ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 10, 2014

ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 3

‍ನಿಲುಮೆ ಮೂಲಕ

– ಮು.ಅ ಶ್ರೀರಂಗ,ಬೆಂಗಳೂರು

ಕನ್ನಡ ಸಾಹಿತ್ಯಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2

(ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ-೧೦ ರಲ್ಲಿ ತಿಳಿಸಿದಂತೆ    (“ನಿಲುಮೆ” ದಿನಾಂಕ ೧೨-೧೧-೨೦೧೪) ನನ್ನ ಮತ್ತು ಶ್ರೀ ವಸುಧೇಂದ್ರರ   ಪತ್ರಗಳ ಪೂರ್ಣ ಪಾಠ)

 ವಸುಧೇಂದ್ರರ ಮೊದಲನೇ  ಪತ್ರ – ಬೆಂಗಳೂರು ೨೧-೦೬-೨೦೧

 ಶ್ರೀರಂಗ ಅವರಿಗೆ-

ನಮಸ್ಕಾರಗಳು. ನಿಮ್ಮ ಸುಧೀರ್ಘವಾದ ಪತ್ರ ಬಂದಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ಲೇಖನವನ್ನು ನೆನಪಿನಲ್ಲಿಟ್ಟುಕೊಂಡು, ಈಗ ನನ್ನ ವಿಳಾಸ ದೊರೆತ ಮೇಲೆ ಅದಕ್ಕೆ ಪ್ರತಿಕ್ರಿಯಿಸಿರುವ ನಿಮ್ಮ ಸಾಹಿತ್ಯಾಭಿಮಾನ ದೊಡ್ಡದು. ನಿಮ್ಮಂತಹ ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಭೈರಪ್ಪನವರ ಬಗ್ಗೆ ಅಸೂಯೆಯಾಗುತ್ತದೆ.

ಭೈರಪ್ಪನವರ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಾಗಲಿ, ಬೇಸರವಾಗಲಿ ಇಲ್ಲ. ಇದುವರೆಗೆ ನಾನು ಅವರನ್ನು ಭೇಟಿಯಾಗಿಲ್ಲ. ನಿಮ್ಮೆಲ್ಲರಂತೆ ನಾನೂ ಅವರೆಲ್ಲಾ ಕಾದಂಬರಿಗಳನ್ನು ಪ್ರೀತಿ ವಿಶ್ವಾಸದಿಂದ ಓದಿದ್ದೇನೆ . ಗೃಹಭಂಗ  ಮತ್ತು   ಪರ್ವ  ನನ್ನ ಬಹು ಇಷ್ಟವಾದ ಕಾದಂಬರಿಗಳು. ಅವುಗಳ ಬಗ್ಗೆ ಮತ್ತೊಮ್ಮೆ ಖಂಡಿತಾ ಬರೆಯುತ್ತೇನೆ.

ಅಭಿಮಾನ ಜಾಸ್ತಿಯಾದಾಗ ಆರಾಧನೆಯಾಗುತ್ತದೆ. ಆಗ ನಮಗೆ ಸಾಹಿತಿಗಳ ತಪ್ಪುಗಳೊಂದೂ ಕಾಣುವುದಿಲ್ಲ. ಅವರ ಎಲ್ಲಾ ಹೇಳಿಕೆಗಳೂ, ಮಾತುಗಳೂ, ಕೃತಿಗಳೂ ಸರಿಯೆನ್ನಿಸಲಾರಂಭಿಸುತ್ತವೆ. ಓದುಗ ಎಂದೂ ಆ ಅಪಾಯದಲ್ಲಿ ಸಿಲುಕಬಾರದು. ಕೇವಲ ಓದುಗನಾದ ನನಗೆ ಭೈರಪ್ಪನವರ ಗುಣ–ದ್ವೇಷಗಳೆರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಎರಡನ್ನೂ ಸಮಾನ ಪ್ರೀತಿಯಿಂದಲೇ ದಾಖಲಿಸಿದ್ದೇನೆ. ಆದರೆ ನಮ್ಮ ಸಾಹಿತ್ಯದ ಮಾನ ದಂಡ ಬೇರೆಯಾದಾಗ ಅವು ನಿಮಗೆ ಒಪ್ಪಿಗೆಯಾಗದೇ ಹೋಗುವುದನ್ನೂ ನಾನು ಒಪ್ಪುತ್ತೇನೆ, ಗೌರವಿಸುತ್ತೇನೆ. 

ಒಂದೂವರೆ ತಿಂಗಳು ‘ಮಾನಸ ಸರೋವರ’ ಯಾತ್ರೆಗೆ ಹೋಗುತ್ತಿರುವೆ. ಬಂದ ಮೇಲೆ ಒಮ್ಮೆ ಫೋನ್ ಮಾಡೋಣ, ಮಾತನಾಡೋಣ.

ವಂದನೆಗಳು

ವಸುಧೇಂದ್ರ.

ವಸುಧೇಂದ್ರರ ಪತ್ರಕ್ಕೆ ನನ್ನ ಉತ್ತರ.  

ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು

ತಮ್ಮ ಪತ್ರ ತಲುಪಿತು. ತಾವು ‘ಮಾನಸ ಸರೋವರ’ ಯಾತ್ರೆ ಮುಗಿಸಿಕೊಂಡು ಬರಲೆಂದು ಈವರೆಗೆ ಕಾದಿದ್ದು   ಈ ಪತ್ರವನ್ನು ಇಂದು ಅಂಚೆಗೆ ಹಾಕಿದ್ದೇನೆ. ನನ್ನನ್ನು ಭೈರಪ್ಪನವರ  ಕಟ್ಟಾ ಅಭಿಮಾನಿ  ಎಂದು  ಸೂಚಿಸಿರುವ ತಮ್ಮ ಮಾತಿನಲ್ಲಿರುವ ವ್ಯಂಗ್ಯ, ಶ್ಲೇಷೆ, ತಮಾಷೆಗಳನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೇನೆ. ಪ್ರೀತಿ, ಅಭಿಮಾನ ಎಂಬುದು ಒಂದು ನಿರ್ದಿಷ್ಟ ಅಳತೆಯನ್ನು ಮೀರದಿದ್ದರೆ ಯಾವುದೇ ತೊದರೆಯಿಲ್ಲ ಎಂದು ನಾನು ನಂಬಿದ್ದೇನೆ. ಆ ಮಿತಿಯನ್ನು ನಾನು ಮೀರಿಲ್ಲ ಎಂದು ಭಾವಿಸಿದ್ದೇನೆ. ಜೊತೆಗೆ ಮೀರಬಾರದು ಎಂಬ ಎಚ್ಚರವನ್ನೂ ನಾನು ಕಾಯ್ದುಕೊಂಡು ಬರುತ್ತಿದ್ದೇನೆ. ಈ ಸಂದರ್ಭದಲ್ಲೇ ಒಂದು ಮಾತನ್ನು ಹೇಳಿಬಿಡಬೇಕು. ಏಕೆಂದರೆ ಅದು ನನ್ನ ಮುಂದಿನ ಮಾತುಗಳಿಗೆ ಒಂದು ಆಧಾರವಾದೀತು. ನಾನು ಭೈರಪ್ಪನವರ ಕಾದಂಬರಿಗಳ ಜತೆಗೆ ಅವುಗಳ ಬಗ್ಗೆ ಬಂದಿರುವ ಸರಿ ಸುಮಾರು ಎಲ್ಲಾ ವಿಮರ್ಶಾ ಕೃತಿಗಳನ್ನೂ ಓದಿದ್ದೇನೆ. ಅಲ್ಲದೆ ನಾನು ಕೇವಲ ಭೈರಪ್ಪನವರೊಬ್ಬರ ಕಾದಂಬರಿಗಳನ್ನು ಮಾತ್ರ ಓದಿಲ್ಲ.  ನಲವತ್ತು ವರ್ಷಗಳ ಹಿಂದೆ  ಪ್ರಾರಂಭವಾದ ನನ್ನ ಹವ್ಯಾಸಿ ಓದು ಎನ್.  ನರಸಿಂಹಯ್ಯ, ತ್ರಿವೇಣಿ, ಯಂಡಮೂರಿ ವೀರೇಂದ್ರನಾಥ್ ಅವರಿಂದ ಪ್ರಾರಂಭವಾಯಿತು. ತಾರುಣ್ಯದ ಆ ದಿನಗಳಲ್ಲಿ ಪಠ್ಯೇತರ ಓದಿನ ಬಗ್ಗೆ ಆಸಕ್ತಿ ಮೂಡಲು ಅವು ನೆರವಾದವು. ಈಗ ಅಂತಹ ಪುಸ್ತಕಗಳನ್ನು ಓದುವುದಿಲ್ಲ.  ಅದು ಸಹಜವಾದ ವಿದ್ಯಮಾನ.   ಆ ನಂತರದಲ್ಲಿ ಹಂತ ಹಂತವಾಗಿ  ಡಿ ವಿ ಜಿ  ಕೀರ್ತಿನಾಥ ಕುರ್ತಕೋಟಿ , ಯು ಆರ್ ಅನಂತಮೂರ್ತಿ,  ವಿ ಸೀ,  ಎ ಎನ್ ಮೂರ್ತಿರಾವ್,  ಗಿರಡ್ಡಿ, ಕೆ,ಸತ್ಯನಾರಾಯಣ, , ಡಿ ಆರ್ ನಾಗರಾಜ್,  ಗಿರೀಶ್ ಕಾರ್ನಾಡ್  ಲಂಕೇಶ್, ಕುಂ,ವೀ.  ಜೋಗಿ ,ಶೂದ್ರ ಶ್ರೀನಿವಾಸ್ …..ಹೀಗೆ ಮುಂದುವರಿಯುತ್ತಾ ಬಂದಿದೆ. ಈ ಪಟ್ಟಿಯನ್ನು ಇನ್ನೂ ಲಂಬಿಸುವುದಕ್ಕಿಂತ  ಈಗ ನನ್ನ ಸ್ವಂತ ಪುಸ್ತಕ ಸಂಗ್ರಹದಲ್ಲಿ ಯಾವುದೇ ಪಂಥ, ಪಂಕ್ತಿ, ವಾದಗಳ ಭೇದವಿಲ್ಲದೆ  ಸುಮಾರು ಒಂದು ಸಾವಿರ ಪುಸ್ತಕಗಳಿವೆ ಎಂದಷ್ಟೇ ಹೇಳಬಯಸುತ್ತೇನೆ. ಜತೆಗೆ ಈ ಸಂಖ್ಯೆ ಪ್ರತಿ ತಿಂಗಳು ಜಾಸ್ತಿಯಾಗುತ್ತಿದೆ. ನನ್ನ ತುತ್ತೂರಿಯನ್ನು ನಾನೇ ಊದಿಕೊಳ್ಳುವುದು ನನಗೆ ಇಷ್ಟವಿಲ್ಲದ ಹಾಗೂ ಬೇಸರದ ಕೆಲಸ. ಆದರೆ ಕೆಲವೊಮ್ಮೆ ಅನಿವಾರ್ಯವಾದಾಗ ಬೇರೆ ದಾರಿಯಿಲ್ಲ.

ಒಬ್ಬ ಹವ್ಯಾಸಿಯಾಗಿ ಇದುವರೆಗಿನ ನನ್ನ ಓದಿನ ಮಿತಿಯಲ್ಲಿ  ನನ್ನನ್ನು ಕಾಡುತ್ತಿರುವ ಸಮಸ್ಯೆಯೆಂದರೆ   ನಮ್ಮ ವಿಮರ್ಶೆಯಲ್ಲಿನ ವಿಪರ್ಯಾಸ. ಈ ಸಮಸ್ಯೆಗೆ   ತಾವು ಹೇಳಿದ ನಮ್ಮ ಸಾಹಿತ್ಯದ ಮಾನದಂಡ  ಬೇರೆಯಾದಾಗ  ಅವು ನಮಗೆ ಒಪ್ಪಿಗೆಯಾಗದೆ  ಹೋಗಬಹುದು ಎಂಬುದು ಒಂದು ಕಾರಣವಾಗಿರಲೂಬಹುದು. ಎರಡನೆಯದು  ಒಂದು ಸಾಹಿತ್ಯ ಕೃತಿಯನ್ನು ವಿಮರ್ಶಿಸುವಾಗ, ನಮ್ಮ ವಿಮರ್ಶಕರು ತಮ್ಮ ಇಷ್ಟಾನುಸಾರ ಆ ಕೃತಿಯಲ್ಲಿನ ಅಂಶಗಳನ್ನು, text ಅನ್ನು,ಸಂದರ್ಭ ಸನ್ನಿವೇಶಗಳನ್ನು, ತಿರುಚಿ ವಿರೂಪಗೊಳಿಸಿ, ಅದರಲ್ಲಿ ಕೃತಿ ಹೇಳಬಯಸುವ ಅಂಶಗಳಿಗಿಂತ ಬೇರೆಯದೇ ಆದ ಅರ್ಥವನ್ನು ಹೊರಡಿಸುವುದೂ ಮತ್ತೊಂದು ಕಾರಣ. ತಮ್ಮ ವಿಮರ್ಶೆಗೆ ಇವರುಗಳು ಬೆನ್ನೆಲುಬಾಗಿ ಪಾಶ್ಚ್ಯಾತ ಮತ್ತು ಕೆಲವೊಮ್ಮೆ ನಮ್ಮಲ್ಲಿನ ಸಾಹಿತ್ಯೇತರ (ರಾಜಕೀಯ,ಆರ್ಥಿಕ ಇತ್ಯಾದಿ) ವಾದಗಳನ್ನು ಆಶ್ರಯಿಸಿಕೊಂಡಿರುವುದು.  ತಾವು ಹೇಳಿರುವ ಮೊದಲನೇ ಕಾರಣದಿಂದ ಅಷ್ಟೇನೂ ಅಪಾಯವಿಲ್ಲ. ಆದರೆ ಎರಡನೆಯದು ಮಾತ್ರ ತೀರಾ ಅಪಾಯಕಾರಿ. ಏಕೆಂದರೆ ಅದು ಓದುವ ಹವ್ಯಾಸವನ್ನು ಒಂದು ಪೀಳಿಗೆಯಿಂದ (generation) ವಿಮುಖವಾಗಿಸಬಲ್ಲದು. ಇದಕ್ಕೆ ನಮ್ಮ ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲೇ ನಿದರ್ಶನಗಳಿವೆ. ತಾವು  ಬೆಂಗಳೂರು ವಿಶ್ವವಿದ್ಯಾಲಯದ  ಪ್ರಸಾರಾಂಗ ಪ್ರಕಟಿಸಿರುವ (೧) ಕನ್ನಡ ವಿಮರ್ಶೆ ಕವಲುದಾರಿಯಲ್ಲಿ :: ಲೇಖಕರು –ಎಚ್ ತಿಪ್ಪೇರುದ್ರಸ್ವಾಮಿ  (೨) ಭಾರತೀಯತೆ ಮತ್ತು ಕನ್ನಡ ಲೇಖಕ :: ಸಂಪಾದಕರು — ಜಿ ಎಸ್ ಶಿವರುದ್ರಪ್ಪ  ಈ ಎರಡು ಕೃತಿಗಳನ್ನು ಗಮನಿಸಿರಬಹುದು ಎಂದು ಭಾವಿಸುತ್ತೇನೆ. ಗೌರಿ ಲಂಕೇಶರ ಸಂಪಾದಕತ್ವದಲ್ಲಿ ಹೊರಬಂದ ‘ಆವರಣ ಎಂಬ ವಿಕೃತಿ’ ಮತ್ತು ಎನ್ ಎಸ್ ಶಂಕರ್ ಅವರು ಬರೆದಿರುವ ‘ಆವರಣ–ಅನಾವರಣ’  ಎಂಬ ವಿಮರ್ಶಾಕೃತಿಗಳನ್ನು ತಾವು ಓದಿರಬಹುದು. ಒಂದು ಸಾಹಿತ್ಯಕೃತಿಯಾಗಿ ‘ಆವರಣ’ದ ಸ್ಥಾನವೇನು ಎಂಬುದಕ್ಕಿಂತ  ಆ ಎರಡು ವಿಮರ್ಶೆಗಳಲ್ಲಿ ಸೋಗಲಾಡಿತನ,ಹುಸಿ ಜಾತ್ಯಾತೀತತೆ,ಪೂರ್ವಗ್ರಹಗಳು,ಮಾಮೂಲಿ ರಾಜಕೀಯದ ಸೌಹಾರ್ದತೆಯ ಕ್ಲೀಷೆಯಾದ ಮಾತುಗಳು, ಪತ್ರಿಕೆಗಳ jargon ಪದ ಪುಂಜಗಳು ವಿಮರ್ಶೆಯ ಹೆಸರಿನಲ್ಲಿ ವಿಜ್ರಂಭಿಸಿವೆ   ಇತರೆ ಲೇಖಕರು/ಕಾದಂಬರಿಕಾರರು ನಾನಾ ಕಾರಣಗಳಿಂದ ಹೇಳಲು/ಬರೆಯಲು  ಹಿಂಜರಿಯುವ  ವಿಷಯಗಳನ್ನು ಭೈರಪ್ಪನವರು ತಮ್ಮ ಕಾದಂಬರಿಯ ರಚನೆಗೆ ತೆಗೆದುಕೊಳ್ಳುತ್ತಾರೆ. ಅಂತಹ  ಕೃತಿಗಳ ರಚನೆಗಾಗಿ ಅವರು ಸಾಕಷ್ಟು ಅಧ್ಯಯನ,ಪ್ರವಾಸಗಳನ್ನು ಮಾಡಿರುತ್ತಾರೆ. ಇದು ನಮ್ಮ ಇಂದಿನ ವಿಮರ್ಶಕರಿಗೆ ಬೇಡವಾಗಿದೆ. ‘ಭೈರಪ್ಪನವರ ಕಾದಂಬರಿ ಜನಪ್ರಿಯವಾಗುತ್ತವೆ;  ಜನಪ್ರಿಯವಾದದ್ದು ಜನರನ್ನು ರಂಜಿಸುವ ಗುಣಹೊಂದಿರುತ್ತದೆ.  ಹೀಗಾಗಿ ಅಂತಹ  ಕಾದಂಬರಿಗಳ  ಬಗ್ಗೆ ವಿಮರ್ಶೆಯ ಹೆಸರಿನಲ್ಲಿ ಏನು ಬರೆದರೂ ನಡೆಯುತ್ತದೆ’ ಎಂಬ ಉಡಾಫೆಯ ಮನೋಭಾವದಿಂದಲೇ ವಿಮರ್ಶೆ ಮಾಡಲು ಪ್ರಾರಂಭಿಸುತ್ತಾರೆ. ಇದು ‘ಕವಲು’  ಕಾದಂಬರಿ ಬಗ್ಗೆ ದಿನ ಪತ್ರಿಕೆಗಳಲ್ಲಿ ನಡೆದ ವಾದ–ವಿವಾದಗಳಲ್ಲಿ ಮತ್ತೊಮ್ಮೆ ಸಾಬೀತಾಯಿತು.

 

‘ವಂಶವೃಕ್ಷ’ ಮತ್ತು ‘ದಾಟು’ಗಳ ನಂತರ ಅತಿ ಹೆಚ್ಚು ವಿವಾದಗಳು ಮತ್ತು ವಿಮರ್ಶೆಗಳು ಬಂದಿದ್ದು ‘ಆವರಣ’ಕ್ಕೆ ಮಾತ್ರ. ‘ಪರ್ವ’ದ ಬಗ್ಗೆ ಬೆಂಗಳೂರಿನ ಇಳಾ ಪ್ರಕಾಶನದ ‘ವಿಜಯಾ’ (ಹಿರಿಯ ಪತ್ರಕರ್ತೆ) ಅವರು ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಮಂಡಿಸಿದ ವಿಮರ್ಶೆಗಳನ್ನು ‘ಪರ್ವ: ಒಂದು ಸಮೀಕ್ಷೆ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಲ್ಲವಾದರೆ ಕನ್ನಡದ ಅಂತಹ ಒಂದು ಪ್ರಮುಖ ಕಾದಂಬರಿಯ ಬಗ್ಗೆ ಖ್ಯಾತ ವಿಮರ್ಶಕರುಗಳು  (tycoons of kannada criticism) ತಾವಾಗೇ ಬರೆಯುತ್ತಿರಲಿಲ್ಲ.  ‘ಮಂದ್ರ’ದ ಬಗ್ಗೆ ಶಿವಮೊಗ್ಗದ ವಿಜಯಶ್ರೀ ಅವರು ಬೆಂಗಳೂರಿನ ವಿಜಯಾ ಅವರಂತೆಯೇ ಆಸಕ್ತಿವಹಿಸಿ ಮಾಡಿದ ಪ್ರಯತ್ನದ ಫಲವೇ “ಮಂದ್ರ:ಮಂಥನ” ಎಂಬ ವಿಮರ್ಶಾಕೃತಿ. ಇವುಗಳ ಜತೆಗೆ ಅಲ್ಲೊಂದು ಇಲ್ಲೊಂದು ಏಕವ್ಯಕ್ತಿ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ. ‘ಧರ್ಮಶ್ರೀ’ಯಿಂದ ‘ಅನ್ವೇಷಣ’ ತನಕ ‘ಸಹಸ್ಪಂದನ’ (ಪ್ರ: ಸಾಹಿತ್ಯ ಭಂಡಾರ ಬೆಂಗಳೂರು) ಎಂಬ ದೊಡ್ಡ ವಿಮರ್ಶಾ ಸಂಕಲನ ಬಂದಿತ್ತು. ಆದರೆ ಆ ನಂತರದಲ್ಲಿ  ‘ನೆಲೆ’, ‘ಸಾಕ್ಷಿ’, ‘ಅಂಚು’ , ‘ತಂತು’. ‘ಸಾರ್ಥ’ ಕಾದಂಬರಿಗಳ ಬಗ್ಗೆ ಅವು ಪ್ರಕಟವಾದಾಗ ಯಾವುದಾದರೊಂದು ದಿನಪತ್ರಿಕೆಯಲ್ಲೋ, ವಾರಪತ್ರಿಕೆಯಲ್ಲೋ ಒಂದೆರೆಡು ಪರಿಚಯಾತ್ಮಕ ರೂಪದ review ಬಂದಿದ್ದು ಬಿಟ್ಟರೆ  ಬೇರೆ ವಿಮರ್ಶೆ ಇಲ್ಲವೇ ಇಲ್ಲ ಎನ್ನುವಂತಾಗಿದೆ. ಇದಕ್ಕೆ ನಮ್ಮ ಅಕಾಡೆಮಿಕ್ ವಲಯದ ವಿಮರ್ಶಕರಿಗೆ ಜನಪ್ರಿಯತೆ ಬಗ್ಗೆ ಇರುವ ಗುಮಾನಿ ಮತ್ತು  ಅವಜ್ಞೆ ಕಾರಣ. ಒಂದೆರೆಡು ಕವನ ಸಂಕಲನ, ಕಥಾಸಂಕಲನಗಳನ್ನು ಪ್ರಕಟಿಸಿದ ಕವಿ ಮತ್ತು ಕಥೆಗಾರರ  ಬಗ್ಗೆ ದಿನ ಪತ್ರಿಕೆಗಳಲ್ಲಿ, ಸಾಹಿತ್ಯಿಕ ಪತ್ರಿಕೆಗಳಲ್ಲಿ box item ಸುದ್ದಿ ಮಾಡಿ ಅಂಬಾರಿ ಮೇಲಿಟ್ಟು ಜಂಬೂ ಸವಾರಿ ನಡೆಸುತ್ತಿರುವುದನ್ನು ದಿನಾ ನಾವುಗಳು ಕಾಣುತ್ತಿದ್ದೇವೆ.

 

ಇಷ್ಟಾಗಿಯೂ ಸಹ ನಾನು ಭೈರಪ್ಪನವರ ಕಾದಂಬರಿಗಳನ್ನು ಕೇವಲ “ಕಟ್ಟಾಭಿಮಾನ“ದಿಂದ ಮಾತ್ರ ಓದುತ್ತಿರುವವನಲ್ಲ. ಅವುಗಳ ಬಗ್ಗೆ ನನಗೂ ಕೆಲವೊಂದು ಸಮಸ್ಯೆಗಳಿವೆ. ಉದಾಹರಣೆಗೆ ಮಂದ್ರ” ಕಾದಂಬರಿಯ ಬಗ್ಗೆ:–ಈ ಕಾದಂಬರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಿನ್ನೆಲೆಯುಳ್ಳದ್ದು. ಕರ್ನಾಟಕದಲ್ಲಿ ಬಹುಶಃ ದಾವಣಗೆರೆಯ ತನಕ (ಅಂದರೆ ಪೂರ್ತಿ ದಕ್ಷಿಣ ಕರ್ನಾಟಕವೆನ್ನಬಹುದೇನೋ)   ಹೆಚ್ಚಿನ ಜನಗಳಿಗೆ  ತೀರಾ ಪರಿಚಿತವಾಗಿರುವುದು ಕರ್ನಾಟಕ ಸಂಗೀತ. ನಮಗೆ ಎಂ ಎಸ್ ಸುಬ್ಬುಲಕ್ಷ್ಮಿ,ಬಾಲಮುರಳಿಕೃಷ್ಣ, ಫಲ್ಘಾಟ್ ಮಣಿ ಅಯ್ಯರ್,ಜೇಸುದಾಸ್, ಕುನ್ನುಕುಡಿ ವೈಧ್ಯನಾಥನ್, ಟಿ ಚೌಡಯ್ಯ, ಇವರುಗಳ ಗಾಯನ-ವಾದನಗಳು ಪ್ರಿಯವಾದಷ್ಟು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪ್ರಿಯವಾಗುವುದಿಲ್ಲ. (ಈ ಭಾಗದಲ್ಲಿ ಸಹ ಸ್ವಂತ ಆಸಕ್ತಿಯಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯುವವರಿದ್ದಾರೆ. ಅವರನ್ನು ನಾನು ಮರೆತಿಲ್ಲ).ಮಂದ್ರ ಓದುವಾಗ ಮಧ್ಯೆ ಮಧ್ಯೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿವರಣೆ ಬರುತ್ತದೆ .  ಅದನ್ನು ಕಷ್ಟಪಟ್ಟು ಓದಿದರೂ ಅರ್ಥವಾಗುವುದಿಲ್ಲ. ಇದರಿಂದ ಅನಿವಾರ್ಯವಾಗಿ ಆ ಭಾಗಗಳನ್ನು ಬಿಟ್ಟು ಬಿಟ್ಟು ಮುಂದಕ್ಕೆ ಹೋಗಬೇಕು. ಕಾದಂಬರಿಯ ಒಟ್ಟು ಓದಿಗೆ ಬಾಧಕವಿಲ್ಲದಿದ್ದರೂ ಆ ವಿವರಣೆಗಳು hump, hurdle ತರಹ ಓದುಗನ ಏಕಾಗ್ರತೆಗೆ ಭಂಗ ತರುತ್ತದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬಲ್ಲವರೆಲ್ಲರೂ ಸಾಹಿತ್ಯ ಪ್ರೇಮಿಗಳೂ ಅದರಲ್ಲೂ ಭೈರಪ್ಪನವರ ಓದುಗರೂ ಆಗಿದ್ದು ಮಂದ್ರ ಕಾದಂಬರಿ ಓದುತ್ತಾರೆಂಬ ಖಾತ್ರಿ ಎಲ್ಲಿದೆ? ಹೀಗಾಗಿ  ಭಾಷಾಂತರಗಳ ಮೂಲಕ ಇಡೀ ಭಾರತದ  ಉದ್ದಗಲಕ್ಕೂ ಇರುವ  ಭೈರಪ್ಪನವರ ಓದುಗರಿಗೆ (ಕಟ್ಟಾ ಅಭಿಮಾನಿಗಳಿಗೆ!!) ಮಂದ್ರ ಸ್ವಲ್ಪ ನಿರಾಸೆ ತಂದಿರಬಹುದು. ಅಥವಾ ಇದು ನನ್ನ ತಿಳುವಳಿಕೆಯ ಮಿತಿಯೂ ಆಗಿರಬಹುದೆನ್ನುವ ಅರಿವೂ ನನಗಿದೆ. ಆದರೆ ಮಂದ್ರ ಕಾದಂಬರಿ ಬರೆಯಲಿಕ್ಕಾಗಿಯೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭಿರುಚಿ ಮೊದಲಿಂದ ಇದ್ದರೂ ಸಹ ಮತ್ತೊಮ್ಮೆ ಶಾಸ್ತ್ರೀಯವಾಗಿ ಕಲಿತ  ಭೈರಪ್ಪನವರ ಪರಿಶ್ರಮದ ಬಗ್ಗೆ ಹೆಮ್ಮೆಯೆನಿಸುತ್ತದೆ. ಇದು ಒಬ್ಬ ಸಾಹಿತಿ  ತನ್ನ  ಕೃತಿ ರಚನೆಗೆ ಮಾಡುವ ಪ್ರಾಮಾಣಿಕ ಪ್ರಯತ್ನವೆಂದು ಅವರ ಬಗ್ಗೆ ಗೌರವ ಮೂಡುವುದು ಸಹಜವಲ್ಲವೇ?  .

 

ಈ ಪತ್ರದಲ್ಲಿ ಇಲ್ಲಿಯ ತನಕ ನನ್ನ ಪರಾಕು ಪಂಪನ್ನು ನಾನೇ ಒತ್ತಿಕೊಂಡಿದ್ದೇನೆ ಎಂದು ತಮಗೆ ಬೇಸರವಾಗಿರಬಹುದು. ಇದರ ಉದ್ದೇಶ  ನನ್ನ ಜಂಭದ,ಪ್ರತಿಷ್ಠೆಯ ಪ್ರದರ್ಶನ ಮಾಡುವುದಲ್ಲ. ಅದೇ ರೀತಿ ಕೇವಲ ಒಬ್ಬ ಸಾಹಿತಿಯ ಮೇಲೆ ಅಭಿಮಾನ ಜಾಸ್ತಿಯಿರುವುದೂ ಅಲ್ಲ. ಇದು ನನ್ನ ಈವರೆಗಿನ ಸಾಹಿತ್ಯದ ಓದಿನ ಮಾನದಂಡಗಳ ಇನ್ನೊಂದು ತುದಿಯನ್ನು ತಮಗೆ ಕಾಣಿಸುವ ಪ್ರಯತ್ನ ಅಷ್ಟೆ. ನಾನು ಮಹಾತ್ಮ ಗಾಂಧೀಯವರ ಜೀವನ ಚರಿತ್ರೆಯನ್ನು ಓದುವ ಹಾಗೆಯೇ ಇಂದಿರಾಗಾಂಧಿ, ಸಂಜಯಗಾಂಧಿ,ರಾಜೀವಗಾಂಧಿ,ವಾಜಪೇಯಿ,ಲಾಲ್ ಕೃಷ್ಣ ಅಡ್ವಾಣಿಯವರ ಜೀವನ ಚರಿತ್ರೆಗಳನ್ನೂ ಓದಿದ್ದೇನೆ, ಓದುತ್ತಿದ್ದೇನೆ. ಅದೇ ರೀತಿ ನಮ್ಮ ಸಾಹಿತಿಗಳ,,ಸಮಾಜದ ಇತರ ಪ್ರಮುಖ ವ್ಯಕ್ತಿಗಳ ಜೀವನ ಚರಿತ್ರೆ,ಆತ್ಮಕಥೆಗಳಲ್ಲಿ ನನಗೆ ಆಸಕ್ತಿಯಿದೆ. ನನಗೆ ಆಯಾ ವ್ಯಕ್ತಿಗಳ ಜೀವನದ ರೀತಿ ಮುಖ್ಯವೇ ಹೊರತು ಅವರು ಪ್ರತಿಪಾದಿಸಲೆತ್ನಿಸುವ ತತ್ವಗಳಲ್ಲ. ಏಕೆಂದರೆ ತತ್ವಕ್ಕೂ ನಿಜ ಜೀವನಕ್ಕೂ ಸಾಕಷ್ಟು ಅಂತರವಿದೆ. ಅವು ಒಂದು ರೀತಿ parallel lines ಇದ್ದಹಾಗೆ. ಖ್ಯಾತ ಕಾದಂಬರಿಕಾರ ಸತ್ಯಕಾಮರು ಒಂದೆಡೆ ಈ ರೀತಿ ಹೇಳಿದ್ದಾರೆ–ಸತ್ಯವನ್ನಾಡುವವರ ಕೈಯಲ್ಲಿ ಅದನ್ನು ನಡೆಸುವ ಯಂತ್ರವಿಲ್ಲದೆ ಇರುವುದೇ ನಮ್ಮ ಜೀವನದ ದುರಂತ”. 

 

ನಿಮ್ಮ ವಿಶ್ವಾಸಿ

ಮು ಅ ಶ್ರೀರಂಗ.

೨೫-೦೯-೨೦೧೨

 

ವಸುಧೇಂದ್ರರ ಎರಡನೇ ಪತ್ರ–  ಬೆಂಗಳೂರು      ದಿನಾಂಕ ೧೨-೧೦-೨೦೧೨ 

 

ಶ್ರೀರಂಗ ಅವರಿಗೆ —

ನಿಮ್ಮ ಸುದೀರ್ಘ ಪತ್ರ ಈವತ್ತು ನನ್ನ ಕೈ ಸೇರಿತು. ‘ಮಾನಸ ಸರೋವರ’ದಿಂದ ಬಂದ ನಂತರ ಸುಮಾರು ಎರಡು ತಿಂಗಳ ಕಾಲ ಗುಲ್ಬರ್ಗಾ,ಹೊಸಪೇಟೆ,ಮುಂಬಯಿ,ಪೂನಾ,ಹೆಗ್ಗೋಡು- ಕಡೆಗೆಲ್ಲಾ ಸುತ್ತಾಡಿ ಈವತ್ತು ಬಂದೆ, ಆದ್ದರಿಂದ ಪತ್ರ ಬರೆಯಲು ತಡವಾಯ್ತು. ನಿಮ್ಮ ಸಾಹಿತ್ಯದ ಪ್ರೀತಿ, ಓದಿನ ಹರವು,ಪುಸ್ತಕ ಪ್ರೀತಿಗಳನ್ನು ಕಂಡು ಸಂತೋಷವಾಯ್ತು. ಈ ದಿನಗಳಲ್ಲಿ ಇಂತಹ ಸಾಹಿತ್ಯ ಪ್ರಿಯರು ಹೆಚ್ಚಾಗಿ ನನಗೆ ಕಾಣುತ್ತಿಲ್ಲ. ಹೊಸ ಕಾಲದ ಹುಡುಗರ ಕನ್ನಡ ವಿದ್ವತ್ತು ಹೆಚ್ಚಿಲ್ಲದ್ದರಿಂದ ಅವರೆಲ್ಲಾ ಇಂಗ್ಲೀಷ್ ಬರವಣಿಗೆಯತ್ತ ವಾಲುತ್ತಿದ್ದಾರೆ. ನಾವೆಲ್ಲಾ ಕನ್ನಡ ಸಾಹಿತ್ಯದ ಕೊನೆಯ ಕೊಂಡಿಗಳೇನೋ ಎಂಬ ಆತಂಕವಾಗುತ್ತದೆ. ಆದರೆ ಕನ್ನಡ ಜಗತ್ತು ದೊಡ್ಡದು. ಸಾವಿರಾರು ವರ್ಷಗಳಿಂದ ಜೀವಂತ ಇರುವ ಈ ಭಾಷೆ ತನ್ನದೇ ಆದ ಲೇಖಕರನ್ನೂ, ಓದುಗರನ್ನೂ ಸೃಷ್ಟಿಸಿಕೊಳ್ಳುವ ಶಕ್ತಿಯನ್ನು ಪಡೆದಿದೆ. ಕಾದು ನೋಡೋಣ.

 

‘ಕಟ್ಟಾ ಅಭಿಮಾನಿ’ ಎಂಬ ಪದವನ್ನು ನಾನು ಪ್ರೀತಿಯಿಂದ ಬಳಸಿದ್ದೇನೆ. ಅದರಲ್ಲಿ ವ್ಯಂಗ್ಯವಿಲ್ಲ. ನೀವು ಅಭಿಮಾನಿಗಳೇ ಹೊರತು ‘ಮೂರ್ತಿ ಪೂಜಕರಲ್ಲ’ವೆಂಬುದು ನಿಮ್ಮ ಪತ್ರದಿಂದಲೇ ತಿಳಿಯುತ್ತದೆ. ಇತ್ತೀಚಿನ ನನ್ನ ಮುಂಬಯಿ, ಪುಣೆ ಪ್ರವಾಸದಲ್ಲಿ ಹಲವಾರು ಮರಾಠಿ ಲೇಖಕರನ್ನು ಭೇಟಿಯಾದೆ. ಅವರಿಗೆಲ್ಲಾ ಭೈರಪ್ಪನವರ ಬಗ್ಗೆ ಗೌರವವಿದೆ,ಅಭಿಮಾನವಿದೆ. ಹೆಚ್ಚು ಕಡಿಮೆ ಅವರ ಎಲ್ಲಾ ಕೃತಿಗಳನ್ನೂ ಅವರು ಓದಿಕೊಂಡಿದ್ದಾರೆ. ಅದರ ಬಗ್ಗೆ ಚರ್ಚಿಸುತ್ತಾರೆ.

 

ಮಂದ್ರ”ದ ಬಗ್ಗೆ ನೀವು ಎತ್ತಿರುವ ಪ್ರಶ್ನೆ ವಿಶೇಷವಾದದ್ದು. ಆದರೆ ನಿಮಗೆ ಪರಿಚಯವಿರುವ ‘ಕರ್ನಾಟಕ ಸಂಗೀತ’ವನ್ನು ಕೃತಿಗೆ ಬಳಸಿಕೊಂಡರೆ, ಉತ್ತರ ಕರ್ನಾಟಕದವರು ಅದನ್ನು ಹೇಗೆ ಅರಗಿಸಿಕೊಳ್ಳಬೇಕು? ಸಂಗೀತದ ಜ್ಞಾನವೇ ಇಲ್ಲದವರು ಏನು ಮಾಡಬೇಕು? ಬಹುಶಃ ಕಾದಂಬರಿಯೊಂದು ಇಂತಹ ಸಮಸ್ಯೆಗಳನ್ನು ಎದುರಿಸಿ ಓದುಗರನ್ನು ತಲುಪಬೇಕು. “ಶಂಕರಾಭರಣಂ” ಸಿನಿಮಾ ಎಲ್ಲಾ ಬಗೆಯ ಪ್ರೇಕ್ಷಕರನ್ನು ತಲುಪಿತಲ್ಲಾ, ಹಾಗೆ.

 

ವಂದನೆಗಳು

ವಸುಧೇಂದ್ರ.

 

 

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments