ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 26, 2014

24

ಭಗವದ್ಗೀತೆಯ ಕುರಿತ ಪರಕೀಯ ನಿರೂಪಣೆಗಳು/ನಿರ್ಣಯಗಳು…!

‍ನಿಲುಮೆ ಮೂಲಕ

-ಡಾ. ಪ್ರವೀಣ್ ಟಿ. ಎಲ್.

ಉಪನ್ಯಾಸಕರು, ಕುವೆಂಪು ವಿಶ್ವವಿದ್ಯಾನಿಲಯ

ಭಗವದ್ಗೀತೆಭಗವದ್ಗೀತೆಯು ಸದಾ ಚರ್ಚೆಯಲ್ಲಿರುವ ವಸ್ತುವಿಷಯ. ಅದನ್ನು ಶಾಲೆಯಲ್ಲಿ ಭೋದಿಸುವ ಸಲುವಾಗಿ ಕಳೆದ ಬಾರಿ ಚರ್ಚೆಯಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡುವ ಆಶಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಹಲವು ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಲೇ ಇವೆ. ಮುಖ್ಯವಾಗಿ ಪ್ರಜಾವಣಿಯ ‘ಸಂಗತ’ದಲ್ಲಿ ಪ್ರಕಟವಾದ ಪ್ರೊ. ಭಗವಾನ್‍ರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ. ಹಾಗೆಂದು ಭಗವದ್ಗೀತೆ ರಾಷ್ಟೀಯ/ಧರ್ಮ ಗ್ರಂಥವಾಗಬೇಕೆಂಬ ಆಶಯ ನನ್ನದಲ್ಲ. ಬದಲಾಗಿ ‘ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸುವ ಒಂದು ಅಪಾಯಕಾರಿ ಕೃತಿ’ ಎನ್ನುವ ಹಾಗೂ ‘ಧರ್ಮಗ್ರಂಥ’ ಮಾಡಬೇಕೆನ್ನುವ ಎರಡೂ ವಾದಗಳು ಹೇಗೆ ನಮಗೆ ಪರಕೀಯವಾಗಿವೆ ಎಂಬುದನ್ನು ತೋರಿಸುವುದು.

ಲೇಖಕರು ತಮ್ಮ ವಾದದ ಸಮರ್ಥನೆಗೆ ನೀಡಿದ ಅಂಶಗಳು ಭಗವದ್ಗೀತೆಯು ಜಾತಿವ್ಯವಸ್ಥೆಯನ್ನು ಪ್ರತಿಪಾದಿಸಿದೆ ಎಂಬುದನ್ನು ಸಾಭೀತುಪಡಿಸಲು ಯಶಸ್ವಿಯಾಗಿಲ್ಲ.

1. ಗೀತೆಯಲ್ಲಿ ಉಲ್ಲೇಖವಾಗಿರುವ ‘ನಿರ್ವಾಣ’ ಎಂಬ ಪದದ ಬಳಕೆ. ಗೀತೆಗಿಂತ ಹಿಂದೆ ಬ್ರಾಹ್ಮಣ ಗ್ರಂಥದಲ್ಲಿ ಈ ಪದದ ಉಲ್ಲೇಖ ಇಲ್ಲವೆನ್ನುತ್ತಾರೆ, ಆದರೆ ಗೀತೆಯಲ್ಲಿ ಪದೇಪದೇ ಬಳಸಲಾಗಿದೆ ಎನ್ನುತ್ತಾರೆ. ಗೀತೆ ಬ್ರಾಹ್ಮಣರು ರಚಿಸಿದ್ದಲ್ಲ ಎನ್ನುವ ತೀರ್ಮಾನವನ್ನು ಒಪ್ಪುವ ಲೇಖಕರು, ಅದರಲ್ಲಿ ಬಳಕೆಯಾಗುವ ಪದ ಜಾತಿವ್ಯವಸ್ಥೆಯನ್ನು ಸಮರ್ಥಿಸುತ್ತದೆ ಎಂದು ಹೇಗೆ ತೀರ್ಮಾನಿಸಿದರು? ಹಾಗೂ ಗೀತೆಯು ಬೌದ್ಧರ ವಿರುದ್ಧದ ವೈದಿಕರ ಹೋರಾಟಕ್ಕೆ ಪ್ರಣಾಳಿಕೆಯಾಗಿ ಕೆಲಸ ಮಾಡಿದ್ದು ಹೇಗೆ?

2. ‘ವರ್ಣಸಂಕರವನ್ನು ತಡೆಯುವ ಉದ್ದೇಶದಿಂದ ಅರ್ಜುನನು ಯುದ್ಧ ಮಾಡಲು ನಿರಾಕರಿಸಿದ’ ಎಂದು ಅಭಿಪ್ರಾಯಪಡುವ ಲೇಖಕರು ಆ ನಂತರ ಯುದ್ಧ ನೆರವೇರಿಸಿದ್ದನ್ನು ಪರಿಗಣಿಸುವುದಿಲ್ಲ. ಜೊತೆಗೆ ಯುದ್ಧವನ್ನು ನಿರಾಕರಿಸಲು ಆತ ನೀಡಿದ ಕಾರಣವೇ ಬೇರೆ ಭಗವಾನ್ ನೀಡುವ ಕಾರಣವೇ ಬೇರೆ. ಭೀಷ್ಮ-ದ್ರೋಣಾಚಾರ್ಯರ ವಿರುದ್ಧ ಹೋರಾಡುವುದು ಮನಸಿಗೆ ದುಃಖವನ್ನುಂಟು ಮಾಡುತ್ತದೆ ಎಂಬುದು ನಿಜವಾದ ಕಥೆಯಾದರೆ, ಜಾತಿವ್ಯವಸ್ಥೆಯ ಪೋಷಣೆಗಾಗಿ ನಿರಾಕರಿಸಿದ ಎಂದು ತಿರುಚಿದ್ದಾರೆ.

3.‘ಅರ್ಜುನ ಯುದ್ಧ ಮಾಡುವುದಿಲ್ಲ’ ಎಂದು ಹೇಳಿದ್ದು,  ಕೃಷ್ಣ ಆತನನ್ನು ಯುದ್ಧ ಮಾಡುವಂತೆ ಪ್ರೇರೇಪಿಸಿದ್ದು ಎರಡೂ  ಏಕಕಾಲದಲ್ಲಿ ಜಾತಿವ್ಯವಸ್ಥೆಯ ಪ್ರತಿಪಾದನೆಗೆ ಸಾಕ್ಷಿಗಳಾಗುವುದು ಹೇಗೆ? ಲೇಖಕರು ಕೃಷ್ಣ ಭೋಧಿಸುವ ‘ಸ್ವಧರ್ಮ’ದ ಪ್ರತಿಪಾದನೆಯನ್ನು ತಮ್ಮ ವಾದಕ್ಕೆ ಸಮರ್ಥನೆಯಾಗಿ ಬಳಸುತ್ತಾರೆ. ‘ಸ್ವ ಧರ್ಮ’ ಏಂದರೆ ‘ತನ್ನ ಕರ್ತವ್ಯಗಳನ್ನು ನೆರವೇರಿಸು’ ಎಂಬರ್ಥ. ಕೃಷ್ಣ ಅರ್ಜುನನಿಗೆ ಕ್ಷತ್ರಿಯನಾಗಿ ನೀನು ನಿನ್ನ ಕರ್ತವ್ಯ ಪಾಲಿಸಬೇಕೆಯೇ ಹೊರತು ನಿನ್ನ ಕುಲ, ನಿನ್ನ ಪಂಗಡ, ಹಿರಿಯ-ಕಿರಿಯ, ಸಂಬಂಧಿ ಇದ್ಯಾವುದೂ ಮುಖ್ಯವಲ್ಲ ಎನ್ನುವ ಅರ್ಥ ಆ ಪ್ರಸಂಗದಲ್ಲಿ ಕಂಡುಬಂದರೆ, ಲೇಖಕರು ಇದನ್ನು ಜಾತಿವ್ಯವಸ್ಥೆಯ ಪ್ರತಿಪಾದನೆ ಎನ್ನುತ್ತಾರೆ. ಅಂದರೆ ತದ್ವಿರುದ್ಧವಾದ ನಿರ್ಣಯಕ್ಕೆ ಬರಲು ಏನು ಕಾರಣ?

4. ಕೃಷ್ಣನು ಆಧ್ಯಾತ್ಮಿಕನೂ ಅಲ್ಲ, ಜ್ಞಾನಿಯೂ ಅಲ್ಲ, ಆತನಿಗೆ ದೇವರಾಗುವ ಅರ್ಹತೆಗಳಿಲ್ಲ ಎಂದು ಕೃಷ್ಣನನ್ನು ಇಂದಿನ ರಾಮಕೃಷ್ಣ ಮತ್ತು ವಿವೇಕಾನಂದರಿಗೆ ಹೋಲಿಸುತ್ತಾರೆ. ಅಂದರೆ ಕೃಷ್ಣನನ್ನು ಐತಿಹಾಸಿಕ(historical)ವ್ಯಕ್ತಿಯೆಂದು ಪರಿಗಣಿಸುವ ಮೂಲಭೂತ ತಪ್ಪನ್ನು ಮಾಡುತ್ತಾರೆ. ಮಾತ್ರವಲ್ಲ ಆತ ಕೊಲೆಗೆ ಪ್ರೇರೇಪಿಸುವವನು ಹಾಗಾಗಿ ಆತ ತಪ್ಪಿತಸ್ಥ, ಅಪರಾಧಿ ಎಂದು ಆಗ್ರಹಿಸುತ್ತಾರೆ. ಅದೇನೆ ಇರಲಿ ಕೃಷ್ಣ ಜ್ಞಾನಿಯಾಗಿರದೇ ಇರುವುದು ಜಾತಿವ್ಯವಸ್ಥೆಯ ಪ್ರತಿಪಾದನೆಯಾಗುವುದು ಹೇಗೆ?

5. ಭಗವದ್ಗೀತೆಯ ರಚನೆಯಲ್ಲಿ, ಹಾಗೂ ಅಲ್ಲಿನ ಪ್ರಮುಖ ಪಾತ್ರಗಳಲ್ಲಿ ಬ್ರಾಹ್ಮಣರ ಪಾತ್ರ ಇಲ್ಲವೆನ್ನುವ ಅವರೇ ‘ಗೀತೆಯಲ್ಲಿ ತುಂಬಿರುವುದೆಲ್ಲಾ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ತೀರ್ಮಾನಕ್ಕೆ ಭಗವದ್ಗೀತೆಯಲ್ಲಿ ಸಾಕ್ಷಿಗಳಿಲ್ಲ. ಹಾಗಾದರೆ ಈ ತೀರ್ಮಾನದ ಮೂಲ ಎಲ್ಲಿದೆ?

ಒಟ್ಟಾರೆ ಈ ಮೇಲಿನ ಅಂಶಗಳು ಲೇಖನದಲ್ಲಿನ ಗೊಂದಲಗಳನ್ನು ತೋರ್ಪಡಿಸುತ್ತದೆ. ಹಾಗೂ ಲೇಖನ ತನ್ನ ವಾದವನ್ನು ಸಮರ್ಥಿಸುವ ಸಣ್ಣ ಪ್ರಯತ್ನವನ್ನೂ ಮಾಡದೇ ಇರುವುದು ಕಾಣುತ್ತದೆ. ಜಾತಿವ್ಯವಸ್ಥೆಯನ್ನು ಪ್ರತಿಪಾಧಿಸಿದ ಕೃತಿಯೊಂದು ಗಾಂಧಿ, ಕುವೆಂಪುರವರಿಗೆ ಪ್ರೇರಕ ಶಕ್ತಿಯಾದುದಾದರೂ ಹೇಗೆ? ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರೂ, ಅದೊಂದು ‘ಅಪಾಯಕಾರಿ ಗ್ರಂಥ’ ಎಂದು ತೀರ್ಪಿಡುತ್ತಾರೆ. ಇವರು ಯಾವುದೇ ಸಂಗತಿ, ಪಠ್ಯ, ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ‘ಜಾತಿವ್ಯವಸ್ಥೆ’ಯನ್ನೇ ಮಾಪನವಾಗಿಟ್ಟುಕೊಂಡಿರುವುದು ದುರಂತ. ಹಾಗಾಗಿ ಲೇಖನದಲ್ಲಿ ‘ಜಾತಿವ್ಯವಸ್ಥೆಯ ಕುರಿತೂ ಸ್ಪಷ್ಟತೆ ಕಾಣುವುದಿಲ್ಲ, ಭಗವದ್ಗೀತೆಯಲ್ಲಿ ಏನಿದೆ ಎಂಬುದರ ಪರಿಚಯವೂ ಆಗುವುದಿಲ್ಲ. ಹಾಗಿದ್ದರೂ ಭಗವದ್ಗೀತೆಯು ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ ಎಂದು ಹೇಗೆ ನಿರ್ಣಯಿಸಿದರು? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎನ್ನುವ ಪೂರ್ವಾಗ್ರಹದ ಮೇಲೆ ಹುಟ್ಟಿದ ನಿರ್ಣಯ. ಸಂಸ್ಕೃತ ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಹುಟ್ಟುಹಾಕುತ್ತದೆ ಎಂಬ ವಸಾಹತು ತಿಳುವಳಿಕೆಯ ಬೇರು ಇವರ ವಾದದಲ್ಲಿದೆ. ಭಗವದ್ಗೀತೆಯು ಹಿಂದೂಗಳ ‘ಧರ್ಮಗ್ರಂಥ’ ಎಂಬ ಪೂರ್ವಾಗ್ರಹವೇ, ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡಬೇಕೆನ್ನುವ ಕೇಂದ್ರದ ನಿಲುವಿಗೆ ಕಾರಣವಾದರೆ, ಅದೇ ಅಂಶವೇ ಲೇಖಕರ ಈ ವಾದಕ್ಕೂ ಕಾರಣವಾಗಿದೆ. ಹಾಗಾಗಿ ಕೇಂದ್ರದ ನಿಲುವಿಗೂ, ಲೇಖಕರ ವಾದಕ್ಕೂ ಮೂಲಭೂತವಾದ ಸಾಮ್ಯತೆ ಇದೆ. ಎರಡೂ ವಾದಗಳಿಗೂ ವಸಾಹತು ಚಿಂತನೆಯೇ ಮಾನದಂಡವಾಗಿದ್ದು, ಈ ವಾದಗಳು ಭಗವದ್ಗೀತೆಯ ಜೊತೆಗೆ ಯಾವ ಸಂಬಂಧವನ್ನೂ ಹೊಂದಿಲ್ಲದಿರುವುದು ವಿಪರ್ಯಾಸ.

ಭಗವದ್ಗೀತೆಯನ್ನು ಜನಸಾಮಾನ್ಯರು ರಿಲಿಜನ್ನಿನ ಗ್ರಂಥವೆಂದಾಗಲೀ, ಜಾತಿವ್ಯವಸ್ಥೆಯ ಪಠ್ಯವೆಂದಾಗಲೀ ನೋಡುವುದಿಲ್ಲ. ಅದರ ಜೊತೆಗಿನ ನಮ್ಮ ಸಂಬಂಧವು ತೀರಾ ಭಿನ್ನವಾಗಿರುತ್ತದೆ. ಗಾಂಧಿಗೆ ಒಂದು ರೀತಿಯಲ್ಲಿ ಪ್ರೇರಣೆಯನ್ನು ನೀಡಿದರೆ, ಕುವೆಂಪುರವರಿಗೆ ಮತ್ತೊಂದು ರೀತಿಯಲ್ಲಿ ಪ್ರೇರಕ ಶಕ್ತಿಯಾಗಿತ್ತು. ಹೀಗೆ ಬೇರೆ ಬೇರೆಯವರು ತಮ್ಮದೇ ಆದ ರೀತಿಯ ಸಂಬಂಧವನ್ನು ಗೀತೆಯೊಂದಿಗೆ ಹೊಂದಿರುತ್ತಾರೆ. ಹಾಗೆಂದು ಎಲ್ಲರೂ ಹೊಂದಿರಲೇ ಬೇಕಾಗಿಯೂ ಇಲ್ಲ. ಅದರ ಜೊತೆಗೆ ಯಾವುದೇ ಸಂಬಂಧವಿಲ್ಲದ ಜನಸಮುದಾಯಗಳೂ ಇವೆ. ಕೆಲವರಿಗೆ ಕೇವಲ ಕಥೆಯಾಗಿಯೂ, ಇನ್ನು ಕೆಲವರಿಗೆ ಆಧ್ಯಾತ್ಮಿಕ ಸಾಧನವಾಗಿಯೂ, ಮತ್ತೆ ಹಲವರಿಗೆ ಜೀವನದ ಸಮಸ್ಯೆಗಳ ಪರಿಹಾರಕ್ಕೆ ನಿರ್ದೇಶನಗಳಾಗಿಯೂ ಇದೆ. ಹೀಗಿರುವಾಗ ಇದನ್ನೊಂದು ಧರ್ಮಗ್ರಂಥವೆಂದು ಹೇಳುವ ಮತ್ತು ಜಾತಿವ್ಯವಸ್ಥೆ ಪ್ರತಿಪಾದಿಸುತ್ತದೆ ಎನ್ನುವ ಎರಡೂ ವಾದಗಳೂ ನಮಗೆ ಪರಕೀಯವಾಗಿ ಕಾಣುತ್ತವೆ.

24 ಟಿಪ್ಪಣಿಗಳು Post a comment
 1. Shubham Hegde
  ಡಿಸೆ 26 2014

  ಭಗವಾನ್ ಅವರ ಲೇಖನಕ್ಕೆ ಒಳ್ಳೆಯ ಪ್ರತಿಕ್ರಿಯೆ. ತಮಗೆ ಸರಿ ಅನ್ನಿಸಿದ್ದನ್ನೇ ಹೇಳುವುದೇ ಫ್ಯಾಶನ್ ಎಂದುಕೊಂಡಿರುವ ಚಿಂತಕರುಗಳಿಗೆ ತಡೆದು ನಿಲ್ಲಿಸಿ ಯೋಚಿಸುವಂತೆ ಮಾಡುವ ಒಂದು ಒಳ್ಳೆಯ ಪ್ರಯತ್ನ. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿದರೆ ಇನ್ನೂ ಉತ್ತಮ ಎನಿಸುತ್ತದೆ.
  1. ಭಗವದ್ಗೀತೆ ಜಾತಿವ್ಯವಸ್ಥೆಯನ್ನು ಪ್ರತಿನಿಧಿಸಿಲ್ಲ ಎಂದು ಹೇಳುವ ಮೂಲಕ ಭಗವಾನ್ ಅವರಿಗೆ ಪ್ರಶ್ನಿಸುವುದಷ್ಟೇ ನಿಮ್ಮ ಉದ್ದೀಶ್ಯವೆ?
  2. ಭಗವದ್ಗಿತೆ ಜಾತಿಯನ್ನು ಹೇಳಿಲ್ಲವಾದರೆ ಮತ್ತೇನನ್ನು ಹೇಳಿದೆ? ಅದನ್ನು ನೀವು ಸಂಕ್ಷಿಪ್ತವಾಗಿ ಹೇಳಿದ್ದರೆ ಉತ್ತಮವಾಗಿರುತ್ತಿತ್ತು?
  3.ಭಗವದ್ಗೀತೆ ಜಾತಿಯನ್ನು ಪ್ರತಿನಿಧಿಸದೆ ಹೋದರೆ ಕುವೆಂಪು, ಗಾಂಧಿ ಯವರಿಗೆ ಭಗವದ್ಗೀತೆ ಹೇಗೆ ಪ್ರೇರಕಶಕ್ತಿಯಾಗಿತ್ತು? ಎಂಬ ನಿಮ್ಮ ಪ್ರಶ್ನೆ ನಿಮ್ಮ ಲೇಖನದ ಒಟ್ಟಾರೆ ವಾದವನ್ನು ಬುಡಮೇಲು ಮಾಡುತ್ತದೆ. ಗಾಂಧಿಯವರ ಸಮಾಜ ಸುಧಾರಣೆ, ದೇವಾಲಯದ ಪ್ರವೇಶದ ಹೋರಾಟ, ಜಾತಿ ನಾಶವಾಗಬೇಕೆಂಬ ಹಂಬಲಗಳು ಜಾತಿವಿರುದ್ಧವಾಗಿರಲಿಲ್ಲವೆ? ಕುವೆಂಪುರವರ ನಾಟಕಗಳು, ಕಾದಂಬರಿಗಳು ಮತ್ತು ಆತ್ಮಕತೆ ಜಾತಿ ವಿರುದ್ಧದ ಕತೆಯನ್ನು ವ್ಯಕ್ತಪಡಿಸುತ್ತವೆ. ಕುವೆಂಪುರವರ ಅನೇಕ ಹೇಳಿಕೆಗಳು ಅವರು ಜಾತಿ ವಿರುದ್ಧ ಇದ್ದುದಾಗಿ ತೋರಿಸುತ್ತವೆ. ಆದ್ದರಿಂದ ಭಗವದ್ಗೀತೆಯು ಅವರಿಗೆ ಪ್ರೇರಕ ವಾದುದಲ್ಲಿ ಮತ್ತು ನೀವು ಹೇಳುವಂತೆ ಅದು ಜಾತಿಗೆ ಸಂಬಂಧಿಸಿಲ್ಲ ಎಂದು ಹೇಳುವಲ್ಲಿ ಏನು ಸಂಬಂಧ? ಗೀತೆ ಜಾತಿಯ ಬಗ್ಗೆ ಹೇಳಿಲ್ಲವಾದ್ದರಿಂದ ಅವರಿಗೆ ಪ್ರೇರಕವಾಯಿತು ಎಂದು ಹೇಳುತ್ತೀರಾ? ಸಾರಾಂಶಿಕವಾಗಿ, ಕುವೆಂಪು ಮತ್ತು ಗಾಂಧಿ ಜಾತಿ ವಿರುದ್ಧ ವಿರಲಿಲ್ಲ ಎಂದು ಹಾಗೆ ಗೀತೆಯು ಅದರ ವಿರುದ್ಧ ಇರಲಿಲ್ಲ ಎಂದು ನೀವು ವಿವರಿಸದಿದ್ದರೆ, ಚಿಂತಕರನ್ನು ಮತ್ತು ಗೀತೆಯನ್ನು ಒಟ್ಟಿಗೆ ಸೇರಿಸಿ ಕೇಳುವ ನಿಮ್ಮ ಪ್ರಶ್ನೆ ಎಲ್ಲಿಯೂ ಸಲ್ಲುವುದಿಲ್ಲ.

  ಇವಿಷ್ಟು ನನ್ನ ಅನುಮಾನಗಳು, ಉತ್ತರಿಸಿದರೆ ಮತ್ತಷ್ಟು ಅನುಮಾನಗಳನ್ನು ಹೊರಹಾಕಬಹುದು.

  ಉತ್ತರ
  • Praveen Konandur
   ಡಿಸೆ 26 2014

   ಉತ್ತಮ ಪ್ರಶ್ನೆಗಳು. ಉತ್ತರ ನೀಡುವ ಪ್ರಯತ್ನ…
   ೧. ಜಾತಿವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದೆ ಎನ್ನುವ ಜಾತ್ಯಾತೀತರ ವಾದವನ್ನು ಸಮರ್ಥಿಸುವ ಅಂಶಗಳಿಲ್ಲ ಎಂಬುದನ್ನು ತೋರಿಸುವ ಉದ್ದೇಶ. ಇರಲು ಸಾಧ್ಯವೂ ಇಲ್ಲ. ಏಕೆಂದರೆ ಜಾತಿವ್ಯವಸ್ಥೆಯು ವಸಾಹತುಶಾಹಿ ಸಂದರ್ಭದಲ್ಲಿ ಹುಟ್ಟಿಕೊಂಡ ಪರಿಕಲ್ಪನಾತ್ಮಕ ಚೌಕಟ್ಟು. ಈಗಲೂ ಅದು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ.
   ೨. ಅದನ್ನು ಸೂಚ್ಯವಾಗಿ /ಸರಳವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ.. ಕೆಲವರಿಗೆ ಆಧ್ಯಾತ್ಮಿಕ ಸಾಧನೆಗೆ ಸಾಧನವಾಗಿ, ಜವನದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪರೋಕ್ಷ ನಿರ್ದೇಶನಗಳಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿವೆ. ಆದರೆ ಈ ರೀತಿ ಅರ್ಥೈಸುವ ಸಾಧ್ಯತೆಯೇ ಇಂದು ಇಲ್ಲವಾಗಿದೆ. ಗೀತೆ ನೇರವಾಗಿ ಸಮಾಜದ ಕುರಿತು ಚಿತ್ರಿಸುವ ಸಿದ್ಧಾಂತಗಳಂತೂ ಅಲ್ಲವೇ ಅಲ್ಲ. ಅಥವಾ ವ್ಯಕ್ತಿ ಹೇಗೆ ವರ್ತಿಸಬೇಕು ವರ್ತಿಸಬಾರದು ಎಂದು ಹೇಳುವ ಬೈಬಲ್, ಕುರಾನ್ ತರದ ಗ್ರಂಥಗಳಂತೂ ಅಲ್ಲ.
   ೩. ಜಾತಿ ಕುರಿತ ಗಾಂಧಿ ಮತ್ತು ಕುವೆಂಪುರ ನಿಲುವುಗಳಿಗೆ ಗೀತೆ ಕಾರಣವಲ್ಲ. ಆದರೆ ಅವರುಗಳೇ ಹೇಳುವಂತೆ ಗೀತೆಯು ಅವರ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೇ ಆದರೆ, ಅವರ ಜೀವನದ ಧರ್ಮ, ಕರ್ತವ್ಯ, ಆಧ್ಯಾತ್ಮಿಕತೆಯ ವಿಚಾರಗಳಲ್ಲಿ. ಇದನ್ನು ಸ್ಪಷ್ಟವಾಗಿ ತೀರ್ಮಾನಿಸಬಹುದು. ಏಕೆಂದರೆ, ಹಿಂದೆ ಹೇಳಿದಂತೆ ಭಗವದ್ಗೀತೆಯಲ್ಲಿ ಜಾತಿ ಕುರಿತ ಅಂಶಗಳಿಲ್ಲದಿರುವಾಗ, ಆ ಕುರಿತ ಇವರ ನಿಲುವುಗಳನ್ನು ರೂಪಿಸಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ತರ್ಕ.

   ಉತ್ತರ
   • Shubham Hegde
    ಡಿಸೆ 27 2014

    ಧನ್ಯವಾದ ಪ್ರವೀಣ್ ಕೋಣಂದೂರು

    ನಿಮ್ಮ ಮೊದಲನೆಯ ಉತ್ತರ ತೃಪ್ತಿದಾಯಕವಾಗಿದ್ದರೂ ಅದರಲ್ಲಿರುವ ಎರಡನೆಯ ವಾಕ್ಯ ಸವಿಸ್ತಾರವಾದ ವಿವರಣೆಯನ್ನು ಬೇಡುತ್ತದೆ. ಒಂದು ಸಣ್ಣ ಉದಾ. ಜಾತಿವ್ಯವಸ್ಥೆಯು ಪರಿಕಲ್ಪನಾತ್ಮಕ ಚೌಕಟ್ಟು ವಸಾಹತುಶಾಹಿ ಸಂದರ್ಭದಲ್ಲಿ ಹುಟ್ಟಿದೆ ಈಗಲೂ ಅದು ಅವಾಸ್ತವಿಕ ಎನ್ನುವುದರಲ್ಲಿ ಸಣ್ಣ ತೊಂದರೆ ಇದೆ. ಆ ಚೌಕಟ್ಟು ಪರಿಕಲ್ಪನಾತ್ಮಕವಾದ್ದರಿಂದ (ಕಲ್ಪನೆಯ ಮೂಲಕ ನೀಡುವ ಒಂದು ವಿವರಣೆ ಅಂದುಕೊಳ್ಳುತ್ತೇನೆ) ಅದು ವಸಾಹತುಶಾಹಿಯ ಸಂದರ್ಭದಲ್ಲಿಯೂ ವಾಸ್ತವವಾಗಿರಲಿಲ್ಲ, ಈಗಲೂ ಇಲ್ಲ ಎನ್ನಬಹುದು. ಕಾರಣ ಅದು ಕಲ್ಪನಾ ಚೌಕಟ್ಟು. ಕಲ್ಪನೆಯು ಕೇವಲ ಕಲ್ಪನೆಯಷ್ಟೆ, ಅದು ವಾಸ್ತವವಲ್ಲ. ಹಾಗಿದ್ದ ಮೇಲೆ ಅದು ಅಂದು ಇತ್ತು ಇಂದಿಲ್ಲ ಎಂದು ಹೇಳಲು ಸಾಧ್ಯವೆ?ವಾಸ್ತವಿಕವಾಗಿ ಆ ಪರಿಕಲ್ಪನಾತ್ಮಕ ಚೌಕಟ್ಟು ಈಗಲೂ ಅಸ್ತಿತ್ವದಲ್ಲಿದೆ, ಇಲ್ಲದಿದ್ದರೆ ಅಂತಹ ಚೌಕಟ್ಟನ್ನು ಗುರುತಿಸಲು ನಿಮಗೂ ಸಾಧ್ಯವಾಗುತ್ತಿರಲಿಲ್ಲ.

    ಎರಡನೆಯ ಉತ್ತರವು ನನಗೆ ಅಸ್ಪಷ್ಟವಾದ ಗೊಂದಲಗಳನ್ನು ಹುಟ್ಟಿಸುತ್ತಿದೆ. ಭಗವದ್ಗೀತೆಯು ಆಧ್ಯಾತ್ಮಿಕ ಸಾಧನೆಗೆ ಸಾಧವಾಗಿ, ಜೀವನದ ಸಮಸ್ಯೆಗಳಿಗೆ ಪರೋಕ್ಷವಾಗಿ ಪರಿಹಾರ ಸೂಚಿಸುವ ಕಾರ್ಯವನ್ನು ಮಾಡುತ್ತದೆ ಎಂದಾದರೆ ಬೈಬಲ್ಗೂ ಅದಕ್ಕೂ ವ್ಯತ್ಯಾಸವೇನು? ಬೈಬಲ್ ಕೂಡ ಪರೋಕ್ಷವಾಗಿಯೇ (ಫಾದರ್, ಬ್ರದರ್ ಗಳ ಮೂಲಕ) ಜನರಿಗೆ ಸಂದೇಶಗಳನ್ನು ರವಾನಿಸುತ್ತದೆ. ಸಾಧ್ಯವಾದವರು ನೇರವಾಗಿ ಅದರ ನೆರವನ್ನು ಪಡೆಯುತ್ತಾರೆ, ಆಗದವರು ಧಾರ್ಮಿಕ ಮುಖಂಡರ ಮೂಲಕ ನೆರವನ್ನು ಪಡೆಯುತ್ತಾರೆ. ಗೀತೆಯು ಬದುಕಿನ ಸಮಸ್ಯೆಗಳಿಗೆ ಪರೋಕ್ಷವಾಗಿ ಪರಿಹಾರವನ್ನು ಸೂಚಿಸುತ್ತದೆ ಎಂದರೆ, ವ್ಯಕ್ತಿ ಹೇಗೆ ಯಾವ ಸಂದರ್ಭದಲ್ಲಿ ವರ್ತಿಸಬೇಕು ವರ್ತಿಸಬಾರದು ಎಂದು ಹೇಳಿದಂತೆ ಅನ್ನಿಸುತ್ತದೆ. ಹಾಗಾದರೆ ನೀವು ಹೇಳುವ ವ್ಯತ್ಯಾಸ ಏಕೋ ಸ್ಪಷ್ಟವಾಗುತ್ತಿಲ್ಲ ಎನಿಸುತ್ತಿದೆ.

    ಉತ್ತರ
    • praveen Konandur
     ಡಿಸೆ 27 2014

     ಶುಭಂ ಹೆಗಡೆ,
     ನಿಮ್ಮ ಮೊದಲನೆ ಪ್ರಶ್ನೆಗೆ ಸಂಬಂಧಿಸಿದಂತೆ, ಪರಿಕಲ್ಪನಾತ್ಮಕ ಎಂದರೆ, ಕಾಲ್ಪನಿಕ ಎಂದರ್ಥವಲ್ಲ. ನಾವು ‘ಜಾತಿವ್ಯವಸ್ಥೆ’ ಅಂದು ಇತ್ತು ಇಂದು ಇಲ್ಲ ಎಂದು ಎಲ್ಲೂ ಹೇಳಿಲ್ಲ. ಒಂದು ಪರಿಕಲ್ಪನಾತ್ಮಕ/ ಸೈದ್ಧಾಂತಿಕ ಚೌಕಟ್ಟಾಗಿ ಇಂದೂ ಅಸ್ತಿತ್ವದಲ್ಲಿದೆ. ಅದು ಹೇಗೆ ಇದೆ, ಅದರ ಹುಟ್ಟು ಹೇಗೆ ಎಂಬುದರ ಕುರಿತು ಈ ಹಿಂದೆ ‘ನಿಲುಮೆ’ಯಲ್ಲಿ ಪ್ರಕಟವಾದ ಈ ಲೇಖನ ಸಹಕಾರಿಯಾಗಬಹುದು.(ಜಾತಿವ್ಯವಸ್ಥೆ ಇಲ್ಲ ಎಂದರೆ…)
     https://nilume.net/2013/05/26/%E0%B2%9C%E0%B2%BE%E0%B2%A4%E0%B2%BF%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86-%E0%B2%87%E0%B2%B2%E0%B3%8D%E0%B2%B2-%E0%B2%8E%E0%B2%82%E0%B2%A6%E0%B2%B0%E0%B3%86/

     ನಿಮ್ಮ ಎರಡನೆಯ ಪ್ರಶ್ನೆಗೆ ಸುಧೀರ್ಘ ಉತ್ತರವನ್ನು ನೀಡಬೇಕಾಗುತ್ತದೆ. ಆದರೂ ಉತ್ತರಿಸುವ ಪ್ರಯತ್ನವನ್ನು ಮಾಡುವೆ.
     ಬೈಬಲ್ ಮತ್ತು ಭಗವದ್ಗೀತೆಯ ನಡುವೆ ಮೂಲಭೂತ ವ್ಯತ್ಯಾಸಗಳಿವೆ. ಬೈಬಲ್ ಕ್ರಿಶ್ಚಿಯನ್ನರೆಲ್ಲರಿಗೂ ಹೀಗೆ ಇರಲೇಬೇಕು, ಇದನ್ನು ಮಾಡಲೇಬಾರದು (ought to do it, ought not to do it) ಎಂಬರ್ಥದಲ್ಲಿ ನೇರವಾಗಿ ತಿಳಿಸುತ್ತದೆ. ಅಂದರೆ ಜನರಿಗೆ ಸ್ಪಷ್ಟವಾದ ನಿಯಮಗಳನ್ನು ಒದಗಿಸುತ್ತವೆ. ಆದರೆ ಗೀತೆ ಭಾರತೀಯರೆಲ್ಲರಿಗೂ ಅನ್ವಯವಾಗುವುದೇ ಇಲ್ಲ. ಹಾಗೂ ಮಾಡಲೇ ಬೇಕು ಮಾಡಲೇ ಬಾರದು ಎಂಬಂಥಹ ನಿಯಮಗಳಲ್ಲ. ವ್ಯಕ್ತಿಗಳು ತಮಗೆ ಬೇಕಾದ ರೀತಿಯಲ್ಲಿ ಅದರೊಂದಿಗೆ ಸಂಬಂಧವನ್ನುಹೊಂದುವ ಸಾಧ್ಯತೆಯನ್ನು ಹೊಂದಿದೆ. ಕೇವಲ ಕಥೆಯಾಗಿರಬಹುದು, ಮನರಂಜನೆಯ ಕಾರಣಕ್ಕಾಗಿಯೂ ಇರಬಹುದು, ಆಧ್ಯಾತ್ಮ ಸಾಧನೆಗಾಗಿಯೂ ಇರಬಹುದು, ಸಮಸ್ಯೆಗಳ ಪರಿಹಾರದ ಸೂಚನೆಗಳಿಗಾಗಿಯೂ ಇರಬಹುದು.
     ಉದಾ; ಗುರುಗಳ ವಿರುದ್ಧ ವಾಗ್ವಾಧಕ್ಕಿಳಿಯುವುದು ಸರಿಯೋ ತಪ್ಪೋ ಎಂಬಂತಹ ಸಂಕಟದ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಒಂದು, ಗುರುಗಳಿಗೆ ತಿರುಗಿ ಮಾತನಾಡುವುದು ತಪ್ಪು ಎಂಬ ನಿಲುವು, ಮತ್ತೊಂದೆಡೆ ನನಗೆ ಸರಿಯೆನಿಸದೇ ಇರುವುದನ್ನು ಖಂಡಿಸುವ ಪ್ರವೃತ್ತಿ. ಈ ಧರ್ಮಸಂಕಟವನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ? ಇದನ್ನು ಯಾರಿಗಾದರೂ ತಿಳಿಸಿದಾಗ, ಅವರು ನಿಮಗೆ ಭಗವದ್ಗೀತೆಯ ಪ್ರಸಂಗವೊಂದನ್ನು ತಿಳಿಸುತ್ತಾರೆ. ಅರ್ಜುನ ಯುದ್ಧಮಾಡಲು ಹಿಂಜರಿದುದು, ಆಗ ಅರ್ಜುನ ತಿಳಿಹೇಳುವುದು: ‘ಧರ್ಮ(ಒಳ್ಳೆಯದು ಎನ್ನುವ ಅರ್ಥದಲ್ಲಿ ಸದ್ಯಕ್ಕೆ ಪರಿಗಣಿಸೋಣ, ರಿಲಿಜನ್) ಸಂಸ್ಥಾಪನೆ’ಗಾಗಿ ಗುರು-ಹಿರಿಯರು, ಸಂಬಂಧಿಕರ ವಿರುದ್ಧವಾಗಿ ಹೋರಾಡುವುದು ಅನಿವಾರ್ಯ. ಇದು ನೇರವಾಗಿ ನಿಮ್ಮ ಸಮಸ್ಯೆಗೆ ಪರಿಹಾರವಾಗದಿದ್ದರೂ, ಅಲ್ಲಿ ಪರೋಕ್ಷವಾಗಿ ನಿಮಗೆ ಒಂದು ವಿಚಾರವನ್ನು ತಿಳಿಸುತ್ತದೆ: ಗುರುಗಳ ವಿರುದ್ಧ ‘ಒಳ್ಳೆಯದಕ್ಕಾಗಿ ವಾಗ್ವಾಧಕ್ಕಿಳಿಯುವುದು ಸರಿ’.
     ಅಂದರೆ ಜಗತ್ತಿನ ಜೊಗೆ ಹೇಗೆ ವ್ಯವಹರಿಸಬೇಕು ಎಂಬ ನಮ್ಮ ಕಲಿಕಾ ಪ್ರಕ್ರಿಯೆಯನ್ನು ರೂಪಿಸುತ್ತವೆ. ಈ ಉದಾಹರಣೆ ತುಂಬಾ ಸರಳ ಎನಿಸಬಹುದು, ಆದರೂ ನನ್ನ ಉತ್ತರವನ್ನು ಅರ್ಥಮಾಡಿಸಲು ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ. ಹಾಗೂ ಈ ಕುರಿತು ಸ್ವಲ್ಪ ಹೆಚ್ಚಿನ ಹಿನ್ನೆಲೆಗಾಗಿ ಈ ಕೊಂಡಿ ಸಹಕರಿಸುತ್ತದೆ. https://cslcku.wordpress.com/2014/03/21/%E0%B2%85%E0%B2%82%E0%B2%95%E0%B2%A3-%E0%B2%B5%E0%B2%B8%E0%B2%BE%E0%B2%B9%E0%B2%A4%E0%B3%81-%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E%E0%B3%86%E0%B2%AF-%E0%B2%B5%E0%B2%BF%E0%B2%B6-45/

     ಉತ್ತರ
    • ಷಣ್ಮುಖ
     ಡಿಸೆ 29 2014

     1. “ಈಗಲೂ ಅದು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ.” ಅಂತದ್ರೆ ಅದು ಆಗಲೂ ‘ವಾಸ್ತವಿಕ’ವಾಗಿರಲಿಲ್ಲ ಎಂದೇ ಅರ್ಥ. ಈ ಪರಿಕಲ್ಪನಾತ್ಮಕ ಚೌಕಟ್ಟು ಇಂದು ಇಲ್ಲ ಎಂದು ಪ್ರವೀಣರು ಹೇಳಿರುವುದು ನನಗೆ ಕಾಣುತ್ತಿಲ್ಲ! ನಿಮಗೆ ಕಂಡರೆ ಉಲ್ಲೇಖಿಸಿ.
     2. ಓರ್ವ ಕ್ರಿಶ್ಚಿಯನ್ನನಾಗಿ ಅಥವಾ ಮುಸ್ಲೀಂನಾಗಿ ಬದುಕುವುದೆಂದರೇನೇ ತನ್ನ ರಿಲಿಜನ್ನಿನ ‘ಪವಿತ್ರಗ್ರಂಥ’ಗಳಲ್ಲಿ ನಂಬಿಕೆ ಇಡುವುದು ಮತ್ತು ಅದರ ಪ್ರಕಾರ ಬದುಕುವುದೆಂದೇ ಅರ್ಥ. ಅಂದರೆ ಆ ರಿಲಿಜನ್ನುಗಳ ಡಾಕ್ಟ್ರಿನ್ನುಗಳೊಂದಿಗೆ ಆಯಾ ರಿಲಿಜನ್ನಿನವರಿಗೆ ಪ್ರತ್ಯಕ್ಷ ಸಂಬಂದವೇ ಇರುತ್ತದೆ. ಇಲ್ಲಿ ಪರೋಕ್ಷವೇನು ಬಂತು?! ಗೀತೆಯೊಂದಿಗಿನ ಇಲ್ಲಿಯ ಜನರ ಸಂಬಂದ ಆ ರೀತಿಯ ಸಂಬಂದವೇನೂ ಇಲ್ಲ. ಮತ್ತು ಇರಲು ಸಾಧ್ಯವೂ ಇಲ್ಲ. ಈ ರೀತಿಯ ಭಾರತೀಯ ಪುರಾಣ ಗ್ರಂಥಗಳು ಮಾನವ ಜೀವನದ ಜಂಜಾಟಗಳ ಕುರಿತು ಜಿಜ್ಞಾಸೆ ಮಾಡುತ್ತವೆ. ಆ ಮೂಲಕ ಪರೋಕ್ಷವಾಗಿ ನಮ್ಮ ಜನರ ಜೀವನದಲ್ಲಿ ಸಮಸ್ಯೆಗಳೆದುರಾದಾಗ ಈ ರೀತಿಯ (ಗೀತೆಯಲ್ಲಿರುವಂತಹ) ‘ಜಿಜ್ಞಾಸೆಗಳು’ ಪರಿಹಾರ ಇಲ್ಲವೇ ಸಮಾಧಾನ ಕಂಡುಕೊಳ್ಳುವ ‘ಮಾದರಿ’ಯನ್ನು ನೀಡುತ್ತವೆ. ಹಾಗಾಗಿ ಇದು ಪರೋಕ್ಷವಾಗಿ ಸಹಕಾರಿಯಷ್ಟೇ ಆದರೆ ಪ್ರತ್ಯಕ್ಷವಾಗಿ ನೀನು ಇದನ್ನೇ ಮಾಡು ಎನ್ನುವಂತಹ ಇದ ಮಿತ್ತಂ ಅಂತ ಯಾವುದನ್ನೂ ಹೇಳುವುದಿಲ್ಲ! ಕೊನೆಗೆ ಜಿಜ್ಞಾಸೆಯಿಂದ ಯಾವುದು ಧರ್ಮ (ಒಳ್ಳೆಯದು) ಎಂದು ಅನಿಸುತ್ತದೆಯೋ ಅದನ್ನು ಮಾಡು ಎನ್ನುವ ಸೂಚನೆಷ್ಟೇ ಸಿಗುತ್ತದೆ.

     ಉತ್ತರ
     • Nagshetty Shetkar
      ಡಿಸೆ 29 2014

      Mahabharata and Ramayana were designed to reinforce Brahmanism in the Hindu society. Both say Karma is your fate and just accept your state as fate. They gave false solace.

      ಉತ್ತರ
     • Nagshetty Shetkar
      ಡಿಸೆ 29 2014

      “ಮಾನವ ಜೀವನದ ಜಂಜಾಟಗಳ ಕುರಿತು ಜಿಜ್ಞಾಸೆ ಮಾಡುತ್ತವೆ.”

      show at least one instance where the plight of Dalits is discussed in these Brahminical works that do any kind of socio-economic analysis of Dalit life.

      ಉತ್ತರ
      • Nagshetty Shetkar
       ಡಿಸೆ 29 2014

       “ಪರಿಹಾರ ಇಲ್ಲವೇ ಸಮಾಧಾನ ಕಂಡುಕೊಳ್ಳುವ ‘ಮಾದರಿ’ಯನ್ನು ನೀಡುತ್ತವೆ”

       please show one example of how dalit problems can be solved with the help of Mahabharata and Ramayana? Don’t just bluff, u are Dalit yourself.

       ಉತ್ತರ
       • ಷಣ್ಮುಖ
        ಡಿಸೆ 29 2014
        • ಷಣ್ಮುಖ
         ಡಿಸೆ 30 2014

         ಮಾನ್ಯ ಶೇಟ್ಕರರೇ, ನೀವು ಈ ಲೇಖನಕ್ಕೆ ಸಂಬಂದಿಸಿದಂತೆ ಇನ್ನೊಂದು ಲೇಖನದ ಚರ್ಚೆಯಲ್ಲಿ ಎತ್ತಿದ ಪ್ರಶ್ನ ಇದು:
         “ದಲಿತರು ಮಹಾಭಾರತ ಹಾಗೂ ರಾಮಾಯಣಗಳ ಸಹಾಯದಿಂದ ತಮ್ಮ ಯಾವ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂಬುದನ್ನು ಕನಿಷ್ಠ ಒಂದು ನಿದರ್ಶನದ ಮೂಲಕವಾದರೂ ವಿವರಿಸಿ. ಅಷ್ಟೇ ಅಲ್ಲ, ಮಹಾಭಾರತ ಹಾಗೂ ರಾಮಾಯಣ ಕಾವ್ಯಗಳು ದಲಿತರ ಯಾವ ಸಮಸ್ಯೆಗಳ ಜಿಜ್ಞಾಸೆ ನಡೆಸಿವೆ ಎಂಬುದನ್ನೂ ದಯವಿಟ್ಟು ತಿಳಿಸಿ.”

         1. ನೀವು ಮೊದಲನೆಯದಾಗಿ ಎಲ್ಲವನ್ನೂ ಕೋಮು/ಜಾತಿಗಳ ಹಿನ್ನೆಲೆಯಿಂದಲೇ ಎಲ್ಲವನ್ನೂ ನೋಡುವ/ ಉತ್ತರಗಳನ್ನು ಹುಡುಕುವ ಚಾಳಿಯನ್ನಿಟ್ಟುಕೊಂಡಿದ್ದೀರಿ ಅಂತ ಹಿಂದಿನ ಪಠ್ಯಗಳೆಲ್ಲವೂ ಅದೇ ರೀತಿಯಲ್ಲಿ ಮಾತನಾಡಬೇಕಿತ್ತಂದೇನೂ ಇಲ್ಲವಲ್ಲ! ‘ದಲಿತ’ ಎನ್ನುವ ಪರಿಕಲ್ಪನೆಯೇ ಅತ್ಯಂತ ಆಧುನಿಕವಾದದು! ಹೇಳಬೇಕೆಂದರೆ ಕೆಳಜಾತಿ ಮೇಲ್ಜಾತಿಗಳೆಂದು ಮಾತನಾಡಲು ಆರಂಭಿಸಿದ ಫುಲೆ/ಪೆರಿಯಾರ್ ನಂತವರೇ ‘ದಲಿತ’ ಪರಿಕಲ್ಪನೆಯನ್ನು ಬಳಸಿಲ್ಲ! ಅಷ್ಟೇ ಏಕೆ ಅಂಬೇಡ್ಕರರೇ ಬಳಸಿಲ್ಲ! ಅಂತದ್ದರಲ್ಲಿ ರಾಮಾಯಾಣ ಮಹಾಭಾರತ ಗೀತೆಗಳಂತಹ ಪಠ್ಯಗಳು ಇದರ ಬಗ್ಗೆ ಏನು ಜಿಜ್ಞಾಸೆ ಮಾಡಿವೆ ಎನ್ನುವುದು ಹಾಸ್ಯಾಸ್ಪದವಲ್ಲವೇ?

         2. ‘ಮಾನವರ ಜೀವನದಲ್ಲಿ ಎದುರಿಸುವ ಸಮಸ್ಯೆಗಳು’ ಎಂದಾಗ ಅವನ್ನು ಜಾತಿ/ಸಮುದಾಯಗಳ ಸಮಸ್ಯೆಗಳು ಎಂದೇ ನೋಡಬೇಕೆ? ಅದನ್ನು ವೈಯುಕ್ತಿಕ ನೆಲೆಯಲ್ಲಿ ಎದುರಾಗುವ ಭೌತಿಕ-ಮಾನಸಿಕ ತೊಳಲಾಟಗಳೆಂದು ಭಾವಿಸಬಾರದೆ? ನಿಮ್ಮ ರೀತಿಯಲ್ಲಿ ಮಾತನಾಡಹೋದರೆ ಅದೇ ರೀತಿಯ ಪ್ರಶ್ನೆ ‘ಬುದ್ದ’ನ ಕುರಿತೂ ಮತ್ತು ಬೌದ್ದ ಪಠ್ಯಗಳ ಕುರಿತೂ ಹುಟ್ಟಿಕೊಳ್ಳುತ್ತವೆ. ಹಾಗಾಗಿ, ಮನುಷ್ಯರು ಲೌಕಿಕ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೆ ಈ ಪಠ್ಯಗಳಲ್ಲಿರುವ ಜಿಜ್ಞಾಸೆಗಳು ಒಂದು ರೀತಿಯಲ್ಲಿ ಮಾನಸಿಕ ಸಾಂತ್ವಾನ ನೀಡುವ ಆಪ್ತಸಮಾಲೋನೆ ಯ ರೀತಿಯಲ್ಲಿ ನೆರವಾಗುತ್ತವೆ. ಹೀಗಿದ್ದ ಪಕ್ಷದಲ್ಲಿ ಓರ್ವ ತನ್ನ ಕೌಟಂಭಿಕ ತೋಳಲಾಟದ ಸಂಧರ್ಭದಲ್ಲಿ ಅಥವಾ ಮಾನಸಿಕ ತೊಳಲಾಟಗಳಿಂದ ಪರಿಹಾರ ಪಡೆಯಲು ಓರ್ವ ಆಪ್ತಸಮಾಲೋಚನ ತಜ್ಞನಲ್ಲಿ (ಸೈಕಿಯಾಟ್ರಿಸ್ಟ್) ಹೋಗಿ ಆಲ್ಲಿ ನಿಮ್ಮ ರೀತಿಯ ಪ್ರಶ್ನೆಗಳನ್ನು ಕೇಳಲು ಸಾಧ್ಯವೇ? ಇದನ್ನು ಪರೀಕ್ಷಿಸಬೇಕೆಂದರೆ ಆದಷ್ಟು ಶೀಘ್ರ ನೀವು ಓರ್ವ ‘ಆಪ್ತಸಮಾಲೋಚಕ ತಜ್ಞ’ರನ್ನು ಭೇಟಿಯಾಗಿ.

         ಉತ್ತರ
         • ಷಣ್ಮುಖ
          ಡಿಸೆ 30 2014

          ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಬಹಳ ಬೆಲೆಬಾಳುವ ಯಾವುದೋ ವಸ್ತು, ಆಸ್ತಿ, ಹಣ, ವ್ಯಕ್ತಿಯಸಂಬದ ವನ್ನಕು ಕಳಕೊಂಡು ಅತ್ಯಂತ ತೀವ್ರ ದುಃಖದಲ್ಲಿರುವಾಗ ಗೀತೆಯ ಸಾರವೆಂದು ಹೇಳಲಾಗುವ ಈ ಸಾಲುಗಳು ಸಾಂತ್ವಾನ ನೀಡಲಾರವೇ? :

          ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ
          ಆಗುವದೆಲ್ಲ ಒಳ್ಳೆಯದೇ ಆಗುತ್ತಿದೆ
          ಆಗಲಿರುವುದು ಅದೂ ಒಳ್ಳೆಯದೇ ಆಗಲಿದೆ
          ರೋಧಿಸಲು ನೀನೇನು ಕಳೆದುಕೊಂಡಿರುವೆ?
          ಕಳೆದುಕೊಳ್ಳಲು ನೀನು ತಂದಿರುವದಾದರೂ ಏನು?
          ನಾಶವಾಗಲು ನೀನು ನಿರ್ಮಾಣ ಮಾಡಿರುವದಾದರೂ ಏನು?
          ನೀನೇನು ಪಡೆದಿದ್ದರು ಅದನ್ನ ಇಲ್ಲಿಂದಲೇ ಪಡೆದಿರುವೆ
          ಏನನ್ನು ನೀಡಿದ್ದರೂ ಅದನ್ನು ಇಲ್ಲಿಗೆ ನೀಡಿರುವೆ
          ನಿನ್ನೆ ಬೇರೆಯಾರೋದ್ದೋ ಆಗಿದದ್ದು ಇಂದು ನಿನ್ನದಾಗಿದೆ ಮತ್ತು
          ನಾಳೆ ಇನ್ನಯಾರದ್ದೋ ಆಗಲಿದೆ
          ಪರಿವರ್ತನೆ ಜಗದ ನಿಯಮ.

          🙂

          ಉತ್ತರ
          • Nagshetty Shetkar
           ಡಿಸೆ 30 2014

           ಷಣ್ಮುಖ ಅವರೇ, ಸಿ ಎಸ ಎಲ್ ಸಿ ಅನ್ನು ಮುಚ್ಚಿದಾಗ ನಿಮಗೂ ಈ ಮೇಲಿನ ಸಾಲುಗಳು ಪ್ರಯೋಜನಕ್ಕೆ ಬಂದಿರಬೇಕು ಅಲ್ಲವೇ? ಅಂತೂ ಸಿ ಎಸ ಎಲ್ ಸಿ ಮುಚ್ಚಿದ್ದು ಒಳ್ಳೆಯ ಕೆಲಸ ಅಂತ ನೀವೂ ಒಪ್ಪುತ್ತೀರಿ! ಅಲ್ಲವೇ?

          • ಷಣ್ಮುಖ
           ಡಿಸೆ 30 2014

           ಹ್ಹ ಹ್ಹ ಹ್ಹ ಖಂಡಿತಾ! ಅದರಿಂದ ತಾನೆ ಪ್ರಗತಿಪರರ ಸೋಗಿನಲ್ಲಿರುವ ಫ್ಯಾಸಿಸ್ಟರ ಮುಖವಾಡ ಕಳಚಿಬಿದ್ದಿದ್ದು! 🙂

          • Nagshetty Shetkar
           ಡಿಸೆ 30 2014

           ನಮ್ಮ ಸೆಂಟರ್ ಫಾರ್ ವಚನ ಸ್ಟಡೀಸ್ ನೋಡಿ ಕಲಿಯಿರಿ ಒಂದು ಸಂಶೋಧನಾ ಸಂಸ್ಥೆಯನ್ನು ಹೇಗೆ ನಡೆಸಬೇಕು ಯಾವ ರೀತಿಯ ಸಂಶೋಧನೆ ಮಾಡಬೇಕು ಅಂತ.

          • ಷಣ್ಮುಖ
           ಡಿಸೆ 30 2014

           🙂

  • ಡಿಸೆ 26 2014

   ಗಾಂಧಿ ಮತ್ತು ಕುವೆಂಪು ರವರಿಗೆ ಗೀತೆ ಬೇರೆ -ಬೇರೆ ರೀತಿಯಲ್ಲಿ ಪ್ರೇರಣೆಯನ್ನು ಒದಗಿಸಿದಂತೆ ವ್ಯಕ್ತಿಗಳು ವಿಧವಿಧವಾಗಿ ಗೀತೆಯನ್ನು ಸಮೀಪಿಸುವ ಸಾಧ್ಯತೆಗಳಿವೆಯೆಂದು ಬೊಟ್ಟುಮಾಡುವುದು ಬಹುಶಃ ಲೇಖಕರ ಉದ್ದೇಶವಾಗಿದ್ದಿರಬೇಕು.

   ಉತ್ತರ
 2. M A Sriranga
  ಡಿಸೆ 26 2014

  ಶುಭಂ ಹೆಗಡೆ ಅವರಿಗೆ —ನಿಮ್ಮ ಪ್ರತಿಕ್ರಿಯೆಯಲ್ಲಿನ 3ನೇ ಅಂಶದಲ್ಲಿ ಪ್ರಸ್ತಾಪಿತವಾಗಿರುವ ಗಾಂಧಿಯವರ ವಿಚಾರದ ಬಗ್ಗೆ ಪೂರಕವಾಗಿ ಬೆಂಗಳೂರಿನಿಂದ ಪ್ರಕಟವಾಗುವ ‘ಸಂಚಯ’ ಸಾಹಿತ್ಯಿಕ ದ್ವೈಮಾಸಿಕದ ೧೦೫ನೇ ಸಂಚಿಕೆಯಲ್ಲಿ (ಜುಲೈ–ಆಗಸ್ಟ್ ೨೦೧೪) ಪ್ರಕಟವಾಗಿರುವ “ನಮ್ಮ ಪ್ರಗತಿಪರ ಚಿಂತನೆ ಎಡವಿದ್ದೆಲ್ಲಿ?” ಎಂಬ ಲೇಖನ ಮತ್ತು ಕುವೆಂಪು ಅವರ ಬಗ್ಗೆ ಸಿ ಪಿ ಕೆ ಅವರು ಬರೆದಿರುವ “ಮಹಾಕವಿಯೊಡನೆ ಮಾತುಕತೆಗಳು” ಪುಸ್ತಕವನ್ನು ತಾವು ಗಮನಿಸಿದರೆ ಜಾತೀಯತೆ ಮತ್ತು ಜಾತ್ಯಾತೀತತೆಗಳ ಬಗ್ಗೆ ಬೇರೊಂದು ಚಿಂತನೆ ಕಾಣಬಹುದು.

  ಉತ್ತರ
 3. ಗಿರೀಶ್
  ಡಿಸೆ 29 2014

  ಕನ್ನಡದಲ್ಲಿಲ್ಲದ ಪ್ರತಿಕ್ರಿಯೆಗಳನ್ನು ದಯವಿಟ್ಟು ಪ್ರಕಟಿಸಬೇಡಿ.

  ಉತ್ತರ
 4. ಡಿಸೆ 30 2014

  ನಿಲುಮೆಯ ಪ್ರತಿಕ್ರಿಯಿಗಳೆಲ್ಲ ಮೂರ್ಖರನ್ನು ಒಪ್ಪಿಸಿಯೇ ತೀರುತ್ತೇವೆಂಬ ಹಟ ತೊಟ್ಟಂತೆ ಕಾಣುತ್ತದೆ. ಶೆಟ್ಕರನನ್ನು ಒಪ್ಪಿಸಬೇಕೆಂಬ ಹುಂಬ ಯತ್ನ ನಿರರ್ಥಕ. ಮೂರ್ಖರನ್ನು ಅವರಿಷ್ಟದಂತೆ ಇರಲು ಬಿಡಿ !

  ಉತ್ತರ
  • Nagshetty Shetkar
   ಡಿಸೆ 30 2014

   ಶುಭಂ ಹೆಗಡೆ ಹೆಸರಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದು ನಾನಲ್ಲ. ಸುಮ್ಮ ಸುಮ್ಮನೆ ನನ್ನ ಹೆಸರನ್ನು ಎಳೆಯುವ ನಿಮ್ಮ ಕೆಟ್ಟ ಚಟ ಬಿಡಿ.

   ಉತ್ತರ
 5. ಡಿಸೆ 30 2014

  ಒಳ್ಳೆಯ ಬರಹ. ಗೀತೆಯಲ್ಲಿ ವರ‍್ಣದ ಮಾತು ಬಂದರೂ ಅದು ಅಲ್ಲಿಯ ವಾದದ ನಡುನೆಲೆಯಲ್ಲ. ’ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ’ [2.31] ಎಂದಿರುವುದರಲ್ಲಿ ’ಅಪಿ’ ಶಬ್ದದಿಂದ ’ಸ್ವದರ‍್ಮವನ್ನು ಗಣನೆಗೆ ತೆಗೆದುಕೊಂಡಾದರೂ’ ಎಂಬ ಹುರುಳಿದೆ. ಹಾಗೆಯೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ’ [4.13] ಎಂದು ಮೊದಲಾಗುವ ಶ್ಲೋಕದಲ್ಲೂ ನಾಲ್ಕು ವರ‍್ಣಗಳನ್ನು ಹುಟ್ಟಿಸುವ ಕೆಲಸವನ್ನು ಅಂತಹ ದೊಡ್ಡ ಕೆಲಸವೆಂದೇನೂ ಕ್ರಿಶ್ಣನು ಹೇಳಿಕೊಳ್ಳುವುದಿಲ್ಲ. ’ಅದೇನೋ ಜನರು ಮಾತನಾಡುತ್ತಾರಲ್ಲ ನಾಲ್ಕು ವರ‍್ಣಗಳೆಂದು, ಅದನ್ನೂ ನಾನೇ ಹುಟ್ಟಿಹಾಕಿರುವೆನು, ಹುಟ್ಟಿಹಾಕದೆಯೂ ಇರುವವನು’ ಎಂದು, ಒಟ್ಟಾರೆಯಾಗಿ ಎಲ್ಲದಕ್ಕೂ ತಾನೇ ಮಾಡುಗನೆಂದೂ ಮಾಡುಗನಲ್ಲವೆಂದೂ ಹೇಳಿಕೊಳ್ಳುವುದೇ ಈ ಶ್ಲೋಕದಲ್ಲಿ ಕ್ರಿಶ್ಣನ ಗುರಿ. ಒಟ್ಟಿನಲ್ಲಿ ಹೇಳುವುದಾದರೆ, ಗೀತೆಯಲ್ಲಿ ವರ‍್ಣ-ಜಾತಿಗಳ ಬಗ್ಗೆ ಮಾತು ಇರುವುದು ನಿಜ, ಆದರೆ ಅವುಗಳನ್ನದು ’ಪ್ರತಿಪಾದಿಸುತ್ತದೆ’ ಎನ್ನುವುದು ಬಲುದೊಡ್ಡ ತಪ್ಪು. ಆಗಿನ ಕೂಡಣದಲ್ಲಿ ವರ‍್ಣ-ಜಾತಿಗಳು ಇದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಅವುಗಳನ್ನು ಎತ್ತಿಹಿಡಿಯುವುದೇ ಗೀತೆಯ ಗುರಿ ಎನ್ನುವುದು ಸರಿಯಲ್ಲ. ಗೀತೆಯನ್ನು ಮನುಸ್ಮ್ರುತಿಯ ನಯವಾದ ರೂಪವೆನ್ನುವುದು ತಿಳುವಳಿಕಸ್ತರು ಹೇಳುವ ಮಾತಲ್ಲ.

  ಉತ್ತರ
  • ರಂಜನಾ ರಾಮ್ ದುರ್ಗ
   ಡಿಸೆ 31 2014

   ಸಹೋದರರೇ,
   ನೀವೆಕೆ ಹೀಗೆ ತಪ್ಪು ತಪ್ಪಾಗಿ ಕನ್ನಡದಲ್ಲಿ ಬರೆಯುವಿರಿ? ಓದಲು ಕಷ್ಟವಾಗಿದೆ.ತಿದ್ದಿಕೊಳ್ಳಿ

   ಉತ್ತರ
   • ಗುಂಡ
    ಡಿಸೆ 31 2014

    ದುರ್ಗಪ್ಪನವರೆ,
    *ನೀವೇಕೆ* ಹೀಗೆ ತಪ್ಪು ತಪ್ಪಾಗಿ ಕನ್ನಡದಲ್ಲಿ ಬರೆಯುವಿರಿ? ಓದಲು ಕಷ್ಟವಾಗಿದೆ.ತಿದ್ದಿಕೊಳ್ಳಿ

    ಉತ್ತರ
  • Nagshetty Shetkar
   ಡಿಸೆ 31 2014

   ಮಧ್ವ ಮಠಗಳ ವತಿಯಿಂದ ಐಟಿಬೀಟಿ ವಟುಗಳಿಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಿದಾಗ ತಮ್ಮನ್ನೂ ಗೀತೆ ಬಗ್ಗೆ ತಿಳಿವಳಿಕಸ್ತರ ಪ್ರವಚನ ನೀಡಲು ಆಹ್ವಾನಿಸಲಾಗುವುದು. ಅಲ್ಲಿಯವರೆಗೆ ತಮ್ಮ ಗೀತಜಿಜ್ಞಾಸೆಯನ್ನು ನಿಮ್ಮೊಳಗೇ ಇಟ್ಟುಕೊಂಡಿರಿ.

   ಉತ್ತರ

ನಿಮ್ಮದೊಂದು ಉತ್ತರ ಷಣ್ಮುಖ ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments