ಅಭಿವ್ಯಕ್ತಿ ಸ್ವಾತಂತ್ರವೆಂಬ ಕಪಟ ನಾಟಕ
– ಹೃಷಿಕೇಶ್ ಚಿಕ್ಕಮಗಳೂರು
ಇತ್ತೀಚೆಗೆ ಕಳೆದ ಸೋಮವಾರದಿಂದ ಟಿ.ವಿ9 ವಾಹಿನಿಯನ್ನು ಪ್ರಸಾರ ಮಾಡದಂತೆ ಘನ ಸರ್ಕಾರದ ಮುಖ್ಯಸ್ಥರು ಕೇಬಲ್ ಆಪರೇಟರ್ ಗಳಿಗೆ ಫತ್ವಾವನ್ನು ಹೊರಡಿಸಿದ್ದರು.ಅದರನ್ವಯ ಬಹುತೇಕ ಪ್ರದೇಶಗಳಲ್ಲಿ ಆ ವಾಹಿನಿಯು ಕೇಬಲ್ ವಾಹಿನಿಗಳ ಲಿಸ್ಟ್ ನಿಂದ ಮಾಯವಾಗಿತ್ತು.(ನಂತರ ಕೇಬಲ್ ಆಪರೇಟರುಗಳ ಜೊತೆ ಮತುಕತೆಯೆಂಬ ಕಾರ್ಯಕ್ರಮದ ನೆಪದಲ್ಲಿ ಈ ಫತ್ವಾವನ್ನು ಹಿಂಪಡೆದು,ವಾಹಿನಿಯ ಪ್ರಸಾರಕ್ಕೆ ಅವಕಾಶಕೊಡಲಾಯಿತು)ಆ ವಾಹಿನಿಯನ್ನು ನೋಡದೆ ಊಟ ನಿದ್ದೆ ಬಿಟ್ಟು ಯಾರೂ ಸಾಯದೇ ಇದ್ದರೂ ಸಹ ಒಂದು ಆಸಕ್ತದಾಯಕ ಬೆಳವಣಿಗೆಯೊಂದು ಕಂಡುಬರುತ್ತದೆ. ಅದೆಂದರೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿ, ಹಾಗೂ ಸರ್ಕಾರದ ನಾಲ್ಕನೇ ಅಂಗ ಎಂದೇ ಖ್ಯಾತಿ ಗಳಿಸಿದ ಮಾಧ್ಯಮದ ಮೇಲೆ ಒಂದು ಸುತ್ತಿನ ಬಿಗಿಹಿಡಿತ ಸಾಧಿಸಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿರುವುದು ಗೋಚರವಾಗುತ್ತಿದೆ.
ಹಾಲಿ ಸಚಿವರೊಬ್ಬರ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಈ ವಾಹಿನಿಗೆ ವಕ್ರದೃಷ್ಟಿ ಬಿದ್ದಂತಾಗಿದೆ. ವಿಷಯ ಏನೇ ಇದ್ದಿರಿಲಿ, ಆದರೆ ಸರ್ಕಾರದ ವಿರುದ್ಧ ಕಾರ್ಯಕ್ರಮಗಳನ್ನು ಮಾಡಲೇಬಾರದು ಎಂಬುದು ದಾಷ್ಟ್ಯದ ಪರಮಾವಧಿ ಎಂದೇ ಹೇಳಬೇಕು. ಬ್ರಿಟೀಷರ ನಂತರ ಪತ್ರಿಕಾ ಸ್ವಾತಂತ್ಯದ ಮೇಲೆ ನಿರ್ಬಂಧವನ್ನು ಹೇರಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ತದ ನಂತರ ಆ ಕೀರ್ತಿ ಪ್ರಸ್ತುತ ಸರ್ಕಾರಕ್ಕೆ ಸಲ್ಲುತ್ತದೆ. ಎಲ್ಲಾ ಮಾಧ್ಯಮದ ಮೇಲೂ ನಿರ್ಬಂಧ ಹೇರದಿದ್ದರೂ ನಿರ್ದಿಷ್ಟವಾಗಿ ತನಗೆ ಆಗದವರ ಮೇಲೆ ನಿರ್ಬಂಧ ಹೇರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಯಲ್ಲದೆ ಮತ್ತೇನೂ ಅಲ್ಲ.
ಕರ್ನಾಟಕ ಸರ್ಕಾರದ ವಿರುದ್ಧ ಯಾವ ಮಾಧ್ಯಮಗಳೂ ಚಕಾರವೆತ್ತದಂತೆ ನೋಡಿಕೊಳ್ಳಲು ನಡೆಸುತ್ತಿರುವ ಹುನ್ನಾರ ಇದಾಗಿದೆ. ಇದೇನೋ ಸರ್ವಾಧಿಕಾರಿ ರಾಜ್ಯವೋ ಅಥವಾ ಪ್ರಜಾಪ್ರಭುತ್ವವೋ ಎಂಬುದು ಒಂದೊಂದು ಸಾರಿ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಯಾವುದೇ ವಾಹಿನಿ ತಮ್ಮ ವಿರುದ್ಧ ಸುಳ್ಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದರೆ, ಸರ್ಕಾರವೇ ಅದನ್ನು ಸುಳ್ಳು ಎಂದು ಸಾಬೀತು ಮಾಡಲಿಕ್ಕೆ ಸಾವಿರ ದಾರಿಗಳಿವೆ, ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಇರುವ ವಾಸ್ತವನ್ನು ಹೇಳಿಬಿಡುವುದು, ಅಥವಾ ಕಾನೂನಿನ ಮೂಲಕ ಬಹಿರಂಗ ಪಡಿಸುವ ಎಲ್ಲಾ ಸಾಧ್ಯತೆಗಳು ಸರ್ಕಾರಕ್ಕೆ ಇದ್ದೇ ಇದೆ. ಆದರೂ ಅಂತಹ ಸ್ವಚ್ಚ ಮಾರ್ಗವನ್ನು ಬದಿಗೆ ಸರಿಸಿ ವಾಮ ಮಾರ್ಗವನ್ನು ಅನುಸರಿಸುವ ಜರೂರಾದರೂ ಏನಿತ್ತು?
ಸರ್ಕಾರದ ಇಂತಹ ಕ್ರಮಗಳು ಹೊಚದಚಹೊಸದೇನಲ್ಲ, ತಮಗಾಗದವರನ್ನು ಅಥವಾ ತಮಗೆ ಕಿವಿಚುಚ್ಚಿ ಇನ್ನೊಬ್ಬರನ್ನು ಕೆಡವಬೇಕೆಂದು ಹೇಳುವ ಆಪ್ತ ಮಿತ್ರರ ಮಾತುಗಳನ್ನು ಚಾಚುತಪ್ಪದೆ ಪಾಲಿಸುವ ಗುಣ ಈ ಸರ್ಕಾರದ ಹಿರಿಮೆ. ಹಿಂದೊಂದು ಬಾರಿ ಕುವೆಂಪು ವಿಶ್ವವಿದ್ಯಾನಿಲಯದ ಸ್ಥಳೀಯ ಸಂಸ್ಕøತಿಗಳ ಅಧ್ಯಯನ ಕೇಂದ್ರದ ಕುರಿತು ಪ್ರಗತಿಪರರು ಸೊಲ್ಲೆತ್ತಿದ್ದೇ ತಡ ಕೂತಲ್ಲಿಯೇ ಫೋನಾಯಿಸಿ ಅಧ್ಯಯನ ಕೇಂದ್ರವನ್ನು ಮುಚ್ಚಿಸಿದ ಕೀರ್ತಿ ಈ ಸರ್ಕಾರದ್ದು.ಕಲಬುರ್ಗಿ ಎಂಬ ಸಂಶೋಧನೆಯ ‘ಮಾರ್ಗ’ವೇ ತಿಳಿಯದ ಹುಸಿ ಸಂಸೋಧಕರೊಬ್ಬರು ಸಂಪುಟಗಟ್ಟಲೇ ಸಂಶೋಧನಾ ಕೃತಿಗಳನ್ನು ರಚಿಸಿದ್ದೇನೆಂದು ಬೀಗುತ್ತಾರೆ. ಆದರೆ ಅವು ಸಂಶೋಧನೆಯಿಂದ ರೂಪುಗೊಂಡಿರುವ ಕೃತಿ ಎಂಬುದು ಹೆಸರಿನಲ್ಲಿ ಕಂಡುಬರುತ್ತದೆಯೇ ಹೊರತು ಒಳಗಿನ ಪುಟಗಳಲ್ಲಿ ಅಲ್ಲ. ಅದೇನೇ ಇರಲಿ, ಸಂಶೋಧನೆಯ ಗಂಧಗಾಳಿ ಗೊತ್ತಿರದ ಪ್ರಗತಿಪರರ ದಡ್ಡತನದ ಮಾತುಗಳನ್ನೇ ಬಲವಾಗಿ ನಂಬಿ ಅಧ್ಯಯನ ಕೇಂದ್ರವನ್ನು ಮುಚ್ಚಿಸಿದ ಪ್ರಕ್ರಿಯೆ ಸರ್ವಾಧಿಕಾರಕ್ಕೆ ಎಂಬುದಕ್ಕೆ ಮೊದಲ ನಿದರ್ಶನವಾಗಿದೆ. ಈಗ ವಾಹಿನಿಯದ್ದು ಎರಡನೇ ನಿದರ್ಶನವಾಗಿದೆ.
ಎಲ್ಲೆಂದರಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ತಮ್ಮ ಕಿಸೆಯಲ್ಲೇ ಇಟ್ಟುಕೊಂಡು ತಿರುಗುವ ಪ್ರಗತಿಪರರು ಎಲ್ಲಿ ಕಾಣೆಯಾಗಿದ್ದಾರೆ ಎಂಬುದನ್ನು ಸ್ಟಿಂಗ್ ಆಪರೇಷನ್ ಮಾಡಿಯೇ ಕಂಡುಕೊಳ್ಳಬೇಕು ಎನಿಸುತ್ತದೆ. ಇಲ್ಲವಾದರೆ ಕಿಸ್ ಪಿಸ್ ಡೇಗಳನ್ನು ಅವರು ಬ್ಯುಸಿಯಾಗಿರುವ ಸಾಧ್ಯತೆಯೂ ಹೆಚ್ಚಿದೆ. ಎಲ್ಲೇ ಇರಲಿ, ಆದರೆ ಸಮಾಜದ ಹೊಣೆ ತಮ್ಮ ಹೆಗಲ ಮೇಲಿದೆ ಎಂದೇ ಬಿಂಬಿಸಿಕೊಳ್ಳುವ ಪ್ರಗತಿಪರರ ಸಾಹಿತಿಗಳು ಒಂದೇ ಒಂದು ಹೇಳಿಕೆಯನ್ನು ಈ ವಿಷಯದ ಕುರಿತು ನೀಡದಿರುವುದನ್ನು ನೋಡಿದರೆ ಅವರ ಬದ್ಧತೆ ಗುಣ ಗೊತ್ತಾಗುತ್ತದೆ. ಈ ಸಾಹಿತಿಗಳೂ ಅಷ್ಟೇ, ಯಾವಾಗ ಬೇಕಾದರೂ ಮಗ್ಗಲು ತಿರುಗಿಸಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರದ ಕಾರ್ಡನ್ನು ಆಟವಾಡಿಸುತ್ತಾರೆ. ಅಧಿಕಾರವೇ ಅವರ ಬಂಡವಾಳವಾಗಿದ್ದು ಸೃಜನಶೀಲತೆ ಬದ್ಧತೆಯೆಲ್ಲಾ ಬದಿಗೆ ಸರಿದು ನಿಂತಿವೆ. ಕೆಲವು ಅಶ್ಲೀಲ ಸಾಹಿತ್ಯಗಳನ್ನು, ಶಯನಗೃಹದ ಕಾರ್ಯಗಳನ್ನು ಬೀದಿಯಲ್ಲಿ ಮಾಡುವಂತೆ ಪ್ರೇರೇಪಿಸುವಂತಹ ಕಾರ್ಯಗಳಲ್ಲಿ ಮಾತ್ರ ಅವರ ಸ್ವಾತಂತ್ರ ಅಡಗಿರುವುದು ಖೇದದ ವಿಷಯವಾಗಿದೆ.
ಪ್ರಗತಿಪರರು ಮಾತನಾಡಿದರೂ ಮಾತನಾಡದಿದ್ದರೂ ಅಭಿವ್ಯಕ್ತಿ ಸ್ವಾತಂತ್ರ ಎಂಬ ಸಂಗತಿಯೊಂದನ್ನು ಭಾರತದ ಸಂವಿಧಾನ ತನ್ನೆಲ್ಲಾ ಪ್ರಜೆಗಳಿಗೂ ನೀಡಿದೆ. ಅದರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ವಿಷಯದ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಲು ಸ್ವತಂತ್ರನಾಗಿರುತ್ತಾನೆ. ಆದರೆ ಇದಕ್ಕೆ ಅಡ್ಡಿಯೆಂಬಂತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕೆಲವರು ತಮಗೆ ಅನುಕೂಲವಾಗುವಂತಹ ಮತ್ತು ತಮ್ಮನ್ನು ವಿದೂಷಕರಂತೆ ಹೊಗಳುವ ಭಟ್ಟಂಗಿಗಳ ಕ್ರಿಯೆಗಳನ್ನು ಮಾತ್ರ ಸ್ವಾತಂತ್ರವೆಂದು ಪರಿಗಣಿಸುತ್ತದೆ. ಅಧಿಕಾರದ ದರ್ಪ, ಸಂವಿಧಾನದ ಕುರಿತ ಅಜ್ಞಾನ, ಪ್ರಭುತ್ವ ನಿರ್ವಹಿಸಬೇಕಾದ ಕಾರ್ಯಗಳ ಕುರಿತ ನಿರ್ಲಕ್ಷ್ಯವು ಇಂತಹ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ.
ಇನ್ನೂ ಕೆಲವು ದೂರದರ್ಶನದ ಛಾನೆಲ್ ಗಳನ್ನು ನಾನು ವೈಯುಕ್ತಿಕವಾಗಿ ಇಷ್ಟಪಡುವುದಿಲ್ಲವಾದರೂ, ಅವುಗಳ ಸ್ವಾತಂತ್ರವನ್ನು ಮೊಟಕುಗೊಳಿಸುವ ಕ್ರಿಯೆಯನ್ನು ಮಾತ್ರ ವಿರೋಧಿಸುತ್ತೇನೆ. ಒಂದೇ ಕಾರ್ಯಕ್ರಮವನ್ನು ರಬ್ಬರ್ ಗಿಂತ ಉದ್ದವಾಗಿ ಎಳೆಯುವ, ಮಕ್ಕಳು ಬೋರ್ ವೆಲ್ನಲ್ಲಿ ಬಿದ್ದರೆ ಸತತವಾಗಿ 4 ದಿನಗಳ ಕಾಲ ಹೇಳಿದ್ದನ್ನೇ ಹೇಳಿಕೊಂಡಿರುವ ಕಿಸ್ಬಾಯಿ ದಾಸಗಳ, ವೈಚಾರಿಕ ವೈಜ್ಞಾನಿಕ ಎಂದು ಬಿಂಬಿಸಿಕೊಂಡು ಅದರೆಡೆಗೆ ಕಾರ್ಯತತ್ಪರರಾಗದೆ ಇರುವ ಹಲವಾರು ವಿಚಾರಗಳು ಕೆಲವು ವಾಹಿನಿಗಳ ಕುರಿತು ಇರುಸುಮುರುಸು ಮಾಡುವುದಂತೂ ನಿಜ, ಆದರೆ ಇಷ್ಟವಾಗದಿದ್ದರೆ ಬೇರೆ ವಾಹಿನಿಗಳನ್ನು ವೀಕ್ಷಿಸುವ ಸ್ವಾತಂತ್ರವೂ ಪ್ರೇಕ್ಷಕನ ರಿಮೋಟ್ ನಲ್ಲಿ ಇದ್ದೇ ಇರುತ್ತದೆ. ಇದರ ಹೊರತಾಗಿಯೂ ಅಧಿಕಾರವನ್ನು ಬಳಸಿ ಒಂದು ವಾಹಿನಿಯನ್ನೋ ಅಥವಾ ಪತ್ರಿಕೆಯನ್ನೋ ಸ್ಥಗಿತಗೊಳಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿಪೆಟ್ಟು ಕೊಟ್ಟಹಾಗೆ.
ಸ್ಥಗಿತಗೊಂಡ ವಾಹಿನಿಯು ಕನ್ನಡದ ಪರವಾಗಿ ಇತ್ತೋ, ಅದು ಜನರಿಗೆ ಮನರಂಜನೆಯನ್ನು ನಿಡಿತ್ತೋ ಎಂಬ ಮುಂತಾದ ವಿಷಯಗಳು ಸದ್ಯಕ್ಕೆ ಅಪ್ರಸ್ತುತ. ಏಕೆಂದರೆ ಅದನ್ನು ಸ್ಥಗಿತಗೊಳಿಸಲು ನೀಡಿರುವ ಕಾರಣಗಳೇ ಬೇರೆಯಾಗಿವೆ, ಅದರಲ್ಲಿಯೂ ವಿಶೇಷವಾಗಿ ಸರ್ಕಾರದ ವಿರುದ್ಧದ ಕಾರ್ಯಗಳನ್ನು ಬಿತ್ತರಿಸಿದ್ದೇ ಆಗಿದೆ. ಏನೇ ಆದರೂ ಇಲ್ಲಿರುವುದು ಹಿಟ್ಲರ್ ಸರ್ಕಾರವಂತೂ ಅಲ್ಲ, ಇದು ಪ್ರಜಾಪ್ರಭುತ್ವದ ಸರ್ಕಾರ, ತನ್ನ ವಿರುದ್ಧ ಮಾತನಾಡಿದ ಮಾತ್ರಕ್ಕೆ ಅವರನ್ನು ಹತ್ತಿಕ್ಕಿರುವ ಯಾವುದೇ ಹಕ್ಕು ಪ್ರಭುತ್ವಕ್ಕಿಲ್ಲ. ಇದೊಂದು ಸುದ್ದಿ ವಾಹಿನಿಗೆ ಮಾತ್ರ ಆದಂತಹ ಚ್ಯುತಿಯಲ್ಲ, ಬದಲಿಗೆ ಅಭಿವ್ಯಕ್ತಿ ಸ್ವಾತಂತ್ರಕ್ಕೇ ಆದ ಚ್ಯುತಿಯಾಗಿದೆ. ಯಾವುದು ಅಭಿವ್ಯಕ್ತಿ ಸ್ವಾತಂತ್ರ ಯಾವುದು ಅಲ್ಲ ಎಂಬುದನ್ನು ಪ್ರಗತಿಪರರು ನಿರ್ಧರಿಸಬೇಕಾಗಿಲ್ಲ, ಅದನ್ನು ನಿರ್ಧರಿಸಲೆಂದೇ ಸಂವಿಧಾನ ಹಾಗೂ ಕಾನೂನುಗಳು ಅಸ್ತಿತ್ವದಲ್ಲಿವೆ. ಅದರಡಿಯಲ್ಲಿ ಇಂತಹ ವಿಷಯಗಳನ್ನು ಸರಿದೂಗಿಸಿಕೊಂಡು ಹೋದರೆ ಒಳಿತು.
ಇನ್ನಾದರೂ ಸರ್ಕಾರ ಮತ್ತು ಸುದ್ದಿವಾಹಿನಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಮನಸೋಇಚ್ಚೆ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಅದರಂತೆಯೇ ಸ್ವೇಚ್ಚಾಚಾರವಾಗಿ ಅಧಿಕಾರವನ್ನು ಬಳಸುವುದು ಎರಡೂ ಸಹ ಸಮಾಜಕ್ಕೆ ಅಷ್ಟೇ ಕೆಡಕನ್ನು ಉಂಟುಮಾಡುತ್ತವೆ.
ಹೀಗೆಲ್ಲಾ ನ್ಯೂಸ್ ಚಾನಲ್ ಗಳನ್ನು ನಿಷೇಧಿಸುವುದು ಸರಿಯಲ್ಲ. ಕಾರ್ಟೂನ್ ಚಾನಲ್ ಗಳೂ ಸಪ್ಪೆ ಎನಿಸಿದಾಗ ನಮಗೆ ಬೇರೇನು ಆಯ್ಕೆ ಇದೆ?
ಪಾಪ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಪರದಾಟ ಪಡುವ TV9 ನಂತಹ ವಾಹಿನಿಯ ಹೊಟ್ಟೆಗೆ ಕಲ್ಲು ಹಾಕುವ ಹುನ್ನಾರn
“ಹಾಲಿ ಸಚಿವರೊಬ್ಬರ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಈ ವಾಹಿನಿಗೆ ವಕ್ರದೃಷ್ಟಿ ಬಿದ್ದಂತಾಗಿದೆ.”
ಸ್ಟಿಂಗ್ ಆಪರೇಶನ್ ಅನ್ನು ಜವಾಬ್ದಾರಿಯುತವಾಗಿ ಪ್ರಗತಿಪರ ಧ್ಯೇಯೋದ್ದೇಶಗಳಿಂದ ಮಾತ್ರ ಬಳಸತಕ್ಕದ್ದು. ವೈದಿಕ ಮಠಾಧೀಶರ ಪೊಳ್ಳುತನವನ್ನು ಸ್ಟಿಂಗ್ ಆಪರೇಶನ್ ಮೂಲಕ ಬಯಲು ಮಾಡಿದರೆ ಜನಜಾಗೃತಿಯಾಗುತ್ತದೆ, ಮಾಧ್ಯಮಗಳ ಕಾರ್ಯಾಚರಣೆಗೆ ನೈತಿಕ ಶಕ್ತಿ ಸಿಗುತ್ತದೆ. ಅದು ಬಿಟ್ಟು ದುಡ್ಡು ಮಾಡುವ ಏಕೈಕ ಉದ್ದೇಶದಿಂದ ಸ್ಟಿಂಗ್ ಮಾಡಲು ಹೋದರೆ ಹಾವಿನೊಡನೆ ಮಲಗಿದ ಅನುಭವ ಆಗುತ್ತದೆ.
[ಸ್ಟಿಂಗ್ ಆಪರೇಶನ್ ಅನ್ನು ಜವಾಬ್ದಾರಿಯುತವಾಗಿ ಪ್ರಗತಿಪರ ಧ್ಯೇಯೋದ್ದೇಶಗಳಿಂದ ಮಾತ್ರ ಬಳಸತಕ್ಕದ್ದು. ]
ಅಪ್ಪಣೆ ಮಹಾಪ್ರಭು!!
ಅಂದಹಾಗೆ ನಿಮ್ಮ ಮೇಲಿನ ವಾಕ್ಯದಲ್ಲಿ ಕೆಲವು ಶಬ್ದಗಳು ಬಿಟ್ಟುಹೋಗಿವೆ ಅನಿಸುತ್ತಿದೆ..ಅದು
“ಸ್ಟಿಂಗ್ ಆಪರೇಶನ್ ಅನ್ನು ಜವಾಬ್ದಾರಿಯುತವಾಗಿ ಪ್ರಗತಿಪರ ಧ್ಯೇಯೋದ್ದೇಶಗಳಿಂದ ಮಾತ್ರ ಬಳಸತಕ್ಕದ್ದು ಎಂದು ದರ್ಗಾ ಸರ್ ಹೇಳಿದ್ದಾರೆ / ಅಪ್ಪಣೆ ಕೊಡಿಸಿದ್ದಾರೆ ” ಎಂದಾಗಬೇಕು..
ಪ್ರಗತಿಪರರೆಲ್ಲರ ಅಭಿಪ್ರಾಯವೂ ಇದೇ ಆಗಿದೆ.