ಕೇನೋ ಅರ್ಥವಾಗಿರುವಂತಿದೆ ಆದರೆ ಒಂದಲ್ಲ ಒಂದು ನಂಬಿಕೆಯನ್ನೇ ನೆಚ್ಚಿರುವ ಮೌಢ್ಯ ವಿರೋಧಿ ಹೋರಾಟಗಾರರಿಗೆ ಇದು ಅರ್ಥವಾಗುವುದು ಯಾವಾಗ?
ಚಿತ್ರಕೃಪೆ : ವಿಜಯವಾಣಿ
ಮಡೆಸ್ನಾನ ನಿಷೇಧ ಕುರಿತ ಸುಪ್ರೀಂಕೋರ್ಟ್ ತೀರ್ಪು ಇಲ್ಲಿ ಗಮನೀಯ. ಲೇಖನ ಚೆನ್ನಾಗಿದೆ.
ನಿಜ. ಮಡೆಸ್ನಾನ ಮಾಡುವವರು ಬೇರೆಯವರನ್ನೇನೂ ಬಲವಂತವಾಗಿ ಎಲೆ ಮೇಲೆ ತಳ್ಳುತ್ತಿಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದು ಬೇರೆ, ಕಾನೂನು ಮೂಲಕ ನಿಷೇಧ ಹೇರುವುದು ಬೇರೆ. ಇದು ಮಹಾನ್ ಪ್ರಗತಿಪರರಿಗೆ ಅರ್ಥವೇ ಆಗುತ್ತಿಲ್ಲ!
ಮಡೆಸ್ನಾನದಿಂದ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಇದಕ್ಕೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ. ಆದುದರಿಂದ ಇದೊಂದು ಮೂಢ ನಂಬಿಕೆ.
ಪೇಜಾವರರು ತಮ್ಮನ್ನು ಒಬ್ಬ ದೊಡ್ಡ ಸುಧಾರಕನಾಗಿ ಬಿಂಬಿಸಿಕೊಂಡು ಬಂದಿದ್ದಾರೆ. ಮಡೆಸ್ನಾನದ ಬದಲು ಎಡೆಸ್ನಾನವನ್ನು ಪ್ರತಿಪಾದಿಸಿದ್ದಾರೆ. ಆದರೆ ಎಡೆಸ್ನಾನ ಮಾಡುವುದರಿಂದ ರೋಗ ರುಜಿನಗಳು ವಾಸಿಯಾಗುತ್ತವೆಯೇ? ಎಡೆಸ್ನಾನದಿಂದ ರೋಗಗಳಿಗೆ ಪರಿಹಾರ ಸಿಗುತ್ತದೆ ಎಂಬುದೂ ಕೂಡ ಮೂಢನಂಬಿಕೆಯೇ ಆಗಿದೆ.
ಮಡೆ-ಎಡೆಗಳ ಸಹವಾಸ ಬಿಟ್ಟು ನಿಮ್ಮಪೇಜಾವರರು ಏಕೆ ಮಡೆಸ್ನಾನದಿಂದಾಗಲಿ ಎಡೆಸ್ನಾನದಿಂದಾಗಲಿ ರೋಗ ರುಜಿನಗಳು ವಾಸಿಯಾಗುವುದಿಲ್ಲ ಎಂದು ಹೇಳುವುದಿಲ್ಲ? ಮೂಢನಂಬಿಕೆಗಳನ್ನು ಪೋಷಿಸುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ.
ಶೆಟ್ಕರ್ ಸಾಹೇಬ್ರೇ ಯಾವುದು ವೈಜ್ನಾನಿಕ ಯಾವುದು ಅವೈಜ್ನಾನಿಕ ಎಂದು ನಂಬಿಕೆಗಳನ್ನು ಅಷ್ಟು ಸುಲಭವಾಗಿ ತಮ್ಮ ತಮ್ಮ ಮೂಗಿನ ನೇರಕ್ಕೆ ವಿಂಗಡಿಸಲು ಸಾಧ್ಯವಿಲ್ಲ ಎಂಬುದು ತಮಗೆ ಮೊದಲು ಅರಿವಾಗಬೇಕು. ತಮ್ಮ ನಂಬಿಕೆಯ ಸಿದ್ಧಾಂತದಿಂದ ಮಾತ್ರ ಪ್ರಪಂಚದಲ್ಲಿ ಶಾಂತಿ, ಸಮಾನತೆ, ಸೋ ಕಾಲ್ಡ್ ಜಾತ್ಯತೀತ ಭಾವನೆ ಸ್ಥಾಪನೆ ಸಾಧ್ಯ ಎಂಬುದು ಕೂಡ ನನ್ನ ದೃಷ್ಟಿಯಲ್ಲಿ ಅವೈಜ್ನಾನಿಕ. ಯಾಕೆಂದರೆ ನೀವು ಪ್ರತಿಪಾದಿಸುವ ವೈಜ್ನಾನಿಕ ಪುರಾವೆಗಳು ಇದಕ್ಕಿಲ್ಲ. ಏನಂತೀರಿ?
ಮಡೆಸ್ನಾನದಿಂದಾಗಲಿ ಎಡೆಸ್ನಾನದಿಂದಾಗಲಿ ರೋಗ ರುಜಿನಗಳು ವಾಸಿಯಾಗುತ್ತದೆ ಎಂಬ ನಂಬಿಕೆಗೆ ವೈಜ್ಞಾನಿಕ ಆಧಾರವಿದ್ದರೆ ಅದನ್ನು ಪ್ರಸ್ತುತ ಪಡಿಸಿ. ವಿತ್ತಂಡವಾದವನ್ನು ನಿಲ್ಲಿಸಿ.
ಎಡೆಸ್ನಾನ, ಮಡೆಸ್ನಾನದಿಂದ ಏನೇನು ವಾಸಿಯಾಗುತ್ತವೆಂದು ಯಾರೂ ಪಟ್ಟಿ ಸಿದ್ಧಮಾಡಿಲ್ಲ, ನಾನಾಗಲೀ ನೀವಾಗಲಿ ಅದರಲ್ಲಿ ಪಾಲ್ಗೊಳ್ಳದವರು ಇದನ್ನು ನಿರ್ಧರಿಸಲಾಗದು. ಅದರಲ್ಲಿ ಹಠಕ್ಕೆ ಬಿದ್ದು ಪಾಲ್ಗೊಳ್ಳುವವರ ಮಾನಸಿಕ ನೆಮ್ಮದಿಗೆ ನಿಮ್ಮ ಪರ್ಯಾಯ ಏನು? ಅದನ್ನು ವೈಜ್ನಾನಿಕಗೊಳಿಸುವುದು ಹೇಗೆ? ಅದನ್ನು ಮೊದಲು ಹೇಳಿ.
ಚರ್ಮ ರೋಗ ನಿವಾರಣೆಗೆ ಅಥವಾ ಮಾನಸಿಕ ನೆಮ್ಮದಿಗೆ ಭಕ್ತರಿಂದ ಎಡೆಸ್ನಾನ, ಮಡೆಸ್ನಾನ ಮಾಡಿಸುವ ಬದಲು ಅವರಿಗೆ ಚರ್ಮ ರೋಗ ತಜ್ಞರ ಅಥವಾ ಮನೋರೋಗ ತಜ್ಞರ ಸಲಹೆ ಕೊಡಿಸುವುದು ಉತ್ತಮ. ಆದರೆ ಪೇಜಾವರರಿಗೆ ಭಕ್ತರ ಚರ್ಮರೋಗವನ್ನಾಗಲಿ ಮನೋರೋಗವನ್ನಾಗಲಿ ಪರಯಾಹರಿಸುವ ಇಚ್ಛೆ ಇಲ್ಲ. ಅವರಿಗೆ ಎಡೆಸ್ನಾನ, ಮಡೆಸ್ನಾನಕ್ಕೆ ಬರುವ ಭಕ್ತರಿಂದ ನಾಗಪೂಜೆ, ಸರ್ಪದೋಷ ನಿವಾರಣೆ, ಆ ಹೋಮ ಈ ಹೋಮ ಮಾಡಿಸಿ ಹಣ ಸಂಪಾದನೆ ಮಾಡುವುದೇ ಮುಖ್ಯವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕಳೆದ ಕೆಲವು ವರ್ಷಗಳಲ್ಲಿ ಹತ್ತು ಪಟ್ಟಿಗೂ ಹೆಚ್ಚು ಏರಿದೆ.
“ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕಳೆದ ಕೆಲವು ವರ್ಷಗಳಲ್ಲಿ ಹತ್ತು ಪಟ್ಟಿಗೂ ಹೆಚ್ಚು ಏರಿದೆ” ಅದಕ್ಯಾಕೆ ನಿಮಗೆ ಹೊಟ್ಟೆಯುರಿ? ಅಂದರೆ ಅಷ್ಟು ಪಟ್ಟು ಮೌಢ್ಯ ಸಮಾಜದಲ್ಲಿ (ನಿಮ್ಮಂಥವರಿದ್ದೂ) ಹೆಚ್ಚಾಯ್ತು ಅಂತಲೋ ಅಷ್ಟು ಜನ ಅಲ್ಲಿ ತಮ್ಮ ನಂಬಿಕೆಯಂತೆ ನೆಮ್ಮದಿ ಕಂಡುಕೊಂಡಿದ್ದಾರೆ ಅಂತಲೋ? ನನ್ನ ಪ್ರಕಾರ ಎರಡನೆಯ ಆಯ್ಕೆಯೇ ಸರಿ. ಇದನ್ನು ವೈಜ್ನಾನಿಕಗೊಳಿಸಿ ನೋಡುವಾ.
ಮೂಡನಂಬಿಕೆಗಳನ್ನು ಬಂಡವಾಳವಾಗಿಸಿಕೊಂಡು ಜನಸಾಮಾನ್ಯರಿಂದ ದುಡ್ಡು ದೋಚುತ್ತಿರುವ ಕುಕ್ಕೆ ದೇವಸ್ಥಾನದು ಹಗಲು ದರೋಡೆ. ಅನೈತಿಕತೆಯಿಂದ ಸಂಪಾದಿಸಿರುವ ಅದರ ದನ ಕನಕವನ್ನು ಕಂಡು ನಾನೇಕೆ ಹೊಟ್ಟೆ ಉರಿ ಪಡಲಿ?!! ಹಗಲು ದರೋಡೆಯನ್ನು ಸಮರ್ಥಿಸಿಕೊಳ್ಳುತ್ತಿರುವ ನಿಮ್ಮ ನೈತಿಕತೆ ಪಾತಾಳ ತಲುಪಿದೆ.
ಅಲ್ಲಿ ಯಾರೂ ಹೊಡೆದು ಬಡಿದು ಯಾರಿಂದಲೂ ಹಣ ಕೀಳುತ್ತಿಲ್ಲ, ಯೋಗ್ಯತೆ ಇಲ್ಲದೇ ಎಂಟಾಣೆ ಭಿಕ್ಷೆಯನ್ನೂ ಬೇಡುತ್ತಿಲ್ಲ. ಅಂದಮೇಲೆ ಅದು ಹೇಗೆ ಹಗಲು ದರೋಡೆಯಾಗುತ್ತದೆ? ನಿಮ್ಮಂಥ ಮಹಾನ್ ಪ್ರಗತಿಪರರಿದ್ದೂ ಕುಕ್ಕೆಗೆ ನಡೆದುಕೊಳ್ಳುವವರ ಸಂಖ್ಯೆ ಏರುತ್ತಿದೆ, ಹಜ್ ಯಾತ್ರಿಕರ ಸಂಖ್ಯೆಯೂ ಏರುತ್ತಿದೆ! ಬಹುಸಂಖ್ಯಾತರ ಭಾವನೆಗಳೇ ಅರ್ಥವಾಗದ ನೀವು-ನಿಮ್ಮಂಥವರು ಹೇಳುವುದಕ್ಕೆ ಜನ ಕೊಡುವ ಬೆಲೆ ಅದು. ಇದು ಜನತಂತ್ರ ವ್ಯವಸ್ಥೆ ಸಾಹೇಬ್ರೇ. ಬಹುಜನ ಬಯಸುವುದನ್ನು ಯಾರೂ ತಡೆಯಲಾರರು. ಅದನ್ನು ಮೊದಲು ಗೌರವಿಸಿ. ಆಮೇಲೆ ಭಾಷಣ ಬಿಗಿಯುವಿರಂತೆ.
ಕುಕ್ಕೆಗೆ ಒಮ್ಮೆಯೂ ಭೇಟಿ ನೀಡದ ನಾಗಶೆಟ್ಟಿ ಹಗಲು ದರೋಡೆ ಬಗ್ಗೆ ಮಾತಾಡ್ತಾ ಇದ್ದಾರೆ, ಇರಲಿ ಆ ಕುಕ್ಕೆವಾಸ ಸ್ಕಂದ ನಿಮಗೆ ಸದ್ಬುದ್ಧಿಯನ್ನು ನೀಡಲಿ
ಮಡೆ ಸ್ನಾನ, ಜಗತ್ತಿನ ಒಂದು ವಿಚಿತ್ರವೇ ಸರಿ.
ನಾವು ಪ್ರಜ್ನಾವಂತ್ರು ಅನ್ನಿಸಿಕೊಳ್ಳುವವರು ಊಟಕ್ಕೆ ಕೂರದಿದ್ದರೆ ಸಾಕು. ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ.
“ನಾವು ಪ್ರಜ್ನಾವಂತ್ರು ಅನ್ನಿಸಿಕೊಳ್ಳುವವರು” ಅಂದರೆ? ಈ ಪ್ರಜ್ನಾವಂತಿಕೆಯ ಮಾನದಂಡ ಏನು? ನೀವು ಬಯಸುವ, ಇಷ್ಟಪಡುವ, ನಿರಾಕರಿಸುವ, ಒಪ್ಪುವ ಸಂಗತಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದಾ? ನಿಮ್ಮ ಗ್ರಹಿಕೆಗೆ, ಅನುಭವಕ್ಕೆ ಹೊರತಾದುದು ಅಪ್ರಜ್ನಾವಂತಿಕೆಯದಾ ಹೇಗೆ?