ತುಳುನಾಡ ನಂಬಿಕೆಗಳು…
– ಭರತೇಶ ಆಲಸಂಡೆಮಜಲು
ಬಾಳಿಗೊಂದು ನಂಬಿಕೆ ಎಂಬಂತೆ, ಈ ಬಾಹ್ಯ ಜಗತ್ತು ನಂಬಿಕೆಯ ತಲೆದಿಂಬುನಿಟ್ಟು ಮಲಗಿದೆ. ಈ ನಂಬಿಕೆಯಲ್ಲಿ ಎಲ್ಲವೂ ಶೂನ್ಯ ಆಕಾಶ ಅನಂತವಾದರೆ, ಅಣು ಪರಮಾಣುಗಳು ಎನೋ ಕತ್ತಲಲ್ಲಿ ತೇಲುವ ಸೂಕ್ಷ್ಮ ಜೀವಿ, ಆ ಆಗಾಧ ಶಕ್ತಿಯ ಕೊಲ್ಮಿಂಚು ಎಲ್ಲೋ ಹುಟ್ಟಿ ಶಕ್ತಿಯ ಅದುಮಿದ ಶೂನ್ಯ, ಸತ್ಯದ ಜಗದಲ್ಲಿ ನಾವೊಂದು ಭ್ರಾಮರಕ ನಿರ್ಮಿತಿಗಳು ಅದೇ ನಿರಾಕಾರ, ನಿರ್ಗುಣ, ನಿರಾಮಯ, ಆಗೋಚರ ಬ್ರಹ್ಮಾಂಡದ ಸ್ವರೂಪಗಳು ನಮ್ಮ ನಮ್ಮ ಜ್ಞಾನದ ಅಳತೆಯೊಳಗೆ…. “ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ, ಮೃದುತ್ವ ಕಾಠೀಣ್ಯಗಳು ಇಲ್ಲ, ಅವೆಲ್ಲ ಏನಿದ್ದರೂ ನಮ್ಮ ನಿಮ್ಮ ಮಿದುಳಿನಲ್ಲಿ ನಮ್ಮ ನಿಮ್ಮ ಜ್ಞಾನದಲ್ಲಿ” ಎಂದು ಪ್ರಸಿದ್ಧ ನರ ವಿಜ್ಞಾನಿ ನೋಬೆಲ್ ವಿಜೇತ ಸರ್ ಜಾನ್ ಐಕೆಲ್ಸ್ ಹೇಳಿದ್ದಾರೆ.
ನಮ್ಮ ಯೋಚನಾ ಲಹರಿಯ ಶೂನ್ಯ ಜಾಗಗಳಲ್ಲಿ ಈ ನಂಬಿಕೆಗಳು ಅಚ್ಚಳಿದು ನಿಂತಿದೆ ನಮ್ಮ ನಂಬಿಕೆಗಳೇ ಹಾಗೆ ಅದು ಪ್ರಕೃತಿಯ ಅರಾಧನೆಯಿಂದ ಹಿಡಿದು ಗುರು ಹಿರಿಯರ ಪೂಜನೆಯವರೆಗೆ ಅದರಲ್ಲೂ ಕರಾವಳಿ ಇವೂಗಳ ಗೂಡು, ಬೀಡು. ಹಲವಾರು ವೈಶಿಷ್ಟ, ವಿಶೇಷ, ಆಚರಣೆ, ಅರಾಧನೆ, ಪಾಲನೆ ಇವುಗಳಿಂದಾಗಿ ವಿಶ್ವವ್ಯಾಪ್ತಿಯಲ್ಲಿ ಛಾಪನ್ನು ಮೂಡಿಸಿದೆ. ಎಲ್ಲರ ಮಂದ ದೃಷ್ಠಿ ಇತ್ತ ಕಡೆ ನೆಡುವಂತೆ ಮಾಡಿದೆ. ಇಲ್ಲಿನ ಆಚರಣೆ ಒಂದನ್ನು ಮೀರಿಸುವ ಇನ್ನೊಂದು ಪ್ರಬುದ್ಧವಾದದ್ದು. ಪ್ರಪಂಚದ ಬೇರೆ ಯಾವೂದೇ ಕೋಣೆಯಲ್ಲೂ ಅರಸಿ ಹುಡುಕಿದರೂ ಬಯಸಿ ಸಿಗಲಾರದು. ಯಾವುದೋ ಪೂವಾಗ್ರಹದ ನೆಲೆಯಲ್ಲಿ ತುಳುನಾಡು ತನ್ನ ಭವ್ಯ ಸಂಸ್ಕೃತಿಯ ಕಣಜದ ನೆಲೆಯಲ್ಲಿ ಇನ್ನೂ ಆಚರಣೆಗಳು ಉಳಿದು ನಡೆಯುತಿದೆ. ಒಂದಷ್ಟು ಜಿಜ್ಞಾಸೆ, ವಿಮರ್ಶೆಗಳಿಂದ ಮತ್ತಷ್ಟು ಪ್ರಚಾರವಾಗಿ ಇನ್ನಷ್ಟು ಗಟ್ಟಿಯಾಗಿ ತುಳುವರ ಮನಗಳಲ್ಲಿ ಅಗೆಲುಗಳ ರೂಪದಲ್ಲಿ ಭಾವುಕವಾಗಿ ಬೆಚ್ಚಗೆ ಕುಳಿತಿದೆ.
ಸಂಸ್ಕೃತಿ, ಸುಸಂಸ್ಕೃತ ಪದಗಳು ಇಂದು ನಿರ್ಜೀವ ವಸ್ತುವಂತೆ ಎಲ್ಲರ ಬಾಯಲ್ಲೂ ಹೊರಳಾಡಿ ತನ್ನ ನೈಜತೆ ಯನ್ನು ಕಳಕೊಂಡಿದೆಯೇ ಹೊರತು ವಾಸ್ತವದಿಂದಲ್ಲ. ಅದರಲ್ಲೂ ಕರಾವಳಿಯ ದೇವರ ಕಾಡು, ನಾಗಬನ, ದೇವರಕೆರೆ, ಪುಣ್ಯ ನೀರು ಸ್ನಾನ, ಭೂತರಾಧನೆ, ಅಗೆಲು ಹಾಕುವುದು, ಬಿಂದು ಕೊಡುವುದು, ಪಿಂಡ ಬಿಡುವುದು, ಕುಲೆಗಳಿಗೆ ಬಡಿಸುವುದು, ಮಡೆಸ್ನಾನ, ಬೂಡು, ಗರೋಡಿ, ನಾಗತಂಬಿಲ, ಪತ್ತನಾಜೆ, ಆಟಿ ಆಚರಣೆ, ಕೋಲ, ಕೆಡ್ಡಸ ಹೀಗೆ ನೆಲ, ಜಲ, ಕಾಡು, ಗಾಳಿ, ಆಕಾಶಗಳನ್ನು ಒಂದೊಂದು ವಿಧದಲ್ಲಿ ಆಕಾರಗಳಲ್ಲಿ ಪೂಜಿಸಿ ಸಂಪನ್ನಗೊಳಿಸಿ ಸಮೃದ್ಧಿಯ ಕಾಣುವ ನಾಡು ತುಳುನಾಡು. ಎಲ್ಲವೂ ಪ್ರಬುದ್ಧವಲ್ಲದಿದ್ದರೂ ಅವುಗಳಿಗೆ ಅದರದೇ ಅದ ಕಟ್ಟಲೆ, ಹಿನ್ನೆಲೆಗಳನ್ನು ಆನಾದಿ ಕಾಲದಿಂದ ಹಲವಾರು ತಲೆಮಾರುಗಳಿಂದ ಅಜ್ಜ ನೆಟ್ಟ ಆಲದ ಮರದಂತೆ ಜೋಪಾನವಾಗಿ ಗಂಟುಕಟ್ಟಿ ದಾಟಿಸುತ್ತಿದ್ದಾರೆ. ಸಮಾಜಕ್ಕೆ ಪ್ರೇರಣೆ ನೀಡುವವರು ಮಾಹಾಪುರುಷರು ಈ ಲೋಕ ತೊರೆದು ತೆರಳಿದೊಡನೆ ಹಿಂದಿರುವ ಜನರು ಅವರು ಹೇಳಿದ ಮಾರ್ಗದಲ್ಲಿ ನಡೆಯುತ್ತಾ ಅವರ ಜನ್ಮಸ್ಥಳ, ಮರಣಸ್ಥಳಗಳನ್ನೂ ಪೂಜಿಸಿ ಮೊದಲು ಸ್ಮರಣೆಯಾಗಿ ಕಾಲಾಂತರದಲ್ಲಿ ಭ್ರಮೆಯಾಗುತಿದೆ. ಇಲ್ಲಿನ ನಾಗಾರಾಧನೆ, ಭೂತರಾಧನೆ ಅದೆಷ್ಟೋ ಕಾಂಕ್ರೀಟುಕರಣದ ನಡುವೆಯು ಏಕರೆಯಷ್ಟು ಖಾಲಿಯಾಗಿ ಉಳಿಯಲು ಸಾಧ್ಯವಾಗಿದೆ. ಪ್ರತಿಷ್ಠಿತ ವಿದ್ಯಾ ಸಂಸ್ಥೆ, ಆಸ್ಪತ್ರೆಗಳ ಅವರಣದೊಳಗೂ ನಾಗಾರಾಧನೆ, ಭೂತರಾಧನೆಯ ಗುಡಿಗಳು ಕಾಣಬಹುದು ಎಂದರೆ ಈ ತುಳುವರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯಲೂ ಆ ಆರಾಧನೆಯೇ ಪ್ರೇರಣಾ ಜ್ಯೋತಿ ಎಂಬಂತೇ…
ನಾನು ಕಂಡಂತೆ ಪುತ್ತೂರು ಸಮೀಪದ ಕುಂಟಿಕಾನ ಎಂಬಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಇಲಾಖೆ ಹೊಸ ಸಸಿ ನೆಡುವ ಭರದಲ್ಲಿ ಹಸಿರಿನ ಮೇಲೆ ಬುಲ್ಡೋಜರ್ ಹರಿಸಿತು. ಆದರೆ ಜನರ ನಂಬಿಕೆಯ ಭೂತ ಮತ್ತು ನಾಗ ಬನಗಳನ್ನು ಯಂತ್ರಗಳು ಮುಟ್ಟಲಿಲ್ಲ. ಹೌದು, ಯಾವುದೋ ನಂಬಿಕೆಯ ಮೂಲದಿಂದ ಅರ್ಧ ಎಕರೆ ಕಾಡು ಪ್ರಸಾದ ರೂಪದಲ್ಲಿ ತನ್ನ ಇರುವಿಕೆಯನ್ನು “ಬನ” ಎಂಬ ಸ್ಧಿತಿಯಲ್ಲಿ ಉಳಿಯುವಂತಾಯಿತು.
ತುಳುನಾಡ ದೈವರಾಧನೆಯ ಸುಸಂದರ್ಭದಲ್ಲಿ ದೈವ ಅಭಯ ಕೋಡುವುದೇ ಹಾಗೆ “ನಂಬಿನಕ್ಲೆಗ್ ಇಂಬು ಕೊರ್ಪೆ”(ನಂಬಿದವರಿಗೆ ರಕ್ಷಣೆ ಕೊಡುತ್ತೇನೆ) ಎಂದು… ನಂಬಿದವರ ರಕ್ಷಿಸಿಸುವ ಕೆಲಸ, ನಂಬಿಕೆ, ವಿಶ್ವಾಸದ ಪ್ರಶ್ನೆ ಬಂದಾಗ ಈ ದೈವ-ಭೂತಗಳಿಗೆ ಮೊದಲ ಪ್ರಾಶಸ್ತ್ಯ. ದೈವಗಳಿಗೆ ಪ್ರಕೃತಿ ಪೂಜಾಕರಾದ ನಾವು ಪ್ರಾಣಿರೂಪವಾಗಿ, ದೈವೀರೂಪವಾಗಿ, ಪುರಾಣರೂಪಗಳಲ್ಲಿ ದೈವಾರಾಧನೆ ಮಾಡುತ್ತಾ ಬಂದು ನಮ್ಮ ಮತ್ತು ದೇವರು ಇವುಗಳ ನಡುವೆ ರಾಯಭಾರಿಯಾಗಿ ಸಂವಹನಕಾರರಾಗಿ ಸಮಾಜವನ್ನು ಸಮರ್ಥವಾಗಿ ನಿಯಂತ್ರಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತಿದೆ. ಭೂತಾರಾಧನೆ ಆಧ್ಯಾತ್ಮಿಕ ಶಕ್ತಿಯ ಆರಾಧನೆ ಅಗಿರಬಹುದು ಅವುಗಳೆಲ್ಲವೂ ನಿಮಿತ್ತ ಮಾತ್ರ ತುಳುವರ ದೃಷ್ಠಿಯಲ್ಲಿ ಅದು ದಿವ್ಯ ಸೃಷ್ಠಿಗಳು ಮಾನವ ಜೀವಿಗಳ ಶ್ರೇಷ್ಟತೆಯ ಪೂರ್ಣತೆಗೆ ಅರ್ಥಕೊಡುವ ಶಕ್ತಿಗಳು…
ಇನ್ನೂ ಯಕ್ಷಗಾನ, ಬಯಲಾಟಗಳ ಕಡೆಗೆ ಹೊರಟರೆ ಅದರ ಬಗೆಗಿಟ್ಟಿರುವ ನಂಬಿಕೆ ಆಚಲ, ಧರ್ಮದಾಟ, ಸೇವೆದಾಟ, ಹೀಗೆ ಹಲವಾರು ಕಾರಣಗಳಿಂದ ಹಲವಾರು ಕ್ಷೇತ್ರ ಮೇಳಗಳು ಹುಟ್ಟಿ ಬೆಳೆದು ಪಸರಿಸುತ್ತಿದೆ. ಆಟ(ಯಕ್ಷಗಾನ)ದಲ್ಲಿ ಮಾನವ ನಿಮಿತ್ತರೂ ದೇವ ದೇವಾತ್ಮಾ ಸಂಭೂತನಾಗುವುದು, ರಾಕ್ಷಸ ಗಣಗಳು ಭೂಲೋಕವನ್ನು ಆಳುವುದು ಇಲ್ಲಿ(ತುಳುನಾಡಲ್ಲಿ) ಮಾತ್ರ ಕಾಣಬಹುದು.ಅಗೆಲು ಹಾಕುವುದು, ಕುಲೆಗಳಿಗೆ ಬಡಿಸುವುದು, ಗುರುಕಾರ್ಣವರಿಗೆ ಬಡಿಸುವುದು, ಹೀಗೆ ಇಲ್ಲಿ ಪ್ರತಿ ಮನೆ ಎಂಬಂತೆ ನಮ್ಮನ್ನು ಬಿಟ್ಟು ಯಾವುದೋ ಸ್ತಬ್ಧ ಸುಂದರ ಲೋಕಕ್ಕೆ ಮತ್ತೆ ಜೀವಿಸಲು, ವಿಹರಿಸಲು, ತೆರಳಿರುವ ಗುರುಹಿರಿಯರನ್ನು ನೆನಪಿಸಿಕೊಳ್ಳುವುದು ಮಾತ್ರ ನಿಜಕ್ಕೂ ಗುರುಹಿರಿಯರ ಬಗೆಗಿನ ಗೌರವ ಹೆಚ್ಚಿಸಿದೆ….
ಇತ್ತಿಚೇಗೆ ರಾಜ್ಯದೆಲ್ಲೆಡೆ ಕರಾವಳಿಗರ ಬಗೆಗೆ ಇನ್ನೂ ಹೊತ್ತಿ ಉರಿದು ಗಾಳಿಯ ದೆಸೆಗೆ ಬೂದಿ ಹಾರುವಂತೆ ಮಡೆಸ್ನಾನ ಬಗೆಗಿನ ನಂಬಿಕೆ ವಿಮರ್ಶೆ ಮಾಡಿ ಹೊಲಸು ಬಾಯಿ ಮತ್ತು ಸಪ್ತವ್ಯಸನವಿರುವ ಜನ ನುಡಿಮುತ್ತು ಉದುರಿಸಿದ್ದು ಮಾತ್ರ ಖೇದಕರ….
ಹೌದು.ಇಂದಿನ ಆಧುನಿಕ ಭರಾಟೆಯಯಲ್ಲಿ ಸಂಸ್ಕೃತಿ ಕಾಲದಿಂದ ಕಾಲಕ್ಕೆ ಬೆಳೆದ ನಮ್ಮ ಜ್ಞಾನದ ದೆಸೆಯ ನೆಲೆಯಲ್ಲಿ ವಿಜ್ಞಾನಿ ಸುಜ್ಞಾನಿಯೆಂಬ ಸಹಜಪೂರಕ ಬದಲಾವಣೆ ಕಂಡು ಆಚರಣೆ, ಅರಾಧನೆ, ಪಾಲನೆ, ನಂಬಿಕೆಗಳು ಒಬ್ಬ ಹಳ್ಳಿಯವನದ್ದು, ಅವು ಎಲ್ಲವೂ ಮೂಢತೆ, ಮೌಢ್ಯ ಎಂದು ಕರೆಯುತ್ತೇವೆ ಅದರ ಹಿಂದಿನ ಹಿನ್ನಲೆಯು ಭ್ರಮೆ ಎನ್ನುತ್ತೇವೆ. ಕೆಲವು ಕಡೆ ವಿಜ್ಞಾನ ಭೌತವಿಜ್ಞಾನವೂ ಭ್ರಮೆಯ(Imagination) ಮೇಲೆ ನಿಂತಂತೆ ಕಣ್ಣಿಗೆ ಕಾಣದ ಎಲೆಕ್ಟ್ರಾನ್, ನ್ಯುಟ್ರೋನ್ ಅವು ಸುತ್ತುತ್ತವೆ, ತಿರುಗುತ್ತವೆ ಎಂದು ಅಂಗೀಕರಿಸುವ ನಾವು ಆಚರಣೆಗೆ ಬಂದರೆ ಕೀಳಾಗಿ ಕಾಣಲು ಈ ವಿಜ್ಞಾನದ ಕಣ್ಣು ಎಂದು ಹೇಳಬಹುದೆನೋ….! ವಿಜ್ಞಾನದ ಸಂಕೇತ, ಚಿಹ್ನೆ, ನೆರಳು, BIS, ಗಳ್ಳಿಲ್ಲದಿದ್ದರೆ ಕೆಲವು ಅಸ್ತಿಕ-ನಾಸ್ತಿಕರು ಒಪ್ಪುವುದೇ ಇಲ್ಲ.. ಗೊಂದಲದಿಂದ ಬುದ್ಧಿಸ್ಥಿಮೀತವಿಲ್ಲದೇ ಕಂಡ ಪ್ರತಿಯೊಂದಕ್ಕೂ ಶಕುನ-ಅಪಶಕುನಗಳಂತೆ ವೈಜ್ಞಾನಿಕ ವಿವರಣೆ ನೀಡುತ್ತಾ ತಮ್ಮ ಚಾಪಲ್ಯ ತೀರಿಸುತ್ತಿರುವುದು ಮಾತ್ರ ನಂಬುತ್ತಿರುವ ನನ್ನಂತಹವರಿಗೆ ಸಣ್ಣ ಹೊಡೆತ ಮಾತ್ರ ಸತ್ಯ.
ಒಂದಂತು ನಿಜ ಪ್ರಾಂಪಂಚಿಕ ನಾಗರಿಕತೆಗೆ ವಿರೋಧವಾಗಿ ಮಾತಾನಾಡಿ ಪ್ರಚಾರಗಿಟ್ಟಿಸುವ ದಿನಗಳಲ್ಲಿ ಈ ನಂಬಿಕೆಗಳ ಮೇಲೆ ನಿಂತ ಸ್ವರ್ಗ-ನರಕಗಳಿಂದಾಗಿ ಮಾನವ ದಾನವನಾಗುವುದನ್ನು ತಪ್ಪಿಸಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.. ನಿಮಗೂ ಗೊತ್ತು ವಿಜ್ಞಾನಸೃಷ್ಠಿಯ ಕನ್ನಡಿ ಕವಿ ಬಾಯಲ್ಲಿ ಅದು ಸತ್ಯ..!! ಅದು ಹೇಳುವುದೆಲ್ಲ ಸತ್ಯವೇ ಅದರೆ ಅದು ಸುಳ್ಳು.. ಅದು ನಮ್ಮ ಭ್ರಮೆ.. ಅದು ನೀಡುವುದು ಮಿಥ್ಯ ಬಿಂಬ ಅಂದರೆ ಉಲ್ಟಾಪಲ್ಟಾ ಬಿಂಬ ನಿಜ ಅದಾಗ್ಯೂ ಅದು ನಮ್ಮ ಮೊಗದ ಕುಳಿಗೆ ಕಾರಣವಾದ ಖುಷಿಯ ಸಂಗತಿ ತಿಳಿಸದು.. ಕಣ್ಣೀರ ಕಂಡರೂ ಅದಕ್ಕೆ ಕಾರಣವಾದ ನೋವು ಕಾಣಿಸದು ಅದರಂತೆ ಈ ನಂಬಿಕೆ ಸಹ…..
ಆಚರಣೆ, ನಂಬಿಕೆಗಳನ್ನು ಮಾಡುವವರನ್ನು ಬುದ್ಧಿಹೀನರೂ ಮೌಢ್ಯರೂ ಎಂದು ಏಲ್ಲೆಲ್ಲೂ ಛೇಡಿಸಿ ಧಾರ್ಮಿಕಭಾವನೆಗಳಿಗೂ ಧಕ್ಕೆ ತರಲೂ ಗಾಂಧೀ ಯುಗದಲ್ಲಿ ಇವುಗಳ ಮೇಲೆ ಆದ ಪಾಶ್ಚಾತ್ಯರ ದಬ್ಬಾಳಿಕೆ ಏನೋ ಅದರ ನೆರಳು ಈಗಳು ಬೀಳುತಿರುವುದು ವಿಪರ್ಯಾಸ.? ಬುದ್ಧಿಗೆ ನಿಲುಕದ ಕೆಲವು ಗುಣ ವಿಶೇಷಗಳಿಗೆ ವಿದ್ಯಾವಂತನೆಂಬ ನೆಲೆಯಲ್ಲಿ ಚಿಪ್ಪಿನೊಳಗೆ ತಪಸ್ಸಿಗೆ ಕುಳಿತ ಮೆದುಳಿನ ರೇಖಾಗೆರೆಗೆ ವೇಗ ಕೊಟ್ಟಂತೆ ಇಂದ್ರಿಯಲಾಲಸೆಯ ಪ್ರಪಂಚದಲ್ಲಿ ಇಂದ್ರಿಯಗಳನ್ನೇ ಕೊಂಕಿಸಿ ತರ್ಕಿಸಿ ತುರ್ಕಿಸಿ ವಿವರಣೆ ನೀಡುತಿರುವುದು ಧಾರ್ಮಿಕ ವೈರಾಗ್ಯದ ಕಡೆಗೆ ಸಾಗುತ್ತಿರುವ ಕುರುಹೋ ಏನೋ ಎಂಬಂತೆ ಭಾಸವಾಗುವುದರಲ್ಲಿ ತಪ್ಪಿಲ್ಲ…ನಂಬಿಕೆಗಳು ನಂಬುವವರ ಮನೊಭೂಮಿಕೆಯ ಚೌಕಟ್ಟಿನೊಳಗೆ ಓಡಾಡುತ್ತಿರುತದೆ, ಮಿತಿಯಿಂದ ಚಿತ್ರಿಸಿ ಕಲ್ಪಿಸಿಕೊಳ್ಳುತ್ತದೆ, ನಂಬಿಕೆ ದುರ್ಬಲತೆಯ ಮನ ಹೊಕ್ಕುವುದು ಮಾತ್ರ ನಿಜ ಆತ್ಮವಿಶ್ವಾಸದ ಶಕ್ತಿ ಗುಳಿಗೆಯಾಗಿ ಪರಿಣಾಮಕಾರಿಯಾಗುವುದು ಕಾಲಸಹಜವಾಗಿ ಕಾಯಿ ಹಣ್ಣುವಷ್ಟು ನಿಜ. ಈ ನಂಬಿಕೆಯು ಚೌಕಟ್ಟಿನೊರಗೆ ಅಂದರೆ ಸೀಮಾ ಗಡಿಮೀರಿದರೆ ಅದು ಅಸ್ತಿಕತೆಯಿಂದ ನಾಸ್ತಿಕತೆಗೆ ಹೋಗುವ ದಾರಿಯಂತೆ…
“ಅತ್ತ ಇಲಿ ಇತ್ತ ಹುಲಿ” ಎಂಬಂತೆ ಇಬ್ಬದಿಯ ನೀತಿಯ ಬಗೆಗೆ ಕಗ್ಗದಲ್ಲಿ ಡಿ.ವಿ.ಜಿಯವರು
“ನಂಬದಿರ್ದನು ತಂದೆ,ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವುಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು – ಮಂಕುತಿಮ್ಮ ||”
ಖಂಡಿತ, ನಂಬಿಕೆಗಳು ಮೂಡತೆಯಲ್ಲ ಒಂದಷ್ಟು ಹಿನ್ನಲೆ, ಉದ್ದೇಶ, ಸಾರ್ಥಕತೆ, ಶಾಂತಿ, ನೆಮ್ಮದಿಯ ವಿಚಾರ ಗಣನೆಗೆ ತೆಗೆದುಕೊಳ್ಳಬೇಕಾಗುತದೆ. ಮುಖಕ್ಕೆ ಈಟಿಯೇ ಚುಚ್ಚಿಸಿ ದೇಹ ದಂಡಿಸುವುದೆ ಆಗಿರಬಹುದು ಅದರೆ ಅದು ಪ್ರಸವವೇದನೆಯ ಸಂತೋಷ, ಶಾಂತಿ ಯನ್ನು ಅದರ ಅನುಭವಿಸಿರುವರಿಂದ ಪಡೆಯುವುದು ಸೂಕ್ತ. ಈ ನಂಬಿಕೆ ಸ್ಥಿತಿಸ್ಥಾಪಕ(CONSTANT )ದಂತೆ ನಮ್ಮನ್ನು ಆಳಿದರೂ ಸಂಶಯವಿಲ್ಲ. ಈಚೆಗೆ ನಂಬಿಕೆ ವೈಯಕ್ತಿಕ ದ್ವೇಷ ಆಸೂಯೆಯಾಗಿ ಪರಿವರ್ತನೆಯಾಗುತಿರುವುದು ಖೇದಕರ.!! ಹಾಗೆ ನೋಡಿದರೆ ಎಲ್ಲರ ನಂಬಿಕೆಯು ಮೂಢವೆ… ಅದನ್ನು ಪ್ರಶ್ನಿಸುವ ಹಕ್ಕು ಇಲ್ಲ ಸ್ಧೆರ್ಯವೂ ಇಲ್ಲ??. ಬಲತ್ಕಾರದಿಂದ ಬಹಿರಂಗದ ಕತ್ತಲೆಯನ್ನು ಓಡಿಸಬಹುದು ಅಂತರಿಕ ಜಯ ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ.
ಕಡೆಗೆ ಭಗವಂತ ನಮ್ಮ ಆಚರಣೆ ಮತ್ತು ವಿಧಿ ಅನುಷ್ಠಾನಗಳ ಬಗ್ಗೆ ತಲೆಕೆಡಿಸುವುದಿಲ್ಲ ಆ ಆಚರಣೆಯ ಹಿಂದಿನ ನಮ್ಮ ಹೃದಯ ಹಾಗೂ ಉದ್ದೇಶವನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಇತರರಿಗೆ ನೋವುಂಟು ಮಾಡುವ ಆಚರಣೆಯನ್ನು, ನಂಬಿಕೆಯನ್ನು ತ್ಯಜಿಸೋಣವಲ್ಲವೇ, ಉಳಿದದ್ದನ್ನು ಬೆಳೆಸೋಣವಲ್ಲವೇ ಪ್ರಜ್ಞಾವಂತ ಜನರೇ….. ಏನಂತೀರಿ????..!!
ಚಿತ್ರ ಕೃಪೆ : ತುಳುನಾಡು ಫೇಸ್ಬುಕ್ ಪೇಜ್