ರಾಮ ಜನ್ಮಭೂಮಿ/ಬಾಬರಿ ವಿವಾದ : ಭೂತಕಾಲದ ತಪ್ಪುಗಳು ಭವಿಷ್ಯಕ್ಕೆ ಭಾರವಾಗಬಾರದು
– ರಾಕೇಶ್ ಶೆಟ್ಟಿ
ಮುಂಬೈನಿಂದ ನಾನು ಬೆಂಗಳೂರಿಗೆ ಹೊರಟಿದ್ದ ಸೆಪ್ಟಂಬರ್ ೩೦,೨೦೧೦ರ ಗುರುವಾರದ ಆ ದಿನ ಉಳಿದ ದಿನಗಳಂತೆ ಇರಲಿಲ್ಲ.ಒಂದು ಬಗೆಯ ಕುತೂಹಲ,ಕಾತರ,ಆತಂಕಗಳು ಭಾರತದ ಬಹುತೇಕರಲ್ಲಿ ಮನೆ ಮಾಡಿದ್ದ ದಿನವದು.ಅಲಹಬಾದ್ ಉಚ್ಚ ನ್ಯಾಯಾಲಯ ಅಯೋಧ್ಯೆಯ “ರಾಮ ಜನ್ಮ ಭೂಮಿ/ಬಾಬರಿ ಮಸೀದಿ” ವಿವಾದದ ಕುರಿತು ತೀರ್ಪು ನೀಡುವ ದಿನವಾಗಿತ್ತದು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳಷ್ಟು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದವು,ಸೂಕ್ಷ್ಮ,ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆಯ ಕಣ್ಗಾವಲಿತ್ತು.ಜನರ ಜೊತೆಗೆ ವಿಶೇಷವಾಗಿ ಟಿ.ಆರ್.ಪಿ ಮಾಧ್ಯಮಗಳು ಕೂಡ ಸಂಯಮದಿಂದ ವರ್ತಿಸಬೇಕು ಎನ್ನುವ ಮನವಿಗಳು ಸರ್ಕಾರದಿಂದಲೇ ಬರುತಿತ್ತು.ಮಧ್ಯಾಹ್ನ ೩.೩೦ರ ಸುಮಾರಿಗೆ ತೀರ್ಪು ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡುತಿದ್ದವು.ನನ್ನ ವಿಮಾನವಿದ್ದಿದ್ದು ಸಂಜೆಯ ವೇಳೆಗೆ.ಆದರೆ,ಬಾಬರಿ ಮಸೀದಿ ಧರಾಶಾಹಿಯಾದ ಮೇಲೆ ಭೀಕರ ದಂಗೆಗೆ ಸಾಕ್ಷಿಯಾಗಿದ್ದ ಮುಂಬೈನಲ್ಲಿ ತೀರ್ಪು ಹೊರಬಂದ ಮೇಲೆ ಏನಾದರೂ ಆಗಬಾರದ್ದು ಶುರುವಾದರೇ,ಅದಕ್ಕೂ ಮುಖ್ಯವಾಗಿ ನಾನು ಹೋಗಬೇಕಾದ ದಾರಿಯಲ್ಲೇ “ಅತಿ ಸೂಕ್ಷ್ಮ ಪ್ರದೇಶ”ಗಳು ಇದ್ದವಾದ್ದರಿಂದ,ಸೇಫರ್ ಸೈಡ್ ಎಂಬಂತೆ ತುಸು ಬೇಗವೇ ನಾನು ಮತ್ತು ನನ್ನ ಸಹುದ್ಯೋಗಿ ಕ್ಯಾಬ್ ಹತ್ತಿಕೊಂಡೆವು.
ಕ್ಯಾಬ್ ಹೊರಟಂತೇ,ಡ್ರೈವರ್ ಅನ್ನು ಮಾತಿಗೆಳೆದೆ.”ಇವತ್ತು ತೀರ್ಪು ಬರಲಿಕ್ಕಿದೆಯಲ್ಲ.ನಿಮಗೇನನ್ನಿಸುತ್ತದೆ,ಆ ಜಾಗ ಯಾರಿಗೆ ಸೇರಿಬೇಕು ನಿಮ್ಮ ಪ್ರಕಾರ?”.ಅವರು ನನ್ನತ್ತ ತಿರುಗಿ “ತಪ್ಪು ತಿಳಿಯಬೇಡಿ ಸರ್.ನಿಮ್ಮ ಪ್ರಶ್ನೆಯೇ ಸರಿಯಿಲ್ಲ.ಜಾಗ ಯಾರಿಗೆ ಸೇರಬೇಕು ಎನ್ನುವುದು ‘ಅಹಂ’ನ ಪ್ರಶ್ನೆಯಾಗುತ್ತದೆ.ಆ ಅಹಂ ಮುಂದೇ ಪ್ರತಿಷ್ಟೆ, ದ್ವೇಷವನ್ನಷ್ಟೇ ಹೊರಡಿಸುತ್ತದೆ.ಅಸಲಿಗೆ ಇದು “ನಂಬಿಕೆ”ಯ ಪ್ರಶ್ನೆ.ಈ ಸಮಸ್ಯೆಯ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ,ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ.ಆ ಜಾಗ ರಾಮ ಜನ್ಮಭೂಮಿಯೆಂಬುದು ಹಿಂದೂಗಳ ನಂಬಿಕೆಯಾಗಿದೆ.ಮೊಘಲ ಬಾಬರ್ ಆದೇಶಂತೆ ಅಲ್ಲಿದ್ದ ಮಂದಿರವೊಂದನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಲಾಗಿರುವ ವಾದವಿದೆಯಲ್ಲ ಸರ್ ಅದು ನಿಜವೇ ಆದರೆ,ಅಲ್ಲಿ ಮಂದಿರವೇ ನಿರ್ಮಾಣವಾಗಬೇಕು.ಯಾಕೆಂದರೆ ರಾಮ,ರಾಮಾಯಣ,ಕೃಷ್ಣ,ಮಹಾಭಾರತವೆಲ್ಲ ಈ ದೇಶದ ಜನರಿಗೆ ಕೇವಲ ಪುರಾಣಗಳಲ್ಲ.ಅವು ಜನರ ಜೀವನದ ಭಾಗಗಳು.ಹೀಗಿರುವಾಗ ಅಲ್ಲಿನ ಜನರ ನಂಬಿಕೆಗಳಿಗೆ ಬೆಲೆ ಕೊಟ್ಟು ಬಾಬರಿನಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು” ಎಂದ.
ವೇದಾಂತಿಯಂತೆಯೂ ಜೊತೆಗೆ ಲಾಜಿಕಲ್ ಆಗಿಯೂ ಕೂಡಿದ್ದ ಅವರ ವಾದ ಕೇಳಿ,ನನಗೆ ಇನ್ನೊಂದಿಷ್ಟು ಪ್ರಶ್ನೆ ಹಾಕುವ ಮನಸ್ಸಾಯಿತು.”ನೀವು ಹೇಳಿದ್ದು ಸರಿ ಭಾಯ್,ಆದರೆ ಇಡೀ ಜಾಗವನ್ನು ಹಿಂದೂಗಳಿಗೆ ಬಿಟ್ಟು ಕೊಟ್ಟರೆ ಅದು ಈ ದೇಶದ ಮುಸಲ್ಮಾನರಿಗೆ ಮಾಡಿದ ಮೋಸವಾಗುವುದಿಲ್ಲವೇ?” ಎಂದೆ.
“ಇಡೀ ದೇಶದ ಮುಸಲ್ಮಾನರೇ?” ಎಂದು ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿ ನಕ್ಕವರೇ “ನೀವೆನ್ ಸರ್ ಬಾಬುಗಳ (ರಾಜಕಾರಣಿಯ) ತರ ಮಾತನಾಡ್ತೀರಿ.ಈ ದೇಶದ ಮೂಲೆ ಮೂಲೆಗಳಲ್ಲಿರುವ ಇತರೆ ಮಸೀದಿಗಳಂತೆಯೂ ಬಾಬರಿ ಮಸೀದಿಯೂ ಒಂದಾಗಿತ್ತು ಮತ್ತು ತಮ್ಮ ಮೊಹಲ್ಲಾ,ನಗರಗಳ ಮಸೀದಿಯೊಂದಿಗೆ ಆಯಾ ಊರಿನ ಮುಸಲ್ಮಾನರಿಗೆ ಅವಿನಾಭಾವ ಸಂಬಂಧವಿರುತ್ತದೆಯೇ ಹೊರತು ಎಲ್ಲೋ ದೂರದ ಊರಿನ ಮಸೀದಿಯ ಮೇಲೆ ಆ ಮಟ್ಟಿಗಿರುತ್ತದಯೇ? ಹಿಂದೂಗಳಿಗೆ ಅಯೋಧ್ಯೆ ಸೇರಿದಂತೆ ಈ ದೇಶದಲ್ಲಿರುವ ಪವಿತ್ರ ತೀರ್ಥ ಕ್ಷೇತ್ರಗಳ ಮೇಲೆ ಯಾವ ರೀತಿಯ ಭಕ್ತಿ ಭಾವನೆ ಇದೆಯೋ ಆ ರೀತಿಯ ಭಾವನೆ ಮುಸಲ್ಮಾನರಿಗೆ ಇರುವುದು ಮೆಕ್ಕಾ,ಮದೀನ,ಅಲ್ ಅಕ್ಷಾದ ಮೇಲೆ.ಅವೇ ಅವರ ಪಾಲಿನ ತೀರ್ಥ ಕ್ಷೇತ್ರಗಳು.ಅಷ್ಟಕ್ಕೂ ಬಾಬರಿ ವಿವಾದ ಮುಸ್ಲಿಮರ ಮಟ್ಟಿಗೆ ಒಂದು ಲೋಕಲ್ ಇಶ್ಯೂ ಆಗಿತ್ತು ಅಷ್ಟೇ.ಹಿಂದೂಗಳ ಮಟ್ಟದಲ್ಲಿ ಆಗಿನ ಕಾಲದಲ್ಲಿ ಅದು ಹೆಚ್ಚೆಂದರೆ ಉತ್ತರ ಭಾರತದ ರಾಜ್ಯಗಳ ಮಟ್ಟಿಗಿತ್ತು.ಬಾಬರನ ಕಾಲದಿಂದಲೂ ಆ ಜಾಗವನ್ನು ವಾಪಸ್ ಪಡೆಯಲು ಸಂಘರ್ಷಗಳಾಗಿದ್ದನ್ನು ಕೇಳಿದ್ದೇನೆ ನಾನು.ಆಗೆಲ್ಲ ಯಾಕೆ ಇಡೀ ದೇಶದ ಹಿಂದೂ-ಮುಸ್ಲಿಂರು ೯೨ರಂತೆ ಬಡಿದಾಡಲಿಲ್ಲ ಸಾಬ್? ಯಾಕೆಂದರೆ,ಆಗ ಅದು “ನಂಬಿಕೆ”ಯ ಹೋರಾಟವಾಗಿತ್ತೇ ಹೊರತು “ರಾಜಕೀಯ”ವಾಗಿರಲಿಲ್ಲ.ಲೋಕಲ್ ಇಶ್ಯೂವನ್ನು ನ್ಯಾಷನಲ್ ಇಶ್ಯೂ ಮಾಡಿ ಕಗ್ಗಾಂಟಾಗಿಸುವುದರಿಂದ ಯಾರಿಗೆ ಪ್ರಯೋಜನ ನೀವೆ ಊಹಿಸಿ”ಎಂದು ಸುಮ್ಮನಾದ.ಅವನ ಉತ್ತರ ನಿಜಕ್ಕೂ ಚಿಂತನೆಗೆ ಹಚ್ಚುವಂತದ್ದೂ ಎನಿಸಿ ನಾನು ಮರುಪ್ರಶ್ನೆ ಹಾಕದೇ ಯೋಚಿಸಲಾರಂಭಿಸಿದ್ದೆ.
ವಿಮಾನ ನಿಲ್ದಾಣ ತಲುಪಿದ ಮೇಲೆ ನನಗೇ ಅವರ ಉತ್ತರಕ್ಕಿಂತಲೂ ಆವತ್ತಿನ ತೀರ್ಪಿನ ಮೇಲೆ ಕುತೂಹಲವಿತ್ತಲ್ಲ.ಇಂಟರ್ನೆಟ್ ಆನ್ ಮಾಡಿಕೊಂಡು ಒಂದೇ ಸಮನೇ ನ್ಯೂಸ್ ವೆಬ್ಸೈಟುಗಳಲ್ಲೇ ಮುಳುಗಿ ಹೋದೆ.”ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ,ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ,ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು” ಎಂದು ಬಂದ ಆ ತೀರ್ಪು ಯಾವ ಗುಂಪಿಗೂ ಅಷ್ಟಾಗಿ ಒಪ್ಪಿಗೆಯಾದಂತೆ ಕಾಣಲಿಲ್ಲ.ಆ ನಂತರ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ,ಸುಪ್ರೀಂ ಕೋರ್ಟು,ಅಲಹಬಾದ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿತು.ಅದಾದ ಮೇಲೆ ಈ ವಿವಾದ ಮೇಲೆ ಅಂತ ಬೆಳವಣಿಗೆಗಳೇನೂ ಆಗಿಲ್ಲ.
ಇದೇ ಡಿಸೆಂಬರ್ ೬ಕ್ಕೆ ಬಾಬರಿ ಮಸೀದಿ ಉರುಳಿ ಬಿದ್ದು ೨೨ ವರ್ಷಗಳಾಗುತ್ತವೆ.ಈ ಸಂದರ್ಭದಲ್ಲಿ ಮತ್ತೆ ಆ ಕ್ಯಾಬ್ ಡ್ರೈವರ್ ಮಾತನ್ನು ನೆನಪಿಸಿಕೊಂಡೆ.ಅದರಲ್ಲೂ ಮುಖ್ಯವಾಗಿ,”ಬಾಬರಿ ವಿವಾದ ಮುಸ್ಲಿಮರ ಮಟ್ಟಿಗೆ ಒಂದು ಲೋಕಲ್ ಇಶ್ಯೂ ಆಗಿತ್ತು ಅಷ್ಟೇ.ಹಿಂದೂಗಳ ಮಟ್ಟದಲ್ಲಿ ಅದು ಹೆಚ್ಚೆಂದರೆ ಉತ್ತರ ಭಾರತದ ರಾಜ್ಯಗಳ ಮಟ್ಟಿಗಿತ್ತು” ಎನ್ನುವ ಸಾಲನ್ನು. ಅವರ ಮಾತುಗಳು ನಿಜವಲ್ಲವೇ ಎನಿಸಿತು.ಮುಸ್ಲಿಮರಿಗೆ ’ಮೆಕ್ಕಾ,ಮದೀನಾ,ಅಲ್ ಅಕ್ಷ”ಗಳೇ ತಾನೇ ಪುಣ್ಯಕ್ಷೇತ್ರಗಳು.ಹಾಗಿದ್ದ ಮೇಲೆ ಬಾಬರಿ ವಿವಾದವನ್ನು ಇಡೀ ದೇಶದ ಮುಸ್ಲಿಮರಿಗೆ ಆದ ಅವಮಾನ ಎಂದು ಬಿಂಬಿಸಿದ್ದೂ ಸೆಕ್ಯುಲರ್ ಭೂತವಿಡಿದವರು ತಾನೇ? ವಿವಾದವನ್ನು ಸಮುದಾಯಗಳ ನಡುವಿನ ಪ್ರತಿಷ್ಟೆಯ ಪ್ರಶ್ನೆಯನ್ನಾಗಿಸಿ ಶಾಶ್ವತ ಕಗ್ಗಾಂಟಾಗಿಸಿದರೆ, ವೋಟ್ ಬ್ಯಾಂಕ್ ಕೂಡ ಖಾಲಿ ಉಳಿಯಲಾರದು ಎನ್ನುವ ಸೆಕ್ಯುಲರ್ ದುರಾಲೋಚನೆ! ಕೇವಲ ಸೆಕ್ಯುಲರ್ ಪಕ್ಷಗಳ ಕೊಡುಗೆ ಮಾತ್ರ ಈ ವಿವಾದದಲ್ಲಿ ಇದೆಯೇ ಎಂದುಕೊಳ್ಳುವುದು ಅರ್ಧ ಸತ್ಯ.ಯಾಕೆಂದರೆ,೮೦-೯೦ರ ದಶಕದಲ್ಲಿ ಬಿಜೆಪಿ ಪಕ್ಷವೂ ಇದನ್ನು ರಾಜಕೀಯವಾಗಿ ಬಳಸಿಕೊಂಡೇ ಉತ್ತರ ಭಾರತದಲ್ಲಿ ಮೊದಲು ಅಧಿಕಾರಕ್ಕೆ ಬಂದಿದ್ದು.ಹಾಗೇ ಬಿಜೆಪಿಗೆ ವೇದಿಕೆ ನಿರ್ಮಿಸಿಕೊಟ್ಟಿದ್ದು ಸೆಕ್ಯುಲರಿಸ್ಟರ ಮಾತೃ ಪಕ್ಷ ಕಾಂಗ್ರೆಸ್ಸಿನ ಶ್ರೀ ರಾಜೀವ್ ಗಾಂಧೀಯವರು!
ಹಾಗಾದರೆ, ಈ ವಿವಾದ ಕೇವಲ “ರಾಜಕೀಯ ಪ್ರೇರಿತ”ವೇ? ಈ ವಿವಾದದ ಇತಿಹಾಸವನ್ನು ಗಮನಿಸಿದರೇ ಹಾಗೇ ಹೇಳಲಿಕ್ಕೆ ಸಾಧ್ಯವಿಲ್ಲ.ಬಾಬರ್ ಈ ಜಾಗವನ್ನು ಆಕ್ರಮಿಸಿಕೊಂಡಿದ್ದು ೧೫೨೮ರಲ್ಲಿ.ಅಲ್ಲಿಂದ ೧೯೩೪ರವರೆಗೂ ವಿವಾದಿತ ಜಾಗವನ್ನು ಮರಳಿ ಪಡೆಯಲಿಕ್ಕೆ ೭೬ ಬಾರಿ ಕದನಗಳಾಗಿವೆ.ಬಾಬರನ ಕಾಲದಿಂದ ಶುರುವಾದ ಈ ಕದನ ಬ್ರಿಟಿಷರ ಕಾಲವನ್ನೂ ದಾಟಿ ಸ್ವತಂತ್ರ ಭಾರತದವರೆಗೂ ಸಾಗಿ ಬಂದಿದೆ.ಇಷ್ಟೂ ಸುಧೀರ್ಘ ಕಾಲದ ಹೋರಾಟವನ್ನು ರಾಜಕೀಯ ಪ್ರೇರಿತ ಎಂಬ ತಿಪ್ಪೆಸಾರಿಸುವ ಹೇಳಿಕೆ ಕೊಡಲಿಕ್ಕೆ ಭಾರತೀಯ ರಾಜಕೀಯ ಪಕ್ಷಗಳು ಆಯಸ್ಸು ಈ ವಿವಾದದ ಮುಂದೇ ತೀರಾ ಎಳಸು.
ಮುಂಬೈನ ಆ ಕ್ಯಾಬ್ ಡ್ರೈವರ್ ಹೇಳಿದಂತೇ “ಈ ಸಮಸ್ಯೆ ಪರಿಹಾರವಾಗಬೇಕಿರುವುದು ಪರಸ್ಪರ ಸಂವಾದ,ಸಾಮರಸ್ಯ,ಶಾಂತಿಯ ಅನುಸಂಧಾನದಿಂದಲೇ ಹೊರತು, ಇದು ಸರ್ಕಾರ-ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯವಲ್ಲ”.ಹಿಂದೂ ಮತ್ತು ಮುಸ್ಲಿಂ ಮುಖಂಡರೇ ಪರಸ್ಪರ ಸಂಧಾನದ ಹಾದಿಯನ್ನು ಕಂಡುಕೊಳ್ಳಬೇಕಾಗಿದೆ.ಹ್ಮ್ ಹಾಗೇ ಮಾಡುವಾಗ ಅತಿ ಮುಖ್ಯವಾದ ವಿಷಯವೆಂದರೇ,ಆದಷ್ಟು ಸೆಕ್ಯುಲರ್ ಗಳನ್ನು ಮತ್ತು ನಾಸ್ತಿಕವಾದಿಗಳನ್ನು ಹೊರಗಿಡುವುದು.ಯಾಕೆಂದರೆ,ಅವರಿಗೆ ಕೇವಲ ಎಂಪೆರಿಕಲ್ ಎವಿಡೆನ್ಸುಗಳನ್ನು ಕಲೆಹಾಕಿ ವಾದ ಮಾಡುವುದು ಗೊತ್ತೇ ಹೊರತೂ ಈ ವಿವಾದ ಮುಖ್ಯವಾಗಿ ಭಾರತೀಯ ಸಂಪ್ರದಾಯಗಳ “ನಂಬಿಕೆ”ಯ ಪ್ರಶ್ನೆ ಎನ್ನುವುದು ಅರಿವಾಗಲಾರದು.
ಭಾರತೀಯರ ಪಾಲಿಗೆ ’ರಾಮ” ಕೇವಲ ಒಬ್ಬ ಕಥಾ ಪುರುಷನಲ್ಲ.ಅಂತವನ ಮಂದಿರವಿದ್ದ ಜಾಗವನ್ನು ಮುಸ್ಲಿಂರೇ ಮುಂದೇ ನಿಂತು ಸೌಹಾರ್ದಯುತವಾಗಿ ವಾಪಸ್ ಮಾಡುವುದರಿಂದ, ಈ ದೇಶದ ಕೋಮು-ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಂತೆಯೂ ಆಗುತ್ತದೆ,ಹಾಗೇ ವೋಟ್ ಬ್ಯಾಂಕ್ ನೆಪದಲ್ಲಿ ಹಿಂದೂ-ಮುಸ್ಲಿಮರ ನಡುವೆ ಶಾಶ್ವತ ಗೋಡೆ ಕಟ್ಟಿ ನಿಲ್ಲಸಲು ಯತ್ನಿಸುತ್ತಿರುವ ರಾಜಕೀಯದಾಟಗಳಿಗೂ ಕೊನೆ ಬೀಳುತ್ತದೆ.ಅಂತದ್ದೊಂದು ಪ್ರಯತ್ನಕ್ಕೆ ಎರಡೂ ಸಮುದಾಯದ ಮುಖಂಡರು ಯತ್ನಿಸುವಂತಾಗಲಿ.
೨೦೧೦ರಲ್ಲಿ ತೀರ್ಪಿಗೆ ಕಾಯುತ್ತ ಇಡಿ ದೇಶವೇ ಅಯೋಧ್ಯ ವಿವಾದದ ಬಿಸಿಯಲ್ಲಿದ್ದಾಗ,ಕರ್ನಾಟಕದ ಮೂಲೆಯ ಹಿಂದೂಗಳೇ ಹೆಚ್ಚಿರುವ ಊರಿನಲ್ಲಿ,ಕೂಲಿ ಮಾಡಿ ಜೀವನ ಸಾಗಿಸುವ ಮುಸ್ಲಿಂ ಬಾಂಧವರಿಗೊಸ್ಕರ ಖುದ್ದು ನಿಂತು ಮಸೀದಿ ಕಟ್ಟಿಸಿಕೊಟ್ಟ ಹಿಂದೂಗಳಿರುವ ಮತ್ತು ಕಾಶ್ಮೀರ ಅನ್ನೋ ಅಗ್ನಿ ಕುಂಡದೊಳಗೆ,ನಿಷೇಧಾಜ್ಞೆಯ ಸಮಯದಲ್ಲೂ ಸಹ ಅಂಜದೆ ಪಕ್ಕದ ಮನೆಯ ಕಾಶ್ಮೀರಿ ಪಂಡಿತರ ಅಂತ್ಯ ಸಂಸ್ಕಾರವನ್ನು ಹಿಂದೂ ಧರ್ಮದ ಶೈಲಿಯಲ್ಲಿ ಮಾಡಿದ್ದ ಮುಸ್ಲಿಂ ಹೃದಯಗಳೂ ಇವೆ ಈ ದೇಶದಲ್ಲಿ.ಅಷ್ಟಕ್ಕೂ ಈ ಸೆಕ್ಯುಲರಿಸಂನ ತುಷ್ಟೀಕರಣದ ಭೂತ ಬರುವ ಮೊದಲಿಗೆ ಸಹಸ್ರ ವರ್ಷಗಳ ಕಾಲ ಈ ದೇಶದಲ್ಲಿ ಹಿಂದೂ ಸಂಪ್ರದಾಯ ಮತ್ತು ಇಸ್ಲಾಂ ರಿಲಿಜನ್ನು ಒಟ್ಟಿಗೆ ಬದುಕತ್ತಲಿರಲ್ಲವೇ?
ಭೂತಕಾಲದಲ್ಲಾದ ತಪ್ಪುಗಳನ್ನೇ ಹಳಿಯುತ್ತ ಕೂರುವ ಬದಲು ವರ್ತಮಾನದಲ್ಲಿ ಆ ತಪ್ಪನ್ನು ಸರಿಪಡಿಸುವ ಮೂಲಕ ಭವಿಷ್ಯದ ಜನಾಂಗಕ್ಕಾದರೂ ಈ ವಿವಾದ ಭಾರವನ್ನು ಹೊರಿಸದಿರುವುದು ಜಾಣತನವಲ್ಲವೇ?
(ಇವತ್ತಿನ ಕ.ಪ್ರದಲ್ಲಿ ಪ್ರಕಟಿತ ಲೇಖನ)
ಚಿತ್ರ ಕೃಪೆ : sikkim123.blogspot.com