ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 18, 2014

3

ಗೀತೆ ಅರ್ಥೈಸಿಕೊಳ್ಳಲು ತಯಾರಿಲ್ಲದವರ ವ್ಯರ್ಥ ವಿರೋಧ

‍ನಿಲುಮೆ ಮೂಲಕ

– ಡಾ. ಬಿ.ಕೆ ಸುರೇಶ್,ಮಂಡ್ಯ

ಭಗವದ್ಗೀತೆಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಬೇಕೆಂಬ ಪರ ವಿರೋಧದ ವಿಮರ್ಶೆಗಳಲ್ಲಿ “ದಾಯಾದಿಗಳ ಕಥನ ರಾಷ್ಟ್ರೀಯ ಗ್ರಂಥವಾಗಬೇಕೆ?” ಎಂದು ವಿಶ್ಲೇಷಿಸಿರುವ ಶ್ರೀ ವೆಂಕಟೇಶ್ ಕೆ ಜನಾದ್ರಿ ಅವರ ಆಲೋಚನೆ ವಿಚಿತ್ರವಾಗಿದೆ. ಕುರುಕ್ಷೇತ್ರ ಕದನದಲ್ಲಿ ಬುದ್ದ, ಕ್ರಿಸ್ತ, ಬಸವಣ್ಣ, ಗಾಂಧೀಜಿ ಮೊದಲಾದವರನ್ನೆಲ್ಲಾ ಎಳೆದು ತಂದು ಅವರೆಲ್ಲಾ ಇದ್ದಿದ್ದರೆ ಏನೇನು ಆಡುತ್ತಿದ್ದರು? ಏನೇನು ಸಂಭವಿಸುತ್ತಿತ್ತು? ಎಂಬುದನ್ನು ತಿಳಿಸಿದ್ದಾರೆ. ಖಂಡಿತವಾಗಿಯೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾರೇ ಇದ್ದಿದ್ದರೂ ಭಗವದ್ಗೀತೆ ಹುಟ್ಟುತ್ತಿರಲಿಲ್ಲ. ಅರ್ಜುನ ಉಳಿಯುತ್ತಲೂ ಇರಲಿಲ್ಲ. ಮಹಾಭಾರತದ ಅಸ್ತಿತ್ವವೇ ಇರುತ್ತಿರಲಿಲ್ಲ. ಗೀತೆ ಮತ್ತು ಕೃಷ್ಣನ ಮಹತ್ತ್ವ ಇರುವುದೇ ಅಲ್ಲಿ. ಭಗವದ್ಗೀತೆಯನ್ನು ಏನಕೇನ ವಿರೋಧಿಸಲೇ ಬೇಕೆಂಬ ಒಂದೇ ಒಂದು ಕಾರಣಕ್ಕೆ ಲೇಖಕರು ಕಾಲಧರ್ಮಕ್ಕನುಗುಣವಾಗಿ ಮಹಾಪುರುಷರು ಸಮಾಜವನ್ನು ಉದ್ದರಿಸಿದ್ದ ಸಂಗತಿಯನ್ನು ಮರೆತಿದ್ದಾರೆ. ಬುದ್ದನ ಕಾಲ ಮತ್ತು ಕಾಲಧರ್ಮವೇ ಬೇರೆ ಮತ್ತು ಬಸವಣ್ಣ ಕಾಲ ಮತ್ತು ಕಾಲಧರ್ಮವೇ ಬೇರೆ ಎಂಬ ಸಂಗತಿಯನ್ನು ಅವರು ಮರೆತಿದ್ದಾರೆ ಅಥವಾ ಮರೆತಂತೆ ನಟಿಸಿದ್ದಾರೆ. ಮಹಾಭಾರತ ಕಾಲದಲ್ಲಿ ಧರ್ಮವನ್ನು(ಪೂಜಾ ವಿಧಾನ ಎಂದು ಅರ್ಥೈಸಿಕೊಳ್ಳಬಾರದು) ಪ್ರತಿಪಾದನೆ ಮಾಡಬೇಕಾದ ವಿಧಾನ ಕೃಷ್ಣನದ್ದಾದರೆ ಬುದ್ದನ ಕಾಲದಲ್ಲಿ ಅದರ ವಿಧಾನ ಭೀನ್ನವೇ ಆಗಿರುತ್ತದಲ್ಲಾ. ನಮ್ಮ ಕಾಲದಲ್ಲಿ ಸ್ಲೇಟು ಹಿಡಿದು ಶಾಲೆಹೋಗುತ್ತಿದ್ದೆವು. ಈಗ ಮಕ್ಕಳು ಟ್ಯಾಬ್ಲಟ್ ಹಿಡಿದು ಹೋಗಲಾಗುತ್ತಿದೆ. ಹಾಗಾಗಿ ಸ್ಲೇಟೇ ಸರಿ ಇಲ್ಲ ಎನ್ನಲಾಗುತ್ತದೆಯೇ? ಬುದ್ದ ಮತ್ತು ಕೃಷ್ಣ ಇಬ್ಬರನ್ನೂ ಅವತಾರಿ ಪುರುಷರು ಎನ್ನುವ ನೆಲದಲ್ಲಿ ಅವೆರಡೂ ವಿಧಾನಗಳನ್ನು ನಮ್ಮ ದೇಶ ಒಪ್ಪಿದೆ. ಒಪ್ಪದೇ ಇರುವ ಮಾನಸಿಕತೆ ನಮ್ಮಲ್ಲಿ ಆರಂಭವಾಗಿದ್ದು ಕಮ್ಯುನಿಷ್ಟ ಚಿಂತನೆ ಸಮಾಜದಲ್ಲಿ ಪ್ರಚಾರಕ್ಕೆ ಬಂದ ಮೇಲಷ್ಟೆ. ತಮ್ಮ ಮೂಗಿನ ನೇರಕ್ಕೆ ವಾದಗಳನ್ನು ಮಂಡಿಸುವ ಇಂಥ ವಿಧಾನಗಳು ಪ್ರಚಲಿತಕ್ಕೆ ಬಂದಿರುವುದೂ ಕೂಡ ಕಮ್ಯುನಿಷ್ಟ್ ಚಿಂತನೆಯ ಪ್ರಚಾರದ ತರುವಾಯ.

ಇಂಥ ವಿತಂಡವಾದಗಳು ವಾಸ್ತವದಲ್ಲಿ ಎಸ್ಟೊಂದು ಅಪಾಯಕಾರಿಯಾದುದೆಂದರೆ ಭಗವದ್ಗೀತೆಯನ್ನು ದಾಯಾದಿಗಳ ಕಥನ ಎನ್ನುವವವರು ಕಾರ್ಗಿಲ್ ಯುದ್ದದ ಸಮಯದಲ್ಲಿ ನಮ್ಮ ಸೈನಿಕರಿಗೆ ಬುದ್ದಿವಾದ ಹೇಳಿ ‘ದೇಶಕ್ಕಾಗಿ ಯಾಕೆ ಕಾದುತ್ತೀರಿ? ಪಾಕಿಸ್ತಾನದವರು ಕಾರ್ಗಿಲ್ ಕೇಳಿದರೆ ಕಾಶ್ಮೀರವನ್ನೇ ಕೊಟ್ಟರಾಯಿತು ಎಂದು ಹೇಳುವಂತವರು ಹುಟ್ಟಿದರು. ಯುದ್ದದಲ್ಲಿ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸು ಎಂಬ ಕ್ರಿಸ್ತ /ಗಾಂಧಿಯ ತತ್ತ್ವವನ್ನು ಆರಚರಣೆ ತಂದಿದ್ದರೆ ಏನಾಗುತ್ತದೆ? ಅಷ್ಟಕ್ಕೂ ಭಗವದ್ಗೀತೆಯನ್ನು ದಾಯಾದಿಗಳ ಕಥನ ಎಂದು ಲೇಖಕರು ಹೇಗೆ ಹೇಳುತ್ತಾರೆ? ಗೀತಾ ಪ್ರಕರಣ ಮಹಾಭಾರತ ಮಧ್ಯದ ಒಂದು ಪ್ರಸಂಗವಷ್ಟೇ. ಮಹಾಭಾರತವನ್ನು ಯಾರೂ ದಾಯಾದಿಗಳ ಕಥನ ಎಂದು ಕರೆಯುವ ಸಾಹಸಕ್ಕೆ ಯಾರೂ ಕೈಹಾಕಲಾರರು. ಎಲ್ಲರಿಗೂ ಅದು ಕಂಡಿದ್ದು, ದಕ್ಕಿದ್ದು ಸಾಮಾಜಿಕ ಕಥನವೆಂಬುದಾಗಿ. ಪುರಾತನ ಕವಿಗಳಿಂದ ಹಿಡಿದು ಆಧುನಿಕ ಸಾಹಿತಿಗಳೆಲ್ಲರೂ ಮಹಾಭಾರತವನ್ನು ಬತ್ತಲಾರದ ಒರತೆ ಎಂದೇ ವಿಷ್ಲೇಷಿಸುತ್ತಾರೆ. ಧರ್ಮಾತೀತವಾಗಿ ಚಿಂತಿಸಿದರೆ ಮಹಾಭಾರತ ಮತ್ತು ಅದರೊಳಗಿನ ಭಗವದ್ಗೀತೆ ಯಾವ ಧರ್ಮಕ್ಕೂ ಸೇರತಕ್ಕದ್ದಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಾಗುತ್ತದೆ. ಕಮ್ಯುನಿಷ್ಟ ಚಿಂತನೆಯ ಜನಗಳು ಅದನ್ನು ಸುಲಭವಾಗಿ ಒಪ್ಪಲಾರರು. ಹಿಂದುಗಳು ಒಪ್ಪುವ ಯಾವುದನ್ನು ತಾನೇ ಅವರು ಒಪ್ಪಿದ್ದಾರೆ? ಗೀತೆಯ ಸಂಗತಿ ಬಿಡಿ. ಅದು ದಾಯಾದಿಗಳ ಕಥನ, ಅದಕ್ಕೆ ಇಂದು ಜೋತುಬೀಳುವುದು ಮೌಢ್ಯ ಎಂಬ ಲೇಖಕರ ವಾದವನ್ನೇ ಒಪ್ಪೋಣ. ಅವರು ಕೀಚಕನ ಪ್ರಕರಣವನ್ನು ಒಪ್ಪಲಾರರೇ? ತನ್ನ ಹೆಂಡತಿಯನ್ನು ಕೆಣಕಿದವನನ್ನು ಮಣಿಸುವ ಆಕ್ರೋಶ ಯಾವ ಗಂಡನಿಗೆ ತಾನೇ ಬರುವುದಿಲ್ಲ? ಗೀತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿರುವುದೂ ಹೀಗೆಯೇ.

ವೆಂಕಟೇಶ್ ರವರಂತಹ ಬುದ್ದಿಜೀವಿಗಳಿಗೆ ಒಂದು ಕಿವಿಮಾತು. ಭಗವದ್ಗೀತೆಯ ಮುತ್ತಿನಂತಹ ಮಾತುಗಳು ಎಲ್ಲ ಕಾಲಕ್ಕೂ ಸೂಕ್ತವಾದಂಥದ್ದು. ನೀವು ಉಲ್ಲೇಖ್ಹಿಸಿರುವ ಗಾಂಧೀಜಿ ಪಾರಾಯಣ ಮಾಡುತ್ತಿದ್ದದ್ದೂ ಅದೇ ನೀವು ವಿರೋಧಿಸಿದ ಗೀತೆಯನ್ನು, ಬುದ್ದ ಯಾರ ಸಾರಥಿಯಾಗಿರದಿದ್ದರೂ, ಯುದ್ದಕ್ಕೆ ಹೋಗದಿದ್ದರೂ ಜನರನ್ನು ಉದ್ದರಿಸಲು ಹೇಳಿದ್ದು ಗೀತೆಯಲ್ಲಿ ಕಾಣುವ ಸಂಗತಿಗಳನ್ನೇ. ನೀವು ಅಂದುಕೊಂಡಂತೆ ಗೀತೆ ಬರೀ ಯುದ್ದ ಪ್ರಚೋಧಕ ಗ್ರಂಥವಲ್ಲ. ಅಲ್ಲಿ ಯುದ್ದ ಒಂದು ಸಂದರ್ಭವಷ್ಟೆ ಹೊರತು ಯುದ್ದ ತರಬೇತಿಯನ್ನೇನೂ ಕೃಷ್ಣ ಅರ್ಜುನನಿಗೆ ನೀಡಲಿಲ್ಲ. ಗೀತೆಯಲ್ಲಿ ತಿಳಿಸಿದ ಜ್ಞಾನಯೋಗ, ಕರ್ಮಯೋಗ, ಸಂನ್ಯಾಸಯೋಗಗಳೂ ಬುದ್ದನ ಪ್ರವಚನಗಳೂ ಬೇರೆ ಬೇರೆಯೆಂದು ಯಾರಿಗಾದರೂ ಕಂಡರೆ ಅದು ಅವರ ಪ್ರಾರಬ್ದ. ಅದಕ್ಕೆ ಗೀತೆ ಹೊಣೆಯಲ್ಲ. ಗೀತೆ ಹೇಳುವ ಜೀವನ ಧರ್ಮ ಎಲ್ಲಾ ಕಾಲಕ್ಕೂ, ಎಲ್ಲಾ ವರ್ಗಕ್ಕೂ ಉಪಯೋಗಿ ಎಂಬುದು ಇಂದು ಸಿದ್ದಪಟ್ಟಿದೆ. ಕರುಣೆ ತೋರಬೇಕಾದಾಗ ಕರುಣೆ, ಧೈರ್ಯ ಬೇಕಾದಾಗ ಧೈರ್ಯ, ಪ್ರೀತಿಸುವ ಸಮಯದಲ್ಲಿ ಪ್ರೀತಿ, ಉದಾರತೆಗೆ ಉದಾರತೆ ಎಲ್ಲವನ್ನೂ ಕಟ್ಟಿಕೊಡುವ ಅಪರೂಪದ ಗ್ರಂಥ ಭಗವದ್ಗೀತೆ. ಗೀತೆಯ ಬಗ್ಗೆ ವ್ಯವಸ್ಥಿತ ಅಪಪ್ರಚಾರವನ್ನು ಮಾಡಲಾಗಿದೆಯೆಂದರೆ ಬಹುತೇಕ ಜನರು ವೆಂಕಟೇಶರಂತೆ ಮಾತಾಡುತ್ತಾರೆ. ಗೀತೆಯನ್ನು ಮುಸಲ್ಮಾನರ ಮತ್ತು ಕ್ರೈಸ್ತರ ಮತ ಗ್ರಂಥಕ್ಕೆ ಹೋಲಿಸಿ ಮಾತಾಡಲಾಗುತ್ತಿದೆ. ಆದರೆ ಗೀತೆ ಹೇಗೆ ತಾನೇ ಮತಗ್ರಂಥವಾಗುತ್ತದೆ? ಬೈಬಲ್ ಮತ್ತು ಖುರಾನ್ ಗಳು ಆಯಾಯ ಮತಗಳಿಗೆ ಪವಿತ್ರ ಗ್ರಂಥಗಳಾಗಿರಬಹುದು. ಆದರೆ ಅವು ಸಮಸ್ತ ಮಾನವ ಜನಾಂಗವನ್ನು ಪ್ರನಿಧಿಸುವ ಗ್ರಂಥಗಳಾಗಲಾರವು. ಅವು ಆಯಾಯ ಮತಗಳ ಪ್ರವಾದಿಗಳ ಸಂದೇಶಗಳು. ಹಾಗಾಗಿ ಅಯಾಯ ಮತಗಳಿಗೆ ಆಯಾಯ ಗ್ರಂಥಗಳೇ ಪ್ರಮಾಣಗಳು. ಆದರೆ ಹಿಂದೂ ಧರ್ಮಕ್ಕೆ ಭಗವದ್ಗೀತೆ ಪ್ರಮಾಣವೂ ಅಲ್ಲ. ಅದು ಹಿಂದೂ ಧರ್ಮದ ಪ್ರವಾದಿಯ ನಿರ್ಮಿತಿಯೂ ಅಲ್ಲ. ಭಗವದ್ಗೀತೆಯನ್ನು ಒಂದು ಜನಾಂಗದ ಮುಖವಾಣಿ ಎನ್ನಲು ಅಲ್ಲಿ ಯಾವ ಸಾಕ್ಷಿಗಳೂ ಇಲ್ಲ. ಅದನ್ನು ಅನ್ಯಾನ್ಯ ಜಾತಿಗಳ ಪ್ರಮಾಣ ಗ್ರಂಥಗಳನ್ನಾಗಿಸಲು ಸಾಕಷ್ಟು ಪಂಡಿತರು ಹೆಣಗಿದರೂ ಅದಿನ್ನೂ ಸಾಧ್ಯವಾಗಿಲ್ಲ. ಗೀತೆಯನ್ನು ನೋಡುವ ದೃಷ್ಟಿ ಇದು. ಗೀತೆಯನ್ನು ನೋಡುವ ದೃಷ್ಟಿ ಇಷ್ಟು.

ಗೀತೆಯ ಮಹತ್ವವನ್ನು ಸಾರುವ ಉಲ್ಲೇಖವೊಂದು ಮಹಾಭಾರತದಲ್ಲಿ ಬರುತ್ತದೆ. ಕುರುಕ್ಷೇತ್ರ ಯುದ್ದ ಮುಗಿದಿತ್ತು. ಪಾಂಡವರಿಗೆ ರಾಜ್ಯ ಸಿಕ್ಕಿ ಆಡಳಿತ ಮಾಡುತ್ತಿದ್ದರು. ಅದಾದ ಬಹುಕಾಲದ ನಂತರ ಕಷ್ಣನಿಗೆ ಪಾಂಡವರನ್ನೊಮ್ಮೆ ನೋಡಬೇಕೆನಿಸಿ ಹಸ್ತಿನಾವತಿಗೆ ತೆರಳಿದ. ಒಂದು ಮಧ್ಯಾನ್ಹ ಊಟವಾಗಿ ಅರ್ಜುನ ಕೃಷ್ಣನಿಗೆ “ವಾಸುದೇವ, ನೀನು ಆವತ್ತು ಯುದ್ದಭೂಮಿಯಲ್ಲಿ ನಾನು ಕುಸಿದಿದ್ದಾಗ ಹದಿನೆಂಟು ಅಧ್ಯಾಯಗಳ ಪ್ರವಚನವನ್ನು ಮಾಡಿದೆಯಲ್ಲ. ನನಗದು ಮರೆತುಹೋದಂತೆನಿಸುತ್ತಿದೆ. ಅದನ್ನು ಮತ್ತೊಮ್ಮೆ ಹೇಳುವೆಯಾ?” ಎಂದನಂತೆ. ಸಾಕಷ್ಟು ಕೆರೆಯ ನೀರು ಕುಡಿದಿದ್ದ ಕೃಷ್ಣ ಕೂಡ “ನನಗೂ ಮರೆತುಹೋಗಿದೆಯೆನಿಸುತ್ತದೆ” ಎಂದು ನೆನಪು ಮಾಡಿಕೊಂಡು ಹೇಳತೊಡಗಿದನಂತೆ. ಅದೂ ಹದಿನೆಂಟು ಅಧ್ಯಾಯಗಳ ಗೀತೆಯೇ. ಆದರೂ ಅದು ಭಗವದ್ಗೀತೆಯಂತೆ ಇರಲಿಲ್ಲವಂತೆ. ಅದು “ಅನುಗೀತೆ” ಎಂದು ಹೆಸರಾಯಿತಂತೆ. ಅದೇ ರೀತಿ ಹಲವು ಗೀತೆಗಳು ಮಹಾಭಾರತ ಮಧ್ಯೆದಲ್ಲೇ ಬರುತ್ತವೆ. ಆದರೆ ಜಗತ್ತು ಸ್ವೀಕರಿಸಿದ್ದು ಯುಧ್ಯ ಮಧ್ಯದಲ್ಲಿ ಹುಟ್ಟಿದ ಭಗವದ್ಗೀತೆಯನ್ನೇ. ಏಕೆಂದರೆ ಅದರಲ್ಲಿ ಒತ್ತಾಯವಿರಲಿಲ್ಲ. ಹೇರಿಕೆಯಿರಲಿಲ್ಲ. ಯಾರೊಬ್ಬನಿಗೂ ಅದು ಹೇಳಿದ್ದಾಗಿರಲಿಲ್ಲ. ಅಲ್ಲಿ ಅರ್ಜುನ ನಿಮಿತ್ತನಾಗಿದ್ದನೆನ್ನುವುದು ಪ್ರಚಲಿತ. ಗೀತೆ ಇಂದೂ ಇಷ್ಟವಾಗುವುದು ಅದಕ್ಕೆ. ಗೀತೆ ವಿಶ್ವಮಾನ್ಯವಾಗುತ್ತಿರುವುದು ಅದಕ್ಕೆ. ಬಲಿಷ್ಟನೆಂದು ಸಾಬೀತು ಪಡಿಸಿದವ ಶಾಂತಿ ಮಂತ್ರ ಪಠಿಸಿದರಷ್ಟೆ ಅದಕ್ಕೆ ಬೆಲೆ. ನಿಶ್ಶಕ್ತನೊಬ್ಬ ಶಾಂತಿ, ಕರುಣೆ, ಅಹಿಂಸೆ, ಪ್ರೀತಿ ಎಂದು ಕುಳಿತಿದ್ದರೆ ಅದು ‘ಕೈಲಾಗದವ ಮೈ ಪರಚಿ ಕೊಂಡಂತೆ’ ಆಗುತ್ತದೆ. ಅರ್ಜುನನನ್ನು ಯುದ್ಧ ಮಾಡಲು ಹುರಿದುಂಬಿಸಿ ಶೌರ್ಯ ಸಾಬೀತು ಪಡಿಸಿ ನಂತರ ಶಾಂತಿ, ನೆಮ್ಮದಿ, ಸಮೃದ್ಧತೆ ನೆಲೆಸುವಂತೆ ಮಾಡಿರುವ, ಸರ್ವಕಾಲಕ್ಕೂ ಜನರಿಗೆ ಮಾರ್ಗದರ್ಶನ ಮಾಡುತ್ತಿರುವ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಲಿ ಬಿಡಲಿ. ನಮಗೆಲ್ಲ ಹೆಮ್ಮೆಯ ಗ್ರಂಥ. ರಾಷ್ಟ್ರೀಯ ಗ್ರಂಥವೆಂಬ ಪಟ್ಟ ಅದರ ಭಗವದ್ಗೀತೆಯ ಮಹಿಮೆಯನ್ನು ಹೆಚ್ಚು ಮಾಡುವ ಮಾನದಂಡವಂತೂ ಅಲ್ಲ.

3 ಟಿಪ್ಪಣಿಗಳು Post a comment
 1. ಶಾರೂ
  ಡಿಸೆ 18 2014

  [[ಏಕೆಂದರೆ ಅದರಲ್ಲಿ ಒತ್ತಾಯವಿರಲಿಲ್ಲ. ಹೇರಿಕೆಯಿರಲಿಲ್ಲ. ಯಾರೊಬ್ಬನಿಗೂ ಅದು ಹೇಳಿದ್ದಾಗಿರಲಿಲ್ಲ. ಅಲ್ಲಿ ಅರ್ಜುನ ನಿಮಿತ್ತನಾಗಿದ್ದನೆನ್ನುವುದು ಪ್ರಚಲಿತ. ಗೀತೆ ಇಂದೂ ಇಷ್ಟವಾಗುವುದು ಅದಕ್ಕೆ. ಗೀತೆ ವಿಶ್ವಮಾನ್ಯವಾಗುತ್ತಿರುವುದು ಅದಕ್ಕೆ. ಬಲಿಷ್ಟನೆಂದು ಸಾಬೀತು ಪಡಿಸಿದವ ಶಾಂತಿ ಮಂತ್ರ ಪಠಿಸಿದರಷ್ಟೆ ಅದಕ್ಕೆ ಬೆಲೆ. ನಿಶ್ಶಕ್ತನೊಬ್ಬ ಶಾಂತಿ, ಕರುಣೆ, ಅಹಿಂಸೆ, ಪ್ರೀತಿ ಎಂದು ಕುಳಿತಿದ್ದರೆ ಅದು ‘ಕೈಲಾಗದವ ಮೈ ಪರಚಿ ಕೊಂಡಂತೆ’ ಆಗುತ್ತದೆ. ಅರ್ಜುನನನ್ನು ಯುದ್ಧ ಮಾಡಲು ಹುರಿದುಂಬಿಸಿ ಶೌರ್ಯ ಸಾಬೀತು ಪಡಿಸಿ ನಂತರ ಶಾಂತಿ, ನೆಮ್ಮದಿ, ಸಮೃದ್ಧತೆ ನೆಲೆಸುವಂತೆ ಮಾಡಿರುವ, ಸರ್ವಕಾಲಕ್ಕೂ ಜನರಿಗೆ ಮಾರ್ಗದರ್ಶನ ಮಾಡುತ್ತಿರುವ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸಲಿ ಬಿಡಲಿ. ನಮಗೆಲ್ಲ ಹೆಮ್ಮೆಯ ಗ್ರಂಥ. ರಾಷ್ಟ್ರೀಯ ಗ್ರಂಥವೆಂಬ ಪಟ್ಟ ಅದರ ಭಗವದ್ಗೀತೆಯ ಮಹಿಮೆಯನ್ನು ಹೆಚ್ಚು ಮಾಡುವ ಮಾನದಂಡವಂತೂ ಅಲ್ಲ.]]
  ನೀವು ಹೇಳುವದು ಸರಿ ಆದರೂ ಎಲ್ಲಾ ಹಿಂದೂಗಳಿಗೂ ಗೀತೆಯ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಅದೂ ಎಲ್ಲಾ ಭಾರತೀಯರ ಧರ್ಮ ಗ್ರಂಥ ಪವಿತ್ರ ಗ್ರಂಥವಲ್ಲದಿದ್ದರೂ ಕೋರ್ಟಿನಲ್ಲಿ ಅದನ್ನು ಮುಟ್ಟಿ ಸಾಕ್ಷಿ ಹೇಳಿಸುತ್ತಾರಲ್ಲಾ?? ಇದು ಸರೀನಾ?? ಎಲ್ಲರಿಗೂ ಅದರ ಗಂಧ ಗಾಳಿ ಗೊತ್ತಿಲ್ಲದಿದ್ದರೂ ಅದನ್ನು ರಾಷ್ಟ್ರೀಯ ಗ್ರಂಥ ಮಾಡಲು ಹೊರಟಿದ್ದು ಸರೀನಾ? ಗೀತೆಯ ಆರಾಧಕರಾದ ಬ್ರಾಹ್ಮಣರ ಮಕ್ಕಳಾದರೂ ಗೀತೆ ಓದಿದ್ದಾರಾ?? ಮೊದಲು ಅದರ ಮಹತ್ವ ಪ್ರತಿ ಭಾರತೀಯನಿಗೆ ತಿಳಿಸಿ ಹೇಳುವ ಪ್ರಯತ್ನಗಳು ನಡೆಯಲಿ. ಅಂದರೆ ಫೇಸ್ ಬುಕ್ಕು ಮತ್ತು ಇನ್ನಿತರ ಜಾಲತಾಣಗಳಲ್ಲಿ ಗೀತೆಯ ಶ್ಲೋಕಗಳು ಅರ್ಥ ಸಮೇತ ಬರಲಿ. ಚರ್ಚೆ ಆಗಲಿ. ನಮ್ಮ ಯುವಜನತೆ ಕೇವಲ ಜಾಲಿಗರಾದ್ದರಿಂದ ಇದು ಅನಿವಾರ್ಯವಾಗಿದೆ. ನಂತರ ಅದನ್ನು ರಾಷ್ಟ್ರೀಯ ಗ್ರಂಥ ಮಾಡಿದರೆ ಒಳ್ಳೆಯದು. ಕೇವಲ ರಾಜಕೀಯದವರ ಗಿಮಿಕ್ ಗೆ ಎಲ್ಲಾರೂ ಬಲಿ ಬೀಳುವದು ಬೇಡ. ರಾಜಕೀಯದವರಿಗೆ ಕೆಲವು ಸುದ್ದಿಗಳನ್ನು ಮರೆ ಮಾಚಬೇಕಾದಾಗ ಇಂಥ ಗಿಮಿಕ್ ಮಾಡ್ತಾರೆ. ಅಲ್ಲಿ ಅಮಿತ್ ರ ತಲೆ ಇರುತ್ತೆ.

  ಉತ್ತರ
 2. hemapathy
  ಡಿಸೆ 20 2014

  ಎಲ್ಲರಿಗೂ ಗೀತೆಯ ಅರ್ಥ ಅಷ್ಟು ಸುಲಭವಾಗಿ ಆಗುವುದಿಲ್ಲ. ಜೊತೆಗೆ ವೃದ್ಧಾಪ್ಯ ಬರುವವರೆಗೂ ಸರ್ವೇ ಸಾಮಾನ್ಯವಾಗಿ ಯಾರಿಗೂ ವೇದಾಂತ ಹಿಡಿಸುವುದಿಲ್ಲ. ಅದಕ್ಕೆ “ವೃದ್ಧ ನಾರೀ ಪತಿವ್ರತಾ – ವೃದ್ಧ ನರ ಸಂಭಾವಿತ” ಎಂಬ ಒಂದು ಗಾದೆಯೇ ಇದೆ. 60 ವಯಸ್ಸಾಗುತ್ತಲೇ ಬೇಡವೆಂದರೂ ವೇದಾಂತಕ್ಕೆ ಮನಸ್ಸು ತಿರುಗುತ್ತದೆ. ಹಾಗೆಯೇ ಭಗವದ್ಗೀತೆಯನ್ನು ಬರೆದವ ಕೂಡ ವಯಸ್ಸಾದ ಮಹನೀಯನೇ ಇರಬಹುದು. ಭಗವದ್ಗೀತೆಯನ್ನು ಆ ಕಣ್ಣಿಗೆ ಕಾಣದ ಕೈಗೂ ಸಿಗದ ಭಗವಂತನೆಂದು ಕರೆಸಿಕೊಂಡ ಕೃಷ್ಣನೇ ಖುದ್ದಾಗಿ ಹೇಳಿದ ಅಥವಾ ಹೇಳಿ ಬರೆಸಿದ ಎನ್ನುವುದಕ್ಕೆ ಯಾವುದೇ ಆಧಾರವೂ ಇಲ್ಲ. ಎಲ್ಲವೂ ಅಂತೆ ಕಂತೆ ಸಮಾಚಾರ. ವೇದಾಂತಗಳನ್ನು ಹೇಳಿದವರು, ಬರೆದವರು ಮನುಷ್ಯರೇ ಅನ್ನುವುದನ್ನು ನಾವು ತಿಳಿಯಬೇಕು. ಈ ಲೋಕದಲ್ಲಿ ಯಾರೂ ಪೆದ್ದರಲ್ಲ. ಎಲ್ಲರಿಗೂ ಎಲ್ಲವೂ ಅರ್ಥವಾಗುತ್ತದೆ. ಆದರೆ ವಯಸ್ಸಿಗೆ ತಕ್ಕಂತೆ ಬೇರೆ ಬೇರೆ ವಿಚಾರಗಳಲ್ಲಿ ಆಸಕ್ತಿ ಇರುತ್ತೆ. ಹೊಟ್ಟೆ ಹಸಿವಾದಾಗ ಊಟ ಬೇಕೇ ಹೊರತು ಭಗವದ್ಗೀತೆ, ಖುರಾನು, ಬೈಬಲ್ ನಂತಹ ವೇದಾಂತ ಪಾಠವಲ್ಲ.

  ಉತ್ತರ
 3. ಡಿಸೆ 23 2014

  ಪಾಶ್ಚಿಮಾತ್ಯ ಸಂಸ್ಥೆಗಳು, ಕ್ರಿಶ್ಚಿಯನ್ ಮಿಶನರಿಗಳು, ಕಮ್ಯುನಿಷ್ಟರು ಹಾಗೂ ಬುದ್ಧಿಜೀವಿಗಳೆಂದು ಕರೆಸಿಕೊಂಡವರಿಗೆ ಆಗಾಗ ಸನ್ಮಾನ, ಪ್ರಶಸ್ತಿ ಗಳನ್ನು ಕೊಟ್ಟು, ಅವರ ಮಿಥ್ಯಾ ಪ್ರತಿಭೆಯನ್ನು ಸುಖಾಸುಮ್ಮನೆ ಗುರುತಿಸಿ ಪ್ರಚಾರಕೊಟ್ಟು ನಡೆಸುವ ಷಡ್ಯ ತ್ರದ ಫಲವೇ ಈ ರೀತಿಯ ಆಲೋಚನೆಗಳು. ವೆಂಕಟೇಶರೂ ಇದಕ್ಕೆ ಹೊರತಲ್ಲ. ಎಲ್ಲಿಯೂ ಸಲ್ಲದ ಇಂಥ ಪ್ರತಿಭೆಗಳನ್ನು ಗುರುತಿಸುವಿದರಿಂದ ಇವರುಗಳು ತಮ್ಮ ಜೀವನ ನಿರ್ವಹಣೆಗೆ ಸನಾತನಧರ್ಮದ ವಿರೋಧಿಗಳ ಜಾಲದಲ್ಲಿ ಸಿಕ್ಕುಬೀಳುತ್ತಾರೆ.
  ಅಮೇರಿಕಾದ ಅಕಾಡೆಮಿಗಳು, ವೆಂಡೀ ಡೋನಿಗರ್, ಪಾಲ್ ಕೋರ್ಟ್ ರೈಟ್ , ಜೆಫ್ರಿ ಕೃಪಾಲ್, ಪಂಕಜ್ ಮಿಶ್ರಾ ,ವಿಲಿಯಂ ದಾರ ಲಿಮ್ಪಾಲ್ ಇಂತಹ ವಿಧ್ವಂಸಕ ಆದರೆ ಬಲಶಾಲಿ ಲೇಖಾಕಕರುಗಳು ಬರೆದ ಅರೆಬೆಂದ ವ್ಯಾಖ್ಯಾನಗಳನ್ನು ಓದುವ ಬುದ್ಧಿಜೀವಿಗಳು ಅದನ್ನೇ ಪ್ರಸಾದವೆಂದು ಸ್ವೀಕರಿಸಿ ಜೀರ್ನವಾಗದೆ ಅದನ್ನೇ ಮತ್ತೆ ವಾಂತಿ ಮಾಡಿ ಬಡಬಡಿಸುವುದೊಂದು ವಿಪರ್ಯಾಸ.
  Please read
  Lies with Long legs
  Breaking India
  Invading the sacred
  ಸನಾತನ ಧರ್ಮವನ್ನು ಒಡೆಯುವ ಹುನ್ನಾರ ನಿಮಗೂ ತಿಳಿಯಲಿ ಹಾಗೂ ಎಲ್ಲರಿಗೂ ಹರಡಿ.
  ಈ ಗೋಮುಖ ವ್ಯಾಘ್ರಗಳ ಜಾಲ ದಿಗ್ಭ್ರಮೆ ಹುಟ್ಟಿಸುವಂಥದ್ದಾಗಿದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments