ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 31, 2014

20

ಯಾನದ ಕಿಟಕಿಯಿಂದೊಂದು ಇಣುಕು ನೋಟ

‍ನಿಲುಮೆ ಮೂಲಕ

ಭೈರಪ್ಪನವರ ಕಾದಂಬರಿಗಳು ವಸ್ತು ವಿಷಯದಿಂದಲೂ, ಕಥೆಯ ಗಂಭೀರ ಹಂದರದಿಂದಲೂ ಇತರರಿಗಿಂತ ಭಿನ್ನವಾಗಿರುವ ವಿಚಾರ ತಿಳಿಯದ್ದೇನಲ್ಲ. ಈ ಸರಣಿಗೆ ಮತ್ತೊಂದು ಸೇರ್ಪಡೆ ‘ಯಾನ’. ಇಂಗ್ಲೆಂಡಿನ ಸಾಹಿತ್ಯಾಸಕ್ತರು ಯಾನವನ್ನು ಓದಿ ವಿಮರ್ಶಿಸಿ ಬರೆದ ಲೇಖನಗಳ ಸರಣಿ ನಿಮ್ಮ ಮುಂದಿದೆ.

ಉಮಾ ವೆಂಕಟೇಶ್, ದಾಕ್ಷಾಯಿಣಿ, ಕೇಶವ್ ಕುಲಕರ್ಣಿ ಹಾಗೂ ಸುದರ್ಶನ ಗುರುರಾಜರಾವ್ ಬರೆದ ಇಣುಕು ನೋಟದ ಪರಿಚಯ ನಿಮಗೆ ನೀಡುತ್ತಿದ್ದೇವೆ,ಪ್ರಯಾಣದಲ್ಲಿ ಹೊರ ನೋಟದ ಅನುಭವ  ಕಣ್ಣಿಗೆ ಒಂದೇ ಆಗಿದ್ದರೂ, ಅನುಭಾವ ವಿಭಿನ್ನವೇ

 ಸುದರ್ಶನ ಗುರುರಾಜರಾವ್

ಯಾನಯಾನದಲ್ಲಿ ಬರುವ ಪ್ರಮುಖ ಪಾತ್ರಗಳಾದ ಉತ್ತರಾ (ಹೆಣ್ಣು) ಹಾಗೂ ಸುದರ್ಶನ (ಗಂಡು) ಎರಡೂ ನನಗೆ ಆತ್ಮೀಯವಾದ ಹೆಸರುಗಳೇ. ಉತ್ತರಾ ನನ್ನ ಜನ್ಮ ನಕ್ಷತ್ರದ ಹೆಸರಾದರೆ ಸುದರ್ಶನ ನನ್ನ ಹೆಸರೇ ಆಗಿದೆ. ಸ್ವನಾಮ ಪ್ರೇಮ, ಸ್ವನಾಮಾನುಕಂಪ ಹಾಗೂ ಪಕ್ಷಪಾತಗಳು ತಿಳಿಯದ್ದೇನಲ್ಲ. ಈ ಹಿನ್ನೆಲೆಯಲ್ಲಿ ಈ ಕಾದಂಬರಿಯ ಪಾತ್ರಗಳನ್ನು ನಿರೂಪಣೆಯನ್ನು ಹಾಗೂ ಕಥಾವಸ್ತುವನ್ನು ಅದಷ್ಟು ವಸ್ತುನಿಷ್ಠ ವಾಗಿ ಮಾಡಲು ಪ್ರಯತ್ನಿಸಿದ್ದೇನೆಂದು ಮೊದಲೇ ಘೋಷಿಸಿಬಿಡುತ್ತೇನೆ.

‘’ಯಾನ’’ ಭೂಮಿಯಿಂದ ಬೇರೊಂದು ಸೌರವ್ಯೂಹವನ್ನೇ ಹೊಕ್ಕು ಅಲ್ಲಿ ಜೀವಸಂಕುಲವನ್ನು ಬೆಳೆಸಬಲ್ಲ, ಪೋಷಿಸಬಲ್ಲ ಗ್ರಹವೊಂದನ್ನು ಹುಡುಕುವ ಮಾನವನ ಮಹದೋದ್ದೇಶದ ಪ್ರಯಾಣಕಥನ., ಪ್ರಯಾಣವೊಂದು ಧಿಢೀರ್ ಎಂದು ಪ್ರಾರಂಭವಾಗುವುದಿಲ್ಲವಷ್ಟೆ ; ಅದಕ್ಕೆ ತಯಾರಿ ಬೇಕು. ಆ ತಯಾರಿಯ ಹಂತದಲ್ಲಿ ಪಾತ್ರ ಪರಿಚಯಗಳಗ್ಗುವುದಲ್ಲದೆಅವರ ಜೀವನದ, ಆ ದೇಶ ಕಾಲಗಳ ವಿದ್ಯಮಾನಗಳ ಭೂಮಿಕೆ ಕಾದಂಬರಿಯಲ್ಲಿ ಸಿದ್ದಹವಾಗುತ್ತದೆ. ಕಥೆಯು ಭೂತ ವರ್ತಮಾನಗಳ ಮಧ್ಯೆ ತುಯ್ದಾಡುತ್ತಾ,ಪಾತ್ರಗಳ ಮನೋವ್ಯಾಪಾರವನ್ನು ಅವರು ನಂಬಿದ ತತ್ವಗಳ /ಮಾನಸಿಕ ಮಸೂರದ ಮೂಲಕ ಹಾಗೂ ಅವರುಗಳು ಇರುವ ದೇಶ ಕಾಲ ಧರ್ಮ ನಂಬಿಕೆಗಳ ಚೌಕಟ್ಟಿನಲ್ಲಿ ತಿಳಿಸುತ್ತಾ ಸಾಗುತ್ತದೆ. ಇಲ್ಲಿ ಅರಿವು ಮತ್ತು ನಂಬಿಕೆಗಳ ನಡುವಿನ ವ್ಯತ್ಯಾಸ ಗಮನಿಸಬೇಕು.ನಂಬಿಕೆ ಮತ್ತು ಆಯ್ಕೆಗಳ ನಡುವಿನ ತಾಕಲಟಗಳೂ ಬರುತ್ತವೆ. ಮಾನವನ ಜೀವನದ ವಿದ್ಯಮಾನಗಳು ಮತ್ತು ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸರಳ ರೇಖಾತ್ಮಕವಾಗಿರದೆ ಎಡ ಬಲ ಊರ್ಧ್ವ ಹಾಗೂ ಅಧೋಮುಖಗಳಿಂದ ಬಂದು ಬಡಿಯುವ ಹಲಾವಾರು ಘಟನೆ,ಒತ್ತಡಗಳ ಸಂಕೀರ್ಣ ಉತ್ಪತ್ತಿ ಎಂಬುದು ಭೈರಪ್ಪನವರ ಎಲ್ಲ ಕಾದಂಬರಿಗಳಂತೆ ಇಲ್ಲಿಯೂ ಹಾಸು ಹೊಕ್ಕಾಗಿರುವ ಅಂಶ ;ಆದರೆ ಆಯಾಮ ಮಾತ್ರ ಬೇರೆ.

ಮೊದಲಿಗೆ ಪಾತ್ರಗಳನ್ನೂ ಕುರಿತು ನೋಡೋಣ.

ಉತ್ತರಾ:

ಉತ್ತರಾ ಒಬ್ಬಳು ಒಬ್ಬಳು ಚೆಲುವು, ಛಲ ,ವಿದ್ಯೆ,ಬುದ್ಧಿ,ಆತ್ಮವಿಶ್ವಾಸ ,ಯಾರೂ ಬಯಬಯಸಬಹುದಾದ ಸಾಮಾಜಿಕ ಹಾಗೂ ಕೌಟುಂಬಿಕ ಹಿನ್ನೆಲೆಯಿಂದ ಬಂದ ಹೆಣ್ಣು. ತಾನು ಬಯಸಿದ್ದನ್ನು ಹೋರಾಡಿ ಪಡೆಯಬಲ್ಲ ಮನೋಸ್ಥೈರ್ಯ ಇರುವಂತಹವಳು್. ಹೊಸ ಅನುಭವ ಸಾಹಸಗಳಿಗೆ ತನ್ನನು ತಾನು ಒಡ್ಡಿಕೊಳ್ಳಬಲ್ಲ ಆಧುನಿಕ ಮನೋಭಾವದವಳಾದರೂ ತನ್ನ ತಾಯಿ ತಂದೆಯರಿಂದ ಭಾರತೀಯ ಧರ್ಮ ನಂಬಿಕೆಗಳ ಅರಿವನ್ನು ಇಟ್ಟುಕೊಂಡು ಬೆಳೆದಿರುವವಳು.. ಪೈಲಟ್ ವ್ರುತ್ತಿಯಿಂದ ಹೊರಬಂದು ವ್ಯೋಮಯಾನದ ಪ್ರಯೋಗಾತ್ಮಕ ಕ್ರಿಯೆಗೆ ಸ್ವ ಇಚ್ಚೆಯಿಂದಲೇ ಹೋಗಿ ಆಯ್ಕೆಯಾಗುತಾಳೆ. ಅಲ್ಲಿ ಯಾದವನೊಂದಿಗೆ ಪ್ರೇಮಾಕುರವೂ ಆಗಿ ಬಾಹ್ಯಾಕಾಶದಲ್ಲಿ ದೇಹಸಂಪರ್ಕ ಮಾಡುವ ಮುನ್ನ ಗಂಧರ್ವ ರೀತಿಯಲ್ಲಿ ವಿವಾಹವನ್ನು ಮಾಡಿಕೊಳ್ಳುತಾಳೆ. ಆ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಹೆಸರನ್ನೂ ಗಳಿಸುತ್ತಾಳೆ. ತನಗಿದ್ದ ಸಂಸ್ಕಾರದ ಫಲವಾಗಿ ಆ ಎಲ್ಲ ಹಣ, ಹೆಸರು ಪ್ರತಿಷ್ಠೆಗಳು ತರಬಹುದಾದ ಅವಘಢ ಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತಾಳೆ. ಮುಂದಿನ ಹಂತದ ಯೋಜನೆಗೆ ಅವಳ ಪ್ರಿಯಕರ /ಗಂಡನಾದ ಯಾದವನು ಉತ್ಸಾಹ ತೋರದಿದ್ದಾಗ ತಾನು ಹೊರಟು ನಿಲ್ಲುತ್ತಾಳೆ. ಮನೆಯ/ ಮನೆಯವರ ಜವಾಬುದಾರಿಯ ಕಾರಣ ಅವನು ಬರುತ್ತಿಲ್ಲವೆಂದು ತಿಳಿದಿದ್ದರೂ ತನ್ನ ನಿರ್ಧಾರ ಬದಲಾಯಿಸದವಳಾಗುತ್ತಾಳೆ. ಸ್ವತಂತ್ರ ಮನೋಭಾವದ ಉತ್ತರಾ, ಯಾದವನ ಭೂಮಿಯ ಮೇಲಿನ ಕೌಟುಂಬಿಕ ಅನಿವಾರ್ಯತೆಗಳಿಗೆ ಸ್ಪಂದಿಸುವುದಿಲ್ಲ. ಕೀರ್ತಿ, ಹೊಸ ಅನುಭವ, ದೇಶಪ್ರೇಮ ದೇಶಸೇವೆ ಇವುಗಳ ನಡುವಿನ ಗೊಂದಲ ಒಂದು ಕಡೆ ,ಯಾದವನ ಮೇಲಿನ ಪ್ರೀತಿ,ಸೆಳೆತ,ತನ್ನದೇ ಸಂತತಿಯನ್ನು ಬೆಳೆಸುವ ಆಕಾಂಕ್ಷೆ ಇನ್ನೊಂದೆಡೆ. ಯಾದವ ಅವಳ ಒತ್ತಡಕ್ಕೆ ಒಪ್ಪದೇ ಹೋದಾಗ ತನ್ನ ಅಂತರಾತ್ಮಕ್ಕೆ ವಿರುದ್ಧ ಯಾನಕ್ಕೆ ಹೊರಟೆ ಬಿಡುತ್ತಾಳೆ. ಅಲ್ಲಿಂದ ಮುಂದೆ ಅವಳ ಉತ್ಸಾಹ, ಕಾರ್ಯ ತತ್ಪರತೆ ತನ್ನ ತತ್ವಗಳ ಮೇಲಿನ ನಂಬಿಕೆ ಇತ್ಯಾದಿಗಳು ಅವಳ ಜೀವನದಲ್ಲಿ ಮಸುಕಾಗುತ್ತಾ ಹೋಗುತ್ತವೆ. ತನ್ನ ಅಯೋಮಯ ಹೊಯ್ದಾಟದಲ್ಲಿ ಸಹಯಾತ್ರಿ ಸುದರ್ಶನ ನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಅವನನ್ನು ವಿರೋಧಿಸಿ, ಆ ಮೂಲಕ ದಾಂಪತ್ಯ ಜೀವನ ಶುರುಮಾಡುವಲ್ಲಿ ವಿಳಂಬಿಸಿ ಅವನನ್ನು ಮಾನಸಿಕವಾಗಿಯೂ ,ದೈಹಿಕವಾಗಿಯೂ ಕಳೆದುಕೊಳ್ಳುತ್ತಾಳೆ. ಕೃತಕ ಗರ್ಭಧಾರೆಣೆಯ ಮೂಲಕ ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಪಡೆದು, ಅವರ ಆರೈಕೆ ಪಾಲನೆ ಮಾಡಿದಾಗ್ಯು ಅವಳ ಹಾಗೂ ಸುದರ್ಶನನ ಮಧ್ಯೆ ಮಾನಸಿಕೆ ಸಾಹಚರ್ಯ ಸೌಹಾರ್ದತೆ ಬೆಳೆಯುವುದೇ ಇಲ್ಲ. ಒಳ್ಳೆಯ ತಾಯಿಯಾಗುವ ಉತ್ತರಾ ತನ್ನ ನಡವಳಿಕೆ ನಿರ್ಧಾರಗಳಿಂದ ಹಲವು ಉತ್ತರಗಳಿಲ್ಲದ ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತಾಳೆ.

ಒಂದು ಪಾತ್ರ ಓದುಗರು ಕಟ್ಟಿಕೊಂಡ ನಿರೀಕ್ಷೆ ಅಥವಾ ಆದರ್ಶದ ಪ್ರಕಾರ ಸಾಗಬೇಕೇ ಬೇಡವೇ ಎಂಬುದು ಇಲ್ಲಿನ ಚರ್ಚೆಯ ವಿಷಯ.

ಮಹಿಳಾವಾದಿಗಳ ಪ್ರಕಾರ ಉತ್ತರಾ ಪಾತ್ರ ಪೂರ್ಣ ಪ್ರಮಾಣದಲ್ಲಿ ಮೂಡಿ ಬಂದಿಲ್ಲ ಎಂದೆನ್ನಬಹುದು. ಅಷ್ಟೆಲ್ಲಾ ಪ್ರತಿಭೆಯಿದ್ದವಳನ್ನು ಕಡೆಗೆ ಯಾವುದನ್ನೂ ವೃದ್ಧಿಗೊಳಿಸಿಕೊಳ್ಳದೆ ಇಡೀ ಯಾನದ ಕಾಲಮಾನದಲ್ಲಿ ತೋಟದಲ್ಲಿ ಕಾಲ ಕಳೆಯುವ, ಮಕ್ಕಳಿಗೆ ತಾಯಿಯಾಗುವ,ಹಾಗೂ ಆಗೀಗ ಅಡುಗೆ ಮಾಡುವ ಗೃಹೀತ ಕೆಲಸಕ್ಕೆ ಸೀಮಿತಗೊಳಿಸಿ ಕಾದಂಬರಿಕಾರರು ಈ ಪಾತ್ರಕ್ಕೆ ಅನ್ಯಾಯ ಮಾಡಿದ್ದಾರೆ; ಮಹಿಳಾ ಸಬಲತೆಯನ್ನು ಎತ್ತಿ ಹಿಡಿದಿಲ್ಲ ,ಮತ್ತೆ ಅದೇ ದಮನೀಯ ಮನೋಧರ್ಮವನ್ನು ಒಬ್ಬ ಆಧುನಿಕ ಮಹಿಳೆಗೆ ಆರೋಪಿಸಿ ಪ್ರ್ಗಗತಿವಿರೋಧಿಯಾಗಿ ಬಿಂಬಿಸಿಕೊಂಡಿದ್ದಾರೆ ಎನ್ನುವ ಟೀಕೆಗಳು ಬರಬಹುದಾದ ಸನ್ನಿವೇಶ ತಂದುಕೊಂಡಿದ್ದಾರೆ .

ಸೈದ್ಧಾಂತಿಕ ನೆಲೆಗಟ್ಟಿನಿಂದ ನೋಡಿದರೆ ಇದು ಸರಿ ಎಂದೆನ್ನಿಸಬಹುದು. ಆ ಪಾತ್ರವನ್ನು ಆದರ್ಶೀಕರಣಗೊಳಿಸಿ ನೌಕಾಯಾನದ ಯಶೋಗಾಥೆಯಲ್ಲಿ ಅವಳ ಸಾಹಸ, ತಾಂತ್ರಿಕ ಪರಿಣತಿಗಳನ್ನು ಒರೆಗಿಟ್ಟು ಪಾತ್ರವನ್ನು ಸಶಕ್ತಗೊಳಿಸಬಹುದಿತ್ತು . ಆದರೆ ಅದು ಕೇವಲ ಸೈದ್ಧಾಂತಿಕ ನೆಲೆಗಟ್ಟು.

ವೈಚಾರಿಕ ಹಾಗು ವಾಸ್ತವಿಕ ನೆಲೆಗಟ್ಟಿನಿಂದ ನೋಡಿದಾಗ ಹಲಾವಾರು ಹೆಣ್ಣುಗಳು ತಮ್ಮ ಸಾಧನೆಯಾ ಹಾದಿಯಿಂದ ಸರಕ್ಕನೆ ಹೊರಳಿ ತಮ್ಮ ಪಾರಂಪರಿಕವಾದ ,ಜೀವ ವಿಕಾಸದ ಮೂಲಭೂತ ಕೆಲಸವಾದ ಕುಟುಂಬದ ಲಾಲನೆ ಪಾಲನೆಯಲ್ಲಿ ತೊಡಗುವುದು ಅಪರುಪವೂ ಅಲ್ಲ, ಅಸಾಧುವೂ ಅಲ್ಲ,ಅಸಾಧ್ಯವೂ ಅಲ್ಲ. ಅಷ್ಟಕ್ಕೂ ತನ್ನ ಪ್ರೇಮವೈಫಲ್ಯವನ್ನು ಅನುಭವಿಸಿದ ಉತ್ತರೆಯಲ್ಲಿ ಆ ರೀತಿಯ ನಿರಾಸಕ್ತಿ ಮೂಡುವುದು ಹಲವಾರು ಮನೋವ್ಯಾಪಾರಗಳ ಸಾಧ್ಯಾ ಸಾಧ್ಯತೆಗಳ ಪಟ್ಟಿಯಲ್ಲಿ ಪ್ರಮುಖವಾದ ಅಂಶವೇ ಅಗಿದೆ್‌. ಹಾಗಾಗಿ ಭೈರಪ್ಪನವರು ತಮಗೆ ಬೇಕಾದ ಒಂದನ್ನು, ಹಂದರಕ್ಕೆ ಹೊಂದುವಹಾಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿಸಿಕೊಂಡದ್ದು ಅಕ್ಷಮ್ಯವೆಂತೇನೂ ಅನಿಸಲಿಲ್ಲ. ಇಷ್ಟಕ್ಕೂ ಜೀವನ ನಿರ್ವಹಣೆ ಹಾಗೂ ಭದ್ರತೆಯ ದೃಷ್ಟಿಯಿಂದ ಯಾವ ಕೊರತೆಯೂ ಇರದ ಪರಿಸ್ಥಿತಿಯಲ್ಲಿ ಮಾನವ ಜೀವಿಯೊಂದು ಇರುವಾಗ ದೇಹ – ಮನಸ್ಸುಗಳಿಗೆ ಕಡಿಮೆ ಜಗ್ಗಾಟ ಮಾಡಿಸುವ ಹಾದಿ ಹಿಡಿಯುವುದು ಮೂರರಲ್ಲಿ ಎರಡರಷ್ಟು ಜನ ಆಯ್ದುಕೊಳ್ಳುವ ಆಯ್ಕೆ!!.

ಯಾದವ :

ಕೆಳ ಮಧ್ಯಮ ವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದ, ತನ್ನವರ,ತನ್ನ ಮನೆಯವರ ಮೇಲೆ ಪ್ರೀತಿ ಜವಾಬ್ದಾರಿಗಳು ಇರುವ ಯುವಕನೊಬ್ಬನ ಮನೋವ್ಯಾಪಾರಗಳನ್ನು ಪ್ರತಿನಿಧಿಸುವ ಪಾತ್ರ. ಸಾಧಾರಣಕ್ಕಿಂತ ಹೆಚ್ಚಿನ ಬುದ್ಧಿಮತ್ತೆಯಿದ್ದರೂ ಯಾದವ ದೈಹಿಕವಾದ ಚಟ್ಟುವಟಿಕೆಗಳಲ್ಲಿ ಹೆಚ್ಚು ಒಲವಿರುವ ಮನಸ್ಸುಳ್ಳವ;ಸೈದ್ಧಾಂತಿಕ ವಿಜ್ಞಾನ ಹಾಗೂ ಅದರ ಪರಿಕಲ್ಪನೆಗಳು ಅವನಿಗೆ ಹಿಡಿಸವು. ಹೀಗಾಗಿ ಈ ಗ್ಗಾಗಲೇ ವೈಜ್ಞಾನಿಕವಾಗಿ ,ಪ್ರಾಯೋಗಿಕವಾಗಿ ಭದ್ರ ನೆಲೆಯ ಮೇಲೆ ನಿಂತಿರುವ ಬಾಹ್ಯಾಕಾಶಯಾನ ಅವನಿಗೆ ಸುಲಭ ಸಾಧ್ಯ. ಇಲ್ಲಿ ಅಮೂರ್ತ (ಅಬ್ಸ್ಟ್ರ್ಯಾಕ್ಟ್) ಆಲೋಚನೆಗಳ ವ್ಯಾಪ್ತಿ ಬಹಳ ಕಡಿಮೆ. ಆದರೆ ಇನ್ನೊಂದು ಸೌರವ್ಯೂಹಕ್ಕೆ ಹೋಗುವ ಸೋಲಾರಿಸ್ನಲ್ಲಿ ಅವನ ಬುದ್ಧಿಮತ್ತೆಗೆ ಹೆಚ್ಚಿನ ಸವಾಲು ಎದುರಾಗುತ್ತಿತ್ತು. ಅವನ ಮನಸ್ಥಿತಿ ಅದರ ಮಟ್ಟಕ್ಕೆ ಏರಿಸುವಷ್ಟಿರಲಿಲ್ಲ. ತಂಗಿಯರ ಮದುವೆ ಹಾಗೂ ತಂದೆ ತಾಯಿಯರ ಆರೈಕೆ ಪಾಲನೆಗಳನ್ನು ಪ್ರಧಾನ ಜೀವನ ಧ್ಯೇಯವನ್ನಾಗಿ ಪರಿಗಣಿಸುವ ಅವನಿಗೆ ( ಅಥವಾ ಅವನಮ್ತಿರುವ ಇನ್ಯಾರಿಗಾದರೂ) ಈ ಹೊಸಬಗೆಯ ಸಾಹಸಕ್ಕೆ ಕೈ ಹಾಕಿ ಅವರೆಲ್ಲರಿಂದ ದೂರ ಉಳಿಯುವ ಮನೋಧಾರ್ಢ್ಯತೆ ಇರುವುದಿಲ್ಲ್‌. ಹಾಗಾಗಿಯೇ ಹೊಸ ಸವಾಲಿಗೆ ಒಡ್ಡಿಕೊಳ್ಳುವ ಉತ್ತರೆಯ ಹಂಬಲದಿಂದ ದೂರ ಸರಿಯುತ್ತಾನೆ. ಉತ್ತರಾ ಕೂಡಾ ಅವನ ಕೋರಿಕೆಯನ್ನು ತಿರಸ್ಕರಿಸಿ ಹೊರಟು ನಿಲ್ಲುತಾಳೆ. ಹಾಗೆಂದು ಅವನಿಗೆ ಊತ್ತರೆಯ ನೆನಪು ಮಾಸುವುದಿಲ್ಲ; ತನ್ನ ಹೆಂಡತಿ ರಾಜನಿಗೆ ಅದನ್ನು ತಿಳಿಸಿರುವುದು ಇಲ್ಲ. ರಾಷ್ತ್ರೀಯ ಭದ್ರತೆ, ರಹಸ್ಯದ ಕಾರಣದ ಜೊತೆಗೆ ಪತಿ ಪತ್ನಿಯರ ನಡುವೆ ಬೇರೊಂದು ಹೆಣ್ಣಿನ ವಿಚಾರವಾಗಿ ಇರಬಲ್ಲ ಆತಂಕ, ಸಂಕೋಚ ಎರಡೂ ಕಾರಣ. ಅದು ತಿಳಿದು ಬಿಟ್ಟಾಗ ರಜನಿಯ ಪ್ರತಿಕ್ರಿಯೆಯೂ, ಯಾದವನ ನಡವಳಿಕೆಯೂ ಯಾವ ಆದರ್ಶಗಳ ಚೌಕಟ್ಟಿಗೆ ಮಣಿಯದೆ ಸಾಮಾನ್ಯ ಮನುಷ್ಯರ ಪ್ರಾತಿನಿಧಿಕ ಪ್ರತಿಕ್ರಿಯೆಯಾಗಿಯೇ ಚಿತ್ರಣಗೊಂಡಿದೆ. ಭೈರಪ್ಪನವರ ಕಥಾನಿರೂಪಣೆ ಇದೇ ಕಾರಣಕ್ಕೆ ಸಾರ್ವಕಾಲಿಕ ಕೃತಿಯಾಗಿ ನಿಲ್ಲುವ ಶಕ್ತಿ ಪಡೆದಿರುತ್ತದೆ. ಆದರ್ಶಗಳ ಚೌಕಟ್ಟಿನಲ್ಲಿ ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಪ್ರಬುದ್ಧ ನಡವಳಿಕೆ ತೋರಬಹುದಿತ್ತು. ಇದು ಅಪರೂಪ. ಆದರೆ ಇತಿಹಾಸ ಗಮನಿಸಿದಾಗ ಸಾಂದರ್ಭಿಕ ಅನಿವಾರ್ಯತೆಯನ್ನು ಲೆಕ್ಕಿಸದೆ ಪ್ರತಿಭಟನೆ, ಜಗಳ ದೂಷಣೆ, ಆರೋಪ ಪ್ರತ್ಯಾರೋಪ ಇತ್ಯಾದಿಗಳೇ ಹೆಚ್ಚು ನಡೆಯುವ ಕಾರಣ ವಾಸ್ತವಿಕ ನೆಲೆಗಟ್ಟಿನ ಚಿತ್ರಣ. ಮನೋವ್ಯಾಧಿಗೆ ತುತ್ತಾಗುವುದು ಇದರ ಇನ್ನೊಂದು ಲಕ್ಷಣ. ಅವನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಸಾಮರ್ಥ್ಯದ ಚೌಕಟ್ಟಿನಲ್ಲಿ ಆದಷ್ಟು ಪ್ರಾಮಾಣಿಕವಾಗಿ ಇರಬಯಸುವ ವ್ಯಕ್ತಿ. ವ್ಯಕ್ತಿಕೇಂದ್ರಿತ ಆಸೆ ಆಕಾಂಕ್ಷೆಗಳು ಹಾಗೂ ಕುಟುಂಬ ಅಥವಾ ಸಮುದಾಯ ಕೇಂದ್ರಿತ ನಿರೀಕ್ಷೆಗಳ ತಾಕಲಾಟದಲ್ಲಿ ಯಾದವನ ಮನಸ್ಸು ಎರಡನೆಯ ಕಡೆಗೆ ವಾಲಿದುದು ಅನಿರೀಕ್ಷಿತವೇನಲ್ಲ. ಅದು ಸಂಸ್ಕಾರ ಸಂಸ್ಕೃತಿಗಳು ರೂಪಿಸುವ ಒಂದು ವ್ಯಕ್ತಿತ್ವ.ವೈಯಕ್ತಿಕ ಆಕಾಂಕ್ಷೆ, ಉತ್ತರಾಳ ಆಗ್ರಹ ಹಾಗೂ ತನ್ನ ಕುಟುಂಬ ಇಟ್ಟಿರುವ ನಿರೀಕ್ಷೆ ಇವು ಮೂರರ ತಾಕಲಾಟದಲ್ಲಿ ,ಹಗ್ಗ ಜಗ್ಗಾಟದಲ್ಲಿ ಸಮನ್ವಯ ಸಾಧಿಸುವ ಸಾಧ್ಯತೆ ಇಲ್ಲದೇ ಹೋದಾಗ ಅಸಹಾಯಕವಾದ, ಬಲಹೀನವಾದ ಹಾಗೂ ವ್ಯತಿರಿಕ್ತ ಪರಿಣಾಮಗಳಿಗೆ ಹಲವು ಜೀವಗಳು ತುತ್ತಾಗುವ ಸಾಧ್ಯತೆ ಮನಗಂಡು ತನ್ನ ಹಾಗೂ ಉತ್ತರಾಳ ಸಂಬಂಧವನ್ನು ತೊರೆಯುವ ಕಷ್ಟ ಸಾಧ್ಯ ಆದರೆ   ಕಾರ್ಯಸಾಧುವಾದ ನಿರ್ಧಾರ ತೆಗೆದುಕೊಳ್ಳುತ್ತಾನೆ.ವ್ಯಕ್ತಿಗತ ಹಿತಾಸಕ್ತಿಗಾಗಿ ಇನ್ನೊಬ್ಬರ ಹಿತವನ್ನು ಮೆಟ್ಟಲು ಸಧೃಢ ಮನಸ್ಸು ಬೇಕಾಗಿಲ್ಲ.ಹೀಗಾಗಿ ಅವನು ದುರ್ಬಲ ಮನಸ್ಸಿನ ವ್ಯಕ್ತಿಯೆಂದು ನನಗನ್ನಿಸುವುದಿಲ್ಲ.

ಸುದರ್ಶನ

ಮೂರನೆಯ ಪಾತ್ರವಾಗಿ ಮೂಡಿಬರುವ ಸುದರ್ಶನನ ವ್ಯಕ್ತಿತ್ವ ಸ್ವಲ್ಪ ವಿಭಿನ್ನ ಸ್ವರೋಪದ್ದು. ಇವನು ಅಸಾಧಾರಣ ಬುದ್ಧಿವಂತ ಹಾಗೂ ಒಂದು ಚೌಕಟ್ಟಿಗೆ ಒಳಪಟ್ಟ ವ್ಯಕ್ತಿತ್ವದವನಲ್ಲ. ಇವನ ಬಾಲ್ಯ ಯೌವ್ವನಗಳನ್ನು ಹೆಚ್ಚು ಕಟ್ಟಿ ಕೊಟ್ಟಿಲ್ಲವಾದ್ದರಿಂದ ತಂದೆ ತಾಯಿಯರ ಪರಿಪೂರ್ಣ ಆರೈಕೆ ಇವನಿಗೆ ಸಿಕ್ಕಿಲ್ಲ ಹಾಗೂ ಅಕ್ಕನ ಆರೈಕೆಯಲ್ಲಿ ಬೆಳೆದವನೆಂದು ಊಹಿಸಿಕೊಳ್ಳಬಹೌದು. ಇಂತಹ ಸನ್ನಿವೇಶಗಳಲ್ಲಿ ಆಗುವ ಬಹುತೇಕ ಮನಬೆಳವಣಿಗೆಗಳಂತೆ ಇವನಿಗೆ ಸಾಮಾಜಿಕ ಬಂಧನ ವಾತ್ಸಲ್ಯಗಳ ಸೆಳೆತ ಅಷ್ಟಕ್ಕಷ್ಟೆ. ಹಾಗೆಂದು ಮೌಲ್ಯಗಳೇ ಇಲ್ಲವೆನ್ನುವಂತಿಲ್ಲ. ಹೊರದೇಶಗಳಲ್ಲಿ ಇದ್ದ ಕಾರಣಕ್ಕೂ,ಯಾನಕ್ಕೆ ಮುಂಚೆಯೇ ದೇಹ ಸಂಪರ್ಕದ ಅನುಭವ ಇದ್ದುದಕ್ಕೂ, ಮದುವೆಯಾಗದೆ ಉಳಿದವನಾದುದಕ್ಕೂ ಹೆಚ್ಚಿನ ತಾಕಲಾಟಗಳು ಇವನಲ್ಲಿ ಕಂಡುಬರುವುದಿಲ್ಲ.ಯಾನದಲ್ಲಿ ಉತ್ತರೆಯ ನಡವಳಿಕೆಗಳು ಇವನಲ್ಲ್ಲಿ ಎಬ್ಬಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂತರ್ಮುಖಿಯಾಗುವ ಮೂಲಕ ಅವನ ಪಾತ್ರ ಹಾಗೂ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಧ್ಯಾನಸ್ಥಿತಿಯಲ್ಲಿ ಇಳಿಯುತ್ತಾ ವಿಶ್ವರಹಸ್ಯದ ಉತ್ತರಗಳನ್ನು ತತ್ವಮೀಮಾಂಸೆಯಲ್ಲಿ ಹುಡುಕುತ್ತಾ ಹೋಗುವ ಅವನ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು.ಈ ಮೂಲ ತಿರುಳಿನ ಸುತ್ತಲೇ ಇರುವ ಸಿಪ್ಪೆ, ಬೀಜಗಳಂತೆ ಉಳಿದ ಪಾತ್ರಗಳು ನನಗೆ ಭಾಸವಾಗುತ್ತವೆ.

ಬೆಳಕು- ಕತ್ತಲು,ಸೂರ್ಯ ,ಗುರುತ್ವ, ಕೃಷ್ಣ ಗುಹ್ವರ ಇತ್ಯಾದಿಗಳ ತಾತ್ವಿಕ ಸಂವಾದ ಇಲ್ಲಿನ ಹೈಲೈಟ್ . ಸಮಕಾಲೀನ ಜಗತ್ತಿನ ಎಡ-ಬಲ ರಂಗಗಳ ಸೈಧ್ಧಾಂತಿಕ ಭಿನ್ನಾಭಿಪ್ರಾಯಗಳು , ಜಾಹಿರಾತು ಮಾರುಕಟ್ಟೆ ಹಣ ಪ್ರಚಾರಗಳ ಜೇಡರ ಬಲೆ,ಹಿಮಾಲಯದ ತಪ್ಪಲು ,ಅಲ್ಲಿ ನಡೆಯುತ್ತಿರುವ ವಿಧ್ವಂಸಕ ಬೆಳವಣಿಗೆಗಳು , ಜನರ ಮನೋಭಾವ ಮೌಲ್ಯಗಳಲ್ಲಾಗುತ್ತಿರುವ ಅಧಃ ಪತನಗಳು ಎಲ್ಲವನ್ನು ವಿವರಿಸುವಲ್ಲಿ ಕಥೆ ನಡೆಯುವ ಕಾಲಮಾನದ ಚಾರಿತ್ರಿಕ ಚೌಕಟ್ಟನ್ನು ಕಟ್ಟಿಕೊಡುತ್ತವೆ,. ಹಾಗಾಗಿ ಈ ಕಾದಂಬರಿಯನ್ನು ಇನ್ನೂ ಐವತ್ತು ವರ್ಷ ಕಳೆದು ಓದಿದರೂ ಅದರ ಪ್ರಸ್ತುತಿ ಸ್ವೀಕರಣೀಯವೆಂದು ನನ್ನ ಭಾವನೆ. ಅಕ್ಕನ ನಿರಪೇಕ್ಷ ಅಂತಃ ಕರಣ, ಭಾವನ,ಅವರ ಮಕ್ಕಳ ಪ್ರೀತಿ, ಧ್ಯೇಯಸಾಧನೆಗೆ ಮುಖಮಾಡಿದವನಿಗೆ ಅಸ್ತಿ ಪಾಸ್ತಿಯ ಮೇಲಿನ ನಿರಾಸಕ್ತಿಯಂಥ ಸಾರ್ವಕಾಲಿಕ ಸತ್ಯಗಳು ಕೂಡಾ ಕಥೆಯಲ್ಲಿ ಬಂದು ಹೋಗುತ್ತವೆ. ಭೂಮಿಯಲ್ಲಿ ಲೋಭ ಮೋಹಗಳನ್ನು ಗೆಲ್ಲಬಲ್ಲ ಮನೋಭೂಮಿಕೆ ರೂಪುಗೊಂಡು ಉತ್ತರೆಯೋಂದಿಗೆ ಸೋಲ್ಯಾರಿಸ್ ನಲ್ಲಿ ಕಾಮವನ್ನು ಗೆಲ್ಲಬಲ್ಲ ,ಕ್ರೋಧವನ್ನು ಮಣಿಸಬಲ್ಲ ಮನೋಸ್ಥಿತಿ ಮೂಡುವುದರ ಮುನ್ನುಡಿ ಸುಪ್ತವಾಗಿ ವ್ಯಕ್ತಪ ಡಿಸುತ್ತಾರೆ ಭೈರಪ್ಪನವರು. ಏಕಾಂತದಲ್ಲಿ ಕಾಮವನ್ನು ಗೆಲ್ಲುವುದು ಕಷ್ಟಕರ. ಇಲ್ಲಿ ಅವನು ಉತ್ತರೆಯೊಡನೆ ಹೊಂದಾಣಿಕೆ ಮಾಡಿಕೊಂಡು ಉಳಿದ ಸಾಧನೆಗಳ ಶಿಖರ ಏರಬಹುದಿತ್ತೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದರೆ ಕಥೆಯ ಓಟಕ್ಕೆ ಚ್ಯುತಿ ಬರುತ್ತಿತ್ತೇ ಇಲ್ಲವೇ ಎಂದು ಹೇಳುವುದು ಕಷ್ಟ. ಅವರಿಬ್ಬರಲ್ಲಿ ಮೂಡುವ ಬಿರುಕು ಹಾಗೂ ಸಮರಸವಿಲ್ಲದ ಜೀವನ ಓದುಗನಲ್ಲಿ ಒಂದುಬಗೆಯ ಹತಾಶೆ ಮೂಡಿಸುವುದಂತೂ ನಿಜ.ಯಾನದ ನೌಕೆಯ ಒಳಗೂ, ಹೊರಗೂ ಇರುವ ನಿರ್ವಾತವನ್ನು, ಏಕತಾನತೆಯನ್ನು ಇದು ಪ್ರತಿನಿಧಿಸುತ್ತದೆಯೇನೋ ನನಗೆ ತಿಳಿಯದು. ಎರಡು ವಿಭಿನ್ನ ನೌಕೆಗಳಲ್ಲಿ ಎರಡು ವಿಭಿನ್ನ ಪರಸ್ಪರ ಸಂಬಂಧವಿರುವ ಜೋಡಿಗಳ ಕಥಾ ಹಂದರ ಇದ್ದಲ್ಲಿ ಕಥೆಯ ವ್ಯಾಪ್ತಿ ಸಮಗ್ರವಾಗುತ್ತಿತ್ತೇನೋ.

ಉಳಿದ ಮುಖ್ಯಪಾತ್ರಗಳಾದ ಆಕಾಶ್ ಹಾಗೂ ಮೇದಿನಿ ಅವರ ಚಿತ್ರಣ ಕಥಾ ಕ್ರಿಯೆಯ ಮೂಲ ಪರಿಕರಗಳಾಗದೆ ಕೇವಲ ವೇಗವರ್ಧಕಗಳಂತೆ ಮೂಡಿಬರುತ್ತವೆ.

ಕಥಾನಿರೂಪಣೆ:

ವೈಜ್ಞಾನಿಕ ಹಂದರದ ಮೇಲೆ ಕಟ್ಟಿಕೊಟ್ಟ ವೈಚಾರಿಕ ಕಥೆಯಾದ್ದರಿಂದ ಇಲ್ಲಿ ಯಾವ ರೋಚಕ ಸನ್ನಿವೇಶಗಳು ಮೂಡುವುದಿಲ್ಲ. ಬಾಲಿವುಡ್ ಅಥವಾ ಹಾಲಿವುಡ್ ನ ಸಾಹಸ ಇಲ್ಲಿಲ್ಲ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿ ಹೋಗುತ್ತಿದೆ ಎಂದೆ ನ್ನಿಸಿದರೂ, ಓದಿಸಿಕೊಂಡು ಹೋಗುವುದರಲ್ಲಿ ಕಾದಂಬರಿ ಸೋಲುವುದೆಂದು ನನಗನ್ನಿಸಲಿಲ್ಲ.ಭೈರಪ್ಪನವರ ಕಥೆಗಳಲ್ಲಿ ಬರುವ ಕಾಮ ಇಲ್ಲಿಯೂ ಸಾಕಷ್ಟು ಇದೆ. ಅಲ್ಲಲ್ಲಿ ವೈಜ್ಞಾನಿಕ ವಿವರಣೆಗಲಿದ್ದರೂ, ಓದುಗನ ಗಮನ ಆ ಕಡೆಗೆ ಅಷ್ಟು ಹರಿಯದು- ಕಾರಣ ಇದು ಮೂಲಭೂತವಾಗಿ ವೈಚಾರಿಕ ಕಾದಂಬರಿ. ಹಾಗಾಗಿ ಇದನ್ನು ವೈಜ್ಞಾನಿಕ ಕಾದಂಬರಿ ಎಂದೆನ್ನಲಾಗದು.

ಕಥಾವಸ್ತು:

ಕಾದಂಬರಿ ಬರೆಯುವುದು ಮತ್ತು ಓದುವುದು ಏಕೆ ಎಂದು ಕೇಳಿಕೊಂಡರೆ ಹಲವರಿಂದ ಹಲವು ಉತ್ತರಗಳನ್ನು ನಿರೀಕ್ಷಿಸಬಹುದು. ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲ ಧ್ಯೇಯ ಅವು ಪುರಾಣ, ಇತಿಹಾಸ, ದೃಷ್ಟಾಂತಗಳ ಮೂಲಕ ಪ್ರಪಂಚದ ಗುಣ ಸ್ವರೂಪಗಳನ್ನು , ಒಳ್ಳೆಯದು-ಕೆಟ್ಟದ್ದು ಸ್ವೀಕೃತ -ಅಸ್ವಿಕೃಉತ ನಡವಳಿಕೆಗಳ ನಡುವಿನ ವ್ಯತ್ಯಾಸ ಗ್ರಹಿಸಿ ವ್ಯಕ್ತಿತ್ವವನ್ನು ರೂಪುಗೊಳಿಸಲಿಕ್ಕೆ ಹಾಗೂ ಮನರಂಜನೆಗೆ ಎಂದು ವ್ಯಾಖ್ಯಾನಿಸಬಹುದು.

ಆದರೆ ಪ್ರೌಢರು ಈ ಕಾದಂಬರಿಗಳಿಂದ ಏನನ್ನು ತೆಗೆದುಕೊಳ್ಳಬೇಕು? ಕನಸುಗಳನ್ನೇ ,ಆದರ್ಶಗಳನ್ನೇ,ಕಟುವಾಸ್ತವಗಳನ್ನೇ, ಅಥವಾ ಕ್ರಾಂತಿಕಾರಿ ಮನೋಭಾವಎಗಳನ್ನೇ, ವೈಚಾರಿಕತೆಯನ್ನೇ ಹೇಳುವುದು ಕಷ್ಟ. ಮೇಲಿನ ಎಲ್ಲ ನಿರೀಕ್ಷೆಗಳನ್ನು, ವಾಸ್ತವಿಕ, ಪ್ರಾಯೋಗಿಕ ಅಥವಾ ಕಾಲ್ಪನಿಕ ಆಯಾಮಗಳ ನಡುವೆ ಯಾವುದರಲ್ಲಿ ಭಾವಿಸಿಕೊಳ್ಳಬೇಕು ಎಂದಾಗ ಪ್ರಶ್ನೆ ಇನ್ನೂ ಜಟಿಲವಾಗುತ್ತದೆ. ಯಾರಿಗೆ ಯಾವುದು ಬೇಕು ಎನ್ನುವುದು ಅವರವರ ಭಾವ ಭಕುತಿ ಸಂಸ್ಕೃತಿ ಸಂಸ್ಕಾರಗಳನ್ನು , ಮನೋಧರ್ಮ ಮನೋವಾಂಛೆಗಳನ್ನು ಅವಲಂಬಿಸಿರುತ್ತದೆ.

ನನ್ನ ಮಟ್ಟಿಗೆ ಹೇಳುವುದಾದರೆ ಒಂದು ಸಾಹಿತ್ಯ ಕೃತಿ ವೈಚಾರಿಕತೆಯನ್ನು ಪ್ರಚೋದಿಸಬೇಕು. ಪರಂಪರೆ ತಳಹದಿಯ ಮೇಲೆ ನಮ್ಮ ಮನಸ್ಸಿನ ಗಡಿಯನ್ನು ವಿಸ್ತರಿಸುವಂತಿರಬೇಕು. ಹಳೆ ಬೇರಿನ ಮರಕ್ಕೆ ಹೊಸಚಿಗುರನ್ನು ಟಿಸಿಲೊಡೆಸಬೇಕು- ಬರೀ ಎಲೆಗಳನ್ನಲ್ಲ- ರೆಂಬೆ ಕೊಂಬೆಗಳ ಸಮೇತವಾಗಿ. ನಮ್ಮ ನಡುವಿನ ತಾಕಲಾಟಗಳಿಗೆ ನಮ್ಮ ಮನೋಧರ್ಮ ,ಮಾನವನ ಮೂಲಗುಣಗಳು ಕಾರಣವೇ ಹೊರತು ಅವುಗಳನ್ನು ಮೀರಿನಿಂತ ಧರ್ಮ ಅಲ್ಲ ಎಂಬ ಸತ್ಯವನ್ನು ಸಾರುವಂತಿರಬೇಕು. ಈ ಕಡೆಯ ಅಂಶ ಕೆಲವರಿಗೆ ಒಪ್ಪಿಗೆಯಾಗದೇ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾವು ಒಂದು ಸಮುದಾಯವಾಗಿ ಸಧೃಉಢವಾಗಿ ಮುನ್ನಡೆಯಬೇಕಾದರೆ ನಮ್ಮ ಮೂಲ ಹಾಗೂ ದೇಶೀ ಪರಂಪರೆಯ ಬಗೆಗೆ ವೈಜ್ಞಾನಿಕ ಅರಿವು, ಚಿಕಿತ್ಸಕ ಹೆಮ್ಮೆ ಇರುವುದು ಬಹಳ ಮುಖ್ಯ. ನಮ್ಮ ಸಂಸ್ಕೃತಿಯ ಅರಿವು ನಮಗೆ ಗಹನವಾಗಿ ಇದ್ದಲ್ಲಿ ಮಾತ್ರ ವಿಧ್ವಂಸಕ ಶಕ್ತಿಗಳು ಕೀಳಾಗಿ ಕಾಣುವುದಾಗಲೀ, ಕೀಳರಿಮೆ ಮೂಡಿಸುವುದಾಗಲೀ ಮಾಡಲಾರವು. ಒಡೆಯಲಾರವು.

ಇದೇ ಕಾರಣಕ್ಕೆ ಭೈರಪ್ಪನವರ ಯಾನ ನನಗೆ ಪ್ರಸ್ತುತವಾಗಿಯೂ, ಆಪ್ತವಾಗಿಯೂ ಕಾಣುತ್ತದೆ.. ದೇಶೀ ಭಾವನೆಗಳು ಹಾಗೂ ಚಿಂತನೆಗಳನ್ನು ಒರೆಗಿಟ್ಟು ಹೊಸ ಯುಗದ ವೈಜ್ಞಾನಿಕತೆಗೆ ಪೂರಕವಾಗಿ ತಾತ್ವಿಕ ಅಂಶಗಳ ಸಮನ್ವಯ ಸಾಧಿಸುತ್ತಾ ಹೋಗುತ್ತಾರೆ. ಪಾತ್ರಗಳನ್ನೂ ಯಾವ ಆದರ್ಶಗಳ ಚೌಕಟ್ಟಿಗೂ ಬಂಧಿಸದೆ ಅವರವರ ನಿರ್ಧಾರಗಳಿಗೆ ಪಕ್ಕಾಗಿಸುತ್ತಾರೆ ಹಾಗೂ ಆ ನಿರ್ಧಾರಗಳಿಗಳ ಪರಿಣಾಮಗಳನ್ನು ತೋರಿಸಿ ಅವಕ್ಕೆ ಹೊಣೆಯಾಗಿಸುತ್ತಾರೆ.

ಪರ್ವ, ಸಾರ್ಥ, ನೆಲೆ ಕಾದಂಬರಿಗಳಷ್ಟು ತೀವ್ರವಾಗಿಲ್ಲದಿದ್ದರೂ ಯಾನ ನಮ್ಮ ಮನೋ ವಿಮಾನವನ್ನು ಅರಿವಿನ ಪರಿಧಿಯ ಹೊರಗೆ ಉಡಾಯಿಸುವುದರಲ್ಲಿ ಯಶಸ್ವಿಯಾಗಿದೆ ಎಂದೆನ್ನಲು ಅಡ್ಡಿಯಿಲ್ಲ.

20 ಟಿಪ್ಪಣಿಗಳು Post a comment
 1. pramod
  ಜನ 1 2015

  ಥ್ಯಾಂಕ್ಸ್ ಗಾಡ್ ,ಬ್ಯೆರಪ್ಪನವರು ತಮ್ಮ ಯಾವತ್ತಿನ ಚಾಳಿಯಾದ ವಿಷ ಕಕ್ಕುವುದನ್ನು ಈ ಕಾದಂಬರಿಯಲ್ಲಿ ಮಾಡಿಲ್ಲ ಎಂಬುವುದು ಒಂದು ಶುಭ ಸೂಚನೆ !

  ಉತ್ತರ
  • ಜನ 1 2015

   ಕಕ್ಕಿದ ವಿಷ ಔಷಧವಾಗಿ ಬಳಕೆಯಾಗುತ್ತದೆ ! ಒಳಗೇ ಇಟ್ಟುಕೊಂಡದ್ದು ಮತ್ತು ಆಕ್ರಮಣಕ್ಕೆ ಬಳಸಿದ್ದು ಮಾತ್ರ ಅಪಾಯಕಾರಿ.

   ಉತ್ತರ
 2. valavi
  ಜನ 1 2015

  ಮಾನ್ಯ ಸುದರ್ಶನ ಅವರಿಗೆ ಕಾದಂಬರಿ ಪಾತ್ರ ಸುದರ್ಶನನು ದಕ್ಷಿಣಾರ್ಧ ಗೋಳದ ಆರು ತಿಂಗಳು ಕತ್ತಲಿನಲ್ಲಿ ಇರುವ ಅನುಭವವನ್ನು ಮಾನ್ಯ್ ಕಾದಂಬರಿಕಾರ ಭೈರಪ್ಪಾ ಬರೆದಿದ್ದಾರೆ. ಆದರೆ ಈ ಆರು ತಿಂಗಳ ಅವಧಿಯಲ್ಲಿ ಆರು ಸಲ ಸುದರ್ಶನನಿಗೆ ಚಂದ್ರನ ಬೆಳಕು ಬೆಳಕು ತೋರಬೇಕಲ್ಲಾ? ಅದನ್ನು ಕಾದಂಬರೀಕಾರರು ವರ್ಣಿಸಿಲ್ಲ. ಚಂದ್ರನ ಬೆಳಕಿನ ಪ್ರಸ್ತಾಪವೇ ಇಲ್ಲ. ನನ್ನ ಸಂಶಯವೆಂದರೆ ಭೂಮಿಯ ಈ ಭಾಗದಲ್ಲಿ ಚಂದ್ರ ಪ್ರಬೆ ಕಾಣುವದಿಲ್ಲವೋ ಅಥವಾ ಅದೇನು ದೊಡ್ಡ ವಿಷಯವಲ್ಲವೆಂದು ಭೈರಪ್ಪಾ ಬಿಟ್ಟಿದ್ದಾರೋ?? ನೀವೇ ಉತ್ತರಿಸಬೇಕೆಂದೇನೂ ಇಲ್ಲ. ನಿಲುಮೆಯ ಯಾವ ಓದುಗರಾದರೂ ನನ್ನ ಸಂಶಯ ನಿವಾರಿಸಿದರೆ {ವೈಜ್ಞಾನಿಕವಾಗಿ} ಸಾಕು.

  ಉತ್ತರ
  • Nagshetty Shetkar
   ಜನ 1 2015

   ವಲವಿ ಮೇಡಂ ಅವರೇ, ಬಹಳ ಘನವಾದ ಪ್ರಶ್ನೆ! ಭೈರಪ್ಪನವರು ವಿಷಯವನ್ನು ಸರಿಯಾಗಿ ಅಧ್ಯಯನ ಮಾಡದೆ ಕಾದಂಬರಿ ಬರೆದಿದ್ದಾರೆ ಅಂತ ಪರೋಕ್ಷವಾಗಿ ಹೇಳಿದ್ದೀರಿ! ಹೆಹ್ಹೆ!

   ಉತ್ತರ
 3. valavi
  ಜನ 1 2015

  ಮೇಲಿನ ಕಮೆಂಟಿನಲ್ಲಿ ಒಂದು ತಪ್ಪಾಗಿದೆ. ಚಂದ್ರನ ಬೆಳಕು ಸುದರ್ಶನನಿಗೆ ಬೆಳಕು ತೋರಬಹುದಿತ್ತಲ್ಲಾ? ಹೀಗೆ ಬರೆಯಬೇಕಾಗಿತ್ತು.

  ಉತ್ತರ
 4. Sudarshana
  ಜನ 2 2015

  ಕಾದಂಬರಿ ಕಥಾನಕಗಳಲ್ಲಿ ಮನುಷ್ಯರು ಕಥೆಯ ಮೂಲಕ ತಮ್ಮನ್ನು ತಾವು ಓದಿಕೊಳ್ಳುತ್ತಾರೆ ಎಂಬ ಉಕ್ತಿ ಇದೆ.
  ಇದರ ಹಿನ್ನೆಲೆಯಲ್ಲಿ ನಿಮ್ಮ ಕಮೆಂಟುಗಳನ್ನು ವಿಮರ್ಷಿಸಿಕೊಳ್ಳಬಹುದು.
  ವಲವಿ ಅವರ ಪ್ರಶ್ನೆ ಸೂಕ್ತವಾಗಿದೆ. ನನಗೆ ಹೊಳೆದಿರಲಿಲ್ಲ.ಪ್ರಯತ್ನಿಸಬೇಕು
  ಸುದರ್ಶನ.

  ಉತ್ತರ
 5. Nagshetty Shetkar
  ಜನ 2 2015

  “ಕಾದಂಬರಿ ಕಥಾನಕಗಳಲ್ಲಿ ಮನುಷ್ಯರು ಕಥೆಯ ಮೂಲಕ ತಮ್ಮನ್ನು ತಾವು ಓದಿಕೊಳ್ಳುತ್ತಾರೆ ಎಂಬ ಉಕ್ತಿ ಇದೆ.”

  ಸುದರ್ಶನ್ ಅವರೇ, ಗೃಹಭಂಗವೊಂದೇ ಭೈರಪ್ಪನವರು ಬರೆದ ಕಾದಂಬರಿಗಳಲ್ಲಿ ಜೀವಪರವಾಗಿರುವಂಥದ್ದು. ಎಲ್ಲರೂ ಆ ಕಾದಂಬರಿಯನ್ನು ಓದತಕ್ಕದ್ದು. [ಮಠಮಾನ್ಯಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೃಹಭಂಗ ಕಾದಂಬರಿಯಲ್ಲಿ ಶೃಂಗೇರಿ ಮಠದವರು ಚನ್ನಿಗರಾಯರ ಕುಟುಂಬವನ್ನು ಸ್ಮಾರ್ತ ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರ ಹಾಕಿದ್ದನ್ನು ಸ್ಮರಿಸಬಹುದು.] ಗೃಹಭಂಗ ಬಿಟ್ಟರೆ ಮಿಕ್ಕ ಕಾದಂಬರಿಗಳಲ್ಲಿ ಭೈರಪ್ಪನವರು ಡಿಬೇಟರ್ ಆಗಿ ಕೆಲಸ ಮಾಡಿದ್ದೇ ಹೆಚ್ಚು. ಯಾನ ಅಂತೂ ಎನ್ನಾರೈ ಅಭಿಮಾನಿವೃಂದದ ಟೇಸ್ಟ್ ಗಳಿಗೆ ಪೂರಕವಾಗಿ ಬರೆದ ಕೃತಿ. ಯಾನದ ಬಗ್ಗೆ ಎಕ್ಸೈಟ್ ಆಗಿರುವ ಬಹುತೇಕ ಎನಾರೈ ಓದುಗರು ನಾಗವೇಣಿ ಅವರ ‘ಗಾಂಧೀ ಬಂದ’ ಎಂಬ ಮಹತ್ವಪೂರ್ಣ ಕಾದಂಬರಿಯನ್ನು ಓದಿಯೂ ಇಲ್ಲ! ಎನ್ನಾರೈಗಳಿಗೆ ತಮ್ಮನ್ನು ಓದಿಕೊಳ್ಳಲು ಭೈರಪ್ಪನವರ ಕಾದಂಬರಿಗಳು ಮಾತ್ರ ಬೇಕು. ಇದರ ಹಿಂದಿನ ರಾಜಕೀಯ ಅರ್ಥವಾಗದೇ ಹೋಗಿಲ್ಲ!

  ಉತ್ತರ
 6. ಎಂ ಎ ಶ್ರೀರಂಗ
  ಜನ 2 2015

  ಪ್ರಮೋದ್ ಅವರಿಗೆ—- ನೀವು ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನೂ ಓದಿದ್ದೀರಾ? ಓದಿದ್ದರೆ ಭೈರಪ್ಪನವರ ಬಗ್ಗೆ ಈವರೆಗೆ ಬಂದಿರುವ ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಕ್ಷೇತ್ರದ ವಿಮರ್ಶೆಗಳ ಪೂರ್ವಗ್ರಹದಿಂದ ಮುಕ್ತರಾಗಿ ಓದಿದ್ದೀರಾ? ಬಹುಶಃ ನೀವು ಭೈರಪ್ಪನವರ ಕಾದಂಬರಿಗಳು ಎಂದರೆ “ಇಷ್ಟೇ” ಎಂದು ಆ ವಿಮರ್ಶಕರುಗಳು ಕೊಟ್ಟಿರುವ ತೀರ್ಮಾನದಿಂದ ಬಿಡಿಸಿಕೊಂಡಿಲ್ಲ ಎಂದು ಕಾಣುತ್ತದೆ. ಬಿಡಿಸಿಕೊಂಡಿದ್ದರೆ “ವಿಷ ಕಕ್ಕುವುದು” ಎಂಬ ಬಾಲಿಶ ಪ್ರತಿಕ್ರಿಯೆ ತಮ್ಮಿಂದ ಬರುತ್ತಿರಲಿಲ್ಲ. ನಮ್ಮ ನಮ್ಮ ದಿನ ನಿತ್ಯದ ಜೀವನದ ಪ್ರತಿಯೊಂದು ಕ್ಷಣದಲ್ಲೂ ನಾವುಗಳ್ಯಾರು ಸಂತರಲ್ಲ; ಯೋಗಿಗಳಲ್ಲ. ಸಾಹಿತ್ಯ ಜೀವನದ ಪ್ರತಿಫಲನವಾದ್ದರಿಂದ ಅದರಲ್ಲಿ ಕಹಿ, ವಿಷ,ದುಃಖ ದುಮ್ಮಾನಗಳು, ಸೇಡು, ಕಾಮ,ಕ್ರೋಧ,ಮದ,ಮತ್ಸರ ಇತ್ಯಾದಿಗಳೆಲ್ಲಾ ಬರಲೇಬೇಕಾಗುತ್ತದೆ. ಇವೆಲ್ಲಾ ಇರುವುದನ್ನು ಓದುವುದು ಬೇಡ ಎನಿಸಿದರೆ ಕಾರ್ಟೂನ್ ನೆಟ್ ವರ್ಕ್, ಪೋಗೋ ,ಕಾಮಿಡಿ ಚಾನೆಲ್ ಗಳನ್ನು ನೋಡಿಕೊಂಡು ಆರಾಮವಾಗಿರಬಹುದು. ಭೈರಪ್ಪನವರದಾಗಲೀ ಅಥವಾ ಬೇರೆ ಯಾರದ್ದೇ ಕಾದಂಬರಿ ಆಗಿರಲಿ ಇವುಗಳ ಚಿತ್ರಣ ಯಾವಾಗಲೂ ನೂರಕ್ಕೆ ನೂರರಷ್ಟು success ಆಗಿರುವುದಿಲ್ಲ. ಆದಾಗ ಅದು ಉತ್ತಮ ಕೃತಿಯಾಗುತ್ತದೆ. ಯಾವ ಮನುಷ್ಯನೂ ಪರಿಪೂರ್ಣ ಅಲ್ಲ. ಹಾಗಿರುವಾಗ ಆತನ ಸೃಷ್ಟಿಯಾದ ಸಾಹಿತ್ಯ ಪರಿಪೂರ್ಣವಾಗಿರಲೇ ಬೇಕೆಂಬ ಹಠ ವಿಮರ್ಶೆಯ ವಿವೇಕವನ್ನು ತೋರಿಸುವುದಿಲ್ಲ. ಬದಲಾಗಿ ನಮ್ಮ ಓದಿನ ಪರಿಮಿತಿಯನ್ನು,ದಿಕ್ಕು ದೆಸೆಗಳನ್ನು ಅನಾವರಣಗೊಳಿಸುತ್ತದೆ.

  ಉತ್ತರ
  • pramod
   ಜನ 4 2015

   ನಿಮ್ಮ ಪ್ರಶ್ನೆಯಲ್ಲಿ ಒಂದು ತರಹದ ಅಹಂಕಾರದ ಲೇಪವಿದೆಯೋ ? ನೀವು ಮಾತ್ರಾ ಅಕಾಡೆಮಿಕ್ ಆಗಿ ,ಎಲ್ಲಾ ಸಂಪೂರ್ಣ ಜ್ಯಾಹ್ನವನ್ನ ಅರಗಿಸಿ ಕಾಮೆಂಟ್ ಮಾಡುವುದು ,ಬೇರೆಯವೆರೆಲ್ಲಾ ಕೇವಲ ವಿಮ್ಹರ್ಶೆ ಓದಿ ಎಂದು !ಇನ್ನು ಬ್ಯೆರಪ್ಪನವರ ಕಾದಂಬರಿಗಳ ಬಗ್ಗೆ ಬರೆಯುದಾದರೆ ಅವರ ಎಲ್ಲಾ ಕಾದಂಬರಿಗಳನ್ನು
   ಖರೀದಿಸಿ ಓದಿದ್ದೇನೆ,೫ ನನ್ನ ಟೇಬಲ್ ಮೇಲೆ ಈಗ ಇದೆ. ನಾಗಶಟ್ಟಿಯವರು ಬರೆದಂತೆ -ಗ್ರಹಭಂಗ ಹೊರತು ಬಾಕಿ ಎಲ್ಲಾ ,ಅವರು ಒಂದು ವಾದದ ಉಚ್ಚತೆಯನ್ನು ತೋರಿಸಲು ಬರೆದದ್ದು. ದಾಟು ,ಅಂಚು,ಆವರಣ ,ಮತ್ತು ಕವಲು ಎಲ್ಲ್ಲಾ ಒಂದಾ ಒಂದು ಜಾತಿಯನ್ನು ,ಇಲ್ಲವೇ ಒಂದು ಸಮುದಾಯ ಅಥವಾ ಸ್ತ್ರೀ ಜಾತಿಯನ್ನೇ ಅತೀ ಹೀನವಾಗಿ ಟೀಕಿಸಿ ಬರೆದದ್ದು .ತಾವು ವಿವರಿಸಿದಂತೆ ಇದು ಕೇವಲ ಜೀವನದ ಪ್ರತಿಪಲನವಲ್ಲ ಮತ್ತು ನಿಷ್ಪಕ್ಷಪಾತ ವಾಗಿ ಬರೆದ್ದದ್ದಲ್ಲ . ತಮ್ಮ ಅಜೆಂಡಾವನ್ನು ಅತ್ಯಂತ ಕರಾರುವಕ್ಕಾಗಿ ಪ್ರಚರಿಸ್ಲು ,ಸಮಾಜದಲ್ಲಿ ದ್ವೇಶ ಹರಡಿದ್ದು ಮತ್ತು ವಿಷ ಕಕ್ಕಿದ್ದು . ಅವರಿಗೆ ಕೇವಲ ಮನುವಾದ ಮಾತ್ರಾ ಪರಿಪೂರ್ಣ ,ಬಾಕಿ ಎಲ್ಲ್ಲಾ ನೀಚ . ಸಾಹಿತಿಯಾಗಲಿ ,ಸಾಹಿತ್ಯವಾಗಲಿ ಎಲ್ಲಾ ಹಾಲಿನಿಂದ ತೊಳೆದವಾಗಿರಬೀಕು ಅಂಥಾ ಭಾವನೆ ನನಗಿಲ್ಲ . ಅದು ಸಮಾಜಮುಖಿ ಯಾಗಿರಬೇಕು , ಮತ್ತೆ ಸತ್ಯದ ಮುಖಕ್ಕೆ ಹೊಡೆದಂತೆ ,ಒಂದು
   ವ್ಯಕ್ತಿಯ ಕ್ರಿಯೆಯನ್ನೇ ನ್ನೇ ಬ್ಲಾಂಕೆಟ್ ಗೊಳಿಸಿ ಅದಕ್ಕೆ ಇಡೀ ಜಾತಿ ಯಾ ಸಮುದಾಯವನ್ನು ಸಮೀಕರಿಸಿದ್ದ್ದು ಮಾತ್ರ ಅವರ ಇಲ್ಲಿಯ ವರೆಗಿನ ಸಾದನೆ . ಆದರೆ ತಮ್ಮಂಥ ಬಲಿಷ್ಟರ ಬೆಂಬಲದಿಂದ ,ಇಡೀ ಒಂದು ಮಾಫಿಯ ದಂತ ಸಂಘಟಿತ ಪ್ರಯತ್ನ ಅವರನ್ನು ಅವರ ಇಂದಿನ ಪ್ರಸಿದ್ದಿಗೆ ತಂದು ನಿಲ್ಲಿಸಿದೆ !

   ಉತ್ತರ
 7. ಜನ 4 2015

  ಪ್ರಮೋದ್ :
  ಸಾಹಿತ್ಯ ಮತ್ತು ಅದರ ಬಳಕೆದಾರರ ಪರಿಧಿ, ವರ್ಗಗಳು ವಿಭಿನ್ನ. ಅಭಿರುಚಿಗಳು ವಿಭಿನ್ನ. ಹೀಗಾಗಿ ಭೈರಪ್ಪನವರ ಕಾದಂಬರಿಗಳು ನಿಮಗೆ ರುಚಿಸದಿದ್ದರೆ, ಬೇರೆ ಕೆಲವರಿಗೆ ರುಚಿಸಬಹುದು. ಮಾನವನ ಜೀವನದೃಷ್ಟಿ ಕಾಲಾಂತರದಲ್ಲಿ ಬದಲಾಗುತ್ತಾ ಸಾಗುವುದರಿಂದ ಅಭಿರುಚಿ ಹಾಗೂ ಸಾಹಿತ್ಯಿಕ ಆಸಕ್ತಿಯೂ ಬದಲಾಗುವ ಸಾಧ್ಯತೆ ಇರುತ್ತದೆ. ಎಲ್ಲವನ್ನೂ ಒಂದೆ ಮಸೂರದಿಂದ ನೋಡುವ ಪ್ರಕ್ರಿಯೆಯೇ ದೋಷ ಪೂರ್ಣ.
  ಮಾನವನ ಅವಶ್ಯಕತೆ ಅವನ ಜೀವನದ ಮಟ್ಟವನ್ನು ಅನುಸರಿಸಿ ಬದಲಾಗುವುದನ್ನು ಮ್ಯಾಸ್ಲೋ ಎಂಬ ಸಮಾಜ ವಿಜ್ಞಾನಿ ವಿವಿಧ ಹಂತಗಳಲ್ಲಿ ವಿವರಿಸಿದ್ದಾನೆ. ಅನ್ನ ಆಹಾರ, ವಸತಿ, ಭದ್ರತೆ,ಕುಟುಂಬ, ಸಮುದಾಯ , ವಯಕ್ತಿಕ ಗುರುತಿನ ಅಭಿಲಾಷೆ, ಸಮಾಜದಲ್ಲಿ ಸ್ಥಾನ ಮಾನಗಳ ಹಂಬಲ ಇತ್ಯಾದಿ ಅನಂತರದಲ್ಲಿ ಆತ್ಮಸಾಕ್ಷಾತ್ಕಾರ ಅಥವಾ ತಾತ್ವಿಕ ದರ್ಶನವನ್ನು ಅರಸುವ , ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಮನಸ್ಸು ಬರುವುದು ಇತ್ಯಾದಿಗಳನ್ನು ನೀವು ಓದಿ ತಿಳಿದಿರಬಹುದು. ಯಾವ ಮನುಷ್ಯ ಯಾವ ಹಂತದಲ್ಲಿ ಇರುತ್ತಾನೋ ಆ ಮಟ್ಟದ ಕಾವ್ಯ ಕಥೆಗಳು ಅವನ ಆಸಕ್ತಿಗಲಾಗಿರಬಹುದು.
  ಈ ಪ್ರಕ್ರಿಯೆಯನ್ನು ಬಹಳ ಹಿಂದೆ ದಾಸರೂ ಹಾಡಿದ್ದಾರೆ ,ಬಸವಣ್ಣನು ಹಾಡಿದ್ದಾರೆ ( ಬಡತನಕೆ ಉಂಬುವ ಚಿಂತೆ … ), ಅದಕ್ಕೂ ಮುಂಚೆ ಪತಂಜಲಿಯ ಯೋಗ ಸೂತ್ರದಲ್ಲಿ ಈ ವಿವಿಧೆ ಹಂತದ ಬೆಳವಣಿಗೆಗಳನ್ನು ಒಂಭತ್ತು ಚಕ್ರಗಳಾಗಿ ವಿವರಿಸಲಾಗಿದೆ.
  ಹಾಗಾಗಿ ಜೀವನ ಮುಖಿ ಸಾಹಿತ್ಯವಷ್ಟೇ ಸಾಹಿತ್ಯ , ಅಲ್ಲದ್ದು ಅಲ್ಲ ಎಂಬ ಅಭಿಪ್ರಾಯ ಸಂಕುಚಿತ ಎಂಬುದು ನನ್ನ ಭಾವನೆ.

  ಇನ್ನು ಭೈರಪ್ಪನವರ ಸಾಹಿತ್ಯಕ್ಕೆ ಬಂದಾಗ, ನಾನು ಮುಚೆಯೇ ಹೇಳಿದಂತೆ, ಇಲ್ಲಿ ಓದುಗನು ಯಾವ ವಿಷಯವನ್ನು ಅರಸುತ್ತಿದ್ದಾನೆ ಎಮ್ಬೆಉದರ ಮೇಲೆ ಅವರ ಅಭಿಮಾನಿ ಬಳಗ ಸೃಷ್ಟಿಯಾಗುತ್ತದೆ. ತಾತ್ವಿಕ ವಿಚಾರಗಳನ್ನು ಜೀವನ ಧರ್ಮದಲ್ಲಿ ಅಳವಡಿಸಿ ಪರೀಕ್ಷಿಸುವುದರಿಂದ ಅವರ ಕಾದಂಬರಿಗಳು ಬಹಳ ಜನರಿಗೆ ರುಚಿಸುವವು. ಕಥಾ ನಿರೂಪಣೆ ಕೂಡಾ ಬಿಗಿಯಾಗಿ ಇರುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಅನಂತಮೂರ್ತಿಯವರ ಕಾದಂಬರಿಗಳನ್ನು ನೋಡ ಬಹುದು. ಜಾಳು ಜಾಲಾದ ಕಥಾ ಹಂದರ ಹಾಗೂ ಅವರೂ ಅಜೆಂಡಾ ಆಧಾರಿತ ಕಥೆ ಬರೆಯುವುದರಿಂದ ಓದುಗನಲ್ಲಿ ಒಂದು ಹತಾಶೆ ಮೂಡಿಸಿಬಿಡುತ್ತದೆ. ಅಡಿಗರದ್ದು ಅಷ್ಟೆ. ಕು ವೆಂ ಪು ಅವರ ಕಥಾನಕಗಳಲ್ಲಿ ಅವರ ಕಾವ್ಯದಷ್ಟು ಸೊಗಸಿಲ್ಲ, ಇನ್ನು ಬೇಂದ್ರೆಯವರ ಕಾವ್ಯ ಅರ್ಥ ಆಗುವುದು ಕಠಿಣ. ಕಾರಂತರ ಎಲ್ಲ ಕಾದಂಬರಿಗಳು ಜೀವನ್ಮುಖಿ. ಆದರೆ ಕೆಲವು ಕಾದಂಬರಿಗಳಲ್ಲಿ ಬಿಗಿ ಕಡಿಮೆ.
  ನೀವು ಹೇಳಿದ ಕಾದಂಬರಿಗಳಿನ್ನು ಹೊರತು ಪಡಿಸಿ, ಅವರ ನೆಲೆ, ಸಾರ್ಥ,ಸಾಕ್ಷಿ ,ನಿರಾಕರಣ ಗಳಲ್ಲಿ ಅವರು ಚರ್ಚಿಸಿರುವ ವಿಷಯಗಳು ಜೀವನ ಮುಖಿಯೇ; ಹಾಗೆಯೇ ಇತರ ಲೇಖಕರಿಗೆ ಅತೀತವಾದವು. ಇದು ನನ್ನ ಭಾವನೆ.

  ಭೈರಪ್ಪನವರ ವಸ್ತು ವಿಷಯಗಳು ಕುರಿತು ನಿಮ್ಮ ಟೀಕೆ ಹೊಸದಲ್ಲ . ಬಲಪಂಥಿಯ ವಾದ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಎಡಪಂಥೀಯ ವಾದದಂತೆ ಅದೂ ಕೂಡಾ ಒಂದು. ಮಧ್ಯ ಮಾರ್ಗವನ್ನು ಅನ್ವೇಷಣೆ , ತರ್ಕ , ಚರ್ಚೆಗಳಿಂದ ಕಂಡು ಕೊಳ್ಳುವುದು ಸಮಾಜದ ಹೊಣೆಗಾರಿಕೆ; ಲೇಖಕನದ್ದಲ್ಲ. ಆದರೆ ಇಂದು ಆಗುತ್ತಿರುವುದಾದರೂ ಏನು?
  ದೇಶದಲ್ಲಿ ಎಡಪಂಥೀಯರೂ ಕೂಡಾ ಸಾಕಷ್ಟು ಸುಳ್ಳು, ಮಿಥ್ಯಾರೋಪ , ಅವೇಶ ಅಪಾದನೆಗಳಿಂ ದ ಕೂಡಿದ ಸಾಹಿತ್ಯ ರಚಿಸಿದ್ದಾರೆ. ಸಮಾಜದ ಎಲ್ಲ ಅವ್ಯವಸ್ಥೆಗೂ ಬ್ರಾಹ್ಮಣರೇ ಕಾರಣರೆಂಬ ಆಪಾದನೆ ಮಾಡುತ್ತಾ ತಮ್ಮ ಬೇಳೇ ಬೇಯಿಸಿಕೊಳ್ಳುತ್ತಾರೆ. ಅದನ್ನೂ ಕಟು ವಿಮರ್ಶೆಗೆ ಒಳಪಡಿಸುವ ಗೊಡವೆಗೆ ಯಾರು ಹೋಗುವುದೇ ಇಲ್ಲ. ಇಂದು ಎಲ್ಲ ಉನ್ನತ ಸ್ಥಾ ನಗಳಲ್ಲಿ ಬ್ರಾಹಂಣರು ಇಲ್ಲ. ಆದರೂ ಆಡಳಿತ ಏಕೆ ಸುಧಾರಿಸಿಲ್ಲ . ಬಿ.ಎಮ್ ಶ್ರೀ, ತಿ ನಂ ಶ್ರೀ , ಎ.ಆರ್ ಕೃಷ್ಣಶಾಸ್ತ್ರಿ ಇಂತಹ ಮಹಾನುಭಾವರು ಬ್ರಾಹಮಣರೇ ಎಂಬ ಪ್ರಜ್ಞೆ ಅವರಿಗೆ ಕಾಡುವುದೇ ಇಲ್ಲ. ಸತ್ಯವನ್ನು ನುಡಿಯುವ ಮನಸ್ಸುಗಳು ಎರಡನ್ನೂ ತುಲನೆ ಮಾಡಬೇಕು;ಮಾಡುವ ಮನೋ ಭಾವ ಇಲ್ಲದಿದ್ದಲ್ಲಿ ಇನ್ನೊಂದು ಗುಂಪನ್ನು ಹಳಿಯುವ ಹಕ್ಕು ಎಲ್ಲಿ ಬರುತ್ತದೆ? ಶಕ್ತ -ಅಶಕ್ತರ ನಡುವಿನ ಅಪಾದನೆ , ಕಟುಶೋಷ ಣೆಗಳ ಇನ್ನೊಂದು ಅಧ್ಯಾಯ ಅಷ್ಟೆ.

  ಆರ್ಯ ದ್ರಾವಿಡ , ಬ್ರಾಹ್ಮಣ – ಶೂದ್ರ ಎಂಬ ಭೇದಗಳು ಇಂದು ಸಮಾಜದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ ಆದರೆ ಆ ಭೇದದ ಲಾಭ ಪಡೆಯುವ ಎಷ್ಟು ಜನ ಬ್ರಾಹ್ಮಣರಲ್ಲದ ನಾಯಕರು ಇಂದು ನಮ್ಮಲ್ಲಿದ್ದಾರೆ. ಇತರ ಜಾತಿಗಳಲ್ಲೇ ಮತಭೇದಗಳನ್ನು ಸೃಷ್ಟಿಸಿ ಅದರ ರಾಜಕೀಯ, ಸಾಮಾಜಿಕ ಲಾಭ ಪಡೆಯುತ್ತಿಲ್ಲ. ಅವರ್ಯಾರೂ ಇಂದು ಬ್ರಾಹ್ಮಣರ ಅಡಿ ಯಲ್ಲಿಲ್ಲವಲ್ಲ. ಇದು ಮಾನವನ ಮುಲಭೂತ ಸ್ವಾರ್ಥ ಗುಣದ ಅಭಿವ್ಯಕ್ತಿಯೇ ಹೊರತು ಮನು ಸ್ಮ್ರಿತಿಯು ಅಲ್ಲ , ಸನಾತನ ಧರ್ಮವು ಅಲ್ಲ. ಹೊರದೇಶದ ಸಮಾಜವನ್ನು ನಾನು ಕಂಡಿದ್ದೇನೆ. ಎಲ್ಲರೂ ಒಂದೆ ಇನ್ನುವ ಸಮಾನತೆ ಇಲ್ಲಿಯೂ ಇಲ್ಲ. ಭಾರತವನ್ನು ಒಡೆಯುವ ಸಾಕಷ್ಟು ವಿಧ್ವಂಸಕ ಶಕ್ತಿಗಳು ಇಂದು ಕಾರ್ಯಪ್ರವ್ರುತ್ತವಾಗಿವೆ. ನಮ್ಮ ಭೇದಗಳನ್ನು ಶಕ್ತಿಯಾಗಿ ಬಳಸದೆ, ಒಡಕಿನ ಕಾರಣ ವನ್ನಾಗಿಸಿದರೆ ಕಡೆಗೆ ಸೊರಗುವುದು ಭಾರತವೆ. ಭಿನ್ನತೆ ಸ್ವಾಭಾವಿಕ ಪ್ರಕ್ರಿಯೆ. ಅದನ್ನು ಧನಾತ್ಮಕವಾಗಿ ಬಳಸುವುದು ನಮ್ಮ ಕೈಲಿದೆ.

  ‘’ಯಾನ’’ ಕಾದಂಬರಿಯ ವಿಮರ್ಷೆ, ವಿಷಯಾಂತರವಾಗಿ ಎಲ್ಲಿಗೋ ಹೋಗಿದ್ದು ವಿಪರ್ಯಾಸ. ಕಥೆ, ಕಥಾವಸ್ತು, ನಿರೂಪಣೆ, ಪಾತ್ರಗಳ ಸಾಧ್ಯಾಸಾಧ್ಯತೆ, ವಿಭಿನ್ನ ದೃಷ್ಟಿಕೋನಗಳು ಇದರ ಮೇಲೆ ಮಾಡಿದರೆ ಸಾಹಿತಿಕವಾಗಿಯೂ, ತಾತ್ವಿಕವಾಗಿಯೂ ಬೆಳೆಯಬಹುದು. ಆ ದೃಷ್ಟಿಯಿಂದ ಬರೆಯಿರಿ, ಮತ್ತೆ ಚರ್ಚಿಸುವ.

  ಉತ್ತರ
 8. ಜನ 4 2015

  ಈಸ್ಟ್ ಇಂಡಿಯಾ ಕಂಪನಿ, ಬ್ರಿಟಿಶ್ ಆಡಳಿತ, ಯುರೋಪಿಯನ್ನರ ತಪ್ಪು ವ್ಯಾಖ್ಯಾನ ಹಾಗೂ ಸನಾತನ ಧರ್ಮದ ಅವಹೇಳನ, ಮನುಸ್ಮೃತಿಯ ಸಂಕುಚಿತ ವ್ಯಾಖ್ಯಾನ, ಇತ್ಯಾದಿಗಳಿಂದ ಅವರು ಪಡೆದ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಲಾಭಗಳನ್ನು ಕುರಿತ ಪುಸ್ತಕಗಳನ್ನು ಓದಿದರೆ ನಮ್ಮ ದೃಷ್ಟಿ ಕೋನ ಬದಲಾಗಬಹುದು.
  What you are is determined by what you know and that determines how you think ಎಂಬ ಇಂಗ್ಲಿಷ್ ಗಾದೆ ಇದೆ.

  ಪಾಶ್ಚಿಮಾತ್ಯ ಸಂಸ್ಥೆಗಳು, ಕ್ರಿಶ್ಚಿಯನ್ ಮಿಶನರಿಗಳು, ಕಮ್ಯುನಿಷ್ಟರು ಹಾಗೂ ಬುದ್ಧಿಜೀವಿಗಳೆಂದು ಕರೆಸಿಕೊಂಡವರಿಗೆ ಆಗಾಗ ಸನ್ಮಾನ, ಪ್ರಶಸ್ತಿ ಗಳನ್ನು ಕೊಟ್ಟು, ಅವರ ಮಿಥ್ಯಾ ಪ್ರತಿಭೆಯನ್ನು ಸುಖಾಸುಮ್ಮನೆ ಗುರುತಿಸಿ ಪ್ರಚಾರಕೊಟ್ಟು ನಡೆಸುವ ಷಡ್ಯ ತ್ರದ ಫಲವೇ ಈ ರೀತಿಯ ಆಲೋಚನೆಗಳು. ಎಲ್ಲಿಯೂ ಸಲ್ಲದ ಇಂಥ ಪ್ರತಿಭೆಗಳನ್ನು ಗುರುತಿಸುವಿದರಿಂದ ಇವರುಗಳು ತಮ್ಮ ಜೀವನ ನಿರ್ವಹಣೆಗೆ ಸನಾತನಧರ್ಮದ ವಿರೋಧಿಗಳ ಜಾಲದಲ್ಲಿ ಸಿಕ್ಕುಬೀಳುತ್ತಾರೆ.
  ಅಮೇರಿಕಾದ ಅಕಾಡೆಮಿಗಳು, ವೆಂಡೀ ಡೋನಿಗರ್, ಪಾಲ್ ಕೋರ್ಟ್ ರೈಟ್ , ಜೆಫ್ರಿ ಕೃಪಾಲ್, ಪಂಕಜ್ ಮಿಶ್ರಾ ,ವಿಲಿಯಂ ದಾರ ಲಿಮ್ಪಾಲ್ ಇಂತಹ ವಿಧ್ವಂಸಕ ಆದರೆ ಬಲಶಾಲಿ ಲೇಖಾಕಕರುಗಳು ಬರೆದ ಅರೆಬೆಂದ ವ್ಯಾಖ್ಯಾನಗಳನ್ನು ಓದುವ ಬುದ್ಧಿಜೀವಿಗಳು ಅದನ್ನೇ ಪ್ರಸಾದವೆಂದು ಸ್ವೀಕರಿಸಿ ಜೀರ್ನವಾಗದೆ ಅದನ್ನೇ ಮತ್ತೆ ವಾಂತಿ ಮಾಡಿ ಬಡಬಡಿಸುವುದೊಂದು ವಿಪರ್ಯಾಸ.
  Please read
  Lies with Long legs
  Breaking India
  Invading the sacred
  ಸನಾತನ ಧರ್ಮವನ್ನು ಒಡೆಯುವ ಹುನ್ನಾರ ನಿಮಗೂ ತಿಳಿಯಲಿ ಹಾಗೂ ಎಲ್ಲರಿಗೂ ಹರಡಿ.
  ಈ ಗೋಮುಖ ವ್ಯಾಘ್ರಗಳ ಜಾಲ ದಿಗ್ಭ್ರಮೆ ಹುಟ್ಟಿಸುವಂಥದ್ದಾಗಿದೆ.

  ಉತ್ತರ
  • Nagshetty Shetkar
   ಜನ 4 2015

   “ಸಾಹಿತ್ಯ ಮತ್ತು ಅದರ ಬಳಕೆದಾರರ ಪರಿಧಿ, ವರ್ಗಗಳು ವಿಭಿನ್ನ. ಅಭಿರುಚಿಗಳು ವಿಭಿನ್ನ. ಹೀಗಾಗಿ ಭೈರಪ್ಪನವರ ಕಾದಂಬರಿಗಳು ನಿಮಗೆ ರುಚಿಸದಿದ್ದರೆ, ಬೇರೆ ಕೆಲವರಿಗೆ ರುಚಿಸಬಹುದು.”

   ರಾಯರೇ, ತಮಗೆ ಸಾಹಿತ್ಯ ಒಂದು ಬಳಕೆಯ ವಸ್ತು – ನೀವು ತಿನ್ನುವ ಬಿಸಿಬೇಳೆಭಾತ್, ಕುಡಿಯುವ ವ್ಹಿಸ್ಕಿ ಹಾಗೂ ನೋಡುವ ಪಾರ್ನೋಗ್ರಾಫಿ ಹಾಗೆ! ಆದರೆ ನಾವು ನಿಮ್ಮ ಹಾಗಲ್ಲ – ನಮಗೆ ಸಾಹಿತ್ಯ ಆತ್ಮವಿಕಸನದ ಮಾರ್ಗ ಮೌಲ್ಯಗಳ ಹುಡುಕಾಟ.

   ಉತ್ತರ
 9. ಜನ 4 2015

  ಸುದರ್ಶನ್ ಅವರೇ, ಗೃಹಭಂಗವೊಂದೇ ಭೈರಪ್ಪನವರು ಬರೆದ ಕಾದಂಬರಿಗಳಲ್ಲಿ ಜೀವಪರವಾಗಿರುವಂಥದ್ದು. ಎಲ್ಲರೂ ಆ ಕಾದಂಬರಿಯನ್ನು ಓದತಕ್ಕದ್ದು. [ಮಠಮಾನ್ಯಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೃಹಭಂಗ ಕಾದಂಬರಿಯಲ್ಲಿ ಶೃಂಗೇರಿ ಮಠದವರು ಚನ್ನಿಗರಾಯರ ಕುಟುಂಬವನ್ನು ಸ್ಮಾರ್ತ ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರ ಹಾಕಿದ್ದನ್ನು ಸ್ಮರಿಸಬಹುದು.] ಗೃಹಭಂಗ ಬಿಟ್ಟರೆ ಮಿಕ್ಕ ಕಾದಂಬರಿಗಳಲ್ಲಿ ಭೈರಪ್ಪನವರು ಡಿಬೇಟರ್ ಆಗಿ ಕೆಲಸ ಮಾಡಿದ್ದೇ ಹೆಚ್ಚು. ಯಾನ ಅಂತೂ ಎನ್ನಾರೈ ಅಭಿಮಾನಿವೃಂದದ ಟೇಸ್ಟ್ ಗಳಿಗೆ ಪೂರಕವಾಗಿ ಬರೆದ ಕೃತಿ. ಯಾನದ ಬಗ್ಗೆ ಎಕ್ಸೈಟ್ ಆಗಿರುವ ಬಹುತೇಕ ಎನಾರೈ ಓದುಗರು ನಾಗವೇಣಿ ಅವರ ‘ಗಾಂಧೀ ಬಂದ’ ಎಂಬ ಮಹತ್ವಪೂರ್ಣ ಕಾದಂಬರಿಯನ್ನು ಓದಿಯೂ ಇಲ್ಲ! ಎನ್ನಾರೈಗಳಿಗೆ ತಮ್ಮನ್ನು ಓದಿಕೊಳ್ಳಲು ಭೈರಪ್ಪನವರ ಕಾದಂಬರಿಗಳು ಮಾತ್ರ ಬೇಕು. ಇದರ ಹಿಂದಿನ ರಾಜಕೀಯ ಅರ್ಥವಾಗದೇ ಹೋಗಿಲ್ಲ!

  ನಾಗಶೆಟ್ಟಿ ಯವರೇ,
  ನಿಮ್ಮ ಹಿನ್ನೆಲೆ , ಇತ್ಯಾದಿ ನಂಗೆ ತಿಳಿದಿಲ್ಲ. ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತ ಚೆನ್ನಾ ಗಿದೆ.; ಅದಕ್ಕೆ ಅಭಿನಂದನೆಗಳು .

  ಯಾವುದೇ ಒಂದು ವಾದ ಯಾವಗಲೂ ಪರಿಪೂರ್ಣ ವಾದದ್ದಲ್ಲ. ಕಾರಣ ಮನುಷ್ಯ ತನ್ನ ಮಿತಿಯೊಳಗೆ ಯೋಚಿಸುವ ಕಾರಣ ಅದು ಪರಿಪೂರ್ಣ ಆಗುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ಸನಾತನ ಧರ್ಮ ಪ್ರಸ್ತುತವಾಗುತ್ತದೆ.ಇತರ ಅಬ್ರಹಾಮಿಕ್ ಧರ್ಮಗಳಂ ತೆ ಇದು ಒಬ್ಬರಿಂದ ಬಂದದ್ದಲ್ಲ . ಹಲವಾರು ಮನಸ್ಸುಗಳ ವ್ಯುತ್ಪತ್ತಿ. ಅದನ್ನು ತಿಳಿಯುವ ಮನಸ್ಸು ನನ್ನದಿದ್ದರೆ, ಅದಕ್ಕೆ ನಾನು ಭೈರಪ್ಪನವರ ಕಾದಂಬರಿ ಅರಸಿದರೆ, ಅದು ನನ್ನ ವಿಧಾನ.
  ಶರಣ ಪಂಥದಲ್ಲಿ ಬಸವಣ್ಣನ ವಚನಗಳು ಬಹುಮಟ್ಟಿಗೆ ಮೂಲಭೂತ ಅವಶ್ಯಕತಗಳನ್ನು (ಹಸಿವು, ಮನೆ, ಪೂಜೆ, ಇತ್ಯಾದಿ) ಕುರಿತದ್ದದವು; ಆ ಮಟ್ಟಿಗೆ ಜೀವನಮುಖಿ. . ಅಲ್ಲಮನ ವಚನಗಳು ಬಹುಮಟ್ಟಿಗೆ ತಾತ್ವಿಕ ನೆಲೆಯವು . ಹಾಗೆಂದು ಅಲ್ಲಮ ಪ್ರಸ್ತುತವಾಗುವುದಿಲ್ಲವೇ.

  ನಿಮ್ಮ ಬ್ರಾಹ್ಮಣದ್ವೇಶ ಬಂದದ್ದೆಲ್ಲಿಂದ ನನಗೆ ತಿಳಿಯದು. ಎಲ್ಲಾ ಜಾತಿಗಳಲ್ಲಿ ಇದ್ದಂತೆ ಇಲ್ಲಿಯೂ ವಿವಿಧ ಮನೋಭಾವದ ಜನರಿರಬಹುದು. ಇಂದು ಆಡಳಿತದಲ್ಲಿ ಅವರ ವಶೀಲಿ ಇಲ್ಲವೇ ಇಲ್ಲ. ಆದರೂ ಭ್ರಷ್ಟಾಚಾರ ಮಿತಿಮೀರಿಲ್ಲವೇ. ಇದಕ್ಕೆ ಯ್ಯಾರನ್ನು ದೂರುವಿರಿ. ನಾನು ಬಾಲ್ಯದಲ್ಲಿ ಎಲ್ಲಾ ಜಾತಿ ಹುಡುಗರೊಂದಿಗೆ ಆಡಿ ಬೆಳೆದವನು. ಬಹುತೇಕರಂತೆ ನಾನೂ ಬಡತನದಲ್ಲೇ ಹೋರಾಡಿದವನು,. ಶಾಲೆಗಳಲ್ಲೂ ಬ್ರಾಹ್ಮಣ ಗುರುಗಳಿಲ್ಲ. ಶಾಲೆ- ಕಲಿಕೆಗಳು ಇಂದು ಹಳ್ಳ ಹಿಡಿದಿರುವುದನ್ನು ನೀವೂ ನೋಡಿರಬಹುದು. ದೂಷಣೆ ಮಾಡುವುದೇ ನಿಮ್ಮ ಗುರಿಯಿದ್ದಲ್ಲಿ, ಈ ವಾದ ವಿವಾದಕ್ಕೆ ಕೊನೆಯಿರದು. ಸಾಹಿತ್ಯಿಕ ನೆಲೆಯಲ್ಲಿ ಚರ್ಚಿಸುವಿರಾದರೆ ಮುಂದು ವರಿಸಬಹುದು.

  ಎಡ ಪಂಥೀ ಯರು, ಕಮ್ಯೂನಿಷ್ಟುಗಳು ತಮ್ಮ ವಾದವನ್ನು ಬಣ್ಣ ಕಟ್ಟಿ ಹೇಳುವುದಿಲ್ಲವೇ?
  ಅಷ್ಟೆಲ್ಲಾ ಅದರೂ ಇಂದು ಆ ಆಡಳಿತ ಅನುಸರಿಸಿರುವ ದೇಶಗಳು ಏನಾಗಿವೆ? ಮಾನವನ ಮೂಲಭೂತ ಸ್ವಾರ್ಥ ಅಲ್ಲಿಯೂ ಅಧ್ವಾನ ಮಾಡಿತಲ್ಲ. ಸರ್ವಾಧಿಕಾರಿಗಳು ಅಲ್ಲಿಂದಲೇ ಬಂದರಲ್ಲ. ಅಲ್ಲಿ ಯಾವ ಬ್ರಾಹ್ಮಣರು ಇರಲಿಲ್ಲ, ಸನಾತನ ಧರ್ಮವು ಇರಲಿಲ್ಲ, ಮಠ ಮಾನ್ಯಗಳು ಇರಲಿಲ್ಲ . ಇನ್ನು ಅವರದ್ದೇ ಅದ ಚರ್ಚುಗಳು , ಸಮಾನತೆಯನ್ನು ಬೋಧಿಸುವ ಪಾದ್ರಿಗಳು ಇದ್ದರಲ್ಲ.
  ಇನ್ನು ಇಸ್ಲಾಂ ಅವರ ಅವಸ್ಥೆಯನ್ನು ನಾನು ಹೇಳುವ ಗೊಡವೆ ಇಲ್ಲ.
  ಯಾನ, ಹೊರದೇಶದಲ್ಲಷ್ಟೇ ಅಲ್ಲ, ಭಾರತದಲ್ಲಿಯೂ ಸಾಕಷ್ಟು ಮಾರಾಟವಾಗಿದೆ. ಹಾಗಾಗಿ ನಿಮ್ಮ ‘’ಟೇ ಸ್ಟ್ ‘’ ಟೀಕೆ ಸಮಂಜಸವಾಗಿಲ್ಲ.

  ಗಾಂಧೀ ಬಂದ ಕೃತಿ ಕೂಡಾ ಇಂತಹ ಟೀಕೆಗಳನ್ನು ಮೀರಿದ್ದೇನಲ್ಲ. ಆದರ್ಶ ಅಲ್ಲಿಯ ಕಥಾವಸ್ತುವಿನ ಅಜೆಂಡಾ .
  Please read
  Lies with Long legs
  Breaking india
  being different
  ಬದುಕಿನ ಸತ್ಯಗಳು ಹಲವಾರು. ಕೆಲವು ಸಾಂದರ್ಭಿಕ ಸತ್ಯಗಳು, ಕೆಲವು ಸಾರ್ವಕಾಲಿಕ ಸತ್ಯಗಳು, ಕೆಲವು ವೈಯಕ್ತಿಕ ಸತ್ಯಗಳು, ಕೆಲವು ಸಾಮಾಜಿಕ ಸತ್ಯಗಳು, ಕೆಲವು ಐತಿಹಾಸಿಕ ಸತ್ಯಗಳು. ಇವುಗಳಲ್ಲಿ ನಿಮ್ಮ ಗುರಿ ಆಸಕ್ತಿ ಯಾವುದು ಎನ್ನುವುದರ ಮೇಲೆ ನೀವು ಆರಿಸಿ ಓದಿಕೊಳ್ಳುವ ಕಥಾವಸ್ತು ಹುದುಗಿರುತ್ತದೆ.

  ಉತ್ತರ
 10. Nagshetty Shetkar
  ಜನ 4 2015

  “ನಿಮ್ಮ ಬ್ರಾಹ್ಮಣದ್ವೇಶ ಬಂದದ್ದೆಲ್ಲಿಂದ ನನಗೆ ತಿಳಿಯದು.”

  ಇದಪ್ಪಾ ವರಸೆ! ಶರಣರನ್ನು ಬ್ರಾಹ್ಮಣದ್ವೇಷಿ ಎಂದು ಕರೆದು ಚರ್ಚೆಗೆ ಜಾತೀಯ ದ್ವೇಷದ ಆಯಾಮ ಕೊಡುವುದು!

  ಉತ್ತರ
 11. ಜನ 4 2015

  ನಾಗಶೆಟ್ಟಿ ಅವರೆ,
  ”ಅಭಿರುಚಿ” ಎನುವುದು ಸಾಹಿತ್ಯಕ ಪರಿಸರದಲ್ಲಿ ಮೌಲ್ಯಗಳಿಗೆ ಬಳಸುವ ಪ್ರತಿಮೆ ಎಂದು ನಿಮಗೆ ತಿಳಿದಿಲ್ಲ ಅಥವಾ ತಿಳಿದಿದ್ದರೂ, ನಿಮ್ಮ ವ್ಯಂಗ್ಯ, ಕುಚೇಷ್ಟೆ, ಕುಚೋದ್ಯ ಗಳಿಗೆ ”ಶರಣಾ”ಗಿ ಕಡೆಗಣಿಸಿದಂತೆ ತೋರುತ್ತಿದೆ. ಅಭಿರುಚಿಗೂ ಬಿಸಿಬೇಳೇ ಬಾತಿಗೂ ಸಂಪರ್ಕ ಕಲ್ಪಿಸಿದರೆ ಉಂಟಾಗುವ ಅಭಾಸ ಬಸವಣ್ಣನ ”ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬುದನ್ನು ಓದಿ ಶರಣರು ಮುತ್ತಿನ ಹಾರ ಧರಿಸಬಾರದು, ರುದ್ರಾಕ್ಶಿ ಮಾಲೆ ಧರಿಸಬೇಕು ಹಾಗಾಗಿ ಬಸವಣ್ಣ ಶರಣನೇ ಅಲ್ಲ್ ಎಂಬ ವಾದ ಮಾಡಿದಂತಾಗುತ್ತದೆ. ಈ ಬಗ್ಗೆ ತಮ್ಮ ಸಾಹಿತ್ಯಿಕ ಪರಿಧಿಯನ್ನು ಬಲಪಡಿಸಿಕೊಳ್ಳಿ.
  ಬ್ರಾಹ್ಮಣ ದ್ವೇಶ ಕುರಿತಾದ ನನ್ನ ಹೇಳಿಕೆಯ ಒಂದೇ ಸಾಲನ್ನು ತೆಗೆದು ವಾದದ ವರಸೆ ತಪ್ಪಿಸುವ ಕೆಲಸ ಎಂದಿದ್ದೀರಿ ಆದರೆ ಆ ಭಾಗದಲ್ಲಿ ನಾನು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಗೊಡವೆಗೆ ಹೋಗಿಲ್ಲ. ನಿಮ್ಮ ಹಿಂದಿನ ಎಲ್ಲ ಕಾಮೆಂಟುಗಳನ್ನೂ ಪರಿಗಣಿಸಿ ( ಬೇರೆ ಜಾಲತಾಣಗಳಲ್ಲೂ ನಿಮ್ಮ ಕಮೆಂಟುಗಳನ್ನು ಓದಿದ್ದೇನೆ). ಒಂದು ವಾಕ್ಯ, ಪೂರ್ಣ ಸಮಸ್ಯಯ ಪ್ರತಿನಿಧಿ ಅಲ್ಲ. ಹಾಗಾಗಿದ್ದರೆ ಅದು ಗಾದೆಯಾಗುತ್ತದೆ. ವಾದ ವಿವಾದ ನಡೆಸುವಾಗ ವಿಷಯದ ಸಮಗ್ರತೆಯನ್ನು ಪರಿಗಣಿಸದಿದ್ದಲ್ಲಿ ಅದು ಪೂರ್ಣ ಆಗುವುದಿಲ್ಲ ಎಂಬ ಪ್ರಾಥಮಿಕ ತಿಳುವಳಿಕೆ ನಿಮಗಿಲ್ಲ ಇಲ್ಲವೇ ನಿಮ್ಮ ಮೂಗಿನ ನೇರಕ್ಕೆ ಬೇಕಾದಷ್ಟಕ್ಕೆ ತೆಗೆದುಕೊಳ್ಳುವ ದುರ್ಬಲತೆಗೆ ”ಶರಣಾ”ಗಿದ್ದೀರೆಂದು ತೋರುತ್ತದೆ. ಶೃಂಗೇರಿ ಮಠದ ಉದಾಹರಣೆ ಬಳಸುವ ನಿಮಗೆ ವೀರಶೈವ ಮಠಗಳಲ್ಲಿ (ಶರಣರ) ನಡೆದ ವ್ಯವಹಾರಗಳು ನೆನಪಿಗೆ ಬರುವುದಿಲ್ಲವೇನೋ. ಭಾರತೀಯ ತತ್ವಶಾಸ್ತ್ರಗಳು ಸಮಗ್ರತೆಯ ಪ್ರವೇಶ ಬೇಡುತ್ತವೆ. ಪಾಶ್ಚಾತ್ಯ ತತ್ವಗಳಂತಲ್ಲ.
  ಇನ್ನು ವಿಸ್ಕಿಯ ವಿಶಯಕ್ಕೆ ಬಂದರೆ ಅದು ತಮ್ಮ ತೀರ್ಥಗಳಲ್ಲಿ ಒಂದಿರಬಹುದು ಏಕೆಂದರೆ ನಾನು ಆಲ್ಕೋಹಾಲ್ ಕುಡಿಯುವುದಿಲ್ಲ.. ನಿಮ್ಮ ಜೀವನದ ಮೌಲ್ಯಗಳನ್ನು ಅದು ಹುಡುಕಲು ಸಹಾಯ್ಮಾಡಬಹುದೇನೋ;ನನ್ನದಲ್ಲ ಏಕೆಂದರೆ ಆ ಅಭಿರುಚಿ ನನಗಿಲ್ಲ.

  ಉತ್ತರ
  • Nagshetty Shetkar
   ಜನ 5 2015

   ರಾಯರೇ, ನಿಮ್ಮಂತಹ ಸಾಹಿತ್ಯ ಬಳಕೆದಾರರ ರುಚಿ ಬಗ್ಗೆ ನನಗೆ ಆಸಕ್ತಿ ಇಲ್ಲ. ಎನ್ನಾರೈ ಬಳಕೆದಾರರ ರುಚಿಗೆ ಪೂರಕವಾಗಿ ಸಾಹಿತ್ಯ ರಚಿಸಿ ಬಡಿಸಲು ನ್ಯಾಷನಲ್ ಪ್ರೊಫೆಸರ್ ಭೈರಪ್ಪ ಇದ್ದಾರೆ. ವಿಷಯಸ್ಪಷ್ಟತೆ ಇಲ್ಲದಿದ್ದರೂ ಮಹಾಗರ್ವದಿಂದ ಎಲ್ಲವನ್ನೂ ಬಲ್ಲೆ ಎಂಬ ಹುಂಬತನದಿಂದ ನೀತಿ ಬೋಧನೆ ಮಾಡುವುದನ್ನು ನಿಲ್ಲಿಸಿ. ನಾನು ಆಗಲೇ ಹೇಳಿದ್ದೇನೆ – ಸಾಹಿತ್ಯ ನಮಗೆ ಬಳಕೆಯ ವಸ್ತುವಲ್ಲ. ಅದು ಜೀವನ ಮೌಲ್ಯಗಳ ಹುಡುಕಾಟ, ಆತ್ಮವಿಕಸನದ ಮಾರ್ಗ ಅಂತ.

   ಉತ್ತರ
 12. ಎಂ ಎ ಶ್ರೀರಂಗ
  ಜನ 5 2015

  ಪ್ರಮೋದ್ ಅವರಿಗೆ— (೧)ನನ್ನ ಪ್ರತಿಕ್ರಿಯೆಯಲ್ಲಿ ನಾನೊಬ್ಬನೇ ಅಕಾಡೆಮಿಕ್ ಆಗಿ ಓದಿ ಎಲ್ಲಾ ಸಂಪೂರ್ಣ ಜ್ಞಾನವನ್ನು ಅರಗಿಸಿ ಕೊಂಡವನು ಎಂದು ಎಲ್ಲೂ ಹೇಳಿಲ್ಲ. ಅಂತಹ ದುರಹಂಕಾರ ನನಗಿಲ್ಲ. ಮತ್ತೊಮ್ಮೆ ನನ್ನ ಪ್ರತಿಕ್ರಿಯೆಯನ್ನು ಸಾವಧಾನವಾಗಿ ಓದಿ ನೋಡಿ. ನಾನು ಹೇಳಿದ್ದು—‘ಅಕಾಡೆಮಿಕ್ ಮತ್ತು ನಾನ್ ಅಕಾಡೆಮಿಕ್ ಕ್ಷೇತ್ರದ ವಿಮರ್ಶೆಗಳ “ಪೂರ್ವಗ್ರಹಗಳಿಂದ” ಮುಕ್ತರಾಗಿ ಭೈರಪ್ಪನವರ ಕಾದಂಬರಿಗಳನ್ನು ತಾವು ಓದಿದ್ದೀರಾ’ ಎಂದು ಅಷ್ಟೇ. ಭೈರಪ್ಪನವರೂ ಸೇರಿದಂತೆ ಎಲ್ಲಾ ಸಾಹಿತಿಗಳ ಬಗ್ಗೆ ಬರುವ ಎಲ್ಲಾ ರೀತಿಯ ವಿಮರ್ಶೆಗಳನ್ನು ನಾವು ಓದಬೇಕು. ಅದು ನಮ್ಮ ಓದಿಗೆ ದಾರಿ ತೋರಿಸಬೇಕೇ ಹೊರತು ನಮ್ಮನ್ನು ದಾರಿ ತಪ್ಪಿಸಬಾರದು.
  (೨) ಗೃಹಭಂಗ ಕಾದಂಬರಿಯಂತೆ ‘ವಂಶವೃಕ್ಷ ‘ಮತ್ತು ‘ದಾಟು’ವಿನಲ್ಲಿ ಸಹ ಬ್ರಾಹ್ಮಣ ಜಾತಿಯ ಉತ್ತಮ ಮತ್ತು ಅಧಮ ಗುಣಗಳೆರಡೂ ಚಿತ್ರಿತವಾಗಿದೆ. ಕೇವಲ ಬ್ರಾಹ್ಮಣ್ಯದ ಪಾರಮ್ಯವಲ್ಲ. ಗೃಹಭಂಗದಲ್ಲಿ ಬ್ರಾಹ್ಮಣರ ಅವಗುಣಗಳು ತುಂಬಾ ಚೆನ್ನಾಗಿ ಚಿತ್ರಣವಾಗಿದೆ ಆದ್ದರಿಂದ ಆ ಕಾದಂಬರಿಯೊಂದನ್ನು ಬಿಟ್ಟರೆ ಭೈರಪ್ಪನವರ ಉಳಿದ ಕಾದಂಬರಿಗಳು ಸಮಾಜ ವಿದ್ರೋಹಿತನದ ವಿಷಯಗಳಿಂದ ಕೂಡಿದೆ ಆದ್ದರಿಂದ ಅವು ಸಮಾಜಮುಖಿಯಲ್ಲ ಎಂಬುದು ಆತುರದ ನಿರ್ಧಾರ.
  (೩) ‘ಮಂದ್ರ’ದಲ್ಲಿ ಒಬ್ಬ ಸಂಗೀತಗಾರನ ಕಾಮಲಾಲಸೆ ಎಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎಂಬುದರ ಚಿತ್ರಣವಿದೆ. ಗುಣ ಮತ್ತು ಅವಗುಣಗಳು ಗಂಡಸು ಮತ್ತು ಹೆಂಗಸು ಇಬ್ಬರಿಗೂ ಇರುವಂತಹುಗಳು. ಸದ್ಯದ ನಮ್ಮ ವರ್ತಮಾನ ಕಾಲದಲ್ಲಿ ಅಪರಾಧಿಗಳಾದ,ಸಂಸಾರ ಒಡೆಯುವ ಹೆಂಗಸರುಗಳಿಲ್ಲವೇ? ನಮ್ಮ ಮಹಾಭಾರತ, ರಾಮಾಯಣ ಮತ್ತು ಪುರಾಣಗಳ ಕಥೆಗಳಲ್ಲಿ ಸಹ ಎಲ್ಲಾ ಹೆಂಗಸರೂ ಅಪರಂಜಿ ಚಿನ್ನದ ಗುಣದವರೇನಲ್ಲ. ಇದನ್ನು ನಾವು ಮರೆಯಬಾರದು.
  (೪) ಭೈರಪ್ಪನವರು ಮನುವಾದದ ಆರಾಧಕರಾಗಿದ್ದರೆ ಮಹಾಭಾರತದ ಕಥೆಯನ್ನು ಆಧರಿಸಿದ “ಪರ್ವ” ಬರೆಯಲು ಸಾಧ್ಯವಾಗುತ್ತಿತ್ತೆ? ಆ ಕಾದಂಬರಿ ಮಹಾಭಾರತದ ಬಗ್ಗೆ ಹಿಂದೆ, ಇಂದು ಮತ್ತು ಮುಂದೆಯೂ ಇರಬಹುದಾದ ಎಲ್ಲಾ ಸಾಂಪ್ರದಾಯಿಕ ನಂಬಿಕೆ, ಭಕ್ತಿಗಳನ್ನೇ ಬುಡಮೇಲು ಮಾಡಿಲ್ಲವೇ? ಯೋಚಿಸಿ ನೋಡಿ.
  (೫) ‘ತಂತು’ ಕಾದಂಬರಿಯಲ್ಲಿ ಜಾತಿಗಳ ಉಚ್ಚ/ನೀಚದ ಪ್ರತಿಪಾದನೆಯಿದೆಯೇ? ಸ್ವಾತಂತ್ರೋತ್ತರ ಭಾರತದ ನಮ್ಮ ಸಮಾಜದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ನಡೆದ, ನಡೆಯುತ್ತಿರುವ ಘಟನೆಗಳ ವಾಸ್ತವ ಚಿತ್ರಣ ಅದರಲ್ಲಿಲ್ಲವೇ?
  (೬) ಭೈರಪ್ಪನವರಿಗಿಂತ ಹೆಚ್ಚು ಬೆಂಬಲಿಗರು, ಸ್ವಂತ ಮತ್ತು ಇತರೆ ಪತ್ರಿಕೆಗಳ ಒತ್ತಾಸೆ, ರಾಜಕೀಯ ಹಿತಾಸಕ್ತಿಗಳ ತೆರೆಯ ಮರೆಯ ಬೆಂಬಲ, ಶಿಷ್ಯರ,ಅಭಿಮಾನಿಗಳ ಪಡೆ ಇರುವ ಕನ್ನಡ ಸಾಹಿತಿಗಳು ಹಿಂದೆ ಇದ್ದರು ಮತ್ತು ಈಗಲೂ ಇದ್ದಾರೆ. ಅವರುಗಳೂ ಸಾಕಷ್ಟು ಸಿದ್ದ-ಪ್ರಸಿದ್ಧರೆ. ತಮ್ಮ ದೃಷ್ಟಿಯಲ್ಲಿ ಆ ಸಾಹಿತಿಗಳ ಪ್ರಸಿದ್ಧಿಯೂ ಸಹ ಆ ಗುಂಪುಗಳ ಒಂದು ಸಾಮೂಹಿಕ ಮಾಫಿಯಾದ ಸಂಘಟಿತ ಪ್ರಯತ್ನ ಎಂದು ಅರ್ಥವಾಗುತ್ತದಲ್ಲವೇ? ಭೈರಪ್ಪನವರ ಕಾದಂಬರಿಗಳು ಹಲವು ಬಾರಿ ಪುನರ್ ಮುದ್ರಣ ಆಗಿವೆ; ಅವುಗಳನ್ನು ಜನಗಳು ಕೊಂಡು ಓದುತ್ತಿದ್ದಾರೆಂಬ ಒಂದೇ ಕಾರಣಕ್ಕೆ ಆ ಜನಗಳು ಒಂದು ಮಾಫಿಯಾಕ್ಕೆ ಸೇರಿದವರು ಎಂದು ಬ್ರಾಂಡ್ ಮಾಡುವ ನೀವು ಆ ಜನಗಳನ್ನೇ ಯಾವುದೋ ಒಂದು ಸಮಾಜವಿದ್ರೋಹಿ ಗುಂಪಿಗೆ ಸೇರಿದವರು ಎಂಬಂತೆ ಭಾವಿಸಿದ್ದೀರಿ. ಜನಗಳನ್ನೇ ಸಂದೇಹಿಸುವ ಈ ನಡೆ-ನುಡಿಯೇ ತಮ್ಮ ದೃಷ್ಟಿಯಲ್ಲಿ “ಸಮಾಜಮುಖಿ” ಎಂಬ ಪದದ ಅರ್ಥವಿರಬೇಕು.
  (೭) ‘ಯಾನ’ ಕಾದಂಬರಿಗೆ ಹೊರತಾದ ಈ ಚರ್ಚೆಗೆ ನಾನೂ ಒಬ್ಬ ಕಾರಣಕರ್ತನಾಗುವುದು ಸರಿಯಲ್ಲ. ಹೀಗಾಗಿ ಇದು ನನ್ನ ಕೊನೆಯ ಪ್ರತಿಕ್ರಿಯೆ. ಆದರೆ ಇಂದು ಓದುಗರನ್ನು ಕಾಡುತ್ತಿರುವ ತಲ್ಲಣಗಳು, ಅಜೆಂಡಾಗಳು , ಪಕ್ಷ ರಾಜಕೀಯದ ಕರಪತ್ರಗಳು ಮತ್ತು ಪ್ರಣಾಳಿಕೆಗಳು ಸಾಹಿತ್ಯವನ್ನು ಆಳಲು ತೊಡಗುವ ಸನ್ನಿವೇಶಗಳು ಇವೆಲ್ಲಾ ವಿಮರ್ಶೆಯ ಹೆಸರಿನಲ್ಲಿ ಒಂದುಗೂಡಿ ಓದುಗರನ್ನು ಒಟ್ಟು ಓದುವಿಕೆಯಿಂದಲೇ ದೂರಮಾಡುತ್ತಿರುವುದು ಇತ್ಯಾದಿಗಳನ್ನು ಕುರಿತಂತೆ ನಾನು ‘ನಿಲುಮೆ’ಯಲ್ಲಿ ಆಗಾಗ ಬರೆಯುತ್ತಿರುವ “ಓದುಗ,ಸಾಹಿತ್ಯ ಮತ್ತು ವಿಮರ್ಶಕ” ಎಂಬ ಲೇಖನಮಾಲಿಕೆಯಲ್ಲಿ ಬರೆಯುವ ಯೋಚನೆ ಇದೆ. ನೋಡೋಣ. ಸದ್ಯಕ್ಕೆ good bye.

  ಉತ್ತರ
 13. ಜನ 5 2015

  ನಾಗಶೆಟ್ಟಿ ಯವರೇ
  ನಿಮ್ಮ ಜೀವನಮೌಲ್ಯಗಳ ಪರಿಚಯ ಸ್ವಲ್ಪ ಮಾಡಿಕೊಡಿ. ಕೇವಲ ವ್ಯಂಗ್ಯ, ಕುಚೋದ್ಯ, ಕುಚೇಷ್ಟೆ ದ್ವೇಷ, ಅಹಂಕಾರ ಬಿಟ್ಟರೆ ನಿಮ್ಮ ಕಾಮೆಂಟುಗಲಲ್ಲಿ ರಚನಾತ್ಮಕವಾದದ್ದೊಂದೂ ನನಗೆ ಇಲ್ಲಿಯವರೆಗೆ ಕಾಣಲಿಲ್ಲ. ನಾನೇನೋ ಎಲ್ಲಾ ತಿಳಿದವನಲ್ಲ ಬಿಡಿ ಆದರೆ ಶರಣ ಸಂಪ್ರದಾಯದವರಾದ ನೀವು ನಿಮ್ಮ ಹಿರಿಯರ ದಾರಿಯಲ್ಲಿ ಸ್ವಲ್ಪ ನಡೆದು ನಮ್ಮನ್ನೂ ಕರದೊಯ್ಯಬಹುದಿತ್ತು . ಆದರೆ ಕೇಬ್ವಲ ಮೌಲ್ಯ ,ಅತ್ಮವಿಕಸನದ ಮಾರ್ಗ ಎಂದು ಬಡ ಬಡೈಸುತ್ತಾ, ಅದರ ಲವಲೇಷವನ್ನೂ ನಿಮ್ಮ ಬರವಣಿಗೆಗಳಲ್ಲಿ ತೋರದ ನಿಮ್ಮ ಅತ್ಮವಿಕಸನದ ಮಾರ್ಗ ಎಂತಹುದೆಂಬುದು ಸೋಜಿಗದ ವಿಷಯ.
  ನನ್ನ ಕಾಮೆಂಟಿನಲ್ಲಿದ್ದದ್ದು ಒಂದೆ ಒಂದು ಅಂಶ ವನ್ನಾದರೂ ಎತ್ತಿಕೊಂಡು ಅದರ ವಿಶ್ಲೇಷಣೆ ಮಾಡುವ ಗೋಜಿಗೆ ಹೋಗದೆ ಹೇಳಿದ್ದನ್ನೇ ಮತ್ತೆಮತ್ತೆ ಹೇಳಿದರೆ ಅದನ್ನು ಒದರಾಟ ಎನ್ನುವರೇ ಹೊರತು ಮೌಲ್ಯಗಳ ಹುಡುಕಾಟ ಎನ್ನುವುದಿಲ್ಲ.
  ವಸ್ತು ವಿಷಯಕ್ಕೆ ,ನಿಮ್ಮ ಶರಣ ಮಾರ್ಗ ದಲ್ಲಿ ನಿಮ್ಮ ಮೌಲ್ಯಗಳ ತಳಹದಿಯಮೇಲೆ ಪರವೋ ವಿರೋಧವೋ ಅದ ವಾದ ಮಂಡಿಸಿದರೆ ನಿಮ್ಮ ವಿಷಯ ಸ್ಪಷ್ಟತೆ ನಮಗೂ ಸ್ವಲ್ಪ ತಿಳಿಯಬಹುದು. ಬರೀ ಒದರಾಡಿದರೆ ಹೇಗೆ ತಿಳಿಯಬೇಕು. ನಾನಂತೂ ತಿಳಿದವನಲ್ಲ.
  ನಾವಂತೂ ಶರಣರಲ್ಲ, ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಎಂಬ ಬಸವಣ್ಣನ ವಚನ ತಮ್ಮ ಶರಣ ಸಂಪ್ರದಾಯದಲ್ಲಿ ಇಲ್ಲವೇನೋ . ಅಥವಾ ಮೌಲ್ಯಗಳ ಹುಡುಕಾಟದಲ್ಲಿ ಕಳೆದುಕೊಂದಿರಬಹುದು. ನಕಾರಾತ್ಮಕ ಮೌ ಲ್ಯಗಳು ಬಸವಣ್ಣನಲ್ಲಿ ಇರಲಿಲ್ಲವಲ್ಲ!!
  ಆ ಮಟ್ಟಿಗೆ ತಮ್ಮನ್ನು ಶೇಟ್ಕರ್ ಎನ್ನುವ ಬದಲು ‘’ ಕುಚೇಷ್ಟ್ ಕರ್ ‘’ ಎಂದೆನ್ನಬಹುದು.

  ಉತ್ತರ
  • simha sn
   ಜನ 6 2015

   ಅಲ್ರೀ ಸುದರ್ಶನ್, ಈ ಹುಚ್ಚುಮುಂಡೆದನ್ನು ಒಪ್ಪಿಸಲೇಬೇಕೆಂಬ ಹಠ ಯಾಕಪ್ಪ ನಿಮಗೆ? ಮೂರ್ಖರೊಡನೆ ವಾದ ಸಲ್ಲ ಸರ್ವಜ್ಞ !

   ಉತ್ತರ
 14. ಜನ 6 2015

  ಸಿಂಹ ಅವರೇ,
  ನಿಮ್ಮ ಸಲಹೆ ಸೂಕ್ತವಾಗಿಯೇ ಇದೆ. ಅದನ್ನು ನಾನೂ ಯೋಚಿಸಿದೆ. ಆದರೆ ವಿತಂಡ ವಾದ ಮಾಡುವವನಿಗೆ ಕೊನೆಯ ಮಾತು ಹೇಳುವ ಅವಕಾಶ ಕೊಡುವುದರಿಂದ ತನ್ನ ಮೂರ್ಖ ವಾದದಲ್ಲಿ ತನ್ನದೇ ಕಡೆಯ ಮಾತಾಯ್ತು ಎನ್ನುವ ಹಮ್ಮು ( ಅವರಿಗೆ ಬೇಕಿದ್ದರೂ,ಬೇಡ ದಿದ್ದರೂ) ಉಳಿಯದಿರುವ ಉದ್ದೇಶದಿಂದ ನಾನೂ ಸಹ ವಾದವನ್ನು ಬೆಳೆಸಿದೆ.
  If someone wants to debate on issues on a fair basis , I am ready to give up where the arguments make sense. If he wants to resort to mud slinging, I am up for it too. I have seen this game played in life far too many times by such people .
  More over,
  All it takes for nonsense to triumph is the silence of the sense.
  ದಯವಿಟ್ಟು ಉದ್ಧತ್ಟತನಎಂದು ತಪ್ಪು ತಿಳಿಯಬೇಡಿ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments