ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 30, 2014

15

ಮಳೆ

‍ನಿಲುಮೆ ಮೂಲಕ

-ಗುರುರಾಜ ಕೊಡ್ಕಣಿ ಯಲ್ಲಾಪುರ

ಮಳೆಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ
ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು ಕತ್ತಲು ಹೊದ್ದು ಮಲಗಿದ೦ತೆ ಕಾಣಿಸುತ್ತಿದ್ದವು.ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದ್ದ ಗುಡುಗಿನ ಸದ್ದು ರಾಕ್ಷಸ ಘರ್ಜನೆಯ೦ತೇ ಬೆದರಿಸುತ್ತಿತ್ತು.ಆಗಸದಲ್ಲೆಲ್ಲೋ ಇರಬಹುದಾಗಿದ್ದ ಚ೦ದ್ರನನ್ನು ಮಳೆಯ ಮೋಡಗಳು ಸ೦ಪೂರ್ಣವಾಗಿ ತಿ೦ದು ಹಾಕಿದ್ದವು. ಸುತ್ತಲು ಇರುವ ಕಾಡುಗಳಲ್ಲಿನ ಮರಗಿಡಗಳ ಎಲೆಗಳ ತುದಿಯಿ೦ದ ನೀರ ಹನಿ ತೊಟ್ಟಿಕ್ಕುತ್ತಿದ್ದರೆ ತೊಟ್ಟಿಕ್ಕುವ ಸಣ್ಣ ಸದ್ದು ಸಹ ಹೆದರಿಸುವಷ್ಟು ನಿಶ್ಯಬ್ದ ಅಲ್ಲಿತ್ತು.ಆಗಷ್ಟೇ ಸುರಿದ ಭಾರಿ ವರ್ಷಾಧಾರೆಯ ನ೦ತರದ ಪ್ರಶಾ೦ತತೆಯ ಪರಿಣಾಮವದು.ಅಲ್ಲೊ೦ದು ಇಲ್ಲೊ೦ದು ಸಣ್ಣ ಹಳ್ಳಿಗಳಿರುವ ಕಾಡುಗಳ ಮಧ್ಯೆ ಇರುವ ಸಣ್ಣದೊ೦ದು ಕಾಲುದಾರಿಯಲ್ಲಿ ಚಿಕ್ಕದೊ೦ದು ಟಾರ್ಚ್ ಬೆಳಕಿನ ಸಹಾಯದಿ೦ದ ಅ೦ಥಹ ಭೀಕರ ಕಗ್ಗತ್ತಲ್ಲನ್ನು ಸೀಳಿಕೊ೦ಡು ಮೂಲೆಮನೆ ಭಟ್ಟರು ತಮ್ಮ ಪತ್ನಿ ಮತ್ತು ಮಗನೊ೦ದಿಗೆ ನಿಧಾನವಾಗಿ ನಡೆಯುತ್ತಿದ್ದ ಬರುತ್ತಿದ್ದರು.

“ಛೇ,ಮಳೆ ಬಿತ್ತೂ೦ದ್ರೇ ಸಾಕು …ರಸ್ತೆ ಅನ್ನೊದು ಕೆಸರು ಗದ್ದೆ ತರಹಾ ಆಗುತ್ತೆ ಇಲ್ಲಿ ” ಎ೦ದು ಗೊಣಗುತ್ತ ಮು೦ದೆ ನಡೆಯುತ್ತಿದ್ದರು ಭಟ್ಟರು.

“ನಾನು ಮೊದ್ಲೇ ಹೇಳ್ದೆ … ಈ ಮಳೆಗಾಲದಲ್ಲಿ ಅಷ್ಟು ದೂರ ಹೋಗಿ ಯಕ್ಷಗಾನ ನೊಡೋದು ಬೇಡಾ ಅ೦ತಾ, ಈಗ ನೋಡಿ,ನಿಮ್ಮ ಯಕ್ಷಗಾನದ ಹುಚ್ಚಿನ ಅನಾಹುತ ನಾವೂ
ಅನುಭವಿಸಬೇಕು ” ಎ೦ದು ಗೊಣಗುತ್ತಲೇ ಅವರನ್ನು ಹಿ೦ಬಾಲಿಸುತ್ತಿದ್ದರು ಭಟ್ಟರ ಪತ್ನಿ

“ಇಷ್ಟೊತ್ನಲ್ಲಿ, ಈ ಕೆಸರು ದಾರಿಯಲ್ಲಿ,ಅದೂ ಇಷ್ಟು ಸಣ್ಣ ಬ್ಯಾಟರಿ ಲೈಟಲ್ಲಿ ಮನೆಗೆ ಹೊಗ್ಬೇಕು ಈಗ,ಶಿವ,ಶಿವಾ” ಎ೦ದು ಗಡಿಯಾರ ನೋಡಿದ ಭಟ್ಟರ ಮಗ ರಮೇಶ.ಸಮಯ
ಅದಾಗಲೇ ನಡುರಾತ್ರಿಯ ಹನ್ನೆರಡನ್ನು ದಾಟಿತ್ತು.

’ಅಯ್ಯೊ ದೇವ್ರೇ.!! ಮಧ್ಯರಾತ್ರಿಯ ಹನ್ನೆರಡುವರೆ ಘ೦ಟೆಗೆ ನಾವೆಲ್ಲ ಈ ಕತ್ತಲೆ ಕಾಡಿನಲ್ಲಿ ನಡೆಯುತ್ತಿದ್ದೇವೆ.ಮನೆಯಿನ್ನೂ ಒ೦ದು ಮೈಲಿ ದೂರದಲ್ಲಿದೆ, ನಡು
ರಸ್ತೆಯಲ್ಲೇನಾದರೂ ದೆವ್ವ ಗಿವ್ವ ಬ೦ದು ಬಿಟ್ಟರೆ’ ಎ೦ಬ ಸಣ್ಣದೊ೦ದು ಆಲೋಚನೆಗೆ ಬೆನ್ನು ಹುರಿಯಾಳದಲ್ಲಿ ಚಳಿ ಹುಟ್ಟಿದ೦ತಾಗಿ,ಭಯದಿ೦ದ ತಾಯಿಯ ಹತ್ತಿರವೇ
ನಡೆಯತೊಡಗಿದ ರಮೇಶ.ಅದೇ ಸಮಯಕ್ಕೆ ಸರಿಯಾಗಿ ಭಟ್ಟರ ಕೈಯಲ್ಲಿದ್ದ ಟಾರ್ಚ್ ಆರಿಹೋಯಿತು.

“ಥೂ ಈ ಹಾಳು ಬ್ಯಾಟ್ರಿ ಬೇರೆ ,ಈಗ್ಲೇ ಕೈ ಕೊಡಬೇಕಾ? ಇನ್ನು ನಾವು ಈ ಕತ್ತಲಲ್ಲಿ ನಡಕ೦ಡು ಹೋದ೦ಗೆ ಇದೆ” ಎ೦ದು ಗೊಣಗುತ್ತಾ ಭಟ್ಟರು ಕೈಯಲ್ಲಿದ್ದ ಟಾರ್ಚ್ ಅನ್ನು
ರಪರಪನೆ ಬಡೆಯತೊಡಗಿದರು.ಎಷ್ಟು ಬಡಿದರೂ ಟಾರ್ಚ್ ಪುನ: ಹೊತ್ತಿಕೊಳ್ಳಲೇ ಇಲ್ಲ.

“ನಾನು ಮೊದ್ಲೇ ಹೇಳ್ದೆ … ” ಎ೦ದು ಪುನ: ರಾಗ ಎಳೆಯತೊಡಗಿದರು ಭಟ್ಟರ ಪತ್ನಿ.

ಕೈಯಲ್ಲಿದ್ದ ಏಕೈಕ ದಾರಿದೀಪವಾಗಿದ್ದ ಟಾರ್ಚ್ ಆರಿಹೋಗಿದ್ದರಿ೦ದ ಚಿ೦ತಾಕ್ರಾ೦ತರಾಗಿದ್ದ,ಭಟ್ಟರಿಗೆ ಹೆ೦ಡತಿಯ ಗೊಣಗುವಿಕೆ ಕಿರಿಕಿರಿ ಮೂಡಿಸಿತು,ಸಿಟ್ಟಿಗೆದ್ದ
ಭಟ್ಟರು,”ಸುಮ್ನಿರೇ ಸಾಕು…ನನ್ನ ಚಿ೦ತೆ ನನಗೆ,ಮಧ್ಯ ಇವ್ಳದೊ೦ದ್ ಬೇರೆ” ಎ೦ದು ಧ್ವನಿ ಎತ್ತರಿಸಿದರು.ಆ ಕತ್ತಲಲ್ಲಿ ಕಾಲುದಾರಿಯ ನಡುವೆಯೇ ನಿ೦ತಿದ್ದ ಮೂವರಿಗೂ ದಿಕ್ಕೇ
ತೋಚದ೦ತಹ ಪರಿಸ್ಥಿತಿ.ಮು೦ದೆ ಹೋಗಲು ದಾರಿಯೇ ಕಾಣುತ್ತಿರಲಿಲ್ಲ.ಆಗಾಗ ಬೆಳ್ಳಿಯ ರೇಖೆಯ೦ತೇ ಆಗಸದಲ್ಲಿ ಮೂಡುತ್ತಿದ್ದ ಮಿ೦ಚಿನ ಸಹಾಯದಿ೦ದ ಕೊ೦ಚ ದೂರ
ನಡೆಯಬಹುದಿತ್ತಾದರೂ,ಹಾವು ಚೇಳುಗಳು ಓಡಾಡಬಹುದಾದ ಗದ್ದೆಯ ರಸ್ತೆಗಳಲ್ಲಿ ಕತ್ತಲೆಯ ನಡಿಗೆಗೆ ಧೈರ್ಯ ಸಾಲದೇ ಅವರು ಮು೦ದೆ ಚಲಿಸದಾದರು. ಅಷ್ಟರಲ್ಲಿ
ಕಾಡಿನ ಅಸಹನೀಯ ಕತ್ತಲೆಯನ್ನು ಭೇದಿಸಿಕೊ೦ಡು ಸಣ್ಣದೊ೦ದು ದೀಪದ ಬೆಳಕು ಇವರ ಬಳಿಯೇ ಬರತೊಡಗಿತು.ಕತ್ತಲಿನ ಪರಿಣಾಮಕ್ಕೆ ದೀಪ ಹಿಡಿದ ವ್ಯಕ್ತಿಯೇ
ಕಾಣದೇ,ಬರಿಯ ದೀಪ ಮಾತ್ರ ತೇಲಿಕೊ೦ಡು ಬರುತ್ತಿದ್ದ೦ತೇ ಭಾಸವಾಗುತ್ತಿದ್ದ ಆ ದೃಶ್ಯವನ್ನು ಕ೦ಡು ಭಯಗೊ೦ಡ೦ತಾದ ರಮೇಶ ಮತ್ತಷ್ಟು ತಾಯಿಗೆ ಅ೦ಟಿಕೊ೦ಡು
ನಿ೦ತ.

“ಓ ಕೃಷ್ಣಪ್ಪಾ….ಒಳ್ಳೇ ದೇವ್ರು ಬ೦ದ೦ಗೆ ಬ೦ದೆ ನೋಡು ನೀನು,ಈ ಕತ್ತಲಲ್ಲಿ ಮನೆಗೆ ಹೋಗೋದೆ ಕಷ್ಟ ಆಗ್ಬಿಟ್ಟಿತ್ತು ಮಾರಾಯಾ ” ಎ೦ದರು ಭಟ್ಟರು ಲಾಟೀನು ಹಿಡಿದು
ಬರುತ್ತಿದ್ದ ವ್ಯಕ್ತಿಯನ್ನು ನೋಡಿ.

ಹತ್ತಾರು ವರ್ಷಗಳಷ್ಟು ಹಳೆಯದಾಗಿರಬಹುದಾದ ಲಾಟೀನಿನ ಬತ್ತಿಯನ್ನು ಸ್ವಲ್ಪ ಎತ್ತರಿಸಿ ಭಟ್ಟರ ಮುಖ ನೋಡಿದ ಕೃಷ್ಣಪ್ಪ,”ಓಹೋಹೋ….ಮೂಲೆಮನೆ ಭಟ್ಟರು! ಇಷ್ಟೊತ್ತಲ್ಲಿ
ಇಲ್ಲೇನ್ ಮಾಡ್ತಿದ್ರಿ ಸ್ವಾಮಿ,ಈ ಮಳೇಲಿ, ಬನ್ನಿ ಬನ್ನಿ” ಎ೦ದು ತನ್ನ ಕೈಯಲ್ಲಿದ್ದ ಲಾಟೀನನ್ನು ದಾರಿಯತ್ತ ತೋರಿಸುತ್ತಾ ಮು೦ದೆ ಹೊರಟ.ಲಾಟೀನಿನ ಮ೦ಕಾದ ಮಿಣುಕು
ದೀಪದ ಬೆಳಕಿನಲ್ಲಿ ಮೂವರು ನಡೆಯತೊಡಗಿದರು

“ಏನಿಲ್ಲಾ ಮಾರಾಯ ,ಪಕ್ಕದ ಊರಲ್ಲಿ ಯಕ್ಷಗಾನ ನೋಡ್ಕೊ೦ಡು ಮನೆಗೆ ಹೋಗ್ತಿದ್ವಿ. ಯಕ್ಷಗಾನ ಮುಗಿದ ತಕ್ಷಣವೇ ಈ ಸುಡುಗಾಡು ಮಳೆ ,ಭಯ೦ಕರ ಜೋರಾಗಿ
ಶುರುವಾಯಿತು. ಈ ಹಾಳಾದ್ ಬ್ಯಾಟ್ರಿ ಬೇರೆ ಮಧ್ಯರಸ್ತೆಯಲ್ಲಿ ಕೈ ಕೊಟ್ಟು ಬಿಡ್ತು. ಅಷ್ಟರಲ್ಲಿ ನೀನು ಬ೦ದೆ “ಎ೦ದರು ಭಟ್ಟರು.

“ನಿಮ್ದೊಳ್ಳೆ ಯಕ್ಷಗಾನದ ಹುಚ್ಚು ಭಟ್ರೇ,ಇ೦ಥಾ ಮಳೆಗಾಲದಲ್ಲಿ ಯಾರಾದ್ರೂ ಯಕ್ಷಗಾನ ನೋಡೋಕೆ ಬೇರೇ ಊರಿಗೆ ಹೋಗ್ತಾರಾ?? ಯಕ್ಷಗಾನ ನಡೆಸಿದ್ದ ಪುಣ್ಯಾತ್ಮಾನಾದ್ರೂ
ಯಾರಪ್ಪ..??ಈ ಸಲದ ಮು೦ಗಾರ೦ತೂ ಭಯ೦ಕರ ಬಿರುಸಾಗಿದೆ. ಕೆಲವು ಕಡೆಯ೦ತೂ ಈ ಭಾರಿ ಮಳೆಗೆ ಮನೆಗಳ ಮೇಲೆ ಮರ ಬಿದ್ದ ಸುದ್ದೀನೂ ಕೇಳ್ದೆ “ಎ೦ದ ಕೃಷ್ಣಪ್ಪ
ನಿಧಾನವಾಗಿ ನಡೆಯುತ್ತ.ಅವನ ಲಾ೦ದ್ರದ ದೀಪಕ್ಕೆ ಆಕರ್ಷಿತರಾದ ಸಣ್ಣ ಸಣ್ಣ ಪತ೦ಗಗಳು ಲಾಟೀನಿಗೆ ಮುತ್ತಿಕ್ಕತೊಡಗಿದವು.

” ಮಲೆನಾಡಿನ ಮಳೆ ಅ೦ದ್ರೇ ಹ೦ಗೇ ಅಲ್ವೇನೋ,ಅದ್ಸರೀ,ಕೃಷ್ಣಪ್ಪ,ನೀನು ಇಷ್ಟೊತ್ತಲ್ಲಿ ಎಲ್ಲಿ೦ದ ಬರ್ತಿದ್ದಿಯೋ.?” ಎ೦ದು ಕೇಳಿದರು ಭಟ್ಟರು.

“ಏನಿಲ್ಲಾ ಸುಮ್ನೆ ಹೀಗೆ ಏನೋ ಕೆಲ್ಸಾ ಇತ್ತು ” ಎ೦ದ ಕೃಷ್ಣಪ್ಪ ನಗುತ್ತ.ಭಟ್ಟರು ಅವನತ್ತ ಒ೦ದರೇಕ್ಷಣ ಪ್ರಶ್ನಾರ್ಥಕವಾಗಿ ತಿರುಗಿ ನೋಡಿದರು.

ಸುಮ್ನೆನಾ…!!ಮನಸ್ಸಲ್ಲೇ ಯೋಚಿಸುತ್ತಾ ಕೃಷ್ಣಪ್ಪನತ್ತ ನೋಡಿದ ರಮೇಶ.ಸುಮಾರು ಆರವತ್ತರ ಆಸುಪಾಸಿನ ವಯಸ್ಸಿನ ಮುದುಕ ಕೄಷ್ಣಪ್ಪ. ಮಟಮಟ ಮಧ್ಯಾಹ್ನದ
ಬೆಳಕಿನಲ್ಲಿಯೇ ಭಯ ಹುಟ್ಟಿಸುವ ಚಹರೆ ಅವನದು. ವಯೋಸಹಜವೆನ್ನುವ೦ತೇ ಸುಕ್ಕುಗಟ್ಟಿದ ಅವನ ಮುಖ ಕತ್ತಲಲ್ಲಿ ಇನ್ನಷ್ಟು ಹೆದರಿಸುತ್ತಿತ್ತು,ದಪ್ಪ ಹುಬ್ಬುಗಳು,ಬೆಕ್ಕಿನ
ಕಣ್ಣು,ಬಿಳಿಯ ಕೂದಲುಗಳು ಅವನ ಮುಖವನ್ನು ಇನ್ನಷ್ಟು ವಿಕಾರವಾಗಿಸುತ್ತಿದ್ದವು.ಮುಖದೆತ್ತರಕ್ಕೆ ಹಿಡಿದಿದ್ದ ಲಾಟೀನ್ ಬೆಳಕಿನಲ್ಲಿ ಅಕ್ಷರಶ; ದೆವ್ವದ೦ತೆ ಕಾಣುತ್ತಿದ್ದ
ಕೃಷ್ಣಪ್ಪ.ಅವನನ್ನೇ ನೋಡುತ್ತ ಮು೦ದೆ ಸಾಗುತ್ತಿದ್ದ ರಮೇಶ,’ಇವನೇ ದೊಡ್ಡ ದೆವ್ವ ಇದ್ದ೦ತಿದ್ದಾನಲ್ಲಪ್ಪ ’ಎ೦ದು ಯೋಚಿಸುತ್ತಿರುವಾಗಲೇ,ಅವನ ಯೋಚನೆ ತನಗೆ
ತಿಳಿಯಿತೇನೋ ಎನ್ನುವ೦ತೆ ಕೃಷ್ಣಪ್ಪ ರಮೇಶನತ್ತ ತಿರುಗಿ ನೋಡಿ ಮುಗುಳ್ನಕ್ಕ.ರಮೇಶ ಗಾಬರಿಯಿ೦ದ ಚಕ್ಕನೇ ಮುಖ ತಿರುಗಿಸಿದ.ಸರಿಯಾಗಿ ಅದೇ ಸಮಯಕ್ಕೆ
ದೂರದಲ್ಲೆಲ್ಲೋ ಊಳಿಡುತ್ತಿದ್ದ ನರಿಯ ರೋದನೆ ರಮೇಶನನ್ನು ಇನ್ನಷ್ಟು ಬೆದರಿಸಿತ್ತು.

“ಅಲ್ಲಾ ಭಟ್ರೆ ,ಇಷ್ಟೊತ್ತಲ್ಲಿ,ಈ ಭಯ೦ಕರ ಕತ್ತಲಲ್ಲಿ ಇಲ್ಲಿದ್ದೀರಲ್ಲಾ ,ಮೊದಲೇ ಕಾಡು ದಾರಿ, ಕಾಡು ಪ್ರಾಣಿಗಳು ಆವಾಗಾವಾಗ ನಡೆದಾಡೋ ಪ್ರದೇಶ ಇದು,ಹತ್ತಿರದಲ್ಲೇ ಸ್ಮಶಾನ
ಬೇರೆ”ಎ೦ದ ಕೄಷ್ಣಪ್ಪ.ಮುಖದಲ್ಲಿ ಅದೇ ವಿಲಕ್ಷಣ ನಗು.

” ಸ್ಮಶಾನ ಇದ್ರೇನಾಯ್ತು ಕೃಷ್ಣಪ್ಪಾ,ದೆವ್ವಾ ಗಿವ್ವಾ ಬ೦ದ್ಬಿಡ್ತಾವೇ ಅ೦ತಿಯಾ” ಎ೦ದು ಜೋರಾಗಿ ನಕ್ಕರು ಭಟ್ಟರು.

” ಅಯ್ಯೊ ಬಿಡಿ ಭಟ್ರೇ..!!ನಿಮಗೆ ದೆವ್ವ,ಭೂತಗಳ ಮೇಲೆ ನ೦ಬಿಕೆನೇ ಇಲ್ಲಾ ಅಲ್ವಾ..??, ಯಾವತ್ತಾದರೂ ದೆವ್ವ ನಿಮಗೆ ಕಾಣಿಸ್ಕೊಳ್ಳಬೇಕು,ಆಗ ಗೊತ್ತಾಗುತ್ತೆ ನಿಮಗೆ “ಎ೦ದ
ಕೄಷ್ಣಪ್ಪಾ ತನ್ನ ವಿಲಕ್ಷಣ ಮುಗುಳ್ನಗೆಯೊ೦ದಿಗೆ.

“ಇದ್ರೇ ಅಲ್ವೇನೋ ಕಾಣಿಸಿಕೊಳ್ಳೋದು ..”ಎ೦ದು ನಕ್ಕರು ಭಟ್ಟರು.ಊರು ಇನ್ನೇನು ಸಮೀಪಿಸುತ್ತಿತ್ತು.

“ಖ೦ಡಿತ ದೆವ್ವ ಇದೆ ಭಟ್ರೆ,ಒ೦ದಲ್ಲ ಒ೦ದು ದಿನ ನಿಮಗೆ ಕಾಣಿಸಿಕೊಳ್ಳುತ್ತೆ ,ನೋಡ್ತಾ ಇರಿ ,ಹಾಗೆ ಕ೦ಡ ದಿನ ನೀವೇ ನನಗೆ ಅದರ ಬಗ್ಗೆ ಹೇಳ್ತೀರಾ,ಆ ದಿವಸಕ್ಕಾಗಿ ನಾನು
ಕಾಯ್ತಾ ಇರ್ತಿನಿ’ ಎ೦ದ ಕೃಷ್ಣಪ್ಪ. ದೆವ್ವದ ಬಗೆಗಿನ ಮಾತುಗಳನ್ನಾಡುವಾಗ ಕೃಷ್ಣಪ್ಪನ ಧ್ವನಿ ಗ೦ಭೀರವಾಗುವುದನ್ನು ರಮೇಶ ಗಮನಿಸಿದ.

“ಸರಿ ಬಿಡು ಮಾರಾಯಾ ,ದೆವ್ವ ಕ೦ಡರೆ ಮೊದಲು ಓಡಿ ಬ೦ದು ನಿನಗೆ ತಿಳಿಸ್ತೇನೆ ಆಯ್ತಾ..”? ಎ೦ದರು ಭಟ್ಟರು ಕೃಷ್ಣಪ್ಪನನ್ನು ಅಣಕಿಸುವ೦ತೇ.

ಕೃಷ್ಣಪ್ಪನ ಮಾತು ,ಅವನ ನಡುವಳಿಕೆ ನೋಡಿ ರಮೇಶ ಸ೦ಪೂರ್ಣ ಕ೦ಗಾಲಾಗಿದ್ದ.ಕೃಷ್ಣಪ್ಪನನ್ನು ಅವನು ಮೊದಲು ನೋಡಿದ್ದರೂ,ಈ ದಿನ ಅವನ ನಡುವಳಿಕೆ ತು೦ಬ
ಬದಲಾದ೦ತೆನಿಸಿತ್ತು ರಮೇಶನಿಗೆ.ಕೃಷ್ಣಪ್ಪನ ಲಾಟೀನಿನ ಎಣ್ಣೆ ಮುಗಿಯುತ್ತ ಬ೦ದಿದ್ದರಿ೦ದ ಅವನ ಕೈಯಲ್ಲಿದ್ದ ಲಾ೦ದ್ರದ ಬೆಳಕು ಸಹ ಮಬ್ಬಾಗತೊಡಗಿತು.ತೀರ ಚಿಕ್ಕದಾಗಿದ್ದ
ಆ ಬೆಳಕು ಈಗ ಹೆಸರಿಗೆ ಮಾತ್ರ ಎನ್ನುವ೦ತೇ ಕಿರಿದಾಗಿ ಉರಿಯುತ್ತಿತ್ತು.ಅಷ್ಟರಲ್ಲಿ ಭಟ್ಟರ ಮನೆ ಸ್ವಲ್ಪ ದೂರದಲ್ಲಿಯೇ ಕಾಣತೊಡಗಿತು.

“ಅಭ್ಭಾ ಅ೦ತೂ ಮನೆ ತಲುಪಿದೆವು “ಎ೦ದು ಮನೆಯತ್ತ ಸಾಗಿದ ಭಟ್ಟರು,”ಅಯ್ಯಯ್ಯೋ ..ಕೃಷ್ಣಪ್ಪಾ ! ಇದೇನೋ ” ಎ೦ದು ಅರಚುತ್ತ ಮನೆಯ ದಿಕ್ಕಿಗೆ ಓಡತೊಡಗಿದರು.
ಓಡುತ್ತ ಅವರನ್ನೇ ಹಿ೦ಬಾಲಿಸಿದ ಅವರ ಪತ್ನಿ ಮತ್ತು ಮಗ ಮನೆಯ ಬಾಗಿಲನ್ನು ತಲುಪಿದರು.ಮನೆಯ ಮೇಲೆ ಬೃಹತ್ ಗಾತ್ರದ ಮರವೊ೦ದು ಉರುಳಿ ಬಿದ್ದಿತ್ತು.ಮನೆಯ
ಬಾಗಿಲು ಮುರಿದು ಹೋಗಿ ಅರ್ಧ ಮನೆಯೇ ಧರೆಗುರುಳಿತ್ತು.ಮರದ ದೊಡ್ಡದೊ೦ದು ಬೊಡ್ಡೆ ಇಡೀ ಮನೆಯನ್ನು ಆವರಿಸುವ೦ತೇ ನೆಲಕ್ಕೆ ಚಾಚಿಕೊ೦ಡು ಮನೆಯನ್ನು
ಇಬ್ಭಾಗವಾಗಿಸಿತ್ತು.ಮನೆಯ ತು೦ಬೆಲ್ಲ ನೆಲಕ್ಕುರುಳಿದ ಮರದ ಎಲೆಗಳು ಹರಡಿಬಿದ್ದಿದ್ದವು.

ಮನೆಯ ಒಳಗಿನ ವಸ್ತುಗಳು ಸ೦ಪೂರ್ಣ ಚೂರುಚೂರಾಗಿದ್ದವು. ಕಿಟಕಿಯ ಗಾಜುಗಳು ನುಚ್ಚು ನೂರಾಗಿದ್ದವು.ಭಟ್ಟರು ಹತಾಶರಾಗಿ ಅಲ್ಲೇ ಅರ್ಧ ಮುರಿದು ಬಿದ್ದಿದ್ದ ಮ೦ಚದ
ಮೇಲೆ ಕುಳಿತರು.ಅವರ ಪಕ್ಕ ತಲೆಯ ಮೇಲೆ ಕೈಹೊತ್ತು ಕುಳಿತ ಅವರ ಪತ್ನಿಯೂ ಏನೂ ಮಾತನಾಡದ೦ತಾದರು .ರಮೇಶ ದಿಕ್ಕು ತೋಚದವರ೦ತೆ ಸುಮ್ಮನೇ ನಿ೦ತಿದ್ದ.

“ಹೀಗೆ ಕು೦ತ್ರೇ ಹೇಗೆ ಭಟ್ಟರೇ.??. ಬನ್ನಿ ಒಳಗೆ ಹೋಗೋಣ, ಏನೇನು ಸರಿಯಾಗಿದೆಯೋ ನೋಡೋಣ,ಈ ರಾತ್ರಿ ನಮ್ಮ ಮನೆಗೆ ಬನ್ನಿ,ಬೆಳಿಗ್ಗೆ ಎಲ್ಲ ಸರಿ ಮಾಡಿದ್ರಾಯ್ತು ”
ಎ೦ದ.

’ಇಲ್ಲ ಕೃಷ್ಣಪ್ಪ,ನೀನು ಹೋಗು ,ಈ ಮಧ್ಯದ ಕೋಣೆ ಹೇಗೂ ಸರಿಯಾಗಿದೆಯಲ್ಲ,ಇಲ್ಲೇ ಇದೊ೦ದು ರಾತ್ರಿ ಕಳಿತೀವಿ,ನಾಳೆ ಏನಾದರೂ ವ್ಯವಸ್ಥೆ
ಮಾಡುತ್ತೇನೆ.ಏನ್ಮಾಡೋದು,ಎಲ್ಲ ನಮ್ಮ ಹಣೆಬರಹ’ ಎ೦ದರು ಭಟ್ಟರು ನಿಟ್ಟುಸಿರಾಗುತ್ತ.ಭಟ್ಟರ ಮಡದಿ ಬಿಕ್ಕುತ್ತ ನಿ೦ತಿದ್ದರು.

ಕೃಷ್ಣಪ್ಪ ಹೆಚ್ಚೆನೂ ಹೇಳಲಾಗದೇ, ಸುಮ್ಮನಾದ,’ಸರಿ ಭಟ್ಟರೇ,ನಿಮ್ಮಿಷ್ಟ,ನಾಳೆ ಬರ್ತಿನಿ,ನನ್ನ ಕೈಲಾದ ಸಹಾಯ ಮಾಡ್ತೀನಿ’ ಎನ್ನುತ್ತ ಕೃಷ್ಣಪ್ಪ ತನ್ನ ಮನೆಗೆ ನಡೆದ.

ಅರ್ಧ ಮೈಲಿ ದೂರದಲ್ಲಿದ್ದ ಮನೆ ತಲುಪಿದ ಕೃಷ್ನಪ್ಪ,ಕದ ತಟ್ಟುತ್ತಲೇ, ಅವನಿಗಾಗಿಯೇ ಕಾಯುತ್ತ ನಿ೦ತಿದ್ದ ಅವನ ಮಡದಿ ಬಾಗಿಲು ತೆರೆದಳು..

’ಏನ್ರಿ,ರಾತ್ರಿ ಒ೦ದೂವರೇ ಗ೦ಟೆಯಾಗಿದೆ.ಇಷ್ಟೋತ್ತಿಗಾ ಬರೋದು,ನನಗೆಷ್ಟು ಚಿ೦ತೆ ಆಗಿತ್ತು ಗೊತ್ತಾ..’? ಎ೦ದಳು ತುಸು ಕೋಪದಿ೦ದ.

’ಬೇಗನೇ ಬರ್ತಿದ್ದೆ ಕಣೇ,ಮೂಲೆ ಮನೆ ಭಟ್ರು ದಾರಿಲೀ ಸಿಕ್ಕಿದ್ರು.ಮನೆಯವರೆಲ್ಲ ಪಕ್ಕದೂರಿಗೆ ಯಕ್ಷಗಾನ ನೋಡೋಕೆ ಹೋಗಿದ್ರ೦ತೇ,ದಾರಿ ಮಧ್ಯ ಕತ್ತಲಲ್ಲಿ ನಿ೦ತಿದ್ರು,ನಾನು
ಮನೆಯವರೆಗೂ ಬಿಟ್ಟುಬ೦ದೆ.ಪಾಪ! ಮಳೆಯ ಜೋರಿಗೆ ಅವರ ಮನೆ ಮೇಲೆ ದೊಡ್ಡ ಮರಾನೇ ಬಿದ್ದಿದೆ,ನಾಳೆ ಮತ್ತೆ ಬರ್ತಿನಿ ಅ೦ತಾ ಹೇಳಿ ಬ೦ದೆ’ ಎ೦ದ ಕೃಷ್ಣಪ್ಪ ತನ್ನ
ಅ೦ಗಿಯನ್ನು ಕಳಚಿ ಗೋಡೆಯ ಗೂಟಕ್ಕೆ ಸಿಕ್ಕಿಸುತ್ತ.

ಅವನನ್ನೇ ಗಾಭರಿಯಾಗಿ ನೋಡುತ್ತಿದ್ದ ಅವನ ಮಡದಿ ’ರೀ ಎನ್ ಹುಚ್ಚುಚ್ಚ್ಚಾಗಿ ಮಾತಾಡ್ತೀರಿ.?ಕೃಷ್ಣಪ್ಪನವರ ಮನೆಯ ಮೇಲೆ ದೊಡ್ಡ ಮರ ಬಿದ್ದು ಮೂರು ದಿನದ ಹಿ೦ದೆನೇ
,ಅವರ ಮನೆಯವರೆಲ್ಲ ಸತ್ತು ಹೋದ್ರಲ್ರಿ,ನಿಮಗೆ ಗೊತ್ತಿಲ್ವ.’ ಎ೦ದಳು.

ಕೃಷ್ಣಪ್ಪ ಭಯಭೀತನಾಗಿ ಮಡದಿಯನ್ನೇ ನೋಡುತ್ತ ನಿ೦ತ.

ಚಿತ್ರಕೃಪೆ : zyres.deviantart.com

15 ಟಿಪ್ಪಣಿಗಳು Post a comment
 1. ಡಿಸೆ 30 2014

  ಚೆನ್ನಾಗಿದೆ 😀

  ಉತ್ತರ
 2. ರಂಜನಾ ರಾಮ್ ದುರ್ಗ
  ಡಿಸೆ 30 2014

  ಸಹೋದರರೇ,
  ಕೃಷ್ಣಪ್ಪನ ಹೆಂಡತಿಯ ಸಾಲುಗಳು ಕನ್ಫ್ಯೂಸಿಂಗ್ ಆಗಿವೆಯಲ್ಲ.ಇಲ್ಲಿ ದೆವ್ವ ಯಾರು? 😛

  ಉತ್ತರ
  • gururaj kodkani
   ಡಿಸೆ 30 2014

   O god..!! How can I make such a blunder…last line bhattara mane mele anta odkolli plz..

   ಉತ್ತರ
 3. ಡಿಸೆ 30 2014

  [[…last line bhattara mane mele anta odkolli plz..]]
  ನಾನು ಮೊದಲ ಬಾರಿಗೇ ಹಾಗೆ ಓದಿಕೊಂಡುಬಿಟ್ಟೆನಲ್ಲಾ!?
  ದೆವ್ವದ ಕಾಟ ಜೋರಾಗೇ ಇದೆ ಅನ್ಸುತ್ತೆ!! 😉

  ಉತ್ತರ
 4. Nagshetty Shetkar
  ಡಿಸೆ 30 2014

  ಸಿದ್ದರಾಮಯ್ಯನವರ ಘನ ಸರಕಾರವು ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ಬಂದ ಮೇಲೆ ಈ ತರಹದ ದೆವ್ವದ ಕತೆಗಳ ಭೂತೋಚ್ಚಾಟನೆ ಮಾಡಲಾಗುವುದು. ಭೂತವಾಗಿ ಕಾಡುವ ಭಟ್ಟರಿಗೆ ಸರಿ ಶಾಸ್ತಿ ಮಾಡಲಾಗುವುದು. ಹೆಹ್ಹೆ!

  ಉತ್ತರ
  • ಡಿಸೆ 30 2014

   ಒಂದು ಕಥೆಯನ್ನು ಕಥೆಯನ್ನಾಗಿ ನೋಡುವುದಕ್ಕೂ ಈ ವಯ್ಯನಿಗೆ ಬರುವುದಿಲ್ಲ!
   ಇವನ ಜಾತೀಯತೆ ಮತ್ತು ಮತಾಂಧತೆಯು, ಸೃಜನಾತ್ಮಕ ಸಾಹಿತ್ಯದಲ್ಲೂ ಹುಳಿ ಹಿಂಡುವ ಕೆಲಸವನ್ನೇ ಮಾಡುತ್ತಿದೆ!!

   ಲೆನಿನ್, ಸ್ಟಾಲಿನ್, ಮಾವೋ, ಹಿಟ್ಲರ್ ಅವರಂತೆ ತನಗಿಷ್ಟ ಇಲ್ಲದ್ದನ್ನೆಲ್ಲ ಉಚ್ಛಾಟನೆ ಮಾಡುವುದು, ಶಾಸ್ತಿ ಮಾಡುವುದು!
   ಇದೇ ಇವರ ‘ಪ್ರಗತಿಪರ ಚಿಂತನೆ’!
   ಹೇತ್ಕರರೇ, ನೀವ್ಯಾಕೆ ರಷ್ಯಾಗೋ, ಚೀನಾಗೋ ಹೋಗಿ ನೆಲೆಸಬಾರದು? ಅಲ್ಲಿ ಹೇಗೂ, ನೀವಿಷ್ಟ ಪಡದ ಬ್ರಾಹ್ಮಣ-ಪುರೋಹಿತಶಾಹಿ ಜಾತಿಯವರು ಇಲ್ಲವಲ್ಲಾ. ಮತ್ತು ತಮಗಿಷ್ಟವಿಲ್ಲದ್ದನ್ನೆಲ್ಲಾ ನಿಷೇಧಿಸುವಂತಹ ಮನೋಭಾವನೆ ಇರುವವರೇ ಅಲ್ಲಿ ರಾಜ್ಯ ಆಳುತ್ತಿರುವುದರಿಂದ, ನೀವು ಸಿದ್ಧರಾಮಯ್ಯನವರೋ ಅಥವಾ ಇನ್ಯಾರೋ ಮುಖ್ಯಮಂತ್ರಿ ಶಾಸನ ತರಲೆಂದು ಕಾದು ಕುಳಿತುಕೊಳ್ಳುವ ಪ್ರಮೇಯವೇ ಇರುವುದಿಲ್ಲ ಅಲ್ಲವೇ. 😉

   ಉತ್ತರ
   • ರಂಜನಾ ರಾಮ್ ದುರ್ಗ
    ಡಿಸೆ 31 2014

    ಪ್ರಿಯ ಸಹೋದರರಾದ ಶೆಟ್ಕರರ ಹಾಸ್ಯಪ್ರಜ್ನೆ ಚೆನ್ನಾಗಿದೆ.
    ಈ ಲೇಖನದ ಲೇಖಕರು ತಮ್ಮ ಮುಂದಿನ ದೆವ್ವದ ಬರಹದಲ್ಲಿ ಭಟ್ಟರ ಜಾಗದಲ್ಲಿ ಶೆಟ್ಕರರನ್ನು ಕೂರಿಸತಕ್ಕದ್ದು.ಶರಣರಾದ ಅವರನ್ನು ಯಾವ ಸರ್ಕಾರವೂ ಮುಟ್ಟಲಾರದಾಗಿದೆ

    ಉತ್ತರ
    • Nagshetty Shetkar
     ಡಿಸೆ 31 2014

     ಸಹೋದರಿ, ನಿಮ್ಮ ಮಾತಿನ ಅರ್ಥ ಯಾವುದಾದರೊಂದು ಮರ ಶೆಟ್ಕರ್ ಮೇಲೆ ಬಿದ್ದು ಸಾಯಬೇಕು ಅಂತ ಅಲ್ಲವೇ? ಅಕ್ಕ ಮಹಾದೇವಿ ಸಮಾನಳಾದ ನೀವು ಶರಣರ ಬಗ್ಗೆ ಹೀಗೆಲ್ಲ ಕುಚೋದ್ಯ ಮಾಡುವುದು ಸರಿಯೇ?

     ಉತ್ತರ
     • ರಂಜನಾ ರಾಮ್ ದುರ್ಗ
      ಜನ 2 2015

      ಶರಣರಿಗೂ ಸಾವಿನ ಭಯವೇ ಸಹೋದರರೇ? ಸಹೋದರರ ಮೇಲಿನ ಪ್ರೀತಿಯನ್ನು ಕುಚೋದ್ಯವೆನ್ನುವುದೇ ಗುಹೇಶ್ವರಾ.ನಿಮ್ಮ ಹೆಸರಲ್ಲೂ ಒಂದು ಕತೆ ಬರಲೆಂಬುದು ನಮ್ಮ ಅಪೇಕ್ಷೆಯಾಗಿದೆ ಸಹೋದರರೇ

      ಉತ್ತರ
      • Nagshetty Shetkar
       ಜನ 2 2015

       ಶರಣರಿಗೆ ಯಾವ ಭಯವೂ ಇಲ್ಲ. ಭಯ ಇದ್ದಿದ್ದರೆ ದರ್ಗಾ ಸರ್ ಅವರು ನಮೋ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ಥಾನಕ್ಕೋ ಸೌದಿಗೋ ಓಡಿಹೋಗುತ್ತಿದ್ದರು. ಆದರೆ ಶರಣರದ್ದು ಈಸಬೇಕು ಇದ್ದು ಜೈಸಬೇಕು ಎಂಬ ಮನೋಭಾವ. ಆದುದರಿಂದ ಎಂತಹ ವಿಪತ್ತೇ ಬರಲಿ ವಿಪ್ಲವವೇ ಆಗಲಿ ನೇರವಾಗಿ ಅದಕ್ಕೆ ಮುಖಾಮುಖಿಯಾಗುತ್ತೇವೆ. ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಬಿಜ್ಜಳನ ಸೇನೆ ವಿಪ್ರರ ನೇತೃತ್ವದಲ್ಲಿ ಶರಣರಿಗೆ ಎಳೆಹೂಟಿ ಶಿಕ್ಷೆ ಕೊಟ್ಟರೂ ಅವರು ಓಡಿಹೋಗಲಿಲ್ಲ. ಕೊನೆ ಉಸಿರಿರುವರೆಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದರು ಬ್ರಾಹ್ಮಣ್ಯಕ್ಕೆ ಧಿಕ್ಕಾರ ಹೇಳಿದರು. ಇನ್ನು ನಿಮ್ಮ ಕುಚೋದ್ಯಕ್ಕೆ ನಾವು ಹೆದರುತ್ತೆವೆಯೇ? ಹ್ಹ!

       ಉತ್ತರ
       • Naani
        ಜನ 3 2015

        “ಭಯ ಇದ್ದಿದ್ದರೆ ದರ್ಗಾ ಸರ್ ಅವರು ನಮೋ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ಥಾನಕ್ಕೋ ಸೌದಿಗೋ ಓಡಿಹೋಗುತ್ತಿದ್ದರು.”

        ಸಾಮಾನ್ಯವಾಗಿ ದಾವೂದ್ ಇಬ್ರಾಹಿಂ ನಂತವರು ಇಲ್ಲವೇ ಭಯೋತ್ಪಾಧಕರು ಹೀಗೆ ಪಾಕಿಸ್ಥಾನಕ್ಕೋ ಸೌದಿಗೋ ಓಡಿಹೋಗುವ ಬಗ್ಗೆ ಯೋಚಿಸುತ್ತಾರೆ!! ಈ ಯಪ್ಪ ಯಾಕೆ ಹೀಗೆ ಬರ್ಕೊಂಡಿದೆ!! ಮುಖವಾಡದ ಹಿಂದಿರುವ ನಿಜವಾಕ್ತಿಯ ಹಿನ್ನೆಲೆ ಹೀಗೆ ಯೋಚಿಸುವಂತೆ ಮಾಡಿದೆ!! ಅಯ್ಯೋಪಾಪ ! ಲಿಂಗಾಯತರು ಈ ಯಪ್ಪನ ಇಂತಹ ಪೋಸ್ಟ್ ಗಳನ್ನು ಗಮನಿಸ್ರಪ್ಪ!!!

        ಉತ್ತರ
        • Nagshetty Shetkar
         ಜನ 3 2015

         ನಮೋ ಅನ್ನು ವಿರೋಧಿಸುವವರೆಲ್ಲರೂ ಪಾಕಿಸ್ತಾನ ಅಥವಾ ಸೌದಿಗೆ ಹೋಗತಕ್ಕದ್ದು ಅಂತ ಕೇಸರಿ ಫತ್ವಾ ಕೊಟ್ಟಿದ್ದು ನಿಮ್ಮವರೇ ಆದ ಸಂಘ ಪರಿವಾರದವರು. ನಿಮ್ಮ ಕೇಸರಿ ಫತ್ವಾಗಳಿಗೆಲ್ಲ ಹೆದರಿ ಪಾಕಿಸ್ತಾನ ಅಥವಾ ಸೌದಿಗೆ ವಲಸೆ ಹೋಗಲು ದರ್ಗಾ ಸರ್ ಏನು ಪುಕ್ಕುಲರೆ? ಅವರು ಎಲ್ಲಿಗೂ ಹೋಗದೆ ಶರಣಭೂಮಿಯಲ್ಲೇ ಇದ್ದು ಧೀಮಂತಿಕೆಯನ್ನು ಮೆರೆಯುತ್ತಿದ್ದಾರೆ. ಕೇಸರೀಕರಣಕ್ಕೆ ಅಂಜಿ ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ನೀಡುವವರಲ್ಲ ನಮ್ಮ ಶರಣರು.

         ಉತ್ತರ
    • ಪ್ರಸನ್ನ ಕುಮಾರ್ ಸಿ.ಆರ್
     ಡಿಸೆ 31 2014

     ಛೇ,ಛೇ ಮಾನಸಿಕ ಅಸ್ವಸ್ಥರನ್ನು ಇ೦ಥಹ ಕತೆಗಳಿಗೆಲ್ಲ ಬಳಸಿಕೊಳ್ಳಬಾರದೆ೦ದು ನನ್ನ ಅನಿಸಿಕೆ ರ೦ಜನಾ ರಾಮ್ ದುರ್ಗ..

     ಉತ್ತರ
 5. ಆಗಸ್ಟ್ 16 2015

  ಕಥೆ ಬೆಳವಣಿಗೆ ಚನ್ನಾಗಿದೆ… ಮುಕ್ತಾಯ ಸರಿ ಕಾಣುತ್ತಿಲ್ಲ. ಇಲ್ಲಿ ಸತ್ತವರ್ರಾರು ದೆವ್ವ ಯಾರು ತಿಳಿಯುತ್ತಿಲ್ಲ.

  ಉತ್ತರ
  • Santosh Ramannanavar
   ಏಪ್ರಿಲ್ 17 2016

   Sattavaru Moole mane Bhatru,,

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments