ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 17, 2014

14

ಭಾರತೀಯ ಸಂಸ್ಕೃತಿ,ಪರಂಪರೆಯ ಚೇತನವಾದ ಭಗವದ್ಗೀತೆ, ಕೇವಲ ದಾಯಾದಿಗಳ ಕಲಹವೇ..?

‍ನಿಲುಮೆ ಮೂಲಕ

– ಎಸ್.ಎನ್.ಭಾಸ್ಕರ್‍, ಬಂಗಾರಪೇಟೆ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಣೆ ಮಾಡುವ ಬಗ್ಗೆ ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ದಿನಾಂಕ ೧೨-೧೨-೨೦೧೪ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ “ದಾಯಾದಿಗಳ ಕಲಹ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು.

ಭಗವದ್ಗೀತೆಯ ವ್ಯಾಪ್ತಿಯ ಬಗ್ಗೆ, ಮಹತ್ವದ ಬಗ್ಗೆ ಸೂಕ್ತವಾದ ಅರಿವು ಇಲ್ಲದೇ ಬರೆದಂತಹ ಈ ಲೇಖನಕ್ಕೆ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಕೆಳಗಿನ ಲೇಖನವನ್ನು ಬರೆಯಲಾಗಿದೆ.

—————————————————————————————————-

“ಭಗವದ್ಗೀತೆಯನ್ನು ಅಭ್ಯಸಿಸಿ, ಭಗವಂತನ ಈ ಸೃಷ್ಠಿಯ ಪರಿಕಲ್ಪನೆಯನ್ನು ತಿಳಿದ ಅರಿವಿನ ಮುಂದೆ ಜಗತ್ತಿನಲ್ಲಿ ಅಸ್ಥಿತ್ವದಲ್ಲಿರುವ ಸಮಸ್ತ ಅಂಶಗಳು ಗೌಣವೆನಿಸುತ್ತವೆ” – ಆಲ್ಬರ್ಟ್ ಐನ್‌ಸ್ಟೈನ್.

“ಜೀವನದಲ್ಲಿ ಸಂದೇಹಗಳು ನನ್ನ ಕಾಡಿದಾಗ, ದುಃಖ, ಭ್ರಮನಿರಸನಗಳು ಎದುರಾದಾಗ, ಯಾವುದೇ ಆಶಾಕಿರಣಗಳು ಗೋಚರಿಸದಿದ್ದಾಗ, ಭಗವದ್ಗೀತೆಯ ಕಡೆ ನಾನು ಮುಖಮಾಡುತ್ತೇನೆ, ಮರುಕ್ಷಣ ದುಃಖ ದುಮ್ಮಾನಗಳು ಕರಗಿ, ಮನಸ್ಸಿನನಲ್ಲಿ ವಿಶ್ವಾಸದ ಮಂದಹಾಸ ಮೂಡುತ್ತದೆ. ಭಗವದ್ಗೀತೆಯನ್ನು ಧ್ಯಾನಿಸುವ ವ್ಯಕ್ತಿಯು ನಿರಂತರ ಸುಖಿಯಾಗುತ್ತಾನೆ, ಪ್ರತಿನಿತ್ಯವೂ ಜೀವನದ ಹೊಸ ಹೊಸ ಅರ್ಥಗಳನ್ನು ತಿಳಿಯುತ್ತಾನೆ” – ಮಹಾತ್ಮಾ ಗಾಂಧಿ.

ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಘೋಷಣೆ ಮಾಡುವ ಬಗ್ಗೆ ಪ್ರಸ್ತಾಪಿತವಾದ ಹಿನ್ನೆಲೆಯಲ್ಲಿ ದಿನಾಂಕ ೧೨-೧೨-೨೦೧೪ ರಂದು ಪತ್ರಿಕೆಯಲ್ಲಿ “ದಾಯಾದಿಗಳ ಕಲಹ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನದ ಲೇಖಕರ ವಾದವು ಶ್ರೀಮಧ್ಬಗವದ್ಘೀತೆಯ ಬಗ್ಗೆ ಅವರ ತೀರಾ ಕೆಳ ಮಟ್ಟದ ಜ್ಞಾನ, ಅಲ್ಪ ಅರಿವು ಹಾಗೂ ತಪ್ಪಾದ ಗ್ರಹಿಕೆಗಳಿಗೆ ಕನ್ನಡಿ ಹಿಡಿಯುತ್ತದೆ. ಇಷ್ಕಕ್ಕೂ ಅವರ ಲೇಖನದಲ್ಲಿ ಭಗವದ್ಗೀತೆಯನ್ನು “ ದಾಯಾದಿಗಳ ಕಲಹ” ಎಂದು ಒಂದು ಸಾಲಿನಲ್ಲಿ ಬಣ್ಣಿಸಿರುವದನ್ನು ಕಂಡಾಗ ಅವರ ತಿಳುವಳಿಕೆಯ ಹಾದಿ ಯಾವ ನಿಟ್ಟಿನದು ಎಂದು ಸೂಚ್ಯವಾಗುತ್ತದೆ. “ಭಗವದ್ಗೀತೆಯು ಕೇವಲ ದಾಯಾದಿಗಳ ಕಲಹ, ’ಯುದ್ದ ನಿಲ್ಲಿಸಬೇಡ, ಎದುರಿಗಿರುವವರೆಲ್ಲಾ ನಿನ್ನ ವೈರಿಗಳು, ಅವರಿಗೆ ಅನುಕಂಪ ತೋರಬೇಡ, ಬಾಣ ಬಿಡು ,ಅಸ್ತ್ರ ಹೂಡು’ ಎಂಬ ಅರ್ಥದಲ್ಲಿ ಕೃಷ್ಟ ಬೋಧಿಸುತ್ತಾನೆ ಇದು ಭಗವದ್ಗೀತೆಯ ಪ್ರಮುಖಾಂಶ” ಎಂದು ಲೇಖಕರು ತಿಳಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಶ್ರೀ ಕೃಷ್ಣ ತನ್ನ ಉಪದೇಶದಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ; ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ.” ಎಂದು ಹೇಳುತ್ತಾನೆ. ಈ ಶ್ಲೋಕದ ಮೂಲಕ ಮಾನವನ ಕರ್ಮಯೋಗದ ಬಗ್ಗೆ ವಿವರಣೆಯನ್ನು ನೀಡುತ್ತಾನೆಯೇ ಹೊರತು ಅದನ್ನು ಹಿಂಸೆಯ ಪ್ರಚೋದಕತೆ ಎಂದು ವ್ಯಾಖ್ಯಾನಿಸಿದರೆ ಅದಕ್ಕಿಂತ ಮಿಗಿಲಾದ ಕುಚೋದ್ಯವಿಲ್ಲ. ಚರಿತ್ರೆ ಎಂಬ ದೃಷ್ಟಿಯಿಂದ ಮಾತ್ರವಲ್ಲದೇ ಆದ್ಯಾತ್ಮಿಕ, ತತ್ವಶಾಸ್ತ್ರ ಮತ್ತು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಗೀತೆಯನ್ನು ಅರಿಯಲು ಪ್ರಯತ್ನಿಸಬೇಕಾಗುತ್ತದೆ. ಹೀಗಿದ್ದರೂ ಸಹಾ ಚರಿತ್ರೆಯ ನಿಟ್ಟಿನಲ್ಲಿಯೇ ಹೇಳುವುದಾದರೆ, ಗತಕಾಲದಲ್ಲಿ ಸುವ್ಯವಸ್ಥಿತವಾಗಿ ರಚಿತವಾಗಿದ್ದ ವರ್ಣಾಶ್ರಮ ಧರ್ಮದ ಪ್ರಕಾರವಾಗಿ ಅರ್ಜುನನು ಮೂಲತಃ ಕ್ಷತ್ರಿಯ ಕುಲಕ್ಕೆ ಸೇರಿರುತ್ತಾನೆ. ರಾಜ್ಯ ರಕ್ಷಣೆ, ಪ್ರಜಾ ಪಾಲನೆ ಯ ದೃಷ್ಟಿಯಲ್ಲಿ ಕ್ಷತ್ರಿಯನಿಗೆ ಯುದ್ದವು ಧರ್ಮವಾಗುತ್ತದೆ, ಕರ್ಮವಾಗುತ್ತದೆ. ಕರ್ಮಯೋಗದ ಮಹತ್ವವನ್ನು ತಿಳಿಹೇಳುವ ನಿಟ್ಟಿನಲ್ಲಿ ಶ್ರೀಕೃಷ್ಣನು ಉಪದೇಶಿಸುತ್ತಾನೆ. ನಿನ್ನ ಕರ್ಮವೇ ನಿನಗೇ ಶ್ರೇಷ್ಟವಾದುದು, ಯಾವುದೇ ಪ್ರತಿಫಲ ಅಪೇಕ್ಷಿಸದೇ ಧರ್ಮಯುತವಾದ ಕರ್ಮಪಾಲನೆ ಮಾಡುವಂತೆ ತನ್ಮೂಲಕ ಅಸುರ ಸಂಹಾರಕ್ಕೆ ಸಿದ್ದನಾಗುವಂತೆ ಪ್ರೇರೇಪಿಸುತ್ತಾನೆ. ಗೀತೆಯು ಒಂದು ರಹಸ್ಯವಾಗಿದೆ. ಇಡೀ ಸೃಷ್ಷಿಯ ರಹಸ್ಯವನ್ನು, ಮಾನವೀಯ ಮೌಲ್ಯಗಳನ್ನು ಗೀತೆ ಒಳಗೊಂಡಿದೆ. ಚಾರಿರ್ತಾರ್ಥಕ ನಿಟ್ಟಿನಲ್ಲಲ್ಲದೇ ಮನಃಶಾಸ್ತ್ರೀಯವಾಗಿ, ತತ್ವಶಾಸ್ತ್ರವಾಗಿ ಗೀತೆಯು ಮಹಾಭಾರತದ ಸಾರವನ್ನು ತನ್ನಲ್ಲಿ ಒಳಗೊಂಡಿದೆ. ಕುರುಕ್ಷೇತ್ರದ ಯುದ್ದವನ್ನು ನಮ್ಮ ಅಂತರಂಗದಲ್ಲಿ ನಡೆಯುವ ನಿರಂತರ ಹೋರಾಟಕ್ಕೆ ಅರ್ಥೈಸಬಹುದಾಗಿರುತ್ತದೆ. ಮಾನವನ ಜೀವನವೇ ಒಂದು ಸಂಗ್ರಾಮವಾಗಿದೆ, ಸುತ್ತಲೂ ದಾರಿತಪ್ಪಿಸುವ, ಕೌರವರು, ಐಹಿಕ ಪ್ರಪಂಚದಲ್ಲಿ ಮನಸ್ಸನ್ನು ಚಂಚಲಗೊಳಿಸುವ ಕಾಮನೆಗಳ ಅಕ್ಷೋಹಿಣಿ ಸೇನೆಗಳು ನಮ್ಮ ಮನಸ್ಸನ್ನು ಚಂಚಲಗೊಳಿಸಿ ಆಕ್ರಮಿಸುವ ಪ್ರಯತ್ನವನ್ನು ಮಾಡುತ್ತಿರುತ್ತವೆ. ಪಾಂಡವರ ಧ್ಯೋತಕವಾದ ಮನದಲ್ಲಿ ಸುಪ್ತವಾಗಿರುವ ಸುಗುಣಗಳು ಕೌರವರೆಂಬ ದುರ್ಗುಣಗಳ ವಿರುದ್ದ ಸೆಣಸಿ ಗೆಲ್ಲಬೇಕಾಗಿದೆ ಇದಕ್ಕಾಗಿ ತಮ್ಮ ಬಾಳ ರಥದ ಸಾರಥ್ಯವನ್ನು ಭಗವಂತನ ಕೈಗೆ ಒಪ್ಪಿಸಬೇಕಾಗುತ್ತದೆ. ದುರ್ಗುಣಗಳ ವಿರುದ್ದ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳ ವಿರುದ್ದ ಯುದ್ದ ಅನಿವಾರ್ಯವಾಗಿದೆ. ಆವರಿಸಿರುವ ಅಜ್ಞಾನವನ್ನು ಸಂಹಾರ ಮಾಡಿ ಜ್ಞಾನದ ಬೀಜ ಮೊಳಕೆಯೊಡುಯುವಂತೆ ಮಾಡಬೇಕಿದೆ, ಇದು ಶ್ರೀ ಕೃಷ್ಣನ ಉಪದೇಶದ ಪಾರಮಾರ್ಥಿಕ ಅರ್ಥವಾಗಿರುತ್ತದೆ. ಇದು ಸಕಲ ಕಾಲಕ್ಕೂ, ಇಡೀ ಮನುಕುಲಕ್ಕೂ ಅನ್ವಯಿಸುತ್ತದೆ.

ಪ್ರಸ್ತಾಪಿತ ಅಂಕಣದಲ್ಲಿ ಲೇಖಕರು ಇನ್ನೂ ಮುಂದುವರೆದು ಕೃಷ್ಣನ ಸ್ಥಾನದಲ್ಲಿ ಬುದ್ದನನ್ನೂ, ಏಸು ಕ್ರಿಸ್ತನನ್ನೂ, ಬಸವಣ್ಣನವರನ್ನೂ ಕಲ್ಪಿಸಿಕೊಂಡು ಅ ಸಂಧರ್ಭದಲ್ಲಿ ಅವರು ಯಾವ ರೀತಿಯ ಉಪದೇಶ ನೀಡಬಹುದು ಎಂಬುದನ್ನು ಹೇಳುತ್ತಾರೆ. ಭಗವದ್ಗೀತೆಯ ಗಾಂಭೀರ್ಯ, ಆಳವಾದ ತಾತ್ಪರ್ಯಗಳ ಅರಿವು ಕೊಂಚವೂ ಇಲ್ಲದೇ ಅಪಕ್ವವಾದ, ಅಸಂಭದ್ದ ಕಲ್ಪನೆಯ ಅನ್ವಯವನ್ನು ಮಾಡುವುದು ತಿಳಿಗೇಡಿತನವಾಗುತ್ತದೆ. ಪ್ರಸ್ತುತ ಸಂದರ್ಭದ ಒಂದು ಅನ್ವಯವನ್ನೇ ನಾನು ಇಲ್ಲಿ ಕೊಡಬಯಸುತ್ತೇನೆ. ಭಾರತದ ಮೇಲೆ ಆಕ್ರಮಿಸಲು ತುದಿಗಾಲಿನಲ್ಲಿ ನಿಂತಿರುವ ಪಾಕಿಸ್ತಾನವೇನೇದರೂ ಇದ್ದಕ್ಕಿದ್ದಂತೆ ತನ್ನ ಸೇನೆಯೊಡನೆ ನಮ್ಮ ದೇಶವನ್ನು ಆಕ್ರಮಿಸಿತು ಎಂದುಕೊಳ್ಳೋಣ, ಎದುರು ನಿಂತ ಸೇನೆಯ ಮುಂದೆ ಮಂಡಿಯೂರಿ ಕುಳಿತು “ಬುದ್ದಂ ಶರಣಂ ಗಚ್ಚಾಮಿ” ಎನ್ನಬೇಕೆ ? ಏಸು ಕ್ರಿಸ್ತನಂತೆ ಶಿಲುಬೆ ಹೊರಬೇಕೆ ?, ಬಸವಣ್ಣನವರಂತೆ ವಚನಾಮೃತ ಪಾಠವನ್ನು ಹೇಳಬೇಕೆ ? ಅಥವಾ ರಾಷ್ಟ್ರ ರಕ್ಷಣೆಯ ಕರ್ಮ ಪಾಲನೆಗಾಗಿ ಶತ್ರು ಸಂಹಾರವನ್ನು ಕೈಗೊಳ್ಳಬೇಕೆ ? ಪ್ರತಿಯೊಬ್ಬ ನೈಜವಾದ ಭಾರತೀಯನದ್ದೂ ರಾಷ್ಟ್ರ ರಕ್ಷಣೆಯ ಕರ್ಮ ಪಾಲನೆಯೇ ಪ್ರಥಮ ಆಯ್ಕೆಯಾಗುತ್ತದೆ. ಅಲ್ಲವೇ..?

ಭಾರತವು ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ನಾವೆಲ್ಲಾ ಒಪ್ಪುತ್ತೇವೆ. ಅದರೊಂದಿಗೇ ಮನದಟ್ಟು ಮಾಡಿಕೊಳ್ಳಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಗೀತೆಯೂ ಸಹಾ ಸರ್ವ ಜನಾಂಗಕ್ಕೆ, ಇಡೀ ಮನುಕುಲಕ್ಕೆ ಅತ್ಯಂತ ಅವಶ್ಯಕವಿರುವ ನೀತಿ ಗ್ರಂಥವಾಗಿದೆ. ತತ್ವಶಾಸ್ತ್ರದ ಅಧಿಪತಿಯಾಗಿದೆ. ಭಗವದ್ಗೀತೆಯು ಯಾವುದೇ ಒಂದು ಮತ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಇಡೀ ಮನುಕುಲದ ಸನಾತನವಾದ ತಳಹದಿಯಾಗಿದೆ. ಭಗವದ್ಗೀತೆಯ ಒಟ್ಟು ೧೮ ಅಧ್ಯಾಯದಲ್ಲಿ ಎಲ್ಲಿಯೂ ಸಹಾ ಹಿಂದೂ ಧರ್ಮದ ಉಲ್ಲೇಖವನ್ನು ಮಾಡಲಾಗಿಲ್ಲ. ಸುಖ, ಶಾಂತಿ, ಸಂತೃಪ್ತಿ, ಸರ್ವಧರ್ಮ ಸಹಿಷ್ಣತೆ, ಗೀತೆಯ ಉದ್ದೇಶವಾಗಿದೆ. ಈ ಬಗ್ಗೆ ಗೀತೆಯ ಮತ್ತೊಂದು ಶ್ಲೋಕವನ್ನು ಉಲ್ಲೇಖಿಸುವುದಾದರೆ ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವಚ; ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ.” (ಯಾರಿಗೆ ಅಸೂಯೆ ಇಲ್ಲವೋ, ಎಲ್ಲಾ ಜೀವಿಗಳಿಗೆ ಯಾರು ಸ್ನೇಹಿತರೋ, ಯಾರು ನಿರಹಂಕಾರರೋ, ಸುಖ ದುಃಖಗಳಲ್ಲಿ ಸಮಚಿತ್ತರೋ ಅವರು ನನಗೆ ಬಹು ಪ್ರಿಯರಾದವರು-೧೨.೧೩) ಇಂತಹ ಭಗವದ್ಗೀತೆಯು ಸನಾತನ ಪರಂಪರೆಯ ತಳಹದಿಯಾಗಿದೆ. ಸನಾತನ ಎಂದರೆ ಆದಿಯೂ ಇಲ್ಲದ್ದೂ ಮತ್ತು ಅಂತ್ಯವೂ ಇಲ್ಲದ್ದು. ಇದು ಸರ್ವಕಾಲಕ್ಕೂ ಸತ್ಯವಾದುದು. ಮನುಕುಲದ ಏಳಿಗೆಗೆ, ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಬೆಲೆ ಕಟ್ಟಲಾಗದಂತಹ ಮೌಲ್ಯ ಭಗವದ್ಗೀತೆಯದ್ದಾಗಿದೆ. ಜೀವನದ ಯಾವುದಾರೊಂದು ಘಟ್ಟದಲ್ಲಿ ವ್ಯಕ್ತಿಗೆ ನಾನು ಯಾರು ? ನನ್ನ ಸಂಕಟಗಳಿಗೆ ಕಾರಣವೇನು ? ನಾನು ಇಲ್ಲೇಕೆ ಬಂದೆ ? ಅನುಭವಿಸುತ್ತಿರುವ ಸಂಕಟಗಳಿಗೆ ಪರಿಹಾರ ಏನು ? ಎಂಬುದನ್ನು ತಿಳಿಯುವ ಜಿಜ್ಞಾಸೆಗೆ ಒಳಗಾಗುತ್ತಾನೆ. ಬ್ರಹ್ಮ ಸೂತ್ರದಲ್ಲಿ ಈ ಪ್ರಶ್ನೆಗಳನ್ನು “ಬ್ರಹ್ಮ ಜಿಜ್ಞಾಸ” ಎಂದು ಕರೆಯಲಾಗಿದೆ. ಇಂತಹ ಜಿಜ್ಞಾಸೆಗಳಿಗೆ ಉತ್ತರವನ್ನು, ಸಕಾರಣವನ್ನು, ಮುಕ್ತಿಯ ಪರಮಾರ್ಥವನ್ನು ಭಗವದ್ಗೀತೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಪರಮಾತ್ಮ ಯಾರು ? ಜೀವಾತ್ಮ ಯಾರು ? ಪ್ರಕೃತಿ ಎಂದರೇನು ? ವಿಶ್ವ ಸೃಷ್ಟಿಯ ಆದಿ ಅಂತ್ಯಗಳೇನು ? ಇವೆಲ್ಲವೂ ಕಾಲದ ನಿಯಂತ್ರಣಕ್ಕೆ ಯಾವ ರೀತಿ ಒಳಪಟ್ಟಿದೆ ? ಜೀವಿಗಳ ಕರ್ಮಗಳೇನು ? ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಭಗವದ್ಗೀತೆಯಿಂದ ಕಲಿಯಬಹುದಾಗಿದೆ.

ಇಂದು ಪ್ರಪಂಚದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿಂಸಾಚಾರಗಳು, ಕುಸಿಯುತ್ತಿರುವ ಮಾನವೀಯ ಮೌಲ್ಯಗಳು, ಮನೆ ಮಾಡುತ್ತಿರುವ ಕ್ರೌರ್ಯ, ಅಪರಾಧಿಕ ಮನೋಭಾವನೆಗಳು, ಮನಸ್ಸುಗಳಲ್ಲಿ ಮುಡುಗಟ್ಟುತ್ತಿರುವ ಭಯ, ಅಸಹನೆಗಳು, ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿರುವ ಸಂಬಂಧಗಳು, ಮರೆಯಾಗುತ್ತಿರುವ ಮಾನವೀಯ ಅಂತಃಕರಣಗಳು ಇತ್ಯಾದಿಗಳಿಗೆಲ್ಲಾ ಭಗವದ್ಗೀತೆಯು ಪರಿಹಾರವಾಗಿದೆ. ಇಂದು ಹಲವು ಶಾಲೆಗಳಲ್ಲಿ ಭಗವದ್ಗೀತೆಯ ಪಠಣ ಮಾಡಿಸುತ್ತಿರುವುದು ನಿಜಕ್ಕೂ ಖುಷಿ ಕೊಡುವ ಸಂಗತಿಯೇ ಆಗಿದೆ. ಆದರೆ ಇದು ಕೇವಲ ಶ್ಲೋಕಗಳನ್ನು ಕಂಠಪಾಠ ಮಾಡಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಭಗವದ್ಗೀತೆಯ ತಾತ್ಪರ್ಯಗಳನ್ನು ಸಾರುವ, ಅರ್ಥವನ್ನು ಸರಳಭಾಷೆಯಲ್ಲಿ ಮನಮುಟ್ಟುವ ರೀತಿಯಲ್ಲಿ ತಿಳಿಹೇಳುವ ಕೆಲಸವಾಗಬೇಕಿದೆ. ದಿನನಿತ್ಯದ ಬದುಕಿಗೆ ಗೀತೆಯು ದಾರಿದೀಪವಾಗಬೇಕಿದೆ. ಈ ನಿಟ್ಟಿನಲ್ಲಿ ಭಗವದ್ಗೀತೆ ಮಾದ್ಯಮಿಕ ಶಿಕ್ಷಣದಿಂದಲೇ ಅಧ್ಯಯನದ ವಿಷಯವಾಗಬೇಕಿದೆ. ಹೀಗಾದಲ್ಲಿ ಮುಂದಿನ ಪೀಳಿಗೆಯಲ್ಲಿ ಮೌಲ್ಯಯುತವಾದ, ಜವಾಬ್ದಾರಿಯುತವಾದ ನಾಗರೀಕ ಸಮಾಜದ ಅಸ್ಥಿತ್ವದ ಕನಸು ನನಸಾಗಲಿದೆ. ಗೀತೆಯನ್ನು ಕೇವಲ ಇತಿಹಾಸದ ದೃಷ್ಟಿಯಿಂದ ನೋಡದೇ, ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ಧರ್ಮಗ್ರಂಥವೆಂಬ ಸೀಮಿತ ಅರ್ಥದಿಂದ ನೋಡದೇ, ತತ್ವಶಾಸ್ತ್ರವಾಗಿ, ಮನಃಶಾಸ್ತ್ರವಾಗಿ, ಆದ್ಯಾತ್ಮಿಕವಾಗಿ ಅರ್ಥೈಸಿಕೊಳ್ಳುವ ಪರಿಪಾಠ ನಮ್ಮಲ್ಲಿ ಬೆಳೆದು ಬರಬೇಕಾಗಿದೆ.

ವೈದಿಕ ಸಾರಸರ್ವಸ್ವವಾದ ಗೀತೋಪನಿಷತ್ತು ಎಂದೂ ಸಹಾ ಪ್ರಸಿದ್ದವಾಗಿರುವ ಭಗವದ್ಗೀತೆಯಂತಹ ಅತ್ಯುನ್ನತ ಮಟ್ಟದ ಮಹಾಕಾವ್ಯವನ್ನು ಮನುಕುಲಕ್ಕೆ, ಇಡೀ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವ ಶ್ರೀಮಂತ ಸಂಸ್ಕ್ರತಿ, ಭವ್ಯವಾದ ಪರಂಪರೆ ನಮ್ಮದು, ಸೂರ್ಯ, ಚಂದ್ರ, ಗ್ರಹಗಳ, ಇಡೀ ಸೌರವ್ಯೂಹದ, ಬಾಹ್ಯಾಕಾಶದ ಉಲ್ಲೇಖವನ್ನು ಸನಾತನ ಪರಂಪರೆಯ ಸಾರವನ್ನು ಒಳಗೊಂಡ ಭಗವದ್ಗೀತೆಯಲ್ಲಿ ಹೇಳಲಾಗಿದೆ, ಭಗವದ್ಗೀತೆಯಂತಹ ಕೃತಿಯ ತಳಹದಿಯೊಂದಿಗೆ ತನ್ನ ಶ್ರೀಮಂತ ಸಂಸ್ಕ್ರತಿ, ಪರಂಪರೆಯ ಮೂಲಕ ಭಾರತವು ಇಡೀ ವಿಶ್ವಕ್ಕೆ ಗುರು ಸ್ಥಾನದಲ್ಲಿ ನಿಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಇನ್ನಿತರ ದೇಶಗಳ ಲೆಕ್ಕವಿಲ್ಲದಷ್ಟು ಮಹನೀಯರು, ಇತಿಹಾಸಕಾರರು, ಸಾಧಕರು, ಸಾಹಿತಿಗಳು ಇದರ ಪರಮಾರ್ಥವನ್ನು, ಮೌಲ್ಯಗಳನ್ನು ಅಭ್ಯಸಿಸಿ ಗೀತೆಯ ತಾತ್ಪರ್ಯಕ್ಕೆ ಮಾರುಹೋಗಿದ್ದಾರೆ. ಅವರ ಪೈಕಿ ಆಲ್ಕರ್ಟ್ ಐನ್‌ಸ್ಟೈನ್ ಹಾಗೂ ಮಹಾತ್ಮಾಗಾಂಧಿಯವರ ಹೇಳಿಕೆಗಳನ್ನು ಈ ಲೇಖನದ ಪ್ರಾರಂಭಧಲ್ಲಿ ಉಲ್ಲೇಖಿಸಿದ್ದೇನೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂದಿಗೂ ಸಹಾ ಯಾರದ್ದೇ ಹೇಳಿಕೆ ಪಡೆಯುವ ಮುನ್ನ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಲಾಗುತ್ತದೆ ಇದು ನಮ್ಮ ದೇಶದಲ್ಲಿ ಭಗವದ್ಗೀತೆಗೆ ಇರುವ ಮಹತ್ವವನ್ನು ತೋರಿಸುತ್ತದೆ. ಭಾರತ ದೇಶದ ಧೀಮಂತ ಪರಂಪರೆ, ಸಂಸ್ಕೃತಿಯ ಚೇತನವಾದ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಣೆ ಮಾಡುವ ಪ್ರಸ್ತಾವನೆ ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಬೇಕಾದ ಸಂಗತಿಯಾಗಿದೆ. ಆ ಸುದಿನ ಆದಷ್ಟು ಬೇಗ ಬರಲಿ ಎಂಬುದು ಭಾರತೀಯರಾದ ನಮ್ಮೆಲ್ಲರ ಆಶಯವಾಗಬೇಕಿದೆ.

14 ಟಿಪ್ಪಣಿಗಳು Post a comment
 1. Nagshetty Shetkar
  ಡಿಸೆ 25 2014

  ಪ್ರೊ. ಕೆ. ಎಸ್. ಭಗವಾನ್ ಅವರು ಪ್ರಜಾವಾಣಿಯಲ್ಲಿ ಭಗವದ್ಗೀತೆಯನ್ನು ಸಕತ್ ಜಾಡಿಸಿದ್ದಾರೆ! ವೆಲ್ ಡನ್ ಸರ್!

  “ಕೇಂದ್ರ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಭಗವ­ದ್ಗೀತೆ’ ಭಾರತದ ರಾಷ್ಟ್ರೀಯ ಧರ್ಮಗ್ರಂಥ
  ವಾಗ­ಬೇಕು ಎಂದು ಹೇಳಿದ್ದರಿಂದ ಚರ್ಚೆ ಶುರು­ವಾಗಿದೆ. ಸಂಸತ್ತಿನಲ್ಲಿ ಆಡಳಿತೇತರ ಪಕ್ಷಗಳಿಗೆ ಸೇರಿದ ಕೆಲವು ಸಂಸದರು ಈ ಹೇಳಿಕೆ­ಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಗೀತೆಯಲ್ಲಿ ಏನಿದೆ? ಅದು ಇರುವುದು ಯಾರ ಪರ ಅಥವಾ ವಿರುದ್ಧ? ಎಂಬುದರ ಕಡೆ ಯಾರೂ ಗಮನ ಹರಿಸಿಲ್ಲ.

  ಕ್ರಾಂತಿಕಾರಕ ಬುದ್ಧಧಮ್ಮ ಉಚ್ಛ್ರಾಯ ಸ್ಥಿತಿಗೇರಿ ಆ ಹೊತ್ತಿಗೆ ಇಳಿಮುಖವಾಗುತ್ತಿತ್ತು. ಬುದ್ಧ ಸೈದ್ಧಾಂತಿಕವಾಗಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ. ಇದನ್ನು ಸಹಿಸದ ವೈದಿಕ ಮತಾಂಧತೆ ಸಂಘವನ್ನು ನಾಶ ಮಾಡಲು ಸನ್ನಾಹ ನಡೆಸುತ್ತಿತ್ತು. ಪ್ರತಿ ಕ್ರಾಂತಿಗೆ ಪ್ರಣಾ­ಳಿಕೆ­ಯಾಗಿ ಭಗವದ್ಗೀತೆ ಸೃಷ್ಟಿಯಾಯಿತು. ಇದಕ್ಕೆ ಪುರಾವೆಯಾಗಿ ನಿರ್ವಾಣ ಪದ ಗೀತೆಯಲ್ಲಿ ಪದೇ ಪದೇ (೨.೭೨ ಮತ್ತು ೫.೨೪–-೨೬.) ಬಳಕೆ­ಯಾ­ಗಿರುವುದನ್ನು ಕಾಣಬಹುದು. ಗೀತೆಗಿಂತ ಹಿಂದಿನ ಬ್ರಾಹ್ಮಣ ಮತ ಗ್ರಂಥಗಳಲ್ಲಿ ನಿರ್ವಾಣ ಶಬ್ದ ಪ್ರಯೋಗವಾಗಿರುವುದು ಕಾಣುವುದಿಲ್ಲ. (ಈ ವಿಷಯವಾಗಿ ಬಲ್ಲವರು ತಿಳಿಸಿದರೆ ಕೃತಜ್ಞತೆ­ಯಿಂದ ಈ ಅಭಿಪ್ರಾಯ ತಿದ್ದಿಕೊಳ್ಳುತ್ತೇನೆ.) ಬುದ್ಧಧಮ್ಮದಲ್ಲಿ ‘ನಿರ್ವಾಣ’, ಆಧ್ಯಾತ್ಮಿಕ ಅನು­ಭವದ ಅತ್ಯುನ್ನತ ಸ್ಥಿತಿ ಎಂಬುದು ಗೊತ್ತಿರುವ ವಿಚಾರ.

  ಭಗವದ್ಗೀತೆ ಹೇಳುವವನು ಕೃಷ್ಣ, ಕೇಳುವವನು ಅರ್ಜುನ, ಬರೆಯುವವನು ವ್ಯಾಸ. – ಮೂವರೂ ಅಬ್ರಾಹ್ಮಣರು. ಕೃಷ್ಣ ಗೊಲ್ಲ (ಯಾದವ), ಅರ್ಜುನ ಕ್ಷತ್ರಿಯ, ವ್ಯಾಸ ಬೆಸ್ತ (ಮೀನು­ಗಾರ್ತಿಯ ಮಗ). ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಏಕೆ ಪ್ರಬಲವಾಗಿ ಪ್ರತಿಪಾದಿ­ಸುತ್ತದೆ ಎಂದರೆ ಅದಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಗ­ವ­ದ್ಗೀತೆ ಪ್ರಾರಂಭ­ವಾಗುವುದೇ ಕುಲಕ್ಷಯ (೧.೩೮–-೪೦ ಜಾತಿ ನಾಶ), ವರ್ಣಸಂಕರ (೧.೪೧–-೪೪ ಜಾತಿ ಬೆರಕೆ)ಗಳನ್ನು ತಡೆಗಟ್ಟುವುದ­ಕ್ಕಾಗಿ. ಕುಲಕ್ಷಯ ಮತ್ತು ವರ್ಣ­ಸಂಕರಗಳನ್ನು ತಡೆಯಬೇಕೆಂದು ಅರ್ಜುನ ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಕೃಷ್ಣನಿಗೆ ಹೇಳಿ ಬಿಲ್ಲು­ಬಾಣಗಳನ್ನು ರಥದಲ್ಲಿ ಹಾಕಿ ಕುಳಿತು­ಕೊಳ್ಳುತ್ತಾನೆ.

  ಗೀತೆ ಬಹಳ ಪ್ರಖ್ಯಾತವಾಗಲು ಮಹಾತ್ಮ ಗಾಂಧೀಜಿ ಅವರ ಪ್ರಚಾರ ಕಾರಣ ಎನ್ನಬೇಕು. ‘ಕರ್ಮ ಮಾಡುವುದಕ್ಕೆ ನಿನಗೆ ಅಧಿಕಾರ, ಫಲಾ­ಪೇಕ್ಷೆ ಇಲ್ಲದೆ ಕೆಲಸ ಮಾಡು ’ಎಂದು ಕೃಷ್ಣ ಹೇಳು­ತ್ತಾನೆ. ಆಳು ಜೀತ ಮಾಡುತ್ತಾನೆ, ಲಾಭವೆಲ್ಲ ಯಜ­ಮಾನನಿಗೇ ಹೋಗುತ್ತದೆ. ದುಡಿಮೆ­ಗಾರ­ನಿಗೆ ದುಡಿದದ್ದೇ ಲಾಭ! ಹೀಗಾಗಿ ಕೃಷ್ಣನದು ಜೀತ­ಗಾರಿಕೆ ಮುಂದುವರಿಸುವ ಮಾತು. ಗೀತೆ ಶ್ರಮ­ಜೀವಿಗಳನ್ನು ತುಳಿಯುವ ಸಂದೇಶ ಸಾರುತ್ತಿದೆ.

  ಲೋಕದಲ್ಲಿರುವ ಅನ್ಯಾಯ, ಅಸಮಾನತೆ, ಸುಲಿಗೆ, ಶೋಷಣೆ, ದಾಸ್ಯ, ಪಾರತಂತ್ರ್ಯ, ದಬ್ಬಾ­ಳಿಕೆ, ಬಡತನ, ಮೋಸ, ಮೇಲು ಕೀಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದವುಗಳನ್ನೆಲ್ಲ ಹೋಗ­ಲಾಡಿಸುವುದು ಹೇಗೆ? ಇದಕ್ಕೆ ಗೀತೆಯಲ್ಲಿ ಉತ್ತರವಿಲ್ಲ.
  ‘ಮನುಸ್ಮೃತಿ’ಗಿಂತ (ಕ್ರಿ.ಪೂ.೧೮೫) ಭಗ­ವದ್ಗೀತೆ (ಕ್ರಿ.ಶ. ಮೂರನೆಯ ಶತಮಾನ) ಹೆಚ್ಚು ಭಯಂಕರವಾದ ಗ್ರಂಥ. ಮನುಸ್ಮೃತಿ ಒರಟಾ­ಯಿತು ಎಂದೇನೋ ಮೃದು ಮಧುರವಾದ ಸಂಗೀ­ತಮಯ ಕಾವ್ಯಭಾಷೆಯಲ್ಲಿ ಭಗವದ್ಗೀತೆ­ಯನ್ನು ಬರೆಯಲಾಗಿದೆ. ಓದುಗರನ್ನು ಆಕರ್ಷಿ­­ಸಲು ಮಾಡಿರುವ ಉಪಾಯ ಇದು. ಗೀತೆಯದು ಬಹಳ ಸುಂದರವಾದ ಭಾಷೆ. ಆದರೆ ಅದೆಲ್ಲ ಅಪಾ­ಯಕಾರಿಯಾಗಿರುವುದನ್ನು ಅರಿಯ­ಬೇಕಾ­ಗಿದೆ.

  ಭಗವದ್ಗೀತೆಯಲ್ಲಿರುವ ‘ವಿಶ್ವರೂಪ ದರ್ಶನ’­­­ದಲ್ಲಿ ನೀಡಿರುವ ವಿವರಗಳು ಭಾರತಕ್ಕೆ ಸೀಮಿತ­ಗೊಂಡಿವೆ. ವಿದೇಶಗಳ ಹೆಸರುಗಳು ಇಲ್ಲಿ ಬಂದಿಲ್ಲ. ಆದ್ದರಿಂದ ಇದನ್ನು ವಿಶ್ವರೂಪ ದರ್ಶನ ಎನ್ನದೆ ‘ಸಂಕ್ಷಿಪ್ತ ಭಾರತ ದರ್ಶನ’ ಎಂದು ಕರೆ­ಯುವುದು ಸೂಕ್ತ. ಗೀತಕಾರನ ಭೌಗೋಳಿಕ ಜ್ಞಾನ­ವೆಲ್ಲ ಕೇವಲ ಭರತಖಂಡಕ್ಕೆ ಸೀಮಿತ­ವಾಗಿದೆ. ಗೀತೆ ರಚನೆಯಾಗುವುದಕ್ಕಿಂತ ಮುನ್ನವೇ ಚಾಲ್ತಿ­ಯಲ್ಲಿ ಇದ್ದ ಎಲ್ಲಾ ತತ್ವ­ಶಾಖೆಗಳ ಪುನರು­ಚ್ಚಾರ ಗೀತೆಯಲ್ಲಿ ಬಂದಿದೆ. ಗೀತೆಯ ಒಂದೊಂದು ಅಧ್ಯಾಯದಲ್ಲಿ ಒಂದೊಂದು ತತ್ವ­ವನ್ನು ಹೇಳಲಾಗಿದೆ. ಒಂದು ಅಧ್ಯಾಯಕ್ಕೂ ಇನ್ನೊಂದು ಅಧ್ಯಾಯಕ್ಕೂ ಸಂಬಂಧವಿಲ್ಲ. ಭಗವ­ದ್ಗೀತೆಯಲ್ಲಿ ಹೊಸ ಬೆಳಕಿಲ್ಲ. ಅದರಲ್ಲಿ ಜಾತಿ­ವ್ಯವಸ್ಥೆಯ ಸಮರ್ಥನೆ ತುಂಬಿದೆ. ಗೀತೆ ಹಿಂದೂ ದರ್ಶನಗಳ ಒಂದು ಕೋಷ್ಟಕ ಅಥವಾ ಅಡಕ ಅಷ್ಟೆ.

  ಕೃಷ್ಣ ತಪಸ್ಸು ಮಾಡಿ ನಿಜವಾದ ಆಧ್ಯಾತ್ಮ ಜ್ಞಾನ ಗಳಿಸಿದ್ದ ಎಂಬುದಕ್ಕೆ ಗೀತೆಯಲ್ಲಿ ವಿವರ­ಗಳಿಲ್ಲ. ಬುದ್ಧ ತನ್ನ ‘ಸುತ್ತ’ಗಳಲ್ಲಿ, ಪರಮ­ಹಂಸರ ‘ಶ್ರೀರಾಮಕೃಷ್ಣ ವಚನವೇದ’ದಲ್ಲಿ, ವಿವೇಕಾ­ನಂದರು ತಮ್ಮ ಬರಹಗಳಲ್ಲಿ ಸಾಕ್ಷಾ­ತ್ಕಾರ ಪಡೆಯಲು ನಡೆಸಿದ ಶ್ರಮಗಳನ್ನು ವಿವರಿಸಿ­ದ್ದಾರೆ. ಕೃಷ್ಣನಿಗೆ ಇಂಥ ಅನುಭವ ಆಗಿಲ್ಲ. ಅವನು ಕಿರಿಯವನಾಗಿದ್ದಾಗ ಗೋಪಿಕೆಯರ ಸಂಗಡ­ದಲ್ಲಿದ್ದ. ತಾರುಣ್ಯದಲ್ಲಿ ಅಷ್ಟ ಮಹಿಷಿ­ಯರು ಮತ್ತು ಹದಿನಾರು ಸಾವಿರ ಹೆಂಡತಿಯರ ಜೊತೆಗಿದ್ದ. ಕೊನೆಗೆ ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ರಥ ನಡೆಸಿದ. ಇಂಥವನು ಹೇಗೆ ಅಧ್ಯಾತ್ಮ ಜೀವಿಯಾಗುತ್ತಾನೆ? ಅಧ್ಯಾತ್ಮ ಜೀವನಕ್ಕೆ ಪರಿ­ಶುದ್ಧತೆ, ಕಾಮನಿಗ್ರಹ ಅತ್ಯಂತ ಅವಶ್ಯಕ. ಇದಾವುದೂ ಇಲ್ಲದ ಕೃಷ್ಣ ಜ್ಞಾನಿ ಅಲ್ಲ. ದೇವ­ರಾಗಲು ಕೃಷ್ಣನಿಗೆ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ಕೃಷ್ಣನಿಗೆ ಪಾವಿತ್ರ್ಯವಿಲ್ಲ, ಇಂದ್ರಿಯ ನಿಗ್ರಹ ಇಲ್ಲ, ಪರಮ ಜ್ಞಾನವಿಲ್ಲ.

  ಸ್ವಧರ್ಮವನ್ನು ವ್ಯಾಖ್ಯಾನಕಾರರು ಮನಸೋ ಇಚ್ಛೆ ವಿವರಿಸಿದ್ದಾರೆ. ಈ ಪದವನ್ನು ಗೀತೆಯ ಸಂದರ್ಭದಲ್ಲೇ ಅರ್ಥ ಮಾಡಿಕೊಳ್ಳುವುದು ಒಳ್ಳೆ­ಯದು. ಗೀತೆಯ ಚೌಕಟ್ಟಿನಲ್ಲಿ ಸ್ವಧರ್ಮ ಎಂದರೆ ಜಾತಿ ಎಂದೇ ಅರ್ಥ ನಿರ್ಣಯವಾಗುತ್ತದೆ.
  ‘ಯುದ್ಧವು ಕ್ಷತ್ರಿಯನಿಗೆ ಸ್ವಧರ್ಮ ಎಂದು ತಿಳಿದ ನಂತರವೂ ನೀನು ಯುದ್ಧ ಮಾಡದಿದ್ದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಹಾಳು ಮಾಡಿ­ಕೊಂಡು ಪಾಪವನ್ನು ಪಡೆಯುತ್ತೀಯೆ. ಆದ್ದ­ರಿಂದ ನೀನು ಯುದ್ಧ ಮಾಡು ’ಎಂದು ಅರ್ಜುನ­ನಿಗೆ ಕೃಷ್ಣ ಪುಸಲಾಯಿಸುತ್ತಾನೆ. ಹಾಗಾಗಿ ಸ್ವ­ಧರ್ಮ ಎಂದರೆ ಕ್ಷತ್ರಿಯ ಜಾತಿ, ಮತ್ತು ಪ್ರತಿ­ಯೊಬ್ಬನ ಜಾತಿ ಎಂದು ಅರ್ಥ ಬರುತ್ತದೆ. ಕ್ಷತ್ರಿಯ ಧರ್ಮದ ಪ್ರಕಾರ ಕೊಲ್ಲಲು ಪ್ರೇರೇಪಿ­ಸುವ ಕೃಷ್ಣನನ್ನು ದೇವರು ಮಾಡಲಾಗಿದೆ. ಅಪರಾಧ ಕಾನೂನು ಸಂಹಿತೆ ದೃಷ್ಟಿಯಲ್ಲಿ ದುಷ್ಟ ಕೃತ್ಯ ಪ್ರೇರಕ ಕೃಷ್ಣ ತಪ್ಪಿತಸ್ಥ, ಅಪರಾಧಿ. ಇಂಥ ‘ಭಗ­ವದ್ಗೀತೆ’ಯನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಕೇಂದ್ರ ಸರ್ಕಾರ ಘೋಷಿಸಿದರೆ ಹತ್ಯೆ ಮಾಡುವ ಮನಸ್ಸುಳ್ಳ ಪಕ್ಷ ಮತ್ತು ಸಂಘಟನೆ­ಗಳಿಗೆ ಹಾಗೂ ಜನರಿಗೆ ರಾಜ ರಹದಾರಿ ನೀಡಿ­ದಂತಾಗುತ್ತದೆ. ಯಾವ ದೃಷ್ಟಿಯಿಂದ ನೋಡಿ­ದರೂ ಭಗವ­ದ್ಗೀತೆ ರಾಷ್ಟ್ರೀಯ ಧರ್ಮ ಗ್ರಂಥ­ವಾಗಲು ಲಾಯ­ಕ್ಕಾಗಿಲ್ಲ.
  ವಿಜ್ಞಾನ ಚಂದ್ರಲೋಕ, ಮಂಗಳ ಲೋಕಗಳಿಗೆ ಹೋಗಿ ಬಂದಿದೆ. ಧರ್ಮ ಗ್ರಂಥಗಳು ಹೇಳುವ ಸ್ವರ್ಗ, ಕೈಲಾಸ, ವೈಕುಂಠ ಅಲ್ಲಿ ಕಂಡು ಬಂದಿಲ್ಲ. ಮುಕ್ತಿ, ಸದ್ಗತಿ ಮುಂತಾದ ಮಾತುಗಳನ್ನು ಎಲ್ಲಾ ಮತ­ಗ್ರಂಥಗಳು ಹೇಳುತ್ತವೆ. ಗೀತೆಯೂ ಅದನ್ನೇ ಉಚ್ಚರಿಸುತ್ತದೆ. ವಾಸ್ತವವಾಗಿ ಇರುವುದು ಇದೊಂದೇ ಲೋಕ; ಇಲ್ಲಿ ನಾವೆಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ಬದುಕುವುದನ್ನು ರೂಢಿ­ಸಿ­­ಕೊಳ್ಳಬೇಕು ಎಂದು ಭಾವಿಸುವುದು ವಿವೇಕ­ಯುತ.

  ಕೃಷ್ಣ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದ­ರಿಂದ ಅವನನ್ನು ದೇವರನ್ನಾಗಿ ಮಾಡಲಾಗಿದೆ. ಇಲ್ಲದಿದ್ದರೆ ಅವನನ್ನೂ ಜಾತಿ­ಯನ್ನು ನಿರಾಕರಿಸಿದ ಬುದ್ಧನನ್ನು ತಿರಸ್ಕರಿಸಿದಂತೆ ತಿರಸ್ಕರಿಸುತ್ತಿದ್ದರು. ಮನುಷ್ಯರೆಲ್ಲ ಒಂದೇ ಎಂದು ಬೋಧಿಸುವ ಧರ್ಮಗ್ರಂಥ ‘ಧಮ್ಮಪದ ’ ಒಂದೇ.

  ಭಗವದ್ಗೀತೆ ಪರಿಪೂರ್ಣ ಗ್ರಂಥ ಅಲ್ಲ. ಭಗ­ವದ್ಗೀತೆ ಸಂಪ್ರದಾಯವನ್ನು ಸ್ಥಿರೀಕರಿಸುವ ಪ್ರಗತಿ ವಿರೋಧಿ ಗ್ರಂಥ. ಭಗವದ್ಗೀತೆ ಶೇ. ೯೮ ಮಂದಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಉಳಿದ ಶೇ. ೨ರಷ್ಟು ಜನರಿಗೆ ಮಾತ್ರ ಅನುಕೂಲ­ವಾಗಿ-­ರುವುದು. ಇವರು ಪುಣ್ಯಯೋನಿಜರಾದುದರಿಂದ ಏನು ಕೇಡು ಮಾಡಿದರೂ ಅದು ತಪ್ಪಲ್ಲ! ಪಾಪ­ಯೋನಿಜರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಏಳಿಗೆ ಇಲ್ಲ! ಎಂಥ ಭಯಂಕರ ತತ್ವಜ್ಞಾನ ಕೃಷ್ಣನದು! ಇಂಥ ಭಗವದ್ಗೀತೆ ಹೇಗೆ ಪವಿತ್ರ?”

  ಉತ್ತರ
  • Naani
   ಡಿಸೆ 25 2014

   ಅದೇ ಪ್ರಜಾವಾಣಿಯಲ್ಲಿ ಇಂದು ನಿಮ್ಮ ಪ್ರೊ. ಭಗವಾನರಿಗೆ ಪ್ರವೀಣ ಟಿ.ಎಲ್. ಜಾಡಿಸಿರುವುದನ್ನೂ ಪೇಸ್ಟ್ ಮಾಡೋದನ್ನು ಮರೆತಿರಾ! 🙂 ನಿಮ್ಮ ಸಹಾಯಕ್ಕಾಗಿ:

   “ಭಗವದ್ಗೀತೆ: ಪರಕೀಯ ನಿರೂಪಣೆಗಳ ಗೊಂದಲ

   ಭಗವದ್ಗೀತೆಯು ಸದಾ ಚರ್ಚೆಯಲ್ಲಿರುವ ವಸ್ತುವಿಷಯ. ಕೇಂದ್ರ ಸರ್ಕಾರ ಅದ­ನ್ನೊಂದು ರಾಷ್ಟ್ರೀಯ ಗ್ರಂಥ ಮಾಡುವ ಆಶಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಚರ್ಚೆಗೆ ಗ್ರಾಸ­ವಾಗಿದೆ. ಕಳೆದ ಬಾರಿ ಅದನ್ನು ಶಾಲೆಯಲ್ಲಿ ಬೋಧಿಸುವ ಸಲು­ವಾಗಿ  ಚರ್ಚೆಯಾಗಿತ್ತು.  ಈ ಕುರಿತು ಮುಖ್ಯವಾಗಿ ‘ಸಂಗತ’­ದಲ್ಲಿ ಪ್ರಕಟವಾದ ಪ್ರೊ.ಕೆ.ಎಸ್‌. ಭಗವಾನ್‌ ಅವರ ಲೇಖನಕ್ಕೆ ಪ್ರತಿಕ್ರಿಯೆಯಾಗಿದೆ ಈ ಬರಹ.

   ಭಗವದ್ಗೀತೆ ರಾಷ್ಟೀಯ ಧರ್ಮ ಗ್ರಂಥವಾಗ­ಬೇಕೆಂಬ ಆಶಯ ನನ್ನದಲ್ಲ. ಬದಲಾಗಿ ಭಗ­ವದ್ಗೀತೆಯು ಜಾತಿ ವ್ಯವಸ್ಥೆ­ಯನ್ನು ಪ್ರತಿಪಾದಿ­ಸುವ ಒಂದು ಅಪಾಯಕಾರಿ ಕೃತಿ ಎನ್ನುವ ಹಾಗೂ ಧರ್ಮಗ್ರಂಥ ಮಾಡಬೇಕೆನ್ನುವ ಎರಡೂ ವಾದಗಳು ಹೇಗೆ ನಮಗೆ ಪರಕೀಯ­ವಾಗಿವೆ ಎಂಬುದನ್ನು ತೋರಿಸುವುದು ಉದ್ದೇಶ. ಲೇಖಕರು ತಮ್ಮ ವಾದದ ಸಮರ್ಥನೆಗೆ ನೀಡಿದ ಅಂಶಗಳು ಭಗವದ್ಗೀತೆಯು ಜಾತಿ ವ್ಯವಸ್ಥೆ­ಯನ್ನು ಪ್ರತಿಪಾದಿ­ಸಿದೆ ಎಂಬುದನ್ನು ಸಾಬೀತು­ಪಡಿಸಲು ಯಶಸ್ವಿಯಾಗಿಲ್ಲ. 

   * ಗೀತೆಯಲ್ಲಿ ಉಲ್ಲೇಖವಾಗಿರುವ ನಿರ್ವಾಣ ಎಂಬ ಪದದ ಬಳಕೆ. ಕುರಿತು ಹೇಳುವಾಗ ಗೀತೆಗಿಂತ ಹಿಂದೆ ಬ್ರಾಹ್ಮಣ ಗ್ರಂಥ­ದಲ್ಲಿ ಈ ಪದದ ಉಲ್ಲೇಖ ಇಲ್ಲವೆನ್ನುತ್ತಾರೆ, ಆದರೆ ಗೀತೆಯಲ್ಲಿ ಅದನ್ನು ಪದೇಪದೇ ಬಳಸಲಾಗಿದೆ ಎನ್ನುತ್ತಾರೆ. ಗೀತೆ ಬ್ರಾಹ್ಮ­ಣರು ರಚಿಸಿದ್ದಲ್ಲ ಎನ್ನುವ ತೀರ್ಮಾನವನ್ನು ಒಪ್ಪುವ ಲೇಖಕರು, ಅದರಲ್ಲಿ ಬಳಕೆಯಾಗುವ ಪದ ಜಾತಿ­ವ್ಯವಸ್ಥೆ­ಯನ್ನು ಸಮರ್ಥಿಸುತ್ತದೆ ಎಂದು ಹೇಗೆ ತೀರ್ಮಾ­ನಿಸಿದರು? ಹಾಗೂ ಗೀತೆಯು ಬೌದ್ಧರ ವಿರು­ದ್ಧದ ವೈದಿಕರ ಹೋರಾಟಕ್ಕೆ ಪ್ರಣಾಳಿಕೆಯಾಗಿ ಕೆಲಸ ಮಾಡಿದ್ದು ಹೇಗೆ? 

   * ವರ್ಣಸಂಕರವನ್ನು ತಡೆಯುವ ಉದ್ದೇಶ­-ದಿಂದ ಅರ್ಜು­ನನು ಯುದ್ಧ ಮಾಡಲು ನಿರಾಕರಿ­ಸಿದ ಎಂದು ಅಭಿಪ್ರಾಯ­ಪಡುವ ಲೇಖಕರು ಆ ನಂತರ ಅರ್ಜುನ ಯುದ್ಧ ನೆರವೇರಿಸಿ­ದ್ದನ್ನು ಪರಿ­ಗಣಿಸುವುದಿಲ್ಲ. ಜೊತೆಗೆ ಯುದ್ಧವನ್ನು ನಿರಾಕರಿ­ಸಲು ಆತ ನೀಡಿದ ಕಾರಣವೇ ಬೇರೆ. ಕೆ.ಎಸ್‌. ಭಗವಾನ್ ಅವರು ನೀಡುವ ಕಾರಣವೇ ಬೇರೆ. ಭೀಷ್ಮ-, ದ್ರೋಣಾ­ಚಾರ್ಯರ ವಿರುದ್ಧ ಹೋರಾ­ಡುವುದು ಅರ್ಜುನನ ಮನಸಿಗೆ ದುಃಖವ­ನ್ನುಂಟು ಮಾಡುತ್ತದೆ ಎಂಬುದು ನಿಜವಾದ ಕಥೆ­ಯಾ­ದರೆ, ಲೇಖಕರು ಜಾತಿ ವ್ಯವಸ್ಥೆಯ ಪೋಷ­ಣೆ­­ಗಾಗಿ ಅರ್ಜುನ ಯುದ್ಧ­ವನ್ನು ನಿರಾಕರಿಸಿದ ಎಂದು ತಿರುಚಿದ್ದಾರೆ.

   * ಅರ್ಜುನ ಯುದ್ಧ ಮಾಡುವುದಿಲ್ಲ ಎಂದು ಹೇಳಿದ್ದು,  ಕೃಷ್ಣ ಆತನನ್ನು ಯುದ್ಧ ಮಾಡು­ವಂತೆ ಪ್ರೇರೇ­ಪಿ­ಸಿದ್ದು ಎರಡೂ  ಏಕಕಾಲದಲ್ಲಿ ಜಾತಿ ವ್ಯವಸ್ಥೆಯ ಪ್ರತಿ­ಪಾದ­ನೆಗೆ ಸಾಕ್ಷಿಗಳಾಗು­ವುದು ಹೇಗೆ? ಲೇಖಕರು ಕೃಷ್ಣ ಬೋಧಿ­ಸುವ ಸ್ವಧರ್ಮದ ಪ್ರತಿ­ಪಾದ­ನೆ­ಯನ್ನು ತಮ್ಮ ವಾದಕ್ಕೆ ಸಮ­ರ್ಥನೆ­ಯಾಗಿ ಬಳಸು­ತ್ತಾರೆ. ಸ್ವಧರ್ಮ ಎಂದರೆ ತನ್ನ ಕರ್ತವ್ಯ­ಗಳನ್ನು ನೆರವೇರಿಸು ಎಂದರ್ಥ. ಕೃಷ್ಣ, ಅರ್ಜುನನಿಗೆ ಕ್ಷತ್ರಿಯ­ನಾಗಿ ನೀನು ನಿನ್ನ ಕರ್ತವ್ಯ ಪಾಲಿಸಬೇಕೇ ಹೊರತು ನಿನ್ನ ಕುಲ, ಪಂಗಡ, ಹಿರಿಯ-–ಕಿರಿಯ, ಸಂಬಂಧಿ ಇದ್ಯಾ­ವುದೂ ಮುಖ್ಯ­ವಲ್ಲ ಎನ್ನುವ ಅರ್ಥ ಆ ಪ್ರಸಂಗದಲ್ಲಿ ಕಂಡುಬಂದರೆ, ಲೇಖ­ಕರು ಇದನ್ನು ಜಾತಿ ವ್ಯವಸ್ಥೆಯ ಪ್ರತಿಪಾದನೆ ಎನ್ನುತ್ತಾರೆ. ಅಂದರೆ ತದ್ವಿರುದ್ಧವಾದ ನಿರ್ಣಯಕ್ಕೆ ಬರಲು ಏನು ಕಾರಣ?  

   * ಕೃಷ್ಣನು ಆಧ್ಯಾತ್ಮಿಕನೂ ಅಲ್ಲ, ಜ್ಞಾನಿಯೂ ಅಲ್ಲ, ಆತನಿಗೆ ದೇವರಾಗುವ ಅರ್ಹತೆಗಳಿಲ್ಲ ಎಂದು ಕೃಷ್ಣನನ್ನು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರಿಗೆ ಹೋಲಿಸುತ್ತಾರೆ. ಅಂದರೆ ಕೃಷ್ಣನನ್ನು ಐತಿಹಾಸಿಕ (historical) ವ್ಯಕ್ತಿಯೆಂದು ಪರಿಗಣಿಸುವ ಮೂಲಭೂತ ತಪ್ಪನ್ನು ಅವರು ಮಾಡುತ್ತಾರೆ. ಮಾತ್ರವಲ್ಲ ಕೃಷ್ಣನು ಕೊಲೆಗೆ ಪ್ರೇರೇಪಿಸುವವನು ಹಾಗಾಗಿ ಆತ ತಪ್ಪಿತಸ್ಥ, ಅಪರಾಧಿ ಎಂದು ಆಗ್ರಹಿ­ಸು­ತ್ತಾರೆ. ಅದೇನೇ ಇರಲಿ ಕೃಷ್ಣ ಜ್ಞಾನಿಯಾಗಿರದೇ ಇರುವುದು ಜಾತಿ ವ್ಯವಸ್ಥೆಯ ಪ್ರತಿ ಪಾದನೆ­ಯಾಗುವುದು ಹೇಗೆ?

   * ಭಗವದ್ಗೀತೆಯ ರಚನೆಯಲ್ಲಿ ಹಾಗೂ ಅಲ್ಲಿನ ಪ್ರಮುಖ ಪಾತ್ರಗಳಲ್ಲಿ ಬ್ರಾಹ್ಮಣರ ಪಾತ್ರ ಇಲ್ಲವೆನ್ನುವ ಅವರೇ ಗೀತೆ­ಯಲ್ಲಿ ತುಂಬಿ­ರುವುದೆಲ್ಲಾ ಬ್ರಾಹ್ಮಣ ಮತವೇ ಹೊರತು ಬೇರಾ­ವುದೂ ಅಲ್ಲ ಎಂಬ ತೀರ್ಮಾನಕ್ಕೆ ಬರು­ತ್ತಾರೆ. ಈ ತೀರ್ಮಾನಕ್ಕೆ ಭಗವದ್ಗೀತೆ­ಯಲ್ಲಿ ಸಾಕ್ಷಿ­ಗಳಿಲ್ಲ. ಹಾಗಾದರೆ ಈ ತೀರ್ಮಾನದ ಮೂಲ ಎಲ್ಲಿದೆ?  ಒಟ್ಟಾರೆ ಈ ಮೇಲಿನ ಅಂಶಗಳು ಲೇಖನ­ದಲ್ಲಿನ ಗೊಂದಲ­ಗಳನ್ನು ತೋರ್ಪಡಿಸುತ್ತದೆ  ಹಾಗೂ ಲೇಖನ ತನ್ನ ವಾದವನ್ನು ಸಮರ್ಥಿಸುವ ಸಣ್ಣ ಪ್ರಯತ್ನವನ್ನೂ ಮಾಡದೇ ಇರುವುದು ಕಾಣುತ್ತದೆ.

   ಜಾತಿ ವ್ಯವಸ್ಥೆಯನ್ನು ಪ್ರತಿ­ಪಾದಿಸಿದ ಕೃತಿ­ಯೊಂದು ಗಾಂಧಿ, ಕುವೆಂಪು­ರವರಿಗೆ ಪ್ರೇರಕ ಶಕ್ತಿಯಾದು­ದಾದರೂ ಹೇಗೆ? ಲೇಖಕರು ಭಗವ­ದ್ಗೀತೆ­ಯಲ್ಲಿ ಏನಿದೆ ಎಂಬುದನ್ನು ಗ್ರಹಿಸು­ವಲ್ಲಿ ಸಂಪೂರ್ಣವಾಗಿ ವಿಫಲ­ವಾ­ಗಿ­­ದ್ದರೂ, ಅದೊಂದು ಅಪಾಯ­ಕಾರಿ ಗ್ರಂಥ ಎಂದು ತೀರ್ಪಿ­ಡುತ್ತಾರೆ. ಇವರು ಯಾವುದೇ ಸಂಗತಿ, ಪಠ್ಯ, ವ್ಯಕ್ತಿ­ಯನ್ನು ಅರ್ಥ ಮಾಡಿ­ಕೊಳ್ಳಲು ಜಾತಿ ವ್ಯವಸ್ಥೆಯನ್ನೇ ಮಾಪನ­ವಾಗಿ­ಟ್ಟು­ಕೊಂಡಿರು­ವುದು ದುರಂತ. ಹಾಗಾಗಿ ಲೇಖನದಲ್ಲಿ ಜಾತಿ ವ್ಯವ­ಸ್ಥೆಯ ಕುರಿತೂ ಸ್ಪಷ್ಟತೆ ಕಾಣುವುದಿಲ್ಲ, ಭಗವದ್ಗೀತೆ­ಯಲ್ಲಿ ಏನಿದೆ ಎಂಬುದರ ಪರಿ­ಚ­ಯವೂ ಆಗುವುದಿಲ್ಲ.

   ಹಾಗಿ­ದ್ದರೂ ಭಗವದ್ಗೀ­ತೆಯು ಜಾತಿ ವ್ಯವಸ್ಥೆಯನ್ನು ಪ್ರತಿ­ಪಾದಿಸು­ತ್ತದೆ ಎಂದು ಹೇಗೆ ನಿರ್ಣಯಿ­ಸಿ­ದರು? ಬಹುಶಃ ಗೀತೆ ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮ­ಗ್ರಂಥ ಎನ್ನುವ ಪೂರ್ವಗ್ರಹದ ಮೇಲೆ ಹುಟ್ಟಿದ ನಿರ್ಣಯ. ಸಂಸ್ಕೃತ ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಹುಟ್ಟುಹಾಕು­ತ್ತದೆ ಎಂಬ ವಸಾಹತು ತಿಳಿವಳಿಕೆಯ ಬೇರು ಲೇಖಕರ  ವಾದದಲ್ಲಿದೆ.

   ಭಗವದ್ಗೀ­ತೆಯು ಹಿಂದೂಗಳ ಧರ್ಮಗ್ರಂಥ ಎಂಬ ಪೂರ್ವಗ್ರಹವೇ, ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡ­ಬೇಕೆನ್ನುವ ಕೇಂದ್ರ ಸರ್ಕಾರದ ನಿಲುವಿಗೆ ಕಾರಣ ವಾದರೆ, ಅದೇ ಅಂಶವೇ ಲೇಖಕರ ಈ ವಾದಕ್ಕೂ ಕಾರಣ­ವಾಗಿದೆ. ಹಾಗಾಗಿ ಸರ್ಕಾರದ ನಿಲುವಿಗೂ, ಲೇಖಕರ ವಾದಕ್ಕೂ ಮೂಲಭೂತವಾಗಿರುವ ಸಾಮ್ಯತೆ ಇದೆ. ಎರಡೂ ವಾದಗಳಿಗೂ ವಸಾಹತು ಚಿಂತ­ನೆಯೇ ಮಾನ­ದಂಡವಾಗಿದ್ದು, ಈ ವಾದಗಳು ಭಗವದ್ಗೀತೆಯ ಜೊತೆಗೆ ಯಾವ ಸಂಬಂಧ­ವನ್ನೂ ಹೊಂದಿಲ್ಲದಿರುವುದು ವಿಪರ್ಯಾಸ. 
    
   ಭಗವದ್ಗೀತೆಯನ್ನು ಜನಸಾಮಾನ್ಯರು ರಿಲಿ­ಜ­ನ್ನಿನ ಗ್ರಂಥ­ವೆಂದಾಗಲೀ, ಜಾತಿವ್ಯವಸ್ಥೆಯ ಪಠ್ಯ­ವೆಂದಾಗಲೀ ನೋಡುವು­ದಿಲ್ಲ. ಅದರ ಜೊತೆ­ಗಿನ ನಮ್ಮ ಸಂಬಂಧವು ತೀರಾ ಭಿನ್ನವಾಗಿ­ರುತ್ತದೆ. ಗಾಂಧಿಗೆ ಒಂದು ರೀತಿಯಲ್ಲಿ ಪ್ರೇರಣೆಯನ್ನು ನೀಡಿ­ದರೆ, ಕುವೆಂಪು ಅವರಿಗೆ ಮತ್ತೊಂದು ರೀತಿ­ಯಲ್ಲಿ ಪ್ರೇರಕ ಶಕ್ತಿ­ಯಾಗಿತ್ತು. ಹೀಗೆ ಬೇರೆ ಬೇರೆ­ಯವರು ತಮ್ಮದೇ ಆದ ರೀತಿಯ ಸಂಬಂಧವನ್ನು ಗೀತೆಯೊಂದಿಗೆ ಹೊಂದಿರು­ತ್ತಾರೆ. ಹಾಗೆಂದು ಎಲ್ಲರೂ ಸಂಬಂಧ ಹೊಂದಿರಲೇ­ಬೇಕಾಗಿಯೂ ಇಲ್ಲ.

   ಅದರ ಜೊತೆಗೆ ಯಾವುದೇ ಸಂಬಂಧವಿಲ್ಲದ ಜನ­ಸಮುದಾಯಗಳೂ ಇವೆ. ಕೆಲ­ವ­ರಿಗೆ ಕೇವಲ ಕಥೆ­ಯಾಗಿಯೂ, ಇನ್ನು ಕೆಲವರಿಗೆ ಆಧ್ಯಾ­ತ್ಮಿಕ ಸಾಧನ­ವಾಗಿಯೂ, ಮತ್ತೆ ಹಲವರಿಗೆ ಜೀವನದ ಸಮಸ್ಯೆ­­ಗಳ ಪರಿ­ಹಾರಕ್ಕೆ ನಿರ್ದೇಶನಗಳಾಗಿಯೂ ಇದೆ. ಹೀಗಿರು­ವಾಗ ಇದ­ನ್ನೊಂದು ಧರ್ಮ­ಗ್ರಂಥ­ವೆಂದು ಹೇಳುವ ಮತ್ತು ಜಾತಿ ವ್ಯವಸ್ಥೆ ಪ್ರತಿಪಾದಿಸುತ್ತದೆ ಎನ್ನುವ ಎರಡೂ ವಾದಗಳೂ ನಮಗೆ ಪರಕೀಯವಾಗಿ ಕಾಣುತ್ತವೆ.”

   ಉತ್ತರ
   • Nagshetty Shetkar
    ಡಿಸೆ 25 2014

    ಮತ್ತದೇ ಹಳಸಲು ಬಾಲು ರಾವ್ ಗುಂಪಿನ ವಾದ! ಜಾತಿವ್ಯವಸ್ಥೆಯ ರಕ್ಷಣೆಗೆ ನಿಂತವರ ಹಳವಂಡ!

    ಉತ್ತರ
    • Naani
     ಡಿಸೆ 25 2014

     ಲೂಸು ಲೂಸಾಗಿ ಮಾತಾಡಿ ಅಜ್ಞಾನವನ್ನೇಕೆ ಪ್ರದರ್ಶಿಸ್ತಿದ್ದೀ? ಜಾತಿವ್ಯವಸ್ಥೆಯೇ ಅಸ್ತಿತ್ವದಲ್ಲಿಲ್ಲ ಎನ್ನುವವರ ವಾದ ಅದ್ಹೇಗೆ ಇಲ್ಲದಿರುವುದನ್ನು ರಕ್ಷಿಸಲು ಸಾಧ್ಯ? 150 ವರ್ಷಗಳಷ್ಟು ಹಳೆಯ ವಾದಗಳನ್ನು ಕಾಪಿಮಾಡುತ್ತಿರುವ ಕೆ ಎಸ್ ಭಗವಾನ್ ವಾದ ನವನವೀನವಾಗಿ ಕಾಣುವ ನಿನಗೆ ಇತ್ತೀಚೆಗೆ ಕಳೆದೊಂದು ದಶಕದಿಂದ ಬೆಳೆದು ಬರುತ್ತಿರುವ ಬಾಲು ಗುಂಪಿನ ವಾದ ಹಳಸಲು ಹಳವೆಂಡವಾಗಿ ಕಾಣಲು ನಿನ್ನ ಕಣ್ಣು ಮತ್ತು ುಮೆದುಳಿಗೆ ತುಕ್ಕು ಹಿಡಿದಿದೆಯೇ? ಈ ರೀತಿಯ ಅಜ್ಞಾನದ ಹೇಳಿಕೆಗಳಿಂದ ನಗೆಪಾಟೀಲು ಆಗೋ ಬದಲು ಪ್ರವೀಣರು ಎತ್ತಿ ತೋರಿಸಿರುವ ಭಗವಾನ್ ರ ವಾದದಲ್ಲಿ ಇರುವ ಪೊಳ್ಳುಗಳ ಬಗ್ಗೆ ಚಿಂತಿಸಿ. ಆಗಲಾದ್ರೂ ಭಗವಾನ್ ಮತ್ತು ನಿಮ್ಮಂತವರ ಮೆದುಳಿಗೆ ಹಿಡಿದಿರುವ ತುಕ್ಕು ಕಡಿಮೆಯಾಗಬಹುದು! 🙂

     ಉತ್ತರ
     • Nagshetty Shetkar
      ಡಿಸೆ 25 2014

      ಜಾತಿ ವ್ಯವಸ್ಥೆ ಅಸ್ತಿತ್ವದಲ್ಲೇ ಅಲ್ಲ ಅಂತ ವಾದ ಮಾಡುವುದೂ ಜಾತಿ ವ್ಯವಸ್ಥೆಯನ್ನು ಭದ್ರಪಡಿಸಲು ಮಾಡಿರುವ ಹುನ್ನಾರವೇ ಆಗಿದೆ.

      ಉತ್ತರ
      • Naani
       ಡಿಸೆ 25 2014

       ಹೌದೌದು…… ಹ್ಹ ಹ್ಹ ಹ್ಹ ಶರಣರ/ ಲಿಂಗಾಯತರ ಹೆಸರೇಳಿಕೊಂಡು ವಚನಗಳ ಹೆಸರಲ್ಲಿ ಇಸ್ಲಾಂನ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಆ ರೀತಿಯ ಯಾವ ಹುನ್ನಾರಗಳೂ ಇಲ್ಲ! ನಂಬಿ ಪ್ಲೀಸ್! 🙂 🙂 🙂 🙂 🙂 🙂 🙂

       ಉತ್ತರ
       • Nagshetty Shetkar
        ಡಿಸೆ 25 2014

        ಬಸವಣ್ಣನವರಿಗಾಗಲಿ ಇತರ ವಚನಕಾರರಿಗಾಗಲಿ ಇಸ್ಲಾಂ ಧರ್ಮದ ಪರಿಚಯವೇ ಇರಲಿಲ್ಲ. ಆದುದರಿಂದ ಬಸವಣ್ಣ ಆದಿ ವಚನಕಾರರು ವಚನಗಳ ಹೆಸರಿನಲ್ಲಿ ಇಸ್ಲಾಂ ವಿಚಾರಗಳನ್ನು ಪ್ರಚಾರ ಮಾಡಿದರು ಎಂಬ ತರ್ಕವೇ ಹಾಸ್ಯಾಸ್ಪದವಾಗಿದೆ. ಬಸವಣ್ಣನವರು ಮಾನವೀಯತೆ ಹಾಗೂ ಸಮಾನತೆಯನ್ನು ಬೋಧಿಸಿದ್ದಾರೆ. ಇಸ್ಲಾಂ ಕೂಡ ಪ್ರಗತಿಪರ ಧರ್ಮವಾದುದರಿಂದ ವಚನಕಾರರ ವಿಚಾರಗಳಿಗೂ ಇಸ್ಲಾಮಿನ ವಿಚಾರಗಳಿಗೂ ಒಂದು ಮಟ್ಟದ ಸಾಮ್ಯತೆ ಇದ್ದರೆ ಆಶ್ಚರ್ಯವೇನಿಲ್ಲ. ಆದರೆ ಹಿಂದೂ ಮತ ಆಚಾರ್ಯರು ಆಧ್ಯಾತ್ಮದ ಹೆಸರಿನಲ್ಲಿ ಜಾತೀಯತೆಯನ್ನು ಎತ್ತಿ ಹಿಡಿದಿದ್ದಾರೆ.

        ಉತ್ತರ
        • Naani
         ಡಿಸೆ 25 2014

         ಮತ್ತೆ ಲೂಸು ಲೂಸಾಗಿ… ಹ್ಹ ಹ್ಹ ಹ್ಹ …ನಾನು ಬಸವಣ್ಣರಾಗಲಿ ಇತರ ವಚನಕಾರರ ಬಗೆಗಾಗಲೀ ಅಲ್ಲ ಅವರನ್ನು ಉಲ್ಲೇಖಿಸಿ ಇಲ್ಲಿ ಶೇಟ್ಕರ್ ಹೆಸರಲ್ಲಿ ಬರೀತಾ ಇರೋ ದರ್ಗಾ ಬಗ್ಗೆ! 🙂 ವಚನಕಾರರ ಹೆಸರಲ್ಲಿ ಇಸ್ಲಾಂ ವಿಚಾರಗಳನ್ನೇ ಹೇರುತ್ತಿರೋರು ನೀವು! ನಾನು ಹೇಳಿದ್ದು ದರ್ಗಾ ಬಗ್ಗೆನೇ ಅಂತ ನಿಂಗೂ ಗೊತ್ತು! ಆದ್ರೂ ನಾಟಕ! Security ಗಾಗಿಯಾ??? ಹ್ಹ ಹ್ಹ ಹ್ಹ ಇನ್ನೂ ಸ್ವಲ್ಪದಿನ ಶರಣ ಸಂಪ್ರದಾಯವನ್ನು ಶತಶತಮಾನಗಳಿಂದ ಅನುಸರಿಸುತ್ತಿರುವ ಲಿಂಗಾಯತರೂ ಅವರ ಮಠಗಳೇ ನಿಮ್ಮ ಮುಖವಾಡ ಕಳಚಿ ಉಗೀತಾರೆ ನೋಡ್ತಿರಿ! Just wait and watch! ಈಗಾಗಲೇ ನಿಮ್ಮ ಮುಖವಾಡದ ಬಗ್ಗೆ ಅವರಿಗೆ ಅನುಮಾನ ಹುಟ್ಟಿದೆ! 🙂

         ಉತ್ತರ
         • Nagshetty Shetkar
          ಡಿಸೆ 25 2014

          ದರ್ಗಾ ಸರ್ ಅವರು ವಚನಕಾರರ ತತ್ವಗಳನ್ನೇ ಬೋಧಿಸಿದ್ದಾರೆ. ತಾನು ಇಸ್ಲಾಂ ಧರ್ಮದ ವಿಚಾರಗಳನ್ನು ವಚನಗಳ ಹೆಸರಿನಲ್ಲಿ ಬೋಧಿಸುತ್ತಿದ್ದೇನೆ ಅಂತ ದರ್ಗಾ ಸರ್ ಅವರು ಎಲ್ಲಿಯೂ ಹೇಳಿಲ್ಲ. ಆದುದರಿಂದ ಅವರ ಬಗ್ಗೆ ಅನುಮಾನ ಪಡುವ ಪ್ರಶ್ನೆಯೇ ಹುಟ್ಟುವುದಿಲ್ಲ. ದರ್ಗಾ ಸರ್ ಅವರ ವಚನವಿದ್ವತ್ತಿಗೆ ಸಾರಸ್ವತ ಲೋಕ ಬೆರಗಾಗಿದೆ, ಅನುಭಾವಿಗಳು ಪ್ರಸನ್ನರಾಗಿದ್ದಾರೆ, ಭವಿಗಳು ರೋಮಾಂಚನಗೊಂಡಿದ್ದಾರೆ, ಪುರೋಹಿತಶಾಹಿಯು ಬೆಚ್ಚಿ ಬಿದ್ದಿದೆ.

          ಉತ್ತರ
          • Naani
           ಡಿಸೆ 25 2014

           “ತಾನು ಇಸ್ಲಾಂ ಧರ್ಮದ ವಿಚಾರಗಳನ್ನು ವಚನಗಳ ಹೆಸರಿನಲ್ಲಿ ಬೋಧಿಸುತ್ತಿದ್ದೇನೆ ಅಂತ ದರ್ಗಾ ಸರ್ ಅವರು ಎಲ್ಲಿಯೂ ಹೇಳಿಲ್ಲ. ”

           ಹ್ಹ ಹ್ಹ ಹ್ಹ ಕಳ್ಳತನವನ್ನು ಕಳ್ಳನೇ ಒಪ್ಪಿಕೊಂಡಂತೆ! 🙂 ಇರಲಿ ಇಲ್ಲಿ ಪ್ರವೀಣರು ಎತ್ತಿತೋರಿಸುತ್ತದೆ ಸವಾಲುಗಳಿಗೆ ನಿಮ್ಮ ಭಗವಾನರು ಜವಾಬು ಕೊಡಲು ಹೇಳಿ! ಹುನ್ನಾರದ ಬಗ್ಗೆ ಮಾತಾಡಿದ್ದರಿಂದ ನಿಮ್ಮ ಹುನ್ನಾರಗಳಷ್ಟೇ ಜಗಜ್ಜಾಹೀರಾಗುತ್ತದೆ! 🙂

  • ಡಿಸೆ 25 2014

   ವಾಹ್ ! ಸ್ವಯಂ ಕೃಷ್ಣನೇ ಈ ಲೇಖನ ಓದಿದ್ದರೆ ಗೀತೆಯನ್ನು ಸುಟ್ಟುಹಾಕಿ ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಿದ್ದುದರಲ್ಲಿ ಸಂಶಯವಿಲ್ಲ ! ಅಂದಹಾಗೆ ವರ್ಣ ವ್ಯವಸ್ಥೆ ಇಲ್ಲದ ಆ ಧಮ್ಮದ ಸುತ್ತಗಳಲ್ಲಿ ‘ಅಮ್ಬಟ್ಟ ಸುತ್ತದ’ ಕತೆ ಏನು? ಅಮ್ಬಟ್ಟ ಎಂದರೆ ಏನು ಎಂದು ಯಾರಾದರೂ ವಿವರಿಸಿದರೆ ಕೃತಾರ್ಥನಾದೇನು ! ಅಲ್ಲದೆ ಸರ್ವಸಮತೆಯ ಆ ಧಮ್ಮವನ್ನು ಸ್ವೀಕರಿಸಿಯೇನು ! ಬುದ್ಧನ ಹಾಗೆ ‘ಹಂದಿ ಮಾಂಸ’ ತಿನ್ನಲು ನನಗಂತೂ ತುಂಬಾ ಆಶೆ !

   ಉತ್ತರ
   • Nagshetty Shetkar
    ಡಿಸೆ 25 2014

    ಅಣ್ಣ ಬಸವಣ್ಣನವರೂ ಪ್ರವಾದಿ ಮುಹಮ್ಮದ್ ಅವರೂ ಬುದ್ಧನ ಸಮಕಾಲೀನರಾಗಿದ್ದರೆ ಒಂದುಗೂಡಿ ಒಂದೇ ಧರ್ಮವನ್ನು ಪ್ರಪಂಚಕ್ಕೆ ಕೊಡುತ್ತಿದ್ದರು. ಆಗ ಪುರೋಹಿತಶಾಹಿಗಳ ಆಟ ನಡೆಯುತ್ತಿರಲಿಲ್ಲ. ದುರದೃಷ್ಟವಶಾತ್ ಇವರೆಲ್ಲ ಬೇರೆ ಬೇರೆ ಕಾಲದಲ್ಲಿ ಧರೆಗಿಳಿದರು.

    ಉತ್ತರ
    • Nagshetty Shetkar
     ಡಿಸೆ 25 2014

     ಮಾರ್ಕ್ಸ್ ಕೂಡ ಇವರ ಜೊತೆಗೆ ಇದ್ದಿದ್ದರೆ ಬಂಡವಾಳಶಾಹಿಗಳ ಆಟ ನಡೆಯುತ್ತಿರಲಿಲ್ಲ.

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments